8. ಜೋಗಿ ಹಾಡು

ಅಣ್ಣಯ್ಯ ನಿನಮಡದಿ ಹೊನ್ನೂರಿಗೂ ಕರೆತಂದೆ
ಜೋಗಿ ಜಂಗಮರಿಗೆ ಅರಸುದೊಡ್ಡವರಿಗೆ ಒಲಿವಾಳು
ಎಂಬ ಸುದ್ದಿ ನಿನ್ನೆ ಕಂಡೆ ಹೊನ್ನೂರ ಹೊಳೆಯಲ್ಲಿ
ಅಷ್ಟೆಂಬ ಮಾತ ಕೇಳ್ಯಾನೆ ರಾಯ
ಹೊರಟಾನು ಹೊಳಿಕಡಿಗೆ ಯಾಸ ಮರ‌್ಸಿಕೊಂಡು
ನಂದೊಂದೇ ಬಟ್ಟೆ ಸೆಳೆಕೊಂಡು ಅಂದಾನು
ರಾಯರ ಬಟ್ಟೆಲ್ಲದೆ ಇನ್ಯಾರ ಬಟ್ಟೇಯ
ಮುಟ್ಟುವಂಥ ಮಗಳಲ್ಲ ಎಂದಾಳು
ಅಷ್ಟೆಂಬ ಮಾತು ಹೇಳ್ಯಾಳು ಕುಸುಮಾಲೆ
ತನ್ನರಮನೆಗೆ ಹೊರಟಾಳು
ಕಾಸಿನಾಡಿಂದ ದಂಡೆತ್ತಿ ಬಂದಾರು
ಹೋಗಿ ಬರುತೇನೆ ಮನೆ ಜೋಕೆ
ಮನೆಜೋಕೆ ಜನಜೋಕೆ ಕುಸುಮಾಲೆ ನೀ ಜೋಕೆ
ಹಿಂತಿರುಗಿ ಬರುತೇನೆ ಬಲುಬ್ಯಾಗ
ಉಪ್ಪರಿಗೆ ಮ್ಯಾಲೆ ಹೋದಳು ಕುಸುಮಾಲೆ
ಗುಡ್ಡದೊತ್ತಿಂದಲೊಬ್ಬ ಜೋಗಿ ಇಳಿದಾನು
ಬಂದನು ಬೈರೇಜೋಗಿ
ನಿಂದನು ಅಂಗಳದಲ್ಲಿ ಬಲವಲದೆ ಜೋಗಿ ಕುಳಿತಾನು
ಯಾರಮ್ಮ ಮನಿಯೊಳಗೆ ಯಾರಮ್ಮ ಮಠದೊಳಗೆ
ಬೈರೇಜೋಗಿಗೆ ಪಡಿಯಾ ನೀಡಿ ಬನ್ನಿ
ಮರದಲ್ಲೆ ಮುತ್ತ ಮಗೆದಾಳು ಕುಸುಮಾಲೆ
1ಅತಿಗೇರ1 ಕೂಡ್ಹೋಗಿ ಕೊಡಿಬನ್ನಿ ಎಂದಾಳು
ಅತಿಗೇರು ಕೊಟ್ಟ ಪಡಿಯಾ ಮುಟ್ಟಂತ ಮಗನಲ್ಲ
ನೀನು ಬಾರೆ ಪಡಿಯಾ ಕೊಡುಬಾರೆ
ಮರದಲ್ಲಿ ಹೊನ್ನ ಮಗೆದಾಳು ಕುಸುಮಾಲೆ
ಹಿಡಿಯೋ ಬೈರೇಜೋಗಿ ನಿನ ಪಡಿಯ
ಹೊನ್ನ ಕೈಯೊಡ್ಡೋಕೆ ಹೊನ್ನೂರಿನಿಂದ ಬಂದವನಲ್ಲ
ಮರದಲ್ಲಿ ಅಕ್ಕಿ ಮಗೆದಾಳು ಕುಸುಮಾಲೆ
ಹಿಡಿಯೋ ಬೈರೆಜೋಗಿ ನಿನ ಪಡಿಯಾ
ಹೊಸಲಿಂದಾಚೆ ನಿಂತು ಕೊಟ್ಟರೆ
ಯಾವ ದೇವರಿಗೆ ಪ್ರೀತಿಯಮ್ಮ
ಹೊಸಲಿಂದಾಚೆಗೆ ಕಾಲ ತೆಗೆದಿಟ್ಟು
ಹಿಡಿಯೋ ಬೈರೇಜೋಗಿ ನಿನ್ನ ಪಡಿಯಾ
ಹೊತ್ತು 1ಕತ್ಯಾವು1

