1. ಜೋಕುಮಾರನ ಹುಟ್ಟಿನ ಹಾಡು
ಅಷ್ಟಮಿ ದಿನ ಹುಟ್ಟಿಬಂದನ ಕೊಮರಯ್ಯ
ಸೆಟ್ಟೇರ ಕರದು ಬೆಸಗೊಳ್ಳಿ ಜೋಕುಮಾರ
ಸೆಟ್ಟೇರ ಕರದು ಬೆಸಗೊಳ್ಳಿ ಕೊಮರಯ್ಯ
ಹುಟ್ಟಿದ ಯಾಳೆ ಕವಲೇಸ ಜೋಕುಮಾರ
ಅಂಬಿಗಿ ಗಾಲ ಅಡ್ಡಡ್ಡ ಹಾಕುತ
ಬಿಂದೂಲಿ ತೋಳ ತಿರುವುತ ಜೋಕುಮಾರ
ಬಿಂದೂಲಿ ತೋಳ ತಿರುವುತ ನನ ಕೊಮರಯ್ಯ
ಬಂದನೆ ತಾಯಿ ಮನಿವುಂಡ ಜೋಕುಮಾರ
ಏನ ಕೋಮರ ನಿನಕಾಲಾಗ ನಂಬಿಗಿಲ್ಲ
ಮೇಲಮಾಣಿಕದ ಹರಳಿಲ್ಲ ಜೋಕುಮಾರ
ಕಲಬುರಗಿ ರಾಜ ಬೀದ್ಯಾಗ ಸುಳಿವಿಲ್ಲ ಜೋಕುಮಾರ
ಹಸಿನನಕೊಮರ ಸಸಿನಾಡಗ ಹ್ವಾದರ
ಸುರದಾವ ಮಗ್ಗಿ ಮಳಗಾಲ ಜೋಕುಮಾರ
ಸುರದಾವ ಮಗ್ಗಿ ಮಳಗಾಲ ಗೌಡರು
ಕರದ ಹಚ್ಚಡ ಹೊಚ್ಜ್ಯಾರ ಜೋಕುಮಾರ
ಹಗೀದ ಹೊಲದಾಗ ಹರದ ಚೆಂಡಾಡ್ಯಾನ
ಹರದಿ ನಿನಮಗ ಕೊಮರಯ್ಯ ಜೋಕುಮಾರ
ಹರದಿ ನನಮಗ ಕೊಮರಯ್ಯ ಚೆಂಡಾಡಿದಲ್ಲಿ
ಗುಂಡ ತೆನಿಗೊಳು ಬೆಳದಾವ ಜೋಕುಮಾರ
ಬಿತ್ತಿದ ಹೊಲದಾಗ ಸುತ್ತಿ ಚೆಂಡಾಡ್ಯಾನ
ಮಿತ್ರಿ ನನಮಗ ಕೊಮರಯ್ಯ
ಮಿತ್ರಿ ನನಮಗ ಕೊಮರಯ್ಯ ಚೆಂಡಾಡಿದಲ್ಲಿ
ಮುತ್ತ ಮಾನಿಕ ಬೆಳೆದಾವ ಜೋಕುಮಾರ
ಅಡ್ಡಡ್ಡ ಮಳಿಬಂದು ದೊಡದೊಡ್ಡ ತೆನಿಆಗಿ
ಗೊಡ್ಡಗೋಳೆಲ್ಲ ಹಯನಾಗಿ ಜೋಕುಮಾರ
ಗೊಡ್ಡಗೋಳೆಲ್ಲ ಹಯನಾಗಿ ಕಲಬುರಗಿ
ಸೆಟ್ಟೇರ ಮನಿಗಿ ಸಿರಿಬಂದ ಜೋಕುಮಾರ
2. ಜೋಕುಮಾರನ ಮಹಿಮೆಯ ಹಾಡು
ಕಾಯಿ ಕತ್ತರಿಸಿ ತೂಗತೂಗಿ ನೋಡುತಾವೆ
