10. ಕರುಗಳು ಅಗುಚುವ ಹಾಡು

ಹಾರರ ಕಂದಯ್ಯ ಹರಿದಾಡೋ ಚಿನ್ನಯ್ಯ
ಇಬ್ಬಾರೊಂದಾಗೀ ತರಬೂಡೀ
ಇಬ್ಬಾರೊಂದಾಗಿ ತರಬೂಡೀ ನಂಟಪ್ಪಾ
ಹೆಣ್ಣುಂಟೇ ನಿಮ್ಮ ಪುರುದಾಗೇ
ಹೆಣ್ಣಿಗೆ ಬರುವವರೂ ನಿನ್ನ ಮೊನ್ನೆ ಬರಬೇಕಿಲ್ಲೋ
ನಿಮಗಿಂದಾ ಮೊದಲೇ ಕೌರವರೂ
ನಿಮಗಿಂದಾ ಮೊದಲೇ ಕೌರವರೂ ಪಾಂಡವರೂ
ಹೆಣ್ಣಿಗೆ ಮುಡಿದಂಡೆ ಮುಡಿಸ್ಯಾರೇ
ಮುಡಿದಂಡೆ ಕೀಳಿಸುವೇ ಮುಗಿಲೀಗೀಡಾಡುಸುವೆ
ನಾವು ತಂದ ಹೊಸ ದಂಡೇ ಮುಡಿಸೂವೇ                                                    ॥1 ॥

ಕುದುರೇಯಾ ಮೇಲೆ ಚದುರರು ಬಂದೈದಾರೇ
ಬಾ ತಂಗೀ ಪಾದಾ ತೊಳೆಬಹುದೂ
ಕುದುರೇಯಾ ಮೇಲೆ ಚದುರಾರು ಬರಸಲ್ಲಾ
ನಾವು ಪಾದಗಳಾ ತೊಳೆಸಲ್ಲಾ
ನಾವು ಪಾದಗಳಾ ತೊಳೆಸಲ್ಲಾ ನಮ್ಮನೆಯಾ
ಗೌಡೇರೂ ಪಾದಾ ತೊಳೆದಾರೂ
ಗೌಡೇರು ಮುಟ್ಟಿದ ಉದಕಾ ಮುಟ್ಟಂತಾ ದೊರೆಯಲ್ಲಾ
ಚಿಕ್ಕಂದಿಲಿ ಕೊಟ್ಟಾ ಭರತಾವಾ
ಚಿಕ್ಕಂದಿಲಿ ಕೊಟ್ಟಾ ಭರತಾವಾ ವಳಗಿರುವಾ
ಚಿಕ್ಕೆಣ್ಣೇ ಅಡಗೇ ಅಡಬೇಕೂ                                                                              ॥2 ॥

ಆನೇಯಾ ಮೇಲೆ ಅರಸೂಗಳು ಬಂದೈದಾರೇ
ಬಾ ತಂಗೀ ಪಾದಾ ತೊಳೆಬಹುದೂ
ಆನೇಯಾ ಮೇಲೆ ಅರಸೂಗಳು ಬರಸಲ್ಲಾ
ನಾವು ಪಾದಗಳಾ ತೊಳೆಸಲ್ಲಾ
ನಾವು ಪಾದಗಳಾ ತೊಳೆಸಲ್ಲಾ ನಮ್ಮನೆಯಾ
ನಾರೇರೂ ಪಾದಾ ತೊಳೆದಾರೂ
ನಾರೇರು ಕೊಟ್ಟ ಉದುಕಾ ಮುಟ್ಟಂತಾ ದೊರೆಯಲ್ಲಾ
ಪುಟ್ಟಂದಿಲಿ ಕೊಟ್ಟಾ ಭರತಾವಾ
ಪುಟ್ಟಂದಿಲಿ ಕೊಟ್ಟ ಭರತಾವಾ ವಳಗಿರುವಾ
ಪುಟ್ಟೆಣ್ಣೇ ಅಡಿಗೇ ಅಡಬೇಕು                                                                               ॥3 ॥

