1. ಆಕಳ ಹಾಡು

ಹಚ್ಚನ ಹುಲ್ಲ ಕಂಡು ಹರಿಯ ಮೈಯಲಿ ಹೋದ
ಅತ್ತಿಂದು ಬಂದ ಹುಲಿ ರಾಜ ಕೋಲೆಣ್ಣಾ ಕೋಲ.

ಅತ್ತಿಂದು ಎಲೆ ಬಂದ ಹುಲಿರಾಜ ಗೋಪೆಮ್ಮಾ
ತಿಲ್ಲೇನೆ ಗೋಪಿ ನಿನ್ನಗ ಕೋಲೆಣ್ಣಾ ಕೋಲ.

ತಿಂದಾರ ತಿನುತಿದ್ದಿ ಮನಿದಾಗ ಕಂದಾ ಹಾನ ಮಲಿನಾದರ
ಕುಡುಸೀನಾ ನಾನು ಬರುತ್ತೀನಿ ಕೋಲೆಣ್ಣಾ ಕೋಲ.

ಒರುತಿನಂತ ಹೇಳುತಿ ಖರೆ ಹ್ಯಾಂಗ ತಿಳಿಬೇಕ ಮಾಡವ್ವ
ಗೋಪಿ ಪ್ರಮಾಣ ಕೋಲೆಣ್ಣಾ ಕೋಲ.

ಹರಿಯ ನೀರಿನ ಆಣಿ, ಬಿಡುವ ಘಾಳಿಯ ಆಣಿ
ನಿನ್ನಾಣಿ ಹುಲಿರಾಜ ಬರುತಿನೋ ಕೋಲೆಣ್ಣಾ ಕೋಲ.

ಭಿರಿ ಭಿರಿ ಗೋಪೆವ್ವಾ ಮನಿಗಾದರ ಬಂದಿದಾಳೆ ತೆಲಿ
ಹಚ್ಚಿ ತಲುಪ ತೆಗೆದಾಳೆ ಕೋಲೆಣ್ಣಾ ಕೋಲ.

ತೆಲಿ ಹಚ್ಚಿ ಎಲೆ ತಲುಪ ತೆಗೆದಾಳ ಗೋಪೆವ್ವಾ ಮಲಿ
ಕುಡಿಯಲ್ಲಿ ಕರದಾನ ಕಂದಾಳೆ ಕೋಲೆಣ್ಣಾ ಕೋಲ.

ಮಲಿ ಕುಡಿಯಲಿ ಎಲೆ ಕಂದನ ಕರದಳೆ, ಕರದೂನೆ
ಹೇಳುತಾಳ, ಹೇಳುತಾಳೆ ತನ್ನ ಒಳ ಮಾತ ಕೋಲೆಣ್ಣಾ ಕೋಲ.

ಒಳ್ಳನೆ ಕಲ್ಲಿನ ಮ್ಯಾಲ ಬಿಸಿದಾಣಿ ಇಡುತಾರ
ಬಿಡೋಡಿ ಹೋಗಿ ಬುಕ್ಕಬ್ಯಾಡ ಕೋಲೆಣ್ಣಾ ಕೋಲ.

ಓಡಿಸಿ ಓಡಿ ಹೋಗಿ ಬುಕ್ಕಬ್ಯಾಡ ನನ್ನ ಕಂದ ಕಲ್ಲು ಕಲ್ಲು
ಹಚ್ಚಿ ಹೊಡದಾರೊ ನನ್ನ ಕಂದ ಕೋಲೆಣ್ಣಾ ಕೋಲ.

ಕಲ್ಲುನೆ ಕಲ್ಲು ಹಚ್ಚಿ ಹೊಡೆದಾರೊ ನನ್ನ ಕಂದಾ ತಾಯಿ
ತಾಯಿಯಂತ ಹೊರಳಿಯೋ ಕೋಲೆಣ್ಣಾ ಕೋಲ.

ಬೀಸಾನೆ ಕಲ್ಲಿನ ಮುಂದ ಬೀಸುದಾಣಿ ಇಡುತಾರ ಸತಿ ಮಾಡಿ
ನೀನು ತಿನುಬ್ಯಾಡೊ ಕೋಲೆಣ್ಣಾ ಕೋಲ.

ಸತಿ ಮಾಡಿ ಎಲೆ ನೀನು ತಿನುಬ್ಯಾಡ ನನಕಂದಾ ಗೂಟ
ಗೂಟಲ್ಹಚ್ಚಿ ಹೊಡದಾರು ಕೋಲೆಣ್ಣಾ ಕೋಲ.

ಗೂಟನೆ ಗೂಟಲ್ಹಚ್ಚಿ ಹೊಡೆದಾರೋ ನನ್ನ ಕಂದಾ
ತಾಯಿ ತಾಯಂತ ಹೊರಳಿಯಾ ಕೋಲೆಣ್ಣಾ ಕೋಲ.

ಊರನೆ ಮುಂದಿನ ಹೊಲದಾಗ ಜ್ವಾಳಾನೆ ಬಿತ್ತುತಾರ
ಹಕ್ಕಾ ಮಾಡಿ ನೀನು ತಿನುಬ್ಯಾಡ ಕೋಲೆಣ್ಣಾ ಕೋಲ.

ಊರನೆ ಮುಂದಿನ ಹೊಲದಾಗ ಜ್ವಾಳಾನೆ ಬಿತ್ತುತಾರ
ಹಕ್ಕನೆ ಹಕ್ಕ ಮಾಡಿ ತಿನಬ್ಯಾಡ ಕೋಲೆಣ್ಣಾ ಕೋಲ.

ಹಕ್ಕನೆ ಹಕ್ಕ ಮಾಡಿ ತಿನಬ್ಯಾಡೊ ನನ ಕಂದ
ಚಬುಕ ಚಬುಕಿಲಿ ಹೊಡೆದಾರೋ ಕೋಲೆಣ್ಣಾ ಕೋಲ.