ಜೋಗ್ಯಾಗಿ ನಿಂತ ಜತನಿಂಗ ಇನ್ನು
ತರಿಸಯ್ಯ ಹೊನ್ನ ಮಳೆಯ ॥
ಯಾಕೊ ಕೊಮರಯ್ಯ ನಿನ್ನ ಬಾಯಿಗೆ ಬೆಣ್ಣಿಲ್ಲ
ಮೇಲೆ ಮಾಣಿಕದ ಹರಳಿಲ್ಲ ಈ ಊರ
ಓಣ್ಯಾಗೆ ನಿನ್ನ ಸುಳುವಿಲ್ಲ ॥
ರಾಯ ರಾಯರೆಲ್ಲ ಚಾವಡ್ಯಾಗ ಕುತಗೊಂಡು
ರಾಜ ಕೊಮರನ ಕರಸ್ಯಾರ ಕೇಳ್ಯಾರಲ್ಲಿ
ಆರಿದ್ರಿ ಮಳೆಯ ಬರಲಿಲ್ಲ ॥
ಶೆಟ್ಟಿ ಶೆಟ್ಟ್ಯಾರೆಲ್ಲ ಕಟ್ಟೆಮ್ಯಾಲೆ ಕುತಗೊಂಡು
ಪುತ್ರ ಕೊಮರಾನ ಕರಸ್ಯಾರ
ಪುತ್ರ ಕೊಮರನ ಕರೆಸಿ ಕೇಳ್ಯಾರಲ್ಲಿ
ಉತ್ತರಿ ಮಳೆಯ ಬರಲಿಲ್ಲ ॥
ಅತ್ತಲ ಮಳಿ ಬಂದಿತ್ತಲ್ಲ ಕೆರಿತುಂಬಿ
ಗುತ್ತಿ ಮಲೆನಾಡ ಕೊಳಿಕಟ್ಟಿ ಗೌರವ್ವ ನಿನ್ನ
ಪುತ್ರ ನಂದ ಲ ತಡದ್ದವೆ ॥
ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ
ಗುಡ್ಡಗಳೆಲ್ಲಾ ಹಯನಾಗಿ ಗೌಡರ
ಸಡ್ಡೆಯ ಮೇಲೆ ಸಿರಿ ಬರಲಿ ॥
ಒಂದೆತ್ತು ನಿಮಗೆ ಹಿಂಡೆತ್ತು ಆಗಲೋ
ಸೇರಿದ ಭೂಮಿ ಬೆಳೆಯಲ್ಲಿ ಜೋಕುಮಾರಣ್ಣನ
ನಾರೆರು ಕೊಟ್ಟ ಹರಕೆಯು ॥
ಜೋಕುಮಾರ ಸಮೃದ್ಧಿಯ ದೇವ
ಜ್ವಾಳದ ಹೊಲಕೆ ಆರೇಳು ಮುಂಚಿಗೆ ಹಾಕಿ
ಆರೇಳು ಕರೆದರ ಓ ಎನ್ನು ಗೌರಮ್ಮ
ಮಾಯದಿಂದ ಮಗನ ಹಡದಳೆ ॥
ಹುಟ್ಟಿದೇಳು ದಿವಸಕ ಪಟ್ನಾವ ತಿರುಗ್ಯಾನ
ದಿಟ್ನಾದೇವಿ ನಿನಮಗನ ಕೊಮರಾಮ
ಕೊಟ್ಟರ ಏಳು ದಿನಗಳನು ॥
ರಾಣೇದ ಹಚ್ಚಡ ಹೊತ್ತಾನ ಕೊಮರ
ರಾಯರ ಓಣ್ಯಾಗ ಸುಳಿದಾನ ನನ ಕೊಮರಾ
