ದೋಷಪರಿಹೃತವಾದುದಕ್ಕೆ ಲಕ್ಷ್ಯ

ಅಳಿನಳಿನೋತ್ಪಳರುಚಿಗಳನಳಕಾನನ-ನಯನ-ಯುಗಳದಿಂ ಗೆಲ್ದಿರ್ದುಂ-

ಕೊಳದೊಳಗೇ [1]ನಂ ನೋ[2]ೞಳ್ಪಿಯ್ ವಿಳಾಸಿನೀ ನಿನ್ನವೋಲದೇ

ನತಿಶಯವೋ ||೮೯||*

 

ವ್ಯವಹಿತ

ಸವಿಶೇಷಾಲಂಕಾರೋದ್ಭವಮಾಗಿಯುಮೊಂದುವ[3]ರ್ಥದೊಳ್ ಸಂಬಂಧ- |

ವ್ಯವಧಾನಮಾದೊಡಕ್ಕುಂ ವ್ಯವಹಿತದೋಷಂ ಪ್ರಯೋಗಮೀ ತೆಱನದಱಾ ||೯೦||

 

೮೮. ‘ಕೂದಲು ಮತ್ತು ಮುಖ, ಕಣ್ಣುಗಳು ಚೆಲುವಿನಿಂದ ದುಂಬಿ, ಕನ್ನೈದಿಲೆ ವಿಲಾಸವನ್ನು ಗೆದ್ದಿರುವುದರಿಂದ ತಿಳಿಗೊಳವನ್ನು ಹೋಲುತ್ತಿದ್ದರೂ, ಇದೇನೆಂದು ತಿಳಿಯದು’ ಎಂಬುದು ದೋಷಕ್ಕೆ ಲಕ್ಷ್ಯ.

೮೯. ಸುಂದರಿಯೆ, ನೀನು ದುಂಬಿ, ಕಮಲ, ಕನ್ನೈದಿಲೆಗಳ ಬಣ್ಣವನ್ನು ಕೂದಲು, ಮುಖ, ಕಣ್ಣಗಳ ಮೂಲಕ ಗೆದ್ದಿದ್ದರೂ, ನಿನ್ನಂತಿರುವ ಕೊಳದಲ್ಲಿ ಮತ್ತೇನನ್ನು ನೋಡುತ್ತಿರುವೆ! ಇದು ತುಂಬಾ ಅಚ್ಚರಿಯದಾಗಿದೆ!

೯೦. ಯಾವುದೇ ಒಂದು ಅಲಂಕಾರದಿಂದ ಜನಿಸಿದ್ದರೂ, ಅನ್ವಯಿಸಬೇಕಾದ ಅರ್ಥದಲ್ಲಿ (ಪದಗಳ) ಅನ್ವಯ ಸಂಬಂಧ ತುಂಬಾ ದೂರವಾಗಿಬಿಡುವುದಾದರೆ, ಅದು ‘ವ್ಯವಹಿತ’ವೆಂಬ ದೋಷ. ಅದರ ಉದಾಹರಣೆ ಹೀಗೆ-

ಮನದೆ ನೆ[4]ನೆದವರ ಕಿ[5]ಡುಗುಂ ಜಿನಾಧಿಪಾ ನಿನ್ನ ಪಾಪನಿಚಯಂ ಗುಣಮಂ |

ಮುನಿಗಳುಮದಱಂ ತ್ವ[6]ತ್ಸೇವನೆಯಿಂ ಕಿಡಿಸಲ್ಕೆ ಪತ್ತಿದರ್ ಸಂಸೃತಿಯಂ ||೯೧||

ಛಂದೋಭಂಗ

ಗುರು-ಲಘು-ವಿನ್ಯಾಸ-ಕ್ರಮ- ವಿರಚನೆಯೂನಾತಿರಿಕ್ತಮಾದೊಡೆ ಕೃತಿಯೊಳ್ |

ನಿರುತಂ ಛಂದೋಭಂಗಂ ದುರುಕ್ತತರ-ದೋಷಮದಱ ಪಾಂಗಿಂತಕ್ಕುಂ ||೯೨||

 

