7. ಅರ್ಜುನಸ್ವಾಮಿ ಹಾಡು – 2

ನನೆ ಅಕ್ಕಿ ನನಗಡಲೆ ಕೊನೆಯ ಬಾಳೆಹಣ್ಣು
ತಿದ್ದೀನಿ ಅಂಬರಿಗೆ ಸುಲುದಿಕ್ಕೆ
ತಿದ್ದೀನಿ ಅಂಬರಿಗೆ ಸುಲುದಿಕ್ಕಲೀ ಮನಿಯ
ದೇವಾರ್ಜುನನ ವಚನಾವ
ದೇವಾರ್ಜುನನ ವಚನಾವ ಓದುತೀನಿ
ಲಾಲಿಸಿ ಕೇಳಿ ಬಲ್ಲ ಜನರೆಲ್ಲ
ಜನರಲ್ಲಿ ಧನಿಯಾ ಎತ್ತದೆ ಬೆಳಗಾದು
ಅರ್ಜುನಸ್ವಾಮೆದ್ದು ಮುಖ ಮೋಜನ ಮಾಡಾಗ
ಬಂದಾವ ಅರಗಿಣಿ
ಏನ್ ಬಂದ್ರಿ ಅರಗಿಣಿಯೆ ಏನ್ ಬಂದ್ರಿ ಕಿರುಗಿಣಿಯೆ
ಏನ್ ಬಂದ್ರಿ ಬಣ್ಣದ ಹುಲಿಗಿಣಿಯೇ
ಮದುವೆ ಮನೆಗೆ ಹೋಗಿದ್ದಾವು
ಮಜ್ಜಿಗೆ ಬಾನುಂಡಾವು
ಅರಳಿದ ಕ್ಯಾಜಿಗೆಯ ಮುಡಿದಾವು
ಕಲಿಪಾಲಕರ ತಂಗ್ಯಾದಳಂತೆ ಕೌರವರಿಗೆ
ಬದ್ದೇನೆ ಅರಗಿಣಿಯೆ ಬದ್ದೇನೆ ಕಿರಿಗಿಣಿಯೆ
ಬದ್ದೇನೆ ಬಣ್ಣದ ಹುಲಿಗಿಣಿಯೇ
ತಾಯಿ ಕೂಡ ಸರಸ ಗುರುವಿನ ಕೂಡ ಸರಸ ಇದ್ದಾವು
ಸ್ವಾಮಿ ನಿಮಕೂಡೆ ಸರಸಾವು
ಸರಸ ಮೇಲಾಗಿರಿ ರಂಗಯ್ಯನಾಣೆ ಹುಸಿಯಲ್ಲಕ
ಅರ್ಜುನಸ್ವಾಮೆದ್ದು ಮುಖ ಮಜ್ಜನ ಮಾಡಾಗ
ಬಂದಾವ ಏಳು ಅರಗಿಣಿ
ಏನಬಂದ್ರಿ ಅರಗಿಣಿಯೇ ಏನಬಂದ್ರಿ ಕಿರಿಗಿಣಿಯೆ
ಎನಬಂದ್ರಿ ಬಣ್ಣದ ಹುಲಿಗಿಣಿಯೆ
ಮದುವೆ ಮನೆಗೆ ಹೋಗಿದ್ದಾವು
ಅರಳೀದ ಸಂಪಗೆಯ ಮುಡಿದಾವು
ಕಲಿಪಾಲಕರ ತಂಗ್ಯಾದಳಂತೆ ಕೌರವರಿಗೆ
ಬದ್ದೇನರಗಿಣಿಯೇ ಬದ್ದೇನರಗಿಣಿಯೆ
ಬದ್ದೇನ ಬಣ್ಣದ ಹುಲಿಗಿಣಿಯೆ
ತಾಯಿ ಕೂಡ ಸರಸ ತಂದೆ ಕೂಡಿದ್ದಾವು
ಸ್ವಾಮಿ ನಿಮಕೂಡೆ ಅಣಕಾವು
ಸ್ವಾಮಿ ನಿಮಕೂಡೆ ಅಣಕಾವು ಮೇಲಾಗಿರಿಯ
ತಿಮ್ಮಪ್ಪರಾಣೆ ಹುಸಿಯಾಗಿ
