Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಟ್ಟಂ ಅನಂತ ಪದ್ಮನಾಭ

ಮೂಲತ: ಮೈಸೂರಿನವರಾದ ಪಟ್ಟಂ ಅನಂತ ಪದ್ಮನಾಭ ಅವರು, ೧೯೭೦ ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಕನ್ನಡ ಪ್ರಮುಖ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ೩೫ ವರ್ಷಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದಾರೆ.

ಕ್ರೀಡಾ ವರದಿಗಳನ್ನು ಬರೆಯುವಲ್ಲಿ ಅನಂತಪದ್ಮನಾಭ ಅವರು ಸಿದ್ಧಹಸ್ತರು. ಗ್ರಾಮೀಣ ಕ್ರೀಡೆಗಳ ಬಗ್ಗೆ ಇವರಷ್ಟು ಬರೆದವರು ಮತ್ತೊಬ್ಬರಿಲ್ಲ. ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳಲ್ಲಿ ನಡೆದ ಕ್ರೀಡಾಕೂಟಗಳ ವರದಿ ಮಾಡಿದ್ದಾರೆ. ಪ್ರಜಾವಾಣಿ ಮತ್ತು ಸುಧಾ ವಾರಪತ್ರಿಕೆಗಳಲ್ಲಿ ಕ್ರೀಡೆ ವಾಣಿಜ್ಯ ಮುಂತಾದ ವಿಷಯಗಳ ಬಗ್ಗೆ ಲೇಖನಗಳನ್ನು, ಸಂಪಾದಕೀಯವನ್ನು ಬರೆದಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ ಅನೇಕ ಯುವ ಪತ್ರಕರ್ತರನ್ನು ಬೆಳೆಸಿದ್ದಾರೆ ಮತ್ತು ಮಾರ್ಗದರ್ಶನ ನೀಡಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎ. ನಾಗರಾಜ್

ಬೆಂಗಳೂರಿನ ಎ. ನಾಗರಾಜ್ ಅವರು ಕಡ್ಡಿ ತರಬೇತುದಾರರು. ಸುಮಾರು ಮೂರು ದಶಕಗಳ ಕಾಲದ ಕ್ರೀಡಾ ಜೀವನವನ್ನು ನಡೆಸಿರುವ ಇವರು ೨೨ ವರ್ಷಗಳ ಕಾಲ ಐ.ಟಿ.ಐ ಸಂಸ್ಥೆಯ ತಂಡವನ್ನು ತರಬೇತುಗೊಳಸಿ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಸಿದ್ಧಗೊಳಿಸಿದ್ದಾರೆ. ಇವರಿಂದ ತಯಾರಾದ ಕಬ್ಬಡ್ಡಿ ಆಟಗಾರರು ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ‘ಅರ್ಜುನ ಪ್ರಶಸ್ತಿ’ ಹಾಗೂ ‘ಏಕಲವ್ಯ ಪ್ರಶಸ್ತಿ’ಗಳನ್ನು ಪಡೆದುಕೊಂಡಿದ್ದಾರೆ. ಒಬ್ಬ ಕ್ರೀಡಾಗುರುವಾಗಿ ಸಾರ್ಥಕತೆಯನ್ನು ಕಂಡಿರುವ ಶ್ರೀ ನಾಗರಾಜು ಮಲೇಷ್ಯಾದಲ್ಲಿ ನಡೆದ ವಿಶ್ವಕಪ್ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ. ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಇವರದ್ದಾಗಿದೆ.

Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರೋಹಿತ್ ಕುಮಾರ್ ಕಟೀಲ್

ಕಾರ್ಕಳ ತಾಲ್ಲೂಕಿನ ಕ್ರೀಡಾಪ್ರತಿಭೆ ಶ್ರಿ ರೋಹಿತ್ ಕುಮಾರ್ ಕಟೀಲ್‌ ಅಸಾಧಾರಣ ಪ್ರತಿಭೆ, ಹೈ ಜಂಪ್ ವಿಭಾಗದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಇವರು ವಿಶ್ವ ಕಿರಿಯರ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲಿಗ.

ಮಾಜಿ ಅಂತಾರಾಷ್ಟ್ರೀಯ ಆಟಗಾರರಾದ ಇವರು, ಬ್ರೆಜಿಲ್ ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿನ ಭಾರತೀಯ ತಂಡದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದವರು. ಇದೀಗ ಕಾರ್ಕಳದ ವಿಮಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗೋಪಿನಾಥ್ ಕೆ

ಪ್ಯಾರಾ ಓಲಂಪಿಕ್ ಕ್ರೀಡೆಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಧನೆ ಮಾಡಿರುವ ಬೆಂಗಳೂರಿನ ಕೆ.ಗೋಪಿನಾಥ್ ವಿಕಲಚೇತನ ಕ್ರೀಡಾಪಟು.

೨೦೦೩ ರಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಶ್ರೀ ಕೆ.ಗೋಪಿನಾಥ್ ಪ್ಯಾರಾ ಬ್ಯಾಂಡ್ಮಿಂಟನ್, ಡಿಸ್ಕ್ ಪ್ರೋ ಹಾಗೂ ಶಾಟ್ ಪುಟ್ ಆಡಿ ಚಿನ್ನದ ಪದಕ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಹಾಂಕಾಂಗ್, ಚೀನಾ, ಮಲೇಶಿಯಾ, ಇಸ್ರೇಲ್, ಜರ್ಮನಿ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾಗಳಲ್ಲಿ ನಡೆದ ಪ್ಯಾರಾ ಓಲಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಕ್ರೀಡಾಸಾಧನೆಯನ್ನು ಪರಿಗಣಿಸಿ ೨೦೧೧ ರಲ್ಲಿ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ರೀಡಾ ಸಂಸ್ಥೆಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕರ್ನಾಟಕ ರಾಜ್ಯ ವಿಕಲ ಚೇತನ ಒಕ್ಕೂಟದ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರೋಹನ್ ಬೋಪಣ್ಣ

ಭಾರತದ ಅಗ್ರಗಣ್ಯ ಟೆನ್ನಿಸ್ ಆಟಗಾರರಲ್ಲಿ ಶ್ರೀ ರೋಹನ್ ಬೋಪಣ್ಣ ಒಬ್ಬರು. ಮೊಟ್ಟ ಮೊದಲ ಬಾರಿಗೆ ೨೦೦೨ ರಲ್ಲಿ ಇವರು ಭಾರತವನ್ನು ಪ್ರತಿನಿಧಿಸಿ ವಿಜಯ ಪತಾಕೆಯನ್ನು ಹಾರಿಸುತ್ತ ಬಂದಿದ್ದಾರೆ. ೨೦೧೮ ರಲ್ಲಿ ಇವರಿಗೆ ಕ್ರೀಡಾಪಟುಗಳಿಗೆ ಕೊಡಮಾಡುವ ‘ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.

ಪುರುಷರ ಡಬಲ್ಸ್ ಪಂದ್ಯದಲ್ಲಿ ಕತಾರ್ ಮತ್ತು ಕೆನಡಾ ಓಪನ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಏಷ್ಯನ್ ಗೇಮ್ಸ್ ೨೦೧೮ ರಲ್ಲಿ ಚಿನ್ನದಪದಕ ಗಳಿಸಿದ್ದಾರೆ. ಕರ್ನಾಟಕ ಸರ್ಕಾರದಿಂದ ೨೦೦೫ ರಲ್ಲಿ ‘ಏಕಲವ್ಯ ಪ್ರಶಸ್ತಿ’ ದೊರೆತಿದೆ.

ತಾವೇ ಒಬ್ಬ ಪ್ರಭಾವಿ ಟೆನ್ನಿಸ್ ಕ್ರೀಡಾಪಟುವಾಗಿದ್ದು ಮುಂದಿನ ಪೀಳಿಗೆಗೆ ಯುವ ಪ್ರತಿಭೆಗಳನ್ನು ಉತ್ತೇಜಿಸುತ್ತಿದ್ದಾರೆ. ಟೆನ್ನಿಸ್ ತರಬೇತಿ ಕೇಂದ್ರಗಳನ್ನು ತೆರೆದು ಆಟಗಾರರು ಭಾರತವನ್ನು ಪ್ರತಿನಿಧಿಸುವಷ್ಟು ಸಾಮರ್ಥ್ಯ ಪಡೆಯುವತ್ತ ಶ್ರಮಿಸುತ್ತಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಸಹನಾ ಕುಮಾರಿ

ದೇಶದ ಹೈಜಂಪ್ ಕ್ರೀಡಾಪಟುಗಳಲ್ಲಿ ಒಬ್ಬರಾದ ಸಹನಾ ಕುಮಾರಿ ಅವರು ಲಂಡನ್ನಿನಲ್ಲಿ ಜರುಗಿದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪ್ರತಿಭಾವಂತ ಕ್ರೀಡಾಳು.

ಮಹಿಳಾ ಹೈಜಂಪ್ ವಿಭಾಗದಲ್ಲಿ ೧.೯೨ ಮೀಟರ್ ಎತ್ತರ ಜಿಗಿಯುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಸಹನಾಕುಮಾರಿ ಗೌಹಾತಿಯಲ್ಲಿ ಜರುಗಿದ ಹನ್ನೆರಡನೆಯ ದಕ್ಷಿಣ ಏಷಿಯಾ ಕ್ರೀಡಾಕೂಟದಲ್ಲಿಯೂ ಮಹಿಳಾ ವಿಭಾಗದ ಹೈಜಂಪ್ ನಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು.

ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹದಿನಾಲ್ಕಕ್ಕೂ ಹೆಚ್ಚು ಬಹುಮಾನಗಳನ್ನು ಗಳಿಸಿರುವ ಸಹನಾ ಕುಮಾರಿ ಅವರಿಗೆ ಕರ್ನಾಟಕ ರಾಜ್ಯ ಏಕಲವ್ಯ ಪ್ರಶಸ್ತಿ, ಕರ್ನಾಟಕ ಒಲಂಪಿಕ್ಸ್ ಸಂಸ್ಥೆಯ ಗೌರವ, ಕೆಂಪೇಗೌಡ ಪ್ರಶಸ್ತಿ ಹಾಗೂ ಕೇಂದ್ರ ರೈಲ್ವೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Categories
ಕ್ರೀಡೆ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಉಷಾರಾಣಿ ಎನ್.

ಕರ್ನಾಟಕ ಕಂಡ ಪ್ರತಿಭಾವಂತ ಕ್ರೀಡಾಪಟು ಉಷಾರಾಣಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪದಕಗಳ ಭೇಟೆಯಾಡಿದ ಕಬಡ್ಡಿ ಪಟು.
ಮೂಲತಃ ಮಂಡ್ಯದವರಾದ ಉಷಾರಾಣಿ ಬಿ.ಎ. ಪದವೀಧರರು. ವೃತ್ತಿಯಲ್ಲಿ ಪೊಲೀಸ್ ಪೇದೆ. ಸದ್ಯ ಕೋರಮಂಗಲದ ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ಕಾರ್ಯನಿರತರು. ಬಾಲ್ಯದಿಂದಲೂ ಕಬಡ್ಡಿ ಪ್ರೇಮ. ಇಲಾಖೆಯಲ್ಲಿ ಸಿಕ್ಕ ಪ್ರೋತ್ಸಾಹವೇ ಸಾಧನೆಗೆ ಹಾದಿ. ಒಂದೂವರೆ ದಶಕಗಳ ಕ್ರೀಡಾ ಜೀವನದಲ್ಲಿ ಸಾಧಿಸಿದ್ದು ಅಪಾರ, ಬೇಟೆಯಾಡಿದ ಪದಕಗಳು ಅನೇಕಾನೇಕ. ಕರ್ನಾಟಕ ಪೊಲೀಸ್ ಮಹಿಳಾ ಕಬ್ಬಡಿ ತಂಡಕ್ಕೆ ನಾಲ್ಕು ಬಾರಿ ನಾಯಕಿಯಾಗಿದ್ದ ಹೆಗ್ಗಳಿಕೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಬಾರಿ ಪದಕ ಗೆದ್ದ ಕ್ರೀಡಾಚೇತನ. ಅಖಿಲ ಭಾರತ, ರಾಜ್ಯಮಟ್ಟದ, ದಕ್ಷಿಣವಲಯ ಮಟ್ಟದ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಹತ್ತಕ್ಕೂ ಹೆಚ್ಚು ಚಿನ್ನ, ಅನೇಕ ಬೆಳ್ಳಿ ಮತ್ತು ಕಂಚು ಪದಕಗಳನ್ನು ಪಡದ ಪ್ರತಿಭಾವಂತೆ, ಅನೇಕ ಬಾರಿ ಅತ್ಯುತ್ತಮ ಆಟಗಾರ ಪ್ರಶಸ್ತಿ, ನಾಲ್ಕು ಬಾರಿ ವರ್ಷದ ಅತ್ಯುತ್ತಮ ಕ್ರೀಡಾವ್ಯಕ್ತಿ ಗೌರವ ಹಾಗೂ ಪ್ರತಿಷ್ಠಿತ ಕೆಂಪೇಗೌಡ ಪ್ರಶಸ್ತಿಗಳಿಗೆ ಪಾತ್ರವಾಗಿರುವ ಹೆಮ್ಮೆಯ ಕ್ರೀಡಾಪಟು.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿ.ಆರ್.ರಘುನಾಥ್

ಭಾರತ ಹಾಕಿ ತಂಡದ ಪ್ರಮುಖ ಆಟಗಾರರಾದ ವಿ.ಆರ್.ರಘುನಾಥ್ ರಾಷ್ಟ್ರಮಟ್ಟದಲ್ಲಿ ಸಬ್ ಜ್ಯೂನಿಯರ್ ಭಾರತೀಯ ತಂಡದ ಆಟಗಾರರಾಗಿ ಪಾದಾರ್ಪಣೆ ಮಾಡಿದರು.

೨೦೦೫ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಸೀನಿಯರ್ ಹಾಕಿ ಪಂದ್ಯದಲ್ಲಿ ಸ್ಥಾನ ಪಡೆದ ರಘುನಾಥ, ನಂತರ ಹಲವು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾಗಿ ಪಾಲುಗೊಂಡಿದ್ದಾರೆ.

