7. ಜ್ಯೋತಿ ಸ್ವಾಗತದ ಪದ
ಶ್ರೀಬಂದು ಶ್ರೀಯೇ ಬಾಗಿಲಲಿ ನಿಂದಾವೇ
ದೀವಿಗೆ ಒಳವೀಕೇ ಕರದೊಳ್ಳೀ
ದೀವಿಗೆ ಒಳವೀಕೇ ಕರಕೊಳ್ಳೀ ತಾಯಮ್ಮ
ಜೋತೀ ಕಾಣಿಕೆಯೇ ಬರಬೇಕೂ ॥
ಶ್ರೀ ಬಂದು ಶ್ರೀಯೇ ಜಗಲೀ ಮೇಲೆ ನಿಂದಾವೇ
ಜೋತೀ ಮುಂದೆ ಮುಂದೇ ಕರಕೊಳ್ಳೀ
ಜೋತೀ ಮುಂದಕ್ಕೇ ಕರಕೊಳ್ಳೀ ತಾಯಮ್ಮಾ
ಜೋತೀ ಕಾಣಿಕೆಯೇ ಬರಬೇಕೂ ॥
8 ಎಣ್ಣೆ ಎರೆಯುವ ಪದ
ಒಂದೆಂಬೆರಳೀಗೇ ಹೊಂದಿಟ್ಟೊನ್ನುಂಗೂರ
ಬಂದೀ ಮಂಡಲಕೇ ಹೊಳೆದಾವೂ
ಬಂದೀ ಮಂಡಲಕೇ ಹೊಳೆದಾವೇ ಒಳಗಿರುವಾ
ತಾಯಮ್ಮಾರಣ್ಣೇ ಎರೆ ಬನ್ನೀ
ಎಣ್ಣೇ ಎರೆದಮ್ಮಾ ಬಣ್ಣಾನೇ ಉಡಿರಮ್ಮಾ
ಬಾಲಯ್ಯರ್ಹಡಿರೀ ಮನೆತುಂಬಾ
ಬಾಲಯ್ಯರ್ಹಡಿರೀ ಮನೆತುಂಬಾ ನೆಂದೇಳೀ
ಕಾಮಾನುಡುಗಾರೂ ಹರಸ್ಯಾರೂ ॥
ಮೂರು ಬೆರಳಿಗೇ [ತಿರುವಿ]ಟ್ಟೊನ್ನುಂಗೂರಾ
ಮುತ್ತೂ ಮಂಡಲಕೇ ಹೊಳೆದಾವೂ
ಮುತ್ತೂ ಮಂಡಲಕೇ ಹೊಳೆದಾವೆ ಒಳಗಿರುವಾ
ಅಕ್ಕಮ್ಮಾರೆಣ್ಣೇ ಎರೆಬನ್ನೀ
ಎಣ್ಣೇ ನೆರೆದಾರೇ ಪುಣ್ಯಾವು ನಿಮಗಾದು
ಮುಂದಿನ ದೇವರಿಗೊಂದರಿಕ್ಯಾದೂ
ಮುಂದಿನ ದೇವರಿಗೊಂದರಿಕ್ಯಾದೂ ತಾಯಮ್ಮಾ
ಆನಂದಕಾಲಾ ಸುಖಿಬಾಳೀ
ಆನಂದ ಕಾಲಾ ಸುಖಿಬಾಳೀ ಎಂದೇಳಿ
ಕಾಮಾನುಡುಗಾರೂ ಹರಸ್ಯಾರು ॥
ಹತ್ತೂ ಬೆರಳಿಗೇ ವತ್ತಿಟ್ಟೊನ್ನುಂಗೂರಾ
ಮುತ್ತೂ ಮಂಡಲಕೇ ಹೊಳೆದಾವೂ
ಮುತ್ತೂ ಮಂಡಲಕೇ ಹೊಳೆದಾವೂ ಒಳಗಿರುವಾ
ತಂಗ್ಯಮ್ಮಾರೆಣ್ಣೇ ಎರೆಬನ್ನೀ
ಎಣ್ಣೇ ನೆರೆದಮ್ಮಾ ಪಟ್ಟೇನೇ ಉಡಿರಮ್ಮಾ