ಎತ್ತಂಗದ ಹಲಗೆನಿತ್ತು ಕೈಯಾಗೆ ಬಿಟ್ಟ
ಯಾಲಕ್ಕಿ ಜಂತದ ಬಳೆತೊಟ್ಟು
ಕೊಂತಮ್ಮನ ಮಗ ಹೊರ‌್ವಾನಂತೆ ಬಿಕ್ಷಾಕೆ
ಎತ್ತಂಗದ ಹಲಗೆನಿತ್ತು ಕೈಯಾಗೆ ಬಿಟ್ಟ
ಯಾಲಕ್ಕಿ ಜಂತದ ಬಳೆತೊಟ್ಟು
ಕೊಂತಮ್ಮನ ಮಗ ಹೊರ‌್ವಾನಂತೆ ವನವೇಷ
ಅರ್ಜುನಸ್ವಾಮೆದ್ದು ರಾಜ್ಯಂಗಳೇಳುವಾಗ
ತಾಯಮ್ಮ ಬಂದು ಸೆರಗಾ ಹಿಡಿದಾರು
ಇಂದು ಹೋದಾವ ಬರೋದು ಇನ್ನೆಂದಿಗೊ
ಕಣಾದರಗಳಿಗೆ ಇರನಾರೆ
ಹನ್ನೆಲ್ಡು ಉರುಷಾನೆ ಕಲಿಪಾಲಕರ
ತಂಗಿ ತಂದು ಮಠವ ಹೊಗ್ತೀನಿ
ಅರ್ಜುಣಸ್ವಾಮೆದ್ದು ರಾಜ್ಯಂಗಳೇಳುವಾಗ
ಅಕ್ಕಯ್ಯ ಬಂದು ಸೆರಗಾ ಹಿಡಿದಾರು
ಇಂದೋದ ಅರ್ಜುಣ ಬರೋದು ಇನ್ನೆಂದಿಗೊ
ಕಾಣದರಗಳಿಗೆ ಇರಲಾರೆ
ಇಂದೂ ಹೋದಾವ ಇಂದೇನೇ ದಿಟುವೇನೆ
ಇಂದಿಗೆ ಹನ್ನೆರಡು ಉರುಸೇನೆ
ಕಲಿಪಾಲಕರ ತಂಗೀ ತಂದು ಮಠವ ಹೋಗ್ತೀನಿ
ಸತ್ತರೆ ಸಾವು ಇದ್ರೆ ಸುದ್ದಿ
ಕಳ್ಗೊ ಕತ್ತೀಯ ಕಳ್ಗೊ ಗುರ್ತಾಕೆ
ಅರ್ಜುನಸ್ವಾಮೆದ್ದು ಮೆಟ್ಟಿಲ ನಿಳಿವಾಗ
ಹಾಲು ಕೊಡಬಂದು ಇದುರಾಗೆ
ಹಾಲು ಕೊಡಬಂದು ಮಠಕೆ ಸಾಗಾಲೆಂದು
ಮತ್ತೈದು ಹೆಜ್ಜೆ ನಡೆದಾನು
ಮತ್ತೈದು ಹೆಜ್ಜೆ ನಡೆದಾನು ಅರ್ಜುನಸ್ವಾಮಿ
ಅತ್ತೀಮಣೆ ಬಂದು ಇದುರಾಗೆ
ಅತ್ತೀಮಣೆ ಬಂದರೆ ಮಠಕೆ ಸಾಗಲೆಂದು
ಮತ್ತೈದು ಹೆಜ್ಜೆ ನಡೆದಾನು ಅರ್ಜುನಸ್ವಾಮಿ
ಬಾಸಿಂಗ ಬಂದು ಇದುರಾಗಿ
ಬಾಸಿಂಗ ಬಂದರೆ ಮತ್ತೂ ಒಳ್ಳೆದೆಂದು
ಮತ್ತೆಂಟು ಹೆಜ್ಜೆ ನಡೆದಾನರ್ಜುನನಸ್ವಾಮಿ
ಕೇರ‌್ಕುಂಟೆ ಬಂದು ಇದುರಾಗಿ