ಇಷ್ಟೆಲ್ಲ ಹೇಳುತ್ತಿ ಇಷ್ಟೆಲ್ಲ ಕೇಳುವೂತಿ ನೀ ಎಲ್ಲಿ
ಹೋಯ್ತೆ ಹಡದವ್ವ ಕೋಲೆಣ್ಣಾ ಕೋಲ.

ಮುಂದ ಮುಂದ ಗೋಪೆವ್ವಾ ಹಿಂದ ಹಿಂದ ಎಳೆಗರು
ನಡದಾರವರು ಆರಣ್ಯಕ್ಕ ಕೋಲೆಣ್ಣಾ ಕೋಲ.

ಹರಿಯ ನೀರಿನ ಅಣಿ, ಬಿಡುವ ಘಾಳಿಯ ಆಣಿ
ನಿನ್ನಾಣಿ ರಾಜ ಹುಲಿ ತಿನುಬಾರೋ ಕೋಲೆಣ್ಣಾ ಕೋಲ.

ಬರುವದು ಬಂದೀದಿ ಕಂದಗ್ಯಾಕ ತಂದೀದಿ ಕಂದನ
ತಾಯಾಗಿ ಇರು ಹೋಗೆ ಕೋಲೆಣ್ಣಾ ಕೋಲ.

2. ನಾಗರಹಾವಿನ ಹಾಡು

ದವದಂಡ ಪುರದೋಳು ಹಾರುನ ಮಗಳು
ಶೇಷನ್ನ ಸತಿಯೇ ಶ್ರೀಗೌರಿ ಕೋಲೆಣ್ಣಾ ಕೋಲ.

ಬಾಯೆನ್ನ ಗೌರಿ ಕೈಯಲ್ಲಿ ಖೊಬ್ಬರಿ ನಾಗಣ್ಣಾಗ್ಹಾಲ
ಎರಿಯಾರಿ ಕೋಲೆಣ್ಣಾ ಕೋಲ.

ಅಳ್ಳಿಗಳ್ಳವ ಕೊಟ್ಟ ಕೊಳ್ಳಿಗ್ಹಂಗನೂಲ ಕೊಟ್ಟ ಮತ್ಯಾಕ
ನಾಗಯ್ಯ ಭುಶ್ ಎಂದಿ ಕೋಲೆಣ್ಣಾ ಕೋಲ.

ಎಳು ಹೆಡಿ ಸರ್ಪವ ಕಂಡು ಮನದಾಗ ಗರ್ಭನಾಗಿ ಬಂದ ನಿಂತಾಳ
ಗೌರಿ ಗುಡಿ ಹೊರಗ ಕೋಲೆಣ್ಣಾ ಕೋಲ.

ಪಗಡಿ ಬಾಜರ ಗುಂಟಾ ಹೊಂಟಾಳ ಶ್ರೀಗೌರಿ ಉಡಿದಾಗಿನ
ಅಳ್ಳ ಚಲ್ಲುತ ಕೋಲೆಣ್ಣಾ ಕೋಲ.

ಉಂಡಾಳ ಉಟ್ಟಾಳ ಕನ್ನೊಡಿ ಹಿಡಿದಾಳ, ಗರ್ಭಿನ
ಚಿನ್ಹ ಎನಗಾಗಿ ಕೋಲೆಣ್ಣಾ ಕೋಲ.

ಗೌರಿ ಅಂಬಾ ಶಬ್ದ ತಾಯೆವ್ವಾ ಕೇಳ್ಯಾಳೆ ಗಡುಸ್ಯಾನೆ ಗೌರಿ
ದವದವಡಿ ಕೋಲೆಣ್ಣಾ ಕೋಲ.

ಹೊಡಿಬ್ಯಾಡೆ ತಾಯವ್ವಾ ಕಾಲಾರ ಬೀಳುತೀನಿ
ಹಾದರ ನಾನು ಮಾಡಿಲ್ಲ ಕೋಲೆಣ್ಣಾ ಕೋಲ.

ಹಾದರ ಮಾಡಿಲ್ಲಂತೆ ಗರ್ಭ ಮೂಡ್ಯಾದಂತ ಪತಿಗ್ಹೇಳಿ ಕಿತ್ತೆಸೆವೆ
ನಿನ್ನ ಹಲ್ಲ ಕೋಲೆಣ್ಣಾ ಕೋಲ.

ನಾಗುವಯ್ಯ ಸ್ವಾಮಿ ನೀನೆ ಮಾಡಿದಿ ಘಟ್ಟಿ
ಜನದಾಗ ಮಾನ ಕಳೆದಿಟ್ಟಿ ಕೋಲೆಣ್ಣಾ ಕೋಲ.

ಕಲ್ಲದೇವರಿಂದ ಹಿಂಗ್ಹ್ಯಾಂಗಗಿರಬೇಕು ಪರ ಪುರುಷರಿಂದೇ
ಆಗಿರಬೇಕು ಕೋಲೆಣ್ಣಾ ಕೋಲ.

ಆರು ನಾರ‌್ಯಾರೆಲ್ಲಾ ಕರದಾರೆ ಗೌರಿನ ಮಾಡ್ಯಾರೆ
ಬಹಾಳ ಚೌಕಾಸಿ ಕೋಲೆಣ್ಣಾ ಕೋಲ.

ನಾಗುವಯ್ಯ ಸ್ವಾಮಿ ನೀನೆ ಮಾಡಿದಿ ಘಟ್ಟಿ
ಜನದಾಗ ಮಾನಾ ಕಳೆದಿಟ್ಟಿ ಕೋಲೆಣ್ಣಾ ಕೋಲ.

ಕಲ್ಲ ದೇವರಿಂದ ಹಿಂಗ್ಯ್ಹಾಂಗಾಗಿರಬೇಕು ಪರಪುರುಷರಿಂದೇ
ಆಗಿರಬೇಕು ಕೋಲೆಣ್ಣಾ ಕೋಲ.

ಹೋಳಿಗಿ ಕಾಮಸೆಟ್ಟಿ ತುಪ್ಪದ ಭೀಮಶೆಟ್ಟಿ
ಬಿಟ್ಟ ಬರ‌್ರಿ ಪೋರಿಗಿ ಆರೆಣದಾಗ ಕೋಲೆಣ್ಣಾ ಕೋಲ.