ಬೇಲೀ ಮೇಲಿರುವಾ ದಾರಾ ಹೀರೇಕಾಯಿ
ದಾರಂಗಾ ತೆಗೆದೂ ಮೆಣಸಿಕ್ಕೀ
ದಾರಂಗಾ ತೆಗೆದೂ ಮೆಣಸಿಕ್ಕಿ ಮೇಲಗರಮಾಡೀ
ಗಮ್ಮಾನೊಗ್ಗರಿಸೇ ಕಿರುತಂಗೀ
ಚಪ್ಪರ ದೊಳಗಿರುವಾ ಬುಟ್ಟಾ ತೊಂಡೇಕಾಯಿ
ಬಟ್ಟಂಗಾ ತೆಗೆದೂ ಮೆಣಸಿಕ್ಕೀ
ಬಟ್ಟಂಗಾ ತೆಗೆದೂ ಮೆಣಸಿಕ್ಕಿ ಮೇಲಗರಮಾಡಿ
ಗಮ್ಮಾನೊಗ್ಗರಿಸೇ ಸೊಸೆಮುದ್ದೇ                                                                     ॥4 ॥

ತೋಟಾದೊಳಗಿರುವಾ ಮೀಟಾ ಬಾಳೇಕಾಯಿ
ಮೀಟಂಗ ತೆಗೆದೂ ಮೆಣಸಿಕ್ಕಿ
ಮೀಟಂಗಾ ತೆಗೆದೂ ಮೆಣಸಿಕ್ಕಿ ಮೇಲಗರಮಾಡೀ
ಗಮ್ಮಾನೊಗ್ಗರಿಸೇ ಕಿರುತಂಗೀ

ಕರುವಾ ಕಟ್ಟೋದೂ ಶೃಂಗೇರೀಪರುವತ್ತಾ
ಮೊದಲಿನ ಜಾಬೀಗೇ ಗುಲಗುಂಜೀ
ಮೊದಲಿನ ಜಾಬೀಗೇ ಗುಲಗುಂಜೀ ನೆಂಟಪ್ಪಾ
ಕರುವಾದರೆ ಬಿಟ್ಟೂ ಹೊಡೆದಾರೂ                                                                   ॥5 ॥

ಸಾಲೇನುಟ್ಟಮ್ಮಾ ಕಾಗಡಿಯಾ ಮುಸಗಿಟ್ಟೂ
ಚಿನ್ನದ ಕಡಿಜಾಬೇ ಬಲಗೈಲೀ
ಚಿನ್ನದ ಕಡಿಜಾಬೇ ಬಲಗೈಯ್ಯಲಿ ತಕ್ಕೊಂಡೂ
ಹೊನ್ನುರು ಬೈಲಿಗೇ ಹೊರಟ್ಹೋಗೀ
ಹೊನ್ನುರು ಬೈಲೀಗೇ ಹೊರಟ್ಹೋಗೀ ತಾಯಮ್ಮಾ
ಕರುವಾ ಕಂಡಲ್ಲೀ ಅಗುಚಾರೂ
ಕರುವಾ ಕಂಡಲ್ಲೀ ಅಗುಚಾರೂ ತಾಯಮ್ಮಾ
ತಾಯಿಕಂಡಾ ಕರುವೂ ಅಗುಚೊಲ್ಲದು                                                            ॥6 ॥

ತಂಪೀಲಿರುವವನೇ, ಕೆಂಪಾನಾಮಾರ‌್ಯವನೇ
ಕುಂತೂ ಕಿನ್ನರಿಯಾ ನುಡಿಸವನೇ
ಕುಂತೂ ಕಿನ್ನರಿಯಾ ನುಡಿಸುವ ಗೌಳೇರಣ್ಣಾ
ಕರುವಾ ಕಂಡಲ್ಲೀ ಅಗುಚಯ್ಯ
ಅತ್ತರ ಮಗಳಲ್ಲಾ ಮತ್ತೇ ಸೋದರಳಲ್ಲಾ
ನಾನ್ಯಾಕೇ ಕರುವಾ ಅಗುಚಾಲೀ
ಅತ್ತೆರ ಮಗಳಾದೇನೂ  ಮತ್ತೇ ಸೋದರಳಾದೇನೂ
ಕರುವಾ ಕಂಡಲ್ಲೀ ಅಗುಚಯ್ಯ                                                                           ॥7 ॥

