Categories
ಜಾನಪದ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಕಮಲಮ್ಮ ಸೂಲಗಿತ್ತಿ

ಪರೋಪಕಾರದಲ್ಲೇ ಬದುಕಿನ ಸಾರ್ಥಕತೆಯ ಕಂಡುಕೊಂಡ ನಿಸ್ವಾರ್ಥ ಕಾಯಕಜೀವಿ ಕಮಲಮ್ಮ, ಉಚಿತ ಹೆರಿಗೆ ಮಾಡಿಸುವ ಸೂಲಗಿತ್ತಿ, ಜನಪದ ಭಂಡಾರವುಳ್ಳ ದೇಸೀ ಪ್ರತಿಭೆ, ಅಲೆಮಾರಿ ಸಮುದಾಯಕ್ಕೆ ಸೇರಿದ ಕಮಲಮ್ಮ ಕೋಲಾರದವರು. ಹಟ್ಟಿಚಿನ್ನದಗಣಿ ಹುಟ್ಟೂರು. ಶಾಲೆಯ ಮೆಟ್ಟಲೇ ಹತ್ತದ ನತದೃಷ್ಟೆ, ಆದರೆ, ಲೋಕಜ್ಞಾನದಲ್ಲಿ ನಿಪುಣೆ, ಅಮ್ಮ ನಾಗಮ್ಮನಿಂದ ಸೂಲಗಿತ್ತಿತನ, ಅಪ್ಪನಿಂದ ಪಾರಂಪರಿಕ ನಾಟಿ ಔಷಧಿ ನೀಡುವಿಕೆ ಕಮಲಮ್ಮಳಿಗೆ ಬಂದ ಬಳುವಳಿ, ಗರ್ಭಿಣಿಯರ ಪಾಲಿನ ನೆಚ್ಚಿನ ಕಮಲಜ್ಜಿ, ಆಸ್ಪತ್ರೆಯ ಮುಖವನ್ನೇ ನೋಡದ ಕಮಲಮ್ಮ ಈವರೆಗೆ ೫೦೦ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಸೂಲಗಿತ್ತಿ. ಎಲ್ಲವೂ ಸುಸೂತ್ರ ಹೆರಿಗೆಯೇ. ಕಾಮಾಲೆ, ತಲೆಶೂಲೆ, ಪಿತ್ತ ಅಜೀರ್ಣ ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧಿ ಮೂಲಕ ಪರಿಹಾರ ನೀಡುವ ಈ ನಾಟಿವೈದ್ಯೆಗೆ ಪರೋಪಕಾರವೇ ಬದುಕಿನ ಗೊತ್ತು-ಗುರಿ. ಕಮಲಮ್ಮ ಜಾನಪದ ಜ್ಞಾನದ ಭಂಡಾರ, ಸೋಬಾನೆ, ಜೋಗುಳ ಮತ್ತು ಬುರ‍್ರಕಥಾ ಹಾಡುಗಳನ್ನು ಹಾಡುವಲ್ಲಿ ನಿಸ್ಸೀಮೆ. ಆಕೆಯ ಕಂಠದಲ್ಲಿ ಜನಪದ ಹಾಡುಗಳನ್ನು ಕೇಳುವುದೇ ಚೆಂದವೆಂಬುದು ಶ್ರೋತೃಗಳ ಸಾಮಾನ್ಯ ಅಭಿಪ್ರಾಯ. ಎಲೆಮರೆಯಕಾಯಿಯಂತೆ ಬದುಕಿದರೂ, ಬಡತನ ಕಿತ್ತು ತಿನ್ನುತ್ತಿದ್ದರೂ ಎಲ್ಲೆಮೀರಿದ ಲೋಕಸೇವೆಯಲ್ಲಿ ನಿರತವಾಗಿರುವ ಕಮಲಮ್ಮ ಸಮಾಜಸೇವೆಗೆ ಆದರ್ಶ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಾಣಿಜ್ಯೋದ್ಯಮ

ಶ್ರೀ ಜಯರಾಮ ಬನನ್

ಭಾರತೀಯ ಹೋಟೆಲ್ ಉದ್ಯಮದಲ್ಲಿ ವಿಕ್ರಮಗಳನ್ನು ದಾಖಲಿಸಿದ ವಿಶಿಷ್ಟ ಉದ್ಯಮಿ ಜಯರಾಮ ಬನನ್, ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದ ಸಮಾಜಮುಖಿ, ಸಾವಿರಾರು ಮಂದಿಯ ಸ್ವಾವಲಂಬಿ ಬದುಕಿಗೆ ಪ್ರೇರಕಶಕ್ತಿ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಮಠದಬೆಟ್ಟುವಿನಲ್ಲಿ ೧೯೫೫ರಲ್ಲಿ ಜನಿಸಿದ ಜಯರಾಮ್ ೧೩ನೇ ವಯಸ್ಸಿನಲ್ಲಿ ಮನೆ-ಊರು ತೊರೆದು ಮುಂಬಯಿಗೆ ವಲಸೆ ಹೋದರೂ ಎರಡೊತ್ತಿನ ಊಟಕ್ಕೂ ತತ್ವಾರಪಟ್ಟು ಘಾಜಿಯಾಬಾದ್‌ಗೆ ಗುಳೆ. ಅಲ್ಪದುಡಿಮೆಯ ಐದು ಸಾವಿರ ರೂಪಾಯಿ ಹಣ ಹೂಡಿ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ “ಸಾಗರ ರತ್ನ” ಹೋಟೆಲ್ ತೆರೆದರು. ಸತತ ಶ್ರಮ, ಶುದ್ಧ ಆಹಾರ, ಸ್ವಚ್ಛವಾತಾವರಣ ಮತ್ತು ಗ್ರಾಹಕಸ್ನೇಹಿ ನಡೆಯಿಂದ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಕಂಡ ಜಯರಾಮ್‌ ಆನಂತರ ದೆಹಲಿಯಾದ್ಯಂತ ಸರಣಿ ರೆಸ್ಟೋರೆಂಟ್‌ಗಳನ್ನು ತೆಗೆದದ್ದು ಇತಿಹಾಸ. ದೇಶಾದ್ಯಂತ ಸದ್ಯ ೧೦೫ಕ್ಕೂ ಹೆಚ್ಚು ಶಾಖೆಗಳು ಮತ್ತು ಸ್ವಾಗತ್ ಹೋಟೆಲ್‌ಗಳ ಮಾಲೀಕರು, ಬನನ್ ಸದಾ ಸಮಾಜಸೇವಾನಿರತರು. ಪ್ರತಿವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ ಭರಿಸುವ ಅವರು ಸಂಘಸಂಸ್ಥೆ, ದೇವಾಲಯಗಳು, ಸಂಘಸಂಸ್ಥೆಗಳಿಗೆ ದೇಣಿಗೆ ನೀಡುವ ಕೊಡುಗೈ ದಾನಿ. ಜಿಆರ್‌ಬಿ ಕಂಪನಿ ಮೂಲಕ ಕರ್ನಾಟಕದ ೨ ಸಾವಿರಕ್ಕೂ ಹೆಚ್ಚು ಮಂದಿಗೆ ನೌಕರಿ ನೀಡಿರುವ, ಕಾರ್ಮಿಕ ಮಕ್ಕಳ ಶಿಕ್ಷಣ–ಮದುವೆಗಳಿಗೆ ನೆರವಾಗುವ ಜಯರಾಮ ಹೃದಯವಂತಿಕೆ, ಸರಳತೆ, ಮಾನವೀಯತೆವುಳ್ಳ ವಿರಳ ಉದ್ಯಮಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಚ್‌.ಎಸ್. ಮೋಹನ್

ನೇತ್ರತಜ್ಞ, ಲೇಖಕ, ಅಂಕಣಕಾರ, ಸಂಶೋಧಕ, ಪತ್ರಿಕಾಸಂಪಾದಕ, ಸಮಾಜಸೇವಕ, ಸಂಘಟಕರಾದ ಡಾ. ಎಚ್‌.ಎಸ್. ಮೋಹನ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಬಹುರೂಪಿ ಸಾಧನೆಗೈದ ಬಹುಮುಖ ಪ್ರತಿಭೆ.
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ೧೯೫೫ರಲ್ಲಿ ಜನಿಸಿದ ಡಾ. ಮೋಹನ್ ಮಲೆನಾಡಿನ ಜನಪ್ರಿಯ ನೇತ್ರಚಿಕಿತ್ಸಾ ತಜ್ಞರು. ನಾಲ್ಕು ದಶಕಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿದವರು. ೩೨ ಸಾವಿರ ಮಕ್ಕಳಿಗೆ ಉಚಿತ ನೇತ್ರ ಚಿಕಿತ್ಸೆ, ತಪಾಸಣೆಗೈದವರು. ವಿಜಯ ಸೇವಾಟ್ರಸ್ಟ್ ಮೂಲಕ ಹಳ್ಳಿಗಾಡಿನ ಅಶಕ್ತರಿಗಾಗಿ ಐವತ್ತಕ್ಕೂ ಹೆಚ್ಚು ನೇತ್ರ ಚಿಕಿತ್ಸಾ ಶಿಖರ, ಕಾರ್ಯಾಗಾರ, ವಿಚಾರಸಂಕಿರಣಗಳ ಆಯೋಜನೆ. ಕನ್ನಡದ ಎಲ್ಲಾ ದಿನಪತ್ರಿಕೆಗಳಲ್ಲಿ ಒಟ್ಟು ೩೫೦೦ ಲೇಖನಗಳು, ಇಂಗ್ಲೀಷ್‌ನಲ್ಲಿ ೧೫೦೦ ಲೇಖನಗಳ ಪ್ರಕಟ, ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ೨೪ ವೈದ್ಯಕೀಯ ಕೃತಿಗಳ ರಚನೆ, ಗ್ಲುಕೋಮಾ ರೋಗ ಪತ್ತೆ ಹಚ್ಚಿದ ಹಿರಿಮೆ, ಕರ್ನಾಟಕ ನೇತ್ರತಜ್ಞರ ಸೊಸೈಟಿಯ ಚಾಕ್ಷು ನಿಯತಕಾಲಿಕದ ಸಂಪಾದಕ, ಜನಪ್ರಿಯ “ವೈದ್ಯವೈವಿಧ್ಯ”

