ಲಕ್ಷಣಗಳು: ವೇಗವಾಗಿ ಅಥವಾ ನಿಧಾನವಾಗಿ, ಹಂತಹಂತವಾಗಿ ಅಥವಾ ಒಂದೇ ಸಮನೆ ನಿರಂತರವಾಗಿ ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯಗಳು ಕ್ಷೀಣಿಸುತ್ತಾ ಕೊನೆಗೆ ವ್ಯಕ್ತಿ ತನ್ನೆಲ್ಲ ಬುದ್ಧಿಗೆ ತಕ್ಕಂತೆ ಕೌಶಲಗಳನ್ನು ಕಳೆದುಕೊಂಡು ಪರಾವಲಂಬಿಯಾಗಿ, ಬದುಕಿ, ಹಾಸಿಗೆ ಹಿಡಿದು ತೀವ್ರ ಅಂಗವೈಕಲ್ಯದಿಂದ ಬಳಲುತ್ತಾನೆ. ಸಾಮಾನ್ಯ ಜ್ಞಾನ, ವಿಶೇಷ ಜ್ಞಾನ, ನೆನಪಿನ ಶಕ್ತಿ, ಲೆಕ್ಕಾಚಾರ, ಭಾಷಾ ಸಾಮರ್ಥ್ಯ, ವಿವೇಚನೆ, ಸಮಸ್ಯೆ ವಿಷಯಗಳನ್ನು ವಿಶ್ಲೇಷಿಸುವ, ಕಾರ್ಯಾ-ಕಾರಣ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಶಕ್ತಿ, ಸರಿ ನಿರ್ಧಾರಗಳನ್ನು ಮಾಡುವ ಚಾತುರ್ಯ, ತನ್ನ ಬೇಕು-ಬೇಡಗಳನ್ನು ನಿರ್ಧರಿಸುವ ಮತ್ತು ಅದನ್ನು ಇತರರಿಗೆ ತಿಳಿಸುವ ಸಾಮರ್ಥ್ಯ, ಪಂಚೇಂದ್ರಿಯಗಳ ಅನುಭವಕ್ಕೆ ಬಂದದ್ದನ್ನು ಅಥೈಸುವ ಸಾಮರ್ಥ್ಯ, ಸಾಮಾಜಿಕ ನೈಪುಣ್ಯತೆ ಎಲ್ಲವೂ ಕುಗ್ಗಿ, ಕೊನೆಗೆ ಇಲ್ಲವಾಗುತ್ತದೆ.

ಪ್ರಾರಂಭದಲ್ಲಿ ಇತ್ತೀಚಿನ ಸಂಗತಿಗಳು, ಘಟನೆಗಳು ಮರೆಯಲಾರಂಭಿಸುತ್ತವೆ. ಉಪಹಾರಕ್ಕೆ ಏನು ತಿಂದೆ, ಅರ್ಧ ಗಂಟೆಯ ಮೊದಲು ಯಾರನ್ನು ಭೇಟಿ ಮಾಡಿದೆ, ಏನು ಮಾತಾಡಿದೆ, ಕನ್ನಡಕ, ಪೆನ್ನು, ಚಪ್ಪಲಿ, ಚೀಲಗಳನ್ನು ಎಲ್ಲಿಡಲಾಯಿತು. ಹಣದ ವ್ಯವಹಾರಗಳು ಇತ್ಯಾದಿ ಎಲ್ಲ ಮರೆತು ಹೋಗಲು ಶುರುವಾಗುತ್ತದೆ. ಕ್ರಮೇಣ ಲೆಕ್ಕಾಚಾರದಲ್ಲಿ ತಪ್ಪಾಗಲು ಶುರುವಾಗುತ್ತದೆ. ಮೊದಲಿನ ನೈಪುಣ್ಯತೆ ಈಗಿರುವುದಿಲ್ಲ. ಸೂಕ್ಷ್ಮತೆ ಕಡಿಮೆಯಾಗುತ್ತದೆ. ಸಣ್ಣಪುಟ್ಟ ತಪ್ಪುಗಳಿಂದ ಹಿಡಿದು ದೊಡ್ಡ ತಪ್ಪುಗಳು, ಕೊರತೆಗಳು ಕಾಣಿಸಿಕೊಳ್ಳುತ್ತವೆ. ರೋಗಿಗೆ ಅದರ ಅರಿವಿರುವುದಿಲ್ಲ. ವ್ಯಕ್ತಿ ಮೂರ್ಖತನ/ಪೆದ್ದನಂತೆ ವರ್ತಿಸತೊಡಗುತ್ತಾನೆ. ಜೊತೆಗೆ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಳ್ಳಬಹುದು. ಮೊದಲು ಅಂತರ್ಮುಖಿಯಾಗಿದ್ದ ವ್ಯಕ್ತಿ, ಈಗ ಬಹುರ್ಮುಖಿಯಾಗಬಹುದು. ಮೊದಲು ಹಣದ ವಿಚಾರದಲ್ಲಿ ಶಿಸ್ತು, ಕಟ್ಟುನಿಟ್ಟಿನಿಂದ ನಡೆದುಕೊಳ್ಳುತ್ತಿದ್ದ ವ್ಯಕ್ತಿ ಈಗ ಬಹು ಉದಾರಿಯಾಗಿ, ಪೂರ್ವಾಪರ ಯೋಚನೆ ಮಾಡದೇ ಖರ್ಚು ಮಾಡಬಹುದು. ಮೊದಲು ಸಹನೆ-ಶಾಂತತೆಯ ಪ್ರತೀಕವಾಗಿದ್ದ ವ್ಯಕ್ತಿ, ಈಗ ಶೀಘ್ರ ಕೋಪಿಷ್ಠನಾಗಬಹುದು. ಮೊದಲು ಏಕಪತ್ನೀ ವ್ರತಸ್ಥನಾಗಿದ್ದವ ಈಗ ಹೆಂಗಸರೊಂದಿಗೆ ಚೆಲ್ಲುಚೆಲ್ಲಾಗಿ ವರ್ತಿಸಬಹುದು. ಮೊದಲು ಗಂಭೀರವದನನಾಗಿರುತ್ತಿದ್ದ ವ್ಯಕ್ತಿ, ಈಗ ಜೋಕುಗಳನ್ನು ಹೇಳುತ್ತಾ, ಎಲ್ಲರನ್ನೂ ನಗಿಸಲು ಪ್ರಾರಂಭಿಸಬಹುದು. ಕ್ರಮೇಣ ವ್ಯಕ್ತಿಗೆ ದಿಕ್ಕು, ವಿಳಾಸ ಗೊತ್ತಾಗುವುದಿಲ್ಲ. ತನ್ನ ಮನೆಯಿಂದ ಮಾರ್ಕೆಟ್ಟಿಗೆ, ಬಸ್‌ ನಿಲ್ದಾಣಕ್ಕೆ ಯಾವ ದಿಕ್ಕಿಗೆ ಹೋಗಬೇಕೆಂಬುದು ಗೊತ್ತಾಗುವುದಿಲ್ಲ. ತನ್ನ ಮನೆ ಎಂದು ಪಕ್ಕದ ಮನೆಗೋ, ಪಕ್ಕದ ಬೀದಿಯ ಮನೆಗೋ ಹೋಗಬಹುದು. ಅಪರಿಚಿತರನ್ನು ಇವರು ನನಗೆ ಪರಿಚಿತರು, ಇವರು ಇಂಥವರು ಎಂದು ತಪ್ಪಾಗಿ ಗುರುತಿಸಬಹುದು. ಮನೆಯೊಳಗಡೆಯೇ ವ್ಯಕ್ತಿ ತೀವ್ರ ಗೊಂದಲಕ್ಕೆ ಒಳಗಾಗಬಹುದು. ಅಡುಗೆ ಮನೆಗೆ ಇದು ಬಾತ್‌ರೂಂ ಎಂತಲೋ, ಮಲಗುವ ಕೋಣೆಯನ್ನು ಡ್ರಾಯಿಂಗ್ ರೂಮ್ ಎಂತಲೋ ಹೇಳಿ ಅದರಂತೆಯೇ ನಡೆದುಕೊಳ್ಳಬಹುದು.

ಕೈಕಾಲುಗಳ ನಡುಕ, ನಡೆಯುವಾಗ ಬ್ಯಾಲೆನ್ಸ್ ಇಲ್ಲದೆ ತಟ್ಟಾಡುವುದು, ನೆಲದಲ್ಲಿ ಕುಳಿತು ಮೇಲಕ್ಕೆ ಏಳಲಾಗದೇ ಪರದಾಡುವುದು, ಉಡುಪಿನ ಗುಂಡಿಗಳನ್ನು ಹಾಕಲಾಗದಿರುವುದು, ಬಾಚಣಿಗೆಯನ್ನು ಸರಿಯಾಗಿ ಹಿಡಿದು ತಲೆ ಬಾಚಿಕೊಳ್ಳಲು ಆಗಿದಿರುವುದು, ಸೀರೆ ಕಟ್ಟಿಕೊಳ್ಳಲು ಆಗದಿರುವುದು, ಉಡುಪನ್ನು ಹಿಂದುಮುಂದಾಗಿ ಅಥವಾ ತಲೆಕೆಳಗಾಗಿ ಹಾಕಿಕೊಂಡು ಪೇಚಾಡುವುದು, ಸಹಿ ಒಂದೇ ರೀತಿ ಹಾಕಲಾಗದೇ, ವ್ಯಕ್ತಿಯ ಸಹಿಯನ್ನು ಒಪ್ಪಲು ಬ್ಯಾಂಕ್ ಅಥವಾ ಇನ್ನಿತರ ಸಂಸ್ಥೆಗಳು ನಿರಾಕರಿಸುವುದು, ವಸ್ತುಗಳನ್ನು ಸರಿಯಾಗಿ ಆಯಾ ಸ್ಥಾನದಲ್ಲಿ ಇಡಲಾಗದಿರುವುದು, ಹೀಗೆ ಪ್ರತಿಯೊಂದು ದೈನಂದಿನ ಕೆಲಸ ಕಾರ್ಯಗಳಲ್ಲಿ ವ್ಯಕ್ತಿ ಪರಾವಲಂಬಿಯಾಗುತ್ತಾನೆ. ಅವ್ಯವಸ್ಥೆ, ಅಸಮತೋಲನ, ಗೊಂದಲ ಕಾಣಿಸಿಕೊಳ್ಳುತ್ತದೆ. ಮುಂದುವರೆದ ಹಂತಗಳಲ್ಲಿ, ನರಸಂಬಂಧೀ ರೋಗಲಕ್ಷಣಗಳಾದ ಫಿಟ್ಸ್, ಪಾರ್ಶ್ವವಾಯು, ಅನಿಯಂತ್ರಿತ ಕೈಕಾಲುಗಳ ಚಲನೆ, ಮಲಮೂತ್ರ ವಿಸರ್ಜನೆಯ ಮೇಲೆ ಹತೋಟಿ ಇಲ್ಲದಿರುವುದು, ಹಾಸಿಗೆ, ಬಟ್ಟೆಯಲ್ಲೇ ಮಲಮೂತ್ರ ಮಾಡಿ, ಅದರ ಅರಿವೇ ಇಲ್ಲದಿರುವುದು, ಕಾಲ-ಸ್ಥಳ-ಜನರ ಪರಿಜ್ಞಾನವಿಲ್ಲದಿರುವುದು, ಅರೆಪ್ರಜ್ಞಾಸ್ಥಿತಿ ಅಥವಾ ಪೂರ್ಣಪ್ರಜ್ಞಾಹೀನ ಸ್ಥಿತಿ-ಕೋಮ ಕಾಣಿಸಿಕೊಳ್ಳುವುದು.