ಹೋಳಿಗಿ ಕಾಮಶೆಟ್ಟಿ ತುವ್ವದ ಭೀಮಶೆಟ್ಟಿ
ಬಿಟ್ಟ ಬಂದಾರ ಪೋರಿಗೆ ಆರೆಣದಾಗ ಕೋಲೆಣ್ಣಾ ಕೋಲ.

ಗುಡ್ಡದ ಒಳಗಿರುವ ಹುಲಿ ಕರಡಿ ಸಿಂಹಗಳಿರಾ
ಕ್ಷಣದಾಗೆ ಎನಗೆ ತಿಂದು ಬಿಡಿರಿ ಕೋಲೆಣ್ಣಾ ಕೋಲ.

ಪತಿವ್ರತಿ ಸುಂದರಿ ನಾವ್ಯಾಕ ತಿಂಬಾರಿ ನಿಮ ಸೇವೆ ಮಾಡಿ
ಇರುತೆವರಿ ಕೋಲೆಣ್ಣಾ ಕೋಲ.

3. ನಾಗರ ಪಂಚಮಿ ಹಾಡು

ನಾಗರ ಪಂಚಮಿ ಹೆಣ್ಣ ಮಕ್ಕಳ ಹಬ್ಬ ಹೋಗಿ ಸಂಗಮ್ಮಳಿಗೆ
ಕರತರಿ ಬೇಗ ಕೋಲ ಕೋಲ.

ತಾಯಿ ಆಡಿದ ಮಾತು ಮನಸಿಗಿ ಕೋಪತಾಳಿ
ಎತ್ತಿಗಿ ಮುಟ್ಟ ಬಿಗಿದಾನೆ ಕೋಲ ಕೋಲ.

ಚಾಳಕಪೂರ ಪಟ್ಟಣ ಬಿಟ್ಟನೆ ಒಂದೇ ಮೊದಲ
ಹೋಗಿ ನಿಂತಾನೆ ಬಾಗಿಲ ಮುಂದೆ ಕೋಲ ಕೋಲ.

ಅಣ್ಣ ಬಂದನೆಂದು ಹರುಷದಲ್ಲಿ ನೀರು ತಂದು
ಬೀಡಿ ಸಿಗರೇಟ ಬಿಗಿ ಎಂದ ಕೋಲ ಕೋಲ.

ಅಣ್ಣ ಬಂದನೆಂದು ಅನ್ನ ಪಾಯಸ ಮಾಡಿ,
ಅಣ್ಣ ಪಾಯಸಿಗೆ ಉಣ ನೀಡಿ ಕೋಲ ಕೋಲ.

ಅಣ್ಣ ಪುರುಷನಿಗೆ ಉಣ ನೀಡಿ ಕೇಳುತಾಳೆ,
ಹೋಗಿ ಬರುತೆ ನನ್ನ ತವರಿಗೆ ಕೋಲ ಕೋಲ.

ಅತ್ತಿ ಸೋಸಿ ಕೂಡಿ ಒಂದಗೂಡಿ ಕೇಳುತಾರೆ,
ಹೋಗಿ ಬರುತೆ ಅತ್ತಿ ತವರಿಗಿ ಕೋಲ ಕೋಲ.

ನಾನು ಆಡಿದ ಮಾತು ಮನಸಿಗಿ ಒಪ್ಪುತ್ತಾಳೆ,
ಬೇಗ ಬರೆ ಸಂಗಮ್ಮನ ಹಬ್ಬ ಮಾಡಿ ಕೋಲ ಕೋಲ.

ನಾನು ಆಡಿದ ಮಾತು ಮನಸಿಗಿ ಒಪ್ಪುಕೊಂಡು
ಕಂದಗ ಇಡಿತಾಕ ಕೂಳಿಕೊಡೆ ಕೋಲ ಕೋಲ.

ಚಂದರಗೀರ ಪಟ್ಟಣ ಬಿಟ್ಟರೆ ಒಂದೆ ಬಾಗಿಲ ಮುಂದೆ ಬಂದೆ
ನಿಂತರೆ, ಕೋಲ ಕೋಲ.

ಮಗಳ ಬಂದಳೆಂದು ಹರುಷದಲ್ಲಿ ನೀರು ತಂದು ಇಚಗೆ
ಬರೆ ಸಂಗಮ ಪಡಸಲಗಿ ಮ್ಯಾಲೆ, ಕೋಲ ಕೋಲ.

ತಾಯಿ ಮಕ್ಕಳ ಕೂಡಿ ದೇವರ ಮನೆಗೆ ಹೋಗಿ
ಖುಷಿಲಿಂದೆ ಊಟ ಮಾಡ, ಕೋಲ ಕೋಲ.

ಪೀತ್ತುಂಬರ ಉಟ್ಟಾಳೆ ತುಂಬುತ್ತಿ ತೋಟ್ಟಾಳೆ ಅಲಂಕಾರ
ವಸ್ತ್ರ ಇಟ್ಟಾಳೆ ಕೋಲ ಕೋಲ.

ಕುಂಬಾರ ಗೇರಿದಾಗ ಕೂಡುಂಬ ಬೆಳಿಯರೆ ಹಾಡಿ
ಭುಲಾಯಿ ಹಾಕರಿ ಬರೆ ಕೋಲ ಕೋಲ.

ಹಾರರ ಗೇರಿದಾಗ ಹಾಲಂತ ಗೆಳೆಯರೆ ಹಾಡಿ
ಭುಲಾಯಿ ಹಾಕರಿ ಬಾರೆ ಕೋಲ ಕೋಲ.

ಚೋಳವ್ವ ಚಂಗಳೆವ್ವಾ ನೀಲವ್ವ ನಿಂಬವ್ವ ಹಾಡಿ
ಭೂಲಾಯಿ ಹಾಕರಿ ಬಾರೆ ಕೋಲ ಕೋಲ.