ಪುತ್ರಯ್ಯರ್ಹಡಿರೀ ಮನೆತುಂಬಾ
ಪುತ್ರಯ್ಯರ್ಹಡಿರೀ ಮನೆತುಂಬ ನೆಂದೇಳಿ
ಕಾಮಾನುಡುಗಾರೂ ಹರಸ್ಯಾರೂ ॥
ಹಾಂಗೆಂಬಾ ಸುದ್ದೀ ಕೇಳ್ಯಾರೆ ತಾಯಮ್ಮಾ
ಕೈಯಲ್ಲಿ ಗಿಂಡೀ ಹಿಡಿದೀಪಾ
ಕೈಯಲ್ಲಿ ಗಿಂಡೀ ಹಿಡಿದೀಪಾ ತಕ್ಕೊಂಡು
ಮುಮ್ಮಾಳಿಗೆ ಕದವಾ ಪಿಡಿದ್ಹೋಗೀ
ಚಿನ್ನಾದಟ್ಟಕ್ಕೇ ರನ್ನಾದೇಣಿಯ ಚಾಚೀ,
ಬಣ್ಣಾದ ಕೊಡನಾ ಬಾಯ್ಬಿಚ್ಚೀ
ಬಣ್ಣಾದ ಕೊಡನಾ ಬಾಯ್ಬಿಚ್ಚೀ ತಾಯಮ್ಮಾ
ಚಿನ್ನದ ಗಿಂಡೀಲೀ ಎಣ್ಣೇಯಾ
ಚಿನ್ನದ ಗಿಂಡೀಲಿ ಎಣ್ಣೇಯಾ ತೆಗೆತಂದೂ
ಜೋತಮ್ಮಗೆ ಎಣ್ಣೇ ಎರೆದಾರೊ ॥
* * *
9. ಅಕ್ಕಿ ಬತ್ತದ ಪದ– 1
ಹೂವ್ವೋ ಹೂವ್ವನ್ನಿರೆ ಹೂವ್ವನ್ನಿರಳುಲಲಿ
ಹೂವ್ವೆ ಚೆಲ್ಯ್ವೇ ವನುದಾಗೇ ॥
ಬಿದಿರಾಗಟ್ಟದ ಮ್ಯಾಲೆ ಚದುರಂಗದೊರಳೂಡಿ
ಮಗಜಂತನೆಂಬಾ ಒನಿಕೆಯಾ
ಮಗಜಂತನೆಂಬಾ ಒನಿಕೆಯಾ ತೆಕ್ಕೊಂಡು
ನಾರೆರೂ ಪಾಡಿದರೂ ಸುಖದಿಂದಾ ॥
ಆದವರೊಳ್ಳಿಗೇ ಸಾದಾ ದೂಪವ ತೋರಿ
ಗಮ್ಮಾನ್ ತಂದಿಳಿಸ್ಯಾರ್ ಬೆನವೈನಾ
ಕಟ್ಟೇ ಬೆನವೈಗೇ ಮುಟ್ಟೀ ಪೂಜೆಯ ಮಾಡಿ
ಗಟ್ಟ್ಯಾಗೆರಡ್ಕಾಯಾ ಒಡಿಸ್ಯಾರೂ ॥
ಹಾದೀ ಬೆನವೈಗೇ ಹೋಗೀ ಪೂಜೆಯ ಮಾಡಿ
ಹಾಲಾಗೆರಡ್ಯಾಯಾ ಒಡಿಸ್ಯಾರೂ
ಸಣ್ಣೆಗೆ ಸಾವಿರ ಕಟ್ಟು ಒನಕೇಗೆ ಹುರಿಗೆಜ್ಜೆ
ಕನಕಾದೇವೆಂಬಾ ಒನಕೇಯಾ ॥
ಕನಕಾದೇವೆಂಬ ಒನಕೇಯ ತೆಕ್ಕೊಂಡು
ನಿಸ್ತ್ರೇರು ಪಾಡಿದರೂ ಸುಖದಿಂದಾ
ಮರಕೇ ಮೂವತ್ತು ಕಟ್ಟು ಮರನೊಳೊಂದೊಡ್ಯಾಣ
