ಅನ್ಯನಲ್ಲಿ ಹೂವು ಮುಡಿಯಲಾರೆ

 

1

ಹಾಡೆಪಾಡೆನ್ನ ಶಿವಗೆ ಸಂಭಾಗ ಸರ ಒಯಿದು ಕೋಗಿಲೆನೆ
ಸಂಭಾಗ ಸರ ಒಯಿದು ಕೋಗಿಲೆನೆ

ಪಾರಿಜಾತದ್ಹೂವ ಏಗಿತಿ ಸರಸೂತಿ ಪಾತಳಕೆ ತಾ ನಿಂತಳೆ
ಪಾರಿಜಾತದ್ಹೂವ ಏಗಿತಿ ಸರಸೂತಿ ಪಾತಳಕೆ ತಾ ನಿಂತಳೆ

ಎಡಗೈಯ ನೀರಗುಂಡಿ ಅಕಿ ತನ್ನ ಬಲಗೈಯ ಎಲಿಯ ತಬಕ
ಅಕಿ ತನ್ನ ಬಲಗೈಯ ಎಲಿಯ ತಬಕ

ರಂಗ ಮಂಚದು ಮ್ಯಾಲ ಮನಗಂಥ ಪುರುಷರಿಗಿ ಝೆಳಕಕ ಎಬುಸ್ಯಾಳೆ
ರಂಗ ಮಂಚದು ಮ್ಯಾಲ ಮನಗಂಥ ಪುರುಷರಿಗಿ ಝೆಳಕಕ ಎಬುಸ್ಯಾಳೆ

2

ಯಾಕ್ಯಾಕೆ ಶ್ರೀಯ ಗವರಿ ನಮ್ಮಗ ಹಸವಿಲ್ಲ ನೀಡಕಿಲ್ಲ
ನಮ್ಮಗ ಹಸವಿಲ್ಲ ನೀಡಕಿಲ್ಲ

ನಿಮ್ಮಂಥ ಪುರುಷರು ಇಲ್ಲೈದು ಮಂದ್ಹ್ಯಾರ ಒಲ್ಹೋಗೊ ಹಿಂಬರಿಕ್ಯ
ನಿಮ್ಮಂಥ ಪುರುಷರು ಇಲ್ಲೈದು ಮಂದ್ಹ್ಯಾರ ಒಲ್ಹೋಗೊ ಹಿಂಬರಿಕ್ಯ

ಪುರುಷರ ಮಾತ ಕೇಳಿ ಅಕಿ ತನ್ನ ಹಿಂದಕ ಜಾರಗ್ಯಾಳ
ಅಕಿ ತನ್ನ ಹಿಂದಕ ಜಾರಗ್ಯಾಳ

ಎಡದ ಕಣ್ಣ ನೀರ ತಡದ ಮಳಿಹನಿ ಕೊನಿಸೆರಗಿಲಿ ಸೂಟುತಾಳ
ಎಡದ ಕಣ್ಣ ನೀರ ತಡದ ಮಳಿಹನಿ ಕೊನಿಸೆರಗಿಲಿ ಸೂಟುತಾಳ

ಎಡಗೈಯ ಹಾಲಗುಂಡಿ ಅಕಿ ತನ್ನ ಬಲಗೈಯ ಎಲಿಯ ತಬಕ
ಅಕಿ ತನ್ನ ಬಲಗೈಯ ಎಲಿಯ ತಬಕ

ಬೊಟ್ಟ ಮಂಚದ ಮ್ಯಾಲ ಮನಗಂಥ ಪುರುಷರಿಗಿ ಊಟಕ ಎಬುಸ್ಯಾಳ
ಬೊಟ್ಟ ಮಂಚದ ಮ್ಯಾಲ ಮನಗಂಥ ಪುರುಷರಿಗಿ ಊಟಕ ಎಬುಸ್ಯಾಳ

ಯಾಕ್ಯಾಕೆ ಶ್ರೀಯ ಗವರಿ ನಮಗ ಹಸವಿಲ್ಲ ನೀಡಕಿಲ್ಲ
ನಮ್ಮಗ ಹಸವಿಲ್ಲ ನೀಡಕಿಲ್ಲ

ನಿಮ್ಮಂಥ ಶಿರಿಯರು ಇಲ್ಲೈದು ಮಂದ್ಹ್ಯಾರ ಒಲ್ಹೋಗೊ ಹಿಂಬರಿಕ್ಯ
ನಿಮ್ಮಂಥ ಶಿರಿಯರು ಇಲ್ಲೈದು ಮಂದ್ಹ್ಯಾರ ಒಲ್ಹೋಗೊ ಹಿಂಬರಿಕ್ಯ

ಪುರುಷರ ಮಾತ ಕೇಳಿ ಅಕಿ ತನ್ನ ಹಿಂದಕ ಜಾರಗ್ಯಾಳ
ಅಕಿ ತನ್ನ ಹಿಂದಕ ಜಾರಗ್ಯಾಳ

ಎಡದ ಕಣ್ಣನೀರ ತಡದ ಮಳಿಹನಿ ಕೊನಿಸೆರಗಿಲಿ ಸೂಟುತಾಳ
ಎಡದ ಕಣ್ಣನೀರ ತಡದ ಮಳಿಹನಿ ಕೊನಿಸರಗಿಲಿ ಸೂತುತಾಳ

