1

ಚಾಲ

ಊಟ ಉಡಿಗೆಯ ಮಾಡಿ ತೋಟಕ್ಹೋಗುವ ನಾರಿ
ನೀಟ ನಿನ ನೋಡಿ ನಗಿ ಬಂತ
ಶೃಂಗಾರಿ ಬೆರಳಾಗ ಕಾಲುಂಗರ ನೀಗಿ ಮೆರಿದಾವ
ಬಂಗಾರದಂತಾ ನಿನ್ನೀ ಮುಖಾ ಕಂಡಾಕ್ಷಣಕ
ಮುಂಗಾರಿ ಸಿಡಿಲಿನ ಪರಿ ಬೆಳಕ
ಜಾಣಿ ನಿನ್ನ ನೋಡಿ ನನ್ನ ಪ್ರಾಣ ಹಾರಿ
ಬಾಣ ನಟ್ಟಾವು ಎದಿಯೊಳು ಪಕ್ಕಾ
ನೀ ಏನ ಚೆಲವಿ ಮೂಗ ಸಂಪಿಗೆ ಗಣಿಯಂತೆ ಜುಳಕಾ
ಕಾಣೆ ನೀನು ನಿನ ಕಂಡೆನ್ನ ಸುದ್ದಿ
ಹಣ್ಣ ನೀರಿನ ಆಸೆಯಿಲ್ಲ ಮನ್ನೆ ಉಂಡಿದೇನ
ಇನ್ನೂ ತನಕಾ ಕಬರಿಲ್ಲ ನಾರಿ
ಉಪವಾಸವಿದ್ದೇನ ನಿನ ದುಸಕಾ ॥

ಏರ

ನೀಟ ನಿನ ನೋಡಿ ನಗಿ ಬಂತ
ಮನ್ಮಥನಾಟ ನಿನ್ನಲ್ಲಿ ಪರಿಪೂರ್ಣ ॥

2

ಏರ

ಪೂರ್ಣ ಕೇಳ ನೀನು ಹರಣ ಕಳಕೊಂಡಿಯೋ
ಕಾರಣವೇನೋ ನನ್ನ ಕೇಳುವದು

 

ಚಾಲ

ಬಗಸಿದ ರೂಮಾಲ ಒಂದ ಪುಗಸೆಟ್ಟೆದ ಸುತಗೊಂಡ
ಅಗಸ್ಯಾಗ ನಿಂತಾರ ಹರಕಾತಿ
ನೀ ಮಾಡಬ್ಯಾಡ ಹಂಗಸೇನಪ್ಪ ಬಿಟ್ಟು ಬಿಡು ಚಿಂತಿ
ಎಲ್ಲಾ ನಾರಿಯರಂಗ ನಾ ಅಲ್ಲೆ ಇಲ್ಲೆ ತಿರಗವಳಲ್ಲಾ
ಬಲ್ಲವ ಆದರ ತಿಳಕೋತಿ ತರವಲ್ಲೊ ತಗಿ
ಎಲ್ಯ್ವ ಹೇಳೊ ತಿಳಿಗೇಡಿ ಕೋತಿ
ಪಾಪ ಅಂತ ಬಿಡತೇನೊ ನಿನ್ನ ಒಪ್ಪತ್ತಿನೊಳಗ
ಕಡದ ಗುಪ್ಪತ್ತ್ಲೆ ಮಾಡ್ಯಾರ ಕತ್ತೊತ್ತಿ ॥
ಪರನಾರಿಯರ ಮ್ಯಾಲ ನದರ ಇಡೋದಲ್ಲೋ ನಿನ್ನ ರೀತಿ

