ಲಕ್ಷಣಗಳು

1.   ಯಾವುದೇ ಅಗತ್ಯವಾದ, ಅಸಂಬದ್ಧವಾದ, ಅರ್ಥಹೀನವಾದ, ಮನಸ್ಸಿಗೆ ಮುಜುಗರ, ಕಿರಿಕಿರಿಯುಂಟು ಮಾಡುವ ವಿಚಾರ, ಚಿತ್ರ, ದ್ವಂದ್ವ, ಅನುಮಾನ, ಪದೇಪದೇ ಮನಸ್ಸಿನೊಳಕ್ಕೆ ಬರುತ್ತಿರುತ್ತದೆ.

2.   ನಿರ್ದಿಷ್ಟ ಕೆಲವು ವರ್ತನೆಗಳನ್ನು ಮಾಡಲೇಬೇಕೆಂಬ ಒತ್ತಾಸೆ ಬರುತ್ತದೆ. ಆ ಚಟುವಟಿಕೆಯನ್ನು ಮಾಡುವುದು ಬೇಡ ಎಂದು ವ್ಯಕ್ತಿ, ಅವನ್ನು ನಿಯಂತ್ರಿಸಲು      ಪ್ರಯತ್ನಿಸಿ ವಿಫಲನಾಗುತ್ತಾನೆ. ಇದರಿಂದ ಮನಸ್ಸಿಗೆ ವಿಪರೀತ ಆತಂಕ, ಬೇಸರ, ಖಿನ್ನತೆಯುಂಟಾಗುತ್ತದೆ.

3.   ಈ ರೀತಿ ಪುನರಾವರ್ತನೆಗೊಳ್ಳುವ ವಿಚಾರ, ದ್ವಂದ್ವ, ಅನುಮಾನ, ವರ್ತನೆಗಳಿಂದ ನಿತ್ಯ ಕೆಲಸ-ಕರ್ತವ್ಯಗಳಿಗೆ ಅಡ್ಡಿಯಾಗಿ, ವ್ಯಕ್ತಿ ಮತ್ತು ಆತನ       ಮನೆಯವರು ಸಾಕಷ್ಟು ತೊಂದರೆಗಳಿಗೆ ಒಳಗಾಗುತ್ತಾರೆ.

