. ಪೀಠಿಕೆಕಾವ್ಯಸ್ವರೂಪ

ಭಾಷೆಗೆ ಮನುಷ್ಯಜೀವನದಲ್ಲಿ ಬಹಳ ಮಹತ್ವದ ಸ್ಥಾನವಿದೆ; ಪ್ರಾಣಿಗಳೂ ಒಂದು ರೀತಿಯ ಅಪ್ರಬುದ್ಧ ಭಾಷೆಯಿರಬಹುದು. ಆದರೆ ಸುಸಂಸ್ಕೃತವಾದ ಭಾಷೆ ಮಾನವನ ವಿಶಿಷ್ಟ ಆಸ್ತಿ. ಇದು ಅಪ್ರಬುದ್ಧವಾದ ನುಡಿ, ಇದು ಪ್ರಗಲ್ಭ, ಇದು ದೋಷ, ಇದು ಗುಣ ಎಂಬ ಸ್ಪಷ್ಟ ಅರಿವು ಶಾಸ್ತ್ರವನ್ನು ಕಲಿತವನಿಗೆ ಮೊದಲು ಪೂರ್ವದ ಕಾವ್ಯಗಳನ್ನು ಕಲಿಯಬೇಕು (M.೭-೯).

ಕಾವ್ಯದ ವಾಕ್ಪ್ರಯೋಗದಲ್ಲಿ ಪರಿಣತಿಯೆಂಬುದು ಶಾಸ್ತ್ರಪರಿಣತಿಯಂತೆ ಕೇವಲ ಗುರೂಪದೇಶದಿಂದ ಬಾರದು. ಇದಕ್ಕೆ ಸಹಜಪ್ರತಿಭೆಯೂ ತುಂಬಾ ಅಭ್ಯಾಸವೂ ಜತೆಗೂಡಬೇಕಾಗುತ್ತದೆ. ಪ್ರತಿಭಾದರಿದ್ರರು ಕಾವ್ಯಬರೆಯಲು ಹೊರಡಬಾರದು. ಒಬ್ಬನು ಕವಿಯಲ್ಲದಿದ್ದರೆ ಏನೂ ಕೊಳ್ಳೆಹೋಗದು; ಅವನನ್ನು ಯಾರೂ ಜರೆಯರು (M-೧೦-೧೨).

ಕೇಳಿದೊಡನೆ ಜಾಣರ ಹೃದಯವನ್ನು ಸೆಳೆಯುವ ಶಕ್ತಿಯನ್ನುಳ್ಳುದೇ ಉತ್ತಮ ಕಾವ್ಯ. ಅದು ಅವರ ಎದೆಯಮೇಲೆ ಮಣಿಯಮೇಲೆ ಮಣಿಹಾರದಂತೆ ಮೆರೆಯುವುದು. ಪ್ರತಿಭಾ ಶಾಲೆಗೆ ಅದರ ಮರ್ಮ ಸುಲಭವಾಗಿ ಸಿದ್ಧಿಸುವುದು; ಇನ್ನೊಬ್ಬರ ಮಾತನ್ನು ಅನುಕರಿಸುವುದರಿಂದ ವಾಕ್ಚಾತುರ್ಯ ಸಿದ್ಧಿಸುವುದು; ಇನ್ನೊಬ್ಬರ ಮಾತನ್ನು ಅನುಕರಿಸುವುದರಿಂದ ವಾಕ್ಚಾತುರ್ಯ ಸಿದ್ಧಿಸಲಾರದು. ಮಾತಿನ ಜಾಣ್ಮೆಯಲ್ಲಿ ತಾರತಮ್ಯಗಳುಂಟು. ಮನಸ್ಸಿನಲ್ಲಿರುವುದನ್ನು ಇತರರಿಗೆ ಸೂಕ್ಷ್ಮವಾಗಿ ತಿಳಿಸುವ ಶಕ್ತಿ, ಪಿರಿದರಲ್ಲಿ ಹಿರಿದಾದ ಅರ್ಥವನ್ನಡಗಿಸಿ ಸೂಕ್ಷ್ಮವಾಗಿ ಹೇಳುವ ಕಲೆ, ಛಂದೋಬದ್ಧವಾಗಿ ಹೇಳುವ ಚಾತುರ್ಯ, ಅನೇಕ ಸರ್ಗಗಳಷ್ಟು ವಿಸ್ತಾರವಾದ ಮಹಾಕಾವ್ಯವನ್ನು ರಚಿಸುವ ಪ್ರತಿಭೆ-ಇವು ಕ್ರಮವಾಗಿ ಒಂದಕ್ಕಿಂತ ಒಂದು ಮೆಲ್ಮಟ್ಟದವಾಗಿರುತ್ತವೆ. ಮಾತುಬಲ್ಲವರು ಅನೇಕರಾದರೂ ಮಹಾಕವಿಗಳು ಮಾತ್ರ ಎಲ್ಲೋ ಕೆಲವರಷ್ಟೇ ಇರುತ್ತಾರೆ (I -೧೩-೧೭).

ಮಹಾಕವಿಗಳ ಕಾವ್ಯಗಳು ಮನುಷ್ಯರಿಗೆ ಪಾಪ-ಪುಣ್ಯ, ಹಿತ-ಅಹಿತ, ಸುಖ-ದುಃಖಗಳ ನಿಷ್ಕೃಷ್ಟ ಸ್ವರೂಪವನ್ನರುಹುವುದರಿಂದ ಪ್ರಯೋಜನಕಾರಿಗಳಾಗಿವೆ. ನೀತಿ, ಲೋಕವ್ಯವಹಾರದ ಅರಿವು, ಶಾಸ್ತ್ರವಿವೇಕ, ಅಭ್ಯುದಯ ಮತ್ತು ಪರಮಪುರುಷಾರ್ಥಗಳು ಕೂಡ ಮಹಾಕವಿಗಳ ಕೃತಿಗಳನ್ನೋದಿದವರಿಗೆ ಲಭಿಸುತ್ತದೆ. ಹೀಗೆ ಜನರೆಲ್ಲ ಬಯಸುವ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳೂ ಕಾವ್ಯದಿಂದ ಸಿದ್ಧಿಸುತ್ತವೆ. ಆದಕಾರಣ, ಅನಂತವೂ ಶಾಶ್ವತವೂ ಅದ ಕೀರ್ತಿಯನ್ನು ಬಯಸುವ ಕವಿ ಕಾವ್ಯರಚನೆಯಲ್ಲಿ ಉದ್ಯುಕ್ತನಾಗಬೇಕು (I -೧೮-೨೧).

ಕವಿಯ ಅಭಿಪ್ರಾಯಭೇದಾನುಸಾರ ಕಾವ್ಯದಲ್ಲಿಯೂ ಬೇರೆ ಬೇರೆ ಮಾರ್ಗಗಳನ್ನು ಗುರುತಿಸಬಹುದಾಗಿದೆ. ಅಲ್ಲದೆ ವಿವಿಧ ಅರ್ಥಾಲಂಕಾರಗಳಿಂದಲೂ ಶೃಂಗಾರಾದಿಗಳೂ ಎಲ್ಲವೂ ಅಲಂಕಾರವೆನ್ನಬಹುದು (M-೨೩-೨೪).

ಛಂದಸ್ಸಿನಪಾದಗಳ ನಿಯಮವಿಲ್ಲದ್ದೇ ಗದ್ಯ; ಇದಕ್ಕೆ ಸಂಸ್ಕೃತದಲ್ಲಿ ‘ಹರ್ಷಚರಿತ’ ‘ಕಾದಂಬರಿ’ಗಳೇ ಉದಾಹರಣೆ. ಅವು ಎಷ್ಟೊಂದು ಅಲಂಕಾರಗಳಿಂದ ತುಂಬಿವೆಯೆಂಬುದನ್ನು ಕವಿಗಳು ಬಲ್ಲರು. ಕನ್ನಡದಲ್ಲಿ ಗದ್ಯ-ಪದ್ಯ ಮಿಶ್ರಣವನ್ನೂ ‘ಗದ್ಯ ಕಥೆ’ಯೆನ್ನುವರು.

ಎಲ್ಲ ಶಾಸ್ತ್ರ, ಕಲೆ, ವಿದ್ಯೆಗಳನ್ನೂ ಅರಿಯದವನು (ಗದ್ಯ) ಕವಿತ್ವದಲ್ಲಿ ತೊಡಗಲಾಗದು. ಏಕೆಂದರೆ ಹಿಂದೆ ವಿಮಳೋದಯ, ನಾಗಾರ್ಜುನ ಮುಂತಾದ ಮಹಾಮಹಿಮರು ಗದ್ಯಕಾವ್ಯದ ತೂಕ ಹೆಚ್ಚುವಂತೆ ಬರೆದಿರುವರು (I -೨೬-೨೯).

ಪದ್ಯದಲ್ಲಿ ಛಂದಶ್ಯಾಸ್ತ್ರದ ನಿಯಮಗಳುಂಟು. ಬಗೆಬಗೆಯ ಅಕ್ಷರ ಹಾಗು ಮಾತ್ರಾವೃತ್ತಗಳ ವಿಧಿಯನ್ನು ಪಾಲಿಸಬೇಕಾಗುತ್ತದೆ. ಕವಿ ಸಕಲ ವಿದ್ಯಾಪಾರಂಗತನಾಗಬೇಕಾಗುತ್ತದೆ. ಕಾಳಿದಾಸ, ಮಾಘ ಮುಂತಾದವರ ಮಹಾಕಾವ್ಯಗಳಲ್ಲಿಯೂ ನೋಡಬಹುದು (I -೩೦-೩೨).

ಮಿಕ್ಕ ಭಾಷೆಗಳಿಗೆ ಒಗ್ಗದಿದ್ದರೂ ಕನ್ನಡದಲ್ಲಿ ಮಾತ್ರ ಹಿಂದಿನ ಕವಿಗಳು ಚಿತ್ತಾಣ, ಬೆದಂಡೆ ಎಂಬ ಹೊಸ ರೀತಿಯ ರಚನೆಗಳನ್ನೂ ಕಾವ್ಯವೆಂದು ಒಪ್ಪಿರುವರು. ಬೆದಂಡೆಯಲ್ಲಿ ಕಂದ, ವೃತ್ತ, ಪಾತಿಗಳಿರುವವು. ಹೆಚ್ಚಿನ ಕಂದಗಳ ಜತೆಗೆ ಅಲ್ಲಿಲ್ಲಿ ವೃತ್ತ, ಚೌಪದಿ, ಗೀತಿಕೆ, ತ್ರಿಪದಿಗಳೂ ಚತ್ತಾಣದಲ್ಲಿ ಕಾಣುವುವು (I -೩೩-೩೫).

ಕನ್ನಡನಾಡು ವಿಶಾಲವಾದುದು; ಕನ್ನಡಿಗರು ಚದುರರು, ರಸಿಕರು, ದೋಷಜ್ಞರು. ಸಂಸ್ಕೃತ ಪ್ರಾಕೃತಗಳಲ್ಲಿ ಲಕ್ಷಣಶಾಸ್ತ್ರಗಳುಂಟು, ಅದನ್ನು ಅರಿಯುವುದು ಸುಲಭ. ಕನ್ನಡದಲ್ಲಿ ಇನ್ನೂ ಇಲ್ಲ, ಜನರೇ ಗುರುಗಳು (I -೩೬-೪೨).

