Categories
ಕಲಾವಿಮರ್ಶೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸದಾನಂದ ಕನವಳ್ಳಿ

ಧಾರವಾಡದ ಸಾಂಸ್ಕೃತಿಕ ವಲಯಗಳಲ್ಲಿ ಸಂಸ್ಕೃತಿ ಪರಿಚಾರಕರೆಂದೇ ಕರೆಸಿಕೊಳ್ಳುವ ಶ್ರೀ ಸದಾನಂದ ಕನವಳ್ಳಿ ವೃತ್ತಿಯಿಂದ ಆಂಗ್ಲ ಅಧ್ಯಾಪಕರು.
ಸವಣೂರು ತಾಲ್ಲೂಕಿನ ಹಿರೇಮುಗದೂರಿನವರಾದ ಶ್ರೀ ಸದಾನಂದ ಕನವಳ್ಳಿ ಹಲವು ಕಾಲೇಜುಗಳಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿದ್ದು ಕರ್ನಾಟಕ ವಿಶ್ವವಿದ್ಯಾನಿಲಯದ ಪ್ರಸಾರಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು.
ಲಕ್ಷ್ಮೀಶ್ವರ ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯರಾಗಿದ್ದ ಶ್ರೀ ಸದಾನಂದ ಕನವಳ್ಳಿಯವರು ಕಲೆ, ಸಂಸ್ಕೃತಿಯ ಆರಾಧಕರು, ಲಕ್ಷೇಶ್ವರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ದೇಸೀಯ ಕ್ರೀಡಾಕೂಟಗಳು ನಿರಂತರವಾಗಿ ನಡೆಯಲು ಮುಖ್ಯ ಕಾರಣರಾಗಿದ್ದ ಶ್ರೀ ಕನವಳ್ಳಿಯವರು ಅನೇಕ ವೃತ್ತಿಪರ ಹಾಗೂ ಸಾಂಸ್ಕೃತಿಕ ಸಂಘಗಳಲ್ಲಿ ಸಕ್ರಿಯವಾಗಿ ದುಡಿದವರು.
ಕ್ರಿಯಾಶೀಲ ಸಂಘಟಕರಲ್ಲದೆ ಸಾಹಿತಿಯಾಗಿ, ಕಲಾವಿಮರ್ಶಕರಾಗಿ ಹೆಸರು ಮಾಡಿರುವ ಶ್ರೀ ಸದಾನಂದ ಕನವಳ್ಳಿ ಅನೇಕ ಹಿಂದೂಸ್ತಾನಿ ಗಾಯಕರನ್ನು ಕುರಿತಂತೆ, ಒಲಂಪಿಕ್ಸ್ ಕ್ರೀಡೋತ್ಸವದ ಬಗ್ಗೆ, ವಿಜಯನಗರ ಸಾಮ್ರಾಜ್ಯ ಕುರಿತ ಕೃತಿಗಳನ್ನು ರಚಿಸಿದ್ದಾರೆ.

Categories
ಕಲಾವಿಮರ್ಶೆ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಿ.ಸು. ಕೃಷ್ಣ ಶೆಟ್ಟಿ

