7. ವಿಶ್ವಕರ್ಮರ ಮೇಲಿನ ಪದ-2

1ಕಿರಿದೀ1

[1] ನುಟಕೊಂಡು ಕಿರುಜಾಡಿನೊದಕೊಂಡು
ಒಳಗಿನ ಬಾಗಿಲ ಸುಳಿವಾಳೆ

ಆಚಾರ್ಯ ಮನೆಯೌರೆ ಸುತಿಗೆಲ್ಲಾ ಪೂಜೌವ್ರೆ
ಸುತ್ತಾ ಕ್ಯಾದಿಗೆಯ ಮುಡಿಯೌರೆ

ಅತ್ತಾ ಆಲದ ಮರ ಇತ್ತಾ ಬೇವಿನ ಮರ
ಸುತ್ತಲೂ ಸಾಲೆ ಮಂಟಪ

ಆಲೂರು ಚಿನ್ನಾಕು ಬೇಲೂರು ಇದ್ದಿಲಿಗೂ
ಮೇಲುಪ್ಪರಿಗೆ ಮೇಲೆ ಒಲೆಹೂಡಿ- ಅಡಿಗೆ ಮಾಡಿ
ವಾಲೆ ಮಾಟಗಳೇ ಹಸನಾದು

ವಾಲೆ ಮೇಲೊಂದು ಏನೆಂದು ಬರೆದಾರು
ನವಿಲು ಪಲ್ಲಣದ ಗಿಳಿವಿಂಡು

* * *

8. ಆಚಾರ್ಯರ ಮೇಲೆ ಪದ

ಆಚಾರ‌್ಯರ ಮನೆಯಾ ಅಡಗೋಲಲ್ಲಿರುವವಳೇ
ಇಡಿಯಾ ಕ್ಯಾದಿಗೆಯಾ ಮುಡಿವವಳೇ
ಇಡಿಯಾ ಕ್ಯಾದಿಗೆಯಾ ಮುಡಿವಾ ಕಾಳಮ್ಮ ತಾಯಿ
ನಾವೂ ಬಂದೀವಿ ದನಿದೋರೂ
ನಾವೂ ಬಂದೀವಿ ದನಿದೋರು ಕಾಳಮ್ಮ ತಾಯಿ
ತಪ್ಪೀದಾ ಪದನಾ ಬರೆಕೊಡೂ
ಯಾರ‌್ಯಾರ ಹೇಳೀಕೇ ನಾವ್ಯಾಕೇ ಹೇಳೇವೂ
ತಾಯಮ್ಮಿದ್ದಾರೇ ಅರಮನೇಲೀ
ತಾಯಮ್ಮಿದ್ದಾರೇ ವಳವೀಕೇ ಕೇಳಿದರೇ
ತಪ್ಪಿದಾ ವಚನಾ ಬರೆದಾರೂ                                                                                  ॥

ಆಚಾರ‌್ಯರ ಮನೆಯ ಮಂಟಪದಲ್ಲಿರುವವಳೇ
ಸಿಗಳೂ ಕ್ಯಾದಿಗೆಯಾ ಮುಡಿವವಳೇ
ಸಿಗಳೂ ಕ್ಯಾದಿಗೆಯಾ ಮುಡಿವಾ ಕಾಳಮ್ಮ ತಾಯಿ
ನಾವೂ ಬರುತೇವೇ ದನಿದೋರೂ
ನಾವೂ ಬರುತೇವೇ ದನಿದೋರು ಕಾಳಮ್ಮ ತಾಯೀ
ತಪ್ಪೀದಾ ಪದನಾ ಬರೆಕೋಡೂ
ಯಾರ‌್ಯಾರ ಹೇಳಿಕೇ ನಾವ್ಯಾಕೇ ಬರೆದೇವೂ
ಹಿರಿಯವರಿದ್ದಾರೇ ಅರಮನೇಲೀ
ಹಿರಿಯವರಿದ್ದಾರೇ ಅರಮನೇಲಿ ಕೇಳಿದರೆ
ತಪ್ಪೀದಾ ಪದನಾ ಬರೆದಾರೂ                                                                                ॥