Categories
ಬಯಲಾಟ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್. ಪಾಂಡುರಂಗಪ್ಪ

ವೃತ್ತಿರಂಗಭೂಮಿಯ ಬಯಲಾಟದಲ್ಲಿ ಪಕ್ಕವಾದ್ಯಪಟುವಾಗಿ ಸೇವೆಸಲ್ಲಿಸಿದ ದೇಸಿ ಕಲಾಚೇತನ ಎಚ್.ಪಾಂಡುರಂಗಪ್ಪ, ಕಲಾರಸಿಕರ ಮನಗೆದ್ದ ತಬಲವಾದಕ, ಸ್ವರಸಂಯೋಜಕ, ಗಣಿನಾಡು ಬಳ್ಳಾರಿಯ ಕಲಾಕೊಡುಗೆ ಪಾಂಡುರಂಗಪ್ಪ. ಅಕ್ಷರಕ್ಕಿಂತಲೂ ಕಲಾಮೋಹಕ್ಕೊಳಗಾದವರು. ಬಾಲ್ಯದಲ್ಲಿ ಅ೦ಟಿದ ಸಂಗೀತದ ಗೀಳಿನ ಬೆನ್ನುಹತ್ತಿ ತಬಲವಾದಕರಾಗಿ ರೂಪುಗೊಂಡವರು. ಶ್ರೀಕನಕದುರ್ಗಮ್ಮ ಬಯಲಾಟ ಕಲಾ ಟ್ರಸ್ಟ್ ಸ್ಥಾಪಿಸಿ ಕಲಾಕೈಂಕರ್ಯದಲ್ಲಿ ನಿರತರಾದವರು. ಪುರಾಣ ಪ್ರವಚನ, ಹರಿಕಥೆ, ಬಯಲಾಟ, ಅಭಿಮನ್ಯುಬಳಗ, ಪ್ರಮೀಳ ದರ್ಬಾರ್, ಪಾರ್ಥವಿಜಯ, ಗಿರಿಜಾಕಲ್ಯಾಣ, ರತಿಕಲ್ಯಾಣ, ಪಾಂಡುವಿಜಯ ಮುಂತಾದ ನಾಟಕಗಳಿಗೆ ತಬಲ ಸಾಥ್ ಜತೆಗೆ ಸ್ವರಸಂಯೋಜನೆ, ಜಾನಪದ ಜಾತ್ರೆ, ಸಂಸ್ಕೃತಿ ದಿಬ್ಬಣ, ಜಾತ್ರಾಮಹೋತ್ಸವ, ಅನೇಕ ಸಾಂಸ್ಕೃತಿಕ ಉತ್ಸವ, ಶರಣಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಸೇರಿದಂತೆ ನೂರಾರು ವೇದಿಕೆಗಳಲ್ಲಿ ಬೆಳಗಿದ ಪ್ರತಿಭೆ, ತೆಲುಗು ನಾಟಕಗಳಲ್ಲೂ ಸೇವೆ. ಕರ್ನಾಟಕ ನಾಟಕ ಅಕಾಡೆಮಿಯ ರಂಗ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಭಾಜನವಾಗಿರುವ ಪಾಂಡುರಂಗಪ್ಪ ಅವರಿಗೆ ಕಲೆಯೇ ಬದುಕು, ಕಲೆಯಿಂದಲೇ ಬದುಕು. ೫೫ ವರ್ಷಗಳಿಂದಲೂ ಕಲಾಸೇವೆಯಲ್ಲಿ ತನ್ಮಯರಾಗಿರುವ ಪಾಂಡುರಂಗಪ್ಪ ಹಳ್ಳಿಗಾಡಿನ ಗಟ್ಟಿ ಪ್ರತಿಭೆ, ಮಾದರಿ ಕಲಾಸೇವಕ.

Categories
ಚಲನಚಿತ್ರ ರಾಜ್ಯೋತ್ಸವ 2022

ಹೆಚ್. ಜಿ. ದತ್ತಾತ್ರೇಯ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಭಿಜಾತ ಕಲಾವಿದರಾದ ದತ್ತಣ್ಣ ಕನ್ನಡ ನಾಡಿನ ಹೆಮ್ಮೆ, ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಪಾತ್ರಗಳಿಗೆ ಜೀವತುಂಬಿದ ಚಿರಂಜೀವಿ ನಟರು. ೧೯೪೨ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ದತ್ತಣ್ಣ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಬ್ಯಾಂಕ್‌. ಪಿಯುಸಿಯಲ್ಲಿ ಎರಡನೇ ಬ್ಯಾಂಕ್, ಇಂಜಿನಿಯರಿಂಗ್ ಮುಗಿಸಿ ಭಾರತೀಯ ವಿಜ್ಞಾನಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್ ಆಗಿ ಬಹುವರ್ಷ, ಎಚ್‌ಎಎಲ್‌ನ ಉಪಪ್ರಧಾನ ವ್ಯವಸ್ಥಾಪಕ, ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರಾಗಿ ಕೆಲವರ್ಷ ದುಡಿದವರು. ಶಾಲಾದಿನಗಳಲ್ಲೇ ನಾಟಕದ ಗೀಳು ಹಚ್ಚಿಕೊಂಡಿದ್ದ ದತ್ತಣ್ಣರ ರುಸ್ತುಂ ನಾಟಕ ಬಲು ಜನಪ್ರಿಯವಾಗಿತ್ತು. ಅಳಿಯದೇವರು, ದೇವದಾಸಿ ನಾಟಕಗಳಲ್ಲಿ ಸ್ತ್ರೀಪಾತ್ರಧಾರಿಯಾಗಿ ಮಿಂಚಿದ್ದರು. ೪ನೇ ವಯಸ್ಸಿನಲ್ಲಿ ಬಿ.ಎಸ್‌.ರಂಗರ ‘ಉದ್ಭವ್‌’ ಕಿರುಚಿತ್ರದ ಮೂಲಕ ಬಣ್ಣದಲೋಕಕ್ಕೆ ಮರುಪ್ರವೇಶ, ೨ನೇ ಚಿತ್ರ ‘ಆಸ್ಫೋಟ’ದ ನಟನೆಗೆ ಅತ್ಯುತ್ತಮ ಪೋಷಕನಟ ಪ್ರಶಸ್ತಿಯ ಗರಿ. ಆನಂತರದ ಸಿನಿಯಾನದಲ್ಲಿ ದತ್ತಣ್ಣರ ಪಾತ್ರಗಳದ್ದೇ ಮೇಲುಗೈ, ಮುನ್ನುಡಿ ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ದಕ್ಕಿದರೆ, ಮೌನಿ, ಭಾರತ್‌ಸ್ಟೋ‌ರ್ ರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿಗೆ ಭಾಜನ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಟನೆ, ಪಾತ್ರ ಯಾವುದೇ ಇರಲಿ ದತ್ತಣ್ಣರದ್ದು ಪರಕಾಯ ಪ್ರವೇಶ. ಅದ್ಭುತ ಭಾವಾಭಿನಯ, ಇಡೀ ಚಿತ್ರವನ್ನೇ ತಮ್ಮ ಹೆಗಲಮೇಲೆ ಕೊಂಡೊಯ್ಯುವಷ್ಟು ಕಲೆಗಾರಿಕೆ. ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅನೇಕ ರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿರುವ ದತ್ತಣ್ಣರದ್ದು ನಾಡಿಗೆ ನಾಡೇ ತಲೆದೂಗುವಂತಹ ಸೋಪಜ್ಞ ಕಲೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಹನುಮಂತ ಬಾಳಪ್ಪ ಹುಕ್ಕೇರಿ