ಕೇರ‌್ಕುಂಟೆ ಬಂದಾರೆ ಮತ್ತೂ ಒಳ್ಳೆದೆಂದು
ಅವು ಸಾಗಲಿ ನಮ್ಮ ಮಠಕೆಂದು
ಮುಂದೇಳು ಹೆಜ್ಜೆ ನಡೆದಾನರ್ಜುನಸ್ವಾಮಿ
ವಾಲುಗ ಬಂದು ಇದುರಾಗಿ
ವಾಲುಗ ಬಂದಾರೆ ಮಠಕೆ ಸಾಗಲೆಂದು
ಮತ್ತಾರು ಹೆಜ್ಜೆ ನಡೆದಾನರ್ಜುನಸ್ವಾಮಿ
ಎಲೆಕೊಪ್ಲು ಬಂದಾವು ಇದುರಾಗಿ
ಈಳ್ಯೆದೆಲೆ ಬಂದಾರೆ ಮತ್ತೂ ಒಳ್ಳೆದೆಂದು
ಮುಂದೈದು ಹೆಜ್ಜೆ ನಡೆದನುರ್ಜುನಸ್ವಾಮಿ
ಬೇವಿನ ವನಕೆ ಹೋದಾನು ಬೇವಿನ ತುಂಡೆ ಮುರಿದಾನು
ಮುರಿದು ಕಿವಿಯೊಳಗೆ ಸೆಕ್ಕಿ
ಕನ್ನೂಡಿ ತೆಗೆದು ಮುಖನೋಡಿ ಅರ್ಜುನಸ್ವಾಮಿ
ತನ್ನೋಟಕೆ ತಾನೆ ನಗುತಾನೆ
ತನ್ನೋಟಕೆ ತಾನೆ ಏನೆಂದು ನಗುತಾನೆ
ಸಂನ್ಯೇಸಿ ಯಾಸ ತನಗೆ ವರ್ಣೆಂದು
ಕಂಚಿಯ ವನಕೆ ಹೋದಾನರ್ಜುನಸ್ವಾಮಿ
ಕಂಚಿಯ ತುಂಡೆ ಮುರಿದಾನು
ಕಂಚಿಯ ತುಂಡೆ ಮುರಿದು ತಲೆಯೊಳಗೆ ಸೆಕ್ಕಿ
ಕನ್ನೂಡಿ ತೆಗೆದು ಮುಖನೋಡಿ ಅರ್ಜುನಸ್ವಾಮಿ
ತನ್ನೋಟಕೆ ತಾನೆ ನಗುತಾನೆ
ತನ್ನೋಟಕೆ ತಾನೆ ಏನೆಂದು ನಗುತಾನೆ
ಸಂನ್ಯೇಸಿ ಯಾಸ ತನಗೆ ವರ್ಣೆಂದು
ಕೇರಿಯತ್ತ ಮುಖಹಾಕಿ ಊರತ್ತ ಬೆನ್ನ್ಹಾಕಿ
ಸಿಳ್ಳೆಂದು ಸಾಲೆ ಸೆಳೆವಳೆ ರಜಕಾರರ ಹುಡುಗಿ
ನನ್ನೊಂದು ಸಾಲೆ ಸೆಳೆಕೊಡೆ
ಹತ್ತೆಂಟು ವರುಸಾದ ಚಿಕ್ಕರ ಮಡಿಯಲ್ಲದೆ
ತಪ್ಪಿ ಒಬ್ಬರ ಮಡಿಯ ಒಗೆ ನಾನು
ಕೇರಿಯತ್ತ ಮುಖಹಾಕಿ ಊರತ್ತ ಬೆನ್ನಾಕಿ
ಸಿಳ್ಳೆಂದು ಸಾಲೆ ಸೆಳೆವಳೆ ರಜಕಾರರ ಹುಡುಗಿ
ಗುಡುಗುಡು ಗುಟ್ಟಾಲಿ ಗುಡ್ಡ ಬೋರಿಡಾಲಿ
ಸಿಡಿಕೆಂಡಾದ ಮಳೆಯೇ ಸುರಿಯಾಲಿ
ಅಗಸರ ಮನೆಯ ಉಬ್ಬೆಯ ಹರಿವೆ ಹಿಸಿಯಾಲಿ
