ಲಕ್ಷಣಗಳು:

ಮನಸ್ಸಿಗೆ ಖುಷಿ, ಅಮಲು, ಉತ್ತೇಜನ ತರುವ ಅಥವಾ ಮೈಮನಸ್ಸುಗಳ ನೋವನ್ನು ಮರೆಸುವ, ಅಹಿತಕಾರಿ ಅನುಭವಗಳನ್ನು ನಿವಾರಿಸುವ ವಸ್ತುವಿಗಾಗಿ ಮನುಷ್ಯ ಆಸೆಪಡುತ್ತಾನೆ. ಇಂತಹ ಅನೇಕ ವಸ್ತುಗಳನ್ನು ಸೇವಿಸಲಾರಂಭಿಸುತ್ತಾನೆ. ಪ್ರತಿದಿನ ಸೇವಿಸಲು ಇಷ್ಟಪಡುತ್ತಾನೆ. ಒಂದು ದಿನ ಆ ವಸ್ತುವನ್ನು ಸೇವಿಸದಿದ್ದರೆ, ಚಡಪಡಿಸುತ್ತಾನೆ. ಏನಾದರೂ ಮಾಡಿ, ಎಷ್ಟೋ ಅಡ್ಡಿ ಆತಂಕ ಬಂದರೂ ಬಿಡದೆ ಆ ವಸ್ತುವನ್ನು ಸಂಪಾದಿಸಲು ಹಾಗೂ ಸೇವಿಸಲು ಸಿದ್ಧನಾಗುತ್ತಾನೆ. ವಸ್ತುವಿನ ಸಂಪಾದನೆ ಸೇವನೆ ಮತ್ತು ಅದರ ಅಮಲಿನಲ್ಲಿರಲು, ದಿನದ ಬಹು ಸಮಯವನ್ನು ಕಳೆಯುತ್ತಾನೆ. ಸೇವನೆಯ ಪ್ರಮಾಣವನ್ನು ತಗ್ಗಿಸಿದಾಗ ಅಥವಾ ವಸ್ತುವನ್ನು ಸೇವಿಸದಿದ್ದಾಗ, ಮೈಮನಸ್ಸಿಗೆ ಬಹಳ ಹಿಂಸೆಕೊಡುವ ಅನೇಕ ಹಿಂತೆಗೆತದ ಲಕ್ಷಣಗಳು ಕಾಣಿಸಿಕೊಳ್ಳುವುದರಿಂದ ವ್ಯಕ್ತಿ ನರಳುತ್ತಾನೆ. ವಸ್ತುವಿನ ಸೇವನೆ ಮಾಡುತ್ತಿದ್ದಂತೆಯೇ ಈ ಹಿಂತೆಗೆದುಕೊಳ್ಳುವ ಲಕ್ಷಣಗಳು ಮಾಯವಾಗಿ ವ್ಯಕ್ತಿಗೆ ಆರಾಮವೆನಿಸುತ್ತದೆ. ಕೈಕಾಲುಗಳ ನಡುಕ, ಮೈಕೈನೋವು, ನಿದ್ರಾಹೀನತೆ, ಕಣ್ಣು-ಮೂಗಿನಲ್ಲಿ ಧಾರಾಕಾರ ನೀರು, ಊಟ ಸೇರದಿರವುದು, ಫಿಟ್ಸ್, ಭಯ, ಭ್ರಮೆಗಳು, ತನ್ನ ಜೀವ ಅಪಾಯದಲ್ಲಿದೆ ಎಂಬ ಅನಿಸಿಕೆ, ಏನೋ ಕಳೆದುಕೊಂಡಂತೆ ಮನಸ್ಸಿನಲ್ಲಿ ಶೂನ್ಯಭಾವ, ಯಾರು ಎಷ್ಟೇ ವಿರೋಧಮಾಡಲಿ, ವಸ್ತು ಸೇವನೆಯಿಂದ ಕಾಯಿಲೆ ಬಂದಿರಲಿ, ಅಂಗಾಂಗಗಳಿಗೆ ಹಾನಿಯುಂಟಾಗಲಿ, ಆಕ್ಸ್ಯಿಡೆಂಟ್ ಆಗಿ ತನಗೆ ಇತರರಿಗೆ ಪ್ರಾಣಾಪಾಯವಾಗಿರಲಿ, ಉದ್ಯೋಗ ಹೋಗುತ್ತದೆ ಎಂದು ಮಾಲೀಕ ಹೇಳಲಿ, ವಸ್ತುವನ್ನು