೨೦೦೭ರಲ್ಲಿ ಸುಲ್ತಾನ್ ಅಜ್ಞಾನ್ ಷಾ ಕಪ್ ಗೆದ್ದ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಇವರು ರಾಷ್ಟ್ರೀಯ ಲೀಗ್ ಪಂದ್ಯಾವಳಿಗಳಲ್ಲಿ ಉತ್ತರ ಪ್ರದೇಶದ ನಾಯಕರಾಗಿದ್ದು, ಒಂದೇ ಸೀಸನ್ನಿನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಎರಡು ಬಾರಿ ಬರೆದಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಹೆಚ್.ಬಿ. ನಂಜೇಗೌಡ

ಕರ್ನಾಟಕದ ವಾಲಿಬಾಲ್ ‘ಮಾರ್ಗನ್’ ಎಂದೇ ಹೆಸರುವಾಸಿಯಾದವರು ಹೆಚ್.ಬಿ. ನಂಜೇಗೌಡ, ರಾಷ್ಟ್ರಮಟ್ಟದಲ್ಲಿ ಕರುನಾಡಿನ ಕೀರ್ತಿ ಬೆಳಗಿದ ಗ್ರಾಮೀಣ ಕ್ರೀಡಾ ಪ್ರತಿಭೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಪುರದ ಹೊಸಹಳ್ಳಿಯ ರೈತ ಕುಟುಂಬದವರಾದ ನಂಜೇಗೌಡರಿಗೆ ಬಾಲ್ಯದಿಂದಲೂ ವಾಲಿಬಾಲ್ ಆಟವೆಂದರೆ ಪಂಚಪ್ರಾಣ. ಬಿ.ಎ., ಬಿ.ಪಿ.ಇಡಿ., ಡಿಪ್ಲೋಮಾ ಇನ್ ಕೋಚಿಂಗ್ನಲ್ಲಿ ವ್ಯಾಸಂಗ, 70ರ ದಶಕದಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿರುವಾಗಲೇ ವಾಲಿಬಾಲ್ ಪಟುವಾಗಿ ರೂಪಾಂತರ. ಕಾಲೇಜು ತಂಡದ ಆಟಗಾರನಾಗಿ ಗಮನಸೆಳೆಯುವಿಕೆ. ಹಲವು ರಾಜ್ಯ-ಅಂತಾರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರತಿಭಾ ಪ್ರದರ್ಶನ. ಅನಂತರ ತರಬೇತುದಾರರಾಗಿ ಮಾರ್ಪಾಡು, ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ತರಬೇತುದಾರ, ತೀರ್ಪುಗಾರರಾಗಿ ಅನನ್ಯ ಸೇವೆ. ಹಳ್ಳಿಮಟ್ಟದಿಂದಿಡಿದು ರಾಷ್ಟ್ರೀಯ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ ಅದ್ಭುತ ಕ್ರೀಡಾಸಂಘಟನಕಾರರೆಂಬ ಅಚ್ಚಳಿಯದ ಹೆಗ್ಗಳಿಕೆ. ವಾಲಿಬಾಲ್ ಆಟದ ಜ್ಞಾನವನ್ನು ಹಳ್ಳಿಪ್ರತಿಭೆಗಳಿಗೆ ಹಂಚಿದ ‘ಆಚಾರ್ಯ’ರು. ಹತ್ತಾರು ಪ್ರಶಸ್ತಿ-ಗೌರವಗಳಿಂದ ಭೂಷಿತರು.

Categories
ಕ್ರೀಡೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಎಲ್.ಶೇಖರ ನಾಯಕ್

ಭಾರತೀಯ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಎಲ್.ಶೇಖರ ನಾಯಕ್ ಅವರು ಅಂತರರಾಷ್ಟ್ರೀಯ ಟಿ-೨೦ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಪದ್ಮಶ್ರೀ ಪುರಸ್ಕೃತರಾದ ಶೇಖರ ನಾಯಕ್ ಬಡರೈತನ ಮಗನಾಗಿ ಜನಿಸಿದ ಹುಟ್ಟು ಅಂಧರು. ಅಂಧ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೇ ಕ್ರಿಕೆಟ್ ಕಲಿತ ಶೇಖರನಾಯಕ್ ಕರ್ನಾಟಕ ರಾಜ್ಯ ಅಂಧ ಕ್ರಿಕೆಟ್ ಆಟಗಾರರಾಗಿ, ನಾಯಕರಾಗಿ, ಹೆಸರುವಾಸಿಯಾದವರು.

ಭಾರತ ತಂಡದ ಅಂಧ ಕ್ರಿಕೆಟ್ ಕ್ಯಾಪ್ಟನ್ ಆಗಿ ವಿಶ್ವಕಪ್ ಅಂಧ ಕ್ರಿಕೆಟ್ ಪಂದ್ಯಾವಳಿಯನ್ನು ಎರಡು ಬಾರಿ ಗೆದ್ದುಕೊಟ್ಟ ಶೇಖರನಾಯಕ್ ಅವರಿಗೆ ಭಾರತ ಸರ್ಕಾರ ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವು ಗೌರವ ಸನ್ಮಾನಗಳು ಲಭಿಸಿವೆ.

Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ನಂದಿತ ನಾಗನಗೌಡ‌

ಕರುನಾಡಿನ ಕೀರ್ತಿಯನ್ನು ವಿದೇಶದಲ್ಲಿ ಬೆಳಗಿದ ಹೆಮ್ಮೆಯ ಪರ್ವತಾರೋಹಿ ನಂದಿತ ನಾಗನಗೌಡರ್‌, ಆಸ್ಟ್ರೇಲಿಯಾದ ಅತಿ ಎತ್ತರದ ಪರ್ವತ ಏರಿದ ಏಕೈಕ ಕನ್ನಡತಿ.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿಯಾದ ನಂದಿತಾ ನಾಗನಗೌಡರ್ ಅವರದ್ದು ಬಾಲ್ಯದಿಂದಲೂ ಸಾಹಸ ಪ್ರವೃತ್ತಿ. ಓದಿದ್ದು ಎಂಬಿಎ. ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಪರ್ವತಾರೋಹಿ, ಅತಿ ಎತ್ತರದ ಹಿಮಾಲಯ ಪರ್ವತ ಏರುವ ಮೂಲಕ ಪರ್ವತಾರೋಹಣದ ಸಾಹಸ ಆರಂಭಿಸಿದ ನಂದಿತ ಆನಂತರ ಏರಿದ ಪರ್ವತಗಳು ಸಾಕಷ್ಟು. ಆಸ್ಟ್ರೇಲಿಯಾ ಖಂಡದ ಅತಿ ಎತ್ತರದ ಕಾರ್ಸ್‌ಟೆನ್ಸ್ ಪಿರಮಿಡ್ ಏರುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ೧೭,೦೦೦ ಅಡಿ ಎತ್ತರದ ಕಡಿದಾದ ಬಂಡೆಗಳಿಂದ ಕೂಡಿರುವ ಈ ಪರ್ವತವನ್ನು ಏರಿದ ಮೊದಲ ಮಹಿಳೆಯೆಂಬುದು ನಾಡೇ ಹೆಮ್ಮೆ ಪಡುವ ವಿಷಯ ಇದಲ್ಲದೆ, ಯುರೋಪ್‌ನ ಅತಿ ಎತ್ತರದ ೧೮,೬೦೦ ಅಡಿ ಎತ್ತರದ ಎಲಬಸ್ ಪರ್ವತವನ್ನೂ ಏರಿದ ಮೊದಲ ಭಾರತೀಯ ಮಹಿಳೆ. ಇದಲ್ಲದೆ, ಆಫ್ರಿಕಾದ ಅತಿ ಎತ್ತರದ ಕಿಲಿಮಾಂಜರೋ ಪರ್ವತವನ್ನೂ ಏರಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಕಡಿದಾದ, ಅತ್ಯಂತ ಅಪಾಯಕರವಾದ ಪರ್ವತಗಳನ್ನು ಏರುತ್ತಿರುವ ನಂದಿತ ನಾಗನಗೌಡ‌ ಅವರು ಭವಿಷ್ಯದಲ್ಲೂ ಇನ್ನೂ ಎತ್ತರೆತ್ತರದ ಪರ್ವತವನ್ನು ಏರುವ ಗುರಿ ಹೊಂದಿದ್ದಾರೆ. ಸ್ತ್ರೀ ಧೀಶಕ್ತಿಯ ದ್ಯೋತಕವಾಗಿರುವ ನಂದಿತ ಅವರ ಸಾಧನೆ-ಸಾಹಸ ಇಡೀ ನಾರಿ ಕುಲಕ್ಕೇ ಮಾದರಿಯಾಗಿರುವುದಂತೂ ಹೌದು.

Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಚೆನ್ನಂಡ ಎ ಕುಟ್ಟಪ್ಪ

ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿರುವ ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ ಅತ್ಯುತ್ತಮ ಬ್ಯಾಕ್ಸಿಂಗ್ ಪಟು. ಹೊಸ ತಲೆಮಾರಿನ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಕೋಚ್.
ಮೈಸೂರು ಮೂಲದವರಾದ ಚೆನ್ನಂಡ ಅಚ್ಚಯ್ಯ ಕುಟ್ಟಪ್ಪ ೧೯೭೯ರ ಮಾರ್ಚ್ ೫ರಂದು ಜನಿಸಿದವರು.ಬಿ.ಎ ಪದವೀಧರರು. ಬಾಲ್ಯದಿಂದಲೂ ಬೆನ್ನತ್ತಿದ್ದ ಕ್ರೀಡಾಸಕ್ತಿಯನ್ನೇ ಸಾಧನೆಯ ದಾರಿದೀಪ ಮಾಡಿಕೊಂಡವರು. ಬ್ಯಾಕ್ಸಿಂಗ್ ಅಂದರೆ ಪಂಚಪ್ರಾಣ. ಬ್ಯಾಕ್ಸಿಂಗ್‌ನಲ್ಲಿ ಎನ್‌ಐಎಸ್ ಡಿಪ್ಲೋಮಾ, ರೋಟಿಕ್‌ನಲ್ಲಿ ಎಐಬಿಎ ಸ್ಟಾರ್ ೨ ಕೋಚಿಂಗ್‌ ಹಾಗೂ ಉಚ್ಚೇಕಿಸ್ತಾನ್‌ನಲ್ಲಿ ಎಐಬಿಎ ಕುಟಮನ್ ಕೋರ್ಸ್‌ಗಳನ್ನು ಪೂರೈಸಿದವರು.ಆನಂತರ ಭಾರತೀಯ ಸೇನೆಗೆ ಸೇರ್ಪಡೆಯಾದ ಕುಟ್ಟಪ್ಪ ವೃತ್ತಿಯಲ್ಲಿ ಸುಭೆದಾರ್, ಪ್ರವೃತ್ತಿಯಲ್ಲಿ ಬ್ಯಾಕ್ಸಿಂಗ್ ಕೋಚ್. ರಾಷ್ಟ್ರಮಟ್ಟದ ೨೩ ಬ್ಯಾಕ್ಸಿಂಗ್‌ ಸ್ಪರ್ಧೆಗಳಲ್ಲಿ ೯ ಬಾರಿ ಚಿನ್ನದ ಪದಕ, ನಾಲ್ಕು ಬಾರಿ ರಜತ ಹಾಗೂ ಕಂಚಿನ ಪದಕ ಪಡೆದಿರುವ ಕ್ರೀಡಾಪ್ರತಿಭೆ, ಜರ್ಮನಿ, ಬ್ಯಾಂಕಾಕ್, ಕ್ಯೂಬಾ, ಬ್ರಿಜಿಲ್, ಜೆಕ್ ಗಣರಾಜ್ಯ, ಥ್ಯಾಯ್ಲೆಂಡ್, ಐಲ್ಯಾಂಡ್, ಚೀನಾ, ಇಂಗ್ಲೆಂಡ್, ಸ್ಕಾಟ್ಯಾಂಡ್ ಮುಂತಾದೆಡೆ ಜರುಗಿದ ಸುಮಾರು ೪೦ಕ್ಕೂ ಹೆಚ್ಚು ಬ್ಯಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಭಾರತೀಯ ಬ್ಯಾಕ್ಸಿಂಗ್ ತಂಡದ ಕೋಚ್ ಆಗಿ ತಂಡದ ಯಶಸ್ಸಿಗೆ ದುಡಿದು ದೇಶಕ್ಕೆ ಪದಕಗಳನ್ನು ತಂದುಕೊಟ್ಟ ಹಿರಿಮೆಯ ಕುಟ್ಟಪ್ಪ ನಿಜಕ್ಕೂ ಮಾದರಿ ಕ್ರೀಡಾಪಟು.

Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವಿಶ್ವನಾಥ್ ಭಾಸ್ಕರ್ ಗಾಣಿಗ

ದೇಶದ ಕ್ರೀಡಾರಂಗಕ್ಕೆ ಕರ್ನಾಟಕದ ಶ್ರೇಷ್ಠ ಕೊಡುಗೆಗಳಲ್ಲಿ ವಿಶ್ವನಾಥ್ ಭಾಸ್ಕರ್ ಗಾಣಿಗ ಒಬ್ಬರು. ಪವರ್ ಲಿಫ್ಟಿಂಗ್‌ನಲ್ಲಿ ಪದಕಗಳ ಭೇಟೆಯಾಡುತ್ತಿರುವ ಚಿನ್ನದ ಹುಡುಗ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಾಳಿಕೆರೆ ವಿಶ್ವನಾಥ್ ಭಾಸ್ಕರ್ ಗಾಣಿಗ ಅವರ ಹುಟ್ಟೂರು. ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರ ತಾಲೂಕಿನ ನೆಂಪುವಿನಲ್ಲಿ ಪಿಯು ಶಿಕ್ಷಣ ಪೂರೈಸಿದ ವಿಶ್ವನಾಥ್ ಬಿಸಿಎ ಪದವೀಧರರು. ಸಾಪ್ಟವೇರ್ ಕಂಪನಿಯೊಂದರ ಉದ್ಯೋಗಿ ವಿಶ್ವನಾಥ್ ಅವರಲ್ಲಿ ಕ್ರೀಡಾಸಕ್ತಿ ಮೊಳಕೆಯೊಡೆದದ್ದು ತೀರಾ ಆಕಸ್ಮಿಕ. ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದವಗೆ ಭಾರ ಎತ್ತುವ ಸ್ಪರ್ಧೆಯತ್ತ ಚಿತ್ತ ಹರಿದದ್ದು ಯೋಗವೇ ಸರಿ. ಆನಂತರದ್ದು ಕಠಿಣ ಪರಿಶ್ರಮದ ಕ್ರೀಡಾಯಾನ. ಕುಂದಾಪುರದವರೇ ಆದ ಪ್ರಶಾಂತ್ ಶೇರಿಗಾರ್‌ರಿಂದ ಸ್ಪೂರ್ತಿ- ಮಾರ್ಗದರ್ಶನ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಮೊದಲನೇ ಏಷ್ಯನ್ ಪವರ್‌ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ಪದಕ ಗೆಲ್ಲುವುದರೊಂದಿಗೆ ಮುಂಚೂಣಿಗೆ, ಕೆಲವೇ ವರ್ಷಗಳ ಕ್ರೀಡಾ ಜೀವನದಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ೬ ಚಿನ್ನ, ೪ ರಜತ, ೩ ಕಂಚಿನ ಪದಕಗಳು, ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ೧೭ ಚಿನ್ನ, ೫ ರಜತ ಹಾಗೂ ೩ ಕಂಚಿನ ಪದಕಗಳನ್ನು ಗೆದ್ದು ಮುನ್ನಡೆದಿರುವ ವಿಶ್ವನಾಥ್ ನಾಡಿನ ಅತ್ಯಂತ ಭರವಸೆಯ ಕ್ರೀಡಾಚೇತನ.