ರಾಯರ ಹೆಂಡರು ತನಗೆಂದೆ ॥
ಹಾರೋರ ಗೇರ್ಯಾಗ ಹೊಕ್ಕಾಗ ನನ ಕೊಮರ
ಗಾರೂಡಿಗಣ್ಣ ತಿರವುತ ತನ್ನಯ್ಯ
ತಾಯಂದಿರಿದ್ದರು ಬಿಡಲಿಲ್ಲ ॥
ಪುಂಡನ ಪುಂಡಾಟ್ಕ ಹಿಂಡ ಮಂದಿ ಕೂಡ್ಯಾರ
ಕಂಡಲ್ಲಿ ಕಲ್ಲಿಗಿ ಬಡದಾರ ರಾತ್ರ್ಯಾಗ
ಅಗಸರ ಕಲ್ಲಾಗ ತುರಕ್ಯಾರ ॥
ಅಷ್ಟಮಿ ದಿನ ಹುಟ್ಯಾನ ನನ ಕೊಮರ
ಸೆಟ್ಟೇರ ನೋಡಿ ಬೆಸಗೊಂಡ ಜೋಕುಮಾರ
ಹುಟ್ಟಿದೇಳು ದಿವಸಕ ಮರಣವ ॥
ಒಕ್ಕಲಗೇರ್ಯಾಗ ಹೊಕ್ಕಾನ ನನ ಕೊಮರ
ಚಕ್ಕರಗಣ್ಣ ತಿರವೂತ ಜೋಕುಮಾರ
ಒಕ್ಕಲಿಗೇರ ಹೆಣ್ಣ ನನಗೆಂದ ॥
ಹರಗೀದ ಹೊಲದಾಗ ಹರಿದು ಚಂಡಾಡ್ಯಾನ
ಹರಿದೀಯ ಮಗನ ಕೊಮರಯ್ಯ ಚಂಡಾಡಿದಲ್ಲಿ
ಹವಳ ಮುತ್ತುಗಳು ಬೆಳೆದಾವ ॥
ಬಲವಂದು ನಿಮ್ಮ ಬಾಗಿಲಕ ಕುಂತಾನ
ಬಾಗೀನಗಳ ಕೊಡಿರವ್ವ ಜೋಕುಮಾರ
ಬಾಗಲಕ ಹರಕಿ ಕೊಡತಾನ ॥
ಬಸಲಿಕ್ಕೆ ಸೊಪ್ಪೀಗಿ ಹೋದಾಳ ಹನುಮವ್ವ
ಬಸುರಿಲ್ಲವಂತೆ ಅಳುತಾಳೆ ನನ ಕೊಮರ
ಬಸುರ ಮಾಡಿ ಮನೆಗೆ ಕಳುವ್ಯಾನ ॥
ಹಾಲಬೇಡಿ ಹರಿದತ್ತ ಕೋಲಬೇಡಿ ಕುಣಿದತ್ತ
ಮೊಸರ ಬೇಡಿ ಕಸರ ತುಳಿದತ್ತ ನನಕೊಮರ
ಕುಸಲಾದ ಗೆಜ್ಜೆ ಕೆಸರಾಗ ॥
ಯಾಕೆ ಕೊಮರಾ ನಿನ್ನ ಬಾಯಿಗೆ ಬೆಣ್ಣಿಲ್ಲ
ಮೇಲೆ ಮಾಣಿಕದಾ ಹರಳಿಲ್ಲ ಈ ವೂರ
ಓಣ್ಯಾಗ ನಿನ್ನ ಸುಳುವಿಲ್ಲ ॥
ಕರಿಹಣಮ ಹಾನ ಮುರಡೊಂಕಿ ಹರಿದಾ ಲಂಕಿ
ಹಚ್ಚಿ ಅವ ಬೆಂಕಿ ಸುಟ್ಟ ಎಲ್ಲಾ
ಕೆಂಪು ಮೊತಿಯಂಥ ಜೊಕ್ಮಾರ
ಮೆರದ ಬಿಟ್ಟಾರ ಕವಿಯ ಹೊಲ್ಯಾರಾರ
