ಲಕ್ಷಣಗಳು: ತೀವ್ರ ರೀತಿಯ ಮಾನಸಿಕ ಕಾಯಿಲೆಯಾದ ಸ್ಕಿಜೋಫ್ರೀನಿಯಾದಲ್ಲಿ ವ್ಯಕ್ತಿಯ ಆಲೋಚನೆ-ಭಾವನೆ-ಸಂವೇದನೆಗಳು, ಮಾತು ವರ್ತನೆಗಳು ಅಸಂಬದ್ಧ ಹಾಗೂ ಅಸಾಮಾನ್ಯವಾಗಿರುತ್ತದೆ.

  • ಆಲೋಚನೆ: ತರ್ಕಬದ್ಧವಾಗಿರುವುದಿಲ್ಲ. ವಾಸ್ತವಿಕತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆಲೋಚನೆಗಳು ಅರ್ಥಹೀನವಾಗಿರುತ್ತವೆ, ವಿಚಿತ್ರವಾಗಿರುತ್ತವೆ. ಉದಾ: ಉದ್ಯೋಗ ಪಡೆಯಲು, ವ್ಯಕ್ತಿ ಯಾವುದೇ ಸಂಸ್ಥೆಗೆ ಹೋಗಿ, ತನಗೇನೂ ಗೊತ್ತಿಲ್ಲದ ಹುದ್ದೆಯನ್ನು ಕೊಡಿ ಎಂದು ಅಲ್ಲಿಯ ಕೆಲಸಗಾರರನ್ನೋ, ವಾಚ್‌ಮನ್‌ನನ್ನೋ ಕೇಳಬಹುದು! ಯಾರದೋ ಮನೆಗೆ ಹೋಗಿ, ಯಾವುದೇ ಹೆಂಗಸನ್ನು ಕಂಡು “ನೀನು ನನ್ನನ್ನು ಮದುವೆಯಾಗು” ಎನ್ನಬಹುದು. ಚುನಾವಣೆಗೆ ನಿಲ್ಲದೇ ತಾನು ಆ ಪ್ರದೇಶ-ಜನರ ಜನಪ್ರತಿನಿಧಿ ಎಂದು ಹೇಳಬಹುದು. ತಾನು ದೇವಾಂಶ ಸಂಭೂತ, ದೇವರ ಪ್ರತಿನಿಧಿ ಎನ್ನಬಹುದು.
  • ಬದಲಿಸಲಾಗದ ತಪ್ಪು ನಂಬಿಕೆಗಳು: ತನ್ನನ್ನು ಯಾರೋ ಹಿಂಬಾಲಿಸುತ್ತಿದ್ದಾರೆ. ತನ್ನನ್ನು ಕೊಲ್ಲಲು ಸಂಚು ಮಾಡುತ್ತಿದ್ದಾರೆ. ತನ್ನ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ತನ್ನ ಹೆಂಡತಿಯನ್ನು ಆಸ್ತಿಪಾಸ್ತಿಯನ್ನು ಲಪಟಾಯಿಸಲು ಯತ್ನಿಸುತ್ತಿದ್ದಾರೆ. ತನ್ನನ್ನು ಕೆಲಸದಿಂದ ತೆಗೆಯುವಂತೆ ಸುಳ್ಳು ದೂರನ್ನು ಕೊಟ್ಟಿದ್ದಾರೆ ಎಂದು ನಂಬಬಹುದು. ತನ್ನ ಗಂಡ ತನಗೆ ನಿಷ್ಠೆಯಿಂದಿಲ್ಲ, ಆತ ಸಿಕ್ಕ ಸಿಕ್ಕ ಯಾವುದೋ ಹೆಂಗಸಿನೊಂದಿಗೆ ಸಂಬಂಧವಿಟ್ಟು ಕೊಂಡಿದ್ದಾನೆ ಅಥವಾ ಈಗಾಗಲೇ ಯಾರನ್ನೋ ಮದುವೆಯಾಗಿಬಿಟ್ಟಿದ್ದಾನೆ ಎಂದು ಹೇಳಲು ತೊಡಗಬಹುದು. ಮನೆಯವರೇ ತನಗೆ ವಿಷ ಉಣಿಸಲು ರೆಡಿಯಾಗಿದ್ದಾರೆ ಎಂತಲೋ ಅಥವಾ ವಿಷವು ಈಗಲೇ ತನ್ನ ದೇಹದ ಮೂಲೆ ಮೂಲೆಗೆ ಸೇರಿ, ಹಾನಿಯುಂಟು ಮಾಡುತ್ತಿದೆ. ತನ್ನ ಜಠರ ಕುರುಳು ಸುಟ್ಟುಹೋಗಿದೆ, ಹೃದಯ ಕರಗಿಹೋಗಿದೆ, ಮೂಳೆಗಳು ಕಾಗದದಷ್ಟು ತೆಳುವಾಗಿದೆ ಎನ್ನಬಹುದು. ಯಾರೋ ತನ್ನ ದೇಹ-ಮನಸ್ಸನ್ನು ದೂರದಿಂದಲೇ ರಿಮೋಟ್ ಕಂಟ್ರೋಲರ್ ಇಟ್ಟುಕೊಂಡು ನಿಯಂತ್ರಿಸುತ್ತಿದ್ದಾರೆ ಎನ್ನಬಹುದು. ಯಾವುದೋ ಕ್ಷುದ್ರ ದೇವತೆ-ಶಕ್ತಿ ಹುಳುವಿನ ರೂಪದಲ್ಲಿ ತನ್ನ ದೇಹವನ್ನು ಪ್ರವೇಶಿಸಿ ತನ್ನ ದೇಹದ ಎಲ್ಲಾ ಅಂಗಾಂಗಗಳನ್ನು ತಿಂದು ಹಾಕಿಬಿಟ್ಟಿದೆ, ತಾನೊಂದು ನಿರ್ಜೀವ ವಸ್ತು ಎನ್ನಬಹುದು. ತನ್ನ ಆಲೋಚನೆಗಳನ್ನು ರೇಡಿಯೋ-ಟಿವಿಯಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎನ್ನಬಹುದು. ತನ್ನ ಕಿವಿ ಚಿಕ್ಕದಾಗುತ್ತಿದೆ, ತನ್ನ ಮೂಗು-ಕಣ್ಣು ನಾಲ್ಕು ಪಟ್ಟು ದೊಡ್ಡದಾಗಿಬಿಟ್ಟಿದೆ. ಕಾಲುಗಳಿಗಿಂತ ಕೈಗಳೇ ಉದ್ದವಾಗಿ ದಿನೇ ದಿನೇ ಬೆಳೆಯುತ್ತಿದೆ ಎನ್ನಬಹುದು. ತನಗೇ ವಿಶೇಷ ಶಕ್ತಿ ಸಾಮರ್ಥ್ಯವಿದೆ, ತಾನು ದೈವಾಂಶ ಸಂಭೂತ ಪವಾಡಗಳನ್ನು ಮಾಡಬಲ್ಲೆ ಎನ್ನತೊಡಗಬಹುದು. ಇಂತಹ ನಂಬಿಕೆಗಳು ನೂರಾರಿರಬಹುದು. ತಿಳುವಳಿಕೆ ಹೇಳಿ, ನಿಜ ವಾಸ್ತವಿಕತೆಯನ್ನು ತೋರಿಸಿದರೂ, ರೋಗಿ ತನ್ನ ನಂಬಿಕೆಯನ್ನು ಬದಲಿಸುವುದಿಲ್ಲ. ನಂಬಿಕೆಯಂತೆಯೇ ನಡೆದುಕೊಳ್ಳಬಹುದು. ಈ ಲಕ್ಷಣವನ್ನು Delusions ಎಂದು ಕರೆಯಲಾಗುತ್ತದೆ.
  • ಮಾತು: ಸ್ಕಿಜೋಫ್ರೀನಿಯಾ ರೋಗಿ ಮಾತೇ ಆಡದೇ ಮೌನಿಯಾಗಿರಬಹುದು. ತನ್ನ ಬೇಕು ಬೇಡಗಳನ್ನಾಗಲೀ, ತನ್ನ ಅನಿಸಿಕೆಗಳನ್ನಾಗಲೀ ಯಾರೊಂದಿಗೂ ಹೇಳದೇ ಮೂಕನಾಗಬಹುದು ಅಥವಾ ಅರ್ಥವಿಲ್ಲದೆ ಅಸಂಬದ್ಧವಾಗಿ ಮಾತನಾಡಬಹುದು. ವಟಗುಟ್ಟುವುದು, ಒಬ್ಬನೇ ಕುಳಿತು ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುಬಹುದು. ಮಾತನಾಡುವಾಗ ಆತ/ಆಕೆ ಏನು ಮಾತನಾಡುತ್ತಿದ್ದಾನೆ/ಳೆ, ಏನನ್ನು ಹೇಳಬಯಸುತ್ತಾನೆ/ಳೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಮಾಮೂಲು ಪದಗಳಿಗೆ ರೋಗಿ ತನ್ನದೇ ಆದ ವಿವರಣೆ ಮತ್ತು ಅರ್ಥವನ್ನು ಕೊಡಬಹುದು ಅಥವಾ ತನ್ನದೇ ಆದ ಪದಗಳನ್ನು ಸೃಷ್ಠಿಸಬಹುದು. ಉದಾ: ನನಗೆ ಮೈದಾನ ಮಾಡುವ ಇಷ್ಟ ಎನ್ನಬಹುದು. ಮೈದಾನ ಎಂದರೆ ಸತ್ತಮೇಲೆ ದೇಹದ ಅಂಗಾಂಗಗಳ ದಾನ ಎಂದಾಗಬಹುದು. ಅವನು ನನಗೆ ಗ್ರಾವಿಟಿ ಮಾಡಿದ ಎನ್ನಬಹುದು. ಗ್ರಾವಿಟಿ ಎಂದರೆ ಆಕರ್ಷಣೆಯಾಗಬಹುದು. ಮೋಸ ಎಂದಾಗಬಹುದು. ಕರೆಮಾಡಿದ ಎಂದಾಗಬಹುದು! ಹೀಗೆ ಸ್ಕಿಜೋಫ್ರೀನಿಯಾ ರೋಗಿಯದು ಅನಗತ್ಯ ಮಾತು, ಅರ್ಥವಾಗದ ಮಾತು, ವಿಚಿತ್ರವಾದ ಪದಜೋಡಣೆ, ಅಪೂರ್ಣ ವಾಕ್ಯಗಳು, ಒಂದು ವಾಕ್ಯದಿಂದ ಇನ್ನೊಂದು ವಾಕ್ಯಕ್ಕೆ ಸಂಬಂಧವಿಲ್ಲದ ಮಾತು, ಒಂದು ವಿಷಯದಿಂದ ಇನ್ನೊಂದು, ಇನ್ನೊಂದು ವಿಷಯದಿಂದ ಮತ್ತೊಂದು ವಿಷಯ ಬದಲಾಗುತ್ತಾ, ಕೇಳುಗರಿಗೆ ಗೊಂದಲ ಮೂಡಿಸಬಹುದು. ಕಾರಣವಿಲ್ಲದೆ ವ್ಯಕ್ತಿ ಅವಾಚ್ಯ, ಕೆಟ್ಟ, ನಾಗರೀಕ ಪದಗಳನ್ನು ಉಚ್ಚರಿಸಬಹುದು.
  • ಭ್ರಮೆಗಳು: ಸ್ಕಿಜೋಫ್ರೀನಿಯಾ ರೋಗದ ಪ್ರಮುಖ ಲಕ್ಷಣ ಭ್ರಮೆಗಳು. ರೋಗಿ ಕೇಳಿದ್ದನ್ನು, ನೋಡಿದ್ದನ್ನು ಸ್ಪರ್ಶಿಸಿದ್ದನ್ನು, ಅನುಭವಿಸಿದ್ದನ್ನು, ಬೇರೆ ರೀತಿಯಲ್ಲಿ ತನ್ನದೇ ಆದ ವಿಧಾನದಲ್ಲಿ ಅರ್ಥೈಸಬಹುದು. ಉದಾ: ಹೆಜ್ಜೆಯ ಶಬ್ದ ಕೇಳಿ, ತನ್ನನ್ನು ಹಿಡಿಯಲು, ಕೊಲ್ಲಲು ಬರುತ್ತಿರುವವರ ಸದ್ದು ಎನ್ನಬಹುದು. ಮಗು ಅಳುವ ಶಬ್ದವನ್ನು ಕೇಳಿ, ಯಾರೋ ಗೋಳಾಡುತ್ತಿದ್ದಾರೆ ಎನ್ನಬಹುದು. ಗೋಡೆಯ ಮೇಲಿನ ಚಿತ್ರವನ್ನು ನೋಡಿ ದೆವ್ವ, ರಾಕ್ಷಸ, ವಿಕೃತಾಕಾರದ ಪ್ರಾಣಿ ತನ್ನನ್ನು ಸಾಯಿಸಲು ನಿಂತಿದೆ ಎನ್ನಬಹುದು. ಮಲ್ಲಿಗೆಯ ಪರಿಮಳವನ್ನು ಹೆಣ ಸುಡುವ ವಾಸನೆ ಎನ್ನಬಹುದು. ಕತ್ತಿನ ಸುತ್ತ ಇರುವ ಮಫ್ಲರ್ ಸ್ಪರ್ಶವನ್ನು ತನಗೆ ನೇಣು ಹಾಕುತ್ತಿರುವ ಅನುಭವ ಎನ್ನಬಹುದು ಇದನ್ನು “ಇಲ್ಯೂಶನ್ಸ್” ಎನ್ನುತ್ತಾರೆ. ಅಥವಾ ಯಾವ ಶಬ್ಧ, ದೃಶ್ಯ, ವಸ್ತು, ಜನ, ವಾಸನೆ, ಸ್ಪರ್ಶ ಇಲ್ಲದಿದ್ದರೂ, ತನಗೆ ಶಬ್ದ ಕೇಳಿಸುತ್ತಿದೆ, ಜನ ವಸ್ತುಗಳು ಕಾಣಿಸುತ್ತಿದ್ದಾರೆ, ಏನೋ ಸುಟ್ಟ ವಾಸನೆ ಬರುತ್ತಿದೆ, ತನ್ನ ಮೈಮೇಲೆ ನೂರಾರು ಇರುವೆ ಜೇಡಗಳು ಓಡಾಡುತ್ತಿವೆ, ತನ್ನ ಎದೆಯನ್ನು ಯಾರೋ ತುಳಿಯುತ್ತಿರುವಂತೆ ಕಾಣುತ್ತಿದೆ ಎನ್ನಬಹುದು. ವ್ಯಕ್ತಿಗಳು ತಮ್ಮತಮ್ಮೊಳಗೆ ತನ್ನ ಬಗ್ಗೆ ಮಾತಾಡುತ್ತಿದ್ದಾರೆ. ಕೊಲ್ಲುತ್ತೇವೆ, ನಿನ್ನ ಹೆಂಡತಿಯ ಮಾನಭಂಗ ಮಾಡುತ್ತೇವೆ, ನಿನ್ನ ಮಕ್ಕಳ ಅಪಹರಣ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎನ್ನಬಹುದು. ಈ ಧ್ವನಿಗಳು ರೋಗಿಗಲ್ಲದೆ ಬೇರಾರಿಗೂ ಕೇಳುವುದಿಲ್ಲ. ಈ ಧ್ವನಿಗಳಿಗೆ ವ್ಯಕ್ತಿ ಪ್ರತಿಕ್ರಿಯಿಸುತ್ತಾನೆ. ಹೀಗಾಗಿ ವ್ಯಕ್ತಿ ಅದೃಶ್ಯ ವ್ಯಕ್ತಿ/ವ್ಯಕ್ತಿಗಳೊಂದಿಗೆ ಸಂಭಾಷಣೆ/ವಾದ ಮಾಡಬಹುದು. ಕೋಪ, ದುಃಖ, ಭಾವವನ್ನು ಪ್ರಕಟಿಸಬಹುದು. ಆತನ ಈ ವರ್ತನೆ ಸಹಜವಾಗಿ ಎಲ್ಲರಿಗೆ ವಿಚಿತ್ರವಾಗಿ ಕಾಣುತ್ತದೆ. ಈ ಲಕ್ಷಣವನ್ನು “ಹೆಲೂಸಿನೇಶನ್ಸ್” ಎನ್ನುತ್ತಾರೆ.
  • ಭಾವನೆಗಳ ಏರುಪೇರು ಹಾಗೂ ಅಸಂಬದ್ಧತೆ: ಸ್ಕಿಜೋಫ್ರೀನಿಯಾದಲ್ಲಿ ರೋಗಿಯು ಭಾವನೆಗಳನ್ನು ಅನುಭವಿಸುವ ಮತ್ತು ಪ್ರಕಟಿಸುವ ಸಾಮರ್ಥ್ಯ ಅಸ್ತವ್ಯಸ್ತಗೊಳ್ಳುತ್ತದೆ. ಒಂದು ತುದಿಯಲ್ಲಿ ರೋಗಿ ಯಾವುದೇ ಭಾವನೆ ತೋರದೆ, ಗೊಂಬೆಯಂತೆ, ನಿರ್ಜೀವ ಮುಖ ಮಾಡಿ ನಿಲ್ಲಬಹುದು. ಮತ್ತೊಂದು ತುದಿಯಲ್ಲಿ ಅತಿ ಭಾವೋದ್ವೇಗಕ್ಕೆ ಒಳಗಾಗಿ ವಿನಾಕಾರಣ/ಅಲ್ಪ ಕಾರಣಗಳಿಗೇ ಖುಷಿ/ದುಃಖ/ಭಯ/ಕೋಪಕ್ಕೆ ಒಳಗಾಗಬಹುದು. ಸ್ಕಿಜೋಫ್ರೀನಿಯಾ ರೋಗಿ ಸಮಯ-ಸಂದರ್ಭ ಮತ್ತು ವಿಷಯಕ್ಕೆ ಸಮಂಜಸವಾದ ಭಾವನೆಗಳನ್ನು ತೋರಿಸುವುದಿಲ್ಲ. ಬಹಳಷ್ಟು ಸಲ, ಅಸಂಬಂಧ ಭಾವನೆಗಳನ್ನು ತೋರುತ್ತಾನೆ. ಉದಾ: ಅತಿ ದುಃಖದ ಸನ್ನಿವೇಶದಲ್ಲಿ ವ್ಯಕ್ತಿ ನಗಾಡಬಹುದು. ಶಾಂತವಾಗಿರಬೇಕಾದ ಸಂದರ್ಭದಲ್ಲಿ ರೌದ್ರಾವತಾರ ತಾಳಬಹುದು. ಹಾಗೆಯೇ ಪ್ರಚೋದನೆ ಇಲ್ಲದೆ ಭಾವನೆಗಳು ವೇಗವಾಗಿ ಬದಲಾಗುತ್ತಾ ಹೋಗಬಹುದು.
  • ವರ್ತನೆ: ಅತ್ಯಂತ ಚಿತ್ರವಿಚಿತ್ರವಾದ, ಅಸಮರ್ಪಕ ಹಾಗೂ ಅಸಹಜವಾದ ವರ್ತನೆಗಳನ್ನು ಕಾಣಬಹುದು. ಒಂದು ತುದಿಯಲ್ಲಿ ಒಂದಿಷ್ಟೂ ಚಟುವಟಿಕೆ ಇಲ್ಲದೆ ಪ್ರತಿಮೆಯಂತೆ ಕೂರುವುದು, ನಿಲ್ಲುವುದು, ಮತ್ತೊಂದು ತುದಿಯಲ್ಲಿ ಒಂದು ಸೆಕೆಂಡ್ ಸುಮ್ಮನೇ ಇರದೆ ವಿಪರೀತ ಚಟುವಟಿಕೆಗಳನ್ನು ಪ್ರದರ್ಶಿಸಬಹುದು. ಒಂದೆಡೆ ನಿಲ್ಲದೆ, ಸುಮ್ಮನೆ ಅಲೆದಾಡಬಹುದು, ಕುಣಿಯಬಹುದು, ಚಡಪಡಿಸಬಹುದು, ಶರೀರದ ಅಂಗಾಂಗಗಳನ್ನು ವಿಚಿತ್ರವಾಗಿ ಆಡಿಸುತ್ತಾ, ಇತರರಿಗೆ ಮುಜುಗರ ತೊಂದರೆಯಾದರೂ, ನಿರ್ಲಕ್ಷಿಸಿ, ತನ್ನದೇ ಆದ ರೀತಿಯಲ್ಲಿ ವರ್ತಿಸಬಹುದು. ಯಾವುದೇ ಪ್ರಚೋದನೆಗೆ ರೋಗಿಯ ಪ್ರತಿಕ್ರಿಯೆ ಸಹಜವಾಗಿರದೇ, ಅಸಂಬದ್ಧವಾಗಿರಬಹುದು. ಆತನ ನಡುವಳಿಕೆ, ಸನ್ನಿವೇಶ-ಸಂದರ್ಭಕ್ಕೆ, ವಿಷಯಕ್ಕೆ ಸ್ವಲ್ಪವೂ ಹೊಂದುವುದಿಲ್ಲ. ವಸ್ತುಗಳನ್ನು ಸ್ಥಳಾಂತರಿಸಬಹುದು. ವ್ಯವಸ್ಥೆಯನ್ನು ಏರುಪೇರು ಮಾಡಬಹುದು, ರೋಗಿಯ ವರ್ತನೆಯಿಂದಾಗಿ ಮನೆಯವರು, ಸಹೋದ್ಯೋಗಿಗಳು, ನೆರೆಹೊರೆಯವರು, ಸಮಾಜದವರು ಅನೇಕ ರೀತಿಯ ತೊಂದರೆ, ಮುಜುಗರ, ಅಪಾಯಕ್ಕೆ ಒಳಗಾಗಬಹುದು. ಹೀಗೆ ಮಾಡಬೇಡ, ಸುಮ್ಮನಿರಬಾರದೇ ಎಂದರೆ ರೋಗಿ ಕೇಳುವುದಿಲ್ಲ ; ಸಿಟ್ಟು ಮಾಡಬಹುದು. ತೊಂದರೆದಾಯಕ ನಡವಳಿಕೆಯನ್ನು ಮತ್ತಷ್ಟು ಜಾಸ್ತಿ ಮಾಡಬಹುದು. ಹಠಮಾರಿಯಂತೆ ಆಡಬಹುದು.
  • ಬೇಕು ಬೇಡಗಳ ನಿರ್ಲಕ್ಷ್ಯ: ರೋಗಿ ತನ್ನ ನಿತ್ಯ ಬೇಕುಬೇಡಗಳನ್ನು ಅಥವಾ ವಿಶೇಷ ಬೇಕು ಬೇಡಗಳನ್ನು ನಿರ್ಲಕ್ಷ್ಯ ಮಾಡಬಹುದು. ಉದಾ: ಆಹಾರ ಸೇವನೆ: ಆಹಾರ ಸೇವಿಸಲು ನಿರಾಕರಿಸಬಹುದು. ಊಟಕ್ಕೆ ವಿಷ ಹಾಕಿದ್ದೀರಿ ಎಂತಲೋ, ನನಗೆ ಹಸಿವಿಲ್ಲ ಎಂತಲೋ, ಆಹಾರವನ್ನು ಏಕೆ ತಿನ್ನಬೇಕು ಎಂತಲೋ ಕುಂಟುನೆಪ ಒಡ್ಡಬಹುದು. ನಿದ್ದೆ ಮಾಡದಿರಬಹುದು. ತಿನ್ನಬಾರದ ವಸ್ತುಗಳನ್ನು ತಿನ್ನಬಹುದು, ಅತಿಯಾಗಿ ತಿನ್ನಬಹುದು, ದಿನವೂ ಸ್ನಾನ ಮಾಡಿ, ಹಲ್ಲುಜ್ಜಿ ಮುಖ ತೊಳೆದು ಶುಭ್ರವಸ್ತುಗಳನ್ನು ಧರಿಸುತ್ತಿದ್ದವ, ಈಗ ದಿನಗಳು ಕಳೆದೂ ಸ್ನಾನ ಮಾಡದಿರಬಹುದು, ಹಲ್ಲುಜ್ಜದೇ ಕೊಳಕಾಗಿರಬಹುದು. ಬಟ್ಟೆಗಳು ಗಲೀಜಾಗಿ ದುರ್ವಾಸನೆ ಬರುತ್ತಿದ್ದರೂ, ಹರಿದು ಹೋಗಿದ್ದರೂ, ಬದಲಿಸದಿರಬಹುದು. ತನ್ನ ಸುರಕ್ಷತೆಯನ್ನು ಮಾಡದಿರಬಹುದು, ರಸ್ತೆಯ ಮಧ್ಯೆ ನಡೆಯುವುದು, ಅತಿಬಿಸಿ ವಸ್ತುಗಳನ್ನು (ಕಾದ ಹೆಂಚು) ಮುಟ್ಟುವುದು, ಚಾಕು ಬ್ಲೇಡ್‌ಗಳನ್ನು ಉಪಯೋಗಿಸುವಾಗ ನಿರ್ಲಕ್ಷ್ಯದಿಂದ ಗಾಯ ಮಾಡಿಕೊಳ್ಳುವುದು, ಕತ್ತಲಲ್ಲಿ ಕಾಡಿನೊಳಗೆ ಅಥವಾ ಅಪರಿಚಿತ ಸ್ಥಳಕ್ಕೆ ಹೋಗಬಹುದು ಇತ್ಯಾದಿ. ದೈಹಿಕ ಅಲಂಕಾರ ಹಾಗೂ ಹೊರಗೆ ಹೋಗುವಾಗ, ಉಡುಗೆ ತೊಡುಗೆಗಳ ಬಗ್ಗೆ ಗಮನಿಸದೇ ಹೋಗಬಹುದು.
  • ಕೆಲಸಕರ್ತವ್ಯಗಳ ಬಗ್ಗೆ ನಿರ್ಲಕ್ಷ್ಯ: ಮನಸ್ಸಿನ ಬಹುತೇಕ ಕ್ರಿಯೆಗಳ ಏರುಪೇರಿನಿಂದಾಗಿ ರೋಗಿ, ತನ್ನ ಕೆಲಸ ಕರ್ತವ್ಯಗಳನ್ನು ಮರೆಯಬಹುದು ಅಥವಾ ತನ್ನ ಕರ್ತವ್ಯಗಳೇನು ಎಂಬುದರ ಅರಿವೇ ಇರದಿರಬಹುದು. ಕೆಲಸ/ಉದ್ಯೋಗಕ್ಕೆ ಹೋಗಲು ನಿರಾಕರಿಸಬಹುದು. ವಿದ್ಯಾರ್ಥಿಯಾದರೆ, ಶಾಲೆ ಕಾಲೇಜಿಗೆ ಹೋಗದೇ ಮನೆಯಲ್ಲೇ ಉಳಿಯಬಹುದು, ಮಹಿಳೆ ಮನೆ ಕೆಲಸ ಮಾಡದೇ, ಅಡುಗೆ ಮಾಡದೇ, ಮಕ್ಕಳನ್ನು ಗಮನಿಸದೇ ಸುಮ್ಮನಿರಬಹುದು. ಮನೆಯವರ ಅನಾರೋಗ್ಯವನ್ನು ಕಂಡರೂ, ಏನೂ ಮಾಡದೇ ಸುಮ್ಮನಿರಬಹುದು.