[1] ಹೊರಗೆ ಬೈಗಾದವು
ಇನ್ನೊಂದು ಮನಿಗೆ ನಡೆಜೋಗಿ
ಕಳಸಿ ಬಾರೆನ್ನ ನೆರಮನಿಗೆ
ಕಳಸಿ ಬರುವುದಕೆ ಕಂದಯ್ಯ ಬಿಡನಲ್ಲ
ಅತ್ತಿಗೇರ ಕೂಡಿ ಕಳಸೂವೆ
ನಿನ್ನ ಅತಿಗೇರು ಚೆಲ್ಲೇರು ಚೆದಿಗೇರು
ಕಲ್ಲಲ್ಲಿ ಮುಳ್ಳಲ್ಲಿ ಎಳೆದಾರು
ನೀನು ಬಾರೆ ನನ್ನ ಕಳಸೂದಕೆ
ಜಗಲಿ ಮೇಲೀಗ ಬಿಡಬೇಕು ಕುಸುಮಾಲೆ
ಜಗಲಿ ಮೇಲೀಗ ಬಾವರು ಮಲಗುವ ತಾವು
ಅಲ್ಲೇನು ಸ್ವಲ್ಪ ಎಡೆನಿಲ್ಲ
ಅಲ್ಲೇನು ಸ್ವಲ್ಪ ಎಡನಿಲ್ದ್ರೆ ಕುಸುಮಾಲೆ
ಮುರುವಿನ ಕೊಟ್ಟೀಗೆ ಕೋಣೇಲಿ
ಕರುಗಳ ಕಟ್ಟುವ ತಾವು ಬಿಡಬೇಕು
ಅಲ್ಲೇನು ಇಷ್ಟಿಂಬ ತಾವಿಲ್ಲ
ಅಲ್ಲೇನು ಇಷ್ಟಿಂಬ ತಾವಿಲ್ದ್ರೆ ಕುಸುಮಾಲೆ
ಕೋಣೆಯ ಒಳಗೆ ಬಿಡಬೇಕು
ಮಾಳಿಗೆ ಒಳಗೆ ಮಾವರು ಮಲಗುವ ತಾವು
ಅಲ್ಲೇನಿಷ್ಟಿಂಬ ಎಡನಿಲ್ಲ
ಅಲ್ಲೇನಿಷ್ಟಿಂಬ ಎಡನಿಲ್ದ್ರೆ ಕುಸುಮಾಲೆ
ಕೋಣೆಯ ಒಳಗೆ ಬಿಡಬೇಕು
ಕೋಣೆಯೊಳಗೆ ಅತ್ತಮ್ಮ ಮಲಗುವ ತಾವು
ಅಲ್ಲೆನಿಷ್ಟಿಂಬ ಎಡನಿಲ್ಲ
ಅಲ್ಲೆನಿಷ್ಟಿಂಬ ಎಡನಿಲ್ದ್ರೆ ಕುಸುಮಾಲೆ
ಅಡಗೀ ಮನೆಯೊಳಗೆ ಬಿಡಬೇಕು
ಅಡಗೀ ಮನೆಯೊಳಗೆ ನಾನು ಮಲಗುವ ತಾವು
ಅಲ್ಲೆನಿಷ್ಟಿಂಬ ಎಡನಿಲ್ಲ
ಅಷ್ಟೆಂಬ ಮಾತು ಹೇಳ್ಯಾಳು ಕುಸುಮಾಲೆ
ಮಾವಿದ್ದರಮನಿಗೆ ಹೋಗ್ಯಾಳು
ಎಂದು ಬರದಿದ್ದ ಕುಸುಮಾಲೆ ಇಂದೇನು ಬಂದೀಯಾ
ಎತ್ತಿಂದ್ಲೂ ಒಬ್ಬ ಕೆಟ್ಟ ಬೈರೇಜೋಗಿ ಬಂದವ್ನೆ
ಇಕ್ಕಿದರೆ ಒಲ್ಲ ಪಡಿಒಲ್ಲ
ನನ್ನ ಮನೆಯಲ್ಲೆ ಇರಗೊಡ
ಇನ್ನು ನಿನ್ನ ಮನೆಯಲ್ಲಿ ಇರಗೊಡನಾದರೆ
ಹೊಡೆದಟ್ಟಿ ಅವನ ಅರಮನಿಗೆ
ಮಾವಗೆ ದಿನ ಹೋಗಿದ್ದು ಮಾವಿನ ಮರಕ್ಕೆ ಹೋದಂಗೆ
ಗಂಡಸಿನ ಹೆಂಗಸು ಹೊಡಿಬೋದೆ
ಅಷ್ಟೆಂಬ ಮಾತು ಹೇಳ್ಯಾಳು ಕುಸುಮಾಲೆ
ಅತಿಗಿದ್ದೀರ ಮನೆಗೆ ನಡೆದಾಳು
ಎಂದು ಬರದಿದ್ದ ಕುಸುಮಾಲೆ ಇಂದೇನು ಬಂದೀಯಾ
ಎತ್ತಿಂದ್ಲೊ ಒಬ್ಬ ಕೆಟ್ಟ ಬೈರೇಜೋಗಿ ಬಂದವ್ನೆ
ಇಕ್ಕಿದರೆ ಒಲ್ಲ ಪಡಿ ಒಲ್ಲ
ನನ್ನ ಮನೆಯಲ್ಲೆ ಇರಗೊಡ
ನಿನ್ನ ಮನೆಯಲ್ಲಿ ಇರಗೊಡನಾದರೆ
ಹಂಡೇಲಿ ಏಳೆಮ್ಮೆ ಕರೆದ ನೊರೆಹಾಲು
ಪಾಯಸಮಾಡಿ ಇಬ್ಬರೊಟ್ಟುಣ್ಣಿ ಹಗಲೂಟ
ಅಷ್ಟೆಂಬ ಮಾತು ಕೇಳ್ಯಾಳೆ ಕುಸುಮಾಲೆ
ತನ್ನರಮನೆಗೆ ಬಂದಾಳೆ
ಹಂಡೇಲಿ ಏಳೆಮ್ಮೆ ಕರೆದ ನೊರೆಹಾಲು
ಪಾಯಸಮಾಡಿ ಬೈರೇಜೋಗಿಗೆ ಈಗ ಹಗಲೂಟ
ಎಲ್ಲದಿಕ್ಯಾಳು ಉಪ್ಪಿನಕಾಯಿ ಮರೆತಾಳು
ಉಪ್ಪಿನಕಾಯಿ ಮತ್ತಿಕ್ಕಾಕೆ ಬಂದಾಗ
ತಟ್ಟನೆ ಮುಂಗೈ ಹಿಡಿದಾನು ಬೈರೇಜೋಗಿ
ಮಾಳಿಗೆ ಒಳಗೆ ಹೋದಾಳು ಕುಸುಮಾಲೆ
ಬೆಳ್ಳಿಯ ನೇಣು ತಕ್ಕೊಂಡು
ಬಾಳೆಯ ವನಕೆ ನಡೆದಾಳು
ಬಾಳೆಯ ವನಕೆ ನಡೆದಾಳು ಕುಸುಮಾಲೆ
ನಿಂಬಿಯಾ ಮರಕೂ ಸರಿನೇಣು ಆದಾಗ
ಹಿತ್ತಲ ಹೊರಗೆ ಹಣಿಕ್ಯಾನು ಬೈರೇಜೋಗಿ
ನಿಂಬಿಯಾ ಹರಿಯಾ ಸರಿನೇಣು ಕಂಡಾನು
ಬಗಲಲ್ಲಿದ್ದ ಬಾಕು ತೆಗೆದಾನು ಬೈರೇಜೋಗಿ
ನಿಂಬಿಯಾ ಹರಿಯಾ ಕೊಯ್ದನು
ಬಾಳೆಹಣ್ಣಿನ ಹಾಗೆ ಭಾವಿಸಿ ದಂಡಿಗೆ ಹೋದೆ
ನಾರಿ ನನ್ನ ಗುರುತ ಮರತೇನೆ
ನಿಂಬಿಹಣ್ಣಿನ ಹಾಗೆ ನಂಬಿಸಿ ದಂಡಿಗೆ ಹೋದೆ
ನಾರಿ ನನ್ನ ಗುರುತಾ ಮರತೇನೆ

