ಧರ್ಮ ಸಮಾಜದಷ್ಟೇ ಪ್ರಾಚೀನತೆಯ ಪರಂಪರೆಯನ್ನು ಹೊಂದಿದೆ. ಯುಗ ಯುಗಾಂತರಗಳ ಕಾಲ ಧರ್ಮಗಳನ್ನು ನಂಬಿಕೆ ಮತ್ತು ಆಚರಣೆಗಳನ್ನು ಸಂಯೋಜಿಸಿ ನೀತಿ ನಿಯಮಗಳಿಂದ ಸತ್ಕಾರ್ಯ ಜೀವನ ಮಾದರಿಯನ್ನು ನಿರೂಪಿಸುವುದೇ ಧರ್ಮ. ಧರ್ಮವೆಂಬ ವಟವೃಕ್ಷ, ಭೂಮಿಯ ಭೂಮಿಕೆಯಿಂದ, ತತ್ವೆಂಬ ಸಾರದಿಂದ, ಕಾಂಡವೆಂಬ ನಾಯಕತ್ವದಿಂದ ಬೆಳೆದು, ಕೊಂಬೆರೆಂಬೆಗಳೆಂಬ ವ್ಯಾಪಕತೆಯಿಂದ ತನ್ನ ಹೂವು ಹಣ್ಣುಗಳೆಂಬ ಸಮಾಜೋ ಧಾರ್ಮಿಕ ಸೇವೆಗೆ ಸಮರ್ಪಣೆಗೊಳ್ಳುವುದು. ಮಠಗಳು ಧರ್ಮವನ್ನು ಸಂಘಟಿಸುವ  ಸಾಧನಗಳು.

ಮಠವೆಂದರೆ ಮೂಲತಃ ಮುನಿಗಳ ವಾಸಸ್ಥಾನವೆಂದರ್ಥ. ವೇದಗಳ ಕಾಲದಲ್ಲಿ ವನವಾಸಿಗಳಾಗಿದ್ದ ಋಷಿ ಮುನಿಗಳು ತಮ್ಮ ಆಶ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಪರ್ಣ ಶಾಲೆಗಳನ್ನು ರಚಿಸಿ ವಿದ್ಯಾದಾನ ಮಾಡುತ್ತಿದ್ದ ‘ಗುರುಕುಲ’ವೆಂಬ ಪರ್ಯಾಯ ನಾಮವೇ ಮಠ. ಇದನ್ನು ಧಾರ್ಮಿಕ ಪಾಠಶಾಲೆ, ಕುಟೀರ, ತಪೋಭೂಮಿ, ಜ್ಞಾನಾನ್ವೇಷಣೆ ಕೇಂದ್ರ, ಆಶ್ರಮ, ಗುರುಮನೆ ಎಂದೂ ಕರೆಯಲಾಗಿದೆ. ಮಠಗಳು ಸಾಂಸ್ಕೃತಿಕ ಕೇಂದ್ರಗಳಾಗಿ, ತತ್ವದರ್ಶಿನಿ ಗಳಾಗಿ, ಸೇವಾ ನಿಯೋಜಿಕಗಳಾಗಿ, ಭಾವೈಕ್ಯ ಸಂಗಮಗಳಾಗಿ ಕಾರ್ಯನಿರ್ವಹಿಸಿವೆ. ಮಠಗಳು ಜನರನ್ನು ಸಂಘಟಿಸಿ ಅಲೌಕಿಕ ಪಾರಮಾರ್ಥಿಕ ಮೌಲ್ಯಗಳನ್ನು ಲೌಕಿಕ ಜೀವನ ಧರ್ಮದ ಸಾಮರಸ್ಯಕ್ಕೆ ಮೂಲ ಆಕರಗಳನ್ನು ಒದಗಿಸುವ ಸಾಧನಗಳಾಗಿದ್ದವು.

ಮಠಗಳ ಹಿನ್ನೆಲೆ

ಭಾರತೀಯ ಇತಿಹಾಸದಲ್ಲಿ ಕ್ರಿ.ಪೂ. ೫ನೇ ಶತಮಾನದಷ್ಟು ಪುರಾತನ ಕಾಲದಿಂದಲೇ ಗುರುಕುಲಗಳ ಅಸ್ತಿತ್ವವನ್ನು ಗುರುತಿಸಲಾಗಿದೆ. ರಾಮಯಣಗಳ ಕಾಲದಲ್ಲಿ ಅನೇಕ ಋಷಿ ಮುನಿಗಳ ಆಶ್ರಮಗಳು, ತಪೋಕೇಂದ್ರಗಳು ಕರ್ನಾಟಕದಲ್ಲಿದ್ದವು. ಬೌದ್ಧ ಧರ್ಮದ ನವೋದಯ ಕಾಲಕ್ಕೆ ಸನ್ಯಾಸಿ ಮಠಗಳನ್ನು ವಿಹಾರ ಅಥವಾ ಸಂಘ ಎಂದು ಕರೆಯುತ್ತಿದ್ದರು. ಮಠಗಳ ಇತಿಹಾಸವನ್ನು ಗುರುತಿಸುವಾಗ ಕ್ರಿ.ಶ. ೮ನೇ ಶತಮಾನವನ್ನು ಮಹತ್ವದ ಘಟ್ಟ ವೆಂದು ಗುರುತಿಸಲಾಗಿದೆ. ಈ ಕಾಲ ಬೌದ್ಧ ಮತ್ತು ಜೈನ ಧರ್ಮಗಳ ವಿರುದ್ಧ ಹಿಂದೂ ಧರ್ಮ ಪುನರುತ್ಥಾನಗೊಂಡ ಕಾಲ. ಆದಿ ಶಂಕರಾಚಾರ್ಯರು ಸುಧಾರಿತ ಹಿಂದೂ ಧರ್ಮಕ್ಕೆ ಸಂಘಟಿತ ರೂಪ ನೀಡಲು ಮಠಗಳನ್ನು ಸ್ಥಾಪಿಸಿದ ಕಾಲ. ಇವರಿಗಿಂತಲೂ ಹಿಂದೆ ಆಗಮ ಪ್ರಾಮಾಣ್ಯದ ರೀತ್ಯ ವೀರಶೈವ ಪಂಚಾಚಾರ್ಯ ಪೀಠಗಳಿದ್ದುದಾಗಿ ಪ್ರತಿಪಾದನೆಗಳಿವೆ. ವೀರಶೈವ ಧರ್ಮವು  ಶೈವಧರ್ಮದ ವಿಕಸಿತ ರೂಪ.

ಇದು ಕರ್ನಾಟಕದ ಪ್ರಮುಖ ಧರ್ಮಗಳಲ್ಲಿ ಒಂದು ಪ್ರಬಲ ಧರ್ಮ. ವೈದಿಕ ವಿರೋಧಿ ಚಿಂತನೆಗಳ ಹಿನ್ನೆಲೆಯಲ್ಲಿ ಪ್ರಾರಂಭವಾದ ಈ ಧರ್ಮವು ಶಿವಾಗಮಗಳ ತಳಹದಿಯ ಮೇಲೆ ನಿಂತಿದೆ. ವೀರಶೈವ ಮಠಗಳೂ ಕೂಡ ವೀರಶೈವ ಧರ್ಮದಷ್ಟೇ ಪ್ರಾಚೀನವಾದ ಇತಿಹಾಸ ವನ್ನು ಹೊಂದಿವೆ. ಭರತ ಖಂಡದಲ್ಲೇ ಬಹು ಪ್ರಾಚೀನ ಧರ್ಮಗಳಲ್ಲೊಂದಾದ ಶೈವ ಅಥವಾ ಲಾಕುಳ ಶೈವರಲ್ಲಿ ಮಠಗಳಿದ್ದುದಕ್ಕೆ ಸಾಕಷ್ಟು ಆಧಾರಗಳಿವೆ. ಶೈವ ಯತಿಗಳು ಬಹುದೊಡ್ಡ ದೇವಾಲಯಗಳ ನಿರ್ಮಾಣಕಾರರಾಗಿದ್ದರು. ಇವರು ದೇವಾಲಯಗಳಲ್ಲೇ ವಾಸಮಾಡುತ್ತಾ ಆಧ್ಯಾತ್ಮ ಸಾಧನೆಯ ಜೊತೆಗೆ ವಿದ್ಯಾಪ್ರಸಾರವನ್ನೂ ನಡೆಸುತ್ತಿದ್ದರು. ಕ್ರಿ.ಶ. ೬೦೩ರಲ್ಲಿ ಕರ್ನಾಟಕದ ಬಾದಾಮಿಯ ಮಹಾಕೂಟೇಶ್ವರ (ಮಕುಟೇಶ್ವರ) ಏಳನೇ ಶತಮಾನದ ವೇಳೆಗಾಗಲೇ ಅಸ್ತಿತ್ವದಲ್ಲಿದ್ದವು ಎಂಬುದನ್ನು ಕಪಟರಾಳ ಕೃಷ್ಟರಾಯರು ಅಭಿಪ್ರಾಯಪಟ್ಟಿದ್ದಾರೆ.

ವೀರಶೈವ ಮಠಗಳ ಉಗಮ

ವೀರಶೈವ ಮಠಗಳ ಉಗಮವನ್ನು ಕುರಿತು ಪ್ರಮುಖವಾಗಿ ಎರಡು ಬಗೆಯ ಅಭಿಪ್ರಾಯಗಳು ಪ್ರಚಲಿತವಾಗಿವೆ. ಮೊದಲನೆಯದು ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ಐವರು ಆಚಾರ್ಯರಾದ ಪಂಚಾರ್ಯರು ಸ್ಥಾಪಿಸಿದ ಮಠಗಳೇ ಪಂಚಪೀಠಗಳಾದುವು. ಕಲಿಯುಗದ ಆರಂಭದಲ್ಲಿ ಅವತರಿಸಿದ ರೇವಣಸಿದ್ಧ, ಮರುಳಸಿದ್ಧ, ಪಂಡಿತಾರಾಧ್ಯ, ಏಕೋರಾಮ ಮತ್ತು ವಿಶ್ವಾರಾಧ್ಯರು ಅನುಕ್ರಮವಾಗಿ ಬಾಳೆಹಳ್ಳಿ, ಉಜ್ಜಯಿನಿ, ಶ್ರೀಶೈಲ, ಕೇದಾರ ಮತ್ತು ಕಾಶಿಗಳಲ್ಲಿ ಪವಿತ್ರ ಪೀಠಗಳನ್ನು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ.

ಎರಡನೆಯದಾಗಿ ಐತಿಹಾಸಿಕವಾಗಿ ಕಲ್ಯಾಣ ಪಟ್ಟಣದಲ್ಲಿ ಕ್ರಿ.ಶ. ೧೧೫೬ರಲ್ಲಿ ಬಸವೇಶ್ವರಿಂದ ಸ್ಥಾಪಿಸಲ್ಪಟ್ಟ ಶೂನ್ಯ ಸಿಂಹಾಸನ ಪಟ್ಟ. ಇಂದಿನ ಸಾವಿರಾರು ವಿರಕ್ತ ಮಠಗಳಿಗೆ ಈ ಶೂನ್ಯ ಸಿಂಹಾಸನವೇ ಮೂಲಪೀಠವಾಗಿದೆ. ಇದನ್ನು ಚರಂತಿಪಟ್ಟವೆಂದೂ ಇದರ ಮೂಲ ಗುರು ಅಲ್ಲಮಪ್ರಭು. ಹೀಗೆ ಕಲ್ಯಾಣ ಪಟ್ಟಣದಲ್ಲಿ ಪ್ರಾರಂಭವಾದ ವಿರಕ್ತ ಪರಂಪರೆಯು ವಿಜಯನಗರದ ಪ್ರೌಢದೇವರಾಯನ ಕಾಲಕ್ಕೆ ನೂರೊಂದು ವಿರಕ್ತರಿಂದ ಮುಂದುವರೆಯಿತು. ಅನಂತರ ವಾಣಿಜ್ಯಪುರವೆಂದು ಹೆಸರಾಗಿದ್ದ ಹರದನಹಳ್ಳಿಯಲ್ಲಿ ಗೋಪಾಲ ಸಿದ್ಧೇಶ್ವರರು ಗುರುಪರಂಪರೆಯನ್ನು ನಿರ್ಮಾಣ ಮಾಡಿದರು. ಇವರ ಶಿಷ್ಯ ಪರಂಪರೆಯ ಧ್ರುವತಾರೆ ತೋಂಟದ ಸಿದ್ಧಲಿಂಗೇಶ್ವರರು. ಇವರಿಂದಲೇ ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿಗಳು ಪುನರುಜ್ಜೀವನಗೊಂಡು ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಆಂಧ್ರ ಮತ್ತು ತಮಿಳುನಾಡಿ ನಲ್ಲಿಯೂ ವ್ಯಾಪಕವಾಗಿ ಪ್ರಚಾರಗೊಂಡವು.

