ಆರತಿ ಹಾಡು-1

ಚುಕ್ಕಿಯ ಸೀರಿನುಟ್ಟು ಚುನುಕದ ಬಟ್ಟನಿಟ್ಟು
ಶಂಬೋ ಶಿವನು ರಂಬಿ ಪಾರ್ಬತಿಗಾರೂತಿ ಬೆಳಗುವೇನೆ
ಸಾರಿ ಬಂದೆವೆ ದಾರಿಗಿ ನಾಯೇನೆಂದೆ
ರೀ ರೀ ಮೊದುಲಾಗಿ ಪಾರ್ಬತಿಗಾರೂತಿ ಬೆಳಗುವೇನೆ
ಗಂಜಿಯ ಸೀರಿನುಟ್ಟು ಗಂಧದ ಬಟ್ಟನಿಟ್ಟು
ಶಂಬೊ ಶಿವನು ರಂಬಿ ಪಾರ್ಬತಿಗಾರುತಿ ಬೆಳಗುವೇನೆ

ಆರತಿ ಹಾಡು-2

ಮುತ್ತಿಂದೆ ಒಂದಾರ‌್ತ ಮಾಡಿ
ಮುತ್ತ ಮಾಣಿಕುದಾರ‌್ತ ಮಾಡಿ
ಮುತ್ತಿಂದೆ ಒಂದಾರ‌್ತ ಮಾಡಿ
ಮುತ್ತ ಮಾಣಿಕುದಾರ‌್ತ ಮಾಡಿ
ಮಿತ್ರೇರಯಿವರು ಕೂಡಿ ಪೀಡಿರತುಗೆ
ಆರೂತಿ ಬೆಳಗಿರಿ ಗವರಮ್ಮಗೆ
ಮಿತ್ರೇರಯಿವರು ಕೂಡಿ ಪೀಡಿರತುಗೆ
ಆರೂತಿ ಬೆಳಗಿರಿ ಗವರಮ್ಮಗೆ

ಭಂಗರದೆ ಒಂದಾರ‌್ತ ಮಾಡಿ
ಭಂಗಾರ ಮಾಣಿಕುದಾರ‌್ತ ಮಾಡಿ
ಭಂಗರದೆ ಒಂದಾರ‌್ತ ಮಾಡಿ
ಭಂಗಾರ ಮಾಣಿಕುದಾರ‌್ತ ಮಾಡಿ
ಗಿರಜಿ ಕಲ್ಯಾಣದಲ್ಲಿ ಗೀರಮಲ್ಲಿಗೆ
ಆರೂತಿ ಬೆಳಗಿರಿ ಗವರಮ್ಮಗೆ
ಗಿರಜಿ ಕಲ್ಯಾಣದಲ್ಲಿ ಗೀರಮಲ್ಲಿಗೆ
ಆರೂತಿ ಬೆಳಗಿರಿ ಗವರಮ್ಮಗೆ

ಆರತಿ ಹಾಡು-3

ಮುತ್ತಿನಾರೂತಿರವ್ವ ರತ್ನದಾರೂತಿ
ಮುತ್ತಿನಾರೂತಿರವ್ವ ರತ್ನದಾರೂತಿ
ಎತ್ತಿ ಬೆಳಗೀರಿ ನೀವು ಸೂರ್ಯರಂಗಗೆ
ಸೂರ್ಯರಂಗಗೇ ಸೂವಾಸದೇವಗೆ
ವಾಸನುಳರಾಣಿಗೆ ಉಲ್ಲಾಸದಿಂದಲಿ
ವಾಸನುಳರಾಣಿಗೆ ಉಲ್ಲಾಸದಿಂದಲಿ

ಭಂಗಾರಾರೂತಿರವ್ವ ರತ್ನದಾರೂತಿ
ಭಂಗಾರಾರೂತಿರವ್ವ ರತ್ನದಾರೂತಿ
ಎತ್ತಿ ಬೆಳಗೀರಿ ನೀವು ಸೂರ್ಯರಂಗಗೆ
ಸೂರ್ಯರಂಗಗೇ ಸೂವಾಸದೇವಗೆ
ವಾಸನುಳರಾಣಿಗೆ ಉಲ್ಲಾಸದಿಂದಲಿ
ವಾಸನುಳರಾಣಿಗೆ ಉಲ್ಲಾಸದಿಂದಲಿ

