ಲಕ್ಷಣಗಳು:

ಪ್ರಜ್ಞಾಸ್ಥಿತಿಯಲ್ಲಿ ವ್ಯತ್ಯಾಸ: ರೋಗಿಗೆ ಸ್ಥಳ-ಕಾಲ-ಜನರ ಬಗ್ಗೆ ಗೊಂದಲವಿರುತ್ತದೆ. ತಾನೆಲ್ಲಿದ್ದೇನೆ, ತನ್ನ ಸುತ್ತಮುತ್ತ ಯಾರಿದ್ದಾರೆ, ಸಮಯ ಎಷ್ಟು, ತನ್ನ ಬೇಕುಬೇಡಗಳೇನು, ತನಗೇನಾಗಿದೆ ಗೊತ್ತಾಗುವುದಿಲ್ಲ. ಯಾರಾದರೂ ಮಾತಾಡಿದರೆ ಪ್ರಶ್ನೆ ಕೇಳಿದರೆ, ಅವರೇನು ಮಾತಾಡುತ್ತಿದ್ದಾರೆ. ಅವರ ಪ್ರಶ್ನೆ ಏನು ಎಂಬುದನ್ನು ವ್ಯಕ್ತಿ ಅರ್ಥಮಾಡಿಕೊಳ್ಳಲಾರ. ಹೀಗಾಗಿ ರೋಗಿಯ ಮಾತು-ವರ್ತನೆ ಅಸಂಬದ್ಧವಾಗಿರಬಹುದು. ರೋಗಿ ಅರೆ-ಪ್ರಜ್ಞಾವಸ್ಥೆಗೆ ಜಾರಬಹುದು, ನೋವಿಗೆ ಮಾತ್ರ ಸ್ಪಂದಿಸಬಹುದು. ಮಾತು, ಸ್ಪರ್ಶ, ಧ್ವನಿ, ನೋಟಕ್ಕೆ ಸ್ಪಂದಿಸುವುದಿಲ್ಲ. ಅನಂತರ ರೋಗಿ ಪ್ರಜ್ಞಾಹೀನ ಸ್ಥಿತಿ-ಕೋಮಾಗೆ ತಲುಪಬಹುದು. ಆಗ ಆತ/ಆಕೆ ನೋವಿಗೆ ಸ್ಪಂದಿಸುವುದಿಲ್ಲ.

ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುವುದು, ಕೂಗುವುದು, ಕಿರಿಚಾಡುವುದು, ಯಾರೊಂದಿಗೋ ಸಂಭಾಷಿಸಿದಂತೆ ಮಾತಾಡುವುದು, ಅದೃಶ್ಯ ವ್ಯಕ್ತಿಗಳನ್ನು ಹೆದರಿಸುವುದು, ಅರ್ಥವಿಲ್ಲದೇ ಗೊಣಗಾಡಬಹುದು.

ಭಾವೋದ್ವೇಗ: ವಿನಾಕಾರಣ ಅಥವಾ ಅಲ್ಪಕಾರಣಗಳಿಗೇ ಭಯಪಡಬಹುದು, ಸಿಟ್ಟಿಗೇಳಬಹುದು, ದುಃಖಪಡಬಹುದು, ಕ್ಷಣಕ್ಷಣಕ್ಕೆ ಭಾವನೆ ಏರುಪೇರಾಗಬಹುದು, ಹಿಂಸಾಚಾರ, ಆಕ್ರಮಣಶೀಲತೆಯನ್ನು ಪ್ರಕಟಿಸಬಹುದು. ಭ್ರಮೆಗಳು, ನೋಡಿ ಯಾರೋ ನನ್ನನ್ನು ಕೊಲ್ಲಲು ಬರುತ್ತಿದ್ದಾರೆ, ನನ್ನ ಹಣ/ವಸ್ತುಗಳನ್ನೆಲ್ಲಾ ದೋಚಿಕೊಂಡು ಹೋಗುತ್ತಿದ್ದಾರೆ. ನನ್ನ ಮಕ್ಕಳನ್ನು ಅಪಹಿರಿಸಿದ್ದಾರೆ, ನನ್ನ ಮೈಮೇಲೆ ಸಾವಿರಾರು ಇರುವೆ, ಹಾವು, ಚೇಳುಗಳು ಹರಿದಾಡುತ್ತಿವೆ. ನನ್ನನ್ನು ಕಚ್ಚುತ್ತಿವೆ ಎನ್ನಬಹುದು. ಯಾರೋ ನನ್ನನ್ನು ಬೈಯುತ್ತಿದ್ದಾರೆ, ಹೆದರಿಸುತ್ತಿದ್ದಾರೆ, ಕೆಟ್ಟ ಮಾತುಗಳಲ್ಲಿ ಟೀಕಿಸುತ್ತಿದ್ದಾರೆ ಎನ್ನಬಹುದು. ಎಲ್ಲರೂ ನನ್ನ ವಿರುದ್ಧ ಸಂಚು ಮಾಡುತ್ತಿದ್ದಾರೆ, ನನಗೆ ಅವಮಾನ ಮಾಡಲು ಸಿದ್ಧತೆ ಮಾಡುತ್ತಿದ್ದಾರೆ ಎನ್ನಬಹುದು. ಯಾವ ವಾಸನೆ ಇಲ್ಲದಿದ್ದರೂ ಏನೋ ಕೆಟ್ಟ ವಾಸನೆ, ಸೀದ ವಾಸನೆ, ಘಾಟು/ಕಮಟು ವಾಸನೆ ಬರುತ್ತಿದೆ ಎನ್ನಬಹುದು.

