5. ಬಸವನ ಪದ

ಬಸವ ಬಸವೆನ್ನಿರೊ
ಬಸವಾನ ಪಾದಕೆ ಸರಣೆನ್ನಿರೊ

ಬಸವಣ್ಣ ಹುಟ್ಟಾಗ ಹೊಸಪೇಟೆ ಕಟ್ಟಾಗ
ರಾಮ ರಸ್ತಾಳೆ ಬೆಳಿವಾಗ – ಕೋಣಂದೂರು
ಬಸವಣ್ಣನ ತೇರೆ ಹರುದಾವೆ

ಬಸವಣ್ಣನ ತಂಗಿ ಕುಸುಮಾಲೆ ಹುಟದಲ್ಲಿ
ಹಸುರ ಚಲ್ಲೊಡೆದು ಮಳೆಹೊಯ್ದ – ತಾನೆಲ್ಲಿ
ಕಸರು ಜಾತಕವೇ ಫಲಬಂದು

ತಾಳ ತಾಳರ ಸೇರಿ ಸರಿತಾಳ ಕಟಿಕೊಂಡು
ಮಲ್ನಾಡ ಬಯಲೀಗೆ ಹೊರಟಾರು

ತುಪ್ಪಾ ಅನ್ನವನುಂಡು ಪಟ್ಟೆ ಜೋತರ ಸುತ್ತಿ
ಮುತ್ತಿನ್ಹಣೆಯಾಗ್ಗ ಬಲಗೈಲಿ – ಹಿಡಕೊಂಡ
ಮುತ್ತೂರ‌್ದೊಳೇಗೆ ಹೊರಟಾರು

ಮತ್ತೂರ‌್ದೊಳೇಲಿ ಮತ್ತೇನು ಗದ್ದಲ
ಎತ್ತು ಬಸವಣ್ಣಾರ‌್ಹೊಳೆಮಿಂದು – ಬರುವಾಗ
ಮತ್ತಿನ ಸರಗಂಟೆ ನುಡುದಾವೆ

ಮುತ್ತಿನ ಸರಗಂಟೆ ಎನೆಂದು ನುಡುದಾವೆ
ದೇವರ ಬಸವಯ್ಗೆ ಸಿವಪೂಜೆ

ಹಾಲು ಅನ್ನವನುಂಡು ಸಾಲೆ ಜೋತರ ಸುತ್ತಿ
ಹೊನ್ನಿನ್ಹಣೆಯಾಗ್ಗ ಬಲಗೈಲಿ – ಹಿಡಕೊಂಡು
ಹೊನ್ನೂರ‌್ಹೊಳೇಗೆ ಹೊರಟಾರು

ಹೊನ್ನೂರ‌್ಹೊಳೇಲಿ ಇನ್ನೇನು ಗದ್ದಾಲ
ಹೋಗಿ ಬಸವಣ್ಣಾರ‌್ಹೊಳೆಮಿಂದು – ಬರುವಾಗ
ಹೊನ್ನಿನ ಸರಗಂಟೆ ನುಡುದಾವೆ

ಹೊನ್ನಿನ ಸರಗಂಟೆ ಏನೆಂದು ನುಡಿದಾವು
ಹೊನ್ನೂರ ದೇವರಿಗೊಂದು ಸಿವಪೂಜೆ

ಒಕ್ಕಾಳಕ್ಕಿಗೆ ಇಕ್ಕಾಳರಸಿನ ಹಾಕಿ
ಕುಂತೂ ಬೀಸಿದರೊಂದಗಲೆಲ್ಲಾ – ಇರುಳೆಲ್ಲಾ
ಕುಂತೂ ಸುಟ್ಟದರೊಂದಿನವೆಲ್ಲಾ

ಐಗಾಳಕ್ಕಿಯ ರೊಟ್ಟಿ ಅರಳೀಯ ಎಲೆಯಂಗೆ
ಆಯಾದಲಿ ಬಂದ ಬಿಳಿಯಾಲೆ – ಪಚ್ಚೆತ್ಯಾನೆ
ಹೊಂದಿದವೀಕೇರಿ ಬಸುವಯ್ಗೆ

ಮೂಗಾಳಕ್ಕಿಯ ರೊಟ್ಟಿ ಮುತುಗಾನ ಎಲೆಯಂಗೆ
ಒಪ್ಪಾದಲಿ ಬಂದ ಬಿಳಿಯಾಲೆ – ಉತ್ರಾಣಿಕಡ್ಡಿ
ಹೊಂದಿದವೀಕೇರಿ ಬಸುವಯ್ಗೆ

ಇಕ್ಕಾಳಕ್ಕಿಯ ರೊಟ್ಟಿ ಎಕ್ಕೆಯ ಎಲೆಯಂಗೆ
ಚಂದಾದಲಿ ಬಂದ ಬಿಳಿಯಾಲೆ – ಅಡಕೆಕಾಯಿ
ಹೊಂದಿದವೀಕೇರಿ ಬಸುವಯ್ಗೆ