ಕೌರವರ ಮದ್ವೆ ಮೂರ‌್ದಿನ ತಡೆಯಾಲಿ
ಅಂದ್ಹೇಳಿ ಅರ್ಜುನಸ್ವಾಮಿ ಭೂಮಿ ಮುಟ್ಟಿ
ಸಾಪ ಹೊಡೆದಾನು
ಉಟ್ಟಂತ ಸಾಲೆ ಬಿಚ್ಚಿ ಹರಗೋಲು ಹಾಕಿ
ದಾಟಿಕೊಂಡು ಹೋದ ಬಡಿಮಾಣಿ
ಕಂಚೀನ ತಾಳಗಾರ ಕಂಚೀನ ಕೀಲಗಾರ
ಪುಣ್ಯಳ್ಳರ ಮನೆಯ ಹರಿಕಾರ
ಬಾಗಿಲ ಮುಂದೆ ತಡೆಯಿಲ್ಲದ ತಾಳ ತಗಿರಯ್ಯ
ತಾಳ ತೆಗಿಯೋಕೆ ನಮ್ಮಿಚ್ಚೋ ನಿಮ್ಮಿಚ್ಚೊ
ಕೇಂಡು ಬರುತೀನಿ ನಮ ಒಡಿಯಾನಾ
ನಿಮ್ಮಂತೆ ಕೈಯೋರು ನಿಮ್ಮಂತೆ ಕಾಲೋರು
ನಿಮ್ಮಂತ ಸೂಲಿ ಬುಜದೋರು
ನಮ್ಮಂತೆ ಸೂಲಿ ಬುಜದೊರಾದರೆ
ಅರ್ಜುನ ಭಾವನಲ್ಲದೆ ಪರರಲ್ಲ
ಅರ್ಜುನ ಭಾವನಲ್ಲದೆ ಪರರಲ್ಲ ತಾಳಗಾರ
ತಡೆಯಿಲ್ಲದೆ ತಾಳ ತೆಗಿರಯ್ಯ
ನಾರಾಯಣಸ್ವಾಮಿ ಮುಂದೆ ಅರ್ಜುನಸ್ವಾಮಿ ಹಿಂದೆ ಹೋಗ್ಯಾರು
ನಾರಾಯಣಸ್ವಾಮಿ ಯರಮನೇಲಿ ಹಿಂಗೆ ಹೇಳ್ಯಾರೆ
ಕೆಲ್ಸಂಬುದೇ ಅರಿಯಾರಿ ಬಗ್ಸಿಂಬೂದು ಅರಿಯಾರಿ
ತಂದೀರಿ ಈ ಮನೆಗೊಂದು ಇಧಿಗೋಳ
ದೇಸದ ಮ್ಯಾಲೆ ಹೋಗ ಸನ್ಯಾಸೀನ
ನಾನೇನು ಕರ‌್ಕೊಂಡು ಬಂದುದೇನೆ
ರಾತ್ರಿ ಮನಕಂಡೆದ್ದು ಅವ ಹೋಗ್ತಾನೆ
ಕಟ್ಟಿದ ಕಣಜಾದಾಗೆ ಮುತ್ತಿನ ಮರ ತಕ್ಕೊಂಡು
ಹಿಡಿ ಜೋಗಿ ನಿನ್ನ ಪಡಿನೂರು
ಯಾರು ಕೊಟ್ಟರು ಪರಿಯಾ ಮುಟ್ಟಂತ ಮಗನಲ್ಲ
ಚಿಕ್ಕೆಣ್ಣು ಬಂದು ಪಡಿಯಾ ಕೊಡಬೇಕು
ನಾರಾಯಣಸ್ವಾಮಿ ಮುಂದೆ ಅರ್ಜುನಸ್ವಾಮಿ ಹಿಂದೆ
ಹೋಗ್ಯಾರು ಸುಭದ್ರಿ ಅರಮನೀಗೆ
ಅಣ್ಣಯ್ಯ ಬರೂದು ಅಷ್ಟು ದೂರದಿ ಕಂಡು
ಕೆಂದಾದರೆ ಕಿರಿಮೊಗ್ಗು ಕುಯ್ತಂದು
ಅಣ್ಣನ ಸಿರಿಪಾದ ತೊಳೆದಾಳು
