1. ದೇವರ ಪದ

1

[1]ದೀಪೋಳಿಗೆನ್ನಿರೋ ನಮ್ಮೂರ ಇನಾಯ್ಕಗೆ
ದೀಪೋಳಿಗೆನ್ನಿರೊ ನಮ್ಮೂರ ಗ್ರಾಮಗೆ
ದೀಪೋಳಿಗೆನ್ನಿರೊ ನಮ್ಮೂರ ಭೂತಗೆ
ದೀಪೋಳಿಗೆನ್ನಿರೊ ನಮ್ಮೂರ ಈಸೂರಗೆ
ದೀಪೋಳಿಗೆನ್ನಿರೊ ನಮ್ಮೂರ ಚೌಡಿಗೆ
ದೀಪೋಳಿಗೆನ್ನಿರೊ ನಮ್ಮೂರ ಜಟಕಾಗೆ
ದೀಪೋಳಿಗೆನ್ನಿರೊ ನಮ್ಮೂರ ಬಸವಗೆ
ದೀಪೋಳಿಗೆನ್ನಿರೊ ದೀಪೋಳಿಗೆ

ನಮ್ಮೂರ ಗ್ರಾಮಗೆ ಒಂದು ಕೈಸತ್ತಿಗೆ
ಒಂದು ಕೈ ಸತ್ತಿಗೂ ಬೆರಳು ಬೆರಳು ಉಂಗುರ
ಬೆರಳು ಬೆರಳು ಉಂಗುರ ಬೇರೊಂದು ಕಳಿಸ

ನಮ್ಮೂರ ಭೂತಾಯ್ಗೆ ಎರಡು ಕೈಸತ್ತಿಗೆ
ಎರಡು ಕೈಸತ್ತಿಗೂ ಬೆರಳು ಬೆರಳು ಉಂಗುರ
ಬೆರಳು ಬೆರಳು ಉಂಗುರ ಬೇರೊಂದು ಕಳಿಸ

ನಮ್ಮೂರ ಚೌಡಿಗೆ ಮೂರು ಕೈಸತ್ತಿಗೆ
ಮೂರು ಕೈಸತ್ತಿಗೂ ಬೆರಳು ಬೆರಳು ಉಂಗುರ
ಬೆರಳು ಬೆರಳು ಉಂಗುರ ಬೇರೊಂದು ಕಳಸ

ನಮ್ಮೂರ ನಾಗಗೆ ನಾಲ್ಕು ಕೈಸತ್ತಿಗೆ
ನಾಲ್ಕು ಕೈಸತ್ತಿಗೂ ಬೆರಳು ಉಂಗುರ
ಬೆರಳು ಬೆರಳು ಉಂಗುರ ಬೇರೊಂದು ಕಳಸ

ನಮ್ಮೂರ ಈಸುರೆಗೆ ಇದು ಕೈಸತ್ತಿಗೆ
ಐದು ಕೈಸತ್ತಿಗೂ ಬೆರಳು ಬೆರಳು ಉಂಗುರ
ಬೆರಳು ಬೆರಳು ಉಂಗುರ ಬೇರೊಂದು ಕಳಸ

ನಮ್ಮೂರ ಅಮ್ಮೊರ‌್ಗೆ ಆರು ಕೈಸತ್ತಿಗೆ
ಆರು ಕೈಸತ್ತಿಗೂ ಬೆರಳು ಬೆರಳು ಉಂಗುರ
ಬೆರಳು ಬೆರಳು ಉಂಗುರ ಬೇರೊಂದು ಕಳಿಸ

ಹಟ್ಟೀಯ ಕರುವಿಗೆ ಏಳು ಕೈಸತ್ತಿಗೆ
ಏಳು ಕೈಸತ್ತಿಗೂ ಬೆರಳು ಬೆರಳು ಉಂಗುರ
ಬೆರಳು ಬೆರಳು ಉಂಗುರ ಬೇರೊಂದು ಉಂಗುರ

ಭೂಮಿ ತಾಯಿಗೆ ಎಂಟು ಕೈಸತ್ತಿಗೆ
ಎಂಟು ಕೈಸತ್ತಿಗೂ ಬೆರಳು ಬೆರಳು ಉಂಗುರ
ಬೆರಳು ಬೆರಳು ಉಂಗುರ ಬೇರೊಂದು ಕಳಿಸ

* * *

2. ಗಣಪತಿ ಪದ

ಹೂವೋ ಹೂವ್ವನ್ನಿರೇ ಹೂವ್ವನ್ನಿರಳುಲಾಗೇ
ಹೂವ್ವೆ ಚೆಲ್ಯ್‌ವೇ ವನುದಾಗೇ                                                                                  ॥

ಕಟ್ಟೇಳೂ ಕರಿಕೀಯಾ ಸಸಿ ಮೂರೂ ತಂಡಾಕೇ
ಲಂಡಾನಾಯಕನೇ ವಿನಾಯಕಾ
ಲಂಡಾನಾಯಕನೇ ವಿನಾಯಕನಾ ಪಾದಕ್ಕೆ
ಸರಮುತ್ತನಿಟ್ಟೂ ಶರಣೆನ್ನೀ                                                                                       ॥

ಶಾರದೆಗೆ ಶರಣೆನ್ನೀ ಗಣಪತಿಗೇ ಕೈ ಮುಗಿರೀ
ರಾಜ್ಯಾನಾಳುವರಿಗೇ ದನಿದೋರೀ                                                                         ॥

ಪಣಿ ಪಣಿ ಹೊನ್ನಾದೂ ಸರಪಾಣೀ ಗಜ್ಜಾದೂ
ಪೂಜೇಗೊಂಬುವದೇನೋ ಬೆನವೈಗೇ
ಪೂಜೇಗೊಂಬುವದೇನೋ ಬೆನವೈನಾ ಪಾದಕ್ಕೆ
ಸರಮುತ್ತನಿಟ್ಟೂ ಶರಣೆನ್ನೀ                                                                                       ॥

ಶಾರದೆಗೆ ಶರಣೆನ್ನೀ ಗಣಪತಿಗೇ ಕೈಮುಗಿರೀ
ರಾಜ್ಯಾನಾಳುವರಿಗೇ, ದನಿದೋರೀ
ಭಕ್ತರ ಕೇರೀಲೀ ಬಲಗಡೆಯಲ್ಲಿರುವವನೇ
ಗೌರಮ್ಮನ ಮಗನೇ ಬೆನವೈಯ್ಯ
ಗೌರಮ್ಮನ ಮಗನೇ ಬೆನವೈಯ್ಯ ನಿಮ್ಮ ಕೂಡೆ
ಇನ್ನೊಂದು ಪದನಾ ಬರಕೊಳುವೇ                                                                        ॥

ಪದನಾ ಬರಕೊ[ಳು)ವೇ ಮತ್ತೇ ಸೊಲ್ಲಾಕೊಡುವ
ಕಲ್ತೇನೆಂಬುವರಿಗೇ ಹೇಳಿಕೊಡುವೇ
ಯಣ್ಣೇ ಅನ್ನಾದಂತೆ ಬಣ್ಣದ ಪದ್ಯಾದಂತೆ
ಹೊಸಮುತ್ತಿನ ಸರವಾ ತೆಗೆದಂತೇ
ಹೊಸ ಮುತ್ತಿನ ಸರವಾ ತೆಗೆದಂತೆ ಹಾಡಿನ
ಗೂಡಾ ಬಿಡಿಸರನಾ ಬರಹೇಳಿ

3. ತಿರುಪತಿ ಯಾತ್ರೆ ಪದ

ಬಲಗೊಂಬೇ ಬಲಗೊಂಬೇ ಬಲಭದ್ರರಾಯನ
ಬಲಗೈಯಲಿವಾಲೇ ಶ್ರೀಕಂಠಾ
ಬಲಗೈಯಲಿವಾಲೇ ಶ್ರೀಕಂಠ ಶ್ರೀನಿವಾಸನಾ
ಯಾತ್ರೇ ಹೊರಟಾರೂ ಹೊರಪಯಣಾ                                                                 ॥

ಮಾತಿಗಿಂತಾಮೊದಲೂ ಆತನಾ ಬಲಗೊಂಬೇ
ಕಾತೇಳ ಕಂಚೀ ತಿರುಪತೀ
ಕಾತೇಳ ಕಂಚೀ ತಿರುಪತೀ ತಿಮ್ಮಪ್ಪನಾ
ಯಾತ್ರೆ ಹೊರಟಾರೂ ಹೊರ ಪಯಣಾ                                                                  ॥