Categories
ಕ್ರೀಡೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಘವೇಂದ್ರ ರತ್ನಾಕರ ಅಣವೇಕರ್

ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಬೆಳಗಿದ ಸಾಧಕ ವಿಕಲಚೇತನ ಕ್ರೀಡಾಪಟು ರಾಘವೇಂದ್ರ ರತ್ನಾಕರ ಅಣವೇಕರ್, ಏಷ್ಯನ್ ಕ್ರೀಡಾಕೂಟದ ಪದಕವಿಜೇತ ಈಜುಪಟು, ಬೆಳಗಾವಿ ಮೂಲದ ರಾಘವೇಂದ್ರ ರತ್ನಾಕರ ಬಾಲ್ಯದಲ್ಲೇ ಅಂಗವೈಕಲ್ಯಕ್ಕೊಳಗಾಗಿ ನಡೆದಾಡುವ ಭಾಗ್ಯ ಕಳೆದುಕೊಂಡರೂ ಏನಾದರೂ ಸಾಧಿಸುವ ಹುಮ್ಮಸ್ಸಿನಿಂದ ನೀರಿಗಿಳಿದವರು. ಈಜಿನಾಸಕ್ತಿಯನ್ನೇ ಸಾಧನೆಯ ಗಮ್ಯವಾಗಿಸಿಕೊಂಡವರು. ಕೋಚ್ ಉಮೇಶ್ ಕಲಘಟಗಿ ಅವರ ಗರಡಿಯಲ್ಲಿ ಈಜು ಪಟ್ಟುಗಳನ್ನು ಕರಗತ ಮಾಡಿಕೊಂಡು ಬೆಳಗಾವಿ ಈಜುಗಾರರ ಕ್ಲಬ್ ಪ್ರತಿನಿಧಿಯಾಗಿ ಕ್ರೀಡಾರಂಗಪ್ರವೇಶ. ೧೬ನೇ ವಯಸ್ಸಿಗೆ ೨೦೦೩ರಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮೂರು ಬಿಚ್ಚಿ, ಮೂರು ಕಂಚಿನ ಪದಕಗಳನ್ನು ಗೆದ್ದ ಬೆನ್ನಲ್ಲೆ ಕೌಲಲಾಂಪುರದಲ್ಲಿ ೨ ಕಂಚಿನ ಪದಕ, ೨೦೦೭ರಲ್ಲಿ ತೈವಾನ್‌ನಲ್ಲಿ ನಡೆದ ಅಂಗವಿಕಲರ ವಿಶ್ವ ಕ್ರೀಡಾಕೂಟದಲ್ಲೂ ೨ ಬೆಟ್ಟ, ೨ ಕಂಚಿನ ಪದಕಗಳ ಭೇಟಿ, ಮುಂದಿನದ್ದು ಯಶಸ್ವಿ ಕ್ರೀಡಾಯಾನ, ಪ್ಯಾರಾ ಏಷ್ಯನ್ ಕ್ರೀಡಾಕೂಟವನ್ನೊಳಗೊಂಡಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಐದು ಜನ್ಮ ೧೨ ಬೆಟ್ಟ, ೧೧ ಕಂಚು ಸೇರಿ ೨೮ ಪದಕ, ರಾಷ್ಟ್ರೀಯ ಮಟ್ಟದಲ್ಲಿ ೫೪ ಚಿನ್ನ ಸೇರಿ ೭೫ ಪದಕಗಳನ್ನು ಬಾಚಿಕೊಂಡಿರುವ, ಏಕಲವ್ಯ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಮನಸ್ಸಿದ್ದರೆ ಮಾರ್ಗವುಂಟೆಂದು ನಿರೂಪಿಸಿರುವ ಸಾಧಕ.

Categories
ಕ್ರೀಡೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚೇತನ್.ಆರ್.

ಅಂಗವೈಕಲ್ಯವನ್ನು ಹಿಮ್ಮೆಟ್ಟಿಸಿ ಸಾಧನೆಗೈದ ವಿಶಿಷ್ಟ ಚೇತನ ಚೇತನ್. ಆರ್. ಅಂತಾರಾಷ್ಟ್ರೀಯ ಪ್ಯಾರಾ ಒಲಂಪಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಕೀರ್ತಿ ಮೆರೆದ ಕ್ರೀಡಾಪಟು.
ಹಾಸನದ ನಿವಾಸಿಯಾದ ಚೇತನ್ ಅವರಿಗೆ ಬಾಲ್ಯದಿಂದಲೂ ಕ್ರೀಡಾಸಕ್ತಿ. ಅಂಗವೈಕಲ್ಯವಿದ್ದರೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ನೆಚ್ಚಿನ ಹವ್ಯಾಸ. ಪರಿಶ್ರಮ ಮತ್ತು ಬದ್ಧತೆಯಿಂದ ಕ್ರೀಡಾಕ್ಷೇತ್ರದಲ್ಲಿ ತಲ್ಲೀನವಾದ ಚೇತನ್ ಸೀನಿಯರ್ ನ್ಯಾಷನಲ್ ಚಾಂಪಿಯನ್ಶಿಪ್ನ ಅಥ್ಲೆಟಿಕ್ಸ್ನಲ್ಲಿ ಎರಡು ಬಾರಿ ಬೆಳ್ಳಿಪದಕ, ಒಂದು ಬಾರಿ ಕಂಚಿನ ಪದಕ ವಿಜೇತರು. ಬೆಂಗಳೂರಿನಲ್ಲಿ ೨೦೦೮ರಲ್ಲಿ ಜರುಗಿದ ಏಷಿಯನ್ ಪ್ಯಾರಾ ಒಲಂಪಿಕ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿಪದಕ, ಚೆನ್ನೈನಲ್ಲಿ ನಡೆದ ಅಂತಾರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕ, ೨೦೦೯ರಲ್ಲಿ ಐರ್ಲೆಂಡ್ನಲ್ಲಿ ನಡೆದ ವರ್ಡ್ಡ್ವಾರ್ಫ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ನಾಡಿಗೆ ಕೀರ್ತಿ ತಂದ ಪ್ರತಿಭಾವಂತರು.

Categories
ಕ್ರೀಡೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿ.ಎಸ್.ವಿನಯ

ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ವಿ.ಎಸ್.ವಿನಯ ಭಾರತೀಯ ಹಾಕಿ ತಂಡವನ್ನು ಪ್ರತಿನಿಧಿಸಿದ ಪ್ರತಿಭಾವಂತ ಕ್ರೀಡಾಪಟು.
ಕಿತ್ತಾಳೆ ನಾಡು ಕೊಡಗಿನ ಮೂಲದವರಾದ ವಿನಯ ಅವರು ಬಾಲ್ಯದಿಂದಲೂ ಹಾಕಿ ಆಟಕ್ಕೆ ಆಕರ್ಷಿತರಾದವರು. ಸತತ ಪ್ರಯತ್ನದ ಫಲವಾಗಿ ಹಾಕಿಯಲ್ಲಿ ಪರಿಣಿತಿ ಪಡೆದವರು. ರಾಜ್ಯ ಮಟ್ಟದ ಹಾಕಿ ತಂಡದಲ್ಲಿ ಸಾಮರ್ಥ್ಯ ಪ್ರದರ್ಶಿಸಿ ರಾಷ್ಟ್ರ ತಂಡಕ್ಕೆ ಆಯ್ಕೆಯಾದವರು. ಭಾರತೀಯ ಹಿರಿಯರ ಹಾಕಿ ತಂಡದ ಸದಸ್ಯರಾಗಿ ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್, ಏಷ್ಯನ್ ಗೇಮ್ಸ್, ಏಷ್ಯಾಕಪ್, ಜ್ಯೂನಿಯರ್ ವಿಶ್ವಕಪ್ ಮುಂತಾದ ಪ್ರಮುಖ ಪಂದ್ಯಾವಳಿಗಳಲ್ಲಿ ಸಮರ್ಥ ಆಟದಿಂದ ಪಂದ್ಯದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿ ಕ್ರೀಡಾಭಿಮಾನಿಗಳ ಗಮನಸೆಳೆದವರು.. ಕ್ರೀಡಾರಂಗದಲ್ಲಿ ಕರುನಾಡಿನ ಕೀರ್ತಿ ಬೆಳಗಿದ ವಿ.ಎಸ್.ವಿನಯ ಅವರ ಕ್ರೀಡಾಸಾಧನೆಗೆ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಪ್ರಶಸ್ತಿ, ಎಫ್ ಐ ಎಚ್ ವಾರ್ಷಿಕ ಆಟಗಾರ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿರುವ ಕ್ರೀಡಾಪ್ರತಿಭೆ.

Categories
ಕ್ರೀಡೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆನೆತ್ ಮೊವೆಲ್

ಕೋಲಾರ ಚಿನ್ನದ ಗಣಿ ಪ್ರದೇಶದಲ್ಲಿ ಜನಿಸಿದ ಆಂಗ್ಲೋ ಇಂಡಿಯನ್ ಸಮುದಾಯದ ಕೆನೆತ್ ಮೊವೆಲ್ ಅವರು ೧೯೬೫ರಲ್ಲಿಯೇ ಕರ್ನಾಟಕ ರಾಜ್ಯಕ್ಕೆ ಮೊಟ್ಟ ಮೊದಲ ಅರ್ಜುನ ಪ್ರಶಸ್ತಿಯನ್ನು ತಂದುಕೊಟ್ಟವರು.
೧೯೬೪ರ ಟೋಕಿಯೋ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೆನೆತ್ ಮೊವೆಲ್ ೩೫ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತ ತಂಡದ ಸದಸ್ಯರಾಗಿ ಭಾಗವಹಿಸಿದ್ದಾರೆ.
೧೯೬೬ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಾಲುಗೊಂಡ ಭಾರತ ತಂಡದ ಧ್ವಜಧಾರಿಗಳಾಗಿದ್ದ ಕೆನೆತ್ ಮೊವೆಲ್ ರಾಷ್ಟ್ರೀಯ ನೂರು ಮೀಟ??? ಓಟದಲ್ಲಿ ಸ್ಥಾಪಿಸಿದ ದಾಖಲೆ ಹನ್ನೆರಡು ವರ್ಷಗಳ ಕಾಲ ಯಾರಿಂದಲೂ ಮುರಿಯಲಾಗಿರಲಿಲ್ಲ.
ಕರ್ನಾಟಕದಲ್ಲಿ ೪೦೦ ಮೀಟರ್, ೨೦೦ ಮೀಟರ್ ಹಾಗೂ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಕೆನೆತ್ ಮೊವೆಲ್ ಸ್ಥಾಪಿಸಿದ ದಾಖಲೆಗಳು ಹತ್ತಾರು ವರ್ಷಗಳ ಕಾಲ ಅಬಾಧಿತವಾಗಿದ್ದವು.

Categories
ಕ್ರೀಡೆ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಕೃಷ್ಣ ಅಮೋಗೆಪ್ಪ ನಾಯ್ಕಡಿ

ಕೃಷ್ಣ ಅಮೋಗೆಪ್ಪ ನಾಯ್ಕಡಿ ನಾಡಿನ ಉದಯೋನ್ಮುಖ ಸೈಕಲ್ ಸವಾರರಲ್ಲಿ ಒಬ್ಬರು. ರಾಷ್ಟ್ರೀಯ ಸೀನಿಯರ್ ಟ್ರ್ಯಾಕ್ ಸೈಕ್ಲಿಂಗ್ ಬಂಗಾರದ ಪದಕ ಗಳಿಸಿ ಇತಿಹಾಸ ಸೃಷ್ಟಿಸಿರುವ ಕೃಷ್ಣ ಅವರು ಈಗಾಗಲೇ ಅನೇಕ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್ಷಿಪ್ಪುಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ. ಏಷಿಯನ್ ಸೈಕ್ಲಿಂಗ್ ಜ್ಯೂನಿಯರ್ ಚಾಂಪಿಯನ್ಷಿಪ್ನಲ್ಲಿಯೂ ಪಾಲ್ಗೊಂಡಿದ್ದು, ಕೊರಿಯಾದಲ್ಲಿ ತರಬೇತಿ ಪಡೆದಿರುವ ಕೃಷ್ಣ ಅವರು ಪ್ರಸ್ತುತ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಎಸ್.ವಿ. ಸುನಿಲ್

ರಾಷ್ಟ್ರೀಯ ಸೀನಿಯರ್ ಹಾಕಿ ತಂಡದ ಸದಸ್ಯರಾಗಿರುವ ಕೊಡಗಿನ ಎಸ್.ವಿ.ಸುನೀಲ್ ಅವರು ೨೦೦೭ರಿಂದ ಭಾರತ ತಂಡದ ಪ್ರಮುಖ ಸದಸ್ಯರಾಗಿ ಹಲವಾರು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದಾರೆ.
ಜೂನಿಯರ್ ಹಾಕಿ ತಂಡದ ಸದಸ್ಯರಾಗಿ ಭಾರತವನ್ನು ಪ್ರತಿನಿಧಿಸಿರುವ ಸುನೀಲ್ ಅವರು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದಾರೆ. ರಿಯೋ ಒಲಂಪಿಕ್ಸ್ ಕ್ರೀಡೆಯಲ್ಲಿ ಉಪನಾಯಕರಾಗಿದ್ದ ಸುನೀಲ್ ಅವರು ಈವರೆಗೆ ನೂರ ಎಪ್ಪತ್ತೈದಕ್ಕೂ ಹೆಚ್ಚು ಅಂತರರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಸುನೀಲ್ ಅವರು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ೨೦೧೨ನೆಯ ಸಾಲಿನ ಉತ್ತಮಕ್ರೀಡಾಪಟು ಎಂಬ ಗೌರವ ಮತ್ತು ಕೇಂದ್ರ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಸುರ್ಜಿತ್ ಸಿಂಗ್

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ಯಾರಾ ಒಲಂಪಿಕ್ಸ್ ವಿಭಾಗಗಳಲ್ಲಿ ಹಲವು ಸಾಧನೆಗಳನ್ನು ಮಾಡಿರುವ ಸುರಜಿತ್ ಸಿಂಗ್ ಅವರು ಏಕಲವ್ಯ ಪ್ರಶಸ್ತಿ ಪುರಸ್ಕೃತರು.
ಶಾಟ್ ಪುಟ್, ಡಿಸ್ಕಸ್ ಥ್, ಹ್ಯಾಮರ್ ಥೋ ಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸುರಜಿತ್ ಸಿಂಗ್ ಅನೇಕ ಅಂತರರಾಷ್ಟ್ರೀಯ ಪ್ಯಾರಾ ಒಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕಗಳನ್ನು ಜಯಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿಯೂ ಇವರು ಹಲವು ಪದಕಗಳನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ವಿಲಾಸ ನೀಲಗುಂದ

ವಿಲಾಸ ನೀಲಗುಂದ ಅವರು ನಾಡಿನ ಹೆಸರಾಂತ ಅಥ್ಲೆಟ್ ನೂರು ಹಾಗೂ ಇನ್ನೂರು ಮೀಟರ್ ಓಟದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ವಿಲಾಸ ನೀಲಗುಂದ್ ಒಂಭತ್ತನೆಯ ಸ್ಯಾಪ್ ಗೇಮ್ಸ್‌ನಲ್ಲಿ ೪x೧೦೦ ಮೀಟರ್ ರಿಲೇ ಸ್ಪರ್ಧೆಗಳಲ್ಲಿ ದಾಖಲೆಯ ಮೂಲಕ ಮೊದಲ ಸ್ಥಾನ ಪಡೆದ ಭಾರತೀಯ ತಂಡದ ಓಟಗಾರರಾಗಿದ್ದರು.