ಡೆಮೆನ್ಷಿಯ ಬರಲು ಕಾರಣಗಳು

ಮಿದುಳಿನ ನರಕೋಶಗಳು ಕ್ಷೀಣಿಸುವುದು, ನರವಸ್ತುವಿನ ಪ್ರಮಾಣ ಕಡಿಮೆಯಾಗುವುದು, ನರವಾಹಕ-ಅಸಿಟೈಲ್ ಕೋಲಿನಿಂದ ಪ್ರಮಾಣ ತಗ್ಗುವುದು, ಮಿದುಳು ಗಾತ್ರದಲ್ಲಿ ಚಿಕ್ಕದಾಗುತ್ತಾ ಹೋಗುವುದು ಡೆಮೆನ್ಷಿಯದಲ್ಲಿ ಕಾಣುತ್ತೇವೆ. ಮಿದುಳಿನ ಸ್ಕ್ಯಾನಿಂಗ್‌ನಲ್ಲಿ ಎಂ.ಆರ್‌.ಐ. ಚಿತ್ರಗಳಲ್ಲಿ ಅಟ್ರೋಫಿ-ಮಿದುಳಿನ ಸವೆತವನ್ನು ಸ್ಪಷ್ಟವಾಗಿ ಕಾಣಬಹುದು. ಈ ಆಟ್ರೋಫಿಗೆ ಕಾರಣಗಳಿವು.

1.   ಹತೋಟಿಯಲ್ಲಿಲ್ಲದ ಸಿಹಿಮೂತ್ರರೋಗ ಮತ್ತು ಅಧಿಕ ರಕ್ತದೊತ್ತಡ ಇರುವ ರೋಗಿಗಳಲ್ಲಿ ರಕ್ತನಾಳಗಳು ದುರ್ಬಲಗೊಂಡು, ಮಿದುಳಿನಲ್ಲಿ ರಕ್ತಸ್ರಾವ ಉಂಟಾಗುವುದು (haemorrhages).

2.   ರಕ್ತನಾಳಗಳು ಪೆಡಸಗೊಂಡು, ಕೊಲೆಸ್ಟೆರಾಲ್ ಅವುಗಳ ಬಿತ್ತಿಗೆ ಅಂಟಿಕೊಂಡು, ರಕ್ತ ಪೂರೈಕೆಯಲ್ಲಿ ಕೊರತೆಯುಂಟಾಗುವುದು, ರಕ್ತನಾಳಗಳು ಕಟ್ಟಿಕೊಂಡು ಅವುಗಳಿಂದ ಶಕ್ತಿ ಪಡೆಯುತ್ತಿದ್ದ ಮಿದುಳಿನ ಭಾಗ ಹಾನಿಗೀಡಾಗುವುದು (infarction).

3.   ನೇರವಾಗಿ, ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು, ಮಿದುಳಿನ ವಸ್ತುವಿಗೆ ಹಾನಿಯುಂಟಾಗುವುದು, ರಕ್ತಹೆಪ್ಪುಗಟ್ಟಿ ಅದರ ಒತ್ತಡದಲ್ಲಿ ಮಿದುಳಿಗೆ ಪೆಟ್ಟಾಗುವುದು.

4.   ವಿಷವಸ್ತುಗಳಿಂದ ಸೀಸ, ಪಾದರಸ, ಕಾರ್ಬನ್‌ಮಾನಾಕ್ಸೈಡ್‌ನಿಂದ ಮಿದುಳಿಗೆ ಹಾನಿಯುಂಟಾಗುವುದು.

