1. ಜ್ಯೋತಿಪದ-1
ಕತ್ತಲೆ ಸಮಯಕ್ಕೇ ಸತ್ತ್ಯುಳ್ಳ ಜೋತಮ್ಮಾ
ಮತ್ತೇಳು ಲೋಕೇ ಬೆಳೆಕಾದೂ
ಮತ್ತೇಳು ಲೋಕೇ ಬೆಳಕಾದೂ ಮಾನವರಿಗೆ
ಅಡಿಗೇ ಊಟಗಳೇ ಹಸನಾದೂ ॥
ಅಡಿಗೇ ಊಟಗಳೇ ಹಸನಾದೂ ಜೋತಮ್ಮಾ
ಕೊಡುನುಡಿಯಾ ನಮಗೇ ಪದನಾವಾ
ಗುಡು ಗುಡು ಗುಟ್ಟಾವೂ ಸಿಡಿಲೇಳೂ ಹೊಡೆದಾವೂ
ಒಡನೇ ಕುಡಿಮಿಂಚೂ ಹೊಳೆದಾವೂ
ಒಡನೇ ಕುಡಿಮಿಂಚೂ ಹೊಳೆದಾವೂ ಜೋತಮ್ಮಾ
ಮಿಂಚಿನಲೆ ಜೋತಮ್ಮಾ ಉದಯಾಗೀ
ಮಿಂಚಿನಲಿ ಜೋತಮ್ಮಾ ಉದೆಯಾಗಿ ಜೋತಮ್ಮಾ
ಕೊಡುನುಡಿಯಾ ನಮಗೇ ಜ್ಞಾನಾವಾ ॥
ಆತ್ಮಾ ಸಂಭೂತೇ ಜಗಜ್ಯೋತಿ ನೀನಾದೆ
ಆತ್ಮಾದಲಿ ನೀನೊ ನೆಲೆಯಾದೆ
ಜೋತಿ ಇಲ್ಲದ ದೇಹಾ ಸೀತಾ ಚಂದನದಂತೆ
ಜೋತಿ ಇಲ್ಲದ ದೇಹ ಬೆಲೆ ಇಲ್ಲಾ
ಜೋತಿ ಇಲ್ಲದ ದೇಹಾ ಬೆಲೆ ಇಲ್ಲಾ ನೆಲೆ ಇಲ್ಲಾ
ಜೋತಿ ಕಲೆಗಾಳೇ ಜೀವಾತ್ಮಾ
ಜೋತಿ ಕಲೆಗಾಳೇ ಜೀವಾತ್ಮಾ ಜೋತಮ್ಮಾ
ಕೊಡುನುಡಿಯಾ ನಮಗೇ ಪದನಾವಾ ॥
ಅಷ್ಟದಿಕ್ಪಾಲಕರಲ್ಲೀ ಅಗ್ನಿ ದೇವತೆಯಾದೆ
ಮನೆ ಮಾನೆಗಾದೆ ಜಗಜೋತೀ
ನೀತ್ಯುಳ್ಳ ಜ್ಯೋತೀ ನಡೆ ಮುಂದೆ
ಜೋತೀ ನೀನಾದೆ ಆರೂತಿ ನೀನಾದೆ
ಜೋತೀ ಮೂರೂತೀ ನೀನಾದೆ
ಜೋತೀ ಮೂರುತೀ ನೀನಾದೆ ಜೋತಮ್ಮ
ಕೊಡು ನುಡಿಯಾ ನಮಗೆ ಪದನಾವಾ ॥
ಜೋತೀ ಇಲ್ಲದ ಮಾನೆ ನೀತಿಲ್ಲಾ ಮಾತಿಲ್ಲಾ
ಆತಾಗೇ ಇಲ್ಲ ಸಿರಿಗಾಳೂ
ಆತಾಗೇ ಇಲ್ಲಿ ಸಿರಿಯೂ ಸಂಪದಗಾಳೂ
ಜೋತೀ ಹಚ್ಚೇರೀ ಜನರೆಲ್ಲಾ
ಜೋತೀ ಹಚ್ಚೇರಿ ಜನರೆಲ್ಲಾ ಜೋತಮ್ಮ
ಕೊಡು ನುಡಿಯಾ ನಮಗ ಪದನಾವಾ ॥
ರತ್ನದ ಹರಳಂತೆ ಸುತ್ತಾ ದೀವಿಗೆ ಹಚ್ಚಿ
ಸತ್ತುಳ್ಳ ಜೋತಮ್ಮಗೇ ಸರದೀಪಾ
ಸತ್ತುಳ್ಳ ಜೋತಮ್ಮಗೇ ಸರದೀಪಾ ಹಚ್ಚೇವು
ಸುತ್ತೀರೇಳು ಲೋಕೇ ಬೆಳಕಾದೂ
ಸುತ್ತೇರೇಳು ಲೋಕೇ ಬೆಳಕಾದೂ ಜೋತಮ್ಮಾ
ಕೊಡು ನುಡಿಯಾ ನಮಗೇ ಪದನಾವಾ ॥
ಗಟ್ಟಾ ಬೆಟ್ಟಾಕಿಂತಾ ಕೋಟೀ ಪ್ರಕಾಶವು