ಸಲ್ಲಿಗಿಂತ ಮೊದಲು ಬಲ್ಲವರಾ ಬಲಗೊಂಬೆ
ಎಳ್ಳೂ ಜೀರಿಗೆ ಬೆಳೆವಾಳಾ
ಎಳ್ಳೂ ಜೀರಿಗೆ ಬೆಳೆವಾಳಾ ಭೂಮಿತಾಯಿ
ಸರ್ತಿಗೆ ಸಾವೀರ ಗಾವುದಾ                                                                                     ॥

ತಣ್ಣೀರು ಸ್ನಾನ ಮಾಡೀ ಬಣ್ಣದ ಮಗುಟಾನುಟ್ಟೂ
ಗಂದಾದ ಬಟ್ಟೂ ಹಣೆಗಿಟ್ಟೂ
ಗಂಧಾರ ಬಟ್ಟೂ ಹಣೆಗಿಟ್ಟೂ ಹರಿಭಕ್ತರೂ
ಹಾಲೂ ಹಣ್ಣುಗಳೇ ಹಗಲೂಟಾ                                                                               ॥

ಹಾಲೂ ಹಣ್ಣುಗಳೇ ಹಗಲೂಟಾನುಂಡುಕೊಂಡು
ಹೊನ್ನೆಂಬಾ ಗಿರಿಗೇ ಹೊರಟಾರೂ
ಹಟ್ಟಿಲಿದ್ದ ಶ್ರೀ ಕವುಲೀ ಮೆಟ್ಟಲಿಗೇ ಹೊಡೆತಂದೂ
ಹಾಲಿನಲಿ ಶ್ರೀಪಾದಾ ತೊಳೆದಾರೂ
ಹಾಲಿನಲಿ ಶ್ರೀಪಾದ ತೊಳೆದಾರೂ ಕವುಲಮ್ಮಗ
ತುಪ್ಪಾದ ದೀವಿಗೆಯಾ ಹೊಚ್ಚಿದರೂ                                                                       ॥

ತುಪ್ಪದ ದೀವಿಗೆಯಾ ಹೊಚ್ಚಿದರು ತೊಳಸಮ್ಮಗೆ
ಹಣ್ಣಿಟ್ಟು ಕಾಯಾ ಒಡೆದಾರೂ
ಹಣ್ಣಿಟ್ಟು ಕಾಯಾ ಒಡೆದೂ ಪೂಜೆಯ ಮಾಡಿ
ಗೋವಿಂದನೆಂದೂ ಕೈಮುಗಿದೂ                                                                             ॥

ಮಕ್ಕಳೂ ಜೋಕೆ ಮನೆ ಜೋಕೆ ತೊಳಸಮ್ಮ
ಎಪ್ಪತ್ತು ಗಾವುದಾದೊಡೆಯಾನಾ
ಎಪ್ಪತ್ತು ಗಾವುದಾದೊಡೆಯಾ ತಿಮ್ಮಪ್ಪನಾ
ಯಾತ್ರೇಮಾಡಿ ಮನೆಗೇ ಬರುತೇವೇ                                                                    ॥

ಎಪ್ಪತ್ತು ಗಾವೂದಾದೊಡೆಯಾ ವೆಂಕಟ್ರಮಣ ದೇವರಿಗೆ
ಎಪ್ಪತ್ತೇಳೆಡೆಯಾ ಮಾಶೇಷಾ
ಎಪ್ಪತ್ತೇಳೆಡೆಯಾ ಮಾಶೇಷ ಗಿರಿಯಾಸುತ್ತಿ
ಹೆಡೆಯಾ ಬಿಚ್ಚಿ ಕೊಡೆಯಾ ಹಿಡಿದಾನೂ                                                                 ॥

ಹೆಡೆ ಬಿಚ್ಚಿ ಕೊಡೆಯಾ ಹಿಡಿದಾ ಗಿರಿವಾಸಕ್ಕೆ
ಗಿರಿಸುತ್ತಿ ಗಿರಿಯಾ ಏರ‌್ಯಾರೂ
ಗಿರಿವಾಸ ವೈಕುಂಠವಾಸಾಗೇ ಬಂಗಾರದ ಮಂಟಪ
ಗಾಳೀಗೋಪುರವೂ ಕಳಸಾವೂ
ಶಂಕಾಚಕ್ರಾವೂ ಪೀತಾಂಬರ ಧಾರಿಯೂ
ತೋಳಸೀ ಸರಗಾಳೂ ವನಮಾಲೇ
ತೋಳಸೀ ಸರಗಾಳೂ ವನಮಾಲೇ ವೆಂಕಟ್ರಮಣಗೆ
ಶಂಕೂ ನುಡಿದಾವೂ ದಿನದೀನಾ                                                                             ॥