ಆರತಿ ಹಾಡು-4

ಟೆಂಗಿನಕಾಯಿ ತರಸಿ ತಂಗೇರುಡಿಯಲ್ಲಿ ಧರಸಿ
ಟೆಂಗಿನಕಾಯಿ ತರಸಿ ತಂಗೇರುಡಿಯಲ್ಲಿ ಧರಸಿ

ಆರೂತಿ ಮಾಡ ಮೇಘಾ ಗಾಂಧಿಜಿಮಾತ್ಮರಿಗಾ
ಆರೂತಿ ಮಾಡ ಮೇಘಾ ಗಾಂಧಿಜಿಮಾತ್ಮರಿಗಾ

ಬಾಳೆಯ ಹಣ್ಣ ತರಸಿ ಬಾಲೇರುಡಿಯಲ್ಲಿ ಧರಸಿ
ಬಾಳೆಯ ಹಣ್ಣ ತರಸಿ ಬಾಲೇರುಡಿಯಲ್ಲಿ ಧರಸಿ

ಆರೂತಿ ಮಾಡ ಮೇಘಾ ಗಾಂಧಿಜಿಮಾತ್ಮರಿಗಾ
ಆರೂತಿ ಮಾಡ ಮೇಘಾ ಗಾಂಧಿಜಿಮಾತ್ಮರಿಗಾ

ಆರತಿ ಹಾಡು-5

ಚೂಳದಾಪೂರ ತಳದಲ್ಲಿ ಏನೇನು ಕಂಡೆನೆ
ಚೂಳದಾಪೂರ ತಳದಲ್ಲಿ ಏನೇನು ಕಂಡೆನೆ
ಎಡಕ ನಂದಿಯ ಕೋಲು ಬಲಕ ಪಾಲಿಕಗೋಳು
ಛೆಯ ಹೂವ ಛೆತ್ತರಿ ಗುಡಿ ಮುಂದೆ ಕಂಡೆನೆ
ಗುಗ್ಗಳದಾರೂತಿ ಗುಡಿ ಮುಂದೆ ಕಂಡನೆ
ಆಶಾಳದಾಶಾಳದ್ಹೂವ ಗುಡಿ ಮುಂದೆ ಕಂಡೆನೆ
ಎಲ್ಲದ್ಹೂವಿನಖಿನ ಬೆಲ್ಲಪತ್ತರಿದ್ಹೂವ
ಜಯ ಮಂಗಳಾರೂತಿ ಸುಬೆಮಂಗಲಂ

ಶಿವ ಪಾರಬತಿ ತಳದಲ್ಲಿ ಏನೇನು ಕಂಡೆನೆ
ಶಿವ ಪಾರಬತಿ ತಳದಲ್ಲಿ ಏನೇನು ಕಂಡೆನೆ
ಎಡಕ ನಂದಿಯ ಕೋಲು ಬಲಕ ಪಾಲಿಕಗೋಳು
ಛೆಯ ಹೂವ ಛೆತ್ತರಿ ಗುಡಿ ಮುಂದೆ ಕಂಡೆನೆ
ಗುಗ್ಗಳದಾರೂತಿ ಗುಡಿ ಮುಂದೆ ಕಂಡೆನೆ
ಆಶಾಳದಾಶಾಳದ್ಹೂವ ಗುಡಿ ಮುಂದೆ ಕಂಡೆನೆ
ಎಲ್ಲದ್ಹೂವಿನಖಿನ ಬೆಲ್ಲ ಪತ್ತರಿದ್ಹೂವ
ಜಯ ಮಂಗಳಾರೂತಿ ಸುಬೆಮಂಗಲಂ
ಜಯ ಮಂಗಳಾರೂತಿ ಸುಬೆಮಂಗಲಂ

ಆರತಿ ಹಾಡು-6

ಖಾರಿಕಗೊಲ್ಲೆ ಬಾಗಿ ನಡದವು ತಬಕಾ ಥುಂಬನು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ

ಬಾದಮಗೊಲ್ಲೆ ಬಾಗಿ ನಡದವು ತಬಕಾ ಥುಂಬನು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ

ಲಿಂಬಿಯಗೊಲ್ಲೆ ಬಾಗಿ ನಡದವು ತಬಕಾ ಥುಂಬನು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ

ಬಾರಿಯಗೊಲ್ಲೆ ಬಾಗಿ ನಡದವು ತಬಕಾ ಥುಂಬನು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ

ಕಾರಿಯಗೊಲ್ಲೆ ಬಾಗಿ ನಡದವು ತಬಕಾ ಥುಂಬನು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ
ತಬಕಾ ಥುಂಬನು ಬಾ ಶ್ರೀ ನಮ್ಮಾರುತಿ ಮಾಡಣು ಬಾ

ಆರತಿ ಹಾಡು-7

ಚುಳದಾಪೂರಕ ನಾನೇ ಹೋದ
ತುಕಾಬಾಯಿ ತಾನೆ ಬಂದ್ಳು
ಹೂವಿನ ರಾಯಾ ತಂದು
ಆರೂತಿ ಮಾಡಾಲೆನ್ರಿ
ಶಾರಾ ಶ್ರೀ ಶಲ್ಯ ನಿಮಗೆ
ಹೂವಿನ ರಾಯಾ ತಂದು
ಆರೂತಿ ಮಾಡಾಲೆನ್ರಿ

ಎಕಲಾರಕ ನಾನೇ ಹೋದ
ತುಕಬಾಯಿ ತಾನೆ ಬಂದ್ಳು
ಹೂವಿನ ರಾಯಾ ತಂದು
ಆರೂತಿ ಮಾಡಾಲೆನ್ರಿ
ಶಾರಾ ಶ್ರೀ ಶಲ್ಯ ನಿಮಗೆ
ಹೂವಿನ ರಾಯಾ ತಂದು
ಆರೂತಿ ಮಾಡಾಲೆನ್ರಿ

