ಏರ

ಘನರೋಷದಿಂದ ಭೈಯುವರೆ
ಧನ ದ್ರವ್ಯ ಸೂರೆ ಮಾಡಿದೇನೋ ನೀ ನನಗಾಗಿ ॥

37

ಚಾಲ

ಸೂರೆ ಮಾಡಿದರೇನೋ ವಾರಿಜಾಕ್ಷಿಯೆ ನಿನ್ನ
ಜಾರದ ಲೆಕ್ಕಾ ನಾ ಬಲ್ಲೆ
ಕೆಟ್ಟ ಕಾಮನದಿಂದ ಜನ ನಷ್ಟವಾಗಿ ಹೋಯಿತು
ಬಿಟ್ಟ ಆಶ್ರಮ ಅರಣ್ಯ ವಾಸಾ
ಶ್ರೇಷ್ಠ ಕೊಣ್ಣೂರಾಗ ಪ್ರಾಣ ಮಾಡಿದ್ರ್ಯೊ ಹಿಂಸಾ
ಅವನ ಸುಖಕೊಂಡು ತಿಂದಿತೋ ರಾಕ್ಷಸಾ
ಬಾಣಾ ತಾಗಿ ಬೆನ್ನ ಹತ್ತಿ ನೀನೇ ನನ್ನ ಗಂಡನೆಂದು
ಅವನ ಕಾಣಾ ಕಾಣಾ ಪ್ರಾಣಾಹರಣ ಮಾಡಿಬಿಟ್ಟೊತ್ತಿದಾ
ನಾಗವೇಣಿ ಒಲ್ಲಿ ಹೋಗ ನಿನ್ನ ವಿಶ್ವಾಸಾ
ನೀ ಹೆಣ್ಣ ಮಾಯದ ಸಖೀ ಮುನಿ ಮುನಾದಿಗಳಿಗೆ
ಪಾಸಿ ಹಾಕಿ ರಕ್ತ ಮಾಂಸದ ಕೂಡ ಯಲುಬಿನ ಗೂಡ
ಸಾಧು ಸಂತಾರ ಬಿಟ್ಟಾರ ನೂಕಿ ॥

ಏರ

ಜಾರ ಬರು ಕೃತ್ಯಕ್ಕೆ ನಾ ಒಲ್ಲೇನ
ಹೆಂಗಸರನ ದೂರ ಮಾಡಿದರ ಸಾಧುರಾ ॥

38

ಚಾಲ

ಸಾಧು ಸಂತರ ಶಾಸ್ತ್ರ ಓದಿ ಹೇಳಲಿ ಬ್ಯಾಡೋ
ಗಾದಿ ಮಾತಿಗೆ ಮನಸ್ಯಾಕೋ
ಸುಂದರ ನನ್ನ ಮನಿಯನ್ನ ಜಿಂದಗಿಯಲ್ಲಿ ನೆನಯೂದಿಲ್ಲೊ
ತಂದ ಕೊಟ್ಟೇನ ಬಿಂದಿಗಿ ಹೊನ್ನ ನಿನಗ
ಗಂಡ ನೋಡಿ ನಿಂದ್ರಗೊಡವಲ್ಲ ಮನಿಯಾಗ ಹೋದ್ರ
ಒಯ್ಯುವಲ್ಲೊ ಗೆಳಿಯಾ ಆಧಾರ ತೋರಿಸೋ ಎನಗ
ಹಾದರಮಾಡಿ ಹದಾಗಣ್ಣೋ ನಾನು
ನನ ಗಂಡ ಬಾರಂದವನ ಬಿಟ್ಟೀನೋ
ಕೂಳ ಇಲ್ಲದಲೆ ಸಾವತೇನ ಕಾಳ ಕೊಡವಲ್ಲ ಎನಗ
ಭಾಳ ಭಾಳ ಹೇಳಿದ್ದೆಲ್ಲೊ ನೀನು ಹೆಂಗಸ ನಾನು ಹಾಳ
ಅದೇನು ಸಡ್ಲ ಸಿಕ್ಕಿತು ನಿನ್ನ ಕೈಯಾಗ
ಹಡ್ಲಿ ಕೊಡೊ ನನ್ನ ಕೈಯಾಗ
ಕಡ್ಲಿ ಬುಟ್ಟಿ ಕೊಟ್ಟ ಹಿಡಕೊಂಡ ಕಡಿಯಾಕೆ ಬಂದೆ ನೀನು

ಏರ

ಗಾದಿ ಮಾತಿಗೆ ಮನಸ್ಯಾಕೊ
ಪಂಚಮಿಗೆ ಗೋದಿ ಕೊಡವಲ್ಲಿ ಗುಣವಂಥಾ ॥

39

ಚಾಲ

ಪಂಚಮಿ ಕುಬುಸದ ಲೆಕ್ಕ ಮುಂಚಿ ತೀರಿಸಿದೇನ
ಹಂಚಿದೇನ ಹತ್ತಿ ನಿನಗಗಿ
ಅಕ್ಕಲಗೇಡಿ ರಂಡೆ ನಮ್ಮ ಒಕ್ಕಲತನ ಗತಿಗೆ ಹಚ್ಚಿದೆ
ಹಕ್ಕಲಾರಸಾಕ ಬಂದಿದ್ದ್ಯೊಂದು ದಿನಾ
ಗೋದಿ ಶಿವಡ ಕೊಟ್ಟಿನ್ನೆ ಆ ದಿನಾ
ಗೂಡ ಮುರಿವಾಗ ನಮ್ಮನ್ನ ನೋಡಿಕೊಂಡ ಕುಂತಿದ್ದಿ
ಛೀ ಕೋಡಿ ರಂಡೆ ಹೊಕ್ಕೆ ನಮ್ಮ ಕಣಾ
ಇಂಥಿಂಥ ಪಿಂಡ ಕೈ ತೆನಿ ಬಿಟ್ಟಿನ್ನೆ ಆ ದಿನಾ
ಬೆದರಸಬಾರದಂಥ ಸುಮ್ಮನಿದ್ದೆ ಆ ದಿನಾ
ಒಂದ್ರಾಗೊಂದ ಬಂದೀತಂತ.
ಅದರದೇನ ಹೆಚ್ಚಿನ ಶಾಣೇತಾನ ಹಿಂತಾದಕ್ಕೆಲ್ಲಾ
ನೆದರ ಮಾಡಿ ನೋಡವನಲ್ಲಾ ॥
ಹತ್ತಿ ಹೊಲಕ ಬರತೇನಂತ ಅತ್ತ ಅತ್ತ ಹೇಳಿದ್ದೆಲ್ಲ
ಮತ್ತು ಎಲ್ಲಾ ಕಳದೆ ಉಪಕಾರಾ
ಬಿಸಲ್ಹತ್ತಿ ನಿನಗಂತ ಚೆಲ್ಲಿನ್ನ ಪಾವಶೇರಾ
ಹಂಚಿದೇನ ಹತ್ತಿ ನಿನಗಾಗಿ
ಇಂಚಲದ ಬಂಕನಾಥನ ಆಣಿ ಬಲ್ಲೇನಾ ॥

ಏರ

ಒಲ್ಲೆನೆನ್ನುವ ಮಾತ ನಲ್ಲ ಆಡಬ್ಯಾಡೋ
40

ಚಾಲ

ಚದುರ ನಿನಮ್ಯಾಲ ನೆದರ ಇಟ್ಟಿ ನಾ
ಪದರ ಹಾಸಿ ಪಂಥ ಗೆಟ್ಟೆನೊ ನಿನ್ನ
ಧರದೋಳಗಧರ ಇಟ್ಟೆನೋ
ಸದರ ಸುದ್ದ ಹಾದರ ಮುದ್ದ ಕೊಟ್ಟೇನೋ
ಮದನ ಪ್ರಾಯವೆನ್ನ ಅದನೂ ನೋಡೋ
ನಿನ್ನೆದಿಗೆ ಎದಿ ಹಚ್ಚಿ ಅವಚೇನೋ
ಗಟ್ಟಿ ಕುಚಾ ತಟಾತಟಾ ಹೊಡೀತಾವ
ಚಟಾ ಹಚ್ಚಿ ಇಷ್ಟಕ ನೀನು ಹಟಾ ಮಾಡಿ ಶೆಟದ ಕಾರಣೇನು
ಪಟುತರದ ಮಾತನಾಡಬಲ್ಲವನು
ಕುಟಿಲ ಕುಂತಳಿಗ ಗಟಿಸೋ ಈ ದೇಹಾ
ಪಟಾನೇ ಬಿಟ್ಟ ಹೋಗಬ್ಯಾಡೋ ನೀನು
ಬಾರೋ ಸೂರಾ ಬಿದ್ದು ಧೀರ ಮುಖ ನೋಡೋ ನಂದು
ಮೂರು ಲೋಕವು ಬೆಂದು ಮಾರಿ ನೋಡುವೆ ನಿಂದು