ವನರುಹದಳನಯನೆ ನಿನ್ನನೆ ನೆನೆನೆನೆದಿ[7]ರುಳೊಳಗೊಱಗದಿರೆ ಕಡೆಗಣ್ಗಳ್ |

ಮುನಿಸನಭಿನಯಿಪವೋಲ್ ಕೆಮ್ಮನೆ ರಕ್ತಾಂಭೋಜ-ರುಚಿಯನಿೞ್ಕುಳಿ

ಗೊಳ್ಗುಂ ||೯೩||

೯೧. ‘ಜಿನರಾಜನೆ ! ಮನದಲ್ಲಿ ನೆನೆದವರ ಕೆಡುವುದು ನಿನ್ನ ಪಾಪಸಮೂಹವು ಗುಣವನ್ನು ಮುನಿಗಳೂ ಆದರಿಂದ ನಿನ್ನಸೇವೆಯ ಮೂಲಕ ಕೆಡಿಸಲು ಹತ್ತಿದರು ಸಂಸಾರವನ್ನು’. *ಹೀಗೆ ಅಸ್ತವ್ಯಸ್ತವಾಗಿರುವ ಪದಗಳ ಅನ್ವಯ ಕ್ರಮವನ್ನು ಸರಿ ಪಡಿಸಿದಾಗ-‘ಜಿನರಾಜನೆ ! ನಿನ್ನ ಗುಣವನ್ನು ಮನದಲ್ಲಿ ನೆನೆದವರ ಪಾಪಸಮೂಹವು ನಾಶವಾಗುವುದು; ಅದರಿಂದ ಮುನಿಗಳೂ ನಿನ್ನಸೇವೆಯ ಮೂಲಕ ಸಂಸಾರವನ್ನು ಕೆಡಿಸಲು ಹತ್ತಿದರು’ ಎಂದಾಗುವುದು. *

೯೨. ‘ಗುರು’ ‘ಲಘು’ಗಳ ವಿನ್ಯಾಸಕ್ರಮದ ಘಟನೆಯಲ್ಲಿ ಹೆಚ್ಚುಕಡಿಮೆಗಳಾದರೆ ಅಂತಹ ಕೃತಿಯಲ್ಲಿ ‘ಛಂದೋಭಂಗ’ವೆಂಬ ಮಹಾದೋಷವು ಬರುವುದು. ಅದರ ಲಕ್ಷ್ಯ ಹೀಗೆ-

೯೩. ವನಜಾಕ್ಷಿಯೆ! ನಿನ್ನನ್ನೇ ನೆನೆಯುತ್ತ, ನೆನೆಯುತ್ತ, ಇರುಳಲ್ಲಿ ನಿದ್ದೆಯೇ ಮಾಡಿದಿರುವ ಕಡೆಗಣ್ಣುಗಳು ಕೋಪವನ್ನು ಅಭಿನಯಿಸುವುವೋ ಎಂಬಂತೆ, ಬಿಂಕದಿಂದ ಕೆಂದಾವರೆಯ ಕಾಂತಿಯನ್ನು ಮೈದಾಳುತ್ತಿವೆ.

 

 

ಮೊದಲ ಪದಂ ನ್ಯೂನಾಕ್ಷರಮದಱಂದೆ ಬಱಕ್ಕಮರ್ಧಮಧಿಕಾಕ್ಷರಮಿಂ- |

ತಿ[8]ದಱಂ ಛಂದೋಭಂಗಂ ಪದನಱದದನಿಂತು ಸಮಱ ಪೇ[9]ೞ್ವೊಡೆ

ಚೆಲ್ವಂ ||೯೪||*

ವಿಸಂಧಿ

ಛಂದಕ್ಕೆ ಬಾರದೆಂದಱದೊಂದೊಂದಱೊಳೊಂದಿ ಬಂದು ನಿಂದಕ್ಕರಮಂ |-

ಸಂಧಿಸದೆ ಪೇೞ್ವೊಡದು ಕೃತಿನಿಂದಿತಮೆಂದುಂ ವಿಸಂಧಿಯೆಂಬುದು ದೋಷಂ ||೯೫||

ಜನಪತಿಗೆ ಒ[10]ಸಗೆಯಂ ಪುರಜನಮೆಲ್ಲಂ ಬೀಱುತಿರ್ಪ ಆಗ[11]ಳ್ ತಾಮುಂ |

ಮನದುತ್ಸವದಿಂ ಕುಣಿವಂತನಿಲಾಹತ-ಕೇತನಾಳಿ ಸೊ[12]ಗಯಿಸುತಿರ್ಕುಂ ||೯೬||

 