ಮಲ್ಲಿಯ ಗಿಡದ ಕೆಳಗ ಈ ಹೂವ ಉದುರದು ಕಾರಣ್ಯಾನೆ
ಈ ಹೂವ ಉದುರದು ಕಾರಣ್ಯಾನೆ

ಯಾವನಲ್ಲೋ ಬಂದು ಮುಡೆಣಿಲ್ಲೊ ಈ ಹೂವ ಉದರಿ ಹೋಗದೆ ಹನ್ಯ
ಯಾವನಲ್ಲೋ ಬಂದು ಮುಡೆಣಿಲ್ಲೊ ಈ ಹೂವ ಉದರಿ ಹೋಗದೆ ಹನ್ಯ

ಪಾರಿಯ ಗಿಡದ ಕೆಳಗ ಈ ಹೂವ ಉದುರದು ಕಾರಣ್ಯಾನೆ
ಈ ಹೂವ ಉದುರದು ಕಾರಣ್ಯಾನೆ

ಯಾವನಲ್ಲೋ ಬಂದು ಮುಡೆಣಿಲ್ಲೊ ಈ ಹೂವ ಉದರಿ ಹೋಗದೆ ಹನ್ಯ
ಯಾವನಲ್ಲೋ ಬಂದು ಮುಡೆಣಿಲ್ಲೊ ಈ ಹೂವ ಉದರಿ ಹೋಗದೆ ಹನ್ಯ

ಅರಸಿಣ

ಹಳ್ಳದ ಥಡಿಯಲಿ ಬಿತ್ತ್ಯಾರೆ ಈ ಅರಸೀಣss
ರನ್ನದ ಗುದಳಿಲಿ ಅಗಳ್ಯಾರೆ ರನ್ನದೆ ಕೋಲು ಕೋಲನೀರೆ
ನಿರಂಜನ ಕೋಲು ಕೋಲನೀರೆ

ರನ್ನದ ಗುದಳಿಲಿ ಅಗಳ್ಯಾರೆ ಈ ಅರಸೀಣ
ಬೀದರ ಬುಟ್ಯ್ಯಾಗ ಥುಂಬ್ಯಾರೆ ರನ್ನದೆ ಕೋಲು ಕೋಲನೀರೆ
ನಿರಂಜನ ಕೋಲು ಕೋಲನೀರೆ

ಬೀದರ ಬುಟ್ಟ್ಯಾಗ ಥುಂಬ್ಯಾರೆ ಈ ಅರಿಸೀಣss
ಗಿಲಗಿಲ ಮರದಿಲಿ ಕೇರ‌್ಯಾರೆ ರನ್ನದೆ ಕೋಲು ಕೋಲನೀರೆ
ನಿರಂಜನ ಕೋಲು ಕೋಲನೀರೆ

ಗಿಲಗಿಲ ಮರದಿಲಿ ಕೇರ‌್ಯಾರೆ ಈ ಅರಿಸೀಣ
ಚಂದದ ಒಣಕಿಲಿ ಥಳಸ್ಯಾರೆ ರನ್ನದೆ ಕೋಲು ಕೋಲನೀರೆ
ನಿರಂಜನ ಕೋಲು ಕೋಲನೀರೆ

ಚಂದನ ಒಣಕಿಲಿ ಥಳಸ್ಯಾರೆ ಈ ಅರಸೀಣ
ಖೂರನ ಕಲ್ಲಿಲಿ ಬೀಸ್ಯಾರೆ ರನ್ನದೆ ಕೋಲು ಕೋಲನೀರೆ
ನಿರಂಜನ ಕೋಲು ಕೋಲನೀರೆ

ಖೂರನ ಕಲ್ಲಿಲಿ ಬೀಸ್ಯಾರೆ ಈ ಅರಿಸೀಣ
ತೀರತ ಬಟಲಾಗ ಥುಂಬ್ಯಾರೆ ರನ್ನದೆ ಕೋಲು ಕೋಲನೀರೆ
ನಿರಂಜನ ಕೋಲು ಕೋಲನೀರೆ

ತೀರತ ಬಟಲಾಗ ಥುಂಬ್ಯಾರೆ ಈ ಅರಸೀಣ
ಬಾಣತಿ ಗೌರಮ್ಮನ ಧರಸ್ಯಾರೆ ರನ್ನದೆ ಕೋಲು ಕೋಲನೀರೆ
ನಿರಂಜನ ಕೋಲು ಕೋಲನೀರೆ

ಗೌರವ ಹೆಣ್ಣು ಹಡೆದಳು

ಊರ ಮುಂದಿನ ಹೊಳಿಯೇ ಸೀರಿ ಮಾಸ್ಯಾದ ಕಳಿಯೇ
ಊರ ಮುಂದಿನ ಹೊಳಿಯೇ ಸೀರಿ ಮಾಸ್ಯಾದ ಕಳಿಯೇ
ನಮ್ಮ ಗೌರವ ಇಟ್ಟಾಳೆ ರುಳಿಯೇ ಕೋಲ ಮುತ್ತಿನ ಕೋಲೆ
ನಮ್ಮ ಗೌರವ ಇಟ್ಟಾಳೆ ರುಳಿಯೇ ಕೋಲ ಮುತ್ತಿನ ಕೋಲೆ