. ನಾನಾರೀತಿಯ ಕಾವ್ಯದೋಷಗಳು ಮತ್ತು ಅವುಗಳ ಪರಿಹಾರಕ್ರಮ

ಕಾವ್ಯದಲ್ಲಿ ಎಳ್ಳಷ್ಟು ದೋಷ ಸುಳಿದರೂ ಕಣ್ಣಿನಲ್ಲಿ ಬಿದ್ದ ಕಸದಂತೆ ಇಡಿಯ ಕಾವ್ಯವನ್ನೇ ಕೆಡಿಸುವುದು. ಆದರಿಂದ ದೋಷಗಳಿಲ್ಲದಂತೆ ಬರೆಯಬೇಕು. ಕವಿ ತನ್ನ ದೋಷವನ್ನು ತಾನೇ ಕಾಣುವುದು ಕಷ್ಟ; ಅದನ್ನು ಎರಡನೆಯವರಿಂದ ತಿಳಿದುಕೊಳ್ಳಬೇಕು (I -೪೨-೪೫).

ಕನ್ನಡದ ದೇಸಿ ಅನಂತ. ಅದರಿಂದ ಎಲ್ಲ ದೋಷಗಳನ್ನೂ ಹೆಸರಿಸಲು ವಾಸುಕಿಗೂ ಶಕ್ಯವಾಗದು. ಹಿಂದಿನವರು ಲಕ್ಷಣಗ್ರಂಥಗಳಲ್ಲಿ ಹೇಳಿರುವಷ್ಟನ್ನು ಮಾತ್ರ ಇಲ್ಲಿ ಹೇಳಲಾಗುತ್ತದೆ (I -೪೬-೪೭).

ಕೆಲವರು ಪೂರ್ವಕಾವ್ಯಗಳ ಪ್ರಯೋಗಗಳೇ ಮಾರ್ಗದರ್ಶಿಗಳೆಂದುಕೊಂಡು ದೇಸಿಯಲ್ಲವೆಂದು ಗೊತ್ತಿದ್ದರೂ ಪೞಗನ್ನಡ ಪ್ರಯೋಗಗಳನ್ನು ಬಳಸುತ್ತಾರೆ- ‘ಪೊಡವಿಪತಿ’, ‘ಗೊರವ’ ಎಂದು ಮುಂತಾಗಿ, ಇವು ಪೞಗನ್ನಡದಲ್ಲಿ ಸರಿಯೆನಿಸಿದರೂ ಹೊಸ ಪ್ರಯೋಗಕ್ಕೆ ಯೋಗ್ಯವಿಲ್ಲ (I -೪೮-೫೦).

ಸಂಸ್ಕೃತ ಪದಗಳಲ್ಲಿ ಒಗ್ಗುವವನ್ನು ಮಾತ್ರ ಕನ್ನಡದಲ್ಲಿ ಬಳಸುವುದು ಯೋಗ್ಯ; ಅಹರಹಃ; ಉಚ್ಛೈ: ಮುಂತಾದ ಅವ್ಯಯಗಳನ್ನು ಸಮಾಸ ಮಾಡದೆ ಕನ್ನಡದಲ್ಲಿ ಬೆರಸಬಾರದು. ಬೆರಸಿದರೆ ಕಿವಿಗೆ ಕರ್ಕಶವಾಗುವುದು. ಅವು ಇನ್ನೊಂದು ಸಂಸ್ಕೃತಪದದೊಂದಿಗೆ ಸಮಾಸವಾಗಿ ಬಂದರೆ ದೋಷವಿಲ್ಲ, ರಚನೆ ಚೆಲುವಾಗುತ್ತದೆ. ಕನ್ನಡ ಶಬ್ದಗಳಲ್ಲಿ ಸಮಸ್ತ ಸಂಸ್ಕೃತ ಶಬ್ದಗಳನ್ನು ಕೂಡಿಸಿಕೊಳ್ಳಬೇಕೇ ಹೊರತು, ಕನ್ನಡ-ಸಂಸ್ಕೃತ ಶಬ್ದಗಳಲ್ಲೇ ಸಮಾಸ ಮಾಡಬಾರದು. ಸಮಸ್ತ ಪದದಲ್ಲಿ ಪೂರ್ವೋತ್ತರ ಪದಗಳೆರಡೂ ಕನ್ನಡವೇ ಇರಬೇಕು ಅಥವಾ ಸಂಸ್ಕೃತವೇ ಇರಬೇಕು (I -೫೧-೬೧).

ಕಾವ್ಯದೋಷಗಳ ವಿವರಗಳು-(å)ಶ್ರುತದುಷ್ಟ ಮುಂತಾದವು-ಕಿವಿಗೆ ಹಿತವೆನಿಸದ ನುಡಿಜೋಡಣೆಗಳ ವಿವರಣೆ (M-೬೨-೬೭); ಇವೂ ದುಷ್ಕರ ಚಿತ್ರಕಾವ್ಯಗಳಲ್ಲಿ ಮಾತ್ರ ದೋಷವೆನಿಸವು; (I-೬೮). (ಜಿ)ಯತಿಭಂಗ ಮುಂತಾದವು (I -೬೯-೧೧೨) ಬಂದರೆ ಇವೆಲ್ಲ ಕಾವ್ಯವಧುವಿನ ಪ್ರಾಣವನ್ನೇ ಹೀರುವಂತಹವು (I -೭೦); ತ್ಯಾಜ್ಯ. (iii) ಕಾರಕ, ವಚನ, ಗುರು-ಲಘು ಮುಂತಾದ ವ್ಯಾಕರಣ ದೋಷಗಳು.

.ಕಾವ್ಯಾಲಂಕಾರಗಳ ವಿವೇಚನೆ

ಕಾವ್ಯದಲ್ಲಿ ಶೋಭೆಯನ್ನುಂಟುಮಾಡುವ ಧರ್ಮಗಳೇ ಅಲಂಕಾರಗಳು. ಅವುಗಳಲ್ಲಿ ಮುಖ್ಯವಾಗಿ ಎರಡು ಬಗೆ-‘ಶಬ್ದಾಲಂಕಾರ’ ಮತ್ತು ‘ಅರ್ಥಾಲಂಕಾರ’ ಎಂದು.