ಸಾಲವಿದ್ದರೆ ಅದನ್ನು ತೀರಿಸುವ ಪ್ರಯತ್ನ ಮಾಡದಿರಬಹುದು. ತನ್ನನ್ನು ಅಥವಾ ತನ್ನ ಮನೆಯವರನ್ನು ಬೇರೆಯವರು ಟೀಕಿಸುತ್ತಿದ್ದರೆ, ಶೋಷಣೆ ಮಾಡುತ್ತಿದ್ದರೆ ನಿಷ್ಕ್ರೀಯನಾಗಿ ಕೂಡಬಹುದು, ಮನೆಗೆ ಕಳ್ಳ ಬಂದು ಎಲ್ಲವನ್ನೂ ತೆಗೆದುಕೊಂಡು ಹೋಗುತ್ತಿದ್ದರೂ, ನೋಡಿ ಸುಮ್ಮನೆ ಕೂರಬಹುದು! ಹೆಂಡತಿ ಮಕ್ಕಳು ಉಪವಾಸವಿದ್ದರೂ, ಅಪಾಯಕ್ಕೊಳಗಾದರೂ, ರೋಗಿ ಏನೂ ಮಾಡದೇ ತನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳಬಹುದು.

ಸ್ಕಿಜೋಫ್ರೀನಿಯಾ ರೋಗ ಥಟ್ಟನೆ ಶುರುವಾಗಬಹುದು ಅಥವಾ ಸ್ವಲ್ಪ ಸ್ವಲ್ಪವಾಗಿ ಬಹುನಿಧಾನವಾಗಿ ಹಲವಾರು ತಿಂಗಳು ಅವಧಿಯಲ್ಲಿ ಪ್ರಕಟವಾಗಬಹುದು. ಸಾಮಾನ್ಯವಾಗಿ ರೋಗಲಕ್ಷಣಗಳು ದೀರ್ಘಕಾಲ ಭಾದಿಸುತ್ತವೆ.