ನಾನಣ್ಣನಾದರೆ ನೀ ತಂಗಿಯಾದರೆ
ಸಂನ್ಯೇಸಿ ಪಾದ ತೊಳಿ ಮಗುವೆ
ಅಷ್ಟೆಂಬ ಮಾತಾ ಕೇಂಡಾಳೆ ಸುಭ್ರದಿ
ಕೇಳಿ ಕೆಂದಾವರೆ ಕಿರಿಮೊಗ್ಗು ಕುಯ್ತಂದು
ಸನ್ಯೇಸಿ ಪಾದ ತೊಳಿದಾಳು
ಕಟ್ಟೀದ ಕಣಜಾದಾಗೆ ನೆಕ್ಕಿ ಮುತ್ತಿನ ಮರ ತಗುದ
ಬಾಗಲಲಿರುವ ಮಗಸವತಿ ಕಾಯಿತಂದು
ಹಿಡಿಜೋಗಿ ನಿನ್ನ ಪಡಿನೂರು
ಆಡೋಕೆ ಗಡಿಗಿಲ್ಲ ಹಿಡಿಯೋಕೆ ಜೋಳಿಗಿಲ್ಲ
ಅಕ್ಕಿ ಊಟಕ್ಕೆ ತೊಳದೀಡೆ ಎಲೆಮಗುವೆ
ಸೊಪ್ಪು ಕುಡಿಸೊಪ್ಪು ಹೆರದೀಡೆ
ಅಣ್ಣನ ಮನಿಗೊಬ್ಬ ಸಂನ್ಯೇಸಿ ಬಂದಿದ್ನಂತೆ
ಅಣ್ಣತಂದು ಅಡಗೀಯ ಆಡಬೇಕು
ಕಡಿಯಕ್ಕಿ ತೊಳುಸೂತ ಕಡುದುಃಖ ಮಾಡುತ
ಮನದಲ್ಲಿ ಅರ್ಜುನನ ನೆನೆವೂತ
ಸೌಭದ್ರಿ ಅಕ್ಕಿಮ್ಯಾಲೆ ಕೋಡಿ ಹರಿಸ್ಯಾಳೆ
ದೊಡ್ಡಾ ಜಗುಲಿಯ ಮೇಲೆ ಉದ್ದಾಗಂಬಳೀನ ಹಾಸಿ
ಏಲಕ್ಕಿ ಜಂತದ ಬಳೆತೊಟ್ಟು ಕುಂತೈದಾನೆ
ಯಾವ ತಾಯಿ ಹಡೆದ ಮಗನಮ್ಮ
ದಿಂಡೇ ಹಾರನ ಕೂಡೆ ಪುಂಡು ತಾನಂಗೂಟಕೆ
ಸರಸರನೆ ಮಾಡೆ ಕೆಲಸನಾ ವರದೇಳಿ
ಸಾರಿ ಹೇಳಿದರು ನೆರಿದೋರು
ಆದಾವು ಅಡುಗೆ ಕಾದಾವು ಕುಡಿನೀರು
ಊಟಕೆ ಏಳು ಎಲೆ ಜೋಗಿ ಅಂದಾರೆ
ಸಣ್ಣಕ್ಕಿ ಅನ್ನವಲ್ಲದೆ ಉಣುವಲ್ಲೆ
ಅಷ್ಟೆಂಬ ಸುದ್ದಿ ಕೇಂಡಾರೆ ಸುಭದ್ರಿ
ತೊಂಡಲರಗಿಣಿಯ ಕರಿದಾಳು
ಕರಿದು ಕೈಯಾಗೆ ಕೊಟ್ಟು ವಾಲೀನ ಹೇಳ್ಯಾಳು
ಹೋಗ್ಬಲ್ಲಿ ಅಣ್ಣಯ್ಯನ ಮನಿತಂಕ
ಹರವಿದ್ದ ಹರವೀಗೆ ಹಾರಿ ಕೊಂಬಿದ್ದ ಕೊಂಬಿಗಾರಿ
ಬೇರಿಲ್ಲ ಮರದೊಳು ನೆಸೆದಾವು ಗಿಣಿಗಳು
ಹೋಗ್ಯಾವು ನಾರಾಯಣಸ್ವಾಮಿ ಅರಮನೆಗೆ
