1. ಬನ್ನಿ ಮುಡಿಯುವ ಹಾಡು

ಬನ್ನಿ ಮುಡಿಯುನ ಬಾರ ಕೋಲು ಕೋಲ
ಚಿನ್ನ ತರವುನ ಬಾರ ಕೋಲು ಕೋಲ           ॥

ಊರ ಸೀಮೆಯ ದಾಟಿ ಕಾಡ ಗಡಿಯನು ಸೇರಿ
ಕಾಡ ಸಂಪತ್ತ ತರಬನ್ನಿ ॥ಕೋಲು ಕೋಲ                                                            ॥

ಬೆಳೆದ ಬೆಳಸಿಗೆ ಬನ್ನಿ ಭೂಮಿ ತಾಯಿಗೆ ನಿ
ನಾಡ ಸಂಪತ್ತ ಬೆರಿ ಬನ್ನಿ ॥ಕೋಲು ಕೋಲ                                                                   ॥

ಅರಸನ ಅಂಗಳಕ ಸರಸ ರಂಗ ಹೊಯ್ದು
ಹೊರಸಿ ತಂದಾರ ಸಿರಿ ಬನ್ನಿ ॥ಕೋಲು ಕೋಲ                                                             ॥

ದೇವ ದೇವರ ಬನ್ನಿ ದೇವ ದೈವದ ಬನ್ನಿ
ನಾವು ಮುಡಿವೂದು ನಮ ಬನ್ನಿ ॥ಕೋಲು ಕೋಲ                                                        ॥

ಹಡೆದ ತಾಯಿಗೆ ಬನ್ನಿ ಹಡೆದ ತಂದೆಗೆ ಬನ್ನಿ
ಪಡೆದ ಗಂಡನಿಗೆ ನಮಬನ್ನಿ ॥ಕೋಲು ಕೋಲ                                                               ॥

ಚಿನ್ನದ ಕೈಗಡಗ ಚನ್ನೇರು ಇಟಗೊಂಡು
ಚಿನ್ನದಾಭರಣ ನಡ ಬಾಗಿ ॥ಕೋಲು ಕೋಲ                                                                  ॥

ಗೆಜ್ಜಿ ಹೆಜ್ಜೀ ಹಾಕಿ ಗುಜ್ಜೇರು ಕುಣಿದಾರ
ವಜ್ಜರ ವಡ್ಯಾಣ ಘಿಲ ಘಿಲ ॥ಕೋಲು ಕೋಲ                                                                  ॥

ನಾವು ಕುಣಿಯಣ ಬನ್ನಿ ಹ್ಯಾಂವ ಮರೆಯುಣ ಬನ್ನಿ
ಜೀವ ಒಂದಾಗಿ ಇರಬನ್ನಿ ॥ಕೋಲು ಕೋಲ                                                                    ॥

ಇಂದ ಮುಡಿಯುವ ಬನ್ನಿ ಮುಂದೆ ಮಗ ಹೊನ್ನಾಗಿ
ಕುಂದಣದಾರೂತಿ ಬೆಳಗೂದಕ ॥ಕೋಲು ಕೋಲ                                         ॥

2. ಬನ್ನಿ ಹಾಡು

ಬನ್ನಿಯ ಗಿಡದಾಗ ಬಾಣ ಇಟ್ಟೀವಿ ತಾಯಿ
ಯಾರೂ ಬಂದರೂ ಕೊಡಬೇಡ  ಹಡದಮ್ಮ
ಅರ್ಜುನ ಬಂದರ ಕೊಡಬೇಕ

ಕಲ್ಲ ಕಡಬ ಮಾಡಿ ಮುಳ್ಳ ಶ್ಯಾವಿಗಿ ಮಾಡಿ
ಬನ್ನಿಯ ಎಲಿಯ ಎಡಿಮಾಡಿ  ಪಾಂಡವರು
ಉಂಡು ಹೋಗ್ಯಾರೋ ವನವಾಸೊ

ಬನ್ನಿಯ ಗಿಡದಾಗ ಬೆಳ್ಳಿಯ ಗುಡಗುಡಿ
ಬಂಗಾರ ಚಿಲುಮಿ ನವರತನೊ  ಪಾಂಡವರು
ಸೇದಿ ಹೋಗ್ಯಾರೋ ವನವಾಸೊ

ಬನ್ನಿಯ ಗಿಡ ಕಡಿದು ಬಣ್ಣದ ಕೂರಿಗಿ ಹಾಸಿ
ಮಂಡಿ ಕಟ್ಟಿಸಿದೆ ಬಿಗಬಿಗದು  ಮುತ್ತೈದಿಯ
ಉಡಿಯ ತುಂಬಿಸಿದೆ ಕೂರಿಗ್ಯೊ

ಬನ್ನಿಯ ಗಿಡ ಕಡಿದು ಬಣ್ಣದ ಕೂರಿಗಿ ಮಾಡಿ
ಸಣ್ಣ ಸೆಲ್ಲೆದಲೆ ಉಡಿತುಂಬಿ  ಪಾಂಡವರು
ಹೊನ್ನ ಬಿತ್ತ್ಯಾರೊ ಹೊಳಿಸಾಲ

ಬನ್ನಿ ಮೇಟಿಯ ಹೊಡದು ಮುನ್ನೂರು ಬಸವಾನೆಕಟ್ಟಿ
ಹಾಡ್ಯಾಡಿ ಹಂತಿ ಹೊಡದೇವೊ  ಬಸವಣ್ಣ
ಕಣದಾನ ಕಂಕಿ ಉಳದಾವ

3. ಬನ್ನಿ ಹಾಡು

ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ
ಬಣ್ಣಕ ನನ್ನ ಸೂಸಿ ಚೆಲುವಿ  ದಸರೇಕ
ಬನ್ನಿ ಮುಡಿವಾಗ ಮಗ ಚೆಲುವ ॥

ಬನ್ನೀಯ ಮುಡಿಯಾಕ ಸಣ್ಣ ಸೊಸಿ ಮನಿಯಾಗ
ಕನ್ನ್ಯುಳ್ಳ ಮಗ ಮಂದ್ಯಾಗ  ಮುಡಿದಾರ
ಹೊನ್ನ ತುಂಬ್ಯಾರ ಉಡಿಯಾಗ ॥

ದಸರೇಕ ತವರೀಗೆ ಕುಸಲದಿ ನಾಹೋದೆ
ಸೊಸಿ ನೋಡಿ ಕೊಟ್ಟೆ ಹಿಡಿ ಬನ್ನಿ  ಅಣ್ಣಯ್ಯ
ಖುಸಿಲಿಂದ ಬೊಟ್ಟ ಸೊಸಿಗಿಟ್ಟೆ ॥