* * *

9. ಉತ್ತರದೇವಿ ಹಾಡು

ಅಂಗಳದ ಬಾವಿಗೆ ಅರಗೀನ ಮುಚ್ಚಳ
ಅರಗರಗಿ ನೀರಾ ಮಗಿಯೋಳುತ್ತರದೇವಿ
ಅಲ್ಲೊಬ್ಬ ಜಾಣ ಕಂಡೂ ತಡುದಾನೆ                                                        ॥ಸುವ್ವಿ ॥

ತಡೆದೇನ್ಹೆಳಾನೆ ಬಾಯಾರಿಗೆ ನೀರಾ ಕೊಡುವೇನೆ
ನಿನಗೆ ನೀರು ಕೊಡುವಾಕೆ
ನಿನಗಿಂತ ಚೆಲುವಾರು ಹೋಗಯ್ಯ ಜಲಧೀಗೆ    ॥ಸುವ್ವಿ ॥

ಹರಿವ ನೀರು ಹಾಸಿಂಬೆ ಗುಮ್ಮಿ ನೀರು ಕೆಂಗಣಕು
ನಿನ್ನ ಕೈಯಾನ ನೀರೇ ಸವಿರುಚಿ
ಎಲೆ ಹೆಣ್ಣೆ ಬಾಯಾರಿಗೆ ನೀರಾ ಕೊಡು ಹೆಣ್ಣೆ     ॥ಸುವ್ವಿ ॥

ನೀರಿಗೆ ಹೋದಾಳು ನೀರ್ಗಲ್ಲ ದುರ್ಗಕ್ಕೆ
ತಡವಾದರತ್ತೆ ಬಯ್ದಳು ಬಯ್ನಕಡೆಗೆ
ಗಿಳಿಬಂದು ನೀರ ಕಣಿಕ್ಯಾವು
ಜಾರುಗಲ್ಲು ಹತ್ತಿ ಜಾರ‌್ಬಿದ್ದು ಕೊಡ ಒಡದ್ಹೋಯ್ತು  ॥ಸುವ್ವಿ ॥

ಮಳೆ ಬರುತಿದೆಯೆಂದು ಮರನಾ ಬಳಿ ನಾ ಪೋದೆ
ಕಾಯ್ದೆದ್ದು ಕಡಗ ಒಡೆದೋಯ್ತು ಅತ್ತಮ್ಮ
ಜೋಕಲಿ ಬಿದ್ದು ಸೀರೆ ಹರಿದೋಯ್ತು                                                         ॥ಸುವ್ವಿ ॥

ಅತ್ತೆಯ ಕಾಲದ ಕೊಡ ಮಾವನ ಕಾಲದ ಕೊಡ
ಎತ್ತಿ ಹಾಕಿ ಬಂದೇನೆ ಸೊಸಿಮುಂದೆ                                                        ॥ಸುವ್ವಿ ॥

ಚಿನ್ನಾದ ಕೊಡವಲ್ಲ ರನ್ನಾದ ಕೊಡವಲ್ಲ
ಮಣ್ಣೀನ ಕೊಡಕೇನ ಮಿಟಗೀರಿ ಅತ್ತೆಮ್ಮ
ಅಣ್ಣಯ್ಯನ ಕೈಲಿ ಕೊಡತಾನು ತರಿಸೀನು                                                ॥ಸುವ್ವಿ ॥