ಅನೇಕ ರಾಜ್ಯ ದಾಖಲೆಗಳನ್ನು ಸ್ಥಾಪಿಸಿರುವ ವಿಲಾಸ ನೀಲಗುಂದ್ ವಿಶ್ವ ರೈಲ್ವೆ ಅಥ್ಲೆಟಿಕ್ ಕೂಟದ ರಿಲೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ರೈಲ್ವೆ ತಂಡದಲ್ಲಿರುವ ವಿಲಾಸ ನೀಲಗುಂದ್ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ನಿರಂತರವಾಗಿ ಪಾಲುಗೊಂಡ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಮಮತಾ ಪೂಜಾಲ

ಶಾಲಾ ದಿನಗಳಿಂದಲೇ ಕಬ್ಬಡ್ಡಿ ಆಟದಲ್ಲಿ ಆಸಕ್ತಿ ಇಟ್ಟುಕೊಂಡು ರಾಜ್ಯ ಹಾಗೂ ರಾಷ್ಟ್ರ ತಂಡಗಳಿಗೆ ಆಯ್ಕೆಯಾದ ಮಮತಾ ಪೂಜಾರಿ ವಿಶ್ವಕಪ್ ಕಬ್ಬಡ್ಡಿ ಪಂದ್ಯಾವಳಿಗಳಲ್ಲಿ ಭಾರತ ತಂಡದ ನಾಯಕಿಯಾಗಿ ಚಾಂಪಿಯನ್ಶಿಪ್ ಗೆದ್ದುಕೊಟ್ಟಿದ್ದಾರೆ.

ಯುವ ಕಬ್ಬಡ್ಡಿ ಆಟಗಾರ್ತಿಯರಲ್ಲಿ ಪ್ರಮುಖರಾಗಿರುವ ಮಮತಾ ಪೂಜಾರಿ ಹಿಂದಿನ ಏಷ್ಯನ್ ಕ್ರೀಡಾ ಕೂಟದಲ್ಲೂ ಭಾರತೀಯ ತಂಡದಲ್ಲಿದ್ದರು. ಈ ಸಾಲಿನ ಏಷ್ಯನ್ ಕ್ರೀಡಾಕೂಟದಲ್ಲಿ ಅಗ್ರ ಸ್ಥಾನ ಪಡೆದ ಭಾರತ ತಂಡದ ಆಟಗಾರ್ತಿಯಾಗಿದ್ದ ಮಮತಾ ಪೂಜಾರಿ ಅರ್ಜುನ ಪ್ರಶಸ್ತಿಗೆ ಕಿರಿಯ ವಯಸ್ಸಿನಲ್ಲಿಯೇ ಭಾಜನರಾಗಿರುವ ಪ್ರತಿಭಾವಂತೆ. ಎರಡು ಏಷ್ಯನ್ ಕ್ರೀಡಾಕೂಟಗಳಲ್ಲೂ ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟ ಮಹಿಳಾ ಕಬ್ಬಡ್ಡಿ ತಂಡದ ಪ್ರಮುಖ ಆಟಗಾರ್ತಿಯರಲ್ಲಿ ಮಮತಾ ಪೂಜಾರಿಯವರೂ ಒಬ್ಬರು.

ಭಾರತೀಯ ಮಹಿಳಾ ಕಬ್ಬಡ್ಡಿ ಆಟಗಾರ್ತಿಯರಲ್ಲಿ ಅಗ್ರಗಣ್ಯರಾದ ಮಮತಾ ಪೂಜಾರಿ ಈಗಾಗಲೇ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಹಲವಾರು ಗೌರವ ಪುರಸ್ಕಾರಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಎಂ.ಆರ್. ಪೂವಮ್ಮ

ದೇಶದ ಉದಯೋನ್ಮುಖ ಅಥೀಟ್‌ಗಳಲ್ಲಿ ಒಬ್ಬರಾದ ಎಂ.ಆರ್.ಪೂವಮ್ಮ ಪ್ರಸ್ತುತ ೪೦೦ ಮೀಟರ್ ಓಟದಲ್ಲಿ ಚಾಂಪಿಯನ್. ವಿಶ್ವ ಯುವ ಅಥೇಟ್ ಚಾಂಪಿಯನ್ಶಿಪ್, ಕಾಮನ್ವೆಲ್ತ್‌ ಕ್ರೀಡಾ ಕೂಟ ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಎಂ.ಆರ್.ಪೂವಮ್ಮ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಕಾಮನ್ವೆಲ್ತ್ ಹಾಗೂ ಏಷ್ಯನ್ ಕ್ರೀಡಾ ಕೂಟದಲ್ಲಿ ೪೦೦ ಮೀಟರ್ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿರುವ ಪೂವಮ್ಮ ಭಾರತ ತಂಡಕ್ಕೆ ೪ x೧೦೦-೪೦೦ ರಿಲೇ ಓಟದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ದೇಶದ ಭರವಸೆಯ ಓಟಗಾರ್ತಿಯಾಗಿರುವ ಎಂ.ಆರ್.ಪೂವಮ್ಮ ಒಲಂಪಿಕ್ಸ್‌ನಲ್ಲೂ ಪದಕ ಗಳಿಸುವ ಗುರಿಯೊಂದಿಗೆ ಅಭ್ಯಾಸ ಮಾಡುತ್ತಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಕುಮಾರಿ ಶಿಖಾ ಟಂಡನ್

ರಾಷ್ಟ್ರ-ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುವ ಮೂಲಕ ಕನ್ನಡ ನಾಡಿಗೆ, ರಾಷ್ಟ್ರಕ್ಕೆ ಕೀರ್ತಿ ತಂದವರು
ಭರವಸೆಯ ಈಜುಗಾರ್ತಿ ಶಿಖಾ ಟಂಡನ್.
೧೯೮೫ರಲ್ಲಿ ಜನಿಸಿದ ಶಿಖಾ ೧೯೮೭ರಿಂದ ಕರ್ನಾಟಕದ ನಿವಾಸಿ, ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಎಂ.ಎಸ್ಪಿ ಬಯೊಟೆಕ್ನಾಲಜಿ ಅಭ್ಯಾಸ. ಕೆ.ಸಿ.ರೆಡ್ಡಿ ಸ್ವಿಮ್ಮಿಂಗ್ ಸೆಂಟರ್‌ನ ಪ್ರತಿಭೆ, ಪ್ರಸ್ತುತ ನಿಹಾರ್ ಅಮೀನ್ ಅವರ ಮಾರ್ಗದರ್ಶನದಲ್ಲಿ ಈಜಿನ ವಿವಿಧ ಮಜಲುಗಳ ಕಲಿಕೆ.
ಕಳೆದ ಒಂದೂವರೆ ದಶಕದಿಂದ ಅಸಂಖ್ಯ ಈಜು ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಅವರು, ೨೦೦೪ರಲ್ಲಿ ಅಥೆನ್ಸ್‌ನಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಭಾರತದ ಏಕೈಕ ಈಜುಗಾರ್ತಿ,
೨೦೦೫ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯಾ ಓಪನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪದಕ ಗೆದ್ದ ಏಕೈಕ ಭಾರತೀಯಳು ಎಂಬ ಹಿರಿಮೆಗೆ ಪಾತ್ರರು. ಬ್ಯಾಕ್‌ಸ್ಟೋಕ್, ಫ್ರೀಸ್ಟೈಲ್ ಮತ್ತು ಬಟರ್‌ಫೈ ವಿಭಾಗಗಳಲ್ಲಿ ಸತತ ಏಳು ಬಾರಿ ರಾಷ್ಟ್ರಮಟ್ಟದಲ್ಲಿ ವೈಯಕ್ತಿಕ ದಾಖಲೆ ನಿರ್ಮಿಸಿದ ಕೀರ್ತಿಗೆ ಅವರು ಭಾಜನರು.
ಈವರೆಗೆ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಐದು ಚಿನ್ನದ ಪದಕ, ೧೭ ರಜತ ಪದಕ ಗೆದ್ದಿರುವರು. ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪುರಸ್ಕೃತ ತರಾದ ಶಿಖಾ ಟಂಡನ್ ನಾಡಿನ ಭವಿಷ್ಯದ ಭರವಸೆಯ ಮಿಂಚು.

Categories
ಕ್ರೀಡೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಜೆ.ಜೆ. ಶೋಭಾ

ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಗಳಲ್ಲಿ ಕನ್ನಡ ನಾಡಿಗೆ, ದೇಶಕ್ಕೆ ಕೀರ್ತಿ ತಂದವರು ಜೆ.ಜೆ.ಶೋಭಾ
ಅವರು.
ಹೆಪ್ಟಫ್ಲಾನ್, ಉದ್ದ ಜಿಗಿತ ಹಾಗೂ ಹರ್ಡಲ್ಸ್ ಅಥ್ಲೆಟಿಕ್ಸ್ ಕ್ರೀಡೆಗಳಲ್ಲಿ ದೇಶವನ್ನು ಪ್ರತಿನಿಧಿಸುವ ಶೋಭಾ ಹುಟ್ಟಿದ್ದು ೧೯೭೮ರಲ್ಲಿ. ಬಿ.ಎ. ಪದವೀಧರರು. ಸದ್ಯ ಸಿಕಂದರಾಬಾದ್‌ನಲ್ಲಿ ನೆಲೆಸಿರುವ ಶ್ರೀಯುತರು ಕನ್ನಡದ ಹೆಮ್ಮೆಯ ಕುವರಿ. ಎರಡು ತಿಂಗಳ ಹಿಂದೆ ಚೀನಾದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಕೆಲವೇ ಅದೃಷ್ಟಶಾಲಿಗಳಲ್ಲಿ ಅವರೂ ಒಬ್ಬರು.
೧೯೯೭ರಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕ್ಷೇತ್ರಕ್ಕೆ ಕಾಲಿರಿಸಿದ ಅವರು ಈವರೆಗೆ ನಿರ್ಮಿಸಿರುವ ದಾಖಲೆಗಳು ಹತ್ತು-ಹಲವು. ಅವುಗಳಲ್ಲಿ ಪ್ರಮುಖವಾದುದು ಹೆಪ್ಟಾನ್ ಕ್ರೀಡೆಯಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವುದು.
ಕಳೆದ ವರ್ಷ ಜೋರ್ಡಾನ್‌ನಲ್ಲಿ ನಡೆದ ೧೭ನೇ ಏಷ್ಯನ್‌ ಅಥ್ಲೆಟಿಕ್ಸ್‌ ಛಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, ಗುವಾಹತಿಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ, ಕತಾರ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಸೇರಿದಂತೆ ಈವರೆಗೆ ೧೫ಕ್ಕೂ ಹೆಚ್ಚಿನ ಚಿನ್ನದ ಪದಕ ಗೆದ್ದ ದಾಖಲೆ ಅವರದು.
ಕ್ರೀಡಾ ಕ್ಷೇತ್ರದ ಸಾಧನೆಗಾಗಿ ೨೦೦೪ರಲ್ಲಿ ಪ್ರತಿಷ್ಠಿತ ಅರ್ಜುನ ಪುರಸ್ಕಾರ ಪಡೆದಿರುವ ಶ್ರೀಮತಿ ಜೆ.ಜೆ. ಶೋಭಾ ಅವರು ಭವಿಷ್ಯದಲ್ಲಿ ಇನ್ನೂ ಹತ್ತಾರು ದಾಖಲೆಗಳನ್ನು ನಿರ್ಮಿಸುವ ಕನಸು ಹೊತ್ತವರು.

Categories
ಕ್ರೀಡೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಎಂ. ನಿರಂಜನ್

೨೧ರ ಹರೆಯದ ನಿರಂಜನ್ ಮುಕುಂದನ್ ಅವರು ಅಂತರರಾಷ್ಟ್ರೀಯ ಅಂಗವಿಕಲ ಈಜು ಸ್ಪರ್ಧೆಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಈಜು ಪಟು, ಅಂಗವೈಕಲ್ಯದಿಂದ ಹಲವಾರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ನಿರಂಜನ್ ವೈದ್ಯರ ಸಲಹೆಯಂತೆ ಈಜಿನ ಕೊಳಕ್ಕೆ ಇಳಿದವರು. ಈಜುಗಾರಿಕೆಯಲ್ಲಿ ಪ್ರಾವೀಣ್ಯತೆ ಸಂಪಾದಿಸಿದರು.
ಅಂಗವೈಕಲ್ಯವನ್ನು ಮರೆತು ಛಲದಿಂದ ಈಜು ಸ್ಪರ್ಧೆಗಳಲ್ಲಿ ಭಾಗಿಯಾಗತೊಡಗಿದ ನಿರಂಜನ್ ಅವರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಪಡೆಯಲಾರಂಭಿಸಿದರು. ಕಳೆದ ನಾಲ್ಕು ವರ್ಷಗಳಿಂದ ಅನೇಕ ಜಾಗತಿಕ ಪ್ಯಾರಾ ಒಲಂಪಿಕ್ಸ್ ಸ್ಪರ್ಧೆಗಳಲ್ಲಿ ಪಾಲುಗೊಂಡ ನಿರಂಜನ್ ೨೦೧೪ರಲ್ಲಿ ಲಂಡನಿನಲ್ಲಿ ನಡೆದ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಮೂರು ಚಿನ್ನವೂ ಸೇರಿದಂತೆ ಎಂಟು ಪದಕಗಳನ್ನು ಗಳಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ವಿನಯಕುಮಾರ್

ಕರ್ನಾಟಕದ ಕ್ರಿಕೆಟ್ ತಂಡದ ನಾಯಕರಾಗಿ, ಎರಡು ಬಾರಿ ರಣಜಿ ಪ್ರಶಸ್ತಿಗಳನ್ನು ಒಂದೇ ವರ್ಷದಲ್ಲಿ ಭಾರತದ ಎಲ್ಲ ಪ್ರಮುಖ ಕ್ರಿಕೆಟ್ ವಲಯ ಹಾಗೂ ಅಂತರರಾಜ್ಯ ಕ್ರಿಕೆಟ್ ಟೂರ್ನಿಗಳನ್ನು ಗೆದ್ದುಕೊಟ್ಟ ವಿನಯಕುಮಾರ್ ಮಧ್ಯಮವೇಗದ ಬೌಲರ್. ಭಾರತ ತಂಡದಲ್ಲಿಯೂ ಅವಕಾಶ ಪಡೆದಿದ್ದು, ಪ್ರಸ್ತುತ ದೇಶೀಯ ಕ್ರಿಕೆಟ್ಟಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವಿನಯಕುಮಾರ್ ಭವಿಷ್ಯದಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸುವ ಲಕ್ಷಣಗಳನ್ನು ತೋರುತ್ತಿದ್ದಾರೆ.
“ದಾವಣಗೆರೆ ಎಕ್ಸ್ ಪ್ರೆಸ್” ಎಂದೇ ಖ್ಯಾತರಾದ ವಿನಯಕುಮಾರ್ ಭಾರತ ತಂಡದ ಭರವಸೆಯ ಮಧ್ಯಮವೇಗಿ ಬೌಲರ್.

