Categories
ಚಲನಚಿತ್ರ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದೇವರಾಜ್

ಕನ್ನಡ ಚಲನಚಿತ್ರರಂಗದಲ್ಲಿ ಡೈನಾಮಿಕ್‌ ಹೀರೋ ಎಂದೇ ಖ್ಯಾತರಾದ ಹಿರಿಯ ನಟ ದೇವರಾಜ್, ೧೯೮೬ ರಲ್ಲಿ ಚಿತ್ರರಂಗ ಪ್ರವೇಶಿಸಿದ್ದು ೨೭ ಮಾವಳ್ಳಿ ಸರ್ಕಲ್‌ ಎನ್ನುವ ಚಿತ್ರದ ಮೂಲಕ.

ಮೂಲತ: ನಾಟಕರಂಗದಿಂದ ಬಂದವರಾದ ಇವರು, ಸ್ಪಂದನ ತಂಡ ಹಾಗೂ ಸಂಕೇತ್ ತಂಡದಲ್ಲಿ ತೊಡಗಿಸಿಕೊಂಡಿದ್ದರು. ಸರಿಸುಮಾರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, ಆಗಂತುಕ ಸಿನಿಮಾದಲ್ಲಿನ ಪಾತ್ರಕ್ಕಾಗಿ ರಾಜ್ಯಪ್ರಶಸ್ತಿ ಪಡೆದುಕೊಂಡರು. ಹಾಗೂ ಮತ್ತೊಂದು ಚಿತ್ರ ವೀರಪ್ಪನ್ ನಲ್ಲಿ ನಿರ್ವಹಿಸಿದ ಪಾತ್ರಕ್ಕೆ ಎರಡನೇ ಬಾರಿ ರಾಜ್ಯ ಪ್ರಶಸ್ತಿ ಪಡೆದುಕೊಂಡರು.

ಲಾಕಪ್ ಡೆತ್,ಹುಲಿಯ, ಗೋಲಿಬಾರ್, ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಪ್ರಚಂಡರಾವಣ ಇವರ ಪ್ರಮುಖ ಚಿತ್ರಗಳು

Categories
ಚಲನಚಿತ್ರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎ.ಟಿ. ರಘು

ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರನಿರ್ದೇಶಕರಲ್ಲಿ ಎ.ಟಿ. ರಘು ಸಹ ಒಬ್ಬರು. ೨೫ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಹಿರಿಮೆ, ಉತ್ತಮ ಯಶಸ್ಸಿನ ಗರಿಮೆ ಅವರದ್ದು.
ಕನ್ನಡ ಚಿತ್ರಲೋಕಕ್ಕೆ ಕೊಡಗಿನ ಕೊಡುಗೆ ಎ.ಟಿ. ರಘು. ಕೊಡವ ಜನಾಂಗದವರಾದ ರಘು ಅವರಿಗೆ ಬಾಲ್ಯದಿಂದಲೇ ಸಿನಿಮಾಸಕ್ತಿ. ಚಿತ್ರನಿರ್ದೇಶಕನಾಗುವ ಹೊಂಗನಸು ಹೊತ್ತು ಗಾಂಧಿನಗರಕ್ಕೆ ಬಂದು ಬಹಳ ವರ್ಷಗಳ ಬಳಿಕ ಸ್ವತಂತ್ರ ನಿರ್ದೇಶಕರಾದರು. ೧೯೮೦ರಲ್ಲಿ ತೆರೆಕಂಡ ನ್ಯಾಯ ನೀತಿ ಧರ್ಮ ರಘು ನಿರ್ದೇಶನದ ಚೊಚ್ಚಲ ಚಿತ್ರ ರೆಬೆಲ್ ಸ್ಟಾರ್ ಅಂಬರೀಷ್ ನಾಯಕ, ಶಂಕರ್ ಸುಂದರ್, ಆಶಾ, ಅವಳ ನೆರಳು. ಧರ್ಮಯುದ್ಧ, ಗೂಂಡಾಗುರು. ಗುರು ಜಗದ್ಗುರು, ಪ್ರೀತಿ, ಕಾಡಿನ ರಾಜ, ಮಿಡಿದ ಹೃದಯಗಳು, ನ್ಯಾಯಕ್ಕಾಗಿ ನಾನು, ಮಂಡ್ಯದ ಗಂಡು ಮುಂತಾದ ೨೬ ಚಿತ್ರಗಳ ನಿರ್ದೇಶನ. ಬಹುತೇಕ ಚಿತ್ರಗಳಲ್ಲಿ ಅಂಬರೀಷ್ ಅವರೇ ನಾಯಕನಟ. ಗಲ್ಲಾಪೆಟ್ಟಿಗೆಯಲ್ಲಿ ರಘು ಚಿತ್ರಗಳು ಹಣ ಸೂರೆಗೊಂಡಿದ್ದರಿಂದ ಜಯಶೀಲ ನಿರ್ದೇಶಕರೆಂದೇ ಖ್ಯಾತಿ ಪಡೆದವರು. ಚಿತ್ರ ನಿರ್ಮಾಪಕರಾಗಿ ನಷ್ಟ ಅನುಭವಿಸಿದ ರಘು ಚಿತ್ರರಂಗದಿಂದ ಹಿಂಬದಿಗೆ ಸರಿದಿದ್ದರೂ ಅವರ ಚಿತ್ರಗಳಿಗೆ ಮಾತ್ರ ಅದೇ ಜನಪ್ರಿಯತೆ.

Categories
ಚಲನಚಿತ್ರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಬಿ.ಎಸ್. ಬಸವರಾಜು

ಕನ್ನಡದ ಬೆಳ್ಳಿಪರದೆಯನ್ನು ಚೆಂದಗಾಣಿಸಿ-ಸನ್ನಿವೇಶದ ಅರ್ಥಪೂರ್ಣತೆ ಹೆಚ್ಚಿಸಿದ ಛಾಯಾಗ್ರಾಹಕರಲ್ಲಿ ಬಿ.ಎಸ್. ಬಸವರಾಜು ಪ್ರಮುಖರು.
ತುಮಕೂರು ಜಿಲ್ಲೆ ತಿಪಟೂರು ಮೂಲದ ಬಿ.ಎಸ್. ಬಸವರಾಜು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ರಿಂದ ಸೈ ಎನಿಸಿಕೊಂಡ ಪ್ರತಿಭೆ, ಬಿಎಸ್ಸಿ ಪದವಿ ಮುಗಿದೊಡನೆ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ನಲ್ಲಿ ಛಾಯಾಗ್ರಾಹಣದಲ್ಲಿ ಡಿಪ್ಲೊಮಾ ಪಡೆದವರು. ಹೆಸರಾಂತ ಛಾಯಾಗ್ರಾಹಕರಾದ ವಿ.ಕೆ. ಮೂರ್ತಿ-ರಾಜೇಂದ್ರ ಮೆಲೋನ್, ಡಿ.ವಿ. ರಾಜಾರಾಂ ಬಳಿ ಸಹಾಯಕರಾಗಿದ್ದವರು. ೧೯೭೮ರಲ್ಲಿ ಒರಿಯಾ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾದರೂ ಕನ್ನಡ ಸಿನಿಪಯಣ ಆರಂಭವಾಗಿದ್ದು ೧೯೮೧ರ ‘ಅಂದದ ಅರಮನೆ’ ಚಿತ್ರದಿಂದ. ಪುಟ್ಟಣ್ಣ ಕಣಗಾಲ್ ಅಮೃತಘಳಿಗೆ, ಮಾನಸಸರೋವರ ಚಿತ್ರದ ಛಾಯಾಗ್ರಹಣದೊಂದಿಗೆ ಮುನ್ನೆಲೆಗೆ ಬಂದ ಬಸವರಾಜು ಅವರದ್ದು ೧೨೦ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಹೆಗ್ಗಳಿಕೆ. ೪೦ ವರ್ಷಗಳ ಸುದೀರ್ಘ ಚಿತ್ರಯಾನದಲ್ಲಿ ಹೊಸನೀರು, ಭೂತಾಯಿ ಮಕ್ಕಳು, ಉದ್ಭವ, ನೀ ಮುಡಿದಾ ಮಲ್ಲಿಗೆ ಮುಂತಾದವು ಹೆಸರು ತಂದುಕೊಟ್ಟ ಚಿತ್ರಗಳು. ಹತ್ತಾರು ಸಾಕ್ಷ್ಯಚಿತ್ರಗಳ ನಿರ್ದೇಶಕರು, ಅಮೃತಘಳಿಗೆ ಚಿತ್ರಕ್ಕೆ ರಾಜ್ಯ ಪ್ರಶಸ್ತಿ, ಬಿ.ಎಸ್.ರಂಗಾ ಪ್ರಶಸ್ತಿ, ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸನ್ಮಾನ ಸೇರಿ ಹಲವು ಪ್ರಶಸ್ತಿ-ಗೌರವಗಳಿಂದ ಭೂಷಿತರು.

Categories
ಚಲನಚಿತ್ರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶೈಲಶ್ರೀ

‘ಸಂಧ್ಯಾರಾಗ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಶೈಲಶ್ರೀ. ಬೆಳ್ಳಿತೆರೆಗೆ ಬರುವ ಮುನ್ನ ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದವರು.
ಮನಸ್ಸಿದ್ದರೆ ಮಾರ್ಗ, ಬಂಗಾರದ ಹೂವು, ಜಾಣರ ಜಾಣ ಮುಂತಾದ ಚಿತ್ರಗಳ ಸಣ್ಣ ಪಾತ್ರಗಳಲ್ಲಿ ಗಮನಸೆಳೆದಿದ್ದ ಶೈಲಶ್ರೀ ಅವರು ಆರ್.ಎನ್. ಸುದರ್ಶನ್ ನಾಯಕರಾಗಿದ್ದ ‘ನಗುವ ಹೂವು’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದ ನಟಿ, ಸುವರ್ಣಭೂಮಿ, ಬೋಕರ್ ಭೀಷ್ಮಾಚಾರಿ, ಕಾಡಿನರಹಸ್ಯ, ಮಕ್ಕಳೇ ಮನೆಗೆ ಮಾಣಿಕ್ಯ, ವಂಶಜ್ಯೋತಿ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಶೈಲಶ್ರೀ ಅವರದ್ದು. ಮದರಾಸಿನಲ್ಲಿ ನೃತ್ಯಶಾಲೆ ನಡೆಸಿದ ಭರತನಾಟ್ಯ ಕಲಾವಿದೆ. ಪತಿ ಸುದರ್ಶನ್‌ ರೊಡಗೂಡಿ ನಾಟಕಗಳನ್ನು ಪ್ರದರ್ಶಿಸಿದ ಅಭಿನೇತ್ರಿ ಮಕ್ಕಳಿಗಾಗಿ ‘ಯೂತ್ ಪೀಸ್ ಷೋರ್ಸ್’ ತಂಡ ಕಟ್ಟಿ ಅಭಿನಯ ಕಲೆ ಧಾರೆಯೆರೆದ ಗುರು. ಮಹಿಳೆಯರಿಗಾಗಿ ಸಲಹಾಕೇಂದ್ರವನ್ನೂ ನಡೆಸಿದ ಸಮಾಜಮುಖಿ, ಕನ್ನಡ, ತಮಿಳು, ತೆಲುಗು, ಮಲೆಯಾಳ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿರುವ ಪಂಚಭಾಷಾ ನಟಿ ಕಿರುತೆರೆಯಲ್ಲೂ ಚಿರಪರಿಚಿತರಾಗಿರುವ ಕಲಾವಿದೆ.

Categories
ಚಲನಚಿತ್ರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಹಾಸನ ರಘು

ಸೈನ್ಯದಲ್ಲಿದ್ದು ಸ್ವಯಂ ನಿವೃತ್ತಿಯ ನಂತರ ಚಲನಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಲು ಆರಂಭಿಸಿದ ಹಾಸನ ರಘು ಅವರು ಸ್ವತಃ ಆತ್ಮರಕ್ಷಣೆಯ ಕಲೆಯಲ್ಲಿ ಪರಿಣತರು.

ನೂರಾರು ಚಲನಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ವಿಭಿನ್ನವಾಗಿ ನಿರ್ದೇಶನ ಮಾಡುವ ಮೂಲಕ ಜನಪ್ರಿಯರಾದ ಹಾಸನ ರಘು ಅವರು ಮದರಾಸಿನ ಸಾಹಸ ನಿರ್ದೇಶಕರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ.

ರಾಮನಗರದಲ್ಲಿ ಆತ್ಮರಕ್ಷಣೆ ಕಲೆಯ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸಿರುವ ಇವರು ನೂರಾರು ಸಾಹಸ ಕಲಾವಿದರನ್ನು ತಯಾರು ಮಾಡಿದ್ದು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಮುಖ್ಯಮಂತ್ರಿ ಚಂದ್ರು

ರಂಗಭೂಮಿಯಿಂದ ಚಲನಚಿತ್ರ ರಂಗಕ್ಕೆ ಕಾಲಿಟ್ಟ ಚಂದ್ರಶೇಖರ್ ಅವರು ಮುಖ್ಯಮಂತ್ರಿ ನಾಟಕದಿಂದ ಮುಖ್ಯಮಂತ್ರಿ ಚಂದ್ರು ಎಂದೇ ಹೆಸರಾದವರು.

ಮೂಕಾಭಿನಯದಿಂದ ಬಣ್ಣದ ಪ್ರಪಂಚಕ್ಕೆ ಬಂದ ಚಂದ್ರು ಅವರು ಐನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿಯೂ ಜನಪ್ರಿಯರಾಗಿರುವ ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿ ನಾಟಕವನ್ನು ಸತತವಾಗಿ ಆರು ನೂರು ಪ್ರದರ್ಶನಗಳನ್ನು ಪೂರೈಸಿದ್ದಾರೆ.

ಶಾಸಕರಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಚಂದ್ರು ಅವರು ದೇಶವಿದೇಶಗಳಲ್ಲಿ ಕನ್ನಡದ ಕಂಪನ್ನು ಹರಿಸಿದವರು. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪೋಷಕ ನಟ ಗೌರವವೂ ಲಭಿಸಿದೆ.

Categories
ಚಲನಚಿತ್ರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕಾಂಚನಾ

ದಕ್ಷಿಣ ಭಾರತದ ಪ್ರಸಿದ್ಧ ಚಲನಚಿತ್ರ ನಾಯಕಿಯಾಗಿ ಹೆಸರಾಗಿರುವ ಕಾಂಚನಾ ಅವರು ಖ್ಯಾತ ನೃತ್ಯಗಾರ್ತಿ.

ಡಾ|| ರಾಜಕುಮಾರ್ ಅಭಿನಯದ ಬಭ್ರುವಾಹನ, ಶಂಕರಗುರು, ನಾನೊಬ್ಬ ಕಳ್ಳ ಮೊದಲಾದ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ತೆಲುಗು ಚಿತ್ರರಂಗದ ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್‌ ಅವರಿಗೂ ನಾಯಕಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಕಾಂಚನಾ ಅವರದು.

ಕಿರುತೆರೆಯಲ್ಲಿಯೂ ಕಾಂಚನಾ ಅವರು ಜನಪ್ರಿಯರು. ಕನ್ನಡದ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಉಪನಾಯಕಿ, ಪೋಷಕ ನಟಿ ಹಾಗೂ ಖಳನಾಯಕ ಪಾತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಕೆ.ಜೆ. ಯೇಸುದಾಸ್

ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕರು. ತ್ಯಾಗರಾಜರು, ಪುರಂದರದಾಸರ ಕೃತಿಗಳನ್ನು ಮಾಧುರ್ಯಪೂರ್ಣವಾಗಿ ಹಾಡುವ ಸಿರಿಕಂಠದ ಇವರು ಭಾರತೀಯ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲೊಬ್ಬರು.

ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿರುವ ಇವರು ಹಿಂದಿ ಚಿತ್ರಗಳಲ್ಲಿಯೂ ಹಾಡಿದ್ದಾರೆ.

ದೇಶ ವಿದೇಶಗಳಲ್ಲಿ ವಿದ್ವತ್ತೂರ್ಣ ಸಂಗೀತ ಕಚೇರಿಗಳನ್ನು ನಿರಂತರವಾಗಿ ನಡೆಸುತ್ತಿರುವ ಕೆ.ಜೆ.ಯೇಸುದಾಸ್ ಅವರು ಅಯ್ಯಪ್ಪ ಸ್ವಾಮಿ, ಗುರುವಾಯೂರಪ್ಪ ಮತ್ತು ಕೊಲ್ಲೂರು ಮೂಕಾಂಬಿಕೆ ಭಕ್ತಿ ಗೀತ ಗಾಯನದಲ್ಲಿಯೂ ಜನಪ್ರಿಯರು.

ಕನ್ನಡ ಭಾಷೆಯಲ್ಲಿ ವಿಷ್ಣುವರ್ಧನ್, ಶಂಕರನಾಗ್ ಮೊದಲಾದ ಚಲನಚಿತ್ರ ಕಲಾವಿದರಿಗೆ ಹಿನ್ನೆಲೆ ಗಾಯಕರಾಗಿ ಹಾಡಿರುವ ಯೇಸುದಾಸ್ ಅವರು ಜನಪ್ರಿಯ ಸಂಗೀತ ಸಂಯೋಜಕರು.

Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದತ್ತುರಾಜ್

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ವಿಶಿಷ್ಟ ಛಾಪು ಮೂಡಿಸಿದವರಲ್ಲಿ ಚಿ.ದತ್ತುರಾಜ್ ಸಹ ಒಬ್ಬರು. ನಿರ್ದೇಶಕ, ಬರಹಗಾರ, ಪತ್ರಕರ್ತರಾಗಿದ್ದ ಅವರು ಬಹುಮುಖಿ ಪ್ರತಿಭೆ.
ಹೆಸರಾಂತ ಚಿತ್ರಸಾಹಿತಿ ಚಿ. ಉದಯಶಂಕರ್ ಅವರ ಸಹೋದರರಾದ ಚಿ. ದತ್ತುರಾಜ್ ಅವರಿಗೆ ಬಾಲ್ಯದಿಂದಲೂ ಸಹಜವಾಗಿಯೇ ಸಿನಿಮಾದತ್ತ ಒಲವು. ೧೯೭೦ರಲ್ಲಿ ನಿರ್ದೇಶಕ ರವಿ ಅವರ ‘ಅರಶಿನ ಕುಂಕುಮ’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗುವ ಮೂಲಕ ಚಿತ್ರರಂಗಕ್ಕೆ ಪ್ರವೇಶ. ಆನಂತರ ೧೯೮೧ರಲ್ಲಿ ರಾಜ್ ಕುಮಾರ್ ಅಭಿನಯದ ‘ಕೆರಳಿದ ಸಿಂಹ’ ಚಿತ್ರದಿಂದ ಸ್ವತಂತ್ರ ನಿರ್ದೇಶಕನಾಗಿ ಹೆಜ್ಜೆ ಬಳಿಕ ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಮೃತ್ಯುಂಜಯ, ಅರಳಿದ ಹೂವುಗಳು, ಆನಂದಜ್ಯೋತಿ ಚಿತ್ರಗಳ ನಿರ್ದೇಶನ, ನಿರ್ದೇಶನದ ಜೊತೆಗೆ ಸಂಭಾಷಣೆಕಾರರಾಗಿಯೂ ಸಮರ ಮತ್ತು ಹೃದಯಕಳ್ಳರು ಚಿತ್ರಕ್ಕೆ ಸಾಹಿತ್ಯಸೇವೆ. ಕೆಲಕಾಲ ಪತ್ರಕರ್ತರಾಗಿಯೂ ಕೆಲಸ ಮಾಡಿದ ಅವರು ‘ವಿಜಯಚಿತ್ರ’ ಪತ್ರಿಕೆಯಲ್ಲಿ ರಾಜ್ ಬದುಕಿನ ಕುರಿತು ೯೩ ಸಂಚಿಕೆಗಳಲ್ಲಿ ಬರೆದ ‘ಕಥಾನಾಯಕನಕಥೆ’ ಅಂಕಣ ಬಲು ಜನಪ್ರಿಯ. ಸದಭಿರುಚಿಯ ಚಿತ್ರಗಳನ್ನು ತೆರೆಗಿತ್ತದತ್ತುರಾಜ್ ಅವರು ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೂ ಭಾಜನರು.

Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಜನ್

ಕನ್ನಡ ಚಿತ್ರಸಂಗೀತದ ಮಾಧುರ್ಯತೆಯನ್ನು ಸವಿಜೇನಾಗಿಸಿದ ಅಪೂರ್ವ ಜೋಡಿ ರಾಜನ್ ನಾಗೇಂದ್ರ ಏಳು ಭಾಷೆಯ ಚಿತ್ರಗಳಿಗೆ ಸ್ವರಸಂಯೋಜಿಸಿದ ಅನನ್ಯ ಸಾಧಕ ಸಹೋದರರು.
ಮೈಸೂರಿನ ಜಯಮಾರುತಿ ಆರ್ಕೆಸ್ಟ್ರಾದಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು, ಪಿ.ಕಾಳಿಂಗರಾವ್ರ ತಂಡದ ಮುಖೇನ ಮುಂಚೂಣಿಗೆ ಬಂದು ೧೯೫೨ರಲ್ಲಿ ‘ಸೌಭಾಗ್ಯಲಕ್ಷ್ಮಿ’ ಚಿತ್ರದ ಮುಖೇನ ಸಂಗೀತ ನಿರ್ದೇಶಕರಾದವರು. ನವನವೀನ ವಿಧಾನಗಳ ಅನ್ವೇಷಣೆ, ಪ್ರಯೋಗಶೀಲತೆ, ಶಾಸ್ತ್ರೀಯ ವಿಧಾನಗಳನ್ನು ಎಳ್ಳಷ್ಟು ಬಿಡದ ಸೋಪಜ್ಞ ಶೈಲಿ, ಮಾಧುರ್ಯದ ಮಂಗಳ ಸ್ವರ ರಾಜನ್-ನಾಗೇಂದ್ರರ ವಿಶೇಷತೆ. ನ್ಯಾಯವೇ ದೇವರು, ಬಯಲುದಾರಿ, ಭಾಗ್ಯವಂತರು, ನಾ ನಿನ್ನ ಮರೆಯಲಾರೆ, ಎರಡು ಕನಸು, ಗಂಧದಗುಡಿ, ಪಾವನಗಂಗಾ ಮುಂತಾದ ಚಿತ್ರಗಳ ಯಶಸ್ಸಿನ ಹಿಂದೆ ಈ ಜೋಡಿಯ ಸಂಗೀತದ್ದು ಬಹುಪಾಲು. ಕನ್ನಡ, ತಮಿಳು, ತೆಲುಗು, ತುಳು, ಹಿಂದಿ, ಮಲೆಯಾಳಂ ಸೇರಿದಂತೆ ೩೭೫ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ ಇವರು ಮೂರು ಚಿತ್ರಗಳ ನಿರ್ಮಾಪಕರೂ ಸಹ, ಕರ್ನಾಟಕ-ಆಂಧ್ರಪ್ರದೇಶ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿರುವ ಈ ಜೋಡಿ ಸಂಗೀತಪ್ರೇಮಿಗಳಿಗೆ ಸದಾ ಅಚ್ಚುಮೆಚ್ಚು.

Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಜೈಜಗದೀಶ್

ಕೊಡಗಿನಿಂದ ಕನ್ನಡ ಚಿತ್ರವಲಯಕ್ಕೆ ಬಂದ ಪ್ರಪ್ರಥಮ ನಟ ಜೈಜಗದೀಶ್, ನಟ, ನಿರ್ಮಾಪಕ, ನಿರ್ದೇಶಕ ಮತ್ತು ಕಿರುತೆರೆ ಕಲಾವಿದರಾಗಿ ಚಿರಪರಿಚಿತ. ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ರ ಸಿನಿಶೋಧ.
ಮೈಸೂರಿನ ರಾಮಕೃಷ್ಣ ಶಾಲೆ, ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಜೈಜಗದೀಶ್ ಪುಟ್ಟಣ್ಣ ಕಣಗಾಲ್ ಕಣ್ಣಿಗೆ ಬಿದ್ದವರೇ ೧೯೭೬ರಲ್ಲಿ ‘ಫಲಿತಾಂಶ’ ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ಹಲಬಗೆಯ ಪಾತ್ರಗಳಲ್ಲಿ ಮಿಂಚಿದ ಪ್ರತಿಭಾವಂತ, ಬಂಧನ, ಗಾಳಿಮಾತು, ಪಡುವಾರಹಳ್ಳಿ ಪಾಂಡವರು, ಮುಂಗಾರುಮಳೆ ಹೆಸರು ತಂದುಕೊಟ್ಟ ಚಿತ್ರಗಳು. ೪೨ ವರ್ಷಗಳ ಸುದೀರ್ಘ ಚಿತ್ರಪಯಣದಲ್ಲಿ ೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿದ ಹಿರಿಮೆ, ಪತ್ನಿ ವಿಜಯಲಕ್ಷ್ಮಿಸಿಂಗ್ ಜೊತೆಗೊಡಿ ೨೫ಕ್ಕೂ ಅಧಿಕ ಚಿತ್ರಗಳನ್ನು ತೆರೆಗಿತ್ತ ನಿರ್ಮಾಪಕ, ನಿರ್ದೇಶಕ ಕೂಡ. ಚಲನಚಿತ್ರ ಅಕಾಡೆಮಿ, ಕಲಾವಿದರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದ ಜೈಜಗದೀಶ್ ಚಿತ್ರನಿರ್ಮಾಣದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಫಿಲಂಫೇರ್ ಪ್ರಶಸ್ತಿಗಳಿಗೂ ಭಾಜನರು.

Categories
ಚಲನಚಿತ್ರ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಭಾರ್ಗವ

ಹೆಸರಾಂತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ನಂತರ ಸ್ವತಂತ್ರ ನಿರ್ದೇಶನಕ್ಕೆ ಇಳಿದ ಭಾರ್ಗವ, ದ್ವಾರಕೀಶ್ ಅವರ ಬಹಳಷ್ಟು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ವಿಷ್ಣುವರ್ಧನ ನಾಯಕರಾಗಿದ್ದ ಅನೇಕ ಯಶಸ್ವಿ ಚಿತ್ರಗಳ ನಿರ್ದೇಶಕರೂ ಆದ ಭಾರ್ಗವ ಅವರು ನಿರ್ದೇಶಿಸಿದ ಇತ್ತೀಚಿನ ಚಿತ್ರ “ಕುಮಾರರಾಮ”.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರಮೀಳಾ ಜೋಷಾಯ್

ಕಲಾತ್ಮಕ ಮತ್ತು ಕಮರ್ಷಿಯಲ್ ಚಿತ್ರಗಳ ಎಲ್ಲ ಬಗೆಯ ಪಾತ್ರಗಳಿಗೂ ಜೀವತುಂಬಿ ನಟಿಸುವ ಅಭಿನೇತ್ರಿ ಶ್ರೀಮತಿ ಪ್ರಮೀಳಾ ಜೋಷಾಯ್ ಅವರು.
ಬೆಂಗಳೂರಿನ ಶ್ರೀಮತಿ ಜಯಮ್ಮ ಮತ್ತು ಸ್ಯಾಮ್ಯುಯಲ್ ಜೋಷಾಯ್ ಅವರ ಪುತ್ರಿ, ಪ್ರಮೀಳಾ ಅವರ ಪ್ರತಿಭೆ ಬೆಳಕಿಗೆ ಬಂದಿದ್ದು ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ.
೧೯೭೬ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈ ಅಭಿನೇತ್ರಿ ನಟಿಸಿದ ಮೊದಲ ಚಿತ್ರ ಸಾಮಾಜಿಕ ವಸ್ತುವನ್ನು ಒಳಗೊಂಡ ‘ಹರಕೆ’. ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ದುಷ್ಟ ಬಸವಿ ಪದ್ಧತಿಯ ಕರಾಳ ಮುಖಗಳನ್ನು ಪರಿಚಯಿಸುವ ಕಥಾಹಂದರ ಈ ಚಿತ್ರದ್ದು. ಭಕ್ತ ಸಿರಿಯಾಳ, ತಾಯಿಯ ಆಸೆ, ಗುಣನೋಡಿ ಹೆಣ್ಣುಕೊಡು, ಪಟ್ಟಣಕ್ಕೆ ಬಂದ ಪತ್ನಿಯರು, ಕಪ್ಪುಕೊಳ, ಬೆಂಕಿ, ಪ್ರಥಮ ಉಷಾ ಕಿರಣ ಇವೇ ಮೊದಲಾದ ಚಿತ್ರಗಳಲ್ಲಿ ಪ್ರಮೀಳಾ ಅವರದು ಮನೋಜ್ಞ ಅಭಿನಯ, ನಿರ್ವಹಿಸಿದ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುವ ಸಜ್ಜನಿಕೆ ಅವರದು.
ನಟಿಯಾಗಿ ಖ್ಯಾತಿ ಪಡೆದ ಮೇಲೆ ರಂಗಭೂಮಿಗೂ ಕಾಲಿಟ್ಟರು. ಮರಾಠಿಯ ವಿಜಯ್ ತೆಂಡೂಲ್ಕರ್ ಅವರ ಯಶಸ್ವಿ ನಾಟಕ ಸಖರಾಮ್‌ ಬೈಂಡ‌ ಕನ್ನಡಾನುವಾದ ನಾಟಕದ ಮೂಲಕ ರಂಗಭೂಮಿ ಪ್ರವೇಶ. ಉತ್ತರ ಕರ್ನಾಟಕದ ಅನೇಕ ವೃತ್ತಿರಂಗ ಕಂಪೆನಿಗಳ ನಾಟಕಗಳಲ್ಲಿ ಅಭಿನಯ. ಜೊತೆಗೆ ಕಿರುತೆರೆಯ ಧಾರಾವಾಹಿಗಳಲ್ಲೂ ನಟಿಸಿದ ಅನುಭವ. ಕನ್ನಡ, ತಮಿಳು, ತೆಲುಗು ಮತ್ತು ತುಳು ಭಾಷೆಗಳಲ್ಲಿ ೩೫೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವುದು ಪ್ರಮೀಳಾ ಅವರ ಸಾಧನೆ.
ಸ್ವತಃ ಅಭಿನಯಿಸಿ, ನಿರ್ಮಿಸಿರುವ ‘ತಾಯಿ’ ಚಿತ್ರಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳ ಗೌರವ ಸಂದಿರುವುದು ಪ್ರಮೀಳಾ ಜೋಷಾಯ್ ಅವರ ಕಲಾಪ್ರೌಢಿಮೆಗೆ ಸಿಕ್ಕಿರುವ ಗೌರವ. ಇವರು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು. ಸೆನ್ಸಾರ್ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿರುವರು.
ಪತಿ ನಟ ಸುಂದರ್ ರಾಜ್ ಅವರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಪ್ರತಿಭಾವಂತ ಕಲಾವಿದೆ ಶ್ರೀಮತಿ ಪ್ರಮೀಳಾ ಜೋಷಾಯ್.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಡಿ. ಶ್ರೀನಿವಾಸ್ ಕಡವಿಗೆರೆ

ಕ್ಯಾಮೆರಾ ಕಲೆಯನ್ನು ಕಸುಬಾಗಿ ಸ್ವೀಕರಿಸಿ ಆ ಕ್ಷೇತ್ರದಲ್ಲಿ ಬದುಕನ್ನು ಕಟ್ಟಿಕೊಂಡವರು ಡಿ.ಶ್ರೀನಿವಾಸ್‌ ಕಡವಿಗೆರೆ
ಅವರು.
೧೯೬೬ರಲ್ಲಿ ಶ್ರೀಯುತರ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಬಳಿಕ ಕ್ಯಾಮೆರಾದ ಕಲೆಗಾರಿಕೆಯಲ್ಲಿ ನೈಮಣ್ಯತೆ ಸಂಪಾದನೆ. ಚಲನಚಿತ್ರ ಮತ್ತು ಧಾರಾವಾಹಿಗಳ ಕ್ಯಾಮೆರಾ ಸಹಾಯಕರಾಗಿ ಸೇರ್ಪಡೆ.
ತೋಟಗಾರಿಕೆ ಇಲಾಖೆಗಾಗಿ ನಿರ್ಮಿಸಲಾದ ಸಾಕ್ಷ್ಯಚಿತ್ರಕ್ಕೆ ಕ್ಯಾಮೆರಾ ಸಹಾಯಕರಾಗಿ ದುಡಿದಿರುವ ಶ್ರೀನಿವಾಸ್ ಅವರು ಆಹಾ ಬ್ರಹ್ಮಚಾರಿ, ಮುದ್ದಿನ ಮಾವ, ಶಿರಡಿ ಸಾಯಿಬಾಬಾ ಮತ್ತು ಪ್ರೇಮ ಸಿಂಹಾಸನ ಚಿತ್ರಗಳಿಗೂ ಕ್ಯಾಮೆರಾ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.
ಕಥೆಗಾರ, ಮಾಯಾಮೃಗ, ದಶಾವತಾರ, ಅವಲೋಕನ, ಭಾಗ್ಯ, ಪುಣ್ಯ, ಮನೆಯೊಂದು ಮೂರು ಬಾಗಿಲು ಸೇರಿದಂತೆ ೧೫ಕ್ಕೂ ಹೆಚ್ಚು ಕಿರುತೆರೆಯ ಧಾರಾವಾಹಿಗಳಿಗೂ ಕ್ಯಾಮೆರಾ ಸಹಾಯಕರಾಗಿ ದುಡಿದಿರುವರು.
ಸಾವಿರಕ್ಕೂ ಹೆಚ್ಚಿನ ಕಂತುಗಳಲ್ಲಿ ಪ್ರಸಾರಗೊಂಡ ‘ವಠಾರ ಧಾರಾವಾಹಿಯ ಛಾಯಾಗ್ರಾಹಕರೂ ಆಗಿರುವ ಶ್ರೀನಿವಾಸ್ ಅ ಮೂಲಕ ‘ಸಾವಿರದ ಸರದಾರ’ರು ಕೀರ್ತಿಗೆ ಭಾಜನರು.
ಕ್ಯಾಮೆರಾವನ್ನು ಕಲ್ಪನೆಗೆ ಅನುಗುಣವಾಗಿ ದುಡಿಸಿಕೊಳ್ಳುವ ಕಲೆಯನ್ನು ಮೈಗೂಡಿಸಿಕೊಂಡಿರುವವರು ಶ್ರೀ ಡಿ.ಶ್ರೀನಿವಾಸ್ ಕಡವಿಗೆರೆ.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸಂತ ಕುಮಾರ ಪಾಟೀಲ