ಆರಾಳೂ ಅಡಿಗೋಲೂ ಮೂರಾಳು ಚಮ್ಮಟಿಗೇ
ಊರೋಳಾಗೊಂದು ವಲೆ ಹೂಡಿ
ಆದಾವಿದ್ದಾಲೀ ಕಾದಾವೇ ಕಬ್ಬೀಣಾ
ಕತ್ತೀ ಮಾಟಗಳೇ ಹಸನಾದೂ
ಕತ್ತೀ ಮಾಟಗಳೇ ಹಸನಾದೂ ನಮ್ಮಾಚಾರ‌್ರಾ
ಗೀರೂ ಗಂದಗಳೇ ಬೆಗರ‌್ಯಾವೂ
ಗೀರೂ ಗಂದಗಳೇ ಬೆಗರ‌್ಯಾವೂ ನಮ್ಮಾಚಾರ‌್ರು
ಕತ್ತೀಗೆ ಚಿತ್ರಾ ಬರೆದಾರೂ
ಕತ್ತೀಗೆ ಚಿತ್ತಾರಾ ಏನೆಂದೂ ಬರೆದಾರೂ
ನೆಂದ್ಯಾಣಾಪುರದಾ ಗಿಣಿಹಿಂಡೂ                                                                             ॥

* * *

9. ಹೇರಾಟದ ಸೆಟ್ಟರ ಮೇಲೆ ಪದ

ಸಟಿಗರ ಸಂಗಯ್ಯ ಮರಿಯಾನೇ ಮಲ್ಲಯ್ಯ
ಎತ್ತೂ ಸಲಗುವರೇ ಶಿವಲಿಂಗಾ
ಎತ್ತೂ ಸಲಗುವರೇ ಶಿವಲಿಂಗೈಯ್ಯನ ಕೈಲೀ
ಉಕ್ಕಿನದಬ್ಬಾಣಾ ಹುರಿಉಂಡೇ
ಉಕ್ಕಿನದಬ್ಬಾಣಾ ಹುರಿಉಂಡೇ ತೆಕ್ಕೊಂಡು
ಒಪ್ಪಾದಲಿ ಮೂಲೇ ದಳವಾರೂ                                                                               ॥

ಹೊತ್ತರೆ ಮುಂಚೆದ್ದೂ ಪಚ್ಚೆನೀರಲಿ ಮುಖ ತೊಳೆದೂ
ವೀಭೂತಿ ದರಿಸ್ಯಾರೂ ದಸನೀಗೇ
ಮುಂಜಾನೇ ಎದ್ದೂ ಹಣಿನೀರಲಿ ಮುಖ ತೊಳೆದೂ
ವಜ್ರದ ನೀಲಂಗೀ ದರಿಸ್ಯಾರೂ
ವಜ್ರದ ನೀಲಂಗೀ ದರಿಸ್ಯಾರೂ ನಮ್ಮ ಸೆಟ್ಟರೂ
ಎತ್ತಿಗೆ ಸಬರಗಳಾ ಬಿಗಿಸ್ಯರೂ
ಎತ್ತಿಗೆ ಸಬರಗಳಾ ಬಿಗಿಸ್ಯಾರು ನಮ್ಮ ಸೆಟ್ಟರೂ
ಯಾಲಕ್ಕೀ ಹೇರಾಳ ಹೇರ‌್ಯಾರೂ
ಯಾಲಕ್ಕಿ ಹೇರಾಳ ಹೇರ‌್ಯಾರೂ ನಮ್ಮ ಸೆಟ್ಟರೂ
ಬೀರೂರಿಗೊಂದು ಪಯಣಾ ಹೊಡೆದಾರೂ                                                            ॥

ಬೀಡಿಕೆ ಬಿಟ್ಟಲ್ಲೀ ಬಿಡದೇ ಮಳೆಹೊಯಿದಾವೂ
ಬೀಡಾರಾ ತೋದೂ ಮನೆ ತೋದೂ
ಬೀಡಾರಾ ತೋದೂ ಮನೆತೋದು ನಮ್ಮ ಸೆಟ್ಟರಾ
ಯಾಲಕ್ಕೀ ಹೇರೇ ಫಲಬಂದೂ                                                                                ॥