ಶಂಕೂ ನುಡಿದಾವೂ ದಿನ ದಿನ ವೆಂಕಟ್ರಮಣ ದೇವರಿಗೆ
ಪಕ್ಷೀವಾಹನವೇ ಹೊರಪಯಣಾ
ಪಕ್ಷೀವಾಹನವೇ ಹೊರಪಯಣಾ ದೇವರಾ
ನೋಡಿದರೇ ಪಾಪಾ ಪರಿಹಾರಾ                                                                             ॥

ಹೊನ್ನೂ ಕಾಣಿಕೆ ಎಲ್ಲಾ ಚಿನ್ನದ ಕಣಜಕೆ ತುಂಬಿ
ಬಂಗಾರದ ಕೊಳಗೇ ತಲೆದಿಂಬೂ
ಬಂಗಾರದ ಕೊಳಗೇ ತಲೆದಿಂಬೂ ಗೋವಿಂದಸ್ವಾಮಿಗೆ
ಗೋವಿಂದಾನಂದೂ ಕೈಮುಗಿದೂ                                                                           ॥

ಕಪಿಲಾ ತೀರ್ಥಾವೂ ಸ್ವಾಮಿಯ ಪುಷ್ಕರಣಿ
ಆಕಾಶ ತೀರ್ಥಗಳಾ ಮಿಂದಾರೂ
ಆಕಾಶ ತೀರ್ಥಗಳಾ ಮಿಂದಾರು ಹರಿಭಕ್ತರು
ವರಾಹಸ್ವಾಮಿಯಾ ದರುಶಾನಾ                                                                             ॥

ವರಾಹ ಸ್ವಾಮಿಯಾ ದರ್ಶನಾ ಮಾಡಿಕೊಂಡು
ವೆಂಕಟರಮಣ ದೇವರಾ ದರುಶಾನಾ
ವೆಂಕಟರಮಣ ದೇವರಾ ದರ್ಶನಾ ಮಾಡ್ಯಾರು
ಮಂಗಳಾರತೀಯಾ ಬೆಳಗ್ಯಾರೊ                                                                           ॥

ಮಂಗಳಾರತಿಯಾ ಬೆಳಗ್ಯಾರು ಹರಿಭಕ್ತರು
ಪೊಂಗಲು ಪ್ರಸಾದ ಸವಿದಾರೂ
ಪೊಂಗಲು ಪ್ರಸಾದ ಸವಿದಾರು ಹರಿಭಕ್ತರೂ
ಗೋವಿಂದನೆಂದೂ ಗಿರುಸುತ್ತೀ                                                                                ॥

ಗೋವಿಂದನೆಂದೂ ಗಿರಿಸುತ್ತಿ ಹರಿಭಕ್ತರು
ಗಿರಿಸುತ್ತಿ ಗಿರಿಯಾ ಇಳಿದಾರೂ
ಗಿರಿಸುತ್ತಿ ಗಿರಿಯಾ ಇಳಿದಾರೂ ಹರಿಭಕ್ತರು
ಬಂದಾರು ತಮ್ಮಾ ಅರಮನೆಗೇ                                                                              ॥

ಅಂಗಳದ ತೊಳಸೀಗೆ ರಂಗಾ ಮಂಟಪಹೂಡಿ
ರಂಗಾವಾಲೆಯಾ ಬರೆದಾರೊ
ರಂಗವಾಲೆಯಾ ಬರೆದಾರೊ ಮುತ್ತೇದೇರು
ಪೊಂಗಲು ಪ್ರಸಾದಾ ಎಡೆಮಾಡೀ                                                                          ॥

ಹಣ್ಣಿಟ್ಟು ಕಾಯಾ ಬಡೆದೂ ಪೂಜೆಯ ಮಾಡಿ
ಮಂಗಳಾರತಿಯಾ ಬೆಳಗ್ಯಾರೊ
ಮಂಗಳಾರತಿಯಾ ಬೆಳಗ್ಯಾರು ಮುತ್ತೈದೇರು
ತೀರ್ಥಾಪ್ರಸಾದ ಧರಿಸ್ಯಾರೂ                                                                                  ॥