೯೪. ಇಲ್ಲಿ ಮೊದಲ ಚರಣದಲ್ಲಿ *‘ನಯನೇ’ ಎಂಬಲ್ಲಿ ಗುರು ಅಪೇಕ್ಷಿತವಿರುವಾಗ ‘ನ*ಯನೆ’ ಎಂಬ ಲಘು ಬಂದಿರುವುದರಿಂದ* ಅಕ್ಷರ ಕಡಿಮೆ ಬಿದ್ದಿದೆ. ಎರಡನೆಯ ಚರಣದಲ್ಲಿ ‘ಇರುಳೊಳ*ಗೊಱಗದಿರೆ’ ಎಂಬಲ್ಲಿ ಬೇಕಾದ್ದಕ್ಕಿಂತ ಒಂದು ಲಘು ಹೆಚ್ಚಾಗಿ ಬಂದಿದೆ. *ಅದನ್ನು ಸರಿಪಡಿಸಿ ಇರುಳೊಳೊಱಗದಿರೆ ಎಂದೋದಿಕೊಂಡರೆ ದೋಷ ತಪ್ಪುವುದು; ಹಾಗೆಯೇ ದೋಷ ತಪ್ಪಲು ಮೊದಲ ಚರಣದಲ್ಲಿ ‘ನಯನೇ’ ಎಂದು ತಿದ್ದಿಕೊಳ್ಳಬೇಕು.* ಆದ್ದರಿಂದ ‘ಛಂದೋಭಂಗ’ವಾಗಿದೆ. ಪದದ ಮಾತ್ರೆಗಳ ಲೆಕ್ಕವನ್ನು ಗಮನಿಸಿ ಸರಿಯಾಗಿ ತಿದ್ದಿಕೊಂಡರೆ ಅದು ಚೆನ್ನಾಗುತ್ತದೆ.

೯೫. ಛಂದಸ್ಸಿಗೆ ಸರಿಹೋಗದೆಂಬ ಕಾರಣದಿಂದ ಒಂದರಲ್ಲೊಂದು ಹೊಂದಿ ಕೊಂಡು (ವ್ಯಾಕರಣನಿಯಮ ಪ್ರಕಾರ) ಸಂಧಿಯಾಗಬೇಕಾದ ಅಕ್ಷರವನ್ನು ಸಂಧಿ ಮಾಡದೆ ಹಾಗೆಯೇ ಹೇಳಿದರೆ, ಅದು ಕೃತಿಯಲ್ಲಿ ನಿಂದ್ಯವಾದ ‘ವಿಸಂಧಿ’ಯೆಂಬ ದೋಷ.

೯೬. *‘ವಿಸಂಧಿ’ಗೆ ಉದಾಹರಣೆ-* ಜನಪತಿಗೆ ಒಸಗೆಯನ್ನು (ಇಲ್ಲಿ ‘ಜನ ಪತಿಗೊಸಗೆ’ಯೆಂದಾಗಬೇಕಾಗಿತ್ತು) ಪುರಜನವೆಲ್ಲ ಬೀರುತ್ತಿರುವ ಆಗ (‘ಬೀರುತ್ತಿರುವಾಗ’ಯೆಂದಾಗಬೇಕಾಗಿತ್ತು) ತಾವೂ ಮನಸ್ಸಿನಲ್ಲಿ ಆನಂದದಿಂದ ಕುಣಿಯುತ್ತಿರುವಂತೆ ಗಾಳಿಗೆ ಹಾರಾಡುವ ಬಾವುಟಗಳು ಶೋಭಿಸುತ್ತಿವೆ.

ಮುನ್ನ ಪೇೞ ರ್ದರ್ಧಂ ಭಿನ್ನ-ಪ್ರಸ್ತಾರ-ಭಿತ್ತಿ-ದೋಷಾನುಗತಂ |

ಸನ್ನುತಮಪರಾರ್ಧಂ ಸಂ[13]ಪನ್ನಶ್ಲಿಷ್ಟಾಕ್ಷರೋಪರಚಿತಮದೋಷಂ ||೯೭||

ವಿರೂಪಸಂಧಿ

ಸಂಧಿಗಳುಂ ಕೆಲವೆಡೆಯೊಳ್ ಬಂದು ವಿರೂಪಂಗಳಾಗಿ ಸಮನಿಸಿ ಕವಿತಾ- |

ಬಂಧನದೊಳಾಗೆ ದೋಷಾ-ಬಂಧುಗೆ ಶಶ-ಲಕ್ಷ್ಮದಂತೆ ಕ[14]ಱೆಯಂ ತರ್ಕುಂ ||೯೮||

ಅರಮರಸಂ ಕೃತಕಾದ್ರಿಯೊಳರಮರಮನೆಯೊಳಗೆ ಕಂದುಕ-ಕ್ರೀಡೆಗಳೊಳ್ |

ಅರಮುದ್ಯಾನ-ವನಂಗಳೊಳರಮಂತಃಪುರದೊಳರಮದೆಂದುಂ ನಿ[15]ಲ್ವಂ ||೯೯||

ದೋಷಂಗಳಿಂತು ಮಿಗೆ ಸಂಶ್ಲೇಷದೊಳಾದಂದು ಸಕಲ-ವಿದ್ವತ್ಸಭೆಯೊಳ್ |

ದೂಷಿಸುಗಂ ಕೃತಿವಧುವಂ ಭಾಷಾವಿದರದಱ ತೆ[16]ಱನನುೞೆಗೀ ತೆ[17]ಱದಿರಿ ||೧೦೦||

೯೭. ಮೇಲೆ ಪೂರ್ವಾರ್ಧದಲ್ಲಿ ‘ಭಿನ್ನ-ಸಂಧಿ’ ಅಥವಾ ವಿಸಂಧಿ ದೋಷ ಸೇರಿದೆ: ಅದೇ ಉತ್ತರಾರ್ಧದಲ್ಲಿ ಅಕ್ಷರಗಳೆಲ್ಲ ಸರಿಯಾಗಿ ಸೇರಿ ಸಂಧಿಯಾಗಿರುವುದರಿಂದ ಅದು ನಿರ್ದುಷ್ಟವಾಗಿದೆ.