ಕರುವಾ ಕಟ್ಟೋದೂ ಕೊಡಚಾದ್ರಿ ಪರುವತ್ತಾ
ಕೊನೆಯಾ ಜಾಬೀಗೇ ಗುಲಗುಂಜೀ
ಕೊನೆಯಾ ಜಾಬೀಗೇ ಗುಲಗುಂಜೀ ನೆಂಟಪ್ಪಾ
ಕರುವಾದರೆ ಬಿಟ್ಟೂ ಹೊಡೆದಾರೂ
ಶಾಲೇನುಟ್ಟಮ್ಮಾ ಕಾಗಡಿಯಾ ಮುಸುಗಿಟ್ಟು
ಬೆಳ್ಳೀ ಕಡಿಜಾಬೇ ಬಲಗೈಲೀ
ಬೆಳ್ಳೀ ಕಡಿಜಾಬೂ ಬಲಗೈಯ್ಯಲಿ ತೆಕ್ಕೊಂಡೂ
ಮುತ್ತುರು ಬೈಲೀಗೇ ಹೊರಟ್ಹೋಗೀ
ಮುತ್ತುರು ಬೈಲಿಗೇ ಹೊರಟ್ಹೋಗೀ ತಾಯಮ್ಮಾ
ಕರುವಾ ಕಂಡಲ್ಲಿ ಅಗುಚ್ಯಾರೂ                                                                          ॥8 ॥

ಕರುವಾ ಕಂಡಲ್ಲಿ ಆಗಚ್ಯಾರೇ ತಾಯಮ್ಮಾ
ಗೋವೂ ಕಂಡ ಕರುವೂ ಅಗುಚೊಲ್ಲದೂ
ಬಿಸ್ಲೀನಲ್ಲಿರುವವನೇ ಬೆಳ್ಳಾನೇ ಮಾರ‌್ಯವನೇ
ಬೆಳ್ಳೀಯಾ ಕೊಳಲಾ ನುಡಿಸವನೇ
ಬೆಳ್ಳೀಯಾ ಕೊಳಲಾ ನುಡಿಸುವ ಗೌಳೇರಣ್ಣಾ
ಕರುವಾ ಕಂಡಲ್ಲಿ ಅಗುಚಯ್ಯ
ಮಾವನ ಮಗಳೆಲ್ಲಾ ಭಾವಾನಾ ತಂಗ್ಯಲ್ಲಾ
ನಾನ್ಯಾಕೇ ಕರುವಾ ಅಗುಚಾಲೀ
ಮೂವರು ಮಗಳಾದೇನೂ ಬಾವರು ತಂಗ್ಯಾದೇನೂ
ಕರುವಾ ಕಂಡಲ್ಲೀ ಅಗುಚಯ್ಯ                                                                           ॥9 ॥

ನಿನ್ನೇ ಇಡಿಸಿದೆನಲ್ಲೇ ಹೂನ್ನೂ ಗಾಜಿನ ಬಳೆಯಾ
ಎಲ್ಯ್‌ಡಿ ಒಡೆದೇ ಕಿರುತಂಗೀ
ಅಣ್ಣಯ್ಯ ನಿಮ್ಮ ಗೋವೀಗೇ ಮುರವಾನೇ ಹಾಕುತ್ತಿದ್ದೇ
ಬಣ್ಣದ ಕೋಡೀಲೆ ಸೊಣದೀತೂ
ಬಣ್ಣದ ಕೋಡೀಲೆ ಸೊಣದೀತೂ ನಿಮ್ಮ ಗೋವೂ
ಹೊಡಿಯಯ್ಯ ಹುಲ್ಲಿಲ್ಲದಾ ಹೊಲಗಳಿಗೇ                                                        ॥10 ॥

ಮೊನ್ನೆ ಇಡಿಸಿದೆನಲ್ಲೇ ಬೆಳ್ಳೀ ಗಾಜಿನ ಬಳೆಯಾ
ಎಲ್ಲಾಡೀ ಒಡೆದೇ ಸೊಸೆಮುದ್ದೇ
ಅಪ್ಪಯ್ಯ ನಿಮ್ಮ ಆಕಳಿಗೇ ಕಲಗಚ್ಚೂ ಕೊಡುತ್ತಿದ್ದೇ
ಬೆಳ್ಳೀ ಕೋಡಲ್ಲೀ ಹಾದೀತೂ
ಬೆಳ್ಳೀ ಕೋಡಲ್ಲೀ ಹಾದೀತೂ ನಿಮ್ಮ ಗೋವು
ಹೊಡಿಯಯ್ಯ ನೀರಿಲ್ಲದಾ ಕೆರೆಗಳಿಗೇ                                                            ॥11 ॥