ಮತ್ತೆ ಸೇವಿಸಿದರೆ ನಿನ್ನನ್ನು ಅರೆಸ್ಟ್ ಮಾಡಿ ಜೈಲಿಗೆ ಹಾಕುತ್ತೇವೆ ಎಂದು ಪೋಲೀಸರು-ನ್ಯಾಯಾಧೀಶ ಹೇಳಲಿ, ವ್ಯಕ್ತಿ ಆ ವಸ್ತುವಿನ ಸೇವನೆಯನ್ನು ಬಿಡುವುದಿಲ್ಲ. ಹೆಂಡತಿ ಮಕ್ಕಳು ಉಪವಾಸವಿರಲಿ, ಕಾಯಿಲೆ ಬಿದ್ದು ಆಸ್ಪತ್ರೆಯಲ್ಲಿ ಇರಲಿ, ತುರ್ತುಕರೆ-ಕೆಲಸವಿರಲಿ, ಮಾನ ಪ್ರಾಣಗಳ ವಿಷಯವಿರಲಿ ವ್ಯಕ್ತಿ ಅವಕ್ಕೆ ಗಮನ ಕೊಡದೇ, ವಸ್ತು, ಸೇವನೆಗೇ ಆದ್ಯತೆ ನೀಡುವುದೇ “ಚಟ”ದ ಪ್ರಮುಖ ಲಕ್ಷಣ. ಅದೇ ಅವನ ನಿತ್ಯಕಾಯಕವಾಗುತ್ತದೆ.

ಚಟವನ್ನುಂಟು ಮಾಡುವ ವಸ್ತುಗಳು

 • ಕಾಫಿ, ಟೀ, ಕೋಲಾಗಳು
 • ಬೀಡಿ, ಸಿಗರೇಟ್ ಸೇವನೆ
 • ಗುಟ್ಕಾ, ಖೈನಿ, ಪಾನ್ ಮಸಾಲಗಳನ್ನು ಜಗಿಯುವುದು
 • ಬೀರ್, ಬ್ರಾಂದಿ, ಸಾರಾಯಿ, ವಿಸ್ಕಿ, ರಮ್, ವೋಡ್ಕಾ ಇತ್ಯಾದಿ ಮದ್ಯಪಾನೀಯಗಳು
 • ಗಾಂಜಾ, ಭಂಗಿ, ಚರಸ್, ಹಶೀಷ್, ಗ್ರಾಸ್‌ನಂತಹ ಪದಾರ್ಥಗಳು
 • ಆಫೀಮು, ಬ್ರೌನ್‌ಶುಗರ್, ಹೆರಾಯಿನ್, ಮಾರ್ಫಿನ್, ಪೆಥಿಡಿನ್
 • ಕೆಮ್ಮಿನ ಸಿರಪ್‌ಗಳು
 • ಕೊಕೋನ್, ಎಲ್‌ಎಸ್‌ಡಿ
 • ನೋವು ನಿವಾರಕಗಳು: ಆಸ್ಟಿರಿನ್, ಅನಾಲ್ಜಿನ್, ಬ್ರೂಫೆನ್, ಡೈಕ್ಲೊಫೆನಿಕ್, ನಿಮುಸಲೈಡ್, ಟಿಡಿಜೆಸಿಕ್ ಇತ್ಯಾದಿ
 • ನಿದ್ರಾಮಾತ್ರೆಗಳು, ಫೀನೋಬಾರ್ಬಿಟೋನ್, ಡೈಜೆಪಾಮ್, ನೈಟ್ರಾಜೆಪಾಮ್, ಆಲ್ಟ್ರೋಜೆಲಾಮ್, ಕ್ಲೋರ‍್ಡೈಜೆಪಾಕ್ಸೈಡ್ ಇತ್ಯಾದಿ
 • ಪೆಟ್ರೋಲ್, ಕ್ಸೀರಾಕ್ಸ್ ಇಂಕ್, ನೇಲ್‌ಪಾಲಿಶ್‌ರಿಮೂವರ್ ಇತ್ಯಾದಿಗಳನ್ನು ಮೂಸುವುದು
 • ಅಯೋಡೆಕ್ಸ್, ವಿಷಕಾರಿ ಅಣಬೆಗಳನ್ನು ತಿನ್ನುವುದು
 • ಅಲ್ಪವಿಷಕಾರೀ ಹಾವುಗಳಿಂದ ಕಚ್ಚಿಸಿಕೊಳ್ಳುವುದು ಇತ್ಯಾದಿ.