ಕೆಲವು ಪ್ರಕರಣಗಳ ಉದಾಹರಣೆಗಳು

 • “ಕೈಗಳು ಕೊಳೆಯಾಗಿವೆ. ಏನೋ ಹೊಲಸು/ಕೊಳೆ ಕೈಗಳಿಗೆ ಅಂಟಿಕೊಂಡಿದೆ ಎಂಬ ವಿಚಾರ ಪದೇ ಪದೇ ಬರುತ್ತದೆ. ಹೀಗಾಗಿ ಪದೇ ಪದೇ ಕೈತೊಳೆಯುತ್ತೇನೆ. ಸಿಕ್ಕಾಪಟ್ಟೆ ನೀರು, ಸೋಪು ಖರ್ಚು ಮಾಡುತ್ತೇನೆ. ಹೀಗೆ ಮಾಡುವ ಅಗತ್ಯವಿಲ್ಲ ಎಂಬುದು ಗೊತ್ತಿದೆಯಾದರೂ, ನಾನು ಕೈತೊಳೆಯಲೇಬೇಕು.”
 • “ಪ್ರತಿಯೊಂದು ವಸ್ತು, ಆಯಾ ಜಾಗದಲ್ಲೇ ಇರಬೇಕು. ಪ್ರತಿಯೊಂದು ವ್ಯವಸ್ಥಿತವಾಗಿರಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದಲ್ಲಿ ನನಗೆ ಸಹಿಸಲಾಗುವುದಿಲ್ಲ. ಎಲ್ಲ ವಸ್ತುಗಳನ್ನು ಸರಿಯಾಗಿ ಜೋಡಿಸಿಡಲು, ನನಗೆ ಹಲವಾರು ಗಂಟೆಗಳು ಬೇಕಾಗುತ್ತವೆ. ವ್ಯವಸ್ಥೆಯನ್ನು ಕೆಡಿಸುವ ಮನೆಯವರ ಮೇಲೆ, ಸಹೋದ್ಯೋಗಿಗಳ ಮೇಲೆ ವಿಪರೀತ ಸಿಟ್ಟು ಬರುತ್ತದೆ ಕೂಗಾಡುತ್ತೇನೆ”.
 • “ದೇವರ ಪೂಜೆ ಮಾಡುವಾಗ, ದೇವಸ್ಥಾನದಲ್ಲಿ ದೇವರಮೂರ್ತಿಯನ್ನು ನೋಡಿದಾಗ, (ಕುರಾನ್/ಬೈಬಲ್ ಓದುವಾಗ, ಚರ್ಚ್‌‌ನಲ್ಲಿ ಪ್ರಾರ್ಥನೆ ಮಾಡುವಾಗ) ಕೆಟ್ಟ/ಹೊಲಸು ಯೋಜನೆಗಳು, ಲೈಂಗಿಕ ವಿಚಾರಗಳು ಮನಸ್ಸಿನೊಳಕ್ಕೆ ಬಂದು, ನನ್ನ ಬಗ್ಗೆ ನನಗೇ ಹೇಸಿಗೆಯುಂಟಾಗುತ್ತದೆ. ದೇವರಿಗೆ ಖಂಡಿತಾ ಕೋಪ ಬಂದು, ನನ್ನನ್ನು ಶಿಕ್ಷಿಸದೆ ಬಿಡುವುದಿಲ್ಲ ಎನಿಸಿ ಹೆದರಿಕೆಯಾಗುತ್ತದೆ. ಈ ನನ್ನ ಅನೀತಿಯುತ ಆಲೋಚನೆಗಳ ಸುಳಿವು ಇತರರಿಗೆ ಸಿಕ್ಕಿದರೆ ಏನು ಗತಿ ಎಂದು ಗಾಬರಿಯಾಗುತ್ತದೆ”.
 • “ಯಾವುದೇ ಅಪಾಯಕಾರಿ ವಸ್ತುವನ್ನು ನೋಡಿದಾಗ ಉದಾಹರಣೆಗೆ ಚಾಕು, ಕತ್ತರಿ, ಸೂಜಿ, ಹಾರೆ, ಗಢಾರಿ, ಗುದ್ದಲಿ, ಸುತ್ತಿಗೆ, ಸ್ಕ್ರೂಡ್ರೈವರ್ ಅನ್ನು ಕಂಡಾಗ, ಅದರಿಂದ ಇತರರನ್ನು ಗಾಯಗೊಳಿಸಿಬೇಕು, ನನಗೇ ಚುಚ್ಚಿ/ಹೊಡೆದು ಕೊಳ್ಳಬೇಕೆನಿಸುತ್ತದೆ. ಓಡುವ ಬಸ್, ರೈಲು, ಕಾರ್‌ನಿಂದ ಹೊರಕ್ಕೆ ಜಿಗಿಯಬೇಕು       ಅಥವಾ ಇತರರನ್ನು ನೂಕಬೇಕು, ಮಹಡಿಯ ಮೇಲೆ ಹೋದಾಗ ಅಲ್ಲಿಂದ ಕೆಳಕ್ಕೆ ಧುಮುಕಬೇಕು, ನೀರು/ಬೆಂಕಿಯ ಬಳಿ ಇದ್ದಾಗ ಅದರೊಳಕ್ಕೆ ಹಾರಬೇಕು ಅಥವಾ ಇನ್ಯಾರನ್ನಾದರೂ ನೂಕಬೇಕೆನಿಸಿ ಭಯವಾಗುತ್ತದೆ. ಮನಸ್ಸಿಗೆ ಬಹಳ ಹಿಂಸೆಯಾಗುತ್ತದೆ.”