Categories
ಕ್ರೀಡೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಪಾಂಡಂಡ ಎಂ. ಕುಟ್ಟಪ್ಪ

ದೇಶದ ಹಾಕಿ ಕ್ರೀಡಾರಂಗಕ್ಕೆ ಗಣನೀಯ ಕೊಡುಗೆ ನೀಡಿರುವ ಕೊಡಗು ಪ್ರದೇಶದಲ್ಲಿ ಕೌಟುಂಬಿಕ ಹಾಕಿ ಉತ್ಸವವನ್ನು ಹುಟ್ಟು ಹಾಕಿದ ವ್ಯಕ್ತಿ ಪಾಂಡಂಡ.ಎಂ.ಕುಟ್ಟಪ್ಪ ಅವರು.
ಶಾಲಾ ಶಿಕ್ಷಕರಾಗಿದ್ದು, ನಂತರ ಬ್ಯಾಂಕ್ ನೌಕರಿಗೆ ಸೇರಿದ ಕುಟ್ಟಪ್ಪ, ನಿವೃತ್ತಿಯ ನಂತರ ತಮ್ಮ ಸ್ವಂತ ಸ್ಥಳವಾದ ಕೊಡಗಿಗೆ ವಾಪಸಾಗಿ ಹಾಕಿ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ತಾಳಿ ಕೌಟುಂಬಿಕ ಹಾಕಿ ಪಂದ್ಯಾಟಗಳನ್ನು ಆರಂಭಿಸಲು ಶ್ರಮಿಸಿದರು.
ಕಳೆದ ಹದಿನೇಳು ವರ್ಷಗಳಿಂದ ಯಶಸ್ವಿಯಾಗಿ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ನಡೆಸಿಕೊಂಡು ಬರುತ್ತಿರುವ ಕುಟ್ಟಪ್ಪನವರು ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸುವಲ್ಲಿ ಸಹಕರಿಸಿದ್ದಾರೆ. ಲಿಮ್ಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ ಆಗುವ ಮೂಲಕ ದೇಶ-ವಿದೇಶ ಗಮನ ಸೆಳೆದಿರುವ ಈ ಹಾಕಿ ಉತ್ಸವದಲ್ಲಿ ಪ್ರಸ್ತುತ ಎರಡು ನೂರ ಇಪ್ಪತ್ತೈದು ತಂಡಗಳು ಪಾಲುಗೊಳ್ಳುತ್ತಿದ್ದು, ಇದನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಪ್ರತಿ ವರ್ಷ ಸುಮಾರು ೨೫,೦೦೦ ಜನ ಆಗಮಿಸುತ್ತಿದ್ದಾರೆ.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಚಿನ್ನದ ಪದಕವೂ ಸೇರಿದಂತೆ ಅನೇಕ ಗೌರವಗಳು ಪಾಂಡಂಡ.ಎಂ.ಕುಟ್ಟಪ್ಪನವರಿಗೆ ಸಂದಿವೆ.

Categories
ಕ್ರೀಡೆ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ. ಸಿ. ಸುರೇಶ್

ಹಳ್ಳಿಗಾಡಿನಲ್ಲಿ ಹುಟ್ಟಿ ದೇಸಿ ಕ್ರೀಡೆ ಕಬಡ್ಡಿಯಲ್ಲಿ ನೈಪುಣ್ಯತೆ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದವರು ಶ್ರೀ ಬಿ.ಸಿ. ಸುರೇಶ್ ಅವರು.
ಚನ್ನಪಟ್ಟಣದ ಸಂಕಲಗೆರೆಯವರಾದ ಬಿ.ಸಿ. ಸುರೇಶ್ ಅವರು ಕಳೆದ ಒಂದೂವರೆ ದಶಕದಿಂದ ಕಬಡ್ಡಿ ರಂಗದಲ್ಲಿ ಹೆಸರು ಮಾಡಿದ್ದಾರೆ.
ಚಿಕ್ಕಂದಿನಿಂದಲೇ ಈ ಹಳ್ಳಿ ಆಟದಲ್ಲಿ ಆಸಕ್ತಿ ಮೂಡಿಸಿಕೊಂಡು ಸತತ ಪಲಶ್ರಮದಿಂದ ರಾಜ್ಯ ತಂಡದಲ್ಲಿ ಸ್ಥಾನ ಗಳಿಸಿಕೊಂಡ ಸುರೇಶ್ ಹಿಂತಿರುಗಿ ನೋಡಲಿಲ್ಲ. ಕರ್ನಾಟಕ ರಾಜ್ಯ ತಂಡಕ್ಕೆ ಮೂರು ಬಾಲ ನಾಯಕರಾಗಿದ್ದ ಇವರು ೧೩ ವರ್ಷಗಳ ಕಾಲ ರಾಷ್ಟ್ರೀಯ ಪಂದ್ಯಾವಆಗಳಲ್ಲಿ ಪಾಲ್ಗೊಂಡಿದ್ದಾರೆ.
ಎಂಟು ಬಾಲ ದಕ್ಷಿಣ ವಲಯವನ್ನು ಪ್ರತಿನಿಧಿಸಿರುವ ಸುರೇಶ್ ೬ ವರ್ಷ ಫೆಡರೇಷನ್ ಕಪ್ ಪಂದ್ಯಾವಆಗಳಲ್ಲಿ ಭಾಗವಹಿಸಿದ್ದು ದೇಶದ ಪ್ರಮುಖ ಕಬಡ್ಡಿ ಆಟಗಾರರೆನ್ನಿಸಿಕೊಂಡಿದ್ದಾರೆ.
ದಕ್ಷಿಣ ಕೊಲಿಯಾದಲ್ಲಿ ಜರುಣದ (೨೦೦೨) ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದ ಭಾರತ ತಂಡದಲ್ಲಿದ್ದ ಸುರೇಶ್ ಮೊದಲ ವಿಶ್ವಕಪ್ ಕಬಡ್ಡಿ ಪಂದ್ಯಾವಆಗಳಲ್ಲಿ ಅಗ್ರಸ್ಥಾನ ಗಳಿಸಿದ ಭಾರತ ತಂಡದ ಉಪ ನಾಯಕ. ಅಂತರರಾಷ್ಟ್ರೀಯ ಕಬಡ್ಡಿ ಟೂರ್ನಿಯಲ್ಲ (೨೦೦೪) ಭಾರತ ತಂಡದ ನಾಯಕತ್ವ ವಹಿಸಿದ್ದ ಬಿ.ಸಿ. ಸುರೇಶ್ ಅವರು, ಎರಡು ಬಾಲ ಸ್ಕಾಫ್ ಗೇಮ್ಸ್ (೧೯೯೯-೨೦೦೪) ಎರಡು ವರ್ಷ ಏಷ್ಯನ್ ಚಾಂಪಿಯನ್ ಷಿಪ್ಗಳಲ್ಲಿ ಭಾರತ ತಂಡದ ಆಟಗಾರ,
ಭಾರತಕ್ಕೆ ಹಾಗೂ ಕರ್ನಾಟಕ ತಂಡಕ್ಕೆ ತಮ್ಮ ಚಾಕಚಕ್ಯತೆ ಅಟದಿಂದ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಡುವ ಮುಖ್ಯ ಪಾತ್ರವಹಿಸಿರುವ ಬಿ. ಸಿ. ಸುರೇಶ್ ಅವರಿಗೆ ದೊರಕಿರುವ ಪ್ರಶಸ್ತಿ ಪುರಸ್ಕಾರಗಳು ಹಲವಾರು. ಅವುಗಳಲ್ಲ ಏಕಲವ್ಯ ಪ್ರಶಸ್ತಿ, ಕರ್ನಾಟಕ ಒಲಂಪಿಕ್ ಸಂಸ್ಥೆ ಪುರಸ್ಕಾರ ಹಾಗೂ ಕೆಂಪೇಗೌಡ ಪ್ರಶಸ್ತಿಗಳು ಪ್ರಮುಖವಾದವು. ದೇಶ ವಿದೇಶಗಳಲ್ಲಿ ತಮ್ಮ ಪ್ರತಿಭೆ ಸಾದರಪಡಿಸಿರುವ ಅತ್ಯುತ್ತಮ ಕಬಡ್ಡಿ ಪಟು ಶ್ರೀ ಬಿ.ಸಿ. ಸುರೇಶ್ ಅವರು.

Categories
ಕ್ರೀಡೆ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಪಂಕಜ್ ಅದ್ವಾನಿ

ಕಿರಿಯ ವಯಸ್ಸಿನಲ್ಲೇ ವಿಶ್ವದ ಅಗ್ರಮಾನ್ಯ ಬಿಲಿಯರ್ಡ್ಸ್ ಆಟಗಾರನೆಂದು ಕೀರ್ತಿ ಪಡೆದವರು ಪಂಕಜ್ ಅಡ್ವಾನಿ ಅವರು.
೧೯೮೫ರ ಜುಲೈ ೨೪ರಂದು ಜನಿಸಿದ ಪಂಕಜ್ ಅಡ್ವಾನಿ ೧೯೯೭ರಲ್ಲಿ ಕರ್ನಾಟಕ ರಾಜ್ಯ ಜೂನಿಯರ್ ಸ್ಪೂಕರ್ ಚಾಂಪಿಯನ್ ಆಗಿ ಹೊರಹೊಮ್ಮಿದವರು ಸತತವಾಗಿ ಯಶಸಾಧಿಸುತ್ತಲೇ ಇದ್ದಾರೆ.
ಸ್ಕೂಕರ್ ಹಾಗೂ ಬಿಲಿಯರ್ಡ್ಸ್ ಆಟಗಳಲ್ಲಿ ಪಲಣಿತಿ ಗಳಿಸಿದ ಪಂಕಜ್ ೧೯೯೮ರಲ್ಲೇ ಸೀನಿಯರ್ ಬಿಲಿಯರ್ಡ್ಸ್ ಟೂರ್ನಿಯಲ್ಲಿ ಪಾಲ್ಗೊಂಡರು.
ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ನಿಯತವಾಗಿ ಭಾಗವಹಿಸುತ್ತ ಬಂದ ಪಂಕಜ್ ಅದ್ವಾನಿ ಅನುಭವದ ಜೊತೆಗೆ ಹಲವು ಪ್ರಶಸ್ತಿಗಳನ್ನು ತಮ್ಮದಾಲಿಸಿಕೊಂಡರು.
೨೦೦೩ರಲ್ಲಿ ಸ್ಕೂಕ ಹಾಗೂ ಇಲಿಯರ್ಡ್ಸ್ ಎರಡರಲ್ಲೂ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಆದ ಪಂಕಜ್ ಅನೇಕ ವಿಶ್ವ ಚಾಂಪಿಯನ್ಷಿಪ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರಲ್ಲದೆ ೨೦೦೨ರಲ್ಲಿ ೨೧ ವರ್ಷದೊಳಗಿನ ವಿಶ್ವನ್ನೂಕರ್ ಟೂರ್ನಿಯ ಫೈನಲ್ ತಲುಪಿದ್ದರು.
ಭಾರತೀಯ ಚಿಲಿಯರ್ಡ್ಸ್ ಛಾಂಪಿಯನ್ (೨೦೦೫) ಆದ ಪಂಕಜ್ ಅಡ್ವಾನಿ ಅದೇ ವರ್ಷ ಏಷ್ಯನ್ ಬಿಅಯರ್ಡ್ ಛಾಂಪಿಯನ್ಷಿಪ್ ಗೆದ್ದುಕೊಂಡರು. ಆ ನಂತರದ ಹೆಜ್ಜೆಯೇ ಪಂಕಜ್ ಅಡ್ವಾನಿ ವಿಶ್ವ ಛಾಂಪಿಯನ್ ಆಗಿದ್ದು. ಪ್ರತಿಷ್ಟಿತ ರಾಷ್ಟ್ರೀಯ ರಾಜೀವ್ಗಾಂಧಿ ಖೇಲ್ರತ್ನ ಪ್ರಶಸ್ತಿಯೂ ಸೇಲದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಪಂಕಜ್ ಅದ್ವಾನಿ ಅವಲಗೆ ಸಂದಿವೆ.
ಕರ್ನಾಟಕದ ಹೆಮ್ಮೆಯ ಅಯರ್ಡ್ಸ್ ಪಟು ಶ್ರೀ ಪಂಕಜ್ ಆದ್ವಾನಿ ಅವರು.

Categories
ಕ್ರೀಡೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಜನ್ ಉತ್ತಪ್ಪ

ಆಡಿದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ೮೬ ರನ್ ಬಾರಿಸಿದ ಕ್ರಿಕೆಟ್ ಕಲಿ ಶ್ರೀ ರಾಬಿನ್ ಉತ್ತಪ್ಪ.
ಎಳೆಯ ವಯಸ್ಸಿನಿಂದಲೇ ಕ್ರಿಕೆಟ್ ಮೋಹ ಬೆಳೆಸಿಕೊಂಡ ರಾಬಿನ್ ಉತ್ತಪ್ಪ ಹದಿಹರೆಯದಲ್ಲೇ ಕರ್ನಾಟಕ ತಂಡಕ್ಕೆ ಸೇರಿ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆದರು.
ಆಲ್‌ರೌಂಡ್ ಆಟಗಾರನಾಗಿ ಕ್ರಿಕೆಟ್ ಅಂಗಳದಲ್ಲಿ ಚಿಗುರಿರುವ ಈ ಕರ್ನಾಟಕದ ಆಟಗಾರ ಈಗಾಗಲೇ ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದು ಉತ್ತಮ ಭವಿಷ್ಯ ಹೊಂದಿರುವ ಆಟಗಾರನೆಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
ರಣಜಿ, ದುಲಿಪ್ ಟ್ರೋಫಿ, ೧೯ ವರ್ಷದೊಳಗಿನ ಭಾರತ ತಂಡ, ಹೀಗೆ ಯಾವುದೇ ತಂಡದಲ್ಲಿದ್ದರೂ ಉತ್ತಮ ಬ್ಯಾಟುದಾರನೆಂಬ ಪ್ರಶಂಸೆ ಪಡೆದಿರುವ ರಾಬಿನ್ ಉತ್ತಪ್ಪ ಈಗ ಪದವಿ ತರಗತಿಯಲ್ಲಿರುವ ವಿದ್ಯಾರ್ಥಿ.

Categories
ಕ್ರೀಡೆ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಕೆ. ವೆಂಕಟೇಶ ಪ್ರಸಾದ್

ವಿಶ್ವ ಕ್ರಿಕೆಟ್ ಲೋಕಕ್ಕೆ ಕರ್ನಾಟಕ ನೀಡಿದ ಕೊಡುಗೆಗಳಲ್ಲೊಬ್ಬರು ಶ್ರೀ ಬಿ.ಕೆ. ವೆಂಕಟೇಶ ಪ್ರಸಾದ್. ಭಾರತ ಕ್ರಿಕೆಟ್ ತಂಡದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ವೆಂಕಟೇಶ್ ಪ್ರಸಾದ್ ೧೯೯೪ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ೧೯೯೬ ಹಾಗೂ ೧೯೯೯ರ ವಿಶ್ವಕಪ್‌ಗಳಲ್ಲಿ ಭಾರತ ತಂಡದಲ್ಲಿದ್ದ ವೆಂಕಿ ಪಾಕೀಸ್ತಾನದ ವಿರುದ್ಧ ೨೭ ರನ್ ನೀಡಿ ೫ ವಿಕೆಟ್ ಪಡೆದಿದ್ದು ಶ್ರೇಷ್ಠ ಸಾಧನೆ.
೧೯೯೬ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೆಸ್ಟ್ ಬದುಕು ಆರಂಭಿಸಿದ ಬೌಲರ್ ವೆಂಕಿ ಏಳು ಇನಿಂಗ್ಸ್‌ಗಳಲ್ಲಿ ತಲಾ ೫ ವಿಕೆಟ್ ಪಡೆದ ಸಾಧನೆ ಮಾಡಿದ್ದರು.
ಪ್ರತಿಷ್ಟಿತ ಅಂತರರಾಷ್ಟ್ರೀಯ ಕ್ರಿಕೆಟ‌ ಪ್ರಶಸ್ತಿ (೧೯೯೭) ಅರ್ಜುನ್ ಪ್ರಶಸ್ತಿ (೨೦೦೧) ‘ಏಕಲವ್ಯ ಪ್ರಶಸ್ತಿ’ (೧೯೯೯) ಪಡೆದಿರುವ ವೆಂಕಟೇಶ್ ಪ್ರಸಾದ್ ಕರ್ನಾಟಕ ರಣಜಿ ಟ್ರೋಫಿ ತಂಡದ ಪ್ರಧಾನ ಕೋಚ್‌.
ಕ್ರಿಕೆಟ್ ಅಂಗಳದಿಂದ ಕ್ರಿಕೆಟ್ ಆಡಳಿತಕ್ಕೆ ಬಂದಿರುವ ವೆಂಕಟೇಶ ಪ್ರಸಾದ್ ಅವರ ಈಗಿನ ಗುರಿ ತರಬೇತಿಯಲ್ಲಿ ಶ್ರೇಷ್ಠ ಪರಿಣತಿ ಪಡೆಯುವುದು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಬಿ.ಸಿ. ರಮೇಶ್