ಕೊಡ ಹೋದರೆ ಹೋಗಾಲಿ ಬಳೆ ಹೆಂಗೆ ಒಡೆದೀತು
ಮಾವನ ಮನೆಯ ಸರಳೆಮ್ಮೆ ಬಿಡುತ್ತಿದ್ದೆ
ಕೋಡು ಹೊಡೆದು ಬಳೆಯು ಒಡೆದೊಯ್ತು   ॥ಸುವ್ವಿ ॥

ಬಳೆ ಹೋದಾರೆ ಹೋಗಲಿ ಸೀರೆಂಗೆ ಹರಿದೋಯ್ತು
ಮಾವನ ಮನೆಯ ತೋಟಕೆ ಹೋಗಿದ್ದೆ
ಬಾಳೆಮುಳ್ಳು ಹೊಡೆದು ಸೀರೆ ಹರಿದೋಯ್ತು  ॥ಸುವ್ವಿ ॥

ಬಾಳೆಗೆ ಮುಳ್ಳುಂಟೆ ಬಸಳೀಗೆ ಕೆಂಚುಂಟೆ
ಸೊಸೆಯೇ ನಿನಮಾತು ನಿಜವುಂಟೆ                                                         ॥ಸುವ್ವಿ ॥

ನೀರಿಗೆ ಹೋದಾಳು ನೀರ್ಗಲ್ಲ ದುರ್ಗಕೆ
ತಡವಾದರತ್ತೆ ಬಯ್ದರು ಬಯ್ನಕಡೆಗೆ                                                        ॥ಸುವ್ವಿ ॥

ಗಿಳಿ ಬಂದು ನೀರ ಕಣಿಕ್ಯಾವು
ಜಾರುಗಲ್ಲ ಹತ್ತಿ ಜಾರ‌್ಬಿದ್ದು ಕೊಡ ಒಡೆದೋಯ್ತು   ॥ಸುವ್ವಿ ॥

ಅತ್ತೇಗೂ ಸೊಸೀಗೂ ಹತ್ತೀತು ಎಲೆಕದನಾ
ಹಿತ್ತಲ ಹೊರಗೆ ಒಲೆ ಹೂಡಿ
ಹಿತ್ತಲ ಹೊರಗೆ ಉತ್ತೇಯ ಮರನಡಿ ಒಲೆಹೂಡಿ  ॥ಸುವ್ವಿ ॥

ಉಕ್ಕೇಬಿಟ್ಟ ಮಗನೀಗ ಹಗಲೂಟ ಬಡಿಸಾಗ
ಒಂದೊಂದು ಚಾಡಿ ಹೇಳ್ಯಾಳು   ॥ಸುವ್ವಿ ॥

ಮಾತಿಗುತ್ತರ ಪ್ರತಿಯುತ್ತರ ಕೊಡುತಾಳೆ
ಉತ್ತರದೇವೆಂಬ ಸೊಸಿ ಬ್ಯಾಡ   ॥ಸುವ್ವಿ ॥

ಕುತ್ಕು ಕುಟ್ಟೀನು ಕುಡ್ಕ್ಯಾಗೆ ನೀರು ಹೊತ್ತೀನು
ಉತ್ತರದೇವೆಂಬ ಸೊಸಿಬ್ಯಾಡ
ಕಳ್ಸಿ ಬಾರವಳ್ನಿ ತವರೀಗಿ             ॥ಸುವ್ವಿ ॥

ಕಳ್ಸಿ ಬರುವುದಕೇನು ಸುಮ್ಮನೆ ಬಂದೋಳಲ್ಲ
ಸಾವಿರಕೂಡಿ ಸಭೆಕೂಡಿ
ಸಾವಿರೆಂಬುದು ನಮ್ಮ ಹಾಲಿನ ಬೆಲೆ ಇಲ್ಲ
ಹಾಲು ಮಾರವಳ್ನ ತರಬೋದು  ॥ಸುವ್ವಿ ॥

ಉತ್ತರಕುತ್ತರ ಪ್ರತಿಯುತ್ತರ ಕೊಡುತಾಳೆ
ಉತ್ತರದೇವೆಂಬ ಸೊಸಿಬ್ಯಾಡ – ಎಲೆಮಗನೆ
ಬಿಟ್ಟರೆ ಬಿಡುಮಗನೆ ಮಡದೀಯಾ                                                            ॥ಸುವ್ವಿ ॥

ಮಡದಿ ಬಿಡುವೋಕೆ ಎಪ್ಪತ್ತು ಕೊಟ್ಟಿದೀನಿ
ಹೆತ್ತಮ್ಮನಿಗೆ ನಾ ಮರುಳಾದೆ
ಎಪ್ಪತ್ತು ಕೊಟ್ಟರೂ ನನ್ನ ಕೊಪ್ಪೀನಾ ಬೆಲೆ ಇಲ್ಲ
ಬಿಟ್ಟರೂ ಬಿಡುಮಗನೆ ಮಡದೀಯಾ                                                         ॥ಸುವ್ವಿ ॥

