ಶಾರದಾ ಗೋಕಾಕ್

೩೧..೧೯೧೬ ೨೩..೧೯೯೪ ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ಹಂಪನಾ-ಕಮಲಾಹಂಪನಾ, ನಾಡಿಗ್‌ – ಮಾಲತಿ ನಾಡಿಗ್‌, ಎ.ವಿ. ನಾವಡ-ಗಾಯತ್ರಿ ನಾವಡ ನವರತ್ನಾರಾಂ-ಉಷಾ ನವರತ್ನಾರಾಂ ಮುಂತಾದ ಹಲವಾರು ದಂಪತಿಗಳು ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಈ ಮಹಿಳೆಯರಿಗೆ ಶೈಕ್ಷಣಿಕ ಶಿಸ್ತಿನ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಅವಕಾಶಗಳು ಸುಲಭವಾಗಿ ದೊರೆತಿದ್ದು ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ.

ನೂಲೇನೂರು ಶಂಕರಪ್ಪ

೩೧.೭.೧೮೯೨ ೧೨.೫.೧೯೫೪ ಪ್ರಸಿದ್ಧ ವಾಗ್ಗೇಯಕಾರರೂ, ಗಮಕಿಗಳೂ ಆದ ಶಂಕರಪ್ಪನವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹೊಳೆಲ್ಕೆರೆ ತಾಲ್ಲೂಕಿನ ರಾಮಗಿರಿಯ ಬಳಿಯ ನೂಲೇನೂರು. ತಂದೆ ಕೃಷ್ಣಶರ್ಮ, ತಾಯಿ ಸುಬ್ಬಮ್ಮ. ಚಿಕ್ಕಂದಿನಲ್ಲೇ ತಂದೆಯ ಪ್ರೀತಿಯಿಂದ ವಂಚಿತರು. ಬಂಧುಗಳ ಸಹಾಯದಿಂದ ಪಡೆದ ವಿದ್ಯಾಭ್ಯಾಸ. ಲೋಯರ್ ಸೆಕೆಂಡರಿಯ ನಂತರ ಉಪಾಧ್ಯಾಯವೃತ್ತಿ, ಪ್ರತಿದಿನ ಸಂಜೆ ಭರಮಸಾಗರದಲ್ಲಿ ನಡೆಸುತ್ತಿದ್ದ ಕಾವ್ಯವಾಚನದಿಂದ ಪಡೆದ ಪ್ರಸಿದ್ಧಿ. ಮೊಳಕಾಲ್ಮೂರು ಶಾಲೆಗೆ ಪಡೆದ ಬಡ್ತಿ. ಜೈಮಿನಿ ಭಾರತ ವಾಚನದಿಂದ ಪುರಸಭೆಯ ವತಿಯಿಂದ ಪೌರರು ನೀಡಿದ ಜೋಡಿಶಾಲು, ರೇಷ್ಮೆ ಪಂಚೆ ಸನ್ಮಾನ. ಪ್ರೌಢ ಶಿಕ್ಷಣ ತರಬೇತಿಗಾಗಿ ಮೈಸೂರಿಗೆ. ಮೈಸೂರಿನಲ್ಲೂ ಜೈಮಿನಿಭಾರತ ವಾಚನದಿಂದ ಪಡೆದ ಸನ್ಮಾನ. ಹೊನ್ನಾಳಿಶಾಲೆಗೆ ವರ್ಗ, ಶಂಕರ ಜಯಂತಿ, ರಾಮನವಮಿ, ಮಧ್ವನವಮಿ, ಕೃತ್ತಿಕೋತ್ಸವ ಸಂದರ್ಭಗಳಲ್ಲಿ ತೊರವೆ ರಾಮಾಯಣ, ಶಂಕರವಿಜಯ, ಮಧ್ವವಿಜಯ ಕಾವ್ಯವಾಚನದಿಂದ ಪಡೆದ ಪ್ರಸಿದ್ಧಿ. ಅಧ್ಯಾತ್ಮಿಕ, ವಿಜ್ಞಾನ, ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ಸಾಧನೆ. ಅನಂತಸುಬ್ಬರಾಯರೊಡನೆ ಟೈಪರೈಟರ್ ವಿನ್ಯಾಸ. ಸೂರ್ಯಸಿದ್ಧಾಂತ ಓದಿ ಗ್ರಿಗೋರಿಯನ್‌ ಕ್ಯಾಲೆಂಡರಿಗೆ ತಾಳೆ ಹಾಕಿ ಸರ್ವ ಸ್ವೀಕೃತ ಕ್ಯಾಲೆಂಡರ್ ಸಂಶೋಧನೆಯು ಅಪೂರ್ಣವಾಗಿ ಜನತೆಗೆ ದೊರೆಯದ ಫಲ. ಗಮಕ ಕಲೆಯಲ್ಲಿ ಬೆಳೆದ ಆಸಕ್ತಿಯಿಂದ ರಂಗವಿಠಲ ಅಂಕಿತದಲ್ಲಿ ರಚಿಸಿದ ನೂರಾರು ಕೀರ್ತನೆಗಳು, ಶಂಕರ ಲಿಂಗ ಭಗವಾನರ ಸಂಕ್ಷಿಪ್ತ ಚರಿತ್ರೆ (ಲಾವಣಿ ಕಾವ್ಯ) ಚಿಂತನಾಮೃತ (ವಚನಗಳು), ಜೀವನ ಚರಿತ್ರೆ, ಕನ್ನಡ ಗಣಿತಕೋಶ (ಸಂಶೋಧನೆ) ಸೂರ್ಯ ಸಿದ್ಧಾಂತ ಪರಾಮರ್ಶೆ (ಕ್ಯಾಲೆಂಡರ್ ಸಂಶೋಧನೆಗೆ) ಶಾಸ್ತ್ರಗ್ರಂಥ ಮುಂತಾದ ಪ್ರಸಿದ್ಧ ಗ್ರಂಥಗಳ ಸಂಶೋಧನೆಯಲ್ಲಿ ತೊಡಗಿದ್ದಾಗಲೇ ಕ್ಷಯರೋಗಕ್ಕೆ ತುತ್ತಾಗಿ ನಿಧನ.

* * *

ಮಧುರಚೆನ್ನ

೩೧-೭-೧೯೦೩ ೧೫-೮-೧೯೫೩ ಕನ್ನಡ ಸಾಹಿತ್ಯದಲ್ಲಿ ಮಧುರಚೆನ್ನರೆಂದೇ ಪ್ರಖ್ಯಾತರಾಗಿದ್ದ ಚೆನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿಯವರು ಹುಟ್ಟಿದ್ದು  ವಿಜಾಪುರ ಜಿಲ್ಲೆಯ ಹಲಸಂಗಿ ಬಳಿಯಿರುವ ಹೀರೆಲೋಣಿಯಲ್ಲಿ. ತಂದೆ ಸಿದ್ಧಲಿಂಗಪ್ಪ ತಾಯಿ ಅಂಬವ್ವ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆ. ಹುಟ್ಟಿದೂರಿನಲ್ಲೇ ವ್ಯಾಸಂಗ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮಸ್ಥಾನ. ಮುಂದಿನ ವ್ಯಾಸಂಗಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ತತ್ತ್ವ ಜಿಜ್ಞಾಸೆಯತ್ತ ಹರಿದ ಮನಸ್ಸು. ಕ್ರಮಬದ್ಧ ಶಾಲಾ ಶಿಕ್ಷಣಕ್ಕೆ ಮಂಗಳ. ಓದಿನ ವಿಪರೀತ ಗೀಳು. ಸ್ವತಂತ್ರವಾಗಿ ಕಲಿತದ್ದು ಇಂಗ್ಲಿಷ್ ಮತ್ತು ಬಂಗಾಳಿ ಭಾಷೆ. ವಚನ ವಾಙ್ಞಯದ ವಿಸ್ತಾರವಾದ ಅಧ್ಯಯನ. ಜನಪದ ತತ್ತ್ವಗಳ ಸೌಂದರ‍್ಯ ಅರಿತು ಅದರಿಂದ ಆದ ಪ್ರಭಾವ. ಜನಪದ ಗೀತೆಗಳನ್ನು ತಮ್ಮ ಮಧುರ ಕಂಠದಿಂದ ಹಾಡಿ ಸ್ನೇಹಿತರಿಗೆ ಕೊಡುತ್ತಿದ್ದ ಸಂತೋಷ. ಶ್ರೀರಾಮಕೃಷ್ಣ, ಅರವಿಂದ, ಸ್ವಾಮಿ ವಿವೇಕಾನಂದ, ರವೀಂದ್ರರ ಕೃತಿಗಳ ಅಧ್ಯಯನ. ಅರವಿಂದರತ್ತ ಒಲಿದ ಮನಸ್ಸು. ಪಾಂಡಿಚೆರಿಯ ಅರವಿಂದಾಶ್ರಮಕ್ಕೆ ಪ್ರತಿವರ್ಷ ಭೇಟಿ. ಹಲಸಂಗಿಯಲ್ಲಿ ಗೆಳೆಯರನ್ನು ಕೂಡಿಸಿ ಸ್ಥಾಪಿಸಿದ್ದು ಶ್ರೀ ಅರವಿಂದ ಮಂಡಳ ಮತ್ತು ಗೆಳೆಯರ ಗುಂಪು. ಅರವಿಂದರ ತತ್ತ್ವ ಪ್ರಚಾರ, ಸಾಹಿತ್ಯ ಚಟುವಟಿಕೆ, ಪ್ರಕಟಣಾ ಕಾರ‍್ಯದ ಕಾರ‍್ಯಭಾರ. ತತ್ತ್ವಶಾಸ್ತ್ರ, ಇತಿಹಾಸ, ಸಾಹಿತ್ಯ, ಭಾಷಾಶಾಸ್ತ್ರ, ಜಾನಪದ ಮುಂತಾದ ವಿಷಯಗಳನ್ನು ಕುರಿತು ಬರೆದ ಲೇಖನಗಳು. ಪ್ರಕಟಿಸಿದ ಪುಸ್ತಕಗಳು-ಶಬ್ದ ಸಾಮ್ರಾಜ್ಯದಲ್ಲಿಯ ಮಂತ್ರಶಕ್ತಿಯ ಪುನರುಜ್ಜೀವನ, ಸತ್ಯ, ಹಲಸಂಗಿಯ ಲಾವಣೀಕಾರ ಖಾಜಾಬಾಯಿ, ಇತಿಹಾಸದ ಕವಿಗಳು, ಬಸವಣ್ಣನವರ ಭೋಜನ ಶಾಲೆ ಮುಖ್ಯಲೇಖನಮಾಲೆ. ‘ನನ್ನ ನಲ್ಲ’ ಇವರ ಕವಿತಾ ಸಂಕಲನ. ಮಧುರ ಗೀತ-ಇದೊಂದು ಸ್ನೇಹಸೂಕ್ತ. ಗದ್ಯ ಕೃತಿಗಳಲ್ಲಿ ಪೂರ್ವರಂಗ, ಕಾಳರಾತ್ರಿ, ಬೆಳಗು ಈ ಕೃತಿಗಳಲ್ಲಿ ಅವರ ಆತ್ಮ ಕಥನವಿದೆ. ‘ಆತ್ಮ ಸಂಶೋಧನೆ’-ಅಧ್ಯಾತ್ಮಿಕ ಅನುಭವದ ಕೃತಿ ; ಪೂರ್ವಯೋಗದ ಪಥದಲ್ಲಿ ಅರವಿಂದರ ತತ್ತ್ವವಿಚಾರ ಗ್ರಂಥ ; ನಾಟಕ-ಸಿರಿಯಾಳ ಸತ್ವಪರೀಕ್ಷೆ. ಜೀವನ ಚರಿತ್ರೆ-ಶ್ರೀ ವಿದ್ಯಾರಣ್ಯರು (ಸಿಂಪಿಲಿಂಗಣ್ಣನವರೊಡನೆ ಸಂಪಾದಿತ ಕೃತಿ). ಅನುವಾದ-ಮಾತೃವಾಣೀ, ಧರ್ಮಕ್ಷೇತ್ರೆ ಕುರುಕ್ಷೇತ್ರೇ, ಪೂರ್ವಯೋಗ, ರಾಕ್ಷಸಿ ಮಹಾತ್ವಾಕಾಂಕ್ಷೆ, ವಿಸರ್ಜನ. ‘ಬಾಳಿನಲ್ಲಿ ಬೆಳಕು’- ಟಾಲ್‌ಸ್ಟಾಯ್‌ರವರ ಆತ್ಮಕಥೆಯ ಅನುವಾದ. ಜನಪದ ಗೀತೆಗಳ ಪ್ರಸಿದ್ಧ ಗಾಯಕರು, ಸಂಗ್ರಾಹಕರು. ಬಿಜಾಪುರದಲ್ಲಿ ನಡೆದ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬೀಸುವ ಕಲ್ಲಿನ ಹಾಡುಗಳು’ ಪ್ರಬಂಧ ಮಂಡಿಸಿ ವಿದ್ವತ್ ಜನರಿಂದ ಪ್ರಶಂಸೆ. ಸೊಲ್ಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಯ ಗೌರವ ಪಡೆದ ಮಧುರಚೆನ್ನರು ತೀರಿಕೊಂಡದ್ದು ೧೯೫೩ರ ಸ್ವಾತಂತ್ರ್ಯೋತ್ಸವ ದಿನದಂದು.   ಇದೇ ದಿನ ಹುಟ್ಟಿದ ಸಾಹಿತಿ : ಶಾರದಾ ಗೋಕಾಕ್ – ೧೯೧೬

