1. ಬ್ರಾಹ್ಮಣರ ಮೇಲೆ ಪದ-1

ಗಂದಾದ ಮನೆಯೂ ಗಂದಾದ ಗುರುಮನೆಯೂ
ಗಂದಾ ತುಂಬ್ಸೈ ತೊಂದರಮಾನೇ
ಗಂದಾದುಂಬ್ಸೈ ತೊಂದರಮಾನೇ ಬಾಗಿಲ ಮುಂದೇ
ಗಂದದ ಬಟ್ಟಿಲ್ದೇ ಹೊರಡುವಲ್ರೂ
ಕಪ್ಪೀನರಮನೆಯೂ ಕಪ್ಪೀನಾ ಗುರುಮನೆಯೂ
ಕಪ್ಪೂ ತುಂಬ್ಸೈತೊಂದರಮಾನೇ
ಕಪ್ಪೂ ತುಂಬ್ಸೈತೊಂದರಮಾನೆ ಬಾಗಿಲಮುಂದೇ
ಕಪ್ಪಿನ ಬಟ್ಟಿಲ್ದೇ ಹೊಹಡುವಲ್ರೂ
ಚಿನ್ನಾದರಮನೆಯೂ ಚಿನ್ನಾದ ಗುರುಮನೆಯೂ
ಚಿನ್ನಾ ತುಂಬ್ಸೈತೊಂದರಮಾನೇ
ಚಿನ್ನಾ ತುಂಬ್ಸೈತೊಂದರಮಾನೆ ಬಾಗಿಲ ಮುಂದೆ
ಚಿನ್ನದ ಬಟ್ಟಿಲ್ದೆ, ಹೊರಡುವಲ್ರೂ                                                                               ॥

ತುಂಬಿದ ಕೆರೆಯಾ ನೀರಾ ತೂಬಾ ಮೆಟ್ಟೀಕೊಂಡೂ
ಯಾಲಕ್ಕಿಗೆ ನೀರಾ ತಿರಗೋರೂ
ಯಾಲಕ್ಕಿಗೆ ನೀರಾ ತಿರಗೋರೂ
ಯಾಲಕ್ಕಿಗೆ ನೀರಾ ತಿರಗೋರೇ ನಮ್ಮಯ್ನ
ಪಟ್ಟೇ ಜೋತರವೇ ಕೆಸರಾದೂ
ಪಟ್ಟೇ ಜೋತರವೇ ಕೆಸರಾದೂ ಮಡಿವಾಳುರ‌್ಹುಡುಗ
ನೀರಾ ಕಂಡಲ್ಲೀ ಸೆಳಕೋಡೂ
ತುಂಬಿದ ಕೆರೆಯಾ ನೀರಾ ತೂಬಾ ಮೆಟ್ಟೀಕೊಂಡು
ಸಸಿತೋಟಕೇ ನೀರಾ ತಿರುಗೋರೇ
ಸಸಿತೋಟಕೇ ನೀರಾ ತಿರುಗೋರೇ ನಮ್ಮಯ್ನ
ಸಾಲೇ ಜೋತರವೇ ಕೆಸರಾದೂ
ಸಾಲೇ ಜೋತರವೇ ಕೆಸರಾದೂ ಮಡಿವಾಳರ‌್ಹುಡುಗ
ನೀರಾ ಕಂಡಲ್ಲಿ ಸೆಳಕೋಡೂ
ಬತ್ತಿದ ಕೆರೆಯಾ ನೀರಾ ಬಗ್ಗೀ ಮೆಟ್ಟೀಕೊಂಡೂ
ಹೂದೋಟಕೆ ನೀರಾ ತಿರುಗೋರೂ
ಹೂದೋಟಕೆ ನೀರಾ ತಿರುಗೋರೇ ನಮ್ಮಯ್ನ
ಪಟ್ಟೇ ಜೋತರವೇ ಕೆಸರಾದೂ
ಪಟ್ಟೇ ಜೋತರವೇ ಕೆಸರಾದೂ ಮಡಿವಾಳರಣ್ಣಾ
ನೀರಾ ಕಂಡಲ್ಲಿ ಸೆಳಕೋಡೂ
ಹಳ್ಳದ ನೀರೀಗೂ ತಳ್ಳಾನಾ ಕಲ್ಲೀಗೂ
ಹೋರಾಡಿ ಕಾಯ್ವ ಬಿಸಿಲೀಗೂ
ಹೋರಾಡಿ ಕಾಯ್ವ ಬಿಸಿಲೀಗೂ ನಮ್ಮಯ್ನ
ಪಟ್ಟೇ ಜೋತರವೇ ಮಡಿಯಾದೂ                                                                         ॥