ತವರ ಮನೆದಾಗ ಖುಷಿನಿಂದ ಇದ್ದಾರೆ
ಅತ್ತಿಯ ಜಗಳ ತೆಗೆದಾಳೆ ಕೋಲ ಕೋಲ.

ನನಗೆ ಉರಿ ಚಳಿ ಬಂದು ಮನೆಗೆ ಮಾಡುಕಿ, ಇಲ್ಲ ಬೇಗ
ಕರೆತರಿ ಮಡದಿಗೆ ಕೋಲ ಕೋಲ.

ಚಂದ್ರಗಿರಿ ಪಟ್ಟಣ ಬಿಟ್ಟರೆ ಒಂದೇ ಮೊದಲೆ
ಬಂದೆ ನಿಂತಾರೆ ಬಾಗಿಲ ಮುಂದ ಕೋಲ ಕೋಲ.

ಪುರುಷ ಬಂದರೆಂದು ಹರುಷದಲ್ಲಿ ನೀರು ತಂದು
ಬೀಡಿ ಸಿಗರೇಟು ಬೀಗಿರೆಂದು ಕೋಲ ಕೋಲ.

ನೇರೆ ಮನೆ ಅವ್ವದೇರೆ ನೇರೆ ಮನೆ ಅಕ್ಕದೇರೆ
ಮಾತೊಂದು ಹೇಳ್ಯಾರೆ ಗುರುಲಿಂಗಣ್ಣನಿಗೆ ಕೋಲ ಕೋಲ.

ಆಡಿದ್ದು ಮಾತು ಕೇಳಿ ಸಂಗಮನ ಅರಸ
ಕರಕರ ಹಲ್ಲು ಕಡಿದ ಕೋಲ ಕೋಲ.

ನಮ್ಮವ್ವಗ ಉರಿಚಳಿ ಬಂದು ಮನೆಗೆ ಮಾಡುವರಿಲ್ಲ,
ಬೇಗನೆ ಕಳುವಿರಿ ತಯ್ಯರ ಮಾಡಿ ಕೋಲ ಕೋಲ.

ಮರು ದಿವಸ ಸೋಮವಾರ ಮನೆ ಮಾರು ನೀರು ಸಾರೆ,
ಲಗೂ ಮಾಡಿ ಅಯ್ಯಗೊಳು ಕರೆದಾರೆ ಕೋಲ ಕೋಲ.

ಉಂಡಾರ ತಿಂದಾರ ಬಾಗಿಲ ಹೋರಕ್ಕೆ
ಬೇಕಾದ ಆಗಾದ ನಡೆ ಮನೆಗೆ
ಅಪಮಾನ ಆಗ್ಯಾದ ನಡೆ ಮನೆಗೆ ಕೋಲ ಕೋಲ.

ಅಪಸಕೋನ ಶಿವಸಕಲಾನ ಅವನನ್ನು ತಲೆಮ್ಯಾಲ
ಸುಮ್ಮಾನೆ ನಡೆ ದಾರಿ ಹಿಡಿದು ಕೋಲ ಕೋಲ.

ಅಗಸ ಹೊರಗೆ ಹೊಗೆಟ್ಟಿಗೆ ಸಿಕ್ಕಿ ಗೋಳಿ ಎದುರಾಗಿ ಅಪಸಕೋನ್
ಆಗದ್ದಿರಿ ನಡೆ ಮನೆಗೆ ಕೋಲ ಕೋಲ.

ಅಪಸಕೋನ ಶಿವಸಕಲಾನ ಅವನನ್ನು ತಲೆಮ್ಯಾಲೆ
ಸುಮ್ಮನೆ ನಡೆ ದಾರಿ ಹಿಡಿದು ಕೋಲ ಕೋಲ.

ಚೊಳಪ್ಪ ಚೆಂಗಳವ್ವ ನೀಲವ್ವ ನಿಂಬವ್ವ ಹೋಗಿ
ಬರುತ್ತೆ ನಾನು ಹಾಡದವ್ವ ಕೋಲ ಕೋಲ.

ಹೊದಾರಿ ಬಿಟ್ಟುರೆ ಬಂದ ದಾರಿ ಬಿಟ್ಟಾರೆ ವೈರಾಣ ದಾರಿ
ಹಿಡಿದ್ದಾರೆ ಕೋಲ ಕೋಲ.

ವೈರಾಣ ದಾರಿ ಹಿಡಿದ್ದಾರೆ ಸಂಗಮನ ಅರಸ
ಎತ್ತನ ಮಾಲನ ಸಂಗಮನ ಕೆಳಗಿಳಿಸಿ ಕೋಲ ಕೋಲ.

ಅಯ್ಯಯ್ಯ ಶಿವನೆ ನಾ ಎನೆ ಮಾಡದೆ ತಪ್ಪು
ವೈರಾಣದಾಗ ಬಡಿಸುವರು ಯಾರ ಇಲ್ಲ ಕೋಲ ಕೋಲ.

ಸಿದ್ಧ ಪುರುಷರಿಯರು ಬಗಿಲಾಕೆ ನಡೆದಾರೆ,
ಸಂಗಮನ ನೋಡಿ ದಾರ‌್ಯಾಗೆ ನಿಂತಾರೆ ಕೋಲ ಕೋಲ.

ಖುನ ಹೇಳಿ ನಿನ್ನ ಗುರುತ ಹೇಳೆ ಕೋಲ ಕೋಲ.

ಹುಟ್ಟುದುರ ಚಾಳಾಕಪುರ ಕೊಟ್ಟಿದರು ಚಂದ್ರಗಿರೆ
ಪುರುಷರು ಬೀಟು ನಡೆದ್ದರೆ ಕೋಲ ಕೋಲ.

ಪುರಸರ ಆಡಿದ ಮಾತು ಮನಸಿನಲ್ಲಿ ಇಟ್ಟುಕೊಂಡು
ಬೇಗ ಹೋಗ ಸಂಗಮ ಲಗು ಮಾಡಿ ಕೋಲ ಕೋಲ.