ಕೊಪ್ಪು ಮಾಡೆಣ್ಣಾ ತರುತೀನಿ
ಅತ್ತೇಗೂ ಸೊಸೀಗೂ ಹತ್ತೀತು ಕದನಾ
ಹಿತ್ತಾಲ ಹೊರಗೆ ಒಲಿಹೂಡಿ ಅಡಗಿಮಾಡಿ  ॥ಸುವ್ವಿ ॥

ಹರಗಾಕ್ಹೋಗ ಮಗನೀಗೆ ಹಗಲೂಟಿ
ಹಗಲೂಟ ನಿಕ್ಕಿಕೊಂಡು ಹೇಳ್ಯಾಳು
ಬಿಟ್ಟರು ಬಿಡುಮಗನೆ ಮಡದೀಯಾ                                                          ॥ಸುವ್ವಿ ॥

ಮಡದಿ ಬಿಡುವೋಕೆ ಎಂಬತ್ತು ಕೊಟ್ಟಿದೀನಿ
ಹಡೆದಮ್ಮನಿಗೆ ನಾ ಮರುಳಾದೆ
ಎಂಬತ್ತು ಕೊಟ್ಟರೂ ನನ್ನ ಬಂದಿಯಾ ಬೆಲೆ ಇಲ್ಲ
ಬಂದಿ ಮಾರಿ ಹೆಣ್ಣಾ ತರುತೀನಿ   ॥ಸುವ್ವಿ ॥

ನಾನು ತರುವಾಗ ಇಷ್ಟು ದೊಡ್ಡಾನ ಮಾತಿರ‌್ಲ
ಈಗೆಲ್ಲಿ ಕಲಿತೆ ತಿಪುರಾನ              ॥ಸುವ್ವಿ ॥

ನಟ್ಟಾ ಮಲ್ಲಿಗೆ ನಟ್ಟಂತೆ ಇರುವೂದೆ
ಚಪ್ಪರಕೊಂದು ಜೋಲು ನಸೆದಾವು
ಗಣ್ಣು ಗಣ್ಣಿಗೂ ಮೊಗ್ಗೆ ಅರಳ್ಯಾವು                                                             ॥ಸುವ್ವಿ ॥

ಉತ್ತರಕುತ್ತರ ಪ್ರತಿಯುತ್ತರ ಕೊಡುತಾಳೆ
ಉತ್ತರದೇವೆಂಬ ಸೊಸಿಬ್ಯಾಡ
ಕಳ್ಸಿ ಬಾರವಳ್ನಿ ತವರೀಗಿ             ॥ಸುವ್ವಿ ॥

ಕಳ್ಸಿ ಬರುವುದಕೇನು ಸುಮ್ಮನೆ ಬಂದವಳಲ್ಲ
ಸಾವಿರಕೂಡಿ ಸಭೆಕೂಡಿ ಬಂದವಳ
ಕಳ್ಸಿ ಬರಲಾರೆ ತವರೀಗಿ              ॥ಸುವ್ವಿ ॥

ನೆರೆಮನೆ ಅಕ್ಕಾ ಕೇಳಿ ನೆರಮನೆ ಬಾವ್ನಾ ಕೇಳಿ
ನನ್ನತ್ತೆ ನನ್ನ ಉರಿಸಿದ್ದು
ಬೆಂಕಿಮ್ಯಾಲೆ ಬಾನ ಬಸಿಯಂದ್ರು ನಮ್ಮತ್ತೆ
ಆ ಕೆಲ್ಸ ನನಗೆ ತಿಳಿದಿಲ್ಲ                ॥ಸುವ್ವಿ ॥

ಸಣ್ಣೇಲಿ ಸಾಸುವೆ ಮೊಗೆಯಂದ್ರು ನಮ್ಮತ್ತೆ
ಈ ಕೆಲ್ಸ ನನಗೆ ತಿಳಿದಿಲ್ಲ
ನಡು ಹೊಳೆಯಾಲಿ ಮೊಸರ ಕಡೆಯೆಂದಾರು ನಮ್ಮತ್ತೆ
ಆ ಕೆಲ್ಸ ನನಗೆ ತಿಳಿದಿಲ್ಲ                ॥ಸುವ್ವಿ ॥

ಆ ಕೆಲ್ಸ ನಿನಗೆ ತಿಳಿದಿದ್ರೆ ಉತ್ತರದೇವಿ
ಓಡ್ಹೋಗೆ ನಿನ ತವರೀಗಿ               ॥ಸುವ್ವಿ ॥

ಓಡಿಹೋಗುವುದಕೇನು ಓಡಿಬಂದವಳಲ್ಲ
ಹೇಳ್ಹೋಗುವೆ ನನ್ನಾ ಪುರುಷಾಗೆ                                                              ॥ಸುವ್ವಿ ॥

ಒಂಟೇ ಸಾಲೆಗೆ ಹೋದಳುತ್ತರದೇವಿ
ಒಂಟೇ ನೂರೊಂಟೆ ಮರಿನೂರು
ಮರಿಗಳಿರಾ ನಾ ಹೋತೀನಿ ನನ್ನ ತವರೀಗೆ  ॥ಸುವ್ವಿ ॥

ನೀ ಹೋದಾರೆ ನೀರು ಹೊಯ್ಯುವರ‌್ಯಾರೆ
ಹುಲ್ಲು ಹಾಕುವರ‌್ಯಾರೆ ನಾವು ಬರ‌್ತೀವಿ ನಿನಹಿಂದೆ
ನೀರು ಹೊಯ್ಯೋರು ಮಾವ ಹುಲ್ಲು ಹಾಕೋರತ್ತ್ಯಮ್ಮ
ನಾ ಹೋಗುವೆ ನನ ತವರೀಗೆ     ॥ಸುವ್ವಿ ॥