ದೊಡ್ಡರಮನೆಯಲ್ಲೀ ದೊಡ್ಡಾ ಜಗಲಿಯಮೇಲೆ
ದೊಡ್ಡಡಿಕೆ ನೋಡೀ ಹಸನೋಡೀ
ದೊಡ್ಡಡಿಕೆ ನೋಡೀ ಹಸನೋಡಿ ನಮ್ಮಯ್ಯ
ದೊಡ್ಡ ಜಗಲೀ ಮೆಟ್ಲಾ ಇಳಿದಾರೂ
ಚಿಕ್ಕರಮನೆಯಲ್ಲಿ ಚಿಕ್ಕಾ ಜಗಲೀಮ್ಯಾಲೆ
ಚಿಕ್ಕಡಿಕೆ ನೋಡೀ ಹಸನೋಡೀ
ಚಿಕ್ಕಡಿಕೆ ನೋಡೀ ಹಸನೋಡಿ ನಮ್ಮಯ್ಯ
ಚಿಕ್ಕ ಜಗಲೀ ಮೆಟ್ಲಾ ಇಳಿದಾರೂ
ಚಿಕ್ಕ ಜಗಲೀ ಮೆಟ್ಲಾ ಇಳಿದಾರೂ ನಮ್ಮಯ್ಯ
ದಾರ‌್ವಾಡಕೊಂದೋಲೇ ಬರೆದಾರೂ                                                               ॥

ದಾರ‌್ವಾಡ ದಂಡಿಗೆ ಬಂದೂ ಬೀರೂರು ಸಿಬ್ಬಲ ಬಂದೂ
ಚಿಂಚಾಲ ಹಚ್ಚೀ ತೂಗುಸ್ಯಾರೂ
ಚಿಂಚಾಲ ಹೆಚ್ಚೇ ತೂಗುಸ್ಯಾರು ನಮ್ಮಯ್ಯ
ಮೂಟೆ ಮಾಡಿದರೊಂದರಗಳಿಗೇ
ಮೂಟೆ ಮಾಡಿದರೊಂದರಗಳಿಗೆ ನಮ್ಮಯ್ಯ
ಮೂಟೆಯಾ ಮುಟ್ಟಿ ಶರಣೆಂದ್ರೂ
ಮೂಟೆಯ ಮುಟ್ಟೀ ಶರಣೆಂದ್ರೂ ಶರಣೆಂದ್ರೂ
ಸರಸ್ವತಿಯೇ ನಮಗೇ ವಲಿಯಾಲೀ                                                                       ॥

* **

2. ಬ್ರಾಹ್ಮಣರ ಮೇಲೆ ಪದ-2

ಕೆರೆಸುತ್ತ ಕ್ಯಾದೀಗೇ ಮನೆಸುತ್ತಾ ಮಲ್ಲೀಗೇ
ಅರಮನೇ ಸುತ್ತಾ ಅರಗೀಣೀ                                                                                   ॥

ಏರೀ ಚಿನ್ನದ ಏರೀ ಏರೀ ರನ್ನದ ಏರೀ
ಏರಿಂದಾ ಕೆಳಗೇ ಬೋರೆಂಬೋದೊ
ಏರಿಂದಾ ಕೆಳಗೇ ಬೋರೆಂಬೋದೇನೈಯ್ಯ
ಜಾಣಾ ನಮ್ಮೈನಾ ಸಸಿತೋಟಾ
ಜಾಣಾ ನಮ್ಮೈನಾ ಸಸಿತೋಟಾದೊಳಗಿರುವಾ
ಯಾಲಕ್ಕೀ ಸೋಗೇ ತಿರುಗ್ಯಾವೂ                                                                           ॥

ಏರೀ ರನ್ನದ ಏರೀ, ಏರೀ ಬಣ್ಣದ ಏರೀ
ಏರಿಂದಾ ಕೆಳಗೇ ಎಲೆತೋಟಾ
ಏರಿಂದಾ ಕೆಳಗೆ ಎಲೆತೋಟಾ ದೊಳಗಿರುವಾ
ಪಂಚೊಳ್ಳೀ ಸೋಗೇ ತಿರುಗ್ಯಾವೂ                                                                         ॥

ತುಂಬೀದಾ ಕೆರೆಯಾ ತೂಬಾ ಮೆಟ್ಟೀಕೊಂಡೂ
ಹೂತೋಟಕೆ ನೀರಾ ಬಿಡುವಾರೂ
ಹೂತೋಟಕೆ ನೀರಾ ಬಿಡುವಾ ನಮ್ಮಯ್ಯನಾ
ಹೊನ್ನೀನ ಜನಿವಾರೇ ಸಡಲ್ಯಾವೂ
ಜೋಡೂ ಕೆರೆಗಳಾ ತಿರುಗಾಣೀ ಮೆಟ್ಟಿಗೊಂಡೂ
ಕೊನೆತೋಟಕೆ ನೀರಾ ಬಿಡುವಾರೂ
ಕೊನೆತೋಟಕೆ ನೀರಾ ಬಿಡುವಾ ನಮ್ಮಯ್ಯನಾ
ಗೀರೂ ಗಂದಗಳೇ ಬೆಗರ‌್ಯಾವೂ                                                                    ॥