ಏರ

ಹರದಾಡಿ ಹಾತೊರೆದು ಕಾಮ
ಸುರಿಸುತಲಿ ಬಂದು ಮರತೇನೋ ಮನಿಯ ಮರತೇನೋ ॥

41

ಚಾಲ

     ಚಿತ್ತಿಟ್ಟಕೇಳ ಹೆಣ್ಣ ಕುತ್ತಿಗೆಯ ಕೊಯಿಸಿದಳು
ಮೃತ್ಯು ನಿಮ್ಮ ರತ್ನಿ ಎಂಬವಳು
ಕೋಮಲಾಂಗಿ ಕೋಮರಾಮಂಗೆ ಬಯಸಿದಳು
ಕಾಮಾತುರಕೊಳಗಾಗಿ ರತ್ನಿ ಬ್ರಮಾ ಆದಾನೋ ಮಗ ಅದಕ
ಇದ ನಿಮ್ಮ ಹೆಂಗಸರ ಜಾತಿ ಅಜ್ಞಾನಿ
ಮಗನೆಂದು ನೋಡದಲೆ ಭೋಗಕ್ಕೆ ಕರದಾಳು
ಸೋಗ ಮಾಡಿದಳು ಸಂಗ ಜಾಣೆ
ಒಲ್ಲೆನೆಂದನೊ ರಾಮ ಫುಲ್ಲಲೋಚನೆ ತಾನೇ
ಹಲ್ಲ ಕಡದ ಮಾಡಿ ಶಪತ ನಾ ನಿನ್ನ ಕೊಲಿಸುವದೀಗ
ಖಚಿತಾ ಹೀಗೆಂದು ಬಲ್ಲಂಗ ಆಡಿದಳು
ಮತ್ತಾ ಗಂಡಗ್ಹೇಳಿ ನಿನ್ನ ಚೆಂಡ ಹೊಡಿಸುವೆ
ಮಲಿಯ ಹಿಂಡಿ ಹಿಚಕು ಈಗ ತುರ್ತು
ಮಂದಗಮನಿಯೆ ತಾನು ಬಂದಾಳು ಕುವರಗೆ ಅಂದಾಳು
ಹೀಗೆಂದು ರಾಯ ನಿನ್ನ ಅಯ್ಯ ಕಂದ, ಮಾಡಿದನೋ
ಅನ್ಯಾಯ ಬಂದೆನ್ನ ಮಂದಿರದಿ ಹಿಡಿದಾನೋ
ಕೈಯ ಬಿಗಿದಪ್ಪಿ ನಿನ್ನ ಮಗನು ನಗಿಗೇಡ ಮಾಡಿದನು

ಏರ

ಲಗುಬಗೆಯ ಹೊಡಿಸೇನ ತಲಿಯ
ಮೃತ್ಯು ನಿಮ್ಮ ರತ್ನಿ ಎಂಬವಳು
ಪುತ್ರನ ಚಿತ್ತ ಬಾಜೂಕ ಕರದಾಳೋ ॥

42

ಚಾಲ

ಕರದ ಬ್ಯಾಸತ್ತೇನ ಹೊರಳಿ ನೋಡವಲ್ಲಿ
ದುರುಳುತನ ಯಾಕ ಬಿಡವಲ್ಲಿ
ಸಲಿಗೆ ಹಚ್ಚಿ ನನ್ನ ಬಲಿಗೆ ಹಾಕಿದೋ
ನೆಲೆಯ ಹಚ್ಚಲಿಲ್ಲ ಕೈ ಬಿಟ್ಟೆ
ಉಲುವ ತೆಗ್ಗಿ ಮಂದಿ ಮಲಗಿದ ಮ್ಯಾಲ
ಚಿಲಕ ಹಿಡಕೊಂಡು ನಿಲತಿದ್ದೆ
ಸೊಟ್ಟ ನಮ್ಮವರ ಕೇಳಿದ್ರ ಗುಂಮಿಗಿಮ್ಯಾಕಂತ
ಸುಮ್ಮನ್ಹೋಗತಿದ್ದೆಲ್ಲೋ ದಾಟಿ
ಅಂತ ಬಂದವ ಸ್ವಂತ ದಾಟಿ ನಿನ್ನ ಹಂತೇಕ ಬರತಿನ್ನಿ ಮರತ ಬಿಟ್ಟೆ ॥