ಬಿ.ವಿ.ಕೆ. ಶಾಸ್ತ್ರಿ

೩೦.೭.೧೯೧೬ ೨೨.೯.೨೦೦೩ ಸಂಗೀತಗಾರ, ಸಂಗೀತ, ಕಲಾವಿಮರ್ಶಕರಾದ ಬಿ.ವಿ.ಕೆ. ಶಾಸ್ತ್ರಿಯವರು ಹುಟ್ಟಿದ್ದು ನಂಜನಗೂಡಿನಲ್ಲಿ. ತಂದೆ ವೆಂಕಟಸುಬ್ಬಯ್ಯ, ತಾಯಿ ಸುಬ್ಬಮ್ಮ. ಬಾಲ್ಯದಿಂದಲೂ ಓದಿಗಿಂತ ಭಜನೆ, ಸಂಗೀತದತ್ತ ಹತ್ತಿದಗೀಳು. ಭಜನೆಯ ಗೋಷ್ಠಿಯಲ್ಲಿ ಒಮ್ಮೆ ಹಾಡಿದ್ದು ಕೇಳಿದ ಉಪಾಧ್ಯಾಯರಾದ ಸುಬ್ರಹ್ಮಣ್ಯಂ ರವರ ಪ್ರೇರಣೆಯಿಂದ ಆಸ್ಥಾನ ವಿದ್ವಾಂಸರಾಗಿದ್ದ ಚಿಕ್ಕರಾಮರಾಯರಿಂದ ಕಲಿತ ಸಂಗೀತ. ಚಿತ್ರಕಲೆಯಲ್ಲಿ ಬೆಳೆದ ಆಸಕ್ತಿ, ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್‌ ಇನ್‌ಸ್ಟಿಟ್ಯೂಟಿನಿಂದ ಪಡೆದ ಡಿಪ್ಲೊಮ. ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ ಮೈಸೂರಿನ ‘ಸಾಧ್ವಿ’ ಪತ್ರಿಕೆಯ ಸಂಪಾದಕ ಅಗರಂ ರಂಗಯ್ಯನವರು ಜೈಲು ಸೇರಿದಾಗ ‘ಸಾಧ್ವಿ’ಯ ಹೊಣೆ. ಇ.ಆರ್. ಸೇತೂರಾಂರವರಿಂದ ಕಲಾವಿಮರ್ಶೆ ಬರೆಯಲು ಪ್ರಜಾವಾಣಿಗೆ ಆಹ್ವಾನ. ನೃತ್ಯ, ಸಂಗೀತ, ಕಲೆಯ ಬಗ್ಗೆ ಪ್ರಜಾವಾಣಿ ಬಳಗದ ಪತ್ರಿಕೆಗಳಿಗೆ ಬರೆದ ವಿಮರ್ಶಾ ಬರಹಗಳು. ಮುರಳಿ ಕಾವ್ಯನಾಮದಲ್ಲೂ ಪತ್ರಿಕೆಗಳಿಗೆ ಬರೆದ ಅನೇಕ ವಿಮರ್ಶಾ ಲೇಖನಗಳು ಕರ್ನಾಟಕದ ಸಂಗೀತ ವಿದ್ವಾಂಸರ ಸಿದ್ಧಿ-ಸಾಧನೆ ಕುರಿತು ಇಲಸ್ಟ್ರೇಟೆಡ್‌ ವೀಕ್ಲಿಗಾಗಿ ಬರಹಗಳು. ಭಾರತದಾದ್ಯಂತ ಗಳಿಸಿದ ವಿಮರ್ಶಾಮನ್ನಣೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಂಸ್ಕೃತಿಕ ಶಾಖೆಗಳಿಗೆಲ್ಲಾ ನೀಡಿದ ಸಹಕಾರ. ಆಕಾಶವಾಣಿ ಆಯ್ಕೆ ಸಮಿತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ, ಇಂಡಿಯನ್‌ ಕೌನ್ಸಿಲ್‌ ಆಫ್‌ ಕಲ್ಚುರಲ್‌ ರಿಲೇಷನ್ಸ್‌, ಸೌತ್‌ ಝೋನ್‌ ಕಲ್ಚುರಲ್‌ ಸೆಂಟರ್, ಕೇಂದ್ರ ಲಲಿತ ಕಲಾ ಅಕಾಡಮಿ, ಕಾಳಿದಾಸ ಸಮ್ಮಾನ ಸಮಿತಿ, ಕರ್ನಾಟಕ ಗಾನ ಕಲಾ ಪರಿಷತ್ತು ಮುಂತಾದವುಗಳಿಗೆ ಮಾರ್ಗದರ್ಶನ, ದೇಶವಿದೇಶಗಳ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗಿ. ಆಕಾಶವಾಣಿಯ ವಾರ್ಷಿಕ ಪುರಸ್ಕಾರ, ಬೆಂಗಳೂರಿನ ಗಾಯನ ಸಮಾಜದ ವಾರ್ಷಿಕ ಸಮ್ಮೇಳನಾಧ್ಯಕ್ಷತೆ ಮತ್ತು ಸಂಗೀತಕಲಾರತ್ನ ಬಿರುದು, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತ  ಕಲಾ ಅಕಾಡಮಿ ಪುರಸ್ಕಾರ, ಟಿಟಿಕೆ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ಚೌಡಯ್ಯ ಪ್ರಶಸ್ತಿ ಮುಖ್ಯವಾದವುಗಳು. ೧೯೯೯ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ಮುರಳಿ ವಾಣಿ’.   ಇದೇ ದಿನ ಹುಟ್ಟಿದ ಕಲಾವಿದರು ಕೆ. ಅಶ್ವತ್ಥಮ್ಮ – ೧೯೧೦ ಹೆಗಡೆ ಶೀಗೇಹಳ್ಳಿ – ೧೯೨೮ ಸಿದ್ಧರಾಜು ಜೆ. – ೧೯೭೦

* * *

ಡಾ. ಕೆ. ಕೃಷ್ಣಮೂರ್ತಿ

೩೦-೭-೧೯೨೩ ೧೮-೭-೧೯೯೭ ಕನ್ನಡ ವಿದ್ವತ್ ಲೋಕದಲ್ಲಿ ಚಿರಪರಿಚಿತರಾಗಿದ್ದ ಕೃಷ್ಣಮೂರ್ತಿಯವರು ಹುಟ್ಟಿದ್ದು ಹಾಸನ ಜಿಲ್ಲೆಯ ಕೇರಳಾಪುರ. ತಂದೆ ಎನ್. ವೆಂಕಟಸುಬ್ಬಯ್ಯ, ತಾಯಿ ಗೌರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಮೈಸೂರಿನಲ್ಲಿ ಪ್ರೌಢ ವಿದ್ಯಾಭ್ಯಾಸ. ೧೯೪೨ರಲ್ಲಿ ಬಿ.ಎ. ಪದವಿ, ೧೯೪೩ರಲ್ಲಿ ಎಂ.ಎ. ೧೯೪೪ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಟಿ ಪದವಿ. ಉದ್ಯೋಗಕ್ಕಾಗಿ ಸುತ್ತಾಡಿದ್ದು ಬಾಗಲಕೋಟೆ, ಕುಮಟಾ, ಮೈಸೂರು ಮುಂತಾದೆಡೆ ಅಧ್ಯಾಪಕರಾಗಿದ್ದು, ಕಡೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಮಹಾರಾಣಿ ಸೇತೂ ಪಾರ್ವತಿಭಾಯಿ ಅವರ ಹೆಸರಿನಲ್ಲಿ ಕೇರಳ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಮತ್ತು ಸಾಹಿತ್ಯ ಅಥವಾ ಹಿಂದು ತತ್ತ್ವಶಾಸ್ತ್ರದ ಯಾವುದೇ ವಿಭಾಗದಲ್ಲಿ ಪ್ರಕಟಗೊಂಡ ಅತ್ಯುತ್ತಮ ಗ್ರಂಥಕ್ಕೆ ಕೊಡಮಾಡುವ ಪ್ರಶಸ್ತಿಯನ್ನು ಕೃಷ್ಣಮೂರ್ತಿಯವರ “ಎಸ್ಸೇಸ್ ಇನ್ ಸಂಸ್ಕೃತ ಕ್ರಿಟಿಸಿಸಂ” ಕೃತಿ ಪಡೆದುಕೊಂಡಾಗಲೇ ಕೃಷ್ಣಮೂರ್ತಿಯವರತ್ತ ಎಲ್ಲರ ಗಮನ ಹರಿದದ್ದು. ಸಂಸ್ಕೃತ, ಕನ್ನಡ, ಇಂಗ್ಲಿಷ್ ಮೂರು ಭಾಷೆಗಳಲ್ಲೂ ಒಂದೇ ತೆರನಾದ ವಿದ್ವತ್ ಪಡೆದವರು. ಪ್ರಶಸ್ತಿ ವೈಯಕ್ತಿಕವಾಗಿ ಇವರಿಗಷ್ಟೇ ಅಲ್ಲದೆ ಪ್ರಕಾಶನ ಮಾಡಿದ ಕರ್ನಾಟಕ ವಿಶ್ವವಿದ್ಯಾಲಯಕ್ಕೂ ಸಂದ ಗೌರವವಾಗಿತ್ತು. ಇವರ ಗ್ರಂಥದಲ್ಲಿ ಆಧುನಿಕ ಹಿನ್ನೆಲೆಯಲ್ಲಿ ಪ್ರಾಚೀನತೆ, ಪೌರಾತ್ಯ ವಿಚಾರವನ್ನು ಪಾಶ್ಚಾತ್ಯ ದೃಷ್ಟಿಕೋನದಿಂದ ವಿಮರ್ಶಿಸಿರುವುದು. ವ್ಯಾಪಕವಾದ ಅಧ್ಯಯನ, ಪ್ರತಿಭಾ ಸ್ಪರ್ಶದ ವಿದ್ವತ್ತು, ನೇರವಾದ ನಿರೂಪಣೆಯ ಗ್ರಂಥ. ರಚಿಸಿದ ಕೃತಿಗಳು ಇಂಗ್ಲಿಷ್‌ನಲ್ಲಿ-ಧ್ವನ್ಯಾಲೋಕ ಅಂಡ್ ಇಟ್ಸ್ ಕ್ರಿಟಿಕ್ಸ್, ಸಮ್ ಥಾಟ್ಸ್ ಆನ್ ಇಂಡಿಯನ್ ಏಸ್ತಿಟಿಕ್ಸ್. ಕನ್ನಡದಲ್ಲಿ ರಚಿಸಿದ ಗ್ರಂಥಗಳು-ಆನಂದ ವರ್ಧನದ ಕಾವ್ಯ ಮೀಮಾಂಸೆ, ಕನ್ನಡ ಧ್ವನ್ಯಾಲೋಕ, ಮುಮ್ಮುಟನ ಕಾವ್ಯ ಪ್ರಕಾಶ, ಕ್ಷೇಮೇಂದ್ರನ ಔಚಿತ್ಯ ವಿಚಾರ ಚರ್ಚೆ, ದಂಡಿಯ ಕಾವ್ಯಾದರ್ಶ, ಬಾಮಹನ ಕಾವ್ಯಾಲಂಕಾರ, ವಾಮನನ ಕಾವ್ಯಾಲಂಕಾರ ಸೂತ್ರವೃತ್ತಿ, ರಾಜಶೇಖರನ ಕಾವ್ಯಮೀಮಾಂಸೆ. ಇವುಗಳ ಜೊತೆಗೆ ಭಾಸ, ಶೂದ್ರಕ, ಕಾಳಿದಾಸ, ಭವಭೂತಿ, ಶಕ್ತಿಭದ್ರ, ಭಾರವಿ ಮುಂತಾದವರ ಗ್ರಂಥಗಳನ್ನು ಕನ್ನಡಕ್ಕೆ ತಂದು, ಒಟ್ಟು ಪ್ರಕಟಿತ ಕೃತಿ ಸಂಖ್ಯೆ ೫೪. ಇಂಟರ್ ಮೀಡಿಯೆಟ, ಬಿ.ಎ., ಎಂ.ಎ., ಕನ್ನಡ ಪಂಡಿತ ಪರೀಕ್ಷೆಗಳಲ್ಲಿ ಗಳಿಸಿದ ಹಲವಾರು ಬಹುಮಾನಗಳು. ಮೈಸೂರು ವಿ.ವಿ.ದ ಸ್ವರ್ಣಮಹೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ಉತ್ತರ ಪ್ರದೇಶದ ಸಂಸ್ಕೃತ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿ : ಅಲ್ಲಮಪ್ರಭು ಬೆಟ್ಟದೂರು – ೧೯೫೧