ಸ್ನಾನಾ ಸಂದ್ಯಾನಾ ಮೈಲಿಗೆ ಬಿಟ್ಟು ಮಡಿಯುಟ್ಟು
ದಾನಾ ಧರ್ಮಗಳೇ ವಿಪರೀತಾ
ದಾನಾ ಧರ್ಮಗಳೇ ದಿನ ದಿನಾ ಮಾಡುತ್ತಾ
ಮೋಕ್ಷಾ ಗಳಿಸಿದರೂ ಸ್ವರ್ಗಕ್ಕೇ
ಸ್ನಾನಾ ಸಂದ್ಯಾನಾ ಹೋಮಾ ನೇಮವ ಮಾಡೀ
ಜಪತಪಗಾಳೇ ವಿಪರೀತಾ
ಜಪತಪಗಳೇ ವಿಪರೀತಾ ಮಾಡುತ್ತಾ ವೆಂಕ್ಟ್ರಮಣ
ದೇವಾರಾ ದೃಢಪೂಜೇ                                                                                             ॥

ನೆನೆಯಕ್ಕಿ ನೆನೆಗಡಲೇ ಕೊನೆಯಾ ಬಾಳೆಯಹಣ್ಣು
ಹಣ್ಣು ಕಟ್ಟಿದರೂ ಪಳುವಳ್ಳೀ
ಹಣ್ಣುಕಟ್ಟಿದರೂ ಪಳುವಳ್ಳೀ ಮಂಟಪದಡಿಯಾ
ವೆಂಕಟರಮಣ ದೇವರಾ ಮನಪೂಜೇ
ವೆಂಕಟರಮಣದೇವರಾ ಮನಪೂಜೆಗೊಂಬಾಗಾ
ಹತ್ತೂ ಮದ್ದಾಲೇ ಕೈ ತಾಳಾ
ಹತ್ತೂ ಮದ್ದಾಲೇ ಕೈ ತಾಳ ಕಂಚಿನ ಗಂಟೆ
ಆಕಾಶಾ ಗಂಟೇ ನುಡಿದಾವೂ                                                                                 ॥

ಹಾಲೂ ಹಣ್ಣುಗಳೂ ಮೇಲೆ ಗಂದಕ್ಷತೆಯೂ
ಹೂವೂ ಕಟ್ಟಿದರೂ ಪಳುವಳ್ಳೀ
ಹೂವೂ ಕಟ್ಟಿದರೂ ಪಳುವಳ್ಳಿ ಮಂಟಪದಡಿಯಾ
ಶ್ರಿಂಗೇರಿ ಶಾರದಾಂಬೆಗೆ ಶಿವಪೂಜೇ
ಶ್ರಿಂಗೇರಿ ಶಾರದಾಂಬೆ ಶಿವಪೂಜೆಗೊಂಬಾಗಾ
ಸಾಲಿಗೆ ಸರಗಂಟೇ ನುಡಿದಾವೂ                                                                            ॥

ಹಾಲೂಬೋಜನ ಉಂಡೂ ಸಾಲೇಜೋತರ ಹೊದ್ದೂ
ಚಂದ್ರಾ ಚಾವುಡಿಗೇ ಮುರ್ತಾಗೀ
ಚಂದ್ರಾ ಚಾವುಡಿಗೇ ಮುರ್ತಾಗೀ ನಮ್ಮೆಗೇ
ಕುದುರೇ ಬಂದಾವೇ ಚಾವುಡಿಗೇ                                                                            ॥

ಬಿಳಿಯಾ ಕುದುರೇಗೆ ಬೆಳ್ಳಿಯ ಜೀನ್ಹಾಕೀ
ಕುದುರೇಯಾ ಮೇಲೆ ರಥನೇರೀ
ಕುದುರೇಯಾ ಮೇಲೆ ರಥನೇರಿ ನಮ್ಮಯ್ಯ
ಸೂರ‌್ಯಮಗಿದುರಾಗೀ ಹೊರಟಾರೂ
ಸೂರ‌್ಯಮಗಿದುರಾಗೀ ಹೊರಟಾರೇ ನಮ್ಮಯ್ಯ
ಶಾಸ್ತ್ರದಾ ಪುಸ್ತುಕವಾ ಮರೆತೆದ್ದೂ
ಶಾಸ್ತ್ರದಾ ಪುಸ್ತುಕವಾ ಮರೆತೆದ್ದೂ ನಮ್ಮಯ್ಯ
ಐದಾಳೂ ಬಿಟ್ಟು ತರಿಸಾರೂ                                                                                    ॥