ಮಠಗಳ ಸ್ವರೂಪ

ಕ್ರಿ.ಶ. ೮ನೇ ಶಮಾನದಿಂದೀಚೆಗೆ ಮಠಗಳು ರಾಜಾಶ್ರಯ ಪಡೆದಿದ್ದವು. ಬಹಳಷ್ಟು ಮಠಗಳು ಶೈವ ಮಠಗಳಾಗಿದ್ದು ದೇವಾಲಯದ ಆವರಣದೊಳಗೆ ಘಟಿಕಾಸ್ಥಾನಗಳಾಗಿ ವಿದ್ಯಾಪ್ರಸಾರ ಮತ್ತು ಆಧ್ಯಾತ್ಮದ ಕಾರ್ಯಗಳನ್ನು ನಡೆಸುತ್ತಿದ್ದವು. ಈ ಸ್ಥಾನಾಚಾರ್ಯರು, ಯೋಧರನ್ನು ತರಬೇತುಗೊಳಿಸಿ ರಾಜರುಗಳಿಗೆ ಸಹಕರಿಸುತ್ತಿದ್ದರು. ಈ ಕಾರಣದಿಂದ ಇವರ ಸ್ಥಾನ ಅತ್ಯಂತ ಉನ್ನತವಾಗಿತ್ತು. ಈ ದೇವಾಲಯ ಮಠಗಳು ಏಕಕಾಲದಲ್ಲಿ ಸಮಾಜೋ ಧಾರ್ಮಿಕ ಸೇವಾ ಕ್ಷೇತ್ರಗಳಾಗಿ ಕಾರ್ಯನಿರ್ವಹಿಸಿದ್ದವು. ಕರ್ನಾಟಕದ ಲಕುಲೀಶ, ಪಾಶುಪಥ, ಕಾಳಾಮುಖ, ಕಾಪಾಲಿಕ ಶೈವ ಮುನಿಗಳು ಸ್ಥಾನಪತಿಗಳಾಗಿದ್ದ ಸಮಯದಲ್ಲಿ ದೇವಾಲಯಗಳನ್ನೆ ಮಠಗಳನ್ನಾಗಿ ಮಾತ್ರವಲ್ಲದೆ ಶ್ರೇಷ್ಠ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರಗಳನ್ನಾಗಿ ಮಾಡಿದ್ದರು. ಈ ಮಧ್ಯೆ ಬಸವಾದಿ ಪ್ರಮಥರ ಉತ್ಕರ್ಷದ ಫಲವಾಗಿ ಅನೇಕ ಲಕುಲೀಶ, ಕಾಳಾಮುಖಿ ಮಠಗಳು ವೀರಶೈವ ಮಠಗಳಾದುವು (ಬೆಳಗಾವಿಯ ಜಿಲ್ಲೆ) (ಪೂವಲ್ಲಿ ಹೂಲಿ). ವೀರಶೈವ ಪಂಥ ಬಸವ ಪೂರ್ವದಲ್ಲಿಯೂ ಇತ್ತು ಆದರೆ ಇದು ಸಂಘಟಿತ ಸ್ವರೂಪವನ್ನು ಪಡೆದದ್ದು ಬಸವಯುಗದಲ್ಲಿಯೇ. ಈ ಕಾರಣದಿಂದ ಈಗಿನ ವೀರಶೈವ ಜಂಗಮರಿಗೆ ಕಾಳಾಮುಖ ಗುರುಗಳೇ ಪೂರ್ವಜರು. ಹಾಗೆ ೧೩ನೇ ಶತಮಾನದಲ್ಲಿ ಹೊಯ್ಸಳರ ಆಸ್ಥಾನದಲ್ಲಿದ್ದು ಕರಣಿಕ ಹರಿಹರ ಹಾಗೂ ದಂಡ ನಾಯಕ ಕೆರೆಯ ಪದ್ಮರಸರು ನಡೆಸಿದ ವೀರಶೈವ ಧಾರ್ಮಿಕ ಕಾರ್ಯ ಸ್ತುತ್ಯರ್ಹವಾದದ್ದು. ಅನಂತರ ವಿಜಯನಗರ ಅರಸನಾಗಿದ್ದ ಪ್ರೌಢದೇವರಾಯ ಮತ್ತು ಆತನ ಅಮಾತ್ಯರುಗಳಾಗಿದ್ದ ಲಕ್ಕಣ ದಂಡೇಶ ಮತ್ತು ಜಕ್ಕಣಾರ್ಯರು ವೀರಶೈವ ಧರ್ಮ ಪ್ರಸಾರಕ್ಕಾಗಿ ನಡೆಸಿದ ಅಮೂಲ್ಯ ಸೇವೆ ಇತಿಹಾಸದಲ್ಲಿ ಕೇಳಿ ಕಂಡರಿಯದ ಬದಲಾವಣೆ ತಂದಿತು. ಇವರ ಪೋಷಣೆಯಲ್ಲಿದ್ದ ಕಲ್ಲುಮಠದ ಪ್ರಭುದೇವ, ಕರಸ್ಥಲದ ನಾಗಿದೇವ, ವೀರಣ್ಣೊಡೆಯ ಇವರೇ ಮೊದಲಾದ ನೂರೊಂದು ವಿರಕ್ತರ ಸಾರ್ಥಕ ಸೇವೆಯಿಂದ ವೀರಶೈವ ಧರ್ಮವು ಸಮೃದ್ಧವಾಗಿ ಬೆಳೆಯಿತು. ತದನಂತರ ರಾಜ ಮನ್ನಣೆ ದೊರೆತು ಸಾಮಂತರು, ಪಾಳೇಗಾರರು, ನಾಡಪ್ರಭುಗಳು ಗುರುಮಠಗಳ ಬೆಂಗಾವಲಾಗಿದ್ದರಿಂದ ವೀರಶೈವ ಧರ್ಮಪ್ರಸಾರದ ಪ್ರಗತಿ ಸುಲಭ ಸಾಧ್ಯವಾಯಿತು. ಶ್ರೀ ತೋಂಟದ ಸಿದ್ಧಲಿಂಗಯತಿಗಳು ಅನೇಕ ಪಾಳೇಗಾರರಿಗೆ ಮತ್ತು ನಾಡ ಪ್ರಭುಗಳಿಗೆ ಗುರುಗಳಾಗಿದ್ದರಿಂದ ಧರ್ಮ ವ್ಯಾಪಕವಾಗಿ ಹರಡಲು ಸಾಧ್ಯವಾಯಿತು. ಇದರ ಫಲವಾಗಿ ವೀರಶೈವ ಧಾರ್ಮಿಕ ಗ್ರಂಥಗಳ ಸಂಕಲನ, ಗುರು ವಿರಕ್ತರ ಸಂಘಟನೆ, ಮಠ ಮಾನ್ಯಗಳ ಸ್ಥಾಪನೆಯಿಂದ ವೀರಶೈವ ಧರ್ಮ ಹೆಚ್ಚು ಪ್ರವರ್ಧಮಾನ ಮುಟ್ಟಿತು. ಹಾಗೆ ಬಸವಣ್ಣನವರಂತೆ ಪವಾಡ ಮತ್ತು ಹೋರಾಟಗಳಿಂದ ವೀರಶೈವ ಧರ್ಮಪ್ರಸಾರ ನಡೆಸಿದ ಏಕಾಂತದ ರಾಮಯ್ಯನ ಕ್ರಾಂತಿಕಾರಕ ಸಂಘಟನಾ ಸಾಮರ್ಥ್ಯ ಏಕಮೇವವಾದದ್ದು.

ಮಠದ ಪ್ರಕಾರಗಳು

ವೀರಶೈವ ಮಠಗಳನ್ನು ಪ್ರಮುಖವಾಗಿ ಎರಡು ಪ್ರಕಾರಗಳಾಗಿ ವಿಂಗಡಿಸಬಹುದು. ಆಚಾರ್ಯ ಪೀಠಗಳು ಮತ್ತು ಗುರುವಿರಕ್ತರು ಎಂದು, ಪಂಚಪೀಠಗಳು, ಗುರುಪೀಠಗಳಾಗಿ ಪೀಠಾಚಾರ್ಯರು ಆಚಾರ್ಯರಾಗಿದ್ದರು. ವೀರಶೈವ ಗೋತ್ರ ಸೂತ್ರಗಳ ಹರಿಕಾರರೆಂದು ಇಂದಿಗೂ ಅನೇಕ ಜನ ನಂಬಿದ್ದಾರೆ. ಈ ಆಚಾರ್ಯರಿಂದ ಸ್ಥಾಪಿಸಲ್ಪಟ್ಟ ಪಂಚಪೀಠಗಳಲ್ಲಿ ಯಾವುದಾದರೊಂದು ಪೀಠಕ್ಕೆ ಸಂಬಂಧಿಸಿದ ಒಂದು ಮಠ ಪ್ರತಿಯೊಂದು ಗ್ರಾಮ ಇಲ್ಲವೆ ನಗರಗಳಲ್ಲಿ ಇದ್ದೇ ಇದೆ. ಪೀಠಾಧಿಪತಿಗಳು ತಮ್ಮ ಸೂತ್ರಿಕ ಶಿಷ್ಯರಾದ ಪಟ್ಟ, ಚರಂತಿ, ದೇಶಿಕ ಅಶೀಕರೆಂಬ ಮಹಂತಿನವರಿಂದ ಲಿಂಗವಂತ ಧರ್ಮೀಯರಿಗೆ ಅಗತ್ಯವಾದ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಡುತ್ತಾರೆ. ಧರ್ಮ ರಕ್ಷಣೆಯ ಜೊತೆಗೆ ಅಧರ್ಮದಿಂದ ನಡೆಯು ವವರನ್ನು ಶಿಕ್ಷಿಸುವ ಅಧಿಕಾರವೂ ಇವರಿಗಿರುತ್ತಿತ್ತು. ಸಾಮಾನ್ಯವಾಗಿ ವಿರಕ್ತ ಮಠಗಳನ್ನು ಹೊರತುಪಡಿಸಿ ಉಳಿದೆಲ್ಲಾ ವೀರಶೈವ ಮಠಗಳು ಒಂದಿಲ್ಲೊಂದು ಪೀಠಗಳಿಗೆ ಶಾಖಾ ಮಠಗಳಾಗಿವೆ. ಪಂಚಪೀಠಾಧೀಶರಿಗೆ ಐದು ಉಪಾಚಾರ್ಯರ ವರ್ಗಗಳಿವೆ. ಇವು ಶ್ರಮ ವಿಭಜನೆಯ ಆಧಾರದ ಮೇಲೆ ವಿಭಾಗಿತವಾಗಿವೆ. ಇವುಗಳೆಂದರೆ ಮಠದಯ್ಯ (ಹಿರೇಮಠ), ಮಠಪತಿ ಗಣಾಚಾರ್ಯ, ಗಣಕುಮಾರ ಮತ್ತು ಸ್ಥಾವರಿಕ. ಪಂಚಾಚಾರ್ಯರಿಗೂ ಮತ್ತು ವೃತ್ಯಾಚಾರ್ಯರಿಗೂ ನಡುವೆ ಪಟ್ಟದ ದೇವರ ಮಠಗಳು ಬರುತ್ತವೆ. ಈ ಮಠಗಳು ೩೦ ರಿಂದ ೪೦ ಊರುಗಳಿಗೆ ಒಂದರಂತೆ ಮತ್ತು ದೊಡ್ಡ ಪಟ್ಟಣಗಳಿಗೆ ಒಂದರಂತೆ ಇವು ತಮಗೆ ನಿಗದಿಯಾದ ಪ್ರಾದೇಶಿಕ ಜನರ ಧಾರ್ಮಿಕ ಕಾರ್ಯಗಳ ನ್ಯಾಯ ನಿರ್ಣಯಗಳಿಗೆ ಅಧಿಕಾರ ಉಳ್ಳವರಾಗಿರುತ್ತಾರೆ. ಈ ಪಟ್ಟಾಧ್ಯಕ್ಷರಲ್ಲಿ ಎರಡು ಬಗೆ ಸ್ಥಿರಪಟ್ಟಾಧ್ಯಕ್ಷ ಮತ್ತು ಚರಪಟ್ಟಾಧ್ಯಕ್ಷ. ಈ ಪಟ್ಟಾಧ್ಯಕ್ಷರ ಕೆಳಗಿನ ಸ್ತರದಲ್ಲಿ ಮಠದಯ್ಯಗಳು ಪಟ್ಟಾಧ್ಯಕ್ಷರ ಪರವಾಗಿ ಪೌರೋಹಿತ್ಯ ನಡೆಸುತ್ತಾರೆ, ಇವರನ್ನು ಐಯ್ಯನವರೆಂದು ಕರೆಯುತ್ತಾರೆ. ಹಿರೇಮಠಸ್ಥರು ನಡೆಸುವ ಧಾರ್ಮಿಕ ಕಾರ್ಯಗಳಿಗೆ ಸಹಾಯಕರಾಗಿ ಮಠಪತಿ, (ಪೂಜೆ) ಗಣಾಚಾರಿ, (ಮಂತ್ರ ರಕ್ಷಕ) ಗಣ ಕುಮಾರ (ಪರಿಕರ) ಮತ್ತು ಸ್ಥಾವರಿಕ (ಪೂಜಾ ಸಾಮಾನು) ಕಾರ್ಯ ನಿರ್ವಹಿಸುವರು. ಹಾಗೆ ಊರಿನಲ್ಲಿ ಮಠದಯ್ಯನವರಿಗೆ ಧಾರ್ಮಿಕ ವಿಧಿ ನಡೆಸಲು ಸಹಾಯಕರಾಗಿ ಯಜಮಾನ, ಶೆಟ್ಟಿ, ಬಣಕಾರ ಮುಂತಾದವರು ಲಿಂಗವಂತರ ದಶವಿಧಿಗಳನ್ನೆ ಕರಾರು ವಾಕ್ಕಾಗಿ ಲಿಂಗಧಾರಣೆಯಿಂದ ಹಿಡಿದು ಅಂತ್ಯ ಸಂಸ್ಕಾರದವರೆಗೂ ನಡೆಸುತ್ತಾರೆ.

ಪೀಠಚಾರ್ಯರಿಗೆ ಪಟ್ಟಾಧಿಕಾರಿಗಳಿಗೆ ಗ್ರಾಮಗಳ ಧಾರ್ಮಿಕ ವೃತ್ತಾಂತಗಳನ್ನು ತಿಳಿಸಲು ಕಾಯಕದಯ್ಯಗಳನ್ನು ನಿಯಮಿಸಲಾಗಿತ್ತು. ಇವರನ್ನು ಪೀಠಾಧೀಶರ ಅಧೀನಕ್ಕೆ ಒಳಪಡಿಸ ಲಾಗಿತ್ತು. ಇವರಲ್ಲಿ ನಾಲ್ಕು ಬಗೆ ಅವುಗಳೆಂದರೆ ಘಂಟಿಕಾಯಕ, ಗದ್ದುಗೆ ಕಾಯಕ, ಕಂಬದ ಕಾಯಕ ಮತ್ತು ಮುಳ್ಳಾವಿಗೆ ಕಾಯಕ. ಇವರು ಲಿಂಗವಂತರನ್ನು ಸನ್ಮಾರ್ಗಿಗಳನ್ನಾಗಿ ಮಾಡಲು ಒತ್ತಡ, ಒತ್ತಾಯ ಮತ್ತು ಸತ್ಯಾಗ್ರಹಗಳನ್ನು ಉಗ್ರವಾಗಿ ನಡೆಸಿ ಸಮಾಜ ವ್ಯವಸ್ಥೆ ಕಾಪಾಡುವ ಪರಿವೀಕ್ಷಕರಂತೆ ಕಾರ್ಯ ನಿರ್ವಹಿಸುತ್ತಿದ್ದರು.

ಎರಡನೇ ಪ್ರಕಾರದ ಮಠಗಳು

ವಿರಕ್ತಮಠಗಳು ಇವರು ಸನ್ಯಾಸಿಗಳು ಸನ್ಯಾಸಾಶ್ರಮದ ದೀಕ್ಷೆ ಪಡೆದು ಸರ್ವಸಂಗ ಪರಿತ್ಯಾಗಿಗಳಾಗಿ ವೈರಾಗ್ಯ ಸಂಪನ್ನರಾದವರು. ಶ್ರೀ ಚೆನ್ನಬಸವಣ್ಣನವರ ಪ್ರಕಾರ “ಶ್ರೀ ಗುರುಶಿಷ್ಯಾನುಭವಿ ಪೂರ್ವಾಶ್ರಮವ ಕಳೆದು ಭಕ್ತನ ಮಾಡಿದ ಬಳಿಕ ಆ ಭಕ್ತ ಜಂಗಮ ನಾಗುತ್ತಾನೆ.” “ಗುರುವಿನ ಗುರು ಪರಮಗುರು ಜಂಗಮ” ಎಂಬ ವಚನಕಾರರ ಮಾತು ಜಂಗಮತ್ವದ ಹಿರಿಮೆಗೆ ಹಿಡಿದ ಕನ್ನಡಿಯಾಗಿದೆ. ಈ ವಿರಕ್ತ ಸ್ಥಾನ ಬಸವಾದಿ ಪ್ರಮಥರ ಕ್ರಾಂತಿಯ ಫಲವಾಗಿ ತನ್ನ ಅಸ್ಥಿತ್ವದ ಉನ್ನತಿಯನ್ನು ಪಡೆಯಿತು. ಇದನ್ನು ವಿರಕ್ತ ಸಮಯಾಚಾರವೆಂದೂ ಇದಕ್ಕೆ ಅಲ್ಲಮಪ್ರಭು ಹರಿಕಾರನೆಂದೂ ತಿಳಿಸಿದ್ದಾರೆ. ಅಲ್ಲಮ ಪ್ರಭುಗಳು ನಿರಾಬಾರಿ ಜಂಗಮರ ಲಕ್ಷಣಗಳನ್ನು ವಿವರಿಸುತ್ತಾ ಇವರು ಹೆಣ್ಣು, ಹೊನ್ನು, ಮಣ್ಣು, ಕೋಪ ಶಾಪವ, ಭ್ರಾಂತಿಯ ಬಿಟ್ಟು ಷಡುಲೋಭದ ರುಚಿ ಹಿಂಗಿ ಜಂಗಮ ವಾದಲ್ಲದೆ ಭವಹಿಂಗದು. ಶರಣರು ಗುರುತಿಸಿದಂತೆ ಜೀವ ಆತ್ಮಗಳ ಸಂಬಂಧವಾದ ಶೂನ್ಯ ವಸ್ತುವಿನ ಜ್ಞಾನವುಳ್ಳ ಮಹಾನುಭಾವಿಯೇ ಜಂಗಮ. ಹಾಗೆ ಇದನ್ನು ಶಿವಾನುಭವ “ಚರಂತಿ ಪಟ್ಟ”ವೆಂದೂ ಕರೆದಿದ್ದಾರೆ. ಈ ಪಟ್ಟದಲ್ಲಿ ತೋಂಟದ ಸಿದ್ಧಲಿಂಗೇಶ್ವರರು ಏಳು ನೂರು ಮಂದಿ ಚರಮೂರ್ತಿಗಳಿಗೆ (ಶಿಷ್ಯಗಣಂಗಳಿಗೆ) ಗುರುವಾಗಿದ್ದರು, (೭೦೦ ಬುಡಕಟ್ಟಿನ ಮಠಗಳು) ಈ ಏಳು ನೂರು ಬುಡಕಟ್ಟಿನ ಚರಮೂರ್ತಿಗಳ ಕರಸಂಜಾತರಾದ ಮೂರು ಸಾವಿರ ಮಂದಿ ವಿರಕ್ತ ಮಹೇಶ್ವರರಿದ್ದರು. ಇವರೆಲ್ಲರಿಗೂ ಶ್ರೀ ಸಿದ್ಧಲಿಂಗೇಶ್ವರರು ಜಗದ್ಗುರುಗಳಾಗಿದ್ದರು. ಈ ವಿರಕ್ತ ಪರಂಪರೆಯಲ್ಲಿ ಭಿನ್ನ ಬಗೆಯ ಸಮಯ ಭೇದಗಳು ಹುಟ್ಟಿಕೊಂಡವು. ಇವುಗಳೆಂದರೆ ಕೆಂಪಿನ ಸಮಯ (ಹುಮನಾಬಾದ್), ಕುಮಾರ ಸಮಯ (ಇಳಸೂರು (ಕೆಳದಿ), ಸಂಪಾದನೆ ಸಮಯ (ಹಾಗಲವಾಡಿ), ಚಿಲಾ ಸಮಯ (ಡಂಬಳ) ಮತ್ತು ಮುರಿಗಾ ಸಮಯ (ಚಿತ್ರದುರ್ಗ), ಮುರಿಗಾ ಶಾಂತವೀರ ಸ್ವಾಮಿಗಳ ಐವರು ಶಿಷ್ಯರಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಬಂದು ಅವರ ಹೆಸರಿನ ಸಮಯ ಭೇದಗಳಿಗೆ ಕಾರಣ ರಾದರು.