ಏರ

ಕಾರಣವೇನೋ ನನ್ನ ಕೇಳುವದು ಪರ
ನಾರಿಯರನ್ನ ಕೇಳಿ ಜೀರ್ಣವಾಗಿದಾರೋ ಬಲ ಮಂದಿ ॥

3

ಏರ

ಬಲ ಮಂದಿ ಮಾತವನು ಲಲನೆ ಹೇಳಲಿ ಬ್ಯಾಡ
ಹಲವು ಮಾತುಗಳು ನಿನಗ್ಯಾಕ ॥

ಚಾಲ

ಮುದ್ದು ಮುಖದ ಬಾಲಿ ನೀ
ಸಧ್ಯ ಬಾ ಮುದ್ದು ಕೊಡತೇನ
ತಿದ್ದಿ ಮಾಡಿದ ಗೊಂಬಿಹಂತಾಕಿ
ಮಾತಾಡ ಸ್ವಲ್ಪ ಪದ್ಮಗಂಧಿಯಂತಾ ಚೆಲವಿಕಿ
ನಿಗರಿದ ಕುಚಗಳು ಎರಡು ಬಗರಿಯಂಗ ತೋರತಾವ
ಉಗರ ಒತ್ತಿ ಬಿಡುವೆನು ಜೋಕೆ
ಗಮಗಮ ಗರ್ಧಿ ಅಗರ ಗಂಧ ಕರ್ಪುರ
ಸಖೀ ಇಂದ್ರಲೋಕದಿಂದ ಇಳದೆ
ಸುಂದ್ರಿ ನಿನ್ನ ಸುರತ ನೋಡಿ ನಿಂದ್ರಲಾರೆ ಬಾ ಬಾರೆ ಸಖೀ
ನೀ ಒಲ್ಲಿನೆಂದ್ರ ತೊಂದರೆಯೈತಿ ಬ್ಯಾಸರಿಕಿ ॥

ಏರ

ಹಲವು ಮಾತುಗಳು ನಿನಗ್ಯಾಕ
ಬಲಿ ಹೆಣ್ಣ ಬಿಡವನ್ನ ಒಡಗೂಡ ॥

4

ಏರ

ಒಡಗೂಡನ್ನಲಿ ಬ್ಯಾಡ ಕಡುಮೂರ್ಖ ಕಡಿಸುವೆನು
ಜಡಿಸುವೆನು ಬೇಡಿ ತಿಳಿಯಪ್ಪ

ಚಾಲ

ಎಂಥಾ ಮಾತನಾಡಿದಿ ನಿನಗ ಪತ್ತುಳ್ಳ ಗರತಿ ಮ್ಯಾಲ
ಇಂಥಾ ಕೃತ್ಯ ಮಾಡುವರೇನೋ ಮೂಳಾ
ವರಗೆಡಿಸೆನ್ನ ಜತ್ತಿನಂಥವ ಹಾಕಿಸು ವೇಳಾ
ಬಡವನಿಗೇಕೋ ಹೆಡಿಗೆ ಜಾತ್ರಿ
ಅಡವಿ ಒಳಗ ಅರವಿ ಕಾಣದ
ದುಡುಕೊಂಡ ತಿನುವೆ ಪಡಿಕಾಳಾ
ತರದಿದ್ದರ ನಿನ್ನ ಹೆಂಡತಿ ಸಹಿತ ಅಳತಾವೋ ಮಕ್ಕಳಾ
ಹದ್ದಮೀರಿ ನಿಂತೀದಿ ತಮ್ಮಾ ಕದನ ಬ್ಯಾಡೋ
ಚಲೋದಲ್ಲಾ ಎದಿಗಾರ ನಿನಗೊಮ್ಮೆ ಇಲ್ಲೊ ಕೂಳಾ
ಉಪವಾಸದಿ ಮನಸ್ಯಾ ನಿನಗ್ಯಾಕೊ ಇಂಥ ಗೋಳಾ ॥