ನಾರಾಯಣಸ್ವಾಮಿಯ ಮನೆಗ್ಹೋದಾವು
ಈ ಓಲೆ ಒಪ್ಪಿಸ್ಯಾವು ಅವರ ಸೆರಗೀಗೆ
ಬಂದಾ ಓಲಿಗಳ ನಿಂದೂ ಓದಿಕೊಂಡು
ಜಾನಿಸಿಕೊಂಡ ಮನಸೀಲಿ
ನಾನಣ್ಣನಾದರೆ ನೀ ತಂಗಿಯಾದಾರೆ
ಸಣ್ಣಕ್ಕಿ ಅನ್ನ ಉಣಲಿಕ್ಕು
ಆದಾವು ಅಡುಗೆ ಕಾದಾವು ಕುಡಿನೀರು
ಊಟಕೇಳು ಎಲಿಜೋಗಿ
ಹಾಂಗೆ ಉಂಡರೆ ನಿನ್ನಣ್ಣಗೆ ಪುಣ್ಯವಿಲ್ಲ
ಎಣ್ಣೆ ಹಚ್ಚಿ ನೀರ ಎರಿ ಮಗುವೆ
ಅಷ್ಟೆಂಬ ಸುದ್ದಿ ಕೇಂಡಾಳು ಸುಭದ್ರಿ
ತೊಂಡಲರಗಿಣಿಯ ಕರೆದು ವಾಲೆಕೊಟ್ಟು
ಹೇಳ್ಯಾಳು ಹೋಗಿಬಲ್ಲಿ ಅಣ್ಣಯ್ಯರ ಮನಿತಂಕ
ಕೊಟ್ಟುಬಲ್ಲಿ ಈ ವಾಲೆ ಅವರ ಕೈಯೊಳಗೆ
ಹರವಿದ್ದ ಹರವೀಗೆ ಹಾರಿ ಕೊಂಬಿದ್ದ ಕೊಂಬಿಗ್ಹಾರ
ಬೇರಿಲ್ದ ಮರಕೆ ನೆಸೆದಾವು ಗಿಣಿಗಳು ಬಂದಾವು
ಸುಭದ್ರಿ ಅರಮನಿಗೆ
ಅವರಣ್ಣನಾದರೆ ನೀವ್ತಂಗಿಯಾದರೆ
ಎಣ್ಣೆ ಹಚ್ಚಿ ಎರಿಬೇಕಂತೆ
ಆದಾವು ಅಡುಗೆ ಕಾದಾವು ಕುಡಿನೀರು
ಸಾನಾಕೆ ಏಳೊ ಎಲಿಜೋಗಿ
ಉಟ್ಟಮಾಡಿ ಬಿಚಿದರೆ ಕಸ್ತೂರಿಮಲ್ಲಿಗೆ ಕೆಂಪು
ಯಾವೂರೊ ಜೋಗಿ ನಿನ್ಮಠ
ಅತ್ತಾನ ಪುರದಾಗೆ ಮಾಲಿಂಗನ ಮಠದಾಗೆ
ಯಾರ‌್ಯಾರನ ಬಲ್ಲೆ ಗುರುತಾನಾ
ಕುಂತಿ ನಮ್ಮತ್ತೆ ಕುಣಿಕ್ಯಾಲಿ ನಮ ನಾದಿನಿ
ನಕುಲ ಸಾದೇವ ಹಿರಿಭಾವ
ಅವರೈದು ಮಂದಿ ಚಂದಾಗೈದಾರೆ ಪುರದಾಗೆ
ಹಿರಿಯಾರ‌್ನ ಹೇಳಿದೆ ಕಿರಿಯಾರ‌್ನ ಹೇಳಿದೆ
ಮಧ್ಯದವನ್ನ ಮರೆತೆ ಹೆಣ್ಣೆ
ಚಿಕ್ಕಂದೀಲಿ ನನ್ನ ಕೊಟ್ಟೆನಂಥಾ ಇದ್ರು
ಹೆಸರೇಳಾಕೆ ನಾನು ಅಳುತ್ತಿದ್ದಿ
ಹಿತ್ತಾಲ ಹೊರಗೋಗಿ ನಿಟ್ಟೀನ ಬಾಳೆಲೆ ತಂದು