 • “ನನಗೆ ವಿಪರೀತ ಅನುಮಾನ, ಚಿಲಕ ಹಾಕಿದರೂ, ಸರಿಯಾಗಿ ಹಾಕಿದೆನೋ ಇಲ್ಲವೋ ಹತ್ತು ಸಲ ಚೆಕ್ ಮಾಡುತ್ತೇನೆ. ಮನೆಯಿಂದ ಹೊರಬಂದ ಮೇಲೆ ಅಡುಗೆ ಮನೆಯಲ್ಲಿ ಗ್ಯಾಸ್ ಆಫ್ ಮಾಡಿದೆನೋ ಇಲ್ಲವೋ, ಫ್ರಿಜ್ ಬಾಗಿಲು ತೆಗೆದೇ ಇದೇ ಏನೋ, ಗೀಜರ್ ಆನ್ ಆಗೇ ಇದೆಯೆಂದು ಕಾಣುತ್ತೆ, ಅನ್ನ ಮತ್ತು ಸಾರಿನ ಪಾತ್ರೆಗಳನ್ನು ಮುಚ್ಚಿಲ್ಲವೇನೋ, ಹೀಗೆ ಅನುಮಾನಗಳು ಕಾಡುತ್ತವೆ. ಪುನಃ ವಾಪಸ್ ಬಂದು ಚೆಕ್ ಮಾಡಿ, ಎಲ್ಲ ಸರಿಯಾಗಿದೆಯೆಂದು ಖಾತ್ರಿ            ಮಾಡಿಕೊಂಡರೂ ಮತ್ತೆ ಅನುಮಾನಗಳು ಮರುಕಳಿಸುತ್ತವೆ”.
 • “ದಾರಿಯಲ್ಲಿ ಹೋಗುವಾಗ, ಪ್ರತಿಯೊಂದು ಲೈಟ್‌ ಕಂಬ, ಟೆಲಿಫೋನ್ ಕಂಬವನ್ನು ಮುಟ್ಟಬೇಕು, ಮುಟ್ಟದಿದ್ದರೆ, ನನ್ನ ತಂದೆ ತಾಯಿಗೆ ಏನೋ ಅಪಾಯವಾಗುತ್ತದೆ ಎನಿಸಿ, ಒಂದು ಫರ್ಲಾಂಗ್ ದೂರ ಹೋಗಿದ್ದರೂ ಮತ್ತೆ ವಾಪಸ್ ಬಂದು ಮುಟ್ಟಲು ಮರೆತುಹೋಗಿದ್ದ ಕಂಬವನ್ನು ಮುಟ್ಟುತ್ತೇನೆ. ದೇವರಿಗೆ ಕೈಮುಗಿಯುವಾಗ, ದೇವಸ್ಥಾನದ ಪ್ರಾಕಾರಗಳಲ್ಲಿ ಸುತ್ತು ಬರುವಾಗ ಏಳೇಳು ಸಲ ಮಾಡಬೇಕು, ಕಡಿಮೆಯಾದರೆ ಏನೋ ಕೆಟ್ಟದಾಗುತ್ತದೆ ಎಂಬ ಭಯ ಕಾಡತೊಡಗುತ್ತದೆ. ಪ್ರತಿಯೊಂದು ಸಣ್ಣ ವಿಷಯ/ಸಮಸ್ಯೆಗೂ ಹರಕೆ ಹೊರುತ್ತೇವೆ. ಹರಕೆ ತೀರಿಸುವುದು ಒಂದು ದಿನ ತಡವಾದರೂ ದಿಗಿಲಾಗುತ್ತದೆ. ಈಗ ಹೆಚ್ಚೂ ಕಡಿಮೆ ವಾರಕ್ಕೆ ಒಂದು ಸಲ, ನಮ್ಮ ಮನೆದೇವರ ಗುಡಿಗೆ ಹೋಗಬೇಕು, ಹೋಗದಿದ್ದರೆ, ದೇವರಿಗೆ ಕೋಪ ಬಂದು,ನನಗೆ ಮತ್ತು ನನ್ನ ಮನೆಯವರಿಗೆ ಕೆಟ್ಟ ಕಾಯಿಲೆಯೋ, ಆಕ್ಸ್ಯಿಡೆಂಟೋ ಆಗುವ ಹಾಗೆ ಮಾಡುತ್ತಾನೆ ಇನ್ನೇನು ಗತಿ ಎನಿಸುತ್ತದೆ”.
