4. ಬಸವನ ಹಾಡು

ಸೂವಿರು ಸಂಗಯ್ಯ ಸೂವಿರೂ ಲಿಂಗಯ್ಯ
ಸುವಿಬಾರೋ ಚೆನ್ನಾ ಬಸವಯ್ಯ  ಪ
ಐದೂ ಮಾರುದ್ದಾ ವಾಲೇ ನಮ್ಮ ಕೈಯ್ಯಲ್ಲೀ
ಓದೂವೇ ಪದನಾ ಬುಡದಿಂದಾ
ಓದೂವೇ ಪದವಾ ಬುಡದಿಂದಾ ತುದಿತನಕಾ
ಲಾಲೀಸಿ ಕೇಳಿ ಜನರೆಲ್ಲಾ
ಅರುತವರು ನೀವು ಕೇಳಿ ಮರೆತವರೂ ನೀವು ಕೇಳಿ
ಮರತೂ ಮಲಗಿದರೂ ನೀವು ಕೇಳೀ
ಮರತೂ ಮಲಗಿದರೂ ನೀವು ಕೇಳಿ ಕಲ್ಯಾಣ ಕಥೆಯಾ
ಕೇಳಿದರೆ ಪಾಪಾ ಪರಿಹಾರಾ                                                                             ॥1 ॥

ಹತ್ತು ಮಾರುದ್ದಾ ಪುಸ್ತೂಕ ನಮ್ಮಕೈಯಲ್ಲೀ
ಎತ್ತುವೆ ಬಸವೈನಾ  ಚರಿತೇಯಾ
ಎತ್ತುವೆ ಚರಿತೇಯಾ ಬುಡದಿಂದಾ ಕೊನೆತನಕಾ
ಆಲೈಸೀ ಕೇಳೀ ಜನರೆಲ್ಲಾ
ಬಲ್ಲವರೂ ನೀವು ಕೇಳಿ ಚಿಕ್ಕವರೂ ನೀವೂ ಕೇಳಿ
ಕುಂತೂ ನಿಂತವರೂ ನೀವು ಕೇಳೇ
ಕುಂತೂ ನಿಂತವರೂ ನೀವು ಕೇಳಿ ಕಲ್ಯಾಣ ಕಥೆಯಾ
ಕೇಳಿದರೆ ಪಾಪಾ ಪರಿಹಾರಾ                                                                             ॥2 ॥

ಭೂಮಿ ಹುಟ್ಟಿದಕ್ಕಿಂತಾ ಭೂಲೋಕ ಬೆಳೆವುದಕ್ಕಿಂತಾ
ಬಸವಣ್ಣ ಹುಟ್ಟಿದನೂ ಮರುತೇಕೇ
ಗುಡ್ಡಾ ಹುಟ್ಟಿದ ಮೊದಲೂ ಗುಡುಗೂ ಎರಗದ ಮೊದಲೂ
ಬಸವೈಯ್ಯ ಹುಟ್ಟಿದನೂ ಮರುತಾಕೇ
ಹಳ್ಳಾ ಹರಿವುದಕ್ಕಿಂತಾ ಬಳ್ಳೀ ಚಿಗುರದ ಮೊದಲೂ
ದೇವ ಬಸವೈಯಾ ಉದೆಯಾದಾ                                                                    ॥3 ॥

ಬಸವೈ ಹುಟ್ಟಾಗಾಬಿಸಿಲಿಲ್ಲಾ ಗಾಳಿಲ್ಲಾ
ಬಸವೈನಾ ತಂಗೀ ಕುಸುಮಾಲೇ
ಬಸವೈನಾ ತಂಗೀ ಕುಸುಮಾಲೆ ಹುಟ್ಟಾಗಾ
ಹಸುರಾಗೀ ಹುಲ್ಲೂ ಚಿಗುರ‌್ಯಾವೂ
ಬಸವೈ ಹುಟ್ಟಾಗಾ ಹೊಸಪೇಟೆ ಕಟ್ಟಾಗಾ
ಹಸುಮಕ್ಕಳಿಲ್ಲಾ ಜನರಿಲ್ಲಾ
ಹಸುಮಕ್ಕಳಿಲ್ಲಾ ಜನರಿಲ್ಲಾ ಎಂದ್ಹೇಳೀ
ಭೂಮಿತಾಯಿ ಹುಟ್ಟಿದಳು ಮರುತೇಕೇ                                                            ॥4 ॥

