1. ಗಣಪತಿ ಹಾಡು-1
ಆದೀ ಶಕ್ತಿಯೂ ಸಾಧಿಸಿ ಯೋಚನೆ ಮಾಡೀ
ಹಾದೀ ಹುಡ್ಡಿದಳೊಂದು ಕಾರ್ಯಕ್ಕೇ
ಬೀದೀಗಿಳಿದಾಳೂ ಮೈಯುಜ್ಜೀ ಕರೆದಾಳೂ
ಬೆವರೂ ತೆಗೆದಾಳೂ ಉಗುರಲ್ಲೀ
ಬೆವರೂ ತೆಗೆದಾಳೂ ಉಗುರಲ್ಲೀ ಗಿರಿಜೇಯು
ಕರದಲ್ಲೀ ಬೆವರಾ ಹಿಡಿದಾಳೂ
ಕರದಲ್ಲೀ ಬೆವರಾ ಹಿಡಿದಾಳೊಂದ್ಯುಕ್ತೀಗೇ
ಅಂದಾ ಕೊಂದುಗೊಂಬೆ ಮಾಡ್ಯಾಳೂ ॥
ಬೊಂಬೇ ಮಾಡ್ಯಾಳೂ ವಂಬತ್ತೂ ನವದ್ವಾರಾ
ತುಂಬಾ ಭೂಷಣವಾ ತೊಡಿಸ್ಯಾಳೂ
ಸುಂದರದಾ ಬೊಂಬೆಗೆ ಬಂಗಾರದಾಬರ್ಣವಿಟ್ಟೂ
ಕುಂಡಲ ಕೀರೀಟಾ ತಲೆಗಿಟ್ಟೂ
ಕುಂಡಲ ಕೀರೀಟಾ ತಲೆಗಿಟ್ಟೂ ಗಿರಿಜೇಯೂ
ತಿದ್ದಿದಳು ತಿಲಕಾ ನೊಸಲೀಗೇ
ತಿದ್ದಿದಳು ತಿಲಕಾ ನೊಸಲೀಗೆ ಗಿರಿಜೆಯೂ
ಜೀವಾ ಕಲೆಗಳಾ ತುಂಬಿದಳೂ ॥
ರಾಸೀಗಣಗಳಿಗೆಲ್ಲಾ ಲೇಸಾದಾ ಗಣನಿವನೂ
ಕೂಸೀಗೊಂದ್ಹೆಸರಾ ಇಡುವೇನೂ
ಕೂಸೀಗೊಂದ್ಹೆಸರಾ ಏನೆಂದೂ ಇಡುವೇನೂ
ಗಣಪಾತೀ ಎಂದೂ ಹೆಸರಿಟ್ಟೇ
ಹೆಸರಾನಾನಿಟ್ಟೇ ಭಾಷೇಯಾ ನಾ ಕೊಟ್ಟೇ
ವರವಾ ಕೊಡುವೇನಾ ಗಣಪತಿಗೇ
ದಿಟ್ಟಾನಾಗೈಯ್ಯಾ ಭಕ್ತರ ಶಿಷ್ಟ ನೀನಾಗಯ್ಯ
ಕರುಣಾವಿಟ್ಟು ರಕ್ಷೀಸೂ ಜಗವನ್ನೂ ॥
ಗೆಜ್ಜೆ ಅಂದೀಗೆಕಾಲೂ ಹಂದೀ ಬಾ ಕಂದಾನೇ
ಸುಂದರದಾಮುಖವಾ ನೋಡೂವೇ
ಹರಡೀದಾ ಕೈಯಾ ಕೊಡವೀ ಬಾ ಕಂದಾನೇ
ಬೆಡಗೀನಾ ಪಾದಾ ಎಡಕಿಟ್ಟೂ
ಬೆಡಗೀನಾ ಪಾದಾ ಎಡಕಿಟ್ಟೂ ಬಲಕಿಟ್ಟೂ
ತೊಡೆಯನೇರಯ್ಯ ಗಣಪಾತೀ
ತೊಡೆಯಾನೇರಯ್ಯ ತುಡುವಾ ನಾ ಕೊಡುವೇನು
ವಡೆ ಅತ್ತೀರಾಸ ಭಕ್ಷಾವಾ ॥
ವಡೆ ಅತ್ತೀರಾಸಾ ಭಕ್ಷಾವಾ ತುಡುಕೊಡುವೇ
ಸ್ತನಪಾನಾಗಳ ಕೊಡುವೇನೂ
ಬಾರೋ ಕಂದಯ್ಯ ಸಾರೋ ಚಾವಡಿ ಮುಂದೇ
ಈರೋ ಬಾಗಿಲಲ್ಲೀ ಪಾರಾವಾ
ಈರೋ ಬಾಗಿಲಲ್ಲೀ ಪಾರಾವಾ ಬಾಲಾನೇ
ಯಾರೊಳವೀಕೇ ಬಿಡಬೇಡಾ
ಯಾರ್ಯಾರೊಳವೀಕೇ ಬಿಡಬೇಡಾ ಕಂದಾನೇ
ನಾ ಹೋಗುವೆ ಪಾಕಾ ಶಾಲೇಗೇ ॥
ಅತ್ತಾ ವೀಶೂನೂ ಕಾಶೀ ಸ್ನಾನವ ಮಾಡೀ
