ಭಾಷೆಯನ್ನು ಏಕೆ ಬಳಸುತ್ತೇವೆ ಎಂದರೆ ಸಂವಹನಕ್ಕಾಗಿ ಎಂದು ಹೇಳುವುದು ಸಾಮಾನ್ಯ ಉತ್ತರ. ಆದರೆ ಭಾಷೆ ಕೇವಲ ಸಂವಹನದ ಉದ್ದೇಶಕ್ಕಷ್ಟೇ ಅಲ್ಲದೆ ಇತರ ಕೆಲಸಗಳಲ್ಲಿಯೂ ಬಳಕೆಯಾಗುತ್ತದೆ. ಉದಾ. ಯಾವುದಾದರೂ ಭಾರದ ವಸ್ತುವನ್ನು ಎತ್ತುವಾಗ ಇಲ್ಲವೇ ತಳ್ಳುವಾಗ ಅನೇಕ ಜನ ಕೆಲಸ ಮಾಡುತ್ತಾ ‘ಐಸಾ’ ಎಂದು ಕೂಗುವುದನ್ನು ಗಮನಿಸಿರಬಹುದು. ಇದು ಸಂವಹನಕ್ಕಾಗಿ ಬಳಕೆಯಾದುದಲ್ಲ. ಹಾಗೆಯೇ ಅಶುಭವಾದ ಮಾತನ್ನೇನಾದರೂ ಆಡಿದರೆ ‘ಬಿಡ್ತು’ ಎಂದು ಕೆನ್ನೆಗಳನ್ನು ಮುಟ್ಟಿಕೊಳ್ಳುತ್ತೇವೆ. ಇಲ್ಲೂ ಸಹ ಭಾಷೆಯ ಬಳಕೆ ಸಂವಹನಕ್ಕಾಗಿಯಲ್ಲ. ಅಂದಮೇಲೆ ಭಾಷೆಯ ಬಳಕೆಗೆ ಸಂವಹನವನ್ನು ಹೊರತುಪಡಿಸಿದಂತಹ ಎಡೆಗಳೂ ಇರುತ್ತವೆ ಎಂದಾಯಿತು. ವಿನೋದಕ್ಕಾಗಿ, ಆಟಕ್ಕಾಗಿ ಭಾಷೆಯನ್ನು ಬಳಸುವುದು ಇಂತಹ ಎಡೆಗಳಲ್ಲಿ ಒಂದು. ಒಗಟುಗಳು, ನಾಲಿಗೆ ತೊಡಕುಗಳು ಇತ್ಯಾದಿಗಳು ಭಾಷಾ ಆಟದ ವ್ಯಾಪ್ತಿಯಲ್ಲಿ ಬರುತ್ತವೆ. ಅಲ್ಲದೆ ಮಕ್ಕಳು ತಮ್ಮ ಸಮ ವಯಸ್ಕರೊಂದಿಗೆ ಒಂದುಬಗೆಯ ಸಂಯೋಜನೆಯನ್ನು ಮಾಡಿ ಆಟಕ್ಕಾಗಿ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಂದಿರುವ ಪದರಂಗವೂ ಸಹಾ ಭಾಷಾ ಆಟದ ಸಾಲಿಗೆ ಸೇರುತ್ತದೆ.

ಶಾಲೆಯ ಆವರಣದಲ್ಲೋ, ಮನೆಯ ಮುಂದೆಯೋ ಬಿಡುವಿನ ವೇಳೆಯಲ್ಲಿ ಸುಮಾರು 10-15 ವರ್ಷ ವಯಸ್ಸಿನ ಮಕ್ಕಳು ತಮ್ಮ ತಮ್ಮಲ್ಲೇ ಮಾತನಾಡಿ ಕೊಳ್ಳುವಾಗ ಭಾಷೆಯನ್ನು ಭಿನ್ನ ರೀತಿಯಲ್ಲಿ ಬಳಸುತ್ತಾರೆ. ಅಂದರೆ, ಆ ರೀತಿಯ ಬಳಕೆಯಲ್ಲಿ ಒಂದು ಬಗೆಯ ಬದಲಾವಣೆ ಇರುತ್ತದೆ. ಅವರು ಮಾತನಾಡುತ್ತಿರುವುದು ಕನ್ನಡವೇ ಆದರೂ ಅದು ಕೇವಲ ಅವರಿಗೆ ಅವರ ಸಮವಯಸ್ಕರಿಗೆ ಮಾತ್ರ ತಿಳಿಯುತ್ತಿರುತ್ತದೆ. ಇದು ಒಂದು ಬಗೆಯ ಆಟದಂತೆ ನಡೆಯುತ್ತಿರುತ್ತದೆ. ಈ ಭಾಷಿಕ ಚಟುವಟಿಕೆಯನ್ನು ‘ಭಾಷಾ ಆಟಗಳು’ ಎಂದು ಕರೆಯಲಾಗಿದೆ. ಸಾಮಾನ್ಯವಾಗಿ ಇದು ಜಗತ್ತಿನ ಎಲ್ಲ ಭಾಷೆಗಳಲ್ಲೂ ಇರುವಂಥದ್ದೇ.