ಭೂಮಿತಾಯಿ ಹುಟ್ಟಿದಳು ಮರುತೇಕೆ ಮತ್ತಿನ್ನೂ
ಸೂರ‌್ಯನಾರಾಯಣಾ ಉದಯಾಗೀ
ಸೂರ‌್ಯನಾರಾಯಣಾ ಉದಯಾಗೀ ಬಿಸಿಲೂಕಾದು
ನೂರೊಂದು ಜಾತೀ ಮರಹುಟ್ಟೀ
ನೂರೊಂದು ಜಾತೀ ಮರಹುಟ್ಟೀ ಮಳೆಬಂದೂ
ಹಸುರಾಗೀ ಹುಲ್ಲೇ ಚಿಗುರ‌್ಯಾವೂ                                                            ॥5 ॥

ಬಿಳಗಭಚೀ ಹುಲ್ಲೇ ಬಗ್ಗಿ ಬಗ್ಗೀ ಮೇಯುವಾಗ
ಎದ್ದರೇ ಸರಗಂಟೇ ನುಡಿದಾವೂ
ಬಸವೈನ ಗಾವಳಿತನಗಳೂ ನೋಡಿದರೆ
ಗಾವಗಲ್ಲೊಡೆದೂ ಮಠಕಟ್ಟೀ
ಗಾವಗಲ್ಲೊಡೆದೂ ಮಠಕಟ್ಟೀ ಕೋಣಂದೂರು
ಬೈಲೊಳ್ಳೆಯದೆಂದೂ ನೆಲೆಗೊಂಡಾ                                                                ॥6 ॥

ಮರವನೆ ಕಡಿದಲ್ಲೀ ಮರವನೆ ಪೂಜಿಸಿದಲ್ಲೀ
ಪಂಚಾಂಗಾ ಕೂಡೀ ಮನಕಟ್ಟೀ
ಪಂಚಾಂಗಾ ಕೂಡಿ ಮನೆಕಟ್ಟೀ ಮಾನವರೂ
ಬಸವಿಲ್ಲದ ಚಿಂತೇ ಬಿಡುತಾರೇ
ಬಸವಿಲ್ಲದ ಚಿಂತೇ ಬಿಡುತಾರೇ ಮಾನವರೂ
ದೂರು ವೈದಾರೂ ಶಿವನಲ್ಲೀ                                                                             ॥7 ॥

ಏನು ಬಂದಿರಿ ಮಾನವರೇ ಮತ್ತೇನೂ ಬಂದಿರಿ
ಬಂದಾ ಕಾರಣವಾ ನಮಗ್ಹೇಳೀ
ಏನೂ ಬರಲಿಲ್ಲ ಮತ್ತೇನೂ ಬರಲಿಲ್ಲಾ
ಬಸವಿಲ್ಲದ ಚಿಂತೇ ಬಿಡುತೇವೇ
ಬಸವಿಲ್ಲದ ಚಿಂತೇ ಬಿಡಬೇಡಿ ಮಾನವರೇ
ಬಸವೈ ಬರುತಾನೇ ನಿಮ್ಮರಮನೆಗೇ                                                             ॥8 ॥

ಬಸವಣ್ಣ ನಿಮಗ್ಯಾಕೊ ಗಾವಾಳೀತನಗಾಳು
ಗಾವಾಗಲ್ಲೊಡೆದೂ ಮಠಕಟ್ಟೀ
ಗಾವಾಗಲ್ಲೊಡೆದೂ ಮಠಕಟ್ಟೀ ಮಾನವರು
ಬಸವಿಲ್ಲದ ಚಿಂತೇ ಬಿಡುತಾರೇ
ಬಸವಿಲ್ಲದ ಚಿಂತೇ ಬಿಡುತಾರೇ ಮಾನವರು
ನೀ ಹೋಗಿ ಸಲಗೋ ಮರತೇಕೇ                                                                     ॥9 ॥