 • “ನನಗೆ ಮನೆಯಿಂದ ಹೊರಡಬೇಕಾದರೆ, ಯಾವುದೇ ಕೆಲಸವನ್ನು ಶುರ ಮಾಡಬೇಕಾದರೆ, ಕೊನೆಗೆ ಟಾಯ್ಲೆಟ್ಟಿಗೆ ಹೋಗಬೇಕಾದರೂ ದ್ವಂದ್ವ ಶುರುವಾಗುತ್ತದೆ. ಈಗಲೇ ಹೋಗಬೇಕೆ, ಒಂದೆರಡು ನಿಮಿಷ ಬಿಟ್ಟು ಹೋಗೋಣವೇ ಬಲಗಾಲನ್ನು ಮುಂದಿಟ್ಟು ನಡೆಯಬೇಕೇ, ಎಡಗಾಲನ್ನು ಮೊದಲು ಇಟ್ಟು ನಡೆಯಬೇಕೇ. ನಾನು ಶುರು ಮಾಡುವ ಕೆಲಸ ಮುಗಿಯದಿದ್ದರೆ ಏನು ಮಾಡುವುದು, ಏನಾದರೂ ತಪ್ಪಾಗುವುದು, ನನ್ನ ಗಂಟೆಗಳು ಉರುಳಿದರೂ ಏನೂ ಮಾಡದೇ ನಿಂತಲ್ಲೇ ನಿಂತಿರುತ್ತೇನೆ. ಹೀಗಾಗಿ ಎಷ್ಟೋ ಅಪಾಯಿಂಟ್‌ಮೆಂಟ್‌ಗಳನ್ನು ಮಿಸ್ ಮಾಡಿಕೊಂಡಿದ್ದೇನೆ, ರೈಲು, ಬಸ್‌ ತಪ್ಪಿಹೋಗಿದೆ. ಬಟ್ಟೆಯಲ್ಲೇ ಉಚ್ಚೇ-ಕಕ್ಕಸ್ಸು ಮಾಡಿಕೊಂಡಿದ್ದೂ ಉಂಟು”.
 • “ಯಾರನ್ನೇ ಎದುರಾಗಲೀ, ಯಾರ ಜೊತೆಯಲ್ಲೇ ಮಾತನಾಡಲು ಪ್ರಾರಂಭ ಮಾಡಲಿ ಹೆಂಗಸರಾದರೆ, ಅವರ ಎದೆ ಭಾಗವನ್ನೇ ನೋಡಬೇಕೆನಿಸುತ್ತದೆ. ಗಂಡಸಾದರೆ ಅವರ ಜನನಾಂಗಗಳನ್ನು ನೋಡಬೇಕು, ಮುಟ್ಟಬೇಕು ಎನಿಸುತ್ತದೆ. ತಲೆ ತಗ್ಗಿಸಿ ನಡೆಯುತ್ತೇನೆ. ಪರಿಚಿತರ ಜೊತೆಯಾಗಲೀ, ಅಪರಿಚಿತರ ಜೊತೆಯಲ್ಲಾಗಲೀ ಮಾತನಾಡುವಾಗ, ವ್ಯವಹರಿಸುವಾಗ ನೆಲ ನೋಡುತ್ತಿರುತ್ತೇನೆ. ಅಪ್ಪಟ ಸಂಕೋಚದ ಸ್ವಭಾವದವನು ಎಂದು ಎಲ್ಲರೂ ನಗಾಡುತ್ತಾರೆ.    ಆದರೆ ನನ್ನ ಈ ಸಮಸ್ಯೆ ಅವರಿಗೆ ಗೊತ್ತಿಲ್ಲ”.
 • “ನನಗೆ ಬರೀ ನೆಗೆಟಿವ್ ಆಲೋಚನೆಗಳೇ ಸರ್, ಬಸ್‌/ರೈಲಿನಲ್ಲಿ ಕುಳಿತಾಗ, ಈ ವಾಹನ ಆಕ್ಸ್ಯಿಡೆಂಟ್ ಆಗಬಹುದು, ನನ್ನ ಮತ್ತು ಎಲ್ಲರ ಕೈಕಾಲು ಮುರಿಯಬಹುದು ಎನಿಸುತ್ತದೆ. ಮಳೆ ಬಂದಾಗ, ದಾರಿಯ ಬದಿಯ ಮರ ಉರುಳಿ ನನ್ನ ಮೇಲೆ ಬೀಳುತ್ತದೆ. ಚೆಕ್ ಅನ್ನು ಬರೆಯುವಾಗ, ಇದು ಬೌನ್ಸ್ ಆಗಿ ನನಗೆ ಜೈಲುವಾಸವಾಗುತ್ತದೆ ಎನಿಸುತ್ತದೆ. ಸಾಮಾನು ತರುವಾಗು, ಬ್ಯಾಗ್‌ನ ಹಿಡಿ ಕಿತ್ತುಹೋಗಿ ಅಥವಾ ಬ್ಯಾಗ್ ಹರಿದುಹೋಗಿ ಸಾಮಾನೆಲ್ಲ ರಸ್ತೆಯಲ್ಲಿ ಬೀಳುತ್ತದೆ ಎನಿಸುತ್ತದೆ, ಭಿಕ್ಷುಕರನ್ನು ಕಂಡಾಗ, ನಾನು ಒಂದು ದಿನ ಅವರಂತೆಯೇ ಭಿಕ್ಷೆ ಬೇಡುವ ಚಿತ್ರ ಕಣ್ಣ ಮುಂದೆ ಬರುತ್ತದೆ. ಅಂಗವೈಕಲ್ಯದವರನ್ನು ಕಂಡರೆ ನಾನೂ ಅವರಂತೆ ಆಗಿಬಿಡುತ್ತೇನೆ ಎನಿಸುತ್ತದೆ. ಆಕಾಶದಲ್ಲಿ ವಿಮಾನ ಕಂಡಾಗ, ಅದು ತಕ್ಷಣ ಕೆಳಗೆ ಬೀಳುತ್ತದೆ. ಹಲವು ಅಂತಸ್ತಿನ ಮನೆ/ಕಟ್ಟಡ ಕಂಡಾಗ, ಅಮೆರಿಕಾದ ಟ್ವಿನ್ ಟವರ್ಸ್ ಬಿದ್ದಂತೆ ಇದೂ ಕೂಡ ಬೀಳುತ್ತದೆ ಎಂದು ಅನಿಸುತ್ತದೆ. ಇದರಿಂದ ಬಹಳ ಬೇಸರ, ಭಯವಾಗುತ್ತದೆ. ಈ ಅಸಂಬಂದ್ಧ ಆಲೋಚನೆಗಳು ಏಕೆ ಬರಬೇಕು. ನನಗೆ ಹುಚ್ಚು ಹಿಡಿಯಬಹುದು ಎನಿಸುತ್ತದೆ”.
 • “ನಾಳೆ ಸೂರ್ಯ ಹುಟ್ಟದಿದ್ದರೆ ಏನಾಗಬಹುದು. ಸಾಗರಗಳೆಲ್ಲ ಬತ್ತಿ ಹೋದರೆ ಏನಾಗುತ್ತದೆ. ಸಾಗರದ ನೀರೆಲ್ಲ ನೆಲದ ಮೇಲೆ ಹರಿದರೆ ಏನು ಗತಿ, ಹವೆ ಇದ್ದಕ್ಕಿದ್ದಂತೆ ಬದಲಾಗಿ ತಾಪಮಾನ 60 ಅಥವಾ 1000c ಆದರೆ ಏನು ಮಾಡುವುದು, ಎಲ್ಲಾ ಆಸ್ಪತ್ರೆಗಳು ಬಂದ್ ಆಗಿಬಿಟ್ಟರೆ ರೋಗಿಗಳ ಪಾಡೇನು, ಜೈಲಿನಲ್ಲಿರುವ ಎಲ್ಲಾ ಖೈದಿಗಳು ತಪ್ಪಿಸಿಕೊಂಡರೆ ಏನಾಗಬಹುದು. ಹಿಟ್ಲರ್, ಚೇಂಗೇಸ್ ಖಾನ್, ಮಹಮದ್ ಘಸ್ನಿ, ವೀರಪ್ಪನ್ ಮತ್ತೆ ಹು‌ಟ್ಟಿ ಬಂದು ಬಿಟ್ಟರೆ, ಪರಿಸರದಲ್ಲಿ ಆಕ್ಸಿಜನ್ ಇಲ್ಲವಾಗಿ ಬರೀ ಕಾರ್ಬನ್ ಮೊನಾಕ್ಸೈಡ್ ತುಂಬಿಕೊಂಡರೆ ಎಲ್ಲಾ ಜೀವರಾಶಿ ಸಾಯುವುದಿಲ್ಲವೇ, ರಿಸರ್ವ್‌ ಬ್ಯಾಂಕ್ ಇರುವ ಭೂಮಿ ಬಾಯಿ ತೆರೆದು ಎಲ್ಲ ಹಣ/ಚಿನ್ನ ಭೂಮಿಯ ಒಡಲೊಳಕ್ಕೆ ಹೋದರೆ ಏನಾದೀತು-ಹೀಗೆ ಅರ್ಥವಿಲ್ಲದ, ಕೇಳಿದವರ ನಗುವಂತಹ ವಿಚಾರ/ಆಲೋಚನೆಗಳು ಪದೇ ಪದೇ ಮನಸ್ಸಿನೊಳಕ್ಕೆ ಬರುತ್ತಿರುತ್ತವೆ. ಹೇಗೆ ಸಾರ್ ಇದನ್ನು ಹತೋಟಿಯಲ್ಲಿಡುವುದು.”
 • “ನಾನು ಪಿಯು ವಿದ್ಯಾರ್ಥಿ. ಹೋಮ್‌ವರ್ಕ್‌ ಮಾಡುವಾಗ, ನೋಟ್ಸ್ ಬರೆಯುವಾಗ, ಬರೆದಿದ್ದರೆ ಮೇಲೆ ಗೀಟು ಹಾಕಲೇಬೇಕು. ಲೆಕ್ಕ ಮಾಡುತ್ತೇನೆ, ಸರಿಯಾಗೇ ಮಾಡುತ್ತೇನೆ. ಆದರೆ ಅದನ್ನು ಇಂಟು ಮಾರ್ಕ್ ಹಾಕಿ, ಹೊಡೆದು ಹಾಕುತ್ತೇನೆ. ರಂಗೋಲಿ ಬಿಟ್ಟು, ಮರುಕ್ಷಣವೇ ಅದನ್ನು ಅಳಿಸುತ್ತೇನೆ. ಇಲ್ಲವೇ ನೀರು ಸುರಿಯುತ್ತೇನೆ. ಮಾಡಬಾರದು ಎಂದುಕೊಂಡರೂ ಕಂಟ್ರೋಲ್ ಮಾಡಲಾಗದೇ ಟೀಚರ್ಸ್, ಅಪ್ಪ ಅಮ್ಮ ನನ್ನನ್ನು ಬೈಯುತ್ತಾರೆ, ಹೊಡೆಯುತ್ತಾರೆ.”

