5. ಹುಲಿ ಪದ

ಅಂಬನೋಡೋ ಅಂಬಿನಗರಿಯಾ ನೋಡೋ
ಜಂಗನೊಡೋ ಜಂಗಿನ ಧ್ವನಿಯಾ ನೋಡೋ                                                      ॥

ಒಂದೊಂದು ವಚನಕ್ಕೇ ದೇವಾರಾ ಬಲಗೊಂಬೇ
ಚಂದ್ರಾಕಾವಂತೀ ಮರಿ ಹುಲೀ
ಚಂದ್ರಾಕಾವಂತೀ ಮರಿ ಹುಲಿ ವಜ್ರಾನೆಂಬಾ
ದೇವರಾ ಮೊದಲೇ ಬಲಗೊಂಬೇ                                                                          ॥

ಮೊದಲಿನ ವಚನಕ್ಕೆ ಹಿರಿಯಾರಾ ಬಲಗೊಂಬೇ
ಸೂರ್ಯಕಾವಂತೀ ಮರಿಹುಲೀ
ಸೂರ್ಯಕಾವಂತೀ ಮರಿಹುಲಿ ವಜ್ರಾನೆಂಬಾ
ಭೂದೇವತೆ ಮೊದಲೇ ಬಲಗೊಂಬೇ                                                                     ॥

ಹುತ್ತಾಸಾರಂಗಾ ಮತ್ತೇ ಹುಲಿಯಾಬೇಟೇ
ಹುತ್ತಾದೊಳಗಿರುವಾ ಧರಣೀಯೂ
ಹುತ್ತಾದೊಳಗಿರುವ ಧರಣೀ ಸೇಬಿನ ಮರಿಯಾ
ಉತ್ತುಮ ರಾಡಿದ ಹುಲಿ ಬೇಟೇ                                                                               ॥

ಕಲ್ಲೂ ಸಾರಂಗಾ ಅಲ್ಲೇ ಹುಲಿಯಾ ಬೇಟೇ
ಕಲ್ಲೊಳಾಗಿರುವ ಗರುಡನಾ
ಕಲ್ಲೊಳಾಗಿರುವಾ ಗರುಡಾ ಸೇಬಿನ ಮರಿಯಾ
ಬಲ್ಲವರಾಡಿದರೂ ಹುಲಿಬೇಟೆ                                                                                   ॥

ನೀರೂ ಸಾರಂಗಾ ಬೇರೆ ಹುಲಿಯಾ ಬೇಟೇ
ನೀರೊಳಗಿರುವಾ ಗರುಡಾನಾ
ನೀರೊಳಗಿರುವಾ ಗರುಡಾ ಸೇಬಿನ ಮರಿಯಾ
ಧೀರಾರಾಡಿದರೂ ಹುಲಿಬೇಟೆ                                                                                  ॥

ಹಾಲೂ ಅನ್ನುಂಡೂ ಸಾಲೇ ಜೋತರ ಸುತ್ತೀ
ಚಿನ್ನಾದಾ ಕೋವೀ ಹೆಗಲೇರೀ
ಚಿನ್ನಾದ ಕೋವೀ ಹೆಗಲಾ ಮೇಲಿಟ್ಟುಕೊಂಡೂ
ಮಾವೈ ಹೊರಟಾರೂ ಹುಲಿಬೇಟೆ
ತುಪ್ಪಾ ಅನ್ನುಂಡೂ ಪಟ್ಟೇ ಜೋತರಸುತ್ತೀ
ಉಕ್ಕೀನಾ ಕೋವೀ ಹೆಗಲೇರೀ
ಉಕ್ಕೀನಾ ಕೋವೀ ಹೆಗಲೇಗೇರಿಸಿಕೊಂಡೂ
ಅಪ್ಪೈ ಹೊರಟಾರೂ ಹುಲಿಬೇಟೇ                                                                           ॥

ಅಣ್ಣಯ್ಯ ನಿಮ್ಮನಾಯೀ ಚಿನ್ನಾದಾ ಸರಪಾಣೀ
ಹಾಲೂ ಅನ್ನಗಳೇ ಹಗಲೂಟಾ
ಹಾಲೂ ಅನ್ನಗಳೇ ಹಗಲೂಟಾ ಉಂಡುಕೊಂಡೂ
ಅಣ್ಣಯ್ಯ ಹೊರಟಾರೂ ಹುಲಿಬೇಟೇ
ಭಾವಯ್ಯ ನಿಮ್ಮ ನಾಯಿ ಹೂವ್ವೀನಾ ಸರಪಾಣೀ
ಯಣ್ಣೆ ಅನ್ನಗಳೇ ಹಗಲೂಟಾ
ಯಣ್ಣೆ ಅನ್ನಗಳೇ ಹಗಲೂಟಾ ಉಂಡುಕೊಂಡೂ
ಭಾವಯ್ಯ ಹೊರಟಾರೂ ಹುಲಿಬೇಟೇ                                                                     ॥

ಅಂಚಂಚು ಹತ್ತುತ್ತಾ ಕುಂಚಾನೇ ಬೀಸುತ್ತಾ
ಮಿಂಚು ಕನ್ನಡಿಯಾ ಬೆಳಗುತ್ತಾ
ಮಿಂಚು ಕನ್ನಡಿಯಾ ಬೆಳಗುತ್ತಾ ನಮ್ಮ ಬಳಿಯಾ
ಕೆಂಚರು ಹೊರಟಾರೂ ಹುಲಿಬೇಟೇ
ಹಳ್ಳಳ್ಳ ಹತ್ತುತ್ತಾ ಚಾಮಾರ ಬೀಸುತ್ತಾ
ನೇಮಾ ಕನ್ನಡಿಯಾ ಬೆಳಗುತ್ತಾ
ನೇಮಾ ಕನ್ನಡಿಯಾ ಬೆಳಗುತ್ತಾ ನಮ್ಮ ಬಳಿಯಾ
ಭೀಮರು ಹೊರಟಾರೂ ಹುಲಿಬೇಟೇ                                                                      ॥

ಒಂದಂಬು ಎತ್ತಿದಾ ಒಂದಂಬು ಪೂಜೀದಾ
ನಂದೀಯ ಮರನಾ ಮರೆಗೊಂಡಾ
ನಂದೀಯಾ ಮರನಾ ಮರೆಗೊಂಡು ಬ್ಯಾಡರೆ ಹುಡುಗಾ
ನಿಂದೀದಾ ಹುಲಿಯಾ ಪರಣಕ್ಕೆ
ಒಂದಂಬು ಹೊಡೆದಾರೆ, ಕೆನ್ನೆಮೇಲೆ ಬಿದ್ದಾವೆ
ಕೆನ್ನೆಲ್ಲಾ ರಾಮಾ ರೈತಾದೂ
ಗುಡುಗುಡು ಗುಟ್ಟೀತೂ ಗುಡ್ಡಾಬೋರಾಡೀತೂ
ಮಗ್ಗಲಿಂದ ಮರಿಯಾ ಅಗಚೀತೂ
ಮಗ್ಗಲಿಂದಾ ಮರಿಯಾ ಅಗಚೀತು ಮರಿಗಳಿರಾ
ಹಗಲ್ಹಾಲೇ ನಿಮಗೇ ಹಗೆಯಾದೂ                                                                          ॥