ಉದ್ದಿಮೆದಾರ, ಚಲನಚಿತ್ರ ನಿರ್ಮಾಪಕ, ವಿತರಕ, ನಟರಾಗಿ ಪರಿಚಿತರಾದವರು ಬಸಂತ ಕುಮಾರ ಪಾಟೀಲ ಅವರು. ಬಾಗಲಕೋಟೆ ಜಿಲ್ಲೆಯ ಹುನಗುಂದದವರಾದ ಪಾಟೀಲರು ಚಿತ್ರರಂಗದಲ್ಲಿ ಹೆಸರು ಮಾಡುವ ಮುನ್ನ ಸಿಮೆಂಟ್ ತಯಾರಿಕಾ ರಂಗದಲ್ಲಿ ಯಶಸ್ಸು ಕಂಡವರು. ಸಿಮೆಂಟ್ ಪೈಪ್, ಕಂಬಗಳ ತಯಾರಿಕೆಯ ಮೂಲಕ ‘ವಿಜಾಪುರ ಸನ್ ಪೈಪ್’ ಉದ್ದಿಮೆ ಸ್ಥಾಪನೆ. ವಿಜಾಪುರ ನಗರಕ್ಕೆ ನೀರು ಸರಬರಾಜು ಕಲ್ಪಿಸುವ ಯೋಜನೆಯಡಿ ನಿರ್ವಹಿಸಿದ ಪಾತ್ರ ವಿಶಿಷ್ಟವಾದುದು.
ಪಾಟೀಲರು ನಿರ್ಮಿಸಿದ, ಗಿರೀಶ ಕಾಸರವಳ್ಳಿ ನಿರ್ದೇಶನದ ‘ನಾಯಿ ನೆರಳು’ ಹಾಗೂ ‘ಗುಲಾಬಿ ಟಾಕೀಸ್’ ಚಿತ್ರಗಳಿಂದ ಕನ್ನಡಕ್ಕೆ ಅಂತಾರರಾಷ್ಟ್ರೀಯ ಮನ್ನಣೆ ಲಭಿಸಿದೆ.
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ಶ್ರೀ ಬಸಂತ ಕುಮಾರ ಪಾಟೀಲ್‌ರದು ಮಹಾತ್ಯಾಗ, ಮಾಂಗಲ್ಯಭಾಗ್ಯ, ಅನುರಾಗ ಬಂಧನದಂತಹ ಉತ್ತಮ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ. ಸಾಯಿಕುಮಾರ್

ತಮ್ಮ ೧೧ನೆಯ ವಯಸ್ಸಿನಲ್ಲಿಯೆ ರಂಗಭೂಮಿಯ ನಂಟು ಬೆಳೆಸಿಕೊಂಡು, ಇಂದು ೫೦ ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ ಜನಪ್ರಿಯ ಸಿನಿಮಾ ನಟ ‘ಡೈಲಾಗ್‌ಕಿಂಗ್’ ಶ್ರೀ ಸಾಯಿಕುಮಾರ್.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರಾದ ಶ್ರೀ ಸಾಯಿಕುಮಾರ್ ಅವರು ತಂದೆ ತಾಯಿ ಕೂಡ ರಂಗಭೂಮಿಯಿಂದ ಬಂದವರು. ತಂದೆ ಪಿ.ಜೆ. ಶರ್ಮ ತಾಯಿ ಕೃಷ್ಣಜ್ಯೋತಿ, ೧೯೬೧ರಲ್ಲಿ ಜನಸಿದ ಶ್ರೀ ಸಾಯಿಕುಮಾರ್ ಅವರು ಎಂ.ಎ. ಪದವೀಧರರು.
ತಂದೆ ತಾಯಿ ಜೊತೆ ರಂಗಭೂಮಿಯ ಒಡನಾಟದಲ್ಲಿಯೇ ಬೆಳೆದವರು. ೧೯೯೩ ನೇ ಇಸವಿಯಲ್ಲಿ ಬೆಳ್ಳಿತೆರೆಗೆ ಪ್ರವೇಶ
ಮಾಡಿದರು.
ಪೊಲೀಸ್ ಸ್ಟೋರಿ, ಲಾ ಅಂಡ್ ಆರ್ಡರ್, ಇಂಡಿಪೆಂಡನ್ಸ್ ಡೇ, ಮಹಾಸಾದ್ವಿ ಮಲ್ಲಮ್ಮ, ನಾಗದೇವತೆ, ರೇಣುಕಾದವಿ ಮಹಾತ್ಯೆ, ಅಗ್ನಿ ಐ.ಪಿ.ಎಸ್., ದುರ್ಗದ ಹುಲಿ ಮೊದಲಾದ ೫೦ ಚಲನಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದು. ಶ್ರೀ ಸಾಯಿಕುಮಾರ್ ಅವರು ಅಮೋಘವಾಗಿ ಅಭಿನಯಿಸಿದ ‘ಶ್ರೀ ಕ್ಷೇತ್ರ ಕೈವಾರ ತಾತಯ್ಯ” ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದು ಅಪಾರ ಜನಮನ್ನಣೆ ಗಳಿಸಿದೆ.
ಕಂಚಿನ ಕಂಠದಲ್ಲಿ, ಶ್ರೇಷ್ಠ ಶೈಲಿಯಲ್ಲಿ, ಸ್ಪಷ್ಟ ಉಚ್ಚಾರದೊಡನೆ ಪಾತ್ರದ ಸಂಭಾಷಣೆಯನ್ನು ನಿರ್ವಹಿಸುವ ಇವರ ರೀತಿ ಪ್ರಶಂಸನೀಯ. ಸಿನೇಮಾ ಪ್ರೇಕ್ಷಕರು ಪ್ರೀತಿಯಿಂದ ಇವರಿಗಿರುವ ಬಿರುದು ‘ಡೈಲಾಗ್ ಕಿಂಗ್’.
ಸಿನಿಮಾ ಪಾತ್ರಕ್ಕೆ ಜೀವತುಂಬುವ ಅಪ್ರತಿಮ ಕಲಾವಿದ ಶ್ರೀ ಪಿ. ಸಾಯಿಕುಮಾರ್.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ

ಭೌಗೋಳಿಕ ಮತ್ತು ಭಾಷೆಗಳ ಎಲ್ಲೆ ಮೀರಿದ ಸಾಧನೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರದು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೊನೆಟಮ್ಮಪೇಟದಲ್ಲಿ ೧೯೪೬ರ ಜೂನ್ ೪ರಂದು ಜನನ, ತೆಲುಗು ಚಿತ್ರರಂಗದ ಮೂಲಕ ಗಾಯನ ಕ್ಷೇತ್ರಕ್ಕೆ ೧೯೬೬ರಲ್ಲಿ ಪದಾರ್ಪಣೆ. ಒಟ್ಟು ೩೯ ಸಾವಿರಕ್ಕೂ ಅಧಿಕ ಗೀತೆಗಳ ಸರದಾರರು ಶ್ರೀಯುತರು. ಕನ್ನಡ, ಮಾತೃಭಾಷೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಭಾವಪರವಶತೆಯಿಂದ ಹಾಡಿರುವರು. ಎಸ್‌ಪಿಬಿ ಅವರ ದಾಖಲೆಗಳು ಹತ್ತು-ಹಲವು. ೩೫ ವರ್ಷಗಳ ಸೇವೆ ಸಲ್ಲಿಸಿರುವ ಅವರು ೧೯೮೧ರ ಫೆಬ್ರವರಿ ೮ರಂದು ಬೆಂಗಳೂರಿನಲ್ಲಿ ಬೆಳಗಿನ ೯ರಿಂದ ರಾತ್ರಿ ೯ರವರೆಗೂ ೧೭ ಹಾಡುಗಳ ಧ್ವನಿ ಮುದ್ರಣದಲ್ಲಿ ಭಾಗವಹಿಸಿದ್ದು ಇಂದಿಗೂ ಒಂದು ಅದ್ಭುತ ದಾಖಲೆ.
ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕಾಗಿ ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಹಾಡಿದ ಗೀತೆಗೆ ೧೯೯೫ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೌರವ. ೧೯೯೯ರಲ್ಲಿ ಆಂಧ್ರದ ಪೊಟ್ಟಿ ಶ್ರೀರಾಮುಲು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವ, ೨೦೦೧ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಹಿಂದಿಯ ‘ಏಕ್ ದುಜೇ ಕೇ ಲಿಯೇ’ಚಿತ್ರವೂ ಸೇರಿದಂತೆ ಒಟ್ಟು ಆರು ಬಾರಿ ರಾಷ್ಟ್ರೀಯ ಪ್ರಶಸ್ತಿ ರಾಜ್ಯದ ‘ಸಂಗೀತಾ ಗಂಗಾ’ ಪ್ರಶಸ್ತಿ, ಅನೇಕ ಬಾರಿ ಆಂಧ್ರ ಸರ್ಕಾರದ ನಂದಿ ಪ್ರಶಸ್ತಿ ಇವರಿಗೆ ಸಂದ ಗೌರವಗಳು.
ಅವರು ನಡೆಸಿಕೊಡುವ ‘ಎದೆ ತುಂಬಿ ಹಾಡುವೆನು’ ಎಂಬ ಕನ್ನಡದ ಪ್ರತಿಭಾ ಶೋಧ ಕಾರ್ಯಕ್ರಮ ಜನಪ್ರಿಯತೆ ಪಡೆದಿದೆ. ತಮ್ಮ ಹಾಡುಗಳ ಮೂಲಕ ಕನ್ನಡ ಜನರ ಮೆಚ್ಚುಗೆಗೆ ಪಾತ್ರರಾಗಿರುವ ಹೃದಯವಂತ ಹಿನ್ನೆಲೆ ಗಾಯಕರು ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ.

Categories
ಚಲನಚಿತ್ರ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಕೆ. ಭಗವಾನ್ (ದೊರೆ-ಭಗವಾನ್)

ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ಮಿಸುವ ಮೂಲಕ ಕನ್ನಡ ಜನತೆಗೆ ಸದಭಿರುಚಿಯ ಚಿತ್ರಗಳನ್ನು ನೀಡಿದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಜೋಡಿಯಲ್ಲಿ (ದೊರೆ-) ಭಗವಾನರೂ ಒಬ್ಬರು.
೭೪ ವರ್ಷದ ಶ್ರೀಯುತರು ಮೂಲತಃ ಬೆಂಗಳೂರಿನವರು. ‘ಕರ್ನಾಟಕ ನಾಟಕ ಸಭಾ’ದ ಮೂಲಕ ವೃತ್ತಿರಂಗಭೂಮಿ ಪ್ರವೇಶ. ಆನಂತರ ಚಿತ್ರ ನಿರ್ಮಾಪಕರಾಗಿ, ನಿರ್ದೇಶಕ, ಸಹ ನಿರ್ದೇಶಕರಾಗಿ ದುಡಿದ ಅವರಿಂದ ಕನ್ನಡ ಚಿತ್ರರಂಗಕ್ಕೆ ಸಂದ ಕಾಣಿಕೆ ಅಪಾರ, ಅನನ್ಯ.
ಅವರು ನಿರ್ದೇಶಿಸಿದ ೪೮ ಚಿತ್ರಗಳಲ್ಲಿ ೨೦ ಚಿತ್ರಗಳು ಕನ್ನಡದ ಪ್ರಸಿದ್ಧ ಲೇಖಕರ ಕಾದಂಬರಿಗಳನ್ನು ಆಧರಿಸಿ ನಿರ್ಮಿಸಿದವು ಎಂಬುದು ಗಮನಾರ್ಹ ಸಂಗತಿ. ಭಗವಾನರ ನಿರ್ದೇಶನದ ‘ಸಂಧ್ಯಾರಾಗ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೇಶನ ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿಯ ಗರಿ. ಎರಡು ಕನಸು, ಚಂದನದ ಗೊಂಬೆ, ಮುನಿಯನ ಮಾದರಿ, ಹೊಸ ಬೆಳಕು, ಜೀವನ ಚೈತ್ರ ಚಿತ್ರಗಳಿಗೆ ರಾಜ್ಯ ಪ್ರಶಸ್ತಿಯ ಗೌರವ.
೧೯೭೦-೮೦ರ ದಶಕದಲ್ಲಿ ಕನ್ನಡ ಚಿತ್ರರಂಗ ಕಂಡ ಅನೇಕ ಉತ್ತಮ ಚಿತ್ರಗಳ ಪೈಕಿ ಶ್ರೀಯುತರು ನಿರ್ಮಿಸಿದ ಚಿತ್ರಗಳೂ ಉಂಟು. ಡಾ. ರಾಜ್‌ಕುಮಾರ್ ಮತ್ತು ಅನಂತನಾಗ್ ಅವರಂಥ ಕಲಾವಿದರನ್ನು ರೂಪಿಸುವಲ್ಲಿ ದೊರೆ-ಭಗವಾನ್ ನಿರ್ದೇಶಕದ್ವಯರ ಕಾಣಿಕೆ ಹಿರಿದು.
ಸದ್ಯ ಶ್ರೀಯುತರು, ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರು ಮೈಸೂರಿನಲ್ಲಿ ಸ್ಥಾಪಿಸಿರುವ ‘ಶಕ್ತಿಧಾಮ’ ಮಹಿಳಾ ಪುನರ್ವಸತಿ ಕೇಂದ್ರದ ಸ್ಥಾಪಕ ಟ್ರಸ್ಟಿ, ಇಳಿವಯಸ್ಸಿನಲ್ಲೂ ಚಿತ್ರರಂಗದ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವವರು ಶ್ರೀ ಭಗವಾನ್.

Categories
ಚಲನಚಿತ್ರ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಶನಿಮಹದೇವಪ್ಪ

ನಾಡಿನ ಅನೇಕ ವೃತ್ತಿ ನಾಟಕ ಸಂಸ್ಥೆಗಳು ಹಾಗೂ ಹವ್ಯಾಸಿ ನಾಟಕ ಸಂಘಗಳಲ್ಲಿ ಪಾತ್ರಗಳನ್ನು ನಿರ್ವಹಿಸಿರುವ ಮಹದೇವಪ್ಪ ‘ರಾಜ ವಿಕ್ರಮ’ ನಾಟಕದಲ್ಲಿ ಶನಿದೇವರ ಪಾತ್ರವನ್ನು ಹೆಚ್ಚು ಬಾರಿ ಮಾಡಿದರಿಂದ ಶನಿಮಹದೇವಪ್ಪ ಎಂದೇ ಹೆಸರಾದರು. ಮಂಡ್ಯ ಜಿಲ್ಲೆಯ ಬೆಳಕವಾಡಿಯವರಾದ ಶನಿಮಹದೇವಪ್ಪ ಧರ್ಮಸ್ಥಳ ಮಹಾತ್ಮ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ೩೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗೂ ಖಳನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಭಕ್ತ ಕುಂಬಾರ, ಬಡವರ ಬಂಧು, ದೇವತಾ ಮನುಷ್ಯ, ಭಕ್ತ ಪ್ರಹ್ಲಾದ, ನನ್ನ ಶಪಥ ಈ ಚಿತ್ರಗಳಲ್ಲಿ ಶನಿಮಹದೇವಪ್ಪನವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಿರ್ವಹಿಸಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸಾಧು ಕೋಕಿಲ

ವಾದ್ಯಗೋಷ್ಟಿಯಲ್ಲಿ ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರಾಗಿದ್ದ ಸಗಾಯ್ ರಾಜ್ ಇಂದು ಸಾಧುಕೋಕಿಲಾ ಆಗಿ ಕನ್ನಡದ ಜನಪ್ರಿಯ ಚಲನಚಿತ್ರ ನಿರ್ದೇಶಕರು, ಸಂಗೀತ ನಿರ್ದೇಶಕರು, ನಟ ಹಾಗೂ ಹಿನ್ನೆಲೆ ಗಾಯಕರಾಗಿ ಪ್ರಸಿದ್ದರು.
ಸಾಧುಕೋಕಿಲಾ ಮೊದಲಿಗೆ ಸಂಗೀತ ಸಂಯೋಜಕರಾಗಿದ್ದು, ನಂತರ ಚಿತ್ರ ನಿರ್ದೇಶಕರಾಗಿ ಉಪೇಂದ್ರ ಅವರ ಚಿತ್ರಗಳನ್ನು ನಿರ್ದೇಶಿಸಿದರು. ಹಾಸ್ಯ ಪಾತ್ರಗಳಿಗೆ ಹೊಸ ರೂಪ ಕೊಟ್ಟ ಸಾಧುಕೋಕಿಲಾ ನಾಯಕ ನಟರಾಗಿಯೂ ಚಿತ್ರಗಳಲ್ಲಿ ಅಭಿನಯಿಸಿದರು.
ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತ ಎರಡೂ ಪ್ರಕಾರಗಳಲ್ಲಿ ನೈಪುಣ್ಯತೆ ಪಡೆದಿರುವ ಸಾಧು ಕೋಕಿಲಾ ಹೊಸ ಪ್ರಯೋಗಗಳಿಗೆ ಹೆಸರುವಾಸಿ. ಆಡುಭಾಷೆಗೆ ಸಂಗೀತವನ್ನು ಸಂಯೋಜಿಸುವ ಕಲೆಯಲ್ಲಿ ಗಮನಾರ್ಹ ಸಾಧನೆ ಸಾಧುಕೋಕಿಲಾ ಅವರದು.