ಯಾರಲ್ಲಿ ಕಂಡು ಬರುತ್ತದೆ?

ಸ್ಕಿಜೋಫ್ರೀನಿಯಾ ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನವರಲ್ಲಿ ಪ್ರಾರಂಭವಾಗುತ್ತದೆ. ಗಂಡಸರು ಹೆಂಗಸರು ಇಬ್ಬರಲ್ಲೂ ಸಮಾನವಾಗಿರುತ್ತದೆ. ಎಲ್ಲ ವರ್ಗಗಳಲ್ಲಿ ಕಂಡು ಬಂದರೂ, ಕೆಳವರ್ಗಗಳಲ್ಲಿ ಹೆಚ್ಚು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮಾನವಾಗಿ ಕಂಡು ಬರುತ್ತದೆ. ಪ್ರಪಂಚದಾದ್ಯಂತ ಪ್ರತಿ ಸಾವಿರ ಜನರಲ್ಲಿ ಒಬ್ಬರಿಂದ ಇಬ್ಬರಿಗೆ ಈ ಕಾಯಿಲೆ ಇರುವುದು ಸರ್ವೇಕ್ಷಣೆಗಳಿಂದ ತಿಳಿದುಬರುತ್ತದೆ.

ಸ್ಕಿಜೋಫ್ರೀನಿಯಾ ಬರಲು ಕಾರಣವೇನು?

ಸ್ಪಷ್ಟವಿಲ್ಲ. ಅನೇಕ ಅಂಶಗಳು ಸೇರಿ, ಈ ಕಾಯಿಲೆಯನ್ನು ತರಬಹುದು.

i) ಅನುವಂಶೀಯತೆ: ಶೇಕಡಾ ಹತ್ತರಿಂದ ಹದಿನಾಲ್ಕು ಪ್ರಕರಣಗಳಲ್ಲಿ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನ ಜನಕ್ಕೆ ಈ ಕಾಯಿಲೆ ಇರುತ್ತದೆ. ಅವಳಿಜವಳಿ ಮಕ್ಕಳಲ್ಲಿ ಒಬ್ಬರಿಗೆ ಈ ಕಾಯಿಲೆ ಬಂದರೆ ಇನ್ನೊಬ್ಬರಿಗೆ ಬರುವ ಸಂಭವ ಶೇಕಡಾ 70ಕ್ಕಿಂತ ಹೆಚ್ಚಿರುತ್ತದೆ. ಕಾಯಿಲೆ ಬರುವ ಸಂಭವನೀಯತೆ ಒಂದಕ್ಕಿಂತ ಹೆಚ್ಚಿನ ಜೀನುಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ಸಾಗುತ್ತದೆ. ಆದರೆ ಕಾಯಿಲೆ ಪ್ರಕಟವಾಗಲೇಬೇಕೆಂಬ ನಿಯಮವಿಲ್ಲ. ಆದ್ದರಿಂದ ಸ್ಕಿಜೋಫ್ರೀನಿಯಾ ವಂಶಪಾರಂಪರ್ಯ ಎಂದು ಭಯಪಡಬೇಕಿಲ್ಲ. ಸ್ಕಿಜೋಫ್ರೀನಿಯಾ ರೋಗಿ ಚಿಕಿತ್ಸೆ ಪಡೆದು ಗುಣಮುಖನಾದ ಮೇಲೆ ಮದುವೆಯಾಗಲು, ಮಕ್ಕಳನ್ನು ಪಡೆಯಲು ಮತ್ತು ಅವರು ಆರೋಗ್ಯವಂತರಾಗಿ ಬದುಕಲು ಯಾವುದೇ ಅಡ್ಡಿ ಇರುವುದಿಲ್ಲ.

ii) ಬಾಲ್ಯದ ನಕಾರಾತ್ಮಕ ಅನುಭವಗಳು: ವಿಪರೀತ ಕಷ್ಟನಷ್ಟಗಳು, ಪ್ರೀತಿ ವಿಶ್ವಾಸದಿಂದ ವಂಚಿತರಾಗುವುದು, ತಂದೆ ತಾಯಿ ಪರಸ್ಪರ ವಿರುದ್ಧ ಅಣತಿ/ಸೂಚನೆಗಳನ್ನು ಮಕ್ಕಳಿಗೆ ಕೊಟ್ಟು ಅವರ ಗೊಂದಲದಲ್ಲಿ ಬೀಳುವಂತೆ ಮಾಡುವುದು.

iii) ಗರ್ಭಧಾರಣೆ ಅವಧಿಯಲ್ಲಿ ಹೆರಿಗೆಯಾಗುವಾಗ, ಮತ್ತು ಅನಂತರ ಮಿದುಳಿಗೆ ಸಣ್ಣ ಪ್ರಮಾಣದ ಹಾನಿಯುಂಟಾಗುವುದು.

iv) ಅಹಿತಕಾರಿ, ಮಾನಸಿಕ ಒತ್ತಡವನ್ನುಂಟು ಮಾಡುವ ಪರಿಸರ.

v) ನಿಧಾನಗತಿಯ ವೈರಸ್ ಸೋಕು.

vi) ಮಿದುಳಿನ ನರಕೋಶದಲ್ಲಿ “ಡೋಪಮಿನ್” ಸ್ವೀಕಾರ ಕೇಂದ್ರಗಳು (ರಿಸೆಪ್ಟಾರ್ಸ್) ಹೆಚ್ಚು ಚುರುಕಾಗಿರುತ್ತವೆ (ಹೈಪರ್ ಸೆನ್ಸಿಟಿವ್).