ಇವುಗಳಲ್ಲಿ ಎರಡನೆಯದೇ ಮೊದಲನೆಯದಕ್ಕಿಂತ ಪ್ರಧಾನ ((II -೧-೩).

ಜಿ) ಶಬ್ದಶೋಭೆಗೆ ಬಾಧಕಗಳು :

ಅರ್ಥಕ್ಕೆ ತಕ್ಕುದಾದ ಪದದ ಆಯ್ಕೆ ಮುಖ್ಯ (II-೫); ‘ಬರಿಸಿ+ಕ್ಷಿತಿಪತಿಯಂ’ ಎಂಬಂತೆ ಸರ್ವಲಘುವಾದ ಪದದ ಮುಂದೆ ಒತ್ತಕ್ಷರದಿಂದ ಮೊದಲಾಗುವ ಪದವನ್ನಿರಿಸಲಾಗದು. ಇದು ಸೂಕ್ತಮಾರ್ಗ (MM-೬-೮); ಕ್ರಿಯಾವಿಶೇಷಣವನ್ನು ಹೇಳುವುದಾದರೆ ಒಂದನ್ನೇ ಹೇಳಿದರೆ ಯೋಗ್ಯ; ಹೆಚ್ಚಾದರೆ ಹಿತವಲ್ಲ-‘ವಿನೋದದಿಂದುರುಮುದದಿಂ’ ಎಂಬಂತೆ; ಅದನ್ನು ‘ವಿನೋದದಿಂ ಜನಿತಮುದಂ’ ಎಂಬಂತೆ ತಿದ್ದಿದಾಗ ಎರಡನೆಯದು ವಿಶೇಷಕ್ಕೆ ನೇರವಾಗಿ ಅನ್ವಯಿಸುವಂತಾಗುತ್ತದೆ. (I-೯-೧೨); ಪಾದಪೂರಣಗಳ ಬಳಕೆಯಲ್ಲಿ ಮಿತಿಯಿರಬೇಕು; ‘ಸ್ವಯಂವರ- ಮಹೋತ್ಸವ-ವಿವಾಹ’ ಎಂಬಲ್ಲಿ ಪುನರುಕ್ತಿ ಪಾದಪೂರಣಕ್ಕಾಗಿರುವುದು ಸ್ಪಷ್ಟ (II-೧೩-೧೪); ಛಂದಸ್ಸಿನ ಗುರುಲಘುನಿಯಮಗಳನ್ನು ಅರಿತು ಪಾಲಿಸಬೇಕು; ಸಿಕ್ಕಂತೆ ವಿಭಕ್ತಿಪ್ರತ್ಯಯಗಳನ್ನು ದೀರ್ಘಮಾಡಬಾರದು (II -೧೫-೨೪). ಅನವಶ್ಯಕ ಪುನರುಕ್ತಿ ಸಲ್ಲದು (II -೨೬); ಅತಿಯಾಗಿ ವಿಶೇಷಣಗಳನ್ನೇ ಬಳಸಲಾಗದು (II -೨೭-೨೮); ಇವು ಎಲ್ಲಿ ಅನುಮತವೆಂಬುದರ ವಿವರಣೆ ‘ಅಂಕಚಾರಣೆ’ ಅಥವಾ ಪ್ರಶಸ್ತಿಪದ್ಯಗಳಲ್ಲಿ ಎಂದು (II -೩೯).

ಜಿ) ಶಬ್ದಾಲಂಕಾರಗಳು:

ಕನ್ನಡದಲ್ಲಿ ಪ್ರಾಸವೆಂಬ ಶಬ್ದಾಲಂಕಾರದ ವೈಶಿಷ್ಟ್ಯ, ಅದರ ಪ್ರಭೇದಗಳು ಮತ್ತು ಪ್ರಾಸಾಭಾಸಗಳು (MM-೩೦-೪೫); ಕನ್ನಡ ಕಾವ್ಯಗಳಲ್ಲಿರುವ ಮಾರ್ಗಭೇದಗಳು (MM-೪೬-೫೦); ಸ್ವಭಾವೋಕ್ತಿ ಪ್ರಧಾನವಾದ ದಕ್ಷಿಣಮಾರ್ಗ ಮತ್ತು ವಕ್ರೋಕ್ತಿಪ್ರಧಾನವಾದ ಉತ್ತರಮಾರ್ಗ (MM-೫೧-೫೩); ‘ಮಾರ್ಗ’ ಅಥವಾ ಬಂಧದ ದಶಗುಣಗಳೂ-ದಕ್ಷಿಣಮಾರ್ಗದಲ್ಲಿ; ಅವುಗಳ ವಿಪರ್ಯಯಗಳೇ ಉತ್ತರಮಾರ್ಗದಲ್ಲಿ ಗುಣಗಳೆನಿಸುವ ಪರಿ; ಕ್ರಮವಾಗಿ ಅವುಗಳ ಲಕ್ಷಣ ಹಾಗೂ ಲಕ್ಷ್ಯಗಳು (MM-೫೪-೯೭).

ವಿಶಿಷ್ಟ ಗುಣಗಳಿಗೆ ವಿಶಿಷ್ಟ ರಸಪ್ರಕಟನೆಯಲ್ಲಿನ ಪ್ರಾಶಸ್ತ್ಯ; ಸ್ಫುಟತೆ ವೀರರಸಕ್ಕೆ, ಮೃದೂಕ್ತಿ ಕರುಣಾರಸಕ್ಕೆ ಇತ್ಯಾದಿ-(MM-೯೯-೧೦೦).

ಕನ್ನಡ ಶಬ್ದರೂಪಗಳ ಮಾರ್ಗಾನುಗುಣ್ಯವಿಚಾರ-MM-೧೦೧-೧೧೧. ದುಷ್ಕರವಾದ ಚಿತ್ರಕಾವ್ಯಗಳ ಲಕ್ಷ್ಯ ಹಾಗು ಲಕ್ಷಣಗಳು (MM-೧೧೨-೧೫೫).