ಹೊನ್ನೂರು ಹೊಲದಾಗೇ ಚನ್ನೆಯಾ ಆಡಾಗಾ
ಚನ್ನೆಯ ಕಾಳು ಬಿದ್ದೂ ಬಳೆಕೊಂಕೀ
ಚನ್ನೆಯ ಕಾಳು ಬಿದ್ದೂ ಬಳೆಕೊಂಕಿಯಲೆ ಹೆಣ್ದೆ
ನಮ್ಮ ಮೇಲೆ ಅನ್ಯಾಯಾ ಹೇಳುತೀಯಾ
ಮುತ್ತುರು ಹೊಲದಾಗೇ ಪಗಡೇಯಾನಾಡಾಗಾ
ಪಗಡೇ ಕಾಳು ಬಿದ್ದೂ ಬಳೆಕೊಂಕೀ
ಪಗಡೇ ಕಾಯಿ ಬಿದ್ದೂ ಬಳೆ ಕೊಂಕೀಯಲೆನಾರೀ
ನಮ್ಮ ಮೇಲೇ ಅನ್ಯಾಯ ಹೇಳುತ್ತೀಯಾ                                                      ॥12 ॥

* * *

11. ತೆರೆ ಅಳೆಯುವ ಪದ

ಸರಸತಿ ಸರಣರ ಮಗಳೇ ಕೆರದಲಿ ಕಂಕಣಬಾವಾ
ಕರಸರು ಕಲ್ಯಾಣದಾ ವಚನಾವೇ
ಹಾರೇ ಗುದ್ದಲಿ ಬಂದೂ ಹೆಡಗೇ ಪೀಕಾಸೀ ಬಂದೂ
ಮೂವಾದರ ಮಗನ ವಡಗೂಡೀ
ಮೂವಾದರ ಮಗನಾ ವಡಗೂಡೀ ಗಂಗಮ್ಮ
ಏರೀ ನೋಡದಕ್ಕೇ ಬಂದಾಳೂ
ಏರೀ ನೋಡದಕ್ಕೇ ಬಂದಾಳು ಗಂಗಮ್ಮ ಚಾವಡಿಗೊಂದು
ಇಷ್ಟಾಂತರದೋಲೇ ಬರದಾಳೊ
ಇಷ್ಟಾಂತರದೋಲೇ ಬರದಾಳು ಏನೆಲ್ಲಾ ಬರೆದಾಳೂ
ಸತ್ತಿವಂತಾರುಂಟೇ ಮರುತಾಗೇ                                                                      ॥1 ॥

ತೆರೆಯಾ ನೆಳೆಯೋರುಂಟೂ ತೆರೆಯಾ ಸೋಸುವರುಂಟೂ
ಸತುವಂತಾರುಂಟೂ ಮರುತಾಗೇ
ಹಾಗೆಂಬಾ ಮಾತಾ ಕೇಂಡಾಳೇ ಕುಸುಮಾಲೇ
ಉಪ್ಪರಿಗೆ ವಳಗೇ ನಡೆದಾಳೇ
ಉಪ್ಪರಿಗೆ ವಳಗೇ ನಡೆದಾಳೇ ಕುಸುಮಾಲೆ
ಹೂವಿನ ತಂಬಿಗೆಯೇ ಬಲಗೈಲೀ
ಹೂವಿನ ತಂಬಿಗೆಯೇ ಬಲಗೈಲಿ ತಕ್ಕೊಂಡೂ
ಬಚ್ಚಾಲರಮನೆಗೆ ನಡುದಾಳೂ
ಆರು ಕೊಪ್ಪರಿಗೆ ನೀರು ಕಾಯುತ್ತಾ ಮರುಳುತ್ತಾ
ಗಂದಾದೆಣ್ಣೀಯಾ ಗಮಗುಡಿಸೀ
ಗಂದಾದೆಣ್ಣೇಯಾ ಗಮಗುಡಿಸೀ ಲಗ್ನೀಲೀ
ಎರೆದರೂ ತೈಲಪನಾ ಸತಿಯಾರೂ                                                                 ॥2 ॥