೯೮. ಕೆಲವೆಡೆಗಳಲ್ಲಿ ಸಂಧಿಗಳು ಬಂದಾಗ ವಿರೂಪಗೊಂಡಂತಾಗಿ ಕಾವ್ಯ ಬಂಧದಲ್ಲಿ ಸೇರಿಕೊಂಡರೆ ನಿಶಾನಾಥನಾದ ಚಂದ್ರನಿಗೆ ಮೊಲದ ಕರೆಯಂತೆ ಕಾವ್ಯಕ್ಕೂ ಕಲಂಕವನ್ನು ತರುತ್ತವೆ.

೯೯. *ವಿರೂಪಸಂಧಿಗೆ ಉದಾಹರಣೆ-* ‘ಅರಮರಸಂ’ (=ಕೆಲಮೊಮ್ಮೆ ಅರಸನು) ಕ್ರೀಡಾಶೈಲದಲ್ಲೂ, ‘ಅರಮನೆಯೊಳಗೆ’ (=ಕೆಲಮೊಮ್ಮೆ ಅರಮನೆಯಲ್ಲಿಯೂ) ಚೆಂಡಾಟಗಳಲ್ಲೂ, ‘ಅರಮುದ್ಯಾನವನಂಗಳೊಳ್’ (=ಕೆಲಮೊಮ್ಮೆ ಉಪವನಗಳಲ್ಲಿಯೂ). ‘ಅರಮಂತಃಪುರದೊಳ್’ (-ಕೆಲವೊಮ್ಮೆ ಅಂತಃಪುರದಲ್ಲಿಯೂ) ನಿಲ್ಲುವನು. *ಇಲ್ಲೆಲ್ಲ ‘ಮರಸ’, ‘ಮರಮನೆ’, ‘ಮುದ್ಯಾನ’, ‘ಮಂತಃಪುರ’ ಎಂಬ ಪದ-ವಿರೂಪಗಳು ದೋಷಾವಹವೆನಿಸುವವು*.

೧೦೦. ಹೀಗೆ ‘ಸಂಶ್ಲೇಷ’ ಅಥವಾ ಸಂಧಿಯಲ್ಲಿ ಹೆಚ್ಚಾಗಿ ದೋಷಗಳುಂಟಾದರೆ ಭಾಷಾವಿದರು ತುಂಬಿದ ವಿದ್ವತ್ಸಭೆಯಲ್ಲಿ ಕೃತಿವಧುವನ್ನು ದೂಷಿಸುವರು. ಆದುದರಿಂದ ಈ ರೀತಿಯಾದ ಅವನ್ನು (ಕವಿಯು) ತೊರೆಯಬೇಕು.

 

ನೇಯಾರ್ಥ

ಕುಱತಂತೆ ಪೇೞ್ದ ಪದದೊಳ್ ಮೆಱಯದೊಡೆಲ್ಲಂ ವಿವಕ್ಷಿತಾರ್ಥಮಶೇಷಂ |

ಪೆಱತೊಂದ[18]ಲ್ಲಿಲ್ಲದುಮುಮನಱವವರಿಟ್ಟಱಯೆ ಪೇ[19]ೞ್ವೊಡದು

ನೇಯಾರ್ಥಂ ||೧೦೧||

ಪರೆದಿರೆ ರಾಗಂ ತನ್ನೊಳ್ ನಿರಂತರಂ ಗಗನವಿವರಮೊಪ್ಪಿತ್ತಾದಂ |

ವರ-ಪಾರಿಜಾತ-ಕುಸುಮೋತ್ಕರ-ಸಾಂದ್ರ-ಪರಾಗ-ವಿಸರ-ಪಿಂಜರಿತಂಬೋಲ್ ||೧೦೨||

ಪರೆದಿರೆ ಸಂಧ್ಯಾ-ರಾಗಂ ನಿರಂತರ ಗಗನ-ವಿವರಮೊಪ್ಪಿತ್ತೆಂದಾ- |

[20]ರದಿಂ ಪೇೞಲ್ ಬಗೆದಂತಿರೆ ಸಂಧ್ಯಾ-ಪದಮನಿಡದೆ ಪೇೞ್ವುದು

ದೋಷಂ ||೧೦೩||

 