ಬಸವೈ ಹುಟ್ಟಿದಲ್ಲೀ ಬಿಸಲುಗಳು ಕಾದಲ್ಲಿ
ಬಿಡದೇಳೂ ದಿವಸಾ ಮಳೆ ಹೋಯಿದೂ
ಬಿಡದೇಳು ದಿವಸಾ ಮಳೆಹೊಯ್ದು ಗಾಳೀ ಬೀಸೀ
ಹಸುರೇಳು ಕುಡಿಯೇ ಫಲಬಂದೂ
ಹಸುರೇಳು ಕುಡಿಯೇ ಫಲಬಂದ ತಾವಲ್ಲೀ
ವಕ್ಲಿಗರ ಮುದ್ದಣ್ಣಾ ಮನೆಕಟ್ಟೀ                                                                          ॥10 ॥

ವಕ್ಲೀಗರ ಮುದ್ದಣ್ಣಾ ಮನೆಕಟ್ಟೀ ಹೊಲಗಳಿಗೆ
ಎಳ್ಳೂ ಜೀರಿಗೆಯಾ ಮೊಳೆಹಾಕೀ
ಮಕ್ಕಿಗದ್ದೆಯವರೂ ಮಕ್ಕಳಾವಂದಿಗರೂ
ಲೆಕ್ಕ ಉಳ್ಳವರೂ ಬಡವಾರೂ
ಲೆಕ್ಕಾಉಳ್ಳವರೂ ಬಡವಾರೂ ಬಸವೈಯ್ಯ
ನೀ ಹೋಗಿ ಸಲಗೋ ಮರುತೇಕೇ                                                                 ॥11 ॥

ಹಾಗೆಂಬಾ ಸುದ್ದೀಯಾ ಕೇಂಡಾನೇ ಬಸವೈಯ್ಯ
ಗರಗರ ಹಿಂದಾಕೆ ತಿರುಗ್ಯಾನೂ
ಹಾದಿ ಸವರಿಸ್ಯಾರೂ ಓಣೀಯಾ ಕಡಿಸ್ಯಾರು
ಬೀದಿಗೆ ತೋರಣವಾ ಹಾಕ್ಸ್ಯಾರೂ
ಬೀದಿಗೆ ತೋರಣವಾ ಹಾಕ್ಸ್ಯಾರೂ ಮಾನವರು
ಬಸವೈ ಬರುತಾನೆ ನಮ್ಮರಮನೆಗೇ                                                             ॥12 ॥

ಬಸವನ ಕಟ್ಟುವದೂ ಮುತ್ತೀನಾ ನೆಲಗಟ್ಟೂ
ಕೆಂದವರೇ ಗೂಟೇ ಹದಿನಾರೂ
ಕೆಂದವರೇ ಗೂಟೇ ಹದಿನಾರು ಈ ಮನೆಯ
ರಂಬೆಯರೂ ದೃಷ್ಟೀ ಸುಳಿರಮ್ಮಾ                                                                  ॥13 ॥

ಗಂಧದ ಮಣೆಯ ಮೇಲೆ ಹೊಂದೀಡೋ ಪಾದಾವಾ
ಹೊಂದಿಟ್ಟ ಪಾದಕ್ಕೆ ನೆನೆಯಕ್ಕೀ
ಹೊಂದಿಟ್ಟ ಪಾದಕ್ಕೆ ನೆನೆಯಕ್ಕಿ ಇಡಿಗಾಯಿ
ಬಿಡಿಹೊನ್ನೊಂದೀಗಾ ಇಡಿಸ್ಯಾರೂ
ಬಿಡಿಹೊನ್ನೊಂದೀಗಾ ಇಡಿಸ್ಯಾರು ಬಸವೈಗೇ
ಹಾಲ್ಹಣು ತುಪ್ಪಗಳೇ ನೈವೇದ್ಯಾ                                                                    ॥14 ॥

ಹೊತ್ತಾರೇ ಮುಂಚೆದ್ದೂ ಮುಖವಾ ಮೋಜನಮಾಡಿ
ಬಣ್ಣದ ಕೊಟ್ಟಿಗೆಗೇ ನಡೆದಾರೂ
ಬಣ್ಣದ ಕೊಟ್ಟಿಗೆಗೇ ನಡೆದಾರೂ ಮಾನವರೂ
ಶಿವಣೇಯಾ ನೊಗವೇ ಹೆಗಲೇರೀ
ಶಿವಣೇಯಾ ನೊಗವೇ ಹಗಲೇರಿ ಮತ್ತಿನ್ನೂ
ಮತ್ತೀ ನೇಗಲವೇ ಹೆಗಲೇರೀ
ಮತ್ತೀ ನೇಗಲವೇ ಹೆಗಲೇರಿ ಮತ್ತಿನ್ನೂ
ಬಣ್ಣಾದ ಜೊತಗಾ ಬಲಗೈಲೀ
ಬಣ್ಣಾದ ಜೊತಗಾ ಬಲಗೈಲಿ ತೆಕ್ಕೊಂಡೂ
ಹಂಡಾ ಹುಂಡೆಂದೂ ಹೊಡೆದಾರೂ                                                               ॥15 ॥