5.   ಸಿಹಿಮೂತ್ರ ರೋಗಿಗಳು ಅಗತ್ಯಕ್ಕಿಂತ ಹೆಚ್ಚು ಇನ್‌ಸುಲಿನ್ ಅಥವಾ ಮಾತ್ರೆಗಳನ್ನು ಸೇವಿಸಿ, ಆಹಾರ ಸೇವನೆ ಮಾಡುವುದು ತಡವಾದಾಗ ಉಂಟಾಗುವ            “ಹೈಪೋಗ್ಲೈಸೀಮಿಯಾ”-ಗ್ಲುಕೋಸ್ ಪ್ರಮಾಣ ಕುಗ್ಗುವುದರಿಂದ, ಮಿದುಳಿನ ನರಕೋಶಗಳಿಗೆ ಹಾನಿಯುಂಟಾಗುವುದು.

6.   ಸೋಂಕು, ಕ್ಷಯರೋಗಾಣುಗಳು, ಇನ್ನಿತರ ಬ್ಯಾಕ್ಟೀರಿಯಾಗಳು, ಎಚ್‌.ಐ.ವಿ. ವೈರಸ್‌ಗಳು, ಸಿಫಿಲಿಸ್ ರೋಗಾಣುಗಳು ಮಿದುಳು ಮತ್ತು ಮಿದುಳು ಪೊರೆಗೆ ಸೋಂಕನ್ನು ಉಂಟುಮಾಡಿ ಮಿದುಳಿಗೆ ಹಾನಿಯುಂಟಾಗುವುದು (Chronic meningitls, Chronic encephalitis).

7.   ವಿಟಮಿನ್ ಬಿ1 ಬಿ6 ಬಿ12 ಕೊರತೆ. ಇದು ಮದ್ಯಪಾನ ಚಟ ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ.

8.   “ನಾರ್ಮಲ್ ಪ್ರೆಶರ್ ಹೈಡ್ರೋಕೆಫಲಸ್”, ಇದೊಂದು ವಿಶಿಷ್ಟ ಸ್ಥಿತಿ ಮಿದುಳಿನೊಳಗೆ ಮಿದುಳು ಮತ್ತು ಮಿದುಳಿನ ಬಳಿಯ ದ್ರವ (ಸೆರೆಬ್ರೋ ಸ್ಟೈನಲ್‌ಪ್ಲೂಯಿಡ್) ಹೆಚ್ಚಾಗಿ ಅಥವಾ ಅದರ ಸರಾಗ ಓಡಾಟಕ್ಕೆ ತಡೆಯುಂಟಾಗಿ, ಒತ್ತಡ ಏರುತ್ತದೆ. ಆದರೆ ಮಿದುಳಿನ ಕುಳಿಗಳು ದೊಡ್ಡದಾಗುತ್ತಾ, ಮಿದುಳಿನ ವಸ್ತು ಕಡಿಮೆಯಾಗುತ್ತಾ, ಹೆಚ್ಚಿನ ದ್ರವಕ್ಕೆ ಜಾಗಮಾಡಿಕೊಡುವುದರ ಮೂಲಕ ಒತ್ತಡ ಸಾಮಾನ್ಯವಾಗಿಯೇ ಉಳಿಯುತ್ತದೆ. ಮಿದುಳಿನ ವಸ್ತು ಕಡಿಮೆಯಾಗಿ,      ಡೆಮೆನ್ಷಿಯ ಕಾಣಿಸಿಕೊಳ್ಳುತ್ತದೆ.

9.   ಮಿದುಳಿನಲ್ಲಿ ಗಡ್ಡೆಗಳು, ಕ್ಯಾನ್ಸರ್, ಮಿದುಳಿನಲ್ಲಿ ಒಂದು/ಹಲವು ಗಡ್ಡೆಗಳು ಬೆಳೆದು ಅಥವಾ ಕ್ಯಾನ್ಸರ್ ಉಂಟಾಗಿ ಮಿದುಳಿನ ವಸ್ತು ನಾಶವಾಗತೊಡಗುತ್ತದೆ.