ಭಾಷಾ ಆಟಗಳಲ್ಲಿ ಪದಗಳಲ್ಲಿನ ಧ್ವನಿಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗದಂತೆ ಬದಲಾಯಿಸಿ ಬಳಸಲಾಗಿರುತ್ತದೆ. ಆದರೆ ಈ ರೀತಿಯ ಬದಲಾವಣೆ ವ್ಯವಸ್ಥಿತವಾಗಿರುತ್ತದೆ ಎಂಬುದು ಗಮನಾರ್ಹ. ಇವು ಒಂದು ರೀತಿಯಲ್ಲಿ ಗುಪ್ತ ಭಾಷೆಯಂತೆ ತೋರಿಬರುತ್ತವೆ.

ಇಂಗ್ಲಿಶ್ ಭಾಷಿಕರ ವಲಯದಲ್ಲಿ ಪ್ರಚಲಿತವಿರುವ ಭಾಷಾ ಆಟವನ್ನು ಪಿಗ್ ಲ್ಯಾಟಿನ್ ಎಂದು ಕರೆಯಲಾಗುತ್ತದೆ. ಪದಾದಿಯ ವ್ಯಂಜನ ಅಥವಾ  ವ್ಯಂಜನ ಗುಚ್ಛವನ್ನು ಪದದ ಕೊನೆಗೆ ತಳ್ಳಿ ಅದರ ನಂತರ ‘ೀ’ ಅಕ್ಷರವನ್ನು ಸೇರಿಸಲಾಗುತ್ತದೆ. ಉದಾ. ಪಿಗ್ ಲ್ಯಾಟಿನ್ (Pig latin) ಎನ್ನುವ ಪದ 1gpe atinle ಎಂದಾಗುತ್ತದೆ. ಎಲ್ಲ ಭಾಷಾ ಆಟಗಳೂ ಇದೇ ರೀತಿ ಇರಬೇಕಾಗಿಲ್ಲ. ಪದಗಳನ್ನು ಭಿನ್ನ ರೀತಿಯಲ್ಲಿ ರಚಿಸಲಾಗುವುದು. ಭಾಷಾ ಆಟದಲ್ಲಿನ ಪದ ಹಾಗೂ ಭಾಷೆಯಲ್ಲಿನ ಪದಗಳ ನಡುವೆ ಮಾಡಲಾದ ವ್ಯತ್ಯಾಸ ಒಂದು ವ್ಯವಸ್ಥಿತ ರೀತಿಯಲಿರುತ್ತವೆ. ಹಾಗಾಗಿ ಇವು ಒಂದು ರೀತಿಯಲ್ಲಿ ಸಾಮರ್ಥ್ಯದ ಪ್ರದರ್ಶನವೂ ಹೌದು.

ಭಾಷಾ ಆಟದ ವಿಧಗಳು

ಲೆಕಾಫ್ (1972) ಹೇಳುವಂತೆ ಯಾವುದೇ ಭಾಷೆಯ ಭಾಷಾ ಆಟದಲ್ಲಿ 4 ರೀತಿಯ ತಂತ್ರಗಳನ್ನು ಬಳಸಲಾಗುತ್ತದೆ. ಅವುಗಳು 1. ಸೇರಿಸುವಿಕೆ, 2. ಕ್ರಮ ವಿಪರ್ಯಯಗೊಳಿಸುವಿಕೆ, 3. ಬದಲಿಸುವಿಕೆ, 4. ಬಿಡುವಿಕೆ (ತೆಗೆದು ಹಾಕುವಿಕೆ)

1. ಸೇರಿಸುವಿಕೆ

ಭಾಷಾ ಆಟದ ಈ ಮಾದರಿಯಲ್ಲಿ ಯಾವುದಾದರೂ ಧ್ವನಿಯನ್ನು ಆಯಾ ಭಾಷೆಯ ಪದದ ಭಾಗಕ್ಕೆ ಸೇರಿಸಲಾಗುತ್ತದೆ. ಕೆಲವೊಂದು ಭಾಷೆಗಳಲ್ಲಿ ಪದದೊಳಗಿನ ಪ್ರತಿ ಅಕ್ಷರದ ಮುಂಚೆ ಅಥವಾ ನಂತರ ಸೇರಿಸಿದರೆ, ಇನ್ನು ಕೆಲವು ಭಾಷೆಗಳಲ್ಲಿ ಪ್ರತಿ ಸ್ವರದ ನಂತರ ಸೇರಿಸಲಾಗುತ್ತದೆ. ಇನ್ನು ಕೆಲವು ಭಾಷೆಗಳಲ್ಲಿ ಪದದ ಯಾವುದಾದರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರಿಸಲಾಗುತ್ತದೆ.