ಊರ ಮುಂದಿನ ಹುತ್ತು ಕುಡಗಿಲ್ಹಚ್ಚಿ ಕೆತ್ತು
ಊರ ಮುಂದಿನ ಹುತ್ತು ಕುಡಗಿಲ್ಹಚ್ಚಿ ಕೆತ್ತು
ನಮ್ಮ ಗೌರವ ಇಟ್ಟಾಳೆ ನತ್ತು ಕೋಲ ಮುತ್ತಿನ ಕೋಲೆ
ನಮ್ಮ ಗೌರವ ಇಟ್ಟಾಳೆ ನತ್ತು ಕೋಲ ಮುತ್ತಿನ ಕೋಲೆ

ಒಕ್ಕಲಗೇರ ಹೊಡೆದ ಕುಂಟಿ ಉದ್ದಿಮದಾರ ಮಾರದೆ ಸುಂಟಿ
ಒಕ್ಕಲಗೇರ ಹೊಡೆದ ಕುಂಟಿ ಉದ್ದಿಮದಾರ ಮಾರದೆ ಸುಂಟಿ
ನಮ್ಮ ಗೌರವ ಇಟ್ಟಾಳೆ ಘಂಟಿ ಕೋಲ ಮುತ್ತಿನ ಕೋಲೆ
ನಮ್ಮ ಗೌರವ ಇಟ್ಟಾಳೆ ಘಂಟಿ ಕೋಲ ಮುತ್ತಿನ ಕೋಲೆ

ಹಾರೂರ ಮನೆಗೆ ಹೊತಗಿ ಕುಳಬನಕ ಹಾಕದೆ ಮೆತಗಿ
ಹಾರೂರ ಮನೆಗೆ ಹೊತಗಿ ಕುಳಬನಕ ಹಾಕದೆ ಮೆತಗಿ
ನಮ್ಮ ಗೌರವ ಇಟ್ಟಾಳೆ ಜತಗಿ ಕೋಲ ಮುತ್ತಿನ ಕೋಲೆ
ನಮ್ಮ ಗೌರವ ಇಟ್ಟಾಳೆ ಜತಗಿ ಕೋಲ ಮುತ್ತಿನ ಕೋಲೆ

ಊರ ಸುತ್ತ ಬೇಲಿ ಬೇಲಿಗಿ ಹಾಕ್ಯಾರೆ ಕೀಲಿ
ಊರ ಸುತ್ತ ಬೇಲಿ ಬೇಲಿಗಿ ಹಾಕ್ಯಾರೆ ಕೀಲಿ
ನಮ್ಮ ಗೌರವ ಇಟ್ಟಾಳೆ ವಾಲಿ ಕೋಲ ಮುತ್ತಿನ ಕೋಲೆ
ನಮ್ಮ ಗೌರವ ಇಟ್ಟಾಳೆ ವಾಲಿ ಕೋಲ ಮುತ್ತಿನ ಕೋಲೆ

ಊರ ಮುಂದಿನ ಛೆಜ್ಜಿ ಮಂದಿಗ್ಹತ್ಯಾವೆ ಖಜ್ಜಿ
ಊರ ಮುಂದಿನ ಛೆಜ್ಜಿ ಮಂದಿಗ್ಹತ್ಯಾವೆ ಖಜ್ಜಿ
ನಮ್ಮ ಗೌರವ ಇಟ್ಟಾಳೆ ಫೆಜ್ಜಿ ಕೋಲ ಮುತ್ತಿನ ಕೋಲೆ
ನಮ್ಮ ಗೌರವ ಇಟ್ಟಾಳೆ ಫೆಜ್ಜಿ ಕೋಲ ಮುತ್ತಿನ ಕೋಲೆ

ಊರ ಮುಂದಿನ ಅವರಿ ಕುಡಗಿಲ್ಹಚ್ಚಿ ಸವರಿ
ಊರ ಮುಂದಿನ ಅವರಿ ಕುಡಗಿಲ್ಹಚ್ಚಿ ಸವರಿ
ನಮ್ಮ ಗೌರವ ಇಟ್ಟಾಳೆ ಚೆವರಿ ಕೋಲ ಮುತ್ತಿನ ಕೋಲೆ
ನಮ್ಮ ಗೌರವ ಇಟ್ಟಾಳೆ ಚೆವರಿ ಕೋಲ ಮುತ್ತಿನ ಕೋಲೆ

ಹೊಲ್ದಾಗ ಹಾಕದೆ ಹೆಸರು ನೆಲಿನಮ್ಯಾಲಿರದೆ ಮಸರು
ಹೊಲ್ದಾಗ ಹಾಕದೆ ಹೆಸರು ನೆಲಿನಮ್ಯಾಲಿರದೆ ಮಸರು
ನಮ್ಮ ಗೌರವ ಹಾಳೆ ಬಸರು ಕೋಲ ಮುತ್ತಿನ ಕೋಲೆ
ನಮ್ಮ ಗೌರವ ಹಾಳೆ ಬಸರು ಕೋಲ ಮುತ್ತಿನ ಕೋಲೆ

