Categories
ಕಾನೂನು ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆ.ಎನ್. ಭಟ್

ಕರ್ನಾಟಕ ಕಂಡ ಅಪ್ರತಿಮ ಪ್ರತಿಭಾವಂತ ನ್ಯಾಯವಾದಿ ಕೆ.ಎನ್. ಭಟ್, ಹೈಕೋರ್ಟ್-ಸುಪ್ರೀಂಕೋರ್ಟ್ ನ್ಯಾಯವಾದಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನ್ಯಾಯದಾನ ವ್ಯವಸ್ಥೆಗೆ ಅಪೂರ್ವ ಕಾಣಿಕೆ ನೀಡಿದ ನ್ಯಾಯಚಿಂತಕರು.
ಕಾಸರಗೋಡು ಜಿಲ್ಲೆಯ ಪೆರ್ಲ ಗ್ರಾಮದಲ್ಲಿ ೧೯೪೦ರಲ್ಲಿ ಜನಿಸಿದ ಕೆ.ಎನ್. ಭಟ್ ೧೯೬೨ರಲ್ಲಿ ಕಾನೂನು ಪದವಿ ಪಡೆದವರು. ಬೆಂಗಳೂರಿನಲ್ಲಿ ವೃತ್ತಿ ಬದುಕಿನಾರಂಭ. ೧೯೮೬ರಲ್ಲಿ ಸುಪ್ರೀಂಕೋರ್ಟ್ನ ಹಿರಿಯ ವಕೀಲರಾಗಿ ಪದೋನ್ನತಿ ಪಡೆದವರು. ೧೯೯೬ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ಕೆ.ಎನ್. ಭಟ್ ಅವರದ್ದು ಅಯೋಧ್ಯೆ ಪ್ರಕರಣದಲ್ಲಿ ಗುರುತರ ನಿರ್ವಹಣೆ, ಅಲಹಾಬಾದ್ ಹೈಕೋರ್ಟ್ನಲ್ಲಿ ಭಗವಾನ್ ಶ್ರೀರಾಮನನ್ನು ಕಕ್ಷಿದಾರರನ್ನಾಗಿ ಮಾಡಿ ವಾದ ಮಂಡಿಸಿದ ಹಿರಿಮೆ. ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದ್ದಕ್ಕೆ ಕೆ.ಎನ್. ಭಟ್ ಅವರು ಒದಗಿಸಿದ ಪೂರಕ ದಾಖಲೆಗಳೇ ಮುಂದೆ ಸುಪ್ರೀಂಕೋರ್ಟ್ನಲ್ಲಿ ತೀರ್ಪು ಬರಲು ಕಾರಣೀಭೂತವಾಗಿದ್ದು ವಿಶೇಷ. ಅತಿಥಿ ಪ್ರಾಧ್ಯಾಪಕ, ಕಾನೂನು ಬರಹಗಳ ಅಂಕಣಕಾರರಾಗಿಯೂ ಸುಪ್ರಸಿದ್ಧರು.

Categories
ಕಾನೂನು ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ನ್ಯಾ. ಎ.ಜೆ. ಸದಾಶಿವ

ಎ.ಜೆ. ಸದಾಶಿವ ಅವರು ಗ್ರಾಮೀಣ ಪ್ರತಿಭೆ. ಯಶಸ್ವಿ ವಕೀಲರಾಗಿ ನ್ಯಾಯಾಧೀಶರಾಗಿ ನಿವೃತ್ತಿ ನಂತರ ಹಲವು ತನಿಖಾ ಆಯೋಗಗಳ ಮೂಲಕ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ಕಾರ್ಯಾನುಭವದ ಹಿನ್ನೆಲೆಯಲ್ಲಿ ಹಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಸೂಚಿಸಿದ್ದಾರೆ.
ಒಳಮೀಸಲಾತಿ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಸದಾಶಿವ ಅವರು ನ್ಯಾಯಾಂಗ ಕುರಿತ ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಹವ್ಯಾಸಿ ರಂಗಭೂಮಿಯ ಕಲಾವಿದರಾಗಿಯೂ ದುಡಿದಿದ್ದಾರೆ.
ಹಲವು ಸಮಾಜಸೇವಾ ಸಂಸ್ಥೆಗಳೊಂದಿಗೆ ಸಕ್ರಿಯರಾಗಿರುವ ಸದಾಶಿವ ಅವರು ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

Categories
ಕಾನೂನು ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್. ಗಂಗಾಧರನ್