ಹಾಗಂಬಾ ಮಾತಾ ಕೇಂಡಾಳು ಕುಸುಮಾಲೇ
ತಂದಿದ್ದರ ಮನೆಗೇ ನಡುದಾಳೇ
ತಂದಿದ್ದರ ಮನೆಗೇ ನಡುದಾಳೇ ಕುಸುಮಾಲೇ
ಎಂದೂ ಬಾರದ ಕುಸುಮಾಳೇ
ಎಂದೂ ಬಾರದ ಕುಸುಮಾಳೆ ಇಂದೇಕೆ ಬಂದ್ಯಲ್ಲೇ
ಕುಂದ್ರಕೆಕೊಳ್ಳೇ ಮಣೆಕೊಳ್ಳೇ
ಕುಂದ್ರಕ್ಕೇ ಬರಲಿಲ್ಲಾ ನಿಂದ್ರಾಕೆ ಬರಲಿಲ್ಲಾ
ನಾಬಂದ ಬೇಗೇ ಶಿವಬಲ್ಲಾ
ದೊಡ್ಡಕ್ಕೀ ಅನ್ನೂ ಬೆಣ್ಣೇ ಕಾಸಿದ ತುಪ್ಪ
ಹಿತ್ತಾಲರಗೀನಾ ಕರಿಬಳ್ಳೇ
ಹಿತ್ತಾಲರಗೀನಾ ಕರಿಬಳ್ಳೇ ತಂದಿಟ್ಟು
ತಂದೆಗು ಮಗಳೀಗೂ ಹಗಲೂಟಾ
ತಂದೆಗು ಮಗಳೀಗೂ ಹಗಲೂಟಾ ಉಣ್ಣಾಗೆ
ಹ್ಯಾಗಳೆಯಾಲಪ್ಪಾ ತೆರೆಗೋಳಾ
ದೃಡವೊಂದು ಸುದ್ದಾಗಿದ್ರೆ ಅಳೆಬೌದೇ ಎಲೆ ಮಗಳೇ
ಒಂದೇ ಮಾತಿಗೆ ಅಂಜೀದೇ
ಒಂದೇ ಮಾತೀಗೆ ಅಂಜೀದೇ ಕುಂಜೀದೇ
ಬೆಂದಾ ಬೇವಿನಾ ಎಲೆಯಾದೇ                                                                         ॥3 ॥

ಹಾಂಗೆಂಬಾ ಮಾತಾ ಕೇಂಡಾಳೂ ಕುಸುಮಾಲೇ
ತಾಯಿದ್ದರಮನೆಗೇ ನಡೆದಾಳೂ
ತಾಯಿದ್ದರಮನೆಗೇ ನಡೆದಾಳು ಕುಸುಮಾಲೇ
ಕುಂದ್ರಾಕೆ ಕೊಳ್ಳೇ ಚಾಪೆ ಕೊಳ್ಳೇ
ಕುಂದ್ರಾಕೆ ಬರಲಿಲ್ಲಾ ನಿದ್ರಾಕೆ ಬರಲಿಲ್ಲಾ
ನಾ ಬಂದಾ ಬೇಗೇ ಸಿವಬಲ್ಲಾ
ಸಣ್ಣಕ್ಕಿ ಅನ್ನೂ ಬೆಣ್ಣೇ ಕಾಸಿದ ತುಪ್ಪ
ಹಿತ್ತಲರಗೀನಾ ರಸಬಳ್ಳೇ
ಹಿತ್ತಲರಗೀನಾ ರಸಬಳ್ಳೇ ತಂದಿಟ್ಟು
ತಾಯಿಗು ಮಗಳಿಗೊಂದ್ಹಗಲೂಟಾ
ತಾಯಿಗು ಮಗಳಿಗೊಂದ್ಹಗಲೂಟಾ ಲಾಗಾಗ
ಹ್ಯಾಗಳೆಯಲವ್ವಾ ತೆರೆಗಾಳಾ
ದೃಢವೊಂದ್ಸುದ್ದಾಗಿದ್ರೆ ಅಳೆಬೌದೇ ಎಲೆಮಗಳೇ
ಒಂದೇ ಮಾತಿಗೇ ಅಂಜೀದೇ
ಒಂದೇ ಮಾತಿಗೇ ಅಂಜೀದೇ ಕುಂಜೀದೇ
ಬೆಂದಾ ಬೇವಿನಾ ಎಲೆಯದೇ                                                                           ॥4 ॥