ಮ್ಯಾಲನಾದರೆ ಮಳಿಸಿ ಕೇಳಗಾದರೆ ಕೇಸರೆ
ಕಂದಾಗ ತಕ್ಕೊರಿ ನೀವು ಜರ ಕೋಲ ಕೋಲ.

ಪುರುಷರು ಹೋಗಿ ಮನೆಗೆ ಕಲಿತಾರೆ
ಸಂಗಮ ಒಬ್ಬಕ್ಕೆ ಹೊರಗೆ ಕುಂತಾರೆ ಕೋಲ ಕೋಲ.

ಕೈಕಾಲು ತೊಳೆದೂಕೊಂಡು ಪಡಸಲಿ ಮ್ಯಾಕ ಬಾರೆ
ಕಂದಾಗ ತಕೊಂಡು ಉಣ್ಣು ಹೋಗೆ ಕೋಲ ಕೋಲ.

ತವರ ಮನೆಯಲ್ಲಿ ಹೋಳಗಿ ಉಟವಾಗಿ
ಹಸುವಿಲ್ಲ ಅತ್ತಿ ನನಗಿಗೆ, ಕೋಲ ಕೋಲ.

ತಾಯಿ ಮಕ್ಕಳ ಹೋಗಿ ಮನಿಯಾಗ ಮಲಗ್ಯಾರೆ,
ಸಂಗಮ ಒಬ್ಬಕ್ಕೆ ಹೊರಗೆ ಮಲಗ್ಯಾಳೆ, ಕೋಲ ಕೋಲ.

ಸಟ್ಟನೆ ಸರಿ ರಾತ್ರಿ ರಾತ್ರಿ ಬಹಳ ಅಯಿತು
ಸಂಗಮಗ ನಿದ್ದಿ ಬರಲಿಲ್ಲ ಕೋಲ ಕೋಲ.

ಅಷ್ಟ ವಸ್ತ್ರ ತೆಗೆದು ಪುತ್ರಿನ ಉಡಿಯಲ್ಲಿ ಕಟ್ಟಿ
ಬಾಳಿ ಬಲಕ್ಕೆ ಮಾಡಿ ನಿಂಬಿ ಯಾಡಕ್ಕೆ ಮಾಡಿ
ನಡೆದಾಳ ಸಂಗಮ ಬಾರಂಬ ಬಾವಿಗಿ, ಕೋಲ ಕೋಲ.

ಕಟ್ಟಿಯ ಹೊಯಾತ್ತಾ ಶಂಬರಾಗ ನೆನೆಯತ್ತಾ
ಡುಂಬಂತ ನಾರಿ ಡುಮಕ್ಯಾಳೆ ಕೋಲ ಕೋಲ.

ಡುಮಕಿಯ ಹೊಡಿಯತ್ತಾ ಈಶ್ವರನ ನನೆಯಸುತ್ತಾ
ಪತಿವ್ರತ ಸಂಗಮ ಪ್ರಾಣ ಬಿಟ್ಟಳಾ, ಕೋಲ ಕೋಲ.

ಮಳೆ ಬಿದ್ದಿ ಬೇಳಗಾಗಿ ಹೋತ್ತೊಂಟು ಎಚ್ಚರಾಗಿ
ಸಂಗಮನ ಸುದ್ದಿ ಹೊಸ ಸುದ್ದಿ, ಕೋಲ ಕೋಲ.

ನೇಗೆಬ್ಬಿದೆಲ್ಲ ಖೊಡಿನಾರಿ ಹೊಗಳಾ ಓಡಿ ಸುದ್ದಿ
ಕೆಳವರಿ ಲಗು ಮಾಡಿ ಕೋಲ ಕೋಲ.

ಸುದ್ದಿ ಒಯ್ದ ಅಣ್ಣಗ ಹಾಲು ಬಾಲ ಉಣಸೀದಿ
ಎನು ಸುದ್ದೆಪಾ ಮಗಳಲ್ಲಿ ಕೋಲ ಕೋಲ.

ಮಗಳ ಸಂಗಮ ಮಡಿದ್ಯಾಳೆ ಕೋಲ ಕೋಲ.

ಒಂದುಗುಡ್ಡ ಎರ‌್ಯಾನೆ ಒಂದು ಗುಡ್ಡ ಇಳಿದಾನೆ
ಮುಂಡನೆ ನೆಲಕ್ಕೆ ಒಗಿದಾನೆ ಕೋಲ ಕೋಲ.

ಮುಂಡಸಿ ನೇಲಕ್ಕೆ ಒಗದಾನೆ ಅಳುತ್ತಾನೆ
ಬಾಳೆ ಹಣ್ಣಿನಂತರೆ ನನ್ನ ಮಗಳೆ ಕೋಲ ಕೋಲ.

ಎಡ ಗುಡ್ಡ ಎರ‌್ಯಾನೆ ಎಡ ಗುಡಡ ಇಳಿದಾನೆ
ಮುಂಡನೆ ನೇಲಕ್ಕೆ ಒಗದಾನೆ ಕೋಲ ಕೋಲ.

ಮುಂಡನೆ ನೇಲಕ್ಕೆ ಒಗದು ಅಳುತ್ತಾನೆ,
ನಿಂಬಿ ಹಣ್ಣಿನಂತರೆ ನನ್ನ ತಂಗಿ, ಕೋಲ ಕೋಲ.

ಹಾದಿಯು ಉಡಗಿ ಇಕರಿ ಹಾದಿಯು ಚಳಿ ಹೋಯರಿ
ಹಾದ್ಯಾಗಿನ ಮಂದಿ ಬಯಲಾಗಿರಿ, ಕೋಲ ಕೋಲ.

ಹಾದ್ಯಾಗಿನ ಮಂದಿ ಬಯಲಾಗಿರಿ ಸಂಗಮನ
ತಾಯಿ ಹೊರಡುತ್ತಾ ಹೊಂಟಾಳೆ ಅಳುತ್ತಾ ಕೋಲ ಕೋಲ.