ಮಠಾಧಿಕಾರಿಯಾಗುವವರ ಗುಣಲಕ್ಷಣಗಳನ್ನು ವಿವರಿಸುತ್ತಾ ಇಂದ್ರಿಯನಿಗ್ರಹ, ಸತ್ಯಶುದ್ಧ ಮನಸ್ಕ, ಶಿವಾನುಭವಶಾಸ್ತ್ರ ವಿಶಾರದ, ಸನ್ಮಾರ್ಗ ಸದ್ಭಾವ ಸತ್ಕುಲ ಪ್ರಸೂತ ಲಿಂಗಜಂಗಮ ಪೂಜಾನಿರತ, ಸಲಕ್ಷಣ, ಬುದ್ದಿಶಾಲಿಯಾಗಿರಬೇಕೆಂದು ತಿಳಿಸಿದ್ದಾರೆ.

ಗುರುವಿರಕ್ತ-ಪೀಠಾಧಿಕಾರಿಗಳ ನಡುವೆ ಉಡುಗೆ-ತೊಡೆಗೆ ಆಚಾರ-ವಿಚಾರ ಮತ್ತು ಷಟ್‌ಸ್ಥಲ ಮಾರ್ಗದಲ್ಲಿ ಸಾಮ್ಯಗಳು ಕಂಡು ಬರುತ್ತವೆಯಾದರೂ ಗೋತ್ರ ಸೂತ್ರಾಧಿ ಮೂಲಕ್ರಿಯಾಚರಣಿ ಸಂಬಂಧವಾಗಿ ಸಾಕಷ್ಟು ಭಿನ್ನತೆಗಳು ಕಂಡು ಬರುತ್ತದೆ. ಪೀಠಾಧಿಕಾರಿ ಗಳು ಕ್ರಿಯಾಪ್ರಧಾನ ಮಾರ್ಗ ಆದರೆ ವಿರಕ್ತವರ್ಗದವರು ಜ್ಞಾನ ಪ್ರಧಾನಮಾರ್ಗ ಆಶ್ರಮ ವರ್ಗದ ಗುರುವರ್ಗದವರ ಮಠಗಳು ಸಾಮಾನ್ಯವಾಗಿ ಊರಿನ ಮಧ್ಯೆ ಇದ್ದು, ಇವು ಸಾಮಾನ್ಯ ಜನಗಳ ಧರ್ಮಾವಶ್ಯಕವಾದ ಲಿಂಗದೀಕ್ಷೆ ಜನನ, ಮರಣ, ಮದುವೆ, ಹಬ್ಬ, ಆಚರಣೆಗಳಿಗೆ ಪೌರೋಹಿತ್ಯ ನಡೆಸುತ್ತವೆ. ಜೀವನ ಸನ್ಮಾರ್ಗ ಮೂಲಕ ಮೋಕ್ಷವನ್ನು ದಯಪಾಲಿಸುತ್ತವೆ. (ಕಿರೀಟ, ಪಲ್ಲಕ್ಕಿ, ಭೋಗ  ಭಾಗ್ಯ ಆಡಂಬರಗಳುಂಟು-ಸಿದ್ಧಾಂತ ಶಿಖಾಮಣಿ ಶ್ರೀಕರಬಾಷ್ಯ ಶಿವಾಗಮಗಳು)

ಆದರೆ ಆಶ್ರಮಾತೀತರಾದ ವಿರಕ್ತವರ್ಗದವರು ಸಾಮಾನ್ಯವಾಗಿ ಊರ ಹೊರಗಿರುತ್ತಾರೆ ಇವರು ಭಕ್ತರ ದಶವಿಧಿಗಳನ್ನೆ ಮತ್ತು ಪೌರೋಹಿತ್ಯ ನಡೆಸುವ ಹಾಗಿಲ್ಲ. ಇವರು ಬಸವಪಥ  ಮಾರ್ಗಾನುಯಾಯಿಗಳು, ಇವರು ಸಂಚಾರಿಗಳಾಗಿ ಜ್ಞಾನ ಸಂಪಾದನೆಯ ಮೋಕ್ಷ ಪಡೆಯುವ ಉದ್ದೇಶ ಹೊಂದಿದ್ದಾರೆ. ವೀರಶೈವ ಧರ್ಮದಲ್ಲಿ ಗುರುಗಳ ಸ್ಥಾನ ಪವಿತ್ರವಾದುದು ಮತ್ತು ಪ್ರಭುತ್ವದಿಂದ ಕೂಡಿತ್ತು.

ಆಧುನೀಕರಣ

ಇದು ನವೀನ, ಹೊಸತು, ನಾಗರಿಕತೆ, ಸಂಪ್ರದಾಯವಲ್ಲದ ಜೀವನಪದ್ಧತಿಗಳು, ಮಾದರಿಗಳು ಎಂಬುದನ್ನು ನಿವೇದಿಸುತ್ತದೆ. ಮತಧರ್ಮದ ವಿಷಯದಲ್ಲಿ ಆಚರಣೆ, ನಂಬಿಕೆ ಮತ್ತು ಪದ್ಧತಿಗಳಲ್ಲಿ-ಹೊಸ ಹೊಂದಾಣಿಕೆಯ ಉತ್ಕರ್ಷತೆಯ ವ್ಯವಸ್ಥೆಯನ್ನು ನಿವೇದಿಸುವು ದಾಗಿದೆ. ಮಠಗಳ ಆಧುನೀಕರಣ ಎಂಬ ಕಲ್ಪನೆಯಲ್ಲಿ ಮಠಗಳ ರಚನೆ, ಸಂಘಟನೆ, ನಂಬಿಕೆ, ಆಚರಣೆ ಮತ್ತು ನಿವೇದಿತ ನಡವಳಿಕೆಗಳಲ್ಲಿ ಹೊಸತನ್ನು ಮೂಡಿಸುವುದೇ ಆಧುನೀಕರಣ ವೆನ್ನಬಹುದು. ಈ ಪ್ರಕ್ರಿಯೆಯು ವಿಜ್ಞಾನ, ತಂತ್ರಜ್ಞಾನ, ಕೈಗಾರಿಕೀಕರಣ, ನಗರೀಕರಣ, ಪರಸಂಸ್ಕೃತಿಯ ಪ್ರಭಾವವು ವ್ಯಕ್ತಿಯ ಜೀವನ ಶೈಲಿಯ ಬದಲಾವಣೆಯನ್ನು ಉಂಟು ಮಾಡಿದೆ. ಹೊಸ ತತ್ವಗಳ ಪ್ರಭಾವದಿಂದ ಸಂಸ್ಥೆಗಳಲ್ಲಿ ಬದಲಾವಣೆಗಳಾಗಿ ಸಮುದಾಯ ದಲ್ಲಿನ ಜೀವನ ಮಾದರಿಗಳು, ಪದ್ಧತಿಗಳು, ಆಚರಣೆಗಳು ಮತ್ತು ನಂಬಿಕೆಗಳಲ್ಲಿ ತೀವ್ರ ಬದಲಾವಣೆಗಳುಂಟಾಗಿವೆ. ಹಾಗೆ ಇವುಗಳ ಪರಿಣಾಮದಿಂದ ಮತಧರ್ಮದ ತತ್ವಗಳ ಅನುಸರಣೆ, ಆಚರಣೆ ಮತ್ತು ನಂಬಿಕೆಗಳಲ್ಲೂ ಅಗಾಧ ಬದಲಾವಣೆಯನ್ನುಂಟುಮಾಡಿವೆ. ಮಠಗಳ ಆಧುನೀಕರಣ ಕಲ್ಪನೆಯಲ್ಲಿ ಮಠಗಳ ಸಂಘಟನಾ ಸ್ವರೂಪ, ಆಚರಣೆ ನಂಬಿಕೆ ಮತ್ತು ಉದ್ದೇಶಗಳಲ್ಲಿ ಉಂಟಾದ ಚಲನಶೀಲತೆಯನ್ನು ವಿಶ್ಲೇಷಿಸಲಾಗಿದೆ. ಪ್ರಸ್ತುತ ಸಮಾಜದ ಯಾವುದೇ ಅಂಶವನ್ನು ಅಧ್ಯಯನ ಅದರ ಚಲನಶೀಲತೆಯ ಅಧ್ಯಯನವೇ ಆಗಿದೆ.

ಸಂಘಟನಾ ಸ್ವರೂಪ

ವೀರಶೈವ ಧರ್ಮದ ಪ್ರಾರಂಭದಿಂದಲೂ ಮೂಲಮಠಗಳು ಏಣಿಶ್ರೇಣಿಕೃತ ಮಠ, ಶಾಖಾಮಠಗಳನ್ನು ಮತ್ತು ಊರ ಮಠಗಳನ್ನು ಹೊಂದಿ ಕಾಯಕದಯ್ಯಗಳ ಮುಖೇನ ಲಿಂಗವಂತರ ಆಚಾರ-ವಿಚಾರಗಳ ಅನುಷ್ಠಾನವನ್ನು ನಿರ್ವಹಿಸುತ್ತಿದ್ದವು. ಇಂದಿಗೂ ಕರ್ನಾಟಕದ ವಿವಿಧ ಊರುಗಳಲ್ಲಿ ಪಟ್ಟಣಗಳಲ್ಲಿರುವ ಮಠಗಳು ಮೂಲಮಠಗಳ ಶಾಖಾ ಮಠಗಳಿವೆ. ಇವು ಜನಸಮುದಾಯದ ಮಧ್ಯೆ ಇದ್ದು ಸಾಮಾನ್ಯ ಜನರ ದಶವಿಧಿಗಳಾದ ಲಿಂಗಧಾರಣೆಯಿಂದ ಅಂತ್ಯ ಸಂಸ್ಕಾರದವರೆಗೆ ನಿರ್ವಹಿಸುವ ಹೊಣೆಯನ್ನು ಹೊತ್ತಿದ್ದವು. ಈ ಕಾರಣದಿಂದ ಮೂಲ ಮಠಗಳು ವ್ಯವಸ್ಥಿತ ಸಂಘಟನೆಯನ್ನು ವೀರಶೈವಧರ್ಮಕ್ಕೆ ಒದಗಿಸಿದ್ದವು. ಜನಸಾಮಾನ್ಯರು ಲಿಂಗವಂತ ಧರ್ಮದ ನಂಬಿಕೆ ಮತ್ತು ಆಚಾರಗಳನ್ನು ಚಾಚೂ ತಪ್ಪದೆ ಅನುಸರಿಸುವ ನಿಷ್ಠ ನೇಮವನ್ನು ಮನದಲ್ಲಿ ಉಂಟುಮಾಡಿದ್ದರು. ಜಂಗಮ ಮಠಗಳು ಪ್ರಾರಂಭದಲ್ಲಿ ಜನಪ್ರಿಯ ಧೋರಣೆಗಳನ್ನು ಹೊಂದದೆ ಊರ ಹೊರಗೆ ತಮ್ಮ ಮಠಗಳನ್ನೆ ಹೊಂದಿದ್ದರು. ಆದರೆ ಆಧುನೀಕರಣ ಪ್ರಭಾವದಿಂದಾಗಿ ಅನೇಕ ಬದಲಾವಣೆ ಗಳು ಉಂಟಾದವು. ತೀವ್ರತರವಾಗಿ ಜನಸಂಖ್ಯೆ ಹೆಚ್ಚಾದಂತೆ ವೃತ್ತಿ ಸ್ಥಿತ್ಯಂತರಗಳು, ನಗರೀಕರಣ, ಕೈಗಾರೀಕರಣ, ನೂತನ ಶಿಕ್ಷಣ ಪದ್ಧತಿಗಳು ಹೊಸ ಜೀವನ ವ್ಯವಸ್ಥೆಗಳನ್ನು ಉಂಟು ಮಾಡಿದವು. ಈ ಕಾರಣದಿಂದ ವ್ಯಕ್ತಿಗಳು ಮತ ಸಮೂಹ ಸಮಭಾವನೆಗಳಿಂದ ದೂರ ಸರಿದು ವೈಯಕ್ತಿಕ ಸ್ವಾತಂತ್ರ್ಯವನ್ನು ಹೆಚ್ಚು ಹೊಂದುವ ಅಭಿಲಾಷೆ ಹೊಂದಿದವ ರಾದರು. ಇದರಿಂದ ಮತ ನಂಬಿಕೆಯ ಆಚರಣೆಗಳಲ್ಲಿ ಅನೇಕ ಬದಲಾವಣೆ ಉಂಟಾದವು. ಸರಕಾರವು ಹೊಸ ಕಾಯಿದೆಗಳನ್ನು ಸಮಾಜದ ಮೇಲೆ ಪ್ರಭಾವಿಸಿತು. ಹಾಗೆ ಶಿಕ್ಷಣ ಹಿಂದಿನ ಅಂಧನಂಬಿಕೆಗಳನ್ನು ಪುರಾಣಕಲ್ಪಿತ ಭಾವನೆಗಳನ್ನು ತೊಡೆದು ಹಾಕಿತು. ಇವುಗಳ ಪ್ರಭಾವ ದಿಂದಾಗಿ ಮಠಗಳಲ್ಲಿ ಧರ್ಮಪ್ರಭುತ್ವ ಕ್ಷೀಣಿಸಿತು. ಹಾಗೆಯೇ ಮಠಗಳ ಅಂತಸ್ತುಗಳಲ್ಲಿ ಏರುಪೇರಾಯಿತು. ಪೀಠಗಳು ಕ್ಷೀಣಿಸಿ ಕೇವಲ ಸಾಂಕೇತಿಕ ಧರ್ಮ ವಿಧಿ ಆಚರಣಾ ಕೇಂದ್ರ ಗಳಾದವು. ಇತ್ತೀಚಿನ ಸಾರಿಗೆ ಸಂಪರ್ಕ ಸಂವಹನ ಸಾಧನಗಳು ವಿಶ್ವವನ್ನೆ ಚಿಕ್ಕದಾಗಿಸಿದವು. ಇವುಗಳಿಗೆ ಸಮಾನಾಂತರವಾಗಿ ಧಾರ್ಮಿಕ ಮತ್ತು ಜಾತಿಯ ಭಾವನೆಗಳು ವ್ಯಾಪಕವಾಗಿ ಹರಡಿದವು. ಎಲ್ಲಾ ಧರ್ಮ ಜಾತಿ, ಉಪಜಾತಿಗಳು ತಮ್ಮ ತಮ್ಮ ಸಂಘಟನೆಯನ್ನು ಸಂಕುಚಿತ ಭಾವನೆಗಳಿಂದ ಲಂಬಾಂತರ ಜಾತಿ, ಉಪಜಾತಿಗಳ ಸಂಘಟನೆ ಹೆಚ್ಚು ವ್ಯಾಪಕ ವಾದುವು. ಜನರ ಸಂಕುಚಿತ ಉಪಜಾತಿಗಳ ಭಾವನೆಗಳು ಸಮಗ್ರ ಲಿಂಗವಂತರ  ಭಾವನೆಗಳಿಗೆ ಆಘಾತ ಉಂಟುಮಾಡಿದವು. ಇದರಿಂದ ಮೂಲಮಠಗಳು ಮತ್ತು ಶಾಖಾಮಠಗಳು ಸಂಬಂಧವನ್ನು ಕಡಿದುಕೊಂಡವು. ಹೊಸ ಆಸ್ತಿಯ ಕಾಯಿದೆಗಳು ಬಂದ ಹಾಗೆಲ್ಲಾ ಮಠಮಾನ್ಯ ವ್ಯಕ್ತಿಗಳ ಸೊತ್ತಾಯಿತು, ಮಠಗಳು ಸಂಪನ್ಮೂಲಗಳಿಲ್ಲದೆ ಕ್ಷೀಣಿಸ ತೊಡಗಿದವು. ಇದರಿಂದ ಮಠಗಳೂ ಆಸ್ತಿ ವಿವಾದಕ್ಕೆ ಒಳಗಾದವು. ಹಾಗೆ ಮಠಗಳ ಪಟ್ಟ, ಪದವಿಗಳಲ್ಲಿ ಸಂಘರ್ಷ ಹೆಚ್ಚಾದವು. ಹಲವು ಮಠಗಳ ಆಸ್ತಿ ಪಟ್ಟ ಮತ್ತು ಪದವಿಗಳ ವ್ಯಾಜ್ಯಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದವು. ವ್ಯಕ್ತಿ ವ್ಯಕ್ತಿಗಳಲ್ಲಿ ಧಾರ್ಮಿಕ ಭಾವನೆ ಗಳು ಆಧುನೀಕರಣದಿಂದ ಬದಲಾದುವು. ಇದರಿಂದ ಊರುಗಳಲ್ಲಿದ್ದ ಮಠ, ಯಜಮಾನ, ಶೆಟ್ಟಿ, ಬಣಕಾರ ಮುಂತಾದವರ ಪಾತ್ರ ಶಕ್ತಿಹೀನವಾದುವು. ಇವು ಕೇವಲ ವೈದಿಕ ಆಚರಣೆ ಗಳನ್ನು ಸಾಂಕೇತಿಕವಾಗಿ ನಿರ್ವಹಿಸುವ ಕೇಂದ್ರಗಳಾದುವು.