ಚಟಕ್ಕೆ ಯಾರು ತುತ್ತಾಗುತ್ತಾರೆ?

 • ಹದಿವಯಸ್ಸಿನವರು, ಪ್ರೌಢ ವಯಸ್ಕರು, ಕಾಲೇಜು ವಿದ್ಯಾರ್ಥಿಗಳು
 • ಪುರುಷರಲ್ಲಿ ಹೆಚ್ಚು
 • ಒಂಟಿಯಾಗಿರುವವರು, ನಿರುದ್ಯೋಗಿಗಳು
 • ದೋಷಪೂರ್ಣ ವ್ಯಕ್ತಿತ್ವ ಉಳ್ಳವರು
 • ತುಂಬಾ ಮಾನಸಿಕ ಒತ್ತಡದಲ್ಲಿರುವವರು, ನಿರಾಶೆಗೆ ಒಳಗಾದವರು
 • ಪೋಲೀಸರು, ಅಬ್ಕಾರಿ ಇಲಾಖೆಯ ಸಿಬ್ಬಂದಿ, ಬಾರ‍್ನಲ್ಲಿ ಕೆಲಸ ಮಾಡುವವರು, ಲಾರಿ/ಬಸ್‌/ರಿಕ್ಷಾ ಚಾಲಕರು, ಸೇಲ್ಸ್‌ಮನ್, ಎಕ್ಸಿಕ್ಯುಟೀವ್ಸ್, ಆಪರೇಷನ್ ಥೇಟರ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಸಫಾಯಿ ಮಾಡುವವರು, ಕೊಳಚೆ ಪ್ರದೇಶಗಳಲ್ಲಿ ವಾಸಮಾಡುವವರು.
 • ಸಾಧುಗಳು, ಸನ್ಯಾಸಿಗಳು, ದೇವಸ್ಥಾನ ಮಠದಲ್ಲಿರುವವರು (ಮುಖ್ಯವಾಗಿ ಗಾಂಜಾ, ಭಂಗಿ ಉಪಯೋಗಿಸುತ್ತಾರೆ.)
 • ಕೂಲಿ ಕಾರ್ಮಿಕರು, ಕಲ್ಲು ಹೊಡೆಯುವವರು, ಬಣ್ಣ ಬಳಿಯುವವರು, ಗಾರೆ ಕೆಲಸ ಮಾಡುವವರು, ಬಾರ್ ಬೆಂಡರ‍್ಗಳು
 • ತೀವ್ರ ನೋವು ಬಂದು ವೈದ್ಯರಿಂದ ನೋವು-ನಿವಾರಕಗಳನ್ನು ಪಡೆದವರು
 • ಶಸ್ತ್ರಕ್ರಿಯೆ ಮಾಡಿಸಿಕೊಂಡು, ಶಸ್ತ್ರಕ್ರಿಯಾನಂತರದ ಅವಧಿಯಲ್ಲಿ ನೋವು ನಿವಾರಕಗಳನ್ನು ಪಡೆದವರು.
 • ಬೀದಿಗೆ ಬಿದ್ದ ಚಿಂದಿ ಆಯುವ ಹುಡುಗರು.
 • ನೈಸರ್ಗಿಕ ಮತ್ತು ಮಾನವ ನಿರ್ಮಿತ ದುರಂತಗಳಲ್ಲಿ ಬದುಕಿ ಉಳಿದವರು.

ಚಟಕ್ಕೆ ಕಾರಣಗಳೇನು?

ಸಾಕಷ್ಟು ಜನ ಯಾವುದಾದರೊಂದು ನಶೆ ಬರುವ ಅಥವಾ ಚಟವನ್ನುಂಟು ಮಾಡುವ ವಸ್ತುಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ. ಆದರೆ ಅವರಲ್ಲಿ ಶೇಕಡಾ 20ರಿಂದ 25 ಮಂದಿ ಚಟ ಬೆಳೆಸಿಕೊಳ್ಳಲು ಕಾರಣಗಳೇನು?