10. ಆಲ್ಜೈಮರನ ಕಾಯಿಲೆ: ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲದ ಕಾರಣಗಳಿಂದ ಮಿದುಳಿನ ನರಕೋಶಗಳ ಸಂಖ್ಯೆ ಕ್ಷೀಣಿಸುತ್ತಾ, ಮಿದುಳಿನ ವಸ್ತು ಕಡಿಮೆಯಾಗುತ್ತಾ ಹೋಗುತ್ತದೆ. 65 ವರ್ಷ ವಯಸ್ಸಾದವರಲ್ಲಿ ಶೇಕಡಾ 50ರಷ್ಟು ಮಂದಿಯಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ, ವೃದ್ಧರ ಬದುಕನ್ನು             ಪರಾವಲಂಬಿಯಾಗಿ ಮಾಡುತ್ತದೆ. 1906ರಲ್ಲಿ ಜರ್ಮನಿಯ ನರರೋಗ ತಜ್ಞ ಡಾ|| ಆಲೋಯಿಸ್ ಆಲ್ಜೈಮರ್ ಈ ರೋಗದ ಲಕ್ಷಣಗಳನ್ನು ಮೊದಲು ವಿವರಿಸಿದ್ದರಿಂದ ಈ ಕಾಯಿಲೆಗೆ ಆತನ ಹೆಸರನ್ನೇ ಇಡಲಾಗಿದೆ. ಮಿದುಳಿನ ಜೀವುಂಡಿಗೆ (biopsy) ತೆಗೆದು ಸೂಕ್ಷ್ಮದರ್ಶಿಯ ಕೆಳಗಿಟ್ಟು ನೋಡಿದರೆ, ನರಕೋಶಗಳು ಕ್ಷೀಣಿಸುವುದು, ನಾಶವಾಗುವುದು. ಅವುಗಳಲ್ಲಿ ಗಂಟುಹಾಕಿಕೊಂಡ ಎಳೆಗಳು (ನ್ಯೂರೋಫಿಬ್ರರಿಟ್ಯಾಂಗಲ್ಸ್) ಮತ್ತು ಚೆಕ್ಕೆಗಳು       (ಸೆನೈಲ್‌ಪ್ಲೇಕ್ಸ್) ಇರುತ್ತವೆ ಎಂದು ವಿವರಿಸಿದ. 1970 ಸುಮಾರಿಗೆ ಮಿದುಳಿನ ನರಕೋಶಗಳಲ್ಲಿ “ನೆನಪಿನ ಮುಖ್ಯವಾಗಿ ಬೇಕಾದ ಅಸಿಟೈಲ್‌ಕೋಲಿನ್‌”          ನರವಾಹಕವನ್ನು ಈ ಕಾಯಿಲೆಯಲ್ಲಿ ಕಡಿಮೆಯಾಗುವುದನ್ನು ಗುರುತಿಸಲಾಯಿತು. ಕುಟುಂಬದಲ್ಲಿ ಇತರರಿಗೆ ಪಾರ್ಕಿನ್‌ಸನ್‌ಕಾಯಿಲೆ, ಡೌನ್‌ಸಿಂಡ್ರೋಮ್ (ಬುದ್ಧಿಮಾಂದ್ಯತೆ) ಇರುಬಹುದು. ಆಲ್ಜೀಮೀರನ ಕಾಯಿಲೆ ಗಂಡಸರಿಗಿಂತ ಹೆಂಗಸರಲ್ಲಿ ಹೆಚ್ಚು. ಶೇಕಡಾ 10ರಷ್ಟು ರೋಗಗಳಲ್ಲಿ, ಕೊನೆಯ ಹಂತದಲ್ಲಿ ಫಿಟ್ಸ್, ಕೈಕಾಲು ನಡುಕ, ಚಲನೆ ನಿಧಾನವಾಗುವುದು ಇತ್ಯಾದಿ ನರಸಂಬಂಧೀ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಅನುವಂಶಿಕವಾಗಿ ಈ ಕಾಯಿಲೆ ಬರಬಹುದು.

11. ಇತರರ ನರರೋಗಗಳು ಪಾರ್ಕಿನ್‌ಸನ್‌ನ ಕಾಯಿಲೆ, ಹಂಟಿಂಗ್‌ಟನ್‌ನ ಕೋರಿಯಾ, ದೀರ್ಘಕಾಲ ಉಳಿಯುವ ಮಾನಸಿಕರೋಗ ಸ್ಕಿಜೋಫ್ರಿನಿಯಾದಲ್ಲಿ ಕೂಡ, ರೋಗದ ಕಡೆಯ ಹಂತಗಳಲ್ಲಿ ಡೆಮೆನ್ಷಿಯ ಕಾಣಿಸಿಕೊಳ್ಳುವುದು.

ಚಿಕಿತ್ಸೆ ಏನು?

ಡೆಮೆನ್ಷಿಯ ರೋಗವನ್ನು ಚಿಕಿತ್ಸೆಗೆ ಒಳಪಡಿಸಬಹುದಾದಂತಹ ಒಂದು ಗುಂಪು ಹಾಗೂ ಚಿಕಿತ್ಸೆ ಇಲ್ಲದಿರುವ ಇನ್ನೊಂದು ಗುಂಪು ಎಂದು ವಿಭಾಗಿಸಲಾಗುತ್ತದೆ Treatable dementia (ಚಿಕಿತ್ಸೆ ಲಭ್ಯವಿರುವ) ಪ್ರಕರಣಗಳೆಂದರೆ,

1.   ಅಪೌಷ್ಠಿಕತೆ/ವಿಟಮಿನ್‌ ಬಿ1, ಬಿ6, ಬಿ12 ಕೊರತೆಯಿಂದ ಬರುವ ಡೆಮೆನ್ಷಿಯದಲ್ಲಿ ಈ ವಿಟಮಿನ್‌ಗಳನ್ನು ಕೊಡುವುದರಿಂದ, ಅಪೌಷ್ಠಿಕತೆಯ ನಿವಾರಣೆಯಿಂದ,    ಡೆಮೆನ್ಷಿಯ ಉಲ್ಬಣಿಸದಂತೆ ಮಾಡಬಹುದು.