ದೇಶದ ಭಕ್ತಾರಾ ಸಲಹುತ್ತಾ
ದೇಶದ ಭಕ್ತರಾ ಸಲಹುತ್ತಾ ಶಿವರಾಯಾ
ಬಾಗೀರಥಿ ತೀರ್ಥಾತೆಗೆದಾನೂ
ಬಾಗೀರಥಿ ತೀರ್ಥಾ ಬಂಗಾರದ ಗಿಂಡಿಲಿ ತೆಗೆದೂ
ಸಾಗೀ ಬಂದಾನೂ ಚಾವಡಿಗೇ ॥
ಬಂದವರು ಯಾರಯ್ಯ ಹಿಂದೆ ಹಿಂದೆ ಸಾರಯ್ಯ
ಮುಂದೆ ಬಂದರೆ ಕೊಂದೂ ಕಳೆವೇನೂ
ಕೊಂಬು ಬೊಂಬೇ ನುಡಿಯಾ ಶಂಬೂ ಶಂಕರ ಕೇಳೀ
ಕಂಬೂಕಂಠಾಕೇ ಕೈ ಹಾಕೀ
ಕಂಬೂಕಂಠಾಕೇ ಕೈಹಾಕಿ ಸಿಳ್ಳುಗುರಿಂದಾ
ಶಿರವಾ ಕತ್ತರಿಸೊಳಿಗೇ ನಡೆದಾನೂ ॥
ಲೋಕಾನಾಥಾನೂ ಪಾಕಾಶಾಲೆಗೆ ಹೋಗೀ
ಬೇಕೇ ಶ್ರೀ ಗೌರೀ ಶಿವತೀರ್ಥಾ
ಗಂಡನ ಕಂಡಾಳೂ ಕೆಂಡಾದಂತೇರೋಷಾ
ಗಿಂಡೀಲುದಕಾವಾ ತೆಗೆತಂದೂ
ಗಿಂಡೀಲುದಕಾವಾ ತೆಗೆತಂದೂ ಶ್ರೀ ಗೌರೀ
ಗಂಡಾನಾ ಪಾದಾ ತೊಳೆದಾಳೂ ॥
ಗಂಡಾನಾ ಪಾದಾ ತೊಳೆದೂ ಪೂಜೆಯ ಮಾಡೀ
ಕಂಡಿರೆ ಬಾಗಿಲಲ್ಲೀ ಜಗಪುಂಡಾನಾ
ಕಂಡಿರೆ ಬಾಗಿಲಲ್ಲೀ ಜಗಪುಂಡಬಾಲನ ಪಾರಾ
ಮಾರಾ ನೀ ಬಂದಾ ಪರಿಹೇಳೂ
ರಂಬೇ ನೀ ಕೇಳೇ ತುಂಬಿ ತುಳ್ಕೂವಂತಾ
ಕಂಬಾ ದಂತಿರುವಾ ಹೊಸಬೊಂಬೇ ॥
ಕಂಬಾದಂತಿರುವಾ ಹೊಸಬೊಂಬೆ ಜಂಬವಮಾಡಿ
ಬಾಗಿಲಲ್ಲಿ ನಮ್ಮಾ ತಡದೀತೂ
ತಡದಾ ಹುಡುಗಾನಾ ಸಡಗಾರಾಗಳನಿಲಿಸೀ
ಹಿಡಿದೇ ಕೈ ಬೆರಳಿಂದಾ ಶಿರವನ್ನೂ
ಹಿಡಿದೇ ಕೈ ಬೆರಳಿಂದಾ ಶಿರವಾ ಸಿಳ್ಳುಗುರಿಂದಾ
ಸೀಳೀ ನಾ ಬಂದೇ ವಳವೀಕೇ
ಸೀಳೀ ನಾ ಬಂದೇ ವಳವೀಕೇ ಯಲಮಡದೀ
ಕಳವಳಾವೇನೇ ಮನದಲ್ಲೀ ॥
ಅಂದಾಚಂದಾಕೊಂದು ಕಂದಾನಾ ಪಡದೇನೂ
ಮಂದಾಮತಿಯಾಗೀ ಕೊಂದೀರಾ
ಮಂದಾಮತಿಯಾಗೀ ಕೊಂದಿರಾ ಪತಿಗಾಳೇ
ಮುಂದೇನು ಗತಿಯೋ ಶಿವಶೀವಾ
ಇಂದೂ ಶೇಕರನೇ ಕಂದಾನಾ ಮಡಿದವನೇ
ಕಂದಾನಾ ದುಃಖಾ ತಡಿಲಾರೇ
ಕಂದಾನಾ ದುಃಖಾ ತಡಿಲಾರೇ ಪತಿಗಾಳೇ
ತಂದೂಕೊಡಿ ಗೋರಾ ವಿಶವನ್ನೂ ॥
ಇಂದೂ ಮುಖಿಕೇಳೇ ಕಂದನ ದುಃಖಾ ತಾಳೇ
ಮಂದಾಗಮನೇಯೇ ಎದ್ದೇಳೇ
ಮಂದಾಗಮನೇ ಏಳೇ ವಂದೇಯಾ ದಿನದಲ್ಲಿ
