15. ಸಾಹೇಬರ ಮೇಲೆ ಪದ

ಅಲ್ಲಾ ಎಂದಾರೇ ಕಲ್ಲಾದೇವಾರಲ್ಲಾ
ಎಲ್ಲಾರಿಗುಂಟೂ ಶಯಸ್ವಾಮೀ
ಮುಲ್ಲಾ ಎಂದಾರೇ ಮೊದಲೂ ಹುಟ್ಟಿದ ಶಾಸ್ತ್ರ
ಬಲ್ಲವರೀ ಶಾಸ್ತ್ರಾ ತಿಳಿದೋದೀ
ಕಟ್ಟೇ ಎಂದಾರೇ ಕಣಿವೇಯಾ ಕೆಳಗುಂಟೂ
ಹಣೆಗೇರಿಯಲ್ಲಿ ಶಯಸ್ವಾಮೀ
ಹಣೆಗೇರಿಯಲ್ಲಿ ಶಯಸ್ವಾಮೀ ದರ್ಶನಕೇ
ಮಹಜಾರು ಹೊರಟಾರೂ ಹೊರಪಯಣಾ
ಶುಕ್ರೂವಾರಾ ದಿವಸಾ ಸಕ್ಕರೇ ಓದಿಕೆಮಾಡೀ
ಮಕ್ಕಳಾ ಫಲವಾ ಬೇಡ್ಯಾರೂ                                                                            ॥1 ॥

ಮೆಕ್ಕಾಕೆ ಹೋದಾರೇ ಮೋಕ್ಷಾದ ಫಲವುಂಟೂ
ಸತ್ಯಾದಾ ಸ್ಥಳವೇ ಅಲ್ಲುಂಟೂ
ಉದ್ದಾ ಕತ್ತೀಯವರೂ ದೊಡ್ಡಾ ಮುಂಡಸದವರೂ
ಓದೂತ್ತೋಂದೋಲೇ ಬರೆಯುವರೂ
ಓದುತ್ತೋಂದೋಲೇ ಬರೆವಾ ನಮ್ಮ ಸಾಹೇಬರಿಗೇ
ದಂಡಿನಾ ವಾಲೇಗಳೂ ಬಂದಾವೂ
ಕತ್ತೀ ಹಿರಿದಾರೂ ಕಲ್ಲಾ ಮೇಲೆ ಇಟ್ಟಾರೂ
ನೆತ್ತೀಯಾ ಜುಂಗಾ ಕೆದಿರ‌್ಯಾರೂ
ನೆತ್ತೀಯಾ ಜುಂಗಾ ಕೆದಿರ‌್ಯಾರೂ ನಮ್ಮ ಸಾಹೇಬರೂ
ಕುದುರೇಗೇ ಜೀನಾ ಬಿಗಿಸ್ಯಾರೂ                                                                       ॥2 ॥

ಚಾಕೂ ಹಿರಿದಾರೂ ಬಗಲಲ್ಲೂ ಇಟ್ಟಾರೂ
ಬಗರೂ ಗಡ್ಡಗಳಾ ಕೆದಿರ‌್ಯಾರೂ
ಚೂರೀ ಹಿರಿದಾರೂ ಸೊಂಟದಲಿ ಸೆಕ್ಕಾರೂ
ಚೂರೂ ಗಡ್ಡಗಳಾ ಕೆದಿರ‌್ಯಾರೂ
ಚೂರೂ ಗಡ್ಡಗಳಾ ಕೆದಿರ‌್ಯಾರೂ ನಮ್ಮ ಸಾಹೇಬರೂ
ಆನೆಗಂಬಾರೀ ಬಿಗಿಸ್ಯಾರೂ
ಆನೆಗಂಬಾರೀ ಬಿಗಿಸ್ಯಾರೂ ನಮ್ಮ  ಸಾಹೇಬರೂ
ಆನೇಯಾ ಮೇಲೇ ರಥನೇರಿ                                                                                    ॥

ಆನೇಯಾ ಮೇಲೇ ರಥನೇರಿ ನಮ್ಮ ಸಾಹೇಬರೂ
ದಂಡಿನ ಬಯಲೀಗೇ ನಡೆದಾರೂ
ತಲೆನೂರು ಹೊಡೆದಾರೂ ಒಲೆಗುಂಡಾ ಹೂಡ್ಯಾರೂ
ಅಲ್ಲೇ ಸಾಹೇಬರಿಗೇ ಹಗಲೂಟಾ
ಬಾಳೇ ಮರನಡಿಯಾ ಬಾಗೀಬಂದವು ಬಾಣಾ
ಹಾರ‌್ಯಾಡಿ ದಂಡಾ ಕಡಿದಾರೂ
ನುಗ್ಗೀಮರನಡಿಯಾ ಬಗ್ಗೀ ಬಂದವು ಬಾಣಾ
ಬಿಗಿದಾಡೀ ದಂಡಾ ಕಡಿದಾರೂ                                                                                ॥

ಮೀರಾ ಪೀರೆಂಬುವರೂ ದಾರೀ ದಾರೀಲಿ ತಡೆದೂ
ಹೋರ‌್ಯಾಡೀ ದಂಡಾ ಕಡಿದಾರೂ
ಹಸೆನ್ ಹುಸೇನ್ ಮಸೂದೀ ವಳಗುಂಟೂ
ಮತ್ತೇಳೂ ದಿನಕೇ ತಲೆದೋರೀ
ಏಳೆಂಬಾ ದಿನಕೇ ತಲೆದೋರೀ ನಮ್ಮ ಸ್ವಾಮೀ
ಹತ್ತೆಂಬಾ ದಿನಕೇ ಕತ್ತಾಲೇ                                                                                       ॥