 • ಅನುವಂಶೀಯತೆ, ಚಟ ಬೆಳೆಯುವ ದೌರ್ಬಲ್ಯ, ವಂಶಪಾರಂಪರ್ಯವಾಗಿ ಒಂದು ತಲೆಮಾರಿನಿಂದ, ಇನ್ನೊಂದು ತಲೆಮಾರಿಗೆ ವರ್ಗಾವಣೆಯಾಗಬಲ್ಲದು.
 • ಸಹವಯಸ್ಕರ, ಸ್ನೇಹಿತರುಗಳ ಒತ್ತಾಸೆ ಹಾಗೂ ಮಾದರಿ.
 • ದೃಶ್ಯ ಮಾಧ್ಯಮ (ಟೀವಿ, ಸಿನೆಮಾ, ವಿಡಿಯೋ, ನೆಟ್) ಹಾಗೂ ಮುದ್ರಣ ಮಾಧ್ಯಮ, ಮಾದಕ ವಸ್ತು ಸೇವನೆಗೆ ಉತ್ತೇಜನ ನೀಡುವ ಪರಿಸರ.
 • ಮಾದಕ ವಸ್ತುಗಳು, ಮದ್ಯಪಾನೀಯಗಳು ಸುಲಭವಾಗಿ, ಸಮೀಪದಲ್ಲಿ ಸಿಗುವುದು, ಅವುಗಳಿಂದ ಲಾಭವಿದೆ, ಸುಖವಿದೆ ಎಂದು ನಂಬುವುದು.
 • ಖಿನ್ನತೆ, ಸಿಟ್ಟು, ರೋಷ, ನಿರಾಶೆ, ಭಯ, ಆತಂಕಗಳು ಮತ್ಸರದಂತಹ ನಕಾರಾತ್ಮಕ ಭಾವನೆಗಳು ಹೆಚ್ಚು ಕಾಲ/ಪದೇ ಪದೇ ವ್ಯಕ್ತಿಯನ್ನು ಕಾಡುವುದು.
 • ವಿಪರೀತ ಕೀಳರಿಮೆ
 • ವ್ಯಕ್ತಿತ್ವ ದೋಷಗಳು: ಸಮಾಜ ವಿರೋಧಿ ವ್ಯಕ್ತಿತ್ವ, ಗಡಿರೇಖೆಯ (ಬಾರ್ಡ್‌ರ್ ಲೈನ್) ವ್ಯಕ್ತಿತ್ವ ದೋಷ, ಪರಾವಲಂಬನೆಯ ವ್ಯಕ್ತಿತ್ವ ದೋಷ ಇತ್ಯಾದಿ.
 • ಅತಿಯಾದ ಮಾನಸಿಕ ಒತ್ತಡ, ಅತಿ ವೇಗದ, ಅತೃಪ್ತಿಯ ಜೀವನ ಶೈಲಿಯುಳ್ಳವರು, ಯಾವ ಹವ್ಯಾಸವೂ ಇಲ್ಲದಿರುವುದು, ಒಂಟಿತನ.
 • ನಿರುದ್ಯೋಗಿಗಳು, ಹೆಚ್ಚು ಬಿಡುವಿನ ಸಮಯವುಳ್ಳವರು.
 • ಕೀಲು, ಉರಿತ, ಪದೇ ಪದೇ ತಲೆನೋವು/ಹೊಟ್ಟೆ ನೋವು/ಮೈಕೈನೋವು/ಕ್ಯಾನ್ಸರ‍್ನಿಂದ ಉಂಟಾಗುವ ನೋವು.