ಶಿಲ್ಪಕಲೆಯಿಂದಲೇ ಬದುಕಿನಲ್ಲಿ ನೆಲೆ ಕಂಡುಕೊಂಡ ಕಲಾವಿದರು ಹನುಮಂತ ಬಾಳಪ್ಪ ಹುಕ್ಕೇರಿ, ದೇವರಮೂರ್ತಿಗಳ ಕೆತ್ತನೆಯಲ್ಲಿ ಪಳಗಿದ ಹಿರಿಯ ಕಲಾವಿದರು. ಶಿಲ್ಪಕಲೆಯಲ್ಲಿ ದೇವರ ಮೂರ್ತಿಗಳ ಕೆತ್ತನೆಗೆ ವಿಶೇಷ ಮಾನ್ಯತೆ, ಪ್ರತಿಯೊಂದು ದೇವರಮೂರ್ತಿಗಿರುವ ವಿಭಿನ್ನ ಅಳತೆ-ಸ್ವರೂಪ ಮತ್ತು ಕೆತ್ತನೆಯ ಕುಶಲಗಾರಿಕೆಯನ್ನು ಕರಗತ ಮಾಡಿಕೊಳ್ಳುವುದು ಸುಲಭಸಾಧ್ಯವಲ್ಲ. ಕಲಾಬದ್ಧತೆ, ನಿಷ್ಠೆ, ಪರಿಶ್ರಮ ಮತ್ತು ತನ್ಮಯತೆಗಷ್ಟೆ ಒಲಿಯುವ ಆ ಅಪರೂಪದ ಕಲೆಯಲ್ಲಿ ವಿಶಿಷ್ಟತೆ ಮೆರೆದವರು ಹನುಮಂತ ಬಾಳಪ್ಪ ಹುಕ್ಕೇರಿ, ಗಡಿನಾಡಿನ ಕಲಾಕುಸುಮ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಜಾಗನೂರು ಶಿಲ್ಪಕಲಾವಿದರಿಗೆ ಹೆಸರುವಾಸಿ. ಆ ಊರಿನ ಪ್ರತಿಮನೆಯೂ ಕಲಾಕುಟುಂಬ, ಅಂತಹುದೇ ಪರಿಸರದಲ್ಲಿ ಅಪ್ಪನಿಂದ ಶಿಲ್ಪಕಲೆ ಕಲಿತ ಹನುಮಂತ ಹುಕ್ಕೇರಿ ಇಡೀ ಬದುಕನ್ನೇ ದೇವರಮೂರ್ತಿಗಳ ತಯಾರಿಕೆಗೆ ಅರ್ಪಿಸಿಕೊಂಡಿದ್ದು ವಿಶೇಷ. ಲಕ್ಷ್ಮಿ, ಸರಸ್ವತಿ, ಆಂಜನೇಯ, ವೀರಭದ್ರೇಶ್ವರ ಮುಂತಾದ ದೇವತೆಗಳ ಮೂರ್ತಿ ಕೆತ್ತನೆಯಲ್ಲಿ ನಿಸ್ಸೀಮರು. ವಿವಿಧ ಬಗೆಯ ಕಲ್ಲುಗಳನ್ನು ಸಂಗ್ರಹಿಸಿ ಮೂರ್ತಿಯ ಆಕಾರ ನೀಡುವ ಹನುಮಂತ ಹುಕ್ಕೇರಿ ಅವರ ಕಲಾನೈಪುಣ್ಯತೆಗೆ ತಲೆದೂಗದವರೇ ಇಲ್ಲ. ಹಲವು ಪ್ರಶಸ್ತಿ-ಗೌರವಗಳಿಗೆ ಪಾತ್ರರಾಗಿರುವ ಹನುಮಂತ ಹುಕ್ಕೇರಿ ಕಲಾನಿಷ್ಠ ಪ್ರತಿಭೆ.

Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುರುನಾಥ್ ಬಿ.ಹೂಗಾರ

ವೃತ್ತಿ ರಂಗಭೂಮಿಯಲ್ಲಿ ಅನೂಹ್ಯ ಸೇವೆಗೈದು ಅದ್ವಿತೀಯ ಛಾಪು ಮೂಡಿಸಿರುವ ದೇಸೀ ಪ್ರತಿಭೆ ಗುರುನಾಥ್ ಬಿ.ಹೂಗಾರ, ನಟ, ನಿರ್ದೇಶಕ, ಪ್ರಸಾದನ ಕಲಾವಿದ, ವಸ್ತ್ರವಿನ್ಯಾಸಕ, ಸಂಘಟಕರಾಗಿ ಅವರದ್ದು ಬಹುರೂಪಿ ರಂಗಕೈಂಕರ್ಯ. ಕಲಬುರಗಿ ಜಿಲ್ಲೆಯ ಖಣದಾಳ ಗ್ರಾಮದವರಾದ ಗುರುನಾಥ್ ಬಿ.ಹೂಗಾರ ಅವರಿಗೆ ವೃತ್ತಿ-ಪ್ರವೃತ್ತಿ, ಬದುಕು-ಭಾವ ಎಲ್ಲವೂ ರಂಗಭೂಮಿಯೇ. ಓದಿದ್ದು ಕೇವಲ ಏಳನೇ ತರಗತಿವರೆಗೆ ಮಾತ್ರ. ಎಳೆವೆಯಲ್ಲೇ ಬಣ್ಣದ ಮೋಹಕ್ಕೆ ಸಿಲುಕಿ ರಂಗಪ್ರವೇಶ. ಹುಟ್ಟೂರನ್ನೇ ಕಲಾಕೈಂಕರ್ಯದ ಕೇಂದ್ರಸ್ಥಾನವಾಗಿ ಮಾಡಿಕೊಂಡು ಆರು ದಶಕಗಳಿಂದಲೂ ನಿರಂತರ ರಂಗಸೇವೆ. ನಟನೆ, ನಿರ್ದೇಶನ ಜತೆಗೆ ಪ್ರಸಾದನ ಕಲಾವಿದರಾಗಿ ಹೆಜ್ಜೆಗುರುತು. ಸಂಪತ್ತಿಗೆ ಸವಾಲ್‌, ಚೀನಾದುರಾಕ್ರಮಣ, ನನ್ನಭೂಮಿ, ಗರೀಬಿ ಹಠಾವೋ, ನೀತಿಗೆಲ್ಲಿದೆ ಜಾತಿ?, ಹಾರಕೂಡ ಚೆನ್ನಬಸವೇಶ್ವರ ಮಹಾತ್ಮ, ವಿಶ್ವಜ್ಯೋತಿ ಶರಣಬಸವ, ಕಾರ್ಗಿಲ್ ಕೂಗು ಮುಂತಾದ ೧೧೦ಕ್ಕೂ ಹೆಚ್ಚು ನಾಟಕಗಳಲ್ಲಿ ಹಾಸ್ಯನಟ, ಖಳನಟನಾಗಿ ರಂಜಿಸಿದ ಕಲಾವಿದರು. ತವರುಮನೆ ತಣ್ಣಗಿರಲಿ, ಆಶಾಲತಾ, ಗೌಡ್ರಗದ್ಲ, ಜೋಕುಮಾರಸ್ವಾಮಿ ಮತ್ತಿತರ ೨೫ಕ್ಕೂ ಹೆಚ್ಚು ನಾಟಕಗಳ ನಿರ್ದೇಶಕರು. ನೂರಾರು ನಟ–ನಟಿಯರಿಗೆ ವಸ್ತ್ರವಿನ್ಯಾಸಕರು. ಕಿರುಚಿತ್ರ-ಸಾಕ್ಷ್ಯಚಿತ್ರಗಳಲ್ಲೂ ಪ್ರತಿಭೆ ಮೆರೆದ ರಂಗಕರ್ಮಿ, ಹತ್ತಾರು ಗೌರವಗಳಿಗೆ ಪಾತ್ರರಾದ ಗುರುನಾಥ್‌ ಹೂಗಾರ ಅವರು ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯಿಂದಲೂ ಪುರಸ್ಕೃತರು.