ಕೆಲವು ಭಾಷೆಗಳಲ್ಲಿ ಕೆಲವು ಧ್ವನಿಗುಚ್ಛವನ್ನು ಸೇರಿಸಲಾಗುತ್ತದೆ. ಇದು ಪದದ ಆದಿ ಅಥವಾ ಅಂತ್ಯ ಅಕ್ಷರದ ಜೊತೆ ಬರಬಹುದು. ಇಂಗ್ಲಿಶ್‌ನ ಒಂದು ಪ್ರಭೇದ ಭಾಷೆಯಲ್ಲಿ ಸ್ಕ(SK)ವನ್ನು ಪದಾದಿಯ ಅಕ್ಷರಕ್ಕೆ (ಸಿಲೆಬಲ್) ಮೊದಲು ಸೇರಿಸಲಾಗುವುದು. ಉದಾ. ಇಂಗ್ಲಿಶಿನ ‘you’ ಎಂಬುದು ಸ್ಕ್ಯು  (Skyou) ಎಂದಾಗುತ್ತದೆ. ಅದೇ ರೀತಿಯಲ್ಲಿ ಫಿನ್ನಿಶ್ ಭಾಷಾ ಆಟದಲ್ಲಿ ‘ತ’ (ta) ಎಂಬುದನ್ನು ಮೊದಲ ಅಕ್ಷರದ (ಸಿಲೆಬಲ್) ನಂತರ ಸೇರಿಸಲಾಗುವುದು. ಉದಾ. Jongloori (Juggler) ಎಂಬುದು ton-ta-loori ಎಂದಾಗುತ್ತದೆ.

ಈಜಿಪ್ಟ್‌ನ ಅರೇಬಿಕ್ ಭಾಷೆಯಲ್ಲಿ TinV (V ಎಂಬುದು ಕೊನೆಯಿಂದ ಎರಡನೇ ಸ್ವರದ ಆವರ್ತನೆೆ) ಎಂಬುದನ್ನು ಕೊನೆಯ ಅಕ್ಷರದ ಹಿಂದೆ ಸೇರಿಸಲಾಗುವುದು. ಉದಾ Yeddihalli (ಅವನು ನನಗೆ ಕೊಡುತ್ತಾನೆ) ಎಂಬುದು Yeddih-tina-li ಎಂದಾಗುತ್ತದೆ.

ಜರ್ಮನ್ ಭಾಷೆಯ ಬಿಸ್ಪ್ರಾಚೆಯಲ್ಲಿ ಈ ಸೇರಿಸುವ ಕ್ರಿಯೆ ಪ್ರತಿಯೊಂದು ಅಕ್ಷರಕ್ಕೂ ಬದಲಾಗಿ ಪ್ರತಿ ಸ್ವರದ ನಂತರ ನಡೆಯುತ್ತದೆ. ದಸ್ (das) ಎಂಬುದು ದಬಾಸ್ (dabas) ಎಂದಾಗುತ್ತದೆ. ಅಂದರೆ ಪ್ರತಿ ಸ್ವರದ ನಂತರ ‘ಬಿ’ ಧ್ವನಿಯನ್ನು ಸೇರಿಸಲಾಗುತ್ತದೆ. ಅಪ್‌ಟಾಕ್ ಎಂಬ ಇಂಗ್ಲಿಶಿನ ಭಾಷಾ ಆಟದಲ್ಲಿ ‘ಅಪ್’ ಎಂಬುದನ್ನು ಮೊದಲ ವ್ಯಂಜನದ ನಂತರ ಅಂದರೆ ಪದದ ಪ್ರತಿ ಸ್ವರಕ್ಕೆ ಮೊದಲು ಸೇರಿಸಲಾಗುತ್ತದೆ. ಹಾಗಾಗಿ ಪೆನ್ಸಿಲ್ ಎಂಬುದು Papensopil ಎಂದು ಉಚ್ಚಾರವಾಗುತ್ತದೆ.