ಮೂಲ ಮಠಗಳು ಮೂಲೆಗುಂಪಾದ ಮೇಲೆ ಜಂಗಮ ಮಠಗಳು ಹೊಸ ಬದಲಾವಣೆಗೆ ಹೊಂದಾಣಿಕೆ ಮಾಡಿಕೊಂಡು ಜನರ ಹೊಸ ಆವಶ್ಯಕ ಆಶೋತ್ತರಗಳತ್ತ ಗಮನಹರಿಸಿದವು. ಇದರಿಂದ ವಿರಕ್ತ ಜಂಗಮ ಮಠಗಳು ಪ್ರಧಾನವಾದುವು. ಹಿಂದೆ ಜಂಗಮ ಮಠಗಳು ಜನಗಳಿಂದ ದೂರವಿದ್ದು ಅಲೌಕಿಕ ಪಾರಮಾರ್ಥಿಕ ವೈರಾಗ್ಯ ಪ್ರಧಾನವಾಗಿದ್ದವು. ಆದರೆ ಬದಲಾವಣೆ ಹೊಂದಿ ಜನಪ್ರಿಯ ಸೇವಾ ಕಾರ್ಯಗಳಿಂದ ಜನರನ್ನು ಆಕರ್ಷಿಸಿ ಸಂಘಟಿ ಸಿದವು. ಜಂಗಮ ಮಠಗಳು ತಮ್ಮ ತಮ್ಮ ಉಪಜಾತಿಯ ಸಂಘಟನೆಯನ್ನು ವ್ಯವಸ್ಥಿತವಾಗಿ ಮಾಡಿದವಲ್ಲದೆ, ತಮ್ಮ ತಮ್ಮ ಸದಸ್ಯರಿಗೆ ಉಪಯೋಗವಾಗುವಂತಹ ವಿದ್ಯಾ ಸಂಸ್ಥೆಗಳನ್ನು ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿದುವು. ಜಂಗಮ ಮಠಗಳು ಬಸವಪಥ ಮಾರ್ಗಗಳಾಗಿ ಕನ್ನಡ ಪರ ಒಲವನ್ನು ಹೊಂದಿದ್ದವು. ಆದರೆ ಹೊಸ ಸಮಾಜದಲ್ಲಿ ಉನ್ನತ ಅಂತಸ್ತು ಪಡೆಯುವ ಸ್ಪರ್ಧಾತ್ಮಕ ಭಾವನೆಯಿಂದ ಸಂಸ್ಕೃತ ಪಾಠಶಾಲೆಗಳನ್ನು ತೆರೆದರು ಮತ್ತು ವೈದಿಕ ಆಚರಣೆಯನ್ನು ಅನುಸರಿಸಲು ತೊಡಗಿದವು. ಹೊಸ ವಿರಕ್ತ ಮಠಗಳು ಸಮಾಜ ಮುಖಿ ಕಾರ್ಯಕ್ರಮಗಳನ್ನು ಲೌಕಿಕ ಪ್ರಗತಿಗೆ ತಮ್ಮ ಜನರಲ್ಲಿ ಅನುಷ್ಠಾನಗೊಳಿಸಿದರು. ಇದರಿಂದ ವಿರಕ್ತ ಮಠಗಳು ಶಾಖಾ ಮಠಗಳನ್ನೇ ವೃದ್ದಿಸಿ ಸಂಘಟನೆಯನ್ನು ಹೆಚ್ಚಿಸಿ ಕೊಂಡವು. ಇತ್ತೀಚಿನ ದಿನಗಳಲ್ಲಿ ಜಂಗಮ ಮಠಗಳು ಪ್ರಧಾನವಾಗಿ ಹೆಚ್ಚು ಶ್ರೀಮಂತ ವಾದವು. ಜನರೂ ತಮ್ಮ ತಮ್ಮ ಮಠಗಳ ಅಭಿವೃದ್ದಿಗೆ ಸೇವೆಯ ಬಂಡವಾಳವನ್ನು ಹಾಕಿ ಹೆಚ್ಚು ಪ್ರತಿಫಲ ಪಡೆಯುವ ವ್ಯಾವಹಾರಿಕ ಭಾವನೆ ಹೊಂದಿರುವುದು ಆಧುನೀಕರಣದ ಸಂಕೇತ. ಜಾತಿ, ಜಾತಿಯನ್ನು ಒಡೆದು ಆಳುವ ನೀತಿಯನ್ನು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಹೆಚ್ಚು ಬಳಸಿಕೊಂಡರು. ಈ ಪರಿಣಾಮಕಾರಿ ಬದಲಾವಣೆಯಿಂದ ಜಂಗಮ ಮಠಗಳು ವೈರಾಗ್ಯಕ್ಕೆ ವಿರುದ್ಧವಾಗಿ ಲೌಕಿಕ ಆಡಂಬರ, ಘನತೆ ಸ್ಥಾನ ಪಡೆಯುವ ಹಂಬಲದ ಸ್ಪರ್ಧಾತ್ಮಕ ಭಾವನೆಯನ್ನು ಹೊಂದಲು ಸಾಧ್ಯವಾಯಿತು. ಹಳೆಯ ಸಮಗ್ರ ಸಮುದಾಯದ ಭಾವನೆಗೆ ಭಿನ್ನವಾಗಿ ಸಂಕುಚಿತ ಉಪಜಾತಿಗಳ ಸಂಘಟನೆಗಳು ಹೆಚ್ಚು ಪ್ರಧಾನವಾದುವು. ಈ ಬದಲಾವಣೆಯು ಕುಲ, ಉಪಜಾತಿಗಳ ವಿಚ್ಛಿದ್ರಕಾರಿ ಮನೋಭಾವವನ್ನು ಹೆಚ್ಚು ಮಾಡಿತು. ಈ ದೆಸೆಯಲ್ಲಿ ಹಿಂದೂಗಳ ವಿವಿಧತೆಯಲ್ಲಿ ಏಕತೆಯನ್ನು ಉಂಟುಮಾಡುವುದು ಎಷ್ಟು ದುಸ್ತರವೋ ವೀರಶೈವರಲ್ಲೂ ಐಕ್ಯತೆ ಉಂಟು ಮಾಡುವುದು ಅಷ್ಟೇ ದುಸ್ತರ ವಾಯಿತು. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ವಚನಕಾರರ ಅಭಿಪ್ರಾಯ ಅನೇಕ ಶತಮಾನಗಳು ಕಳೆದ ಮೇಲೆ ಸತ್ಯವಾದರೂ ವ್ಯತಿರಿಕ್ತ ಸತ್ಯವಾಯಿತು.

ನಂಬಿಕೆ ಮತ್ತು ಆಚಾರಗಳು

ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸ ಶಿಕ್ಷಣಪದ್ಧತಿಗಳು ಧರ್ಮದ ಹಲವಾರು ನಂಬಿಕೆಗಳನ್ನು ಹುಸಿ ಮಾಡಿದವು. ವೀರಶೈವರಲ್ಲೂ ಪವಾಡಗಳು, ಅಂಧನಂಬಿಕೆಗಳು ಇದ್ದವು. ಇವುಗಳಲ್ಲಿ ಬದಲಾವಣೆ ಉಂಟಾಗಿದೆ. ಸಮಾಜದಲ್ಲಿ ಬದಲಾದ ವೃತ್ತಿ, ಕುಟುಂಬ, ಆಚಾರ, ವಿಚಾರಗಳಿಗನುಗುಣವಾಗಿ ಧಾರ್ಮಿಕ ರೀತಿನೀತಿಗಳು ಮಡಿ ಮೈಲಿಗೆಗಳು ನಿರ್ಬಂಧ ಗಳು ಬದಲಾವಣೆ ಪಡೆದುಕೊಂಡವು. ಆಧುನಿಕ ಸಮಾಜದ ಲಿಂಗವಂತರನ್ನು ಆಚಾರ ನಿಷ್ಠ ಭಾವನೆಯಿಂದ ಮೂರು ಭಾಗಗಳನ್ನಾಗಿ ವಿಭಾಗಿಸಿದ್ದಾರೆ. ಅವುಗಳೆಂದರೆ ವಿಶೇಷ, ನಿರಾಬಾರಿ ಮತ್ತು ಸಾಮಾನ್ಯ ವೀರಶೈವರೆಂದು, ಅಂದರೆ ತತ್ವಾನುಯಾಯಿಗಳು, ವೈರಾಗ್ಯ ಹೊಂದಿದ ಸನ್ಯಾಸಿಗಳು ಮತ್ತು ಲಿಂಗಧಾರಣೆ, ಲಿಂಗಪೂಜೆ ಭಸ್ಮಧಾರಣೆ ಹೊಂದಿದವರೆಂದು ತೀರ್ಮಾನಿಸಲಾಗಿದೆ. ವೀರಶೈವ ಧರ್ಮವು ಕಾಲಕಾಲಕ್ಕೆ ಹಿಂದೂ ಧರ್ಮ ಕೆಳಜಾತಿಯ ಜನರು ಧಾರ್ಮಿಕ ಸ್ವಾತಂತ್ರ್ಯಕ್ಕೆ ಮತ್ತು ಸಮಾನ ಅವಕಾಶಗಳನ್ನು ಅರಸಿ ಮತಾಂತರಗೊಂಡ ಜಾತಿ ಸಮುಚ್ಚಯದಿಂದ ಕೂಡಿದೆ. ಇದರಿಂದ ಈ ಸಾಮಾನ್ಯ ವೀರಶೈವರ ಆಚರಣೆಗಳು ಲಿಂಗಧಾರಣೆ, ಲಿಂಗಪೂಜೆ ಮತ್ತು ಭಸ್ಮಧಾರಣೆಗೆ ಮಾತ್ರ ಸೀಮಿತವಾಯಿತು. ಹಾಗೆ ಇವರಲ್ಲಿ ಅನೇಕರು ಲಿಂಗಪೂಜೆಯ ಜೊತೆಗೆ ತಮ್ಮ ಪೂರ್ವದ ಎಲ್ಲಾ ದೇವರ ಪೂಜೆ ಆಚರಣೆಯನ್ನು ಅನುಸರಿಸಿ ವೀರಶೈವ ಆಚರಣೆಗಳು ಅಪಭ್ರಂಶ ರೂಪ ತಾಳಿದವು. ಜಂಗಮ ಮಠಗಳೂ ವೈದಿಕ ಕಾರ್ಯ ನಡೆಸುವ ತರಬೇತಿ ನೀಡುವ ಕೇಂದ್ರಗಳಾದುವು. ಹಾಗೆ ಲಿಂಗಧಾರಣೆ, ಲಿಂಗಪೂಜೆ, ಭಸ್ಮಧಾರಣೆಯಲ್ಲೂ ಅನೇಕ ಬದಲಾವಣೆಗಳು ಉಂಟಾಗಿರುವುದು ವೇದ್ಯ.