ಏರ

ಬಾರೋ ಶೂರಾ ಎದ್ದು ಧೀರಾ ಮುಖನೋಡು ನಂದು
ಮೂರು ಲೋಕವು ಬೆಂದು ಮಾರಿ ನೋಡುವೆ ನಿಂದು
ಹರದಾಡಿ ಹಾ ತೊರೆದು ಸುರಿಸುತಲಿ ಬಂದು
ದುರುಳತನ ಯಕ ಬಿಡವಲ್ಲಿ
ನಿನ್ನ ಬಿಟ್ಟು ಅನುವಿಲ್ಲೋ ನನಗ ಮಾರಾಯಾ ॥

43

ಚಾಲ

ಮಾರಾಯನೆಂಬಾಕೆ ಮಾರನಾಟವ ಮಾಡ
ಮರಿ ನನ್ನ ಸಂಗಕ ಕರಿ ಬ್ಯಾಡ
ಭಂಗ ಕುಂತಳಿ ನಿನ್ನ ಸಂಗ ಮಾಡಿ
ಕಂಗೆಟ್ಟು ಅಡವಿಯನ್ನು ಸೇರಿದರು
ಸ್ತ್ರೀ ಸಂಗ ರಘುವೀರರೆಂಬವರು
ಕಂಗೆಟ್ಟು ಅರಣ್ಯಕ ನಡದಾರು ತಿಂಗಳ
ದಶರಥನ ಅರ್ಧಾಂಗಿ
ಅವರು ಹಂಗ ಹರದು ಶ್ರಾಪ ಕೊಟ್ಟಾರು
ಸುಂದರಮಗ ರಾಮಚಂದ್ರ ಲಕ್ಷ್ಮಣ ಅಂದ ಅಡವಿ ಪಾಲಾದ್ರು
ಎಂದೆಂದು ಇಂಥಾ ತೊಂದರಿ ಮಾಡತಾರ ಹೆಂಗಸರು
ಎಂದೆಂದು ನಂಬಬಾರದು ಜನರು
ಬಂದೊಡಿತನ ಮಾಡಿ ಕೊಂಡು ಬಿಡುವರು ॥

ಏರ

ಅವರಂದಾಜ ತಿಳದು ಮಾಡು
ಮರಿ ನಿನ ಸಂಗ ಕರಿಬ್ಯಾಡ
ನಿನ ಕೂಡ ಬರಲಾರೆ ಚ್ಯಾಲಿ ಉರಿಯಬ್ಯಾಡ ॥

44

ಚಾಲ

ವಸುಧೆಯೊಳು ಲೇಸಾದ ದಶರಥ ರಾಯನಿಗೆ
ಹೆಸರಾದ ಮಕ್ಕಳು ವಸುಧೆಯೊಳಗೆ
ತಾಯಿ ಸೀತಾನ ನ್ಯಾಯವಿಲ್ಲದೆ
ಅನ್ಯಾಯದಿಂದ ಆಕೆಯ ಕಡೆಯಿಂದ
ಅತಿ ಸಾಯಮಾಡಿ ಪವನಜ ತಂದ
ದೇಹ ಸಹಿತ ರಘುವೀರ ಅಗ್ನಿ ಕೆಡವಿದಾ
ಸೀತಾಬಾಯಿ ಬಂದಾಳ ಆನಂದ ॥
ಜ್ಞಾನಮತಿ ಜಾನಕಿ ತಾ ದಹನ ಆಗಲಿಲ್ಲ
ಪ್ರಾಣ ಕಾಯದಾ ಮಾನು ಭಾನೂ
ಶಂಕೆ ಅಲ್ಲಗಳದ ಸಾಹಸ ಆಗಿ ಬಂದಾಳಾ ತನ್ನ ಗುಣದಿಂದ
ತಿಳದ ನೋಡು ನೋಡು
ಹೆಣ್ಣಿನಾಗೆ ಮಾಡಬ್ಯಾಡಾ ನಿಂದಾ ॥