ತನ್ನ ಬೇಕು ಬೇಡಗಳನ್ನು ನಿರ್ಲಕ್ಷಿಸಬಹುದು: ಹಸಿವಾದರೂ ಊಟ ಮಾಡುವುದಿಲ್ಲ. ಬೆಳಿಗ್ಗೆ ಎದ್ದು ಸ್ನಾನ ಮಾಡುವುದಿಲ್ಲ. ಕೊಳಕಾದ ಬಟ್ಟೆಗಳನ್ನು ಬದಲಿಸುವುದಿಲ್ಲ. ಗಾಯವಾಗಿ ರಕ್ತ ಸುರಿಯುತ್ತಿದ್ದರೂ ಅದನ್ನು ಗಮನಿಸುವುದಿಲ್ಲ. ಕಾಯಿಲೆಯ ಲಕ್ಷಣಗಳಿದ್ದರೂ ಆಸ್ಪತ್ರೆಗೆ ಬರುವುದಿಲ್ಲ. ಔಷಧಿ ಸೇವಿಸುವುದಿಲ್ಲ. ತನ್ನ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಿಲ್ಲ. ಅಗತ್ಯ ವಸ್ತುಗಳನ್ನು, ಬೆಲೆಬಾಳುವ ವಸ್ತುಗಳನ್ನು ಹಾಳುಮಾಡಬಹುದು, ತನ್ನ ಮಕ್ಕಳ, ಆಶ್ರಿತರ ಯೋಗಕ್ಷೇಮವನ್ನು ಗಮನಿಸುವುದಿಲ್ಲ. ದಿಕ್ಕು ದೆಸೆಯಿಲ್ಲದೆ ಓಡಾಡಬಹುದು, ಮನೆಬಿಟ್ಟು ಹೋಗಬಹುದು, ಹಾಸಿಗೆ ಬಟ್ಟೆಯಲ್ಲೇ ಮಲಮೂತ್ರ ಮಾಡಿಕೊಳ್ಳಬಹುದು, ಮನೆಯೊಳಗೇ ಅಥವಾ ಕುಳಿತಲ್ಲೇ ಉಗಿಯಬಹುದು, ಕಸಹಾಕಬಹುದು.

ಫಿಟ್ಸ್, ಪಾರ್ಶ್ವವಾಯು, ಕೈಕಾಲು ನಡುಕ, ತೊದಲು ಮಾತು ಅಥವಾ ಮಾತು ನಿಲ್ಲುವುದು, ಕಣ್ಣು ಕಾಣಿಸದಂತಾಗುವುದು, ವಿಪರೀತ ಜ್ವರ ಇತ್ಯಾದಿ ದೈಹಿಕ ರೋಗಲಕ್ಷಣಗಳೂ ಕಾಣಿಸಿಕೊಳ್ಳಬಹುದು.

ಹೀಗೆ ಸನ್ನಿ ಹಿಡಿದ ವ್ಯಕ್ತಿ ತನಗೆ ಮಾತು, ಇತರರಿಗೆ ತೊಂದರೆದಾಯಕ ಅಥವಾ ಅಪಾಯಕಾರಿ ಆಗಬಲ್ಲ.