ಧರ್ಮಕ್ಕೆ ನಂಬಿಕೆ ಮತ್ತು ಆಚರಣೆಗಳು ತಾತ್ವಿಕ ರೂಪದ ನಿವೇದನೆಗಳು. ಇವುಗಳಿಗೆ ಮಠಗಳೇ ಮೂಲ ಉಗಮಸ್ಥಾನಗಳು. ಇವು ಮಾನವನ ಜೀವನ ಮತ್ತು ಅಗೋಚರ ಶಕ್ತಿಗಳಿಗಿರುವ ಸೂಕ್ಷ್ಮ ಸಂಬಂಧವನ್ನು ಪ್ರತಿಬಿಂಬಿಸುವ ನಿವೇದನೆಗಳೇ ಆಚರಣೆಗಳು. ಜೀವ, ಪರಮಾತ್ಮನಲ್ಲಿ ಲೀನವಾಗುವ ಸಾರ್ವತ್ರಿಕ ಸತ್ಯ ಎಲ್ಲಾ ಧರ್ಮಗಳಲ್ಲಿ ಕಂಡು ಬರುತ್ತದೆ. ವೀರಶೈವ ಧರ್ಮವು ಲೌಕಿಕ ಜೀವನದ ಸತ್ಯ ಮಾರ್ಗವೇ ಅಲೌಕಿಕ ಆಧ್ಯಾತ್ಮಿಕ ಉನ್ನತಿಯ ಐಕ್ಯವೆಂಬುದನ್ನು ಸ್ಪಷ್ಟವಾಗಿ ಸರಳ ಸಿದ್ಧಾಂತಗಳಿಂದ ನಿರೂಪಿಸಿದೆ. ಈ ದೃಷ್ಟಿಯಲ್ಲಿ ವಚನಕಾರರು ಅತ್ಯಂತ ವಿನಮ್ರ ದೈನ್ಯತೆಯಿಂದ ಅಣ್ಣಾ, ಅಪ್ಪಾ ಎಂಬ ಸಂಬೋಧನೆಯ ಮಾನವೀಯ ಅಂತಃಕರಣದಿಂದ ಸತ್ಯವ ನುಡಿಯುವುದೇ ಸ್ವರ್ಗಲೋಕ ವೆಂದೂ, ಆಚಾರವೇ ಸ್ವರ್ಗ, ಅನಾಚಾರವೇ ನರಕವೆಂದು, ಕಾಯಕವೇ ಕೈಲಾಸವೆಂದು ತಿಳಿಸಿರುವುದು ಜೀವನದ ವಾಸ್ತವತೆಯ ಸ್ಪಷ್ಟ ಜ್ಞಾನವನ್ನು ನಿರೂಪಿಸಿದೆ. ಈ ಬದಲಾವಣೆಯ ಹಿಂದಿನ ತತ್ವ ಮಾರ್ಗಕ್ಕಿಂತ, ಮಠಗಳ ಆದೇಶಗಳಿಂದ ಭಿನ್ನವಾದುದು. ವೀರಶೈವರಲ್ಲಿ ಅಚಲ ಭಕ್ತಿ ನಿಷ್ಠೆಯ ಲಿಂಗ ಪೂಜೆ, ಲಿಂಗಧಾರಣೆ, ವಿಭೂತಿ ಧಾರಣೆ ಮೊದಲಾದವು, ಸಾಮಾನ್ಯ ನಂಬಿಕೆಯ ಆಚರಣೆಗಳಾಗಿವೆ. ಇವು ವೈದಿಕ ಆಚರಣೆಗಿಂತ ಭಿನ್ನಮಾರ್ಗಗಳೆಂದು ತಿಳಿಸಿದ್ದಾರೆ. ವಚನಕಾರರು ಸರಳ ಸತ್ಯ ಜೀವನ ಮಾರ್ಗ ಐಕ್ಯ ಸಾಧನೆಗೆ ಸೋಪಾನದೆಂದು ತಿಳಿಸಿದ್ದಾರೆ. ಇಷ್ಟ ಲಿಂಗಧಾರಣೆ ಜಗತ್ತಿನ ಎಲ್ಲಾ ಧರ್ಮಗಳಿಗಿಂತಲೂ ಶ್ರೇಷ್ಠ ಧರ್ಮ ಸಂಕೇತ ಮಾರ್ಗ. ಇದು ದೇವರನ್ನೆ ತನ್ನಲ್ಲಿ ಹೊಂದಿ, ನಿರಂತರ ಅಚಲ ನಿಷ್ಠೆಯ ಲಿಂಗ ಪ್ರಜ್ಞೆಯ ಸತ್ಯ ಜೀವನ ಮಾರ್ಗವನ್ನು ನಿರೂಪಿಸುವುದಾಗಿದೆ. ಆಧುನೀಕರಣದಿಂದಾಗಿ ಲಿಂಗಧಾರಣೆ, ಪೂಜೆ, ಭಸ್ಮಧಾರಣೆ ಮುಂತಾದು ವುಗಳಲ್ಲಿ ಬದಲಾವಣೆ ವ್ಯಕ್ತಿಯ ಜೀವನದ ಹೊಸ ಹೊಂದಾಣಿಕೆ ಅಥವಾ ವ್ಯವಸ್ಥೆಯ ಸ್ಥಿತ್ಯಂತರ ರೂಪ. ಈ ದೃಷ್ಟಿಯಲ್ಲಿ ತತ್ವಗಳಿಗೂ ಮತ್ತು ವಾಸ್ತವ ಜೀವನಕ್ಕೂ ಇರುವ ವ್ಯತ್ಯಾಸಗಳನ್ನು ಬದಲಾವಣೆ ನಿವೇದಿಸುತ್ತದೆ. ಹಿಂದಿ ಗಿಂತ ವಚನಕಾರರ ಮಾರ್ಗ ನಡೆ ನುಡಿಗಳೊಂದಾದ ಜೀವನ. ಆದರೆ ಇಂದು ಅತ್ಯಂತ ಪ್ರಯಾಸಕರ ಮಾರ್ಗ. ಈ ಆಧುನಿಕ ಸಾಮಾಜಿಕ ರೀತಿ ಕೇವಲ ವೀರಶೈವರಿಗೆ ಮಾತ್ರವಲ್ಲ ಜಗತ್ತಿನ ಎಲ್ಲಾ ಜನರಿಗೆ ಹಿಂದಿನ ಧರ್ಮತತ್ವ ನಿಷ್ಠೆಯ ಅನುಷ್ಠಾನ ಸಾಧ್ಯವಾಗದ ರೀತಿಯಾಗಿದೆ. ಇವು ಸಾರ್ವತ್ರಿಕ ಆದರ್ಶಗಳಾಗಿದ್ದರೂ ಆಚರಣೆ ಸಾಧ್ಯವಾಗುತ್ತಿಲ್ಲ. ಇಂದಿನ ಸಂಕೀರ್ಣ ಸಮಾಜದಲ್ಲಿ ನಂಬಿಕೆಗಳು ಸಾಪೇಕ್ಷವಾಗಿವೆ. ಇವು ಸಂದರ್ಭ, ಸನ್ನಿವೇಶಕ್ಕನು ಗುಣವಾಗಿ ನಿಷ್ಠೆಯನ್ನು ಬದಲಿಸುತ್ತವೆ. ದೇವರ ಮುಂದೆ ನಿಂತರೆ ಎಲ್ಲರೂ ನಿಷ್ಠಾ ಆಚರಣಕಾರರಾಗಿ ವರ್ತಿಸುತ್ತಾರೆ. ಆದರೆ ಸಮಾಜದ ವಿವಿಧ ಸನ್ನಿವೇಶದಲ್ಲಿ ಇವುಗಳ ನಿಷ್ಠೆ ಬದಲಾವಣೆ ಹೊಂದುತ್ತದೆ. ಇಂದಿನ ವ್ಯಕ್ತಿ ಹುಸಿಯನುಡಿಯಲು ಬೇಡ, ಅನ್ನದೊಳ ಗೊಂದಗಳ ಸೀರೆಯೊಳಗೊಂದೆಳೆಯ ಎಂಬ ನಿಷ್ಠೂರತತ್ವವನ್ನು ಆಚರಿಸಲು ಸಾಧ್ಯವಾಗು ವುದಿಲ್ಲ. ಧರ್ಮದಲ್ಲಿ ನಂಬಿಕೆ ವ್ಯಕ್ತಿಗತವಾದುದು, ಆಚರಣೆಗಳು ಸಾಮೂಹಿಕ ವಾದುವು, ಮೌಲ್ಯಗಳು ಸಮಗ್ರ ಸಮಾಜದ ಆಚರಣೆಗಳು. ಈ ಮೂರರ ಸಂಬಂಧವನ್ನೆ ಬಸವಪಥದ ಮಾನವೀಯ ಮೌಲ್ಯಗಳಾದ ಜಂಗಮ, ಗುರು, ಲಿಂಗ ಕಲ್ಪನೆಗಳಿಂದ ಸಾಮರಸ್ಯಪಡಿಸಿದ್ದರು. ಇಂದು ಮಠಗಳು ಲಿಂಗಪ್ರಜ್ಞೆಯ ನಿರಂತರ ದೈವಪ್ರಜ್ಞೆಯನ್ನು ಮನುಷ್ಯರಲ್ಲಿ ಉಂಟು ಮಾಡಿ ಮಾನವೀಯತೆಯ ಉತ್ಕೃಷ್ಟತೆಯನ್ನು ಉಂಟು ಮಾಡ ಬೇಕಾಗಿದೆ.

ವೀರಶೈವರಲ್ಲಿ ಬದಲಾವಣೆಯ ಸ್ತರಗಳು ವಿವಿಧ ಸ್ಥಿತಂತ್ಯರ ರೂಪ ಪಡೆದಿರುವುದು ಆಧುನೀಕರಣದ ಸಂಕೇತ. ಆದರೂ ಕೆಲವು ಮಠಗಳು ಇನ್ನೂ ಲಕುಲೀಶ ಶೈವರಂತೆ ಯಂತ್ರ, ತಂತ್ರ, ಮಾಟ ಮುಂತಾದ ಘೋರ ಆಚರಣೆಗಳನ್ನು ಅನುಸರಿಸುತ್ತಿರುವುದು ಉಪ ಸಂಸ್ಕೃತಿಯ ದ್ಯೋತಕವಾಗಿದೆ.

ಮಠದ ಉದ್ದೇಶಗಳು

ಮಠಗಳ ಪ್ರಮುಖ ಉದ್ದೇಶಗಳೆಂದರೆ

೧. ಧರ್ಮ ಬೋಧೆ ಮತ್ತು ಧರ್ಮಜ್ಞಾನ ಪ್ರಸಾರ

೨. ದಾಸೋಹ

೩. ನ್ಯಾಯ ನಿರ್ಣಯ

೪. ಸೇವಾ ಕಾರ್ಯಗಳು

ವೀರಶೈವ ಮಠಗಳ ಉದ್ದೇಶಗಳಲ್ಲಿ ಆಧುನೀಕರಣದಿಂದ ಉಂಟಾಗಿರುವ ಬದಲಾವಣೆ ಗಳನ್ನು ವಿಶ್ಲೇಷಿಸುವಾಗ ಜಂಗಮ ಮಠಗಳನ್ನು ತೆಗೆದುಕೊಳ್ಳುವುದು ಸೂಕ್ತ. ಏಕೆಂದರೆ ಮೂಲಮಠಗಳ ಮತ್ತು ಇದರ ಕೆಳಸ್ತರದ ಮಠಗಳು ವಿಘಟಿತವಾಗಿ ಕ್ಷೀಣಿಸಿರುವುದರಿಂದ ಅಲ್ಲಿಯ ಚಲನಶೀಲತೆ ಪ್ರಾತಿನಿಧಿಕವಾಗಿರುವುದಿಲ್ಲ, ಹಾಗೆ ಇವುಗಳ ಚಲನಶೀಲತೆ ಯನ್ನು ಸಂಘಟನೆಯಲ್ಲಿ ವಿವರಿಸಿರುವುದರಿಂದ ಇವುಗಳ ಅಗತ್ಯತೆ ಪುನಃ ಬರುವುದಿಲ್ಲ. ಮಠದ ಉದ್ದೇಶಗಳಲ್ಲಿ ಜಂಗಮ ಮಠದ ಪ್ರಮುಖ ಉದ್ದೇಶಗಳಲ್ಲಿ ಹೆಚ್ಚು ಆಧುನೀಕರಣ ಉಂಟಾಗಿರುವುದು ವ್ಯಕ್ತವಾಗುತ್ತದೆ.

ಧರ್ಮ ಬೋಧೆ ಮತ್ತು ಧರ್ಮಜ್ಞಾನ ಪ್ರಸಾರ

ಈ ಕಾರ್ಯ ಕಾಲಕಾಲಕ್ಕೆ ವಿವಿಧ ಸ್ತರದ ಬದಲಾವಣೆಯನ್ನು ಪಡೆದುಕೊಂಡಿದೆ. ವೀರಶೈವ ಧರ್ಮ ಪ್ರಾರಂಭದಲ್ಲಿ ರಾಜಾಶ್ರಯದಲ್ಲಿತ್ತು. ಇದರಿಂದ ಅನೇಕ ನಾಯಕರು ಮತ್ತು ವಿರಕ್ತರು ಧರ್ಮ ಭೋದೆ ಮತ್ತು ಧರ್ಮ ಪ್ರಸಾರವನ್ನು ತಮ್ಮ ಜೀವಿತ ಅವಧಿಯ ಪ್ರಮುಖ ಅರ್ಪಣಾ ಉದ್ದೇಶವೆಂದು ಪರಿಗಣಿಸಿದ್ದರು. ಜಂಗಮ ವಿರಕ್ತ ಮಠಗಳು ಮೂಲಮಠಗಳಿಗಿಂತ ಭಿನ್ನವಾಗಿ ತಮ್ಮ ಧರ್ಮಪ್ರಸಾರ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಿದವು. ಇಂದು ಹಿಂದಿಗಿಂತ ಸಾಹಿತ್ಯ, ಸಂಪರ್ಕ ಹೆಚ್ಚಾಗಿದೆ, ಸಂಪರ್ಕ ಸಾಧನಗಳೂ ಹೆಚ್ಚು ಕ್ರಿಯಾತ್ಮಕವಾಗಿವೆ. ಈ ಎಲ್ಲಾ ಉಪಜಾತಿಯ ಜಂಗಮ ಮಠಗಳು ತಮ್ಮ ಅನುಯಾಯಿಗಳ ಸಹಕಾರದಿಂದ ಹೆಚ್ಚು ತೀವ್ರವಾಗಿ ಮತ್ತು ಸಮರ್ಥವಾಗಿ ಧರ್ಮಜ್ಞಾನ ವನ್ನು ಯಶಸ್ವಿಯಾಗಿ ನಿರ್ವಹಿಸುತ್ತವೆ. ಆದರೆ ಇತ್ತೀಚಿನ ಯುವಕರಲ್ಲಿ ಧರ್ಮತತ್ವಗಳ ಬಗ್ಗೆ ಮತ್ತು ಇವುಗಳ ಆಚರಣೆಯ ಬಗ್ಗೆ ಕಾಳಜಿ ಕಡಿಮೆಯಾಗಿರುವುದು ಕಂಡುಬಂದಿದೆ. ಏಕೆಂದರೆ ಆಧುನೀಕರಣ ಜೀವನ ಉದ್ದೇಶಗಳು ಧರ್ಮದ ಉದ್ದೇಶಗಳಿಂದ ಭಿನ್ನವಾಗಿರು ವುದರಿಂದ ಇವುಗಳ ಬಗ್ಗೆ ಕಾಳಜಿ ಕಡಿಮೆಯಾಗಿದೆ. (ಅಂದರೆ ಪರಧನ ಒಲ್ಲೆನೆಂಬ ಬಸವಣ್ಣನವರ ಮಾತು ಇಂದಿನ ವ್ಯವಹಾರಸ್ಥರಿಗೆ ಮತ್ತು ಜೀವನ ಧರ್ಮಕ್ಕೆ ಪೂರಕ ವಾದುದಲ್ಲ).