ಮಲೆನಾಡಿಗೆ ಹೊಡೆದೇವೂ ಮಲ್ಲಿಗೆ ಹೂ ಮುಡಿದೇವೂ
ನೆಲ್ಲಕ್ಕಿಯನ್ನಾ ಸಲಿಸೇವೂ
ನೆಲ್ಲಕ್ಕಿಯನ್ನಾ ಸಲಿಸೇವೂ ನಮ್ಮ ಬಸವೈನಾ
ಪಲ್ಲಕ್ಕಿನೆಳಲಲ್ಲೀ ನಡೆಸೇವೂ                                                                                   ॥

ಹಾವಿನ ಹಾಸೀಗೇ ಚೇಳೀನಾ ತಲೆದಿಂಬೂ
ಹಾದೀಲೇ ಅವರಾ ಮನೆಮಾರೂ
ಹಾದೀಲೇ ಅವರಾ ಮನೆಮಾರು ನಮ್ಮ ಬಸವೈನಾ
ಹಾರ‌್ಯಾಟ ನೋಡಿದರೇ ಸಿವಬಲ್ಲ
ಹುಲ್ಲಿನ ಹಾಸೀಗೇ ಕಲ್ಲೀನಾ ತಲೆದಿಂಬೂ
ಸಂತೇಲೇ ಅವರಾ ಮನೆಮಾರೂ
ಸಂತೇಲೇ ಅವರಾ ಮನೆಮಾರೂ ನಮ್ಮ ಬಸವಣ್ಣನಾ
ಸಂತೋಸು ನೋಡಿದರೆ ಸಿವಬಲ್ಲಾ                                                                        ॥

ಹತ್ತೂ ಸಾವಿರ ಎತ್ತೂ ಕಿತ್ತೆದ್ದೂ ಬರುವಾಗಾ
ಮೇಘ ಮಂಡಲಕೇ ದುಗುಳೆದ್ದೂ
ಐದೂ ಸಾವಿರ ಎತ್ತು ದುಮ್ಮೆದ್ದೂ ಬರುವಾಗಾ
ಗಗನಾ ಮಂಡಲಕೇ ಹೊಗೆಸುತ್ತೀ
ಗಗನಾ ಮಂಡಲಕೇ ಹೊಗೆಸುತ್ತೀ ನಮ್ಮ ಸೆಟ್ಟರೂ
ಸಟ್ಟೇಯಾ ನಿಟ್ಟಾ ಸರಿದಾವೂ
ನಿಟ್ಟಾಸರಸುತ್ತಾ ರೊಟ್ಟೀಯಾ ಸುಡಸುತ್ತಾ
ಕರಣಿಕರ ಲೆಕ್ಕಾ ಬರೆಸುತ್ತಾ
ಕರಣಿಕರಾ ಲೆಕ್ಕಾ ಬರೆಸುತ್ತಾ ನಮ್ಮ ಸೆಟ್ಟರಾ
ಸಿಟ್ಟೂ ನೋಡಿದರೇ ಸಿವಬಲ್ಲ                                                                                   ॥

* * *

10. ಸೆಟ್ಟಿಗಾರರ ಮೇಲಿನ ಪದ

ಸೃಷ್ಟಿ ಶಿವಲಿಂಗ ಭೂಪ ನಿರ್ವಾಣೆ ನೀಲಕಂಠ
ಎತ್ತು ಕಾಯೌವ್ರೆ ಶಿವಲಿಂಗ-ಅಣ್ಣೇಗೌಡ್ರ
ಎತ್ತು ಹೊಡೆತನ್ನಿ ಕೊಟ್ಟಗೀಗೆ