ಕಿರಿಯ ವಯಸ್ಸಿನಲ್ಲೇ ಕಬಡಿ ಕ್ರೀಡೆಯಲ್ಲಿ ಹಿರಿಯ ಸಾಧನೆ ಮಾಡಿ ನಾಡಿನ ಕ್ರೀಡಾರಂಗದ ಹಿರಿಮೆಯನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಾಡಿನ ಹೆಮ್ಮೆಯ ಪಟು ಶ್ರೀ ಬಿ.ಸಿ. ರಮೇಶ್,
೧೯೭೧ರಲ್ಲಿ ಬೆಂಗಳೂರು ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದಲ್ಲಿ ಹುಟ್ಟಿದ – ಶ್ರೀ ರಮೇಶ್ ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಅತ್ಯಾಸಕ್ತಿಯನ್ನು ಬೆಳೆಸಿಕೊಂಡು ಒಂದೊಂದೇ ಮಟ್ಟಿಲು ಏರುತ್ತಾ ಅಂತರರಾಷ್ಟ್ರೀಯ ಕ್ರೀಡಾ ಪಟು ಎನಿಸಿದರು. ರಾಷ್ಟ್ರೀಯ ತಂಡಕ್ಕೆ ಮೂರು ಬಾರಿ ನಾಯಕರಾಗಿ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರಲ್ಲದೆ ಎರಡು ಬಾರಿ ಏಷ್ಯನ್ ಕ್ರೀಡೆಯಲ್ಲಿ ಚಿನ್ನದ ಪದಕ, ಹಾಗೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಬಾರಿ ಚಿನ್ನದ ಪದಕ, ಹಾಗೂ ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಪಡೆದ ಹೆಮ್ಮೆ ಇವರದು.
ಏಕಲವ್ಯ ಪ್ರಶಸ್ತಿ (೧೯೯೯), ಕೆಂಪೇಗೌಡ ಪ್ರಶಸ್ತಿ (೨೦೦೦), ಅರ್ಜುನ ಪ್ರಶಸ್ತಿ (೨೦೦೧), ಒಲಂಪಿಕ್ ಅಸೋಸಿಯೇಷನ್ ಪ್ರಶಸ್ತಿ (೨೦೦೧), ಹೀರೋ ಇಂಡಿಯನ್ ಪ್ರಶಸ್ತಿ (೨೦೦೨), ಮುಂತಾದ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳು ಇವರ ಪ್ರತಿಭೆಗೆ ಸಂದ ಸಮ್ಮಾನಗಳು.
ನಿರಂತರ ಪರಿಶ್ರಮ ಮತ್ತು ಸ್ವಯಂಸ್ಪೂರ್ತಿಯಿಂದ ಏನನ್ನಾದರೂ ಸಾಧಿಸಬಹುದೆನ್ನುವ ಯುವ ಜನತೆಗೊಂದು ಮಾದರಿ ಶ್ರೀ ಬಿ.ಸಿ. ರಮೇಶ್ ಅವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ.ವೈ. ವೆಂಕಟೇಶ್

ಅತ್ಯಂತ ಕಿರಿಯ ವಯಸ್ಸಿಗೇ ಶ್ರೇಷ್ಠಮಟ್ಟದ ಕ್ರೀಡಾಪಟುವಾಗಿ ದೇಶ ವಿದೇಶಗಳಲ್ಲಿ ಕರ್ನಾಟಕದ ಹೆಮ್ಮೆಯ ಪತಾಕೆ ಹಾರಿಸಿದ ಶ್ರೀ ಕೆ.ವೈ. ವೆಂಕಟೇಶ್ ಅವರು ಅಂಗವಿಕಲತೆಯನ್ನೇ ಯಶಸ್ಸಿನ ಸೂತ್ರವಾಗಿಸಿಕೊಂಡವರು.
೧೯೬೮ರಲ್ಲಿ ಜನಿಸಿದ ಶ್ರೀ ವೆಂಕಟೇಶ್ ಅವರು ಓದಿದ್ದು ಬಿ.ಎಸ್ಸಿ., ಆದರೆ ಅವರ ಆಸಕ್ತಿ ಕ್ರೀಡಾ ಬಯಲಿನತ್ತಲೇ. ಇದುವರೆವಿಗೂ ಅವರು ಮಲೇಷಿಯಾ, ಜರ್ಮನಿ, ಬೆಲ್ಡಿಯಂ, ಸ್ವೀಡನ್, ಇಸ್ರೇಲ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಶಾಟ್ ಪುಟ್, ಜಾವೆಲಿನ್ ಥೋ, ಡಿಸ್ಕಸ್ ಥ್ ಹಾಗೂ ಬ್ಯಾಡ್ಮಿಂಟನ್ಗಳಂತಹ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಐದು ಚಿನ್ನದ ಪದಕಗಳು, ನಾಲ್ಕು ಬೆಳ್ಳಿ ಪದಕಗಳು ಹಾಗೂ ಒಂದು ಕಂಚಿನ ಪದಕವನ್ನು ಗಳಿಸುವುದರ ಮೂಲಕ ರಾಜ್ಯ ಕ್ರೀಡಾ ನಕ್ಷೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಬೆಂಗಳೂರು, ಚೆನ್ನೈ, ನಾಗಪುರ, ಮುಂಬೈ ಹಾಗೂ ಮೈಸೂರು ನಗರಗಳ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಶ್ರೀ ವೆಂಕಟೇಶ್ ಅವರು ಹದಿನೆಂಟು ಚಿನ್ನದ ಪದಕ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಜಿನ ಸ್ಪರ್ಧೆ, ಕ್ರಿಕೆಟ್ ಹಾಗೂ ವೈಟ್ ಲಿಫ್ಟಿಂಗ್ ನಲ್ಲೂ ಭಾಗವಹಿಸಿರುವುದು ಇವರ ಹೆಮ್ಮೆ. ಅಸಹಾಯಕ ಸಮುದಾಯಕ್ಕೊಂದು ಆತ್ಮವಿಶ್ವಾಸದ ಮಾದರಿ ಶ್ರೀಯುತ ಕೆ.ವೈ. ವೆಂಕಟೇಶ್ಅ ವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಆ ಮತದ ವರ ಶ್ರೀ ಪೈಲ್ವಾನ್ ಮಗ ಉರುಫ್ ರುದ್ರ

ಮೈಸೂರಿನಲ್ಲಿ ಕುಸ್ತಿ ಕಲೆಯನ್ನು ಜಾತ್ರೆಯಂತೆ ಬೆಳೆಸಿದವರು ಪೈಲ್ವಾನ್ ರುದ್ರ ಉರುಫ್ ಮೂಗ ಅವರು.
ಮೈಸೂರಿನ ಹೆಸರಾಂತ ಕುಸ್ತಿ ಪಟು ಶ್ರೀ ಪುಟ್ಟನಂಜಣ್ಣ ಮತ್ತು ಶ್ರೀಮತಿ ನಾಗಮ್ಮ ಅವರ ಮಗ ಶ್ರೀ ರುದ್ರಪ್ಪ, ಪೈಲ್ವಾನ್ ತಂದೆಯ ಮಾರ್ಗದರ್ಶನದಲ್ಲಿ ಕುಸ್ತಿ ಕಲೆಯ ಆರಂಭದ ಕಲಿಕೆ. ಮಾಯಣ್ಣನವರ ಗರಡಿಯಲ್ಲಿ ಕುಸ್ತಿ ಕಲೆಯ ಅಭ್ಯಾಸ.
ಸುಮಾರು ೪ ದಶಕಗಳ ಕಾಲ ತಮ್ಮ ಜೀವನವನ್ನೇ ಕುಸ್ತಿಗಾಗಿ ಮೀಸಲಾಗಿಟ್ಟು, ಮೈಸೂರಿಗೆ ಹೊರಜಿಲ್ಲೆಗಳಿಂದ ಬಂದಂತಹ ಪೈಲ್ವಾನರನ್ನು ಎದುರಿಸಿದವರು. ಪ್ರಸಿದ್ಧ ಕುಸ್ತಿ ಪಟುಗಳು ಮತ್ತು ಪೈಲ್ವಾನ್ ಅಗಡಿ ಅಬ್ದುಲ, ಸಾಂಬಾಜಿ ಪವಾರ್, ಅಸಂಗಿ ದಾವತ್, ಚುವ್ವಲತೀಫ್, ಕುಸಗಲ್ ಮುದಕಪ್ಪ, ಸಾಂಗ್ಲಿ ಸಹದೇವ್ ಮುಂತಾದವರೊಂದಿಗೆ ಸೆಣಸಿದ್ದಾರೆ. ೧೯೭೨ರಲ್ಲಿ ಕೊಲ್ಲಾಪುರದ ಪೈಲ್ವಾನ್ ರಸೂಲ್ ಹನೀಫ್ ಅವರ ಮೇಲೆ ೩ ಗಂಟೆ ೪೫ ನಿಮಿಷ ಸೆಣಸಿ ಕುಸ್ತಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ದಾಖಲೆ ಸ್ಥಾಪಿಸಿದ್ದಾರೆ. ಅನೇಕ ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.
ಮೈಸೂರಿನಲ್ಲಿ ಮನೆಮಾತಾಗಿ ಜನಪ್ರಿಯರಾಗಿರುವ ಇಂದಿಗೂ ಮೂಗಣ್ಣನ ಗರಡಿಯ ಉಸ್ತಾದರಾಗಿ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವವರು ಶ್ರೀ ಪೈಲ್ವಾನ್ ರುದ್ರಮೂಗ ಅವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರತನ್ ರಾಚಯ್ಯ ಮಠಪತಿ

ಕುಸ್ತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ರತನ್ ರಾಚಯ್ಯ ಮಠಪತಿ ಕರ್ನಾಟಕ ಸರ್ಕಾರದ ‘ಏಕಲವ್ಯ ಪ್ರಶಸ್ತಿ’ ಪುರಸ್ಕೃತರು.
ಕರ್ನಾಟಕದ ಪುರಾತನ ಕ್ರೀಡಾಕಲೆಯಾಗಿರುವ ಕುಸ್ತಿಯಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆಸಿಕೊಂಡ ರತನ್ ಸಿಕ್ಕ ಅವಕಾಶಗಳನ್ನೆಲ್ಲ ಸದುಪಯೋಗಪಡಿಸಿಕೊಂಡು ಛಲ ಬಿಡದ ತ್ರಿವಿಕ್ರಮನಂತೆ ಬೆಳೆಯುತ್ತ, ಪ್ರಶಸ್ತಿಗಳನ್ನು ಬಾಚುತ್ತ ಮುನ್ನಡೆದರು.
ಫಿಲಿಫೈನ್ಸ್ನಲ್ಲಿ ನಡೆದ ೭ನೇ ಏಷಿಯನ್ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿದ್ದ ರತನ್ ರಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಅಮೋಘವಾಗಿ ಸೆಣಸಾಡಿ ಬೆಳ್ಳಿಪದಕ ವಿಜೇತರಾದರು. ಈಜಿಪ್ಟ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ಪದಕಗಳ ಕೊಳ್ಳೆ ಹೊಡೆದ ರತನ್ ಆರು ಬಂಗಾರದ ಪದಕಗಳನ್ನೂ, ಒಂದು ಬೆಳ್ಳಿ ಪದಕವನ್ನೂ ಗೆದ್ದು ರಾಜ್ಯದ ಗೌರವವನ್ನು ಎತ್ತಿ ಹಿಡಿದರು. ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಕರ್ನಾಟಕ ರತ್ನ, ಕರ್ನಾಟಕ ಕೇಸರಿ, ಕರ್ನಾಟಕ ಕಂಠೀರವ, ಕರ್ನಾಟಕ ಕುಮಾರ್, ದಸರಾ ಕೇಸರಿ, ಅಖಿಲ ಭಾರತೀಯ ಮಹಾಪೌರ ಕೇಸರಿ, ಕೆಂಪೇಗೌಡ ಪ್ರಶಸ್ತಿಗಳಿಂದ ಭೂಷಿತರಾದವರು.
ಜಮಖಂಡಿಯಲ್ಲಿ ಹುಟ್ಟಿ ರಾಜ್ಯಮಟ್ಟಕ್ಕೇರಿ ಅಂತರರಾಷ್ಟ್ರೀಯ ಮಟ್ಟಕ್ಕೂ ಹಾರಿದ ಅಪರೂಪದ ಕ್ರೀಡಾಪಟು ಶ್ರೀ ರತನ್ ರಾಚಯ್ಯ ಮಠಪತಿ ಅವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅರ್ಜುನ ಹಾಲಪ್ಪ

ಕ್ರೀಡಾ ಪದಕಗಳ ಖಜಾನೆಯನ್ನು ಸದಾ ಸೂರೆ ಮಾಡುವ ನಾಡಿನ ಹೆಮ್ಮೆಯ ಹಾಕಿ ಪಟು ಶ್ರೀ ಅರ್ಜುನ ಹಾಲಪ್ಪ, ಕನ್ನಡ ನಾಡಿನಲ್ಲಿ ಕ್ರೀಡೆ, ಸಾಹಸಗಳಿಗೆ ತವರೆನಿಸಿದ ಕೊಡಗು ಜಿಲ್ಲೆಯಲ್ಲಿ ೧೯೭೭ರಲ್ಲಿ ಜನಿಸಿದ ಶ್ರೀ ಅರ್ಜುನ ಹಾಲಪ್ಪ ಅವರು ಬಹುಬೇಗನೆ ರಾಷ್ಟ್ರಮಟ್ಟದಲ್ಲಿ ಮಿಂಚಿದ ಉತ್ಸಾಹಿ ಕ್ರೀಡಾಪಟು.
೧೯೯೯ರಲ್ಲಿ ಪೋಲೆಂಡ್ನಲ್ಲಿ ನಡೆದ ನ್ಯಾಷನಲ್ ಟೂರ್ನಮೆಂಟ್ನಲ್ಲಿ ಏಳು ಗೋಲು ಹೊಡೆದು ಭಾರತವನ್ನು ಫೈನಲ್ಗೆ ಒಯ್ದ ಹಾಲಪ್ಪ ೨೦೦೦ನೇ ಸಾಲಿನ ಜೂನಿಯರ್ ಏಷ್ಯಾ ಕಪ್ನಲ್ಲೂ ಗೋಲುಗಳ ಸುರಿಮಳೆಯೊಂದಿಗೆ ಭಾರತವನ್ನು ಫೈನಲ್ಗೆ ಕೊಂಡೊಯ್ದ ಅದ್ಭುತ ಕ್ರೀಡಾಪಟು.
ರಾಷ್ಟ್ರೀಯ ತಂಡದಲ್ಲಿ ಅತ್ಯಂತ ಪ್ರಮುಖ ಆಟಗಾರರಾಗಿರುವ ಶ್ರೀ ಅರ್ಜುನ ಹಾಲಪ್ಪ ಅವರು ಪದಕಗಳ ಮಾಲೆಯೊಂದಿಗೆ ಅರ್ಜುನ ಪ್ರಶಸ್ತಿಯನ್ನೂ ಕೊರಳಿಗೇರಿಸಿಕೊಂಡ ಶ್ರೀ ಅರ್ಜುನ ಹಾಲಪ್ಪ ಅವರಿಗೆ ೨೦೦೪ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯೆನಿಸುತ್ತದೆ.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಕವಿತಾ ಸನಿಲ್