ಕೆಂದಾ ಕುದುರೇಗೇ ಚಿನ್ನದ ಕಡಿವಾಣ ಬಿಗಿದು
ಕುದುರೇಯಾ ಮೇಲೆ ರಥನೇರೀ
ಕುದುರೇಯಾ ಮೇಲೆ ರಥನೇರಿ ನಮ್ಮಯ್ಯ
ಚಂದ್ರಮಗಿದುರಾಗೀ ಹೊರುಟಾರೂ
ಚಂದ್ರಮಗಿದುರಾಗೀ ಹೊರಟಾರೂ ನಮ್ಮಯ್ಯ
ಲೆಕ್ಕೆದಾ ಪುಸ್ತುಕವಾ ಮರೆತೆದ್ದೂ
ಲೆಕ್ಕೆದಾ ಪುಸ್ತುಕವಾ ಮರೆತೆದ್ದೂ ನಮ್ಮಯ್ಯ
ಹತ್ತಾಳು ಬಿಟ್ಟೂ ತರಿಸ್ಯಾರೂ                                                                                   ॥

ಅಂಗೈಯ್ಯಲಿ ಪುಸ್ತೂಕಾ ಮುಂಗೈಯಲ್ಲಿ ಶ್ರೀಕಂಠ
ಶ್ರೀರಾಮೆಂಬ ವಚನಾ ಬರೆವಾರೂ
ಶ್ರೀರಾಮೆಂಬ ವಚನಾ ಬರೆವಾ ನಮ್ಮಯ್ಯ
ಶ್ರಿಂಗೇರಿ ಶಾರದಮ್ನಾ ಬಕ್ತಾರೂ
ಶ್ರಿಂಗೇರಿ ಶಾರದಮ್ನಾ ಬಕ್ತಾರೂ ಕುಂತುಕೊಂಡೂ
ಬಾರೀಗೊಂದು ಕಾಗದಾ ಬರೆದಾರೂ
ಬಾರೀ ಬಾರೀಗೇ ಕೈ ಕಾಗ್ದಾ ಬರೆಸುತ್ತಾ
ವಕ್ಕಲು ಮಕ್ಕಳಿಗೆ ಉಡಿಗ್ಯಾರೇ
ವಕ್ಕಲು ಮಕ್ಕಳಿಗೇ ಉಡಿಗ್ಯಾರೇ ಕೊಟ್ಟಾರೇ
ಗೋವೇ ರಾಜ್ಯಕ್ಕೇ ಬೆಲೆಯಾದೂ                                                                           ॥

ಯಡಗೈಯಲೀ ಪುಸ್ತುಕಾ ಬಲಗೈಯಲಿ ಶ್ರೀಕಂಠಾ
ಶಿವ ಶಿವ ಎಂಬ ನುಡಿಯಾ ಬರೆವಾರೂ
ಶಿವ ಶಿವ ಎಂಬಾ ನುಡಿಯಾ ಬರೆವಾ ನಮ್ಮಯ್ಯಗೆ
ಶ್ರಿಂಗೇರಿ ಸ್ವಾಮಿಗಳೇ ಗುರುಗಾಳೂ
ಶ್ರಿಂಗೇರಿ ಸ್ವಾಮಿಗಳಾ ಸಿಷ್ಯಾರೂ ಕುಂತುಕೊಂಡೂ
ಬಾರೀಗೊಂದು ಕಾಗದಾ ಬರೆದಾರೂ
ಬಾರೀ ಬಾರೀಗೇ ಕಾಗ್ದಾ ಪತ್ರಾ ಬರೆಸೀ
ಆಳುಮಕ್ಕಳೀಗೇ ಉಡುಗಾರೇ
ಆಳುಮಕ್ಕಳಿಗೇ ಉಡುಗಾರೇ ಕೊಟ್ಟಾರೇ
ಗುತ್ತಿ ರಾಜ್ಯಕ್ಕೇ ಬೆಲೆಯಾದೂ                                                                                 ॥