ಕಾರಣಗಳು

 • ಥಟ್ಟನೆವಿಪರೀತ ಜ್ವರ: ಯಾವುದೇ ಕಾರಣದಿಂದ ಥಟ್ಟನೆ ಜ್ವರ ಬಂದು ಅದು ಹೆಚ್ಚಾದಾಗ, ಸನ್ನಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
 • ದೇಹದ ನೀರಿನಂಶ ಕಡಿಮೆಯಾಗುವುದು: ವಾಂತಿ, ಬೇಧಿ, ವಿಪರೀತ ಬೆವರು, ರಕ್ತಸ್ರಾವ-ಹೀಗೆ ದೇಹದ ನೀರಿನಂಶ ಹೊರಹೋಗಿ, ವ್ಯಕ್ತಿ ತಕ್ಷಣ ನೀರು            ಪದಾರ್ಥಗಳನ್ನು ಸೇವಿಸದಿದ್ದರೆ, ಡಿಹೈಡ್ರೇಷನ್ ಸ್ಥಿತಿಯುಂಟಾಗುತ್ತದೆ. ರಕ್ತದಲ್ಲಿ, ಜೀವಕೋಶಗಳಲ್ಲಿ ನೀರು-ಲವಣಾಂಶಗಳು ಪ್ರಮಾಣ ಏರುಪೇರಾಗುತ್ತದೆ. ಇದು ಡೆಲಿರಿಯಂಗೆ ಇನ್ನೊಂದು ಸಾಮಾನ್ಯ ಕಾರಣ.
 • ತಲೆಗೆಮಿದುಳಿಗೆ ಪೆಟ್ಟು: ಅಪಘಾತದಲ್ಲಿ, ತಲೆಗೆ ಭಾರವಾದ ವಸ್ತುವಿನಿಂದ ಪೆಟ್ಟು ಬಿದ್ದು, ಮಿದುಳಿಗೆ ಅಘಾತವಾಗುವುದು.
 • ಫಿಟ್ಸ್: ಫಿಟ್ಸ್ ಬಂದು ನಿಂತ ಮೇಲೆ, ಕೆಲವು ನಿಮಿಷಗಳು ಅಥವಾ ಗಂಟೆಗಳ ಕಾಲ ಡೆಲಿರಿಯಂ ಇರಬಹುದು.
 • ಮಾದಕ ವಸ್ತುಗಳು ಮತ್ತು ಆಲ್ಕೋಹಾಲ್ ಚಟ: ಬೀರ್, ಬ್ರಾಂದಿ, ವಿಸ್ಕಿ, ಸಾರಾಯಿಯಂತಹ ಮದ್ಯಪಾನೀಯಗಳು, ಗಾಂಜಾ, ಭಂಗಿ, ಅಫೀಮು, ನೋವು ನಿವಾರಕ ಇಂಜೆಕ್ಷನ್‌ಗಳು, ಶಮನಕಾರಿ ಮಾತ್ರೆಗಳಿಗೆ ಚಟ ಬೆಳೆಸಿಕೊಂಡ ವ್ಯಕ್ತಿ, ಒಂದು ದಿನ ನಿಗದಿತ ಪ್ರಮಾಣದಲ್ಲಿ ಈ ವಸ್ತುಗಳನ್ನು ಸೇವಿಸದಿದ್ದರೆ, ಹಿಂದೆತೆಗೆದ ಚಿನ್ಹೆಗಳು ಕಾಣಿಸಿಕೊಳ್ಳುತ್ತವೆ. ಡೆಲಿರಿಯಂ ಕೂಡ, ಹಿಂದೆಗೆತದ ಚಿನ್ಹೆಯಾಗಬಹುದು.
 • ಮಿದುಳು, ಮಿದುಳ ಪೊರೆ ಊರಿತ: ಬ್ಯಾಕ್ಟೀರಿಯಾ/ವೈರಸ್‌ಗಳ ಸೋಂಕಿನಿಂದ ಮಿದುಳು, ಮಿದುಳ ಪೊರೆಗಳು ಹಾನಿಗೀಡಾದಾಗ, ಸನ್ನಿ      ಕಾಣಿಸಿಕೊಳ್ಳಬಹುದು.