ಗಿಡ ಮ್ಯಾಲಿರದೆ ಹಣ್ಣು ಕೆಳಗೆ ಬಿದ್ದರೆ ಮಣ್ಣು
ಗಿಡ ಮ್ಯಾಲಿರದೆ ಹಣ್ಣು ಕೆಳಗೆ ಬಿದ್ದರೆ ಮಣ್ಣು
ನಮ್ಮ ಗೌರವ ಹಡದಾಳೆ ಹೆಣ್ಣು ಕೋಲ ಮುತ್ತಿನ ಕೋಲೆ
ನಮ್ಮ ಗೌರವ ಹಡದಾಳೆ ಹೆಣ್ಣು ಕೋಲ ಮುತ್ತಿನ ಕೋಲೆ

ಗೌರಿಯ ಮಗ ಗಜಮುಖದ ಗಣಪಣ್ಣ

ಗಜಮುಖ ಗಣಪಣ್ಣ ಗೌರಿನ ಸುತನs
ಸುತನಿಟ್ಟು ನೆನದೇವೆ ಪಾರಬತಿ ವಚನsss
ಕಲ್ಪನಿಟ್ಟು ನೆನದೇವೆ ನಿಮ್ಮ ಶ್ಯಾವಕನಾss
ಹರ ಹರ ಶಂಬೊ ಶಂಕರ
ಕಲ್ಪನಿಟ್ಟು ನೆನದೇವೆ ನಿಮ್ಮ ಶ್ಯಾವಕನಾss
ಹರ ಹರ ಶಂಬೊ ಶಂಕರ

ಇಂದು ಮನವೆ ಶಾಲೆ ಪೂಜಿಪುದೇ
ಸೋಸಿದ ಶ್ರೀಗಂಧ ಮೈಯಲ್ಲ ಪೂಸಿ
ವಾಲಿ ಝೆಮ್ಮಕಿಗೋಳು ತನುಗಾಳಿ ಬೀಸಿsss
ಶಾವಿಗಿ ಸಕ್ಕರಿ ಸ್ನೆs ಮಾಡಿ ಉಣಸಿ
ಹರ ಹರ ಶಂಬೊ ಶಂಕರ
ಶಾವಿಗಿ ಸಕ್ಕರಿ ಸ್ನೆs ಮಾಡಿ ಉಣಸಿ
ಹರ ಹರ ಶಂಬೊ ಶಂಕರ

ಚಿಕ್ಕ ಚೆನಬಸಪ್ಪ ಬಲವಂತ ರನ್ನs
ಆನಿಕುದ್ದರಿಗೋಳು ಹುಂಡ್ಯಾವ ಕೊಟ್ಟು
ಮಲ್ಲಿಗ್ಹೂವಿನ ದಂಡಿ ಮಗಳಿಗೆ ಕೊಟ್ಟುsss
ಹುಮನಾಬಾದಿ ಪ್ಯಾಟ್ಯಾಗ ಸುಖಿದಾಳಾಲಿಟ್ಟು
ಹರ ಹರ ಶಂಬೊ ಶಂಕರ
ಹುಮನಾಬಾದಿ ಪ್ಯಾಟ್ಯಾಗ ಸುಖಿದಾಳಾಲಿಟ್ಟು
ಹರ ಹರ ಶಂಬೊ ಶಂಕರ

ಅಂಗಿ ಮುಂಡಸಿದವರೆ ಶಲ್ಯ ಸೂವರsss
ಮಾತಾಡ ಹೊಂಟಾರ ರಾಜಕುಮಾರ
ಹರ ಹರ ಶಂಬೊ ಶಂಕರ
ಮಾತಾಡ ಹೊಂಟಾರ ರಾಜಕುಮಾರ
ಹರ ಹರ ಶಂಬೊ ಶಂಕರ

ಗಚ್ಚಿನ ಮಟದೋಳು ಕಾಲಂದಿನೀಟ್ಟು
ಕಾಲುಂಗುರ ಕರಮಣಿ ಶ್ರೀಯರಿಗೆ ಕೊಟ್ಟುsss
ಏನ ನಡದಿರಿ ಸ್ವಾಮಿ ಎನ್ನಗೆ ಬಿಟ್ಟು
ಹರ ಹರ ಶಂಬೊ ಶಂಕರ
ಏನ ನಡದಿರಿ ಸ್ವಾಮಿ ಎನ್ನಗೆ ಬಿಟ್ಟು
ಹರ ಹರ ಶಂಬೊ ಶಂಕರ

ಶೆಣ್ಣ ಗಂಗಮ್ಮನ ಗೆಳದೇರು ಕೂಡಿ
ಕೊಡ ನೀರು ಖದುಲಾಸಿ ಕುಡಿಯಾಕೆ ತೆಗೆದು
ಅಳುಭ್ಯಾಡೆ ಗಂಗಮ್ಮ ಮಕಬಾಡ್ಯಾವಂದು
ಹರ ಹರ ಶಂಬೊ ಶಂಕರ
ಅಳುಭ್ಯಾಡೆ ಗಂಗಮ್ಮ ಮಕಬಾಡ್ಯಾವಂದು
ಹರ ಹರ ಶಂಬೊ ಶಂಕರ