ಆಗಮವಿರುದ್ಧ

ರಾಗಾದಿ-ದೋಷ-ವಿರಹಿತ-ವಾಗತಿಶಯಮಖಿ[21]ಳವಸ್ತು-ವಿಸ್ತರ-ವಿಷಯಂ |

ಯೋಗಿ-ಗುಣಾನುಗತಂ ಮತ್ತಾಗಮಮೇತದ್ವಿರುದ್ಧ-ವಚನಂ ದೋಷಂ ||೧೦೪||

 

೧೦೧. ಪ್ರಯೋಗಿಸಿದ ರೀತಿಯಲ್ಲಿರುವ ಪದದಲ್ಲಿ (ಕವಿಗೆ) ವಿವಕ್ಷಿತವಿರುವ ಎಲ್ಲ ಅರ್ಥವೂ ಅವನ ಉದ್ದೇಶಾನುಸಾರ ತಿಳಿಯದೆ ಹೋಗುವಂತಾದರೆ, ಮತ್ತು ಬುದ್ಧಿಶಾಲಿಗಳು ಅಲ್ಲಿಲ್ಲದ ಮತ್ತೊಂದು ಪದವನ್ನು ಊಹಿಸಿಟ್ಟುಕೊಂಡು ಅರ್ಥವನ್ನು ಸರಿಯಾಗಿಸಬೇಕಾಗುವಂತಿದ್ದರೆ ಅದು ‘ನೇಯಾರ್ಥ’.

೧೦೨. *‘ನೇಯಾರ್ಥ’ಕ್ಕೆ ಉದಾಹರಣೆ-* ಒಳ್ಳೆಯ ಪಾರಿಜಾತದ ಹೂಗಳ ಸಾಂದ್ರ ಪರಾಗಪ್ರಸರದಿಂದ ರಂಜಿತವಾಗಿದೆಯೋ ಎಂಬಂತೆ ಗಗನತಲವು ಹರಡಿದ ರಕ್ತವರ್ಣದಿಂದ ತುಂಬಾ ಚೆಲುವೇರಿತ್ತು. *ಇಲ್ಲಿ ‘ಸಂಧ್ಯಾ(ರಾಗ)’ ಎಂಬುದು ಊಹಾಗಮ್ಯವಾದ್ದರಿಂದ ‘ನೇಯಾರ್ಥ’ವೆನ್ನಲಾಗಿದೆ.*

೧೦೩. ಇಲ್ಲಿ ಕವಿಯ ವಿವಕ್ಷಿತಾರ್ಥ ಸಂಧ್ಯಾರಾಗದಿಂದ ನಿರಂತರವಾಗಿ ಗಗನ ತಲವು ಶೋಭಿಸುತ್ತಿತ್ತೆಂದು ಹೆಳುವ ಹಾಗಿದೆ. ಆದರೆ ‘ಸಮಧ್ಯಾ’ ಶಭ್ದವನ್ನು ವಾಚ್ಯವಾಗಿ ಹೇಳದೆ ಬಿಟ್ಟಿರುವುದು ‘ದೋಷ’ವಾಗಿದೆ.

೧೦೪. (ಲೋಕದ) ನಿಖಿಲ ವಸ್ತುಗಳ ಬಗೆಗೂ ರಾಗ ಮುಂತಾದ ದೋಷಗಳಿಲ್ಲದ ಮಹಾಯೋಗೀಶ್ವರರ ಸಿದ್ಧಾಂತವಚನವೇ ‘ಆಗಮ’. ಅದಕ್ಕೆ ವಿರುದ್ಧವಾದ ಕವಿವಚನ ದೋಷವೆನಿಸುತ್ತದೆ.

 

ಸಮಯವಿರುದ್ಧ

ಆ ಕಪಿಲ-ಸುಗತ-ಕಣಚರ-ಲೋಕಾಯತಿಕಾದಿ-ಮಾರ್ಗ-ಭೇದಂ ಸಮಯಂ |

ಪ್ರಾಕಟಮದಂ ವಿರುದ್ಧ-ವಿವೇಕದಿನಱಪುವೊಡೆ ನಾಡೆ ಸಮಯವಿರುದ್ಧಂ ||೧೦೫||

 

ನ್ಯಾಯವಿರುದ್ಧ

[22]ಕ್ತಿವಿಚಾರಂ ನ್ಯಾಯ[23]ನಿಯುಕ್ತಕ್ರಮಮಿನ್ನದಕ್ಕೆ ಬಾರದುವೆಲ್ಲಂ |

ವ್ಯಕ್ತಂ ನ್ಯಾಯವಿರುದ್ಧಂ ಪ್ರೋಕ್ತಮಹಾದೋಷಮಂತು ಪೇ[24]ೞಲ್ಕೆಂತುಂ ||೧೦೬||

 