 • ವಿಷವಸ್ತು ಸೇವನೆ: ಆಕಸ್ಮಿಕವಾಗಿ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಯಾವುದೇ ವ್ಯಕ್ತಿ, ವಿಷವಸ್ತುಗಳನ್ನೋ (ಇಲಿ ಪಾಶಾಣ, ಟಿಕ್ 20, ಫಾಲಿಡಾಲ್, ಮೈಲುತುತ್ತಾ, ಹಾರ್ಪಿಕ್, ಔಷಧಿಗಳು, ಕೀಟನಾಶಕಗಳು ಇತ್ಯಾದಿ) ಅಥವಾ ಅಧಿಕ ಪ್ರಮಾಣದಲ್ಲಿ ಯಾವುದಾದರೂ ಮಾತ್ರೆಗಳನ್ನೋ ಸೇವಿಸಿದಾಗ “ಸನ್ನಿ”ಗೆ ತುತ್ತಾಗಬಹುದು.
 • ಬಾಣಂತಿ ಸನ್ನಿ: ಹೆರಿಗೆಯಾದ ಏಳು ಅಥವಾ ಎಂಟನೇ ದಿನ, ಬಾಣಂತಿಗೆ ಸನ್ನಿ ಕಾಣಿಸಿಕೊಳ್ಳುಬಹುದು. ಕಷ್ಟಕರವಾದ ಹೆರಿಗೆ, ವಿಪರೀತ ರಕ್ತಸ್ರಾವ, ಮಾಸುವಿನ ಚೂರು ಗರ್ಭಕೋಶದಲ್ಲೇ ಉಳಿದಿರುವುದು, ಸೋಂಕು, ಮನೋಸಾಮಾಜಿಕ ಸಮಸ್ಯೆಗಳು, ನಿರಾಶೆಗಳು, ಬಾಣಂತಿ ಸನ್ನಿಗೆ ಕಾರಣವಾಗಬಹುದು.
 • ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ತೀರಾ ಕಡಿಮೆ ಅಥವಾ ತೀರಾ ಹೆಚ್ಚಾಗುವುದು: ಸಿಹಿಮೂತ್ರರೋಗವಿರುವ ವ್ಯಕ್ತಿಗಳು, ಇನ್‌ಸುಲಿನ್‌/ಅಥವಾ ಮಾತ್ರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ, ಆಹಾರವನ್ನು ಸೇವಿಸದೇ ಹೋದರೆ, ರಕ್ತದಲ್ಲಿ ಗ್ಲುಕೋಸ್ ಪ್ರಮಾಣ 60 ಮಿ.ಗ್ರಾಂ.ಗಿಂತ ಕಡಿಮೆಯಾದರೆ ಡೆಲಿರಿಯಂ ಕಾಣಿಸಿಕೊಳ್ಳಬಹುದು ಅಥವಾ ಡಯಾಬಿಟೀಸ್ ರೋಗಿ, ಸರಿಯಾಗಿ ಚಿಕಿತ್ಸೆ ಮಾಡಿಕೊಳ್ಳದೇ, ರಕ್ತದಲ್ಲಿ ಗ್ಲುಕೋಸ್ ಪ್ರಮಾಣ 300 ಅಥವಾ 400 ಮಿ.ಗ್ರಾಂ.ಗೆ     ಏರಿದಾಗಲೂ ಸನ್ನಿ ಕಾಣಿಸಿಕೊಳ್ಳಬಹುದು.
 • ವಾತಾವರಣದಲ್ಲಿ ಆಮ್ಲಜನಕದ ಕೊರತೆಯಿಂದ (ಅತಿ ಎತ್ತರದ ಸ್ಥಳಗಳಲ್ಲಿ, ಅತಿ ಜನಸಂದಣಿ ಇರುವ ಎಡೆಗಳಲ್ಲಿ) ಅಥವಾ ಕಾರ್ಬನ್‌ ಡೈಯಾಕ್ಸೈಡ್ ಅಥವಾ ಮಾನಾಕ್ಸೈಡ್ ಹೆಚ್ಚಾದಾಗ (ಬೆಂಕಿ ಆಕಸ್ಮಿಕಗಳಾದಾಗ, ಸಣ್ಣ ಸ್ಥಳ/ರೂಮ್‌ನಲ್ಲಿ ವಿಪರೀತ ಜನ ಇದ್ದಾಗ, ಗರಾಜ್‌ಗಳಲ್ಲಿ ಗ್ಯಾಸ್‌ ಲೀಕ್ ಆದಾಗ) ಸನ್ನಿ    ಕಾಣಿಸಿಕೊಳ್ಳುತ್ತದೆ.
 • ಅರಿವಳಿಕೆ ಔಷಧಿಗಳು: ಶಸ್ತ್ರಕ್ರಿಯೆಯ ನಂತರ ಕೆಲವು ರೋಗಿಗಳು ಡೆಲಿರಿಯಂ ಸ್ಥಿತಿಗೆ ಹೋಗುತ್ತಾರೆ.