ಅದಕೇ ಪಂಜರದೊಂದರಗೀಣೀ ॥
ಅದಕೇ ಪಂಜರದೊಂದರಗೀಣಿ ತೆಕ್ಕೊಂಡು
ನಾರೇರೂ ಪಾಡಿದರೊಂದೊರಳಕ್ಕೀ
ಅಕ್ಕೀ ತೊಳಸೂತಾ ಚಿಕ್ಕಂದನಾಡುತ
ಚಿಕ್ಕಂದಿಲಿ ತವರಾ ನೆನವೂತಾ ॥
ಚಿಕ್ಕಂದಿಲಿ ತವರಾ ನೆನವೂತ ನಮ್ಮಮ್ಮನ
ವಾಲೇ ಮಂಡಲಕೇ ಮಗನೆದ್ದೂ
ವಾಲೇ ಮಂಡಲಕೇ ಮಗನೆದ್ದೂ ಜೋಗುಳ ಪಾಡಾಗ
ರಾಯಾ ಪಟ್ಟಣವೇ ಉದೆಯಾದೂ ॥
ಕಾಗೇ ಕಣ್ಣಿನ ಬತ್ತ ಕೋಗಿಲೆ ಗಿರ್ಸಲೆ ನೀರು
ಯಾವ್ಯಾವ ಬಿತ್ತೀ ಬೆಳೆದಾನೂ
ಯಾವ್ಜಾಣ ಬಿತ್ತೀ ಬೆಳೆದಾನು ಈ ನೆಲ್ಲ
ಆನೇ ಮೆಟ್ಟಿದರೊಂದೊಡಿಲಿಲ್ಲಾ ॥
ಕೋಗಿಲೆ ಕಣ್ಣಿನ ಬತ್ತ ಕಾಗೇ ಗಿರ್ಸಲೆ ನೀರು
ಒಬ್ಬಾಣ್ಣ ಬಿತ್ತೀ ಬೆಳೆದಾನೂ
ಒಬ್ಬಾಣ ಬಿತ್ತೀ ಬೆಳೆದಾನು ಈ ನೆಲ್ಲ
ಒಂಟೇ ಮೆಟ್ಟಿದರೊಂದೊಡಿಲಿಲ್ಲಾ ॥
ಬಿಳಿಯಾ ಬತ್ತಾಕ್ಕೂ ಬೆಳ್ಳೀಯಾ ಕೊಳಗಕೂ
ಇನ್ನೊಂದು ಕೊಳಗಾ ಹೆಚ್ಹಾಕೀ
* * *
10. ಅಕ್ಕಿ ಬತ್ತದ ಪದ-2
ಸೋಬಾಂದಲೆ ದಾವೆ ಸುಗುಣರು ಬಿತ್ತಿದನೆಲ್ಲು
ಯಾಜಾಣರು ಬಿತ್ತಿ ಬೆಳೆದಾವೇ
ಯಾಜಾಣರು ಬಿತ್ತಿ ಬೆಳೆದಾವೆ ಈ ನೆಲ್ಲು
ನಾಲೆ ಗೊತ್ತೂರನೆ ಕೊಡುತಾವೆ
ನಾಲೆ ಗೊತ್ತುರನೆ ಕೊಡುತಾವೆ ಈ ನೆಲ್ಲು
ಮುಕ್ಕಣ್ಣೇಶ್ವರನ ಮದುವೀಗೇ
ಮುಕ್ಕಣ್ಣೇಶ್ವರನ ಮದುವೀಗೇ ಅಂದೇಳಿ
ಬಸವಣ್ಣನ ಕಟ್ಟಿ ತುಳಿಸ್ಯಾರೇ
ಬಸವಣ್ಣನ ಕಟ್ಟಿ ತುಳಿಸ್ಯಾರೆ ಅಣ್ಣಯ್ಯ
ಒಂದಕ್ಕಿ ಮೂ(ಡಿ) ಬಿಡುನಿಲ್ಲಾ
ಒಂದಕ್ಕಿ ಮೂ(ಡಿ) ಬಿಡುನಿಲ್ಲ ಅಣ್ಣಯ್ಯ.