ಆರಂಬು ಎತ್ತಿದಾ ಆರಂಬು ಪೂಜೀದ
ತಾರೀಯಾ ಮರನಾ ಮರಗೊಂಡಾ
ತಾರೀಯಾ ಮರನಾ ಮರೆಗೊಂಡಾ ಬ್ಯಾಡಾರಣ್ಣ
ತಾಗೀದಾ ಹುಲಿಯಾ ಪರಣಕ್ಕೆ
ಆರಂಬು ಹೊಡೆದಾರೆ ಮಾರೇ ಮೇಲೆ ಬಿದ್ದಾವು
ಮಾರೆಲ್ಲಾ ರಾಮಾ ರೈತಾದೂ
ಗುಡುಗುಡು ಗುಟ್ಟೀತೂ ಗುಡ್ಡಾ ಬೋರಾಡೀತೂ
ಬಲಗಾಲಲಿ ಮರಿಯಾ ಅಗಚೀತೂ
ಬಲಗಾಲಲಿ ಮರಿಯಾ ಅಗಚೀತೂ ಮರಿಗಳಿರಾ
ಇರುಳ್ಹಾಲೇ ನಿಮಗೇ ಹಗೆಯಾದೂ                                                                         ॥

ಹತ್ತಂಬೆತ್ತಿದಾ ಹತ್ತಂಬೂ ಪೂಜೀದಾ
ಅತ್ತೀಯ ಮರನಾ ಮರೆಗೊಂಡಾ
ಅತ್ತೀಯಾ ಮರನಾ ಮರೆಗೊಂಡು ಬ್ಯಾಡರಣ್ಣ
ನಿತ್ತೀದಾ ಹುಲಿಯಾ ಪರಣಕ್ಕೆ
ಹತ್ತಂಬು ಹೊಡೆಗಾರೇ ನೆತ್ತೀ ಮೇಲೆ ಬಿದ್ದಾವೂ
ನೆತ್ತೆಲ್ಲಾ ರಾಮಾ ರೈತಾದೂ
ಗುಡುಗುಡು ಗುಟ್ಟೀತೂ ಬೆಟ್ಟಾ ಬೋರಾಡೀತೂ
ಯಡಗೈಯಲಿ ಮರಿಯಾ ಅಗಚೀತೂ
ಯಡಗೈಯಲಿ ಮರಿಯಾ ಅಗಚೀತೂ ಮರಿಗಳಿರಾ
ತುಡುಹಾಲೇ ನಿಮಗೇ ಹಗೆಯಾದೂ                                                                       ॥

ಬೆಟ್ಟಾದೋರೇಲೀ ಬಿದ್ದೀತೂ ಪಟ್ಟೇವಾರಾ
ತಿದ್ದೀದಾ ಮೀಸೇ ಕುಡಿಹುಬ್ಬೂ
ತಿದ್ದೀದಾ ಮೀಸೆ ಕುಡಿಹುಬ್ಬೂ ಪಟ್ಟೇವಾರಾ
ಬಿದ್ದೀತೋ ಪಟ್ಟೆಬಾರಾಗಿದಿರಾಗಿ
ಗುಡ್ಡಾದೋರೇಲೀ ಒರಗೀತೂ ಗೇರುಕಾಳ
ತಿದ್ದೀದಾಮೀಸೆ ಕುಡಿಬಾಲಾ
ತಿದ್ದೀದಾ ಮೀಸೆ ಕುಡಿಬಾಲಾ ಗೇರುಕಾಳ
ಬಿದ್ದೀತು ಚಂದ್ರಾಮಾಗಿದುರಾಗೀ                                                                            ॥

ಅಪ್ಪೋಜೀಮನೆಯಾ ಉಪ್ಪರಿಗೇ ಇಳಿವಾಗಾ
ತೆಕ್ಕೇ ಕೊಂಡೀತೂ ಮರಿಹೂಲೀ
ತೆಕ್ಕೆಕೊಂಡೀತೂ ಮರಿಹೂಲಿ ಎಂಬ ಸುದ್ದಿ ಕೇಳಿ
ಪಕ್ಕಾನರಮನೆಗೆ ತಿರಿಗ್ಹೋಗಿ
ಪಕ್ಕಾನರಮನೆಗೆ ತಿರಿಗ್ಹೋಗಿ ಹೊನ್ನೂರಿಗ್ಹೋಗಿ
ಉಕ್ಕಿನ ಬಾಣಗಳಾ ಬಲಿಸ್ಯಾರೂ
ಮಾಮೋಜೀ ಮನೆಯಾ ಮಳಿಗೇ ಇಳಿವಾಗಾ
ಮಾಲೀಕೊಂಡಿತು ಮರಿಹೂಲೀ
ಮಾಲೀಕೊಂಡಿತು ಮರಿಹುಲಿ ಎಂಬಾಸುದ್ದೀಕೇಳಿ
ಬೇಗಾನರಮನೆಗೆ ತಿರಿಗ್ಹೋಗೀ
ಬೇಗಾನರಮನೆಗೇ ತಿರಿಗ್ಹೋಗಿ ಮಾಳೂರಿಗ್ಹೋಗಿ
ವಜ್ರದ ಬಾಣಗಳಾ ಬಲಿಸ್ಯಾರೂ                                                                              ॥

ಮುತ್ತೂರು ಹೊಲದಾಗೇ ಮತ್ತೊಂದು ಹೆದ್ದಾರೀಲೀ
ಉತ್ತಂಗದ ಹುಲಿಯಾ ತಡೆದಾರೂ
ಉತ್ತಂಗದ ಹುಲಿಯಾ ತಡೆದೂ ಹೇಳಿಕಳುಹೀಸೀ
ಮುತ್ತುರ ನಾಡರಸೂ ಬರಬೇಕು
ಮುತ್ತುರು ನಾಡರಸೂ ಬರಬೇಕು ಬರದಿದ್ರೇ
ಮಾತೀನಾ ಚಾಜೇ ನಿಮಗಿಲ್ಲಾ
ಹೊನ್ನೂರು ಹೊಲದಾಗೇ ಇನ್ನೊಂದು ಹೆದ್ದಾರೀಲೀ
ಪನ್ನಂಗದ ಹುಲಿಯಾ ತಡೆದಾರೂ
ಪನ್ನಂಗದ ಹುಲಿಯಾ ತಡೆದೂ ಹೇಳಿ ಕಳುಹಿಸೀ
ಹೊನ್ನೂರು ನಾಡರಸೂ ಬರಬೇಕು
ಹೊನ್ನೂರು ನಾಡರಸೂ ಬರಬೇಕು ಬರದಿದ್ರೇ
ವೀಳ್ಯಾದಾಚಾಚೇ ನಿಮಗಿಲ್ಲಾ                                                                                  ॥

ಹುಲಿಹೊಡೆದ ಅಣೈಗೇ ಏನೇನೂ ಉಡಿಗ್ಯಾರೇ
ಹೊನ್ನೂ ಹಚ್ಚಡವೇ ಉಡಿಗ್ಯಾರೇ
ಹೊನ್ನು ಹಚ್ಚಡವೇ ಉಡುಗ್ಯಾರೇ ಕೊಟ್ಟಾರೇ
ಗೋವೇ ರಾಜ್ಯಕ್ಕೇ ಬೆಲೆಯಾರೂ                                                                            ॥

* * *

6. ಚಂಡಿನ ಪದ

ಹೊತ್ತರೆ ಮುಂಚೆದ್ದೂ ಪಚ್ಚೇ ನೀರಲಿ ಮುಖ ತೊಳೆದೂ
ವಜ್ರದ ಹರಳೊಂಟೀ ಕಿವಿಗಿಟ್ಟೂ
ವಜ್ರದ ಹರಳೊಂಟೀ ಕಿವಿಯಾಗೇ ಇಟುಕೊಂಡೂ
ಹ್ಯಾಗಾಡಲಮ್ಮಾ ಶಿವಚಂಡೂ
ಹಿರಿಯಾರಾಡಿದ ಚಂಡೂ ಅರಿಯೇನೂ ಎಲ ಮಗನೇ
ಹಿರಿಯಾ ಗುರುಗಳಿಗೇ ಶರಣೆಂದೂ
ಹಿರಿಯಾ ಗುರುಗಳಿಗೇ ಶರಣೆಂದೂ ಆ ಲಗ್ಗೆ
ತಿರಿಗ್ಹೂಡೂ ಮೂಡಾ ಮುಖವಾಗೀ                                                                          ॥