ಹೊಡೆದ ಅವನ ಪ್ರಾಣಾ ॥
ಹುಟ್ಟಿದೊಳು ದಿವಸಾಕೆ ಪಟ್ಟಣವ ತಿರುಗ್ಯಾನೆ
ದೃಷ್ಟಿದೇವಿ ನಿನ ಮಗ ಕೊಮರಾಗೆ
ಕೊಟ್ಟಾರೆ ಏಳು ದಿನಗಳ ॥
3. ಜೋಕುಮಾರನ ಮಹಿಮೆಯ ಹಾಡು
ಅಡ್ಡಡ್ಡ ಮಳೆ ಬಡಿದು ದೊಡ್ಡೊಡ್ಡ ಕೆರಿತುಂಬಿ
ಗುಡ್ಡಗಳೆಲ್ಲ ಹೈನಾಗಿ ಜೋಕುಮಾರ ॥ಗೌಡರ
ಸೆಡ್ಡಿಯ ಮ್ಯಾಲೆ ಸಿರಿಬಂದು ॥ಜೋಕುಮಾರ ॥1 ॥
ಹಾಸ್ಹಾಸಿ ಮಳೆಬಡಿದು ಬೀಸ್ಬೀಸಿ ಕೆರೆತುಂಬಿ
ಬಾಸಿಂಗದಂತ ತೆನಿಬಾಗಿ ಗೌಡರ
ರಾಸಿಯ ಮ್ಯಾಲೆ ಸಿರಿ ಬಂದ ॥2 ॥
ಕರುಣುಳ್ಳ ಕೋಮರಾಮ್ನ ಕೆರೆನೋಡ ಹೋದಾರ
ಕರದು ಕಾರ್ಗಳ ಮಳೆ ಬಂದು ಗೌಡರು
ಕರೆದು ಹಚ್ಚಡ ಹೊಚ್ಚ್ಯಾರ ॥3 ॥
ಕೆಂಚ ನಮ ಕೊಮರಾ ಬೆಂಚೀಯ ನೋಡಹ್ವಾದ
ಮಿಂಚ್ಯಾವ ಕಾರಮಳೆ ಬಂದು ಗೌಡರು
ಕೆಂಪು ಹಚ್ಚಡ ಹೊಚ್ಚ್ಯಾರ ॥4 ॥
ಹುಟ್ಟಿದೇಳು ದಿವಸಕ ಪಟ್ಣಾವ ತಿರುಗ್ಯಾನ
ದಿಟ್ಣಾ ದೇವಿನಿನ ಮಗನ ಕೊಮರಾಗ
ಕೊಟ್ರವೇಳು ದಿನಗಳ ॥5 ॥
ಪುಂಡಿಯ ಪಲ್ಲೆನಂಜು ಕೊಂಡ ತಾನುಣಲಿಲ್ಲ
ದಂಡನಾಳವನ ಬಂಕ್ಯಾಗ ನಮದೇವಿ
ಹೊಂಬಳಿಸರವ ಬಗಿಸ್ಯಾಳ ॥6 ॥
ಚಕ್ಕೋಚಿ ರಸಪಲ್ಲೆ ಇಕ್ಕೊಂಡು ಉಣಲಿಲ್ಲ
ದಿಕ್ಕನಾಳವ್ನ ಬಂಕ್ಯಾಗ ನಮದೇವಿ
ಚೊಕ್ಕ ಮುತ್ತಿನ ಸರ ಬಗಿಸೆ ॥7 ॥
ಅರಕೊಂಬ ಅರಷಿಣವು ದರಬಟ್ಲ ಒಳ್ಳೆಣ್ಣೆ
ನರನಮ್ಮ ದೇವಿ ಕುಲಿಹೊಕ್ಕು ಎರಕೊಂಡ
ತೆರೆ ಬಂದನೀರು ಬಾಗಿಲಕ ॥8 ॥