ಮುಕ್ಕಣ್ಣೇಶ್ವರನ ಮದುವೀಗೇ
ಮುಕ್ಕಣೇಶ್ವರನ ಮದುವೀಗೆ ಅಂದೇಳಿ
ಆನೆಯ ಕಟ್ಟೀಗ ತುಳಿಸ್ಯಾರೇ
ಆನೆಯ ಕಟ್ಟೀಗ ತುಳಿಸ್ಯಾರೇ ಅಣ್ಣಯ್ಯ
ಒಂದಕ್ಕಿ ಕೇಸೂ ಬಿಡುನಿಲ್ಲಾ
ಒಂದಕ್ಕಿ ಕೇಸೂ ಬಿಡುನಿಲ್ಲಾ ಅಣ್ಣಯ್ಯ
ಗಾಜಿನ ಸೂಳೆಯರು ಬಂದೂ
ಗಾಜಿನ ಸೂಳೆಯರು ಬಂದು ಜೂಜಾಡಿ
ತುಳಿಸ್ಯಾರೆ ಅಕ್ಕಿ ಎಂಬುದೂ ಚೂರೆದ್ದು
ಸೋಬಂದಲೆ ದಾವೆ ಸುಗುಣರು ಬಿತ್ತಿದ ನೆಲ್ಲು
ಯಾಜಾಣರು ಬಿತ್ತಿ ಬೆಳೆದಾವೇ
ಯಾಜಾಣರು ಬಿತ್ತಿ ಬೆಳೆದಾವೆ ಈ ನೆಲ್ಲು
ಆನೆ ಮೆಟ್ಟಿದರೂ ಒಡಿಲಾರೂ
ಬಿದರೂ ಬೆಟ್ಟದ ಮೇಲೆ ಚದುರಂಗದೊರಳೂಡಿ
ಮದರಂಗಿ ಎಂಬ ವನಕೆಯಾ
ಮದರಂಗಿ ಎಂಬ ವನಕೆಯ ಹಿಡಕೊಂಡು
ನಾರ್ಯರು ಬಾಗಿದರೂ ಒರಳೀಗೆ
ಅಂದುಳೊಳ್ಳಿಗೇ ಗಂದಾ ದೂಪವ ತೋರಿ
ಗಂದಾಸಾಲಕ್ಕಿ ತೊಳುಸ್ಯಾರೇ
ಹಕ್ಕಿ ಹಾರಿತು ಕೋಟಿ ಚಕ್ಕೆ ಚೂರಿತು ಕೋಟಿ
ರಕ್ಕಸ ಕೋಟಿ ರಣ ಕೋಟೀ
ರಕ್ಕಸ ಕೋಟಿ ರಣ ಕೋಟಿ ನೇರಿದ್ದ
ರಕ್ಕೆ ಇದ್ದ ವನಕೇ ತರಿಸಯ್ಯ
ರಕ್ಕಿದ್ದ ಒನಕೆಯ ತರಿಸಿ ಕೈಯಲಿ ಕೊಟ್ಟು
ನಾರ್ಯಾರು ಬಾಗಿದರೂ ಒರಳೀಗೇ
ಗಂಸಾಲಕ್ಕಿ ತೊಳಸೊಯ್ದು ಈ ಮನೆಯ
ನಂಜುಂಡೇಶ್ವರನಾ ಮದುವೀಗೇ
ನಂಜುಂಡೇಶ್ವರನಾ ಮದುವೀಗೆ ಕುಟ್ಟಿದ ಬತ್ತ
ತುಂಡಾಗಿ ಅರುವತ್ತು [ಚೂರಾದೂ]
ಹಿತ್ತಲೊಳಗೊಂದು ಕಿತ್ತಲೆ ಗಿಡನೆಟ್ಟು
ಕಿತ್ತಳೆ ಕಂಚೀ ಫಲ ಬಂದೂ
ಕಿತ್ತಲೆ ಕಂಚೀ ಫಲಬಂದು ಗಿಣಿರಾಯ
ಹೊತ್ತಣ್ಣು ಕೇಳೋ ಮಣವಾದೂ
ಮಳೆಹೊಯ್ದರೆ ಹೊಯ್ಯಲಿ ಕೆರೆಕೋಡಿ ಕಟ್ಟಲಿ
ಹನ್ನೆರಡು ಕೋಡೇ ಹರಿಯಲೀ
ಹನ್ನೆರಡು ಕೋಡೇ ಹರಿಯಲಿ ನಮಗೌಡ್ರ
ಸಣಗದ್ದೆ ಸಾವಿರ ಬೆಳೆಯಾಲೀ ॥
* * *
11. ಬತ್ತದ ಪದ
ಬಿದಿರಾ ಬೆಟ್ಟದ ಮೇಲೆ ಚದುರಂಗದೊಳಾಡಿ
ಮದನಾರಿ ಎಂಬ ಹೊಸ ಒನಕೆ- ತಕ್ಕೊಂಡು
ನಿಸ್ತ್ರೇರು ಪಾಡಿದರೊಂದು ಶುಭದಿಂದ
ನಾರೀ ಕುಟ್ಟಿದ ಬತ್ತ ತುಂಡೆರಡು ಬೆಂಡೆರಡನಾಗ್ಯಾವೆ