ಏರ

ಕರುಣಿಟ್ಟು ಕೊಡೋ ನೀ ಬಂದು
ವಸುಧೆಯೊಳು ಪುಟ್ಟಿ ನಾಲ್ವರು ಸೀತಾಗ
ಅಸದಳವ ಯಾಕ ತೆರವಿದರು ॥

45

ಚಾಲ

ತಿರಗಿ ಮಾತಾಡಿದರ ಏರಗಟ್ಟಿ ಇರತೇನ
ಬರಬರತ ನೀನು ಮುದಿಕ್ಯಾದೆ ॥
ಬಾರಿಬಾರಿಗಿ ಕಬರ್ಹಾರಿ ಬೀಳತಿ
ಎರಡು ಕುಚಾಗಳ ತೆರಕೊಂಡ
ಮಾರಿ ನೋಡತಲೆ ಹರಕೊಂಡ ಡವಲ ಮಾಡತಿದ್ದಿ
ನೀನಾದಿ ನಾಯಿ ಕೆರಕೊಂಡು

ಏರ

ಬಿಟ್ಟ ವಿಚಾರ ಈ ಸರತೆ
ಕ್ರೂರತನಾ ಬಾಳ ಮನಗಂಡು ॥

46

ಚಾಲ

ಹಂಗ ಹರದ ಮ್ಯಾಲ ಲಿಂಗದ ಪರಿವೇನು
ಸಂಗತಿಯಿಲ್ಲದ ಹಾಕೇವ ಗುಂಡು ॥
ಈಗ ತಿಂಗಳಾತಿ ಯಾಕಳತಿ
ಬಂದ ನಮ್ಮಂಗದಾಗ ನಿಂತ ಹೊಯಕೊಂಡೆ
ಬಲು ಬಲಗಡಿಕೆ ಬೈಲಿಗೆಳೆದರೆ ಲೋಲಾಡಿಯ ನನ ಕಂಡ ಕಂಡು
ಹೋಗತೀ ಮುರಗಣದ ಗಂಟಾ ಉಗದ ಮ್ಯಾಲೇನ ಉಂಟಾ
ಅಷ್ಟು ತಿಂದೇನು ಬಂದಾ
ಬಂದ ಹಚ್ಚಿದೆ ಅಂಟಾ ನಿನ್ನ ಕಡಿಸೆಂಟಾ ॥