* **

3. ಬ್ರಾಹ್ಮಣರ ಮೇಲೆ ಪದ-3

ಸರಸ್ವತಿ ಸರಣೆನ್ನಿ
ಗಣಪತೀಗೆ ಕೈಮುಗೀರಿ
ಸರಮುತ್ತನಿಟ್ಟು ಸರಣೆನ್ನಿ
ರಾಜ್ಯನಾಳೋರಿಗೊಂಧನಿಗೂಡಿ

1

[1]ಹಾರನಳ್ಳೀಲಿ ವಾರೇಲಿ ಇರೋನೆ1
ನಾರೇನ ಮಗನೆ ಬೆನುವಯ್ನ-ಪಾದಾಕೆ
ಸರಮುತ್ತನಿಟ್ಟು ಸರಣೆನ್ನಿ

ಹನ್ನೊಂದಳ್ಳೇಲಿ ಬೆನ್ನಿಂದೆ ಇರೋನೆ
ಕನ್ನೇರ ಮಗನೆ ಬೆನುವಯ್ನ-ಪಾದಾಕೆ
ಸರಮುತ್ತನಿಟ್ಟು ಸರಣೆನ್ನಿ

ದಾಸಕಬ್ಬಿನ ಬೆಲ್ಲ ದಾಳಿಂಬರದ ಹಣ್ಣು
ಪೂಜೆಗೊಂಡಿಹುದು ಬೆನುವಯ್ಗೆ

ಕರಿಯ ಕಬ್ಬಿನ ಬೆಲ್ಲ ಕೊನಿಯ ಕರಿಬಾಳೆಹಣ್ಣು
ಪೂಜೆಗೊಂಡಿವುದು ಬೆನುವಯ್ಗೆ

ವಾಟಿಕಬ್ಬಿನ ಬೆಲ್ಲ ಕೊನಿಯ ವಾಟಿಬಾಳೆಹಣ್ಣು
ಪೂಜೆಗೊಂಡಿವುದು ಬೆನುವಯ್ಗೆ

ಪಣಿ ಪಣಿ ಹೊನ್ನೀಗೂ ಪಣಿಹೊನ್ನೀನ ಗೆಜ್ಜಾ ಕೂ
ಪೂಜೆಗೊಂಡಿವುದು ಬೆನುವಯ್ಗೆ

ಪಚ್ಚಲ ಪವಳೀಗೂ ಹಚ್ಚಡದ ಮುಗಟೀಗೂ
ಸರಪಳಿ ಸುತ್ತಿದ್ದರು ನಡುವೀಗು-ಚೊಚ್ಚಲರ
ಮಗನ ಸುಂದರ ಕಥೆಗಾಳ

ಹೊತ್ತಾರೆ ಮುಂಚೆದ್ದು ಪಚ್ಚೆ ನೀರಲಿ ಮುಖ ತೊಳೆದು
ಹೂವಿನ ಸಿಬ್ಬಲವೇ ಬಲಗೈಲಿ

ತೂಬಿನ ಕೆರೆಬಾವಿ ತೂಬಾನೆ ಮೆಟಿಕೊಂಡು
ಸಸಿ ಬಾಳೆಗೆ ನೀರಾ ತಿರುಗೌರೆ- ನಮ್ಮೈನ
ಪಂಚೆ ಸೆರಗೆಲ್ಲಾ ಕೆಸರಾದು

ಪಂಚೆ ಸೆರಗೆಲ್ಲಾ ಕೆಸರಾದವಂದೇಳಿ
ನೀರ ಕಂಡಲ್ಲಿ ಒಗುದಾರೆ

ಗಂಧದರಮಾನೆ ಗಂಧದ ಗುರುಮಾನೆ
ಗಂಧ ಸಲಿಸೈತೆಂದರಮಾನೆ-ಅರಸುಗಳಿರಾ
ಗಂಧದ ಬಟ್ಟಿಲ್ಲದೆ ಹೊರಡಲ್ಲ

ಹೂವಿನರಮಾನೆ ಹೂವಿನ ಗುರುಮಾನೆ
ಹೂವು ಸಲಿಸೈತೆಂದಾರಮಾನೆ- ಅರಸುಗಳಿರಾ
ಹೂವಿಲ್ಲದೊರೆಗೆ ಹೊರಡಲ್ಲ

ಚಂಬೀನರಮಾನೆ ಚಂಬಿನ ಗುರುಮಾನೆ
ಚಂಬು ಸಲಿಸೈತೆಂದಾರಮಾನೆ- ಅರಸುಗಳಿರಾ
ಚಂಬಿಲ್ಲದೊರೆಗೆ ಹೊರಡಲ್ಲ

ಸೌಟಿನರಮಾನೆ ಸೌಟೀನ ಗುರುಮಾನೆ
ಸೌಟು ಸಲಿಸೈತೆಂದಾರಮಾನೆ-ಅರಸುಗಳಿರಾ
ಸೌಟಿಲ್ಲದೊರೆಗೆ ಹೊರಡಲ್ಲ

ಕಪ್ಪೀನರಮಾನೆ ಕಪ್ಪೀನ ಗುರುಮಾನೆ
ಕಪ್ಪು ಸಲಿಸೈತೆಂದಾರಮಾನೆ-ಅರಸುಗಳಿರಾ
ಕಪ್ಪಿನ ಬೊಟ್ಟಿಲ್ಲದೆ ಹೊರಡಲ್ಲ