2.   ಸಿಹಿಮೂತ್ರ ರೋಗ, ಅಧಿಕ ರಕ್ತದೊತ್ತಡ ಕಾಯಿಲೆಗಳಲ್ಲಿ ಈ ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೊಳಪಟ್ಟರೆ, ಮಿದುಳಿಗೆ ಮತ್ತಷ್ಟು           ಹಾನಿಯಾಗುವುದು ತಪ್ಪುತ್ತದೆ.

3.   ಕ್ಷಯರೋಗಾಣುಗಳಿಂದ ಮಿದುಳಿಗೆ ಸೋಂಕಾಗಿದ್ದರೆ, ಕ್ಷಯರೋಗಕ್ಕೆ ಚಿಕಿತ್ಸೆ ನೀಡಬೇಕು.

4.   Normal Pressure Hydrocephalus (ಮಿದುಳಿನಲ್ಲಿ ಹೆಚ್ಚಿನ ದ್ರವ ಸಂಗ್ರಹ)ನಲ್ಲಿ ಶಸ್ತ್ರಕ್ರಿಯೆ ಮಾಡಿ ಹೆಚ್ಚಿನ ದ್ರವವು ಎದೆ/ಹೊಟ್ಟೆಯೊಳಕ್ಕೆ ಹೋಗುವಂತೆ             ಮಾಡಿದರೆ ಒತ್ತಡ ತಗ್ಗಿ, ಮಿದುಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.

5.   ಶಸ್ತ್ರಕ್ರಿಯೆಯಿಂದ ತೆಗೆಯಬಹುದಾದ ಗಡ್ಡೆಗಳಿದ್ದರೆ ಅವನ್ನು ತೆಗೆಯಬೇಕು.

ಉಳಿದ ಕೇಸ್‌ಗಳಲ್ಲಿ, ಡೆಮೆನ್ಷಿಯವನ್ನು ತಗ್ಗಿಸುವ ಯಾವುದೇ ನಿರ್ದಿಷ್ಟ/ಚಿಕಿತ್ಸಾ ಕ್ರಮಗಳಿರುವುದಿಲ್ಲ. ಅಸಿಟೈಲ್‌ಕೋಲಿನ್‌ ನರವಾಹಕವನ್ನು ಹೆಚ್ಚಿಸುವ ಕೆಲವು ಔಷಧಗಳು-ಡೋನೆಪಿಜೆಲ್, ರಿವೋಸ್ಟಿಗ್‌ಮಿನ್‌ ಇತ್ಯಾದಿ ಸ್ವಲ್ಪ ಜ್ಞಾಪಕಶಕ್ತಿಯನ್ನು ಹೆಚ್ಚಿಸಬಲ್ಲದು.

ಡೆಮೆನ್ಷಿಯ ರೋಗಿಗಳಲ್ಲಿ ನಿದ್ರಾಹೀನತೆ, ಚಡಪಡಿಕೆ, ಸಿಟ್ಟು, ಕೋಪ, ಆಕ್ರಮಣಶೀಲತೆ, ಖಿನ್ನತೆ, ಭಯ ಇತ್ಯಾದಿ ಭಾವೋದ್ವೇಗಗಳಿದ್ದರೆ, ಫಿಟ್ಸ್ ಶುರುವಾಗಿದ್ದರೆ, ರೋಗಿ ಶಮನಕಾರಿ ಮಾತ್ರೆಗಳು, ಖಿನ್ನತೆ ನಿವಾರಕಗಳು, ನಿದ್ರಾಜನಕಗಳು, ಫಿಟ್ಸ್ ನಿರೋಧಕ ಔಷಧಿಗಳನ್ನು ವೈದ್ಯರು ಸೂಚಿಸುತ್ತಾರೆ.

ಡೆಮೆನ್ಷಿಯ ರೋಗಿಯ ಆರೈಕೆ

ತನ್ನ ನೆನಪಿನ ಶಕ್ತಿ, ಬೌದ್ಧಿಕ ಸಾಮರ್ಥ್ಯ ಮತ್ತು ದೈಹಿಕ ಕೌಶಲ್ಯಗಳನ್ನು ಕಳೆದುಕೊಳ್ಳುತ್ತಿರುವ ವ್ಯಕ್ತಿಯ ಆರೈಕೆ ಬಹಳ ಮುಖ್ಯವಾಗುತ್ತದೆ. ತನ್ನ ಬೇಕು ಬೇಡಗಳನ್ನು ಗಮನಿಸಲಾಗದ, ತಮ್ಮ ರಕ್ಷಣೆಯನ್ನು ಮಾಡಿಕೊಳ್ಳಲಾಗದ ಇತರರ ಮೇಲೆ ಅವಲಂಬಿತರಾದ, ಈ ವ್ಯಕ್ತಿಗಳನ್ನು ಪ್ರೀತಿಯಿಂದ, ಸಣ್ಣ ಮಕ್ಕಳನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಆದಷ್ಟು ಅವರು ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತೆ ಹಾಗೂ ತಮಗೆ ಅಳಿದು ಉಳಿದಿರುವ ಬುದ್ಧಿಕೌಶಲ್ಯಗಳನ್ನು ಉಪಯೋಗಿಸುವಂತೆ ಪ್ರೇರಣೆ/ತರಬೇತಿ ನೀಡಬೇಕು.