ಏರ

ಸುಳ್ಳ ಹೇಳತಿ ಪಂಟಾ
ಬರಬರತ ನೀನು ಮುದಿಕ್ಯಾದೆ
ನಿನ್ನಿಂದ ಹೊರತಾದೆ ನನ್ನ ಹೆಣತಿಗೆ ॥

47

ಚಾಲ

ಹೆಣತಿಯಾದರೇನು ಗೆಣತಿಯಾದರೇನು
ಗುಣವಂತನು ಸರಿಯ ಆಳುವನು ॥

ಏರ

ಗುಣವಂತನು ಸರಿಯ ಆಳುವನು
ನಿನ್ನ ಬಿಟ್ಟು ಆಗುದಿಲ್ಲೊ ಎನಗ ಮಾರಾಯಾ ॥

48

ಚಾಲ

ಬಾಲಿ ಉರಿಯುವೆ ನಾನು
ಮೂಲ ಪುರುಷನೆ ಕೇಳು ಆಲಯಕ್ಕೆ ಎನ್ನ ಕರೆದೊಯ್ಯೋ

ಏರ

ಆಲಯಕ್ಕೆ ಎನ್ನ ಕರೆದೊಯ್ಯೋ
ನಾ ನಿನ್ನ ಮಾಲಿನ್ಹಾಗ ಬಂದ ಲೋಲ್ಯಾಡುವೆ ॥

49

ಚಾಲ

ಲೋಲ್ಯಾಡು ಶೃಂಗಾರಿ ಲಾಲಿಸೆನ್ನಯ ಮಾತು
ಕೀಲು ಬಲ್ಲವಳು ಹಾದರವು

ಏರ

ಕೀಲುಬಲ್ಲವಳು ಹಾದರಕ
ಸವಿಗಾರಿ ಜಾಲ ಹಾಕಿ ಎನ್ನ ಬಿಡಲಿಲ್ಲ

50

ಚಾಲ

ಬಿಟ್ಟೇನು ನಾ ನಿನ್ನ ಆ ತ್ಪಾಟ
ಬಂಗಾರ ಮುಂದೆ ಬತ್ತೀಸ ಕೂಟ ಕಳೆಗಾರಾ
ಅಂತಿಗಂತ ಇದ್ಯೋ ನಿನ್ನ ಭ್ರಾಂತಿ ತೀರಲಿಲ್ಲೋ
ಗೆಳೆಯಾ ಸಂತೋಷ ಮಾಡಿ ಹೋಗೋ ಇಂದಿನ ರಾತ್ರಿ
ನಾವಿಬ್ರು ಏಕಾಂತದಲ್ಲಿ ಇರುವೇನ ಹೊರಬರ್ರೀ
ಧರಿಸ್ಯಾಳೋ ಗಂಧದೆಣ್ಣೆ ಒರಿಸ್ಯಾಳೊ ಸಂಪಿಗಿ ತೈಲಾ
ಬೆರಿಸ್ಯಾಳೋ ತನುಮನಾ ಉಮೇದ್ವಾರಿ
ಕಾಜಿನ ಗ್ಲಾಸು ಮೋಜಿಲೆ ನೋಡುವಳು ಗೆಣಿಯನ ಮಾರಿ

ಏರ

ಬತ್ತೀಸ ಆಟ-ಕೂಟ ಕಳೆಗಾರ
ಒಂದೊಂದು ಆಟ ತೋರೊ ವಿಪರೀತ ॥

51

ಚಾಲ

ಚೆಂದಾಗಿ ನಾವಿಬ್ರೂ ಹೊಂದಿಕೊಂಡಿರುವೇನ
ಬಂದದ್ದು ಬರಲಿ ಅದಕ್ಯಾಕ ॥
ಮನಿಯಾಗ ನಿದ ಹಿರಿತಾನ ಕೊಡತೇನ ॥

ಚಾಲ

ಹಾದಿ ವಸ್ತಿ ಬಡಸದ ಗ್ರಾಮಾ
ಕವಿಯು ಆರಾಮಾ ಮಾಡಿದ ಕೆಂಚ ನಾಯ್ಕ
ಪ್ರಭಾಬಿದ್ದಂಗ ರತ್ನದ ಬೆಳಕಾ
ಪ್ರಾಸ ಹೆಚ್ಚ ಕಡಿಮಿ ಇಲ್ಲ ಸಮತೂಕ
ಎಲ್ಲರ ಪಾದದೊಳು ಬಲ್ಲವನಲ್ಲ ನಾ ಮೂರ್ಖ
ಅಲ್ಲಮೂರ್ಖ ಬಸನಗೌಡನ ಖಣಿ ಕಲ್ಲಣ್ಣನ ಧ್ವನಿ
ಬಂಗಾರದ ಖಣಿ ಗಂಟಿ ಹೊಡದಂಗ ಹೊಡದಂಗ
ಹೋಳಿ ಪದ ಹಾಡ ಮಾಡಿ ಹೊಸದಾಗಿ
ಬಳಿಕ ಅಂಥ ಜನಾ ತಲೆದೂಗಿ ಜ್ಞಾನ ಕೊಟ್ಟಾನ ಕಲ್ಮೇಶ್ವರಾ

ಏರ

ಜ್ಞಾನಸಾಗರ ಕಾಳಪ್ಪಗ ವಶವಾಗಿ
ಕಾಮ ಕ್ರೋಧ ಮತ್ಸರಾ ನೀಗಿ
ಗುರುಭಕ್ತ ಭಜನೆ ಒಳಗಾಗಿ
ಪಾರ್ವತಿಯ ಕರುಣ ಸಾಗರ
ಪಾರ ಮಾಡೋ ಹೋಳಿ ಪದಗಳಿಗೆ ಹೋಳಿ ಪದಗಳಿಗೆ

* * *