ಚಿಕಿತ್ಸೆ

i) ಔಷಧಿಗಳು: ಚಿತ್ತವಿಕಲತೆ ನಿರೋಧಕ ಔಷಧಿಗಳಾದ ಕ್ಲೋರ್‌ಪ್ರೊಮೆಜಿನ್, ಹೆಲೋಪಿರಿಡಾಲ್, ರಿಸ್ಪಿರಿಡಾನ್, ಓಲಾಂಜೆಪಿನ್, ಕ್ವಿಟಿಪಿನ್, ಜಿಪ್ರಾಸಿಡಾನ್, ಕ್ಲೋಜಪಿನ್ ಇತ್ಯಾದಿ. ಈ ಔಷಧಿಗಳು ಡೋಪಮಿನ್ ವ್ಯವಸ್ಥೆಯನ್ನು ಸರಿಪಡಿಸುತ್ತವೆ. ಭ್ರಮೆಗಳನ್ನು ನಿವಾರಿಸುತ್ತವೆ. ಹಸಿವು/ನಿದ್ರೆಯನ್ನು ಸರಿಪಡಿಸುತ್ತವೆ.

ii) ವಿದ್ಯುತ್ ಕಂಪನ ಚಿಕಿತ್ಸೆ: ಕೆಲವು ಆಯ್ದ ಪ್ರಕರಣಗಳಲ್ಲಿ ಔಷಧಿಗಳು ನಿರೀಕ್ಷಿತ ಪರಿಣಾಮವನ್ನು ಉಂಟು ಮಾಡದಿದ್ದಾಗ, ವಿದ್ಯುತ್ ಕಂಪನ ಚಿಕಿತ್ಸೆಯನ್ನು (BCT) ನೀಡಲಾಗುತ್ತದೆ. ಇದೊಂದು ಸುರಕ್ಷಿತವಾದ ಚಿಕಿತ್ಸೆ. ಸುಮಾರು 100 ವೋಲ್ಟ್ ವಿದ್ಯುತ್ತನ್ನು ಕೇಲವ ಅರ್ಧ ಸೆಕೆಂಡು ಕಾಲ ಮಿದುಳಿಗೆ ಹಾಯಿಸಿ ಕಂಪನವನ್ನುಂಟು ಮಾಡುವುದರಿಂದ ರೋಗ ಗುಣಮುಖವಾಗುತ್ತದೆ. ಸಾಮಾನ್ಯವಾಗಿ 5 ರಿಂದ 10 ಸಲ ECT ಕೊಡಲಾಗುತ್ತದೆ.

iii) ಮನೆಯವರ ಪ್ರೀತಿ, ಆಸರೆ, ಪ್ರೋತ್ಸಾಹ ಮಾರ್ಗದರ್ಶನ: ರೋಗಿಯನ್ನು ತಿರಸ್ಕರಿಸದೆ, ಮೂಲೆಗೆ ತಳ್ಳದೆ, ಪ್ರೀತಿಯಿಂದ ನೋಡಿಕೊಳ್ಳಬೇಕು. ರೋಗಿ ತನ್ನ ಕೆಲಸ ಕರ್ತವ್ಯಗಳನ್ನು ಮಾಡುವಂತೆ ಪ್ರಚೋದಿಸಬೇಕು. ಸೋಮಾರಿಯೂ ನಿಷ್ಕ್ರಿಯನೂ ಆಗಿರಲು ಬಿಡಬಾರದು.

iv) ಕೆಲಸಚಟುವಟಿಕೆ, ಉದ್ಯೋಗ ಮಾಡಲು ತರಬೇತಿ: ಹಲವಾರು ವರ್ಷಗಳ ಕಾಯಿಲೆಯಿಂದ ವ್ಯಕ್ತಿ ಕೆಲಸ-ಉದ್ಯೋಗದಿಂದ ವಿಮುಖನಾಗುತ್ತಾನೆ. ಓದನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾನೆ/ಳೆ. ಪರಾವಲಂಬಿಗಳಾಗುತ್ತಾನೆ. ಇದನ್ನು ತಪ್ಪಿಸಬೇಕು. ಸರಳವಾದ ಕೆಲಸ-ಜವಾಬ್ದಾರಿ-ಉದ್ಯೋಗವನ್ನು ನಿರ್ವಹಿಸಲು ಅಗತ್ಯವಾದ ತರಬೇತಿಯನ್ನು ಕೊಡಬೇಕು. ಉದ್ಯೋಗ ಮಾಡಲು ಅವಕಾಶ ಪ್ರೋತ್ಸಾಹಗಳನ್ನು ಮನೆಯವರು, ಇತರರು ನೀಡಬೇಕು. ವ್ಯಕ್ತಿ ಉಪಯುಕ್ತವಾಗಿ ಸ್ವಾವಲಂಬಿಯಾಗಿ ಬದುಕಲು ಖಂಡಿತ ಸಾಧ್ಯವಿದೆ.

ರೋಗ ಪ್ರಾರಂಭವಾಗುತ್ತಿದ್ದಂತೆಯೇ ಗುರುತಿಸಿ, ಚಿಕಿತ್ಸೆಯನ್ನು ಪ್ರಾರಂಭಿಸಿದರೆ, ಶೇಕಡಾ 70ರಷ್ಟು ಪ್ರಕರಣಗಳಲ್ಲಿ ಸ್ಕಿಜೋಫ್ರೀನಿಯಾ ರೋಗ ಪೂರ್ಣವಾಗಿ ಗುಣವಾಗುವ ಸಂಭನೀಯತೆ ಇದೆ. ಔಷಧಿಗಳನ್ನು ಕನಿಷ್ಠ 6 ತಿಂಗಳಿನಿಂದ ಹಲವಾರು ವರ್ಷಗಳವರೆಗೆ ನೀಡಬೇಕಾಗುವುದು. ಶೇಕಡಾ 10 ರಿಂದ 20ರಷ್ಟು ಪ್ರಕರಣಗಳಲ್ಲಿ ಜೀವನಪರ್ಯಂತ ನಿರ್ದಿಷ್ಟ ಪ್ರಮಾಣದಲ್ಲಿ ಔಷಧಿಯನ್ನು ಕೊಡಬೇಕಾಗುವುದು. ಅಡ್ಡಪರಿಣಾಮಗಳುಂಟಾದರೆ ಏನು ಮಾಡಬೇಕೆಂದು ವೈದ್ಯರು ಹೇಳುತ್ತಾರೆ. ಅವಧಿಗೊಂದಾರ್ತಿ ವೈದ್ಯರನ್ನು ಕಾಣುತ್ತಿರಬೇಕು. ಔಷಧಿಯನ್ನು ಸೇವಿಸಲು ನಿರಾಕರಿಸಿದರೆ, ನೀರಿನ ರೂಪದ ಔಷಧಿಯನ್ನು ಆಹಾರದಲ್ಲಿ ಸೇರಿಸಬಹುದು. 2 ಅಥವಾ 4 ವಾರಗಳಿಗೊಮ್ಮೆ ಕೊಡುವ ಇಂಜೆಕ್ಷನ್‌ಗಳೂ ಲಭ್ಯವಿದೆ.