ಬಾನ ಹುಟ್ಟಿದನಂತ ಬನಕ ತೊಟ್ಟಿಲ ಕಟ್ಟಿ
ಬಾಗಲನ್ನೇರು ನೆರದಾರ ಹಾಡುತಲಿ
ಕೋಲೆನ್ನು ಜನಕ ಜಯಜಯವೊ ॥9 ॥
ಕಬ್ಬುಳ್ಳ ತ್ವಾಟ್ದಾಗು ಇಬ್ಬನ್ನಿ ವರದ್ಹಾಂಗ
ಇಬ್ಬರು ತೂಗಲು ಮಲಗಾನ ನಮದೇವಿ
ಹೆಬ್ಬೂಲಿ ಮಗನ ಹಡೆದಾಳ ॥10 ॥
ಹಾರೂರ ಕೇರ್ಯಾಗ ಹಾರಿ ಚೆಂಡಾಡ್ಯಾನ
ನಾರಿ ನಿನಮಗ ಕೊಮರಯ್ಯ ಚೆಂಡಾಡಿ
ಊರ ಭೂಮೆಲ್ಲ ಬೆಳೆಬಂದ ॥11 ॥
ಒಕ್ಕಲಗೇರಿ ತಾ ಸೇರಿ ಹೊಕ್ಕು ಚೆಂಡಾಡ್ಯಾನ
ಅಕ್ಕನ ಮಗನು ಕೊಮರಯ್ಯ ಆಡಿದರ
ಅಕ್ಕಿನಾಡೆಲ್ಲ ಬೆಳೆದಾವ ॥12 ॥
ಹಾಲ್ಬೇಡಿ ಹಲುಬ್ಯಾನ ಕೆನೆಬೇಡಿ ಕುಣಿದಾನ
ಮೊಸರ ಬೇಡಿ ಕೆಸರ ತುಳಿದಾನ ಕೊಮರಾನ
ಕುಸುರಾದ ಗೆಜ್ಜಿ ಕೆಸರಾಗ್ಯೊ ॥13 ॥
ಸಂದೀಯ ಮನೆಯನ್ನ ಗೋದೀಯ ಮನೆಯನ್ನ
ಗೊಂಜಾಳದನ್ನ ಕೆಸರನ್ನ ನಮಕೊಮರ
ಸಂದೀಯ ಹೊಕ್ಕನು ನಡುಗೇರಿ ॥14 ॥
ಹಾದೀಯ ಮನೆಯನ್ನ ಬೀದೀಯ ಮನೆಯನ್ನ
ಬಾಜರದನ್ನ ಮೊಸರನ್ನ ನಮಕೊಮರ
ಗೌಳೇರೋಣಿ ಹೊಕ್ಕಾನ ॥15 ॥
ಹಳ್ಳಕ್ಕ ತಾಹೋಗಿ, ಸಣ್ಣವ್ನ ಇಟ್ಟಾನ
ಕನ್ನುಡಿ ತೆಗೆದು ಮೊಕನೋಡೊ ಕೊಮರಾಮ
ಕಣ್ಣುಮೂಗಿಲೆ ಕರ ಚೆಲುವ ॥16 ॥
ಅಳಕೂತ ಬಳಕೂತ ಬಂದಾಳ ಗುಳಕವ್ವ
ಬಂದು ನಿಂತಾಳ ಅಗಸ್ಯಾಗ ಗೌಡರು
ತಂದು ಇಳಿಸ್ಯಾರ ಸೆಳಿಮಂಚ ॥17 ॥
ಕೊಮರಾ ತಾ ಬರ್ತಾನಂತ ಕೋಣೀಯ ಸಾರೀಸಿ
ಜಣಚಕ್ಕಲಗಿತ್ತಿ ಚದರೀಯ ಮನಿಯಾಗ
ಒಂದಾರ ಜ್ಯಾವ ಇರಲಿಲ್ಲ ॥18 ॥