ಆರತಿ ಹಾಡು-8

ಎಳ್ಳಿಂದೊಂದಾರುತಗಿ ಮಾಡಲೆ
ಗವರಿ ಪಾಡಲೆ
ಗವರಿ ದಾಳಂಬಲೆ
ಗವರಿ ಧೂಳಂಬಲೆ
ಮುತ್ತಿನ ಕೂಡ

ತುಪ್ಪದೊಂದಾರುತಗಿ ಮಾಡಲೆ
ಗವರಿ ಪಾಡಲೆ
ಗವರಿ ದಾಳಂಬಲೆ
ಗವರಿ ಧೂಳಂಬಲೆ
ಮುತ್ತಿನ ಕೂಡ

ಮಂಗಳಾರತಿ ಹಾಡು

ಜಯಮಂಗಲಂ ನಿತ್ಯ ಸುಯಿಮಂಗಲಂ       ॥ಪ ॥

ಅಂದುಳ್ಳ ಅರಮನಿ ಚಂದುಳ್ಳ ಪಡಸಾಲಿ
ಹೊಂದಿಸಿ ಕುಂತಾವ ಹಲಗಿಗೋಳ ॥ಜಯಮಂಗಲಂ…
ರಾಯ ಬಮ್ಮಣ್ಣನ ಅರಮನಿ ಬಾಗಿಲ್ದಾಗ
ಚಂದದಲಿ ಕುಂತಾಳ ಗೌರಮ್ಮ ॥ಜಯಮಂಗಲಂ                                        ॥1 ॥

ಆಯುಳ್ಳ ಅರಮನಿ ಛಾಯುಳ್ಳ ಪಡಸಾಲಿ
ಜೋಡಿಸಿ ಕುಂತಾವ ಹಲಗಿಗೋಳ ॥ಜಯಮಂಗಲಂ…
ಶೆಟ್ಟಿ ಶೀತಲನ ಅರಮನಿ ಬಾಗಿಲ್ದಾಗ
ಛಾಯೆದಲ್ಲಿ ಕುಂತಾಳ ಗೌರಮ್ಮ ॥ಜಯಮಂಗಲಂ                                      ॥2 ॥

ದೊಡ್ಡಹರಿವಾಣದಾಗ ದೊಡ್ಡಕ್ಕಿ ಪಾಯಸ
ಸಜ್ಜಕದ್ಹೋಳಿಗಿ ತುಂಬ ತಿಳಿದುಪ್ಪsವ  ಜಯಮಂಗಲಂ…
ದೊಡ್ಡಾಕಿ ಸುಸುಮಕ್ಕ ನೈವೇದ್ಯ ಮಾಡಿದರ
ಇನ್ನಷ್ಟು ಸೌಭಾಗ್ಯ ತನಗೆಂದಳs ॥ಜಯಮಂಗಲಂ                                     ॥3 ॥

ಸಣ್ಣ ಹರಿವಾಣದಾಗ ಸಣ್ಣಕ್ಕಿ ಪಾಯಸ
ಎಣ್ಣಿಹೋಳಿಗಿ ಮುಂದ ತಿಳಿದುಪ್ಪವ  ಜಯಮಂಗಲಂ…
ಸಣ್ಣಾಕಿ ನಾಗಮ್ಮ ನೈವೇದ್ಯ ಮಾಡಿದರ
ಇನ್ನಷ್ಟು ಸೌಭಾಗ್ಯ ತನಗೆಂದಳ ॥ಜಯಮಂಗಲಂ                                       ॥4 ॥

ತಾಯಿ ಗೌರಮ್ಮ ತನ್ನ ವಾಲಿಯ ತೆಳಗಿರುವ
ಛಾಯೆವುಳ್ಳ ಐದು ಮುತ್ತ ತೆಗೆದ ॥ಜಯಮಂಗಲಂ…
ಬಾಲಿ ಸುಸ್ಮಕ್ಕಗ ಬಾಬಾ ಎನುತಲಿ
ಬಾಲನ ಸಂತಾನ ಕೊಡುತಿಹಳ ॥ಜಯಮಂಗಲಂ                                      ॥5 ॥

ಅಕ್ಕ ಗೌರಮ್ಮ ತನ್ನ ನತ್ತಿನ ತೆಳಗಿರುವ
ಕಪ್ಪವುಳ್ಳ ಐದು ಮುತ್ತತಗದ ॥ಜಯಮಂಗಲಂ…
ಮಿತ್ರಿ ಸುಸಮಕ್ಕಾಗ ಬಾಬಾ ಎನುತಲಿ
ಪುತ್ರಾನ ಸಂತಾನ ಕೊಡುತಿಹಳ್ಳ ॥ಜಯಮಂಗಲಂ                                    ॥6 ॥

* * *