ಔಷಧಿಯ ಅಡ್ಡಪರಿಣಾಮಗಳು: ಸ್ಕಿಜೋಫ್ರೀನಿಯಾ ರೋಗಕ್ಕೆ ಕೊಡುವ ಔಷಧಿಗಳು, ಕೆಲವರಲ್ಲಿ ಕೆಲವು ಅಡ್ಡಪರಿಣಾಮಗಳನ್ನುಂಟು ಮಾಡಬಹುದು. ಇವನ್ನು ತಾತ್ಕಾಲಿಕ ಹಾಗೂ ದೀರ್ಘಕಾಲ ಇರುವ ಅಡ್ಡಪರಿಣಾಮಗಳೆಂದು ಎರಡು ಭಾಗ ಮಾಡಬಹುದು.

ತಾತ್ಕಾಲಿಕ: ಬಾಯಿ ಒಣಗುವುದು ಅಥವಾ ಜೊಲ್ಲು ಹೆಚ್ಚು ಉತ್ಪತ್ತಿಯಾಗುವುದು, ಕಣ್ಣು ಸ್ವಲ್ಪ ಮಂಜಾಗುವುದು, ಸ್ನಾಯುಗಳು ಬಿಗಿಯಾಗುವುದರಿಂದ ರೋಗಿಯ ಕೈಕಾಲುಗಳ ಚಲನೆ ಮಂದಗತಿಯದಾಗುತ್ತದೆ. ಮುಖದಲ್ಲಿ ಭಾವನೆಗಳ ಪ್ರಕಟಣೆ ಇರುವುದಿಲ್ಲವಾಗಿ ಮುಖ ಮೇಣದ ಮುಖವಾಗುತ್ತದೆ. ಕೈಕಾಲುಗಳಲ್ಲಿ ನಡುಕ, ಕತ್ತು, ಕೈಕಾಲು ಒಂದು ಕಡೆಗೆ ಸೆಳೆಯಬಹುದು (ಇದನ್ನು ಡಿಸ್ಟೋನಿಯಾ ಎನ್ನುತ್ತಾರೆ). ವ್ಯಕ್ತಿ ಚಡಪಡಿಸುವುದು, ಒಂದು ನಿಮಿಷ ಸುಮ್ಮನೆ ಒಂದು ಕಡೆ ಕೂರಲಾಗದೇ ಅತ್ತಿಂದಿತ್ತ ಓಡಾಡಬಹುದು. ಇದನ್ನು ಅಕತೀಸಿಯಾ ಎನ್ನುತ್ತಾರೆ. ಈ ಎಲ್ಲಾ ಅಡ್ಡಪರಿಣಾಮಗಳನ್ನು ಟ್ರೈಹೆಕ್ಸಿಫೆನಿಡಿಲ್ ಹೈಡ್ರೋಕ್ಲೋರೈಡ್ ಮಾತ್ರೆ ಅಥವಾ ತತ್ಸಮಾನವಾದ ಔಷಧಿಕೊಟ್ಟು ಸರಿಪಡಿಸಬಹುದು ಅಥವಾ ಔಷಧಿಯ ಪ್ರಮಾಣವನ್ನು ಕಡಿಮೆ ಮಾಡಿ ಬದಲಾಯಿಸಲೂ ಬಹುದು.

ದೀರ್ಘಕಾಲ ಉಳಿಯುವಂತಹ ಅಡ್ಡಪರಿಣಾಮಗಳು: ತೂಕ ಹೆಚ್ಚಾಗುವುದು, ಲೈಂಗಿಕ ದುರ್ಬಲತೆ, ಸಿಹಿಮೂತ್ರ ರೋಗಕಾಣಿಸಿ ಕೊಳ್ಳುವುದು, ಕೈಕಾಲು, ತಲೆಯ ಅನಿಯಂತ್ರಿತ ನಡುಕ, ಸ್ನಾಯುಗಳ ಬಿಗಿತ ಇತ್ಯಾದಿ ದೀರ್ಘಕಾಲದ ಉಳಿಯುವ ಅಡ್ಡಪರಿಣಾಮಗಳುಂಟಾದಾಗ ವೈದ್ಯರ ಸಲಹೆ, ಮಾರ್ಗದರ್ಶನ ಅಗತ್ಯವಾಗುತ್ತದೆ. ಕಡಿಮೆ ಅಡ್ಡಪರಿಣಾಮವಿರುವ ಔಷಧಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಆದಷ್ಟೂ ಕಡಿಮೆ ಡೋಸ್ ಕೊಡಬೇಕಾಗುತ್ತದೆ. ವಿದ್ಯುತ್ ಕಂಪನ ಚಿಕಿತ್ಸೆಯಲ್ಲಿ ಗಮನಾರ್ಹವಾದ ಅಡ್ಡಪರಿಣಾಮಗಳಾವುವೂ ಇರುವುದಿಲ್ಲ.