ಎಣ್ಣೆನೆರೆವೂತ ಕುಂಕುಮ ಧರಿಸೂತ
ಬಸವಣ್ಣಗೆ ಗಂಧ ಸಿಡಿವೂತ

ಬಲದಾ ಕೋಡಿಗೆ ಜೇಡಿಯ ಸಾರಣಿಗೆ
ತಾಯೆ ನೀಲಮನ ಅಂದದರಮಾನೆ – ಬಾಗಿಲಮುಂದೆ
ತೂಗಾಡುತ ಬಂದ ಬಸವಣ್ಣ

ಸುಲಿದಾ ತೆಂಗಿನಕಾಯಿ ಕೊನಿಯ ಬಾಳೆಹಣ್ಣು
ಬಸವಣ್ಣನ ಕಣ್ಣೇ ಕನ್ನಾಡಿ – ಹೊಳೆಪಾದು
ಕಿವಿಯೇ ಕ್ಯಾದಗೀಯ ಗರಿಯಾದು

ಕರಿಯಾ ಕೋಡಿನ ಬಸವ ಕೋಡು ನೋಡೆವು ನಾವು
ಕೋಡಿಗೆ ಕೊಡುಕುಂಚ ಬಿಗಿಸೇವು

ಕರಿಯಾ ಕಾಲಿನ ಬಸವ ಕಾಲು ನೋಡೆವು ನಾವು
ಕಾಲಿಗೆ ಪನ್ನೀರ ಸಿಡಿದೇವು

ಆ ಕೈಲ್ಹಾಣತಿ ಈ ಕೈಯಾಲಿ ಮಾಗಂಟೆ
ಅಣ್ಣಯ್ಯ ಹೊರಟಾರು ಗೋಪೂಜೆ

ಅತ್ತೀ ಮಣೆಯಾ ಮುಂದೆ ಒತ್ತೀಡೂ ಪಾದವ
ಕಾಲು ಜಾರಿದವು ಬಲುಜೋಕೆ

ಹಲಸಿನ ಮಣೆಯಾ ಮುಂದೆ ತಂದಿಡು ಪಾದಾವ
ಹಣ್ಣು ಜಾರಿದವು ಬಲುಜೋಕೆ

ರೊಟ್ಟಿ ಕಟ್ಟೂತ ಬಟ್ಟಾಲ ಬಡಿಯೂತ
ಕೊರಳ ಕಣ್ಣಿಗಳೊಡೆಯುತ್ತೇಳು
ಭೂಲೋಕದ ಕೋವಿ ನುಡುದಾವೆ
ಭೂಲೋಕದ ಕೋವಿ ಏನೆಂದು ನುಡುದಾವೆ
ದೇವರ ಬಸವಯ್ಗೆ ಸಿವಪೂಜೆ

ಕೆಂಪೂವು ಮಾಕೌನೆ ತಂಪಲ್ಲಿ ಕೂತೌನೆ
ಉಗುರಲಿ ಕನ್ನಡಿಯ ನುಡುಸೌನೆ  ಗೋವಾಡಿಗರಹುಡುಗ
ಅಟ್ಟಾಡಿ ರೊಟ್ಟಿ ಮುರಿಯೌನೆ

ಹತ್ತಲಾರದ ಗುಡ್ಡ ಹತ್ತೂತ ನಮಗೋವು
ಇಳಿಯಲಾರದ ಗುಡ್ಡ ಇಳಿಯೂತ – ನಮಗೋವು
ತೇಕಾಡಿ ನೀರಾ ಕುಡುದಾವೆ

ಕೊಟಿಗೆಯ ಬಾಗಲಿಗೆ ಹೊಸ ಒನಿಕೆ ಎದುರಾಕಿ
ಅದರಾ ಮೇಲೊಂದು ಹಿಂಡ್ಲಾಚಿ
ಕೊಟ್ಟಿಗೆಯ ಸುತ್ತ ಮುತ್ತಿನ ನಾಗಂದಿಗೆ
ಅದರಾ ಮೇಲೈದಾರತಿ