ಯಾರಿಗೆ ಬರುತ್ತದೆ?

ಇದು ಸಾಮಾನ್ಯವಾಗಿ 20 ವರ್ಷ ವಯಸ್ಸಿನ ಸುಮಾರಿಗೆ ಕಾಣಿಸಿಕೊಳ್ಳುತ್ತದೆಯಾದರೂ ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು. ಹದಿವಯಸ್ಸಿನಲ್ಲಿ ಹುಡುಗರಿಗಿಂತ, ಹುಡುಗಿಯರು ಹೆಚ್ಚಾಗಿ ಈ ಕಾಯಿಲೆಗೆ ಒಳಗಾಗುತ್ತಾರೆ. ಆದರೆ ಒಟ್ಟು ಚಿತ್ರವನ್ನು ಪರಿಗಣಿಸಿದರೆ ಇದು ಗಂಡಸರು-ಹೆಂಗಸರಲ್ಲಿ ಸಾಮಾನವಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಶ್ರೀಮಂತ-ಬಡವರು, ಪಟ್ಟಣಿಗರು-ಗ್ರಾಮೀಣರು ಎಂಬ ಭೇದ-ಭಾವ ಇಲ್ಲ. ಪ್ರತಿ ಒಂದು ಸಾವಿರ ಜನಸಂಖ್ಯೆಯಲ್ಲಿ ಒಬ್ಬರಿಗೆ ಈ ಕಾಯಿಲೆ ಇರುವುದು ಕಂಡುಬರುತ್ತದೆ.