ಆನೆ ಸಾಲೆಗೆ ಹೋದಳುತ್ತರದೇವಿ
ಆನೆ ನೂರಾನೆ ಮರಿನೂರು
ಮರಿಗಳಿರಾ ನಾ ಹೋತೀನಿ ನನ್ನ ತವರೀಗೆ   ॥ಸುವ್ವಿ ॥

ನೀ ಹೋದಾರೆ ನೀರು ಹೊಯ್ಯುವರ‌್ಯಾರೆ
ಹುಲ್ಲು ಹಾಕುವರ‌್ಯಾರೆ ನಾವು ಬರ‌್ತೀವೆ ನಿನಹಿಂದೆ
ನೀರು ಹೊಯ್ಯೋರು ಮಾವ ಹುಲ್ಲು ಹಾಕೋರತ್ತಮ್ಮ
ನಾ ಹೋಗೂವೆ ನನ ತವರೀಗೆ   ॥ಸುವ್ವಿ ॥

ಕುದುರೆ ಸಾಲೆಗೆ ಹೋದಳುತ್ತರದೇವಿ
ಕುದುರೆ ನೂರು ಕುದುರೆ ಮರಿನೂರು
ಮರಿಗಳಿರಾ ನಾ ಹೋತೀನಿ ನನ್ನ ತವರೀಗೆ  ॥ಸುವ್ವಿ ॥

ನೀ ಹೋದಾರೆ ನೀರು ಹೊಯ್ಯುವರ‌್ಯಾರೆ
ಹುಲ್ಲು ಹಾಕುವರ‌್ಯಾರೆ ನಾವು ಬರ‌್ತೀವಿ ನಿನಹಿಂದೆ
ನೀರು ಹೊಯ್ಯೋರು ಮಾವ ಹುಲ್ಲುಹಾಕೋರತ್ತ್ಯದು
ನಾ ಹೋಗುವೆ ನನ ತವರೀಗೆ     ॥ಸುವ್ವಿ ॥

ಕವುಲಿ ಕೊಟ್ಟಿಗೆಗೆ ಹೋದಳುತ್ತರದೇವಿ
ಕವುಲಿ ನೂರು ಕವುಲಿ ಕರುನೂರು
ಕರುಗಳಿರಾ ನಾ ಹೋತೀನಿ ನನ್ನ ತವರೀಗೆ  ॥ಸುವ್ವಿ ॥

ನೀ ಹೋದಾರೆ ಮುರುವಾ ಹಾಕುವರ‌್ಯಾರು
ಕರುವ ಬಿಡುವರ‌್ಯಾರು ನಾವು ಬರ‌್ತೀವಿ ನಿನಹಿಂದೆ
ಮುರುವಾ ಹಾಕೋರು ಮಾವ ಕರುವ ಬಿಡೋರತ್ತ್ಯಮ್ಮ
ನಾ ಹೋಗುವೆ ನನ ತವರೀಗೆ     ॥ಸುವ್ವಿ ॥

ಹೂವಿನ ವನಕೆ ಹೋದಳುತ್ತರದೇವಿ
ಹೂವು ನೂರೂವು ಮೊಗ್ನೂರು
ಗಿಡಗಳಿರಾ ನಾ ಹೋಗುವೆ ನನ ತವರೀಗೆ   ॥ಸುವ್ವಿ ॥

ನೀ ಹೋದಾರೆ ನೀರು ಹಾಕುವರ‌್ಯಾರೆ
ಹೂ ಕೊಯ್ಯುವರ‌್ಯಾರೆ ಹೂ ಮುಡಿಯುವವರು ಇನ್ಯಾರೆ
ಹೂ ಕೊಯ್ಯೋರು ಮಾವ ಮುಡಿಯೋಳತ್ತ್ಯಮ್ಮ
ನಾ ಹೋಗುವೆ ನನ ತವರೀಗೆ     ॥ಸುವ್ವಿ ॥

ಕಂಚಿ ನೂರ‌್ಕಂಚಿ ಗಿಡನೂರು
ಗಿಡಗಳಿರಾ ನಾ ಹೋತೀನಿ ನನ ತವರೀಗೆ  ॥ಸುವ್ವಿ ॥

ನೀ ಹೋದಾರೆ ಕಾಯು ಕೊಯ್ಯುವರಾರು
ನೀರು ಹೊಯ್ಯುವರಾರು ನಾವು ಬರುತೀವಿ ನಿನಹಿಂದೆ
ಕಾಯು ಕೊಯ್ಯೋರು ಮಾವಯ್ಯ ನೀರು ಹೊಯ್ಯರತ್ನಮ್ಮ
ನಾ ಹೋತೀನಿ ನನ ತವರೀಗೆ     ॥ಸುವ್ವಿ ॥

ನಿಂಬೀಯ ವನಕೆ ಹೋದಳುತ್ತರದೇವಿ
ನಿಂಬೆ ನೂರ‌್ನಿಂಬೆ ಗಿಡನೂರು
ಗಿಡಗಳಿರಾ ನಾ ಹೋತೀನಿ ನನ ತವರೀಗೆ  ॥ಸುವ್ವಿ ॥