ಹಿಂದೆ ಮೂಲಮಠಗಳು ಅನುಸರಿಸುತ್ತಿದ್ದ ಅಷ್ಟಾವರಣ ಪಂಚಾಚಾರ, ಷಟ್ಸ್‌ಸ್ಥಲ ಮಾರ್ಗಗಳು ಇಂದೂ ಪ್ರಸ್ತುತ ಆದರ್ಶವಾದರೂ ಇಂದಿನ ಜೀವನ ಉದ್ದೇಶಗಳಿಗೆ ಪೂರಕ ವಾಗಿಲ್ಲವೆಂಬುದು ಜೀವನ ಧರ್ಮದಲ್ಲಿ ವ್ಯಕ್ತವಾಗುತ್ತದೆ. ಇಂದು ತಮ್ಮ ತಮ್ಮ ಕುಲ, ಉಪ ಜಾತಿಗಳಲ್ಲೇ ಹೆಚ್ಚು ರಕ್ಷಣಾತ್ಮಕ ಪ್ರತ್ಯೇಕತೆಗಳು ಹೆಚ್ಚಾದಂತೆ, ತತ್ವಗಳಲ್ಲಿ ಬದಲಾವಣೆ ಉಂಟಾಗಿವೆ. ಆಧುನೀಕರಣವು ಜನರಲ್ಲಿ ಅಲೌಕಿಕತೆಗಿಂತಲೂ ಲೌಕಿಕ ಭೋಗ, ಭಾಗ್ಯ ಅವಕಾಶಗಳತ್ತ ಜನಸಾಮಾನ್ಯರ ಗಮನ ಹೆಚ್ಚಾಗಿರುವುದರಿಂದ ಧರ್ಮತತ್ವ ಪ್ರಚಾರ ನಿಯಮಿತ ವ್ಯಾಪಕತೆಯನ್ನು ಪಡೆದುಕೊಂಡಿದೆ. ಅಂದರೆ ಗುರಿಮುಟ್ಟಲು ಹಳೆಯಮಾರ್ಗ ಬಿಟ್ಟು ಹೊಸಮಾರ್ಗ ಅನುಸರಿಸುವಂತೆ ಇಂದು ಜನರು ಧರ್ಮಮಾರ್ಗ ಬಿಟ್ಟು ವ್ಯಾವಹಾರಿಕ ಮಾರ್ಗ ಅನುಸರಿಸುವ ಪ್ರವೃತ್ತಿ ಹೆಚ್ಚಾಗಿದೆ. ಚಲನಶೀಲ ಸಮಾಜದಲ್ಲಿ ಹಳೆಯ ಮೌಲ್ಯಗಳು ಬದಲಾವಣೆಯಾಗಿ ಲೌಕಿಕ ಒಪ್ಪಂದಗಳು, ಉಪಯೋಗಿ ಅವಕಾಶಗಳ ಕಡೆಗೆ ಜನರನ್ನು ಸೆಳೆಯುತ್ತವೆ. ಹಿಂದೆ ಮೋಸವೆಂದು ತೀರ್ಮಾನಿತ ನಡವಳಿಕೆಗಳು ಇಂದು ವ್ಯಾವಹಾರಿಕಗಳಾಗಿ ಪರಿಣಮಿಸಿವೆ. ಈ ಕಾರಣದಿಂದ ಇಂದು ಸಾವಿರಾರು ಮಠಗಳಿದ್ದರೂ, ಇವುಗಳು ಧರ್ಮ ಪ್ರಚಾರ ಮಾಡುವ ಅರ್ಪಣಾ ಮನೋಭಾವದ ಒಬ್ಬ ವ್ಯಕ್ತಿಯನ್ನು ತಯಾರು ಮಾಡಲು ಸಾಧ್ಯವಾಗಿಲ್ಲದಿರುವುದು ಆಧುನೀಕರಣದ ಸಂಕೇತವಾಗಿದೆ.

ದಾಸೋಹ

ತಾನು ದುಡಿದದ್ದನ್ನು ಎಲ್ಲರೊಂದಿಗೆ ಸಮಭಾವದಿಂದ ಹಂಚಿಕೊಳ್ಳುವುದನ್ನು ದಾಸೋಹ ವೆಂದು ಕರೆದಿದ್ದಾರೆ. ದಾನ ಯಜಮಾನ ಸಂಸ್ಕೃತಿಯ ಪ್ರತೀಕ. ದಾಸೋಹ ಸಮಾನತೆಯ ಸಂಸ್ಕೃತಿಯ ಸಂಕೇತ. ಪೂಜೆ, ಪ್ರಸಾದ, ಪ್ರವಚನ ಲಿಂಗವಂತರ ಶ್ರೇಷ್ಠ ಆಚಾರಗಳು. ಹಿಂದೆ ಮಠಗಳು ಅನ್ನ ಛತ್ರಗಳಾಗಿ ಪರಿವರ್ತನೆಗೊಂಡವು. ಸಾಧು ಸಂತರಿಗೆ, ಯಾತ್ರಾರ್ಥಿ ಗಳಿಗೆ, ಜಂಗಮರಿಗೆ ದಾಸೋಹ ನಡೆಸುವುದು ಕಾಯಕ ಧರ್ಮವಾಗಿತ್ತು. ಮಠಗಳು ಉಚಿತ ದಾಸೋಹ ಕಾಯಕವನ್ನು ಮಠದ ಪ್ರಮುಖ ಕಾರ್ಯಗಳೆಂದು ನಿರ್ಧರಿಸಿದ್ದವು. ಶಿಷ್ಯಾರ್ಜನೆ ಮತ್ತು ಗಣಾಚಾರಿಗಳಿಗೆ ಊಟೋಪಚಾರ ನಡೆಸುವುದು ಲಿಂಗವಂತನ ಧರ್ಮವಾಗಿತ್ತು. ಈ ಪರಂಪರೆಯಲ್ಲಿ ಇಂದಿಗೂ ಅನೇಕ ಮಠಗಳು ಪರಸ್ಥಳದ ವರ್ತಕರಿಗೆ ಜಂಗಮರಿಗೆ ಅನ್ನದಾನ ನೀಡುವ ಮಠಗಳು ಮಾನ್ಯ ಹೊಂದಿದ್ದವು. ಇಂದಿಗೂ ಅನೇಕ ಮಠಗಳು ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಅಶನವಶನ ನೀಡುವ ಕೇಂದ್ರಗಳಾಗಿವೆ. ಈ ದಿಸೆಯಲ್ಲಿ ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಪಟ್ಟಣಗಳಲ್ಲಿ ಮುರುಘಾ ಮಠದವರು ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿರುವುದು ಗಮನಾರ್ಹ ಸಂಗತಿ ಆಧುನೀಕರಣದ ಅಂಶವಾಗಿದೆ. ಈ ದಿಸೆಯಲ್ಲಿ ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಾ ಮಠವು ಪ್ರತಿದಿನ ಯಾತ್ರಾರ್ಥಿಗಳಿಗೆಲ್ಲದೆ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ದಾಸೋಹ ನೀಡುತ್ತಿರುವುದು ವಿಶೇಷ ಸಂಗತಿಯಾಗಿದೆ. ಹಾಗೆ ಕರ್ನಾಟಕದಲ್ಲಿ ವೀರಶೈವ ಮಠಗಳು ದಾಸೋಹ ಕಾಯಕದಲ್ಲಿ ಏಕಮೇವತೆ ಸಾಧಿಸಿರುವುದು ಸ್ತುತ್ಯರ್ಹ. ಊರ ಮಠಗಳು ನಡೆಸುತ್ತಿದ್ದ ಪ್ರಸಾದ ಕಾರ್ಯಗಳು ನಿಂತು ಹೋಗಿವೆ. ಇತ್ತೀಚಿನ ದುಬಾರಿ ದಿನಗಳಲ್ಲಿ ತಮ್ಮ ಸಂಸಾರ ವ್ಯವಸ್ಥೆಯನ್ನು ನಿರ್ವಹಿಸುವುದೇ ದುಸ್ತರವಾಗಿರುವಾಗ ದಾಸೋಹ ನಡೆಸುವುದು ಕಷ್ಟಕರ ಸಂಗತಿಯಾಗಿದೆ. ಈ ದಾಸೋಹ ಸ್ಥಗಿತ ಸಾಂಕೇತಿಕವಾಗಿ ಸಂಘಟನೆಯಲ್ಲಿ ದುರ್ಬಲತೆ ಯನ್ನು ಉಂಟುಮಾಡಿದೆ. ಅನೇಕ ಮಠಗಳು ಪ್ರಾದೇಶಿಕವಾಗಿ ಭಕ್ತರನ್ನೆ ಆಶ್ರಯಿಸಿ ದಾಸೋಹ ನಡೆಸುತ್ತಿದ್ದವು. ಈಗ ಭಕ್ತರೇ ಮಠಗಳನ್ನು ದಾಸೋಹಕ್ಕಾಗಿ ನಂಬಿರುವುದು ವಿಪರ್ಯಾಸವಾಗಿದೆ, ಬದಲಾವಣೆಯ ಅಂಶವಾಗಿದೆ. ಅನೇಕ ಮಠಗಳು ಮಹಾರಾಜರ ಕಾಲಕ್ಕಾಗಲೇ ಮಠದ ವ್ಯವಸ್ಥೆಗೆ ಅನುದಾನ ಅರಿಕೆಗಳನ್ನು ಜಯಚಾಮ ರಾಜೇಂದ್ರ ಒಡೆಯರಿಗೆ ಸಲ್ಲಿಸಿದ್ದವು. ಈಗ ಮಠಗಳು ಸರ್ಕಾರದ ಅನುದಾನಕ್ಕೆ ಅವಲಂಬಿಸಿ ರುವುದು ಅನಿವಾರ್ಯ ವಾಗಿದೆ. ಉಚಿತ ದಾಸೋಹ ಆಚರಣೆ ಆದರ್ಶವಾದರೂ ಇಂದು ಹೊರೆಯಾಗುವುದು ಕಂಡು ಬರುತ್ತದೆ.

ನ್ಯಾಯ ನಿರ್ಣಯ

ಮಠಗಳು ಗುರುವಿನ ಪ್ರಭುತ್ವದ ಸಂಕೇತಗಳಾಗಿದ್ದವು. ವೀರಶೈವರಲ್ಲಿ ಗುರುವಿಗೆ ಅತ್ಯಂತ ಶೇಷ್ಠ ಗೌರವ ಸ್ಥಾನ ನೀಡಲಾಗಿದೆ. ರಾಜರುಗಳೂ ಸಹ ಗುರುವಿನ ಆಣತಿಯಂತೆ ನಡೆಯು ತ್ತಿದ್ದರು. ಇದಕ್ಕಾಗಿಯೇ ಇವರನ್ನು ರಾಜಗುರುಗಳೆಂದು ಕರೆಯುತ್ತಿದ್ದರು. ಗುರುಗಳು ಲಿಂಗವಂತರ ಆಚಾರ, ವಿಚಾರ, ವ್ಯವಹಾರಗಳೆಲ್ಲವನ್ನು ತೀರ್ಮಾನಿಸುವ ಅಧಿಕಾರ ಹೊಂದಿ ದ್ದರು. ಗುರುಗಳ ಆಣೆ ಇಟ್ಟು ಹೇಳುವುದೇ ಸತ್ಯವೆಂದು ನಿರ್ಧರಿಸುತ್ತಿದ್ದರು. ಊರಿನ ಮಠದಯ್ಯಗಳು ಲಿಂಗವಂತರ ಎಲ್ಲಾ ದೂರು ದುಮ್ಮಾನಗಳನ್ನು ಆಲಿಸಿ ನಿಷ್ಪಕ್ಷವಾದ ನಿರ್ಣಯವನ್ನು ನೀಡುತ್ತಿದ್ದರು. ಹಾಗೆ ಕಾಯಕದಯ್ಯಗಳೂ ಸಹ ದುಮಾರ್ಗಿಗಳನ್ನು ಸನ್ಮಾರ್ಗಕ್ಕೆ ತರುವಲ್ಲಿ ತಮ್ಮ ಒತ್ತಡದ ಸತ್ಯಾಗ್ರಹ ಮಾರ್ಗಗಳನ್ನು ಅನುಸರಿಸುತ್ತಿದ್ದರು.

ಆಧುನೀಕರಣಗೊಂಡಂತೆ ಈ ಮಠಗಳ ನ್ಯಾಯನಿರ್ಣಯ ಮಾರ್ಗಗಗಳು ತಮ್ಮ ಪ್ರಭಾವವನ್ನು ಕಳೆದುಕೊಂಡವು. ಮಠಗಳೂ ಸಂಕುಚಿತವಾದಾಗ, ಮಠಪತಿಯ ವ್ಯಕ್ತಿತ್ವವು ಕ್ಷೀಣಗೊಂಡಾಗ ಪ್ರಭುತ್ವವೂ ಕ್ಷೀಣಗೊಳ್ಳುತ್ತದೆ. ಹಾಗೆ ಶಿಕ್ಷಣ ಮತ್ತು ರಾಜಕೀಯ ಚಟುವಟಿಕೆ ಗ್ರಾಮ ಮಟ್ಟದಲ್ಲಿ ಹೆಚ್ಚಾದಂತೆ ಮಠಗಳು ನ್ಯಾಯ ನಿರ್ಣಯ ಅಧಿಕಾರವನ್ನು ಕಳೆದುಕೊಂಡವು. ಹೊಸ ಸರ್ಕಾರದ ನ್ಯಾಯವ್ಯವಸ್ಥೆ ಪರ್ಯಾಯವಾದಾಗ ಮಠಗಳು ತಮ್ಮ ನ್ಯಾಯನಿರ್ಣಯ ಅಧಿಕಾರವನ್ನು ಕಳೆದುಕೊಂಡವು. ಮಠಗಳು ರಾಜಕೀಯವಾಗಿ ಹೆಚ್ಚು ಕ್ರಿಯಾಶೀಲವಾದಾಗ ಪ್ರಭುತ್ವ ಗುರುಗಳಿಗೆ ತಲೆಬಾಗುತ್ತದೆ. ಆಧುನೀಕರಣದ ದೆಸೆಯಿಂದಾಗಿ ಅನೇಕ ಮಠದ ವ್ಯಾಜ್ಯಗಳು ಗುರುತ್ವದ ಬಗ್ಗೆ, ಆಸ್ತಿಯ ಬಗ್ಗೆ ಮತ್ತು ಆಡಳಿತದ ಬಗ್ಗೆ ನ್ಯಾಯಾಲಯದಲ್ಲಿವೆ.