ಗಂಗಿಗೌರಿಯರ ಜಗಳ

ಹಳಿಯsದೊಂದುss ಬಿಳಿಯsದೊಂದುs
ನಮ್ಮ ಗೌರಿಗಿ ಬಿಳಿ ಮುತ್ತಿನ ಹಸಿಯ ಹೊಯಿದೆsss
ಹಳಿಯsದೊಂದುss ಬಿಳಿಯsದೊಂದುs
ನಮ್ಮ ಗೌರಿಗಿ ಬಿಳಿಮುತ್ತಿನ ಹಸಿಯ ಹೊಯಿದೆsss

ಬಿಳಿಯ ಪಾಲಕಿದಾಗ ಮೆರೆದು ಬಂದಾಕಿನಂತ
ಮಿತ್ರಿ ನೀ ಬಾರೆ ಧೀರೆsss
ಬಿಳಿಯ ಪಾಲಕಿದಾಗ ಮೆರೆದು ಬಂದಾಕಿನಂತ
ಮಿತ್ರಿ ನೀ ಬಾರೆ ಧೀರೆsss

ಕೆಂಪsದೊಂದುss ಹಸುರsದೊಂದುs
ನಮ್ಮ ಗೌರಿಗಿ ಹಸಿಮುತ್ತಿನ್ಹಸಿಯ ಹೊಯಿದೆsss
ಕೆಂಪsದೊಂದುs ಹಸುರsದೊಂದುs
ನಮ್ಮ ಗೌರಿಗಿ ಹಸಿಮುತ್ತಿನ್ಹಸಿಯ ಹೊಯಿದೆsss

ಕೆಂಪ ಪಾಲಕಿದಾಗ ಮೆರೆದು ಬಂದಾಕಿನಂತ
ಹರದಿ ನೀ ಬಾರೆ ಧೀರೆsss
ಕೆಂಪ ಪಾಲಕಿದಾಗ ಮೆರೆದು ಬಂದಾಕಿನಂತ
ಹರದಿ ನೀ ಬಾರೆ ಧೀರೆsss

ಹಸುರುsದೊಂದುs ಕುಸುರsದೊಂದುs
ನಮ್ಮ ಗೌರಿಗಿ ಖುಸಿಮುತ್ತಿನ ಹಸಿಯ ಹೊಯಿದೆsss
ಹಸುರsದೊಂದುss ಕುಸುರsದೊಂದುs
ನಮ್ಮ ಗೌರಿಗಿ ಖುಷಿಮುತ್ತಿನ ಹಸಿಯ ಹೊಯಿದೆsss

ಹಸುರ ಪಾಲಕಿದಾಗ ಮೆರೆದು ಬಂದಾಕಿನಂತ
ಮಿತ್ರಿ ನೀ ಬಾರೆ ಧೀರೆsss
ಹಸುರ ಪಾಲಕಿದಾಗ ಮೆರೆದು ಬಂದಾಕಿನಂತ
ಮಿತ್ರಿ ನೀ ಬಾರೆ ಧೀರೆsss

ಹೂಗಾರ ಮsನಿದಾಗ ಅವರಿಬ್ಬರ ಝೆಗಡ
ಹೂವಾ ಭಾರುಸಿದ್ಹಂಗೇsss
ಹೂಗಾರ ಮsನಿದಾಗ ಅವರಿಬ್ಬರ ಝೆಗಡ
ಹೂವಾ ಭಾರುಸಿದ್ಹಂಗೇsss

ನಾರೇರಿಬ್ಬರ ಝೆಗಡ ಕೇಳಲ್ಲ ನಮ್ಮ ಶಿವನು
ಮಂಚನಲ್ನಾಡಿ ನಕ್ಕsss
ನಾರೇರಿಬ್ಬರ ಝೆಗಡ ಕೇಳಲ್ಲ ನಮ್ಮ ಶಿವನು
ಮಂಚನಲ್ನಾಡಿ ನಕ್ಕsss

ಕಂಚುಗಾರ ಮsನಿದಾಗ ಅವರಿಬ್ಬರ ಝೆಗಡ
ಕೆಂಚ ಭಾರುಸಿದ್ಹಂಗೇsss
ಕಂಚುಗಾರ ಮsನಿದಾಗ ಅವರಿಬ್ಬರ ಝೆಗಡ
ಕೆಂಚ ಭಾರುಸಿದ್ಹಂಗೇsss

ಕೆಂಚೇರಿಬ್ಬರ ಝೆಗಡ ಕೇಳಲ್ಲ ನಮ್ಮ ಶಿವನು
ಮಂಚನಲ್ನಾಡಿ ನಕ್ಕsss
ಕೆಂಚೇರಿಬ್ಬರ ಝೆಗಡ ಕೇಳಲ್ಲ ನಮ್ಮ ಶಿವನು
ಚಂಚನಲ್ನಾಡಿ ನಕ್ಕsss