5

ಏರ

ಜಡಿಸುವೆನು ಬೇಡಿ ತಿಳಿಯಪ್ಪ
ನನಕಂಡ ಬಡಿವಾರ ಮಾಡಿ ಮಾತಾಡತಿ ॥

ಚಾಲ

ಮಾತನಾಡಲಾಕೇನ ಸೋತು ಹೋಗವನಲ್ಲ
ಕಾಂತೆ ನಿನ ಕಂಡ ಖಬರ್ಹಾರಿ ಅಪ್ಪುವೆನು ನಾರಿ ನಿನ್ನ
ಅಪ್ಪುವೆನು ತುಟಿಗಳ ಕಡದ
ಸೀಬತೇನೋ ಅಮೃತದ ಹನಿ
ಪ್ರಿಯನ ಮ್ಯಾಲೆ ಕೃಪಾ ಯಾಕ ಬಿಡ ಬಿಡ ಜಾಣೀ
ಸಕ್ಕರಿಯಂಥಾ ನಾರಿ ನಿನ್ನ
ಅಕ್ಕರಲಿಂದ ಭೋಗಿಸುವೆನು
ಸಿಕ್ಕರ ನಾಕ ಜೋಡ
ಮುತ್ತಿನ ಗೊನಿ ಬಂದಂತೆ ಜಾಣಿ
ಮಕರ ಹರೆ ಅದರ ದೆಸೆಯಿದ ಬನ್ನೆ
ಎರಕದ ಗೊಂಬಿ ಹಂತಾಕೆ
ಸಿಕ್ಕರ ಹರಕಿ ಹೊರುವೆ ನೀ ಬಂಕನಾಥಗ
ಅರಕೆ ಬರತಿಯಾದ ಕರ್ಪೂರ ಕಣ್ಣೆ ॥

ಏರ

ಗುಗ್ಗಳ ದೀಪ ಜೋಡಕಾಯಿ ಒಡಿವೆನ ಹೆಣ್ಣೆ
ಕಾಂತಿ ನಿನ ಕಂಡ ಖಬರ್ಹಾರಿ ನಿಂತೇನ
ಜಾತ ಪದ್ಮಿನಿ ನಡೆ ಮನೆಗೆ ॥

6

ಚಾಲ

ಮನಿಯ ಮುರಕೊಂಡಿಯೋ
ದನದಂಥಾ ಜಮಗೇಡಿ ಗನ ಬುದ್ಧಿ ನಿನಗ ಅನಬ್ಯಾಡಪ್ಪ
ತಂಗಿ ಸರಿ ತಿಳಕೊಂಡು ನೋಡೋ
ನನ್ನ ಕಂಡು ಢೋಂಗ ಮಾಡುದ ಬಿಟ್ಟು ಬಿಡೋ
ಉತ್ತಮ ನಾರಿಯರ ಮ್ಯಾಲೆ ನಜರ ಇಟ್ಟೆ
ಬಲಮಂದಿ ಸತ್ತ ಹೋದಾರ ಒದಸಗೊಂಡೋ
ನಾ ಹಂತಕ್ಕೆಲ್ಲಾ ಮುತ್ತಿನಂಥವ ನನ ಗಂಡ ಜೋಡೋ
ಹೆಚ್ಚೇನ ನನ್ನ ಮನಿಯ ಪುರುಷಾ ವಜ್ರದಾ ತೆನಿ ಅಂತಾವಾ
ಸೊಚ್ಚ ಅಬರುದಾರ ಇರುವನ
ಪಾಡ ನಿನ್ನಂಥವರದ ಆಗಾಕಿಲ್ಲಾ
ಮೆಚ್ಚಿ ಬೆಲಿ ನೋಡೋ ॥

ಏರ

ಗನ ಬುದ್ಧಿ ನಿನಗ ಇರಬೇಕೋ
ನೀ ನನ್ನ ಕೆಣಕಿ ಕೇಳುವರೆ ಕಡು ಮೂರ್ಖ ॥

7

ಚಾಲ

ಮೂರ್ಖನೆನ್ನಲಿ ಬ್ಯಾಡ ತರ್ಕ ಮಾಡಲಿ ಬ್ಯಾಡ
ಮುರಕ ಮಾಡಿ ಮಾಡಿ ನಡಿಬ್ಯಾಡ
ಜೋಡಿನ ನಾರಿ ಕೂಡಿ ನೋಡ ಕ್ರೀಡಾರಂಗ
ಕೂಡತೀನ ನೋಡತೇನ
ಮಾರಿಗೆ ಮಾರಿ ಕೂಡಸ್ತೇನ
ತೊಡಿಗೆ ತೊಡಿ ಹಚ್ಚಿ ಉಮೇದವಾರಿ ॥