ಕಾಯಿಲೆ ಏಕೆ ಬರುತ್ತದೆ?

1.   ಮಿದುಳಿನಲ್ಲಿ “ಸೆರೊಟೋನಿಸ್” ಎಂಬ ನರವಾಹಕ ವಸ್ತು ಕಡಿಮೆಯಾಗುವುದು.

2.   ಅನುವಂಶೀಯತೆ ಸ್ವಲ್ಪ ಮಟ್ಟಿಗೆ ಕೆಲಸ ಮಾಡಬಹುದು.

3.   ಸಿಗ್ಮಂಡ್ ಫ್ರಾಯ್ಡನ ಮನೋವಿಶ್ಲೇಷಣಾ ಸಿದ್ಧಾಂತದ ಪ್ರಕಾರ ಸುಪ್ತ ಮನಸ್ಸಿನೊಳಕ್ಕೆ ತಳ್ಳಲ್ಪಟ್ಟ ಅನೇಕ ಅಹಿತಕಾರಿ ದ್ವಂದ್ವಗಳು.

4.   ರಕ್ತದ ಪ್ಲಾಸ್ಮಾದಲ್ಲಿ “ನಾರ್ ಅಡ್ರಿನಲಿನ್‌” ಪ್ರಮಾಣ ಹೆಚ್ಚಿರುವುದು.

5.   ಮಿದುಳಿನ ಪ್ರೀ-ಫ್ರಾಂಟಲ್ (ಮುಂಭಾಗದ ಮಿದುಳು)ನಲ್ಲಿ ಕೆಲವು ಅಸ್ಪಷ್ಟ ವ್ಯತ್ಯಾಸಗಳು.

ಚಿಕಿತ್ಸೆ ಏನು?

i) ಔಷಧಿಗಳು: ಮಿದುಳಿನಲ್ಲಿ ಸೆರೋಟೊನಿನ್ ಪ್ರಮಾಣವನ್ನು ಹೆಚ್ಚಿಸುವ ಔಷಧಿಗಳು ಪರಿಣಾಮಕಾರಿ.

1 ಫ್ಲೂಯಾಕ್ಸಿಟಿನ್, 2  ಸರ್ಟ್ರಾಲಿನ್, 3 ಎಸಿಟಲೋಪ್ರಾಂ, 4 ಕ್ಲೋಮಿಪ್ರಮಿನ್, 5 ಫ್ಲೂವಾಕ್ಸಮಿನ್.

ಇತರ ಔಷಧಿಗಳು : ಕ್ಲೋನಜೆಪಾಂ, ರಿಸ್ಟಿರಿಡಾನ್, ವಾಲ್ಟ್ರೋಯೇಟ್, ಲಿಥಿಯಂ, ವೆನ್ಲಾಪ್ಲ್ಯಾಕ್ಸಿನ್.

ಈ ಔಷಧಿಗಳನ್ನು ಹಲವು ವರ್ಷಗಳ ಕಾಲ, ಕ್ರಮಬದ್ಧವಾಗಿ ಸೇವಿಸಬೇಕು. ಔಷಧಿಯ ಪ್ರಮಾಣವನ್ನು ಆಯಾ ರೋಗಿಯ ಪ್ರತಿಕ್ರಿಯೆಗಳ ಆಧಾರದ ಮೇಲೆ, ವೈದ್ಯರು ನಿರ್ಧರಿಸುತ್ತಾರೆ.