ಚೀನಾದಲ್ಲಿನ ಭಾಷಾ ಆಟದಲ್ಲಿನ ‘ಸೇರಿಸುವಿಕೆ’ ಆಟದಲ್ಲಿ ಪದಾದಿಯ ಅಕ್ಷರದ ಮೊದಲ ವ್ಯಂಜನದ ನಂತರ ‘ayle’ ಎಂಬುದನ್ನು ಸೇರಿಸಲಾಗುತ್ತದೆ. ಇಲ್ಲಿ ‘Pey’ ಎಂಬುದು ‘P-ayle-ey ಎಂದಾಗುತ್ತದೆ. ಜಪಾನ್‌ನಲ್ಲಿನ ಬಾಬಿಬು ಭಾಷಾ ಆಟದಲ್ಲಿ ಬಾಬಿಬು ಪದರಚನೆಯಲ್ಲಿ ‘ಬ’ ಸ್ವರವನ್ನು ಜಪಾನ್ ಭಾಷೆಯ ಅಕ್ಷರ (ಮೊರಾ)ದ ನಂತರ ಸೇರಿಸಲಾಗುವುದು. (ಸ್ವರ ಎಂಬುದು ಅಕ್ಷರ (ಮೊರ)ದ ಹಿಂದಿನ ಸ್ವರ. ಹಿಂದಿನ ಸ್ವರದಲ್ಲಿ ಸ್ವರ ಇಲ್ಲದಿದ್ದರೆ ಉ ಅನ್ನು ಸೇರಿಸಲಾಗುವುದು. ಹಾಗಾಗಿ ಜಪಾನಿ ಭಾಷೆಯ asita (ನಾಳೆ) aba-asibi-taba ಮತ್ತು minna (everyone) ಎಂಬುದು mibi-nbu-naba ಎಂದಾಗುತ್ತದೆ. ಮಲಯಾಳಂ ಭಾಷೆಯಲ್ಲಿನ ಆಟದಲ್ಲಿ   -ಪ ಎಂಬುದನ್ನು ಪ್ರತಿ ಅಕ್ಷರದ ಹಿಂದೆ ಸೇರಿಸಲಾಗುತ್ತದೆ. ಹಾಗಾಗಿ ಕಮಲ ಎಂಬುದು ಪಕ ಪಮಪಲ ಎಂದಾಗುತ್ತದೆ.

ಈ ಎಲ್ಲ ಭಾಷಾ ಆಟಗಳನ್ನು cross Lingustic perspectiveನಿಂದ ನೋಡಿದಾಗ ಹೆಚ್ಚಾಗಿ ದ್ವಯೋಷ್ಠ್ಯ ವ್ಯಂಜನಗಳನ್ನು ಸೇರಿಸುವುದು ಕಂಡು ಬರುತ್ತದೆ.

2. ಅನುಕ್ರಮಣಿಕೆ: ಇದು ಭಾಷಾ ಆಟದ ಬಹುಮುಖ್ಯವಾದ ತಂತ್ರಗಳಲ್ಲಿ ಒಂದು. ಇದನ್ನು ಹಿಮ್ಮುಖ ಭಾಷೆ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಹಲವು ವಿಧ. ಭಾಷಾ ಆಟದ ಪದವನ್ನು ರಚಿಸಲು ಅಕ್ಷರಗಳ ಅನುಕ್ರಮಣಿಕೆಯಲ್ಲಿ ಬದಲಾವಣೆ ಮಾಡುವುದು. ತಗೆಲೊಗ್ ಭಾಷೆಯಲ್ಲಿ ಕೊನೆಯ ಅಕ್ಷರವನ್ನು ಆರಂಭಕ್ಕೆ ತರುವುದರ ಮೂಲಕ ಪದರಚನೆ ಮಾಡ ಲಾಗುವುದು. ಉದಾ. maganda ‘ಸುಂದರ’ ಎಂಬುದನ್ನು damagan ಎಂದಾಗುತ್ತದೆ. ಕ್ಯೂನಾ ಭಾಷೆಯಲ್ಲಿ ಮೊದಲ ಅಕ್ಷರವನ್ನು ಕೊನೆಗೆ ಸರಿಸುವುದು ಕಂಡುಬರುತ್ತದೆ. ಉದಾ: ಉವಯ > ವಯವು

ಕೇವಲ ಮೊದಲ ಮತ್ತು ಅಂತ್ಯದ ಅಕ್ಷರಗಳನ್ನು ಬದಲು ಮಾಡುವುದಷ್ಟೇ ಅಲ್ಲದೆ ಅಕ್ಷರಗಳನ್ನು ಪರಸ್ಪರ ಬದಲಿಸುವುದರ ಮೂಲಕವೂ ಭಾಷಾ ಆಟದ ಪದರಚನೆ ಸಾಧ್ಯ. ಉದಾ. ಬಂಟು ಭಾಷೆಯಲ್ಲಿ ಕೊನೆಯ ಎರಡು ಅಕ್ಷರಗಳು ಪರಸ್ಪರ ಬದಲಾಗುತ್ತವೆ. tuye kundzivo (ಮನೆಗೆ ಹೋಗೋಣ) ಎಂಬುದು yetu kuvondzi ಎಂದಾಗುತ್ತದೆ. ಸುಡಾನಿ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಅದಲು ಬದಲಾಗುತ್ತವೆ. ಬರಮು > ರಬಿಮು ಎಂದಾಗುತ್ತದೆ.