Categories
ಚಲನಚಿತ್ರ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸದಾಶಿವ ಬ್ರಹ್ಮಾವರ

ಯಕ್ಷಗಾನ ಬಯಲಾಟ ಕ್ಷೇತ್ರದಲ್ಲಿ ಗುರುತಿಸಿಕೊಂಡು ನಂತರ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ ಸದಾಶಿವ ಬ್ರಹ್ಮಾವರ ಅವರು ೫ ದಶಕಗಳಿಂದ ನಿರಂತರವಾಗಿ ಚಲನಚಿತ್ರ ಕ್ಷೇತ್ರದಲ್ಲಿದ್ದಾರೆ.
ಚಲನಚಿತ್ರಗಳಲ್ಲಿ ಪೋಷಕಪಾತ್ರಗಳಲ್ಲಿ ಅಭಿನಯಿಸುತ್ತಾ ಪ್ರೇಕ್ಷಕರ ಗಮನ ಸೆಳೆದಿರುವ ಸದಾಶಿವ ಬ್ರಹ್ಮಾವರ್ ಅವರು ಕಿರುತೆರೆಯಲ್ಲಿಯೂ ಅಭಿನಯಿಸಿದ್ದಾರೆ. ಪಾತ್ರ ಪುಟ್ಟದಾಗಲಿ ದೊಡ್ಡದಾಗಲಿ ಸಮರ್ಥವಾಗಿ ಅಭಿನಯಿಸುವ ಅಪರೂಪದ ಕಲಾವಿದರಲ್ಲಿ ಒಬ್ಬರಾದ ಸದಾಶಿವ ಬ್ರಹ್ಮಾವರ್ ಇಳಿ ವಯಸ್ಸಿನಲ್ಲಿಯೂ ಜೀವನಕ್ಕಾಗಿ ಅಭಿನಯ ಕಲೆಯನ್ನು ನಂಬಿಕೊಂಡಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಸಾಹುಕಾರ್ ಜಾನಕಿ

ಕನ್ನಡ ಚಿತ್ರರಂಗದ ಮೂಲಕ ಚಲನಚಿತ್ರ ಜಗತ್ತಿಗೆ ಕಾಲಿಟ್ಟ ಸಾಹುಕಾರ್ ಜಾನಕಿ ೧೯೫೦ ಹಾಗೂ ೬೦ ನೇ ದಶಕಗಳಲ್ಲಿ ಕನ್ನಡದ ಅನೇಕ ಚಿತ್ರಗಳ ನಾಯಕ ನಟಿಯಾಗಿದ್ದವರು. ಮದರಾಸ್ ನಲ್ಲಿ ದಕ್ಷಿಣ ಭಾರತದ ಚಲನಚಿತ್ರ ಉದ್ಯಮ ನೆಲೆನಿಂತಿದ್ದ ಸಂದರ್ಭದಲ್ಲಿ ಸಾಹುಕಾರ್ ಜಾನಕಿ ತಮಿಳು ಹಾಗೂ ತೆಲುಗು ಚಿತ್ರಗಳ ಜನಪ್ರಿಯ ಕಲಾವಿದೆಯಾಗಿ ಹೊರಹೊಮ್ಮಿದರು.
ಕನ್ನಡದ ಡಾ|| ರಾಜ್ಕುಮಾರ್, ತಮಿಳಿನ ಎಮ್.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್ ತೆಲುಗಿನ ಎನ್. ಟಿ. ರಾಮರಾವ್, ಆರ್. ನಾಗೇಶ್ವರರಾವ್. ಸೇರಿದಂತೆ ಎಲ್ಲಾ ದಕ್ಷಿಣ ಭಾಷೆಗಳ ಪ್ರಮುಖ ನಾಯಕನಟರೊಂದಿಗೆ ಅಭಿನಯಿಸಿರುವ ಖ್ಯಾತಿ ಸಾಹುಕಾರ್ ಜಾನಕಿಯವರದು.
ಮುನ್ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿ ಪಾತ್ರನಿರ್ವಹಿಸಿರುವ ಸಾಹುಕಾರ್ ಜಾನಕಿಯವರು ಚಲನಚಿತ್ರ ಉದ್ಯಮದಿಂದ ಪಡೆದಿರುವ ಪ್ರಶಸ್ತಿ ಪುರಸ್ಕಾರಗಳು ಹಲವಾರು.

Categories
ಚಲನಚಿತ್ರ ರಾಜ್ಯೋತ್ಸವ 2022

ಹೆಚ್. ಜಿ. ದತ್ತಾತ್ರೇಯ

ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಭಿಜಾತ ಕಲಾವಿದರಾದ ದತ್ತಣ್ಣ ಕನ್ನಡ ನಾಡಿನ ಹೆಮ್ಮೆ, ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಪಾತ್ರಗಳಿಗೆ ಜೀವತುಂಬಿದ ಚಿರಂಜೀವಿ ನಟರು. ೧೯೪೨ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ದತ್ತಣ್ಣ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಬ್ಯಾಂಕ್‌. ಪಿಯುಸಿಯಲ್ಲಿ ಎರಡನೇ ಬ್ಯಾಂಕ್, ಇಂಜಿನಿಯರಿಂಗ್ ಮುಗಿಸಿ ಭಾರತೀಯ ವಿಜ್ಞಾನಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್ ಆಗಿ ಬಹುವರ್ಷ, ಎಚ್‌ಎಎಲ್‌ನ ಉಪಪ್ರಧಾನ ವ್ಯವಸ್ಥಾಪಕ, ಸಿಬ್ಬಂದಿ ಕಾಲೇಜಿನ ಪ್ರಾಂಶುಪಾಲರಾಗಿ ಕೆಲವರ್ಷ ದುಡಿದವರು. ಶಾಲಾದಿನಗಳಲ್ಲೇ ನಾಟಕದ ಗೀಳು ಹಚ್ಚಿಕೊಂಡಿದ್ದ ದತ್ತಣ್ಣರ ರುಸ್ತುಂ ನಾಟಕ ಬಲು ಜನಪ್ರಿಯವಾಗಿತ್ತು. ಅಳಿಯದೇವರು, ದೇವದಾಸಿ ನಾಟಕಗಳಲ್ಲಿ ಸ್ತ್ರೀಪಾತ್ರಧಾರಿಯಾಗಿ ಮಿಂಚಿದ್ದರು. ೪ನೇ ವಯಸ್ಸಿನಲ್ಲಿ ಬಿ.ಎಸ್‌.ರಂಗರ ‘ಉದ್ಭವ್‌’ ಕಿರುಚಿತ್ರದ ಮೂಲಕ ಬಣ್ಣದಲೋಕಕ್ಕೆ ಮರುಪ್ರವೇಶ, ೨ನೇ ಚಿತ್ರ ‘ಆಸ್ಫೋಟ’ದ ನಟನೆಗೆ ಅತ್ಯುತ್ತಮ ಪೋಷಕನಟ ಪ್ರಶಸ್ತಿಯ ಗರಿ. ಆನಂತರದ ಸಿನಿಯಾನದಲ್ಲಿ ದತ್ತಣ್ಣರ ಪಾತ್ರಗಳದ್ದೇ ಮೇಲುಗೈ, ಮುನ್ನುಡಿ ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ದಕ್ಕಿದರೆ, ಮೌನಿ, ಭಾರತ್‌ಸ್ಟೋ‌ರ್ ರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿಗೆ ಭಾಜನ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಟನೆ, ಪಾತ್ರ ಯಾವುದೇ ಇರಲಿ ದತ್ತಣ್ಣರದ್ದು ಪರಕಾಯ ಪ್ರವೇಶ. ಅದ್ಭುತ ಭಾವಾಭಿನಯ, ಇಡೀ ಚಿತ್ರವನ್ನೇ ತಮ್ಮ ಹೆಗಲಮೇಲೆ ಕೊಂಡೊಯ್ಯುವಷ್ಟು ಕಲೆಗಾರಿಕೆ. ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಅನೇಕ ರಾಜ್ಯ ಪ್ರಶಸ್ತಿಗಳಿಗೆ ಭಾಜನರಾಗಿರುವ ದತ್ತಣ್ಣರದ್ದು ನಾಡಿಗೆ ನಾಡೇ ತಲೆದೂಗುವಂತಹ ಸೋಪಜ್ಞ ಕಲೆ.

Categories
ಚಲನಚಿತ್ರ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅನಂತನಾಗ್

ಮರಾಠಿ ರಂಗಭೂಮಿಯಲ್ಲಿ ಹೆಸರುಮಾಡಿ ನಂತರ ಚಲನಚಿತ್ರ ಹಾಗೂ ಕಿರುತೆರೆಗಳಲ್ಲಿ ಖ್ಯಾತಿ ಪಡೆದ ಸಂವೇದನಾಶೀಲ ನಟರು ಅನಂತನಾಗ್ ಅವರು. ಹುಟ್ಟಿದ್ದು ಹಸಿರು ಕಡಲ ಮಡಿಲು ಉತ್ತರ ಕನ್ನಡದ ನಾಗರಕಟ್ಟೆಯಲ್ಲ.
ಶ್ರೀ ಅನಂತನಾಗ್ ಅವರು ಕಲಾತ್ಮಕ ಚಿತ್ರಗಳಲ್ಲಿ ಮೊದಲು ಕಾಣಿಸಿಕೊಂಡ ಅನಂತನಾಗ್ ನಂತರ ವಾಣಿಜ್ಯ ಚಿತ್ರಗಳಲ್ಲೂ ನಾಯಕರಾಗಿ ಮಿಂಚಿದವರು. ಅನಂತ್ನಾಗ್ ಅವರ ಮೊದಲ ಚಿತ್ರ ಪಿ. ವಿ. ನಂಜರಾಜ್ ಅರಸ್ ಅವರ ‘ಸಂಕಲ್ಪ’ ಯಾವುದೇ ಪಾತ್ರವಿದ್ದರೂ ಅದಕ್ಕೆ ಜೀವ ತುಂಬುವ ಅನಂತನಾಗ್ ಈವರೆಗೆ ಮಿಂಚಿನ ಓಟ, ಹೊಸನೀರು, ಅವಸ್ಥೆ, ಗಂಗವ್ವ ಗಂಗಾಮಾಯಿ ಚಿತ್ರಗಳ ಅಭಿನಯಕ್ಕಾಗಿ ಮೂರು ಬಾಲ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಾಯಕ ನಟರಾಗಿಯೂ ಹಾಸ್ಯ ಪಾತ್ರಗಳಲ್ಲೂ ಸೈ ಎನ್ನಿಸಿಕೊಂಡಿರುವ ಅನಂತನಾಗ್ ಗಂಭೀರ ಪಾತ್ರಗಳಲ್ಲೂ ಛಾಪು ಮೂಡಿಸಿದ್ದಾರೆ. ಚಂದನದ ಗೊಂಬೆ, ಬೆಂಕಿಯಬಲೆ, ಹಂಸಗೀತೆ, ಬಯಲುದಾಲ, ಗೋಲ್ಮಾಲ್ ರಾಧಾಕೃಷ್ಣ, ಗಣೇಶನ ಮದುವೆ, ಮತದಾನ ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಅನಂತನಾಗ್ ಹಿಂದಿ-ತೆಲುಗು, ಮಲೆಯಾಳಂ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಈಗ ಕಿರುತೆರೆಯಲ್ಲೂ ಜನಪ್ರಿಯರು. ಹಂಸಗೀತೆಯ ಭೈರವಿ ವೆಂಕಟಸುಬ್ಬಯ್ಯನವರ ಪಾತ್ರವಂತೂ ಜನಮನದಲ್ಲಿ ಹಚ್ಚಹಸಿರು. ‘ಕನ್ನೇಶ್ವರ ರಾಮ’, ‘ಬರ’, ‘ಮಿಂಚಿನ ಓಟ’, ‘ಬೆಳದಿಂಗಳ ಬಾಲೆ’ ಯಂತಹ ವಿಭಿನ್ನ ಚಿತ್ರಗಳು ಅಭಿನಯ ಪ್ರತಿಭೆಗೆ ಹೊಸ ಆಯಾಮ ನೀಡಿದ ಚಿತ್ರಗಳು
ರಾಜಕಾರಣದಲ್ಲೂ ಸಕ್ರಿಯರಾಗಿದ್ದ ಅನಂತನಾಗ್ ಕರ್ನಾಟಕದಲ್ಲಿ ಮಂತ್ರಿಯಾದ ಚಿತ್ರನಟರಲ್ಲೊಬ್ಬರು. ಅದ್ಭುತ ಅಭಿನಯದಿಂದ ಜನಮನವನ್ನು ಸೂರೆಗೊಂಡ ಕನ್ನಡದ ಮೇರುನಟರಲ್ಲೊಬ್ಬರು ಶ್ರೀ ಅನಂತನಾಗ್ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್

ಚಿತ್ರನಿರ್ಮಾಣದ ಜೊತೆಗೆ ಚಿತ್ರ ವಿತರಣೆಯನ್ನು ಕೈಗೆತ್ತಿಕೊಂಡು ಕನ್ನಡ ಚಿತ್ರೋದ್ಯಮದಲ್ಲಿ ಹೆಸರು ಗಳಿಸಿದವರು ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ಅ ವರು.
ಪ್ರಸಿದ್ಧ ನಟ ಡಾ|| ರಾಜ್ಕುಮಾರ್ರವರ ಪತ್ನಿಯವರಾದ ಪಾರ್ವತಮ್ಮ ರಾಜ್ಕುಮಾರ್ ಅವರು ಹುಟ್ಟಿದ್ದು ಮೈಸೂರು ಸಮೀಪದ ಸಾಅಗ್ರಾಮದಲ್ಲ. ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಅವರು ಹಲವಾರು ಸದಭಿರುಚಿಯ ಕನ್ನಡ ಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರರು.
ಹಲವಾರು ಮಂದಿ ಕಲಾವಿದರು, ತಂತ್ರಜ್ಞರು ಹಾಗೂ ಉದ್ಯಮಿಗಳನ್ನು ಬೆಳಕಿಗೆ ತಂದಿರುವ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಅವರು ಅನೇಕ ಜನಪರ ಸಂಘಟನೆಗಳ ಪ್ರೇರಣಾ ಶಕ್ತಿ.
ನಾಡಿನ ಅನೇಕ ಶಿಕ್ಷಣ ಸಂಸ್ಥೆಗಳ ಸಹಾಯಾರ್ಥವಾಗಿ ತಮ್ಮ ಕುಟುಂಬ ಸದಸ್ಯರ ಮನರಂಜನಾ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡಿರುವ ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಅವರು ಅಶಕ್ತ ಮಹಿಳೆಯಲಗಾಲ ಮೈಸೂಲನಲ್ಲಿ ಶಕ್ತಿಧಾಮ ಎಂಬ ಸ್ವಯಂಸೇವಾ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.
ಶ್ರೀಮತಿ ಪಾರ್ವತಮ್ಮ ರಾಜ್ಕುಮಾರ್ ಅವರು ನಿರ್ಮಿಸಿದ ಅನೇಕ ಚಲನಚಿತ್ರಗಳು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ್ದು ಈ ಚಿತ್ರಗಳಲ್ಲಿ ಭಾಗವಹಿಸಿದ ಕಲಾವಿದರು ಹಾಗೂ ತಂತ್ರಜ್ಞರಿಗೆ ವೈಯಕ್ತಿಕ ಪ್ರಶಸ್ತಿಗಳು ಸಂದಿವೆ.