ಕೈಲಾಸಂ

೨೯-೭-೧೮೮೪ ೨೩-೧೧-೧೯೪೬ ನಾಟಕದ ಮೂಲಕ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿದ ತಂಜಾವೂರು ಪರಮಶಿವ ಕೈಲಾಸಂರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ನ್ಯಾಯಾಶರಾಗಿದ್ದ ಪರಮಶಿವ ಅಯ್ಯರ್, ತಾಯಿ ಕಮಲಮ್ಮ. ಬಾಲ್ಯದ ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನ, ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂ ವಿಜ್ಞಾನ ಓದಿ ಪ್ರಥಮ ದರ್ಜೆಯಲ್ಲಿ ಬಿ.ಎ. ಪದವಿ. ಎಂ.ಎ.ಗಾಗಿ ಎರಡು ವರ್ಷ ವ್ಯಾಸಂಗ. ಸರಕಾರದ ವಿದ್ಯಾರ್ಥಿವೇತನ ಪಡೆದು ಲಂಡನ್ನಿಗೆ ತೆರಳಿ ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಏಳು ವಿಷಯಗಳಲ್ಲಿ ಪಡೆದ ಮೊದಲ ದರ್ಜೆ, ಪ್ರಶಸ್ತಿ. ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಬಂಧ ಸಲ್ಲಿಸಿ ಗಿಟ್ಟಿಸಿದ ಫೆಲೋಷಿಪ್. ಜ್ಞಾನಾರ್ಜನೆಯಂತೆ ಕ್ರೀಡೆಯಲ್ಲೂ ಆಸಕ್ತಿ. ಫುಟ್‌ಬಾಲ್‌ನಲ್ಲಿ ಅಜೇಯ ಗೋಲ್ ಕೀಪರ್. ಯೂಜಿನ್ ಸ್ಯಾಂಡೋರ ನೆಚ್ಚಿನ ಶಿಷ್ಯರಾಗಿ ವ್ಯಾಯಾಮ ಪಟು, ಸ್ನಾಯುಗಳ ಮೇಲೆ ಪಡೆದ ಅಸಾಧ್ಯ ಹತೋಟಿ. ಪಾಶ್ಚಾತ್ಯ ಸಂಗೀತಾಸಕ್ತರು. ಇಂಗ್ಲಿಷ್ ರಾಗಕ್ಕೆ ಕನ್ನಡದಲ್ಲಿ ಹಾಡು ಬರೆದು ಕೇಳುಗರಿಗೆ ಹುಟ್ಟಿಸಿದ ಅಚ್ಚರಿ. ಲಂಡನ್ನಿನ ವಿವಿಧ ನಾಟಕ ಗೃಹಗಳಿಗೆ ಭೇಟಿ. ಭಾರತಕ್ಕೆ ಹಿಂದಿರುಗಿ ಮೈಸೂರು ಸರಕಾರದ ಭೂಗರ್ಭ ಇಲಾಖೆಯಲ್ಲಿ ಪ್ರೊಬೆಷನರಿ ಅಕಾರಿಯಾಗಿ ಆಯ್ಕೆ. ಉದ್ಯೋಗ ಸರಿಹೊಂದದೆ ರಾಜೀನಾಮೆ. ಹತ್ತಿದ ನಾಟಕದ ಗೀಳು. ಟೊಳ್ಳುಗಟ್ಟಿ ಮೊದಲ ನಾಟಕ. ರವೀಂದ್ರನಾಥರು ಬೆಂಗಳೂರಿಗೆ ಬಂದಾಗ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ, ಗಳಿಸಿದ್ದು ಪ್ರಥಮ ಬಹುಮಾನ. ಕನ್ನಡ ರಂಗಭೂಮಿಯಲ್ಲಿ ಎಬ್ಬಿಸಿದ ಕ್ರಾಂತಿ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೈಲಾಸಂ ‘ಕರ್ನಾಟಕ ನಾಟಕ ಪ್ರಹಸನ ಪಿತಾಮಹ’ರೆನಿಸಿದ್ದು. ನಂತರ ೨೮ ವರ್ಷಗಳ ಅವಯಲ್ಲಿ ಹೋಂರೂಲು, ಬಹಿಷ್ಕಾರ, ಗಂಡಸ್ಕತ್ರಿ, ನಮ್ಬ್ರಾಹ್ಮಣ್ಕೆ, ಬಂಡವಾಳವಿಲ್ಲದ್ಬಡಾಯಿ, ನಮ್ ಕ್ಲಬ್ಬು, ಅಮ್ಮಾವ್ರಗಂಡ, ಸತ್ತವನ ಸಂತಾಪ, ಅನುಕೂಲಕ್ಕೊಬ್ಬಣ್ಣ, ಸೀಕರ್ಣೆ ಸಾವಿತ್ರಿ, ಶೂರ್ಪನಖಾ ಕುಲವೈಭವ ಅಥವಾ ನಂಕಪ್ನಿ, ತಾಳಿ ಕಟ್ಟೋಕ್ಕೂಲೀನೇ, ಪೋಲಿಕಿಟ್ಟಿ, ಬಹಿಷ್ಕಾರ, ವೈದ್ಯನವಾ, ಸೂಳೆ ಮೊದಲಾದ ೧೭ ನಾಟಕಗಳ ರಚನೆ. ತಾವರೆಕೆರೆ, ಸಮಶ್ಪೋಯಿನ ದಂಬ್ಡಿ, ಮುದ್ದೂ ಇಲ್ಲ ಕದ್ದೂ ಮೊದಲಾದ ೫ ಕಥೆಗಳು, ತಿಪ್ಪಾರಹಳ್ಳಿ, ಕೋಳೀಕೆ ರಂಗ ಮೊದಲ್ಗೊಂಡು ಏಳು ಹಾಡಗಳು, ದಿ ಡ್ರಮಾಟಿಸ್ಟ್, ಎಟರ್‌ನಲ್ ಕೆಯಿನ್, ಟ್ರೂತ್‌ನೇಕೆಡ್ ಮುಂತಾದ ೧೫ ಇಂಗ್ಲಿಷ್ ಕವನಗಳು, ನಾಲ್ಕು ಇಂಗ್ಲಿಷ ನಾಟಕದ ರಚನೆ. ಕೈಲಾಸಂ ಎಂದೂ ಪೆನ್ನು ಹಿಡಿದವರಲ್ಲ. ಕನ್ನಡಾಂಗ್ಲಾ ಭಾಷೆಯಲ್ಲಿ ಹೇಳಿದ್ದನ್ನು ಸ್ನೇಹಿತರು ಬರೆದುಕೊಂಡರು. ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಕನ್ನಡ ಜನತೆ ಗೌರವಿಸಿತು. ಕೂತಲ್ಲಿ ಕಂಪನಿ…ನಿಂತಲ್ಲಿ ನಾಟ್ಕ ಎಂದು ಹೋದೆಡೆಯಲ್ಲೆಲ್ಲಾ ಜನರನ್ನು ನಕ್ಕು ನಗಿಸಿದ ಕೈಲಾಸಂ ನಿಜಜೀವನದ ರಂಗದಿಂದ ಮರೆಯಾದದ್ದು ೨೩.೧೧.೧೯೪೬ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಜಿ.ಬಿ. ಜೋಶಿ – ೧೯೦೪-೨೫.೧೨.೯೩ ಗೋವಿಂದರಾಜುಲು – ೧೯೨೫ ಸಿ. ಬಸವಲಿಂಗಯ್ಯ – ೧೯೫೮ ವಿಜಯಾ ಜಿ.ಎಸ್. – ೧೯೬೩ ಮಾ.ನಾ. ಚೌಡಪ್ಪ – ೧೯೦೯-೨೦.೨.೧೯೮೫

ಸಿ. ಬಸವಲಿಂಗಯ್ಯ

೨೯.೭.೧೯೫೮ ರಂಗಭೂಮಿಯ ಸಂಪನ್ಮೂಲವ್ಯಕ್ತಿ,  ನಟ, ಜಾನಪದ ಆಸಕ್ತ ಬಸವಲಿಂಗಯ್ಯ ಹುಟ್ಟಿದ್ದು ಬೆಂಗಳೂರು. ತಂದೆ ಚಿಕ್ಕಣ್ಣ, ತಾಯಿ ಚಿಕ್ಕಮ್ಮ, ಶಾಲಾ ಕಾಲೇಜು ದಿನಗಳಿಂದಲೂ ಜಾನಪದ, ರಂಗಭೂಮಿಯತ್ತ ಬೆಳೆಸಿಕೊಂಡ ಆಸಕ್ತಿ. ಹಲವಾರು ಪ್ರಸಿದ್ಧರ ನಿರ್ದೇಶನದ ನಾಟಕಗಳಲ್ಲಿ ಭಾಗಿ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪಡೆದ ಸ್ನಾತಕೋತ್ತರ ಪದವಿ. ರಂಗಾಯಣಕ್ಕಾಗಿ ಕುಸುಮಬಾಲೆ, ಪ್ರಪಂಚಪ್ರವಾಹ, ಗಾಂಧಿ V/S ಗಾಂಧಿ, ಟಿಪ್ಪುವಿನ ಕನಸುಗಳು ಮುಂತಾದವುಗಳ ನಿರ್ದೇಶನ. ಸಮುದಾಯ ತಂಡಕ್ಕಾಗಿ ಅಲ್ಲಮನ ಅದ್ಭುತ, ನ್ಯಾಯ, ಸತಿಯೊಡನೆ ಸಹಗಮನ, ಜೋಗತಿ ಕಲ್ಲು, ಏಕಲವ್ಯ, ತದ್ರೂಪಿ ಮುಂತಾದವುಗಳ ಜೊತೆಗೆ ಹಿಂದಿ, ತೆಲುಗು, ಅಸ್ಸಾಮಿ, ಮಲಯಾಳಂ ನಾಟಕಗಳ ನಿರ್ದೇಶನದ ಹೊಣೆ. ರಾಜ್ಯದ ವಿವಿಧೆಡೆ ರಂಗತರಬೇತಿ ಶಿಬಿರಗಳ ಸಂಘಟನೆ. ಹಲವಾರು ನಾಟಕಗಳ ವಿಚಾರ ಸಂಕಿರಣಗಳಲ್ಲಿ ಭಾಗಿ, ಹೈದರಾಬಾದ್‌ ದೂರದರ್ಶನದಿಂದ ಹಲವಾರು ನಾಟಕಗಳ ಪ್ರಸಾರ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾಟಕೋತ್ಸವ, ರಂಗಶಿಬಿರಗಳ ಹೊಣೆ. ಎನ್‌.ಎಸ್‌.ಡಿ.ಯ ಪ್ರಾದೇಶಿಕ ಕೇಂದ್ರದ ಸಂಪನ್ಮೂಲ ಸಹಾಯಕ ನಿರ್ದೇಶಕ, ಮೈಸೂರು ರಂಗಾಯಣದ ನಿರ್ದೇಶಕರಾಗಿ, ನಾಟಕ ಅಕಾಡೆಮಿ ಸದಸ್ಯರಾಗಿ ಹೊತ್ತ ಜವಾಬ್ದಾರಿ. ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್‌, ಅಂಬೇಡ್ಕರ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದ ಉಮೇಶ್‌ ಕುಮಾರ್ ಕೆ.ಎಚ್‌ – ೧೯೪೯

* * *

ಜಿ.ಬಿ. ಜೋಶಿ

೨೯..೧೯೦೪ ೨೬.೧೨.೧೯೯೩ ಉತ್ತಮ ನಾಟಕಕಾರ, ಸೃಜನಶೀಲ ಪ್ರಕಾಶಕ, ಸಾಹಿತ್ಯ ಸಂವರ್ಧಕ, ಸ್ನೇಹರಸಿಕ, ಸಹೃದಯಿ ಹರಟೆಗಾರರೆನಿಸಿದ್ದ ಗೋವಿಂದಚಾರ್ಯ, ಭೀಮಾಚಾರ್ಯ ಜೋಶಿ (ಜಿ.ಬಿ. ಜೋಶಿ)ಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಗದಗ ತಾಲ್ಲೂಕಿನ ಹೊಂಬಳ (ಈಗ ಗದಗ ಜಿಲ್ಲೆ)ದಲ್ಲಿ ೧೯೦೪ರ ಜುಲೈ ೨೯ರಂದು. ತಂದೆ ಭೀಮಾಚಾರ್ಯಜೋಶಿ, ತಾಯಿ ಭಾರತೀಬಾಯಿ.