ಆರು ಸುರಿಯುತ್ತಾ ಹಾಳೀಲಿ ನಿಲಸುತ್ತಾ
ಬಾಯಾರಿಕೆಂದೂ ಮನೆಗ್ಹೋಗೀ
ಬಾಯಾರಿಕೆಂದೂ ಮನೆಗ್ಹೋಗಿ ಮಾನವರೂ
ಮೋರೆಗೆ ಬಿಸಲಟ್ಟೀ ಬಳಲೀದೇ
ಆರೂ ಸುರಿಯುತ್ತಾ ಹಕ್ಲಲ್ಲೀ ನಿಲಸುತ್ತಾ
ಹಸುವಾಯಿತೆಂದೂ ಮನೆಗ್ಹೋಗೀ
ಹಸುವಾಯಿತೆಂದೂ ಮನೆಗ್ಹೋಗಿ ಮಾನವರು
ಮೋರೆಗೆ ಬಿಸಲಟ್ಟೀ ಬಳಲೀದೇ                                                                     ॥16 ॥

ಕಡಲೇಯಾ ಹೊಲಕೇ ಹೋಗ್ಯಾನೇ ಬಸವೈಯ್ಯ
ಕಡಲೇಳೂ ಕುಡಿಯಾ ಸಲಮೆದ್ದೂ
ಕಡಲೇಳೂ ಕೂಡಿಯಾ ಸಲಮೆದ್ವಕ್ಲಿಗರಣ್ಣ
ಕಡದಂಬಲಿ ಹೊಡೆದಾ ಹಡೆಗಡ್ಡಾ
ಹಣೆಗಳು ಹರಿದಾವೂ ಶಿರಗಳು ಕತ್ತರಿಸಿದವೂ
ಸಾಲಿಗೆ ಸರಗಂಟೇ ಹರಿದಾವೂ
ಸಾಲಿಗೆ ಸರಗಂಟೇ ಹರಿದಾವು ಬಸವಣ್ಣಾ
ಸಿಟ್ಟೀನಲ್ಹೋದಾ ಶಿವನಲ್ಲೀ                                                                              ॥17 ॥

ಏನು ಬಂದೆ ಬಸವೈಯ್ಯ ಎಂತು ಬಂದೇ ಬಸವೈಯ್ಯ
ಬಂದಾಕಾರಣವಾ ನಮಗ್ಹೇಳೂ
ಕುಡಿವರೆ ನೀರಿಲ್ಲಾ ಮೇಯುವರೇ ಹುಲ್ಲಿಲ್ಲಾ
ನಿಲ್ಲುವುದಕೇ ನಮಗೇ ಮಠವಿಲ್ಲಾ
ಗೋವೇ ಮೇದುಕೊಳ್ಳೋ ಗುತ್ತೀಯಾ ಮೇದುಕೊಳ್ಳೊ
ಮೇದುಕೊಳ್ಳೋ ಕೌವ್ಲೇ ದುರ್ಗಾವಾ
ಮೇದುಕೊಳ್ಳೋ ಕೌಲೇ ದುರ್ಗಾವಾ ಬಸವೈಯ್ಯ
ಮದಗದ ಕೆರೆಯಲ್ಲೀ ನೀರುಕುಡಿಯೋ
ಮಗದಗ ಕೆರೆಯಲ್ಲೀ ನೀರ ಕುಡಿಯೊ ಬಸವೈಯ್ಯ
ಅರಳೀಮರ ನಡಿಯೇ ಪವಡೀಸೋ                                                               ॥18 ॥