ಹಂಡಾ ಬರುತಾನೆಂದು ಹಾರೈಸಿ ನೋಡೆವು ನಾವು
ಹಂಡಾಗಾರತೀಯ ಬೆಳಗೀರಿ

ಬಸವಾ ಬರುತಾನೆಂದು ಬೋರಾಡಿ ನೋಡೆವು ನಾವು
ಬಸವಾಗಾರತಿಯ ಬೆಳಗೀರಿ

ಬಸವ ಬಸವೆನ್ನಿರೊ
ಬಸವನ ಪಾದಕೆ ಸರಣೆನ್ನಿರೊ

* * *

6. ಅರ್ಜುನಸ್ವಾಮಿ ಹಾಡು

ಐದೂಮಾರುದ್ದಾ ದ್ಯಾಯಂಗ ನಮ್ಮ ಕೈಯಲ್ಲಿ
ಓದುವೆ ಅರ್ಜುನಸ್ವಾಮಿ ವಚನಾವಾ
ಹತ್ತೂ ಮಾರುದ್ದಾ ಎತ್ತಂಗ ನಮ್ಮ ಕೈಯಲ್ಲಿ
ಎತ್ತುವೆ ಅರ್ಜುನ ಸ್ವಾಮೀ ಪದನಾವಾ                                                            ॥1 ॥

ಅಳಿಗೇಯಾನಿಟ್ಟೂ ಅಡಿಗೇಯಾ ಮಾಡೀ
ಮಡಕೇಯನಿಟ್ಟೂ ಸಾರ ಕಾಸೀ
ಉಂಡೇನೆಂಬರಿಗೇ ಕುಣಲಕ್ಕೀ ತೊಡಗೂವೇ
ವಡಯಾ ಅರ್ಜುನಸ್ವಾಮಿ ಪದನಾವಾ
ನೆನೆಯಕ್ಕಿ ನೆನೆಕಡಲೇ ಕೊನೆಯಾ ಬಾಳೆಯಹಣ್ಣು
ಮೆದ್ದೇನೆಂಬರಿಗೇ ಮೆಲಕೊಟ್ಟೂ
ಮೆದ್ದೇನೆಂಬರಿಗೇ ಮೆಲಕೊಟ್ಟೂ ತೊಡಗೂವೇ
ವಡೆಯಾ ಅರ್ಜುನಸ್ವಾಮಿ ಪದನಾವಾ                                                            ॥2 ॥

ಅತ್ತಿಗೆ ನಾದೂನೀ ಜೊತೆಯಲೀ ಹೋಗುವಾಗ
ಅತ್ತಿಗೆ ನಾದೂನೀ ಶರಣೆಂದೂ
ಆಸೆವಂತಳಾಗೂ ಆಸೇ ಬಲ್ಲವಳಾಗೂ
ದೇಶದ ಕೌರವಗೇ ವರನಾಗೂ                                                                          ॥3 ॥

ಆಡೂವಂತ ಮಾತಾ ಆಡಬೇಕೂ ಅತ್ತಿಗೇ
ಆಡನಿಲ್ಲದ ಮಾತೇ ಸೊಗಸಲ್ಲಾ
ಆಡನಿಲ್ಲದ ಮಾತೇ ಸೊಗಸಲ್ಲಾ ಅತ್ತೀಗೀ
ಅತ್ತೇ ಕುಂತ್ಯಮ್ಮನಾ ಶಿವಸೋದ್ರೂ
ಅತ್ತೇ ಕುಂತ್ಯಮ್ಮನಾ ಶಿವಸೋದ್ರು ಅಲ್ಲಾದೇ
ತಪ್ಪೀ ಸಟ್ಟುಗವಾ ಹಿಡಿಲೊಲ್ಲೇ                                                                          ॥4 ॥

ಅತ್ತಿಗೆ ನಾದೂನೀ ಜೋಡಾಗಿ ಹೋಗುವಾಗಾ
ಜಡೆಯಾ ಮಲ್ಲಿಗೆ ಹೂವೇ ಕಿರಿಹೂವೂ
ಜಡೆಯಾ ಮಲ್ಲಿಗೆ ಹೂವೂ ಕಿರಿಹೂವೂ ಮುಡಕೊಂಡು
ಅತ್ತಿಗೆಗೆ ನಾದೂನೀ ಶರಣೆಂದೂ                                                                       ॥5 ॥

ಆಸೆವಂತಳಾಗೂ ಆಸೆ ಬಲ್ಲವಳಾಗೂ
ದೇಶದ ಕೌರವಗೇ ಮಡುದ್ಯಾಗೂ
ಆಡಾವಂತಾಮಾತಾ ಆಡಬೇಕೋ ಅತ್ತೀಗೇ
ಆಡನಿಲ್ಲದ ಮಾತೇ ಸೊಗಸಲ್ಲಾ
ಆಡನಿಲ್ಲದ ಮಾತೇ ಸೊಗಸಲ್ಲಾ ಅತ್ತೀಗೇ
ಅತ್ತೇ ಕುಂತ್ಯಮ್ಮನ ಸಿವಸೋದ್ರೂ
ಅತ್ತೇ ಕುಂತ್ಯಮ್ಮನಾ ಸಿವಸೋದ್ರೂ ಅಲ್ಲಾದೇ
ಮತ್ತೇ ಸಟ್ಟುಗವಾ ಹಿಡಿಲೊಲ್ಲೇ                                                                         ॥6 ॥