ಜ್ವಾಲಾಮುಖಿ ಎಂಬಾ ಪರ್ವತಾ
ಜ್ವಾಲಾಮುಖಿ ಎಂಬಾ ಪರ್ವತದಾ ಒಳಗೇ
ಸತ್ತುಳ್ಳ ಜೋತಮ್ಮ ಉದೆಯಾಗೀ
ಸತ್ತುಳ್ಳ ಜೋತಮ್ಮ ಉದಯಾಗಿ ನರಲೋಕ
ನಿತ್ಯಾ ಸಾಕಿದಳೊ ಜನರನ್ನೂ
ನಿತ್ಯಾ ಸಾಕಿದಳೂ ಜನರನ್ನು ಜೋತಮ್ಮ
ಕೊಡು ನಮಗೆ ಜ್ಞಾನಾ ಮತಿಗಾಳಾ ॥
ಕಾಲಕಾಲಕ್ಕೂ ವಾಲೇ ಕಂಠವ ಪಿಡಿದು
ಓದೆವು ಜೋತಮ್ಮನಾ ವಚನಾವಾ
ಓದೆವು ಜೋತಮ್ಮನಾ ವಚನಾವಾ ಜೋತಮ್ಮನಾ
ತೇರು ಹರಿಸೇವೂ ಬೆಳತನಕಾ
ತೇರು ಹರಿಸೇವೂ ಬೆಳತನಕ ಜೋತಮ್ಮ
ಕೊಡು ನುಡಿಯಾ ನಮಗೆ ಪದನಾವಾ ॥
ಪೊಡವೀ ಸುಡುವುದಕೇ ಜಡೆಯಾ ಮೃಡನಲ್ಲಿ
ಪಣಿಗಣ್ಣಿನಲ್ಲೀ ವಡದ್ಮೂಡೀ
ಪಣೆಗಣ್ಣಿನಲ್ಲೀ ವಡದ್ಮೂಡಿದ ಜೋತಮ್ಮ
ಕೊಡು ನುಡಿಯಾ ನಮಗೆ ಪದನಾವಾ ॥
ಕೆಂಡ ಕೊಂಡದಲ್ಲಿ ಮೆರೆದಾಡಿಸ ಜೋತಮ್ಮ
ಖಾಂಡವ ವನವನ್ನೂ ದೈಸೀದೇ
ಖಾಂಡವ ವನವನ್ನು ದೈಸೀದಾ ಜೋತಮ್ಮ
ಕೊಡು ನುಡಿಯಾ ನಮಗೇ ಪದನಾವಾ ॥
ಬೆಂಕೀ ಕಿಡಿಯಾಗಿ ಶಂಕರನಾ ಪಣೆಯಲ್ಲಿ
ಜೋತೀ ತಾಯಮ್ಮಾ ಉದೆಯಾಗೀ
ಜೋತೀ ತಾಯಮ್ಮಾ ಉದೆಯಾಗಿ ಭೂಮಿಗೆ
ಲಂಕೇಯ ಸುಟ್ಟೂ ಸೂರ್ಯಾಡಿ
ಲಂಕೇಯ ಸುಟ್ಟೂ ಸೂರೇ ಮಾಡಿದ ಜೋತಿ
ಕೊಡು ನುಡಿಯಾ ನಮಗೆ ಪದನಾವಾ ॥
ಮೂಡಲ ಸೀಮೆಗೆ ಹೋಗೀ ನೋಡುವಾ ಬನ್ನೀರಿ
ಜ್ವಾಲಾ ನೀಲೆಂಬಾ ಪರ್ವಾತಾ
ಜ್ವಾಲಾ ನೀಲೆಂಬಾ ಪರ್ವತದಾ ಒಳಗೆ
ಕಾಲಕಾಲಕ್ಕೂ ಕವಲೊಡೆದೂ
ನೀತ್ಯುಳ್ಳ ಜ್ಯೋತೀ ನಡೆ ಮುಂದೆ
ಕಾಲ ಕಾಲಕ್ಕೂ ಕವಲೊಡೆದೂ ಕಿಡಿಸೂಸಿ
ಕಾಡು ನಾಡೆಲ್ಲಾ ಭಸ್ಮಾದೂ
ಕಾಡು ನಾಡೆಲ್ಲಾ ಭಸ್ಮಾ ಬೂದಿಯಾಗಿ
ಕಾಡೊಳಗೊಂದಾಲದಾ ಮರಹುಟ್ಟೀ
ಕಾಡೂಳಗೊಂದಾಲದಾ ಮರಹುಟ್ಟಿ ಆ ಮರವೇ
ಜೋತೀ ತಾಯಮ್ಮನಾ ಅರಮಾನೇ
ಅರಮನೆ ಆಯಕೊಂದೂ ಆಲದ ತೊಟ್ಟಿಲ ಕಟ್ಟೀ
ಜಾಲಾದಾ ಮರವೇ ತಲೆದಿಂಬೂ
ಜಾಲಾದ ಮರದಾ ತಲೆದಿಂಬಾ ಹಾಕಿಕೊಂಡು
ಲೋಲಾಡಿ ಸುಖನಿದ್ದೇ ಮಾಡಿದಳೂ