ಉದ್ದೀನಾ ಹೊಲಕೇ ಹೋಗ್ಯಾನೆ ಬಸವೈಯ್ಯ
ಉದ್ದೇಳು ಫಲವಾ ಸಲಮೆದ್ದೂ
ಉದ್ದೇಳೂ ಫಲವಾ ಸಲಮೆದ್ದು ವಕ್ಲಿಗರಣ್ಣ
ತಿದ್ದಂಬೀಲ್ಹೊಡೆದಾ ಹಣೆಗಡ್ಡಾ
ಹಣೆಗಳು ಹರಿದಾವೂ ಶಿರಗಳೂ ಕತ್ತರಿಸಿದವು
ಗೆಜ್ಜೇ ಸರಪಾಣೀ ಹರಿದಾವೂ
ಗೆಜ್ಜೇ ಸರಪಾಣೀ ಹರಿದಾವು ಬಸವೈಯ್ಯ
ಸಿಟ್ಟೀನಲ್ಹೋದಾ ಶಿವನಲ್ಲೀ                                                                              ॥19 ॥

ಏನು ಬಂದೆ ಬಸವೈಯ್ಯ ಎಂತು ಬಂದೇ ಬಸವೈಯ್ಯ
ಬಂದಾ ಕಾರಣವಾ ನಮಗ್ಹೇಳೂ
ಮೇಯುವರೆ ಹುಲ್ಲಿಲ್ಲಾ  ಕುಡಿಯುವರೇ ನೀರಿಲ್ಲಾ
ನಿಲ್ಲುವುದಕೇ ನಮಗೇ ಮಠವಿಲ್ಲಾ
ಗೋವೇ ಮೇದುಕೊಳ್ಳೋ ಗುತ್ತೀಯಾ ಮೆದುಕೊಳ್ಳೋ
ಮೆದುಕೊಳ್ಳೋ ಕೌಲೇದುರ್ಗಾವಾ
ಮೆದುಕೊಳ್ಳೋ ಕೌಲೇದುರ್ಗಾವಾ ಬಸವೈಯ್ಯ
ಮದಗದ ಕೆರೆಯಲ್ಲಿ ನೀರುಕುಡಿಯೋ
ಮದಗದ ಕೆರೆಯಲ್ಲಿ ನೀರುಕುಡೀಯೋ ಬಸವೈಯ್ಯ
ಆಲದಮರ ನಡಿಯೇ ಪವಡಿಸೋ                                                                   ॥20 ॥

ಕುಂಟೆಗೆ ಬಂದೇವೂ ಕೂರೀಗೇ ಬಂದೇವೂ
ಸಾಲೀಗೆ ಕಟ್ಟೀ ಸಮನಾಗೀ
ಸಾಲೀಗೆ ಕಟ್ಟೀ ಸಮನಾಗೀ ತಿರುಗೆಂದೂ
ಒಂದುಂಬ್ರೀ ಕೋಲೇ ಹುಡಿಯಾದೂ
ಒಂದುಂಬ್ರಿ ಕೋಲೇ ಹುಡಿಯಾದೂ ಶಿವರಾಯ
ನಾವೊಲ್ಲೆವೆಯ್ಯ ಮರತೇಕೇ
ಒಂದು ಕೋಲು ನಮಗಾದು ಒಂದು ಕೋಲು ನಿಮಗಾದು
ಒಂದು ಕೋಲು ನಂದೀ ಮರಕಾದೂ
ಒಂದು ಕೋಲು ನಂದೀ ಮರಕಾದು ಬಸವೈಯಾ
ನೀ ಹೋಗಿ ಸಲಗೋ ಮರುತೇಕೇ
ಹಾಗೆಂಬ ಸುದ್ದೀಯಾ ಕೇಂಡಾನೇ ಬಸವೈಯ್ಯ
ಗರಗರ ಹಿಂದಾಕೇ ತಿರುಗ್ಯಾನೇ
ಗರಗರ ಹಿಂದಾಕೇ ತಿರುಗನ್ನೇ ಬರುವಾಗಾ
ಅಲ್ಲೊಬ್ಬ ಜಾಣಾ ಕಣ್ಣಿಟ್ಟಾ
ಅಲ್ಲೊಬ್ಬ ಜಾಣಾ ಕಟ್ಟಿಟ್ಟು ತರಿಬ್ಯಾನೂ
ದೃಷ್ಟೀನಾದಾವೂ ಶಿವರಾಯಾ
ದೃಷ್ಟೀನಾದಾರೇ ದೃಷ್ಟೀ ಕೇರ್ವದು ಬಲ್ಲ
ಬಿದ್ದಲ್ಲಿ ಹೊರೆಹುಲ್ಲಾ ತರಿಸ್ಯಾರೂ
ಬಿದ್ದಲ್ಲಿ ಹೊರೆಹುಲ್ಲಾ ತರಿಸ್ಯಾರು ಮಾನವರೂ
ನೀಹೋಗಿ ಸಲಗೋ ಮರುತೇಕೇ                                                                   ॥21 ॥