ಚಿಕಿತ್ಸೆ: ಡೆಲಿರಿಯಂ ಬರಲು ಕಾರಣವಾದ ಅಂಶ/ವಸ್ತು/ರೋಗವನ್ನು ಹತೋಟಿಗೆ ತರಬೇಕು. ಉದಾಹರಣೆಗೆ: ನೀರಿನಂಶ ಕಡಿಮೆಯಾಗಿ ಲವಣಾಂಶಗಳು ಏರುಪೇರಾದಾಗ ಅದನ್ನು ಕೂಡಲೇ ಸರಿಪಡಿಸಬೇಕು. ಜ್ವರದ ತಾಪವನ್ನು ತಗ್ಗಿಸಬೇಕು. ವಿಷ ವಸ್ತುಗಳು ದೇಹದಿಂದ ಹೊರಹೋಗುವಂತೆ ಮಾಡಬೇಕು. ಸೋಂಕಿದ್ದರೆ, ಆಂಟಿಬಯಾಟಿಕ್ ಔಷಧಿಗಳಿಂದ ರೋಗಾಣುಗಳನ್ನು ನಾಶಮಾಡಬೇಕು. ರಕ್ತದಲ್ಲಿ ಗ್ಲುಕೋಸ್ ಕಡಿಮೆಯಾದರೆ ತಕ್ಷಣ ಗ್ಲುಕೋಸ್ ಕೊಟ್ಟು, ಸರಿಪಡಿಸಬೇಕು, ರೋಗಿಯನ್ನು ಅಶುದ್ಧ ವಾತಾವರಣದಿಂದ ಶುದ್ಧ/ಆಕ್ಸಿಜನ್ ಸರಿಪ್ರಮಾಣದಲ್ಲಿರುವ ಪರಿಸರಕ್ಕೆ ಸ್ಥಳಾಂತರಿಸಬೇಕು.

ಡೆಲಿರಿಯಂನಲ್ಲಿ ಕಾಣಿಸಿಕೊಳ್ಳುವ ಭ್ರಮೆಗಳು ಅತಿಚಟುವಟಿಕೆ, ಚಡಪಡಿಕೆ, ಭಾವೋದ್ವೇಗಗಳು, ಪ್ರಧಾನ ಶಮನಕಾರಿ ಔಷಧಗಳನ್ನು (ಉದಾ: ರಿಸ್ಟಿರಿಡೋನ್, ಹೆಲೋಪಿರಿಡಾಲ್) ಅಥವಾ ಅಲ್ಪಪ್ರಮಾಣದ ಶಮನಕಾರಿ ಮಾತ್ರೆಗಳನ್ನು (ಕ್ಲೋನಾಜೆಪಾಂ, ಲೊರಾಜೆಪಾಂ ಇತ್ಯಾದಿ) ಕೊಡಲಾಗುತ್ತದೆ. ನಿದ್ರಾಹೀನತೆಯನ್ನು ತಪ್ಪಿಸಲು, ನಿದ್ರಾಜನಕ ಮಾತ್ರೆ/ಇಂಜೆಕ್ಷನ್‌ನ್ನು ನೀಡಲಾಗುತ್ತದೆ.