* * *

4. ಬಸವನ ಮೈ ತೊಳೆಯುವ ಪದ

ಬಸವಗೆ ಬಸವೆನ್ನಿರೋ ಬಸವೈನ ಪಾದಕ್ಕೆ ಶರಣೆನ್ನಿರೋ                                  ॥

ವಕ್ಕಳ ಹೊನ್ಹುಯಿದೂ ವಕ್ಕಾಳಾ ಮಣ್ಹುಯಿದು
ಅಪ್ಪಯ್ಯ ತೆಗೆಸ್ಯಾರೂ ಹೊಸಕೇರೇ
ಅಪ್ಪಯ್ಯ ತೆಗೆಸ್ಯಾರೂ ಹೊಸಕೆರೆ ಏರಿಮೇಲೇ
ಹೋರೀ ಬಸವೈಯ್ಯ ಹೊಳೆ ಮಿಂದೂ
ಹೋರೀ ಬಯವೈಯ್ಯ ಹೊಳೆಮಿಂದೂ ಬರುವಾಗ
ಹತ್ತೂ ಮದ್ದಾಲೇ ಕೈತಾಳಾ
ಹತ್ತೂ ಮದ್ದಾಲೇ ಕೈತಾಳ ಕಂಚಿನ ಗಂಟೆ
ಆಕಾಶಗಂಟೇ ನುಡಿದಾವೂ                                                                                      ॥

ಮೂಗಳ ಹೊನ್ಹುಯಿದೂ ಮೂಗಾಳಾ ಮಣ್ಹುಯಿದು
ಮಾವೈ ತೆಗಿಸ್ಯಾರೂ ಹೊಸಕೇರೇ
ಮಾವೈ ತೆಗಿಸ್ಯಾರೂ ಹೊಸಕೇರೆ ಏರೀಮೇಲೆ
ಹೊರೀ ಬಸವಯ್ಯ ಹೊಳೆಮಿಂದು
ಹೋರೀ ಬಸವಯ್ಯ ಹೊಂಳೆಮಿಂದೂ ಬರುವಾಗ
ಹತ್ತೂ ಮದ್ದಾಳೇ ಕೈತಾಳಾ
ಹತ್ತೂ ಮದ್ದಾಳೇ ಕೈತಾಳ ಕಂಚಿನ ಗಂಟೆ
ಆಕಾಶಗಂಟೇ ನುಡಿದಾವೂ                                                                                      ॥

ಐಗಳ ಹೊನ್ಹುಯಿದೂ ಐಗಾಳಾ ಮಣ್ಹುಯಿದು
ಅಣ್ಣೈ ತೆಗೆಸ್ಯಾರೂ ಹೊಸಕೇರೇ
ಅಣ್ಣೈ ತೆಗೆಸ್ಯಾರೂ ಹೊಸಕೆರೆ ದಂಡೇ ಮೇಲೆ
ಹಂಡಾ ಬಸವಯ್ಯ ಹೊಳೆಸಾಲೂ
ಹಂಡಾ ಬಸವೈಯ್ಯ ಹೊಳೆಸಾಲು ದುಮುಕಾಗ
ಕದ್ನೀ ಹಾರಿದವೂ ಗಗನಕ್ಕೇ                                                                                     ॥

ಹಾಲೂ ಅನ್ನುಂಡೂ ಸಾಲೇ ಜೋತರಸುತ್ತಿ
ಹೂವ್ವಿನ ಹಣೆ ಹಗ್ಗಾ ಬಲಗೈಲೀ
ಹೂವ್ವಿನ ಹಣೆ ಹಗ್ಗಾ ಬಲಗೈಲಿ ತಕ್ಕೊಂಡು
ಗೋವು ಮೈ ತೊಳೆವುದಕೇ ಹೊರಟಾರೂ                                                            ॥

ಯಣ್ಣೇ ಅನ್ನುಂಡೂ ಸಣ್ಣಾಚೋತರ ಸುತ್ತೀ
ಚಿನ್ನದ ಹಣೆ ಹಗ್ಗಾ ಬಲಗೈಲೀ
ಚಿನ್ನದ ಹಣೆ ಹಗ್ಗಾ ಬಲಗೈಲಿ ತಕ್ಕೊಂಡು
ಚೆನ್ನಿಗನ ಮೈ ತೊಳೆವುದಕೇ ಹೊರಟಾರೂ                                                          ॥

ಮುತ್ತುರು ಹೊಳೆಯಾಗೇ ಎತ್ತೂ ಮೈತೊಳೆವಾಗ
ಮುತ್ತಿನ ಉಂಗುರವಾ ಮರೆತೆದ್ದೂ
ಮುತ್ತಿನ ಉಂಗುರವಾ ಮರೆತೆದ್ದೊರಣ್ಣೈಯ್ಯ
ಹತ್ತಾಳೂ ಬಿಟ್ಟೂ ತರಿಸ್ಯಾರೂ
ಹೊನ್ನುರು ಹೊಳೆಯಾಗೇ ಚೆನ್ನಿಗನ ಮೈತೊಳೆವಾಗ
ಹೊನ್ನೀನುಂಗೂರಾ ಮರೆತದ್ದೂ
ಹೊನ್ನೀನುಂಗುರವಾ ಮರೆತೆದ್ದೊರಣ್ಣೈಯ್ಯ
ಐದಾಳೂ ಬಿಟ್ಟೂ ತರಿಸ್ಯಾರೂ                                                                                 ॥

ಕೆಮ್ಮಣ್ಣೋಣೀಲೀ ಬಿಮ್ಮಂಬೋದೇನಯ್ಯ
ಎತ್ತೂ ಬಸವೈಯ್ಯ ಹೊಳೆಮಿಂದೂ
ಎತ್ತೂ ಬಸವೈಯ್ಯ ಹೊಳೆಮಿಂದೂ ಬರುವಾಗ
ಸಾಲಿಗೆ ಸರಗಂಟೇ ನುಡಿದಾವೂ                                                                            ॥

ಹೊತ್ತರೆ ಮುಂಚೆದ್ದು ಪಚ್ಚೆ ನೀರಲಿ ಮುಖತೊಳೆದು
ವೀಭೂತಿ ಧರಿಸ್ಯಾರೂ ದಸನೀಗೇ
ವೀಭೂತಿ ಧರಿಸ್ಯಾರೂ ದಸನೀಗೇ ನಮ್ಮಯ್ಯ
ರನ್ನಾದಾ ಸಿಬ್ಲಾ ಬಲಗೈಲಿ
ರನ್ನಾದ ಸಿಬ್ಲಾ ಬಲಗೈಲಿ ತೆಕ್ಕೊಂಡು
ಚಂಡುಮಲ್ಲಿಗೆ ಹೂವಾ ಉಗುರಾಡೀ
ಚಂಡುಮಲ್ಲಿಗೆ ಹೂವಾ ಉಗುರಾಡಿ ಕೊತಂದು
ಚನ್ನಾಬಸವೈಯ್ಯನಾ ಸಿವಪೂಜೇ                                                                           ॥

ಮುಂಜಾನೆ ಎದ್ದೂ ಹಣಿನೀರಲಿ ಮುಖ ತೊಳೆದು
ವೀಭೂತಿ ದರಿಸ್ಯಾರೂ ದಸನೀಗೇ
ವೀಭೂತಿ ದರಿಸ್ಯಾರೂ ದಸನೀಗ ನಮ್ಮಯ್ಯ
ಬೆಳ್ಳೀಯಾ ಸಿಬ್ಲೇ ಬಲಗೈಲೀ
ಬೆಳ್ಳೀಯಾ ಸಿಬ್ಲೇ ಬಲಗೈಲಿ ತಕ್ಕೊಂಡು
ಲಿಂಗಾಮಲ್ಲಿಗೆ ಹೂವ್ವಾ ಕೊತಂದೂ
ಲಿಂಗಾ ಮಲ್ಲಿಗೆ ಹೂವ್ವಾ ಕೊತಂದೂ ನಮ್ಮಯ್ಯ
ಗೋವೂ ಕವುಲಮ್ಮನಾ ಸಿವಪೂಜೇ                                                                       ॥