ಮುಂಜಾನೇ ಎದ್ದೂ ಹಣಿನೀರಲಿ ಮುಖ ತೊಳೆದೂ
ಹವಳದ ಹರಳೊಂಟೀ ಕಿವಿಗಿಟ್ಟೂ
ಹವಳದ ಹರಳೊಂಟೀ ಕಿವಿಯಾಗಿಟ್ಟೂಕೊಂಡೂ
ಹ್ಯಾಗಾಡಲಮ್ಮಾ ಹರಿಚಂಡೂ
ಬಲ್ಲವರಾಡಿದ ಚಂಡೂ ಅರಿಯೇನೂ ಎಲ ಮಗನೇ
ಕುಂತಿದ್ದಾ ಸಭೆಗೇ ಶರಣೆಂದೂ
ಕುಂತಿದ್ದಾ ಸಭೆಗೇ ಶರಣೆಂದೂ ಆಲಗ್ಗೇ
ತಿರಿಗ್ಹೂಡೂ ಪಡುವಾ ಮುಖವಾಗೀ                                                                        ॥

ಇಲ್ಹೊಡೆದಾ ಚಂಡೂ ಇನ್ನೆಲ್ಲೀಗೈದಾವೂ
ಹೊನ್ನೂರಿಂದಾಚೇ ಹರಿಹಾರಾ
ಹೊನ್ನೂರಿಂಚಾಚೆ ಹರಿಹರದ ಬೈಲಾಗೆ
ಹಾರಿದವೂ ಲಗ್ಗೇ ಶಿವಚಂಡೂ
ಆನೇಯಾ ಮೇಲೆ ಅರಸೂಗಳು ಚಂಡಾಡಾಗ
ಅಂಗೈಯಲಿ ಹಿಡಿದಾರೂ ಶಿವಚಂಡೂ                                                                    ॥

ಇಲ್ಲಿಟ್ಟಾ ಚಂಡೂ ಇನ್ನೆಲ್ಲೀ ಹೋದಾವೂ
ಮುತ್ತೂರಿಂದಾಚೇ ಹರಿಹಾರಾ
ಮುತ್ತೂರಿಂದಾಚೇ ಹರಿಹರದಾ ಬೈಲಾಗೇ
ಹಾರಿದವೂ ಲಗ್ಗೇ ಹರಿಚಂಡೂ
ಕುದುರೇಯಾ ಮೇಲೆ ಚದುರರು ಚಂಡಾಡಾಗ
ಹೆಬ್ಬೆರಳಲಿ ಚಂಡೂ ಸಿಡಿದಾರೂ                                                                             ॥

ಒಂಟೇಯಾ ಮೇಲೆ ಬಂಟರು ಚಂಡಾಡಾಗಾ
ಕಿರುಬೆರಳಲಿ ಚೆಂಡೂ ಸಿಡಿದಾರೂ
ತಾಯಮ್ಮ ನಿಮ್ಮ ಮಗಗೇ ಯಣ್ಣೀ ಅನ್ನಾನಿಕ್ಕಿ
ಬಣ್ಣಾದ ಚಂಡೂ ಮಡಲೊಳಗೇ
ಬಣ್ಣಾದ ಚಂಡೂ ಮೆಲೊಳಗೇ ಇಟ್ಟುಕೊಂಡೂ
ಹೊಡೆದಾಡೋ ಮಗನೇ ಹರಿಚಂಡೂ
ಅಕ್ಕಮ್ಮ ನಿಮ್ಮ ಮಗಗೇ ತುಪ್ಪಾ ಅನ್ನಾನಿಕ್ಕಿ
ಉಕ್ಕೀನಾ ಚಂಡೂ ಮಡಲೊಳಗೇ
ಉಕ್ಕೀನಾ ಚಂಡೂ ಮಡಲೊಳಗೇ ಇಟ್ಟುಕೊಂಡೂ
ಇಟ್ಟಾಡೋ ಮಗನೇ ಶಿವಚಂಡೂ                                                                           ॥

ಮಾಳಿಗೇ ಒಳಗೇ ಕಾಲಾಮಂಚದ ಮೇಲೇ
ತಾಯಮ್ಮ ನಿಮ್ಮ ನಿದ್ರೇ ತಿಳಿಗಾವೇ
ತಾಯಮ್ಮ ನಿಮ್ಮ ನಿದ್ರೆ ತಿಳಿಗಾವೇ ನಾನ್ಹೊಡೆದಾ
ಬಣ್ಣಾದ ಚಂಡೂ ತೆಗೆದೀರಾ
ಚಂಡೂ ತೆಗೆದವರೂ ಅಕ್ಕಾ ತಂಗೀರೆಲ್ಲಾ
ಜಂಗೂಮರಲ್ಲಾ ಜನರಲ್ಲಾ
ಜಂಗೂಮರಲ್ಲಾ ಜನರಲ್ಲಾ ಮೂಡಿ ಬರುವಾ
ಸೂರ‌್ಯಾಮ ಅಲ್ಲ ದೇವರಲ್ಲಾ                                                                          ॥

ಉಪ್ಪರಿಗೇ ಒಳಗೇ ಪಟ್ಟೇ ಮಂಚದ ಮೇಲೆ
ಅಕ್ಕಮ್ಮ ನಿಮ್ಮ ನಿದ್ರೇ ತಿಳಿಗಾವೇ
ಅಕ್ಕಮ್ಮ ನಿಮ್ಮ ನಿದ್ರೆ ತಿಳಿಗಾವೇ ನಾಹೊಡೆದಾ
ಉಕ್ಕಿನಾ ಚಂಡೂ ತೆಗೆದೀರಾ
ಚೆಂಡೂ ತೆಗೆದವರೂ ನಾವಲ್ಲ ನೀವಲ್ಲಾ
ಜಂಗೂಮರಲ್ಲಾ ಜನರಲ್ಲಾ
ಜಂಗೂಮರಲ್ಲಾ ಜನರಲ್ಲಾ ಮೂಡೀ ಬರುವಾ
ಚಂದ್ರಾಮ ಅಲ್ಲಾ ದೇವರಲ್ಲಾ                                                                                  ॥

ಉಪ್ಪರಿಗೇ ಸುತ್ತಾ ಎಪ್ಪತ್ತು ತೆಂಗಿನತೋಪೂ
ಎಪ್ಪತ್ತಕ್ಕೆ ಎಪ್ಪತ್ತೇ ಕದ ಹೂಡೀ
ಎಪ್ಪತ್ತಕ್ಕೆ ಎಪ್ಪತ್ತೂ ಕದ ಹೂಡೀ ತಾಯಮ್ಮಾ
ಬಾಲಯ್ಯ ನಿಮ್ಮಾ ಮಗಗೆದ್ದಾ
ನುಗ್ಗೀ ಮರ ನಡಿಯಾ ಬಗ್ಗೀ ಬಂದವು ಚಂಡೂ
ಚಿನ್ನಯ್ಯ ನಿಮ್ಮಾ ಮಗಗೆದ್ದಾ                              ॥