ಕೆಂದಾನ ಕಟ್ಟಲ್ಲೆ ಕೆಮ್ಮಣ್ಣು ಸಾರಣೆಗೆ
ಕೆಂದಾನ್ನ ಗೂಟುಂಟು ಹದಿನಾರು

ಹಂಚಿನ ಆಡಗೋಲು ಮಿಂಚುಗಳ ದಬ್ಬಾಣ
ಎಣ್ಣೆ ನೂಲುಂಡೆ ಕುಡಿನೇಣು-ತಕ್ಕೊಂಡು
ಕೆಂದಾನ್ನ ಸಬ್ಬಾರ ನೆಯ್ಯುದಾರೆ

ಸಬ್ಬಾರ ನೆಯ್ಯುದಾರ ಹೇರಡಿಕೆ ಹೊರೆ ಹೇರಿ
ಬೀರೂರಿಗೆ ಪಯಣ ಹೊರಟಾರೆ

ಬೀಡಗಿ ಬಿಟ್ಟಲ್ಲೇ ಬೀಡಾಲೆ ಮಳೆ ಹೊಯ್ದು
ಗುಡಾರ ತೋದುಂ ಗುಡಿತೋರು- ನಮ ಸೆಟಿಗಾರ‌್ರ
ಸಿಟ್ಟು ನೋಡಿದರೆ ಶಿವಬಲ್ಲ

ಶೃಂಗೇರಿಗೆ ಹೋಗ್ಯಾರೆ ಗಂಗೇಲಿ ಮಿಂದಾರೆ
ಸಣ್ಣಕ್ಕಿ ಅನ್ನ ಸಲುಸ್ಯಾರೆ- ನಮ್ಮ ಸೆಟಿಗಾರ‌್ರು
ಸಂತೋಷ ನೋಡಿದರೆ ಶಿವಬಲ್ಲ

ದಂಡೀನ ದಾರೀಲಿ ಒಂದೇ ತೆಂಗಿನಮರ
ಕೊಂಬಿ ಕೊಂಬಿಗೆಲ್ಲಾ ಎಳಿಗಾಯು- ಸುಳಿಗಾಯು
ಗಂಧ ತೇಯುವವನ ಹನಿನೀರು

ನಾವೂನೆ ನಮ್ಮಾವ ಹಳ್ಳದಾಟುವಾಗ
ಬೆಳ್ಳಕ್ಕಿ ಬಂದು ತರುದಾವೆ
ತರುವಾವೆ ಬೆಳ್ಳಿಯುಂಗುರದ ಹೊಳಪೀಗೆ
ಕಾಲಾಗಿನ ಪಿಲ್ಲಿ ತಲೆಮೇಲಿನ ಬಲ್ಲಿ ಹಾಳ್ಮಾಡಿ
ಬಂದಲ್ಲೆ ಕಾರ‌್ಗದ್ದೆ ಕೊಲ್ಲಿ

ಹಿಂದಾಕೆ ನೋಡಿದ್ರೆ ಆಳುದ್ದ ಕಾಲಿಗೆ
ಸುತ್ತಿತು ಮಾಲಿಂಗನ ಬಳ್ಳಿ

ಅದಕಾಗೆ ಕೂತುಗೊಂಡು ಬೆಳತಂಕ ನಳ್ಳಿ
ನೀನಾಗೆ ಕರೆದಲ್ಲೆ ಮಳ್ಳಿ

ನಿನಗಂಡ ಮಾಡುತಾನೆ ನನ್ಮೇಲೆ ತಳ್ಳಿ
ಹಾದೀಲಿ ನಿಂತುಕೊಂಡು ಹಲುಬಂಗೆ ಮಾಡೋಳ

ಹಾದರಗಿತ್ತಿ ಬಂದು ಕೂಡೇ ಹುಡುಗಿ
ದೇವರ ಮಂಡೆ ಮ್ಯಾಲೆ ಹೂವ್ಯಾಕೆ ಬಾಡ್ಯಾವು

ರಾಜ್ಯಂಗಳ್ಯಾಕೆ ಗುಡಿಸ್ಯಾವು
ಈ ಊರ ಪೂಜೆಗೇನು ಸುಳಿನಿದ್ರೆ ಪಳನಿದ್ರೆ

ಈ ಊರು ಊರಲ್ಲ ಈ ಕೇರಿ ಕೇರ‌್ಯಲ್ಲ
ಈ ಊರು ನಮಗೆ ನಿಜವಲ್ಲ-ನಾಳಿಷ್ಟೊತ್ತಿಗೆ
ಯಾವ ರಾಜ್ಯವೊ ಶಿವಬಲ್ಲ