ಬಾಳೇಮರನಾಗೇ ಬಾಗಿರುವಾ ಗಿಣಿಗಳಿರಾ
ಈಗ್ಹೋಗಿ ಹೇಳಬೇಕೋ ವಳಮಾತೂ
ಈಗ್ಹೋಗಿ ಹೇಳಬೇಕೂ ವಳಮಾತೂ ಹೇಳದಿದ್ರೆ
ಬಸ್ತೀಯಾ ಹತ್ತೀ ತಪಸಿರುವೆ                                                                             ॥7 ॥

ಅಲ್ಯಾಗಿ ಇಲ್ಯಾಗಿ ಕಲ್ಯಾಣ ಪುರುಕಾಗೀ
ನೆಲ್ಯಾಣ ಪುರದಲ್ಲೀ ಹಾರಿದವೂ
ನೆಲ್ಯಾಣ ಪುರದಲ್ಲೀ ಹಾರಿದವೊ ಗಿಣಿರಾಮಾ
ಇಂದರ ಪುರದಲ್ಲೀ ಇಳಿದಾವೂ                                                                         ॥8 ॥

ಓದೋ ಮಕ್ಕಳು ಇಲ್ಲಾ ಹಾರ‌್ಯಾಡಾ ಗಿಣಿ ಇಲ್ಲಾ
ಬಂದಾ ಕಾರಣವಾ ನಮಗ್ಹೇಳೀ
ಮದುವೇ ಮನೆಗ್ಹೋಗಿದ್ದೇವೂ ತುಪ್ಪಾ ಅನ್ನುಂಡೇವೂ
ಮುತ್ತಿನ ಮುಡಿದಂಡೇ ಮುಡಿದೇವೂ
ಮುತ್ತಿನ ಮುಡಿದಂಡೇ ಮುಡಿದೇವರ್ಜುನ ಸ್ವಾಮಿ
ನಾರಾಯಣ ಸ್ವಾಮಿ ಕಿರುತಂಗೀ
ನಾರಾಯಣ ಸ್ವಾಮಿ ಕಿರುತಂಗೀ ಸೌಭದ್ರೆ
ನಾರ‌್ಯಾದಳು ಪಟ್ಟದಾ ಕೌರವಗೇ                                                            ॥9 ॥

ಹಾಗೆಂಬಾ ಸುದ್ದೀ ಕೇಳ್ಯಾನರ್ಜುನ ಸ್ವಾಮಿ
ಓದೋದ್ಯಾನಂಗಾ ಜರಿದಾನೂ
ಕೊಡುವವ ನವನ್ಯಾರೋ ತರುವವನೂ ಅವನ್ಯಾರೂ
ಮಾಡೀಸುವನ್ಯಾರೂ ಮದುವೆಯಾ
ಮಾಡೀಸುವನ್ಯಾರೂ ಮದುವೆಯಾ ಅವನೀಗೇ
ಕೊರಳೀಗೇ ಬಿಡುವೆನೂ ಶರಗಾಳಾ                                                               ॥10 ॥

ಕಲ್ಲುಕೋಳಿ ಕೂಗಾಲೀ ನೆತ್ತರ ಮಳೆ ಸುರಿಯಾಲೀ
ಕಲ್ಲು ಮೇಲೆ ಪತ್ರೇ ಬೆಳೆಯಾಲೀ
ಮಳೆಗಳು ಹೊಯ್ಯಲೀ ಹೊಳೆಗಾಳು ಕಟ್ಟಾಲೀ
ಉಬ್ಬೇಯಾ ಹರಿವೇ ಜೆರಿಯಾಲೀ
ಉಬ್ಬೇಯಾ ಹರಿವೇ ಜರಿಯಾಲೀ ಕೌರವನಾ
[ಬ]ಂದಾ ದಿಬ್ಬಣರೇ ತಡೆಯಾಲೀ                                                                ॥10 ॥

ಬಿಲ್ಲೂ ಬಾಣಗಳಾ ಬನ್ನೀಯಾ ಮರಕ್ಕೆ ಚಾಜೇ
ಬಾಗೀ ನೋಡಿದನೂ ಶಕುನಾವಾ
ಕತ್ತೀಕೋವಿಗಳಾ ಅತ್ತೀಮರಕೇ ಚಾಚಿ
ನಿಂತೂ ನೋಡಿದನೂ ಶಕುನಾವಾ                                                                ॥12 ॥