ನೀ ಹೋದಾರೆ ಕಾಯು ಕುಯ್ಯುವರಾರು
ನೀರು ಹೊಯ್ಯುವರಾರು ನಾವು ಬರುತೀವಿ ನಿನಹಿಂದೆ
ಕಾಯು ಕೊಯ್ಯೋರು ಮಾವಯ್ಯ ನೀರು ಹೊಯ್ಕರತ್ಯಮ್ಮ
ನಾ ಹೋತೀನಿ ನನ ತವರೀಗೆ     ॥ಸುವ್ವಿ ॥

ದೊಡಲೀಯ ವನಕೆ ಹೋದಳುತ್ತರದೇವಿ
ದೊಡಲಿನೂರು ಗಿಡನೂರು
ಗಿಡಗಳಿರಾ ನಾ ಹೋತೀನಿ ನನ ತವರೀಗೆ  ॥ಸುವ್ವಿ ॥

ನೀ ಹೋದಾರೆ ಕಾಯು ಕೊಯ್ಯುವರಾರು
ನೀರು ಹೊಯ್ಯವರಾರು ನಾವು ಬರುತೀವಿ ನಿನಹಿಂದೆ
ಕಾಯು ಕೊಯ್ಯೋರು ಮಾವಯ್ಯ ನೀರು ಹೊಯ್ಯೋರತ್ನಮ್ಮ
ನಾ ಹೋತೀನಿ ನನ ತವರೀಗೆ     ॥ಸುವ್ವಿ ॥

ಉಪ್ಪರಿಯೊಳಗೆ ಹೋದಳುತ್ತರದೇವಿ
ಮಾವಯ್ನ ಸಿರಿಪಾದಕೆ ಶರಣೆಂದಾಳು
ಮಾವಯ್ನ ಸಿರಿಪಾದಕೆ ಶರಣೆಂದೇನು ಹೇಳ್ಯಾಳು
ನಾ ಹೋತೀನಿ ನನ ತವರೀಗೆ     ॥ಸುವ್ವಿ ॥

ನಾನೇನು ಹೊಡಿದೆನೆ ನಾನೇನು ಬಡಿದೇನೆ
ನೀವು ಹೊಡೆಯಲಿಲ್ಲ ನೀವೇನು ಬಡಿಯಲಿಲ್ಲ
ನಿಮ ಮಡದಿ ಕೂಡಿ ಇರಲಾರೆ
ನಾ ಹೋಗುವೆ ನನ್ನ ತವರೀಗೆ    ॥ಸುವ್ವಿ ॥

ಅಡಗಿ ಮಾಡರ‌್ಯಾರೆ ನನಗಿಕ್ಕಾರ‌್ಯಾರೆ
ನಾನು ಬರ್ತೀನಿ ನಿನಹಿಂದೆ
ಅಡಗಿ ಮಾಡೋರತ್ಯಮ್ಮ ನಿಮಗಿಕ್ಕೋರತ್ತ್ಯಮ್ಮ
ನಾ ಹೋತೀನಿ ನನ ತವರೀಗೆ     ॥ಸುವ್ವಿ ॥

ಉಪ್ಪರಿಯೊಳಗೆ ಹೋದಳುತ್ತರದೇವಿ
ಬಾವಯ್ನ ಸಿರಿಪಾದಕೆ ಸರಣೆಂದಾಳು
ಸರಣೆಂದೇನು ಹೇಳ್ಯಾಳು
ನಾ ಹೋತೀನಿ ನನ ತವರೀಗೆ     ॥ಸುವ್ವಿ ॥

ಅಡಗೀ ಮಾಡರ‌್ಯಾರೆ ನನಗಿಕ್ಕಾರ‌್ಯಾರೆ
ನಾನು ಬರ್ತೀನಿ ನಿನಹಿಂದೆ
ಅಡಗಿ ಮಾಡೋರತ್ತ್ಯಮ್ಮ ನಿಮಗಿಕ್ಕೋರತ್ಯಮ್ಮ
ನಾ ಹೋತೀನಿ ನನ ತವರೀಗೆ     ॥ಸುವ್ವಿ ॥

ಉತ್ತರದೇವಿ ದಂಡು ಕಿತ್ತೆದ್ದು ಹೋಗಾಗ
ಮುತ್ತೂರು ದೊರೆ ಕಂಡು ತಡುದಾನೆ
ತಡದೂ ಏನೆಂದು ಹೇಳ್ಯಾನೆ ಬಾ ತಂಗಿ ನಮ್ಮರಮನೆಗೆ
ಅಂದೇಳಿ ಮುತ್ತೂರ ಏರೀಲಿ ಕೊಟ್ಟಾರೆ ಉಡುಗೋರೆ
ಎಂತಾವ ಉಡುಗೊರೆ ಕಂಠೀಯ ಸರವೇ ಉಡುಗೊರೆ   ॥ಸುವ್ವಿ ॥

ಉತ್ತರದೇವಿನಾ ಮಾಳೂರ ದೊರೆ ಕಂಡು ತಡುದಾನೆ
ತಡೆದೂ ಏನೆಂದು ಹೇಳ್ಯಾನೆ ಬಾ ತಂಗಿ ನಮ್ಮರಮನೆಗೆ
ಉತ್ತರದೇವಿ ಅದಕೇನೆಂದು ಹೇಳ್ಯಾಳೆ
ನಿಮ್ಮರಮನೆಗೆ ಬರೋಕೆ ಅಣ್ಣಲ್ಲ ತಮ್ಮಲ್ಲ
ನಾ ಹೋಗುವೆ ನನ್ನ ತವರೀಗೆ    ॥ಸುವ್ವಿ ॥