 • ಬಹುಬೇಗ ತಾಳಿಕೆ Tolerance ಅನ್ನು ಉತ್ಪತ್ತಿ ಮಾಡುವ ಪದಾರ್ಥ, Tolerance ಅಂದರೆ, ನಿರೀಕ್ಷಿತ ಪರಿಣಾಮ ಕೊಡಲು, ಹೆಚ್ಚೆಚ್ಚು ಪ್ರಮಾಣದ ವಸ್ತು ಬೇಕಾಗುವುದು. ಉದಾ: ಮೊದಲೆರಡು ದಿನ 1 ಮಿ.ಗ್ರಾಂ. ಹೆರಾಯಿನ್‌ಗೆ ಸಿಕ್ಕು ನಶೆಯು, ಮೂರನೇ ದಿನ 2 ಅಥವಾ 3 ಮಿ.ಗ್ರಾಂ.ಗೆ ಸಿಗುತ್ತದೆ. ಒಂದು ವಾರದಲ್ಲಿ ಅದು ಹತ್ತು ಪಟ್ಟು ಹೆಚ್ಚುತ್ತದೆ. 30 ಮಿ.ಲಿ. ಬ್ರಾಂದಿ ವಿಸ್ಕಿಗೆ ದೊರೆತ ಸಂತೋಷ/ಕಿಕ್ ಆರೇಳು ತಿಂಗಳಾದ ಮೇಲೆ ಒಂದು ಅಥವಾ ಎರಡು    ಕ್ವಾರ್ಟರ್ (180 ಅಥವಾ 370 ಮಿ.ಲೀ.) ಸೇವಿಸಿದರೂ ಸಿಗದಿರಬಹುದು. ಬೇಗ ಟಾಲರೆನ್ಸ್ ಉಂಟುಮಾಡುವ ಪದಾರ್ಥಕ್ಕೆ ಬಹುಬೇಗ ಚಟ ಬೆಳೆಯುತ್ತದೆ. ಉದಾ: ಹೆರಾಯಿನ್.
 • ಮಾನಸಿಕ ಕಾಯಿಲೆಗಳು, ಖಿನ್ನತೆ, ಸ್ಕಿಜೋಫ್ರೀನಿಯಾ, ಮೇನಿಯಾ ಇತ್ಯಾದಿ.
 • ಚಿಕಿತ್ಸೆ: ಮಾದಕವಸ್ತು ಅಥವಾ ಯಾವುದೇ ವಸ್ತುವಿಗೆ ಬೆಳೆಯುವ ಚಟವನ್ನು ಒಂದು ಕಾಯಿಲೆ, ಮಾನಸಿಕ ಕಾಯಿಲೆ ಎಂದೇ ಪರಿಗಣಿಸಬೇಕು. ಚಟ ಬಿಡಿಸಲು      ನಾಲ್ಕು ಹಂತಗಳ ಚಿಕಿತ್ಸೆ ಇದೆ.
 • ಮೊದಲ ಹಂತ: ವ್ಯಕ್ತಿಗೆ ತಿಳುವಳಿಕೆ ಹೇಳಿ, ಮನ ಒಲಿಸಿ, ಮಾದಕ ವಸ್ತುವಿನ ಸೇವನೆಯನ್ನು ಥಟ್ ಎಂದು ನಿಲ್ಲಿಸುವುದು. ಇದನ್ನು ವ್ಯಕ್ತಿ ತನ್ನ           ಮನೆಯಲ್ಲಿದ್ದುಕೊಂಡೇ ಮಾಡಬಹುದು. ಈ ರೀತಿ ಥಟ್ಟನೆ ನಿಲ್ಲಿಸಿದಾಗ ಕಾಣಿಸಿಕೊಳ್ಳುವ ದೈಹಿಕ ಮತ್ತು ಮಾನಸಿಕ ರೋಗಲಕ್ಷಣಗಳನ್ನು ಹತೋಟಿಯಲ್ಲಿಡಲು, ಶಮನಕಾರಿ ಔಷಧಗಳನ್ನು ದಿನಕ್ಕೆ ಮೂರು ನಾಲ್ಕು ಬಾರಿ ನೀಡಲಾಗುತ್ತದೆ. (ಕ್ಲೋರ್ ಡೈಜೆಪಾಕ್ಸೈಡ್, ಡಯಾಜೆಪಾಂ, ಲೋರಾಜೆಪಾಮ್, ಆಕ್ಸಿಜೆಪಾಮ್        ಇತ್ಯಾದಿ). ಮೊದಲ ದಿನ ಅಧಿಕ ಪ್ರಮಾಣದಲ್ಲಿ ಈ ಔಷಧಿಯನ್ನು ಕೊಟ್ಟು ಪ್ರತಿದಿನ ಸ್ವಲ್ಪಸ್ವಲ್ಪವಾಗಿ ಕಡಿಮೆ ಮಾಡಿ, ಎಂಟು-ಹತ್ತು ದಿನಗಳನ್ನು ನಿಲ್ಲಿಸಲಾಗುತ್ತದೆ. ಈ ಅವಧಿಯಲ್ಲಿ “ಹಿಂತೆಗೆತದ ಚಿನ್ಹೆಗಳು” ಮರೆಯಾಗುತ್ತವೆ. ವ್ಯಕ್ತಿ ಮಾದಕ ವಸ್ತುಗಳನ್ನು ಸೇವಿಸದಿದ್ದರೂ ಸಮಾಧಾನ ಸ್ಥಿತಿಯಲ್ಲಿರುತ್ತಾನೆ. ಇದರ ಜೊತೆಗೆ, ರೋಗಿಯ ದೈಹಿಕ ಕಾಯಿಲೆ ನ್ಯೂನತೆಗಳನ್ನು ಸರಿಪಡಿಸಲಾಗುತ್ತದೆ. ಅಸಿಡಿಟಿ-ಅಲ್ಸರ್ ಇದ್ದರೆ ಅದಕ್ಕೆ ಚಿಕಿತ್ಸೆ, ಮಿಟಮಿನ್ ಕೊರತೆ ಇದ್ದರೆ, ಅದನ್ನು ಸರಿಪಡಿಸುವುದು, ಸೋಂಕಾಗಿದ್ದರೆ ಆಂಟಿಬಯಾಟಿಕ್ಸ್ ಇತ್ಯಾದಿ.
 • ಎರಡನೇ ಹಂತದಲ್ಲಿ: ರೋಗಿ ಮಾದಕ ವಸ್ತುವಿನ ಚಟ ಬೆಳೆಸಿಕೊಳ್ಳಲು ಉತ್ತೇಜನ, ಒತ್ತಾಸೆ ನೀಡಿದ ಅಂಶಗಳನ್ನು ಪತ್ತೆ ಮಾಡಲಾಗುತ್ತದೆ. ವೈಯಕ್ತಿಕ ಸಮಸ್ಯೆಗಳು, ಕೌಟುಂಬಿಕ ಮತ್ತು ಆರ್ಥಿಕ ಸಮಸ್ಯೆಗಳು ಉದ್ಯೋಗಕ್ಕೆ ಸಂಬಂಧಿಸಿದ, ಸಾಮಾಜಿಕ ಪರಿಸರಕ್ಕೆ ಸಂಬಂಧಿಸಿದ ತೊಡಕುಗಳನ್ನು ಗುರುತಿಸಿ ಅವುಗಳ ನಿವಾರಣೆಗೆ ಕ್ರಮಗಳನ್ನು ಕೈಗೊಳ್ಳಬೇಕು. ಮನೆಯವರಿಗೆ, ಸ್ನೇಹಿತ ಸಹೋದ್ಯೋಗಿಗಳಿಗೆ ತಿಳುವಳಿಕೆ ಕೊಡುವುದು, ಚಟವಿರುವ ವ್ಯಕ್ತಿಯನ್ನು ದೂಷಿಸದೆ, ತಿರಸ್ಕಾರ ಮಾಡದೆ, ಆತನನ್ನು ಪ್ರೀತಿವಿಶ್ವಾಸದಿಂದ ನೋಡಿಕೊಳ್ಳಲು ಹೇಳುವುದು. ಸಂಬಂಧಗಳನ್ನು ಉತ್ತಮಪಡಿಸುವುದು, ವ್ಯಕ್ತಿಗೆ ಇರಬಹುದಾದಂತಹ ದೈಹಿಕ-ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.