ಕರ್ನಾಟಕದ ಕಲಾ ಜಗತ್ತಿನಲ್ಲಿ ಕಲಾವಿದರಾಗಿ, ಕಲಾ ವಿಮರ್ಶಕರಾಗಿ ಎರಡೂ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರು ಶ್ರೀ ಚಿ.ಸು. ಕೃಷ್ಣ ಶೆಟ್ಟಿ ಅವರು.
ಕರ್ನಾಟಕಕ್ಕೆ ಅನೇಕ ಪ್ರತಿಭೆಗಳನ್ನು ಕೊಟ್ಟ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನನ. ದಾವಣಗೆರೆಯ ಕಲಾ ಶಾಲೆಯಲ್ಲಿ ರಾಷ್ಟ್ರೀಯ ಡಿಪ್ಲೊಮಾ ಪಡೆದು, ಲಲಿತ ಕಲಾ ಅಕಾಡೆಮಿಯ ವಿದ್ಯಾರ್ಥಿ ವೇತನ ಪಡೆದು ದೆಹಲಿಯ ಗರ್ಹಿ ಸ್ಟುಡಿಯೋದಲ್ಲಿ ಗ್ರಾಫಿಕ್ಸ್ ಕುರಿತು ಸಂಶೋಧನೆ. ಕಲೆಗೆ ಪೂರಕವಾಗಿ ಸಾಹಿತ್ಯವೂ ಬೇಕೆನ್ನಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ. ಜೊತೆಗೆ ಸಾರ್ವಜನಿಕ ಸಂಪರ್ಕ ಸ್ನಾತಕೋತ್ತರ ಡಿಪ್ಲೊಮಾ.
ದಾವಣಗೆರೆಯ ಸರ್ಕಾರಿ ಕಲಾ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿ ನಂತರ ಬೆಂಗಳೂರಿಗೆ ಬಂದು ಕಾರಿಯನ್ ಅಡ್ವರ್ಟೈಸಿಂಗ್ ಸರ್ವಿಸಸ್‌ನಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ವಿನ್ಯಾಸ್ ಜಾಹಿರಾತು ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದಾರೆ.
೧೯೮೫ರಲ್ಲಿ ಅಮೆರಿಕದಲ್ಲಿ ನಡೆದ ಭಾರತ ಉತ್ಸವದಲ್ಲಿ ಭಾಗವಹಿಸುವುದರೊಂದಿಗೆ ತೊಡಗಿದ ಕಲಾಯಾತ್ರೆಯಲ್ಲಿ ಹಲವಾರು ಮಜಲುಗಳು. ಕ್ಯಾಲಿಫೋರ್ನಿಯ, ನ್ಯೂಯಾರ್ಕ್, ಲಾಸ್ ಏಂಜಲೀಸ್, ಟೆಕ್ಸಾಸ್, ಯು.ಕೆ., ಮ್ಯಾಂಚೆಸ್ಟರ್, ಪೋಲೆಂಡ್, ಫಿಲಿಪೀನ್ಸ್ ಸ್ಥಳಗಳಲ್ಲಿ ನಡೆದ ಕಲಾ ಪ್ರದರ್ಶನದಲ್ಲಿ ಭಾಗವಹಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ನಡೆದ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಶ್ರೀಯುತರು. ವಿವಿಧ ಕಲಾ ಶಿಬಿರಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಇವರ ಅನೇಕ ಕೃತಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಕಲಾ ಗ್ಯಾಲರಿಯ ಸಂಗ್ರಹಗಳಲ್ಲಿ ಸೇರಿವೆ.
ಲಲಿತ ಕಲಾ ಅಕಾಡೆಮಿಯ ಸದಸ್ಯತ್ವ, ಕರ್ನಾಟಕ ದೃಶ್ಯ ಕಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕರ್ನಾಟಕ ಕಲಾ ಮೇಳದ ಉಪಾಧ್ಯಕ್ಷ ಇತ್ಯಾದಿ ಸ್ಥಾನಗಳು ಶ್ರೀಯುತರ ಸಾಧನೆಯ ಮೆಟ್ಟಿಲುಗಳಾಗಿವೆ.
ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಕಲಾ ವಿಮರ್ಶೆ, ಅಂಕಣಗಳು, ಪ್ರಕಟವಾಗಿವೆ. ‘ಚಿತ್ರ ಚಿತ್ತ’ ‘ವರ್ಣಾವರಣ’, ‘ದೃಶ್ಯ ಕಲೆ ಎಂದರೇನು’, ‘ಎಕ್ಸ್‌ ಪ್ರೆಶನಿಸಂ’, ‘ಎಂಟಿವಿ ಆಚಾರ್ಯ’, ‘ಯೂಸುಫ್ ಅರಕ್ಕಲ್’, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ದೂರದರ್ಶನಕ್ಕೆ ಕಲೆ ಕುರಿತು ಚಿತ್ರಾಂತರಂಗ ಎಂಬ ಧಾರಾವಾಹಿ, ‘ಜೀವನ ಚಕ್ರ’, ‘ಮರೀಚಿಕೆ’, ‘ನವಿಲುಗರಿ’ ಧಾರಾವಾಹಿಗಳನ್ನು ನಿರ್ಮಿಸಿದ್ದಾರೆ.
ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಗೌರವ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅತ್ಯುತ್ತಮ ಕಲಾ ಪುಸ್ತಕಕ್ಕೆ ವಿಶ್ವೇಶ್ವರಯ್ಯ ಪ್ರಶಸ್ತಿ, ಸಹ್ಯಾದ್ರಿ ಪ್ರಶಸ್ತಿ ಹಾಗೂ ಮೈಸೂರು ದಸರಾ ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಬಿಇಎಂಎಲ್‌ನಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲಾ ವಿಮರ್ಶಕ, ಸ್ನೇಹಜೀವಿ ಜನಪ್ರಿಯ ಕಲಾವಿದ ಶ್ರೀ ಚಿ. ಸು. ಕೃಷ್ಣ ಶೆಟ್ಟಿಯವರು.