ದೇಶ ವಿದೇಶಗಳಲ್ಲಿ ಕರಾಟೆಯ ಕರಾಮತ್ತನ್ನು ಪ್ರದರ್ಶಿಸಿ ನಾಡಿಗೆ ಕೀರ್ತಿ ತಂದಿರುವ ಕರಾಟೆಪಟು ಕುಮಾರಿ ಕವಿತಾ ಸನಿಲ್, ಮಂಗಳೂರಿನ ಮರಕಡದ ನಾರಾಯಣ ಪೂಜಾರಿ ಮತ್ತು ವೇದಾವತಿ ಸನಿಲ್ ದಂಪತಿಗಳ ಕಿರಿಯ ಪುತ್ರಿ. ೧೯೯೨ರಿಂದ ೨೦೦೪ರ ವರೆಗೆ ಮುಂಬಯಿ, ಬೆಂಗಳೂರು, ಹೈದರಾಬಾದ್, ಗುಜರಾತ್, ಭೂಪಾಲ್, ನಾಗಪುರ ಮುಂತಾದ ಕಡೆಗಳಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.
೧೯೯೯ರಲ್ಲಿ ಜಪಾನಿನ ಪ್ರತಿಸ್ಪರ್ಧಿಯನ್ನು ಎದುರಿಸಿ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಡುವುದರ ಜೊತೆಗೆ ‘ಅಂತರರಾಷ್ಟ್ರೀಯ ಕರಾಟೆಪಟು’ ಎಂಬ ಬಿರುದು ಪಡೆದರು. ೨೦೦೩ರಲ್ಲಿ ಆಸ್ಟ್ರೇಲಿಯಾದ ಪ್ರತಿಸ್ಪರ್ಧಿಯನ್ನು ಎದುರಿಸಿ ಚಿನ್ನದ ಪದಕದೊಂದಿಗೆ ‘ಗ್ಯಾಂಡ್ ಚಾಂಪಿಯನ್’ ಪ್ರಶಸ್ತಿ ಪಡೆದರು. ಇಂಡಿಯನ್ ಮತ್ತು ಬುಡೋಕಾನ್ ಕರಾಟೆಯ ಎರಡೂ ಶೈಲಿಯಲ್ಲಿ ಬ್ಲಾಕ್ಬೆಲ್ಟ್ ಪಡೆದ ಭಾರತದ ಏಕೈಕ ಮಹಿಳೆ ಕುಮಾರಿ ಕವಿತಾ ಸನಿಲ್, ಮಂಗಳೂರು ಮಹಾನಗರ ಪಾಲಿಕೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯರಾಗಿದ್ದಾರೆ. ವೈಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ.
ದೇಶಕ್ಕೆ ಹೆಮ್ಮೆ ತರುವ ಹೋದಲ್ಲೆಲ್ಲಾ ಕರಾಟೆ ತಂತ್ರದೊಂದಿಗೆ ಯಶಸ್ವಿಯಾಗಿ ಪದಕಗಳ ಬಿರುದುಗಳ ಪುರಸ್ಕಾರ ಪಡೆದಿರುವ ಉದಯೋನ್ಮುಖ ಯುವ ಪ್ರತಿಭೆ ಕುಮಾರಿ ಕವಿತಾ
ಸನಿಲ್ ಅವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹರೀಶ್ ಕುಶಾಲಪ್ಪ

– ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಹರೀಶ್ ಕುಶಾಲಪ್ಪ ಅವರು ಶ್ರೇಷ್ಠ ಕ್ರೀಡಾಪಟು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಾಧನೆಯ ಶಿಖರ ತಲುಪಿದವರು. ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹರಡಿದವರು.
ಏಳು ಬಾರಿ ರಾಷ್ಟ್ರೀಯ ೧೧೦ ಮೀಟರ್ ಹರ್ಡಲ್ಸ್ನಲ್ಲಿ ಚಾಂಪಿಯನ್ ಶಿಪ್, So, ಇಪ್ಪತ್ತೊಂದು ಬಾರಿ ರಾಷ್ಟ್ರೀಯ ಪದಕ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ ಗಳಿಸಿರುವ ಶ್ರೀ ಹರೀಶ್ ಅವರು ೧೧೦ ಮೀಟರ್ ಹರ್ಡಲ್ಸ್ನಲ್ಲಿ ದಕ್ಷಿಣ ಭಾರತ ದಾಖಲೆಯನ್ನು ಸ್ಥಾಪಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿರುವ ಹರೀಶ್ ಅವರು ಮುಂಬರಲಿರುವ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾ ಕೂಟಗಳಿಗೆ ಸಿದ್ಧತೆಯನ್ನು ನಡೆಸಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ದಾಖಲೆಗಳ ಭರವಸೆ ಮೂಡಿಸಿದ್ದಾರೆ.
ಸಿಡ್ನಿ ಹಾಗೂ ಅಥೆನ್ಸ್ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅವಕಾಶಕ್ಕೆ ಹತ್ತಿರವಾಗಿದ್ದ ಹರೀಶ್ ಅವರು ಉಜ್ವಲ ಭವಿಷ್ಯದ ವಾರಸುದಾರರಾಗಿದ್ದಾರೆ.

Categories
ಕ್ರೀಡೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದತ್ತಾತ್ರೇಯ ಗೋವಿಂದ ಕುಲಕರ್ಣಿ

ಕ್ರೀಡೆಯೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ವಿಕಲಚೇತನ ದತ್ತಾತ್ರೇಯ ಗೋವಿಂದ ಕುಲಕರ್ಣಿ, ಶಿಕ್ಷಕ, ಪತ್ರಕರ್ತ, ಲೇಖಕ, ತರಬೇತಿಗಾರ, ಜಾನಪದ ಗಾಯಕರಾಗಿ ಅವರದ್ದು ಬಹುಮುಖಿ ಸಾಧನೆ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದಲ್ಲಿ ೧೯೬೫ರಲ್ಲಿ ಜನಿಸಿದ ದತ್ತಾತ್ರೇಯ ಗೋವಿಂದ ಕುಲಕರ್ಣಿ ಅವರು ಹುಟ್ಟು ವಿಕಲಚೇತನರು. ಆದರೆ, ಆತ್ಮವಿಶ್ವಾಸದಿಂದ ಬದುಕಿನಲ್ಲಿ ಸಾಧಕರಾಗಿ ರೂಪುಗೊಂಡವರು. ಬಿ.ಎ. ಪದವೀಧರರು, ಕಿವುಡ ಮಕ್ಕಳ ವಿಶೇಷ ತರಬೇತಿ ಪಡೆದವರು. ಅನೇಕ ಕಾರ್ಯಾಗಾರಗಳಲ್ಲಿ ಪಾಲ್ಗೊಂಡವರು. ನರೇಗಲ್ಲಿನ ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯು ಸ್ಥಾಪಿಸಿದ ಕಿವುಡ ಮಕ್ಕಳ ವಸತಿ ಶಾಲೆಯ ಶಿಕ್ಷಕರಾಗಿ ೩೨ ವರ್ಷಗಳಿಂದಲೂ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಗುರು. ಕಿವುಡ–ಮೂಕ ಮಕ್ಕಳನ್ನು ಕ್ರೀಡೆಗೆ ಪ್ರೇರೇಪಿಸಿದವರು. ಶಾಲಾ ಮಕ್ಕಳನ್ನು ಕ್ರೀಡಾಪಟುವಾಗಿ ರೂಪಿಸಿದ ಹಿರಿಮೆ. ಮೂಕವಿದ್ಯಾರ್ಥಿಗಳಿಗೆ ರಾತ್ರಿ ವೇಳೆ ಉಚಿತ ಪಾಠ, ಕಿರುನಾಟಕಗಳನ್ನು ರಚಿಸಿ ನಿರ್ದೇಶನ, ಮಕ್ಕಳಿಗಾಗಿ ಕೋಲಾಟದ ಪದಗಳನ್ನು ಬರೆದು ಹಾಡಿಸಿದ ಹೆಗ್ಗಳಿಕೆ. ಹಲವಾರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಶಾಲೆಗೆ ಕೀರ್ತಿ ತಂದ ಕ್ರೀಡಾಪಟು. ಪತ್ರಕರ್ತನಾಗಿಯೂ ದುಡಿದ ಅನುಭವ. ಭಾಷಣ, ಉಪನ್ಯಾಸ ಮತ್ತಿತರ ತುಂಬು ಚಟುವಟಿಕೆಗಳಿಂದ ಗಮನಸೆಳೆದ, ವಿಕಲಚೇತನ ಮಕ್ಕಳಿಗೆ ಸ್ಫೂರ್ತಿ ತುಂಬಿದ ಮಾದರಿ ಸಾಧಕರು.

Categories
ಕ್ರೀಡೆ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್. ಬೋನಿಫೇಸ್ ಪ್ರಭು

ಮೂರುವರೆ ವರ್ಷದ ಮಗುವಾಗಿದ್ದಾಗ ವೈದ್ಯರು ಮಾಡಿದ ತಪ್ಪೆಂದರಿಂದ ಶಾಶ್ವತವಾಗಿ ಅಂಗವಿಕಲರಾಗಿ ಗಾಲಿ ಕುರ್ಚಿಯ ಮೇಲೆ ಕಾಲ ಕಳೆಯಬೇಕಾಗಿ ಬಂದರೂ ಎದೆಗುಂದದೆ ಅಂತರರಾಷ್ಟ್ರೀಯ ಮಟ್ಟದ ಗಾಲಿಕುರ್ಚಿ ಟೆನಿಸ್ ಕ್ರೀಡಾ ಪಟುವಾಗಿ ಹೆಮ್ಮೆಯ ಸಾಧನೆ ಮಾಡಿದವರು ಶ್ರೀ ಎಚ್. ಬೋನಿಫೇಸ್ ಪ್ರಭು ಅವರು.
ಗಾಲಿಕುರ್ಚಿಯ ಮೇಲೆ ಕುಳಿತು ಪಾಠ ಕೇಳುವ ಅವಕಾಶವನ್ನು ಯಾವ ಶಾಲೆಯೂ ಒದಗಿಸದಿರುವುದರಿಂದ ಪ್ರಭು ಶಾಲೆಗೆ ಹೋಗಿ ಶಿಕ್ಷಣ ಪಡೆಯುವ ಅವಕಾಶದಿಂದಲೂ ವಂಚಿತರಾದರು. ಓದಿನ ಬಗ್ಗೆ ಅವರಿಗಿದ್ದ ಅಪಾರ ಆಸಕ್ತಿಯಿಂದ ಮನೆಯಲ್ಲಿಯೇ, ಅಧ್ಯಯನ ಮಾಡಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದರು. ನಂತರ ಸಾಫ್ಟ್‌ವೇರ್‌ನಲ್ಲಿ ಡೇಟಾ ಬೇಸ್ ಮ್ಯಾನೇಜ್‌ಮೆಂಟ್‌ ಡಿಪ್ಲೊಮಾ ಮಾಡಿಕೊಂಡರು. ಅದರ ಫಲವಾಗಿ ಭಾರತ್ ಎಲೆಕ್ಟ್ರಾನಿಕ್ಸ್‌ನಲ್ಲಿ ಕಳೆದ ಏಳು ವರ್ಷಗಳಿಂದ ಉದ್ಯೋಗಿಯಾಗಿದ್ದರೂ ಪ್ರಭು ತಮ್ಮ ಕ್ರೀಡಾಸಕ್ತಿಯನ್ನು ಮುಖ್ಯವಾಗಿ ಟೆನಿಸ್ ಪ್ರೀತಿಯನ್ನು ಕಳೆದುಕೊಳ್ಳಲಿಲ್ಲ.
ಗಾಲಿಕುರ್ಚಿ ಟೆನಿಸ್ ಪಟುವಾಗಿ ವರ್ಷದಿಂದ ವರ್ಷಕ್ಕೆ ಸಾಧನೆ ಮಾಡುತ್ತ ಜಪಾನ್, ಆಸ್ಟ್ರೇಲಿಯಾ, ಅಮೆರಿಕಾ, ನ್ಯೂಜಿಲೆಂಡ್, ಫ್ರಾನ್ಸ್, ಇಂಗ್ಲೆಂಡ್ ಮುಂತಾದೆಡೆಗಳಲ್ಲಿ ನಡೆದ ಮುಕ್ತ ಟೆನಿಸ್ ಪಂದ್ಯಾವಳಿಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಕೆಲವು ಪಂದ್ಯಗಳಲ್ಲಿ ಚಾಂಪಿಯನ್‌ಷಿಪ್ಪನ್ನು, ಗ್ರಾಂಡ್‌ ಸ್ಲಾಮನ್ನೂ ಸಾಧಿಸಿದರು. ಭಾರತದ ಗಾಲಿಕುರ್ಚಿ ಟೆನಿಸ್ ಕ್ರೀಡಾ ಪಟುಗಳ ಪೈಕಿ ವಿಶ್ವ ಬ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಮೊದಲಿಗರು. ಅಂತರರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಕ್ರೀಡೆಗಳ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತರಾದ ಮೊಟ್ಟಮೊದಲ ಭಾರತೀಯ ಕ್ರೀಡಾಪಟು.
ಭಾರತದ ಅಂಗವಿಕಲ ಕ್ರೀಡಾಪಟುಗಳಿಗಾಗಿ ಒಂದು ಗಾಲಿಕುರ್ಚಿ ಟೆನಿಸ್ ಅಕಾಡೆಮಿ ಸ್ಥಾಪಿಸಬೇಕೆಂಬ ಕನಸನ್ನು ಹೊಂದಿರುವ ಭಾರತೀಯರೆಲ್ಲರೂ ಅಭಿಮಾನಪಡುವಂತಹ ಧೀಮಂತ ಕ್ರೀಡಾಪಟು ಶ್ರೀ ಬೋನಿಫೇಸ್ ಪ್ರಭು ಅವರು.

Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿ ಹೊನ್ನಪ್ಪ

ಮೊಟ್ಟ ಮೊದಲ ಬಾರಿಗೆ ಕರ್ನಾಟಕಕ್ಕೆ ಕಬಡ್ಡಿ ಕ್ರೀಡೆಯಲ್ಲಿ ಭಾರತ ಸರ್ಕಾರದ ಅರ್ಜುನ ಪ್ರಶಸ್ತಿ ತಂದು ಕೊಟ್ಟ ಕನ್ನಡದ ಕುವರ ಶ್ರೀ ಸಿ ಹೊನ್ನಪ್ಪ ಅವರು. ಜನನ ೧೯೭೩ರಲ್ಲಿ, ವೃತ್ತಿಯಿಂದ ಬ್ಯಾಂಕ್ ಅಧಿಕಾರಿ.