ಅರ್ಥಾಲಂಕಾರಗಳು :

ಮೂರನೆಯ ಪರಿಚ್ಛೇದವೆಲ್ಲ ದಂಡಿ-ಭಾಮಹಾದಿಗಳು ಹೇಳಿದ ಜಾತಿ(=ಸ್ವಭಾವೋಕ್ತಿ) ಉಪಮಾ ಮುಂತಾದ ಅರ್ಥಾಲಂಕಾರಗಳ ಲಕ್ಷಣ, ವಿಭಾಗ ಮತ್ತು ಉದಾಹರಣೆಗಳಿಗೆ ಮೀಸಲಾಗಿದೆ. ಹೊಸದಾಗಿ ‘ಭಾವಿಕ’ ಮತ್ತು ‘ಧ್ವನಿ’ಯೆಂಬ ಅಲಂಕಾರಗಳೂ ಸೇರಿ ಒಟ್ಟು ಅಲಂಕಾರಿಗಳ ಸಂಖ್ಯೆ ಇಲ್ಲಿ ಮೂವತ್ತಾರು ಆಗುತ್ತದೆ.[29] ಗ್ರಂಥಕಾರನ ದೃಷ್ಟಿಯಿಂದ ಕವಿಯ ಅಭ್ಯಾಸಕ್ಕೆ ಅತ್ಯಂತ ಉಪಯುಕ್ತವಾದ ಭಾಗವೇ ಇದು. ಇದರಲ್ಲಿ ಹೆಚ್ಚಾಗಿ ಸಂಸ್ಕೃತದ ದಂಡಿಭಾಮಹರನ್ನು ಅನುಸರಿಸಲಾಗಿದೆ.

ವಿಮರ್ಶೆ:

ಮೇಲಿನ ವಿಷಯ-ಸಂಗ್ರಹದಿಂದ ವ್ಯಕ್ತವಾಗುವ ಅಂಶಗಳನ್ನೀಗ ನಿರ್ದೇಶಿಸಬಹುದು. ಅಲಂಕಾರ, ಗುಣ, ರಸ, ಮಾರ್ಗ ಅಥವಾ ಬಂಧ ಈ ಎಲ್ಲ ಕಾವ್ಯಲಕ್ಷಣ-ಪ್ರಕ್ರಿಯೆಗಳನ್ನೂ ಸುಲಭವಾಗಿ ಹಾಗು ವಿಶದವಾಗಿ ಉದಾಹರಣೆಗಳೊಂದಿಗೆ ಬಿಡಿಸಿ ತೋರಿಸುವುದು ಗ್ರಂಥಕಾರನ ಮುಖ್ಯ ಉದ್ದೇಶವಾಗಿತ್ತೆನ್ನಬಹುದು. ಇವುಗಳ ತಾತ್ತ್ವಿಕ ನಿರೂಪಣೆ, ಚರ್ಚೆ, ವಾದ-ವಿವಾದಗಳ ಕಡೆಗೆ ಅವನ ಲಕ್ಷ್ಯ ಕಾಣುವುದಿಲ್ಲ. ಅವುಗಳಲ್ಲಿ ಕುತೂಹಲವುಳ್ಳವರು ಸಂಸ್ಕೃತ ಶಾಸ್ತ್ರಗ್ರಂಥಗಳನ್ನೇ ಓದಬಹುದೆಂದು ಅವನ ಭಾವನೆಯಿದ್ದಂತೆ ತೋರುತ್ತದೆ. ಆದರೆ ಸಂಸ್ಕೃತ ಲಕ್ಷಣಗ್ರಂಥಗಳಲ್ಲಿ ಅನುಸರಿಸುತ್ತಿದ್ದ ನಿರೂಪಣೆಯ ಕ್ರಮವನ್ನೇ ಅವನೂ ಅನುಸರಿಸರುವುದರಿಂದ ಅನಿವಾರ್ಯವಾಗಿ ಪ್ರತಿಯೊಂದಕ್ಕೂ ವಿಭಾಗ-ಪ್ರವಿಭಾಗದ ವಿಧಾನವನ್ನು ಅವನು ಬಳಸಿದ್ದಾನೆ. ಎಲ್ಲಕ್ಕೂ ಸ್ವವಿರಚಿತವಾದ ಸುಂದರ ಹಾಗು ಸಮುಚಿತ ಲಕ್ಷ್ಯಪದ್ಯಗಳನ್ನು ಕೂಡ ತಾನೇ ಒದಗಿಸಿರುವುದರಲ್ಲಿ ಗ್ರಂಥಕಾರನು ತನ್ನ ಕವಿತಾ ಸಾಮಥ್ಯವನ್ನೂ ಸಾಹಿತ್ಯದಲ್ಲಿ ಸದಭಿರುಚಿಯನ್ನೂ ಮೆರೆದಿದ್ದಾನೆ.