ನಾರೇರ ತಾಯಿ ಶ್ರೀ ಗೌರಿ- ಕುಟ್ಟಿದ ಬತ್ತ
ದುಂಡಾ ಮಲ್ಲಿಗೆ ಸರವಾದು
ಒರಳು ಸ್ಯಾವಂತಿಗೆ ಒನಕೆ ಸುಳಿಗ್ಯಾದಿಗೆ
ಅದಕೆ ಪಂಜರದೊಂದರಗಿಣಿ – ಇಟುಕೊಂಡು
ಕನ್ನೇರು ಪಾಡಿದರೊಂದು ಶುಭದಿಂದ
ಸಣ್ಣೇಗೆ ಸಾವಿರಕಟ್ಟು ಸಣ್ಣುಳ್ಳರೊಡ್ಯಾಣ
ಅದಕೆ ಪಂಜರದೊಂದರಗಿಣಿ-ತಕ್ಕೊಂಡು
ರಂಬೇರು ಪಾಡಿದರೊಂದು ಶುಭದಿಂದ
ಅಂದಾದೊರಳೀಗೆ ಗಂಧದೂಪವ ತೋರಿ
ಸೂರ್ಯದೇವರ ಮದುವೀಗೆ-ಮಾಡ್ಸಿದಕ್ಕಿ
ಇನ್ನೊಂದ್ಹೇರಾಕಿ ಕೊಡಬೇಕು
ಅಂದಾದೊರಳೀಗೆ ಗಂಧ ಪುಷ್ಪವ ತೋರಿ
ಚಂದ್ರಾಕುಲದವರ ಮದುವೀಗೆ- ಮಾಡ್ಸಿದಕ್ಕಿ
ಮತ್ತೊಂದ್ಹೇರಾಕಿ ಕೊಡಬೇಕು
ಬಾಚಿ ಮಂಡೆನೆ ಕೆಟ್ಟ ಜಾಜಿ ಸಂಪಗೆ ಮುಡಿದು
ನಿಸ್ತ್ರೇರು ಪಾಡಿದರೊಂದು ಶುಭದಿಂದ
ಕಾರಗದ್ದೇನೆ ಬಿತ್ತಿ ಜಾಣ ದಂಡೇನೆ ಹಾಕಿ
ಯಾ ಜಾಣ ಬಿತ್ತಿ ಬೆಳೆದದ್ದು-ಈ ನೆಲ್ಲು
ಒಂಟೆ ಮೆಟ್ಟಿದರೂ ವಡೆವಲ್ದು
ಆ ಬತ್ತ ಈ ಬತ್ತ ದಬ್ಬಣಸಾಲೆ ಬತ್ತ
ಯಾ ಜಾಣ ಬಿತ್ತಿ ಬೆಳೆದದ್ದು- ಈ ನೆಲ್ಲು
ಆನೆ ಮೆಟ್ಟಿದರೂ ವಡೆವಲ್ಲು
ಆ ಬತ್ತ ಈ ಬತ್ತ ದಬ್ಬಣಸಾಲೆ ಬತ್ತ
ಯಾ ಜಾಣ ಬಿತ್ತಿ ಬೆಳೆದದ್ದು – ಈ ನೆಲ್ಲು
ಆನೆ ಮಟ್ಟಿದರೂ ವಡೆವಲ್ಲು
ಆ ಬತ್ತ ಈ ಬತ್ತ ಕೊಯಮತ್ತೂರು ಸಣ್ಣ ಬತ್ತ
ಯಾ ಜಾಣ ಬಿತ್ತಿ ಬೆಳೆದದ್ದು – ಈ ನೆಲ್ಲು
ಕುದುರೆ ಮೆಟ್ಟಿದರೂ ವಡೆವಲ್ಲು
ಬಿದಿರಾ ಬೆಟ್ಟದ ಮ್ಯಾಲೆ ಚದುರಂಗದೊಳಾಡಿ
ಮದನಾರಿ ಎಂಬ ಹೊಸ ಒನಕೆ-ತಕ್ಕೊಂಡು
ನಿಸ್ತ್ರೇರು ಪಾಡಿದರೊಂದು ಶುಭದಿಂದ
* * *
12. ಅಕ್ಕಿ ಪದ
ಸುವ್ವೀರೋ ಸಂಗಯ್ಯ ಸುವ್ವಿರೋ ಲಿಂಗಯ್ಯ
ಸುವ್ಬ ಬಂದರೆ ಬಾರೋ ಬಸವಯ್ಯ
ಅಕ್ಕಾ ನಾಗಮ್ಮನು ಚಿಕ್ಕ ಒನಿಕೆಯ ಪಿಡಿದು
ಅಕ್ಕಿ ಒಮ್ಮನಾ ತೊಳಿಸುತ್ತಾ-ನಿಸ್ತ್ರೇರು ಪಾಡಿದರು
ಮುಕ್ಕಣ್ಣು ಶಿವನು ಬರುವಾಗ
ನಮ್ಮಯ್ಯ ಬರುವಾಗ ಎಮ್ಮಯ್ಯ ಶರಣಾರೊ
ಕರ್ಮದ ಲೋಕ ಉಳಿಯಾವು-ಮುಂದಿನ್ನು