ಹಾಗೆಂಬ ಸುದ್ದೀ ಕೇಂಡಾನೇ ಬಸವೈಯ್ಯ
ಗರಗರ ಹಿಂದಾಕೇ ತಿರುಗ್ಯಾನೂ
ಗರಗರ ಹಿಂದಕ್ಕೆ ತಿರುಗನ್ನೇ ಬರುವಾಗಾ
ಅಲ್ಲೊಬ್ಬ ಜಾಣಾ ಕಣ್ಣಿಟ್ಟಾ
ಅಲ್ಲೊಬ್ಬ ಜಾಣಾ ಕಣ್ಣಿಟ್ಟಾ ತರುಬ್ಯಾನೂ
ದೃಷ್ಟೀನಾದಾವೂ ಶಿವರಾಯಾ
ದೃಷ್ಟೀನಾದಾರೇ ದೃಷ್ಟೀ ಕೇರ್ವದು ಬಲ್ಲ
ಬಿದ್ದಲ್ಲಿ ಹೊರೆಹುಲ್ಲಾ ತರಿಸ್ಯಾರೂ
ಬಿದ್ದಲ್ಲಿ ಹೊರೆಹುಲ್ಲಾ ತರಿಸ್ಯಾರೂ ಮಾನವರೂ
ನೀಹೋಗಿ ಸಲಗೋ ಮರುತೇಕೇ                                                                   ॥22 ॥

ಹಾಗೆಂಬಾ ಸುದ್ದೀ ಕೇಂಡಾನೇ ಬಸವೈಯ್ಯ
ಗರಗರ ಹಿಂದಾಕೇ ತರುಗ್ಯಾನೂ
ಗರಗರ ಹಿಂದಕ್ಕೆ ತಿರುಗನ್ನೇ ಬರುವಾಗಾ
ಜಾರಗಲ್ ಮೇಲ್ಹೋಗಿ ಜಾರಿಬಿದ್ದೂ
ಜಾರಗಲ್ ಮೇಲ್ಹೋಗಿ ಜಾರಿಬಿದ್ದು ಸಿರಬಂದು
ರುಂಡೀ ಜಾರಿದವೋ ಶಿವರಾಯಾ
ರುಂಡೀ ಜಾರಿದರೇ ರುಂಡೀ ಕೊಡ್ವದು ಬಲ್ಲಾ
ಬಿದ್ದಲ್ಲಿ ಹೊರೆಹುಲ್ಲಾ ತರಿಸ್ಯಾರೂ
ಬಿದ್ದಲ್ಲಿ ಹೊರೆಹುಲ್ಲಾ ತರಿಸ್ಯಾರು ಮಾನವರೂ
ನೀಹೋಗಿ ಸಲಗೋ ಮರುತೇಕೇ                                                                   ॥23 ॥