ಸಾಲೈನುಟಿಗೊಂಡೂ ಸರಮುತ್ತಾ ಕಟ್ಟಿಕೊಂಡೂ
ಮಾಳೀಗೇ ವಳಗೇ ಸುಳಿವಾರೂ
ಮಾಳೀಗೇ ವಳಗೇ ಸುಳಿವಾರು ತಾಯಮ್ಮ
ನಮ್ಮನ್ನೂ ಸೌರಿಸಮ್ಮಾ ಮದುವೇಯಾ
ಎತ್ತೂ ಬರುವಾದಿಲ್ಲಾ ಮುತ್ತೂ ತುಂಬೋದಿಲ್ಲಾ
ನಿಸ್ತ್ರಿಲ್ಲದ ಮದುವೇ ನಿಜವಿಲ್ಲಾ
ಎತ್ತೂ ಬರುವೋದೇನೂ ಮುತ್ತಾ ತುಂಬೋದೇನೂ
ನಿಸ್ತ್ರೇಯಾ ಗೂಡವೇ ನಿಮಗೇನೂ
ನಿಸ್ತ್ರೇಯಾ ಗೂಡವೇ ನಿಮಗೇನು ತಾಯಮ್ಮಾ
ಹೋಗೇವು ಕಾಲಾಗಳಿಗೇಲೀ                                                                           ॥13 ॥

ಮಗನಾ ಮದುವೆಯಾ ಬಿಟ್ಟು ಸೊಸೆಯಾ ಸೋಬನಬಿಟ್ಟೂ
ಇಂದ್ಹೋದರೆ ಎಂದೂ ಬರುವೂದೂ
ಇಂದೂ ಹೋದವರೂ ಇಂದೇ ಬರುವಾದುಂಟೇ
ಇಂದೀಗೇ ವಂದೂ ವರುಷಾಕೇ
ಇಂದೀಗೇ ವಂದೂ ವರುಷಾಕೆ ಕಾಸೀಯಾ
ತೀರ್ಥಾ ಮಿಂದು ಮನೆಗೇ ಬರುತೇನೇ                                                         ॥14 ॥

ಕಾವೀನುಟ್ಟಾನೂ ಕಮಂಡಲ ಹಿಡಿದ್ಯಾನೂ
ಸನ್ಯಾಸಿ ವೇಷಾ ದರಿಸ್ಯಾನೂ
ಜಪಸರ ಕೊರಳಿಗೆ ಹಾಕೀ ವಿಬೂತಿ ದರಿಸ್ಯಾನೂ
ದಂಟಕೋಲು ಹಿಡಿದಾನೂ ಬಲಗೈಲೀ
ದಂಟಕೋಲು ಹಿಡಿದಾನೂ ಬಲಗೈಲಿ ಅರ್ಜುನಸ್ವಾಮಿ
ಸನ್ಯಾಸಿ ವೇಷಾ ಧರಿಸ್ಯಾನೂ                                                                         ॥15 ॥

ಮಾವಿನ ತೋಪೀಗೇ ಹೋದಾನರ್ಜುನ ಸ್ವಾಮೀ
ಮಾವಿನ ಏಳು ತುಂಡೇ ಮುರಿದಾನೂ
ಮಾವಿನ ಏಳು ತುಂಡೇ ಮುರಿದೂ ತಲೆಯಲ್ಲಿ ಮುಡಿದೂ
ಹಳ್ಳಾಕೊಳ್ಳಗಳಾ ಹಾಯ್ದೋಗೀ
ಹಳ್ಳಾಕೊಳ್ಳಾ ಹಾದೂ ಗುಡ್ಡಾಬೆಟ್ಟಾದಾಟಿ
ನಡೆದನು ದ್ವಾರಕಿಯಾ ವನಕಾಗೀ                                                                 ॥16 ॥

ನೀರತ್ತ ಮುಖಹಾಕೀ ಊರತ್ತಾ ಬೆನ್ನಾಕೀ
ಸೂವೆಂದೂ ಶಾಲೇ ಶಳೆವಾಳೇ
ಸೂವೆಂದೂ ಶಾಲೇ ಶಳೆವಾ ಮಡಿವಾಳರ ಹುಡುಗೀ
ನಂದೊಂದೂ ಕಾವೀ ಮಡಿಮಾಡೇ
ಸಾಕು ಸಾಕು ಬಾರೊ ಮಾಣೀದಾಕ್ಷಿಣ್ಯಾ ಮಾತಲ್ಲಾ
ರಾಯಾರೈದಾರೇ ಪುರುದಲ್ಲೀ
ರಾಯಾರೈದಾರೇ ಪುರದಲ್ಲಿ ಕೇಳಿದರೇ
ಸಾಕ್ಷಿಲ್ಲದೆ ತಲೆಯಾ ಹೊಡೆಸಾರೂ                                                                 ॥17 ॥