 

ಕಲಾವಿರುದ್ಧ

ನಿರುಪಮ-ಗಂಧರ್ವ-ಗತಿ-ಸ್ವರಾದಿಕ-ಕಳಾಗುಣಂ ಚತುಃಷಷ್ಟಿ-ವಿಧಂ |

ದೊರೆಕೊಳ್ಳದುದೆಲ್ಲಿ ಕಳಾವಿರುದ್ಧದೋಷಂ ವಿ[25]ಶಿಷ್ಟ-ಜನತಾ-ದೂಷ್ಯಂ ||೧೦೭||

 

ಕಾಲವಿರುದ್ಧ

ಕಾಲಮಹೋರಾತ್ರಾದಿಕಮಾಲಕ್ಷಿತ-ಭೇದಮದಱೊಳೊಂ[26]ದದೊಡಕ್ಕುಂ |

ಕಾಲ-ವಿರುದ್ಧಂ ದೋಷಕ್ಕಾಲಯಮದನಱೆದು ಕೃತಿಯೊಳಿಡದಿರ್ಕೆ ಬುಧರ್ ||೧೦೮||

 

೧೦೫. ಕಪಿಲ, ಬುದ್ಧ, ಕಣಾದ, ಲೋಕಾಯತ (ಅಥವಾ ಚಾರ್ವಾಕ) ಮುಂತಾದ ನಾನಾ ಭೇದಗಳನ್ನೊಳಗೊಳ್ಳುವ ದರ್ಶನಶಾಸ್ತ್ರವೇ ‘ಸಮಯ’. ವಿಪರೀತಮತಿಯ ಫಲವಾಗಿ ಅದಕ್ಕೆ ವಿರುದ್ಧವಾದುದನ್ನು ಹೇಳುವುದೇ ‘ಸಮಯವಿರುದ್ಧ.’

೧೦೬. ನ್ಯಾಯಶಾಸ್ತ್ರ (=ತರ್ಕಶಾಸ್ತ್ರ)ದಲ್ಲಿ ಹೇಳಿದ ಕ್ರಮಕ್ಕೆ ಅನುಗುಣವಾಗಿರುವುದೇ ‘ನ್ಯಾಯಯುಕ್ತ’; ಅದಕ್ಕೆ ಸಲ್ಲದುದೆಲ್ಲ ‘ನ್ಯಾಯವಿರುದ್ಧ’ವೆಂಬ ದೊಡ್ಡ ವಚನದೋಷವೆಂದೇ ಹೇಗೂ ಹೇಳಬೇಕಾಗುತ್ತದೆ.

೧೦೭. ನಿರುಪಮವಾದ, ಗಮಕ ಸ್ವರಾದಿಗಳಿಂದ ಸಂಪನ್ನವಾದ ಗಂಧರ್ವ ವಿದ್ಯೆ ಅಥವಾ ಸಂಗೀತವೇ ಮುಂತಾದ ಕಲೆಗಳ ಸಂಖ್ಯೆ ಅರವತ್ತುನಾಲ್ಕು. ಆ ಲಕ್ಷಣಗಳು ಸರಿಯಾಗಿ ಬಾರದ ಸ್ಥಳಗಳಲ್ಲಿ ವಿಶೇಷಜ್ಞರು ನಿಂದಿಸುವ ‘ಕಲಾವಿರುದ್ಧ’ ದೋಷ.

೧೦೮. ಹಗಲು, ಇರುಳು ಇತ್ಯಾದಿಯಾಗಿ ವಿಂಗಡಿಸಿರುವದೇ ‘ಕಾಲ’ ಅದರಲ್ಲಿ ಸರಿಯಾಗಿ ಹೊಂದಿಕೆಯಾಗದಿದ್ದರೆ ‘ಕಾಲವಿರುದ್ಧ’ವೆಂಬ ದೋಷಕ್ಕೆ ತಾಣವಾಗುವುದು. ಅದನ್ನು ಅರಿತುಕೊಳ್ಳಬೇಕು; ಬುಧರು ಆ ದೋಷಗಳನ್ನು ಕಾವ್ಯದಲ್ಲಿ ಬರಿಸಬಾರದು.