Categories
ಜಾನಪದ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುಡ್ಡ ಪಾಣಾರ

ಕರಾವಳಿ ಭಾಗದ ಅತ್ಯಂತ ಹಿರಿಯ ಅನುಭವಿ ದೈವ ನರ್ತಕರು ಗುಡ್ಡ ಪಾಣಾರ, ದೈವ ಸೇವೆಯಲ್ಲಿ ಬದುಕಿನ ಧನ್ಯತೆಯನ್ನು ಕಂಡುಕೊಂಡ ಅಪರೂಪದ ಕಲಾವಂತರು. ಗುಡ್ಡ ಪಾಣಾರ ಅವರಿಗೆ ದೈವನರ್ತನ ಅಪ್ಪನಿಂದ ಬಂದ ಬಳುವಳಿ, ಕೋಲ ನರ್ತಕರಾಗಿದ್ದ ತಂದೆ ನಾಣು ಪಾಣಾರ ಅವರ ದೈವನರ್ತನವನ್ನು ಕಣ್ಣುಂಬಿಕೊಳ್ಳುತ್ತಲೇ ಬಾಲ್ಯದಲ್ಲೇ ಹೆಜ್ಜೆಹಾಕುತ್ತಾ ದೈವನರ್ತನ ಕಲೆಯನ್ನು ಮೈಗೂಡಿಸಿಕೊಂಡವರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ದೈವನರ್ತನ ಆರಂಭಿಸಿದ ಗುಡ್ಡ ಪಾಣಾರ ಅವರು ವಿವಿಧ ದೈವ ಸಾನಿಧ್ಯಗಳಲ್ಲಿ ಪಂಜುರ್ಲಿ, ಬೊಬ್ಬರ, ಧಮಾವತಿ ಹಾಗೂ ಸ್ತ್ರೀ ದೈವಗಳಾದ ವರ್ತೆ, ತನಿಮಾನಿಗ ಮುಂತಾದ ದೈವಗಳ ನರ್ತನವನ್ನು ಮಾಡುವುದು ವಿಶೇಷ. ಕರಾವಳಿ ದೈವಭಕ್ತರ ಮನದಲ್ಲಿ ಗುಡ್ಡ ಪಾಣಾರ ಅವರು ಮೂಡಿಸಿರುವ ನರ್ತನದ ಛಾಪು ಮತ್ತು ದೈವಭಾವ ವರ್ಣಿಸಲಸದಳ. ಒಂದಲ್ಲ ಎರಡಲ್ಲ ಬರೋಬ್ಬರಿ ೪೬ ವರ್ಷಗಳಿಂದ ಈ ದೈವನರ್ತನದಲ್ಲಿ ಅನವರತ ನಿರತರು. ಕಾಪುವಿನ ಸುತ್ತಮುತ್ತಲೂ ಜರುಗುವ ಪಿಲಿಕೋಲದಲ್ಲಿ ಗುಡ್ಡ ಪಾಣಾರ ದೈವನರ್ತನ ಅತ್ಯಂತ ಜನಪ್ರಿಯ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಪಾತ್ರರಾಗಿರುವ ಗುಡ್ಡ ಪಾಣಾರ ಅವರ ದೈವನರ್ತನಕ್ಕೆ ಅವರಷ್ಟೇ ಸಾಟಿ ಎನ್ನುವಷ್ಟು ಅಪೂರ್ವ ಕಲೆಗಾರಿಕೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ.ಎಂ. ಶಿರಹಟ್ಟಿ

ಬಾನುಲಿ ಮತ್ತು ಬಾನುಲಿ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಪ್ರಮುಖರು ಜಿ.ಎಂ.ಶಿರಹಟ್ಟಿ. ಬರವಣಿಗೆಯ ಸಾಹಿತ್ಯವನ್ನು ಪರಿವರ್ತಿಸಿ ಶ್ರವಣ ಸಾಹಿತ್ಯವನ್ನು ರಚಿಸಿದ ಸಾಹಿತಿ, ಬಹುಮಾಧ್ಯಮಗಳ ಬಹುಶ್ರುತ ಸಾಧಕರು. ಜಿ.ಎಂ.ಶಿರಹಟ್ಟಿ ಎಂದೇ ಜನಪ್ರಿಯರಾದ ಗೌಸ್ ಮೊಹದ್ದೀನ ಶಿರಹಟ್ಟಿ ಅವರು ೧೯೪೧ರಲ್ಲಿ ಜನಿಸಿದವರು. ಪತ್ರಿಕೋದ್ಯಮ, ರೇಡಿಯೋ ಹಾಗೂ ದೂರದರ್ಶನ ಅವರ ತ್ರಿವಳಿ ಕಾರ್ಯಕ್ಷೇತ್ರಗಳು, ನಲವತ್ತು ವರ್ಷಗಳ ಕಾಲ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಸೇವೆ ಸಲ್ಲಿಸಿದ ಶಿರಹಟ್ಟಿ ಬೆಂಗಳೂರು ವಿವಿ, ಭಾರತೀಯ ವಿದ್ಯಾಭವನ, ರೇವಾಗಾರ್ಡನ್ ಮತ್ತಿತರ ಸಂಸ್ಥೆಗಳಲ್ಲಿ ಮಾಧ್ಯಮ ಪ್ರಾಧ್ಯಾಪಕರಾಗಿ ದುಡಿದವರು. ಕನ್ನಡಸಾಹಿತ್ಯದಲ್ಲಿ ಪ್ರಸಾರ ಸಾಹಿತ್ಯವನ್ನು ನಾಟಕ, ರೂಪಕ, ಸಂದರ್ಶನ, ಸಾಕ್ಷ್ಯಚಿತ್ರಗಳಲ್ಲಿ ಅಳವಡಿಸಿ ಬಾನುಲಿ ಸಾಹಿತ್ಯವನ್ನು ಬೆಳಕಿಗೆ ತಂದ ಹೆಗ್ಗಳಿಕೆ, ಸಾರ್ಕ ದೇಶದ ಕ್ವಿಜ್ ಕಾರ್ಯಕ್ರಮಗಳ ಭಾರತೀಯ ತಂಢಗಳ ನಾಯಕರಾಗಿ ಡಾಕಾದಲ್ಲೂ ಸೇವೆ ಸಲ್ಲಿಸಿದ ಶಿರಹಟ್ಟಿ ಅವರು ಚೇತನಚಿಲುಮೆ, ಪ್ರಬಂಧಗಳ ಸಂಕಲನ, ಮಕ್ಕಳ ನಾಟಕಗಳ ಕತೃ, ಆಕಾಶವಾಣಿ ಕಾರ್ಯಕ್ರಮಗಳಿಗೆ ಐದು ರಾಷ್ಟ್ರೀಯ, ೨ ಅಂತಾರಾಷ್ಟ್ರೀಯ, ಒಂದು ರಾಜ್ಯ ಪ್ರಶಸ್ತಿಗೆ ಭಾಜನರಾದವರು. ಕರ್ನಾಟಕ ನಾಟಕ ಅಕಾಡೆಮಿ, ಮಾಧ್ಯಮ ಅಕಾಡೆಮಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಂದ ಭೂಷಿತರಾದ ಶಿರಹಟ್ಟಿ ಬಾನುಲಿ ಮಾಧ್ಯಮದಲ್ಲಿ ಹೊಸ ಅಧ್ಯಾಯವನ್ನೇ ಬರೆದ ಸಾಧಕಮಣಿ.

Categories
ಕೃಷಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗಣೇಶ ತಿಮ್ಮಯ್ಯ

ಕೃಷಿ ಕ್ಷೇತ್ರದಲ್ಲಿ ನವೀನ ಸಂಶೋಧನೆಗಳಿಂದ ಹೊಸ ಸಾಧ್ಯತೆಗಳನ್ನು ತೋರ್ಗಾಣಿಸಿದ ಸಾಧಕರು ಗಣೇಶ ತಿಮ್ಮಯ್ಯ, ಸೇನೆ ಮತ್ತು ಕೃಷಿಯಲ್ಲಿನ ಸಾಧನೆ ರಾಷ್ಟ್ರಪ್ರಶಸ್ತಿಗಳಿಗೆ ಭಾಜನವಾದ ಪ್ರತಿಭಾವಂತರು, ದಕ್ಷಿಣ ಕೊಡಗಿನ ನಲ್ಲೂರು ಗ್ರಾಮದಲ್ಲಿ ೧೯೬೦ರಲ್ಲಿ ಜನಿಸಿದ ಗಣೇಶ ತಿಮ್ಮಯ್ಯ ಅವರು ಅಪ್ಪಟ ದೇಶಪ್ರೇಮಿ, ಬೇಸಾಯದಲ್ಲಿ ಧನ್ಯತೆ ಕಂಡುಕೊಂಡ ಪ್ರಗತಿಪರ ಕೃಷಿಕ, ಭಾರತೀಯ ಸೇನೆಯಲ್ಲಿ ಹವಾಲ್ದಾ‌ರ್ ‍ಆಗಿ ದಶಕಗಳ ಕಾಲ ಸೇವೆ ಸಲ್ಲಿಸಿದ ಸೈನಿಕರು. ಸೇನೆಯಿಂದ ನಿವೃತ್ತರಾದ ಮೇಲೆ ಸಾಧನಾಕ್ಷೇತ್ರವಾಗಿಸಿಕೊಂಡವರು. ಭತ್ತದ ವಿವಿಧ ತಳಿಗಳನ್ನು ಬೆಳೆದು ಸಂಶೋಧನಾ ಕೇಂದ್ರಗಳಿಗೆ ಬೀಜ ನೀಡುತ್ತಿರುವ ಬೇಸಾಯಗಾರರು. ಹೊಸ ಹೊಸ ಬೆಳೆಯಾದ ನುಸುಗುನ್ನಿ, ಬೀಯಂವನ್ನೂ ಬೆಳೆದವರು. ರಾಜ್ಯದಲ್ಲೇ ಪ್ರತಿ ಹೆಕ್ಟೇರ್‌ಗೆ ಅತಿ ಹೆಚ್ಚು ಭತ್ತದ ಇಳುವರಿಯನ್ನು ಬೆಳೆದ ಹೆಗ್ಗಳಿಕೆ, ಕೋಟಿಯ ಹೊಸ ತಳಿ, ಮೀನಿನ ಹೊಸ ತಳಿ, ಬೆಳೆಗಂದ, ಬಿದಿರು ಮಾಡಂಗಲ, ತುಂಗಾ, ಅಲೇರಾ ಜೀರಿಗೆ ಸಣ್ಣ, ಕಜೆ.ವಿ.ಆರ್‌ನಂರ ಬೆಳೆಗಳನ್ನು ಬೆಳೆದ ಮಾದರಿ ರೈತರು. ರಾಜ್ಯ, ರಾಷ್ಟ್ರೀಯ ಕೃಷಿ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಹಿರಿಮೆ. ಕೃಷಿ ಸಾಧನೆಗಾಗಿ ಎರಡು ರಾಷ್ಟ್ರೀಯ ಹಾಗೂ ಆರು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇಲಿಸಿಕೊಂಡ ದೇಸೀ ಕೃಷಿ ವಿಜ್ಞಾನಿ.

Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಡಾ. ಶ್ರೀಶೈಲ ಹುದ್ದಾರ

ಜನಪದ ರಂಗಭೂಮಿಯಲ್ಲಿ ಬಹುರೂಪಿಯಾಗಿ ವಿಶೇಷ ಛಾಪು ಮೂಡಿಸಿದ ಸಂಪನ್ಮೂಲ ವ್ಯಕ್ತಿ ಡಾ. ಶ್ರೀಶೈಲ ಹುದ್ದಾರ, ನಟ, ನಿರ್ದೇಶಕ, ನಾಟಕಕಾರ, ಕನ್ನಡ ಪ್ರಾಧ್ಯಾಪಕರಾಗಿ ಬಹುಶ್ರುತ ಸಾಧನೆಗೈದ ರಂಗಜೀವಿ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಶಲವಡಿಯಲ್ಲಿ ಜನಿಸಿದ ಶ್ರೀಶೈಲ ಹುದ್ದಾರ ಅಕ್ಷರದ ಚುಂಗು ಹಿಡಿದು ಅರಳಿ ನಳನಳಿಸಿದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು, ‘ದೊಡ್ಡಾಟ ಪರಂಪರೆ ಮತ್ತು ಪ್ರಯೋಗಗಳು’ ಕುರಿತು ಪಿಎಚ್‌ಡಿ ಪದವಿ. ವೃತ್ತಿಯಲ್ಲಿ ಕನ್ನಡ ಅಧ್ಯಾಪಕ, ಪ್ರವೃತ್ತಿಯಲ್ಲಿ ರಂಗಕರ್ಮಿ. ಬಾಲ್ಯದಲ್ಲೇ ಅಂಟಿದ ರಂಗನಂಟನ್ನು ಬದುಕಿನುದ್ದಕ್ಕೂ ಭಾವದ ಗಂಟಾಗಿಸಿಕೊಂಡು ಸಾಧನೆಯ ಪಥ ಸ್ಪರ್ಶಿಸಿದವರು. ಕನಕವಿಜಯ, ಬುದ್ಧಪ್ರಬುದ್ಧ, ಅಕ್ಕಮಹಾದೇವಿ, ಬಾಹುಬಲಿ, ಅನುಭಾವಿ ಅಲ್ಲಮ, ನಿಜಗುಣ ಶಿವಯೋಗಿ, ಭಾಗೀರಥಿ, ಲಿಂಗರಾಜ ದೇಸಾಯಿ ಮುಂತಾದ ದೊಡ್ಡಾಟ-ಸಣ್ಣಾಟಗಳಲ್ಲಿ ನಟಿಸಿ ರಸಿಕರ ಮನಗೆದ್ದ ಕಲಾವಿದ, ಜೈಸಿದನಾಯಕ, ಅಮಟೂರ ಬಾಳಪ್ಪ, ರಕ್ತರಾತ್ರಿ, ಅಪ್ಪ ಮತ್ತು ಟಿಂಗರಬುಡ್ಡಣ್ಣ ನಿರ್ದೇಶಿತ ನಾಟಕಗಳು. ದೊಡ್ಡಾಟ – ಒಂದು ಪರಿಕಲ್ಪನೆ, ನೆಲದ ಹಾಡುಗಳು, ಕರ್ನಾಟಕ ಜಾನಪದ ರಂಗಭೂಮಿ, ಸಾಹಿತ್ಯಸೌರಭ ಕೃತಿಗಳ ಕತೃ, ಹಲವು ನಾಟಕ ಮತ್ತು ಬೀದಿನಾಟಕಗಳ ರಚನಕಾರರು. ಸಿನಿಮಾ ದೂರದರ್ಶನದಲ್ಲೂ ಬೆಳಗಿದ ಪ್ರತಿಭಾಶಾಲಿ, ಸಮಾಜಮುಖಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಈ ಅನುಭವಿ ರಂಗಭೂಮಿಯನ್ನೇ ಕರ್ಮಭೂಮಿಯಾಗಿಸಿಕೊಂಡಿರುವ ಕಲಾಜೀವಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ರಾಮಕೃಷ್ಣ ಮರಾಠೆ

ಕನ್ನಡ ವೃತ್ತಿ ರಂಗಭೂಮಿಯ ಆಳ ಅಧ್ಯಯನಕಾರರಲ್ಲಿ ಡಾ. ರಾಮಕೃಷ್ಣ ಮರಾಠೆ ಪ್ರಮುಖರು, ನಟ, ನಾಟಕಕಾರ, ಅನುವಾದಕ, ತೌಲನಿಕ ಅಧ್ಯಯನಕಾರ, ಕನ್ನಡ ಉಪನ್ಯಾಸಕ ಮತ್ತು ಪತ್ರಕರ್ತರಾಗಿ ಸೇವೆಗೈದ ಬಹುರೂಪಿ, ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ದೇವಣಗಾಂವ್‌ನಲ್ಲಿ ೧೯೫೮ರಲ್ಲಿ ಜನಿಸಿದ ಡಾ. ರಾಮಕೃಷ್ಣ ಮರಾಠೆ ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಬಹುರೂಪಿ, ರಂಗನಟನೆ, ನಾಟಕರಚನೆ ಮತ್ತು ಸಾಹಿತ್ಯ ಕೃಷಿ ಪ್ರಧಾನ ಆಸಕ್ತಿಯ ಕ್ಷೇತ್ರಗಳು, ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ *ಉತ್ತರಕರ್ನಾಟಕದ ವೃತ್ತಿರಂಗಭೂಮಿ ಕುರಿತು ಪಿಎಚ್‌ಡಿ ಮಾಡಿದವರು. ಕರ್ನಾಟಕ ವೃತ್ತಿರಂಗ ಕಂಪನಿಗಳ ನಿಖರ ಮಾಹಿತಿಯುಳ್ಳವರು. ಅಪರೂಪದ ಕಾವ್ಯ ಸಂಪಾದಿಸಿದವರು. ಕೊಣ್ಣೂರ ನಾಟಕ ಕಂಪನಿ, ಬಿ.ಆರ್.ಅಲಶಿನಗೋಜ ಜೀವನಚಲಿತ್ರೆ, ರಂಗಭೂಮಿಯ ಕನ್ನಡ ಸಂವೇದನೆ, ನಾಟಕ-ಕರ್ನಾಟಕ ಕೃತಿ ಮತ್ತು ರಾಮಧಾನ್ಯ ನಾಟಕದ ರಚನಾಕಾರರು. ಗ್ರಂಥ ಸಂಪಾದಕರು, ಅಂಗಾಯತ ಪತ್ತಿಕೆಯ ಸಹಸಂಪಾದಕರು. ಕನ್ನಡದಿಂದ ಮರಾಠಿ-ಮರಾಠಿಯಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ತಂದ ಅನುವಾದಕರು. ಮಾಧ್ಯಮಗಳಲ್ಲಿ ಲೇಖನ ಬರೆದವರು, ಅನೇಕ ಏಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ವಿದ್ವತ್ ದರ್ಶಿಸಿದವರು. ಹಲವು ಪ್ರಶಸ್ತಿಗಳಿಗೆ ಪಾತ್ರರಾದ ರಾಮಕೃಷ್ಣ ಮರಾಠ ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸೇವಾನಿರತರಾಗಿರುವ ಕ್ರಿಯಾಶೀಲರು.

Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಡಾ. ಪ್ರಭಾಕರ ಜೋಷಿ

ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖ್ಯ ಸಾಧನೆಗೈದಿರುವ ಡಾ. ಪ್ರಭಾಕರ ಜೋಷಿ ಅವರು ಕರ್ನಾಟಕದ ಬಹುಶ್ರುತ ಏದ್ವಾಂಸರು. ಕಲಾವಿದ, ಸಂಶೋಧಕ, ಯಕ್ಷಗಾನ ಕೋಶದ ನಿರ್ಮಾಪಕ, ವಿಮರ್ಶಕ, ಸಂಪನ್ಮೂಲ ವ್ಯಕ್ತಿಯಾಗಿ ಅವರದ್ದು ಅಚ್ಚಳಿಯದ ಛಾಪು. ೧೯೪೬ರಲ್ಲಿ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ ಜನಿಸಿದ ಪ್ರಭಾಕರಜೋಷಿ ಅವರದ್ದು ಸಾಹಿತ್ಯಿಕ-ಕಲಾಕುಟುಂಬ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ-ಸಂಸ್ಕೃತಿ ಪ್ರೀತಿ. ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ, ಹಿಂದಿಸಾಹಿತ್ಯ ರತ್ನ ಮತ್ತು ಯಕ್ಷಗಾನದಲ್ಲಿ ಪಿ.ಎಚ್.ಡಿ., ಮೂರು ದಶಕಗಳ ಕಾಲ ವಾಣಿಜ್ಯ ಪ್ರಾಧ್ಯಾಪಕರಾಗಿ ಸೇವೆ. ಪ್ರಾಂಶುಪಾಲರಾಗಿಯೂ ಅನುಭವ. ಕನ್ನಡ, ಸಂಸ್ಕೃತ, ಮರಾಠಿ, ತುಳು, ಕೊಂಕಣಿ ಸೇರಿದಂತೆ ಬಹುಭಾಷಾ ಜ್ಞಾನಿ. ಬಹುಮುಖ್ಯವಾಗಿ ಯಕ್ಷಗಾನ ತಾಳಮದ್ದಳೆ ರಂಗದ ಸಮರ್ಥ ಅರ್ಥಧಾರಿ, ಭಾಷೆ-ಭಾವ–ವಿಚಾರಯುಕ್ತ ಅರ್ಥಗಾರಿಕೆಗೆ ಹೆಸರುವಾಸಿ. ಕಲಾವಿದನಾಗಿ ಹೆಗ್ಗುರುತು. ಹತ್ತಕ್ಕೂ ಹೆಚ್ಚು ಕೃತಿಗಳ ಲೇಖಕ, ಯಕ್ಷಗಾನ ಪ್ರಸಂಗಗಳ ವಿಮರ್ಶೆಯಲ್ಲಿ ಪ್ರಖರ ಹಿಡಿತ. ಸಂಶೋಧಕ, ಸಂಘಟಕ, ಸಂಪನ್ಮೂಲ ವ್ಯಕ್ತಿಯಾಗಿಯೂ ನಿರಂತರ ಸೇವೆ. ಯಕ್ಷಗಾನ ಪಾರಿಭಾಷಿಕ ಕೋಶದ ನಿರ್ಮಾತೃ, ಉತ್ತಮ ಉಪನ್ಯಾಸಕಾರ, ಸಮನ್ವಯಕಾರರೂ ಕೂಡ. ನಾಲ್ಕು ದಶಕಗಳಿಂದಲೂ ಯಕ್ಷರಂಗದಲ್ಲಿ ತನ್ಮಯರಾಗಿರುವ ಡಾ. ಪ್ರಭಾಕರ ಜೋಷಿ ತಮಗೆ ದಕ್ಕಿದ ಹತ್ತಾರು ಪ್ರಶಸ್ತಿಗಳಿಗೂ ಮೀರಿದ ಮೇರು ಪ್ರತಿಭೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಂ.ಜಿ.ನಾಗರಾಜ್‌

ಕನ್ನಡ ಸಾಹಿತ್ಯ ಕ್ಷೇತ್ರವನ್ನು ಬೆಳಗಿದ ಹಿರಿಯ ಶಾಸನತಜ್ಞರು ಡಾ. ಎಂ.ಜಿ.ನಾಗರಾಜ್‌, ಶಾಸನಶಾಸ್ತ್ರ ಕ್ಷೇತ್ರದ ಅದ್ವಿತೀಯ ಸಾಧಕರು, ಸಂಶೋಧಕರು ಪ್ರಾಚಾರ್ಯರು ಹಾಗೂ ದಕ್ಷ ಆಡಳಿತಗಾರರು. ಸಾಂಸ್ಕೃತಿಕ ನಗರ ಮೈಸೂರಿನ ಸಾಹಿತ್ಯಕ ಕೊಡುಗೆ ಡಾ. ಎಂ.ಜಿ.ನಾಗರಾಜ್‌, ೧೯೩೦ರಲ್ಲಿ ಜನಿಸಿದ ನಾಗರಾಜ್‌ ಪ್ರಖರ ಪಂಡಿತರು. ಎಂಎಸ್ಸಿ, ಎಂಎಸ್, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಇತಿಹಾಸದಲ್ಲಿ ಡಿ.ಲಿಟ್, ಶಾಸನಶಾಸ್ತ್ರದಲ್ಲಿ ಡ್ರೈಮಾಟಿಕ್ಸ್ ಪೂರೈಸಿದವರು. ಅಧ್ಯಯನ, ಅಧ್ಯಾಪನ, ಬರವಣಿಗೆ, ಸಂಶೋಧನಾನಿರತರು. ನಿವೃತ್ತ ಪ್ರಾಚಾರ್ಯರು. ಶಾಸನಕ್ಷೇತ್ರದಲ್ಲಿ ಅವರದ್ದು ತಳಸ್ಪರ್ಶಿ ಅಧ್ಯಯನ. ಕನ್ನಡ, ಸಂಸ್ಕೃತ ಮತ್ತು ತೆಲುಗು ಭಾಷೆಯ ೮ ರಿಂದ ೧೮ ಶತಮಾನದವರೆಗಿನ ಸುಮಾರು ೨೦ ಹೊಸ ಶಾಸನಗಳನ್ನು ಪತ್ತೆಹಚ್ಚಿದ ಅಪೂರ್ವ ಸಂಶೋಧಕರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿವಿ ಸೇರಿ ವಿವಿಧ ಅಧ್ಯಯನ ಕೇಂದ್ರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಾಸನಶಾಸ್ತ್ರ ಬೋಧಿಸಿದ ತಜ್ಞರು. ೪೦ಕ್ಕೂ ಹೆಚ್ಚು ಮಹತ್ವದ ಕೃತಿಗಳ ರಚನಕಾರರು. ಕನ್ನಡ-ಇಂಗ್ಲೀಷ್ ಎರಡರಲ್ಲೂ ಅತ್ಯುತ್ತಮ ಪ್ರಬಂಧಕಾರರು. ಮಿಥಿಕ್ ಸೊಸೈಟಿಯೂ ಸೇರಿದಂತೆ ಅನೇಕ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸಿದ ದಕ್ಷ ಆಡಳಿತಗಾರರು. ಜ್ಞಾನಶಾಖೆಯ ಹಲವು ಮಜಲುಗಳನ್ನು ತೋರ್ಗಾಣಿಸಿದವರು. ಹತ್ತಾರು ಪ್ರಶಸ್ತಿಗಳಿಗೆ ಪಾತ್ರವಾಗುತ್ತಲೇ ಅವುಗಳ ಗೌರವ-ಘನತೆ ಹೆಚ್ಚಿಸಿದ, ೯೨ರ ಇಳಿವಯಸ್ಸಿನಲ್ಲೂ ಸಾಹಿತ್ಯ-ಶಾಸನಚಿಂತನೆಯಲ್ಲಿ ತೊಡಗಿರುವ ಡಾ. ನಾಗರಾಜ್ ನಮ್ಮ ನಡುವಿರುವ ಅಪರೂಪದ ವಿದ್ವತ್ಮಣಿ.

Categories
ಆಡಳಿತ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಚ್.ಎಲ್. ಮಂಜುನಾಥ್

ಆಡಳಿತದಲ್ಲಿ ಜನಪರತೆ, ದಕ್ಷತೆ ಮತ್ತು ಸೇವಾತತ್ಪರತೆಗೆ ಹೆಸರಾದವರು ಡಾ. ಎಚ್.ಎಲ್. ಮಂಜುನಾಥ್, ಸಾರ್ವಜನಿಕ ಹುದ್ದೆಗಳ ಘನತೆ ಹೆಚ್ಚಿಸಿದ ಆಡಳಿತ ತಜ್ಞ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯಶಸ್ಸಿನ ರೂವಾಲಿ, ಡಾ. ಎಲ್.ಎಚ್.ಮಂಜುನಾಥ್ ಮೂಲತಃ ಪಶುವೈದ್ಯರು. ರಾಯಚೂರಿನ ಕುಕ್ಕನೂರಿನಲ್ಲಿ ವೃತ್ತಿಬದುಕು ಆರಂಭಿಸಿ ಬಳಿಕ ಮಣಿಪಾಲಕ್ಕೆ ಬಂದವರು. ಬಿ.ಎ.ಪೈ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಥಮ ನಿರ್ದೇಶಕ, ಗ್ರಾಮೀಣಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕರಾಗಿ ದಶಕದವರೆಗೆ ದುಡಿದವರು. ಆನಂತರ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಯಾಗಿ ದೇಶದ ವಿವಿಧೆಡೆ ಸೇವೆ. ೨೦೦೧ರಲ್ಲಿ ಸ್ವಯಂ ನಿವೃತ್ತಿ ಪಡೆದ ಮೇಲೆ ಬದುಕಿನ ಚಿತ್ರಣವೇ ಬದಲು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಹೊಸ ಪರ್ವ ಸೃಷ್ಟಿ. ಬೆಳ್ತಂಗಡಿ ತಾಲ್ಲೂಕಿಗೆ ಸೀಮಿತವಾಗಿದ್ದ ಯೋಜನೆ ಇಡೀ ರಾಜ್ಯಕ್ಕೆ ವಿಸ್ತಾರ. ೫೦ ಲಕ್ಷ ಕುಟುಂಬಗಳ ಆರ್ಥಿಕ ಪರಿವರ್ತನೆ. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ೧೭ ವರ್ಷಗಳ ಕಾಲ ಆಡಳಿತ ನಿರ್ದೇಶಕರಾಗಿ ಸಾವಿರಾರು ಮಹಿಳೆಯರಿಗೆ ಕೌಶಲ್ಯದ ತರಬೇತಿ. ದುಶ್ಚಟಗಳ ಮುಕ್ತಿಗೆ ಜಾಗೃತಿ. ೪೫ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರಿಗೆ ಉದ್ಯೋಗದ ಅವಕಾಶ. ಹಲವು ಪ್ರಶಸ್ತಿಗಳ ಪುರಸ್ಕೃತರು, ಐದು ಕೃತಿಗಳ ಲೇಖಕರೂ ಆಗಿರುವ ಮಂಜುನಾಥ್ ದುರ್ಬಲ ವರ್ಗದ ಜನರನ್ನು ಸ್ವಾವಲಂಬಿಗಳನ್ನಾಗಿಸಿದ ಸಾಮಾಜಿಕ ಪರಿವರ್ತಕರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಕೋಡಿ ರಂಗಪ್ಪ