7. ಮಂಚ ಕುಂಚದ ಪದ

ಒಂದ್ವಾರಕೊಂದೂ ಹೊನ್ನುಗಾರ ಮಂಚಾ
ಹೊನುಗಾಲ ಮರದಲ್ಲಿ ಕೊಯ್ಸ್ಯೆತೆ ಮಂಚಾ
ಹೊನ್ನೆಯ ಹೂವಿನಲ್ಲಿ ಬಿಗಿಸೈತೆ ಮಂಚಾ
ನಾಕು ಮೂಲೆಗೆ ನಾಕು ಹಾಕ್ಸೈತೆ ಕುಂಚಾ
ಆಲೂರಿಗೂ ಬೇಲೂರಿಗೂ ತೂಗ್ಯಾಡೋ ಮಂಚಾ
ಅದು ನಮ್ಮೈಯ್ಯರು ಮಲಗೂವ ಮಂಚಾ                                                             ॥

ಎರಡ್ವರಾಕೊಂದೂ ಎಲಗಾರ ಮಂಚಾ
ಎತಗಾಲ ಮರದಲ್ಲಿ ಕೊಯ್ವೈತೆ ಮಂಚಾ
ಎಕ್ಕೆಯ ಹೂವಿನಲ್ಲಿ ಬಿಗಿಸೈತೆ ಮಂಚಾ
ಅಂಟಂಟಿಗೆ ಜೆಲ್ಲೀ, ಹಾಕೈತೆ ಕುಂಚಾ
ಆಲೂರಿಗೂ ಬೇಲೂರಿಗೂ ತೂಗ್ಯಾಡೋ ಮಂಚಾ
ಅದು ನಮ್ಮೈಯ್ಯರೂ ಒರಗೂವ ಮಂಚಾ                                                              ॥

ಮೂರ‌್ವರಾಕೊಂದೂ ಮುದ್ದುಗಾರ ಮಂಚಾ
ಮತ್ತೀಯ ಮರದಲ್ಲಿ ಕೊಯ್ವೈತೆ ಮಂಚಾ
ಮುತುಗಾಲ ಹೂವಿನಲ್ಲಿ ಬಿಗಿಸೈತೆ ಮಂಚಾ
ನಾಕು ಮೂಲೆಗೆ ನಾಕು ಹಾಕ್ಸೈತೆ ಕುಂಚಾ
ಆಲೂರಿಗೂ ಬೇಲೂರಿಗೂ ತೂಗ್ಯಾಡೋ ಮಂಚಾ
ಅದು ನಮ್ಮೈಯ್ಯರು ಓದುವಾ ಮಂಚಾ                                                                 ॥

ನಾಕ್ವಾರಕೊಂದೂ ನಾಲ್ಗಾರ ಮಂಚಾ
ನೇರಲ ಮರದಲ್ಲಿ ಕೊಯ್ಸೈತೆ ಮಂಚಾ
ನಂದೀಯ ಹೂವಿನಲ್ಲಿ ಬಿಗಿಸೈತೆ ಮಂಚಾ
ಅಂಟಂಟಿಗೆ ಜಲ್ಲೀ ಹಾಕ್ಸೈತೆ ಕುಂಚಾ
ಆಲೂರಿಗೂ ಬೇಲೂರಿಗೂ ತೂಗ್ಯಾಡೋ ಮಂಚಾ                                                         ॥

ಐದ್ವಾರಾಕೊಂದೂ ಐಗಾರಾಮಂಚಾ
ಹತ್ತಿಯ ಹೂವಿನಲ್ಲಿ ಬಿಗಿಸೈತೆ ಮಂಚಾ
ನಾಕು ಮೂಲೆಗೆ ಸಾಕು ಹಾಕೈತೆ ಕುಂಚಾ
ಆಲೂರಿಗೂ ಬೇಲೂರಿಗೂ ತೂಗ್ಯಾಡೋ ಮಂಚಾ
ಅದು ನಮ್ಮೈಯ್ಯರು ಓಡ್ಯಾಸೋ ಮಂಚಾ                      ॥

8. ಹೆಣ್ಣು ಬೇಡುವ ಹಾಡು

ಆರರ ಕಂದಯ್ಯ ನಾಡಿಗರ ಚಿನ್ನಯ್ಯ
ಇಬ್ಬರೊಂದಾಗಿ ಏನೆಂದು-ತರುಬೂಡಿ
ಹೆಣ್ಣುಂಟೆ ನಿಮ್ಮ ಪುರದಲ್ಲಿ

ಹೆಣ್ಣೀಗೆ ಬರೋರು ನಿನೆಮನ್ನೆ ಬರಬೇಕಿತ್ತು
ನಿಮಗಿಂತ ಮೊದಲೆ ಕೌರವರಣ್ಣಯ್ಯ- ಒಂದು
ಹೆಣ್ಣಿಗೆ ಮುಡುದಂಡೆ ಮುಡಿಸ್ಯಾರೆ

ಮುಡಿಸಿದ ಮುಡುದಂಡೆ ಮಗ್ಗಲಿಗೀಡಾಡ್ಯಾವೆ
ನಾ ತಂದ್ಹೊಸದಂಡೆ ಮುಡಿಸರಯ್ಯ

ಇಷ್ಟೆಂಬ ಮಾತ ಕೇಂಡಾನಣ್ಣಯ್ಯ
ಒಳಗೋಗಿ ತಂಗಿಯ ಏನೆಂದು ಕೇಂಡಾನು
ಆರುಗಾಜಿನ ಬಳೆ ನಿನ್ನೆ ತರಸಿದನಲ್ಲ
ಯಾರ ಕೂಡಾಡಿ ಒಡಕೊಂಡೆ

ಯಾರ ಕೂಡಾಡಿ ಒಡಕೊಳ್ಳಲಿಲ್ಲಣ್ಣಯ್ಯ
ನಿಮ ಎತ್ತಿಗೆ 1ಕಲಗಚ್ಚ1 ಹುಯ್ಯತ್ತಿದ್ದೆ
ರನ್ನಾದ ಕೋಡಾಲಿ ಸೆಳೆದಿತ್ತು – ಅಣ್ಣಯ್ಯ
ಬಣ್ಣದ ಸೆರಗರಿದು ಬಳೆಕುಂಕಿ

ಪಟ್ಟೆ ಪೀತಾಂಬ್ರ ನಿನ್ನೆ ತರಸಿದನಲ್ಲ
ಯಾರ ಕೂಡಾಡಿ ಹರಕೊಂಡೆ

ಯಾರ ಕೂಡಾಡಿ ಹರಕೊಳಿಲ್ಲಣ್ಣಯ್ಯ
ನಿಮ್ಮ ಎಮ್ಮೆಗೆ ಕಲಗಚ್ಚ – ಹೊಯ್ಯುತ್ತಿದೆ
ಬಣ್ಣದ ಕೋಡಾಲಿ ಸೆಳೆದಿತ್ತು- ಅಣ್ಣಯ್ಯ
ಬಣ್ಣದ ಸೆರಗರಿದು ಬಳೆಕುಂಕಿ

ಅಗಸರ ಮನೆಗೋಗಿ ಹೂಸಮಡಿ ತರುತ್ತಿದ್ದೆ
ಬಸವಾ ನಮ್ಮೆತ್ತು ಬೆರಸಿತ್ತು

ಬಸಳೆಗೆ ಮುಳ್ಳುಂಟೆ ಬಾಳೆಗೆ ಕೆಂಚುಂಟೆ
ತಂಗಿ ನಿನಮಾತು ನಿಜಉಂಟೆ

ಕತ್ತೆಗೆ ಕೋಡುಂಟೆ ಎತ್ತೀಗೆ ಮಾತುಂಟೆ
ತಂಗಿ ನಿನಮಾತು ನಿಜವುಂಟೆ

ನೆಟ್ಟಾ ಮಲ್ಲಿಗೆಯ ನೆಟ್ಟಂತೆ ಇರುವುದೇ
ಚಪ್ಪರಕೆ ಜಲ್ಲೆ ಒಡೆವೊದೆ- ತಂಗ್ಯಮ್ಮ
ಗಣ್ಣು ಗಣ್ಣೀಗೆ ಮಗ್ಗು ಬಿಡುವೂದೆ