ಒಮ್ಮೊಮ್ಮೆ ಈತನ ನಿರೂಪಣಕ್ರಮದಲ್ಲಿ ಏರುಪೇರಾದಂತೆಯೂ ಭಾಸವಾಗಬಹುದು. ಮೊದಲ ಪರಿಚ್ಛೇದದಲ್ಲಿ ಪೀಠಿಕೆಯ ನಂತರ ದೋಷವಿವೇಚನೆ ಮಾಡಿ ಮುಗಿದ ಮೇಲೆ, ಎರಡನೆಯ ಪರಿಚ್ಛೇದದಲ್ಲಿ ಶಬ್ದಾಲಂಕಾರ ಪ್ರಸಕ್ತವಾದಾಗ ಮತ್ತೆ ಬೇರೆ ದೋಷಗಳ ವಿವರಣೆ ಬರುವುದು ಮೇಲ್ನೋಟಕ್ಕೆ ವಿಸಂಗತವೆನಿಸಬಹುದಾಗಿದೆ. ಆದರೆ ಗ್ರಂಥಕಾರನ ಶಬ್ದಾಲಂಕಾರದ ಕಲ್ಪನೆ ಬಹಳ ವ್ಯಾಪಕವೆಂದು ಮನದಂದರೆ, ಶಬ್ದ ಸೌಂದರ್ಯಕ್ಕೆ ಮಾರಕಾಂಶವನ್ನು ಮಾತ್ರ ಅಲಂಕಾರ ನಿರೂಪಣೆಗೆ ಹಿನ್ನೆಲೆಯಾಗಿ ಹೇಳುವುದರಲ್ಲಿ ಅನೌಚಿತ್ಯವೆನಿಸದು. ಪ್ರಾಸಭೇದಗಳು ಶಬ್ದಾಲಂಕಾರದ ವಿಶಿಷ್ಟಾಂಶಗಳೇ ಆಗಿರುವುದರಿಂದ ಚಿತ್ರಕಾವ್ಯದ ದುಷ್ಕರ ಪ್ರಕಾರಗಳಾದರೂ ಶಬ್ದ ಸೌಂದರ್ಯದ ಅಂಶಗಳೇ ಸರಿ. ಹಿಂದಿನ ಲಾಕ್ಷಣಿಕರ ಸಾಹಿತ್ಯಾಭಿರುಚಿಯಲ್ಲಿ ಒಗಟಿಗಲೇ ಮುಂತಾದ ಶಬ್ದಚಮತ್ಕಾರಗಳಿಗೂ, ಚಕ್ರಬಂಧದಂತಹ ಚಿತ್ರಬಂಧದಲ್ಲಿ ಅಳವಡಿಸಬಹುದಾದ ಅಕ್ಷರ ಚಮತ್ಕಾರಗಳಿಗೂ, ಪ್ರಾಸಯಮಕಾದಿಗಳಿಗೂ ಅತಿಶಯವಾದ ಮಹತ್ವವಿದ್ದುದು ನಮಗೆ ಇಂದು ಮೆಚ್ಚಿಗೆಯಾಗದೆಯೂ ಹೋಗಬಹುದು.

ಸಂಸ್ಕೃತದಲ್ಲಿ ದಂಡಿ ಮಾರ್ಗಭೇದಗಳನ್ನೂ ಗುಣವಿಶೇಷಗಳನ್ನೂ ಎಲ್ಲವನ್ನೂ ಈತನು ಶಬ್ದಾಲಂಕಾರದ ಪರಿಚ್ಛೇದದಲ್ಲಿ ಅಡಕಮಾಡಿರುವುದು ಕೂಡ ಅಷ್ಟೊಂದು ಶಾಸ್ತ್ರೀಯವೆನ್ನುವಂತಿಲ್ಲ. ಏಕೆಂದರೆ ಸಂಸ್ಕೃತ ಲಾಕ್ಷಣಿಕರು ತಿಳಿದಂತೆ ಅಲಂಕಾರದಷ್ಟೇ ಸ್ವತಂತ್ರವಾದ ಮತ್ತೊಂದು ಕಾವ್ಯಾಂಶ ಗುಣ. ಗುಣ ಎಂದೂ ಶಬ್ದಾಲಂಕಾರದಲ್ಲಿ ಅಂತಗರ್ತವಾಗಲಾರದು. ಕವಿರಾಜಮಾರ್ಗಕಾರನಿಗೆ ಕೂಡ ಗುಣಗಳು ವಿಶಿಷ್ಟ ರಸಪ್ರಕಾಶಕಗಳೆಂಬ ಅರಿವಿದೆ. ಆದರೂ ಅವನೇಕೆ ಈ ಪರಿಚ್ಛೇದದಲ್ಲಿ ಅವನ್ನು ಪ್ರತಿಪಾದಿಸಿದನೋ ಹೇಳುವುದು ಕಷ್ಟ. ಅದೂ ಅಲ್ಲದೆ ಕನ್ನಡ ಭಾಷಾಪ್ರಯೋಗದ ಪ್ರಾದೇಶಿಕ ಭೇದಗಳು ದಂಡಿ ಹೇಳುವ ವೈದರ್ಭ-ಗೌಡಮಾರ್ಗಗಳಿಗೆ ಸಂವಾದಿಯಾಗಿಯೇ ಇದ್ದವೆಂದು ನಂಬುವುದೂ ಕಷ್ಟವೇ.

ಹಾಗೆಯೇ ದಂಡಿ ವಿಶಿಷ್ಟ ರಸಗಳನ್ನು ಅರ್ಥಾಲಂಕಾರಗಳೆಂದು ನಿರೂಪಿಸಿದ್ದನ್ನು ಇವನು ಅನುಸರಿಸದೆ ಕೈಬಿಟ್ಟಿದ್ದಾನೆ; ಇವನ ಅಭಿಪ್ರಾಯದಲ್ಲಿ ರಸಗಳ ಸ್ಥಾನವೇನೆಂದು ತಿಳಿಯುವುದು ಕಠಿಣವಾಗಿದೆ.

‘ಧ್ವನಿ’ಯನ್ನು ಒಂದು ಅಲಂಕಾರವೆಂದಿರುವುದು ಈ ಗ್ರಂಥಕಾರನ ನೂತನ ವಿಚಾರಸರಣಿಗೆ ದ್ಯೋತಕವಾಗಿದೆ. ಅವನು ಕೇವಲ ದಂಡಿಯ ಪ್ರಶಂಸೆಯಲ್ಲಿ ಇತರರ ಕಾವ್ಯಚಿಂತನೆಗಳನ್ನು ಕಡೆಗಣಿಸಿರಲಿಲ್ಲವೆಂಬುದು ಇದರಿಂದ ಸೂಚಿತವಾಗುತ್ತದೆ.