ನಾಳಿಷ್ಟೊತ್ತಿಗೆ ನಾಡ ಮೇಲಿನ ಪಕ್ಷಿ
ಕೂರುಂಬನ ಬಾರಾ ಗಿಣಿರಾಮ-ನಾವಿಬ್ಬರೂ
ಜೋಡೀಲಿ ಒಂತುತ್ತ ತಿಂದು ಅಗಲ್ಯಾವು

ಬಾಗಿಲ ಮುಂದೊಂದು ಭಂಗಿಯಾ ಗಿಡಹಟ್ಟಿ
ಭಂಗಿಯೆಂಬುದೊಂದು ನಿಜವೇನ್ರಿ ಬೇರ‌್ಬಂಗಿಯೇ
ರಂಗಿಯೆಂಬುದೊಂದು ವಜವೇನ್ರಿ ಬೇರ‌್ಬಂಗಿಯೇ

ಗೋಗರ್ದ್ರೆ ನ್ಯಾಯವೇನ್ರಿ ಬೇರ‌್ಬಂಗಿಯೆ
ರಂಗಿಯೆಂಬುದೊಂದು ವನವೇನ್ರಿ ಬೇರ‌್ಬಂಗಿಯೇ

ಗೌಡರಣ್ಣನಿಗೇನ್ಗೊತ್ತು ಹೆಂಡ ಕುಡಿಯೋದೊಂದೆ ಗೊತ್ತು
ಹೆಂಡ ಕುಡ್ಕೊಂಡು ದಂಡ ಕೊಡೋದು
ಚಂದವೇನ್ರಿ ಬೇರ‌್ಬಂಗಿಯೇ
ರಂಗಿ ಎಂಬುದೊಂದು ವನವೇನ್ರಿ ಬೇರ‌್ಬಂಗಿಯೇ

ಕುಂಬಾರಣ್ಣನ್ಗೇಗೊತ್ತು ಮಡ್ಕೆ ತಟ್ಟೊದೊಂದೆ ಗೊತ್ತು
ಬೇಯ್ದ ಮಡ್ಕೆಗೆ ಬೆಂಕಿ ಹಚ್ಕೊಂಡು
ಬೆಯ್ಸದೊಂದು ಚಂದವೇನ್ರಿ

ಆದಾವುದು ನ್ಯಾಯವೇನ್ರಿ ಬೇರ‌್ಬಂಗಿಯೇ
ರಂಗೀ ಎಂಬುವಳೊಂದು ವನವೇನ್ರಿ ಬೇರ‌್ಬಂಗಿಯೆ

ಆಕ್ಸಾಲಣ್ಣನಿಗೇನ್ ಗೊತ್ತು ಚಿನ್ನ ತಾಮ್ರ ಬೆರಸೋದು ಗೊತ್ತು
ಅದೊಂದು ನ್ಯಾಯವೇನ್ರಿ ಬೇರ‌್ಬಂಗಿಯೇ
ರಂಗಿಯೆಂಬುದೊಂದು ವನವೇನ್ರಿ ಬೇರ‌್ಬಂಗಿಯೆ

ಸಾಬರಣ್ಣನಿಗೇನು ಗೊತ್ತು ಮುಂಚಿ ಕೊಯ್ಯದೊಂದೆ ಗೊತ್ತು
ಅದೊಂದು ನ್ಯಾಯವೇನ್ರಿ ಬೇರ‌್ಬಂಗಿಯೆ
ರಂಗಿಯೆಂಬುದೊಂದು ವನವೇನ್ರಿ ಬೇರ‌್ಬಂಗಿಯೆ