 

ಲೋಕವಿರುದ್ಧ

ಲೋಕಮದೂರ್ಧ್ವಾಧೋ-ಮಧ್ಯಾಕಾಂಕ್ಷಿತ-ಭೇದ-ರೂಪದಿಂ ಮೂಱಕ್ಕುಂ |

ಲೋಕವಿರುದ್ಧಂ ತದ್ವ್ಯತಿರೇಕೋಕ್ತಿ ವಿವೇಕಿ-ಲೋಕ-ಗ[27]ರ್ಹಿತ-ಮಾರ್ಗಂ ||೧೦೯||

 

ದೇಶವಿರುದ್ಧ

ದೇಶಂ ವರ-ರಾ[28]ಷ್ಟ್ರಾದಿ-ನಿವೇಶಾಂತಂ ತದ್ವಿರುದ್ಧವಚನಂ ಮಿಗೆ ಸಂ- |

ಕ್ಲೇಶಕರಂ ಕೃತಿ-ಕ[29]ರ್ತೃಗೆ ಕೌಶಲಮಂ ಪಡೆಯದುಕ್ತ-ದೇಶ-ವಿರುದ್ಧಂ ||೧೧೦||

ಇಂತಿಂತೆ ಪೇ[30]ೞ್ವೊಡೆಲ್ಲಮನಂತಾತ್ಮಕಮಕ್ಕುಮಾ ವಿರುದ್ಧದ ಭೇದಂ |

ಸಂತಯಿಸಿ ಬಲಿದು ಮನಮನದಂ ತಱಸಲೆ ಪೇೞಲಾರ್ಪನೆಂಬವನೊಳನೇ ||೧೧೧||

 

ದೋಷನಿಂದೆ

ಗೀತಿಕೆ|| ದೋಸಮೇನಾನುಂ ಸ್ವಲ್ಪಮಾದೊಡಂ

ಮಾಸಿಸಿರ್ಕುಮ[31]ಣಂ ಕೃತಿವಧುವಂ |

ಪೇಸದೆ ದುರ್ಜಮದೊಳಾದ ಪ[32]ರಿಚಯಂ

ಮಾಸಿಸಿಕಿ[33]ಡಿಸುವವೊಲೊಪ್ಪುವ ಕುಲವಧುವಂ ||೧೧೨||

೧೦೯. ಊರ್ಧ್ವಲೋಕ(=ಮೇಲಿನ ಸ್ವರ್ಗ), ಅಧೋಲೋಕ (=ಕೆಳಗಿನ ಪಾತಾಳ) ಮತ್ತು ಮಧ್ಯಲೋಕ (=ಭೂಲೋಕ) ಎಂಬ ವಿಭಾಗ ಕ್ರಮದಂತೆ ಲೋಕಗಳು ಮೂರು. ಅದಕ್ಕೆ ವಿರುದ್ಧವಾಗಿ ಹೇಳಿದರೆ ‘ಲೋಕವಿರುದ್ಧ’, ಆ ಪ್ರಯೋಗವನ್ನು ವಿವೇಕಿಗಳೆಲ್ಲ ನಿಂದಿಸುವರು.

೧೧೦. ರಾಷ್ಟ್ರ ಮೊದಲಾಗಿ ವಾಸಸ್ಥಳದ ಕಡೆಯೆಂಬುದೆಲ್ಲ ‘ದೇಶ’. ಅದಕ್ಕೆ ವಿರುದ್ಧವಾದ ವಚನವು ಎಂದರೆ ‘ದೇಶವಿರುದ್ಧ’ವು ಕ್ಲೇಶದಾಯಕವಾಗುತ್ತದೆ; ಅದು ಕೃತಿಕಾರನಿಗೆ ಗೌರವವನ್ನು ತಾರದು.

೧೧೧. ಹೀಗೆಯೇ ಒಂದೊಂದಾಗಿ ವಿರುದ್ಧದ ಭೇದಗಳನ್ನೆಲ್ಲ ಪಟ್ಟಿಮಾಡುತ್ತಹೋದರೆ ಅನಂತವಾಗುತ್ತದೆ. ಸಮಾಧನದಿಂದ ಮನಸ್ಸನ್ನು ಗಟ್ಟಿಮಾಡಿಕೊಂಡು ಅದನ್ನು ನಿರ್ಣಯಿಸಿ ಹೇಳಬಲ್ಲವನೆಂಬಾತನುಂಟೆ ?

೧೧೨. ದೋಷವು ಎಷ್ಟೇ ಸ್ವಲ್ಪವಾದರೂ ಕೃತಿವನಿತೆಯನ್ನು ಅದು ಅಂದಗೆಡಿಸುವುದು; ಹೇಸದೆ ದುರ್ಜನರ ಸಂಗಡ ಮಾಡಿಕೊಂಡ ಪರಿಚಯವು ಒಳ್ಳೆಯ ಕುಲಸ್ತ್ರೀಯನ್ನು ಕೂಡ ಕೆಡಿಸುವ ಹಾಗೆ !


[1] ಗೆಂ ನಂ ನೋಳ್ಪೆಗ ‘ಪಾ’; ನೋಳ್ಪೇಗ ‘ಬ’. ೮೮ರ ‘ಆಳಿನಳಿನೋ’ ಎಂಬ ‘ಸೀ ಪಾಠದಲ್ಲಿಯೂ ದೋಷೋದಾಹರಣೆಯಲ್ಲಿ ದೋಷವೇ ಇಲ್ಲದಂತಾಗೆದೆ.