ಸೇವಾ ಕಾರ್ಯಗಳು

ಆಧುನೀಕರಣಗೊಂಡ ವಿರಕ್ತಮಠಗಳು ಹೆಚ್ಚು ಸೇವಾ ಕಾರ್ಯಗಳನ್ನು ಕೈಗೊಂಡಿವೆ. ಮೂಲಮಠಗಳು ಮತ್ತು ಇದರ ಶಾಖಾಮಠಗಳು ಏಣಿಶ್ರೇಣೀಕೃತ ಆಧಾರದ ಮೇಲೆ ಧಾರ್ಮಿಕ ಜೀವನ ವ್ಯವಸ್ಥೆಯನ್ನು ನಿರ್ಧರಿಸುತ್ತಿದ್ದವು. ಹಾಗೆ ಗ್ರಾಮ ಮಟ್ಟದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಪೌರೋಹಿತ್ಯದ ಪ್ರಕಾರ ನಡೆಸುತ್ತಿದ್ದರು. ಪ್ರಸ್ತುತ ಜಂಗಮ ಮಠಗಳು ಆಧುನೀಕರಣದಿಂದ ತಮ್ಮ ರಚನೆ, ಕಾರ್ಯ ಮತ್ತು ಸ್ವರೂಪದಲ್ಲಿ ಹೆಚ್ಚು ಬದಲಾವಣೆಗೆ ಒಳಗಾದವು. ವಿರಕ್ತರು-ಸರ್ವಸಂಗ ಪರಿತ್ಯಾಗಿಗಳು ಇವರು ಅಲೌಕಿಕ ಆಧ್ಯಾತ್ಮಿಕ ಉನ್ನತಿ ಪಡೆಯುವುದು ಪರಮ ಗುರಿಯಾಗಿತ್ತು, ಆದರೆ ಇಂದು ವಿರಕ್ತರು ಲೌಕಿಕ ಸೇವೆಯನ್ನು ಒದಗಿಸುವ ಪ್ರಮುಖ ನಿಯೋಗಗಳಾಗಿರುವುದು ವೇದ್ಯ. ಪ್ರಾರಂಭದಲ್ಲಿ ವಿರಕ್ತರನ್ನು ವೀರಶೈವರ ಹೊಸ ಗುರುವರ್ಗವೆಂದು ಕರೆದಿದ್ದರು. ಆದರೆ ಇಂದು ಈ ವರ್ಗ ವಿರಕ್ತರಿಗಿಂತ ಭಿನ್ನವಾದ ಹೊಸ ಗುರುವರ್ಗ ಅಸ್ತಿತ್ವಕ್ಕೆ ಬಂದಿದೆ. ಊರುಗಳಿಂದ ದೂರವಿದ್ದ ವಿರಕ್ತರು ತಮ್ಮಲ್ಲಿಯೇ ಊರನ್ನು ಸ್ಥಾಪಿಸಿಕೊಂಡರು, ಇಲ್ಲವೇ ಕೆಲವರು ಊರು ಸೇರಿಕೊಂಡರು. ಪ್ರಸ್ತುತ ಸಮಾಜ ಸನ್ನಿವೇಶದಲ್ಲಿ ಮಠಗಳ ಆಸ್ತಿತ್ವ ಉಳಿದಿರುವುದು ಸಂಪತ್ತು ಮತ್ತು ಸೇವೆಗಳಿಂದ ಎಂಬುದು ವಾಸ್ತವ ಸಂಗತಿ ಯಾಗಿದೆ. ಇಂದು ಅನೇಕ ಜಂಗಮ ಮಠಗಳು ಸಂಪನ್ಮೂಲವಿಲ್ಲದೆ, ಸಮರ್ಥ ಗುರುವಿಲ್ಲದೆ ಜೀರ್ಣಾವಸ್ಥೆ ತಲುಪಿವೆ. ಸ್ವಾಮಿಗಳು ಕೇವಲ ಭಕ್ತರನ್ನೇ ಅವಲಂಬಿಸುವ ಕಾಲ ಕಳೆದು ಹೋಯಿತು. ಈ ಉದ್ದೇಶದಿಂದ ಜಂಗಮ ಮಠಗಳು ಜನಪ್ರಿಯ ಜನೋಪಯೋಗಿ ಕಾರ್ಯಗಳನ್ನು ಸಮಾಜಮುಖಿಯಾಗಿ ನಿರ್ಧರಿಸಿ ಕೊಂಡಿರುವುದು ಆಧುನೀಕರಣದ ಸಂಕೇತ. ವಿರಕ್ತ ಮಠಗಳು ಸ್ಥೂಲವಾಗಿ ನಿರ್ವಹಿಸುತ್ತಿರುವ ಸೇವಾ ಕಾರ್ಯಗಳೆಂದರೆ;

೧. ವಿದ್ಯಾ ಪ್ರಸಾರ

೨. ದಾಸೋಹ ನಿಲಯಗಳು ಮತ್ತು ವಿದ್ಯಾರ್ಥಿ ನಿಲಯಗಳು

೩. ಆರೋಗ್ಯ ಕಾರ್ಯಕ್ರಮಗಳು

೪. ಸಾಹಿತ್ಯ ಪ್ರಕಾಶನಗಳು

ಧರ್ಮ ವೈರಾಗ್ಯ ಪರವಾಗಿದ್ದ ಜಂಗಮ ಮಠಗಳು ಜನಪರವಾದುವು, ಜನರ ಆಶೋತ್ತರ ಗಳನ್ನು ಲೌಕಿಕವಾಗಿ ಈಡೇರಿಸಿ ಜನಗಳನ್ನೆ ಆಕರ್ಷಿಸಿ ಸಂಘಟಿಸಿದವು. ಸೇವಾ ಕಾರ್ಯಗಳು ಬದಲಾದ ಜನಗಳ ಉದ್ದೇಶ ಪೂರೈಕೆ ಮತ್ತು ಸಂಘಟನೆಗೆ ಅವಶ್ಯಕವಾಗಿ ಕಂಡುಬಂದಿವೆ.

ಆಧುನೀಕರಣದಿಂದಾಗಿ ಜನರು ಮೂಲಮಠಗಳ ವೈದಿಕ ಮತ್ತು ಧಾರ್ಮಿಕ ಕಾರ್ಯ ಗಳಿಂದ ವಿಮುಖರಾದಾಗ ವಿರಕ್ತ ಜಂಗಮ ಮಠಗಳು ಪ್ರಸ್ತುತ ಜನರ ಹೊಸ ಅಗತ್ಯಗಳನ್ನು ಈಡೇರಿಸಲು ಸೇವಾ ಕಾರ್ಯಗಳ ನಿರ್ವಹಣೆ ಜನಾಕರ್ಷಿತವಾಯಿತು.

ಪೂರ್ವದಿಂದಲೂ ವೀರಶೈವ ಮಠಗಳು ಧಾರ್ಮಿಕ ತತ್ವಜ್ಞಾನ ಪ್ರಸಾರ ಮಾಡುವ ಕೇಂದ್ರಗಳಾಗಿದ್ದವು. ವಿರಕ್ತರೂ ಸಹ ಪೂಜೆ, ನೇಮ, ನಿಷ್ಠೆ ಮತ್ತು ಅನುಷ್ಠಾನದಲ್ಲಿ ತೊಡಗಿ ಐಕ್ಯ ಪಡೆಯುವ ಮಹದುದ್ದೇಶ ಹೊಂದಿದ್ದರು.

ಆಧುನೀಕರಣದ ವಿವಿಧ ಹಂತಗಳಲ್ಲಿ ಧರ್ಮಜ್ಞಾನ ಪ್ರಸಾರದಿಂದ ಲೌಕಿಕ ಅಗತ್ಯ ಜ್ಞಾನ ಪ್ರಸಾರ ಮಾಡುವ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದರು. ಮೊದಲು ಸಂಸ್ಕೃತ ಪಾಠಶಾಲೆ ಗಳನ್ನು ಆರಂಭಿಸಿ ವೈದಿಕ ಕ್ರಿಯಾವಿಧಿ ಆಚರಿಸುತ್ತಿದ್ದವು, ತದನಂತರ ಶಾಲಾ ಕಾಲೇಜುಗಳನ್ನು ಸ್ಥಾಪಿಸಿದರು. ಈ ಶಾಲಾ ಕಾಲೇಜುಗಳ ಪಠ್ಯಕ್ರಮ ಧರ್ಮಪರವಾಗಿರದೆ ವಿಜ್ಞಾನ ತಂತ್ರಜ್ಞಾನ ಹೊಸ ತತ್ವಗಳನ್ನು ನೀಡುವ ಜಾತ್ಯತೀತ ಧರ್ಮಾತೀತ ಕೇಂದ್ರಗಳಾದವು. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ, ದಾಸೋಹದಲ್ಲಿ ಹೊಸ ಆಯಾಮವನ್ನು ಉಂಟುಮಾಡಿದರು. ಈ ವಿದ್ಯಾಸಂಸ್ಥೆಗಳು ಮಠಗಳ ಸಂಪನ್ಮೂಲಗಳ ಹೆಚ್ಚಿಸುವುದಲ್ಲದೆ ಜನರನ್ನು ಆಕರ್ಷಿಸಿ ಸಂಘಟಿಸಿದವು. ಇದು ಮಠದ ಧಾರ್ಮಿಕ ಕಾರ್ಯ ಗಳಲ್ಲಿ ಹೆಚ್ಚು ಜನರು ಸಾರ್ವಜನಿಕವಾಗಿ ಸೇರುವುದು, ಅಭಿವೃದ್ದಿ ಕಾರ್ಯಗಳನ್ನು ನಡೆಸುವುದು ಮಠದ ಘನತೆ, ಸ್ಥಾನ ಮತ್ತು ಪ್ರಭಾವ ಹೆಚ್ಚಾಗಲು ಕಾರಣವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಅಲೌಕಿಕ ಗುರಿಗೆ ಲೌಕಿಕ ಸಾಧನೆಗಳ ಅವಲಂಬನೆ ಅನಿವಾರ್ಯ ಮತ್ತು ಅಗತ್ಯವಾಯಿತು. ಇಂದು ಮಠದ ಎಲ್ಲಾ ಕಾರ್ಯ ನಿರ್ವಹಣೆಗೆ ಸಂಪನ್ಮೂಲಗಳಿಗೆ ಸರ್ಕಾರವನ್ನು, ಸ್ವಯಂ ಸೇವಾ ಸಂಘಟನೆಗಳನ್ನು, ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಅವಲಂಬಿಸುವುದು ಅನಿವಾರ್ಯವಾಯಿತು. ಈ ಸಂಕೀರ್ಣ ಸಂಬಂಧದಿಂದ ರಾಜಕಾರಣಿಗಳ ಮತ್ತು ಸರ್ಕಾರಿ ಅಧಿಕಾರಿಗಳ ಸಖ್ಯ ಮತ್ತು ಒಡನಾಟ ಹೆಚ್ಚಾಯಿತು. ಆಯಾ ರಾಜಕಾರಣಿ ಗಳನ್ನು ತಮ್ಮ ತಮ್ಮ ಧರ್ಮ, ಜಾತಿ, ಉಪಜಾತಿಗಳಿಗೆ ಸರ್ಕಾರದ ಅನುಕೂಲಗಳನ್ನು ಕೊಡಿಸಿ ಮಠದ ಕೃಪೆಗೆ ಪಾತ್ರರಾದರು ಮತ್ತು ಪ್ರಮುಖರಾದರು. ಈ ಹಂತದಲ್ಲಿ ಮಠದ ಧಾರ್ಮಿಕ ಭಾವನೆಗಳು ತತ್ವಗಳು ಆದರ್ಶಗಳು ಮೂಲೆಗುಂಪಾದವು. ಹಾಗೆ ಅನೇಕ ಮಠಗಳು ಉಪಕಾರ ಸ್ಮರಣೆಯಿಂದ ರಾಜಕಾರಣಿಗಳಿಗೆ ಸಹಾಯ ಮಾಡುವುದು ತಮ್ಮ ಬೆಂಬಲಿಗರಿಂದ ಚುನಾವಣೆಯಲ್ಲಿ ಪ್ರಭಾವ ಬೀರುವುದು ಸಾಮಾನ್ಯವಾಯಿತು. ಇದರಿಂದ ಮಠಗಳು ಪತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಬದಲಾದ ಹೊಸ ಅಪಭ್ರಂಶ ಮೌಲ್ಯಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ವಾಯಿತು. ವಿರಕ್ತ ನಿರಾಬಾರಿ ಜಂಗಮರು ಆಧ್ಯಾತ್ಮಿಕ ಜ್ಞಾನ ಸಂಪಾದನೆಗಾಗಿ ಏಕಾಂತತೆಯನ್ನು ಹೊಂದಬೇಕಾಗಿದ್ದ ಗುರುಗಳು, ಬಿಡುವಿಲ್ಲದ ಆಡಳಿತ, ಜನಸಂಪರ್ಕ, ಆಡಂಬರದ ಸಭೆ ಸಮಾರಂಭಗಳಲ್ಲಿ ತೊಡಗುವುದು ಅಂತಸ್ತಿನ ಸಂಕೇತವಾಯಿತು. ಇತ್ತೀಚಿನ ದಿನಗಳಲ್ಲಿ ಆಡಂಬರದ ಕಾರ್ಯಕ್ರಮಗಳನ್ನು ಸ್ಪರ್ಧಾತ್ಮಕವಾಗಿ ನಡೆಸುವುದು ಎಲ್ಲಾ ವಿರಕ್ತ ಮಠಗಳಲ್ಲಿ ಕಂಡುಬರುತ್ತಿದೆ. ಪ್ರಸ್ತುತ ಎಲ್ಲಾ ಧರ್ಮದ, ಜಾತಿಯ ಮಠಗಳು ಅದ್ದೂರಿಯ ಆಡಂಬರದ ಸಮಾರಂಭಗಳನ್ನು ನಡೆಸುವುದು ಮಠಗಳ ಘನತೆ ಅಂತಸ್ತುನ್ನು ಹೆಚ್ಚಿಸುವ ಸಂಕೇತಗಳಾಗಿವೆ.

ದಾಸೋಹ ನಿಲಯಗಳು

ಮೂಲದಿಂದ  ವೀರಶೈವ ಮಠಗಳು ಏಣಿಶ್ರೇಣೀಕೃತ ವ್ಯವಸ್ಥೆಯಿಂದ ಗಣಾಚಾರಕ್ಕೆ ಗಣಾರಾಧನೆ ನಡೆಸುವ ಉದ್ದೇಶದಿಂದ ದಾಸೋಹ ನಡೆಸುತ್ತಿದ್ದವು. ಹಿಂದೆ ರಾಜಾಶ್ರಯ ವಿದ್ದಾಗ ಮಠಗಳ ದಾಸೋಹ ನಿರಂತರತೆಗೆ “ಮಾನ್ಯ” (ಭೂಮಿ)ವನ್ನು ನೀಡಲಾಗಿತ್ತು. ಇಂದಿನ ಸರಕಾರದ ಹೊಸ ಕಾನೂನಿಂದ ಬಹುತೇಕ ಊರ ಮಠಗಳ ಆಸ್ತಿ ಸ್ವಂತ ಆಸ್ತಿ ಗಳಾದವು, ಹಿರೇಮಠಗಳು ಪರಭಾರೆಯಾದವು ಇಲ್ಲವೇ ಒತ್ತುವರಿಯಾದವು. ಈ ಕಾರಣದಿಂದ ದಾಸೋಹಕ್ಕೆ ಸಂಪನ್ಮೂಲ ಇಲ್ಲವಾಯಿತು. ಪ್ರಸ್ತುತ ಇತ್ತೀಚಿನ ಮಠಗಳು ಪಟ್ಟಣದಲ್ಲಿ ಸ್ವಧರ್ಮೀಯರ ದತ್ತಿದಾನದಿಂದ ವಿದ್ಯಾರ್ಥಿ ನಿಲಯಗಳನ್ನು ನಡೆಸುತ್ತವೆ. ಅನೇಕ ಮಠಗಳು ಸರ್ಕಾರದ ಅನುದಾನ ಪಡೆದು ವಿದ್ಯಾರ್ಥಿಗಳಿಗೆ ಅಶನವಶನ ನೀಡುತ್ತವೆ. ಕರ್ನಾಟಕದಲ್ಲಿ ಸಾಮಾನ್ಯರ ವಿದ್ಯಾಭಿವೃದ್ದಿ ಗೋಸ್ಕರ ವೀರಶೈವ ಮಠಗಳ ಶ್ರಮ ಆದರ್ಶ ವಾದುದ್ದು ಮತ್ತು ಅನುಕರಣೀಯವಾದದ್ದು. ಹಾಗೆ ಇತ್ತೀಚೆಗೆ ಮಠಗಳು ಕಲ್ಯಾಣ ಮಂಟಪಗಳನ್ನು ಕಟ್ಟಿಸಿ ವಿವಾಹಕ್ಕೆ ಸಹಾಯವಾಗುತ್ತವೆ. ಹಾಗೆ ಹಲವಾರು ಮಠಗಳು ಸಾಮೂಹಿಕ ವಿವಾಹಗಳನ್ನು ನಡೆಸಿ ಉಪಯೋಗಿಯಾಗಿವೆ. ಹಾಗೆ ಕೆಲವು ಮಠಗಳು ಧಾರ್ಮಿಕ ಆಚರಣೆಗಳಾದ ಲಿಂಗದೀಕ್ಷೆ, ಪ್ರವಚನಗಳನ್ನು ಸಾಂಕೇತಿಕವಾಗಿ ನಿರ್ವಹಿಸುತ್ತವೆ.