ಕೊಂದ ಕಂದಾನಾ ಪಡೆವೇನೂ
ವಂದೇ ದಿನದಲ್ಲೇ ಕೊಂದಾಕಂದನ ಪಡೆವೇ
ಸುಂದರಾಂಗಿಯೇ ವಳಗೀರೇ ॥
ವನಚರರೆಲ್ಲಾ ಕೇಳೀ ಗನಬೇಗಾದಿಂದೇಳಿ
ದೇಶಾದೇಶಾಕೇ ನೀವು ತೆರಳೀ
ದೇಶಾದೇಶಾಕೇ ನೀವು ತೆರಳೀ ವನಚರರೇ
ದೋಸಿಂಗಳ ಸಿರವಾ ಕಡತನ್ನೀ
ಸುತ್ತೂ ಹುಟ್ಟುವ ಜನ್ಮಾ ಮತ್ತಾರೂ ತಾವಾಗಿ
ಉತ್ತರ ದಿಕ್ಕೀಗೇ ತಲೆಹಾಕೀ
ಉತ್ತರ ದಿಕ್ಕೀಗೇ ತಲೆಹಾಕೀದವರಾ ಶಿರವಾ
ಕತ್ತಿಂದಾ ಕಡಿದೂ ತೆಗೆತನ್ನೀ ॥
ಶಿವನಾ ನುಡಿಯನನೂ ಶಿರಕೇ ಏರಿಸಿಕೊಂಡು
ದೇಶಾದೇಶಾವಾ ತೊಳಲುತ್ತಾ
ದೇಶಾದೇಶಾವನೆಲ್ಲಾ ಏಸುನಾವ್ ಹುಡುಕಿದರೂ
ದೋಸಿಗರ ಶಿರವೇ ಸಿಗಲಿಲ್ಲಾ
ದೋಸಿಗರ ಸಿರವೇ ಸಿಗಲಿಲ್ಲಾವೆಂದೇಳೀ
ಸೂಸೀದರೂ ಜಲವಾ ಕಣ್ಣಲ್ಲೀ
ಸೂಸೀದರೂ ಜಲವಾ ಕಣ್ಣಲ್ಲೀ ಶಿವಭಟರು
ಏ ಶಿವನೇ ಎಂದೂ ಮರುಗಿದರೂ ॥
ಗುಡ್ಡಾ ಬೆಟ್ಟಾ ಹತ್ತೀ ಅಡ್ಡಾಡೀ ಹುಡ್ಕಿದರೂ
ದೊಡ್ಡಾದೊಂದಾನೇ ಮಲಗಿತ್ತೂ
ಸುತ್ತಾ ನೋಡಿದರೂ ಅತ್ತಿತ್ತಾ ನೋಡಿದರೂ
ಸತ್ತೀತೋ ಎಂದು ನೋಡಿದರೂ
ಸತ್ತೀತೋ ಎಂದೂ ನೋಡಿದರೂ ಶಿವಭಟರೂ
ಹತ್ತೀರ ಬಂದೂ ನೋಡಿದರೂ
ಹತ್ತೀರಾ ಬಂದೂ ನೋಡಿರೂ ಶಿವಭಟರೂ
ಉತ್ತರ ದಿಕ್ಕೀಗೇ ತಲೆಹಾಕೀ ॥
ಉತ್ತರ ದಿಕ್ಕೀಗೇ ತಲೆಹಾಕಿದ ಮದ್ದಾನೆ ಕಂಠ
ಕತ್ತೀ ಇಂದಾಲೀ ಕಡಿದಾರೂ
ಕತ್ತೀ ಇಂದಾಲೀ ಕಡಿದಾರೂ ಶಿವಭಟರೂ
ಹೊತ್ತಾರಾನೇಕಾ ಜನಸೇರೀ
ಕತ್ತಲೆಹೊತ್ತೀಗೇ ಕೈಲಾಸಕ್ಕೇ ತಂದೂ
ಹೊತ್ತಿದ್ದಾ ಸಿರವಾ ಇಳಸ್ಯಾರೂ
ಹೊತ್ತಿದ್ದಾ ಸಿರವಾ ಇಳಿಸೀ ಶಿವನಾ ಮುಂದೇ
ನಿತ್ತೇರು ಕೈ ಮುಗಿದೂ ಶಿವನೀಗೇ ॥16 ॥
ತಂದಾ ಶಿರವನ್ನೂ ನಂದೀ ವಾಹನನೋಡಿ
ನೊಂದನು ಮನದಲ್ಲಿ ಶಿವರಾಯಾ
ಕತ್ತೂ ಕಂಠವಾ ನೋಡಿ ತತ್ತಾರಾಗೊಂಡಾನೂ
ಮತ್ತೇ ಮಾಡುವದ್ಹೇಗೇ ಮಗನನ್ನೂ
ವಾನರ ಸಿರವಲ್ಲಾ ದಾನವರಾ ಸಿರವಲ್ಲಾ
ಮಾನವರಾ ಶಿರವೇ ಇದು ಅಲ್ಲಾ !