Categories
ಚಲನಚಿತ್ರ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸುರೇಶ್ ಅರಸ್

ರಾಷ್ಟ್ರದ ಪ್ರತಿಭಾವಂತ ಚಿತ್ರ ಸಂಕಲನಕಾರರಲ್ಲೊಬ್ಬರು ಶ್ರೀ ಸುರೇಶ್ ಅರಸ್ ಅವರು. ೧೫೦ಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನ ಮಾಡಿರುವ ಹಿಲಮೆ ಶ್ರೀಯುತರದು.
ಮಣಿರತ್ನಂ ಅವರ ನಾಯಗನ್ ಚಿತ್ರದ ಸಂಕಲನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ಸುರೇಶ್ ಅರಸ್ ಆರಂಭದ ದಿನಗಳಲ್ಲೇ ಹೆಚ್ಚಾಗಿ ಸಂಕಲನ ಮಾಡಿದ್ದು ಕಲಾತ್ಮಕ ಚಿತ್ರಗಳಿಗೆ.
ಸಂಗಮ ಸಾಕ್ಷಿ, ತುಳು ಚಿತ್ರದ ಮೂಲಕ ಸ್ವತಂತ್ರ ಸಂಕಲನಕಾರರಾಗಿ ಚಿತ್ರರಂಗ ಪ್ರವೇಶಿಸಿದ ಸುರೇಶ್ ಅರಸ್ ಬ್ಯಾಂಕರ್ ಮಾರ್ಗಯ್ಯ, ಸಂತ ಶಿಶುನಾಳ ಷಲೀಫ, ಬೆಂಕಿ, ಮೂರು ದಾಲಗಳು, ನಕ್ಕಳಾ ರಾಜಕುಮಾಲ, ಮಿಥಿಲೆಯ ಸೀತೆಯರು, ಪಂಚಮವೇದ ಮುಂತಾದ ಪ್ರಶಸ್ತಿ ಪುರಸ್ಕೃತ ಚಿತ್ರಗಳಿಗೆ ಸಂಕಲನ ಮಾಡಿದ ಹೆಗ್ಗಆಕೆಗೆ ಪಾತ್ರರು.
ಬೆಂಗಳೂಲಿನಲ್ಲಿ ಜ್ಯೋತಿ ಸಂಕಲನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಅರಸ್ ಪ್ರಸ್ತುತ ಚೆನ್ನೈನಲ್ಲಿ ಅತ್ಯಾಧುನಿಕ ಸಂಕಲನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ದಕ್ಷಿಣ ಭಾರತದ ಹಲವು ಭಾಷೆಗಳ ಚಲನಚಿತ್ರಗಳನ್ನು ಸಂಕಲನ ಮಾಡಿರುವ ಶ್ರೀ ಸುರೇಶ್ ಅರಸ್ ಶ್ರೀಲಂಕಾ, ಮಾಲಷಸ್ ದೇಶಗಳ ಚಲನಚಿತ್ರಗಳನ್ನು ಸಂಕಲನ
ಮಾಡಿದ ಕೀರ್ತಿಗೆ ಭಾಜನರು.
ರಾಜ್ಯಸರ್ಕಾರದಿಂದ ಎರಡು ಬಾಲ ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಪಡೆದಿರುವ ಶ್ರೀ ಸುರೇಶ್ ಅರಸ್ ನಾಡು ಕಂಡ ಅತ್ಯುತ್ತಮ ಸಂಕಲನಕಾರ.

Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ನಾರಾಯಣ್

ಸಹಾಯಕ ನಿರ್ದೇಶಕರಾಗಿದ್ದು ನಿರ್ದೆಶಕರಾಗಿ, ನಾಯಕ ನಟರಾಗಿಯೂ ಯಶಸ್ಸು ಪಡೆದವರು ಶ್ರೀ ಎಸ್. ನಾರಾಯಣ್ ಅವರು.
ಭಾರ್ಗವ, ಎ. ಟಿ. ರಘು ಮೊದಲಾದವರಲ್ಲಿ ಅನುಭವ ಪಡೆದ ಶ್ರೀ ಎಸ್. ನಾರಾಯಣ್ ಮೊದಲು ನಿರ್ದೇಶಿಸಿದ ಚಿತ್ರ ‘ಚೈತ್ರದ ಪ್ರೇಮಾಂಜಲಿ’. ಈ ಚಿತ್ರದ ಅಪೂರ್ವ ಯಶಸ್ಸಿನ ನಂತರ ಎಸ್. ನಾರಾಯಣ್ ಅವರು ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಶಿವರಾಜಕುಮಾರ್ ಮೊದಲಾದ ನಾಯಕನಟರು ಅಭಿನಯಿಸಿದ ಚಿತ್ರಗಳನ್ನು ನಿರ್ದೆಶಿಸಿ ಪ್ರೇಕ್ಷಕರ ಹಾಗೂ ಉದ್ಯಮದ
ಗಮನ ಸೆಳೆದರು.
ಸಂಭಾಷಣೆ, ಚಿತ್ರಕತೆ, ಗೀತೆಗಳನ್ನು ರಚಿಸಿ ನಿರ್ದೇಶನ ಮಾಡುತ್ತಿದ್ದ ಶ್ರೀ ಎಸ್. ನಾರಾಯಣ್ ನಾಯಕ ನಟರಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿ ಯಶ ಗಳಿಸಿದರು.
ಹಿರಿಯ ನಟರಿದ್ದ ಚಿತ್ರಗಳಿಗೆ ನಿರ್ದೇಶನ ಮಾಡಿ ಹೆಸರು ಮಾಡಿದ ಶ್ರೀ ಎಸ್. ನಾರಾಯಣ್ ಯುವ ಪ್ರತಿಭೆಗಳಿಗೆ ತಮ್ಮ ಚಿತ್ರಗಳಲ್ಲಿ ಅವಕಾಶ ನೀಡಿದರು. ಕೆಲವು ಚಿತ್ರಗಳನ್ನು ತಾವೇ ನಿರ್ಮಿಸಿದ ಶ್ರೀ ನಾರಾಯಣ್ ಬಹುಮುಖ ಪ್ರತಿಭೆಯ ಕಲಾವಿದ.

Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ದೊಡ್ಡಣ್ಣ

ರಂಗಭೂಮಿ ಹಾಗೂ ಕನ್ನಡ ಚಿತ್ರರಂಗಗಳ ಪ್ರತಿಭಾವಂತ ನಟರಲ್ಲೊಬ್ಬರು ದೊಡ್ಡಣ್ಣ.
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದ ದೊಡ್ಡಣ್ಣ ನಾಟಕದ ಗೀಳು ಹಚ್ಚಿಕೊಂಡರು.
ಅನೇಕ ಹವ್ಯಾಸಿ ನಾಟಕಗಳಲ್ಲಿ ನಟಿಸಿದ ಶ್ರೀ ದೊಡ್ಡಣ್ಣ ಅಭಿನಯಿಸಿದ ಮೊದಲ ಚಿತ್ರ ‘ಕೂಡಿಬಾಳಿದರೆ ಸ್ವರ್ಗಸುಖ’.
ಹಾಸ್ಯನಟ, ಖಳನಾಯಕರಾಗಿ ವಿಶೇಷ ಗಮನ ಸೆಳೆದಿರುವ ಶ್ರೀ ದೊಡ್ಡಣ್ಣ ಕೆಲವು ಗಂಭೀರ ಪಾತ್ರಗಳಲ್ಲೂ ಮನ ಮುಟ್ಟುವಂತೆ ಅಭಿನಯಿಸಿದ್ದಾರೆ.
ತಮ್ಮದೇ ಆದ ಅಭಿನಯ ಶೈಲಿಯನ್ನು ರೂಢಿಸಿಕೊಂಡಿರುವ ಶ್ರೀ ದೊಡ್ಡಣ್ಣ ಕಳೆದ ೨೫ ವರ್ಷಗಳಿಂದ ನಟಿಸಿರುವ ಚಿತ್ರಗಳು ೬೦೦ಕ್ಕೂ ಹೆಚ್ಚು.
‘ಟು, ಟುವ್ವ ಟುವ್ವ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕನಟ ಪ್ರಶಸ್ತಿ ಪಡೆದಿರುವ ಶ್ರೀ ದೊಡ್ಡಣ್ಣ ಅವರಿಗೆ ಸಂದಿರುವ ಗೌರವ ಸನ್ಮಾನಗಳು ಹತ್ತು ಹಲವು.

Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹಂಸಲೇಖ

ಚಲನಚಿತ್ರ ಸಂಗೀತ ಲೋಕದಲ್ಲಿ ಹೊಸ ಅಲೆಯನ್ನು ಉಂಟು ಮಾಡಿದವರು ಖ್ಯಾತ ಸಂಗೀತ ಸಂಯೋಜಕ ಹಾಗೂ ಗೀತ ರಚನಕಾರ ಶ್ರೀ ಹಂಸಲೇಖ ಅವರು.
ಅಣ್ಣ ಬಾಲಕೃಷ್ಣನ ವಾದ್ಯಗೋಷ್ಠಿಯಲ್ಲಿ ಸೇರಿ ಸಂಗೀತದ ಪರಿಚಯ ಮಾಡಿಕೊಂಡ ಶ್ರೀ ಹಂಸಲೇಖ ತಮ್ಮದೇ ನಾಟಕ ತಂಡ ಕಟ್ಟಿಕೊಂಡು ಹಲವು ಬಗೆಯ ಪ್ರಯೋಗಗಳನ್ನು ಮಾಡಿದವರು. ರವಿಚಂದ್ರನ್ ನಿರ್ದೇಶನದ ‘ಪ್ರೇಮಲೋಕ’ ಚಿತ್ರದಲ್ಲಿ ರಾಕ್ ಸಂಗೀತ ಮಾದರಿಯನ್ನು ಅಳವಡಿಸಿ ದೃಶ್ಯಗಳನ್ನೇ ಹಾಡನ್ನಾಗಿ ಪರಿವರ್ತಿಸಿದಾಗ ಹಂಸಲೇಖ ಪ್ರತಿಭೆ ಬೆಳಕಿಗೆ ಬಂತು. ಅಲ್ಲಿಂದ ಚಿತ್ರ ಸಂಗೀತದಲ್ಲೊಂದು ಹೊಸ ಶಕೆಯೇ ಆರಂಭವಾಯಿತು.
ಯಶಸ್ವಿ ಸಂಗೀತ ನಿರ್ದೇಶಕ ಹಾಗೂ ಗೀತ ರಚನಕಾರರಾದ ಶ್ರೀ ಹಂಸಲೇಖ ಚಿತ್ರ ಸಂಗೀತದಂತೆ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತದಲ್ಲೂ ಪರಿಣತರು.
ಸಂಗೀತ ನಿರ್ದೆಶನ ಹಾಗೂ ಗೀತರಚನೆಗಾಗಿ ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಶ್ರೀ ಹಂಸಲೇಖ ಅವರು ೨೦ ವರ್ಷಗಳಲ್ಲಿ ೩೦೦ಕ್ಕೂ ಹೆಚ್ಚು ಚಿತ್ರಗಳಿಗೆ ಗೀತರಚನಕಾರರಾಗಿ, ಸಂಗೀತ ನಿರ್ದೆಶಕರಾಗಿ ಕೆಲಸ ಮಾಡಿದ್ದಾರೆ.

Categories
ಚಲನಚಿತ್ರ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಎಸ್. ದ್ವಾರಕೀಶ್

ನಾಲ್ಕು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕ ಹಾಗೂ ನಿರ್ದೆಶಕರಾಗಿ ಅನುಪಮ ಸೇವೆ ಸಲ್ಲಿಸಿದವರು ಕಲಾವಿದ ಶ್ರೀ ಬಿ. ಎಸ್. ದ್ವಾರಕೀಶ್ ಅವರು.
ಮೈಸೂರಿನಲ್ಲಿ ಆಟೋಮೊಬೈಲ್ ಇಂಜನಿಯರಿಂಗ್ ಡಿಪ್ಲೊಮಾ ಗಳಿಸಿ ಕುಟುಂಬ ಉದ್ಯೋಗವಾಗಿದ್ದ ಟೈರ್ ವ್ಯಾಪಾರವನ್ನು ಬಿಟ್ಟು ಶ್ರೀ ದ್ವಾರಕೀಶ್ ಅವರು ಚಿತ್ರರಂಗ ಪ್ರವೇಶಿಸಿದ್ದು ಸೋದರಮಾವ ಹುಣಸೂರು ಕೃಷ್ಣಮೂರ್ತಿಯವರ ನಿರ್ದೇಶನದ ‘ವೀರಸಂಕಲ್ಪ’ ಚಿತ್ರದಲ್ಲಿ ನಟಿಸುವುದರ ಮೂಲಕ. ನಲ್ವತ್ತು ವರ್ಷಗಳಲ್ಲಿ ೩೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ೪೫ ಚಿತ್ರಗಳನ್ನು ನಿರ್ಮಿಸಿ, ೨೫ ಚಿತ್ರಗಳನ್ನು ನಿರ್ದೆಶಿಸಿದವರು ಶ್ರೀ ದ್ವಾರಕೀಶ್.
‘ಮೇಯರ್ ಮುತ್ತಣ್ಣ’ದ ಮೂಲಕ ಚಿತ್ರ ನಿಲ್ದಾಣಕ್ಕೆ ಇಳಿದ ಶ್ರೀ ದ್ವಾರಕೀಶ್ ಹೊಸ ಪ್ರಯೋಗಗಳಿಂದ ಹೆಸರಾದವರು. ಹಲವಾರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶ್ರೀ ದ್ವಾರಕೀಶ್ ಅವರು ಖ್ಯಾತ ಹಿನ್ನೆಲೆ ಗಾಯಕ ಕಿಶೋರ್‌ಕುಮಾರ್ ಅವರನ್ನು ಕನ್ನಡಕ್ಕೆ ತಂದವರು.
ವಿದೇಶಗಳಲ್ಲಿ ಮೊಟ್ಟಮೊದಲು ಕನ್ನಡ ಚಿತ್ರ ಚಿತ್ರೀಕರಿಸಿದ ಕೀರ್ತಿಯೂ ಶ್ರೀ ದ್ವಾರಕೀಶ್ ಅವರದೇ.

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚೇತನ್ ರಾಮರಾವ್

ಕಳೆದ ನಲವತ್ತು ವರ್ಷಗಳಿಂದ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ನಟರಾಗಿ ಕಿರುಚಿತ್ರ ನಿರ್ದೆಶಕರಾಗಿ ಸೇವೆ ಸಲ್ಲಿಸುತ್ತಿರುವವರು ಶ್ರೀ ಚೇತನ್ ರಾಮರಾವ್.
ಹಲವಾರು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಚಿತ್ರರಸಿಕರ ಮೆಚ್ಚುಗೆಗೆ ಪಾತ್ರರಾದ ಶ್ರೀ ಚೇತನ್ ರಾಮರಾವ್ ಅವರು ಮೈಸೂರು ವಿಶ್ವವಿದ್ಯಾಲಯದ ಚಲನಚಿತ್ರ ಅಧ್ಯಯನ ವಿಭಾಗದಲ್ಲಿ ಗೌರವ ಉಪನ್ಯಾಸಕ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಚೇತನ್ ರಾಮರಾವ್ ಖ್ಯಾತ ನಿರ್ದೇಶಕರಾದ ಜಿ.ವಿ. ಐಯ್ಯರ್ರವರ ಸಂಸ್ಕೃತ ಭಗವದ್ಗೀತೆ ಚಿತ್ರದಲ್ಲಿ ಧರ್ಮರಾಯನ ಪಾತ್ರವನ್ನು ಅಭಿನಯಿಸಿದ್ದು ಈ ಚಿತ್ರ ಕೇಂದ್ರದ ಸ್ವರ್ಣಕಮಲ ಪ್ರಶಸ್ತಿ ಪಡೆದಿದೆ. ವಾರ್ತಾ ಇಲಾಖೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಎಂಬ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದಾರೆ. ೨೦೦೨ ೦೩ರ ರಾಜ್ಯ ಚಲನಚಿತ್ರ ಸಲಹಾ ಸಮಿತಿ ಸದಸ್ಯರು ಹಾಗೂ ಹಲವಾರು ವರ್ಷಗಳಿಂದ ದಸರಾ ಚಲನಚಿತ್ರ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಚೇತನ್ ರಾಮರಾವ್ ಅವರ ಅಭಿನಯವನ್ನು ಮೆಚ್ಚಿ ಹಲವಾರು ಸಂಘಗಳು ನಟನಾಚತುರ, ಕಲಾದ್ರೋಣ, ಕಲಾಭೀಷ್ಮ, ಕಲಾರತ್ನ ಮುಂತಾದ ಬಿರುದುಗಳನ್ನು ನೀಡಿ ಪುರಸ್ಕರಿಸಿದೆ.
ರಂಗಭೂಮಿಯ ಚಟುವಟಿಕೆಯಿಂದ ಬೆಳ್ಳಿತೆರೆಗೆ ಬಂದು ಸಹಜ ಅಭಿನಯಕ್ಕೆ ಹೆಸರಾದ ಪಂಚಭಾಷಾ ನಟರು ಶ್ರೀ ಚೇತನ್ ರಾಮರಾವ್ ಅವರು.
ರಾಜ್ಯ ಪ್ರಶಸ್ತಿ – ೨೦೦೪ : ಚಲನ ಚಿತ್ರ