ನಂದೀ ಮಣಿಯಾ ಮೇಲೆ ಹೊಂದೀರೂ ಪಾದಾವ
ಹೊಂದಿಟ್ಟ ಪಾದಾಕೇ ಇಡಿಗಾಯೀ
ಹೊಂದಿಟ್ಟ ಪಾದಾಕೇ ಇಡಿಗಾಯಿ ಬಿಡಿಹೊನ್ನು
ಹಾಲೂ ತುಪ್ಪಗಳೇ ನೈವೇದ್ಯಾ
ಹಾಲೂ ತುಪ್ಪಗಳೇ ನೈವೇದ್ಯ ಬಸವೈಗೆ
ಸಾಲೇನುಟ್ಟಮ್ಮಾ ಶರಣೆಂದೂ                                                                                ॥

ಅತ್ತೀಮಣಿಯಾ ಮೇಲೆ ಒತ್ತೀಡೋ ಪಾದಾವ
ಒತ್ತಿಟ್ಟ ಪಾದಾಕ್ಕೇ ಇಡಿಗಾಯೀ
ಒತ್ತಿಟ್ಟ ಪಾದಾಕ್ಕೇ ಇಡಿಗಾಯಿ ಬಿಡಿಹೊನ್ನು
ಗಂದಾ ಅಕ್ಷತೆಯೇ ನೈವೇದ್ಯಾ
ಗಂದಾಅಕ್ಷತೆಯೇ ನೈವೇದ್ಯ ಕವುಲಮ್ಮಗೇ
ಪುಟ್ಟೇನುಟ್ಟಮ್ಮಾ ಶರಣೆಂದೂ                                                                                 ॥

ವಕ್ಕಾಳಕ್ಕೀ ರೊಟ್ಟಿ ಯತಗಾಲ ಎಲೆಯಂತೆ
ಆದಾವೀಕೇರಿ ಒಳಗೆಲ್ಲಾ
ಆದಾವೀಕೇರೀ ಒಳಗೆಲ್ಲ ಪಚ್ಚೇತೆನೆ
ಒಪ್ಪಿದವು ಬಸವೈನಾ ಕೊರಳೀಗೇ
ಮೂಗಾಳಾಕ್ಕೀ ರೊಟ್ಟಿ ಮುತಗಾದ ಎಲೆಯಂತೆ
ಆದಾವೀ ಊರಾ ಒಳಗೆಲ್ಲಾ
ಆದಾವೀ ಊರಾ ಒಳಗೆಲ್ಲಾ ಉಗುಣೇಸರ
ಒಪ್ಪಿದವು ಬಸವೈನಾ ಕೊರಳೀಗೇ
ಒಪ್ಪಿದವು ಬಸವೈನಾ ಕೊರಳೀಗೆ ಬಸವೈನ
ಕಿವಿಯೂ ಕೇದಗೆಯಾ ಗರಿಯಂತೇ
ಕಿವಿಯೂ ಕೇದಗೆಯಾ ಗರಿಯಂತೆ ಬಸವೈನಾ
ಕಣ್ಣೂ ಕನ್ನಡಿಯಾ ಹಳಕಂತೇ                                                                                  ॥

ಐಗಾಳಕ್ಕೀರೊಟ್ಟಿ ಅರಳೀಯಾ ಎಲೆಯಂತೆ
ಆದಾವೀ ಸೀಮೇ ಒಳಗೆಲ್ಲಾ
ಆದಾವೀ ಸೀಮೇ ಒಳಗೆಲ್ಲಾ ಹೂವಿನ ಸಾರ
ಒಪ್ಪಿದವು ಬಸವೈನಾ ಕೊರಳೀಗೇ
ಒಪ್ಪಿದವು ಬಸವೈನಾ ಕೊರಳೀಗೇ ಬಸವೈನ
ಕೋಡು ಕ್ಯಾದಿಗೆಯಾ ಗರಿಯಂತೇ
ಕೋಡೂ ಕ್ಯಾದಿಗೆಯಾ ಗರಿಯಂತೆ ಬಸವೈನ
ಮೂಗೂ ಸಂಪಿಗೆಯಾ ಎಸಳಂತೇ                                                                          ॥

ಸಿಂಗಸಿರಿದ ಬಸವೈಯ್ಯ ಕೆಂಗರಿಸೀನೋಡ್ಯಾನೂ
ಮದ್ದಲೆ [ಸದ್ದಿನಲಿ] ಹೊರಟಾನು                                                                               ॥