ಹುತ್ತಾದೊಳಗಿರುವಾ ದರಣೀ ನಾಗೀಂದ್ರಾನಾ
ಹೆಡೆಯಾನೇ ಹಿಡಿದೂ ಯಳತಂದೂ
ಹೆಡೆಯಾನೇ ಹಿಡಿದೂ ಯಳತಂದರ್ಜುನಸ್ವಾಮಿ
ಹೆಡೆಯಾ ಮೇಲೆ ಕಾವೀ ವಗದುಟ್ಟಾ
ಭೂವೀವಳಗಿರುವಾ ಚೊಟ್ಟೀ ಕಾಳಿಂಗಾನಾ
ಬಾಲಾವಾ ಹಿಡಿದೂ ಯಳತಂದೂ
ಬಾಲಾವಾ ಹಿಡಿದೂ ಯಳತಂದರ್ಜುನಸ್ವಾಮಿ
ಚೊಟ್ಟೀಮೇಲೆ ಕಾವೀ ವಗದುಟ್ಟಾ                                                                   ॥18 ॥

ಹಸಿದಾ ಹಾರುವನ ಕೂಡೆ ಎಷ್ಟೊಂದು ದೊಂದಕವೇ
ಹುಡುಕ್ಯಾನೇ ಚಂದಾ ಚಳಕೀಯಾ
ಹುಡುಕ್ಯಾನೇ ಚಂದಾ ಚಳಕೀಯಾ ಮಡಿವಾಳರಣ್ಣ
ಮಡದೀಗೆ ಬುದ್ದೀ ಕಲಿಸ್ಯಾನೂ
ಏಳೂ ಬಾಗಿಲಿಗೇ ಏಳು ಮಂದೀ ತಳವಾರ‌್ರೂ
ಆಳುಬಿಟ್ಟು ಅಗಸೇ ತೆಗಿರಯ್ಯ
ಜೋಗೀ ಜಂಗಮರೂ ಬರಲಿಲ್ಲಾ ನಮ್ಮನೆಗೇ
ನಾ ಒಬ್ಬರಿಗೆ ಅಗಸೇ ತೆಗಿಲಿಲ್ಲಾ
ನಿಮ್ಮಂಥಾ ಬುದ್ಧಿಯವರೂ ನಿಮ್ಮಂಥಾ ಮುಖದವರೂ
ನಿಮಗೆ ಬೇಕಾದಾ ಯತಿಗಾಳೂ
ನಿಮಗೆ ಬೇಕಾದಾ ಯತಿಗಾಳೂ ಬಂದೈದೇವೇ
ಅತಿಪ್ರೀತಿಲಿ ಬಾಗೀಲ ತೆಗಿರಯ್ಯ                                                                    ॥19 ॥

ಅಗಸೇ ತೆಗೆದಾರೂ ಬಗೆಸೊನ್ನಾ ತೆಗೆದಾರೂ
ಕೊಟ್ಟೂ ಬನ್ನಿರ‌್ಹೋಗಿ ಗೌಡೇರೂ
ಗೌಡೇರು ಕೊಟ್ಟಾ ಪಡಿಯಾ ಮುಟ್ಟಂಥಾ ದೊರೆಯಲ್ಲಾ
ಚಿಕ್ಕಂದಿಲಿ ತೊಟ್ಟಿ ಭರತಾವಾ !
ಚಿಕ್ಕಂದಿಲಿ ತೊಟ್ಟೀ ಭರತಾವಾ ವಳಗಿರುವಾ
ಹಾಗೆಂಬಾ ಮಾತಾ ಕೊಂಡಾಳೇ ಸೌಭದ್ರೆ
ಕಿರಿಯಣ್ಣಗೊಂದೋಲೇ ಬರೆದಾಳೂ
ಅಣ್ಣಯ್ಯಗೊಂದೋಲೇ ಏನೆಂದೂ ಬರೆದಾಳೂ                                             ॥20 ॥

ಸನ್ಯಾಸಿಗೆ [ಅಡಿಗೇ] ಅಡಬೇಕೇ ?!
ಬಂದಾ ವಾಲೆಗಳಾ ಕುಂತೂ ಓದಿಕೊಂಡೂ
ಅಣ್ಣಯ್ಯ ಪ್ರತಿವಾಲೇ ಬರೆದಾನೂ
ಅಣ್ಣಯ್ಯ ಪ್ರತಿವಾಲೇ ಏನೆಂದೂ ಬರೆದಾನು
ಭಾವನೆಂಟಗೆ ಅಡಿಗೇ ಅಡಬೇಕೂ                                                                  ॥21 ॥