ಲೋಲಾಡಿ ಸುಖನಿದ್ದೇ ಮಾಡೂವಾ ಜೋತಮ್ಮಾ
ಕೊಡು ನುಡಿಯಾ ನಮಗೇ ಪದನಾವಾ ॥
« « «
2. ಜ್ಯೋತಿಪದ-2
ಆರಗದಿಂದ ಬಂದಾವೆ ಆರು ಸಾವಿರ ಹಣತೆ
ಬತ್ತಿ ಸಾಲಿನ ಕೊಂದಣಿ ಸಾಲು – 1ಜಗಜ್ಯೋತಿ2
ಸತ್ಯದಿಂದುರಿಯೇ ನಮಗಾಗಿ
ಮಾಳೂರಲಿಂದ ಬಂದಾವೆ ಮೂರು ಸಾವಿರ ಹಣತೆ
ಬತ್ತಿ ಸಾಲಿನ ಕೊಂದಣಿ ಸಾಲು-ಜಗಜ್ಯೋತಿ
ಆಯದಿಂದುರಿಯೇ ನಮಗಾಗಿ
ಮಣ್ಣಲಿ ಹುಟ್ಟೋಳ ಮಣ್ಣಲಿ ಬೆಳೆಯೋಳೆ
ಮಣ್ಣಲಿ ಕಣ್ಣಾ ಬಿಡುವೋಳೆ – ಜಗಜ್ಯೋತಿ
ಚೊಕ್ಕದಿಂದುರಿಯೇ ನಮಗಾಗಿ
ಎಣ್ಣೇಲಿ ಹುಟ್ಟೋಳೆ ಎಣ್ಣೇಲಿ ಬೆಳೆಯೋಳೆ
ಎಣ್ಣೇಲಿ ಕಣ್ಣಾ ಬಿಡುವೋಳೆ-ಜಗಜ್ಯೋತಿ
ಒಪ್ಪಾದಿಂದುರಿಯೇ ನಮಗಾಗಿ
ಕಲ್ಲಲಿ ಹುಟ್ಟೋಳೆ ಕಲ್ಲಲಿ ಬೆಳೆಯೋಳೆ
ಕಲ್ಲಲಿ ಕಣ್ಣಾ ಬಿಡುವೋಳೆ – ಜಗಜ್ಯೋತಿ
ವೈನಾದಿಂದುರಿಯೇ ನಮಗಾಗಿ
ಬೆಳ್ಳಿಲುಟ್ಟೋಳೆ ಬೆಳ್ಳೀಲಿ ಬೆಳೆಯೋಳೆ
ಬೆಳ್ಳೀಳಿ ಕಣ್ಣಾ ಬಿಡುವೋಳೆ – ಜಗಜ್ಯೋತಿ
ಸತ್ಯದಿಂದುರಿಯೇ ನಮಗಾಗಿ
* * *
ಬಾಗಿಲು ಪದ-1
ಅಗಸೇ ತೆಗಿರಯ್ಯ ಬಗಸುಳ್ಳೊ ನಮ್ಮಯ್ಯ
ಬಗಸೇಲಿ ಹೊನ್ನು ಬಿಳಿಯಾಲೇ
ಬಗಸೇಲಿ ಹೊನ್ನೂ ಬಿಳಿಯಾಲೇ ನಿಟುಕೊಂಡು
ಅಗಸೇ ತೆಗಿರಯ್ಯ ನಮಗಾಗೀ
ಅಗಸೇಯ ಕೀಲೂ ಅತಿಕೀಲು ಪತಿಕೀಲು
ಗುಬ್ಬೀ ಜಂತಾದಾ ಮರಿಕೀಲೂ
ಗುಬ್ಬೀ ಜಂತಾದಾ ಮರಿಕೀಲರ ಮನೆಯೊಳಗೆ
ಅರಸುಗಳಳಿಯಾ ಪರದಾನೀ
ಅರಸುಗಳಳಿಯಾ ಪರದಾನಿ ಕುಂತಿದ್ದು
ಆಳು ಬಿಟ್ಟು ತಾಳ ತಗಿಸ್ಯಾರೂ ॥
ಹೆಬ್ಬಾಗಿಲ ತೆಗಿರಯ್ಯ ಬುದ್ದುಳ್ಳೊ ನಮ್ಮಯ್ಯ
ಸಿದ್ದೇಲಿ ಹೊನ್ನೂ ಬಿಳಿಯಾಲೇ
ಸಿದ್ದೇಲಿ ಹೊನ್ನೂ ಬಿಳಿಯಾಲೇನಿಟುಕೊಂಡು
ಹೆಬ್ಬಾಗಿಲ ತೆಗಿಸ್ರಯ್ಯ ನಮಗಾಗೀ
ಹೆಬ್ಬಾಗಿಲು ಕೀಲೊಂದತಿಕೀಲೂ ಪತಿಕೀಲು
ಹೆಬ್ಬೂಲಿ ಕರಡೀ ಮರಿಮಾಡೀ
ಹೆಬ್ಬೂಲಿ ಕರಡೀ ಮರಿಮಾಡರ ಮನೆಯೊಳಗೆ
ಪಾಂಡವರ ಮಗನೇ ಪರದಾನೀ