ಒಕ್ಕಗ ತೂರಾಗಾ ಒಳರಾಸೀ ಮುಕ್ಕಾಗ
ಬೆರಕೋಲಲಿ ಬಡಿವಾರು ಹಣೆಮೇಲೇ
ಬೆರಕೋಲಲಿ ಬಡಿವಾರು ಹಣೆಮೇಲೆ ಶಿವುರಾಯ
ಮಾರೆಲ್ಲಾ ರಾಮಾ ರೈತಾದೂ
ಅಗಳೂ ಕಡಿಸ್ಯಾರು ಬೀದಿಗೆ ಮಣ್ಣು ಹೊಯ್ಸರು
ಬಿದ್ದ ಹೆಮ್ಮರನಾ ಎಳಿಸ್ಯಾರೂ
ಬಿದ್ದ ಹೆಮ್ಮರನಾ ಎಳಿಸ್ಯಾರು ಶಿವರಾಯಾ
ಲಕ್ಕೀ ಅರಿಕೋಲೇ ಪುಡಿಯಾದೂ
ಲಕ್ಕೀ ಅರಿಕೋಲೇ ಪುಡಿಯಾದು ಶಿವರಾಯಾ
ನಾವೊಲ್ಲೆವಯ್ಯ ಮರುತೇಕೇ
ಒಂದು ಕೋಲು ನಮಗಾದೂ ಒಂದು ಕೋಲು ನಿಮಗಾದೂ
ಒಂದು ಕೋಲು ನೆಲ್ಲೀ ಮರಕಾದೂ
ಒಂದು ಕೋಲು ನೆಲ್ಲೀ ಮರಕಾದು ಬಸವೈಯ್ಯ
ನೀಹೋಗಿ ಸಲಗೋ ಮರುತೇಕೇ                                                                   ॥24 ॥

ತಗ್ಗಿನ ಗದ್ದೆಯವರು ಬುದ್ದೀಯಾ ಉಳ್ಳವರು
ಸಿದ್ಹೊನ್ನು ಗಳಿಸೀದ ಸುಜಾಣ್ರೂ
ಸಿದ್ಹೊನ್ನು ಗಳಿಸೀದಾ ಸೂಜಾಣ್ರು ಬಸವೈಯ್ಯ
ನೀ ಹೋಗಿ ಸಲಗೋ ಮರುತೇಕೇ
ನಾವಾಗಿ ಸಿಟ್ಟು ಮಾಡಿದರೇ ನಾವಾಗಿ ಕೋಪ ಮಾಡಿದರೆ
ಭೂಲೋಕ ನಿನ್ಯಾರೂ ಸಲಗುವರೂ
ಭೂಲೋಕ ನಿನ್ಯಾರೂ ಸಲಗುವರು ಬಸವಯ್ಯ
ನೀಹೋಗಿ ಸಲಗೋ ಮರುತೇಕೇ                                                                   ॥25 ॥

ಹಾಂಗೆಂಬ ಸುದ್ದೀಯಾ ಕೇಂಡಾನೇ ಬಸವಯ್ಯ
ಗರಗರ ಹಿಂದಾಕೇ ತಿರುಗ್ಯಾನೂ
ತಾಯಿ ಮಕ್ಕಳು ನಾವು ನಲವತ್ತು ಮಂದ್ಯಾದರೆ
ದೀಡುಪತ್ರಕೇ ಬರಿಸ್ಯಾರೂ
ದೀಡುಪತ್ರಕೆ ಬರಿಸ್ಯಾರು ಶಿವರಾಯ
ಸಾಲ ತೀರಿಸುವ ಬಗೆ ಹೇಗೇ
ಸಾಲ ತೀರಿಸುವುದಕೇ ಬಾಲಯ್ಯರವರುಂಟು
ನೀಹೋಗಿ ಸಲಗೋ ಮರುತೇಯಾ                                                               ॥26 ॥

ನಾಲ್ವತ್ತರ ಮುಂದೇ ಜಾಳೀ ಮಾಡುವಳುಂಟು
ಇಟ್ಟಲು ಕೂಡಿ ಹಾಲಾ ಕರೆದಾರೂ
ಇಟ್ಟಲು ಕೂಡಿ ಹಾಲಾ ಕರೆದಾರೂ ಶಿವರಾಯಾ
ಬಾಲಯ್ಯರ ಸಾಕಾ ಬಗೆ ಹೇಗೇ
ಬಾಲಯ್ಯರ ಸಾಕುವುದಕೆ ಬಾಲೇರು ಅವರುಂಟು
ಬೆಟ್ಟಲ್ಲಿ ಮಡ್ಡಿ ತಿನಿಸ್ಯಾರೂ
ಬೆಟ್ಟಲ್ಲಿ ಮಡ್ಡೀ ತಿನಿಸ್ಯಾರು ಬಸವಯ್ಯ
ನೀ ಹೋಗಿ ಸಲಹೋ ಮರುತೇಕೇ                                                                ॥27 ॥