ಶಿಕ್ಷಣ ಕ್ಷೇತ್ರದಲ್ಲಿ ಬಹುರೂಪಿಯಾಗಿ ಸಾರ್ಥಕ ಸೇವೆ ಸಲ್ಲಿಸಿದ ತಜ್ಞರು ಡಾ. ಕೋಡಿ ರಂಗಪ್ಪ. ಪ್ರಾಧ್ಯಾಪಕರು, ಸಾಕ್ಷರತಾ ಆಂದೋಲನದ ಸಂಪನ್ಮೂಲ ವ್ಯಕ್ತಿ, ಲೇಖಕರು, ಪಠ್ಯಪುಸ್ತಕ ರಚನಾಕಾರರರು, ಕನ್ನಡ ಪರಿಚಾರಕರು.
ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಕೋಡಿ ರಂಗಪ್ಪ ಅವರು ರೈತ ಕುಟುಂಬದ ಕುಡಿ, ಬಡತನದ ನಡುವೆಯೇ ಅಕ್ಷರದಿಂದ ಅರಳಿದ ಪ್ರತಿಭೆ, ಕನ್ನಡ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ, ಬಿ.ಎಡ್, ಎಂ.ಎಡ್ ಪದವೀಧರರು. ಶಿಕ್ಷಣದಲ್ಲಿ ಲಿಂಗಸಮಾನತೆ ಕುರಿತು ಬೆಂಗಳೂರು ವಿವಿಯಿಂದ ಪಿಎಚ್‌ಡಿ. (೧೯೮೫ರಲ್ಲಿ ಚಿಕ್ಕಬಳ್ಳಾಪುರ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ವೃತ್ತಿಬದುಕಿನಾರಂಭ. ೩೨ ವರ್ಷಗಳ ಸುದೀರ್ಘ ಸೇವೆ, ಪ್ರಾಂಶುಪಾಲರಾಗಿ ನಿವೃತ್ತಿ. ವೃತ್ತಿಯ ಜೊತೆ ಭಾಷೆ ಸಾಹಿತ್ಯ ಸಂಸ್ಕೃತಿ ಚಿಂತನೆ ಮತ್ತು ಸಾಕ್ಷರತಾ ಆಂದೋಲನದಲ್ಲಿ ಸೇವೆ. ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಕೈಂಕರ್ಯ, ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷನಾಗಿ ಮಾನವೀಯ ಸೇವೆ. ಬಿಎಡ್, ಡಿಎಡ್ ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷ, ಕನ್ನಡ ಕಲಿಕಾ ಮಾನಕಗಳ ರಚನೆ ಅಧ್ಯಕ್ಷ, ರಾಷ್ಟ್ರೀಯ ಸಾಕ್ಷರತಾ ಮಿಷನ್‌ಯಡಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ತರಬೇತಿ ಸಂಯೋಜಕ, ಮನೆಯಲ್ಲೇ ಗ್ರಂಥಾಲಯ ತೆರೆದು ೧೦ ಸಾವಿರ ಪುಸ್ತಕಗಳ ಸಂಗ್ರಹ ಹಾಗೂ ಹಳ್ಳಿಹಳ್ಳಿಗೆ ತೆರಳಿ ರಾತ್ರಿಪಾಠಶಾಲೆಗಳನ್ನು ನಡೆಸಿದ, ಹಲವು ಕೃತಿಗಳ ಲೇಖಕರೂ ಆಗಿರುವ ಕೋಡಿರಂಗಪ್ಪ ಅಪ್ಪಟ ಶಿಕ್ಷಣಬಂಧು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಂ. ಬಸವಂತಪ್ಪ

ವೈದ್ಯೋನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥವಾಗಿ ಬಾಳಿದ ವೈದ್ಯರು ಡಾ. ಎಂ.ಬಸವಂತಪ್ಪ, ಉಚಿತ-ಮಾನವೀಯ ಸೇವೆಗೆ ಹೆಸರಾದ ವೈದ್ಯರು, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ೧೯೫೧ರಲ್ಲಿ ಜನಿಸಿದ ಬಸವಂತಪ್ಪ ಬಡತನದ ಬೇಗೆಯಲ್ಲಿ ಅರಳಿದ ಸಾಧಕರು. ಸಿರಿಗೆರೆ ಮತ್ತು ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ, ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದು ವೈದ್ಯರಾಗುವ ಕನಸು ನನಸಾಗಿಸಿಕೊಂಡ ಛಲಗಾರ, ಹುಟ್ಟೂರಿನಲ್ಲಿ ವೈದ್ಯವೃತ್ತಿ ಆರಂಭಿಸಿದ ಬಸವಂತಪ್ಪ ಮೂರೂವರೆ ದಶಕಗಳಿಗೂ ಅಧಿಕ ಕಾಲ ಹಗಲಿರುಳೆನ್ನದೇ ರೋಗಿಗಳಿಗೆ ಚಿಕಿತ್ಸಾ ಸೇವೆ ಒದಗಿಸಿದವರು. ೨ ರೂ. ವೈದ್ಯರೆಂದೇ ಹೆಸರಾದ ಅವರು ೨೦ ವರ್ಷಗಳ ಬಳಿಕ ೫ ರೂಪಾಯಿ ಪಡೆಯಲಾರಂಭಿಸಿದ್ದು ವಿಶೇಷ, ಬಡರೋಗಿಗಳಿಗೆ ಹಣಪಡೆಯದೇ ಉಚಿತ ಸೇವೆ ಒದಗಿಸುವ ಮಾನವೀಯ ವ್ಯಕ್ತಿ, ಕೊರೊನಾ ಸಂದರ್ಭದಲ್ಲಿ ಅರೆದಿನವೂ ಕ್ಲಿನಿಕ್ ಮುಚ್ಚದೇ ಜನಸಾಮಾನ್ಯರ ಅನಾರೋಗ್ಯದ ಸಂಕಟಗಳನ್ನು ನಿವಾರಿಸಿದ ಪುಣ್ಯಾತ್ಮರು. ಹಳ್ಳಿಗಾಡಿನಲ್ಲಿ ಹೆಸರುವಾಸಿಯಾಗಿರುವ ಡಾ. ಬಸವಂತಪ್ಪ ಅವರ ಕೈಗುಣಕ್ಕೆ ವಾಸಿಯಾಗದ ರೋಗಿ ಬಲು ವಿರಳ, ಅಂತಃಕರಣ, ಮಾನವೀಯತೆ ಮತ್ತು ವೃತ್ತಿ ಬದ್ಧತೆಯಿಂದ ರೋಗಿಗಳ ಮೊಗದಲ್ಲಿ ನಗುಚಿಮ್ಮಿಸಿದ ಆದರ್ಶ ಧನ್ವಂತರಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಡಾ. ಡಿ.ಆರ್.‌ ಬಳೂರಗಿ