ಮಾನವರಾ ಸಿರವೇ ಇದು ಅಲ್ಲಾ ಕಂಠಾವೂ
ಕಾನೋಳಾಗಿರುವಾ ಕಾಡಾನೇ ॥17 ॥
ಕಾನೋಳಾಗಿರುವಾ ಕಾಡಾನೇ ಶಿರವನ್ನೂ
ಜೋಡಿಸಿ ಹಚ್ಚುವದುಂಟೇ ಮಗನೀಗೇ
ನಾಡೂ ಕಾಡೊಳಗೇ ಮೂಡಾದೋಸಿಗರಿಲ್ಲಾ
ಮಾಡೂವದೇನೂ ಯತ್ನಾವಾ
ಮಾಡೂವದೇನೂ ಯತ್ನಾ ಮಗನಾ ಪುಣ್ಯ
ಜೋಡೀಸಿಡುವೇನೂ ಮಕುಟಾವಾ ॥18 ॥
ಮುಂಡಕೆ ರುಂಡಾ ಕೂಡೀ ಕುಂಡಲ ಕಿರೀಟಿವಿಟ್ಟೂ
ತಿದ್ದಿಟ್ಟಾ ತಿಲಕಾ ನೊಸಲೀಗೇ
ತಿದ್ದಿಟ್ಟಾ ತಿಲಕಾ ನೊಸಲೀಗೆ ಶಿವರಾಯಾ
ಮಗನೀಗೊಂದು ಜೀವಾ ಪಡೆದಾನೂ
ಜೀವಾ ಪಡೆದಾನೂ ಮಡದೀಯಾ ಕರೆದಾನೂ
ಪಡೆದಾ ಮಗನನ್ನೂ ನೋಡೆಂದಾ ॥19 ॥
ದಡಬಡನೆದ್ದಾಳೂ ಪೊಡವೀಯಲಿ ಬಿದ್ದಾಳೂ
ವಡನೇ ಎದ್ದಾಳೂ ಗಿರಿಜೇಯೂ
ವಡನೇ ಎದ್ದಾಳೂ ಗಡಗಡಾ ಬಂದಾಳೂ
ಜೋಡಿಸಿದ ಕಂಠಾ ಕಂಡಾಳೂ
ಜಡೆಯಾ ನಾಗಾನಂತೇ ಹೆಡೆಯುಳ್ಳಾ ಸೊಂಡೀಲೂ
ದಾಡೇ ದಂತಗಳಾ ನೋಡ್ಯಾಳೂ
ದಾಡೇ ದಂತಗಳಾ ನೋಡ್ಯಾಳು ಗಿರಿಜೇಯು
ಬೇಡಾ ಈ ಕಂದಾ ಪತಿಗಾಳೇ ॥20 ॥
ರೂಡಿಯಲಿ ನೀನೇನೂ ಮೂಡಾಳೇ ಶ್ರೀಗೌರಿ
ಜೋಡಿಸಿದಾ ಕಂಠಾ ಬಿಡಲುಂಟೇ
ದಾಡೇ ದಂತವ ನೋಡೀ ಕ್ರೋದಾ ಮಾಡಲು ಬೇಡಾ
ಪಾಡು ಪಂಥದಲೀ ಬಲವಂತಾ
ಪಾಡು ಪಂಥದಲೀ ಬಲವಂತಾ ಏಕಾದಂತಾ
ಲೋಕಕ್ಕೇ ಇವನೇ ಗುಣವಂತಾ ॥21 ॥
ಕಮಲಾಕ್ಷಿ ನೀ ಕೇಳೇ ಬಲುದಕ್ಷಾ ಈ ಮಗನೂ
ಸೂಕ್ಷ್ಮಾ ಬುದ್ಧೀಯಾ ಮದ್ದಾನೇ
ಸೂಕ್ಷ್ಮಾ ಬುದ್ದೀಯಾ ಮದ್ದಾನೇ ಕಂಠಾದಿಂದಾ
ಮೋಕ್ಷ ಉಂಟಾಯ್ತೂ ಮಗನೀಗೇ
ಪ್ರಾಣಕಾಂತೇ ಕೇಳೇ ತ್ರಾಣುಳ್ಳಾನೆಯ ಕಂಠಾ
ಜಾಣಾ ಮಗನೀಗೇ ದೊರಕೀತೂ
ಜಾಣಾ ಮಗನೀಗೇ ದೊರಕಿದ ಕಾಣದಿಂದಾ
ತ್ರಾಣುಳ್ಳವನಾದ ಜಗದಲ್ಲೀ ॥22 ॥
ಸುಂಡಿಲು ಮುಖದವರಾ ಕಂಡವರೂ ಯಾರಿಲ್ಲಾ
ಲಂಡಾ ನಾಯ(ಕ)ನೇ ಗಣಪತೀ
ಲಂಡಾ ನಾಯ(ಕ)ನೇ ಗಣಪತೀಗುಂಟಾಯ್ತು
ಪುಂಡಾ ಪ್ರಚಂಡಾ ಜಗದಲ್ಲೀ
ಪುಂಡಾ ಪ್ರಚಂಡಾ ಜಗದಲ್ಲೀ ಈ ಮಗನಾ