ಆರೋಗ್ಯ ಕಾರ್ಯಕ್ರಮಗಳು

ಪೂರ್ವದಿಂದಲೂ ಅನೇಕ ಮಠದ ಸ್ವಾಮಿಗಳು ಪರಂಪರಾನುಗತವಾಗಿ ಯಂತ್ರ, ಮಂತ್ರ ಸಿದ್ದಿ ಮಾಡಿಕೊಂಡಿರುವುದರ ಜೊತೆಗೆ ಆಯುರ್ವೇದ  ವೈದ್ಯೋಪಚಾರ ನಡೆಸಿ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಹಾಗೆ ಹಿಂದೆ ಪ್ಲೇಗು, ಕಾಲರಾ  ಮುಂತಾದ ಸಾಂಕ್ರಾಮಿಕ ರೋಗಗಳು ಬಂದಾಗಲೂ ಜನರಿಗೆ ಅರಿವು ನೀಡಿ ರೋಗ ನಿರ್ಬಂಧಕ ಕ್ರಮಗಳನ್ನು ಅನುಸರಿಸುವಂತೆ ಸಹಾಯ, ಆಶ್ರಯ, ಸಲಹೆ ನೀಡುತ್ತಿದ್ದರು. ಇತ್ತೀಚಿನ ಮಠಗಳು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಇಲ್ಲಿರುವ ನುರಿತ ವೈದ್ಯರ ಸಹಾಯ ದಿಂದ ಉಚಿತ ರೋಗ ತಪಾಸಣಾ ಮತ್ತು ಔಷಧಿ ನೀಡುವ ಶಿಬಿರಗಳನ್ನು ನಡೆಸುತ್ತವೆ. ಈ ಆರೋಗ್ಯ ಕಾರ್ಯ ಕ್ರಮಗಳು ಸಾಮಾನ್ಯರಿಗೆ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಉಪಯೋಗಿಯಾಗಿವೆ.

ಧರ್ಮ ಸಾಹಿತ್ಯ ಪ್ರಕಾಶನಗಳು

ಆಧುನೀಕರಣದ ಪ್ರಭಾವದಿಂದಾಗಿ ಸರ್ಕಾರ ಮತ್ತು ಸಾರ್ವಜನಿಕ ಸಂಘ ಸಮೂಹಗಳು, ವಿಶ್ವವಿದ್ಯಾನಿಲಯದ ಅಧ್ಯಾಪಕರುಗಳು ವೀರಶೈವ ಧರ್ಮ ಸಾಹಿತ್ಯದ ಅಭಿವೃದ್ದಿಗೆ ಹೆಚ್ಚು ಕೊಡುಗೆಗಳನ್ನು ನೀಡಿದ್ದಾರೆ. ವಿರಕ್ತ ಮಠಗಳು ಬಸವ ಪಥದ ಮಾರ್ಗಾನುಯಾಯಿಗಳಾ ಗಿದ್ದರೂ ವಚನ ಪ್ರಚಾರ ಮತ್ತು ಪ್ರಕಟಣೆಗಳನ್ನು ಹೆಚ್ಚು ಮಾಡಿಲ್ಲ. ಆದರೆ ಅನೇಕ ಮಠಗಳು ತಮ್ಮ ಮಠದ ನಿಯತಕಾಲಿಕೆಗಳಲ್ಲಿ ಮತ್ತು ನೆನಪಿನ ಸಂಚಿಕೆಗಳಲ್ಲಿ ತಮ್ಮ ತಮ್ಮ ಮಠಗಳ ವಿಶೇಷತೆಯನ್ನು ಪ್ರಕಟಿಸುವುದರ ಜೊತೆಗೆ ವಚನಗಳನ್ನು ಪ್ರಕಟಿಸಿದ್ದಾರೆ. ಇನ್ನೂ ಕೆಲವು ಮಠಗಳು ವಚನಗಳ ಅಂಕಿತ ತಿರುಚಿ ಸಾರ್ವಜನಿಕರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ತುಮಕೂರು ಜಿಲ್ಲೆಯ ಶ್ರೀ ಸಿದ್ಧಗಂಗಾಮಠದವರು ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ನಿರ್ವಹಿಸುವ ಸಲುವಾಗಿ ಉಪನ್ಯಾಸ ಮತ್ತು ನಾಟಕಗಳನ್ನು ನಿರ್ವಹಿಸುತ್ತಿದ್ದಾರೆ. ಹಾಗೆ ಚಿತ್ರದುರ್ಗದ ಮುರುಘಾ ಮಠದವರು “ಜಮುರಾ” ವಚನಗಾಯನ ತಂಡವನ್ನು ಸ್ಥಾಪಿಸಿ ವಚನ ಪ್ರಚಾರದಲ್ಲಿ ಒಂದು ಹೊಸ ಆಯಾಮವನ್ನು ಉಂಟು ಮಾಡಿದ್ದಾರೆ. ಅನೇಕ ಮಠಗಳು ವರ್ಷಕ್ಕೊಂದಾವರ್ತಿ ಬಸವ ಜಯಂತಿ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸುತ್ತಿವೆ. ಆಧುನೀಕರಣ ಪ್ರಭಾವದಿಂದ ಮಠಗಳು ಸಂಕುಚಿತತೆಯನ್ನು ಹೊಂದಿದಾಗ ಈ ಕಾರ್ಯದ ವಿಫಲತೆಯನ್ನು ಸರಿಪಡಿಸಲು ಕರ್ನಾಟಕದಲ್ಲಿ ‘ಅಖಿಲ ಭಾರತ ವೀರಶೈವ ಮಹಾಸಭೆ’ಯನ್ನು ಸ್ಥಾಪಿಸಿದ್ದಾರೆ. ಹಾಗೆ ಇತ್ತೀಚೆಗೆ ಶರಣ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದು ವೀರಶೈವ ಧರ್ಮ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಇದೇ ರೀತಿ ಬಸವ ಬಳಗ, ಬಸವದಳ, ಅಕ್ಕನ ಬಳಗ ಹಾಗೂ ಪ್ರಾದೇಶಿಕ ವೀರಶೈವ ಸಂಘ ಸಮೂಹಗಳು ಕ್ರಿಯಾಶೀಲವಾಗಿ ತಮ್ಮ ಅಭಿವೃದ್ದಿಗೆ ಶ್ರಮಿಸುತ್ತವೆ. ಪ್ರಕಾಶನ ಕ್ಷೇತ್ರದಲ್ಲಿ ಗದುಗಿನ ತೊಂಟದಾರ್ಯ ಮಠ ಹಾಗೂ ಬೆಳಗಾಂವಿಯ ನಾಗನೂರ ಸ್ವಾಮಿಗಳ ಮಠ ಅಪ್ರತಿಮ ಕಾರ್ಯನಿರ್ವಹಿಸುತ್ತಿವೆ.

ಎಲ್ಲಾ ಧರ್ಮಗಳ ಉದ್ದೇಶ ಮಾನವ ಕಲ್ಯಾಣವೆಂಬುದು ಸ್ಪಷ್ಟ ಸಂಗತಿ. ವೀರಶೈವ ಧರ್ಮವು ವಿಶೇಷವಾಗಿ ಮಾನವನ ಅಂತಃಕರಣದ ದೈನ್ಯತೆಯಿಂದ ಜೀವನದ ವಾಸ್ತವ ಮೌಲ್ಯಗಳ ಅನುಷ್ಠಾನವನ್ನು ನಡವಳಿಕೆಯ ಆಚಾರದಲ್ಲಿ ನೆಲೆಗೊಳಿಸಿದೆ. ಕರ್ನಾಟಕದಲ್ಲಿದ್ದ ಹಲವಾರು ಸಣ್ಣ ಪುಟ್ಟ ಜಾತಿಗಳನ್ನು ಒಗ್ಗೂಡಿಸಿ ಅವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು, ಸಮಾನತೆಯನ್ನು ಸೋದರ ಭಾವವನ್ನು ನೀಡುವುದರ ಜೊತೆಗೆ ಜೀವನ ಸಮರಸತೆಯನ್ನು ನೀಡಿದೆ. ಹಾಗೆ ಅನೇಕ ಉಪಸಂಸ್ಕೃತಿಯ ಚಿದ್ರ-ವಿಚ್ಛಿದ್ರತೆಯನ್ನು ತೊಡೆದು ಹಾಕಿ ಸಮಾಜದ ಮುಖ್ಯವಾಹಿನಿಯಲ್ಲಿ ತಂದಿರುವುದು ಒಂದು ಅಪೂರ್ವ ಸಂಗತಿ. ದೇಶದಲ್ಲೇ ಪ್ರಥಮವಾಗಿ ಏಣಿಶ್ರೇಣೀಕೃತ ಜಾತಿಯ ಮೇಲು ಕೀಳು ಭಾವನೆಯನ್ನು ತೊಡೆದು ಹಾಕಿ, ಲೌಕಿಕ ಸತ್ಯದ ಪವಿತ್ರ ಸಿದ್ಧಾಂತವಾದ ಕಾಯಕ ಧರ್ಮದ ಹೊಸ ಸಿದ್ಧಾಂತವನ್ನು ಸಮಾಜಕ್ಕೆ ನೀಡಿದೆ. ಈ ಅಂಶಕ್ಕೆ ಆಧಾರವಾಗಿ ಕರ್ನಾಟಕದಲ್ಲಿ ವೀರಶೈವ ಮಠಗಳು ಜಾತ್ಯತೀತ ಭಾವನೆಯಿಂದ ವಿದ್ಯಾಪ್ರಸಾರದಲ್ಲಿ ತೊಡಗಿರುವುದು ಅತ್ಯಂತ ಆದರ್ಶ ಅನುಕರಣೀಯ ಪದ್ಧತಿ.

 

ಆಕರ ಗ್ರಂಥಗಳು

೧. ಡಾ. ಎಂ. ಚಿದಾನಂದಮೂರ್ತಿ, ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

೨. ಡಾ. ಎಂ. ಚಿದಾನಂದಮೂರ್ತಿ, ‘ವೀರಶೈವಧರ್ಮ : ಭಾರತೀಯ ಸಂಸ್ಕೃತಿ’, ಮಿಂಚು ಪ್ರಕಾಶನ, ಬೆಂಗಳೂರು.

೩. ಡಾ. ಎಂ. ಚಿದಾನಂದಮೂರ್ತಿ, ‘ಲಿಂಗಾಯತ ಅಧ್ಯಯನಗಳು’, ವಾಗ್ದೇವಿ ಪುಸ್ತಕಗಳು, ಬೆಂಗಳೂರು.

೪. ಡಾ. ದೇಸಾಯಿ ಮತ್ತು ದಾಮ್ಲೆ, ‘A Note on the Change in Caste’.

೫. ಡಾ. ದೇಸಾಯಿ ಮತ್ತು ದಾಮ್ಲೆ,‘ Basaveswara and his Contemporary ’, ಕನ್ನಡ ಅಧ್ಯಯನ ಕೇಂದ್ರ, ಧಾರವಾಡ.

೬. ಡಾ. ವಿ.ಎಸ್. ಕಂಬಿ, ‘ಕಾಯಕಯೋಗಿ’, ನಾಗನೂರಮಠ, ಬೆಳಗಾವಿ.

೭. ಡಾ. ಹಿರೇಮಲ್ಲೂರ್ ಈಶ್ವರನ್, ‘ಬಸವಣ್ಣ ಹಾಗೂ ಲಿಂಗಾಯತ ಧರ್ಮ’,  ಶ್ರೀ ಬಸವೇಶ್ವರ ಪೀಠ, ಧಾರವಾಡ.

೮. ಡಾ. ಆರ್.ಸಿ. ಹಿರೇಮಠ (ಸಂ), ‘ವೀರಶೈವ ಚಿಂತಾಮಣಿ’, ಕನ್ನಡ ಅಧ್ಯಯನ ಪೀಠ, ಧಾರವಾಡ

೯. ಶ್ರೀ ಟಿ.ಎನ್. ಮಲ್ಲಪ್ಪ, ‘ವೀರಶೈವದ ಉಗಮ ಮತ್ತು ಪ್ರಗತಿ’, ತೊ|| ಧರ್ಮಸಂಸ್ಥೆ, ಬೆಂಗಳೂರು.

೧೦. ಶ್ರೀ ಬಿ. ಶಿವಮೂರ್ತಿಶಾಸ್ತ್ರಿ, ‘ವೀರಶೈವ ಧರ್ಮ ಮತ್ತು ಸಂಸ್ಕೃತಿ’, ಶರಣ ಸಾಹಿತ್ಯ ಗ್ರಂಥಮಾಲೆ, ಬೆಂಗಳೂರು.

೧೧. ಶ್ರೀ ರೇವಣಸಿದ್ಧರು, ‘ವೀರಶೈವ ಪಂಚಾಚಾರ್ಯರ ಚರಿತ್ರೆ’, ಮು. ವಿರಕ್ತಮಠ, ಬ್ಯಾಡಗಿ.

೧೨. ಶ್ರೀ ಬಿ. ಶಿವಮೂರ್ತಿಶಾಸ್ತ್ರಿ, ‘ವೀರಶೈವ ಮಹಾಪುರುಷರು’, ಶ.ಸಾ.ಪ್ರ, ಬೆಂಗಳೂರು.

೧೩. ಡಾ. ಸದಾಶಿವಯ್ಯ, ‘Discourse on Virasaivism’, ಭಾರತಿ ವಿದ್ಯಾಭ್ಯಾಸ, ಬಾಂಬೆ.

೧೪. ಡಾ. ಎಂ.ಆರ್. ಸಾಖರೆ, ‘ History and Philosophy of  Lingayat’, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೧೫. ಶಶಿಕಾಂತ ಸಂಗನಮಠ, ‘Virasaivism’, ಅರಳಿಮಟ್ಟಿ ಉದಯ ಪ್ರಕಾಶನ, ಬೆಂಗಳೂರು.

೧೬. ಹರ್ಡೇಕರ್ ಮಂಜಪ್ಪ (ಸಂ) – Social  Structure of Virasaiva Saints.

೧೭. ಡಾ. ಎಸ್.ಸಿ. ನಂದಿಮಠ, ‘A hand book of virasaivism ’, Motilal Banaridas,  Patna.

೧೭. Dr. V.S. Kambi,‘Philosophy of  Kayaka’, Basavasamathi, Bangalore.

೧೮. ಡಾ. ಬಿ.ಸಿ. ವೀರಪ್ಪ, ‘ಬೆಂಗಳೂರು ನಗರದ ವೀರಶೈವ ಮಠಗಳು’ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು.

೧೯. ಕೆ.ಆರ್. ಬಸವರಾಜ್, ‘ವೀರಶೈವ ಸಿಂಹಾಸನ’, ನೊ.ವಿ.ಸ. ಬೆಂಗಳೂರು.

೨೦. ಶ್ರೀ ಎಂ.ಪಿ. ರಾಮಲಿಂಗಯ್ಯ, ‘ಕ್ರಾಂತಿಯೋಗಿ ಬಸವಣ್ಣ’, ಹಿತಾಪ್ರಕಾಶನ, ಮಾರನಗೆರೆ.

೨೧. ಪ್ರೊ. ಬಿ. ವಿರೂಪಾಕ್ಷಪ್ಪ (ಸಂ), ‘ಬಸವಪಥ’, ಬಸವ ಸಮಿತಿ, ಬೆಂಗಳೂರು.

೨೨.  ಪ್ರೊ. ಬಿ. ಶಿವಮೂರ್ತಿಶಾಸ್ತ್ರಿ, ‘ವೀರಶೈವ ಸಾಹಿತ್ಯ ಮತ್ತು ಇತಿಹಾಸ – ಭಾಗ-೧’, ಶರಣ ಸಾಹಿತ್ಯ ಪ್ರಕಾಶನ, ಬೆಂಗಳೂರು.

೨೩. ಶ್ರೀ ಬಿ. ಶಿವಮೂರ್ತಿಶಾಸ್ತ್ರಿ, ‘ವೀರಶೈವ ಸಾಹಿತ್ಯ ಮತ್ತು ಇತಿಹಾಸ – ಭಾಗ -೨’, ಶರಣ ಸಾಹಿತ್ಯ ಪ್ರಕಾಶನ, ಬೆಂಗಳೂರು.