ಕಟ್ಟಿಯ ಉಡಿಗಿ ಇತ್ಯಾರೆ ಕಟ್ಟಿಯ ಚಳಿ ಹೋಯಿರಿ
ಕಟ್ಟಿಯ ಮ್ಯಾಲಿನ ಮಂದಿ ಬಯಲಾಗಿರಿ ಕೋಲ ಕೋಲ.

ಕಟ್ಟಿ ಮಾಲಿನ ಮಂದಿ ಬಯಲಾಗಿರಿ ಸಂಗಮ ತಂದೆ
ಹಿಯಾಳುತ್ತಾ ಹೊಂಟಾನೆ ಆಳುತ್ತಾ, ಕೋಲ ಕೋಲ.

4. ಮಗಳ ಹಾಡು

ಪಾಪವು ಹೆಚ್ಚಾಗಿ ಭೂಮಿಗೆ ಭಾರವಾಯ್ತು,
ಮಳೆ, ಬೆಳೆ ಎಲ್ಲಾ ಹೊಂಟೇ ಹೋಯ್ತು ಕೋಲೆಣ್ಣ ಕೋಲ.

ದಾನ ಧರ್ಮವಿಲ್ಲಾ, ಮಾಯಾ, ಮೋಹವಿಲ್ಲಾ,
ಶಿವನಿಗಿ, ನಂಬುವರು ಒಬ್ಬರಿಲ್ಲಾ, ಕೋಲೆಣ್ಣ ಕೋಲ.

ಊರಿಗೊಬ್ಬ, ಸಾವುಕಾರ ಅವನಿಗಿತ್ತು ಬಹಳ ಅಹಂಕಾರ,
ಅವನಿಗಿದ್ದಳೊಬ್ಬ ಮಗಳು ಕೋಲೆಣ್ಣ ಕೋಲ.

ಮಗಳು ಬೆಳೆದಂಗೆಲ್ಲಾ ಸಾವುಕಾರಗಿಲ್ಲಾ ನಿದ್ರಿ ಊಟಾ,
ಹೋಗುತ್ತದಲ್ಲಪ್ಪಾ ಗಂಟಾ, ಕೋಲೆಣ್ಣ ಕೋಲ.

ಹೆಣಿತಿಗೆ, ಅಂತಾನೆ ಒಂದದೀನಾ ಹುಟ್ಟಿತಲ್ಲಾ ಒಂದು ಹುಣ್ಣ,
ಕೊಡಲಹ್ಯಾಂಗ ನಾಹೆಣ್ಣ ಕೋಲೆಣ್ಣ ಕೋಲ.

ಹಣ್ಣಾದರ ಕೋಳಿತಾದ ಹೆಣ್ಣಾದರು ಬೆಳಿತಾದ
ಹೆಣ್ಣಾದ ಪರರ ವಸ್ತು ಕೋಲೆಣ್ಣ ಕೋಲ.

ಮಗಳಿಗೆ ಕೊಟ್ಟರ ಹೊಗತದ ಗಂಟ ಮುಳುಗಿ
ವಿಚಾರ ಮಾಡ್ಯಾನ ಒಂದೇ ಘಳಗಿ ಕೋಲೆಣ್ಣ ಕೋಲ.

ಆಳ ಮನುಷಾ ಶಂಕರಾ ಅವನೊಬ್ಬ ಗರೀಬಾ,
ಕೊಡಬೇಕು ಮಗಳ ಅವನೀಗಾ ಕೋಲೆಣ್ಣ ಕೋಲ.

ಆಳ ಮಗನ ಕರಸ್ಯಾನ ಸಾವುಕಾರ ಕೇಳಿತಾರ
ಮಗಳ ಕೊಡತೀನಿ ನಾ ನಿನಗ ಕೋಲೆಣ್ಣ ಕೋಲ.

ಭೂಮಿಯು ನಡುಗಿತ್ತು, ಆಕಾಶ ಬಿದ್ದಿತು
ಇದು ಎನ್ರೀ ನಿಮ್ಮದು ಮಾತು ಕೋಲೆಣ್ಣ ಕೋಲ.

ಬಡವರಾ-ನಾವು, ಸಿರಿವಂತರಾದಿರಿ ನೀವು
ಹಿಟ್ಟು ಬೂದಿ ಹ್ಯಾಂಗರಿ ಸರಿ ಕೋಲೆಣ್ಣ ಕೋಲ.

ಶಂಕರ ಆಡಿದ ಮಾತು ಸಾವುಕಾರನ ಮನಸ್ಸಿಗೆ ಹತ್ತು
ಹಿಡಿದಾನರಿ ಹಾವಿನಂಗ ವಿಷಾ ಕೋಲೆಣ್ಣ ಕೋಲ.

ರಾತ್ರಿ ಆಗಿತ್ರಿ ಬಹಳ ಅದಿತ್ರಿ ನಿದ್ದಿಯ ಹೊತ್ತು,
ಶಂಕರ ಮಲಗಿದಾ ಹೊಲದಾಗ ಕೋಲೆಣ್ಣ ಕೋಲ.

ಸಾವುಕಾರ ಹೋಗ್ಯಾರ ಹೋಲಕಾ ಶಂಕರ ಮಲಗಿದ ನೆಲಕಾ
ನೋಡುತಾನರಿ ನಾಲ್ಕು ದಿಕ್ಕು ಕೋಲೆಣ್ಣ ಕೋಲ.

ಮನಸ್ಸು ಮಾಡ್ಯಾರ ಘಟ್ಟಿ ಹತಿಯಾರ ಹಿಡಿದಾರ ಎತ್ತಿ,
ಚುಚ್ಚ್ಯಾರ ಶಂಕರನ ಎದಿಗಿ, ಕೋಲೆಣ್ಣ ಕೋಲ.

ಶಂಕರನ ಕೊಲ್ಲಿ ಮನಿಗಿ ಬಂದ ಸಾವುಕಾರ, ಬಿಳಲ್ಲಿಲ್ಲಾ
ಅವನಿಗಿ ಚೈನಾ ಕೋಲೆಣ್ಣ ಕೋಲ.