ಪಾಂಡವರ ಮಗನೇ ಪರದಾನಿ ಕುಂತಿದ್ದು
ಆಳು ಬಿಟ್ಟು ತಾಳ ತೆಗಿಸ್ಯಾರೂ ॥
ಎಡ್ಡೇ ಅನ್ನುಂಡೂ ಸಿಣ್ಣಾ ಜೋತರ ಸುತ್ತೀ
ಬಡ್ಡಾದ ಜೋತೀ ಬಲಗೈಲೀ
ಬಣ್ಣದ ಜೋತೀ ಬಲಗೈಲಿ ತಕ್ಕೊಂಡು
ಎಣ್ಣೇ ಉಣ್ಣುವರಾ ಅರಮಾನೇ
ಎಣ್ಣೇ ಉಣ್ಣುವರಾ ಅರಮನೆ ಬಾಗಿಲ ಮುಂದೆ
ಬಣ್ಣಾದ ಜೋತೀ ನಡೆ ಮುಂದೇ
ಬಣ್ಣಾದ ಜೋತೀ ನಡೆ ಮುಂದೇ ನಡೆದಾರೆ
ನಿನ್ನಿಂದೆ ನಾವೂ ಬರುತೇವೇ ॥
ಅಂದುಳ್ಳಂಗಳಕಾಗಿ ಚಂದುಳ್ಳ ಚಾವಡಿಗಾಗಿ
ಹಣ್ಣೂ ಪೂಜವರಾ ಮನೆಗಾಗೀ
ಹಣ್ಣೂ ಪೂಜವರಾ ಮನೆಗಾಗಿ ಬಂದೈದೀವಿ
ಅಂದುಳ್ಳ ಜೋತೀ ನಡೆಮುಂದೇ
ಅಂದುಳ್ಳ ಜೋತಿ ನಡೆಮುಂದೇ ನಡೆದಾರೆ
ನಿನ್ನಿಂದೆ ನಾವೂ ಬರುತೇವೇ ॥
ಆಯುಳ್ಳಂಗಳಕಾಗೀ ಚಾಯುಳ್ಳ ಚಾವಡಿಗಾಗಿ
ಹೂವೂ ಪೂಜವರಾ ಮನೆಗಾಗೀ
ಹೂವೂ ಪೂಜವರ ಮನೆಗಾಗಿ ಬಂದ್ಯೆದೀವಿ
ನೀತುಳ್ಳ ಜೋತೀ ನಡೆಮುಂದೇ
ನೀತುಳ್ಳ ಜೋತೀ ನಡೆಮುಂದೇ ನಡೆದಾರೆ
ನಿನ್ನಿಂದ ನಾವೂ ಬರುತೇವೆ ॥
ಅಂಗಳದಲ್ಲಿರುವಾ ಏಳೇಲೆ ತೊಳಸಮ್ಮಾ
ನಾವು ಬಂದೇವೇ ದನಿದೋರೂ
ನಾವು ಬಂದೇವೇ ದನಿದೋರು ತೊಳಸಮ್ಮ ತಾಯಿ
ತಪ್ಪೀದಾ ಪದನಾ ಬರಕೋಡೂ
ಯಾರ್ಯಾರ್ಹೇಳೇಕೇ ನಾವ್ಯಾಕೆ ಬರದೇವು
ಹಡೆದಮ್ಮಿದ್ದಾರೇ ಅರೆಮನೆಲೀ
ಹಡೆದಮ್ಮಿದ್ದಾರೇ ಅರಮನೆಲಿ ಕೇಳಿದರೆ
ತಪ್ಪೀದಾ ಪದನಾ ಬರೆದಾರೊ ॥
ಬಾಗೀಲಾಗಿರುವಾ ಬಾಲಾ ಗಣಪತಿರಾಯ
ನಾವು ಬರುತೇವೆಕೆ ದನಿದೋರೊ
ನಾವು ಬರುತೇವೇ ದನಿದೋರು ಗಣಪತಿರಾಯ
ತಪ್ಪೀದಾ ಪದನಾ ಬರಕೋಡೂ
ಯಾರ್ಯಾರ್ಹೇಳೀಕೇ ನಾವ್ಯಾಕೆ ಬರದೇವು
ತಾಯಮ್ಮಿದ್ದಾರೇ ಅರಮನೆಲೀ
ತಾಯಮ್ಮಿದ್ದಾರೇ ಅರಮನೆಲಿ ಕೇಳಿದರೆ
ಗರಗರನೊಂದೋಲೇ ಬರೆದಾರೂ ॥
ಮೆಟ್ಟಿಲೊಳಗಿರುವಾ ಪುಟ್ಟಾ ಗಣಪತಿರಾಯ
ನಾವು ಬರುತೇವೇ ದನಿದೋರೂ
ನಾವು ಬರುತೇವೇ ದನಿದೋರು ಗಣಪತಿರಾಯ
ತಪ್ಪೀದಾ ಪದನಾ ಬರಕೋಡೂ
ಯಾರ್ಯಾರ್ವಚನಾವಾ ನಾವ್ಯಾಕೆ ಬರೆದೇವು
ಹಿರಿಯವರಿದ್ದಾರೇ ಅರಮನೆಲೀ
ಹಿರಿಯವರಿದ್ದಾರೇ ಅರಮನೆಲಿ ಕೇಳಿದರೆ
ಸರಸರನೊಂದೋಲೇ ಬರೆದಾರೊ ॥
* * *
ಬಾಗಿಲು ಪದ-2
ಬಡಗಲು ಬಂಕಾಪೂರಾ ದೊಡ್ಡವರಾಳುವ ರಾಜ್ಯ
ದೊಡ್ಡಾ ದೊರೆ ರಾಜ್ರಾ ಅರಮಾನೇ
ದೊಡ್ಡಾ ದೊರೆ ರಾಜ್ರಾ ಅರಮನೆ ಬಾಗಿಲ ಮುಂದೆ
ವಡ್ಡೂ ದಾಟುವುದೇ ಬೆಳಗಾದು ॥
ಚಿಕ್ಕಾ ಬಳ್ಳಾಪೂರಾ ಚಿಕ್ಕವರಾಳುವ ರಾಜ್ಯ
ಚಿಕ್ಕಾ ದೊರೆ ರಾಜ್ರಾ ಅರಮಾನೇ
ಚಿಕ್ಕಾ ದೊರೆ ರಾಜ್ರಾ ಅರಮನೆ ಬಾಗಿಲ ಮುಂದೆ
ಅಗಸೇ ದಾಟುವುದೇ ಬೆಳಗಾದೂ ॥
ಚಿನ್ನದ ಕದವೆಲ್ಲಾ ರನ್ನಾದಾ ಅಗಣಿಲ್ಲ
ಹೊನ್ನೂರಣ್ಣೈನಾ ಅರಮಾನೇ
ಹೊನ್ನೊರಣ್ಣೈನಾ ಅರಮನೆ ಬಾಗಿಲ ಮುಂದೆ
ಹೊನ್ನಿನ ಗಿಣಿಯೇ ಐನೂರೂ ॥
ಮುತ್ತಿನ ಕದವೆಲ್ಲಾ ರತ್ನಾದ ಅಗಣೆಲ್ಲಾ
ಮುತ್ತೂರು ನಮ್ಮೆನಾ ಅರಮಾನೇ
ಮುತ್ತೂರು ನಮ್ಮೆನಾ ಅರಮನೆ ಬಾಗಿಲ ಮುಂದೆ
ಮಾತೀನ ಗಿಣಿಯೇ ಐನೂರೂ ॥
ಅಜ್ಜಂದ್ರ ಕಾಲಾದಾ ಗುಂಜಗುಂಡನ ಕದಗಾಳೂ
ಆಯದಲ್ಲಾಡೀ ತೆಗಿರಯ್ಯ
ಅಪ್ಪಂದ್ರ ಕಾಲಾದಾ ತುಪ್ಪುಂಡಾ ಕದಗಾಳೊ
ವಪ್ಪಾದಲ್ಲಾಡೀ ತೆಗಿರಯ್ಯ
ಅಣ್ಣಂದ್ರ ಕಾಲದಾ ಬೆಣ್ಣ್ಯುಂಡಾ ಕದಗಾಳೊ
ಅಂದಾದಲ್ಲಾಡೀ ತೆಗಿರಯ್ಯ ॥
ಕಡಲೇ ಗಿಡಹುಟ್ಟೀ ಕೊಡಲೀಯಾ ಕಾವಾದೂ
ಕಡಿದಿಟ್ಟರೇಳೂ ತೊಲೆಗಾಳೂ
ಕಡಿದಿಟ್ಟರೇಳೂ ತೊಲೆಗಾಳೂ ಈ ಮನೆಯ
ಚಂದ್ರಾ ಚಾವಡಿಗೇ ಸಮನಾದೂ
ಉದ್ದಿನ ಗಿಡ ಹುಟ್ಟಿ ಗುದ್ದಾಲೀ ಕಾವಾದೂ
ತಿದ್ದಿಟ್ಟರೇಳೂ ತೊಲೆಗಾಳೂ
ತಿದ್ದಿಟ್ಟರೇಳೂ ತೊಲೆಗಾಳೂ ಈ ಮನೆಯ
ಉದ್ದಾ ಮಾಳಿಗೆಗೇ ಸಮನಾದೂ ॥
ಹೆಸರೂ ಗಿಡಹುಟ್ಟೀ ದಸಳೇಯ ಬಲಗಾದೂ,
ಕೆತ್ತಿಟ್ಟರೇಳೂ ದಸಳೇಯಾ
ಕೆತ್ತಿಟ್ಟರೇಳೂ ದಸಳೇಯಾ ಈ ಮನೆಯ
ಮಾಳಿಗೆ ಮಂಟಪಕೇ ಸಮನಾದೂ ॥
ಹೆಬ್ಬಿದಿರಾ ಕಣೆಯೂ ನಿಬ್ಬಾದಲಿ ಬೆಳೆವೂದು