ಪ್ರೊ.ಎಚ್.ಎಂ. ಮರುಳಸಿದ್ಧಯ್ಯ

೨೯..೧೯೩೧ ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ ಮುಂತಾದ ಹಲವಾರು ಯೋಜನೆಗಳ ರೂವಾರಿಯಾಗಿ ಸಮಾಜಕಾರ್ಯ ಶಿಕ್ಷಣ, ಕ್ಷೇತ್ರ ಕಾರ್ಯ, ಸಂಘಟನೆ, ಸಾಹಿತ್ಯರಚನೆ ಮುಂತಾದವುಗಳಲ್ಲಿ ತೊಡಗಿಸಿಕೊಂಡಿರುವ ಮರುಳ ಸಿದ್ಧಯ್ಯನವರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಹಿರೇಕುಂಬಳಗುಂಟೆ ಎಂಬ ಹಳ್ಳಿಯಲ್ಲಿ ೧೯೩೧ ರ ಜುಲಯ ೨೯ ರಂದು. ತಂದೆ ಮಠದ ದೊಡ್ಡ ಬಸವಯ್ಯನವರು, ತಾಯಿ ದೊಡ್ಡ ಬಸಮ್ಮ. ಐವರು ಅಣ್ಣಂದಿರು ಮೂವರು ಅಕ್ಕಂದಿರನ್ನೂ ಹೊಂದಿರುವ ದೊಡ್ಡ ಕುಟುಂಬದಲ್ಲಿ ಜನಿಸಿದ ಇವರ ಅಣ್ಣಂದಿರಲ್ಲಿ ಹಿ.ಮ.ನಾಗಯ್ಯನವರು ಸಾಹಿತಿ, ಪತ್ರಕರ್ತರಾಗಿ ಖ್ಯಾತಿ ಪಡೆದವರು.

ಮಾ.ನಾ. ಚೌಡಪ್ಪ

೨೯.೦೭.೧೯೦೯ ೨೦.೦೨ ೧೯೮೫ ಸಾಹಸಿ ಪತ್ರಕರ್ತ, ದೇಶಾಭಿಮಾನಿ, ಕನ್ನಡಪರ ಹೋರಾಟಗಾರಾಗಿದ್ದ ಚೌಡಪ್ಪನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತುರಿವೇಕರೆ ತಾಲ್ಲೂಕಿನ ಮಾಯಸಂದ್ರದಲ್ಲಿ. ತಂದೆ ಶಾನುಭೋಗ ವೃತ್ತಿಯಲ್ಲಿದ್ದ ನಾರಸೀದೇವಯ್ಯ, ತಾಯಿ ಲಕ್ಷ್ಮೀದೇವಮ್ಮ.

ಡಾ. ವಾಮನದತ್ತಾತ್ರೇಯ ಬೇಂದ್ರೆ

೨೮-೭-೧೯೩೫ ಅತ್ಯುತ್ತಮ ಪ್ರಾಧ್ಯಾಪಕರು, ಸಾಹಿತಿಗಳು ಆದ ವಾಮನ ಬೇಂದ್ರೆಯವರು ಹುಟ್ಟಿದ್ದು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ. ತಂದೆ ವರಕವಿ ದ.ರಾ.ಬೇಂದ್ರೆ, ತಾಯಿ ಲಕ್ಷ್ಮೀಬಾಯಿ. ಪ್ರಾರಂಭಿಕ ಶಿಕ್ಷಣ ಗದಗ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿ. ಪುಣೆ ವಿಶ್ವವಿದ್ಯಾಲಯಕ್ಕೆ ‘ಲಕ್ಷ್ಮೀಶನ ಜೈಮಿನಿ ಭಾರತ ; ಒಂದು ಅಧ್ಯಯನ ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. ಸಾಂಗ್ಲಿಯ ವೆಲ್ಲಿಂಗ್‌ಡನ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಉದ್ಯೋಗ ಪ್ರಾರಂಭ. ನಂತರ ವಿದ್ಯಾರಣ್ಯ ಕಿರಿಯ ಕಾಲೇಜ್ ಧಾರವಾಡದಲ್ಲಿ ಉಪನ್ಯಾಸಕರಾಗಿ, ಕಿಟಲ್ ಕಲಾ ಕಾಲೇಜ್ ಧಾರವಾಡದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಸಾಹಿತ್ಯ ರಚನೆ ತಂದೆಯಿಂದ ಬಂದ ಬಳುವಳಿ. ಶಾಲೆಯಲ್ಲಿದ್ದಾಗಲೇ ಬರವಣಿಗೆ ಪ್ರಾರಂಭ. ಇಂಟರ್ ಮೀಡಿಯೆಟ್ ಓದುತ್ತಿದ್ದಾಗಲೇ ಪ್ರಬಂಧ, ನಾಟಕ ರಚನೆಯಲ್ಲಿ ಪಡೆದ ಸಮರ್ಥತೆ. ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿಭಾಷೆಗಳ ಮೇಲಣ ಪ್ರಭುತ್ವ. ಸಂಗೀತ, ನಾಟಕ, ಭಾಷಣ ಹವ್ಯಾಸಗಳು. ಮೊದಲ ಕವನ ಸಂಕಲನ ಅನಂತಧಾರೆ, ನಂತರ ಸ್ಪಂದನ ಪ್ರಕಟಿತ. ನಾಟಕಗಳು-ಸೊಂಡಿಲ ಗಣಪ್ಪ ಬಂದ, ಸ್ಪರ್ಶ ಹಾಗೂ ಇತರ ನಾಟಕಗಳ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆ. ವಿಮರ್ಶೆ-ಕಥನ ಕುಶಲಕವಿ ಲಕ್ಷ್ಮೀಶ, ಲಕ್ಷ್ಮೀಶ ಕವಿ-ಕಾವ್ಯ ಪರಂಪರೆ, ಲಕ್ಷ್ಮೀಶ : ಒಂದು ಅಧ್ಯಯನ, ಬೇಂದ್ರೆ ಕಾವ್ಯಲೋಕ, ಬೇಂದ್ರೆ ಬೆಳಕು, ಕವಿಚೂತವನ ಚೈತ್ರ ಲಕ್ಷ್ಮೀಶ. ಜೀವನಚರಿತ್ರೆ- ದ.ರಾ.ಬೇಂದ್ರೆ ಜೀವನ ಪರಿಚಯ. ಸಂಪಾದಿತ ಕೃತಿಗಳು-ಕುಣಿಯೋಣ ಬಾರ, ಅಂಬಿಕಾತನಯ ಹಾಡs ಬೆಳದಿಂಗಳ ನೋಡs, ನೋಡ್ಯಾನs ದಶಾವತಾರ, ಅಂಬಿಕಾತನಯ ಹಾಡ್ಯಾನs, ಕನ್ನಡಕ್ಕೆ ಕಿಟೆಲ್ ಕೊಡುಗೆ, ನಾಳಿನ ಕನಸು, ಚೈತನ್ಯದ ಪೂಜೆ, ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ತ್ವ, ಸಿದ್ಧಾಂತ, ಬೇಂದ್ರೆ ಋತುದರ್ಶನ, ಬೇಂದ್ರೆ ಸಮಗ್ರ ಕಾವ್ಯ ಸಂಪುಟ, ಬೇಂದ್ರೆಯವರ ಜೀವನ ಮಹಾಕಾವ್ಯ ‘ಔದುಂಬರ ಗಾಥೆ’. ಭಾಷಾಂತರಗಳು-ಗುರುಗೋವಿಂದ ಸಿಂಗ, ಭಾರತೀಯ ಸಾಹಿತ್ಯ ಸಂಕಲನ, ಕಾಲಾಯ ತಸ್ಮೈನಮಃ, ಜಾನಪದ ಸಾಹಿತ್ಯ, ಸಮರ್ಥ ರಾಮದಾಸ ಹಾಗೂ ಸ್ವಾಮಿ ವಿವೇಕಾನಂದ, ಬೇಂದ್ರೆಯವರ ಕವನಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮುಂತಾದುವು. ಅರಸಿ ಬಂದ ಪ್ರಶಸ್ತಿ ಗೌರವಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ, ಶ್ರೀವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ ಮುಖ್ಯವಾದುವುಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕುಮಾರ ಕಕ್ಕಯ್ಯ ಪೋಳ್ – ೧೯೨೯ ಎಚ್.ವಿ. ಶ್ರೀನಿವಾಸ ಶರ್ಮ – ೧೯೩೨ ವರದಾ ಶ್ರೀನಿವಾಸ – ೧೯೫೦

ಟಿ.ಆರ್. ನರಸಿಂಹರಾಜು

೨೮..೧೯೨೬ ೧೧. .೧೯೭೯ ವೃತ್ತಿ ರಂಗಭೂಮಿ, ಚಲನಚಿತ್ರ ಎರಡು ಕ್ಷೇತ್ರಗಳಲ್ಲೂ ಹಾಸ್ಯಪಾತ್ರಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನರಸಿಂಹರಾಜುರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ. ತಂದೆ ಪೋಲೀಸ್‌ ಇಲಾಖೆಯ ನೌಕರರಾದ ರಾಮರಾಜು, ತಾಯಿ ವೆಂಕಟಲಕ್ಷ್ಮಮ್ಮ. ಬಾಲ್ಯದಿಂದಲೇ ರಂಗಭೂಮಿಯತ್ತ ಒಲವು. ಸಿ.ಬಿ. ಮಲ್ಲಪ್ಪನವರ ಚಂದ್ರಮೌಳೇಶ್ವರ ನಾಟಕ ಕಂಪನಿಯಲ್ಲಿ ಲೋಹಿತಾಶ್ವ, ಪ್ರಹ್ಲಾದ, ಕೃಷ್ಣ ಮುಂತಾದ ಬಾಲ ಪಾತ್ರಗಳು. ೧೬ ನೇ ವಯಸ್ಸಿಗೇ ಸ್ವಂತ ನಾಟಕ ಕಂಪನಿ ಕಟ್ಟಿದ ಬಾಲಕನೆಂಬ ಹೆಗ್ಗಳಿಕೆ. ಅರಸೀಕೆರೆ ಹಾಗೂ ಸುತ್ತಮುತ್ತ ಪ್ರದರ್ಶಿಸಿದ ನಾಟಕಗಳು, ಸತ್ಯಹರಿಶ್ಚಂದ್ರ, ಭಕ್ತಕುಂಬಾರ. ಕಂಪನಿ ಅನುಭವಿಸಿದ ನಷ್ಟ. ೧೯೪೬ ರಲ್ಲಿ ಸೇರಿದ್ದು ಎಡತೊರೆ ಕಂಪನಿ. ವಿಶ್ವಾಮಿತ್ರ, ಬೇಡರ ಕಣ್ಣಪ್ಪ, ರಾಮಾಯಣ ನಾಟಕಗಳಲ್ಲಿ ಅಭಿನಯಿಸಿ ಗಳಿಸಿದ ಪ್ರಖ್ಯಾತಿ. ಹಿರಣ್ಣಯ್ಯ ಮಿತ್ರಮಂಡಲಿಯಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಗಳಿಸಿದ ಹೆಸರು. ಗುಬ್ಬಿ ವೀರಣ್ಣ ನಾಟಕ ಕಂಪನಿಯಲ್ಲಿ ಬೇಡರ ಕಣ್ಣಪ್ಪ, ಸಾಹುಕಾರ, ಸದಾರಮೆಯ ಆದಿಮೂರ್ತಿ ಹಾಸ್ಯಪಾತ್ರಗಳಿಂದ ಗಳಿಸಿದ ಜನಮನ್ನಣೆ. ಡಾ. ರಾಜಕುಮಾರ್, ಜಿ.ವಿ. ಅಯ್ಯರ್, ಬಾಲಕೃಷ್ಣ ಜೊತೆಗೂಡಿ ಸ್ಥಾಪಿಸಿದ್ದು ಕನ್ನಡ ಚಲನಚಿತ್ರ ಕಲಾವಿದರ ಸಂಘ. ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಪ್ರದರ್ಶಿಸಿದ ನಾಟಕಗಳು. ಪ್ರದರ್ಶನದ ಹಣದಿಂದ ರಣಧೀರ ಕಂಠೀರವ ಚಿತ್ರ ನಿರ್ಮಾಣ. ಸುಮಾರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ. ಬಾಲಕೃಷ್ಣ-ನರಸಿಂಹರಾಜು ರವರ ಅಪೂರ್ವ ಹಾಸ್ಯಜೋಡಿ. ಬೇಡರಕಣ್ಣಪ್ಪ, ಭಕ್ತಮಲ್ಲಿಕಾರ್ಜುನ, ಮಹಾಕವಿಕಾಳಿದಾಸ, ಭಕ್ತಮಾರ್ಕಂಡೇಯ, ವೀರಕೇಸರಿ, ಬೆಟ್ಟದ ಹುಲಿ, ಅಮರಶಿಲ್ಪಿಜಕಣಾಚಾರಿ, ಶ್ರೀಕೃಷ್ಣದೇವರಾಯ ಅಭಿನಯದ ಪ್ರಮುಖ ಚಿತ್ರಗಳು. ಪುತ್ರ ಶ್ರೀಕಾಂತನ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಸ್ಥಾಪಿಸಿ ತೆಗೆದ ಚಿತ್ರ ಪ್ರೊ. ಹುಚ್ಚೂರಾಯ. ಚಿತ್ರಪ್ರೇಮಿಗಳ ಸಂಘದಿಂದ ಹಾಸ್ಯಚಕ್ರವರ್ತಿ, ಹಾಸ್ಯಬ್ರಹ್ಮ ಮುಂತಾದ ಬಿರುದು ಸನ್ಮಾನಗಳನ್ನು ಪಡೆದಿದ್ದರೂ ಸರ್ಕಾರ, ಪ್ರಸಿದ್ಧ ಸಂಘ ಸಂಸ್ಥೆಗಳಿಂದ ಯಾವ ಪ್ರಶಸ್ತಿಯೂ ದೊರೆಯದಿದ್ದುದು ಆಶ್ಚರ್ಯ.   ಇದೇ ದಿನ ಹುಟ್ಟಿದ ಕಲಾವಿದರು: ಎ. ಸುಬ್ಬರಾವ್‌ – ೧೯೨೩ ಅಂಬುಜಾದೇವಿ – ೧೯೩೭ ಎಸ್‌.ಜಿ. ರಘುರಾಮನ್‌ – ೧೯೪೦ ಸತೀಶ್‌ ಹಂಪಿಹೊಳಿ – ೧೯೬೫

