Categories
ಚಿತ್ರಕಲೆ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವೆಂಕಣ್ಣ ಚಿತ್ರಗಾರ

ಗಂಗಾವತಿಯ ಶ್ರೀಯುತ ವೆಂಕಣ್ಣ ಚಿತ್ರಗಾರ ಅವರು ಸುಮಾರು ಐವತ್ತು ವರ್ಷಗಳಿಂದ ರಥ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸುಮಾರು ೧೦೦ ಕ್ಕೂ ಅಧಿಕ ರಥಗಳು ಇವರ ಕೈಯ್ಯಲ್ಲಿ ಅರಳಿವೆ. ಇವರು ನಿರ್ಮಿಸಿರುವ ರಥಗಳು ವಿಜಯನಗರ ಶೈಲಿಯ ವಾಸ್ತುಪ್ರಕಾರ ಹೊಂದಿದ್ದು, ಕೇವಲ ಕೊಪ್ಪಳ ಜಿಲ್ಲೆಗೆ ಮಾತ್ರ ಸೀಮಿತವಾಗದೆ ನೆರೆಯ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಕಾಣಬಹುದು.
ಪರಿಸರಸ್ನೇಹಿ ಸುಂದರವಾದ ಮಣ್ಣಿನ ಮೂರ್ತಿಗಳನ್ನೂ ಸಹ ಮಾಡುವಲ್ಲಿ ಪ್ರಸಿದ್ಧಿ ಹೊಂದಿರುವ ಇವರು ಅನೇಕ ಗ್ರಾಮದೇವತೆಗಳು, ಪಲ್ಲಕ್ಕಿ, ಪೂಜಾ ಮಂಟಪ, ದೇವರ ತೊಟ್ಟಿಲು, ಛತ್ರಿ, ಸಿಂಹಾಸನ ಇತ್ಯಾದಿ ಕರಕುಶಲ ಕೆಲಸಗಳನ್ನು ಮಾಡುತ್ತಾರೆ.
ಅನೇಕ ಸಂಘ ಸಂಸ್ಥೆಗಳು ಇವರ ಕಲಾನೈಪುಣ್ಯತೆಯನ್ನು ಗುರುತಿಸಿ, ಪ್ರಶಸ್ತಿ ಸನ್ಮಾನಗಳನ್ನು ನೀಡಿ ಗೌರವಿಸಿದೆ. ‘ರಥರಚನ ಕೋವಿದ’ ಹಾಗೂ ‘ಕದಂಬ’ಪ್ರಶಸ್ತಿ ಇವರದ್ದಾಗಿವೆ.

Categories
ಚಿತ್ರಕಲೆ ರಾಜ್ಯೋತ್ಸವ 2020

ಎಂ.ಜಿ. ವಾಚೀದ ಮಠ

ದೃಶ್ಯಕಲೆಯನ್ನೇ ಬದುಕು-ಸಾಧನೆಯ ನೆಲೆಯಾಗಿಸಿಕೊಂಡ ಎಂ.ಜಿ.ವಾಚೀದ ಮಠ ನಾಡು ಕಂಡ ವಿಶಿಷ್ಟ ರೇಖಾಚಿತ್ರ ಕಲಾವಿದ, ಕಲಾಶಿಕ್ಷಕ ಮತ್ತು ಕಲಾಗುರು.
ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಕೊಗನೂರ ಗ್ರಾಮದ ಎಂ.ಜಿ.ವಾಚೀದ ಮಠ ಬಾಲ್ಯದಲ್ಲೇ ಚಿತ್ರಕಲೆಯೆಡೆಗೆ ಆಕರ್ಷಿತಗೊಂಡವರು. ಮುಂಬಯಿನ ಡ್ರಾಯಿಂಗ್ ಶಿಕ್ಷಕರ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಬಹುಮಾನ ಪಡೆದವರು. ವೃತ್ತಿ-ಪ್ರವೃತ್ತಿ ಎರಡೂ ಕಲೆಯೇ. ಕಲಾಶಿಕ್ಷಕರಾಗಿ ಮುಂಬಯಿ, ಸವದತ್ತಿ, ಧಾರವಾಡದಲ್ಲಿ ೩೭ ವರ್ಷಗಳ ಸುದೀರ್ಘ ಸೇವೆ. ವಿದ್ಯಾರ್ಥಿಗಳ ನೆಚ್ಚಿನ ಕಲಾಗುರು, ಸನ್ನಿವೇಶಕ್ಕನುಗುಣವಾಗಿ ಕೃತಿ ರಚಿಸುವ ವಿಶಿಷ್ಟ ಕಲೆಗಾರಿಕೆ, ಸರ್ಕಾರಿ ಪಠ್ಯಪುಸ್ತಕಗಳಿಗೆ ದಶಕಗಳ ಕಾಲ ಚಿತ್ರಗಳನ್ನು ರಚಿಸಿದ ಹೆಮ್ಮೆಯ ಕಲಾವಿದ. ಸಾವಿರಾರು ರೇಖಾಚಿತ್ರಗಳು, ಸಂಯೋಜನೆ ಮತ್ತು ಭಾವಚಿತ್ರಗಳನ್ನು ಕಣ್ಣಿಗೆ ಕಣ್ಣುವಂತೆ ರಚಿಸಿದ ಹಿರಿಮೆ. ಮಕ್ಕಳಿಗೆ ತರಬೇತಿ ನೀಡಿ ಅವರು ರಚಿಸಿದ ಕಲಾಕೃತಿಗಳನ್ನು ಸಭೆ-ಸಮಾರಂಭಗಳಲ್ಲಿ ಪ್ರದರ್ಶಿಸಿ ಕಲಾವಿದರ ರೂಪಿಸಿದ ಮಾರ್ಗದರ್ಶಿ, ೮೬ರ ಹರೆಯದಲ್ಲೂ ರೇಖೆಗಳ ಜೊತೆಗೆ ಒಡನಾಡುವ ಕಲಾಕಾರರು.