* * *

11. ಅಗಸರ ಮೇಲಿನ ಪದ

ಹಳ್ಳದ ನೀರಿಗೂ ತೆಳ್ಳನಾ ಕಲ್ಲೀಗೂ
ಹೊಳ್ಳಾಡಿ ಕಾಯೋ ಬಿಸಲೀಗೆ – ನಮೈನ
ಅಂಗಿ ಪಂಚೆಗಳೇ ಮಡಿಬಂದು

ಹೊಳೆಯಾ ನೀರಿಗೂ ಹೊಳಪಿನ ಕಲ್ಲಿಗೂ
ಹೊಳ್ಯಾಡಿ ಕಾಯೋ ಬಿಸಲೀಗೆ – ನಮೈನ
ಕೋಟು ಪೇಟಗಳೇ ಮಡಿಬಂದು

ಬಾವಿಯ ನೀರಿಗೂ ಬಚ್ಚಲ ಕಲ್ಲೀಗೂ
ಹೊಳ್ಯಾಡಿ ಕಾಯೋ ಬಿಸಲೀಗೆ – ನಮೈನ
ಕಾಲು ಜೋತರವೇ ಮಡಿಬಂದು

ಕೆರೆಯ ನೀರಿಗೂ ಕರಿಯಾನೆ ಕಲ್ಲಿಗೂ
ಹೊಳ್ಯಾಡಿ ಕಾಯೋ ಬಿಸಲೀಗೆ – ನಮೈನ
ಅಂಗಿ ಪಂಚೆಗಳೇ ಮಡಿಬಂದು

* * *

12. ಗಾಣಿಗರ ಮೇಲಿನ ಪದ

ಒಳ್ಳೊಳ್ಳೆ ಗಾಣಿಗ ಸಿಳ್ಳು ಗಾಣಿಗರಣ್ಣ
ಎಳ್ಳುಂಟೆ ಬಾಲೆ ಮನೆಯೊಳಗೆ

ಎಳ್ಳು ಲಕ್ಕೂಸ ಹಣವೊಂದು ಸಾವುರ
ದಾರಣಿ ಎಂಬ ಕೊಳಗಾವ – ತಕ್ಕೊಂಡು
ಎಳ್ಳು ಅಳೆಬಾರೆ ಕುಸುಮಾಲೆ

ಎಳ್ಳೂ ಅಳೆವೂತ ಬಳ ಬಳ ಬಳಕೂತ
ಸಿಡಿಲುಗ್ರ ಬೆವರ ಸಿಡಿವೂತ – ಗಾಣಿಗರಣ್ಣ
ಯಾವ ತಾವಲ್ಲಿ ನಿನ ಮನೆಮಾರು

ಊರ ಮುಂದಿನ ಗದ್ದೆ ದಾರಿ ಮುಂದಿನ ತೋಟ
ಹೂಡಿದವರೆಡು ಹೊಸಗಾಣ-ಗಾಣಿಗರಣ್ಣ
ಕಟ್ಟಿದವೆರಡು ಬೆರಳೆತ್ತು –ಗಾಣಿಗರಣ್ಣ
ನೋಡುತ ಬಾರಾ ಕಡೆಗಣ್ಣ

ಕಡೆಗಣ್ಣು ನಮಗುಂಟು ಕುಡಿಹುಬ್ಬು ನಮಗುಂಟು
ಮೇಲೊಂದು ಚಾಜೆ ನಮಗುಂಟು

ಹೂಬಳ್ಳಿ ಹುಬ್ಬಳ್ಳಿ ಹಬ್ಬೀತೆ ರಥಬಳ್ಳಿ
ದಿಂಬಾದಲುಂಟೇ ಬಿದನೂರು – ಹುಡಿಗೇರ
ಹಣೆ ಮೇಲೆ ಉಂಟೇ ಸಣನಾಮ