ಸಣ್ಣಕ್ಕಿ ತೊಳಸುತ್ತಾ ಕಣ್ಣೀರಾ ಸುರಿಸುತ್ತಾ
ಕಿರುಬೆರಳುಂಗುರವಾ ಕುಣಿಸುತ್ತಾ
ಅಲ್ಲಂಗಾ ಬೆಲ್ಲಂಗಾ ಬೆಲ್ಲಾದಾ ಪರಮಾನ್ನಾ
ವಲ್ಲೆ ತಾ ಮಾಡಿ ಇಳಿಗ್ಯಾಳೂ
ಹೂರಿಗೆ ಗಾರಿಗೇ ಚಕ್ಕುಲಿ ಸುಕಿನುಂಡೇ
ನಾರೀ ತಾ ಮಾಡಿ ಇಳಿಸ್ಯಾಳೂ
ಮುಚ್ಚೋರೆ ಅತಿರಾಸಾ ಅಂಬಾಡೇ ತಂಬಿಟ್ಟನುಂಡೇ
ರಂಬೇ ತಾಮಾಡೀ ಇಳಿಗಾಳೂ                                                                      ॥22 ॥

ಅಡಿಗೇ ಆದಾವೂ ಅಗ್ಗಾನೀ ಕಾಯಲಿಲ್ಲಾ
ತಣ್ಣೀರಾ ಹೋಗೀ ಮಿಂದು ಬಾರೋ
ತಣ್ಣೀರು ಮೀಯದಕೇ ನಿಮ್ಮಣ್ಣಯ್ಯ ಅಲ್ಲಾ ಕಣೇ
ಗಮ್ಮಾನೇ ಕಾಸೇ ಬಿಸಿನೀರಾ
ಅಡಿಗೇ ಆದಾವೂ ಅಗ್ಗಾನೀ ಕಾದಾವೂ
ಬಾಳೇ ಎಲೆ ಹೋಗಿ ಕೂಯ್ತರೋ
ಬಾಳೇಲೆ ಕ್ಯೂಯ್ಯದಕ್ಕೇ ನಿನ್ನ ಕಿರಿಯಣ್ಣ ಅಲ್ಲಾಕಾಣೇ
ಕಿರಿಯಣ್ಣ ಉಂಬ ಹರಿವಾಣಾ ಬೆಳಗಿಕ್ಕೇ
ಎಡಗೈಲಿ ಎಣ್ಣೇ ಕವುಳೀಗೇ ಬಲಗೈಲಿ ತಂಬೀಗೇ
ಸೌಭದ್ರೆ ಮುಂದಾಗಿ ನಡೆದಾಳೂ
ಸೌಭದ್ರೆ ಮುಂದಾಗೀ ಅರ್ಜುನಸ್ವಾಮೀ ಹಿಂದಾಗೀ
ಬಚ್ಚಾಲರಮನೆಗೇ ನಡೆದಾರೂ                                                                       ॥23 ॥

ಯಣ್ಣೇ ಮಜ್ಜನಮಾಡೀ ಸಣ್ಣ ಸಣ್ಣ ಜಡೆಯಾಬಿಚ್ಚೇ
ತಣ್ಣೀರಾ ಬೆರಸೀ ಬಿಸಿಮಾಡೀ
ಒಂದೂ ಜಡೆ ಬಿಚ್ಚಿದರೆ ಮಲ್ಲಿಗೆ ಹೂವ್ವಿನ ಕಂಪೂ
ಯಾವೂರೂ ಸ್ವಾಮಿ ದೊರೆಗಾಳೂ
ಮೂರೂ ಜಡೆ ಬಿಚ್ಚಿದರೇ ಸಂಪಿಗೆ ಹೂವ್ವಿನಕಂಪೂ
ದೇಶಾಯಾವುದೂ ನನಗ್ಹೇಳೀ                                                                         ॥24 ॥

ಬಡಗಲು ಬಂಕಾಪೂರಾ ರಾಜ್ಯಾನಾಳೂವರಮಗ
ಇಂದಾರಪುರವೇ ನಮಗಾಯಿತೂ
ಇಂದಾರಾಪುರವೇ ನಮಗಾಯಿತೂ ಯಲಹೆಣ್ಣೇ
ಯಾಕೇ ಕೇಳಿದೆಯೇ ಯಲಹೆಣ್ಣೇ                                                                     ॥25 ॥

ಅತ್ತೇ ಕುಂತೀದೇವೀ ಭಾವಾ ಧರ್ಮಾರಾಯರೂ
ನಕುಲ ಸಹದೇವರೇ ಮೈದುನರೂ
ನಕುಲ ಸಹದೇವರೂ ಮಯದುನರೂ ಐದೂ ಮಂದೀ
ಚಂದಾಗೈದಾರೇ ಪುರುದಾಗೇ                                                                         ॥26 ॥

ಅತ್ತೇ ಕುಂತ್ಯಮ್ಮಾ ಭಾವಾ ಧರ್ಮಾರಾಯರೂ
ನಕುಲ ಸಹದೇವರೂ ಮೈದುನರೂ
ನಕುಲ ಸಹದೇವರಾ ಕೇಳಿದಲ್ಲೇ ಎಲೆ ಹೆಣ್ಣೇ
ಮತ್ತೊಬ್ಯಾನ್ಯಾಕೇ ಮರೆತ್ಹೇಣ್ಣೇ
ಚಿಕ್ಕಂದಿಲಿ ನಮ್ಮಾ ಕೊಡುತ್ತೇನೆಂದೈದಾರೇ
ಹೆಸರೂ ಹೇಳೂವದಕೇ ಅನುಮಾನಾ                                                           ॥27 ॥