ಇಷ್ಟಾದರೂ ಆಳವಾದ ತಾತ್ತ್ವಿಕ ಚಿಂತನೆಗೆ ಇಲ್ಲಿ ಎಡೆಯಿಲ್ಲವೆಂಬುದನ್ನು ಮರೆಯಬಾರದು. ಇದ್ದಿದ್ದರೆ ರಸ, ಧ್ವನಿ, ಮಾರ್ಗ, ಗುಣ, ಚಿತ್ರ ಮುಂತಾದ ಪ್ರಕ್ರಿಯೆಗಳನ್ನೆಲ್ಲ ‘ಅಲಂಕಾರ’ವೆಂಬ ಒಂದೇ ಜಾತಿಯಲ್ಲಿ ಅವನು ಸೇರಿಸುತ್ತಿರಲಿಲ್ಲ. ಇಲ್ಲಿ ಹೀಗೆ ‘ಅಲಂಕಾರ’ ಶಬ್ದವನ್ನು ಸೌಂದರ್ಯಾಂಶವೆಂಬ ವಿಶಾಲವಾದ ಅರ್ಥದಲ್ಲಿ ಬಳಸಲಾಗಿದೆ. ಕಾವ್ಯದಲ್ಲಿ ಯಾವ ರೀತಿಯ ಚೆಲುವು ಕಂಡರೂ ಅದೆಲ್ಲ ‘ಅಲಂಕಾರ’ವೇ; ಚೆಲುವಿಗೆ ಯಾವ ರೀತಿಯಿಂದ ಹಾನಿಯೊದಗಿದರೂ ಅದೆಲ್ಲ ‘ದೋಷ’ವೇ. ಚೆಲುವನ್ನೇ ಬಂಧಗತವಾದಾಗ ಗುಣವೆಂದೂ, ಕಥಾವಸ್ತುಗರ್ಭಿತವಾದಾದ ರಸವೆಂದೂ, ಅರ್ಥವೈಚಿತ್ರ್ಯಗತವಾದಾಗ ಅರ್ಥಾಲಂಕಾರವೆಂದೂ ಶಬ್ದವೈಚಿತ್ರ್ಯಗತವಾದಾಗ ಶಬ್ದಾಲಂಕಾರವೆಂದೂ ಬಹುಸ್ಥೂಲವಾಗಿ ಭಾವಿಸಿದಂತಿದೆ.

ಗುರುಲಘುಗಳಿಂದಾದ ವರ್ಣಯೋಜನೆಯಲ್ಲಾಗಲಿ, ವರ್ಣಗಳ ಸಂಧಿಯಲ್ಲಾಗಲಿ, ಛಂಃಪ್ರಯೋಗದಲ್ಲಾಗಲಿ, ದೇಸಿಯ ಶಬ್ದರೂಪಗಳಲ್ಲಾಗಲಿ, ಸಮಾಸದ ಘಟಕಗಳಲ್ಲಾಗಲಿ, ವಿಶೇಷ್ಯ-ವಿಶೇಷಣಗಳ ಬಳಕೆಯಲ್ಲಾಗಲಿ, ವಚನವಿಭಕ್ತಿಕಾರಗಳ ವ್ಯಾಕರಣಾಂಶಗಳಲ್ಲಾಗಲಿ, ಉದ್ದೇಶ-ಪ್ರತಿನಿರ್ದೇಶ ಕ್ರಮದಲ್ಲಾಗಲಿ, ಸಮುಚ್ಛಯಗಳ ಬಳಕೆಯಲ್ಲಾಗಲಿ, ಗ್ರಾಮ್ಯೋಕ್ತಿಯಲ್ಲಾಗಲಿ-ಎಷ್ಟೊಂದು ರೀತಿಯಲ್ಲಿ ಕನ್ನಡ ಭಾಷಾಪ್ರಯೋಗ ಮಾಡುವಾಗ ದೋಷಗಳ ಶಕ್ಯವೋ ಅಷ್ಟನ್ನೂ ಒಂದಿಲ್ಲೊಂದು ಕಡೆ ಪ್ರತಿಪಾದಿಸುವ ಆಶಯ ಈ ಗ್ರಂಥದುದ್ದಕ್ಕೂ ಕಾಣಬರುತ್ತದೆ. ಇದನ್ನವನು ಕೇವಲ ತನ್ನ ಸ್ವಪ್ರತಿಭೆಯಿಂದ ಸಮರ್ಥವಾಗಿ ಸಾಧಿಸಿದ್ದಾನೆ. ಕವಿರಾಜಮಾರ್ಗದ ಅಭೂತಪೂರ್ವ ವೈಶಿಷ್ಟ್ಯವಿರುವುದೆಲ್ಲ ಇಲ್ಲಿಯೇ ಸರಿ. ಈ ಗುಣ-ದೋಷವಿವೇಚನೆಯ ‘ಮಾರ್ಗ’ವೆಂಬ ಹೆಸರಿನಿಂದಲೇ ವ್ಯವಹರಿಸಿರುವುದು ಕಾಣುತ್ತದೆ. ಆದ್ದರಿಂದಲೇ ಗ್ರಂಥಕ್ಕೆ ಹೆಸರು ಕೊಡುವಾಗ ಸಂಸ್ಕೃತ ಲಾಕ್ಷಣಿಕರಂತೆ ‘ಕಾವ್ಯಾಲಂಕಾರ’ ಎಂದಾಗಲಿ ‘ಕಾವ್ಯಾದರ್ಶ’ ಎಂದಾಗಲಿ ಕೇವಲ ಕಾವ್ಯಪರವಾದ ‘ಮಾರ್ಗ’ಪದವನ್ನು ಅದರಲ್ಲಿ ಪೋಣಿಸಿಟ್ಟಿದ್ದಾನೆ. ಈ ಗ್ರಂಥದಲ್ಲಿ ಬರುವ ಮಾರ್ಗ-ಶಬ್ದಕ್ಕೆ ದಂಡಿಯ ಗ್ರಂಥದಲ್ಲಿ ಕಾಣುವ ಸೀಮಿತ ಅರ್ಥಕ್ಕಿಂತ ಬಹುಗುಣವಾದ ವೈಶಾಲ್ಯವಿದೆ. ಅಂತೆಯೇ ‘ಮಹಾಕವಿಗಳ ಮಾರ್ಗ’ (ಅಥವಾ ದೋಷವಿಮುಕ್ತ, ಗುಣಭೂಯಿಷ್ಠ, ರಸಪೂರ್ಣ, ಅಲಂಕಾರ-ಸರಣಿ) ಎಂಬ ವಿಶಾಲಾರ್ಥದಲ್ಲಿರುವ “ಕವಿರಾಜಮಾರ್ಗ” ಎಂಬ ಹೆಸರು ಈ ಲಕ್ಷಣಗ್ರಂಥಕ್ಕೆ ಅತ್ಯಂತ ಸಮೀಚೀನವೂ ಅನ್ವರ್ಥಕವೂ ಅಭೂತಪೂರ್ವವೂ ಆಗಿದೆ.