* * *

13. ಮಡಿವಾಳರ ಮೇಲೆ ಪದ

ಸಣ್ಣಾ ಜಗಲೀ ಮೇಲೆ ಬಣ್ಣಾದುಬ್ಬೇ ಸುತ್ತೀ
ಪಟ್ಟೇನೇ ಸುತ್ತೀ ಬಿಗಿಮಾಡೀ
ಪಟ್ಟೇನೇ ಸುತ್ತೀ ಬಿಗಿಮಾಡೀ ನಮ್ಮ ಗಿಡ್ಡಣ್ಣನ
ಬಟ್ಟೂ ನಾಮಾಗಳೇ ಬೆಗರ‌್ಯಾವೂ                                                         ॥1 ॥

ಪಟ್ಟೇ ಪೀತಾಂಬಾರಾ ಎತ್ತಿನ ಮೇಲ್ಹೇರೇಕೊಂಡೂ
ಮುತ್ತೂರು ನಾಡೊಳಗೇ ನಡೆದಾನೂ
ತೆಳ್ಳನ ನೀರಿಗೂ ಬೆಳ್ಳನಾ ಕಲ್ಲೀಗೂ
ಕಾಮಾನಾಬಿಲ್ಲೂ ಬಿಸಲಿಗೂ
ಕಾಮಾನಾ ಬಿಲ್ಲೂ ಬಿಸಲೀಗೂ ನಮ್ಮಣ್ಣನಾ
ಸಾಲೇ ಸಾವಿರವೇ ಮಡಿಯಾದೂ
ಸಾಲೇ ಸಾವಿರವೇ ಮಡಿಯಾದೂ ಕೌದಳ್ಳಿ
ದುರ್ಗಮ್ಮನ ಗದ್ದುಗೆಗೆ ಮಡಿಹೋದೂ                                                             ॥2 ॥

* * *

14. ಕ್ಷೌರಿಕರ ಮೇಲೆ ಪದ

ತಾಳೂ ತಾಳೆಂಬುತಾ  ಕನ್ನಡೀ ತಾನೆದ್ದೂ ಮಾತಾಡುತಾ  ಪ
ಎಣ್ಣೆ ಅನ್ನಂಡೂ ಸಣ್ಣಾಜೋತರ ಸುತ್ತೀ
ಬಣ್ಣದ ಗಣಿಹಡಪಾ ಹೆಗಲೇರೀ
ಹೊನ್ನೂರು ನಾಡೊಳಗೇ ಹೊರಟಾನೂ
ಹೊನ್ನೂರು ಬೈಲಾಗೇ ಹೊರಟ್ಹೋಗೀ ಗೋವಿಂದಣ್ಣಾ
ಹೊನ್ನೂ ಹಚ್ಚಡವೇ ಉಡುಗ್ಯಾರೇ
ಹೊನ್ನೂ ಹಚ್ಚಡವೇ ಉಡುಗ್ಯಾರೇ ತಕ್ಕೊಂಡೂ
ತಿರಿಗ್ಯಾನೇ ಹೊನ್ನೂರಾ ಬೈಲಾಗೇ
ತಿರಿಗ್ಯಾನೇ ಹೊನ್ನೂರಾ ಬೈಲಾಗೇ ನಮ್ಮಣ್ಣನಾ
ಕನ್ನಡಿ ಹೊಳೆದಾವೇ ಬಿಸಲೀಗೇ
ಕನ್ನಡಿ ಹೊಳೆದಾವೇ ಬಿಸಲೀಗೇ ನಮ್ಮಣ್ಣನಾ
ಸಣ್ಣನಾಮಾಗಳೇ ಬೆಗರ‌್ಯಾವೇ                                                                 ॥1 ॥