ಉದಾಹರಣೆಗೆ:

  • ವ್ಯಕ್ತಿಯ ಎಲ್ಲಾ ವಸ್ತು, ವಸ್ತ್ರಗಳು ಮತ್ತು ಇತರರ ಸಾಮಾನುಗಳನ್ನು ಅವರ ಸಮೀಪದಲ್ಲಿ ಇರುವಂತೆ ವ್ಯವಸ್ಥೆ ಮಾಡಿ, ಹುಡುಕಿಕೊಂಡು ಅವರು ದೂರ ಹೋಗುವಂತೆ ಇರಬಾರದು.
  • ಅವರು ಇರುವ/ಮಲಗುವ ರೂಮಿನಲ್ಲೇ ಬಾತ್‌ ರೂಂ ಮತ್ತು ಶೌಚಾಲಯ ಇರಬೇಕು.
  • ಆಹಾರ ಸೇವನೆ, ಉಡುಗೆ, ತೊಡುಗೆ, ಸ್ನಾನ-ಸ್ವಚ್ಚತೆಯನ್ನು ಎಲ್ಲಿಯವರೆಗೆ ಸಾಧ್ಯವೋ, ಅಲ್ಲಿಯವರೆಗೆ ಅವರೇ ಮಾಡಿಕೊಳ್ಳಲಿ. ಕನಿಷ್ಠ ಪ್ರಮಾಣದ ಸಹಾಯ/ಮಾರ್ಗದರ್ಶನವನ್ನು ಮಾಡಿ.
  • ಮನೆಯೊಳಗೆ ಅವರು ಸರಾಗವಾಗಿ ಓಡಾಡುವಂತೆ ವ್ಯವಸ್ಥೆ ಮಾಡಿ.
  • ಅವರನ್ನು ಒಬ್ಬರೇ ಹೊರಗೆ ಹೋಗಲು ಬಿಡಬೇಡಿ. ಜೊತೆಯಲ್ಲಿ ಯಾರಾದರೂ ಇರಲಿ.
  • ಅವರ ನೆನಪನ್ನು ಕೆದಕುವಂತಹ ಪ್ರಶ್ನೆಗಳನ್ನು ಕೇಳಬೇಡಿ. ಬಂದ ನೆಂಟರನ್ನು ಇವರು ಯಾರು ಹೇಳಿ ನೋಡೋಣ? ಇವರು ಕಳೆದ ಸಲ ಯಾವಾಗ          ಬಂದಿದ್ದರು? ಎಂದೆಲ್ಲಾ ಕೇಳಬೇಡಿ. ಬಂದವರನ್ನು ಇವರು ಇಂಥವರು ಎಂದು ನೀವೇ ಪರಿಚಯ ಮಾಡಿಕೊಡಿ, ಅವರಿಗೆ ಲೆಕ್ಕ ಮಾಡಲು, ಹಣದ ವ್ಯವಹಾರ ಮಾಡಲು ಬಿಡಬೇಡಿ.
  • ಅವರ ನೆನಪು ವೇಗವಾಗಿ ಕ್ಷೀಣಿಸುತ್ತಿದ್ದರೆ, ಅವರ ಹಣಕಾಸು/ವ್ಯವಹಾರಗಳನ್ನು ನೋಡಿಕೊಳ್ಳಲು “ಮೇನೇಜರ್” ಅವರನ್ನು ನೇಮಿಸುವಂತೆ,   ನ್ಯಾಯಾಲಯವನ್ನು ಕೇಳಿಕೊಳ್ಳಿ, ಎಷ್ಟು ಸಾಧ್ಯವೋ ಅಷ್ಟು ಬೇಗ, ಅವರ ನೆನಪು ಚೆನ್ನಾಗಿರುವಾಗಲೇ “ವಿಲ್‌” ಬರೆಸಿ.
  • ಡೆಮೆನ್ಷಿಯ ರೋಗಿಗೆ ಶಾರೀರಿಕ ರೋಗ ಲಕ್ಷಣಗಳು ಕಾಣಿಸಿಕೊಂಡರೆ (ಜ್ವರ, ಕೆಮ್ಮು, ನೋವು, ವಾಂತಿ-ಬೇಧಿ ಇತ್ಯಾದಿ) ತಡಮಾಡದೇ ವೈದ್ಯರ ನೆರವನ್ನು            ಪಡೆಯಿರಿ. ತಮ್ಮ ನೋವು ತೊಂದರೆಗಳ ಬಗ್ಗೆ ವಿವರವಾಗಿ ಹೇಳಲು ಅವರಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
  • ಡೆಮೆನ್ಷಿಯ ರೋಗ ನಿರ್ಣಯಕ್ಕೆ ಮಿದುಳಿನ ಸಿಟಿಸ್ಕ್ಯಾನ್ ಅಥವಾ ಎಂ.ಆರ್.ಐ. ಪರೀಕ್ಷೆ ಅಥವಾ ಮನೋಪರೀಕ್ಷೆ (Neuro Psychological Test) ಅಗತ್ಯವಾದರೂ, ಈಗಾಗಲೇ ಮಿದುಳು ಸಾಕಷ್ಟು ಹಾನಿಗೀಡಾಗಿದ್ದರೆ, ರೋಗಿಯ ಸಂದರ್ಶನದಿಂದಲೇ ರೋಗನಿಧಾನ ಸಾಧ್ಯ. ಆದ್ದರಿಂದ ಸ್ಕ್ಯಾನಿಂಗ್ ಅಥವಾ ಎಂ.ಆರ್.ಐ. ಪರೀಕ್ಷೆಗಳನ್ನು ಹಣದ ಅಡಚಣೆ ಇದ್ದರೆ, ಮಾಡಿಸುವ ಅಗತ್ಯವಿಲ್ಲ.

ಮುಂಜಾಗ್ರತೆ:

1.   ಡೆಮೆನ್ಷಿಯ ಬರದಂತೆ ತಡೆಗಟ್ಟಲು ಸ್ವಲ್ಪಮಟ್ಟಿಗೆ ಸಾಧ್ಯವಿದೆ. ಚಿಕ್ಕಂದಿನಿಂದಲೇ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ ಎಷ್ಟು ಚುರುಕಾಗಿರುತ್ತಾನೋ, ತನ್ನ ಬೌದ್ಧಿಕ ಸಾಮರ್ಥ್ಯವನ್ನು ಬಳಸುತ್ತಾನೋ ಅಷ್ಟರಮಟ್ಟಿಗೆ, ಡೆಮೆನ್ಷಿಯ ಬರುವ ಸಂಭವ ಕಡಿಮೆಯಾಗುತ್ತದೆ. ಮಧ್ಯ ವಯಸ್ಕರಾಗಿರುವಾಗ, ಜನ ಸಾಮಾನ್ಯವಾಗಿ ನಿಷ್ಕ್ರಿಯರಾಗುತ್ತಾರೆ. ಆಲೋಚನೆ, ಚಿಂತನೆ, ಲೆಕ್ಕಾಚಾರ, ವಿಶ್ಲೇಷಣೆ, ಹೊಸ ಕಲಿಕೆಯಂತಹ ಬೌದ್ಧಿಕ ಚಟುವಟಿಕೆಗಳಿಂದ ದೂರವಾಗಿರುತ್ತಾರೆ. ಹೀಗೆ ಮಾಡಬಾರದು.      ಮಿದುಳನ್ನು ಉಪಯೋಗಿಸಬೇಕು.

2.   ಸಿಹಿ, ಕರಿದ ಪದಾರ್ಥಗಳು, ಜಿಡ್ಡು ಕೊಬ್ಬಿನ ಪದಾರ್ಥಗಳನ್ನು ಆದಷ್ಟು ಕಡಿಮೆ ತಿನ್ನಿ. ರಕ್ತದಲ್ಲಿ ಕೊಲೆಸ್ಟೆರಾಲ್ ಪ್ರಮಾಣ ಪ್ರತಿ ಮಿಲಿಯಲ್ಲಿ 250 ಮಿ.ಗ್ರಾಂ. ಮೀರದಂತೆ ನೋಡಿಕೊಳ್ಳಿ.

3.   ಸಿಹಿಮೂತ್ರ ರೋಗ, ಅಧಿಕ ರಕ್ತದೊತ್ತಡ, ಕಾಯಿಲೆಗಳಿದ್ದರೆ, ಕ್ರಮಬದ್ಧವಾಗಿ ಚಿಕಿತ್ಸೆ ಮಾಡಿಸಿ, ಹತೋಟಿಯಲ್ಲಿಡಿ.

4.   ಮಿದುಳಿಗೆ ನೇರವಾಗಿ ಪೆಟ್ಟು ಬೀಳದಂತೆ ಎಚ್ಚರವಹಿಸಿ. ರಸ್ತೆ, ಅಪಘಾತಗಳಾಗದಂತೆ ನೋಡಿಕೊಳ್ಳಿ. ತಲೆಯ ಮೇಲೆ ಭಾರವಾದ ವಸ್ತುಗಳು ಬೀಳದಂತೆ, ಹೊಡೆದಾಟದಲ್ಲಿ ತಲೆಗೆ ಪೆಟ್ಟು ಬೀಳದಂತೆ ನಿಗಾವಹಿಸಿ.

5.   ಮದ್ಯಪಾನ, ಮಾದಕ ವಸ್ತುಗಳಿಂದ ದೂರವಿರಿ. ಹಾಗೇ ಇತರ ವಿಷವಸ್ತುಗಳ ಸಂಪರ್ಕದಿಂದ (ಸೀಸ, ಪಾದರಸ, ಕಾರ್ಬನ್‌ಮಾನಾಕ್ಸೈಡ್) ದೂರವಿರಿ.