ಧರ್ಮದ ಗುರುಬಸವ ಬರುವಾಗ
ಕಾರಣಿಕ ದಿನವು ಘೋರ ಪಾತಕ ದಿನಬಂದು
ಏಳೂರಿಗೊಂದು ಏಳು ಸುತ್ತಿನ-ಕೋಟೆ
ಹಾಳಾಗುತಾನೆ ಜಗವೆಲ್ಲಾ
ಅಗಳಿದಾವು ಗಣಗೆ ಹಾಗಾದಾವು
ಕಾಕೆಯ ದಂಡು ಬರುವಾಗ-ಜಗವೆಲ್ಲ ಕೂಗು
ಬಟ್ಟೆಗಳ ವೈನಾದ ಊರೂರು
ಹೊಸಮನೆಗೆ ಹೋಗಬ್ಯಾಡ ಹಸರೂವು ಮುಡಿಬ್ಯಾಡ
ಹೊಸದಾಗಿ ನೀನು ಬರಬೇಡ
ಅಡಗೀಯ ಮನೆಯಲ್ಲಿ ಅರವತ್ತು ದೀವಿಗೆ
ಅರಿಯೇ ಕಾಣತ್ತೆ ಅಡಗೀಯ
ಅರಗಿಣಿಯಾಗಿದ್ರೆ ಮರದ ಮೇಲಿರುತ್ತಿದ್ದೆ
ಕಲಿಯೇ ಚಿತ್ತಾರಡಗೀಯ
ತೋಟಕೊದಣ್ಣ ಊಟಕ್ಕೆ ಬರಲಿಲ್ಲ
ಗಂಡು ಭೂತಾಳಿ ಗಜನಿಂಬೆ- ಮರನಡಿ
ದಂಡು ಬಿಟ್ಟಾನೆ ನನ ತಮ್ಮ
ಅಡ್ಡಾಗುಡ್ಡೇಲಿ ದೊಡ್ಡಮ್ಮ ಕಾಯೌವ್ವೆ
ದೊಡ್ಡೋರ ಮಗನೆ ನನ ತಮ್ಮ
ಸುವ್ವೀರೊ ಸಂಗಯ್ಯ ಸುವ್ವೀರೊ ಲಿಂಗಯ್ಯ
ಸುವ್ವ ಬಂದರೆ ಬಾರೋ ಬಸವಯ್ಯ
13. ಜ್ಯೋತಿಗೆಡೆ ಮಾಡುವ ಪದ
ಅಡಿಗಾಗಲಡಿಗಾಗಲಿ
ಒಳಗೀರೊ ಚಿನ್ನಯ್ಯರಿಗೆಡೆಯಾಗಲೆಡೆಯಾಗಲಿ
ಜಾಜೀಯ ವನಕೆ ಜಗಸ್ಯಾಲೆ ಮಂಚ
ಅದು ನಮ್ಮೈನ ಒರಿಗಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಸುರಗೀಯ ವನಕೆ ಸೊಗುಸಾವೆ ಮಂಚ
ಅದು ನಮ್ಮೈನ ತೂಗಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಸಂಪಿಗೆ ವನಕೆ ಸೊಗುಸಾವೆ ಮಂಚ
ಅದು ನಮ್ಮೈನ ವಾಲಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಕ್ಯಾದೀಯ ವನಕೆ ಕೆದುಸ್ಯಾಲೆ ಮಂಚ
ಅದು ನಮ್ಮೈನೆ ವಾಲಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಗೊರಟೀಯ ವನಕೆ ಗೊದುಸಾಲೆ ಮಂಚ
ಅದು ನಮ್ಮೈನ ಒರುಗಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಮಲ್ಲೀಗೆ ವನಕೆ ಮೊಗುಸಾಲೆ ಮಂಚ
ಅದು ನಮೈನ ನಿಂತಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಚೆಂಡು ಹೂವಿನೊನಕೆ ಜಗುದವೆ ಮಂಚ