* * *

ಡಾ. ವರದಾ ಶ್ರೀನಿವಾಸ್

೨೮..೧೯೫೦ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಹಲವಾರು ಕೃತಿ ರಚಿಸಿರುವ ವರದಾ ಶ್ರೀನಿವಾಸ್‌ರವರು ಹುಟ್ಟಿದ್ದು ಕಾಸರಗೋಡಿನಲ್ಲಿ, ತಂದೆ ಪಿ.ಕೆ. ನಾರಾಯಣರವರು ಕನ್ನಡಕ್ಕಾಗಿ ದುಡಿದವರು, ಪಂಡಿತರು, ನಾಟಕಕಾರರು, ಪತ್ರಿಕೋದ್ಯಮಿಗಳು. ತಾಯಿ ಪಿ.ಕೆ. ಸುಂದರಿ.

ಪ್ರೊ. ಮರಿಯಪ್ಪಭಟ್ಟ

೨೭-೭-೧೯೦೬ ೨೧-೩-೧೯೮೦ ಮೂರು ದಶಕಗಳ ಕಾಲ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪಂಡಿತರಾಗಿ, ನಿಘಂಟುತಜ್ಞರಾಗಿ, ಸಂಶೋಧಕರಾಗಿದ್ದ ಮರಿಯಪ್ಪಭಟ್ಟರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ. ತಂದೆ ಗೋವಿಂದಭಟ್, ತಾಯಿ ಕಾವೇರಿ ಅಮ್ಮ. ಪ್ರಾರಂಭಿಕ ವಿದ್ಯಾಭ್ಯಾಸ ಪುತ್ತೂರು ಸಮೀಪದ ಪೊಳ್ಯದಲ್ಲಿ. ಹೈಸ್ಕೂಲಿಗೆ ಸೇರಿದ್ದು ಪುತ್ತೂರಿನಲ್ಲಿ. ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಿಂದ ಬಿ.ಎ. ಪದವಿ. ಉದ್ಯೋಗಕ್ಕೆ ಸೇರಿದ್ದು ಮದರಾಸಿನ ಪ್ರಾಚ್ಯ ಹಸ್ತ ಪ್ರತಿ ಸಂಶೋಧನ ಗ್ರಂಥ ಭಂಡಾರದಲ್ಲಿ ಜ್ಯೂ. ಅಸಿಸ್ಟೆಂಟ್‌ರಾಗಿ. ನಂತರ ಗಣಿತ ಶಾಸ್ತ್ರದ ಉಪಾಧ್ಯಾಯರಾಗಿ ಮದರಾಸಿನ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ವೃತ್ತಿ. ಸ್ವಂತ ಪರಿಶ್ರಮದಿಂದ ಕನ್ನಡ ಎಂ.ಎ. ಪದವಿ, ಎಲ್.ಟಿ. ಪದವಿ ಸಂಪಾದಿಸಿದ್ದಲ್ಲದೆ ಪಡೆದ ಕನ್ನಡ ವಿದ್ವಾನ್ ಪದವಿ. ೧೯೪೦ರಲ್ಲಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕ, ರೀಡರ್, ಪ್ರೊಫೆಸರ್ ಆಗಿ ಬಡ್ತಿ, ಅದೇ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೧೯೭೨ರಲ್ಲಿ ನಿವೃತ್ತಿ. ಮೂರು ದಶಕಗಳಿಗೂ ಹೆಚ್ಚು ಕಾಲ ಕನ್ನಡ ವಿಭಾಗದ ಏಳಿಗೆಗಾಗಿ ಪಟ್ಟ ಪರಿಶ್ರಮ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಕೇಂದ್ರ ಫಿಲಂ ಸೆನ್ಸಾರ್ ಮಂಡಳಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ, ಪಠ್ಯಪುಸ್ತಕ ಸಮಿತಿ, ಅಧ್ಯಯನ ಮಂಡಲಿ, ನಿಘಂಟು ರಚನಾ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ರಚನಾ ಸಮಿತಿಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಕನ್ನಡ, ಇಂಗ್ಲಿಷ್, ತುಳು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಹೊಂದಿದ್ದ ವಿಶೇಷ ಜ್ಞಾನ. ಹಲವಾರು ಹಳೆಗನ್ನಡ ಕಾವ್ಯ ಹಾಗೂ ಶಾಸ್ತ್ರ ಗ್ರಂಥಗಳನ್ನು ಸಂಪಾದಿಸಿ ಪ್ರಕಟಣೆ. ಸ್ವತಂತ್ರ ಕೃತಿಗಳು-ಕನ್ನಡ ಸಂಸ್ಕೃತಿ, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಕೇಶಿರಾಜ. ಅನುವಾದ-ಸಂತರ ಚರಿತ್ರೆ. ಸಂಪಾದಿತ ಕೃತಿಗಳು-ಗುಣಚಂದ್ರನ ಛಂದಸ್ಸಾರ, ಸಂಗೀತ ರತ್ನಾಕರ, ಗುರುಬಸವ ಸದ್ಗುರು ರಹಸ್ಯ, ಮಂಗರಾಜನ ಅಭಿನವಾಭಿದಾನಂ, ಸೆಲೆಕ್ಟೆಡ್ ಕನ್ನಡ ಇನ್‌ಸ್ಕ್ರಿಪ್ಷನ್ಸ್, ಆಚಣ್ಣನ ವರ್ಧಮಾನ ಪುರಾಣಂ, ಪಾರ್ಶ್ವನಾಥ ಪುರಾಣಂ, ಶ್ರೀಧರಾಚಾರ‍್ಯರ ಜಾತಕ ತಿಲಕಂ, ಚಿಕುಪಾಧ್ಯಾಯನ ವಿಷ್ಣುಪುರಾಣಂ, ಹಳಗನ್ನಡ, ನಡುಗನ್ನಡ ಕಾವ್ಯ ಸಂಗ್ರಹ, ಹೊಸಗನ್ನಡ ಕಾವ್ಯಶ್ರೀ, ನಾಲ್ನುಡಿ-ನಾಣ್ಣುಡಿ, ಸರ್ವಜ್ಞನ ವಚನ ಸಂಗ್ರಹ. ನಿಘಂಟುಗಳು-ದ್ರಾವಿಡಿಯನ್ ಕಂಪ್ಯಾರಿಟಿವ್ ವಕ್ಯಾಬುಲರಿ, ಹವ್ಯಕ-ಇಂಗ್ಲಿಷ್ ನಿಘಂಟು, ತುಳು-ಇಂಗ್ಲಿಷ ನಿಘಂಟು, ರೆ| ಎಫ್. ಕಿಟೆಲರ ಕನ್ನಡ-ಇಂಗ್ಲಿಷ್ ನಿಘಂಟನ್ನು ಪರಿಷ್ಕರಿಸಿ, ವಿಸ್ತಾರಗೊಳಿಸಿ, ನಿಘಂಟು ರಚಿಸಿ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಮಹತ್ಕೃತಿ. ಸಂದ ಪ್ರಶಸ್ತಿಗಳಲ್ಲಿ ಮುಖ್ಯವಾದುವು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ಫೆಲೋಷಿಪ್, ಶ್ರೀನಗರದಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಅಧ್ಯಕ್ಷತೆ. ಅಭಿಮಾನಿಗಳು ಅರ್ಪಿಸಿದ ಸಂಸ್ಮರಣ ಗ್ರಂಥ ‘ಸಾರ್ಥಕ.’   ಇದೇ ದಿನ ಹುಟ್ಟಿದ ಸಾಹಿತಿಗಳು : ಶ್ರೀನಿವಾಸ ಕುಲಕರ್ಣಿ – ೧೯೨೮ ಜೋಳದರಾಶಿ ದೊಡ್ಡನಗೌಡ – ೧೯೧೦