ಇದಕ್ಕಿಂತ ಭಿನ್ನ ಮಾದರಿಯೂ ಇದೆ. ಇದರಲ್ಲಿ ಪದದ ಧ್ವನಿಗಳನ್ನು ಹಿಂದುಮುಂದು ಮಾಡಲಾಗುತ್ತದೆ. ಉದಾ. ತಗಲೋಗ್ ಭಾಷೆಯಲ್ಲಿ salamat (thanks) ಎಂಬುದು tamalas ಎಂದಾಗಿಯೂ ನ್ಯೂಗಿನಿ ಪಿಜಿನ್‌ನಲ್ಲಿ tumora (ನಾಳೆ) ಎಂಬುದು aromut ಎಂದೂ ಆಗುತ್ತದೆ.

3. ಬದಲಿಸುವಿಕೆ

ಇದು ಅಷ್ಟೊಂದು ಬಳಕೆಯಲ್ಲಿ ಇಲ್ಲದಿದ್ದರೂ ಭಾಷಾ ಆಟದ ತಂತ್ರಗಳಲ್ಲೊಂದು. ಈ ಮಾದರಿಯಲ್ಲಿ ಸಾಮಾನ್ಯ ಪದದ ಧ್ವನಿಮಾ ಅಥವಾ ಧ್ವನಿಮಾಗಳ ಗುಂಪನ್ನು ಬದಲಿಸುವುದು. ಉದಾ. ಮೊರಕೈಟೋ ಸ್ಪಾನಿಶ್‌ನಲ್ಲಿ ಸ್ಪಾನಿಶ್ ಪದಗಳನ್ನು ತೆಗೆದುಕೊಂಡು ಅವುಗಳ ಸ್ವರಗಳನ್ನು ಇನ್ನೊಂದು ಅಸಂಬದ್ಧ ಪದಗಳ ಧ್ವನಿಗಳೊಂದಿಗೆ ಬದಲಿಸಲಾಗುವುದು. ಹಾಗಾಗಿ Rose ಎಂಬ ಸ್ಪಾನಿಶ್ ಪದ rofasagwan ಎಂದಾಗುತ್ತದೆ. ಮೊರಾಕ್ಕೋ ಅರೇಬಿಕ್‌ನಲ್ಲಿರುವ ವಿಧಾನದಲ್ಲಿ ಪದದ ಮೊದಲ ವ್ಯಂಜನ ವನ್ನು ಬದಲಿಸುವುದು ಉದಾ. far (mouse) har ಎಂದೂ l-yuma (ಇವತ್ತು) ಎಂಬುದು h-yuma ಎಂದೂ ಆಗುತ್ತದೆ.

4. ತೆಗೆದು ಹಾಕುವುದು

ಇದು ತುಂಬಾ ಅಪರೂಪದ ತಂತ್ರವಾಗಿದೆ. ಭಾಷೆಯ ಪದದ ಯಾವುದಾದರೂ ಭಾಗವನ್ನು ವ್ಯವಸ್ಥಿತ ರೀತಿಯಲ್ಲಿ ತೆಗೆದು ಹಾಕುವ ಮೂಲಕ ರಚಿಸಲಾಗುವುದು. ಇದಕ್ಕೆ ಉದಾಹರಣೆಯಾಗಿ ಇಂಡೋನೇಶಿ ಯಾದ ಮುರುತ್ ಭಾಷೆಯಲ್ಲಿ ನಡೆಯುವ ಕ್ರಿಯೆಯಲ್ಲಿ ಅಂತ್ಯ ಅಕ್ಷರ ಭಾಗಶಃ ಅರ್ಥಪೂರ್ಣವಾಗಿ ಕಳೆದುಹೋಗುತ್ತದೆ. (ಏಕಾಕ್ಷರ ಪದಗಳು ಇದರಲ್ಲಿ ಬರುವುದಿಲ್ಲ.) ಮುರತ್‌ನ mapanday know kra ra ragu nu murut ಎಂಬುದು mapan ko ki ra rag nu mar ಎಂದಾಗುತ್ತದೆ.