[2] ನೊಳ್ಪೀಗ ‘ಬ’; ನೋೞ್ಪೆಗ ‘ಪಾ, ಸೀ’-ಇದು ಅಪಪಾಠ.

[3] ವರ್ಧದೊಳ್ ‘ಕ’; ವೊಂದು…ದೊಳ್. ಪಾ.

[4] ನೆನೆವವರ ‘ಕ’.

[5] ಕೆಡುಗುಂ ‘ಕ’.

[6] ತತ್ಸೇವನೆಯಿಂ ‘ಮ,ಸೀ’.

[7] ದಿರುಳೊಳೂಱಗದಿರ ‘ಸೀ’. ಅಲ್ಲಿಯೇ ಇದನ್ನು ಸ್ವೀಕೃತಪಾಠದಂತೆ ತಪ್ಪುನೆಪ್ಪೋಲೆಯಲ್ಲಿ ತಿದ್ದಲಾಗಿದೆ.

[8] ತಿವರಿಂ ‘ಕ’.

[9] ಪೇೞ್ದೆಡೆ ‘ಪಾ’.

* ೯೩ ಮತ್ತು ೯೪ ಪದ್ಯಗಳು ‘ಪಾ ಮ’ ಗಳಲ್ಲಿ ಹಿಂದುಮುಂದಾಗಿವೆ. ಇಲ್ಲಿ ಅರ್ಥದೃಷ್ಟಿಯಿಂದ ‘ಸೀ’ ಪಾಠವನ್ನು ಸ್ವೀಕರಿಸಿದೆ,

[10] ವೊಸಗೆಯಂ ‘ಪಾ’, ಯೊಸಗೆಯಂ ‘ಕ’.

[11] ರಾಗಳ್ ‘ಪಾ, ಮ, ಸೀ’.

[12] ನೊಗಯಿಸಿ ತೋರ್ಕ್ಕುಂ ‘ಪಾ, ಸೀ’.

[13] ಸಂಪನ್ನಂ ‘ಪಾ, ಮ’.

[14] ಕಱೆಯಂತಕ್ಕುಂ ‘ಅ’.

[15] ನಿಲ್ತಂ ‘ಕ, ಮ’.

[16] ದೆಸೆಯ ‘ಕ, ಸೀ’.

[17] ದೆಸೆಯಿಂ ‘ಕ, ಸೀ’.

[18] ದಲಿಲ್ಲದದುಮುಮನಱೆ ‘ಅ’.

[19] ಪೇೞ್ಚೊಡದು ‘ಪಾ’.

[20] ದರದರೆ ‘ಅ’.

[21] ವಖಿಳ ‘ಪಾ, ಮ, ಸೀ’. ಇಲ್ಲಿ “ವಮಹಪಭೇದ” ಪ್ರಸಕ್ತವಲ್ಲವೇ? ೧೦೬ನೆಯ ಪದ್ಯದಲ್ಲಿಯೂ ಯುಕ್ತಕ್ರಮಂ+ಇನ್ನು+ಯುಕ್ತಕ್ರಮವಿನ್ನು ಎಂಬ ಪಾಠ ‘ಪಾ, ಮ, ಸೀ’ಗಳಲ್ಲಿದೆ.

[22] ಉಕ್ತವಿಚಾರಂ ‘ಪಾ, ಸೀ’.

[23] ವಿಯುಕ್ತಂ ‘ಪಾ’

[24] ಪೇೞಲ್ಕಿಂತುಂ ‘ಪಾ’.

[25] ವಿಪಿಷಜನ ‘ಅ’.

[26] ಳೊಂದೊಂದಕ್ಕುಂ ‘ಪಾ’.

[27] ಗರುಹಿತ ‘ಬ’.

[28] ನಾರ್ಷ್ಟಾದಿ ‘ಅ’, ‘ವನರಾಷ್ಟ್ರಾದಿ.-ಒಂದು ಸೂಚಿತ ಪಾಠ

[29] ಕರ್ತುಗೆ ‘ಅ’.

[30] ಪೇೞ್ವೊಡೆಲ್ಲಮ ಎಂಬಕ್ಷರಗಳು ಲುಪ್ತ ‘ಅ’.

[31] ಮಾಣಂ ‘ಬ’.

[32] ಪರಿಚರಿಯಂ ‘ಪಾ, ಸೀ. ಇಲ್ಲಿ ‘ಕ’ ಪಾಠ ಸ್ವೀಕೃತ, ಹೆಚ್ಚು ಅರ್ಥಪೋಷಕವಾದ್ದರಿಂದ.

[33] ಕೆಡಿಸುವ ‘ಅ’,‘ಬ’.