ಹಬ್ಬದ ಕಾಳುವಕ್ಕ ನಮ್ಮ ಗೌರಿಗ್ಹುಬ್ಬೆಲ್ಲ ಕಿರಿಯೇ ಬಾಡೆss
ಹಬ್ಬದ ಕಾಳುವಕ್ಕ ನಮ್ಮ ಗೌರಿಗ್ಹುಬ್ಬೆಲ್ಲ ಕಿರಿಯೇ ಬಾಡೆss
ಹಬ್ಬದ ಕಾಳಕ್ಕ ಹೂಡಿತವರಿಬ್ಬರಿಗ್ಹಬ್ಬ ಇನ್ಯಾತಕಂದss
ಹಬ್ಬದ ಕಾಳಕ್ಕ ಹೂಡಿತವರಿಬ್ಬರಿಗ್ಹಬ್ಬ ಇನ್ಯಾತಕಂದss

ಹುಣ್ಣಿಯ ಕಾಳುವಕ್ಕ ನಮ್ಮ ಗೌರಿಗ್ಹುಬ್ಬೆಲ್ಲ ಕಿರಿಯೇ ಬಾಡೆss
ಹುಣ್ಣಿಯ ಕಾಳುವಕ್ಕ ನಮ್ಮ ಗೌರಿಗ್ಹುಬ್ಬೆಲ್ಲ ಕಿರಿಯೇ ಬಾಡೆss
ಹುಣ್ಣಿಯ ಕಾಳಕ್ಕ ಹೂಡಿತವರಿಬ್ಬರಿಗ್ಹುಣ್ಣಿ ಇನ್ಯಾತಕಂದss
ಹುಣ್ಣಿಯ ಕಾಳಕ್ಕ ಹೂಡಿತವರಿಬ್ಬರಿಗ್ಹುಣ್ಣಿ ಇನ್ಯಾತಕಂದss

ಶೀಗಮ್ಮನ ತವರು

1

ಕೆಂಪಾನೆ ಸೀರ‌್ಯಾಕಿ ತಾಂಬೂರ ಕೊಡದಕಿ
ಭಾಳ ಬಡತನ ಮಗಳಿಗಿ ಕೋಲೆ
ಭಾಳ ಬಡತನ ಮಗಳಿಗಿ ಕೋಲೆ

ಭಾಳಾನೆ ಬಡತನ ಮಗಳಿಗಿ ಬಸವಣ್ಣ
ಮಗಳ ಶೀಗಮ್ಮಗ ಕರತಾರೊ ಕೋಲೆ
ಮಗಳ ಶೀಗಮ್ಮಗ ಕರತಾರೊ ಕೋಲೆ

ಧಟ್ಯರೆ ಹರಿತಾಯಿ ಬುತ್ಯಾರೆ ಕಟ್ಟತಾಯಿ
ತಂಗಿನ ಕರಿಯಲಿ ನಡದಾರೆ ಕೋಲೆ
ತಂಗಿನ ಕರಿಯಲಿ ನಡದಾರೆ ಕೋಲೆ

2

ಗಚ್ಚಿನ ಮ್ಯಾಳಿಗಿ ಭಂಗರದ ನಿಚ್ಚಣಕಿ
ಏರಿ ನೋಡ್ಯಾಳೆ ತವರ‌್ಹಾದಿ ಕೋಲೆ
ಏರಿ ನೋಡ್ಯಾಳೆ ತವರ‌್ಹಾದಿ ಕೋಲೆ

ಏರಿನೆ ನೋಡ್ಯಾಳೆ ತವರ‌್ಹಾದಿ ಶೀಗಮ್ಮ
ಅಣ್ಣ ಸೂರಿಜ ಕರಿಯಲಿ ಹೊಂಟ ಕೋಲೆ
ಅಣ್ಣ ಸೂರಿಜ ಕರಿಯಲಿ ಹೊಂಟ ಕೋಲೆ

3

ಭಿರಿ ಭಿರಿ ಶ್ರೀಗೌರಿ ಮಾಳಗಿ ಇಳದಾಳೆ
ಚಿರಗಿಲಿ ನೀರ ಕೊಟ್ಟಾಳೆ ಕೋಲೆ
ಚಿರಗಿಲಿ ನೀರ ಕೊಟ್ಟಾಳೆ ಕೋಲೆ

ಕೂದಲ ಎಳಿಹಂಗ ಶಾವಿಗಿ ಜಾನಿದ
ಉಣ ಏಳೊ ಅಣ್ಣ ಬಸವಣ್ಣ ಕೋಲೆ
ಉಣ ಏಳೊ ಅಣ್ಣ ಬಸವಣ್ಣ ಕೋಲೆ

ನನ್ನಾಣೆ ಶ್ರೀಗೌರಿ ನನ್ನಗ ಹಸುವಿಲ್ಲ
ಕುಶನೂರ ಹಳ್ಳದಾಗ ಸಲ್ಲಸೀದ ಕೋಲೆ
ಕುಶನೂರ ಹಳ್ಳದಾಗ ಸಲ್ಲಸೀದ ಕೋಲೆ