ii) ನಡವಳಿಕೆ ಚಿಕಿತ್ಸೆ

i) Exposure and Response Prevention :  ಇಲ್ಲಿ ಕೊಳಕು, ಅವ್ಯವಸ್ಥೆಗಳಿಗೆ ರೋಗಿಯನ್ನು ಒಡ್ಡಿ, ಆತ/ಆಕೆ ಪ್ರತಿಕ್ರಿಯಿಸುವುದನ್ನು ನಿರ್ಬಂಧಿಸುವುದು. ಉದಾಹರಣೆಗೆ: ಕೈಗಳಿಗೆ ಮಣ್ಣು, ಕೊಳೆಯನ್ನು ಮೆತ್ತಿ, ವ್ಯಕ್ತಿ ಕೈತೊಳೆಯದಂತೆ ನಿರ್ಬಂಧಿಸುವುದು. ಚಾಕು, ಚೂರಿ, ಹರಿತವಾದ ಆಯುಧಗಳನ್ನು ರೋಗಿಯ ಕೈಯಲ್ಲೇ ಇಡುವುದು. ಆಗ ರೋಗಿಗೆ ವಿಪರೀತ ಆತಂಕ ಭಯವುಂಟಾಗುತ್ತದೆ. ಭಯ ಶಿಖರ ಪ್ರಮಾಣವನ್ನು ಮುಟ್ಟಿ ಆಮೇಲೆ ತಗ್ಗಲಾರಂಭಿಸುತ್ತದೆ. ಅರ್ಥಹೀನ, ಅಸಂಬದ್ಧ ವಿಷಯ/ಹೇಳಿಕೆಗಳನ್ನು ರೆಕಾರ್ಡ್‌ ಮಾಡಿ ಸುಮಾರು ಹೊತ್ತು ಅದನ್ನು ಕೇಳುವುದು, ನಿಲ್ಲಿಸಲು ಪ್ರಯತ್ನ ಮಾಡಬೇಡ ಎನ್ನುವುದು.

ii) Thought Stopping: ಅರ್ಥಹೀನ ವಿಚಾರ/ಆಲೋಚನೆಗಳು ಮನಸ್ಸಿನೊಳಕ್ಕೆ ಬರುತ್ತಿರುವಾಗ, ಜೋರಾಗಿ, ಮೇಜು ಕುಟ್ಟಿ ಅಥವಾ ಚಪ್ಪಾಳೆ ತಟ್ಟಿ, “ನಿಲ್ಲಿಸು” ಎಂದು ಕೂಗುವುದು ಅಥವಾ ತನಗೇ ತಾನೇ ಆಜ್ಞೆ ಮಾಡುವುದು.

ರೋಗಿ ಮತ್ತು ಮನೆಯವರಿಗೆ ಹಾಗೂ ಸಂಬಂಧಪಟ್ಟವರಿಗೆ, ರೋಗದ ಲಕ್ಷಣಗಳನ್ನು ಬರಲು ಕಾರಣಗಳನ್ನು ವಿವರಿಸಿ, ಇದು ಕಾಯಿಲೆ ಈ ಆಲೋಚನೆಗಳಿಗೆ ರೋಗಿ ಕಾರಣನಲ್ಲ ಎಂಬ ತಿಳುವಳಿಕೆ ನೀಡುವುದು, ಬೇಕು ಬೇಕು ಅಂತಲೇ ಮಾಡುತ್ತಾನೆ/ಆಡುತ್ತಾಳೆ ಎಂದು ಯಾರೂ ರೋಗಿಯನ್ನು ದೂರಬಾರದು.

ಮಿದುಳಿನ ಶಸ್ತ್ರಕ್ರಿಯೆ: ಔಷಧೋಪಚಾರ ಮತ್ತು ನಡುವಳಿಕೆ ಚಿಕಿತ್ಸೆಗೆ ಬಗ್ಗದ ಪ್ರಕರಣಗಳಲ್ಲಿ, ಮಿದುಳಿನ ಶಸ್ತ್ರಕ್ರಿಯೆ ಮಾಡಿ, ವ್ಯಕ್ತಿಗೆ ಸ್ವಲ್ಪ ಸಾಂತ್ವನ ಸಿಗುವಂತೆ ಮಾಡಬಹುದು. ಶಸ್ತ್ರಕ್ರಿಯೆಯಿಂದ ಗೀಳುರೋಗ ಗುಣವಾಗುತ್ತದೆ ಎಂಬ ಖಾತ್ರಿ ಇಲ್ಲ. ಇದೊಂದು ಕಡೆಯ ಪ್ರಯತ್ನ ಎನ್ನಬಹುದು.