ಜೋಳದರಾಶಿ ದೊಡ್ಡನಗೌಡರು

೨೭..೧೯೧೦ ೧೦..೧೯೯೪ ನಾಟಕಕಾರ, ಕವಿ, ಗಮಕಿ ದೊಡ್ಡನಗೌಡರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಜೋಳದರಾಶಿ ಗ್ರಾಮದಲ್ಲಿ. ತಂದೆ ಪಂಪನಗೌಡರು, ತಾಯಿ ರುದ್ರಮ್ಮ. ಹುಟ್ಟಿದೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ. ‘ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಪ್ರಭುಲಿಂಗಲೀಲೆ ಮುಂತಾದ ಕಾವ್ಯಗಳ ಅಭ್ಯಾಸ. ಬಯಲಾಟದಲ್ಲಿ ವೇಶಕಟ್ಟುವುದು ಅನುವಂಶಿಕವಾಗಿ ಬಂದ ಗುಣ. ಬಾಲ್ಯದಲ್ಲಿಯೇ ನಟರಾಗಿ ನಾಟಕ ಕಂಪನಿ ಕಟ್ಟಿ ಕೈಸುಟ್ಟುಕೊಂಡ ನಂತರ ಬಳ್ಳಾರಿ ರಾಘವರಿಂದ ನಟಿಸಲು ಬಂದ ಆಹ್ವಾನ. ತಂದೆಯವರ ಒಪ್ಪಿಗೆ ಪಡೆದು ಪುನಃ ಸೇರಿದ್ದು ರಂಗಭೂಮಿ. ತೆಲುಗು, ಕನ್ನಡ ನಾಟಕಗಳಲ್ಲಿ ಅಭಿನಯ. ಕನಕದಾಸರ ಪಾತ್ರವನ್ನು ನೋಡಿದ ಜನತೆಯಿಂದ ದೊರೆತ ಅಭೂತಪೂರ್ವ ಸನ್ಮಾನ, ಬಸವೇಶ್ವರ, ಕನಕದಾಸ, ಕಬೀರದಾಸ, ನಾರದ, ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ಉಭಯ ಭಾಷೆಗಳ ರಂಗಭೂಮಿಯ ನಟರಾಗಿ ಪ್ರೇಕ್ಷಕರಿಗೆ ನೀಡಿದ ರಂಜನೆ. ಕಂಚಿನ ಕಂಠದ ದೊಡ್ಡನಗೌಡರಿಗೆ ಒಲಿದು ಬಂದ ಹಾಡುಗಾರಿಕೆ. ಕವಿ ಪುಟ್ಟಪ್ಪನವರ ಮನೆಯಲ್ಲಿ ದ.ರಾ. ಬೇಂದ್ರೆ, ಕೋ. ಚನ್ನಬಸಪ್ಪ, ವೀರಭದ್ರಪ್ಪನವರ ಸಮ್ಮುಖದಲ್ಲಿ ರಾಮಾಯಣದರ್ಶನಂನ ಶಬರಿ ಕಥಾ ಪ್ರಸಂಗ ವಾಚಿಸಿ ಪಡೆದ ಮೆಚ್ಚುಗೆ. ಕನ್ನಡ ಮತ್ತು ತೆಲುಗಿನಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಕೃತಿ ರಚನೆ. ರಸವರ್ಷ, ಯಾತ್ರಿಕ, ನಮ್ಮ ಹಂಪೆ, ಗೌಡತಿ ಬರಲ್ಲಿಲ್ಲ, ರಾಮೇಶನ ವಚನಗಳು ಪ್ರಮುಖ ಕೃತಿಗಳು. ನೋಡ್ರವ್ವ ನಾಟಕ, ಅಭಯ, ಸಾಯದವನ ಸಮಾಧಿ, ಕ್ರಾಂತಿ ಪುರುಷ, ಕನಕದಾಸ ಪ್ರಖ್ಯಾತ ನಾಟಕಗಳು. ನಂದೇ ನಾನೋದಿದೆ ಆತ್ಮಕಥನ. ಗಮಕ ಕಲಾನಿಧಿ ಅರ್ಪಿತ ಸಂಭಾವನ ಗ್ರಂಥ. ಸಂಘಟಕರಾಗಿ, ಬಳ್ಳಾರಿ ಜಿಲ್ಲಾ ಕನ್ನಡ ಕಲಾ ಪರಿಷತ್ತು ಸ್ಥಾಪಿಸಿ ನಡೆಸಿದ ನಾಟಕ ಸಮ್ಮೇಳನಗಳು ಮೂರುಬಾರಿ, ಜೋಳದರಾಶಿ, ಬಳ್ಳಾರಿ ಮತ್ತು ಕಣೇಕಲ್ಲಿನಲ್ಲಿ. ಗರೂಡ ಸದಾಶಿವರಾಯರು, ಆರ್. ನಾಗೇಂದ್ರರಾಯರು, ಅ.ನ.ಕೃ ರವರ ಅಧ್ಯಕ್ಷತೆ. ನಾಟಕ ಕಲೆಯ ಬಗ್ಗೆ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳು. ಕರ್ನಾಟಕ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ೧೯೮೧ ರಲ್ಲಿ ಬಳ್ಳಾರಿಜಿಲ್ಲಾ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಮುಂತಾದ ಗೌರವಗಳು.   ಇದೇ ದಿನ ಹುಟ್ಟಿದ ಕಲಾವಿದರು ಶಕುಂತಳಾ ಶ್ರೀನಿವಾಸನ್‌ – ೧೯೨೬ ವೆಂಕಟೇಶ್‌. ಟಿ.ಎಂ – ೧೯೪೯ ಲಕ್ಷ್ಮಣ, ಸಿ – ೧೯೫೬ ಕುಂದಣ ನಾಗೇಂದ್ರ – ೧೯೬೩

* * *

ಮನು (ಪಿ. ನರಸಿಂಹರಂಗನ್)

೨೭..೧೯೪೬ ೦೮.೧೧.೨೦೧೧ ಓದಿದ ವಿಜ್ಞಾನದ ವಿಷಯಗಳ ಹಿನ್ನೆಲೆಯನ್ನೇ ಮೂಲದ್ರವ್ಯವಾಗಿ ಬಳಸಿಕೊಂಡು ಹಲವಾರು ವೈಜ್ಞಾನಿಕ ಕತೆ, ಕಾದಂಬರಿಗಳನ್ನು ರಚಿಸಿದ ಮನು (ಪೆನುಗೊಂಡೆ ನರಸಿಂಹರಂಗನ್‌) ರವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ೧೯೪೬ರ ಜುಲೈ೨೭ ರಂದು. ತಂದೆ ಪೆನುಗೊಂಡೆ ದೇಶಿಕಾಚಾರ್ಯರು, ತಾಯಿ ರಂಗನಾಯಕಮ್ಮ.

ಡಾ. ಎಸ್.ಎಲ್. ಭೈರಪ್ಪ

೨೬-೭-೧೯೩೪ ಮಹತ್ವದ ಕಾದಂಬರಿಕಾರರಲ್ಲೊಬ್ಬರಾದ ಭೈರಪ್ಪನವರು ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆ ಶಿವರ ಗ್ರಾಮದಲ್ಲಿ. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ. ಹುಟ್ಟೂರಿನ ಸುತ್ತಮುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಸೇರಿದ್ದು ಪ್ರೌಢಶಾಲೆಗೆ. ಮಹಾರಾಜ ಕಾಲೇಜಿನಲ್ಲಿ ತತ್ತ್ವಶಾಸ್ತ್ರದಲ್ಲಿ ಬಿ.ಎ. (ಆನರ್ಸ್‌), ಎಂ.ಎ. ಪದವಿ. ಎಂ.ಎ. ಪರೀಕ್ಷೆಯಲ್ಲಿ ಪ್ರಥಮ ದರ್ಜೆ, ಮೈಸೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ, ಎರಡು ಸ್ವರ್ಣಪದಕ. ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯಕ್ಕೆ ಸತ್ಯ ಮತ್ತು ಸೌಂದರ್ಯ (TRUTH AND BEAUTY) ಮಹಾಪ್ರಬಂಧ ಮಂಡಿಸಿ ೧೯೬೨ರಲ್ಲಿ ಪಡೆದ ಪಿಎಚ್.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಹುಬ್ಬಳ್ಳಿಯ ಕಾಡುಸಿದ್ದೇಶ್ವರ ಕಾಲೇಜಿನಲ್ಲಿ ತರ್ಕ ಮತ್ತು ಮನಃಶಾಸ್ತ್ರದ ಅಧ್ಯಾಪಕರಾಗಿ. ನಂತರ ಗುಜರಾತ್‌ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಆರು ವರ್ಷ ತತ್ತ್ವಶಾಸ್ತ್ರದ ಉಪನ್ಯಾಸಕರ ಹುದ್ದೆ. ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ನಾಲ್ಕು ವರ್ಷ ಶಿಕ್ಷಣ ಮೀಮಾಂಸೆಯ ರೀಡರಾಗಿ, ಪ್ರಾಧ್ಯಾಪಕರಾಗಿ ೧೯೯೧ರಲ್ಲಿ ನಿವೃತ್ತಿ. ಪ್ರಪಂಚ ಪರ‍್ಯಟನೆ ಮಾಡಿ ಗಳಿಸಿದ ವ್ಯಾಪಕ ಅನುಭವ. ಜಪಾನ್, ಇಂಗ್ಲೆಂಡ್, ಈಜಿಪ್ಟ್, ಅಮೆರಿಕಾ, ಜರ್ಮನಿ, ಇಟಲಿ, ಫ್ರಾನ್ಸ್ ಮುಂತಾದ ದೇಶಗಳಿಗೆ ಭೇಟಿ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಪ್ರಾರಂಭಿಸಿದ ಬರವಣಿಗೆಯ ಹವ್ಯಾಸ. ಜ್ಯೂನಿಯರ್ ಇಂಟರ್‌ನಲ್ಲಿದ್ದಾಗ ಬರೆದ ಕಾದಂಬರಿ ‘ಜಟ್ಟಿ ಮತ್ತು ಮಟ್ಟಿ.’ ಮೌಲ್ಯಗಳ ಸಂಘರ್ಷ ಹಳತು-ಹೊಸತು, ಹಳಬರು-ಆಧುನಿಕರು ಭಿನ್ನಭಿನ್ನ ನಿಲುವುಗಳ ಮೂಲಕ ತೆರೆದುಕೊಂಡ ಸನ್ನಿವೇಶಗಳು ರೂಪಗೊಳ್ಳುತ್ತಾ ಹೋಗುವುದೇ ಇವರ ಕಾದಂಬರಿಗಳ ವೈಶಿಷ್ಟ್ಯ. ಹಲವಾರು ಕಾದಂಬರಿಗಳು ಭಾರತೀಯ ಭಾಷೆಗಳಿಗೆ ಭಾಷಾಂತರ. ಹಲವಾರು ಕಾದಂಬರಿಗಳ ಪುನರ್‌ಮುದ್ರಣ. ಕಾದಂಬರಿಗಳು-ಭೀಮಕಾಯ, ಬೆಳಕು ಮೂಡಿತು, ಧರ್ಮಶ್ರೀ, ದೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿನೆರಳು, ತಬ್ಬಲಿಯ ನೀನಾದೆ ಮಗನೆ…..ಯಿಂದ ಹಿಡಿದು ಇತ್ತೀಚಿನ ‘ಕವಲು’ವರೆಗೆ ೨೩ ಕಾದಂಬರಿಗಳು ಪ್ರಕಟಿತ. ನೀಳ್ಗತೆ-ಗತ ಜನ್ಮ. ವಿಮರ್ಶಾ ಕೃತಿಗಳು-ಸಾಹಿತ್ಯ ಮತ್ತು ಪ್ರತೀಕ, ಸತ್ಯ ಮತ್ತು ಸೌಂದರ್ಯ, ಕಥೆ ಮತ್ತು ಕಥಾವಸ್ತು, ನಾನೇಕೆ ಬರೆಯುತ್ತೇನೆ. ಆತ್ಮವೃತ್ತಾಂತ-‘ಭಿತ್ತಿ.’ ಸಂದ ಗೌರವ ಪ್ರಶಸ್ತಿಗಳು ಹಲವಾರು. ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗ್ರಂಥಲೋಕ ಮತ್ತು ಗೊರೂರು ಪ್ರತಿಷ್ಠಾನದ ವರ್ಷದ ವ್ಯಕ್ತಿ, ಮಾಸ್ತಿ ಪ್ರಶಸ್ತಿ, ಅ.ನ.ಕೃ ಪ್ರತಿಷ್ಠಾನ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಗುರೂಜಿ ಸಾಹಿತ್ಯ ಪುರಸ್ಕಾರ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (೧೯೯೯-ಕನಕಪುರ) ಅಧ್ಯಕ್ಷತೆ ಮುಖ್ಯವಾದುವುಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ವಾಗೀಶ್ವರಿ ಶಾಸ್ತ್ರಿ – ೧೯೨೬ ಶೈಲಜಾ ಉಡುಚಣ – ೧೯೩೫ ಜಿ.ಜೆ. ಹರಿಜಿತ್ – ೧೯೩೮ ತೇಜಸ್ವಿನಿ ನಿರಂಜನ – ೧೯೫೮ ರಾಧಾಕೃಷ್ಣ ಕಲ್ಯಾಣಪುರ್ – ೧೯೩೭