ತುಪ್ಪಾ ಅನ್ನುಂಡೂ ಪಟ್ಟೇ ಜೋತರ ಸುತ್ತೀ
ಚಿನ್ನದ ಗಣಿಹಡಪಾ ಹೆಗಲೇರೀ
ಚಿನ್ನದ ಗಣಿ ಹಡಪಾ ಹೆಗಲೀಗೇರಿಸಿಕೊಂಡೂ
ಮುತ್ತುರು  ಬೈಲಾಗೇ ಹೊರಟಾನೂ
ಮುತ್ತುರು ಬೈಲಾಗೇ ಹೊರಟ್ಹೋಗಿ ಗೋವಿಂದಣ್ಣಾ
ದೊರೆಗಾಳಾ ಬೇಟೀ ಮಾಡ್ಯಾನೂ
ದೊರೆಗಾಳಾ ಬೇಟೀ ಮಾಡೀ ನಮ್ಮ ಗೋವಿಂದಣ್ಣಾ
ಹೊನ್ನೂ ಹಚ್ಚಡವೇ ಉಡುಗ್ಯಾರೇ
ಹೊನ್ನೂ ಹಚ್ಚಡವೇ ಉಡುಗ್ಯಾರೇ ತೆಕ್ಕೊಂಡು
ತಿರುಗ್ಯಾನ ಮುತ್ತೂರಾ ಬೈಲಾಗೇ
ತಿರುಗ್ಯಾನೆ ಮುತ್ತೂರ ಬೈಲಾಗೆ ನಮ್ಮ ಗೋವಿಂದಣ್ಣನಾ
ಕನ್ನಡಿ ಹೊಳೆದಾವೇ ಬಿಸಲೀಗೇ                                                                        ॥2 ॥

ಕಂಚಿನ ಕಾಲಾಕಂಬಾ ಮಿಂಚುಳ್ಳ ಕನ್ನಡೀ
ಮಂಚಾದಾ ಮೇಲೇ ಗಣಿಹಡಪಾ
ಮಂಚಾದಾ ಮೇಲೇ ಗಣಿಹಡಪ ಕಲಶಾನಿಟ್ಟೂ
ಶಕ್ತೀ ದೇವೀಯ ದೃಡಪೂಜೇ
ಹೊತ್ತರೆ ಮುಂಚೆದ್ದೂ ಹಣಿನೀರಲಿ ಮುಖ ತೊಳೆದೂ
ವೀಬುತ್ತೀ ದರಿಸ್ಯಾನೂ ಧಸನೀಗೇ
ವೀಬುತ್ತೀ ದರಿಸ್ಯಾನೂ ದಸನೀಗಿಟ್ಟೂಕೊಂಡೂ
ರನ್ನಾದ ಸಿಬ್ಲಾ ಬಲಗೈಲೀ
ರನ್ನಾದ ಸಿಬ್ಲಾ ಬಲಗೈಲೀ ತೆಕ್ಕೊಂಡೂ
ಲಿಂಗಾ ಮಲ್ಲಿಗೆ ಹೂವಾ ಉಗುರಾಡೀ
ಲಿಂಗಾಮಲ್ಲಿಗೆ ಹೂವ್ವಾ ಉಗುರಾಡೀ ಕ್ಯೊತಂದೂ
ಶಕ್ತೀ ದೇವಿಗೇ ಶಿವಪೂಜೇ                                                                                  ॥3 ॥

ಸಂಜೇಲಿ ಮುಂಜಾನೇ ಶಕ್ತಿ ದೇವಿಯ ಪೂಜೇ
ಭಕ್ತಿಲಿ ಗೋವಿಂದಣ್ಣಾ ಬಲುಜಾಣಾ                                                                     ॥4 ॥

ಅಲ್ಲಂಗ ಬೆಲ್ಲಂಗಾ ಬೆಲ್ಲಾದಾ ಪರಮಾನ್ನಾ
ನಲ್ಲೇತಾ ಮಾಡೀ ಇಳಿಗಾಳೇ
ಸೀಲಾ ಸೂಲದಲೀ ಆದಾವೇ ಅಡಿಗೇಯೂ
ಪಟ್ಟೇ ವಸ್ತ್ರಾವಾ ಮರೆಮಾಡೀ
ಪಟ್ಟೇ ವಸ್ತ್ರಾವಾ ಮರೆಮಾಡೀ ತಾಯಮ್ಮಾ
ಶಕ್ತೀದೇವೀಗೇ ನೈವೇದ್ಯಾ
ಶಕ್ತೀದೇವೀಗೇ ನೈವೇದ್ಯಾಗೊಂಬಾಗ
ಆಕಾಶಗಂಟೇ ನುಡಿದಾವೂ                                                                                ॥5 ॥

* * *1 ಪತ್ತಲ