ರಾಜ್ಯ ಮಟ್ಟದ ಹಾಗೂ ರಾಷ್ಟ್ರಮಟ್ಟದ ಹಾಗೂ ಅಂತರಾಷ್ಟ್ರೀಯ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಶ್ರೀ ಸಿ ಹೊನ್ನಪ್ಪ ಅವರು, ತಮ್ಮ ೧೭ನೆಯ ವಯಸ್ಸಿನಲ್ಲಿಯೇ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಹೊಮ್ಮಿದ ಅಪ್ರತಿಮ

ಪ್ರತಿಭಾವಂತ.

ಕರ್ನಾಟಕದ ಕ್ರೀಡಾ ತಂಡವನ್ನು ಉಪನಾಯಕರಾಗಿ ಹಾಗೂ ನಾಯಕರಾಗಿ ಪ್ರತಿನಿಧಿಸಿದ್ದು ಮಾತ್ರವಲ್ಲ, ಅಂತರಾಷ್ಟ್ರೀಯ ಏಷ್ಯನ್ ಕ್ರೀಡಾಕೂಟದಲ್ಲಿ ಉಪನಾಯಕರಾಗಿ ಭಾರತವನ್ನು ಪ್ರತಿನಿಧಿಸಿದ್ದು ಇವರ ಹೆಗ್ಗಳಿಕೆ. ರಾಷ್ಟ್ರೀಯ ಮಟ್ಟದಲ್ಲಿ ನಡೆದ ದಕ್ಷಿಣವಲಯ ಚಾಂಪಿಯನ್‌ ಷಿಪ್ ಮತ್ತು ಫೆಡರೇಷನ್ ಕಪ್ ಟೂರ್ನ್‌ಮೆಂಟ್ ಗಳಲ್ಲಿ ಭಾಗವಹಿಸಿದ ಹಿರಿಮೆಗೆ ಶ್ರೀಯುತರು ಪಾತ್ರರು. ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ಈ ಅಪ್ರತಿಮ ಉತ್ಸಾಹಿ ಕ್ರೀಡಾಪಟುವನ್ನು ಅರಸಿ ಬಂದ ಬೆಳ್ಳಿ ಪದಕ, ಚಿನ್ನದ ಪದಕ ಹಾಗೂ ಪ್ರಶಸ್ತಿಗಳು ಅಸಂಖ್ಯಾತ, ಫೆಡರೇಷನ್ ಕಪ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ರೈಡರ್ ಮತ್ತು ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿ ಪಡೆದಿರುವ ಶ್ರೀ ಹೊನ್ನಪ್ಪನವರು ಇತ್ತೀಚೆಗೆ ಭಾರತ ಸರ್ಕಾರದ ಅತ್ಯುನ್ನತ ಅರ್ಜುನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಏಕಲವ್ಯ ಪ್ರಶಸ್ತಿ ಹಾಗೂ ಬೆಂಗಳೂರು ನಗರ ಮಹಾಪೌರರಿಂದ ಕೆಂಪೇಗೌಡ ಪ್ರಶಸ್ತಿ ಪಡೆದಿದ್ದಾರೆ.

ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಪ್ರಶಸ್ತಿ ಪದಕಗಳ ಸರದಾರನಾದ ಶ್ರೀ ಹೊನ್ನಪ್ಪನವರು ಕರ್ನಾಟಕದ ಸುಪುತ್ರ; ಸರಳ ಸಜ್ಜನಿಕೆಯ ವಿನಯ ಸಂಪನ್ನ.

Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ರಂಜಿನಿ ರಾಮಾನುಜಂ

ಹುಟ್ಟಿನಿಂದಲೇ ಕೇಳುವ ಭಾಗ್ಯದಿಂದ ವಂಚಿತಳಾಗಿದ್ದರೂ, ಬ್ಯಾಡ್ಮಿಂಟನ್ ಕ್ರೀಡೆಯ ಖ್ಯಾತಿಯ ಪ್ರತಿಭಾಶಾಲಿ ಕರ್ನಾಟಕದ ಹೆಮ್ಮೆಯ ಸುಪುತ್ರಿ ಶ್ರೀಮತಿ ರಂಜಿನಿ ರಾಮಾನುಜಂ.

ಕೇಳುವ ಶಕ್ತಿಯನ್ನು ಕಳೆದುಕೊಂಡ ಕ್ರೀಡಾಪಟುಗಳ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಶ್ರೀಮತಿ ರಂಜಿನಿ ಸತತ ಎರಡು ಬಾರಿಯೂ ಚಿನ್ನದ ಪದಕಗಳ ವಿಜೇತೆ, ”ಸೈಲೆಂಟ್ ಒಲಿಂಪಿಕ್ಸ್’ ಎಂಬ ಅಭಿದಾನದ ಅಂತರಾಷ್ಟ್ರೀಯ ತಂಡಗಳು ಭಾಗವಹಿಸಿದ ೧೮ನೆಯ ಜಾಗತಿಕ ಕ್ರೀಡಾಮೇಳದಲ್ಲಿ ಭಾರತವು ಚಿನ್ನದ ಪದಕದೊಂದಿಗೆ ಅದ್ಭುತ ವಿಜಯ ಸಂಪಾದಿಸಿದಾಗ, ತಂಡವನ್ನು ಪ್ರತಿನಿಧಿಸಿದವರು ಶ್ರೀಮತಿ ರಂಜಿನಿ.

ಸೈಲೆಂಟ್ ಒಲಿಂಪಿಕ್ಸ್‌ನ ಏಕವ್ಯಕ್ತಿ ನಡುವಿನ ಸ್ಪರ್ಧೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕ ತಂದಿತ್ತ ವಿಶ್ವದ ನಂ. ೨ನೇ ಆಟಗಾರ್ತಿ ಶ್ರೀಮತಿ ರಂಜಿನಿ.

2

ಇಟಲಿಯ ಬ್ರಿಕ್ಸನ್ ನಗರದಲ್ಲಿ ೧೯೯೮ರಲ್ಲಿ ನಡೆದ ಸ್ಪರ್ಧೆಯಲ್ಲಿ ಹಾಗೂ ತೈವಾನ್‌ ದೇಶದ ತೈಪೆಯಲ್ಲಿ ೨೦೦೦ದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಿಂಗಲ್ಸ್ ಮತ್ತು ಡಬ್ಬಲ್ಸ್ ಎರಡೂ ಪ್ರಶಸ್ತಿಯನ್ನು ಭಾರತಕ್ಕೆ ತಂದುಕೊಟ್ಟ ಕೀರ್ತಿವಂತೆ ಶ್ರೀಮತಿ ರಂಜಿನಿ. ಬ್ಯಾಡ್ಮಿಂಟನ್ ಕ್ರೀಡಾಲೋಕವನ್ನು ಪ್ರವೇಶಿಸಿದ ನಾಲ್ಕು ವರ್ಷಗಳ ಅನತಿ ಕಾಲದಲ್ಲಿಯೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ಚಿನ್ನ, ೪ ರಜತ, ಒಂದು ಕಂಚಿನ ಪದಕಗಳನ್ನು ಗೆದ್ದುಕೊಟ್ಟ ಭಾರತದ ಕ್ರೀಡಾ ಲೋಕದ ಉಜ್ವಲತಾರೆ ಶ್ರೀಮತಿ ರಂಜಿನಿ. ಅರ್ಜುನ ಪ್ರಶಸ್ತಿ ಏಕಲವ್ಯ ಪ್ರಶಸ್ತಿ ಪಡೆದ ಈ ಕ್ರೀಡಾಪಟು ಅಂಗವಿಕಲರ ಬಾಳಿನ ಆಶಾದೀಪ.

Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಹುಲ್ ದ್ರಾವಿಡ್

ಅಂತರಾಷ್ಟ್ರೀಯ ಕ್ರಿಕೆಟ್ಟಿನ ಭರವಸೆಯ ಬ್ಯಾಟ್ಸ್‌ಮನ್, ಭಾರತ ಕ್ರಿಕೆಟ್ ತಂಡದ ಉಪನಾಯಕ. ಕರ್ನಾಟಕದ ಹೆಮ್ಮೆಯ ಕ್ರೀಡಾಪ್ರತಿಭೆ ಶ್ರೀ ರಾಹುಲ್ ದ್ರಾವಿಡ್.

೧೯೭೩ರಲ್ಲಿ ಜನನ, ಬೆಂಗಳೂರಿನ ಸೇಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ, ಬಿ.ಕಾಂ. ಪದವಿ ಗಳಿಕೆ, ಎಳೆಯ ವಯಸ್ಸಿನಲ್ಲಿಯೇ ಕ್ರಿಕೆಟ್ ಲೋಕಕ್ಕೆ ಪ್ರವೇಶ. ಮೊದಲ ದರ್ಜೆಯ ಅನೇಕ ಪಂದ್ಯಗಳಲ್ಲಿ ಭಾಗಿ, ಯಶಸ್ವಿನ ಮೆಟ್ಟಿಲೇರಿದ ಗಟ್ಟಿ ಅಡಿಗಳು. ೧೯ ವರ್ಷದೊಳಗಿನ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಹುದ್ದೆಯ ಗೌರವ.

ರಣಜಿ ಟ್ರೋಫಿ ಕ್ಷೇತ್ರಕ್ಕೆ ಪದಾರ್ಪಣೆ. ೩೭ ಪಂದ್ಯ, ೫೨ ಇನ್ನಿಂಗ್ಸ್‌, ೭ ಅಜೇಯ ಇನ್ನಿಂಗ್ಸ್, ೩೬೨೮ ರನ್ನುಗಳು, ೮೦.೮೪ರ ಸರಾಸರಿ, ೧೪ ಶತಕಗಳು ೧೬ ಅರ್ಧಶತಕಗಳು, ೭ ಪಂದ್ಯಗಳಲ್ಲಿ ನಾಯಕತ್ವ – ಹೀಗೆ ಸಾಗಿರುವ ಉಜ್ವಲ ಸಾಧನೆ.

ದುಲೀಪ್ ಟ್ರೋಫಿ, ಇರಾನಿ ಟ್ರೋಫಿ ಪಂದ್ಯಗಳಲ್ಲಿಯೂ ಅತ್ಯುತ್ತಮ ಸಾಧನೆ. ಆಯ್ಕೆ ಸಮಿತಿಯಿಂದ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ ಗೆ ವೀರೋಚಿತ ಸ್ವಾಗತ. ೪೮ ಟೆಸ್ಟ್‌ಗಳು, ೮೪ ಇನ್ನಿಂಗ್ಸ್‌ಗಳು, ೪೦೩೩ ರನ್ನುಗಳು, ಸರಾಸರಿ ರನ್ನು ಸಂಖ್ಯೆ ೫೩.೭೭.೯ ಶತಕಗಳ, ೨೧ ಅರ್ಧ ಶತಕಗಳ ಹೆಮ್ಮೆಯ ಕೊಡುಗೆ, ತಾಳ್ಮೆಯ ಕಲಾತ್ಮಕ ಆಟಗಾರನೆಂಬ ಪ್ರಶಂಸೆ. ಓಲಾಡುವ ಇನ್ನಿಂಗ್ಸ್‌ಗೆ ಲಂಗರು ಹಾಕಬಲ್ಲ ನಂಬಿಕೆಯ ಬ್ಯಾಟ್ಸ್‌ಮನ್, ಏಕದಿನದ ೧೬೩ ಪಂದ್ಯಗಳಲ್ಲಿ ಆಡಿದ ಅಮೂಲ್ಯ ಅನುಭವ, ೫೧೯೦ ರನ್ನುಗಳ ಗಳಿಕೆ.

ಅರ್ಜುನ್ ಪ್ರಶಸ್ತಿ ೧೯೯೯ರ ಸಿಯೆಟ್ ಬೆಸ್ಟ್ ಕ್ರಿಕೆಟರ್, ವಿಸ್ಟನ್ ಕ್ರಿಕೆಟರ್ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಭೂಷಿತ. ಕನ್ನಡಿಗರ ಕಣ್ಮಣಿ, ಭಾರತದ ಹೆಮ್ಮೆಯ ಪುತ್ರ ರಾಹುಲ್ ದ್ರಾವಿಡ್ ಅವರು.

Categories
ಕ್ರೀಡೆ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ದೇಚು ಮೂಲ

ಟೆನ್ನಿಸ್ ಕ್ರೀಡಾರಂಗದಲ್ಲಿ ಕರ್ನಾಟಕಕ್ಕೆ ಹೆಸರು ತಂದುಕೊಟ್ಟ ಪ್ರತಿಭಾವಂತೆ ಶ್ರೀಮತಿ ದೇಚು ಮೂಲ ಅವರು.

ಮಹಿಳಾ ಟೆನ್ನಿಸ್‌ನ ರಾಷ್ಟ್ರೀಯ ಚಾಂಪಿಯನ್ ಆಗಿ ಮೆರೆದು ವಿಂಬಲ್ಡನ್ ಪಂದ್ಯದ ಕ್ವಾರ್ಟರ್ ಫೈನಲ್‌ವರೆಗೂ ತಲುಪಿದ ಸಾಧನೆ ಇವರದು.

೧೯೪೧ರಲ್ಲಿ ಜನಿಸಿದ ದೇಚು ಅಪ್ಪಯ್ಯ ಮೂಲ ಅವರು ೧೯೫೯ನೆಯ ಇಸವಿಯಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್ ಷಿಪ್ ಸಿಂಗಲ್ಸ್ ಪ್ರಶಸ್ತಿ ವಿಜೇತರು. ೧೯೬೦, ೧೯೬೧, ೧೯೬೨ನೇ ಇಸವಿಯಲ್ಲಿ ಭಾರತದ ನಂ. ೧ ಬ್ಯಾಂಕಿನ ಮಹಿಳಾ ಟೆನ್ನಿಸ್ ಕ್ರೀಡಾಪಟುವೆಂಬ ಕೀರ್ತಿಗೆ ಭಾಜನರಾದರು.

2

೧೯೬೦ರ ದಶಕದಲ್ಲಿ ನಡೆದ ರಾಷ್ಟ್ರೀಯ ಟೆನ್ನಿಸ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಸತತವಾಗಿ ೩ ಬಾರಿ ಪ್ರಥಮ ಸ್ಥಾನ ಪಡೆದು ‘ಟ್ರಿಪಲ್ ಕೌನ್’ ಪ್ರಶಸ್ತಿ ಗಳಿಸಿದ ಹಿರಿಮೆ ಇವರದು.

ಸಿಂಗಪೂರದಲ್ಲಿ ೧೯೬೧ರಲ್ಲಿ ನಡೆದ ಮಹಿಳೆಯರ ಮುಕ್ತ ಟೆನ್ನಿಸ್ ಸ್ಪರ್ಧೆಯಲ್ಲಿ ‘ರನ್ನರ್ ಅಪ್’ ಆಗಿ ಮೆರೆದ ಪ್ರತಿಭಾವಂತರು.

~

ಭಾರತದ ಕ್ರೀಡಾಕ್ಷೇತ್ರದಲ್ಲಿ ಸಾಧನೆಯ ಸುಧಾರಣೆಯಲ್ಲಿ ಅಷ್ಟೇನೂ ಅನುಕೂಲತೆಗಳಿಲ್ಲದ ದಿನಗಳಲ್ಲೇ ಸ್ವಂತ ಪರಿಶ್ರಮದಿಂದ ಅಂತರಾಷ್ಟ್ರೀಯ ಮಟ್ಟದಲ್ಲೂ ಮಿಂಚಿ ಮೆರೆದ ಅಪ್ರತಿಮ ಟೆನ್ನಿಸ್ ಕ್ರೀಡಾಪಟು ಕರ್ನಾಟಕದ ಶ್ರೀಮತಿ ದೇಚು ಮೂಲ ಅವರು.