ಡೆಲಿರಿಯಂ ರೋಗಿಯ ಆರೈಕೆ

“ಸನ್ನಿ” ಇರುವ ರೋಗಿಯ ಆರೈಕೆ ಬಹಳ ಮುಖ್ಯ. ರೋಗಿಯನ್ನು ಒಳ್ಳೆಯ ಗಾಳಿ, ಬೆಳಕಿರುವ ಕೊಠಡಿಯಲ್ಲಿರಿಸಿ. ಮಂದಬೆಳಕು ಅಥವಾ ಶುದ್ಧ ಗಾಳಿ ಇಲ್ಲದ ರೂಮು ಇನ್ನಷ್ಟು ತೊಂದರೆಗಳನ್ನು, ಗೊಂದಲವನ್ನು ಸೃಷ್ಟಿಸಬಲ್ಲದು.

ಕೊಠಡಿಯಲ್ಲಿ ಆದಷ್ಟೂ ಕಡಿಮೆ ವಸ್ತುಗಳಿರಲಿ/ಪ್ರಚೋದನೆ ಇರಲಿ. ಗೋಡೆಯ ಮೇಲೆ ಚಿತ್ರಗಳು ಇಲ್ಲದಿರುವುದೇ ಕ್ಷೇಮ. ಪ್ರಚೋದನೆ ಅಥವಾ ವಸ್ತುಗಳು ರೋಗಿಯ ಮನಸ್ಸಿನಲ್ಲಿ ಭ್ರಮೆಗಳನ್ನು ಸೃಷ್ಟಿಸಬಹುದಾದ್ದರಿಂದ, ಕಡಿಮೆ ವಸ್ತುಗಳು/ಪ್ರಚೋದನಗಳಿರುವಂತೆ ಎಚ್ಚರ ವಹಿಸಿ.

ರೋಗಿಯನ್ನು ನೋಡಿಕೊಳ್ಳಲು, ರೋಗಿಯ ವಿಶ್ವಾಸಕ್ಕೆ ಪಾತ್ರರಾದ ಒಬ್ಬಿಬ್ಬರು ಮಾತ್ರ ಇರಲಿ. ಹೊಸಬರು/ಅಪರಿಚಿತರು ಬೇಡ.

ರೋಗಿ ಇರುವೆಡೆಯಲ್ಲಿ ಗದ್ದಲ, ದೊಡ್ಡಶಬ್ದಗಳು, ಜನ ಗಟ್ಟಿ ಧ್ವನಿಯಲ್ಲಿ ಮಾತಾಡುವುದು, ಓಡಾಡುವುದು ಬೇಡ, ಪರಿಸರ ಪ್ರಶಾಂತವಾಗಿರಲಿ.

ವ್ಯಕ್ತಿಯ ಹತ್ತಿರ ಬರುವ ವ್ಯಕ್ತಿಗಳು ಅಥವಾ ಸಹಾಯ ಮಾಡಲು ಬರುವವರು ತಾವು ಯಾರು, ಏನು ಮಾಡಲು ಬರುತ್ತಿದ್ದೇವೆ ಎಂದು ಸ್ಪಷ್ಟವಾಗಿ ಹೇಳಬೇಕು.

“ನಾನು ನಿನ್ನ ತಾಯಿ, ನಿನಗೆ ಊಟ ಕೊಡಲು ಬಂದಿದ್ದೇನೆ. ತಟ್ಟೆ-ಸ್ಪೂನನ್ನು ನಿನ್ನ ಬಳಿ ಇಡುತ್ತಿದ್ದೇನೆ”, “ನಾನು ನರ್ಸ್‌, ನಿನ್ನ ಬಟ್ಟೆಯನ್ನು ಬದಲಿಸಲು ಬಂದಿದ್ದೇನೆ” ಇತ್ಯಾದಿ. ಇಲ್ಲದಿದ್ದರೆ ರೋಗಿಗೆ ಭಯವಾಗಿ, ಸಹಾಯ ಮಾಡುವವರ ಮೇಲೆ ಆಕ್ರಮಣ ಮಾಡಬಹುದು. ಅಥವಾ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಬಹುದು. ರೋಗಿಗೆ ಸಮಯಕ್ಕೆ ಸರಿಯಾಗಿ ಆಹಾರ ನೀಡಬೇಕು, ಗಲೀಜಾದ ಬಟ್ಟೆ/ಹೊದಿಕೆಗಳನ್ನು ಬದಲಿಸಬೇಕು, ಸ್ವಚ್ಚತೆಗೆ ಗಮನ ನೀಡಬೇಕು, ರೋಗಿಯ ಸುರಕ್ಷತೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಬೇಕು.