1. ದೀಪ ಹಚ್ಚುವ ಪದ
ಜೋತಿ ಹೊಚ್ಚೇವೂ ದೂಪಾವಾ ಹಾಕ್ಯೇವೂ
ದೀಪೋಳಿಗೆಂದೂ ಹೊರಟೇವೂ
ಎಣ್ಣೇಲುಟ್ಟೋಳೇ ಎಣ್ಣೇಲೀ ಬೆಳೆಯೋಳೇ
ಎಣ್ಣೇಲಿ ಕಣ್ಣಾ ಬಿಡುವೋಳೇ
ಎಣ್ಣೇಲಿ ಕಣ್ಣಾ ಬಿಡುವೋಳೇ ಜೋತಮ ತಾಯಿ
ಹಿಂದೋದಳು ಇಂದೇ ಬರಬೇಕೊ
ಹಿಂದೋದಳು ಇಂದೇ ಬಂದಿಂದುಟ್ಟಾದರೇ
ಹಾಲೂ ಹಣ್ಣುಗಳೇ ನೈಮಿದ್ದಾ
ಹಾಲುಹಣ್ಣುಗಳೇ ನೈಮಿದ್ದಾ ಮಾಡಿದರೇ
ಬೇಡೀದಾ ವರವಾ ಕೊಡುವೋಳೂ ॥1 ॥
ಬತ್ತಿಲುಟ್ಟೋಳೇ ಬತ್ತೀಲಿ ಬೆಳವೊಳೇ
ಬತ್ತೀಲೀ ಕಣ್ಣಾ ಬಿಡುವೋಳೇ
ಬತ್ತೀಲಿ ಕಣ್ಣಾ ಬಿಡುವೊಳೇ ಜೋತಮ್ಮ
ಹಿಂದೋದಳು ಇಂದೂ ಬರಬೇಕೂ
ಹಿಂದೋದಳು ಇಂದೂ ಬಂದಿದ್ದುಂಟಾದರೆ
ಹಾಲುಹಣ್ಣುಗಳೇ ನೈಮಿದ್ದಾ ॥2 ॥
ಕಲ್ಲಲ್ಹುಟ್ಟೋಳೇ ಕಲ್ಲಲ್ಲಿ ಬೆಳೆವೋಳೇ
ಕಲ್ಲಲ್ಲಿ ಕಣ್ಣಾ ಬಿಡುವೋಳೇ
ಕಲ್ಲಲ್ಲಿ ಕಣ್ಣಾ ಬಿಡುವೋಳೇ ಜೋತಮ್ಮಾ ತಾಯಿ
ಇಂದೋದಳು ನಾಳೆ ಬರಬೇಕೂ
ಇಂದೋದಳು ನಾಳೆ ಬಂದಿಂದ್ದುಂಟಾದರೆ
ಹಾಲು ಹಣ್ಣುಗಳೇ ನೈಮಿದ್ದಾ ॥3 ॥
ಮಣ್ಣಾಗ್ಹುಟ್ಟೋಳೇ ಮಣ್ಣಾಗೆ ಬೆಳೆವೋಳೆ
ಮಣ್ಣಾಗೆ ಕಣ್ಣಾ ಬಿಡುವೋಳೇ
ಮಣ್ಣಾಗೆ ಕಣ್ಣಾ ಬಿಡುವೊಳೆ ಜೋತಮ್ಮ ತಾಯಿ
ಇಂದೋದಳು ಮುಂದೇ ಬರಬೇಕೂ
ಇಂದೋದಳು ಮುಂದೇ ಬಂದದ್ದುಂಟಾದರೆ
ಹಾಲು ಹಣ್ಣುಗಳೇ ನೈಮಿದ್ದಾ
ಹಾಲು ಹಣ್ಣುಗಳೇ ನೈಮಿದ್ದಾ ಮಾಡಿದರೆ
ಬೇಡಿದಾ ವರವಾ ಕೊಡುವೋಳೂ ॥4 ॥
ಹುಲ್ಲಾಲುಟ್ಟೋಳೇ ಹುಲ್ಲಾಲಿ ಬೆಳೆವೋಳೆ
ಹುಲ್ಲಾಲಿ ಕಣ್ಣಾ ಬಿಡುವೋಳೇ
ಹುಲ್ಲಾಲಿ ಕಣ್ಣಾ ಬಿಡುವೋಳೇ ಜೋತಮ್ಮ ತಾಯಿ
ಇಂದೋದಳು ಮುಂದೇ ಬರಬೇಕೊ
ಇಂದೋದಳು ಮುಂದೆ ಬಂದಿದ್ದುಂಟಾದರೆ
ಹಾಲು ಹಣ್ಣುಗಳೇ ನೈಮಿದ್ದಾ
ಹಾಲು ಹಣ್ಣುಗಳೇ ನೈಮಿದ್ದಾ ಮಾಡಿದರೆ
ಬೇಡಿದ ವರವಾ ಕೊಡುವೋಳೂ ॥5 ॥
ಈ ವೂರ ಬಸವಣ್ಣಾ ಸತ್ತೀವಂತವನಯ್ಯ
ತೋಪೀ ಮೇಲಿರುವಾ ವಡೆಯೋರೂ
ತೋಪೀ ಮ್ಯಾಲಿರುವಾ ವಡೆಯಾನಮ್ಮೈನೋರಿಗೆ
ಹಾಲು ಹಣ್ಣುಗಳೇ ನೈಮಿದ್ದಾ
ಹಾಲು ಹಣ್ಣುಗಳೇ ನೈಮಿದ್ದಾ ಮಾಡಿದರೆ
ಬೇಡಿದಾ ವರವಾ ಕೊಡುವೋರೂ ॥6 ॥
ಈ ವೂರಾ ಈ ಸೂರಾ ಸತ್ತೀವಂತವನಯ್ಯ
ತೋಪೀ ಮ್ಯಾಲಿರುವಾ ವಡೆಯೋರೂ
ತೋಪೀ ಮ್ಯಾಲಿರುವಾ ವಡೆಯಾ ನಮ್ಮೈನೋರಿಗೆ
ಹಾಲುಹಣ್ಣುಗಳೇ ನೈಮಿದ್ದಾ ಮಾಡಿದರೆ
ಬೇಡಿದಾ ವರವಾ ಕೊಡುವೋರೂ ॥7 ॥
ಈ ವೂರ ಗಣಪಾತಿ ಸತ್ತೀವಂತವನಯ್ಯ
ತೋಪಿ ಮ್ಯಾಲಿರುವಾ ವಡೆಯಾರೂ
ತೋಪೀ ಮ್ಯಾಲಿರುವಾ ವಡೆಯಾ ನಮ್ಮೈನೋರಿಗೆ
ಹಾಲುಹಣ್ಣುಗಳೇ ನೈಮಿದ್ದಾ
ಹಾಲು ಹಣ್ಣುಗಳೇ ನೈಮಿದ್ದಾ ಮಾಡಿದರೆ
ಬೇಡಿದ ವರವಾ ಕೊಡುವೋರೂ ॥8 ॥
ಈ ವೂರ ಭೂತರಾಯಾ ಸತ್ತೀವಂತವನಯ್ಯ
ತೋಪೀ ಮ್ಯಾಲಿರುವಾ ವಡೆಯೋರೂ
ತೋಪೀ ಮ್ಯಾಲಿರುವಾ ವಡೆಯಾ ನಮ್ಮೈನೋರಿಗೆ
ಹಾಲು ಹಣ್ಣುಗಳೇ ನೈಮಿದ್ದಾ
ಹಾಲು ಹಣ್ಣುಗಳೇ ನೈಮಿದ್ದಾ ಮಾಡಿದರೆ
ಬೇಡಿದ ವರವಾ ಕೊಡುವೋರೂ ॥9 ॥
ಈ ವೂರ ಗ್ರಾಮದ್ದೇವರೂ ಸತ್ತೀವಂತವನಯ್ಯ
ತೋಪೀ ಮೇಲಿರುವಾ ವಡೆಯೋರೂ
ತೋಪೀ ಮ್ಯಾಲಿರುವಾ ವಡೆಯಾ ನಮ್ಮೈನೋರಿಗೆ
ಹಾಲು ಹಣ್ಣುಗಳೇ ನೈಮಿದ್ದಾ
ಹಾಲು ಹಣ್ಣುಗಳೇ ನೈಮಿದ್ದಾ ಮಾಡಿದರೆ
ಬೇಡಿದ ವರವಾ ಕೊಡುವೋರೂ ॥10 ॥
ಈ ವೂರ ಹಸುರಾಯಾ ಸತ್ತೀವಂತವನಯ್ಯ
ತೋಪೀ ಮ್ಯಾಲಿರುವಾ ವಡೆಯೋರೂ
ತೋಪೀ ಮ್ಯಾಲಿರುವಾ ವಡೆಯಾ ನಮ್ಮೈನೋರಿಗೆ
ಹಾಲು ಹಣ್ಣುಗಳೇ ನೈಮಿದ್ದಾ
ಹಾಲು ಹಣ್ಣುಗಳೇ ನೈಮಿದ್ದಾ ಮಾಡಿದರೆ
ಬೇಡೀದಾ ವರವಾ ಕೊಡುವೋರೂ ॥11 ॥
ಈ ವೂರ ಕ್ವಾಣಕಲ್ಲು ಚೌಡಮ್ಮಾ ಸತ್ತೀವಂತವಳಯ್ಯ
ತೋಪೀ ಮ್ಯಾಲಿರುವಾ ವಡೆತೀಯೂ
ತೋಪೀ ಮ್ಯಾಲಿರುವಾ ವಡತೀ ನಮ್ಮಮ್ಮಾಗೆ
ಹಾಲೂ ಹಣ್ಣುಗಳೇ ನೈಮಿದ್ದಾ ಮಾಡಿದರೆ
ಬೇಡೀದ ವರವಾ ಕೊಡುವೋಳು ॥12 ॥
***
2. ತೊಳಸೀ ಪದ
ಸೂವಿರ ಸಂಗಯ್ಯ ಸುವೀರ ನಿಂಗಯ್ಯ
ಸೂಬಾಂದಲಿ ಬಾರೋ ಬಸವಯ್ಯ ॥ಪ ॥
ಆರಲ ಬೆಳಕಲ್ಲೀ ಅಂಗಾಳ ಸಾರಿಸಿ
ರಂಗೋಲೆ ಬರೆದೂ ತೊಳಸೀಗೇ
ರಂಗೋಲೆ ಬರೆದೂ ತೊಳಸೀ ಮಾಲಕ್ಷ್ಮೀಗೇ
ನೋಡೀದರ ದೃಷ್ಟೀ ಪರಿಹಾರಾ ॥1 ॥
ಹೊತ್ತಾರೆ ಮುಂಚೆದ್ದೂ ಕೈಕಾಲು ಮುಖ ತೊಳೆದು
ಮಲ್ಲಿಗೇ ವನಕೇ ನಡುದಾರೇ
ಮಲ್ಲಿಗೆ ವನಕೇ ನಡುದಾರೆ ಅಣ್ಣಯ್ಯ
ಮಲ್ಲೀಗೇ ಹೂವಾ ಅಗುದಾರೇ ॥2 ॥
ಮೂರು ಖಂಡುಗದಾ ಮಲ್ಲೀಗೆ ಹೂವು ತರಸಿ
ದಂಡೆ ಕಟ್ಟಿಸ್ಯಾರೆ ತೊಳಸೀಗೇ
ದಂಡೆ ಕಟ್ಟಿಸ್ಯಾರೆ ತೊಳಸೀ ಮಾಲಕ್ಷ್ಮೀಗೆ
ನೋಡಿದರ ದೃಷ್ಟೀ ಪರಿಹಾರಾ ॥3 ॥
ಸಣ್ಣಕ್ಕಿ ಸಾವೀರಾ ಎಣ್ಣೆ ಮೂಗಂಡುಗ
ಹಣ್ಣಿನಾ ಹೆಡಿಗೇ ಹದಿನಾರೂ
ಹಣ್ಣಿನಾ ಹೆಡಿಗೇ ಹದಿನಾರು ತೊಳಸೀಗೆ
ಬರನಿಲ್ಲದ ಪದವಾ ಬರಕೊಡೀ ॥4 ॥
ಬರನಿಲ್ಲದ ಪದವಾ ಬರಕೊಟ್ಟುದುಂಟಾದರೆ
ಜೋಡೆರಡು ಕಾಯಾ ಒಡೆಸೊವೇ
ಜೋಡೆರಡು ಕಾಯಾ ಒಡಸೂವೆ ತೊಳಸಮ್ಮಗೆ
ಜೋಡಿಸಿ ಕರವಾ ಮುಗಿಯೂವೇ ॥5 ॥
***
3. ನಾಗರ ಪದ
ಬಾಣಾಗಿಳಿ ಚಂಬೂ ಬಲಗೈಯಾಲಿಡುಕೊಂಡೂ
ನಾಗರಿಗೆ ತನಿಯಾ ನೆರೆದಾರೂ
ನಾಗರಿಗೆ ತನಿಯಾನೇನೆಂದೂ ಎರೆದಾರೂ
ನಾಗಪ್ಪಾನೆಂಬಾ ಮಗಬೇಕೂ
ನಾಗಪ್ಪಾನೆಂಬಾ ಮಗಬೇಕು ಈ ಮನೆಗೇ
ನಾಗಕನ್ನಿಕೆ ಎಂಬಾ ಸೊಸೆಬೇಕೂ ॥1 ॥
ಉಪ್ಪರಿಗೆ ಮನೆಬೇಕು ಕೊಪ್ಪರಿಗೆ ಹಣಬೇಕು
ರುಕ್ಮೀಣಿ ಎಂಬಾ ಸೊಸೆಬೇಕೂ
ರುಕ್ಮೀಣಿ ಎಂಬಾ ಸೊಸೆಬೇಕು ಈ ಮನೆಗೇ
ಕೃಷ್ಣದೇವ್ರೆಂಬಾ ಮಗಬೇಕೂ ॥2 ॥
ಮಾಳಿಗೆ ಮನೆಬೇಕು ಜೋಳಿಗೇ ಹಣಬೇಕು
ಜಾನಾಕಿ ಎಂಬಾ ಸೊಸೆಬೇಕೂ
ಜಾನಾಕಿ ಎಂಬಾ ಸೊಸೆಬೇಕು ಈ ಮನೆಗೇ
ರಾಮಾದೇವ್ರೆಂಬಾ ಮಗಬೇಕೂ ॥3 ॥
ಸೊಸೆಯೂ ಗಂಡ್ಹಡೆಯಾಲೀ ಮಗಳೂ ಹೆಣ್ಹಡೆಯಾಲೀ
ಎಳೆಗಾರೂ ಎಮ್ಮೇ ಕರಿಯಾಲೀ
ಎಳೆಗಾರೂ ಎಮ್ಮೇ ಕರಿಯಾಲೀ ಈ ಮನೆಯಾ
ನಡುಮನೇ ಜೋತೀ ಉರಿಯಾಲೀ ॥4 ॥
***
Leave A Comment