ಸಂಸ್ಕೃತ ಆಕರಗಳಲ್ಲಿಲ್ಲದ, ಇಲ್ಲಿ ಮಾತ್ರ ಗೊಚರವಾಗುವ, ಈ ಕನ್ನಡ ಕಾವ್ಯದ ಲಕ್ಷಣಬದ್ಧ ‘ಮಾರ್ಗ’-ಪರಂಪರೆ ಚಮಪೂಕೃತಿಗಳಲ್ಲಿ ಮೈದಾಳಿ ಸಾಹಿತ್ಯಸಮೃದ್ಧಿಯನ್ನೇ ಸಂಪಾದಿಸಿಕೊಟ್ಟುದನ್ನು ಬರೆದ ಪಂಪಾದಿ ಮಹಾಕವಿಗಳೆಲ್ಲ ‘ಮಾರ್ಗ’ ಕವಿಗಳೇ. ಅವರು ಕೂಡ ಮೇಲಿಂದಮೇಲೆ ದೇಸಿಗೆ ಅವಿರುದ್ಧವಾದ ಮಾರ್ಗದ ಮಹಿಮೆಯನ್ನು ತಮ್ಮ ಕಾವ್ಯಪ್ರಶಂಸಾಪದ್ಯಗಳಲ್ಲಿ ಉಚ್ಚರಿಸಿಯೇ ಇದ್ದಾರೆ. ಹೀಗೆ ಸಂಸ್ಕೃತ-ಕನ್ನಡ ಭಾಷಾ ಸಂಪತ್ತುಗಳ ಸುಮಧುರ ಸಹಜೀವನದ ಸೂತ್ರವನ್ನು, ‘ಮಣಿ-ಪ್ರವಾಲ’ ಶೈಲಿಯ ಮರ್ಮವನ್ನು, ಸಂಶೋಧಿಸಿ ನಿರ್ವಚನಮಾಡಿ ಮುಂದಿನವರಿಗೆಲ್ಲ ಕನ್ನಡಿಯೂ ಕೈದೀವಿಗೆಯೂ ಆಗಿರುವ ಆದ್ಯಗ್ರಂಥವೇ “ಕವಿರಾಜಮಾರ್ಗ”.

ಅನೇಕ ಕಡೆ ದಂಡಿಯ ಇಲ್ಲವೆ ಭಾಮಹನ ಲಕ್ಷಣಶ್ಲೋಕವನ್ನೋ ಇಲ್ಲವೆ ಲಕ್ಷ್ಯ ಪದ್ಯವನ್ನೋ ಈ ಗ್ರಂಥಕಾರನು ಅನುವಾದ ಮಾಡಿಕೊಂಡುದನ್ನು ಎಲ್ಲ ವಿದ್ವಾಂಸರೂ ಗಮನಿಸಿದ್ದಾರೆ. ಅಷ್ಟೇ ಅಲ್ಲ; ಭಾರವಿ, ದಂಡಿ ಮುಂತಾದವರ ಮಹಾಕಾವ್ಯಗಳಿಂದಲೂ ಕೆಲವು ಪದ್ಯಗಳನ್ನು ಈತನು ಅನುವಾದಮಾಡಿಕೊಂಡಿರುವುದು ಕಾಣಬಂದಿದೆ. ಆದರೆ ಗಮನಾರ್ಹವಾದ ಮಾತೆಂದರೆ ಸಂಸ್ಕೃತಜ್ಞರಿಗೆ ಕೂಡ ಇವು ಅನುವಾದದಂತೆ ನೀರಸವಾಗಿರದೆ, ಸ್ವತಂತ್ರ್ರ ಕನ್ನಡ ಪದ್ಯರಚನೆಯಷ್ಟೇ ಸರಸಸುಂದರವಾಗಿರುವ ಅಂಶ. ಈ ಗ್ರಂಥಕರ್ತನು ಶಾಸ್ತ್ರಾಂತರಗಳಲ್ಲಿ ನಿಜವಾಗಿ ಅಷ್ಟೇನೂ ದೊಡ್ಡ ಪಂಡಿತನಲ್ಲದೆ ಇದ್ದಿರ ಬಹುದಾದರೂ ಅವನೊಬ್ಬ ಶ್ಲಾಘ್ಯನಾದ ಸಹಜಕವಿಯಾಗಿದ್ದನೆಂಬುದನ್ನು ಯಾರೂ ಪ್ರಶ್ನಿಸುವಂತಿಲ್ಲ. ಅಲಂಕಾರವಲ್ಲದ ಕಾವ್ಯೋಪಯೋಗಿಯಾದ ಛಂದಸ್ಸು, ವ್ಯಾಕರಣಗಳಲ್ಲೂ ಅವನು ನಿಶಿತಮತಿಯಾಗಿದ್ದುದು ಹೆಜ್ಜೆ ಹೆಜ್ಜೆಗೂ ಕಾಣಬರುತ್ತದೆ.