ವಕೀಲ ವೃತ್ತಿ-ರಾಜಕಾರಣದ ಜೊತೆಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತಮ್ಮನ್ನು ತೊಡಗಿಸಿಕೊಂಡವರು ಶ್ರೀ ಎಚ್. ಗಂಗಾಧರನ್ ಅವರು.
ತುಮಕೂರು ಜಿಲ್ಲೆ ಹಿಂಡಿಸಗೆರೆಯಲ್ಲಿ ಹುಟ್ಟಿ ಈಗ ಮೈಸೂರಿನಲ್ಲಿ ನೆಲೆಸಿರುವ ಶ್ರೀ ಎಚ್. ಗಂಗಾಧರನ್ ಮೈಸೂರು ಕೃಷ್ಣರಾಜಕ್ಷೇತ್ರದಿಂದ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದವರು.
ಜೆ.ಎಸ್.ಎಸ್. ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಶ್ರೀ ಎಚ್. ಗಂಗಾಧರನ್ ಅವರು ಕಾರ್ಮಿಕ ಸಂಘಟನೆ, ಸಹಕಾರ ಸಂಘ, ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಇಟ್ಟುಕೊಂಡಿದ್ದರು.
ಸಾಹಿತ್ಯದಲ್ಲಿ ಅಭಿರುಚಿಯುಳ್ಳ ಶ್ರೀ ಎಚ್.ಗಂಗಾಧರನ್ ಅವರು ಅನೇಕ ಧಾರ್ಮಿಕ, ದಾರ್ಶನಿಕ ಕೃತಿಗಳನ್ನು ಹಾಗೂ ಕಾದಂಬರಿಗಳನ್ನು ರಚಿಸಿದ್ದಾರೆ.
ನಾಡಿನ ಅನೇಕ ಪ್ರಸಿದ್ಧ ದೇವಾಲಯಗಳ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಎಚ್. ಗಂಗಾಧರನ್ ಅವರು ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

Categories
ಕಾನೂನು ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿ. ಎಚ್. ಹನುಮಂತರಾಯ

ವಕೀಲ ವೃತ್ತಿಯೊಡನೆ ಜನಪರ ಹೋರಾಟ ಹಾಗೂ ಸಾಹಿತ್ಯದ ಒಡನಾಟ ಇಟ್ಟುಕೊಂಡ ಅಪರೂಪದ ವಕೀಲರಲ್ಲಿ ಸಿ. ಎಚ್. ಹನುಮಂತರಾಯ ಒಬ್ಬರು.
ಇಂಗ್ಲಿಷ್ ಸಾಹಿತ್ಯದಲ್ಲಿ ಆನರ್ ಪದವಿ ಗಳಿಸಿ ಕಾನೂನು ವ್ಯಾಸಂಗ ಮಾಡಿ ಪ್ರಸಿದ್ಧ ಕ್ರಿಮಿನಲ್ ವಕೀಲರೆಂದು ಹೆಸರು ಮಾಡಿರುವ ಹನುಮಂತರಾಯ ಅವರು ಸೀಮಾತೀತ ಕ್ರಿಮಿನಲ್ ವಕೀಲ ಪಿ. ಎಸ್. ದೇವದಾಸ್ ಅವರಲ್ಲಿ ಪಳಗಿದವರು.
ಉಗುರು ಸ್ವಾಮಿ ಕೊಲೆ ಪ್ರಕರಣ, ಬೀನಾ ಕೊಲೆ ಮೊಕದ್ದಮೆ, ಸತ್ಯದೇವ್ ಹತ್ಯಾ ಪ್ರಕರಣ ಹೀಗೆ ಹಲವಾರು ಕುತೂಹಲ ಕೆರಳಿಸಿದ ಪ್ರಕರಣಗಳಲ್ಲಿ ತಮ್ಮ ಕಾನೂನು ನೈಪುಣ್ಯತೆ ತೋರಿ ಗಮನ ಸೆಳೆದ ಸಿ. ಎಚ್. ಹನುಮಂತರಾಯ ಅವರು ಅನೇಕ ಕನ್ನಡಪರ ಹೋರಾಟಗಾರರ ಪರವಾಗಿ ಮೊಕದ್ದಮೆಗಳಲ್ಲಿ ವಕಾಲತ್ತು ನಡೆಸಿದ್ದಾರೆ.
ನ್ಯಾಯಾಲಯಗಳಲ್ಲಿ ವಾದಿಸಿದಂತೆ ಅನೇಕ ಸಾಹಿತ್ಯ ಸಮಾವೇಶಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿರುವ ಹನುಮಂತರಾಯ ಅವರು ಅನೇಕ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಾರ್ಖಾನೆಗಳ ಕನ್ನಡ ಸಂಘಗಳ ಅಧ್ಯಕ್ಷರು.
ವೃತ್ತಿ ಅನುಭವವನ್ನು ಆಪ್ಯಾಯವಾಗಿ ಬರವಣಿಗೆಯಲ್ಲಿ ತೆರೆದಿಡುವ ಸಿ. ಎಚ್. ಹನುಮಂತರಾಯ ಅನೇಕ ಕಾನೂನು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು.