ಅಧಿಕ ಖುಷಿಅಧಿಕ ದುಃಖಖಿನ್ನತೆಯ ಕಾಯಿಲೆ

ಲಕ್ಷಣಗಳು: ಇದೊಂದು ಅವಧಿ ಗೊಂದಾವರ್ತಿ ಬಂದು ಹೋಗುವ ಮಾನಸಿಕ ಕಾಯಿಲೆ. ಇದರಲ್ಲಿ ಎರಡು ಮುಖಗಳಿವೆ. ಒಂದು ಮುಖ ಮೇನಿಯಾ ಅಥವಾ ಅಧಿಕ ಖುಷಿ/ಚಟುವಟಿಕೆಯದು. ಮತ್ತೊಂದು ಮುಖ ಡಿಪ್ರೆಷನ್-ಖಿನ್ನತೆಯದು. ನಡುವಂತರದಲ್ಲಿ ರೋಗಿ ರೋಗಲಕ್ಷಣಮುಕ್ತನಾಗಿ, ನಾರ್ಮಲ್ ಆಗೇ ಇರುತ್ತಾನೆ.

ಮೇನಿಯಾ: ಅಲ್ಪಕಾರಣಕ್ಕೆ ಅಥವಾ ಕಾರಣವಿಲ್ಲದೆ ವ್ಯಕ್ತಿ ಅತಿ ಸಂತೋಷ ಖುಷಿ ಅಥವಾ ಸಿಟ್ಟು ಕೋಪವನ್ನು ಪ್ರಕಟಿಸತೊಡಗುತ್ತಾನೆ. ಪರಿಚಿತರು, ಅಪರಿಚಿತರೊಂದಿಗೆ ಸರಸ ಸಂಭಾಷಣೆ/ವಿನೋದದ ಮಾತುಗಳನ್ನಾಡುತ್ತಾನೆ. ಯಾವುದೇ ವಿಷಯ/ಸಮಸ್ಯೆಯ ಬಗ್ಗೆ ತನಗೇ ಎಲ್ಲಾ ಗೊತ್ತಿದೆ ಎನ್ನುವಂತೆ. ಅಧಿಕಾರಯುತವಾಗಿ ಮಾತಾಡುತ್ತಾನೆ. ಆತನ ಮಟ್ಟಿಗೆ/ಅಭಿಪ್ರಾಯಕ್ಕೆ ಅಡ್ಡಿಪಡಿಸಿದರೆ, ಸಿಟ್ಟಿಗೇಳುತ್ತಾನೆ. ಅನಗತ್ಯವಾಗಿ ವಾದ ಮಾಡುತ್ತಾನೆ. ಮಾತಾಡಲು ಪ್ರಾರಂಭಿಸಿದರೆ ನಿಲ್ಲಿಸುವುದೇ ಇಲ್ಲ. ಜಿಡಿಮಳೆಯಂತೆ, ಸುಮ್ಮನೇ ಮಾತಾಡುತ್ತಲೇ ಇರುತ್ತಾನೆ. ತನ್ನ ಶಕ್ತಿ, ಸಾಮರ್ಥ್ಯ, ಸಾಧನೆ, ಯೋಜನೆಗಳ ಬಗ್ಗೆ ತನ್ನ ಸ್ಥಾನಮಾನಗಳ ಬಗ್ಗೆ ಬಡಾಯಿ ಕೊಚ್ಚುತ್ತಾನೆ. ತಾನೊಬ್ಬ ದೊಡ್ಡ ಶ್ರೀಮಂತ ಎನ್ನಬಹುದು, ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಜ್ಯಪಾಲರು, ರಾಷ್ಟ್ರಾಧ್ಯಕ್ಷರು ತನ್ನ ಖಾಸಗಳೆಯರು ಅಥವಾ ಸಂಬಂಧಿಗಳು ಎನ್ನಬಹುದು. ಸಿನಿತಾರೆಗಳು ತನ್ನ ಚಡ್ಡಿದೋಸ್ತ್ ಗಳೆನ್ನಬಹುದು. ತಾನು ಸೂಪರ್‌ಮ್ಯಾನ್ ಎನ್ನಬಹುದು. ಭಾರತ ಪಾಕ್ ಸಮಸ್ಯೆಯನ್ನಾಗಲೀ, ನಕ್ಸಲೈಟ್‌ಗಳ ಸಮಸ್ಯೆಯನ್ನಾಗಲೀ, ಭಾರತದ ಬಡತನ/ನಿರುದ್ಯೋಗ ಸಮಸ್ಯೆಯನ್ನಾಗಲೀ, ಸಮಾಜದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನಾಗಲೀ, ಅವ್ಯವಸ್ಥೆಯನ್ನಾಗಲೀ ಚಿಟಿಕೆ ಹೊಡೆಯುವಂತೆ ನಿವಾರಿಸುವುದಾಗಿ ಹೇಳಬಹುದು. “ನಾನೇ ಬುದ್ಧಿವಂತ, ನಾನೇ ಸರ್ವಶಕ್ತ, ನಾನೇ ದೇವಾಂಶಸಂಭೂತ, ನಾನೇ ದೇವರು” ಎಂದು ಹೇಳತೊಡಗುತ್ತಾನೆ. ಸದಾ ಚಟುವಟಿಕೆ, ಸದಾ ಏನಾದರೊಂದು (ಬೇಕಾದ/ಬೇಡದ) ಕೆಲಸ/ಚಟುವಟಿಕೆಯನ್ನು ಮಾಡುತ್ತಾನೆ. ಇದರಿಂದ ಎಲ್ಲರಿಗೂ ಕಿರಿಕಿರಿ, ತೊಂದರೆ. ಮೇನಿಯಾ ರೋಗಿ ಸಿಟ್ಟಿಗೆದ್ದರೆ ಅಪಾಯವೂ ಆಗಬಹುದು. ಹೊಡೆದಾಟ, ಹಿಂಸಾಚಾರಕ್ಕೆ ಇಳಿಯಬಹುದು. ಮೇನಿಯಾ ಸಾಮಾನ್ಯವಾಗಿ ಮೂರರಿಂದ ಆರು ತಿಂಗಳ ಕಾಲ ಉಳಿಯುತ್ತದೆ. ಮೇನಿಯಾ ರೋಗಿ ಮದ್ಯಪಾನ, ಮಾದಕವಸ್ತುಗಳ ಸೇವನೆಯನ್ನು ಪ್ರಾರಂಭ ಮಾಡಬಹುದು. ಉದಾರಿಯಾಗಿ ದೊಡ್ಡ ಪ್ರಮಾಣದ ಹಣ ಮತ್ತು ವಸ್ತುಗಳನ್ನು ದಾನಮಾಡಬಹುದು. ತನ್ನ ಮತ್ತು ಇತರರಿಗಾಗಿ ನೀರಿನಂತೆ ಹಣವನ್ನು ಖರ್ಚು ಮಾಡಬಹುದು.

ಖಿನ್ನತೆ: ರೋಗಿ ಖಿನ್ನತೆಗೆ ಹೋದರೆ, ಮೇನಿಯಾ ವಿರುದ್ಧದ ಸ್ಥಿತಿಗೆ ಹೋಗುತ್ತಾನೆ. ವಿಪರೀತ ಮಂಕುತನ, ಎಲ್ಲದರಲ್ಲೂ ನಿರಾಸಕ್ತಿ, ನಿರುತ್ಸಾಹ, ಕಾರಣವಿಲ್ಲದೆ ಅಥವಾ ಅಲ್ಪಕಾರಣಕ್ಕೇ ದುಃಖ, ಬೇಸರ, ನಕಾರಾತ್ಮಕ ಆಲೋಚನೆಗಳು, ನಿರಾಶೆ, ಅಸಹಾಯಕತೆ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತದೆ. ರೋಗಿ ಸರಿಯಾಗಿ ಆಹಾರ ಸೇವಿಸುವುದಿಲ್ಲ. ನಿದ್ರೆ ಮಾಡುವುದಿಲ್ಲ. ಲೈಂಗಿಕ ಚಟುವಟಿಕೆಯಲ್ಲೂ ಆಸಕ್ತಿ ಇರುವುದಿಲ್ಲ. ಶರೀರದಲ್ಲಿ ಯಾವ ರೋಗವಿಲ್ಲದಿದ್ದರೂ ತಲೆನೋವು, ಮೈಕೈನೋವು, ಸುಸ್ತು, ನಿಶ್ಯಕ್ತಿ ಎನ್ನುತ್ತಿರುತ್ತಾನೆ. ತಾನು ತಪ್ಪಿತಸ್ಥ, ಪಾಪ ಮಾಡಿದ್ದೇನೆ, ತನಗೆ ದೇವರು ಶಿಕ್ಷೆ ಕೊಡುತ್ತಾನೆ ಎನ್ನಬಹುದು. ತಾನೊಬ್ಬ ನಿರ್ಗತಿಕ ಎನ್ನಬಹುದು. ಖಿನ್ನತೆ ತೀವ್ರವಾದಾಗ, ಭ್ರಮೆಗಳೂ ಕಾಣಿಸಿಕೊಳ್ಳುತ್ತವೆ. ಎಲ್ಲರೂ ತನ್ನ ಬಗ್ಗೆ ಕೆಟ್ಟ ಮಾತುಗಳನ್ನಾಡುತ್ತಿದ್ದಾರೆ. ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ತನಗೆ ಯಾರೂ ಒಂದು ಪೈಸೆಯಷ್ಟು ಗೌರವ ಕೊಡುವುದಿಲ್ಲ. ಹೀಯಾಳಿಸುತ್ತಾರೆ ಎನ್ನಬಹುದು. ಮನೆಯೊಳಗೆ, ಹೊರಗೆ, ಇತರರಿಗೆ ಆಗಿರುವ ಕೆಡುಕು ಮತ್ತು ಕೆಟ್ಟ ಫಲಿತಾಂಶಗಳು, ತೊಂದರೆಗಳಿಗೆ ತಾನೇ ಕಾರಣ ಎನ್ನತೊಡಗಬಹುದು. ತನ್ನಂಥವರು ಭೂಮಿಗೆ ಭಾರ ಬದುಕುವುದಕ್ಕೆ ತಮಗೆ ಹಕ್ಕಿಲ್ಲ. ಸಾಯುವುದೇ ಮೇಲು ಎನ್ನಬಹುದು, ಆತ್ಮಹತ್ಯೆಗೆ ಪ್ರಯತ್ನಿಸಬಹುದು, ಖಿನ್ನತೆ ರೋಗ ಸಾಮಾನ್ಯವಾಗಿ ಆರು ತಿಂಗಳಿಂದ ಹನ್ನೆರಡು ತಿಂಗಳುಗಳವರೆಗೆ ಇರಬಹುದು.

 

ಕಾಯಿಲೆ ಯಾರಿಗೆ ಬರುತ್ತದೆ?

ಗಂಡಸರಿಗೆ ಹೋಲಿಸಿದರೆ, ಹೆಂಗಸರಿಗೆ ಹೆಚ್ಚು (ಪ್ರಮಾಣ ಗಂ:ಹೆಂ:2:3) ಮೇಲ್ವರ್ಗಗಳಲ್ಲಿ ಹೆಚ್ಚು. ಪಟ್ಟಣಪ್ರದೇಶ, ಗ್ರಾಮಾಂತರ ಪ್ರದೇಶಗಳಲ್ಲಿ ಸಮಾನವಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿ ಒಂದು ಸಾವಿರ ಜನಸಂಖ್ಯೆಯಲ್ಲಿ 8ರಿಂದ 12 ಜನರಿಗೆ ಈ ಕಾಯಿಲೆ ಬರುವ ಸಂಭವ ಇರುತ್ತದೆ. ಸಾಮಾನ್ಯವಾಗಿ BPAD ಕಾಯಿಲೆ 30 ವರ್ಷ ವಯಸ್ಸಿನ ನಂತರ ಪ್ರಾರಂಭವಾಗುವುದಾದರೂ, ಯಾವುದೇ ವಯಸ್ಸಿನಲ್ಲಿ ಮಕ್ಕಳು ಹದಿವಯಸ್ಸಿನವರಲ್ಲೂ ಕಾಣಬಹುದು.

ಏಕೆ ಬರುತ್ತದೆ?

i)    ಅನುವಂಶೀಯವಾಗಿ: ಶೇಕಡಾ ಹತ್ತರಷ್ಟು ಪ್ರಕರಣಗಳಲ್ಲಿ ಕಾಯಿಲೆ ವಂಶಪಾರಂಪರ್ಯವಾಗಿರಬಹುದು.

ii)   ಮಿದುಳಿನ ನರಕೋಶಗಳಲ್ಲಿ ನರವಾಹಕ ಡೋಪಮಿನ್ ಹೆಚ್ಚಾಗುವುದು (ಮೇನಿಯಾದಲ್ಲಿ) ಅಥವಾ ಕಡಿಮೆಯಾಗುವುದು (ಖಿನ್ನತೆಯಲ್ಲಿ, ಹಾಗೆಯೇ ಸೆರೋಟೊನಿನ್ ಏರುಪೇರು ಕೂಡ ಈ ಕಾಯಿಲೆಯಲ್ಲಿ ಕಂಡಬರುತ್ತದೆ)

iii)  ಹಾರ್ಮೋನುಗಳು: ಕಾರ್ಟಿಸಾಲ್ ಹಾರ್ಮೋನು ಹೆಚ್ಚಾದಾಗ, ಥೈರಾಕ್ಸಿನ್ ಹಾರ್ಮೋನು ಕಡಿಮೆಯಾದಾಗ, ಖಿನ್ನತೆ ಕಂಡುಬರುತ್ತದೆ.

iv)              ನಕಾರಾತ್ಮಕ ಜೀವನ ಘಟನೆಗಳು ಮತ್ತು ಒತ್ತಡದ ಸನ್ನಿವೇಶ-ವಿಷಯಗಳು, ತೀವ್ರವಾದ ನಷ್ಟ ನೋವಿನ ಘಟನೆಗಳು, ಮೇಲಿಂದ ಮೇಲೆ ಕಷ್ಟನಷ್ಟಗಳುಂಟಾಗುವುದು ಖಿನ್ನತೆಗೆ ದಾರಿ ಮಾಡಬಹುದು.

ಚಿಕಿತ್ಸೆ

1) ಔಷಧಿಗಳು

i)    ಲಿಥಿಯಂ ಲವಣ: ಇದು ಮೇನಿಯಾ ರೋಗಕ್ಕೂ ಬಳಸಲ್ಪಡುತ್ತದೆ. ಮೇನಿಯಾ ಖಿನ್ನತೆ ಪುನರಾವರ್ತನೆಯಾಗದಂತೆ ಮಾಡಲೂ ಬಳಸಲ್ಪಡುತ್ತದೆ. ಸಾಮಾನ್ಯವಾಗಿ 900 ಮಿ.ಗ್ರಾಂ.ನಿಂದ 1200 ಮಿ.ಗ್ರಾಂ. ಲಿಥಿಯಂ ಅನ್ನು ಪ್ರತಿದಿನ ಸೇವಿಸಬೇಕು. ರಕ್ತದಲ್ಲಿ ಲಿಥಿಯಂ ಪ್ರಮಾಣ 0.8 ರಿಂದ 1.2 ಮಿ.ಲೀ.   ಈಕ್ವಿವೆಲೆಂಟ್ಸ್‌ ಇರಬೇಕು.

ii)   ಸೋಡಿಯಂ ವಾಲ್ಪ್ರೊಯೇಟ್ : 500 ಮಿ.ಗ್ರಾಂ ನಿಂದ 1500 ಮಿ.ಗ್ರಾಂನವರೆಗೆ ನಿತ್ಯಸೇವನೆ.

iii)ಕಾರ್ಬಮೆಜೆಷಿನ್: 400 ರಿಂದ 1200 ಮಿ.ಗ್ರಾಂ.

iv)  ಹೆಲೋಪೆರಿಡಾಲ್/ರಿಸ್ಟಿರಿಡಾನ್/ಓಲಾಂಜೆಷಿನ್‌/ಕ್ವಿಟವಿನ್ಇದು ಮೇನಿಯಾ ಲಕ್ಷಣಗಳನ್ನು ಕಡಿಮೆ ಮಾಡಲು ಉಪಯೋಗವಾಗುತ್ತದೆ.

v)   ಇಮಿಪ್ರಮಿನ್, ಅಮಿಟ್ರಿಪ್ಟಲಿನ್, ಫ್ಲೂಯಾಕ್ಸೆಮಿನ್, ಎಸ್ಸಿಟಲೋಪಾಂ ಖಿನ್ನತೆ ಲಕ್ಷಣಗಳನ್ನು ಕಡಿಮೆ ಮಾಡಲು ಉಪಯೋಗವಾಗುತ್ತದೆ.

vi)  ವಿದ್ಯುತ್ ಕಂಪನ ಚಿಕಿತ್ಸೆ: ತೀವ್ರವಾದ ಖಿನ್ನತೆ ಇದ್ದಾಗ, ತೀವ್ರವಾದ ಮೇನಿಯಾ ರೋಗವಿದ್ದಾಗ, ವಿದ್ಯುತ್ ಕಂಪನ ಚಿಕಿತ್ಸೆಯನ್ನು ಆಯ್ದ ರೋಗಿಗಳಿಗೆ ನೀಡಲಾಗುತ್ತದೆ.

ದೀರ್ಘಕಾಲದ ಔಷಧಿ ಸೇವನೆ: ಸಾಕಷ್ಟು ಪ್ರಕರಣಗಳಲ್ಲಿ ಜೀವನಪರ್ಯಂತ ಔಷಧ ಸೇವನೆ ಬೇಕಾಗುತ್ತದೆ.

1.   ಮನೆಯವರ, ಸಂಬಂಧಪಟ್ಟವರ ಪ್ರೀತಿವಿಶ್ವಾಸ ಆಸರೆ.

2.         ಪುನರ್ವಸತಿ ಮತ್ತು ಉದ್ಯೋಗ-ಸ್ವಾವಲಂಬನೆಯ ಬದುಕೂ ಅಗತ್ಯ.