ಮೇಲೆ ಸೂಚಿಸಲಾದ ನಾಲ್ಕು ವಿಧಾನಗಳೂ ಒಳಗೊಂಡಂತಹ ಪದರಚನೆ ಗಳಿದ್ದರೂ ಅವುಗಳಲ್ಲಿ ಹೆಚ್ಚಾಗಿ ಸೇರಿಸುವಿಕೆ ಮತ್ತು ಪದಾನು ಕ್ರಮಣಿಕೆಯ ವಿಧಾನಗಳು ಒಳಗೊಂಡಿರುವಂತಹ ಪದರಚನೆಗಳು ಹೆಚ್ಚಾಗಿ ಕಂಡುಬರುತ್ತದೆ.

ಕನ್ನಡದಲ್ಲಿನ ಇಂತಹ ಭಾಷಾ ಆಟಗಳನ್ನು ಗಮನಿಸಿದಾಗ ಹಲವಾರು ರೀತಿಗಳಿರುವುದು ಕಂಡುಬರುತ್ತದೆ. ಬಹುಮುಖ್ಯವಾಗಿ ಗುರುತಿಸಿರುವಂತಹುದು ವಾಕ್ಯಗಳಲ್ಲಿ ಪದಗಳ ಅಕ್ಷರಗಳನ್ನು ಹಿಂದೆ ಮುಂದೆ ಮಾಡಿ ಮಾತಾಡುವುದು, ಪ್ರತಿ ಪದದಲ್ಲಿನ ಧ್ವನಿ ಘಟಕಗಳ ನಡುವೆ ನಿರ್ದಿಷ್ಟಪಡಿಸದ ಧ್ವನಿಯನ್ನು ಸೇರಿಸಿ ಮಾತಾಡುವುದು.

ಮೊದಲನೆಯ ವಿಧಾನವು ಸುಲಭವಾದುದು. ಅಂದರೆ ಇದು ಒಂದು ರೀತಿಯಲ್ಲಿ ಹಿಮ್ಮುಖವಾಗಿ ಓದಿದಂತೆ ಅಥವಾ ಉಚ್ಚರಿಸಿದಂತೆ ಉದಾ. ಬದುಕು-ಕುದುಬ, ಅವನು-ನುವಅ. ಇದನ್ನು ಇನ್ನೂ ಒಂದು ರೀತಿಯಲ್ಲೂ ಕಾಣಬಹುದು. ಅಂದರೆ ಮೂಲ ಪದದ ಸ್ವರಗಳನ್ನು ಹಾಗೆಯೇ ಇಟ್ಟುಕೊಂಡು ವ್ಯಂಜನಗಳನ್ನು ಬದಲಾಯಿಸುವುದು. ಉದಾ. ರಾಗ ಹಾಡು-ಗಾರ ಡಾಹು ಎಂದಾಗುತ್ತದೆ. ಇಲ್ಲಿ ಸ್ವರಗಳು ಹಾಗೇ ಇದ್ದು ಪದದೊಳಗಿನ ವ್ಯಂಜನಗಳು ಮಾತ್ರ ಬದಲಾಗಿವೆ. ಇದೇ ರೀತಿಯ ಇನ್ನೊಂದು ವಿಧಾನದಲ್ಲಿ ಎರಡು ಪದಗಳ ಉಚ್ಚಾರಣೆಯಲ್ಲಿ ಎರಡೂ ಪದಗಳ ಮೊದಲ ವ್ಯಂಜನಗಳನ್ನು ಬದಲಾಯಿಸುವುದು. ಉದಾ. ನಾಯಿ ಬಾಲ ಎಂಬುದು ಬಾಯಿ ನಾಲ ಎಂದಾಗುತ್ತದೆ.