ಆರರ ಕಂದಯ್ಯ ನಾಡಿಗರ ಚಿನ್ನಯ್ಯ
ಇಬ್ಬರೊಂದಾಗಿ ತರುಬೂಡಿ
ಇಬ್ಬರೊಂದಾಗಿ ಏನೆಂದು ತರುಬೂಡಿ
ಹೆಣ್ಣುಂಟೆ ನಿಮ ಪುರದಲ್ಲಿ

* * *

9. ಮದು ಮಕ್ಕಳ ಮೇಲಿನ ಪದ-1

ಹಬ್ಬಕೋಗರಿಗೆ ಹಾಲಂತ ಮಡಿಬೇಕೆ
ಮೇಲೆ ಸೀತಾಳೆ ಕೊಡೆಬೇಕೆ- ನಮೈಗೆ
ನಾಲಾರು ಬೇಕೆ ಗೆಣಿಯಾಗಿ

ಹತ್ತು ಬೆಟ್ಟನೊಳೊತ್ತಿಟ್ಟ ಉಂಗುರ
ವಾಲೆ ಮಂಡಲಕೆ ಹೊಳೆದಾವೆ

ಅಂಗಡಿ ಮುಂದೆ ಅಂಗಿ ತೊಡವಲು ನಿಂದ
ಅಂಗಿಯ ತೋಳೆ ನೆಲಮೇಲೆ- ಎಂದೇಳಿ
ನಿಂತು ಬಾಂದರ ಕಣ್ಣೇ ನಿಮಮೇಲೆ

ಪಟ್ಟಣದ ಮುಂದೆ ಪಂಚೆ ತೊಡವಲು ನಿಂದ
ಪಂಚೆಯ ಸೆರಗೆ ನೆಲಮೇಲೆ-ಎಂದೇಳಿ
ಕುಂತು ಬಾಂದರ ಕಣ್ಣೇ ನಿಮಮೇಲೆ

ಕೋಟೆಯ ಮೇಲೆ ಕೋಟು ತೊಡವಲು ನಿಂದ
ಕೋಟಿನ ತೋಳೆ ನೆಲಮೇಲೆ-ಎಂದೇಳಿ
ಅಡಿ ಬಂದರ ಕಣ್ಣೇ ನಿಮಮೇಲೆ

ಪೇಟೆಯ ಮುಂದೆ ಪೇಟ ತೊಡವಲು ನಿಂದ
ಪೇಟಾದ ಸೆರಗೇ ನೆಲಮೇಲೆ-ಎಂದೇಳಿ
ಹೋಗಿ ಬಾಂದರ ಕಣ್ಣೆ ನಿಮಮೇಲೆ

ಆನೇನೆ ಹತ್ತೂತ ಆನೇನೆ ಇಳಿಯೂತ
ಆನೆಗಂಬರವ ಬಿಗಿಸುತ್ತ

ಕುದುರೇನೆ ಹತ್ತೂತ ಕುದುರೇನೆ ಇಳಿಯೂತ
ಕುದುರೆಗೆ ಕಡಿವಾಣ ಬಿಗಿಸುತ್ತ

ಹಿಡಿಬೆರಳಿಡಕೊಂಡು ಮಡದೀಯ ಕರಕೊಂಡು
ಅತ್ತೇಯ ಮನೆಗೆ ಹೊರಟಾರು

ಅತ್ತೇಯ ಮನೆಯ ಮುತ್ತಿನ ಚಪ್ಪರದಡಿ
ಅತ್ತೀಮಣೆಗಳೇ ಎದುರಾಗಿ
ಅತ್ತೀಮಣೆಯ ಮೇಲೊತ್ತಿಟ್ಟ ಪಾದಾವ
ಮುತ್ತೈದೇರು ಬನ್ನಿ ತೊಳಿಸಾಕ್ಕೆ

ಹಬ್ಬ ಕೋಗರಿಗೆ ಹಾಲಂತ ಮಡಿಬೇಕೆ
ಮೇಲೆ ಸೀತಾಳೆ ಕೊಡೆಬೇಕೆ- ನಮೈಗೆ
ನಾಲಾರು ಬೇಕೆ ಗೆಣೆಯಾಗೆ

* * *

10. ಮದುಮಕ್ಕಳ ಮೇಲೆ ಪದಭಾಗ 1

ಮಾತ್ನಾಡೋ ಮಾತ್ನಾಡೋ ಮಾತ್ನಾಡೋ ಗಿಣಿರಾಮಾ ಮಾತ್ನಾಡೋ         ॥

ಹಬ್ಬಕೆ ಹೋಗೂವರಿಗೇ ಹಾಲಂತಾ ಮಡಿಬೇಕು
ಮೇಲೆ ಮಿಸೀನು ಕೊಡಬೇಕೂ
ಮೇಲೆ ಮಿಸೀನು ಕೊಡಬೇಕೂ ನಮ್ಮಣ್ಣಗೇ
ಗೀಕೂ ಮಾಕೆಂಬಾ ಕೆರಬೇಕೂ
ಗೀಕೂ ಮಾಕೆಂಬಾ ಕೆರಬೇಕೂ ನಮ್ಮಣ್ಣಗೇ
ನಾಲ್ಕಾಳೂ ಬೇಕೂ ಗೆಳೆಯಾರು                                                                            ॥

ಹಬ್ಬಕೆ ಹೋಗೂವರಿಗೇ ವಂಟೀ ವುಡಿದಾರಬೇಕು
ಮೇಲೆ ತಾವರೆಯಾ ಕೊಡೆಬೇಕೂ
ಮೇಲೆ ತಾವರೆಯಾ ಕೊಡೆಬೇಕೂ ನಮ್ಮೈಗೇ
ಗೀಕೂ ಮಾಕೆಂಬಾ ಕೆರಬೇಕು
ಗೀಕೂ ಮಾಕೆಂಬಾ ಕೆರಬೇಕು ನಮ್ಮಣ್ಣಗೇ
ಐದಾಳು ಬೇಕೂ ಗೆಳೆಯಾರೂ                                                                                ॥

ಮೋಟ್ರನ್ಹತ್ತುತ್ತಾ ಮೋಟ್ರಾನೇ ಇಳಿಯುತ್ತಾ
ಮೋಟ್ರಿಗೆ ಪೆಟ್ರೋಲಾ ತುಂಬುಸುತ್ತಾ
ಮೋಟ್ರಿಗೆ ಪೆಟ್ರೋಲಾ ತುಂಬುಸುತ್ತಾ ನಮ್ಮಯ್ಯ
ಮಾವಾರರಮನೆಗೇ ತೆರಳ್ಯಾರೂ
ಆನೆ ಹತ್ತುತ್ತಾ ಆನೆಯಾ ಇಳಿಯುತ್ತಾ
ಆನೇಗಂಬಾರೀ ಬಿಗಿಸುತ್ತಾ
ಆನೇಗಂಬಾರೀ ಬಿಗಿಸುತ್ತಾ ನಮ್ಮಯ್ಯ
ಅತ್ತೇರರಮನೆಗೇ ನಡೆದಾರೂ
ಬೈಸ್‌ಕಲ್ ಹತ್ತುತಾ ಬೈಸ್‌ಕಲ್ಲಾ ಇಳಿಯುತ್ತಾ
ಬೈಸ್‌ಕಲ್ಲಿಗೆ ಗಾಳೀ ತುಂಬುಸುತ್ತಾ
ಬೈಸ್‌ಕಲ್ಲಿಗೆ ಗಾಳಿ ತುಂಬುಸುತ್ತಾ ನಮ್ಮಯ್ಯ
ಬಾವಾರರಮನೆಗೇ ಹೊರಟಾರೂ                                                                           ॥