ತಂದಿಗಿ ನೋಡಿ ಮಗಳು ಕೇಳತಾಳ
ಯಾಕೆ ಬಂದಿಲ್ಲ ಅಪ್ಪಾ ನಿನಗೆ ನಿದ್ದಿ, ಕೋಲೆಣ್ಣ ಕೋಲ.

ಕನಸು ಬಿದ್ದಿತು ಮಗಳೆ ಎಂಥ ಮಾತು ಆಗಿಹೋತು,
ಶಂಕರಗ ಹೊಡದಾರ ಹೊಲದಾಗ ಕೋಲೆಣ್ಣ ಕೋಲ.

ಹೋಲಕ ಹೋಗ್ಯಾಳ ಮಗಳು ನೋಡುತಾಳ ಶಂಕರನ ಹೆಣ,
ತಂದಿಯ ಹತಿಯಾರ ಅಲ್ಲ ಖುನಾ ಕೋಲೆಣ್ಣ ಕೋಲ.

ತಂದಿಯ ಹತಿಯಾರ ನೋಡಿ ಇದು ಎಂಥ ಅನ್ಯಾಯ ಆಯ್ತು,
ದುಃಖ ಮಾಡುತಾಳರಿ ಶಿವನಿಗಿ ನೆನಸಿ ಕೋಲೆಣ್ಣ ಕೋಲ.

ಮಗಳ ದುಃಖ ಕೇಳಿ ಬಂದಾನ ಶಿವ ನಂದಿ ಎರೀ
ಕೇಳುತಾನ, ನಾನಾಪರಿ ಕೋಲೆಣ್ಣ ಕೋಲ.

ಶಂಕರನ ಕೊಲ್ಯ್‌ನ ನಮ್ಮ ಅಪ್ಪಾ
ಎಂಥಾ ಶಾಪಾ ಕೋಡತಿರಿ ಅವನೀಗಿ ಕೋಲೆಣ್ಣ ಕೋಲ.

ಮಾಡಿದ ಪಾಪಕ್ಕೆ ಪ್ರಾಯಶ್ಚಿತ
ಸಿಗುತಾದ ಮಗಳ ಕೋಲೆಣ್ಣ ಕೋಲ.

ಇಂಥ ಪಾಪ ಮಾಡಿದ ತಂದಿ ಮರತ್ಯಾದ ಮ್ಯಾಲಯಾರಿಗಿ ಬ್ಯಾಡಾ
ಇವನಿಗಿ ಹಾಕೋ ಹಂದಿಯ ಜನ್ಮ ಕೋಲೆಣ್ಣ ಕೋಲ

ಮಗಳ ದುಃಖ ನೋಡಿ ಶಿವನು ತಾನು ಕರಗಿ
ಶಂಕರಗ ಜೀವಾ ತುಂಬಿ ಕೋಲೆಣ್ಣ ಕೋಲ

ಮಾಡಿದ ಪಾಪಕ್ಕಾಗಿ ಸಾವುಕಾರ ಸತ್ತನ ಹಾವು ಕಚ್ಚಿ
ಹೊಗ್ಯಾನರಿ ಹಂದಿಯ ಜನ್ಮ ಕೋಲೆಣ್ಣ ಕೋಲ

ಜೀವ ತುಂಬಿದ ಮ್ಯಾಲ ನೀನವಳ ಗಂಡ
ಶಿವ ಮಾಡನರೀ ಶಂಕರನ ಮದುವಿ ಕೋಲೆಣ್ಣ ಕೋಲ

ತಂದಿಯ ಜಾಯದಾತು ಒಪ್ಪಿ ಎಲ್ಲಾ ಶಿವ ತಾನು
ಮಾಡ್ಯಾರ ಮಗಳ ಹೆಸರು ಕೋಲೆಣ್ಣ ಕೋಲ.

ಸತ್ಯಾದ ಹಾಡು ಇದು ಕೇಳರಿ ಚಿತ್ತ ಕೊಟ್ಟು
ಶಿವ ಕೊಡುವನು ಸಕಲ ಸಂಪತ್ತು, ಕೋಲೆಣ್ಣ ಕೋಲ

5. ನಾಗರ ಪಂಚಮಿಯ ಹಾಡು

ಹಬ್ಬ ಬಂದಿತೆಂದು ಹಿಗ್ಗಿಲಿ ಇರತಾರ
ಅಣ್ಣ ಯಾವಾಗ ಬರುವನು ಕರಿಯಾಕ ಕೋಲು ಕೋಲು
॥ಅಣ್ಣ ಯಾವಾಗ ಬರುವನು ॥

ಪಂಚಮಿ ಹಬ್ಬ ಹೆಣ್ಣ ಮಕ್ಕಳರಿಯುವ ಹಬ್ಬ
ಕೊಬ್ಬರಿ ಬೆಲ್ಲ ಸವಿಯುವ ಹಬ್ಬ ಕೋಲು ಕೋಲು
॥ಕೊಬ್ಬರಿಬೆಲ್ಲ ಸವಿಯುವ ॥

ವಾರಿಗಿ ಗೇಳತ್ಯಾರು ಎಲ್ಲರೂ ಕೂಡಿ
ಹಿಗ್ಗಿಲಿ ಜೋಕಾಲಿ ಅಡುವ ಹಬ್ಬ ಕೋಲು ಕೋಲು
॥ಹಿಗ್ಗಿಲಿ ಜೋಕಾಲಿ ॥

ಚಿಂತಿಯ ನೀಗಿ ಬಾಳುವ ಹಬ್ಬ
ಹುತ್ತೀಗಿ ಹೋಗಿ ನಾಗಪ್ಪಗ ಹಾಲೆರೆವ ಹಬ್ಬ ಕೋಲು ಕೋಲು
॥ಹುತ್ತೀಗಿ ಹೋಗಿ ನಾಗಪ್ಪನ ॥