ಕನ್ನಡದ ವಿಜ್ಞಾನ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವು ಆಯಾಮಗಳಲ್ಲಿ ಕೃಷಿಗೈದ ವಿಶೇಷ ತಜ್ಞರು ಡಿ.ಆರ್.ಬಳೂರಗಿ, ಬರಹಗಾರ, ಸಂಪನ್ಮೂಲ ವ್ಯಕ್ತಿ, ಉಪನ್ಯಾಸಕ, ಆಡಳಿತಗಾರರಾಗಿ ಅವರದ್ದು ಅಳಿಸಲಾಗದ ಹೆಜ್ಜೆಗುರುತು. ಧಾರವಾಡದ ದೈತ್ಯ ಪ್ರತಿಭೆ ಡಿ.ಆರ್.ಬಳೂರಗಿ ಕರ್ನಾಟಕ ವಿವಿಯ ಎಂಎಸ್ಸಿ ಪದವೀಧರರು. ರಾಯಚೂರಿನ ಎಲ್.ಐ.ಡಿ. ಕಾಲೇಜಿನ ಮೂರು ದಶಕಗಳ ಕಾಲ ಅಧ್ಯಾಪಕ, ಗುಲ್ಬರ್ಗಾ ವಿವಿ ಸಹಾಯಕ ಕುಲಸಚಿವ, ಬೆಳಗಾವಿ ವಿಜ್ಞಾನಕೇಂದ್ರದ ನಿರ್ದೇಶಕ, ಹಂಪಿ ವಿವಿಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ೩೮ ಸೃಜನ ಕೃತಿಗಳು, ಮೂರು ಅನುವಾದ, ೭ ಸಂಪಾದಿತ ಕೃತಿಗಳು ವಿಜ್ಞಾನ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ. ಕರ್ನಾಟಕ ರಾಜ್ಯ ವಿಜ್ಞಾನಪರಿಷತ್ತಿನ ಸ್ಥಾಪಕ ಸದಸ್ಯ, ಮಾಸಪತ್ರಿಕೆಯ ಸಂಪಾದಕಮಂಡಲ ಸದಸ್ಯ, ಸಂಪನ್ಮೂಲವ್ಯಕ್ತಿಯಾಗಿ ೧೦೦ಕ್ಕೂ ಹೆಚ್ಚು ವಿಜ್ಞಾನ ಕಾರ್ಯಾಗಾರಗಳ ಆಯೋಜನೆ, ವಿಜ್ಞಾನ ಬೋಧನೋಪಕರಣಗಳ ವಿನ್ಯಾಸ, ಹಲವು ಶಾಲೆಗಳಲ್ಲಿ ವಿಜ್ಞಾನಕೇಂದ್ರಗಳ ಸ್ಥಾಪನೆ, ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಸಲಹೆಗಾರ, ಸಾವಿರಾರು ಶಿಕ್ಷಕರಿಗಾಗಿ ಕಾರ್ಯಾಗಾರ, ನವಕರ್ನಾಟಕ ಪಬ್ಲಿಕೇಷನ್ಸ್‌ಗೆ ೩೦ ಪುಸ್ತಕಗಳ ಮಾಲಿಕೆ ಸಿದ್ಧಪಡಿಸುವಿಕೆ, ೫೦ಕ್ಕೂ ಹೆಚ್ಚು ರೇಡಿಯೋ ಉಪನ್ಯಾಸ ಮುಂತಾದ ಅಮೂಲ್ಯ ಕೊಡುಗೆಗಳನ್ನು ವಿಜ್ಞಾನ ಕ್ಷೇತ್ರಕ್ಕೆ ಕೊಟ್ಟ ಅಸೀಮ ಸಾಧಕರು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಎಸ್. ಬಲಬೀರ್‌ಸಿಂಗ್‌

ಬಹುಮುಖಿ ಕ್ಷೇತ್ರಗಳಲ್ಲಿ ಸೇವೆಗೈದ ವಿಶಿಷ್ಟ ಸಮಾಜಸೇವಕ ಡಾ. ಎಸ್. ಬಲಬೀರ್‌ಸಿಂಗ್‌, ಬೀದರ್ ಜಿಲ್ಲೆಯ ಆರ್ಥಿಕ ಅಭಿವೃದ್ಧಿಯ ಪಾತ್ರಧಾರಿ. ಬಡವರಿಗೆ ನೆರವಾದ ಉದ್ಯಮಿ. ೧೯೬೦ರ ಮಾರ್ಚ್‌ ೧೫ರಂದು ಜನಿಸಿದ ಬಲಬೀರ್‌ಸಿಂಗ್‌ ಬಿ.ಎ ಪದವೀಧರರು. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರ, ಪ್ರವೃತ್ತಿಯಲ್ಲಿ ಸಮಾಜಸೇವಕ, ಭಾವಸಂಪನ್ನದ ಸಹೃದಯಿ, ಹಣವಂತರಾದರೂ ಹೃದಯವಂತರು. ಗುರುನಾನಕ್ ಶೈಕ್ಷಣಿಕ ಸಂಸ್ಥೆ, ಗುರುದ್ವಾರ ಶ್ರೀನಾನಕ್ ಜೀರಾಸಾಹೇಬ್ ಹಾಗೂ ಗುರುನಾನಕ್ ಆಸ್ಪತ್ರೆಯ ಅಧ್ಯಕ್ಷರಾಗಿ ಬಹುರೂಪಿ ಸೇವೆ. ಗುರುದ್ವಾರದಲ್ಲಿ ೪೦೦ ಕೊಠಡಿಗಳ ನಿರ್ಮಾಣ, ಉಚಿತ ವಸತಿ, ಅನ್ನದಾಸೋಹದ ಸೇವೆ. ೧೫ ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ. ೧೫೦೦ಕ್ಕೂ ಹೆಚ್ಚು ಶಿಕ್ಷಿತರಿಗೆ ಉದ್ಯೋಗದಾಸರೆ, ಗುರುನಾನಕ್ ಆಸ್ಪತ್ರೆಯಲ್ಲಿ ಬಡವರಿಗೆ ಅಲ್ಪದರದಲ್ಲಿ ಚಿಕಿತ್ಸೆ, ಸಿಖ್ ಸಮುದಾಯಕ್ಕೆ ೨೦೦೮ರಲ್ಲಿ ಕೇಂದ್ರ ಸರ್ಕಾರ ಕೊಟ್ಟ ೧೫೦ ಕೋಟಿ ರೂ. ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ, ಹೊರವರ್ತುಲ ರಸ್ತೆ ನಿರ್ಮಾಣದಿಂದ ಬೀದರ್‌ನ ಶೈಕ್ಷಣಿಕ-ಆರ್ಥಿಕ ಚಿತ್ರಣವನ್ನೇ ಬದಲಿಸಿದ ಉದ್ಯಮಿ, ಸಮುದಾಯದ ಸೇವೆಯಲ್ಲೇ ಸಾರ್ಥಕತೆ ಕಂಡುಕೊಂಡ ಬಲಬೀರ್‌ಸಿಂಗ್‌ ಗುಲ್ಬರ್ಗಾ ವಿವಿಯಿಂದ ಗೌರವ ಡಾಕ್ಟರೇಟ್‌ಗೆ ಪಾತ್ರರು. ಬೀದರ್ ಜಿಲ್ಲೆಯ ಹೆಮ್ಮೆ-ಸಮಾಜಸೇವೆಗೆ ಮಾದರಿ.

Categories
ನ್ಯಾಯಾಂಗ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಎನ್. ನಂಜುಂಡ ರೆಡ್ಡಿ

ನ್ಯಾಯಾಂಗದಲ್ಲಿ ಸಮಾಜಪರ ನಿಲುವುಗಳಿಂದ ವಿಶಿಷ್ಟ ಛಾಪೊತ್ತಿದವರು ನಂಜುಂಡರೆಡ್ಡಿ, ನಾಲ್ಕು ದಶಕಗಳಿಂದಲೂ ಕಕ್ಷಿದಾರರ ಹಿತ ಕಾಯುತ್ತಿರುವ ನ್ಯಾಯವಾದಿ, ನ್ಯಾಯಾಂಗ ವಲಯದಲ್ಲಿ ನಂಜುಂಡರೆಡ್ಡಿ ಅವರದ್ದು ಬಲು ಜನಪ್ರಿಯ ಹೆಸರು. ಅಸೀಮ ವೃತ್ತಿಪರತೆ, ಜ್ಞಾನ ನಂಜುಂಡರೆಡ್ಡಿ ಅವರ ವಿಶೇಷತೆ, ಕ್ಲಿಷ್ಟಕರವಾದ ಪ್ರಕರಣಗಳಲ್ಲಿ ಅತ್ಯಂತ ಜಾಣ್ಮೆಯಿಂದ ವಾದಿಸಿ ಕಕ್ಷಿದಾರರಿಗೆ ಗೆಲುವನ್ನು ತಂದುಕೊಡುವಲ್ಲಿ ಅವರು ಸದಾ ಯಶಸ್ವಿ. ಸಮಾಜದ ಉನ್ನತಿಗೆ ಶ್ರಮಿಸುವುದೇ ಬದುಕಿನ ಮೂಲಧ್ಯೇಯ. ವಕೀಲವಲಯಲ್ಲಿ ಹಣಕ್ಕಿಂತಲೂ ಸಮಾಜಮುಖಿತ್ವ ಮುಖ್ಯವೆಂಬ ದಿವ್ಯ ನಂಬಿಕೆಯಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಹಲವಾರು ಪ್ರಕರಣಗಳಲ್ಲಿ ವಾದಿಸಿ ಮಂಡಿಸಿದವರು. ಬಿಬಿಎಂಪಿ ಮತ್ತು ಬಿಡಿಎಯಿಂದ ಕೈತಪ್ಪುವಂತಿದ್ದ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ನೂರಾರು ಎಕರೆ ಭೂಮಿಯನ್ನು ಮರಳಿ ವಾಪಸ್‌ ಪಡೆದುಕೊಟ್ಟ ಅಪೂರ್ವ ಸಾಧನೆ-ಸೇವೆ. ನಂಜುಂಡರೆಡ್ಡಿ ಅವರ ಈ ವೃತ್ತಿಕುಶಲತೆಯಿಂದಾಗಿ ಸರ್ಕಾರಕ್ಕೆ ಪರೋಕ್ಷವಾಗಿ ಜನತೆಗೆ ಆದ ಲಾಭ ಅಗಣಿತ. ವೃತ್ತಿಪರತೆ ಮತ್ತು ವೃತ್ತಿಬದ್ಧತೆಗಳ ಮಹಾಸಂಗಮದಂತಿರುವ ನಂಜುಂಡರೆಡ್ಡಿ ನ್ಯಾಯಾಂಗದಲ್ಲಿ ಕಂಡುಬರುವ ಅಪರೂಪದ ಸಮಾಜಪರ ನ್ಯಾಯವಾದಿ.