ಸಹಜ ಬಂದ ಮೋಜ ಮಾಡ
ವಾಜಮಿ ರೀತಿಂದ ಹೇಳತೇನ
ಬೀಜಮಾತ ಹೋಗಬ್ಯಾಡ ಮೀರಿ
ಯಾತರದೇನು ಭೋಜಬ್ಯಾಡ
ಕಳದ ಚೆಲ್ಲ ಸೀರಿ ಬಡವನೆನ್ನಲಿ ಬ್ಯಾಡ

ನಿನ್ನ ನಡಮಟ ಬಂಗಾರ ನೀಡುವೆನ
ಕೊಡುವದರೊಳಗ ಯಾವ ನನ್ನ ಸರಿ
ಬಿಡಬ್ಯಾಡ ನನ್ನ ಕಡಗಿನ ಕಾಲ
ಆಗತೇನ ನಿನ್ನ ಸರಿ ॥

ಏರ

ಮುರಕ ಮಾಡಿ ಮಾಡಿ ನಡೀ ಬ್ಯಾಡ
ಸವತೇರು ಸರಕಾರ ಬಂದ್ರು ಬಿಡೋದಿಲ್ಲ ॥

8

ಚಾಲ

ಇಲ್ಲ ಅನ್ನುವ ಮಾತು ಕುಲ್ಲ ಆಡಲಿ ಬ್ಯಾಡೋ
ಹಲ್ಲ ಮುರಿಸುವೆನ ಹದಿನಾರ,
ಅರಿವಿಲ್ಲೇಲೋ ತೆರವಾಯಿ ಪರನಾರಿಯರೆಂಬುದು ನಿನಗ
ಪರಿವಿಲ್ಲದಂಥಾ ಪಡಿಶೆಂಟಾ
ಒಳೆ ಧೀರ ಮಾಡಿ ಬಾ ಅಂತ ಕರೆಯೋದ ತಿಳದೈತಿ ಇಷ್ಟ
ಹೆಣ್ಣ ನಾಗರಹಾವ ನಿನ್ನ
ಮಣ್ಣಗೂಡಿಸಿ ಬಿಟ್ಟೇನ ತಿಳಿಯೋ
ಬಣ್ಣಗೆಟ್ಟ ಜಗಳ ಬ್ಯಾಡೋ ಕೆಟ್ಟ ॥
ಪೆಟ್ಟ ತಿಂದಿಯೋ ತಮ್ಮಾ ಕೆನ್ನೆಯ ಮ್ಯಾಗ ಯಾಕೋ
ಹುಡುಗಾಟ ಇಲ್ಲದ್ದ ಮಾತಾಡಿದರ
ಸಲ್ಲುದೇನೊ ತಿಳದ ನೋಡೋ ಕೊಲ್ಲಿಸಿ ಹಾಕಿಸುವೆ
ತಿಳಿ ಸ್ಪಷ್ಟ ಕಳದಾನ ಜೀವ ಬಲ್ಲಿದವ ನನ ಗಂಡಾ ಭಾಳ ದಿಟ್ಟ ॥

ಏರ

ಹಲ್ಲ ಮುರಿಸುವೆನ ಹದಿನಾರ
ಪಾರ್ವತಿ ವಲ್ಲಭಗಂಜಿ ನಡೆಸಣ್ಣ ॥

9

ಚಾಲ

ಸಣ್ಣ ಪ್ರಾಯದ ಬಾಲಿ ಕಣ್ಣ ಎರಳಿಯ ನೋಟ
ಬಣ್ಣದ ಸೀರಿ ಬಲಗಡಿಕಿ
ಹಲಬಿ ಸಾವತೇನ ಬಾರ ಗುಲಾಬಿ ಹೂವಿನಂಥಾ ನಾರಿ
ಕುಲ್ಲಾ ಮಾಡಿ ಹೇಳುವದಿಲ್ಲ ನಾನಾ
ಮನಸ್ಸಿಗೆ ಬಂದ ವಲ್ಲಭಿ ನಿನ್ನ ಜ್ಞಾನಾ
ನಿಂಬೆಯಂತಾ ಬಟ್ಟ ಕುಚ ಗಟ್ಟಿಯಾಗಿ
ಹಿಡದ ಹಿಚುಕುವ ಮುಟ್ಟೆ ಸಂತೋಷ ಪಡುವೆ ನಾ
ಮನ್ಮಥ ಕೆಟ್ಟ ಒಟ್ಟಿಗೆ ತಿಳಿದು ಕೊಳ್ಳಾ ನೀನಾ ॥

ಏರ

ಬಣ್ಣದ ಸೀರಿ ಬಲಗಡಿಕಿ
ನಿನ ಕಂಡ ಉಣ್ಣುವ ಹಸಿವು ನನಗಿಲ್ಲ ॥

10

ಚಾಲ

ಹಸಿದರೇನಾಗುವದೋ ವಿಷ ಕುಡಿದರೇನೋ

ಏರ

ಬಿಸಲೊಳಗ ನಿದ್ರಿ ಮಾಡುವರೆ ನೀ ನನ್ನ
ಕಿಸವಾಯಿ ಬಂದ ಕೇಳುವರೇನ ॥

11

ಚಾಲ

ಮಂದಮತಿ ನೀ ನನ್ನ ಬಂದ ಕೇಳುವವರೇನೋ
ಹೆಣತಿ ಅಳತಾಳೋ ನಿನ್ನ ಹೆಣಕ
ಜೀತಾ ಇದ್ದ ಮದವಿ ಆಗಿ ವಾತ ತಂದ ಕಾಳಿನ್ಯಾಗ
ಮಾತನಾಡಿ ದುಡದ ಮುಟ್ಟಿಸಲಿಲ್ಲಾ
ನಡ ಮುಚ್ಚೆ ಜೀತ ಮಾಡಿ ಬಿಟ್ಟ ಬಂದೆ ಪಾಪ
ನಿಚ್ಚ ನೀ ಒಪ್ಪತ್ತುಂಡರ ಒಪ್ಪತ್ತಾರ ಉಪವಾಸ ಇರತಿಯೋ
ನಿನ್ನ ವಿಪತ್ತು ಬಂಕನಾಥ ಬಲ್ಲಾ
ಇಂಥಾದ್ದ ಹೊಟ್ಟ್ಯಾಗ ಗುಪ್ಪತ್ತ ಇಟಕೊಂಡ
ಮಾಡತೀಯೋ ಡೌಲ ವಾರಿಗಿ ಗೆಳತಿಯರೊಳಗ
ನಿನ್ನ ಹೆಣತಿ ಮರಗತಾಳೋ
ತಿರಗಿ ನಿನ್ನ ಮನಿ ನೋಡಲಿಲ್ಲಾ
ನಿನ್ನೆದಿ ಗಟ್ಟಿನೋ ಬಾರಿಗೇ ನನ್ನ ಕೇಳಿದಲ್ಲೊ ಅಕಲಾ ॥

ಏರ

ಹೆಣತಿ ಅಳತಾಳೋ ನಿನ್ನ ಹೆಣಕ ಮನಿಯಾಗ
ಹಣತಿ ಇಲ್ಲಲ್ಲೋ ಹಚ್ಚೋದಕ

12

ಚಾಲ

ಹಚ್ಚಿಕೊಂಡ ಮಾತಾಡಿದರ ಹುಚ್ಚೆದ್ದ ಬಯ್ಯವರೇ
ಹೆಚ್ಚಿನ ನಾರಿ ನೀ ನಡಿ ಮನೆಗೇ
ಬಾಯಿಗಿ ಬಂದಂಗ ಬಯುವಲ್ಲಿ ಮಾಯ ನಿನ ಮ್ಯಾಲ ಹುಡಿಗಿ
ನ್ಯಾಯ ಮಾಡಬ್ಯಾಡ ನನಗೂಡಾ
ನಿನ್ನ ತಕ್ಕ ಪುರುಷ ಒಲ್ಲಿನೆಂದ ಮರಜಿ ಮರಿಯಬ್ಯಾಡ
ಬಂಗಾರದ ಗುಡಿಯಾಗ ಲಿಂಗ ಕಲ್ಲಿಂದಿರತೈತಿ
ಹಂಗ ನಿನ ಮನಸಿಗೆ ತಿಳಿದ ನೋಡ
ಅದರಂತ ತಿಳದ ನೋಡ ನನ್ನ ಸಂಗಮನು ಮಾಡ ॥

ಏರ

ಹೆಚ್ಚಿನ ನಾರಿ ನಡಿ ಮನಿಗೆ ನಾನಿನಗ
ಮೆಚ್ಚಿದೇನ ಯಾಕ ಬರವಲ್ಲೆ ॥

13

ಚಾಲ

ಒಲ್ಲದವರು ಮನಸು ನಿಲಿಸುವರ್ಯಾರ
ಬಲ್ಲಿದವನು ನನ್ನ ಮನಿ ಪುರುಷ

ಏರ

ಬಲ್ಲಿದವನು ನನ್ನ ಕೇಳಿದರ
ಕೊಲ್ಲಿಸುವನು ನಿನ್ನ ಪ್ರಾಣವನು

14

ಚಾಲ

ಪ್ರಾಣಸಖಿ ನಾ ನಿನ್ನ ಕಾಣದಲೆ ನಿಲಲಾರೆ
ಶ್ಯಾಣೆತನದಲಿ ಬಹುಕುಶಲೆ

ಏರ

ತಿಳಕೊಂಡ ಮಾಣಿಕವ
ನೀಡುವೆ ನಡಿ ಮನಿಗೆ

15

ಚಾಲ

ಮನಿಗೆ ಕರೆಯುವರೇನೋ
ಗುಣವಿಲ್ಲ ನಿನ್ನ ಬದೀಲಿ ಹಣವಿದ್ದರೆಷ್ಟು ಕುಣಿದಾಡಿ

ಏರ

ಹಣವಿದ್ದರೆಷ್ಟ ಕುಣಿದಾಡಿ
ನೀ ನನ್ನ ದನಿ ಕೇಳಿ ಓಡಿ ಬರಬ್ಯಾಡ ॥

16

ಚಾಲ

ಬ್ಯಾಡೆಂದರ ಬಿಡಲಿಕ್ಕೆ ಮೂಢ ಬ್ರಾಹ್ಮಣನೇನೆ
ನೋಡಿಕೋ ಮುಂದ ಕೆಡಿಸುವೆನು
ಮಂದಗಮನಿ ನಿಂದರ ನಿನ್ನ ಹೊಂದಿ ಕೆಡಿಸದಿದ್ದರೆ
ನಮ್ಮ ತಂದಿ ಹೊಟ್ಟಿಲೆ ಹುಟ್ಟಿ ಫಲವೇನ
ನಿಮ್ಮವರ ಬಂದರ ನಂದದೇನ ಹರಕೊಂಡಾರ
ಎಲ್ಲಿ ಹೊಕ್ಕರ ಬಿಡುವುದಿಲ್ಲ ;
ಕಲ್ಲಲೊಗದು ಕೊಡಗಳ ಒಡದ ಬಲ್ಲಂಗ ಕಳದೇನ ನಿನ್ನ ಮಾನಾ
ನೀ ಬಾರದಿದ್ದರ ಗಟ್ಟಿ ಕೊಲ್ಲತೇನ ನಿನ್ನ ಪ್ರಾಣ
ಅರ್ಧ ಮಾನಾ ಹೊರವಕ್ಕೆಲ್ಲಾ
ಶುದ್ಧ ಮಾನಾ ಹೊರವಕ್ಕಿ ಜಿದ್ದಿಗಾದಿ ಏನ
ನನ್ನ ಸವನ ಹಾತೋರೆ ಬ್ಯಾಡಾ

ಏರ

ಹರದಿ ಆಗ ನನ್ನ ಸ್ವಾಧೀನ
ನೋಡಿಕೋ ಮುಂದೆ ಕೆಡಿಸುವೆನ
ನಿಮ್ಮ ಮನಿಯ ಸುಡಿಸುವೇನ, ನೋಡಿ ತಿಳದ್ಹೇಳ ॥

17

ಚಾಲ

ತಿಳಿದತಿ ಒಳಗಿಂದು ಅರಗಿಳಿಯಂದವನೆ
ಗೆಳೆಯರ ಮುಂದ ಬಡದಾಡಿ ಸುದ್ದಿ ಆದೀತ ಊರಾಗೆಲ್ಲಾ
ಕದ್ದಕದ್ದಲೆ ಮಾತಾಡಿ ಜನಾ ಬದ್ದು ಮಾಡಿಬಿಟ್ಟಾರ ನಿನ್ನ
ಅತ್ತಿ ಮಾಮಾ ಇದ್ದದ್ದ ತಿಳಿತೇನ, ಕಾಯತಾರ ನನ್ನ
ನಾದಿನಿ ಒಬ್ಬಾಕಿ ನನ್ನ ಕಾಯಕೊಂತ ತಿರಗತಾಳೊ ಚಿನ್ನ
ಹೊರಬಿದ್ರ ಸ್ವಲ್ಪ ಬಂದ್ರ ಎಲ್ಲಾರ ಬೆಯತಾರೋ ನನ್ನ

ಏರ

ಗೆಳೆಯರ ಮುಂದ ಬಡದಾಡಿ ಅಂತೇನೊ
ವ್ಯಾಳೆ ನೋಡಿ ಹೇಳಿ ಬರುವುದಕ ವ್ಯಾಳೆ ಸಾಧಿಸುದಕ
ವೀಳ್ಯೆ ಮಡಚುದರೊಳಗ
ಭಾಳ ಮಂದಿ ಹಾದರಮಾಡುವರ ॥

18

ಚಾಲ

ತಗದೇನ ಇಷ್ಟ ದಿನ ಬಾಯಿ
ಮುಗಳುನಗಿ ನಗುವಂತಾ ಸುಗುಣಿ ನಿನ ಮ್ಯಾಲೆ
ಬಲು ಪ್ರೀತಿ
ನಾರಿ ನಿನ್ನ ಮಾರಿ ನೋಡಿ ನ್ಯಾರಿ ಮಾಡಿದಂಗ
ಕೂಡಿ ಇಬ್ರೂ ಸಮಜೋಡಿ
ಕೂಡಿ ಕಂಡ ನಿನ್ನ ಮುಖವು ಕೂಡಿ ಉಂಡಂಗ ಸಖ ಬರುವದು
ದುಂಡ ಮಲ್ಲಿಗಿ ಮುಡಿ ಮಾಲಿ ಮಾಡಿದಂಗ ಕೂಡ
ಮ್ಯಾಣದ ರಂಭಿ ತಿದ್ದಿ ಮಾಡಿದ ಗೊಂಬಿ
ಮುದ್ದು ಮುಖದ ಬಾಲಿ ನಡಿ ನ್ಯಾರಿ ಮಾಡಿದಂಗ ಕೂಡಿ ॥

ಏರ

ಸುಗುಣಿ ನಿನ ಮ್ಯಾಲೆ ಬಲು ಪ್ರೀತಿಯಿಂದಲೇ
ನೋಡುತಲೆ ಬಾಗಿಲೊಳಗೆ ನಿಲುತಿರುವೆ