ಎರಡನೆಯ ವಿಧಾನವಾದ ಪ್ರತಿಪದದಲ್ಲಿನ ಧ್ವನಿ ಘಟಕಗಳ ನಡುವೆ ನಿರ್ದಿಷ್ಟಪಡಿಸಿದ ಧ್ವನಿಯನ್ನು ಸೇರಿಸಿ ಮಾತಾಡುವುದರಲ್ಲಿ ಯಾವುದಾದರೂ ಒಂದು ಧ್ವನಿಯನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಇದು ‘ಕ’ ಅಥವಾ ‘ಪ’ ಆಗಿರಬಹುದು. ಕನಾಕನು ಕಊಕರಿಕಗೆ ಕಹೋಕಗ್ತೀಕನಿ ಎನ್ನುವುದರಲ್ಲಿನ ಎಲ್ಲ ‘ಕ’ ಗಳನ್ನು ತೆಗೆದರೆ ‘ನಾನು ಊರಿಗೆ ಹೋಗ್ತೀನಿ’ ಎಂಬ ರೂಪ ಸಿಗುತ್ತದೆ. ಇನ್ನೊಂದು ರೀತಿಯಲ್ಲಿ ಪ್ರತಿ ಪದಕ್ಕೆ ಮುಂಚೆ ಪದದ ಆದಿ ಸ್ವರದೊಡನೆ/ವ್ಯಂಜನದೊಡನೆ ‘ಪ’ ಕಾರವನ್ನು ಸೇರಿಸುವುದು. ಉದಾ. ಇಪೀಗ ನಪ್‌ನಾನು ಮಪ್ಪನೆಗೆ ಹೋಪ್‌ಹೋಗ್ತೀನಿ, ನಿಪ್ಪೀನು ಬಪ್ಪರಲ್ವಾ? ಇಲ್ಲೆಲ್ಲ, ಪದದ ಮೊದಲ ವ್ಯಂಜನ ಹೊಂದಿರುವ ಸ್ವರವನ್ನೇ ಬಳಸುವುದು ಕಂಡುಬರುತ್ತದೆ. (ದೀರ್ಘ ಸ್ವರವಿದ್ದರೆ, ಹ್ರಸ್ವವಾಗಿಯೇ ಬಳಸಲಾಗುವುದು.) ಈ ರೀತಿಯ ಭಾಷಾ ಬಳಕೆ ಮಕ್ಕಳು ತಮ್ಮ ಸಮವಯಸ್ಕರೊಂದಿಗೆ ಬಳಸುತ್ತಾರೆ. ಇಂತಹ ಭಾಷಾ ಆಟಗಳಲ್ಲಿ ಸುಲಭವಾಗಿ ಆಡಬಹುದಾದ ಮಾತನ್ನು ಜಟಿಲಗೊಳಿಸುವ ಕೆಲಸ ನಡೆಯಲು ಕಾರಣ ಕೆಲವು ವೇಳೆ ಎದುರಿಗೆ ನಿಂತವರಿಗೆ ತಿಳಿಯಬಾರದೆಂಬುದು. ಇಂತಹ ಭಾಷಾ ಬಳಕೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಮಾತನಾಡುವವರಿಗಿಂತ ಚಿಕ್ಕವರಾಗಿರುವವರ ವಯಸ್ಸಿನವರ ಎದುರು ನಡೆಯುವುದು ಹೆಚ್ಚು.

ಭಾಷಾ ಬಳಕೆಯಲ್ಲಿ ಈ ರೀತಿಯ ಬದಲಾವಣೆಗಳನ್ನು ಮಾಡಿಕೊಂಡರೂ ಅವರ ಮಾತಿನ ವೇಗ ಕಡಿಮೆಯೇನೂ ಆಗುವುದಿಲ್ಲ. ಆಟಕ್ಕಾಗಿ ರೂಪಿಸಿ ಕೊಂಡಂತಹ ಇಂತಹ ನಿಯಮಗಳ ಮೇಲಿನ ಹಿಡಿತ ಗಮನಾರ್ಹ ವಾದುದು. ಇಂತಹ ಒಂದು ಪ್ರಯೋಗ ಹತ್ತರಿಂದ ಹದಿನೆಂಟನೇ ವಯಸ್ಸಿನ ಅವಧಿಯಲ್ಲಿ ಹೆಚ್ಚು ಕಂಡುಬಂದರೆ, ಆನಂತರ ಇದರ ಬಳಕೆ ಇರುವುದಿಲ್ಲ.