ಕಂಡೂ ಸಂತಸಾಗೊಂಡೀರೂ
ಪತಿಯಾ ಮಾತಾಕೇಳೀ ಸತಿಯೂ ಸಂತಸತಾಳೀ
ಒಳ್ಳೆಯದೆಂದೊಳಗೇ ನಡದಾಳೂ ॥23 ॥
* * *
2. ಗಣಪತಿ ಹಾಡು-2
ಇಂದೂಧರನೂ ಬೇರೊಂದು ಯೋಚನೆ ಮಾಡೀ
ಕಂದಾರೆಲ್ಲಾರಾ ಕರೆದಾನೂ
ಇತ್ತಾಬನ್ನಿ ಮಕ್ಕಳೇ ಸುತ್ತೀ ಭೂಮಿಯನೆಲ್ಲಾ
ಮತ್ತೇ ಮೊದಲಾಗಿ ಬಂದಾರೇ
ಮತ್ತೇ ಮೊದಲಾಗೀ ಬಂದವರಿಗೆ ಕೊಡುವೇನೂ
ಉತ್ತಮವಾದ ಮೊದಲಾ ಪೂಜೇಯಾ ॥1 ॥
ತಂದೇ ಮಾತಾ ಕೇಳಿ ಕಂದರು ಸಂತಸತಾಳೀ
ಮುಂದೇ ಮುಂದಾಕೇ ನಡೆದಾರೂ
ಮುಂದೇ ಮುಂದಾಕೇ ಭೂಮಿಯಸುತ್ತಲಿಕೇ
ಮುಂದೊತ್ತಿ ಅತ್ತಾ ನಡೆದಾರೂ ॥2 ॥
ಇತ್ತಾ ಗಣಪತಿಯೂ ಮತ್ತೊಂದ್ಯೋಚನೆ ಮಾಡೀ
ಪೃಥ್ವಿಪಾಲಾಕಾ ಈ ಜನಕಾ
ಸೃಷ್ಟಿಲಾಯಾಕ್ಕೆ ಕರ್ತುರುಂಡಾಮಾಲಾ
ಬ್ರಹ್ಮಾಂಡವೆಲ್ಲಾ ಇವನಲ್ಲೀ
ಬ್ರಹ್ಮಾಂಡವೆಲ್ಲಾ ಇವನಾ ನಾಭಿಯಲುಂಟು
ಮೂರು ಸುತ್ತು ಸುತ್ತೂವೇ ಶಿವನೀಗೇ ॥3 ॥
ಗಣಪತಿ ಮೂರು ಸುತ್ತೂ ಶಿವ ಪ್ರದಕ್ಷಿಣೆ ಮಾಡಿ
ನಿತ್ತೂ ಬೇಡಿದನೂ ಪೂಜೇಯಾ
ಪೃಥ್ವೀ ಬಾಲಕರೊಳಗೇ ಉತ್ತೂಮಾ ನೀನಾದೇ
ಸತ್ತೂ ಹುಟ್ಟುವದೇ ನಿನಗಿಲ್ಲಾ
ಸತ್ತೂ ಹುಟ್ಟುವದೇ ನಿನಗಿಲ್ಲಾ ಗಣಪತಿಯೇ
ಇತ್ತ ಬಾ ಕಂದಾ ಬಲವಂತಾ ॥4 ॥
ಬಲವಂತ ಜ್ಞಾನಾವಂತಾ ಏಕದಂತಾ ಮಗನೀನೂ
ಲೋಕಕ್ಕೇ ನೀನೇ ಗುಣವಂತಾ
ಇದ್ದಾ ಮಕ್ಕಳಲ್ಲೀ ಬುದ್ಧೀವಂತಾ ನೀನೂ
ಎದ್ದೂ ಬಾ ಕಂದಾ ಗದ್ದುಗೆಗೇ
ಎದ್ದೂ ಬಾ ಕಂದಾ ಗದ್ದುಗೇ ಏರಯ್ಯ
ಶುದ್ಧಾತ್ಮದಲ್ಲಿ ಕೊಟ್ಟೇ ಮೊದ್ಲಪೂಜೇ ॥5 ॥
ಮೊದಲು ಗಣಪತಿ ಪೂಜೇ ವಡನೇ ಶಿವನಾ ಪೂಜೇ
ಕಡೆಯೊಳು ಮಾಡಾಲೀ ಮಹಪೂಜೇ
ಕಡೆಯೊಳು ಮಾಡಾಲೀ ಮಹಪೂಜೆಯಾ ಜನರೆಲ್ಲಾ
ದೃಡವಾದ ವರವಾ ನಾ ಕೊಟ್ಟೇ
ಮೊದ್ಲು ಪೂಜೆಯು ನಿನಗೇ ಗಣಪಾತೀ ॥6 ॥
ಮೊದ್ಲು ಪೂಜೆಯು ನಿನಗೇ ಗಣಪಾತೀ ಕೇಳಯ್ಯ
ಇಷ್ಟಾರ್ತ ಫಲವಾ ನೀಡಯ್ಯ