 • ಮೂರನೆಯ ಹಂತದಲ್ಲಿ: ವ್ಯಕ್ತಿಗೆ ಮದ್ಯಪಾನ, ಧೂಮಪಾನ ಅಥವಾ ಮತ್ಯಾವುದೇ ಮಾದಕ ವಸ್ತುವಿನ ಸೇವನೆ “ಬೇಡ”, ನಾನು ಮಾಡುವುದಿಲ್ಲ ಎಂದು ದೃಢವಾಗಿ ಹೇಳುವ ಮನೋಭಾವವನ್ನು ಬೆಳೆಸುವುದು. ಯಾವ ಸನ್ನಿವೇಶ/ಸಂದರ್ಭದಲ್ಲಿ ಯಾವ ವ್ಯಕ್ತಿ/ವ್ಯಕ್ತಿಗಳ ಜೊತೆ ಇದ್ದಾಗ, ಯಾವ ವಿಷಯ ಸಮಸ್ಯೆಗಳು ಮನಸ್ಸನ್ನು ಕಾಡಿದಾಗ, ಮಾದಕವಸ್ತು ಸೇವನೆ ಮಾಡಲು ಮನಸ್ಸು ಇಷ್ಟಪಡುತ್ತದೆ ಎಂಬುದನ್ನು ಪಟ್ಟಿಮಾಡಲು ವ್ಯಕ್ತಿಗೆ ಹೇಳಲಾಗುತ್ತದೆ. ಆ ಸಂದರ್ಭ ಸನ್ನಿವೇಶವನ್ನು, ವ್ಯಕ್ತಿಗಳನ್ನು ದೂರಮಾಡಲು ಸಾಧ್ಯವೇ ಅಥವಾ ಆಗ “ನಾನು ಮಾದಕ ವಸ್ತುಗಳನ್ನು ಸೇವಿಸುವುದಿಲ್ಲ” ಎಂದು ನಿರ್ಧಾರ ಮಾಡಿ, ಅದನ್ನು ಅಕ್ಷರಶಃ ಪಾಲಿಸಲು ಶಕ್ತವಾಗಲು ವ್ಯಕ್ತಿ ಮಾನಸಿಕ ತರಬೇತಿ ನೀಡಲಾಗುತ್ತದೆ. ಇದನ್ನು ASSERTIVE TRAINING ಎಂದು ಕರೆಯಲಾಗುತ್ತದೆ.
 • ನಾಲ್ಕನೇಯ ಹಂತದಲ್ಲಿ: ವ್ಯಕ್ತಿ ತನ್ನ ಸಹಜ ಪರಿಸರದಲ್ಲಿದ್ದುಕೊಂಡು, ಎಂದಿನ ಕೆಲಸ, ಕರ್ತವ್ಯಗಳಲ್ಲಿ ತೊಡಗಿಕೊಂಡು, ಉಪಯುಕ್ತವಾಗಿ ಬದುಕಲು ಅವಕಾಶ ಮತ್ತು ಉತ್ತೇಜನ. ಈ ಮುಂಚಿನ ಉದ್ಯೋಗಕ್ಕೆ ವಾಪಸ್ಸಾಗಲು ಸಾಧ್ಯವಾಗದಿದ್ದರೆ, ಬದಲೀ ಉದ್ಯೋಗ ಮಾಡಲು ತರಬೇತಿ ನೀಡಬೇಕು. ಮಾದಕ ವಸ್ತುವನ್ನು ಮತ್ತೆ ಸೇವಿಸದಿರಲು, ಕೆಲವರಿಗೆ ಒಂದು ವರ್ಷ ಕಾಲ ನಿರ್ದಿಷ್ಟ ಔಷಧಿಯನ್ನು ನೀಡಲಾಗುತ್ತದೆ. ಉದಾ: ಮದ್ಯಪಾನ ಪುನರಾವರ್ತನೆಯಾಗುವುದನ್ನು ತಡೆಗಟ್ಟಲು.
 • ಡೈಸಲ್‌ಫುರಾಮ್‌ ಮಾತ್ರೆ (ಎಸ್ಪೆರಾಲ್, ಆಂಟಿಬ್ಯೂಸ್, ಅಂಟಾಡಿಕ್ಟ್)ಯನ್ನು ಪ್ರತಿದಿನ ಬೆಳಿಗ್ಗೆ ಉಪಹಾರದ ನಂತರ ಸೇವಿಸಲು ಹೇಳಲಾಗುತ್ತದೆ. ಇದನ್ನು ಸೇವಿಸಿ, ವ್ಯಕ್ತಿ ಮದ್ಯಪಾನ ಮಾಡಿದರೆ ಅಹಿತಕಾರಿ ಪ್ರತಿಕ್ರಿಯೆ ಉಂಟಾಗುತ್ತದೆ. ವಾಕರಿಕೆ, ತಲೆಸುತ್ತು, ಸುಸ್ತು, ಆಯಾಸ ಇತ್ಯಾದಿ. ಆಗ ವ್ಯಕ್ತಿ ಮದ್ಯಪಾನ       ಮಾಡಬಾರದು ಅನಿಸುತ್ತದೆ.