ಗುಬ್ಬೀ ನುಸಿವುದಕೇ ಎಡನಿಲ್ಲಾ
ಗುಬ್ಬೀ ನುಸಿವುದಕೇ ಎಡನಿಲ್ಲದಂಥಾ ಬಿದಿರು
ಬುದ್ಯುಳ್ಳೋರ್ಹೋಗೀ ಕಡಿತಂದೂ
ಬುದ್ಯುಳ್ಳೋರ್ಹೋಗೀ ಕಡಿತಂದೂ ಆ ಬಿದಿರು
ಪುಟ್ಟಾ ಮಕ್ಕಳಾಡಾ ಗರುಡ್ಯಾದೂ ॥
ಕಿರಿಬಿದಿರೂ ಕಣೆಯೂ ಕುಡಿಸುದ್ದಾ ಬೆಳೆವೊಂದು
ಮಾಜಾಣರ್ಹೋಗೀ ಅರಿತಂದೂ
ಮಾಜಾಣರ್ಹೋಗೀ ಅರಿತಂದೂ
ಮಾಜಾಣರ್ಹೋಗೀ ಅರಿತಂದೂ ಆ ಬಿದಿರು
ಮುದ್ದೂ ಗಿಣಿಗಾಳಾ ಪಂಜಾರಾ
ಮುದ್ದೂ ಗಿಣಿಗಾಳಾ ಪಂಜಾರಾ ಸಿಸುಗಳಿಗೆ
ತೂಗಲಿಕ್ಕಾದಾವೂ ತೊಟ್ಟೀಲು ॥
* * *
ಬಾಗಿಲು ಪದ-3
ಬಾಗಿಲು ಬಾಗಿಲು ಚಂದ ಈ ಮನೆಯ ಬಾಗಿಲು ಚಂದ
ಬಾಗಿಲ ಮ್ಯಾಲೇನು ಬರೆದಾರೆ-ಸಿರಿಕೈಲಿ
ಕೊಚ್ಚು ಪಾಲುಣ್ಣುವ ಗಿಳಿವಿಂಡು
ಕದಕಿಂತ ಕದಚಂದ ಈ ಮನೆಯ ಕದಚಂದ
ಕದದ ಮ್ಯಾಲೇನು ಕೊರೆದಾರೆ- ಸಿರಿಕೈಲಿ
ಸಾಲು ಸಾಲಾಗಿ ನಿಂತ ಗಿಳಿವಿಂದು
ಅಂದುಳ್ಳ ಮನೆಗೆ ಚಂದುಳ್ಳ ಕದವು
ಚಂದುಳ್ಳ ಕದಕೆ ಚಿನ್ನದ- ಅಗಣಿಯು
ತೆಗಿಸೈ ವಜ್ರದ ಅಗಣೀಯ
ಬಾಗಿಲು ತೆಗಿರಮ್ಮಾ ಭಾಗ್ಯದ ಲಕ್ಷಮ್ಮ
ಜ್ಯೋತಿಯನೊಳಗೆ ಕರಕೊಳ್ಳಿ
ಬಾಗಿಲು ತೆರೆದ ಕೈಗೆ ಭಾಗ್ಯದ ಮಳೆ ಬಂದು
ದೀಪಕೊಂಡವರಿಗೆ ದೊರೆಪದವಿ-ದೊರೆಯಾಲಿ
ದೀಪದೇವರ ಕರುಣಿರಲಿ
ಸಾಲೆಯನುಟಕೊಂಡು ಸೆರಮುತ್ತ ಕಟಿಕೊಂಡು
ಮಾಳಿಗೆಯೊಳಗೆ ಸುಳಿವಾರೆ- ತಾಯಮ್ಮ
ಜ್ಯೋತಿಗೆಣ್ಣೆ ಎರಿಬನ್ನಿ
ಬಾಲಯ್ನ ಕರಕೊಂಡು ಬಾಗಿಲಲಿ ನಿಂದೋರೆ-ತಾಯಮ್ಮ
ಸತ್ಯುಳ್ಳರ ಜ್ಯೋತಿಯ ಕರಕೊಳ್ಳಿ
ಎಣ್ಣೇಯನೆರೆದಾರೆ ಪುಣ್ಯಾದ ಫಲನಿಮಗೆ
ಮುಂದಣ ದೇವರಿಗೊಂದರಿಕ್ಯಾದ-ಕಾರಣದಿಂದ
ಕಾಮನುಡುಗಾರು ನುಡಿಸ್ಯಾರು
ಕಾಮನುಡುಗಾರು ಏನೆಂದು ನುಡಿಸ್ಯಾರು
ಕಂದಯ್ಯ ರ ಫಲವೇ ತಮಗಾದು- ಕಾರಣದಿಂದ
ಸಾವಿರ ಕಾಲ ಸುಖ ಬಾಳಿ
ಸುವ್ವೀರೊ ಸಂಗಯ್ಯ ಸುವ್ವೀರೊ ಲಿಂಗಯ್ಯ
ಸುವ್ವ ಬಂದರೆ ಬಾರೋ ಬಸವಯ್ಯ
ಬಡಗಲ ಬಂಕಾಪುರ ದೊಡ್ಡೋರಾಳುವ ರಾಜ್ಯ
ದೊಡ್ಡ ದೊರೆರಾಯ್ರ ಅಂದದರಮಾನೆ-ಬಾಗಿಲಮುಂದೆ
ಅಗಸೆ ದಾಟುವುದೇ ತಡವಾಯ್ತು
ಅಗಸೆ ತೆಗೆಸ್ರಯ್ಯ ಬಗಸೊಳ್ಳೆರಣ್ಣಯ
ಬಗಸೆಲೊಂದೊನ್ನ ಬಿಳಿಯಾಲೆ- ಕೊಟ್ಟೇವು
ನಮಗಾಗೊಂದಗಸೆ ತೆಗೆಸ್ರಯ್ಯ
ಆಯುಳ್ಳ ಅಂಗಳಕಾಗಿ ಚಾಯುಳು ಚೌಡಿಗಾಗಿ
ಗಂದ ಧರಿಸಿದವರ ಮನೆಗಾಗಿ-ಸತ್ಯುಳ್ಳರ ಜ್ಯೋತಿ
ನಮಗಾಗೊಂದೆಜ್ಜೆ ನಡೆ ಮುಂದೆ
ನೀ ತರಳರ ಜ್ಯೋತಿ ನಡೆಮುಂದೆ ನಡೆದಾರೆ
ನಿನ್ನಿಂದೆ ನಾವೂ ಬರುತೀವಿ- ಜಗಜ್ಯೋತಿ
ನೀ ಹೋದ ಕಾರ್ಯ ಜಯ ಜಯ
ಜಂತಿ ಮೇಲಿರುವ ಜಂತೊಳ್ಳೆ ಗಿಳಿರಾಮ
ನಾವೂ ಬರುತೀವಿ ಧನಿಗೂಡಿ-ಒಳಗಿರುವ
ತಾಯಮ್ಮರಿಗೊಂದೊಚನವ ಒರದೀಯಾ
ಹೇಗೆಂಬ ಸುದ್ದಿ ಕೇಳ್ದಾರೆ ತಾಯಮ್ಮ
ಕೋಣೆ ಕದಗಳೆ ಸಿಡಿದೋಗಿ-ಪಿಡಿದೋಗಿ
ಕಯ್ಯಲರ ಮಿಳ್ಳೆ ಶಿವದೀಪನಿಡಕೊಂಡು
ಜ್ಯೋತಮಗೆಣ್ಣೆ ಎರೆಬನ್ನಿ
ಸಣ್ಣೋರು ನಾವು ದೊಡ್ಡೋರ ಮನೆಗೆ ಬಂದೀವಿ
ಜ್ಯೋತಿಯ ಕಾಣಿಕೆ ಕೊಡಬನ್ನಿ
ಜ್ಯೋತಿಯ ಕಾಣಿಕೆ ಸರ್ರಾನೆ ಕೊಟ್ಟಾರೆ
ನಗುನಗುತ ನಾವು ಅಂಗಳ ಇಳಿದೇವು
* * *
ಬಾಗಿಲು ಪದ-4
(ಸ್ತ್ರೀಯರ ಮನೆಗೆ ಬಾಗಿಲ ಪದ)
ಮೂಡಾ ಬಾಗಿಲು ಮಾನೆ ಮತ್ತೀನ ತಿರುಗಾಣಿ
ಚಿತ್ತಾರನ್ಯಾರೂ ಬರೆದವರೂ
ಚಿತ್ತಾರನ್ಯಾರು ಬರೆದವರು ಈ ಮನೆಯ
ಮುತ್ತೂರಾಚಾರೀ ಮಗ ಬಂದೂ
ಮುತ್ತೂರಾಚಾರೀ ಮಗಮಾಡಿದ ಮಾಟಗಳ
ಮತ್ತೇ ಇನ್ಯಾರೂ ಜರಿವಾರೂ ॥
ತೆಂಕಲು ದಿಕ್ಕಿನ ಮೊನೇ ವಂಕೀಯಾ ತಿರುಗಾಣಿ
ರೂವ್ವಾರಾನ್ಯಾರೂ ಬರೆದವರೂ
ರೂವ್ವಾರಾನ್ಯಾರೊ ಬರೆದವರೂ ಈಗಿನ್ನೂ
ಹೊನ್ನೂರಾಚಾರೀ ಮಗ ಬಂದೂ
ಹೊನ್ನೂರಾಚಾರೀ ಮಗ ಮಾಡಿದ ಮಾಟಗಳ
ಮತ್ತೇ ಇನ್ಯಾರೂ ಜರಿವಾರೂ ॥
ಬಡಗಲು ದಿಕ್ಕಿನ ಮಾನೇ ಬೆಡಗೀನಾ ತಿರುಗಾಣಿ
ನವಿಲಿಂಡನ್ಯಾರೂ ಬರೆದವರೂ
ನವಿಲಿಂಡನ್ಯಾರೂ ಬರೆದವರೂ ಈಗಿನ್ನೂ