* **

4. ಶಿವಭಕ್ತರ ಮೇಲೆ ಪದ

ಸೂವಿರೊ ಸಂಗಯ್ಯ ಸೂವೀರೊ ಲಿಂಗಯ್ಯ
ಸುವಿಬಾರೋ ಚನ್ನಾ ಬಸವಯ್ಯ                                                                              ॥

ಲಿಂಬೇಮರನಡಿಯಾ ರಂಬೇರಲೆಯಾನ್ಹೂಡೀ
ಲಿಂಬೇಯಾ ಚಕ್ಕೇ ತಳನೊಡದೂ
ಲಿಂಬೇಯಾ ಚಕ್ಕೇ ತಳನೋಡದಗ್ನೀಕಾದೂ
ಲಿಂಗಾಜಂಗಮರೂ ಜಳಕಾವೇ
ಲಿಂಗಾಜಂಗಮರೂ ಜಳಕಾಕೇ ಹೋದವರೇ
ಕವಲೀಗೋವಿನ್ನೂ ಅಡಲಿಕ್ಕೀ
ಕವಲೀಗೋವಿನ್ನೂ ಅಡಲಿಕ್ಕೀ ತೆಗತಂದೂ
ರಂಬೇರೂ ಸುಟ್ಟೂ ಹದಮಾಡಿ
ರಂಬೇರೂ ಸುಟ್ಟೂ ಹದಮಾಡಿದ ವೀಭೂತಿ
ಲಿಂಗಾಜಂಗಮರೂ ದರಿಸ್ಯಾರೂ                                                                             ॥

ದೊಡಲೀ ಮರನಡಿಯಾ ದೊಡ್ಡವರ‌್ವಲೆಯಾಮ್ಹಾಡೀ
ದೊಡಲೀಯ ಚಕ್ಕೇ ತಳನೊಡೆದೂ
ದೊಡಲೀಯ ಚಕ್ಕೇ ತಳನೊಡದಗ್ನೀಕಾದೂ
ಲಿಂಗಾಜಂಗಮರೂ ಜಳಕಾವೇ
ಲಿಂಗಾಜಂಗಮರೂ ಜಳಕಾಕೇ ಹೋದವರೇ
ಹಂಡೀ ಗೋವಿನ್ನೂ ಅಡಲಿಕ್ಕೀ
ಹಂಡೀ ಗೋವಿನ್ನೂ ಅಡಲಿಕ್ಕೀ ತೆಗೆತಂದೂ
ಕನ್ನೇರೂ ಸುಟ್ಟೂ ಹದಮಾಡೀ
ಕನ್ನೇರು ಸುಟ್ಟೂ ಹದಮಾಡಿದ ವೀಭೂತೀ
ಲಿಂಗಾಜಂಗಮರೂ ದರಿಸ್ಯಾರೂ                                                                             ॥

ಗಂದಾದುಂಡೇಲೀ ಹೊಂದೀಕೊಂಡಿರುವದನೇ
ತುಂಬೇ ಹೂವಿನಲ್ಲೀ ಮಠಕಟ್ಟೀ
ತುಂಬೇ ಹೂವಿನಲ್ಲಿ ಮಠಕಟ್ಟೀ ಮಂಟಪದೊಳಗೇ
ಈಶ್ವರ ದೇವರಾ ಶಿವಪೂಜೇ
ಈಶ್ವರ ದೇವರಾ ಶಿವಪೂಜೇಗೊಂಬಾಗಾ
ಆಕಾಶಗಂಟೇ ನುಡಿದಾವೂ                                                                                      ॥

ಚಂಡೂ ಹೂವಿನಲ್ಲೀ ಗುಂಡೊಡೆದೂ ಇರುವವನೇ
ಮಲ್ಲಿಗೆ ಹೂವಿನಲ್ಲೀ ಮಠಕಟ್ಟೀ
ಮಲ್ಲಿಗೆ ಹೂವಿನಲ್ಲೀ ಮಠಕಟ್ಟೀ ಮಠದಲ್ಲಿ
ವೀರಭದ್ರದೇವಾರಾ ಶಿವಪೂಜೇ
ವೀರಭದ್ರದೇವಾರಾ ಶಿವಪೂಜೇಗೊಂಬಾಗಾ
ಪಟ್ಟೇನುಟ್ಟಮ್ಮಾ ಶರಣೆನ್ನೇ
ಪಟ್ಟೇನುಟ್ಟಮ್ಮಾ ಶರಣೆಂದಾರತಿ ಬೆಳಗಾಗಾ
ಸಾಲಿಗೆ ಸರಗಂಟೇ ನುಡಿದಾವೂ