ಕೊಟ್ಟಿಗೆಯ ಸಗಣೀ ಹೊತ್ತಿಗೆ ತೆಗೆಯುವರಿಲ್ಲಾ
ಕಟ್ಟಿರು ನಮಕಾಲಾ ಕಡಿದಾವೂ
ಕಟ್ಟಿರು ನಮಕಾಲಾ ಕಡಿದಾವೂ ಶಿವರಾಯಾ
ನಾವಲ್ಲೆವಯ್ಯ ಮರುತೇಕೇ
ಕೊಟ್ಟಿಗೆ ಸಗಣೀಯ ಹೊತ್ತಿಗೆ ತೆಗೆವಾರುಂಟೂ
ಅಟ್ಟಾಕೆ ಹುಲ್ಲಾ ಸರಿದಾರೂ
ಅಟ್ಟಾಕೆ ಹುಲ್ಲಾ ಸರಿದಾರೂ ಬಸವಯ್ಯ
ನೀ ಹೋಗಿ ಸಲಗೋ ಮರುತೇಕೇ                                                                 ॥28 ॥

ಕಡುಲೋಬಿ ಮನೆಗೇ ಕರೆದ್ಹಾಲಿಗೋದಾರೆ
ಕರುವುಂಡೀತೆಂದೂ ಹೇಳ್ಯಾರೂ
ಕರುವುಂಡೀತೆಂದೂ ಹೇಳಾರೂ ಶಿವರಾಯ
ಅಪಾಪೇ ನಮಗೇ ದೊರಿಕ್ಯಾವೂ
ಮೂದೇವಿ ಮನೆಗೆ ಮಜ್ಜಿಗೆಗೇ ಹೋದಾರೇ
ಎದ್ಹೋಗೀ ನೀರಾ ಬೆರೆಸ್ಯಾರೂ
ಎದ್ಹೋಗಿ ನೀರಾ ಬೆರೆಸುವರು ಶಿವರಾಯಾ
ಆ ಪಾಪೇ ನಮಗೆ ದೊರಿಕ್ಯಾವೂ
ಆ ಪಾಪ ಈ ಪಾಪ ನರರೀಗಿರಲೀ ಬಸವಾ
ನೀ ಹೋಗೀ ಸಲಗೋ ಮರುತೇಯಾ                                                           ॥29 ॥

ಅಂಗಳದೊಳಗಿನ ಹುಲ್ಲಾ ಒಪ್ಪಾದಲಿ ಮೇದುಕೊಂಡು
ಮತ್ತೋಗಿ ಮೇಯುವರೇ ನಿಲುತೇವೇ
ಮತ್ತೋಗಿ ಮೇಯುವರೇ ನಿಲುತೇವೆ ವಳಗಿರುವಾ
ಕಡುಲೋಬಿ ವನಕೇಲಿ ಹೊಡೆದಾಳೂ
ಕಡುಲೋಬಿ ವನಕೇಲಿ ಹೊಡೆದಾಳು ಒಡಲಗಿನ
ಕಂದಯ್ಯ ತರತರನೇ ನಡಿಗ್ಯಾನೂ
ಕಂದಯ್ಯ ತರತರನೇ ನಡಿಗ್ಯಾನು ಶಿವರಾಯಾ
ನಾ ಹೋಗಲಾರೇ ಮರುತೇಕೇ                                                                      ॥30 ॥

ಬಸವೈ ಬರುತಾನೆಂದು ಹಸನಾಗಿ ಕಣ್ಣೀರಾಕಿ
ಗೊಣಬೇಲಿಹುಲ್ಲಾ ಸುರಿಯುವಾ
ಗೊಣಬೇಲಿ ಹುಲ್ಲಾ ಸುರಿಯುವ ಭಕ್ತನ ಮನೆಗೆ
ಬತ್ತನೂರು ಕಂಡಗೇ ಬೆಳೆಯಾಲಿ
ಬಸವೈ ಬರುತಾನೆಂದು ಸಿಟ್ಟೀಲಿ ಕಣ್ಣೀರಾಕಿ
ಕಟ್ಟಿದ ಗೂಟದಲಿ ಹೊಡೆಯುವಾ
ಕಟ್ಟಿದ ಗೂಟದಲಿ ಹೊಡೆಯುವ ಮೋಚೀ ಮನೆಗೆ
ದಟ್ಟಾ ದರಿದ್ರೇ ದೊರಕಲಿ                                                                                 ॥31 ॥

* * *