 • ಅಕಾಂಪ್ರೊಸೇಟ್ ಮಾತ್ರೆ: ಇದು ಆಲ್ಕೋಹಾಲ್ ಸೇವನೆಯ ಬಯಕೆಯನ್ನು ತಗ್ಗಿಸುತ್ತದೆ.
 • ಫ್ಲೂಯಾಕ್ಸೆಟಿನ್, ಸರ್ಟ್ರಾಲಿನ್, ಫ್ಲೂವಕ್ಸಮಿನ್-ಇವೆಲ್ಲ ಖಿನ್ನತೆ ನಿವಾರಕ ಔಷಧಗಳು, ಆಲ್ಕೋಹಾಲ್ ಸೇವನೆಗೆ ಪ್ರೇರಣೆ ನೀಡುವ ಖಿನ್ನತೆ-ಆತಂಕವನ್ನು        ನಿವಾರಿಸುತ್ತದೆ.
 • ನಾಲ್ಟ್ರಿಕ್ಸೋನ್: ಮದ್ಯಪಾನದಿಂದ ಬರುವ ನಶೆ-ಖುಷಿಯನ್ನು ತಗ್ಗಿಸುತ್ತದೆ.
 • ಬದಲೀ ಆರೋಗ್ಯಕರ, ವಿರಾಮಜನಕ ಹವ್ಯಾಸ, ಚಟುವಟಿಕೆಗಳು: ಸಂಗೀತ, ನೃತ್ಯ, ಅಭಿನಯ, ಚಿತ್ರಕಲೆ, ಕರಕುಶಲ ವಸ್ತುಗಳನ್ನು ಮಾಡುವುದು, ಪ್ರವಾಸ, ಯೋಗ, ಧ್ಯಾನ, ಪ್ರಾಣಾಯಾಮ, ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆಗಳಿಂದ ಮಾದಕ ವಸ್ತುಗಳ ಮೇಲಿನ ಆಕರ್ಷಣೆ ತಗ್ಗುತ್ತದೆ.
 • ಜೀವನ ಕೌಶಲಗಳನ್ನು ಕಲಿಸುವುದು: ಸಮಸ್ಯೆಗಳು, ಕಷ್ಟನಷ್ಟ, ನೋವು ನಿರಾಶೆಗಳನ್ನು ಸರಾಗವಾಗಿ ಎದುರಿಸಲು, ನಿಭಾಯಿಸಲು, ವ್ಯಕ್ತಿಗೆ ತರಬೇತಿ ನೀಡುವುದು, ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುವ ವಿಧಾನಗಳನ್ನು ಹೇಳಿಕೊಡುವುದು.

ಈ ಎಲ್ಲಾ ಚಿಕಿತ್ಸೆಯಿಂದ ಶೇಕಡಾ 50 ರಿಂದ 60ರಷ್ಟು “ಚಟ ಇರುವ ರೋಗಿಗಳು” ಚಟದಿಂದ ಮುಕ್ತರಾಗಿರುತ್ತಾರೆ. ಉಳಿದವರಲ್ಲಿ ಚಟ ಮರುಕಳಿಸಬಹುದು, ಅವರನ್ನು ಮತ್ತೆ ಚಿಕಿತ್ಸೆಗೆ ಒಳಪಡಿಸಬೇಕು.

ಮುಂಜಾಗ್ರತೆ: ಧೂಮಪಾನವಾಗಲೀ, ಮದ್ಯಪಾನವಾಗಲೀ, ಮಾದಕವಸ್ತು ಸೇವನೆಯಾಗಲೀ, ಪ್ರಾರಂಭ ಮಾಡದಿರುವುದೇ ಹೆಚ್ಚು ಸುಲಭ ಮತ್ತು ಕ್ಷೇಮಕಾರಿ. ಈ ಎಲ್ಲ ವಸ್ತುಗಳ ಅಪಾಯವನ್ನು ಎಳೆಯರಿಗೆ, ಸಂಬಂಧಪಟ್ಟವರಿಗೆ ತಿಳಿಸಿ ಅವುಗಳಿಂದ ದೂರವಿರಲು ಶಿಕ್ಷಣ ನೀಡಬೇಕು.