ಕಂದಾ ನೀ ಕೇಳೂ ವಂದೇ ಮನಸೀನಲ್ಲಿ
ಆದಿಪುರುಷಾರಾ ಬಜಿಸಯ್ಯ
ವೇದಾ ಮಂತ್ರಾದಿಂದಾ ಆದಿ ಪುರುಷಾರಮ್ನ
ಮಾದವ ನಾರಾಯಣನೆಂದೂ ಬಜಿಸಿದನು ॥7 ॥
ಹರಿಯೂ ಪರಬ್ರಹ್ಮಾರೂ ಒಂದಾಗಿ ಬಂದಾರೂ
ಒಂದೊಂದಾಗಿ ವರವಾ ಕೊಟ್ಟಾರೂ
ದಂಡಾ ಆಯುಧಾ ಧನ ಶರಪರಶೂ ಕೊಡುವನೇ
ಹಿಡಿಕಂದಾ ನೀನೂ ಕರದಲ್ಲೀ
ತೊಡುವಾ ಬಿಡುವಾ ಕ್ರಮವಾ ವಡದೂ ಹೇಳಿದೆ ಕಂದಾ
ಮುಂದೀನಾ ಕಾರ್ಯನಿಂದೆಂದಾ ॥8 ॥
ಲಂಡಾನಾಯಕವೇ ಬ್ರಹ್ಮಾಂಡಾದಲ್ಲೆಲ್ಲಾ
ಸಾಲೂಮಂಟಾಪಾ ಸರದೀಪಾ
ಸಾಲೂಮಂಟಾಪಾ ಸರದೀಪಾಗಳ ಹೊಚ್ಚೇ
ಕಾಲಕಾಲಕ್ಕೂ ಪೂಜಾಲೀ
ಕಾಲಕಾಲಾದಲ್ಲೂ ಸಾಲೂ ಮಂಟಪದಲ್ಲೂ
ಬಾದ್ರಾಪದ ಶುದ್ಧಾ ಚೌತೀಲೂ ॥9 ॥
ಬಾದ್ರಾಪದ ಶುದ್ಧಾ ಚೌತಿಯ ದಿನದಲ್ಲಿ
ಬಾಲ ಗಣಪತಿ ಪೂಜೇ ನಡೆಯಾಲೀ
ಬಾಲಗಣಪತಿ ಪೂಜೇ ನಡೆಯಾಲೀ ಲೋಕವೆಲ್ಲಾ
ಬಾಳೇಯಾ ಹಣ್ಣೂ ಹಾಲು ತುಪ್ಪಾ
ಬಾಳೇಯಾ ಹಣ್ಣು ಹಾಲು ತುಪ್ಪ ಭಕ್ಷಗಳಿಂದಾ
ಬಾಲಾ ಗಣಪತಿಗೇ ಯಡಮಾಡಿ ॥10 ॥
ಬಾಲಾ ಗಣಪತಿಗೇ ಯಡೆಮಾಡೀ ಎಂದೇಳೀ
ಸಾಲೋಕ್ಯಾವರವಾ ನಾಕೊಟ್ಟೇ
ಸಾಲೋಕ್ಯಾವರವಾ ನಾಕೊಟ್ಟೇ ಕಂದಯ್ಯ
ಪಾಲೀಸೈ ಲೋಕಾ ಕರುಣಾದೀ
ಸಾಲೋಕ್ಯ ವರವಾ ಬಾಲಗಣಪತಿಗೆ ಕೊಟ್ಟಾ
ನೀಲಾಕಂಠಾಗೇ ಕೈ ಮುಗೀರೀ ॥11 ॥
* * *
3. ಗಣಪತಿ ಹಾಡು-3
ಸುಂಡಲ ಗಣಪತಿಗೇ ಭೂಮಂಡಲದಲೆಲ್ಲಾ
ಬಂಗಾರದ ಮಂಟಪವಾ ರಚಿಸ್ಯಾರೂ
ಮಂಟಪ ತೋರಣದಡಿಯಾ ತೊಂಡಲು ಹೂ ಗೊಂಚಲು
ದಂಡಾಗಣಪತಿಯಾ ಮೊದ್ಲುಪೂಜೆ
ದಂಡಾಗಣಪತಿಗೇ ದುಂಡುಮಲ್ಲಿಗೆ ಹೂವ್ವಿನಾದಂಡೇ
ಬೆಂಡೂವಾದ್ಯಾವಾ ನುಡಿಸಿದರೂ ॥1 ॥
ಹಳ್ಳೀ ಹಳ್ಳೀಯಲ್ಲೂ ಡೊಳ್ಳಿನಾ ಗಣಪತಿಗೇ
ಒಳ್ಳೇ ಕಜ್ಜಾಯಾ ಎಳ್ಳುಂಡೇ
ಒಳ್ಳೇ ಕಜ್ಜಾಯಾ ಎಳ್ಳುಂಡೆ ಕಡಲೆಕಾಯೀ
ಬೆಳ್ಳೀ ಹರಿವಾಣದಲ್ಲೀ ಎಡೆಮಾಡೀ
ಬೆಳ್ಳೀ ಹರಿವಾಣದಲ್ಲೀ ಎಡೆಮಾಡೀ ಬಕ್ತಾರೂ
ಮಂಗಳಾರತಿಯಾ ಬೆಳಗ್ಯಾರೂ ॥2 ॥
ಮಂಗಾಳಾರತಿಯಾ ಬೆಳಗ್ಯಾರೇ ಗಣಪತಿಗೇ
ದೇವಾದುಂದೂಭೀ ಮೊಳಿಗ್ಯಾವೂ
ದಂಡಾಗಣಪತಿಯೂ ಉಂಡೂ ಸಂತಸದಿಂದಾ
ದುಂಡು ಮಲ್ಲಿಗೆ ಹೂವೀನಾ ದಂಡೆಯಾ
ಮಲ್ಲಿಗೆ ಹೂವಿನಾ ದಂಡೆಯ ಪ್ರಸಾದದಿಂದಾ
ಇಷ್ಟಾರ್ಥ ಫಲವಾ ತಾ ಕೊಟ್ಟಾ ॥3 ॥
ತಾಯೀ ಶ್ರೀಗೌರೀ ಮುರಿ ಮುರಿ ಚಕ್ಕುಲಿ ಮಾಡೀ
ಸರಿದಿಟ್ಟಳಕ್ಷೇ ಪಾತ್ರೇಲೀ
ಇಟ್ಟಾ ಚಕ್ಕೂಲಿ ಭಕ್ಷದ ರಾಸಿಯನೆಲ್ಲಾ
ಕಡಗಣ್ಣಲಿ ಕಂಡಾ ಗಣಪಾತೀ
ಸಿದ್ದೀ ನಾಯಕನು ಎದ್ದೊಳಗೇ ಹೋದಾನೂ
ಭಕ್ಷಾದಾ ರಾಸೀ ನೋಡ್ಯಾನೂ ॥4 ॥
ಇದ್ದಾ ಕಜ್ಜಾಯವಾ ಕದ್ದು ತಿನ್ನುವನೆಂದೂ
ಸದ್ದಿರದೆ ಚಕ್ಕೂಲಿ ತಾ ಮೆದ್ದಾ
ಚಕ್ಕುಲಿ ಸ್ವರಕೇಳಿ ಪಕ್ಕಾನೆ ಶ್ರೀಗೌರಿ
ವಕ್ಚೆಲಿ ಬಣ್ಣಕೋಲಾತೆಕ್ಕೊಂಡೂ
ವಕ್ಚೆಲಿ ಬಣ್ಣಕೋಲಾ ತಕ್ಕೊಂಡೂ ಶ್ರೀಗೌರೀ
ಹೊಕ್ಕಳು ಬೋಜನಾ ಶಾಲೇಗೇ ॥5 ॥
ತಾಯಿ ಬರುವ ಸೂಕ್ಷ್ಮಾ ಸಿದ್ದೀ ನಾಯಕ ನೋಡಿ
ಶುದ್ಧ ಪಶ್ಚಿಮಕ್ಕೇ ಓಡಿದಾ
ಶುದ್ಧ ಪಶ್ಚಿಮಕ್ಕೇ ಗದ್ದೇಯ ಬಯಲೀಗೇ
ಬಿದ್ದೋಡಿದಾನೂ ಗಣಪಾತೀ ॥6 ॥
ಊರಾ ಹುಡುಗಾರೂ ಸೇರಿ ದಾರಿಯಲ್ಲೀ
ಮಾಡಿಟ್ಟರೊಂದೂ ತೊಡಕನ್ನೂ
ಮಾಡಿಟ್ಟರೊಂದೂ ತೊಡಕೀನಾಗಂಟನ್ನೂ
ತೋಡಿಟ್ಟಾರೊಂದೂ ಗುಳಿಯನ್ನೂ
ಹೂಡೀದಾ ಗದ್ದೇಲೀ ಓಡಿ ಹೋಗೂವಾಗಾ
ತೋಡೀದಾ ಗುಳಿಗೇ ಅಡಿಹಾಕೀ ॥7 ॥
ತೋಡೀದಾ ಗುಳಿಗೇ ಅಡಿಹಾಕೀ ಗಣಪಾತೀ
ಮಾಡಿದಾ ತೊಡ್ಕೀಗೇ ಪಾದಹಾಕೀ
ಮಾಡಿದ ತೊಡ್ಕೀಗೇ ಪಾದಹಾಕಿ ಗಣಪಾತೀ
ಎಡವೀ ಭೂಮೀಗೇ ಬಿದ್ದಾನೊ
ಬಿದ್ದಾ ಬಾರಕ್ಕೆ ಉಡ್ದಾರಾ ವಡದಾವೂ
ಮುತ್ತೂ ರತ್ನಗಳೂ ಉದುರಿದವೂ ॥8 ॥
ಗಡಗಡ ಬಂದಾಳೂ ಮಗನಾ ಹಿಡಿದೆತ್ಯಾಳೂ
ಹೆಡೆಯಾ ನಾಗಾನಾ ಹಿಡಿತಂದೂ
ಹೆಡೆಯಾ ನಾಗಾನಾ ಹಿಡಿತಂದೂ ಶ್ರೀಗೌರೀ
ಹೊಟ್ಟೀಗೊಂದೂ ಕಟ್ಟಾ ಬಿಗಿದಾಳೂ
ಅತ್ತಾ ಚಂದಿರನೂ ಬಿದ್ದಾ ಗಣಪತೀ ನೋಡಿ
ಪರಿಹಾಸ್ಯವಾಗಿ ನಕ್ಕಾನೂ ॥9 ॥
ಸಿದ್ದೀ ನಾಯಕನೂ ಎದ್ದುತಾ ನೋಡೀದಾ
ರೌದ್ರ ಕೋಪಾವಾ ತಾಳೀದಾ
ಇಂದೂ ನೀ ಕೇಳೂ ಖಳಚಂದ್ರಾ ನೀಕೇಳು
ಪರಿಹಾಸ್ಯವಾಗೀ ನಗುತೀಯಾ
ಪರಿಹಾಸ್ಯವಾಗಿ ನಗುವಾ ಕಾರಣದಿಂದಾ
ಮುಂದಿನ್ನು ನಿನಗೇ ಕಲೆಯಾಗಿ ॥10 ॥
ಮುಂದಿನ್ನು ನಿನಗೇ ಕಲೆಯಾಗಿ ರಾವುಸೋಕೀ
ಚಂದುಳ್ಳಾ ಮುಖವೇ ಕಂದಾಲೀ
ಚಂದುಳ್ಳಾ ಮುಖವೂ ಕಂದೀ ಕರ್ರಾಗಾಗಿ
ಅಡಗೀ ಹೋಗಲೀ ಮಹಬೆಳಕೂ
ಅಡಗೀ ಹೋಗಲೀ ಮಹಬೆಳಕೆಲ್ಲವೆಂದ್ಹೇಳೀ
ಕೋಪದಿಂ ಶಾಪಾವಾ ಕೊಟ್ಟಾನು ॥11 ॥
ಕಾಲ ಕಾಲದಲ್ಲೂ ಈ ಚೌತೀ ದಿನದಲ್ಲೂ
ಭೂಲೋಕದಲ್ಲಿರುವಾ ಜನರೆಲ್ಲಾ
ಭೂಲೋಕದಲ್ಲಿರುವಾ ಜನರೆಲ್ಲಾ ನಿನ್ನನ್ನೂ
ಬಾಡೀದಾ ಮುಖವಾ ನೋಡಾದೇ
ಬಾಡೀದಾ ಮುಖವಾ ನೋಡಾದೆ ಈರಾಲಿ
ನೋಡಿದವರಿಗೇ ಪೀಡೇಯೂ ॥12 ॥
ನೋಡಿದವರೀಗೇ ಪೀಡೇ ಕುಂದೂಕೊರತೆ
ಗೂಡಿ ಕೊರಗಾಲಿ ದಿನದೀನಾ
ಗೂಡಿ ಕೊರಗಾಲಿ ದಿನದಿನವೆಂದ್ಹೇಳಿ
ಕೋಪಾದಿಂ ಶಾಪಾ ಕೊಟ್ಟಾನು ॥13 ॥
ಸಿದ್ದೀಗಣಪತಿ ಪದಾ ಬುದ್ದೀವಂತರು ಕೇಳೀ
ನಿದ್ದೇಯಿಂದೆದ್ದೂ ಕೇಳಿದರೇ
ನಿದ್ದೇ ಇಂದೆದ್ದೂ ಕೇಳಿದಾ ಜನರೀಗೆ
ಭದ್ದ ವೈಕುಂಟಾ ಪದವೀಯೂ ॥14 ॥
ಬದ್ದಾ ವೈಕುಂಟಾ ಪದವೀಯೂ ದೊರಕುವದೆಂದೂ
ಹರಿಕೊಟ್ಟಾ ವರವೂ ಇದುವೆಂದೂ
ಹರಿಕೊಟ್ಟಾ ವರವಾ ನೈಮೀಶಾರಣ್ಯದಲ್ಲಿ
ಸೂತಾ ಶೌನಕರೂ ನುಡಿದಾರೂ
ಸೂತಾ ಶೌನಕರೂ ನುಡಿದಾ ಈ ವರವನ್ನೂ
ಪ್ರೀತಿಯಲಿ ನಾನೂ ನುಡಿದೇನೂ ॥15 ॥
ಸಂದಾಯಾಗಾಲೀ ಬಾಲಾ ಗಣಪತಿ ಪದ್ಯಾ
ನಿಂದೀಸಿದವರಿಗೇ ನರಕಾವೂ
ನಿಂದೀಸಿದವರಿಗೇ ನರಕಾ ದೊರಕುವದೆಂದೂ
ಪರಬ್ರಹ್ಮ ಕೊಟ್ಟಾ ವರವೀದೂ
ಪರಬ್ರಹ್ಮ ಕೊಟ್ಟಾ ವರವಿದೂ ನಾನಿಲ್ಲೀ
ತಿಳಿದಂತೆ ಒರೆದೇ ನಿಮಗೀಗಾ ॥16 ॥
* * *
Leave A Comment