ಚಂದ್ರಾಚಾವುಡಿ ಮೇಲೇ ರತ್ನಾಗಂಬಳಿ ಹಾಕಿ
ಕೊಳಗಾದಲಿ ಹೊನ್ನೂ ಅಳೆವಾರೂ
ಕೊಳಗಾದಲಿ ಹೊನ್ನಾ ಅಳೆಯುವ ನಮ್ಮಣ್ಣನಾ
ಗ್ಯಾನಾ ಮಾನವರಿಗೇ ತಿಳಿಯಾದೂ
ಉದ್ದನೆ ಜಗಲೀ ಮೇಲೆ ಗದ್ದಿಗೆ ಕಂಬಳಿಹಾಕಿ
ಸಿದ್ದೇಲಿ ಹೊನ್ನಾ ಅಳೆವಾರೂ
ಸಿದ್ದೇಲಿ ಹೊನ್ನಾ ಅಳಿಯುವ ನಮ್ಮಣ್ಣನಾ
ಬುದ್ದೀ ಜನರೀಗೇ ತಿಳಿಯಾದೂ                                                                               ॥

ಚಾವಾಡೀ ಮುಂದೇ ನ್ಯಾಮಾವಾ ಇಡುವಾರೂ
ಕುಂತವರ ಕಣ್ಣೇ ನಿಮ್ಮ ಮೇಲೇ
ಕುಂತವರಾ ಕಣ್ಣೇ ನಿಮ್ಮ ಮೇಲೆ ನಮ್ಮಣ್ಣಗೇ
ಶಾಲ್ಯಾದಾ ಸೆರಗಾ ಮರೆ ಮಾಡೀ
ಬಾಗೀಲಾ ಮುಂದೇ ಬಟ್ಟೇಯಾ ಧರಿಸುವರೂ
ದುರ್ಜನರ ಕಣ್ಣೇ ನಿಮ್ಮ ಮೇಲೇ
ದುರ್ಜನರ ಕಣ್ಣೇ ನಿಮ್ಮ ಮೇಲೆ ನಮ್ಮಣ್ಣಗೆ
ಹಚ್ಚಡದಾ ಸೆರಗಾ ಮರೆಮಾಡೀ                                                                             ॥

ಕೆರೆ ಕಟ್ಟಿ ಕೆರೆ ಸೋವೀ ಕೆರೆ ಬಾವೀ ತೆಗೆಸೇವೂ
ತೇರಾ ಹರಿಸೇವೂ ನಿಮಗಾಗೀ
ತೇರಾ ಹರಿಸೇವೂ ನಿಮಗಾಗಿ ನಮ್ಮಣ್ಣನಾ
ವೀಳ್ಯಾದಾ ಚಾಜೇ ಬರಬೇಕೂ
ಕೆರೆಕಟ್ಟೆ ಕೆರೆಸೋವೀ ಕಾಲುದಾರೀ ನಡೆದೇವೂ
ಜೋತೀ ನಡಸೇವೂ ನಿಮಗಾಗೀ
ಜೋತೀ ನಡಸೇವೂ ನಿಮಗಾಗಿ ನಮ್ಮಣ್ಣನಾ
ವೀಳ್ಯಾದಾ ಜಾಜೇ ಬರಬೇಕೂ                                                                               ॥

* * *

11. ಮದುಮಕ್ಕಳ ಮೇಲೆ ಪದಭಾಗ 2

ಹತ್ತೆಂಟು ವರವಾ ಕೊಟ್ಟೂ ಕಂಠೀಸರ ಮಾಡೀಸ್ಯಾರೂ
ಕಂಠಕೆ ಧರಿಸ್ಯಾರೂ ಪದಕಾವಾ
ಸೊಂಟಕೆ ಪಂಚೇನುಟ್ಟೂ ಎಂಟೆಳೆ ಉಡಿದರ ದರಿಸೀ
ಗಚ್ಚೀನಾ ಪೇಟಾ ತಲೆಗಿಟ್ಟೂ
ಚಿನ್ನದಾ ಪೇಟಾ ತಲೆಗಿಟ್ಟೂ ನಮ್ಮಣ್ಣ
ಚಿನ್ನದ ಜರತಾರೀ ಶರಟ್ಹಾಕೀ
ಚಿನ್ನದ ಜರತಾರಿ ಶರಟೂಕೋಟೂ ಹಾಕಿ
ರಿಸ್ಟ್ ವಾಚ್ ಕಟ್ಟಿದರೂ ಎಡಗೈಗೇ
ರಿಸ್ಟ್ ವಾಚ್ ಕಟ್ಟಿದರೂ ಉಂಗುರವಾ ಧರಿಸಿದರೂ
ಎಂಟೂ ಕಡ್ಡಿಯಾ ಕೊಡೆಹಿಡಿದೂ
ಎಂಟೂಕಡ್ಡಿಯಾ ಕೊಡೆಹಿಡಿದೂ ನಮ್ಮಣ್ಣ
ನೆಂಟಾರರಮನೆಗೆ ಹೊರಟಾರೂ                                                                            ॥

ಮಡದೀ ಕರಕೊಂಡೂ ಹಿಡಿಗುದುರೇ ಏರಿಕೊಂಡೂ
ನಡುದಾರಿಯಲ್ಲೀ ಬಿಳಿಯಾಲೇ
ನಡುದಾರಿಯಲ್ಲೀ ಬಿಳಿಯಾಲೇ ಮಡಚುತ್ತಾ
ನಾರಿಗೂ ನಲ್ಲಾಗೂ ವಳಮಾತೂ
ನಾರ‌್ಯೂನಲ್ಲಾನೂ ವಳಮಾತನಾಡುತ್ತಾ
ನೆಂಟಾರರಮನೆಗೇ ನಡೆದಾರೂ                                                                             ॥

ಮಂಚಕೆ ಕುಂತಾರೇ ಎಲೆಚೊಂಚೀ ತೆಗೆದಾರೇ
ನೆಂಟಗೂ ಬಾವಾಗೂ ಇಸ್ಪೀಟೂ
ನೆಂಟಗೂ ಬಾವಾಗೂ ಇಸ್ಟೀಟಾನಾಡಾಗಾ
ವಂಟೀ ಉಡಿದಾರಾ ಸಡಲ್ಯಾವೂ
ವಂಟೀ ವುಡಿದಾರಾ ಸಡಲ್ಯಾವೇ ನಮ್ಮಣ್ಣನಾ
ಚೆಳ್ಳಾನಾಮಾರೇ ಬೆವರಾವೂ                                                                                  ॥

ಮಂಚದಿಂದ ಕೆಳಗೇ ಇಳಿದಾರೇ ನಮ್ಮಯ್ಯ
ಬಚ್ಚಾಲರಮನೆಗೇ ನಡೆದಾರೂ
ದೊಡ್ಡಾ ಪಂಚೇ ಬಿಚ್ಚೀ ಯಣ್ಣೇ ಮಜ್ಜನ ಮಾಡೀ
ತಣ್ಣೀರಾ ಕಾಸಿ ಬಿಸಿನೀರೂ
ತಣ್ಣೀರಾ ಕಾಸಿ ಬಿಸಿನೀರ ಜಳಕ ಮಾಡೀ
ಬಣ್ಣದ ಚಾವುಡಿಯಾ ಏರ‌್ಯಾರೂ
ಬಣ್ಣದ ಚಾವುಡಿಯಾ ಏರ‌್ಯಾರೂ ನಮ್ಮಯ್ಯ
ನ್ಯಾಮಾ ಸೇವೆಗಳಾ ದರಿಸ್ಯಾರೂ                                                                          ॥