ಹಾಗೆಂಬಾ ಮಾತಾ ಕೊಂಡಾಳು ಕುಸುಮಾಳೇ
ಅಣ್ಣಿದ್ದರಮನೆಗೇ ನಡುದಾಳೇ
ಎಂದೂ ಬಾರದ ಕುಸುಮಾಲೇ ಇಂದೇಕೆ ಬಂದಲ್ಲೇ
ಕುಂದ್ರಾಕೆ ಕೊಳ್ಳೇ ಮಣೆ ಕೊಳ್ಳೇ
ಕುಂದ್ರಕ ಬರಲಿಲ್ಲಾ ನಿಂದ್ರಾಕೇ ಬರಲಿಲ್ಲಾ
ನಾಬಂದಾ ಬೇಗೇ ಸಿವಬಲ್ಲಾ
ದೊಡ್ಡಕ್ಕಿ ಅನ್ನಾ ಬೆಣ್ಣೇಕಾಸಿದ ತುಪ್ಪಾ
ಹಿತ್ತಾಲರಗಿನಾ ವಾಟೆಬಳ್ಳೆ
ಹಿತ್ತಾಲರಗಿನಾ ವಾಟೆಬಳ್ಳೆ ತಂದಿಟ್ಟೂ
ಅಣ್ಣಗು ತಂಗೀಗೊಂದ್ಹಗಲೂಟಾ
ಅಣ್ಣಗು ತಂಗೀಗೊಂದ್ಹಗಲೂಟಾ ಉಣ್ಣಾಗ
ಹ್ಯಾಗೆಳೆಯಾಲಣ್ಣಾ ತೆರೆಗಾಳಾ
ದೃಢವೊಂದ್ಸುದ್ದಾಗಿದ್ರೇ ಎಳೆಬೌದೇ ಎಲೆತಂಗೀ
ಒಂದೇ ಮಾತಿಗೇ ಅಂಜೀದೇ
ಒಂದೇ ಮಾತಿಗೇ ಅಂಜೀದೇ ಕುಂಜೀದೇ
ಬೆಂದಾ ಬೇವಿನಾ ಎಲೆಯಾದೆ                                                                           ॥5 ॥

ಹಾಗೆಂಬಾ ಮಾತಾ ಕೇಂಡಾಳೂ ಕುಸುಮಾಲೇ
ಉಪ್ಪರಿಗೆ ವಳಗೇ, ನಡೆದಾಳೂ
ಉಪ್ಪರಿಗೆ ವಳಗೇ ನಡೆದಾಳೂ ಕುಸುಮಾಲೇ
ಹೂವಿನಲ್ಲಿ ಮುಸುಗಿಟ್ಟು ಮಲಗ್ಯಾಳೇ                                                               ॥6 ॥

ಸೋಲೇಳಿರಾಯಾರೇ ಗೆಲನ್ಹೇಳಿರಾಯರೇ
ನೀವೇಳಿದಾ ಗೆಲನಾ ಗೆಲತೀನೀ
ನಾನೇನು ಸೋಲ್ಹೇಳ್ಲೀ ನಾನೇನೂ ಗೆಲನೇಳ್ಲೀ
ಬಿದ್ದಾ ಹೆದ್ದಾಳಿಯಾ ಅಳಿ ಅಂದ್ರೇ
ಹಾಗೆಂಬಾ ಮಾತಾ ಕೇಂಡಾಳೂ ಕುಸುಮಾಲೇ
ಉಪ್ಪರಿಗೆ ವಳಗೇ ನಡೆದಾಳೂ
ಉಪ್ಪರಿಗೆ ವಳಗೇ ನಡೆದಾಳೂ ಕುಸುಮಾಲೇ
ಮುತ್ತೀನಾ ಜಲ್ಲೇ ಬಲಗೈಲೀ
ಮುತ್ತೀನಾ ಜಲ್ಲೇ ಬಲಗೈಲೀ ತಕ್ಕೊಂಡು
ಬಿದ್ದ ಹದ್ದಳಿಗೆಗೆದುರಾಗೀ
ಅತ್ತಮಾರಳೆದಾಳೂ ಇತ್ತ ಮಾರಳೆದಾಳೂ
ಬಿದ್ದ ಹೆದ್ದಳೆಯೂ ಸೈಯ್ಯದೂ                                                                             ॥7 ॥

ಸೋಲೇಳಿರಾಯರೇ ಗೆಲನ್ಹೇಳಿ ರಾಯರೇ
ನೀವೇಳಿದ ಗೆಲವಾ ಗೆಲತೀನೀ
ನಾನೇನು ಸೋಲ್ಹೇಳ್ಲೀ ನಾನೇನೂ ಗೆಲನೇಳ್ಲೀ
ಕಲ್ಲೊಡದೂ ನಾರು ಸಿಗಿಯೆಂದಾ
ಹಾಗೆಂಬಾ ಮಾತಾ ಕೇಂಡಾಳೂ ಕುಸುಮಾಲೇ
ಉಪ್ಪರಿಗೆ ವಳಗೇ ನಡೆದಾಳೂ
ಉಪ್ಪರಿಗೆ ವಳಗೇ ನಡೆದಾಳೂ ಕುಸುಮಾಲೆ
ಉಕ್ಕೀನಾ ಕೊಡಲೀ ಬಲಗೈಲೀ
ಉಕ್ಕೀನಾ ಕೊಡಲೀ ಬಲಗೈಲೀ ತಕ್ಕೊಂಡು
ಕಲ್ಲಿದ್ದ ಗುಡ್ಡಕ್ಕೆ ನಡೆದಾಳೂ
ಕಲ್ಲಿದ್ದ ಗುಡ್ಡಕ್ಕೆ ನಡೆದಾಳೂ ಕುಸುಮಾಲೆ
ಕಲ್ಲೊಡದು ನಾರಾ ಸಿಗುದಾಳೂ                                                                       ॥8 ॥

ಸೋಲೇಳಿ ರಾಯಾರೆ ಗೆಲನೇಳಿ ರಾಯಾರೇ
ನೀವೇಳಿದಾ ಗೆಲವಾ ಗೆಲತೀನೀ
ನಾನೇನು ಸೋಲ್ಹೇಳ್ಲೀ ನಾನೇನು ಗೆಲನೇಳ್ಲೀ
ಸಣ್ಣೇಲಿ ಸಾಸ್ವೇನಳಿಯೆಂದಾ
ಹಾಗೆಂಬಾ ಮಾತಾ ಕೇಂಡಾಳೇ ಕುಸುಮಾಲೇ
ಉಪ್ಪರಿಗೆ ವಳಗೇ ನಡೆದಾಳೂ
ಉಪ್ಪರಿಗೆ ವಳಗೇ ನಡೆದಾಳೂ ಕುಸುಮಾಲೇ
ಮುತ್ತೀನಾ ಸಣ್ಣೇ ಬಲಗೈಲೀ
ಮುತ್ತೀನಾ ಸಣ್ಣೇ ಬಲಗೈಲಿ ಹಿಡಕೊಂಡೂ
ಸಾಸ್ವೇ ರಾಸೀಗೇ ಎದುರಾಗೀ
ಅತ್ತಮೂರಳದಾಳೂ ಇತ್ತಮೂರಳದಾಳೂ
ಸಾಸ್ವೇ ರಾಸೀಯೇ ಸೈಯ್ಯದೂ                                                                       ॥9 ॥

ಸೋಲೇಳಿ ರಾಯರೇ ಗೆಲನೇಳಿ ರಾಯರೇ
ನೀವೇಳಿದ ಗೆಲವಾ ಗೆಲತೀನೀ
ನಾನೇನು ಸೋಲ್ಹೇಳ್ಲೀ ನಾನೇನು ಗೆಲನೇಳ್ಲೀ
ಹರಿಯಾ ಗಂಗೆಯಾ ಅಳಿಯೆಂದಾ
ಹಾಗೆಂಬಾ ಮಾತಾ ಕೇಂಡಾಳು ಕುಸುಮಾಲೆ
ಉಪ್ಪರಿಗೆ ವಳಗೇ ನಡೆದಾಳೂ
ಉಪ್ಪರಿಗೆ ವಳಗೇ ನಡೆದಾಳೂ ಕುಸುಮಾಲೇ
ಬಂಗಾರದ ಕೊಳಗೇ ಬಲಗೈಲೀ
ಬಂಗಾರದ ಕೊಳಗೇ ಬಲಗೈಲಿ ಹಿಡಕೊಂಡು
ಹರಿಯಾ ಗಂಗೇಗೇ ಇದಿರಾಗೀ
ಅತ್ತ ಮೂರು ಅಳೆದಾಳೂ ಇತ್ತ ಮೂರು ಅಳೆದಾಳೂ
ಹರಿಯಾ ಗಂಗೇಯೇ ಸೈಯಾದೂ                                                                 ॥10 ॥

ಹೂವುಗಾರಣ್ಣಾ ಹೂವಿನ ತೊಂಡಲು ಕಟ್ಟು
ಕುಸುಮಾಳೇ ತೆರೆಯೆಳದೂ ಬರುತಾಳೇ
ಮಾವುಗಾರಣ್ಣಾ ಮಾವಿನ ತೊಂಡಲಕಟ್ಟು
ಕುಸುಮಾಲೇ ತೆರೆಯೆಳೆದೂ ಬರುತಾಳೇ
ಕುಸುಮಾಲೇ ತೆರೆಯೆಳೆದೂ ಬರಬರನೇ ಬರುತಾಳೆ
ಜೋಡ ತಂಬಿಗೇಲಿ ಹಣಿನೀರೂ
ಜೋಡ ತಂಬಿಗೇಲೀ ಹಣಿನೀರು ಹಿಡಿಸುತಾ
ಹೊರಟರು ಗಾಜೀನಾ ಜಗಲೀಗೇ                                                                   ॥11 ॥

ದಟ್ಟೀ ಮ್ಯಾಲೆ ದಟ್ಟೀ ದಟ್ಟೀ ಮೇಲೆ ಮೂರು ಗಂಟೂ
ತಪ್ಪೀದರೆ ರುಂಡಾ ಹೊಡಿಸೇನೂ
ಮಾವಲಳಿಯರ ಮನೆಯೂ ನಿಟ್ಟೂ ಕೂಟದ ಕಟಿಗೆ
ತಟ್ಟಾನೆಳತಂದೂ ಒಲೆಹೂಡೀ
ತಟ್ಟಾನೆಳತಂದೂ ಒಲೆಹೂಡೀ ಅಡಿಗೆಯ ಮಾಡೀ
ನಾ ಬಾಣ್ತಿ ಎಂದೂ ಮಲಗಿದ್ದೇ
ನಾ ಬಾಣ್ತಿ ಎಂದೂ ಮಲಗಿದ್ದೇ ಗಂಗಮ್ಮಾ
ಅದುವೊಂದು ತಪ್ಪಾನೊಳಗೀಡೂ
ಬಾಲಾನೆತಿಕೊಂಡೂ ಬಾಗಲಲೀ ನಿಂತಿದ್ದೇ
ಬಾವೈ ಬಂದಿದ್ದೂ ಕಾಣಲಿಲ್ಲಾ
ಬಾವೈ ಬಂದಿದ್ದೂ ಕಾಣಲಿಲ್ಲಾ ಗಂಗಮ್ಮಾ
ಅದುವೊಂದು ತಪ್ಪಾ ಒಳಗೀಡೂ
ರಾಯರು ಮಂಚದ ಕೆಳಗೇ ನಾನು ಮಂಚದ ಮೇಲೆ
ಬಾಲೈಗೇ ಹಾಲಾ ಕುಡಸ್ತಿದ್ದೇ
ಬಾಲೈಗೇ ಹಾಲಾ ಕುಡಿಸ್ತಿದ್ದೆ ಗಂಗಮ್ಮಾ
ಅದು ಒಂದು ತಪ್ಪಾ ಒಳಗೀಡೂ
ಕಾರೇ ಕಾಯ್ಕುಯ್ದು ಒಲೆಹೂಡೀ ಅಡಿಗೇ ಮಾಡಿ
ನಾ ಬಾಣ್ತೀ ಎಂದೂ ಮಲಗಿದ್ದೇ
ನಾ ಬಾಣ್ತೀ ಎಂದೂ ಮಲಗಿದ್ದೆ ಗಂಗಮ್ಮಾ
ಅದು ಒಂದು ತಪ್ಪಾ ಒಳಗೀಡೂ
ಗಂಡಗೆ ತಂಗಾಳಿಕ್ಕೀ ನಾನೂ ಬಿಸಿಯಾನುಂಡೂ
ನಾ ಬಾಣ್ತಿ ಎಂದೂ ಮಲಗಿದ್ದೇ
ನಾ ಬಾಣ್ತೀ ಎಂದೂ ಮಲಗಿದ್ದೇ ಗಂಗಮ್ಮಾ
ಅದು ಒಂದು ತಪ್ಪಾ ಒಳಗೀಡೂ
ತೆರೆಯಾ ಎಳೆದೇನೆಂದೂ ಗರುವಾ ಮಾಡಲುಬೇಡ
ಇದ್ದವು ಮೂರು ಮಕ್ಕಳಾ ಕಳಕೊಂಡೇ                                                          ॥12 ॥

* * *