ಅದು ನಮ್ಮೈನವಾಲಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಗುಲಾಬಿ ವನಕೆ ಗೊದುಸ್ಯಾಲೆ ಮಂಚ
ಅದು ನಮ್ಮೈನೆ ತೂಗಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಸೇವಂತಿಗೆ ವನಕೆ ಸೊಗುಸಾವೆ ಮಂಚ
ಅದು ನಮ್ಮೈನ ಒರುಗಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಮುತುಗೂನ ವನಕೆ ಮಗಚವೆ ಮಂಚ
ಅದು ನಮ್ಮೈನ ವಾಲಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಹುಲಿಯ ವನಕೆ ಹೊಗ್ಯಾವೆ ಮಂಚ
ಅದು ನಮ್ಮೈನ ತೂಗಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಚೀನಿಯ ವನಕೆ ಚಿಗುದವೆ ಮಂಚ
ಅದು ನಮ್ಮೈನ ತೂಗಾಡ ಮಂಚ
ನಾಲ್ಕು ಮೂಲೆಗೆ ಬಿಗುಸ್ಯಾರೆ ಕುಂಚ
ಅಡಿಗಾಗಲಡಿಗಾಗಲಿ
ಒಳಗಿರೋ ಚಿನ್ನಯ್ಯರಿಗೆಡೆಯಾಗಲೆಡೆಯಾಗಲಿ
***
14. ಪ್ರತಿ ಮನೆಯಿಂದ ಹೊರಡುವಾಗಿನ ಹಾಡು
ಹೋದೇವ್ ಹೊಸ್ತಾಲೇ ನಿಂದೀರೇ ಬಾಗಾಲೆ
ನಾಗ ಸಂಪಿಗೆಯೂ ನಡುಮಾನೆ
ನಾಗ ಸಂಪಿಗೆಯೂ ನಡುಮಾನೆ ದೇವರು ಕೋಣೆ
ಇಂದೋಗಿ ವರುಷಾಕೆ ಬರುತೇವೇ
15. ಜ್ಯೋತಿ ಕಳಿಸುವ ಪದ
ಬಡಗೇರಾ ಮನೆಯಾ ಅಡಗೋಲಗೆ ಇರುವಾಳ
ಅಡಗೋಲಗೆ ಕಣ್ಣಾ ಬಿಡುವಾಳೇ
ಅಡಗೋಲಗೆ ಕಣ್ಣಾ ಬಿಡುವಾಳ ಜೋತಮ್ಮ ತಾಯಿ
ಹೋಗೀ ಬಾರಮ್ಮ ನಿಮ್ಮ ತವರೀಗೇ ॥
ಕಲ್ಲಾ ಮಂಟಪದಲ್ಲೀ ಕೆಂಡಸಂಪಿಗೆ ಹೂವಿನಂತೆ
ಕಲ್ಲಲ್ಲೀ ಕಣ್ಣಾ ಬಿಡುವವಳೇ
ಕಲ್ಲಲ್ಲಿ ಕಣ್ಣಾ ಬಿಡುವವಳೇ
ಕಲ್ಲಲ್ಲಿ ಕಣ್ಣಾ ಬಿಡುವವಳೆ ಜೋತಮ್ಮ ತಾಯಿ
ಹೋಗೀ ಬಾರಮ್ಮ ನಿಮ್ಮ ತವರೀಗೇ ॥
ನೀರಿನಾ ಒಳಗೇ ಸೇರಿಕೊಂಡಿರುವವಳೇ
ನೀರೊಳಗೆ ಕಣ್ಣಾ ಬಿಡುವವಳೇ
ನೀರೊಳಗೆ ಕಣ್ಣಾ ಬಿಡುವವಳ ಜೋತಮ್ಮ ತಾಯಿ
ಹೋಗೀ ಬಾರಮ್ಮ ನಿಮ್ಮ ತವರೀಗೇ ॥
Leave A Comment