ಹೋಗತ ಹೊನ್ನ ಮುರಿದ ಬರತ ಬನ್ನಿಯ ಮುರಿದ
ಕಂಡಕಂಡಲ್ಲಿ ಕರಿಬೇವು ಮುಡುವಂತ
ಪುಂಡನ್ನ ದೇವಿ ಹಡೆದಾಳ ॥19 ॥
ಅಕ್ಕ ಹಡದಾಳಂತ ಏನೊಯ್ದೆ ಬಸವಯ್ಯ
ಮುತ್ತಿನ ಚೆಂಡ ಕಾರ್ಮುಗಿಲ ಸುರಿಮಳೆಯ
ಅರತೀಲೊಯೆ ಹರಳೆಲೆಯ ॥20 ॥
ಬೆಣ್ಣೀಯ ತಾ ಮುದ್ದಿ ಕನ್ಯುಳ್ಳ ಕುಮಾರಾಗ
ಹೊನ್ನ ಮಾಳಿಗೆಯ ಮನೆಯವ್ವ ಕೆನೆಮೊಸರ
ಬಿನ್ನಾಯ ಹೇಳ ಕೊಮರಾಗ ॥21 ॥
ಹಾಲ ತಾ ಮಗಿತುಂಬಿ ಬಾಲನಮ್ಮ ಕೊಮರಾಗ ॥
ಮೇಲಮಾಳಿಗೆ ಮನೆಯವ್ವ ನೀಕೊಟ್ರ
ಮೇಲಾಗಿ ಬೆಳೆಲಿ ನಿಂಭೂಮಿ ॥22 ॥
ಅಳವುತ ಸಿರಿತಾನು ಬಳಲುತಲಿ ಬಂದಾಳು
ಅಳಕಾದಂಬಲಿ ತಡೆದಾವು ನಮಕೊಮರ
ಕಳೆದೇಳು ದಿನಕ ಮರಣವ್ವ ॥23 ॥
ಹುಟ್ಟೀದಾ ಏಳ್ದಿನಕ ಪಟ್ಣಾವ ತಿರಗ್ಯಾನ
ದಿಟ್ಣಾದೇವಿ ನಿನಮಗನ ಕೊಮರಾಗ
ಬರೆದಾಳ ಸೆಟವಿ ಏಳ್ದೀನ ॥24 ॥
ಪುಂಡಾನ ಪುಂಡ್ಕಾಟ ಹಿಂಡಮಂದಿ ಕೂಡ್ಯಾರ
ಕಂಡಲ್ಲಿ ಕಲ್ಲಿಗೆ ಬಡಿದಾರ ರಾತ್ರ್ಯಾಗ
ಅಗಸರ ಕಲ್ಲಾಗ ತುರಿಕ್ಯಾರ ॥25 ॥
ಜಂಗಮ ನಾನಲ್ಲ ಜೋಗಯ್ಯ ನಾನಲ್ಲ
ತಿಂಗಳ್ಗೆ ಬರುವ ತಿರುಕಲ್ಲ ತಾಯವ್ವ
ತುಂಬಿ ಮೊರಜೋಳ ನೀಡವ್ವ ॥26 ॥
ಕಲ್ಲಳಿಗಿ ಕಬ್ಬಿಣದ ಮೆಟ್ಹತ್ತಿ ಏರ್ಯಾಳ
ಬಳಕುತ ಬಳತ ತಗೆದಾಳ ತಾಯವ್ವ
ಬಿಳೆಯೆಳ್ಳು ತುಂಬಿ ನೀಡ್ಯಾಳ ॥27 ॥
ಜಯ ಜಯ ಕೊಮರಾಗ ಜಯ ಜಯ ಹಾಡೀರೆ
ಜಯ ಜಯ ಭೂಮಿ ಬೆಳಸೀಗೆ ಹಡದವ್ವ
ಜಯ ಜಯ ಇರಲಿ ಜಗದಾಗ ॥28 ॥
Leave A Comment