ಬಿ.ಆರ್. ಪಂತುಲು

೨೬..೧೯೧೧ .೧೦.೧೯೭೪ ಪ್ರಖ್ಯಾತ ರಂಗಭೂಮಿಯ ಕಲಾವಿದರಾದ ಪಂತುಲು ರವರು ಹುಟ್ಟಿದ್ದು ಬಂಗಾರುಪೇಟೆಯ ಸಮೀಪದ ಬುಡುಗೂರು ಗ್ರಾಮದಲ್ಲಿ. ತಂದೆ ಕಲಾ ಪ್ರೇಮಿ, ನಾಟಕ ಪ್ರಿಯರಾಗಿದ್ದ ವೆಂಕಟಾಚಲಯ್ಯ, ಮಾತೃಭಾಷೆ ತೆಲುಗಾದರೂ ತಮಿಳು, ಕನ್ನಡ ಭಾಷೆಯನ್ನು ಲೀಲಾಜಾಲವಾಗಿ ಪ್ರಯೋಗಿಸುವ ಕಲೆಗಾರಿಕೆ. ಮದರಾಸಿನಲ್ಲಿ ವ್ಯಾಸಂಗ ಮುಗಿಸಿದ ನಂತರ ಕುಪ್ಪಂನಲ್ಲಿ ಶಾಲಾ ಉಪಾಧ್ಯಾಯರಾಗಿ ವೃತ್ತಿಜೀವನ ಆರಂಭ. ನಾಟಕಾಭಿನಯದ ಗೀಳು ಹತ್ತಿ ಹೊರಟಿದ್ದು ಬೆಂಗಳೂರಿಗೆ. ಮಹಮದ್‌ ಪೀರ್ ರವರ ಚಂದ್ರಕಲಾ ನಾಟಕ ಸಂಸ್ಥೆ ಸೇರಿ ಹಲವಾರು ನಾಟಕಗಳಲ್ಲಿ ಅಭಿನಯ. ಷಾಜಹಾನ್‌ ನಾಟಕದ ಅಭಿನಯದಿಂದ ಪಡೆದ ಖ್ಯಾತಿ. ಸಂಸಾರನೌಕಾದ ಸುಂದರ, ಸದಾರಮೆಯ ಪುರೋಹಿತ, ರಾಮಾಯಣದ ರಾವಣ, ಗುಲೇಬಕಾವಲಿಯ ನಾಯಕನಟರಾಗಿ ಪಡೆದ ಜನಮೆಚ್ಚುಗೆ. ಸಂಸಾರನೌಕಾನಾಟಕವು ಬೆಂಗಳೂರು ಒಂದರಲ್ಲೆ ೧೨೫ ಪ್ರದರ್ಶನ ನೀಡಿ ಪಡೆದ ಖ್ಯಾತಿ. ಪೀರ್ ಕಂಪನಿ ಬಿಟ್ಟು ಸೇರಿದ್ದು ಗುಬ್ಬಿ ಕಂಪನಿ. ಆಶಾ-ಪಾಶ, ಕೃಷ್ಣಗಾರುಡಿ ನಾಟಕಗಳಲ್ಲಿ ಪ್ರಮುಖಪಾತ್ರ. ಎಂ. ಮಾಧುರಾಯರ ಜೊತೆಗೂಡಿ ಸ್ಥಾಪಿಸಿದ ಸ್ವಂತ ನಾಟಕ ಸಂಸ್ಥೆ ‘ಕಲಾಸೇವಾಮಂಡಲಿ’. ಸಂಸಾರ ನೌಕಾ, ಸದಾರಮೆ, ರಾಮಾಯಣ, ಗುಲೇಬಕಾವಲಿ ನಾಟಕಗಳಿಂದ ಪಡೆದ ಜನಪ್ರಿಯತೆ. ಆಂಧ್ರ, ಮದರಾಸಿನಲ್ಲೂ ನಾಟಕಗಳ ಪ್ರದರ್ಶನ. ಕೆಲಕಾಲ ಬಿ.ಆರ್. ಮಹಾಲಿಂಗಂ ನಾಟಕ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆ. ಎಚ್‌.ಎಲ್‌.ಎನ್‌. ಸಿಂಹ ನಿರ್ದೇಶನದ ಸಂಸಾರನೌಕಾ ಚಲನಚಿತ್ರದ ಮೂಲಕ ಚಲನಚಿತ್ರನಟನ ಪಟ್ಟ. ರಾಧಾರಮಣ ಚಲನಚಿತ್ರದ ನಾಯಕ. ಸ್ವತಂತ್ರ ಚಿತ್ರ ಸಂಸ್ಥೆಯಿಂದ ಹಲವಾರು ಚಿತ್ರಗಳ ನಿರ್ಮಾಣ. ಮೊದಲತೇದಿ, ನಂಬೆಕ್ಕ, ಮೊದಲು ನಿರ್ದೇಶಿಸಿದ ಚಿತ್ರ ರತ್ನಗಿರಿ ರಹಸ್ಯ. ಸ್ಕೂಲ್‌ಮಾಸ್ಟರ್ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಾಲಿನಲ್ಲಿ ಅಖಿಲಭಾರತ ಮಟ್ಟದಲ್ಲಿ ಭಾರತೀಯ ಭಾಷಾ ಚಿತ್ರಗಳಿಗೆ ನೀಡುವ ಅರ್ಹತಾ ಪತ್ರ ಪಡೆದ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆ. ಹಲವಾರು ಐತಿಹಾಸಿಕ ಚಿತ್ರಗಳ ನಿರ್ಮಾಣ. ಕಿತ್ತೂರು ಚೆನ್ನಮ್ಮ ಹಾಗೂ ಕೃಷ್ಣದೇವರಾಯ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ, ತಿಮ್ಮರಸು ಪಾತ್ರಕ್ಕೆ ದೊರೆತ ಶ್ರೇಷ್ಠನಟ ಪ್ರಶಸ್ತಿ   ಇದೇ ದಿನ ಹುಟ್ಟಿದ ಕಲಾವಿದರು ಸಯ್ಯದ್‌ಜಾನ್‌. ಟಿ.ಎಲ್‌ – ೧೯೩೬ ಯದುಗಿರಿ ಎಚ್‌.ಎಸ್‌ – ೧೯೪೨ ಶ್ಯಾಮಲಕೃಷ್ಣ ಜಿ. ಕುಲಕರ್ಣಿ – ೧೯೫೨

* * *

ಡಾ. ಶೈಲಜಾ ಉಡಚಣ

೨೬..೧೯೩೫ ೦೬.೧೨.೨೦೧೦ ಸಂಪ್ರದಾಯಸ್ಥ ಮನೆತನ, ವಿಚಾರಶೀಲ ವ್ಯಕ್ತಿತ್ವ, ಸ್ವತಂತ್ರವಾಗಿ ಆಲೋಚಿಸುವ, ಚಿಂತನ ಪರ ನಿಲುವಿನಲ್ಲಿ ಭಾಷೆ ಹಾಗೂ ಬದುಕಿಗಾಗಿ ಸಂಘರ್ಷದ ಅನಿವಾರ್ಯತೆಯನ್ನನುಭವಿಸುತ್ತಿದ್ದ ಶೈಲಜಾರವರು ಹುಟ್ಟಿದ್ದು ರಾಯಚೂರಿನಲ್ಲಿ ೧೯೩೫ರ ಜುಲೈ ೨೬ರಂದು. ತಂದೆ ತಾಯಿಗಳಿಟ್ಟ ಹೆಸರು ಮಹಾಂತಮ್ಮ ಹಸಮಕಲ್‌. ಮದುವೆಯಾದದ್ದು ಗುಲಬರ್ಗದ ಬಸವಣ್ಣಪ್ಪ ಉಡಚಣರವನ್ನು, ನಂತರ ಶೈಲಜಾ ಉಡಚಣರೆಂದೇ ಪ್ರಖ್ಯಾತರಾದರು. ಓದಿದ್ದು ನಿಜಾಮದ ಕಾಲದ ಮಹಿಳಾ ಸ್ಕೂಲಿನಲ್ಲಿ ಏಳನೆಯ ತರಗತಿಯವರೆವಿಗೆ ಕನ್ನಡ ಮಾಧ್ಯಮದಲ್ಲಿ. ನಂತರ ಮೆಟ್ರಿಕ್ಯುಲೇಷನ್‌ವರೆಗೆ ಓದಿದ್ದು ಉರ್ದು ಮಾಧ್ಯಮದಲ್ಲಿ. ನಿಜಾಮರ ಆಳ್ವಿಕೆಯ ಕಾಲ. ಸ್ವಾತಂತ್ಯ್ರಾ ನಂತರ ಭಾರತದ ಎಲ್ಲ ಪ್ರಾಂತಗಳೂ ಭಾರತದ ಒಕ್ಕೂಟದಲ್ಲಿ ವಿಲೀನವಾದರೂ ಹೈದರಾಬಾದ್ ಸಂಸ್ಥಾನವು ವಿಲೀನವಾಗದೆ ಕಾಸಿಮ್‌ ರಜ್ವಿ ನೇತೃತ್ವದಲ್ಲಿ ವಿರೋಧಿಸುತ್ತಿದ್ದು, ರಜಾಕರಕವಾಯಿತು ಬೀದಿಬೀದಿಯಲ್ಲಿಯೂ ನಡೆಯುತ್ತಿದ್ದು ಭಯದ ವಾತಾವರಣದಲ್ಲಿ ಗುಂಡು, ಗೋಲಿಗಳ ಸದ್ದಿನ ನಡುವೆಯೇ ಶಾಲೆಯಲ್ಲಿ ಕಲಿಕೆ. ಒಂದೆಡೆ ಭಯದ ವಾತಾವರಣ, ಮತ್ತೊಂದೆಡೆ ಆ ಕಾಲದಲ್ಲಿ ಮಹಿಳೆಯರನ್ನೂ ಕಾಲೇಜಿಗೆ ಕಳುಹಿಸುವ ಪರಿಪಾಠವಿರದ ದಿನಗಳು. ಆದರೂ ಸಮಾಜ, ಬಂಧು ಬಾಂಧವರ ವಿರೋಧದ ನಡುವೆಯೂ, ತಂದೆತಾಯಿಗಳ, ಗುರುಹಿರಿಯರ ಆಶೀರ್ವಾದದೊಡನೆ ಕಲಿತು ಹೈಸ್ಕೂಲು ಶಿಕ್ಷಕಿಯಾದದ್ದು ದೊಡ್ಡ ಸಾಧನೆಯ. ಅಧ್ಯಯನ ಶೀಲ ಮನೋಧರ್ಮದ ಶೈಲಜಾರವರು ಬಿ.ಎ., ಬಿ.ಎಡ್‌., ಎಂ.ಎ. ಪದವಿಗಳನ್ನೆಲ್ಲಾ ಪಡೆದದ್ದು ಖಾಸಗಿಯಾಗಿ ಓದಿ. ೧೯೫೯ರಲ್ಲಿ ಗುಲಬರ್ಗಾ ಕಾಲೇಜಿಗೆ ಅಧ್ಯಾಪಕಿಯಾಗಿ ನೇಮಕಗೊಂಡ ನಂತರ ಗುಲಬರ್ಗಾ ಸರಕಾರಿ ಕಾಲೇಜ್‌ ಅಲ್ಲದೆ ಮೈಸೂರು ಮತ್ತು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿಯೂ ಕಾರ್ಯನಿರ್ವಹಿಸಿ ೧೯೯೧ರಲ್ಲಿ ನಿವೃತ್ತಿ ಪಡೆದರು. ಒಂದೆಡೆ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಇಬ್ಬರು ಹುಡುಗರು ಮಾತನಾಡಲು ಪ್ರಾರಂಭಿಸಿದರೆ ‘ಅರೆ, ಯೂರ್, ಕ್ಯಾಕರ್ ರಹೆ ಹೋ…’ ಎಂದೇ ಪ್ರಾರಂಭವಾಗುತ್ತಿದ್ದ ಪರಿಸರದಲ್ಲಿ ಕನ್ನಡವನ್ನೂ ಕಟ್ಟಿ ಬೆಳೆಸಿದ್ದಲ್ಲದೆ, ಮೈಸೂರಿನ ಕಾಲೇಜಿಗೆ ವರ್ಗವಾಗಿ ಬಂದಾಗ ಹೈದರಾಬಾದ್‌ ಕರ್ನಾಟಕದವರಿಗೆ ಕನ್ನಡವೂ ಬರುತ್ತದಾ ಎಂದು ಸಂಶಯಿಸಿದವರಿಗೆ ಕನ್ನಡದಲ್ಲಿ ನಿರರ್ಗಳವಾಗಿ ಪಾಠ ಮಾಡಿ ತೋರಿಸಿ ಕನ್ನಡತನ ಮೆರೆದದ್ದು, ಇವೆಲ್ಲದರ ಹಿಂದಿನ ಶ್ರಮ ಊಹೆಗೂ ನಿಲುಕದ್ದು. ಅಧ್ಯಯನ ಶೀಲ ಪ್ರವೃತ್ತಿಯೇ ಇವರ ಕಾವ್ಯಾಸಕ್ತಿಯ ಮೂಲ ಸೆಲೆಯಾಗಿತ್ತು. ಇವರು ೯ನೆಯ ತರಗತಿಯಲ್ಲಿದ್ದಾಗಲೇ ಸ್ಥಳೀಯ ಪತ್ರಿಕೆಗಳಿಗೆ ಹಲವಾರು ಪದ್ಯಗಳನ್ನೂ ಬರೆದಿದ್ದರು. ಆದರೆ ಸ್ವತಃ ತಾವೇ ಮುನ್ನುಗ್ಗಿ ಪತ್ರಿಕೆಗಳಿಗೆ ಬರೆದು ಕಳುಹಿಸುವ ಪರಿಪಾಠವನ್ನೂ ಇಟ್ಟುಕೊಳ್ಳದೆ, ಕೇಳಿದಾಗ ಬರೆದುಕೊಡುವುದರಲ್ಲಿಯೇ ತೃಪ್ತರು. ಎಂ.ಎಂ. ಕಲಬುರ್ಗಿ ಮತ್ತು ಗುರುಲಿಂಗ ಕಾಪಸೆಯವರ ಒತ್ತಾಯದ ಮೇರೆಗೆ ಮೊದಲ ಕವನ ಸಂಕಲನ ‘ಒಂದುಗಳಿಗೆ’ (೧೯೭೨) ಪ್ರಕಟವಾದುದು ಇವರ ಮೂವತ್ತೈದನೆಯ ವಯಸ್ಸಿನ ನಂತರವೇ. ನಂತರ ‘ಕಾದುನೋಡು’ (೧೯೭೯) ‘ಸ್ವಗತ’ (೧೯೮೧), ‘ಕಪ್ಪುನೆಲ ಸೊಕ್ಕಿದ ಸೂರ್ಯ’ (೧೯೮೭), ‘ತುಂತುರು ಹನಿಗಳು’ (೧೯೯೧), ‘ನನ್ನಂಥವರು’ (೧೯೯೫) ಹೀಗೆ ಹಲವಾರು ಕವನ ಸಂಕಲನಗಳು ಪ್ರಕಟಗೊಂಡವು. ೧೯೭೭ ರಲ್ಲಿ ‘ಕೇಳು ಮಗಾ’ ಎಂಬ ವಚನ ಸಂಕಲನವನ್ನು ಹೊರತಂದರು. ಇವರ ಕೆಲವು ಕವಿತೆಗಳು ಹಿಂದಿ ಹಾಗೂ ಮರಾಠಿ ಭಾಷೆಗೂ ಅನುವಾದಗೊಂಡಿವೆ. ‘ವಚನಕಾರರ ದೃಷ್ಟಿಯಲ್ಲಿ ಸ್ತ್ರೀ’ ಎಂಬ ಪ್ರೌಢಪ್ರಬಂದವನ್ನು ಪಿಎಚ್‌.ಡಿ.ಗಾಗಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಿಎಚ್‌.ಡಿ. ಮತ್ತು ಬಹುಮಾನ ಪಡೆದದ್ದು ೧೯೭೭ ರಲ್ಲಿ. ಈ ಗ್ರಂಥವು ೧೯೯೧ ರಲ್ಲಿ ಪ್ರಕಟಗೊಂಡಿತು. ಇತರ ಗದ್ಯ ಕೃತಿಗಳೆಂದರೆ ‘ವಚನಗಳಲ್ಲಿ ಸತಿಪತಿಭಾವ’, ‘ನನ್ನ ಲೇಖನಗಳು’, ವಚನ ಸಾಹಿತ್ಯ ಮತ್ತು ಮಹಿಳೆ, ‘ಮೂರು ಮಾತು ನೂರು ನೀತಿ’, ‘ನಾನು ಮತ್ತು ಸಾಹಿತ್ಯ’, ‘ಕಾಲ ನಮ್ಮ ಕೈಯಲ್ಲಿದೆ’ ಮತ್ತು ಅಮೃತಾ ಪ್ರೀತಮ್‌ ರವರ ಅನುವಾದಿತ ಕೃತಿ ‘ನುಡಿನೆರಳು’ ಮುಂತಾದ ಕೃತಿಗಳು. ಸಾಹಿತ್ಯಕ್ಷೇತ್ರದಂತೆಯೇ ಇವರಿಗೆ ಅತಿ ಹೆಚ್ಚಿನ ಘನತೆ, ಗೌರವಗಳನ್ನೂ ತಂದುಕೊಟ್ಟ ಕ್ಷೇತ್ರವೆಂದರೆ ಸಮಾಜಸೇವೆ. ಗುಲಬರ್ಗ ಜಿಲ್ಲಾ ಮಟ್ಟದ ಮಹಿಳಾ ಸಹಕಾರ ಬ್ಯಾಂಕ್‌ ಸ್ಥಾಪನೆಗಾಗಿ ಹೋರಾಟ ಮಾಡಿ ಸ್ಥಾಪಿಸಿದ್ದು. ಮಹಿಳೆಯರ ಸ್ವಾವಲಂಬನೆ ಮತ್ತು ಅಭ್ಯುದಯಕ್ಕಾಗಿ ಹಗಲಿರುಳು ದುಡಿದರು. ಇವರ ದಿಟ್ಟ ಹೋರಾಟದ ಬ್ಯಾಂಕ್ ಸ್ಥಾಪನೆಯ ಪ್ರಯತ್ನಕ್ಕೆ ರಾಷ್ಟ್ರೀಯ ಮಟ್ಟದ ಪುರಸ್ಕಾರ ದೊರೆತದ್ದು ಇವರ ಹೋರಾಟಕ್ಕೆ ಸಿಕ್ಕ ಗೌರವವಾಗಿತ್ತು. ಇದಲ್ಲದೆ ದೆಹಲಿಯ ಮಹಿಳಾ ಆಯೋಗವುಇವರಿಗೆ ೧೯೯೭ ರಲ್ಲಿ ಅತ್ಯುತ್ತಮ ಸೇವಾ ಪುರಸ್ಕಾರ ನೀಡಿ ಗೌರವಿಸಿದೆ. ಸಾಹಿತ್ಯ ಕ್ಷೇತ್ರದ ಇವರ ಗಣನೀಯ ಸೇವೆಗಾಗಿ ಕಲಬುರ್ಗಿ ಜಿಲ್ಲೆಯ ಮೂರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೊಪ್ಪಳದಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳನದ (೧೯೯೨) ಎರಡನೆಯ ಭಾವೈಕ್ಯ ಕವಿಗೋಷ್ಠಿಯ ಅಧ್ಯಕ್ಷತೆ, ಮುಧೋಳದಲ್ಲಿ ೧೯೯೫ ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ (೬೪ ನೆಯ ಸಮ್ಮೇಳನ-ಅಧ್ಯಕ್ಷತೆ ಎಚ್‌.ಎಲ್‌. ನಾಗೇಗೌಡ)ಇವರ ನಾಡು-ನುಡಿಯ ಸೇವೆಗಾಗಿ ಗೌರವ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೯೫), ಅನುಪಮ ಪ್ರಶಸ್ತಿ (೧೯೯೬), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೮) ಮತ್ತು ಕರ್ನಾಟಕ ಸರಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (೨೦೦೩) ಮುಂತಾದ ಗೌರವ ಪ್ರಶಸ್ತಿಗಳು ದೊರೆತಿವೆ.