ಭಾಷಾ ಆಟಗಳು ಕೇವಲ ಸಂಭಾಷಣೆಯ ರೂಪಕ್ಕೆ ಮಾತ್ರ ಸೀಮಿತ ವಾಗದೆ ಮೋಜಿಗಾಗಿ, ಬುದ್ದಿಶಕ್ತಿಯ ಪರೀಕ್ಷೆಗಾಗಿಯೂ ನಡೆಯುವುದುಂಟು. ನಾಲಿಗೆ ತೊಡಕುಗಳು ಇಂತಹವುಗಳಲ್ಲಿ ಒಂದು. ಇಂಗ್ಲಿಶ್‌ನಲ್ಲಿ ಇವುಗಳನ್ನು ಟಂಗ್ ಟ್ವಿಸ್ಟರ್ಸ್‌ ಎನ್ನುತ್ತಾರೆ. ಶಿ ಸೆಲ್ಸ್ ಶೆಲ್ಸ್ ಅಟ್ ದಿ ಸೀ ಶೋರ್, ಬಿಟ್ಟಿ ಬಾಟ್ಸ್‌ಮ್ ಬಾಟ್ ಸಮ್ ಬಟರ್ ಬಟ್ ಇಟ್ ವಾಸ್ ಬಿಟರ್ ಶಿ ಬಾಟ್ ಸಮ್ ಮೋರ್ ಬೆಟರ್ ಬಟರ್ ಟುಮೇಕ್ ದಿ ಬಿಟರ್ ಬಟರ್ ಬೆಟರ್. ಇಲ್ಲೆಲ್ಲಾ ಟ ಕಾರದ ಆವರ್ತನೆ ಮತ್ತು ಸ್ವರದ ತೀಕ್ಷ್ಣ ಬದಲಾವಣೆಗಳು ಉಚ್ಚಾರಣೆಯನ್ನು ಕಠಿಣ ಗೊಳಿಸುತ್ತದೆ. ಏಕೆಂದರೆ ಅಕ್ಷರಗಳ ಉಚ್ಚಾರಣೆ ಧ್ವನ್ಯಂಗಗಳು ಮತ್ತು ಉಚ್ಚಾರಣಾ ಸ್ಥಾನಗಳನ್ನು ಅವಲಂಬಿಸಿರುತ್ತದೆ. ಒಂದೇ ಬಗೆಯ ಧ್ವನಿ ಪುನರಾವರ್ತನೆಯಾದರೆ ಉತ್ಪಾದನೆ ಮಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಉದಾ. ಅರಳಿ ಮರದ ಬುಡತಳಿರೊಡೆದೊಂದೆರ ಡೆಲೆಯಾಯ್ತು ಎನ್ನುವಾಗ ರ ಕಾರ ಇತರ ಧ್ವನಿಗಳ ನಡುವೆ ಪುನರಾವರ್ತನೆಯಾಗಿ ವೇಗವಾಗಿ ಉಚ್ಚರಿಸಲು ತೊಡಕಾಗುವುದು. ಇದನ್ನು ಸಮವಯಸ್ಕರು ಪರಸ್ಪರ ಆಟವಾಗಿ ಪರಿಗಣಿಸಿ ಆಡುತ್ತಾರೆ. ಅಂತೆಯೇ ‘ಕಪ್ಪು ಕುಂಕುಮ ಕೆಂಪು ಕುಂಕುಮ’, ‘ಕಾಗೆ ಪುಕ್ಕ ಗೂಬೆ ಪುಕ್ಕ’ ಇತ್ಯಾದಿಗಳನ್ನು ವೇಗವಾಗಿ ಉಚ್ಚರಿಸುವಾಗಲೂ ಉಚ್ಚಾರಣೆಯಲ್ಲಿ ತೊಡಕುಂಟಾಗುವುದು. ಅಭ್ಯಾಸದ ನಂತರ ಉಚ್ಚಾರಣೆ ಸುಲಭವಾಗುತ್ತದೆ. ಮೊದಲು ಕಲಿತವರು ಇದನ್ನು ಇತರರಿಗೆ ಹೇಳಿ ಉಚ್ಚರಿಸುವಂತೆ ಕೇಳುತ್ತಾರೆ. ಮೊದಲನೇ ಸಾರಿ ಉಚ್ಚರಿಸಲಾಗದೆ ತಡಬಡಾಯಿಸು ವಂತಾಗುತ್ತದೆ.

ಇತ್ತೀಚೆಗೆ ಭಾಷಾ ಆಟಗಳು ಪಠ್ಯಕ್ರಮದ ಭಾಗವಾಗಿಯೂ ಬರುತ್ತಿವೆ. ಆದರೆ ಇವು ಮೇಲೆ ವಿವರಿಸಿದಂತಹ ರೀತಿಗಳಿಗಿಂತ ಭಿನ್ನವಾಗಿವೆ. ಅವುಗಳಲ್ಲಿ ಚೌಕದಲ್ಲಿ ತುಂಬಿರುವ ಅಕ್ಷರಗಳಲ್ಲಿ ನಾಮಪದ, ಊರು, ಹೆಸರು, ಪ್ರಾಣಿ ಪಕ್ಷಿಗಳ ಹೆಸರು ಕ್ರಿಯಾಪದ ಇತ್ಯಾದಿಗಳನ್ನು ಗುರ್ತಿಸುವಂತೆ ಕೇಳುವುದು, ಅಕ್ಷರಗಳನ್ನು ಬಳಸಿ ಪದರಚನೆ ಮಾಡುವುದು ಇತ್ಯಾದಿಗಳು ಸೇರುತ್ತವೆ.