ಶಿವ ಶಿವ ಎಂದಾರೂ ಶಿವದ್ಯಾನ ಮಾಡ್ಯಾರೂ
ಶಿವತೀರ್ಥ ಸಿರಕೇ ದರಿಸ್ಯಾರೂ
ಹರಿ ಹರಿ ಎಂದಾರೂ ವೃಂದಾವನಪೂಜಾರೂ
ಹರಿತೀರ್ಥ ಸಿರಕೇ ದರಿಸ್ಯಾರೂ                                                                              ॥

ಭೋಜನಶಾಲೆಯ ಒಳಗೇ ಗಾಜಿನ ಮಣಿಯಾನ್ಹಾಕೀ
ಬೆಳ್ಳೀಯಾ ಬಟ್ಲಾ ಬೆಳಗೀಟ್ಟೂ
ಸಣ್ಣಕ್ಕಿ ಅನ್ನವ ಮಾಡಿ ಬೆಣ್ಣೆ ಕಾಸಿದ ತುಪ್ಪಾ
ಅಣೈಯಾರುಂಡೂ ಹೊರಟಾರೂ
ತೂಗೂ ಮಂಚ ಮೇಲೇ ಬೋಗುಳ್ಳಾನಮ್ಮಯ್ಯಾ
ಕರ್ಪೂರದ ವೀಳ್ಯಾ ಸವಿದಾರೂ                                                                              ॥

ಮಾಳೀಗೇ ಒಳಗೇ ಕಾಲಾ ಮಂಚದ ಮೇಲೆ
ಜಾಣಾ ನಮ್ಮಣ್ಣಗೇ ಸುಖನಿದ್ರೇ
ಜಾಣಾ ನಮ್ಮಣ್ಣಾ ಸುಖನಿದ್ರೇ (ಮಾ)ಡಾಗಾ
ವಾಲೇ ಬಂದಾವೇ ಸದರೀಗೇ
ಬಂದಾ ವಾಲೆಗಳಾ ನಿಂದೂ ಓದಿಕೊಂಡೂ
ವಾಲೆಗೆ ಪ್ರತಿವಾಲೆ ಬರೆದಾರೂ
ವಾಲೆಗೆ ಪ್ರತಿವಾಲೇ ಏನೆಂದೂ ಬರೆದಾರೂ
ಜಾವಾದಾ ನಿದ್ರೇ ಕವುದಾವೂ
ಜಾವಾದಾ ನಿದ್ರೇ ಕವುದಾವೂ ನಮಗೀಗಾ
ಮಂಚಾದ ತಗ್ಗೇ ಇಳಿಲಾರೆವು                                                                                  ॥

ಕೋಳಿ ಕೂಗಿದವೂ ಲೋಕಾಬೆಳಗಾದಾವೂ
ಜಾವಾದ ನಿದ್ರೇ ತಿಳಿಗಾವೂ
ಜಾವಾದ ನಿದ್ರೇ ತಿಳಿಗಾವೇ ನಮ್ಮಣ್ಣಾ ಬೇಗಾ
ಚಾವುಡಿಗೇ ದಯಮಾಡೀ                                                                                         ॥

ಉಪ್ಪರಿಗೇ ಒಳಗೇ ಪಟ್ಟೇ ಮಂಚದ ಮೇಲೆ
ನಾರ‌್ಯಾನಲ್ಲಾನೂ ಪಗಡೇಯಾ
ನಾರ‌್ಯಾನಲ್ಲಾನೂ ಪಗಡೇಯಾನಾಡಾಗಾ
ಕಾಗದ ಬಂದಾವೇ ಸದರೀಗೇ
ಬಂದಾ ಕಾಗದವಾ ಕುಂತೂ ಓದೀಕೊಂಡೂ
ಕಾಗದಕೆ ಪ್ರತಿಕಾಗದಾ ಬರೆದಾರೂ
ಕಾಗದಕೆ ಪ್ರತಿ ಕಾಗದ ಏನೆಂದೂ ಬರೆದಾರೂ
ಮಂಜಾದಾ ಕೆಳಗೇ ಇಳಿಲಾರೆವು                                                                            ॥

ಪಗಡೇ ಪನ್ನಂಗಾ ನಾಳೆ ಅಡಲುಬಹುದೂ
ಪಕ್ಕನೆ ಚಾವುಡಿಗೇ ದಯಮಾಡೀ
ಪಕ್ಕನೆ ಚಾವುಡಿಗೇ ದಯಮಾಡಿ ಮಹೂರ್ತಾಗಿ
ಗಮ್ಮನೆ ಒಂದ್ವಿಳ್ಯಾ ದಯಮಾಡೀ
ಹಾಗೆಂಬಾ ಸುದ್ದೀ ಕೇಳ್ಯಾರೇ ನಮ್ಮಣ್ಣಾ
ಚಾವುಡಿಗೆ ಹೊರಟಾರೂ ನಗೆಮಾರೇ                                                                     ॥

* * *

12. ಮದುವಳಿಗಿರ ಮೇಲೆ ಪದಭಾಗ 1

ಅಂಗಳ ಗುಡಿಸಮ್ಮಾ ಅಂಗಾಳಾ ಸಾರಿಸಮ್ಮಾ
ಬೆಳ್ಳೀ ಗಂಗಾಳಾ ಬೆಳಗೀಡೀ
ಬೆಳ್ಳೀ ಗಂಗಾಳಾ ಬೆಳಗೀಡೀ ಈ ಮನೆಯಾ
ಮಕ್ಕಳು ಬರುತಾರೇ ತವರೀಗೇ
ಬಾಗಿಲು ಗುಡಿಸಮ್ಮಾ ಬಾಗೀಲೂ ಸಾರಿಸಮ್ಮ
ಬಾಗಿಲಿಗೆ ರಂಗೋಲೇ ಹಾಕ್ಯಮ್ಮಾ
ಬಾಗಿಲಿಗೇ ರಂಗೋಲೇ ಹಾಕ್ಯಮ್ಮಾ ಈ ಮನೆಯಾ
ಬಾಲೇರು ಬರುತಾರೇ ತವರೀಗೇ                                                                           ॥

ಶಾಲೆ ನುಟ್ಟುಕೊಂಡೂ ಸರಮುತ್ತಾ ಕಟ್ಟಿಕೊಂಡೂ
ಬರುವರು ಪುರುಷಾರಾ ಹಿಂದಕ್ಕೇ
ಬರುವರು ಪುರುಷಾರಾ ಹಿಂದಕ್ಕೆ ನಮ್ಮಮ್ಮನಾ
ಶಾಲೇ ಬಾವಕ್ಕೇ ಸಿವಬಂದಾ
ಪಟ್ಟೇನುಟ್ಟುಕೊಂಡೂ ಬಟ್ಟುಮುತ್ತಾ ಕಟ್ಟಿಕೊಂಡೂ
ಬರುವರು ನಲ್ಲಾರಾ ಹಿಂದಕ್ಕೇ
ಬರುವರು ನಲ್ಲಾರಾ ಹಿಂದಕ್ಕೆ ತಾಯಮ್ಮನಾ
ಪಟ್ಟೇಬಾವಕ್ಕೇ ಸಿವಬಂದಾ                                                                                     ॥

ಅಂಗಳದೊಳಗಿನ ಬಾವೀ (ಕಲ್ಲೀನಾ) ಕೈಪಿಡಿಯ
ಗ್ಯಾಸೂ ಪಂಪೀನಾ ತಿರುಗಾಣೀ
ಗ್ಯಾಸೂ ಪಂಪೀನಾ ತಿರುಗಣೀ ತೆಗೆವರು
ಕೀಲೂ ಮೆಟ್ಟಿ ನೀರಾ ತೆಗೆವಾರೂ
ಕೀಲೂ ಮೆಟ್ಟಿ ನೀರಾ ಮಗೆವಾ ತಾಯಮ್ಮನಾ
ಹೊಂಗಿದಾರ‌್ವಾಲೇ ಹೊಳೆದಾವೂ                                                                   ॥

ಮೆಟ್ಟಿಲ ವಳಗಿನ ಬಾವೀ ಕಲ್ಲೀನಾ ಕಡೆಕಟ್ಟು
ನೆಲ್ಲೀ ಪಂಪೀನಾ ತಿರುಗಾಣೀ
ನೆಲ್ಲೀ ಪಂಪೀನಾ ತಿರುಗಣಿ ತೆಗೆವರು ಬಂದೂ
ಕೀಲೀ ಒತ್ತಿ ನೀರಾ ಮಗೆವಾರೂ
ಕೀಲೀ ಒತ್ತಿ ನೀರಾ ಮಗೆವಾ ತಂಗ್ಯಮ್ಮನಾ
ಜಾರೀದರೆ ಬಂದೀ ಹೊಳೆದಾವೂ                                                                           ॥

ಹಣ್ಣೂ ಹಣ್ಣಿಗಿಂತಾ ಲಿಂಬೇಹಣ್ಣೂ ಚಂದಾ
ಮುಂಬಲ್ಲೂ ಚಂದಾ ನಗೆಮಾರೇ
ಮುಂಬಲ್ಲೂ ಚಂದಾ ನಗೆಮಾರೇ ತಾಯಮ್ಮನಾ
ಕೊರಳೀಗೇ ಚಂದಾ ಪದಕಾವೂ                                                                              ॥

* * *

13. ಮದುವಳಿಗಿರ ಮೇಲೆ ಪದಭಾಗ 2

ಸಾಲೆನುಟ್ಟುಕೊಂಡೂ ಸರಮುತ್ತಾ ಕಟ್ಟಿಕೊಂಡೂ
ಮುಮ್ಮಾಳಿಗೆ ವಳಗೇ ಸುಳಿವಾರೂ
ಮುಮ್ಮಾಳಿಗೆ ವಳಗೇ ಸುಳಿವಾದೇವಮ್ಮನಾ
ಬಣ್ಣದ ಬಾಚಣಿಗೆ ಮಡಲೊಳಗೇ
ಬಣ್ಣದ ಬಾಚಣಿಗೆ ಮಡಲೊಳಗೇ ಇಟುಕೊಂಡೂ
ಅಣ್ಣಯ್ಯರ ಮಡದೀ ಅತಿರಂಬೇ
ಅಣ್ಣಯ್ಯರ ಮಡದೀ ಅತಿರಂಬೇ ಅತ್ತೀಗೇ
ಗಮ್ಮನೆ ತಲೆಚಾಚೂ ಬಾರಮ್ಮಾ                                                                            ॥

ಕೆನ್ನೆಗೆ ಎಣ್ಣೆಯನ್ಹಚ್ಚೀ ಬಣ್ಣಿಸಿ ಬಗತಲೆ ತೆಗೆದೂ
ಸೊನ್ನಾರದ ಜಡೆಯಾ ಹಣಿದಾರೂ
ಜಡೆಯ ಹಾಕಿದರೂ ಜಡೆ ಬಂಗರ (ರಾಗಟೆ) ಚೌಲೀನಿಡಿಸೀ
ಮ್ಯಾಲೇ ಕ್ಯಾದಿಗೆಯಾ ದರಿಸ್ಯಾರೂ
ಮ್ಯಾಲೇ ಕ್ಯಾದಿಗೆಯಾ ದರಿಸ್ಯಾರೂ ಎಡನಡುಗೇ
ಮಲ್ಲಿಗೆ ಮೊಗ್ಗುಗಳಾ ಮುಡಿಸ್ಯಾರೂ                                                                      ॥

ನಡುಮಾನೇ ವಳಗೇ ಅಡಗಿರುವಾ ತಾಯಮ್ಮನಾ
ಬಡನಡುವಿಗೆ ಡಾಬೂ ಉಡಿದಾರಾ
ಬಡನಡುವಿಗೆ ಡಾಬೂ ಉಡಿದಾರಾ ತೊಳೋಬಂದೀ
ಕಾಲಂದುಗೆ ಗೆಜ್ಜೇ ಸರಪಾಣೀ
ಕಾಲಂದುಗೆ ಗೆಜ್ಜೇ ಸರಪಾಣೀ ಹಾಕಿಕೊಂಡೂ
ಜೋತಿ ತಾಯಮ್ಮಗೇ ಶರಣೆನ್ನೀ
ಜೋತಿ ತಾಯಮ್ಮಗೇ ಶರಣೆಂದೂ ಕಾಣಿಕೆ ಹಾಕಿ
ಮುತ್ತೈದೆ ತನದಲ್ಲೀ ಸುಖೀ ಬಾಳೀ                                                                         ॥

* **

14. ಮದುವಳಿಗಿರ ಮೇಲೆ ಪದಭಾಗ 3

ಬಾಗಿಲು ಜಂತೀ ಮ್ಯಾಲೇ ಕುಂತೀರಾ ಗಿಣಿರಾಮಾ
ಬಾಗಿಲಿಗೆ ಬಂದಾವೇ ಜಗಜೋತೀ
ಬಾಗಿಲಿಗೆ ಬಂದಾವೇ ಜಗಜೋತೀ ವಳಗಿರುವಾ
ತಾಯಮ್ಮಗೆ ಸುದ್ದೀ ತಿಳಿಸಯ್ಯ                                                                               ॥

ಅಕ್ಕಮ್ಮರು ನೀವೇಳಿ ಮಕ್ಕಾಳೂ ನೀವೇಳೀ
ಪಕ್ಕನೆ ದೀವಿಗೆಯಾ ತೆಗೆತನ್ನೀ
ಪಕ್ಕನೆ ದೀವಿಗೆಯಾ ತಗೆತಂದೂ ದೇವರಿಗಿಟ್ಟು
ಜೋತೀ ದೇವತೆಗೇ ಶರಣೆನ್ನೀ
ಜೋತೀದೇವತೆಗೆ ಶರಣೆನ್ನೀ ಎಂದ್ಹೇಳೀ
ಪುಕ್ಕಾನಳ್ಳಾಡೀ ನಗುತಾನೇ
ಪುಕ್ಕಾನಳ್ಳಾಡೀ ನಗುತಾ ಏನಂದಾನೂ
ಅಕ್ಕಗು ಭಾವಾಗೂ ವರನಾದೂ                                                                              ॥

ಕಡಲೇ ಕಾಳಹಾಗೇ ಕಡಿದಾವೈಗಳಮುತ್ತೂ
ಕಡುಜಾಣೆ ನಮ್ಮಮ್ಮನಾ ಕೊರಳಾಗೇ
ಕಡುಜಾಣೆ ನಮ್ಮಮ್ಮನಾ ಕೊರಳಾಗಿನ ಕಂಠೀಸರಕೆ
ಕಡಿದಾಡೂತಾವೇ ಗಿಣಿರಾಮಾ
ಅಕ್ಕಿಕಾಳಾ ಹಾಗೇ ಮುಕ್ಕ್ಯಾವೈಗಳ ಮುತ್ತೂ
ಲೆಕ್ಕುಳ್ಳ ದೇವಮ್ಮನಾ ಕೊರಳಾಗೇ
ಲೆಕ್ಕುಳ್ಳ ದೇವಮ್ಮನಾ ಕೊರಳಾಗಿನ ಪದಕಾಕೆ
ಶಿಕ್ಕ್ಯಾಡೂ ತಾವೇ ಗಿಣಿಹಿಂಡೂ                         ॥