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿ.ಕೆ. ಮೂರ್ತಿ

ರಾಷ್ಟ್ರಮಟ್ಟದ ಖ್ಯಾತಿಯ ಚಲನಚಿತ್ರ ಛಾಯಾಗ್ರಾಹಕ ಶ್ರೀ ವಿ.ಕೆ. ಮೂರ್ತಿ ಅವರು ಮೈಸೂರಿನಲ್ಲಿ ೧೯೨೨ರಲ್ಲಿ ಜನಿಸಿದರು. ಬೆಂಗಳೂರಿನ ಎಸ್.ಜೆ. ಪಾಲಿಟೆಕ್ನಿಕ್ ನಲ್ಲಿ ೧೯೪೬ರಲ್ಲಿ ಸಿನಿಮಾಟೋಗ್ರಫಿಯ ಡಿಪ್ಲೊಮೊ ಪಡೆದ ಮೂರ್ತಿಯವರು ಹಿಂದಿ ಚಿತ್ರರಂಗದಲ್ಲೇ ಖಾಯಂ ಆಗಿ ನೆಲೆವೂರಿ ಪ್ರತಿಷ್ಠಿತ ಸಂಸ್ಥೆ ಹಾಗೂ ನಿರ್ದೇಶಕರುಗಳ ಬಳಿ ತಮ್ಮ ಛಾಯಾಗ್ರಾಹಕ ಕೌಶಲ್ಯವನ್ನು ಮೆರೆದವರು.
ಪ್ರಾರಂಭದಲ್ಲಿ ದ್ರೋಣಾಚಾರ್ಯ ಹಾಗೂ ಫಾಲಿಮಿಸ್ತ್ರಿ ಅವರ ಬಳಿ ಸಹಾಯಕರಾಗಿ ದುಡಿದ ಮೂರ್ತಿಯವರು ನಂತರ ೧೯೫೧ರಲ್ಲಿ ಪ್ರಖ್ಯಾತ ನಿರ್ದೇಶಕ ಗುರುದತ್ತರ ಪ್ಯಾಸ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್ ನಂತಹ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಪ್ರಮೋದ್ ಚಕ್ರವರ್ತಿ, ಕಮಲ್ ಅದ್ರೋಹಿ, ರಾಜ್ ಕೋಟ್ಲಿ, ಶ್ಯಾಂ ಬೆನಗಲ್ ಹಾಗೂ ಗೋವಿಂದ ನಿಹಲಾನಿಯಂತಹ ಸಂವೇದನಾಶೀಲ ನಿರ್ದೇಶಕರಿಗೆ ತಮ್ಮ ಸೇವೆಯನ್ನು ಒದಗಿಸಿದರು. ಮೂರ್ತಿಯವರು ಚಿತ್ರೀಕರಿಸಿದ ಇತರ ಪ್ರಮುಖ ಚಿತ್ರಗಳು ಲವ್ ಇನ್ ಟೋಕಿಯೋ, ನಯಾ ಜಮಾನ, ಜುಗ್ಗು, ರಜಿಯಾ ಸುಲ್ತಾನ್, ಪಾಕೀಜಾದ ಕೆಲವು ಭಾಗಗಳು, ತಮಸ್ ಹಾಗೂ ಡಿಸ್ಕವರಿ ಆಫ್ ಇಂಡಿಯಾ ಧಾರಾವಾಹಿ ಮುಂತಾದುವು. ‘ಹೂವು ಹಣ್ಣು’ ಇವರು ಚಿತ್ರೀಕರಿಸಿದ ಏಕೈಕ ಕನ್ನಡ ಚಿತ್ರ.
ಪ್ರಪ್ರಥಮ ಸಿನಿಮಾ ಸ್ಕೋಪ್ ಚಿತ್ರದ ಛಾಯಾಗ್ರಾಹಕರಾದ ಮೂರ್ತಿಯವರಿಗೆ ಫಿಲಂಫೇರ್ ಪ್ರಶಸ್ತಿ, ಚಿತ್ರ ವಿಮರ್ಶಕರ ಪ್ರಶಸ್ತಿ ಹಾಗೂ ಜೀವಮಾನ ಸಾಧನೆಯ ಪುರಸ್ಕಾರಗಳು ಸಂದಿವೆ.ವಯೊಲಿನ್ ವಾದಕರಾದ ಮೂರ್ತಿಯವರು ಕನ್ನಡ ನಾಟಕಗಳನ್ನು ಕೂಡ ಬರೆದು ನಿರ್ದೇಶಿಸಿದ್ದಾರೆ. ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಶ್ರೀಯುತ ವಿ.ಕೆ. ಮೂರ್ತಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಚರಿತ್ರೆಯಲ್ಲಿ ತಮ್ಮ ಹೆಜ್ಜೆ ಜಾಡು ಮೂಡಿಸಿರುವವರು. ಐದು ದಶಕಗಳ ಮೂರ್ತಿಯವರ ಸಾಧನೆ ಅನನ್ಯ ಹಾಗೂ ಅಪೂರ್ವವಾದುದು.

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಕೆ.ಎಸ್.ಎಲ್. ಸ್ವಾಮಿ (ರವಿ)

ಕನ್ನಡ ಚಿತ್ರರಂಗದ ಕಳೆದ ಅರ್ಧ ಶತಮಾನದ ಜೀವಂತ ಪ್ರತಿನಿಧಿ ನಿರ್ದೇಶಕ, ನಿರ್ಮಾಪಕ ಕೆ.ಎಸ್.ಎಲ್. ಸ್ವಾಮಿ (ರವಿ) ಅವರು.
೧೯೬೬ರಲ್ಲಿ ತೂಗುದೀಪ ಚಿತ್ರದ ಮೂಲಕ ಚಿತ್ರ ನಿರ್ದೇಶನಕ್ಕೆ ಕಾಲಿರಿಸಿದ ರವಿ ಅವರು ಬಹುದೊಡ್ಡ ನಿರ್ದೇಶಕರುಗಳೆನಿಸಿದ ಸಿದ್ಧಲಿಂಗಯ್ಯ, ತಿಪಟೂರು ರಘು, ದೊರೈ, ದಾಸರಿ ನಾರಾಯಣರಾವ್, ವಿ. ಸೋಮಶೇಖರ್, ಎಸ್.ವಿ. ರಾಜೇಂದ್ರಸಿಂಗ್ ಬಾಬು, ಕೋಟಾರೆಡ್ಡಿ, ಶ್ರೀದತ್ತರಾಜ್, ಮಣಿಮುರುಗನ್ ಮುಂತಾದ ಎಲ್ಲರೊಂದಿಗೆ ದುಡಿದವರು. ಅಲ್ಲದೆ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಕಡೆಯ ಚಿತ್ರ ‘ಮಸಣದ ಹೂವು’ ಪೂರ್ಣಗೊಳಿಸಿ ಬಿಡುಗಡೆ ಮಾಡಿದ ಕೀರ್ತಿಯೂ ಅವರದಾಗಿದೆ.
ಈವರೆಗೆ ಸುಮಾರು ೪೦ ಚಿತ್ರಗಳನ್ನು ನಿರ್ದೇಶಿಸಿರುವ ರವಿಯವರ ಚಿತ್ರಜೀವನದಲ್ಲಿ ಮಸಣದ ಹೂವು, ಮಲಯ ಮಾರುತ, ಮಿಥಿಲೆಯ ಸೀತೆಯರು, ಮಕ್ಕಳ ಭಾಗ್ಯ, ತುಳಸಿ, ಭಾಗ್ಯಜ್ಯೋತಿ ಮುಂತಾದುವು ಮರೆಯಲಾರದ ದಾಖಲೆಗಳನ್ನು ನಿರ್ಮಿಸಿದವು.
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ,(೧೯೯೪-೯೫) ಪುರಸ್ಕೃತರಾದ ರವಿ ಅವರ ಮಲಯ ಮಾರುತ ಸಂಗೀತಕ್ಕೆ ಸುರಸಿಂಗಾರ್ ಪ್ರಶಸ್ತಿಯೂ, ಜಂಬೂ ಸವಾರಿ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿಯೂ ಸಂದಿವೆ. ಚಲನಚಿತ್ರ ರಂಗದ ಅನೇಕ ಸಂಘಗಳಲ್ಲಿಯೂ ಸಕ್ರಿಯವಾಗಿ ಕೆಲಸ ಮಾಡಿರುವ ರವಿ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ರಾಮಚಂದ್ರ

ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರವಾದ ಬಹುತೇಕ ಕನ್ನಡ ಚಿತ್ರಗಳಿಗೆಲ್ಲ ಛಾಯಾಗ್ರಾಹಕರಾಗಿ ಎಸ್.ರಾಮಚಂದ್ರ ದುಡಿದಿದ್ದಾರೆ ಎಂಬ ಮಾತು ಅವರ ಕ್ರಿಯಾಶೀಲ ಛಾಯಾಗ್ರಹಣಕ್ಕೆ ಅರ್ಹವಾಗಿಯೆ ಸಂದ ಮೆಚ್ಚುನುಡಿ.
ಬಿ.ಎಸ್.ಸಿ. ಪದವೀಧರರಾಗಿ ಸಿನಿಮಾ ಡಿಪ್ಲೊಮಾ ಪಡೆದಿರುವ ಶ್ರೀಯುತ ರಾಮಚಂದ್ರ ಅವರು ಋಷ್ಯಶೃಂಗ, ಸಂಕಲ್ಪ, ಕಂಕಣ, ಮನೆ, ಮಾಲ್ಗುಡಿ ಡೇಸ್, ಈ ಎಲ್ಲ ಚಿತ್ರಗಳ ಛಾಯಾಗ್ರಹಣಕ್ಕಾಗಿ ಪ್ರಶಸ್ತಿ ಪಡೆದವರು. ಇವರ ಛಾಯಾಗ್ರಹಣದ ಚೋಮನದುಡಿ, ಘಟಶ್ರಾದ್ಧ, ಗ್ರಹಣ, ಪಲ್ಲವಿ, ದಂಗೆ ಎದ್ದ ಮಕ್ಕಳು, ಆಸ್ಫೋಟ, ಶಿಶುನಾಳ ಶರೀಫ, ಅಲೆಮಾರಿ, ಪ್ರವಾಹ, ಕಾನೂರು ಹೆಗ್ಗಡತಿ, ಒಂದು ಕೊಲೆಯ ಸುತ್ತ, ಋಷ್ಯಶೃಂಗ ಈ ಎಲ್ಲ ಚಿತ್ರಗಳು ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿವೆ ಎಂಬುದು ಹೆಮ್ಮೆಯ ವಿಷಯ.
ಈವರೆಗೂ ಎಂಬತ್ತಕ್ಕೂ ಹೆಚ್ಚು ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದಿರುವ ಶ್ರೀ ಎಸ್. ರಾಮಚಂದ್ರ ಅವರು ಕನ್ನಡದ ಕಲಾತ್ಮಕ ಚಿತ್ರಗಳಿಗೆ ತಮ್ಮ ಅತ್ಯುತ್ತಮ ಛಾಯಾಗ್ರಹಣದಿಂದಲೆ ವಿಶಿಷ್ಟವಾದ ಹೊಳಪು ನೀಡಿದ ಅಪರೂಪದ ತಂತ್ರಜ್ಞ

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಹರಿಣಿ

ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲೇ ತಾರೆಯಾಗಿ ದಾಖಲೆಗಳನ್ನು ನಿರ್ಮಿಸಿದ ಸ್ಪುರದ್ರೂಪಿ ಅಭಿನೇತ್ರಿ ಶ್ರೀಮತಿ ಹರಿಣಿ.
೧೯೪೫ರಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀಮತಿ ಹರಿಣಿಯವರು ಪ್ರಪ್ರಥಮವಾಗಿ ಜಗನ್ನೋಹಿನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಕನ್ನಡದ ಜನಮನದಲ್ಲಿ ನೆಲೆನಿಂತವರು. ಕನ್ಯಾದಾನ, ಸೌಭಾಗ್ಯಲಕ್ಷ್ಮಿ, ನಂದಾದೀಪ, ನಾಂದಿ, ಸತಿ ಸುಕನ್ಯ, ಮಂಗಳ ಮುಹೂರ್ತ, ಮುಂತಾದವು ಕನ್ನಡ ಚಿತ್ರರಂಗದಲ್ಲಿ ದಾಖಲೆ ಸ್ಥಾಪಿಸಿದ ಚಿತ್ರಗಳು. ನಂದಾದೀಪ ಮತ್ತು ಮಂಗಳ ಮುಹೂರ್ತಕ್ಕೆ ರಾಷ್ಟ್ರಪ್ರಶಸ್ತಿಯೂ ಲಭಿಸಿತು. ಅವರ ಅಭಿನಯದ ನಾಂದಿ ಚಿತ್ರವು ವಿದೇಶದಲ್ಲಿ ತೆರೆಕಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಶ್ರೀಮತಿ ಹರಿಣಿ ಅವರ ಸಹೋದರ ವಾದಿರಾಜ್ ಕೂಡ ನಟ, ನಿರ್ಮಾಪಕ, ನಿರ್ದೇಶಕರಾಗಿದ್ದು ಅವರ ನಮ್ಮ ಮಕ್ಕಳು ಚಿತ್ರದಲ್ಲಿನ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿಯೂ ಶ್ರೀಮತಿ ಹರಿಣಿ ಅವರಿಗೆ ಸಿಕ್ಕಿತು.
ಡಾ. ವಿಜ್ಞಾನಿ ಬಿ.ಎಸ್. ರಾವ್ ಅವರನ್ನು ಮದುವೆಯಾಗಿ ಮಗನೊಂದಿಗೆ ಸುಖೀ ಕುಟುಂಬ ಹೊಂದಿರುವ ಹರಿಣಿ ಅವರ ಅಭಿನಯದ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಹಚ್ಚಹಸಿರಾಗಿವೆ.

Categories
ಚಲನಚಿತ್ರ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅವಿನಾಶ್

ಕನ್ನಡ ಚಿತ್ರರಂಗದ ಮಧ್ಯತಲೆಮಾರಿನ ಅತ್ಯಂತ ಪ್ರಮುಖ ಪೋಷಕ ಕಲಾವಿದರು ಅವಿನಾಶ್, ಚಾರಿತ್ರಿಕ ಪಾತ್ರಗಳಿಗೆ ಜೀವತುಂಬಿದ ಅಭಿಜಾತ ನಟ, ರಂಗಭೂಮಿ, ಸಿನಿಮಾ, ಕಿರುತೆರೆಯಲ್ಲಿ ವಿಶಿಷ್ಟ ಛಾಪೊತ್ತಿದ ಪಂಚಭಾಷಾ ತಾರೆ, ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನಲ್ಲಿ ೧೯೫೯ರಲ್ಲಿ ಜನಿಸಿದ ಅವಿನಾಶ್ ಅಪ್ಪಟ ಬಹುಮುಖ ಪ್ರತಿಭೆ, ಮೈಸೂರು ವಿವಿಯಲ್ಲಿ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ, ಎಂ.ಫಿಲ್ ಪಡೆದ ಸುಶಿಕ್ಷಿತರು, ಮೈಸೂರಿನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯಲಿಂಗ್‌ ಹಾಗೂ ಬೆಂಗಳೂರಿನ ಎಂಇಎಸ್‌ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದವರು. ಬಾಲ್ಯದಿಂದಲೂ ನಟನೆ, ರಂಗಭೂಮಿಯೆಡೆಗೆ ಅಪಾರ ಒಲವು, ಲಂಡನ್‌ನ ಮರ್ಮೈಡ್ ಥಿಯೇಟರ್‌ನಲ್ಲಿ ಅಭಿನಯದ ಪಟ್ಟುಗಳನ್ನು ಕಲಿತ ಕನಸುಗಾರ, ಬಿ.ಜಯಶ್ರೀ ಅವರ ಸ್ಪಂದನ ಹಾಗೂ ಶಂಕರ್‌ನಾಗ್‌ರ ಸಂಕೇತ್‌ ತಂಡಗಳ ರಂಗಪ್ರಯೋಗಗಳಲ್ಲಿ ಬಣ್ಣ ಹಚ್ಚುವ ಮೂಲಕ ಕಲಾರಂಗಕ್ಕೆ. ಜಿವಿ ಅಯ್ಯರ್‌ರ ಮಧ್ವಾಚಾರ್ಯ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶ. ‘ಸಂಯುಕ್ತ’ ಚಿತ್ರದಿಂದ ಮುನ್ನೆಲೆಗೆ, ಆನಂತರದ ಮೂರೂವರೆ ದಶಕಗಳು ಅಪ್ಪಟ ಸಿನಿಯಾನ, ಕಠಿಣ ಎನಿಸುವಂತಹ ಸಂಕೀರ್ಣ ಪಾತ್ರಗಳನ್ನು ನಿರ್ವಹಿಸಿದ ಹೆಗ್ಗಳಿಕೆ, ಪೋಷಕಪಾತ್ರಗಳ ಘನತೆ ಹೆಚ್ಚಿಸಿದ ಕಲಾವಂತಿಕೆ, ೨೦೦ಕ್ಕೂ ಹೆಚ್ಚು ನಿರ್ದೇಶಕರ ಗರಡಿಯಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲೀಷ್ ಸೇರಿದಂತೆ ಒಟ್ಟು ೭೦೦ ಚಿತ್ರಗಳಲ್ಲಿ ನಟಿಸಿದ ಮಹಾಹಿರಿಮೆ, ಕರ್ನಾಟಕ, ತಮಿಳುನಾಡು ರಾಜ್ಯ ಪ್ರಶಸ್ತಿಗಳಿಗೂ ಪಾತ್ರವಾಗಿರುವ ಅವಿನಾಶ್ ಬೆಳ್ಳಿತೆರೆ ಕಂಡ ಅತ್ಯುತ್ತಮ ಪೋಷಕ ಕಲಾವಿದರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಕುಮಾರಿ ತಾರಾ