ಎಚ್‌.ಎಲ್‌.ಎನ್‌. ಸಿಂಹ

೨೫..೧೯೦೪ ..೧೯೭೨ ವೃತ್ತಿರಂಗಭೂಮಿ ಹಾಗೂ ಚಲನಚಿತ್ರದ ಆರಂಭಿಕ ಹಂತದಲ್ಲಿ ವಿಶಿಷ್ಟ ತಿರುವು ನೀಡಿದ ಸಿಂಹ ರವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾದಹಳ್ಳಿ ಗ್ರಾಮದಲ್ಲಿ. ತಂದೆ ನರಸಿಂಹಯ್ಯ, ತಾಯಿ ಲಕ್ಷ್ಮಮ್ಮ. ಓದುವುದಕ್ಕಿಂತ ನಾಟಕ ರಂಗದತ್ತ ಹೆಚ್ಚಿದ ಆಕರ್ಷಣೆ. ನಾಟಕ ಶೀರೋಮಣಿ ವರದಾಚಾರ್ಯರ ಕಂಪನಿಯಲ್ಲಿ ಬಾಲನಟನಾಗಿ ಸೇರ್ಪಡೆ. ಭಕ್ತ ಮಾರ್ಕಂಡೇಯ ನಾಟಕದಲ್ಲಿ ಮಾರ್ಕಂಡೇಯನಾಗಿ ತೋರಿದ ಅದ್ಭುತ ನಟನಾಕೌಶಲ. ನಂತರ ಅದೇ ಕಂಪನಿಯಲ್ಲಿದ್ದ ನಟ ಮಹಮದ್‌ ಪೀರ್ ನಿಂದ ಉತ್ತೇಜಿತರಾಗಿ ಇಬ್ಬರೂ ಸೇರಿ ಕಟ್ಟಿದ ನಾಟಕ ಸಂಸ್ಥೆ ‘ಚಂದ್ರ ಕಲಾ ನಾಟಕ ಮಂಡಲಿ’. ಇದರಿಂದ ಪ್ರದರ್ಶಿತವಾದ ಷಹಜಾನ್ ಮತ್ತು ಗೌತಮ ಬುದ್ಧ ನಾಟಕಗಳು ಮಹಮದ್‌ ಪೀರ್ ಮತ್ತು ಇವರಿಗೆ ಖ್ಯಾತಿ ತಂದ ನಾಟಕಗಳು. ನಂತರ ತಾವೇ ನಿರ್ದೇಶಿಸುವ ಹಂಬಲದಿಂದ ಚಂದ್ರಕಲಾ ಮಂಡಲಿಯಿಂದ ಹೊರಬಂದು ಕಟ್ಟಿದ ನಾಟಕ ಸಂಸ್ಥೆ ‘ಸಿಂಹಾಸ್‌ “ಸೆಲೆಕ್ಟೆಡ್‌ ಆರ್ಟಿಸ್ಟ್ಸ್” ಸಂಸ್ಥೆ. ರಂಗ ಪರಿಕರಗಳನ್ನು ಸರಳೀಕರಿಸಿ ಅಭಿನಯಕ್ಕೆ ಪ್ರಾಮುಖ್ಯತೆ ಕೊಟ್ಟು ವೃತ್ತಿರಂಗ ಭೂಮಿಯಲ್ಲಿ ಪ್ರಾರಂಭಿಸಿದ ಹೊಸ ಅಧ್ಯಾಯ. ಸಂಸಾರನೌಕಾ ನಾಟಕದ ಜೊತೆಗೆ ಅಬ್ಬಾ ಆ ಹುಡುಗಿ, ಬಂಗಾಳದ ಬರ, ಗಂಡ್ಹ್ ರಾಜ್‌, ಷಾಜಹಾನ್‌, ಪ್ರೇಮಲೀಲಾ ಮುಂತಾದ ಹಲವಾರು ನಾಟಕಗಳ ಪ್ರದರ್ಶನ. ಸಿಂಹರವರು ಭಕ್ತಪ್ರಹ್ಲಾದದಲ್ಲಿ ಹಿರಣ್ಯಾಕ್ಷ, ವೀರಸಿಂಹ ಚರಿತೆಯಲ್ಲಿ ಈಶ್ವರ, ಕೃಷ್ಣ ಲೀಲಾದಲ್ಲಿ ಕಂಸನಾಗಿ ಗಳಿಸಿದ ಜನ ಮೆಚ್ಚುಗೆ. ಚಲನಚಿತ್ರ ನಿರ್ದೇಶನದಿಂದಲೂ ಪಡೆದ ಪ್ರಶಂಸೆ. ಗುಬ್ಬಿ ವೀರಣ್ಣನವರಿಗಾಗಿ ಗುಣಸಾಗರಿ, ಎ.ವಿ. ಮೇಯಪ್ಪನ್‌ ಸಹಕಾರದಿಂದ ಬೇಡರ ಕಣ್ಣಪ್ಪ, ಷೇಕ್ಸ್ ಪಿಯರನ ಟೇಮಿಂಗ್‌ ಆ‌ಫ್ ದಿ ಶ್ರೂ ಕನ್ನಡ ರೂಪ ಅಬ್ಬಾ ಆ ಹುಡುಗಿ, ಪಂಢರಿಬಾಯಿಯವರಿಗಾಗಿ ತೇಜಸ್ವಿನಿ ಹೀಗೆ ಹಲವಾರು ಚಲನಚಿತ್ರಗಳಲ್ಲಿ ತೊಡಗಿ ನಿರ್ದೇಶಿಸಿದ ಕಟ್ಟಕಡೆಯ ಚಿತ್ರ ಅನುಗ್ರಹದ ನಂತರ ಅಕಾಲಿಕ ಮರಣದಿಂದ ಚಲನಚಿತ್ರರಂಗಕ್ಕಾದ ದೊಡ್ಡನಷ್ಟ.   ಇದೇ ದಿನ ಹುಟ್ಟಿದ ಕಲಾವಿದರು ರತ್ನಮ್ಮ ಕೃಷ್ಣಮೂರ್ತಿ  – ೧೯೨೫ ತುಳಸೀರಾಂ ಬಿ.ಆರ್‌ – ೧೯೫೮

* * *