ಮಾಳೂರಾಚಾರೀ ಮಗಬಂದೂ
ಮಾಳೂರಾಚಾರೀ ಮಗಮಾಡಿದ ಮಾಟಗಳ
ಮತ್ತೇ ಇನ್ನಾರೂ ಜರಿವಾರೂ ॥
ಬಾಗಿಲು ಬಾಗಿಲೆಲ್ಲಾ ಬಲಕೊಂದಿ ನಿಂದಾವೆ
ಬಾಲೇರೊಳಗುಂಟೂ ಸುಳುವಿಲ್ಲಾ
ಬಾಲೇರೊಳಗುಂಟೂ ಸುಳುವಿಲ್ಲಾ ಈ ಮನೆಯಾ
ಬಾಲೆರು ಬಾಗೀಲಾ ತೆಗಿರಮ್ಮಾ ॥
ಬಾಗಿಲು ತೆಗೆವುದಕೇ ಬಾಲಾನೂ ಬಿಡಲೊಲ್ಲ
ಜಾವಾದಾ ನಿದ್ರೇ ಕವುದಾವೇ
ಚಾಲನ ಸೊಂಟಾಕೇ ಬೆಳ್ಳೀಯಾ ನೇಪಾಳ
ಬಾಲಾನೆಡಗೈಲೀ ಕರಕೊಳ್ಳೀ
ಬಾಲಾನೆಡಗೈಲಿ ಕರಕೊಳೀ ತಾಯಮ್ಮ
ಬಲಗೈಯ್ಯಲಿ ಕದವಾ ತೆಗಿರಮ್ಮಾ ॥
ಬಲಗೈಯ್ಯಲಿ ಕದವಾ ತೆಗಿರಮ್ಮಾ ಈ ಮನೆಯಾ
ಕವಲೀ ಗೋವಿನ್ನೂ ಅಡಲಿಕ್ಕೀ
ಕವಲೀ ಗೋವಿನ್ನೂ ಅಡಲಿಕ್ಕಿ ಏನೆಂದಾವು
ಬಾಲಾವಾನೆತ್ತೀ ಕೆಲದಾವೊ
ಬಾಲಾವಾನೆತ್ತೀ ಕೆಲದಾವೇ ಮುಮ್ಮನೆಯ
ತಾಯಮ್ಮಾನೆದ್ದೂ ಮುರನಾಕೀ
ತಾಯಮ್ಮಾನೆದ್ದೂ ಮುರನಾಕಿ ಕರುವಾಬಿಟ್ಟು
ಕಂದಗೆ ನೊರೆಹಾಲೂ ಕೊಡುತಾರೇ ॥
ಹೊಸ್ತಿಲು ಹೊಸ್ತಿಲೆಲ್ಲಾ ಹೊಸದಾಗಿ ನಿಂದಾವೆ
ನಿಸ್ತ್ರೇರೊಳಗುಂಟೂ ಸುಳುವಿಲ್ಲಾ
ನಿಸ್ತ್ರೇರೊಳಗುಂಟೂ ಸುಳುವಿಲ್ಲಾ ಈ ಮನೆಯ
ನಿಸ್ತ್ರೇರು ಬಾಗೀಲಾ ತೆಗಿರಮ್ಮಾ ॥
ಬಾಗಿಲು ತೆಗೆವುದಕೇ ಚೆನ್ನಾನು ಬಿಡಲೊಲ್ಲ
ಜಾವಾದ ನಿದ್ದೇ ಕವುದಾವೂ
ಚಿನ್ನನ ಕೊರಳಿಗೇ ರನ್ನಾದ ಪದಕಾವು
ಚಿನ್ನನ ಸೊಂಟಾಕೇ ತೊಟಗೊಳ್ಳೀ
ಚಿನ್ನನ ಸೊಂಟಾಕೇ ತೊಟಗೊಳ್ಳೀ ಅಕ್ಕಮ್ಮ ॥
ಕದವಾ ತೆಗಿರಮ್ಮೊ ನಮಗಾಗೀ
ಕದವಾ ತೆಗಿರಮ್ಮೊ ನಮಗಾಗೀ ಈ ಮನೆಯ
ಕೆಂದಾ ಗೋವಿನ್ನೂ ಅಡಲಿಕ್ಕೀ
ಕೆಂದಾ ಗೋವಿನ್ನೂ ಅಡಲಿಕ್ಕಿ ಏನೆಂದಾವು
ಕೋಡಾನಳ್ಳಾಡೀ ಕೆಲದಾವೂ
ಕೋಡಾನಳ್ಳಾಡೀ ಕೆಲದಾವೂ ನೆರಮನೆಯಾ
ಅಕ್ಕಮ್ಮೊನೆದ್ದೂ ಮುರನಾಕೀ
ಅಕ್ಕಮ್ಮೊನೆದ್ದೂ ಮುರನಾಕೀ ಕರುವಾ ಬಿಟ್ಟು
ಚಿನ್ನಗ ನೊರೆ ಹಾಲೂ ಕೊಡುತಾರೇ ॥
* * *
Leave A Comment