ಹಾಗೆಂಬಾ ಸುದ್ದೀ ಕೇಳ್ಯಾನರ್ಜುನ ಸ್ವಾಮೀ
ಧರಿಸ್ಯಾನೂ ತನ್ನ ನಿಜರೂಪಾ
ರೂಪೂ ಕಂಡಾಳೇ ಮೂಲ್ಯಾದಾ ಗಂಡಾನಾ
ಮಲ್ಲಿಗೆ ಹೂವ್ವಿನ ದಂಡೇ ಬಲಗೈಲೀ
ನಾಚುತ್ತಾ ನಗುತಾಲೀ ಸೌಭದ್ರೇ ಮನದಲ್ಲೀ
ಕೊರಳೀಗ್ಹಾಕಿದಳೂ ಶಿವದಂಡೇ                                                                      ॥28 ॥

ಹಾರಾಕೀರಗಳಾ ಅರ್ಜುನಸ್ವಾಮಿ ಕೊರಳಿಗೆ ಹಾಕೀ
ನಾಚಿದಳೂ ಸೌಭದ್ರೇ ಮನದಲ್ಲೀ
ನಾಚುತ್ತಾ ನಾಚುತ್ತಾ ಸೌಭದ್ರೇ ಮನದಲ್ಲೀ
ತಲೆಬಾಗೀ ನಿಂದಾಳೂ ಎಡದಲ್ಲೀ                                                                  ॥29 ॥

ಮಡದೀ ವಡಗೂಡೀ ಮಗನಿಂದೇಕಳುಹೀಸೀ
ಸಡಗಾರಾದಲ್ಲೀ ಬಿಲ್ಲು ಹಿಡಿದೂ
ಮಲ್ಲಾ ಯುದ್ದಕ್ಕೇ ಬಲ್ಲಾರಾಮನು ಬಂದಾ
ಮಲ್ಲನೆ ಕಿರುತಮ್ಮಾ ಕೃಷ್ಣಯ್ಯ
ಮೆಲ್ಲನೆ ಕಿರುತಮ್ಮಾ ಕೃಷ್ಣಯ್ಯ ತಾ ಬಂದೂ
ಸಲ್ಲಾ ಹೇಳಿದನೂ ವಳಮಾತೂ
ವಳಮಾತಾ ಕೇಳೀ ಅಣ್ಣಯ್ಯ ಬಂದಾನೂ
ನಿಲ್ಲದೆ ಅರಮನೆಗೇ ತೆರಳೀದಾ                                                                      ॥30 ॥

ಕುಲ್ಲಾಕೌರವನಾ ಬಲವಾ ಕಡಿದಾಡುತ್ತಾ
ಅಲ್ಲಿಂದಾ ಅಟ್ಟೀ ಗಜಪುರಿಗೇ
ಅಲ್ಲಿಂದಾ ಅಟ್ಟೀ ಗಜಪುರಿಗರ್ಜುನಸ್ವಾಮೀ
ನಲ್ಲೇ ವಡಗೂಡೀ ಅರಮನೆಗೇ
ನಲ್ಲೇ ಸೌಭದ್ರೇ ವಡಗೂಡೀ ಅರಮನೆಗ್ಹೋಗೀ
ಅಣ್ಣಯ್ಯನ ಪಾದಕ್ಕೇ ಎರಿಗ್ಯಾನೂ
ಅಣ್ಣಯ್ಯ ಧರ್ಮರಾಯಾ ತಾಯಮ್ಮನೀಗೆರಗೀ
ಗಮ್ಮನ ಮದುವೇಯಾ ಸೌರಣಿಗೇ
ನಾರೀ ಸೌಭದ್ರೇಯಾ ದಾರೇ ಮಂಟಪಕೇ ಕರೆದೂ
ದೇವಾ ಜೋಯಿಸರಾ ವಲ್ಲಾಟಾ
ಜೋಯಿಸರು ಕಂಕಣಕಟ್ಟೀ ನೆರೆದಾರೂ ದಾರೇಮಂಟಪಕ್ಕೇ
ರಾಣೀ ವಾಸಾದ ಬಾಲೇರೂ
ರಾಣಿ ವಾಸಾದ ಬಾಲೆಯರೂ ಕೂಡಿಕೊಂಡೂ
ಹಾಡೀ ಆರತಿಯಾ ಬೆಳೆಗ್ಯಾರೂ                                                                     ॥31 ॥

* * *