ತವರಿಗಿ ಹರಕೆಯ ಮಾಡುವ ಹಬ್ಬ
ಈಶೆಂಬ ಸಂಪತ್ತು ಗಳಿಸುವ ಹಬ್ಬ ಕೋಲು ಕೋಲು
॥ಈಶೆಂಬ ಸಂಪತ್ತು ॥

ಶ್ರಾವಣಮಾಸದ ಪಂಚಮಿ ಹಬ್ಬದ
ಪಂಚಾಮೃತ ಅಡಿಗಿ ಮಾಡುವಾ ಕೋಲು ಕೋಲು
॥ಪಂಚಾಮೃತ ಅಡಿಗಿ ॥

ಪಂಚಾಮೃತದ ಯಡಿಯ ಮಾಡೋಣ ಬಾ ಗೆಳತಿ
ಒನಪಿನಲಿ ಒಲುಮೆಯ ಬೆಳೆಸೋಣ ಕೋಲು ಕೋಲು
॥ಒನಪಿನಲಿ ಒಲುಮೆಯ ॥

ಹಬ್ಬ ಬಂದಿತೆಂದು ಹಿಗ್ಗಿಲಿ ಇರತಾರ
ಅಣ್ಣ ಯಾವಾಗ ಬರುವನು ಕರಿಯಾಕ ಕೋಲು ಕೋಲು
॥ಅಣ್ಣ ಯಾವಾಗ ಬರುವನು ॥

6. ಪಂಚಮಿಯ ಹಾಡು

ಶರಣ ಸೋಮವಾರ ದಿನ ಅಣ್ಣ ಕರಿಯಾಕ ಬಂದ
ಅಣ್ಣಗ ತೆವರು ಕಳವಲ್ಲರಿಕೋಲೆನ್ನಕೋಲ
॥ಅಣ್ಣಗ ತೆವರು ಕಳವಲ್ಲರಿ ॥

ಅಣ್ಣಗ ತೆವರು ಕಳುವಲ್ಲದಿದ್ದರ
ಉಡವಲ್ಲದ ಮುಟ್ಟಾಬೀಗದಾರೆ ಕೋಲೆಣ್ಣಕೋಲ
॥ಉಡವಲ್ಲದ ಮುಟ್ಟಾಬೀಗದಾರೆ ॥

ಕೊಟಗ್ಯಾಗೀನ ನಂದಿ ಕತ್ತೀಗಿ ತರವಳಗಿ
ತಲಬಾಗಿ ಬಿಡ ಬಂದಾಳ ತಾಳಿ ಕೋಲೆನ್ನಕೋಲ
॥ತಲಬಾಗಿ ಬಿಡ ಬಂದಾಳ ॥

ಅಳಬ್ಯಾಡೆ ತಂಗ್ಯಮ್ಮ ಕರಿಬ್ಯಾಡೆ ತಂಗ್ಯಮ್ಮ
ಮತ್ತ ದೀವಳಿಗಿ ಕರಿಯಾಕ-ಬರುತೇನ ಕೋಲೆನ್ನಕೋಲ
॥ಮತ್ತ ದೀವಳಿಗಿ ॥

ಮನ್ನಣಿ ಕುಬ್ಬಸ ಮುಂಗೈಯ ರೇಸಿಮೆ
ಸಂಗನಾಡದ ಸುರಸಿಬ್ಬಿಕರತಾ ಕೋಲೆನ್ನಕೋಲ
॥ಸಂಗನಾಡದ ॥

ಸಂಗನೆ ನಾಡದ ಸುರಸಿಬ್ಬಿ ಕುಬ್ಬಸ
ಅಣ್ಣ ಖಳವ್ಯಾರೆ ಪಂಚಮಿಗಿ ಕೋಲೆನ್ನಕೋಲ
॥ಅಣ್ಣ ಖಳವ್ಯಾರೆ ॥

ಕರಿಯೇನ ಕುಬ್ಬಸ ಕರಿ ಹಲಗಿ ಕರಿರೇಸಿಮಿ
ಕಲಬುರಗಿ ನಡವ ಹೋಳಬಾವಿ ಕೋಲೆನ್ನಕೋಲ
॥ಕಲಬುರಗಿ ನಡವ ॥

ಕಲಬುರಗಿ ಎಲೆ ನಡವು ಹೋಳಿವಂತ ಈ ಕುಬ್ಬಸ
ತಮ್ಮ ಖಳವ್ಯಾರೇ ಪಂಚಮಿ ಹಬ್ಬಕ ಕೋಲೆನ್ನಕೋಲ
॥ತಮ್ಮ ಖಳವ್ಯಾರೆ ॥

ಬಿಳಿಯನ ಕುಬ್ಬಸ ಬಿಳಿ ಹಲಗಿ ಬಿಳಿರೇಸಿಮಿ
ಬೆಳದಿಂಗಳದಾಗ ಹೊಳದಾವೇ ಕೋಲೆನ್ನಕೋಲ
॥ಬೆಳದಿಂಗಳದಾಗ ಹೊಲದಾವೇ ॥

ಬೆಳದಿಂಗಳ ಎಲೆ ಬೆಳಗ ಹೊಳಿವಂತ ಈ ಕುಬಸ
ಹಡದಪ್ಪ ಜೂಜಾಡಿ ಖಳುವ್ಯಾರೆ ಕೋಲೆನ್ನಕೋಲ
॥ಹಡದಪ್ಪ ಜೂಜಾಡಿ ॥

ಹಸರನ್ನೇ ಕುಬ್ಬಸ ಹಸರ ಹಲಗಿ ಹಸರ ರೇಸಿಮಿ ಹಲಕ್ಯಾಡ
ಹೊಳಕ್ಯಾಡ ನಡಹೊಳದಾವೆ ಕೋಲೆನ್ನಕೋಲ
॥ಹೊಳಕ್ಯಾಡ ನಡಹೊಳದಾವೆ ॥

ಹೊಳಕ್ಯಾಡ ಎಲೆ ನಡುವ ಹೊಳಿವಂತ ಈ ಕುಬಸ
ಹಡದವ್ವ ಜೂಜಾಡಿ ಖಳುವ್ಯಾಳೆ ಕೋಲೆನ್ನಕೋಲ
॥ಹಡದವ್ವ ಜೂಜಾಡಿ ॥