4

ಕಾಜಿನ ಖಂಬಕ್ಕ ಮೋಜಿನ ಜಡಿಮಳೆಯೇ
ಕಾಜಿನ ಬಳಿಯೇ ಸರಸೂತ ಕೋಲೆ
ಕಾಜಿನ ಬಳಿಯೇ ಸರಸೂತ ಕೋಲೆ

ಕಾಜಿವಿನ ಬಳಿಯೇ ಸರಸುತ್ತ ಶೀಗಮ್ಮ
ಕಣ್ಣಾಗಿನ ನೀರ ಉದರುಸ್ತ ಕೋಲೆ
ಕಣ್ಣಾಗಿನ ನೀರ ಉದರುಸ್ತ ಕೋಲೆ

5

ಹೊರಗಿಂದೆ ಗಣಪಣ್ಣ ಓಡಿ ಬಳಿಯಕೆ ಬಂದ
ಯಾಕೆ ಹಡದಮ್ಮ ಭಾಳ ದುಕ್ಕ ಕೋಲೆ
ಯಾಕೆ ಹಡದಮ್ಮ ಭಾಳ ದುಕ್ಕ ಕೋಲೆ

ನಿಮ್ಮ ಮಾವ ನನಗ ಕರಿಲಾಕೆ ಬಂದರ
ನಿಮ್ಮ ತಂದಿ ನಮಗ ಖಳವಲ್ಲಂತರ ಕೋಲೆ
ನಿಮ್ಮ ತಂದಿ ನಮಗ ಖಳವಲ್ಲಂತರ ಕೋಲೆ

ನಮ್ಮ ಮನಿದಾಗ ಪರಡಿ ಪಾವಿಸದನ್ನ
ಬೆಳ್ಳಿ ಬಟಲಾಗ ತಿಳಿದುಪ್ಪ ಕೋಲೆ
ಬೆಳ್ಳಿ ಬಟಲಾಗ ತಿಳಿದುಪ್ಪ ಕೋಲೆ

ಬೆಳ್ಳಿನೆ ಬಟಲಾಗ ತಿಳಿದುಪ್ಪ ಉಂಡಿದುರ
ಇನ್ನೇನು ಉಣುತೆ ಹಡದಮ್ಮ ಕೋಲೆ
ಇನ್ನೇನು ಉಣುತೆ ಹಡದಮ್ಮ ಕೋಲೆ

6

ಗುಂಜಗೋಳಿಯ ಪಲ್ಯ ಕೆಂಪಜ್ವಾಳದ ರೊಟ್ಟಿ
ರಾಜಕತವರವರು ಬಡವರ‌್ಹಾರ ಕೋಲೆ
ರಾಜಕತವರವರು ಬಡವರ‌್ಹಾರ ಕೋಲೆ

ರಾಜಕತವರವರು ಬಡವರು ಇದ್ದರ
ನನಗ ನಿನಗ ಯಾಕ ಕರಿಯಲಿ ಬಂದ್ರು ಕೋಲೆ
ನನಗ ನಿನಗ ಯಾಕ ಕರಿಯಲಿ ಬಂದ್ರು ಕೋಲೆ

7

ಖಂಡುಗ ಘೋದಿ ಒಡಿದು ಉಂಡಿ ಚಕ್ರವ ಮಾಡಿ
ಕಂದ ಗಣಪಣನ ಹಗಲೂಟ ಕೋಲೆ
ಕಂದ ಗಣಪಣನ ಹಗಲೂಟ ಕೋಲೆ

ಕಂದನೆ ಗಣಪಣ್ಣ ಹಗಲೂಟ ಮಾಡಿದುರೆ
ಉಂಡ ಉಂಡಿಲ್ಲಂತೆ ಅಳುತಾನೆ ಕೋಲೆ
ಉಂಡ ಉಂಡಿಲ್ಲಂತೆ ಅಳುತಾನೆ ಕೋಲೆ

ಖಂಡುಗ ಕಡ್ಡಿ ಒಡಿದು ಉಂಡಿ ಚಕ್ರವ ಮಾಡಿ
ಕಂದ ಗಣಪಣನ ಛೆಂಜಿ ಊಟ ಕೋಲೆ
ಕಂದ ಗಣಪಣನ ಛೆಂಜಿ ಊಟ ಕೋಲೆ

ಕಂದ ಗಣಪಣ್ಣ ಛೆಂಜಿ ಊಟ ಮಾಡಿದುರ
ಉಂಡ ಉಂಡಿಲ್ಲಂತೆ ಅಳುತಾನೆ ಕೋಲೆ
ಉಂಡ ಉಂಡಿಲ್ಲಂತೆ ಅಳುತಾನೆ ಕೋಲೆ

ಯಾಕಳತ್ಯೋ ನನಕಂದ ಯಾಕರಿತ್ಯೋ ನನಕಂದ
ರಾಜಕತವರವರು ಬಡವರ‌್ಹಾರ ಕೋಲೆ
ರಾಜಕತವರವರು ಬಡವರ‌್ಹಾರ ಕೋಲೆ

ರಾಜಕತವರವರು ಬಡವರು ಇದ್ದರೆ
ನನಗ ನಿನುಗ ಯಾಕ ಕರಿಯಲಿ ಬಂದ್ರು ಕೋಲೆ
ನನಗ ನಿನುಗ ಯಾಕ ಕರಿಯಲಿ ಬಂದ್ರು ಕೋಲೆ

ತವರ ಮನಿಗಿ ಬಂದು ಸುಕುಲಿಂದ್ರೆ ಇರರೆಂದ್ರ
ಕಂದ ಗಣಪಣನ ಕಿರಿಕಿರಿ ಕೋಲೆ
ಕಂದ ಗಣಪಣನ ಕಿರಿಕಿರಿ ಕೋಲೆ

ಗಂಗಿಯ ಕೊಲೆ

ಗಂಗಿs ಮುಟ್ಟಾಗ್ಯಾಳಂದು ಯಮುನಾ ತಾ ಗವರಿಗಿ ಕರಿಯಲಿ ಹೋದss
ಎಂದಿಲ್ದು ಶಿವರಾಯಾ ಯಮುನಾ ತಾ ನಮ್ಮಗ ಕರಿಯಲಿ ಬಂದss
ಸಾಳಿಂದು ಗಣಪಣ್ಣ ಯಮುನಾ ತಾ ಓದಿ ಒಳಕೆ ಬಂದss
ಯಾಕ್ಯಾಕೆ ಹಡದಮ್ಮ ಯಮುನಾ ತಾ ಮಕವರ ಬಾಡಿದಾವss
ಎಂದಿಲ್ದು ಶಿವರಾಯಾ ಯಮುನಾ ತಾ ನಮ್ಮಗ ಕರಿಯಲಿ ಬಂದss
ನಿನ ಉಟ್ಟ ಸೀರ‌್ಯಾವ ತಾರೆ ಹಡದವ್ವ ನಿನ ತೊಟ್ಟ ಕುಬ್ಬಸ ತಾರss
ನಿನ ಹಣೆಯ ಕುಕಮ ತರೆ ಹಡದವ್ವ ಕಾಲ ಕಾಲುಂಗರ ತಾರss
ನಿನ ಇಟ್ಟ ವಸ್ತಾರ ತಾರೆ ಹಡದವ್ವ ನಿನ ಕೂಡ ಕುದ್ದರಿ ತಾರss
ಅಷ್ಟೆಲ್ಲ ಇಟ್ಟಿಕೊಂಡು ಗುಣಪಣ್ಣ ಗಂಗಿದ್ದ ಮನಿಗೆ ಹೋದss
ಮುತ್ತಿನ ಸಾಲದ ಜ್ವಾಳ ಗಂಗಮ್ಮ ತಂದು ಒರಳಿಗೆ ಇಟ್ಟss
ಸೊಲ್ಲಂತ ಬೀಸರಿ ಬಾರೆ ಅಕ್ಕನಾವು ಸೊಲ್ಲಂತ ಹಾಡರಿ ಭಾರss
ಇಷ್ಟೆಲ್ಲ ಬಲ್ಲಿದಕಿ ಗಂಗಮ್ಮ ವೈರಿ ಮ್ಯಾಲ ಯಾಕೆ ಬಂದೆ ?ss
ಮುತ್ತಿನ ಸಾಲದ ಕಳವಿ ಗಂಗಮ್ಮ ತಂದು ಒರಳಿಗೆ ಇಟ್ಟss
ಸೂ ಅಂತ ಕುಟ್ಟರಿ ಬಾರೆ ಅಕ್ಕನಾವು ಸೊಲ್ಲಂತ ಹಾಡರಿ ಬಾರss
ಇಷ್ಟೆಲ್ಲ ಬಲ್ಲಿದಕಿ ಗಂಗಮ್ಮ ವೈರಿ ಮ್ಯಾಲ ಯಾಕೆ ಬಂದೆ?ss
ನಾಗರ ಫಡಿ ಒಣಕಿ ಗಣಪಣ್ಣ ಗಂಗಮ್ಮನ ತೆಲಿಯಲ್ಲಿ ಹಾಕೆss
ತೇಳಿನ ಮರಿ ಹಂಗ ಗಂಗಮ್ಮ ಬಿದ್ದು ಪಡಸಲ್ಯಾಗ ಛಿಡದss
ನಾಗರಫಡಿ ಒಣಕಿ ಗಣಪಣ್ಣ ಗಂಗಮ್ಮನ ತೆಲಿಯಲ್ಲಿ ಹಾಕೆss
ಹಾವಿನ ಮರಿಹಂಗೆ ಗಂಗಮ್ಮ ಬಿದ್ದು ಅಂಗುಳಾಗೆ ಛಿಡುದss
ಏ ಯವ್ವ ಎಲೆ ತಾಯಿ ಯಮುನಾ ತಾ ನಿನ ವೈsರಿಗಿ ಕೊಲ್ಲೆ ಬಂದss
ನಿನ ವೈsರಿಗೆ ಕೊಲ್ಲೆ ಬಂದ ಹಡದವ್ವ ಮುತ್ತಿನಾರುತಗಿ ಬೆಳಗss
ನಿನ ಮೈರಿಗೆ ಕೊಲ್ಲೆ ಬಂದ ಹಡದವ್ವ ತುಪ್ಪುದಾರುತಗಿ ಬೆಳಗss

* * *