ಹೇಳ್ಯಾಳು ಊಟಕ್ಕೇಳೊ ಜೋಗಿ
ಬಳ್ಯಾಗುಂಡರೆ ನಿನ್ನಣ್ಣಗೆ ಪುಣ್ಯಿಲ್ಲ
ಅಷ್ಟುಂಬ ಗಂಗಾಳ ಬೆಳಗಿಕ್ಕು
ಅಷ್ಟೆಂಬ ಸುದ್ದಿ ಕೇಳ್ಯಾಳು ಸುಭದ್ರಿ
ತೊಂಡಾಲರಗಿಣಿಯ ಕರಿದು ವಾಲೆಕೊಟ್ಟು
ಹೋಗಿಬಲ್ಲಿ ಅಣ್ಣಯ್ಯನ ಮನಿತಂಕ
ಹರವಿದ್ದ ಹರವೀಗೆ ಹಾರಿ ಕೊಂಬಿದ್ದ ಕೊಂಬೆಗಾರಿ
ಬೇರಿಲ್ಲ ಮರಕೆ ನೆಸೆದಾವು ಗಿಣಿಗಳು
ನಾರಾಯಣಸ್ವಾಮಿ ಮನೆಗೋದು
ನಾನಣ್ಣನಾದರೆ ನೀ ತಂಗಿಯಾದರೆ
ನಾ ಉಣ್ಣ ಗಂಗಾಳ ಬೆಳಗಿಕ್ಕು
ಅಷ್ಟೆಂಬಾ ಸುದ್ದಿ ಕೇಂಡಾವು ಗಿಣಿಗಳು
ಬಂದಾವು ಸೌಭದ್ರಿ ಅರಮನಿಗೆ
ಅವರಣ್ಣನಾದರೆ ನೀ ತಂಗಿಯಾದರೆ
ಅವರುಣ್ಣ ಗಂಗಾಳ ತೊಳೆದಿಕ್ಕು
ಆದಾವು ಅಡುಗೆ ಕಾದಾವು ಕುಡಿನೀರು
ಊಟಕೆ ಏಳು ಎಲಿಜೋಗಿ
ಅನ್ನ ಇಕ್ಯಾಳು ಸಾರೂನು ಹನಿಸ್ಯಾಳು
ತುಪ್ಪ ಇಕ್ಕಾದೆ ಮರೆತಿದ್ಲು
ತುಪ್ಪ ಇಕ್ಕಾಕೆ ಬಂದಾಗ ಅರ್ಜುನಸ್ವಾಮಿ
ಸುಭದ್ರಿ ಮುಂಗೈ ಹಿಡಿದಾನು
ಅತ್ತೊಮ್ಮೆ ನೋಡ್ಯಾಳು ಇತ್ತೊಮ್ಮೆ ನೋಡ್ಯಾಳು
ಉಪ್ಪಿನಕಾಯಿ ಇಕ್ಕೋದು ಮರೆತ್ತಿದ್ಹೇಂದ್ಹೇಳಿ
ಹಿತ್ತಾಲ ಹೆರಕಂಡಿ ನೆಸಿದಾಳು ಸೌಭದ್ರಿ
ಬೆಳ್ಳಿ ಉಗಿನೇಣ ಉಗಿದಾಳು
ಬೆಳ್ಳೆ ಉಗಿನೇಣ ಉಗಿದು ಕೈಯಾಗೆ ಹಿಡಿದು
ಕಂಚಿ ಮರಕೆ ಉಗಿನೇಣ ಸುರುದಾಳು
ಅತ್ತೊಮ್ಮೆ ಇತ್ತೊಮ್ಮೆ ನೋಡ್ಯಾನು ಅರ್ಜುನಸ್ವಾಮಿ
ಕಡ್ಗೆ ಬಾವಯ್ಗೆ ಹಗೆಯಾದೆಂದ್ಹೇಳಿ
ಬಗಲಾಗಿನ ಬಾಕ ತೆಗೆದಾನು ಅರ್ಜುನಸ್ವಾಮಿ
ಕನ್ನೆ ಕೊಳ್ನೇಣ ಕೊಯ್ದನರ್ಜುನಸ್ವಾಮಿ
ತನ್ನ ನಿಜರೂಪ ತಿಳಿಸ್ಯಾನು

* * *