ಬೆಳ್ಳಿತೆರೆಯ ವರ್ಣಮಯ ಕಲಾಲೋಕದಲ್ಲಿ ವೈವಿಧ್ಯಪೂರ್ಣ ಪಾತ್ರಗಳನ್ನು ಅಭಿನಯಿಸಿ ಕಲಾ ರಸಿಕರ ಮನ ಗೆದ್ದಿರುವ ಮೋಹಕ ಚಿತ್ರ ತಾರೆ ಕುಮಾರಿ ತಾರಾ ಅವರು.
೧೯೮೬ರಲ್ಲಿ ಬಾಲನಟಿಯಾಗಿ ಸಿನಿಮಾ ಉದ್ಯಮವನ್ನು ಪ್ರವೇಶಿಸಿದ ತಾರಾ ಅವರು ಈವರೆಗೆ ಅಭಿನಯಿಸಿದ ಚಿತ್ರಗಳ ಸಂಖ್ಯೆ ೧೬೦. ‘ತುಳಸೀದಳ’ ದಿಂದ ಪ್ರಾರಂಭವಾದ ಅವರ ಕಲಾಜೀವನ `ನಿನಗಾಗಿ’ ಚಿತ್ರದವರೆಗೂ ಮುಂದುವರೆದಿದ್ದು ಇನ್ನೂ ಬೇಡಿಕೆಯಲ್ಲಿರುವುದೇ ಅವರ ಪ್ರತಿಭಾ ಸಂಪನ್ನತೆಗೆ ಸಾಕ್ಷಿಯಾಗಿದೆ. ಕನ್ನಡದ ಎಲ್ಲ ಶ್ರೇಷ್ಠ ನಟ, ನಟಿಯರೊಡನೆ ಅಭಿನಯಿಸಿದ ಹೆಮ್ಮೆ ಇವರದು. ದಕ್ಷಿಣ ಭಾರತದ ಇತರ ಭಾಷೆಗಳಲ್ಲಿಯೂ ಅಭಿನಯಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ.
‘ಸುಂದರ ಸ್ವಪ್ನಗಳು’, ‘ವಿಮೋಚನೆ’, ‘ಮುನ್ನುಡಿ’, ‘ಮತದಾನ’, ‘ಕಾನೂರು ಹೆಗ್ಗಡಿತಿ’ ಮೊದಲಾದವು ಇವರು ಅಭಿನಯಿಸಿದ ಕೆಲವು ಪ್ರಮುಖ ಚಲನಚಿತ್ರಗಳು, ಗಿರೀಶ್ ಕಾರ್ನಾಡ್, ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ, ಕೆ. ಬಾಲಚಂದರ್, ಮಣಿರತ್ನಂ ಮುಂತಾದ ಗಣ್ಯ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಇವರದು.
‘ಕಾನೂರು ಹೆಗ್ಗಡಿತಿ’, ಚಿತ್ರದಲ್ಲಿನ ಇವರ ಅಭಿನಯಕ್ಕೆ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿ ದೊರೆತಿದೆ. ಈ ಚಿತ್ರ ರಾಷ್ಟ್ರೀಯ ಅಂತರರಾಷ್ಟ್ರೀಯ, ಮಟ್ಟದಲ್ಲಿ ಪ್ರದರ್ಶನಗೊಂಡಿದೆ. ‘ಕ್ರಮ’ ಚಿತ್ರಕ್ಕೆ ಉತ್ತಮ ನಟಿ ಪ್ರಶಸ್ತಿ ‘ಮತದಾನ’ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ, ‘ಮುನ್ನುಡಿ’ ಚಿತ್ರಕ್ಕೆ ಉತ್ತಮ ನಟಿ ಪ್ರಶಸ್ತಿ ‘ಮಾ ಇಂಟಿಕತಾ’ ಚಿತ್ರಕ್ಕೆ ಆಂಧ್ರ ಪ್ರದೇಶದ ನಂದಿ ಪ್ರಶಸ್ತಿ ಲಭಿಸಿದೆ. ‘ಕಾನೂರು ಹೆಗ್ಗಡತಿ’, ‘ಮತದಾನ’ ಹಾಗೂ ‘ಮುನ್ನುಡಿ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಕನ್ನಡದ ಮಣ್ಣಲ್ಲಿ ಅರಳಿ, ದಕ್ಷಿಣ ಭಾರತದಲ್ಲೆಡೆ ಜನಪ್ರಿಯರಾಗಿ ಸ್ವಯಂ ಪ್ರತಿಭೆಯಿಂದ ಕಲಾಕ್ಷಿತಿಜದಲ್ಲಿ ಮಿನುಗುತ್ತಿರುವ ಮಿಂಚು ಕಂಗಳ ಅತ್ಯುತ್ತಮ ಅಭಿನೇತ್ರಿ ಕುಮಾರಿ ತಾರಾ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಬಿ.ವಿ. ರಾಧಾ

ನಾಲ್ಕು ದಶಕಗಳಿಗೂ ಮೀರಿ, ನಾಲ್ಕು ಭಾಷೆಗಳ ಚಿತ್ರರಂಗದಲ್ಲಿ ಅಭಿನಯಿಸಿ ಕಲಾಪ್ರೇಮಿಗಳ ಅಚ್ಚು ಮೆಚ್ಚಿನ ಕಲಾವಿದೆ ಬಿ. ವಿ. ರಾಧಾ ಅವರು.
೧೯೪೮ ರಲ್ಲಿ ಹಿಂದುಳಿದ ಕುಟುಂಬದಲ್ಲಿ ಜನಿಸಿ ರಾಜಲಕ್ಷ್ಮಿ ಎನ್ನುವ ಜನ್ಮನಾಮವನ್ನು ಬದಲಿಸಿಕೊಂಡು ಬಿ.ವಿ. ರಾಧಾ ಆಗಿ ಬೆಳ್ಳಿ ತೆರೆಗೆ ಕಾಲಿಟ್ಟರು. ಬಾಲ್ಯದಿಂದಲೂ ಸಿನಿಮಾ ನಾಟಕಗಳ ಆಕರ್ಷಣೆ ತೀವ್ರವಾಗಿ ಪ್ರಸಿದ್ಧ ನೃತ್ಯ ನಿರ್ದೇಶಕ ರಾಜ್‌ಕುಮಾರ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿದರು. ೧೯೬೮ರಲ್ಲಿ ತಮಿಳಿನ ಪ್ರಸಿದ್ದ ಕಲಾವಿದೆ ದೇವಿಕಾ ಜೊತೆ ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದರು. ಎಂ.ಜಿ.ಆರ್., ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಎನ್‌ಟಿಆರ್, ಪ್ರೇಮ್‌ನಜೀರ್ ಹಾಗೂ ಕನ್ನಡದಲ್ಲಿ ಡಾ|| ರಾಜ್‌ಕುಮಾರ್, ಉದಯಕುಮಾರ್, ಕಲ್ಯಾಣ್‌ಕುಮಾರ್, ವಿಷ್ಣುವರ್ಧನ್, ಶ್ರೀನಾಥ್ ಹೀಗೆ ದಕ್ಷಿಣ ಭಾರತದ ಎಲ್ಲ ಪ್ರತಿಷ್ಠಿತ ನಟರೊಂದಿಗೆ ನಾಯಕಿ, ಸಹಕಲಾವಿದೆ, ಪೋಷಕಿ ಪಾತ್ರಧಾರಿಯಾಗಿ ಹಾಗೂ ನವ ಪೀಳಿಗೆಯ ಕಲಾವಿದರಾದ ರವಿಚಂದ್ರನ್, ಶಿವರಾಜ್‌ಕುಮಾರ್‌, ರಮೇಶ್‌ ಮೊದಲಾದವರೊಂದಿಗೆ ಅಭಿನಯಿಸಿದ್ದಾರೆ.
ಜೊತೆಗೆ ಕಿರುತೆರೆಯಲ್ಲಿಯೂ ಜನಪ್ರಿಯರಾಗಿರುವ ಶ್ರೀಮತಿ ಬಿ.ವಿ. ರಾಧಾ ಅವರು ತಮ್ಮದೇ ನಾಟಕ ಸಂಸ್ಥೆ ಕಟ್ಟಿ ವೃತ್ತಿ ನಾಟಕಗಳಲ್ಲಿ ಅಭಿನಯಿಸಿ ಕರ್ನಾಟಕದಾದ್ಯಂತ ಪ್ರವಾಸಮಾಡಿದ್ದಾರೆ. ಬಿ.ವಿ. ರಾಧಾ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ ‘ಗಂಗಾ ತುಂಗಾ’ ನಾಟಕ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.
ತಮ್ಮ ಪತಿ ನಿರ್ಮಾಪಕ ನಿರ್ದೇಶಕ ಕೆ.ಎಸ್‌.ಎನ್. ಸ್ವಾಮಿ (ರವಿ) ಅವರ ಜೊತೆಗೂಡಿ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ನಿರ್ಮಾಣದ ‘ಜಂಬೂಸವಾರಿ’ಗೆ ಸ್ವರ್ಣಕಮಲ, ‘ಹರಕೆಯ ಕುರಿ’ಗೆ ರಜತ ಕಮಲ ಪ್ರಶಸ್ತಿಗಳು ದೊರಕಿವೆ.
* ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶಕ್ತ ಕಲಾವಿದರ ಕಲ್ಯಾಣ ಸಮಿತಿ ಹಾಗೂ ‘ಅಭಿನೇತ್ರಿ’ ಸಂಘದ ಪದಾಧಿಕಾರಿಯಾಗಿದ್ದಾರೆ.
ಚಲನ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಭಿನಯದಿಂದ ಕಲಾಪ್ರೇಮಿಗಳ ಮನಸ್ಸಿಗೆ ಮುದ ನೀಡುತ್ತಿರುವ ಅಪರೂಪದ ಕಲಾವಿದೆ ಶ್ರೀಮತಿ ಬಿ.ವಿ. ರಾಧಾ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶ್ರೀನಾಥ್

ಕನ್ನಡ ಚಲನಚಿತ್ರದ ರಂಗದ ಜನಪ್ರಿಯ ನಟರಾಗಿ, ಉದಯ ಟಿ.ವಿ.ಯ ಪ್ರಧಾನ ಕಾರ್ಯನಿರ್ವಾಹಕರಾಗಿ ಕಲಾರಸಿಕರ ಹೃದಯವನ್ನು ಸೂರೆಗೊಂಡಿರುವ ಪ್ರಣಯರಾಜ ಶ್ರೀ ಶ್ರೀನಾಥ್ ಅವರು.
ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ರಂಗಭೂಮಿಗೆ ಕಾಲಿರಿಸಿದ ಶ್ರೀನಾಥ್ ಅವರು `ಪ್ರಭಾತ್ ಕಲಾವಿದರು’, ನಟರಂಗ, ವೇದಿಕೆ ಸಂಸ್ಥೆಗಳಲ್ಲಿ ಅಭಿನಯಿಸುತ್ತ ಮೇಲೇರಿದರು. ೧೯೬೬ರಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ‘ಮಧುರಮಿಲನ’ ಇವರ ಮೊದಲ ಚಿತ್ರ `ಶುಭಮಂಗಳ’ ಚಿತ್ರ ಇವರನ್ನು ತಾರಾ ಪಟ್ಟಕ್ಕೆ ಏರಿಸಿತು. ಡಾ|| ರಾಜಕುಮಾರ್‌ ಅವರ ನಂತರ ೧೦೦ ಸಿನಿಮಾಗಳಲ್ಲಿ ಅಭಿನಯಿಸಿದ ಎರಡನೆಯ ನಾಯಕ ನಟರು ಇವರು. ೧೬೮ ಚಲನಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದ ಹೆಗ್ಗಳಿಕೆ ಇವರದು. ೬೧ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಮೂವತ್ತೇಳು ಚಲನಚಿತ್ರಗಳಲ್ಲಿ ಅಭಿನಯಿಸಿದ ಶ್ರೀನಾಥ್-ಮಂಜುಳಾ ಜೋಡಿ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವೀ ತಾರಾ ಜೋಡಿ ಎಂದು ಪ್ರಸಿದ್ದಿ ಪಡೆದಿದೆ. ಎಲ್ಲರೊಡನೆಯೂ ಸ್ನೇಹ ವಿಶ್ವಾಸದಿಂದ ನಡೆದುಕೊಳ್ಳುವ ಶ್ರೀನಾಥ್ ‘ಅಜಾತಶತ್ರು’ವೆಂದು ಪ್ರಖ್ಯಾತರಾಗಿದ್ದಲ್ಲದೆ ಐದು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಮಾಡಿದ್ದಾರೆ. ಅಭಿನಯ ಚಕ್ರವರ್ತಿ, ನಟನ ಕಲಾ ಸಾರ್ವಭೌಮ, ಅಭಿನಯ ಕಲಾರತ್ನ, ಮೊದಲಾದ ಬಿರುದುಗಳು ಇವರಿಗೆ ಸಂದಾಯವಾಗಿವೆ.
‘ಬೆಸುಗೆ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವುದಲ್ಲದೆ ನಾಡಿನ ಅನೇಕ ಸಂಘ ಸಂಸ್ಥೆಗಳು, ಮಠಮಾನ್ಯಗಳು ಶ್ರೀನಾಥ್ ಅವರನ್ನು ಸನ್ಮಾನಿಸಿ ಬಿರುದು, ಬಾವಲಿಗಳನ್ನು ನೀಡಿವೆ.
ಕನ್ನಡದಲ್ಲಿ ಉದಯ ಟಿ.ವಿ. ವಾಹಿನಿಯನ್ನು ಪ್ರಾರಂಭಿಸಿ ಕನ್ನಡ ಭಾಷೆ, ಸಂಸ್ಕೃತಿ, ಕಲೆಯನ್ನು ಪ್ರಪಂಚದಾದ್ಯಂತ ಬಿತ್ತರಿಸಿದ ಕೀರ್ತಿ ಶ್ರೀನಾಥ್ ಅವರದು.
ಹಲವಾರು ಸೇವಾ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಯುತರು ಅನೇಕ ಸಮಾಜಹಿತದ ಕಾಠ್ಯಕ್ರಮಗಳಲ್ಲಿ ಪೋಷಕರಾಗಿದ್ದಾರೆ, ದಾನಿಗಳಾಗಿದ್ದಾರೆ.
ರಂಗಭೂಮಿಯಿಂದ ಚಲನಚಿತ್ರ ರಂಗ, ಟಿ.ವಿ. ವಾಹಿ, ಕಲೆ ಹಾಗೂ ಸಂಸ್ಕೃತಿ ಪ್ರಸಾರದಲ್ಲಿ ತೊಡಗಿಸಿಕೊಂಡಿರುವ ಜನಪ್ರಿಯ ಕಲಾವಿದರು ಶ್ರೀ ಶ್ರೀನಾಥ್ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗಂಗಾಧರ್