* * *

5. ನಾಮಧಾರಿಗೌಡರ ಮೇಲೆ ಪದ

ಮುಮ್ಮಾಳಿಗೆ ವಳಗೇ ಪಟ್ಟೇಮಂಚದ ಮೇಲೇ
ಜಾಣಾರಾಮೈಗೌಡ್ರಿಗೇ ಸುಖನಿದ್ರೇ
ಜಾಣಾರಾಮೈಗೌಡ್ರಿಗೇ ಸುಖನಿದ್ರೇನಾಗಾಗಾ
ಕಾಗದ ಬಂದಾವೂ ಸದರೀಗೇ
ಬಂದಾ ಕಾಗದವಾ ನಿಂದೂ ಓದೀಕೊಂಡೂ
ಮಲಗಿದ್ದ ಮಾಳಿಗೆಯಾ ಬಿಗಿಮಾಡೀ
ಆ ಕೈ ಕಂಟಾ ಮಾಡೀ ಈ ಕೈ ವಾಲೇ ಮಾಡೀ
ಲೆಕ್ಕಾ ಕೊಂದೋಲೇ ಬರೆವೋರೂ
ಲೆಕ್ಕಾ ಕೊಂದೋಲೇ ಬರೆವಾ ರಾಮೈಗೌಡ್ರು
ಜಗಲೀ ಗ್ಹೊರುಟಾರೂ ನಗೆಮಾರೇ                                                                         ॥

ಉದ್ದನ ಜಗಲೀ ಮ್ಯಾಲೇ ಗದ್ದಿಗೆ ಕಂಬಳಿಹಾಸೀ
ಸಿಬ್ಬುಲದಾ ಹೊನ್ನೂ ಬಿಳಿಯಾಲೇ
ಸಿಬ್ಬುಲದಾ ಹೊನ್ನೂ ಬಿಳಿಯಾಲೇ ನಿಟ್ಟುಕೊಂಡೂ
ಬುದ್ದೀ ಮಾನವರಿಗೆ ತಿಳಿಯಾದೂ                                                                           ॥

ಗಿಲಿಗಿಚ್ಚಿ ಕನ್ನಾಡೀ ಗಿಣಿರಾಮಾನಚ್ಚಾಡೀ
ಓಣೀಲೆದುರಾಗಿ ಬರುವೋರೂ
ಓಣೀಲೆದುರಾಗಿ ಬರುವೋ ರಾಮೈಗೌಡ್ರು
ಕಾಮಾನು ಹುಡುಗಾರೂ ತಡೆದಾರೂ
ಕಾಮಾನು ಹುಡುಗಾರೂ ಯಾಕೆಂದು ತಡೆದಾರೂ
ವರವಾ ವೀಳ್ಯಗಳೇ ಸಲಬೇಕೊ
ಒಂದೊಂದೋರಾಕ್ಕೆ ಬಂದವರೂ ನಾವೆಲ್ಲ
ಬಂಗಾರದ ಬಳೆಯೇ ಸಲಬೇಕೊ
ಬಂಗಾರದ ಬಳೆಯೇ ಸಂದಿದ್ದುಂಟಾದಾರೆ
ಹಾಡುತ್ತರಮನೆಯಾ ಇಳದೇವೂ                      ॥

* * *

6. ಅಕ್ಕಸಾಲೆಯರ ಮೇಲೆ ಪದ-1

ಏಗೀಣೀ ಹೂವ್ವೇ ಏಗೀಣೀ ಮುದ್ದೇ-
ಏಗಿಣಿ ನೋಡೇ ಗಿಣಿಯೇ                                                                                          ॥

ಮುಂಜಾನೇ ಎದ್ದೂ ವದನಾ ಪಾದವ ತೊಳೆದೂ
ಆಯುದಾ ಪಾಣೀ ಹದಮಾಡೀ
ಆಯುದಾ ಪಾಣೀ ಹದಮಾಡಿ ನಮ್ಮಾಚಾರ‌್ರೂ
ಮುದದೀ ಹಾಳಮ್ಮನಾ ನೆನೆದಾರೂ                                                                      ॥

ಆಚಾರ‌್ಯರ ಮನೆಯಾ ನಡುಮನೆಯಲ್ಲಿರುವವಳೇ
ದಂಡೇ ಮಲ್ಲಿಗೆಯಾ ಮುಡಿವವಳೇ
ದಂಡೇ ಮಲ್ಲಿಗೆಯಾ ಮುಡಿವಾ ಕಾಳಮ್ಮ ತಾಯೀ
ನಾವೂ ಬಂದೀವೀ ದನಿದೋರೂ
ನಾವೂ ಬಂದೀವೀ ದನಿದೋರು ಕಾಳಮ್ಮ ತಾಯಿ
ತಪ್ಪೀದಾ ಪದನಾ ಬರಕೋಡೂ
ಯಾರ‌್ಯಾರ ಹೇಳಿಕೇ ನಾವ್ಯಾಕೇ ಬರೆದೆವೂ
ಹಡದಮ್ಮಿದ್ದಾರೇ ಅರಮನೇಲೀ
ಹಡದಮ್ಮಿದ್ದಾಲೇ ಅರಮನೇಲಿ ಕೇಳಿದರೇ
ತಪ್ಪಿದಾ ಪದವಾ ಬರೆದಾರೂ                                                                                  ॥

ಆಚಾರ‌್ಯರಾ ಮನೆಯಾ ಮಂಟಪದಲ್ಲಿರುವವಳೇ
ಇಡಿಯಾ ಕ್ಯಾದಿಗೆಯಾ ಮುಡಿವವಳೇ
ಇಡಿಯಾ ಕ್ಯಾದಿಗೆಯಾ ಮುಡಿವಾ ಕಾಳಮ್ಮ ತಾಯೀ
ನಾವೂ ಬಂದೇವೇ ದನಿದೋರೂ
ನಾವೂ ಬಂದೇವೇ ದನಿದೋರು ಕಾಳಮ್ಮ ತಾಯೀ
ತಪ್ಪೀದಾ ಪದನಾ ಬರಕೋಡೂ
ಯಾರ‌್ಯಾರ ಹೇಳೀಕೇ ನಾವ್ಯಾಕೇ ಬರದೇವೂ
ತಾಯಮ್ಮಿದ್ದಾರೆ ಅರಮನೇಲೀ
ತಾಯಮ್ಮಿದ್ದಾರೆ ಅರಮನೇಲಿ ಕೇಳಿದರೇ
ಗರಗರನೊಂದೋಲೇ ಬರೆದಾರೂ                                                                         ॥

ಬಣ್ಣದ ಅಡಿಗೋಲೂ ಇಕ್ಕಾಳಾ ಸಣ್ಣಸುತ್ತಿಗೇ
ಊರಳೊಗೊಂದೂ ವಲೆಹೂಡೀ
ಊರೊಳಾಗೊಂದೂ ವಲೆಹೂಡಿ ನಮ್ಮಾಚಾರ‌್ರೂ
ವಾಲೇ ಮಾಟಗಳೇ ಹಸನಾದೂ
ವಾಲೆಗೆ ವಜ್ರದಕಿಡಿಯೂ ಮೇಲೇ ಕುಸುರಿನ ಹರಳೂ
ಝಳ [ಕೆಂ]ಬು ಮಾಣಿಕ್ಯಾ ಹೊಳೆದಾವೂ                                                               ॥

ಹನ್ನೆರಡು ಬಣ್ಣಾದಾ ಹೊನ್ನಾವೂ ಹೊಸಕೊಪ್ಪೂ
ವಪ್ಪಾದಲಿ ನಮ್ಮಾಚಾರ‌್ರೂ ಸೂಜಾಣ್ರೂ
ವಪ್ಪಾ ಬಣ್ಣದಲೀ ಬುದ್ಧಿವಂತಾ ಆಚಾರ‌್ರೂ
ಕೊಪ್ಪೀಗೇ ಚಿತ್ರಾ ಬರೆದಾರೂ
ಕೊಪ್ಪೀಗೇ ಚಿತ್ರಾ ಏನೆಂದೂ ಬರೆದಾರೂ
ಅತ್ಯಾಣಾಪುರದಾ ನವಿಲ್ಹಿಂಡೂ
ಆದಾವಿದ್ದಾಲೀ ಕಾದಾವೇ ಬಂಗಾರಾ
ಕಟ್ಟಾಣೀ ಮಾಟೇ ಹಸನಾದೂ
ಕಟ್ಟಾಣೀ ಮಾಟೀ ಹಸನಾದೂ ನಮ್ಮಾಚಾರ‌್ರಾ
ಹೊನ್ನಿನ ಜನಿವಾರೇ ಸಡದ್ಯಾವೂ                                                                           ॥

* * *1 ದೇವರು ಊರಿನ ಎತ್ತರವಾದ ಸ್ಥಳಗಳಲ್ಲಿ ನೆಲಸಿರುತ್ತಾರೆಂಬುದು ಒಂದು ಜನಪದ ಕಲ್ಪನೆ.