ಇರುಳು ಚಂದ್ರನ ಬೆಳಕಲ್ಲಿ – ಉತ್ತರದೇವಿ
ಗೋಳೆಂದು ಹೊರಟಾಳು ಅಪ್ಪಯ್ಯನರಮನಿಗೆ  ॥ಸುವ್ವಿ ॥

ಅಪ್ಪಯ್ಯ ಕದ ತೆರಿಯೊ ಅಪ್ಪಾಜಿ ಕದ ತೆರಿಯೊ
ನನ್ನಪ್ಪ ನನಗೆ ಕದ ತೆರಿಯೊ – ಹೊಸಲಲ್ಲಿ
ನಾನು ನಿಲಲಾರೆ ಸೋತು ಬಂದೇನು                                                     ॥ಸುವ್ವಿ ॥

ಚಾಪೆ ಚೆನ್ನಾಗಿ ದೀಪ ದಿವ್ನಾಗಿ
ನಿಮ್ಮಮ್ಮ ಹೊರಗ್ಯವಳೆ – ಉತ್ತರದೇವಿ
ನೀ ಹೊಗವ್ವ ನಮ್ಮಮ್ಮನರಮನಿಗೆ                                                          ॥ಸುವ್ವಿ ॥

ಹೊತ್ತಾಳು ಪುತ್ರಯ್ನ ಎತ್ಯಾಳು ಪಿಟಾರಿಯ
ಇರುಳು ಚಂದ್ರನ ಬೆಳಕಲ್ಲಿ – ಉತ್ತರದೇವಿ
ದಂಡು ಕಿತ್ತೆದ್ದು ಹೊರಟಾವೆ ಅಮ್ಮನರಮನಿಗೆ  ॥ಸುವ್ವಿ ॥

ಅಮ್ಮ ಕದ ತೆರಿಯೆ ಅವ್ವ ಕದ ತೆರಿಯೆ
ನನ್ನವ್ವ ನನಗೆ ಕದ ತೆರಿಯೇ – ಹೊಸಲಲ್ಲಿ
ನಾನು ನಿಲಲಾರೆ ಸೋತು ಬಂದೇನು                                                     ॥ಸುವ್ವಿ ॥

ಒಂದರಿವೆ ತುಂಡು ಹಾಸಿದೆ ಒಂದರಿವೆ ತುಂಡು ಹೊಚ್ಚೀದೆ
ಒಂದೊರುಷ ನಿನ್ನ ಸಲುಹೀದೆ – ಉತ್ತರದೇವಿ
ನನ್ಪಾಡು ನಿನಗೆ ಬಂದೀತೆ           ॥ಸುವ್ವಿ ॥

ಮಿಳ್ಳೇಯ ಹಾಲಿಗೆ ಬೆಳ್ಳಷ್ಟು ತುಪ್ಪಹಾಕಿ
ಹತ್ವರ್ಷ ಸಲುಹೀದೆ – ಉತ್ತರದೇವಿ
ನನ್ಪಾಡು ನಿನಗೆ ಬಂದೀತೆ           ॥ಸುವ್ವಿ ॥

ಇಷ್ಟೆಂಬ ಸುದ್ದಿ ಕೇಂಡಾಳು ತಾಯವ್ವ
ಗೋಳೆಂದು ಅತ್ತಾಳು – ಉತ್ತರದೇವಿ
ಇದು ಏನೆಂದು ಕೇಳ್ಯಾಳು            ॥ಸುವ್ವಿ ॥

ನನ್ಗಂಡ ನನಗೆ ಈ ಗೋಳಿಟ್ಟಾನು
ನನ್ನತ್ತೆ ನನ್ನ ಒಡಲ ಉರಿಸ್ಯಾಳು – ನಮ್ಮವ್ವ
ಹೊಸಿಲ ಹೊರಗೆ ದೂಡ್ಯಾರು      ॥ಸುವ್ವಿ ॥

ಅವರೊಟ್ಟಿ ಉರಿಯಾಲಿ ಕಣ್ಣೆರಡು ಸೀಯಾಲಿ
ಸುಣ್ಣ ಸುರಿದಂಗೆ ಬೇಯಾಲಿ – ಉತ್ತರದೇವಿ
ದೀಪದೆಣ್ಣೆಯಾಗಿ ಉರಿಯಾಲಿ
ಅಮ್ಮನ ಕೂಡಿಕೊಂಡುತ್ತರದೇವಿ
ಗಂಗೇಯ ಬದಿಗೆ ನಡೆದಾಳು – ಏನೆಂದು ಕೆಂಡಾಳು
ಗಂಗಮ್ಮ ತಾಯಿ ಸೆಳೆಕೊಳ್ಳೆ

ತಾವರೇಯ ಹೂವಿನಮೇಲೆ ಕೂತುಕೊಂಡು
ಬೋ ತಪಸ್ಸು ಮಾಡ್ಯಾಳು ಶಿವನಿಗೆ – ಉತ್ತರದೇವಿ
ನಾಡಮೇಲುತ್ತರೆ ಮಳೆಯಾಗಿ ಹರಿದಾಳು

* * *[1] 1 ಗೌಡೇರ

 1 ಹೋದವು