ಹತ್ತೆಂಬಾ ದಿನಕೇ ಕತ್ತಾಲೇ ರಾತ್ರಿಯು
ಸತ್ತೀಗೇ ಮೇಲೇ ಸಮಲಗ್ಗೇ
ಸತ್ತೀಗೇ ಮೇಲೇ ಸಮಲಗ್ಗೇ ನಾಡುತ್ತಾ
ಸುತ್ತೇಳು ಸಮುದ್ರದಾ ಜಳಕಾವೇ
ಸುತ್ತೇಳೂ ಸಮುದ್ರದಾಜಳಕಾವಾ ಮಾಡಿಕೊಂಡೂ
ಮೊಕ್ಕಾ ಮಸೂ [ದೀಲೆ?] ನೆಲೆಗೊಂಡಾ         ॥

* * *

16. ಮುಸ್ಲಿಂ ಜಾತಿಯ ಮೇಲಿನ ಪದ

ಗೈಲು ಗೈಲೆಂಬುತಾ
ದೊಡ್ಡೆಂಬ ದೊರೆರಾಯ್ರ ಜಣಿರೆಂಬುತಾ

ಎಲ್ಲ ದೇವರಿಗು ಏನು ಪೂಜೆನಾದರೆ
ಹಣ್ಣು ಕಾಯಿಗಳೇ ಬಲುಪೂಜೆ

ಬುಡ್ನಾಗಿರಿ ಸ್ವಾಮಿಗೆನಾ ಪೂಜೇನಾದರೆ
ಲೋಬಾನದೊಗೆಯೇ ಬಲುಪೂಜೆ

ಲೋಬಾನದೊಗೆಯೇ ಬಲುಪೂಜೇನಾದರೆ
ಬುಡ್ನಾಗಿರಿ ಸ್ವಾಮಿಗೆ ಸಕ್ಕರೆ ಸೇರುಗಳೇ ಬಲುಪೂಜೆ

ದೊಡ್ಡ ದೊಡ್ಡ ಸೈಬಾರೆ ದೊಡ್ಡಂಗಡಿ ಸೈಬಾರೆ
ಅಡ್ಡಾಗಲ ಮೇಲೆ ಮನಿಮಾರು-ನಮ ಸೈಬಾರೆ
ಬಡ್ಡಿ ಸೆಳೆದಾರು ತಲೆನೂರು

ಅಗಲ ಮೈಯಾದವರೆ ಬುಗರಿ ಗಡ್ಡದವರೆ
ಬುಟ್ಟೇಲಿ ಬುಗುರಿ ತಿರುಗೋರೆ- ನಮ್ಮ ಸೈಬಾರೆ
ನೀರುಳ್ಳಿ ಸೇರು ತರಹೇಳಿ

ಸಣ್ಣ ಸಣ್ಣ ಸೈಬಾರೆ ಸಣ್ಣಂಗಡಿ ಸೈಬಾರೆ
ಸಣ್ಣಾ ಸಾಗಲ ಮೇಲೆ ಮನಿಮಾರು- ನಮ ಸೈಬಾರು
ಹಾರಿ ಸೆಳೆದಾರು ತಲೆನೂರು

ಗರಗರ ವಾಲೇನ ಏನೆಂದು ಬರೆದಾರು
ಮೈಸೂರಲಿಂದ ಹೊರಟಾರು- ನಮ ಸೈಬಾರು
ಹತ್ಯಾರು ವೈನಾದ ಕುದುರೇಯ

ಕುದುರೆ ಬಂದಾವೆ ತುದಿಗಾಲಲಿ ನಿಂದಾವೆ
ಚೀಬು ತಾರಯ್ಯ ಕುದುರೆಗೆ

ಅಂಗೀಯರಮಾನೆ ಅಂಗೀಯ ಗುರುಮಾನೆ
ಅಂಗಿ ಸಲಿಸೈತೆಂದಾರ ಮಾನೆ-ನಮ ಸೈಬಾರು
ಅಂಗಿಲ್ಲದೊರೆಗೆ ಹೊರಡಲ್ಲ

ಲುಂಗಿಯರಮಾನೆ ಲುಂಗಿಯ ಗುರುಮಾನೆ
ಲುಂಗಿ ಸಲಿಸೈತೆಂದರಮಾನೆ-ನಮ ಸೈಬಾರು
ಲುಂಗಿಲ್ಲದೊರೆಗೆ ಹೊರಡಲ್ಲ

ಟೋಪಿಯರಮಾನೆ ಟೋಪಿ ಗುರುಮಾನೆ
ಟೋಪಿ ಸಲಿಸೈತೆಂದರಮಾನೆ-ನಮ ಸೈಬಾರು
ಟೋಪಿಲ್ಲದೊರೆಗೆ ಹೊರಡಲ್ಲ

ತಕಡೆಯರಮಾನೆ ತಕಡೆ ಗುರುಮಾನೆ
ತಕಡೆ ಸಲಿಸೈತೆಂದರಮಾನೆ-ನಮ ಸೈಬಾರು
ತಕಡಿಲ್ಲದೊರೆಗೆ ಹೊರಡಲ್ಲ

ಚೂರಿಯರಮಾನೆ ಚೂರಿ ಗುರುಮಾನೆ
ಚೂರಿ ಸಲಿಸೈತೆಂದರಮಾನೆ-ನಮ ಸೈಬಾರು
ಚೂರಿಲ್ಲದೊರೆಗೆ ಹೊರಡಲ್ಲ

* * *