ಹಾಲೂ ಅನ್ನುಂಡೂ ಸಾಲೇ ಜೋತರಸುತ್ತಿ
ಚಿನ್ನದ ಅರಿಕೋಲೇ ಬಲಗೈಲೀ
ಚಿನ್ನದ ಅರಿಕೋಲೇ ಬಲಗೈಲಿ ತೆಕ್ಕೊಂಡು
ಬೆರಿಸ್ಯಾಡೀ ರೊಟ್ಟೀ ಹರಿದಾರೂ
ಯಣ್ಣೇ ಅನ್ನುಂಡೂ ಸಣ್ಣಾ ಜೋತರಸುತ್ತೀ
ಬಣ್ಣಾದರಿಕೋಲೇ ಬಲಗೈಲೀ
ಬಣ್ಣಾದರಿಕೋಲೇ ಬಲಗೈಲಿ ತಕ್ಕೊಂಡೂ
ಅಟ್ಯಾಡೀ ರೊಟ್ಟೀ ಹರಿದಾರೂ                                                                                 ॥

ದೊಡ್ಡಾಗುಡ್ಡದ ಮೇಲೆ ಗೋವುಗಳಾ ಕಾಯುವರು
ವಜ್ರಾದುಂಗುರದಾ ಸುಗುಣೈಯ್ಯ
ವಜ್ರಾದುಂಗುರದಾ ಸುಗುಣೈಯ್ಯ ನಿಮ್ಮ ಗೋವು
ಯಾವಲ್ಲಿ [ಗಾ]ಡೀ ಮೇದಾವೂ
ಆಗುಡ್ಡಾ ಮೇದಾವೂ ಮಾಗುಡ್ಡ ಮೇದಾವು
ಮರಿಗುಡ್ಡಾದಲ್ಲೀ ತಿರಿಗ್ಯಾವೂ
ಮರಿಗುಡ್ಡಾದಲ್ಲೀ ತಿರಿಗ್ಯಾವೂ ನಮ್ಮ ಗೋವು
ಮದಗದ ಕೆರೆಯಲ್ಲೀ ನೀರು ಕುಡಿದೂ
ಮದಗದ ಕೆರೆಯಲ್ಲೀ ನೀರು ಕುಡಿದೂ ನಮ್ಮ ಗೋವು
ಅರಳೀ ಮರನಡಿಯಾ ತಿರಗ್ಯಾವೇ                                                                         ॥

ಜಾಲಾ ಕವುಲಾ ಕಾದಿ ಜಾವಕ್ಕೆ ಗುಂಡಿ ಬಿದ್ದು
ಜಾರಾಗಲ್ಲೊಡೆದೂ ಮಠಕಟ್ಟೀ
ಜಾರಾಗಲ್ಲೊಡೆದೂ ಮಠಕಟ್ಟೀ ಹೋರೀಹೊಳೆ
ನೀರೊಳ್ಳೇದಂದೂ ನೆಲೆಗೊಂಡಾ                                                                            ॥

ಜಾಲನ ಕಟ್ಟೋದೂ ಚಿನ್ನಾದಾ ನೆಲಗಟ್ಟು
ಜಾಲಾದಾ ಗೂಟೇ ಹದಿನಾರೂ
ಜಾಲಾದಾ ಗೂಟೇ ಹದಿನಾರು ಈ ಮನೆಯ
ಬಸವೈ ಬರುತಾನೇ ರಥನೇರೀ
ಬಸವೈ ಬರುತಾನೇ ರಥನೇರೀ ಈ ಮನೆಯ
ರಂಬೇರು ದೃಷ್ಟೀ ಸುಳಿರಮ್ಮಾ                                                                                ॥

ಎತ್ತಿನ ಕೊಟ್ಟಿಗೆಗೆ ಸುತ್ತಾನಾಗಂಧೀಗೆ
ಮುತ್ತೈದೆರ‌್ಹೊಚ್ಚೀ ದೀವಿಗೆಯಾ
ಮುತ್ತೈದೆರ‌್ಹೊಚ್ಚೀ ದೀವಿಗೆಯ ಈ ಮನೆಯ
ಗೋದೇವಿ ಬರುತಾರೇ ರಥನೇರೀ
ಗೋದೇವಿ ಬರುತಾರೇ ರಥನೇರಿ ಈ ಮನೆಯ
ಬಾಲೇರಾರತಿಯಾ ಬೆಳಗೀರೀ                                                                                ॥[1]  1ದಿಮಿಸ್ಯಾಲೆನ್ನಿರೊ