ಕನ್ನಡ ಚಲನಚಿತ್ರ ರಂಗದಲ್ಲಿ ಅಭಿನಯಿಸಿದ ಪ್ರತಿಭಾವಂತ ನಾಯಕ ನಟ ಶ್ರೀ ಎಸ್. ಗಂಗಾಧರ್ ಅವರು.
ತುಮಕೂರಿನಲ್ಲಿ ೧೯೩೮ರಲ್ಲಿ ಜನಿಸಿದ ಶ್ರೀ ಗಂಗಾಧರ್ ಅವರು ಎಸ್.ಎಸ್.ಎಲ್.ಸಿ. ಮುಗಿಸಿ ಕೈಗಾರಿಕಾ ತರಬೇತಿ ಪಡೆದು ಎಚ್.ಎ.ಎಲ್.ನಲ್ಲಿ ವೃತ್ತಿ ಆರಂಭಿಸಿದರು. ರಂಗಭೂಮಿಯಲ್ಲಿ ಆಸಕ್ತಿ ತಳೆದು ಹವ್ಯಾಸಿ ನಾಟಕರಂಗದಲ್ಲಿ ಅಭಿನಯಿಸಲು ಆರಂಭಿಸಿದ ಶ್ರೀಯುತರು ಎಚ್ಚಮ ನಾಯಕ, ದೇವದಾಸಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಭಾತ್ ಕಲಾವಿದರು, ಬಷೀರ್ ನಾಟಕಗಳಲ್ಲಿ ಅಭಿನಯಿಸಿದ ಶ್ರೀಯುತರ ಮೊದಲ ಚಲನ ಚಿತ್ರ ಜಿ.ವಿ. ಅಯ್ಯರ್ ನಿರ್ದೇಶನದ ‘ಚೌಕದ ದೀಪ’.
ಗೆಜ್ಜೆಪೂಜೆ, ಶರಪಂಜರ, ಸೀತ, ಸೋತು ಗೆದ್ದವಳು, ಮಣ್ಣಿನ ಮಗಳು, ಕಥಾ ಸಂಗಮ, ನನ್ನ ತಮ್ಮ, ಮುಂತಾದ ಸುಮಾರು ೮೦ ಚಿತ್ರಗಳಲ್ಲಿ ಅಭಿನಯಿಸಿರುವ ಶ್ರೀ ಗಂಗಾಧರ್ ಅವರಿಗೆ ಯಶಸ್ಸು ತಂದು ಕೊಟ್ಟ ಚಿತ್ರಗಳು ಗೆಜ್ಜೆಪೂಜೆ, ಶರಪಂಜರ ಚಿತ್ರಗಳು, ಶ್ರೀಯುತರ ಮನೋಜ್ಞ ಅಭಿನಯದ ಪ್ರತೀಕಗಳು.
ಶರಪಂಜರ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪತಿಗಳಿಂದ ಪುರಸ್ಕಾರ, ಗೆಜ್ಜೆ ಪೂಜೆ ಮತ್ತು ಕಥಾ ಸಂಗಮ ಚಿತ್ರಗಳಲ್ಲಿನ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಪುರಸ್ಕಾರ, ಕೆಂಪೇಗೌಡ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಶ್ರೀಯುತರ ಅಭಿನಯಕ್ಕೆ ಸಂದ ಗೌರವಗಳಾಗಿವೆ.
ಗೆಜ್ಜೆಪೂಜೆ, ಶರಪಂಜರದಂಥ ಚಿತ್ರಗಳಲ್ಲಿನ ವಿಶಿಷ್ಟ ಅಭಿನಯದಿಂದಾಗಿ ಚಿತ್ರರಸಿಕರ ಮನ ಗೆದ್ದಿರುವ ಪ್ರತಿಭಾವಂತ ನಾಯಕ ನಟರು ಶ್ರೀ ಗಂಗಾಧರ್ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿದ್ದಲಿಂಗಯ್ಯ

ಕನ್ನಡ ಚಲನಚಿತ್ರ ರಂಗದಲ್ಲಿ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಸಿಕರ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಿರುವ ಪ್ರತಿಭಾವಂತ ಚಲನಚಿತ್ರ ನಿರ್ದೇಶಕರು ಶ್ರೀ ಸಿದ್ದಲಿಂಗಯ್ಯ ಅವರು.
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ, ತರೂರು ಗ್ರಾಮದ ಕೃಷಿಕ ಕುಟುಂಬದಲ್ಲಿ ೧೯೩೬ ರಲ್ಲಿ ಜನಿಸಿದ ಶ್ರೀ ಸಿದ್ದಲಿಂಗಯ್ಯನವರಿಗೆ ಎಳವೆಯಲ್ಲಿಯೇ ಅಭಿನಯದಲ್ಲಿ ಆಸಕ್ತಿ, ತಾತ, ಸೋದರಮಾವ ಹಳ್ಳಿಯ ಪ್ರತಿಷ್ಠಿತ ಕಲಾವಿದರಾಗಿದ್ದುದು ಈ ಆಸೆಗೆ ಸ್ಫೂರ್ತಿ.
ಮಾಧ್ಯಮಿಕ ಶಿಕ್ಷಣದ ನಂತರ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಡಚಣೆಯಾದಾಗ ಕಲಾವಿದನಾಗಬೇಕೆಂಬ ಹೆಬ್ಬಯಕೆಯಿಂದ ಮೈಸೂರಿಗೆ ಪ್ರಯಾಣ. ಫೋರ್‌ಬಾಯ್ ಆಗಿ ನವಜ್ಯೋತಿ ಸ್ಟುಡಿಯೋದಲ್ಲಿ ವೃತ್ತಿ ಆರಂಭಿಸಿ, ಲೈಟ್‌ಬಾಯ್ ಆಗಿ, ನಿರ್ದೇಶಕ ಶಂಕರ್‌ಸಿಂಗ್‌ ಅವರಿಗೆ ಸಹಾಯಕ ನಿರ್ದೆಶಕರಾಗಿ ಹಂತಹಂತವಾಗಿ ವೃತ್ತಿಯಲ್ಲಿ ಬೆಳೆದ ಶ್ರೀಯುತರು ೧೯೫೬ರಲ್ಲಿ ಮದ್ರಾಸಿಗೆ ತೆರಳಿ ಬಿ. ವಿಠಲಾಚಾರ್ಯರಲ್ಲಿ ಸಹಾಯಕರಾಗಿ ಅವರ ಸಂಸ್ಥೆಯ ೧೫ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಲ್ಲದೆ ವೈ. ಆರ್. ಸ್ವಾಮಿ, ಕೆ.ಎಸ್.ಎಲ್. ಸ್ವಾಮಿ ಮೊದಲಾದ ನಿರ್ದೆಶಕರೊಂದಿಗೆ ಕೆಲಸ ಮಾಡಿ ಅನುಭವ ಗಳಿಸಿದರು.
೧೯೬೯ರಲ್ಲಿ ನಿರ್ದೇಶಿಸಿದ ಚಲನಚಿತ್ರ ‘ಮೇಯರ್ ಮುತ್ತಣ್ಣ’ ದಿಂದ ಭಾಗ್ಯದಯ. ಅಲ್ಲಿಂದ ಎರಡು ವರ್ಷಕ್ಕೂ ಹೆಚ್ಚು ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ ಬಂಗಾರದ ಮನುಷ್ಯ ನಿರ್ದೇಶನ ಶ್ರೀಯುತರಿಗೆ ಯಶಸ್ಸು ತಂದುಕೊಟ್ಟಿತು. ಕರ್ನಾಟಕ ಸರ್ಕಾರದಿಂದ ಈ ಚಿತ್ರಕ್ಕೆ ಚಿತ್ರನಾಟಕ ಹಾಗೂ ದ್ವಿತೀಯ ಚಿತ್ರ ಪ್ರಶಸ್ತಿ, ತಾಂತ್ರಿಕ ಪರಿಣತಿಯೆಂಬ ಹೆಗ್ಗಳಿಕೆ ಗಳಿಸಿಕೊಟ್ಟ ದೃಶ್ಯ ಹೊಂದಿರುವ ಭೂತಯ್ಯನ ಮಗ ಅಯ್ಯು ಚಿತ್ರಕ್ಕೆ ಸಂಭಾಷಣೆ, ನಿರ್ದೇಶನ, ಚಿತ್ರನಾಟಕ, ಪ್ರಥಮ ಚಿತ್ರದ ಪ್ರಶಸ್ತಿ, ಈ ಚಿತ್ರವು ತಮಿಳು, ತೆಲುಗು, ಹಿಂದಿ ಭಾಷೆಗಳಿಗೆ ಅನುವಾದಗೊಂಡಿತು. ಅಲ್ಲದೆ ೧೯೯೩ -೯೪ ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಶ್ರೀಯುತರಿಗೆ ಸಂದಿದೆ. ದೂರದ ಬೆಟ್ಟ, ತಾಯಿ ದೇವರು, ನ್ಯಾಯವೇ ದೇವರು, ನಮ್ಮ ಸಂಸಾರ, ಹೇಮಾವತಿ ಬಾಳು ಬೆಳಗಿತು ಮೊದಲಾದವು ಶ್ರೀಯುತರ ಪ್ರಮುಖ ಚಿತ್ರಗಳು, ಕಲಾವಿದರ ಸಾಮರ್ಥ್ಯ ಗುರುತಿಸಿ ಸಮರ್ಥವಾಗಿ ಬಳಸಿಕೊಂಡು ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ಹೊಸ ಕಲಾವಿದ, ತಂತ್ರಜ್ಞರನ್ನು ಪರಿಚಯಿಸಿದ ಅವಿಸ್ಮರಣೀಯ ಚಿತ್ರಗಳನ್ನು ನಿರ್ದೇಶಿಸಿದ ಪ್ರತಿಭಾವಂತ ನಿರ್ದೇಶಕರು ಶ್ರೀ ಸಿದ್ಧಲಿಂಗಯ್ಯ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ ಎಸ್ ರಂಗ

ಕನ್ನಡ ಚಿತ್ರರಂಗ ಅಂಬೆಗಾಲಿಡುತ್ತಿದ್ದ ದಿನಗಳಲ್ಲಿ ಚಲನಚಿತ್ರ ಸ್ಟುಡಿಯೋವನ್ನು ಸ್ಥಾಪಿಸಿ, ಹತ್ತಾರು ಕನ್ನಡ ಚಿತ್ರಗಳ ನಿರ್ಮಾಪಕರಾಗಿ, ನಿರ್ದೇಶಕರಾಗಿ ಚಿತ್ರೋದ್ಯಮಕ್ಕೆ ಹೊಸ ಹುರುಪು ಮೂಡಿಸಿದ ಸಾಹಸಿ ಶ್ರೀ ಬಿ ಎಸ್ ರಂಗ ಅವರು. ಛಾಯಾಗ್ರಾಹಕರಾಗಿ ಮುಂಬೈಯಲ್ಲಿ ತರಬೇತಿ, ಅನಂತರ ಜೆಮಿನಿ ಸ್ಟುಡಿಯೋಕ್ಕೆ ಪ್ರವೇಶ, ಫಲವಾಗಿ ಚಿತ್ರರಂಗದ ಎಲ್ಲ ಆಯಾಮಗಳ ನಿಕಟ ಪರಿಚಯ. ಅಂದಿನ ಕಾಲದಲ್ಲಿ ಜಯಭೇರಿ ಬಾರಿಸಿದ ‘ಚಂದ್ರಲೇಖ’ದಂತಹ ಅನೇಕ ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದ ಹಿರಿಮೆ ಶ್ರೀ ಬಿ ಎಸ್ ರಂಗ ಅವರದು.

ಕನ್ನಡ, ತೆಲುಗು, ತಮಿಳು, ಭಾಷೆಗಳಲ್ಲಿ ೭೦ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.’ಅಮರಶಿಲ್ಪಿ ಜಕಣಾಚಾರಿ’ ಎಂಬ ಕನ್ನಡ ಪ್ರಥಮ ವರ್ಣಚಿತ್ರ ತಯಾರಿಸಿದ ಕೀರ್ತಿ ಶ್ರೀ ರಂಗ ಅವರದು. ಅಲ್ಲದೆ, ಭಲೇ ಬಸವ, ಮಿ|| ರಾಜ್‌ಕುಮಾರ್, ಮಹಿಷಾಸುರ ಮರ್ಧಿನಿ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿ ಪ್ರಖ್ಯಾತರಾಗಿದ್ದಾರೆ.

೧೯೫೦ರ ದಶಕ ಚಲನಚಿತ್ರೋದ್ಯಮದ ಚಟುವಟಿಕೆಗಳೆಲ್ಲವೂ ಮದ್ರಾಸಿನಲ್ಲಿ ಕೇಂದ್ರೀಕೃತವಾಗಿದ್ದ ಕಾಲ. ಅಂಥ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ ಧೀರ ಶ್ರೀ ರಂಗ ಅವರು. ಏಕವ್ಯಕ್ತಿಯ ಈ ಸಾಹಸಕ್ಕೆ ಸೂಕ್ತ ಬೆಂಬಲ ಸಿಗದೇ ಅನಿವಾರ್ಯವಾಗಿ ಮದ್ರಾಸಿಗೆ ಹೋಗಬೇಕಾಗಿ ಬಂದ ವ್ಯಥೆಯ ಕತೆ ಇವರ ಪಾಲಿಗೆ, ಮದ್ರಾಸಿನಲ್ಲಿ ವಿಕ್ರಂ ಸ್ಟುಡಿಯೋವನ್ನು ಸ್ಥಾಪಿಸಿ, ಕನ್ನಡ ಚಿತ್ರಗಳ ಚಟುವಟಿಕೆಗಳಿಗೆ ಸೂಕ್ತ ವಾತಾವರಣವನ್ನು ಕಲ್ಪಿಸಿ, ಕನ್ನಡದ ಏಳೆಗೆ ವಿಶೇಷವಾಗಿ ಶ್ರಮಿಸಿದ ಶ್ರೇಯಸ್ಸು ಶ್ರೀ ಬಿ ಎಸ್ ರಂಗ ಅವರಿಗೆ ಸಲ್ಲುತ್ತದೆ. ಶ್ರೀಯುತರು ೧೯೮೮-೮೯ರಲ್ಲಿ ರಾಜ್ಯ ಸರ್ಕಾರವು ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಗೌರವಿಸಿದೆಯಲ್ಲದೆ, ಅಖಿಲ ಭಾರತ ಸಿನಿಮಾ ತಂತ್ರಜ್ಞರ ಸಂಘವು ಸ್ಮಾಲ್ ಆಫ್ ಆನರ್ ಪ್ರಶಸ್ತಿ ನೀಡಿ ಗೌರವಿಸಿದೆ.

G

Categories
ಚಲನಚಿತ್ರ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಜಯಮಾಲಾ

ಚಲನಚಿತ್ರರಂಗದ ಕ್ರಿಯಾಶೀಲ ವ್ಯಕ್ತಿತ್ವದ ಸುಪ್ರಸಿದ್ದ ಕಲಾವಿದೆ ಶ್ರೀಮತಿ ಜಯಮಾಲಾ ಅವರು.

ಮಂಗಳೂರಿನಲ್ಲಿ ೧೯೫೯ರಲ್ಲಿ ಜನನ. ತಮ್ಮ ೧೩ನೆಯ ವಯಸ್ಸಿನಲ್ಲೇ ತುಳು ಚಿತ್ರ ‘ಕಾಸ್‌ದಾಯೆಕಂಡನೆ’ ಮೂಲಕ ಚಿತ್ರರಂಗ ಪ್ರವೇಶ ಹಾಗೂ ಅದೇ ಪ್ರಥಮ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ, ದಕ್ಷಿಣ ಭಾರತದ ಐದು ಭಾಷೆಗಳು ಸೇರಿದಂತೆ ಒಟ್ಟು ೭೫ ಚಲನಚಿತ್ರಗಳಲ್ಲಿ ಅಭಿನಯ, ಚಲನಚಿತ್ರ ನಿರ್ಮಾಣಕ್ಕೂ ಪ್ರವೇಶ, ನಾಲ್ಕು ಚಿತ್ರಗಳ ನಿರ್ಮಾಣ. ಇವರು ನಿರ್ಮಿಸಿದ ‘ತಾಯಿ ಸಾಹೇಬ’ಕ್ಕೆ ಸ್ವರ್ಣಕಮಲ ಸೇರಿದಂತೆ ಒಟ್ಟು ೨೨ ಪ್ರಶಸ್ತಿಗಳ ದಾಖಲೆ.

ಶ್ರೀಮತಿ ಜಯಮಾಲಾರ ಕಾರಶೀಲತೆಗಾಗಿ ಇವರನ್ನು ಹುಡುಕಿ ಬಂದ ಪದವಿಗಳು ಹಲವಾರು. ಕರ್ನಾಟಕ ಚಲನಚಿತ್ರ ಮಂಡಳಿಯ ಗೌರವ ಖಜಾಂಚಿ ಹಾಗೂ ಉಪಾಧ್ಯಕ್ಷೆ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷೆ. ಮೈಸೂರಿನ ಶಕ್ತಿಧಾಮ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಭಾರತೀಯ ಪನೋರಮಾ – ೨೦೦೦ದ ಆಯ್ಕೆ ಸಮಿತಿಯ ಸದಸ್ಯೆ. ಕರ್ನಾಟಕ ರಾಜ್ಯ ಫಿಲಂ ಪ್ರಶಸ್ತಿಗಳ ಆಯ್ಕೆ ಸಮಿತಿ ಅಧ್ಯಕ್ಷೆ ಮುಂತಾದವು. ಶ್ರೀಮತಿ ಜಯಮಾಲಾ ಅವರನ್ನು ಅರಸಿ ಬಂದ ಪ್ರಶಸ್ತಿ ಗೌರವಗಳು ಹಲವು. ಅತ್ಯುತ್ತಮ ನಟಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸ್ವರ್ಣಕಮಲ ಪ್ರಶಸ್ತಿ ಫಿಲಂಫೇರ್ ಪ್ರಶಸ್ತಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮುಂತಾದವು. ಕನ್ನಡ, ತಮಿಳು, ತೆಲುಗು, ತುಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಬಲ್ಲ ಶ್ರೀಮತಿ ಜಯಮಾಲಾ ಅವರಿಗೆ ತೋಟಗಾರಿಕೆ, ಒಳಾಂಗಣ ಅಲಂಕರಣ, ಅಧ್ಯಯನ ಮುಂತಾದವುಗಳು ಆಸಕ್ತಿಯ ವಿಷಯಗಳು.

ಅಂತರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ರಾಷ್ಟ್ರೀಯ ಐಕ್ಯತಾ ಪ್ರಶಸ್ತಿಗಳನ್ನು ಗಳಿಸಿರುವ ನಾಡಿನ ಹೆಮ್ಮೆಯ ಕಲಾವಿದೆ ಶ್ರೀಮತಿ ಜಯಮಾಲಾ ಅವರು.