Categories
ಚಿತ್ರಕಲೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಜಿ.ಎಲ್.ಎನ್.ಸಿಂಹ

ಮೈಸೂರಿನ ಕಾವಾ ಚಿತ್ರಕಲಾ ಶಾಲೆಯಲ್ಲಿ ಕಲಿತ ಜಿ.ಎಲ್.ಎನ್.ಸಿಂಹ ಅವರು ಭಾರತೀಯ ಪೌರಾಣಿಕ ಕಥಾಪ್ರಸಂಗಗಳನ್ನು ಹಾಗೂ ವೇದ ಸೂಕ್ತಗಳನ್ನು ಅನುಸರಿಸಿ ಹಲವಾರು ಸುಂದರ ಮತ್ತು ಅರ್ಥಪೂರ್ಣ ಚಿತ್ರಗಳನ್ನು ರಚಿಸಿದ್ದಾರೆ.

ಭಾರತೀಯ ಕಲಾಲೋಕದಲ್ಲಿ ಧಾರ್ಮಿಕ ಹಿನ್ನೆಲೆಯ ಸರಣಿ ಚಿತ್ರಗಳನ್ನು ನೀಡಿರುವ ಸಿಂಹ ಅವರು ಸ್ತೋತ್ರಗಳನ್ನು ಅನುಕರಿಸಿ ಚಿತ್ರಗಳನ್ನು ರಚಿಸುವ ಪ್ರಯತ್ನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಭಾರತೀಯ ಮಹಾಕಾವ್ಯಗಳ ಆಂತರ್ಯವನ್ನು ಕುಂಚದಲ್ಲಿ ಸಮರ್ಥವಾಗಿ ಬಿಂಬಿಸುವ ಕಲಾವಿದರಲ್ಲಿ ಜಿ.ಎಲ್.ಎನ್.ಸಿಂಹ ಅವರು ಅಪೂರ್ವ ಸಾಧನೆಗೈದಿದ್ದಾರೆ.

Categories
ಚಿತ್ರಕಲೆ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಣ್ಣರಂಗಪ್ಪ ಚಿತ್ರಗಾರ್

ನಶಿಸುತ್ತಿರುವ ಕಿನ್ನಾಳ ಕಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಹಿರಿಯ ಕಲಾಚೇತನ ಸಣ್ಣರಂಗಪ್ಪ ಚಿತ್ರಗಾರ, ಕಲೆಯನ್ನೇ ಬದುಕಾಗಿಸಿಕೊಂಡ ವಿರಳ ಕಲಾವಿದರು. ಸಾಂಪ್ರದಾಯಿಕ ಮರದ ಕಲೆಯಾದ ಕಿನ್ನಾಳ ಕಲೆ ಬಲು ಪುರಾತನವಾದುದು. ಕಾಲಚಕ್ರದೊಟ್ಟಿಗೆ ನಶಿಸುತ್ತಿರುವ ಈ ಕಲಾಸಂತತಿಯ ದಿವ್ಯಕೊಂಡಿಯಂತಿರುವ ಸಣ್ಣರಂಗಪ್ಪ ಚಿತ್ರಗಾರ ಕೊಪ್ಪಳ ಜಿಲ್ಲೆಯ ದೇಸೀ ಪ್ರತಿಭೆ. ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ಹುಟ್ಟೂರು. ಇಡೀ ಊರಿಗೆ ಊರೇ ತಿನ್ನಾಳಕಲೆಗೆ ಅರ್ಪಿತಗೊಂಡಿರುವುದು ವಿಶೇಷ. ತಲೆತಲಾಂತರದಿಂದ ಕಿನ್ನಾಳ ಕಲೆಯೆ ಕುಲಕಸುಬು. ಸಣ್ಣರಂಗಪ್ಪಗೆ ಅಪ್ಪನೇ ಕಲಾಗುರು. ಬದುಕಿಗಾಗಿ ಕಲಿತ ಕಲೆಯಿಂದಲೇ ಹೊಟ್ಟೆಪಾಡು. ಕಿನ್ನಾಳ ಆಟಿಕೆಗಳು ಮತ್ತು ಧಾರ್ಮಿಕ ವಿಗ್ರಹಗಳನ್ನು ತಯಾರಿಸುವುದೇ ನಿತ್ಯದ ಕಾಯಕ, ತರಹೇವಾರಿ ವಸ್ತುಗಳನ್ನು ತಯಾರಿಸಿ ಕಣ್ಣಿಗೆ ಹಬ್ಬವೆಂಬಂತೆ ತೋರ್ಗಾಣಿಸುವಲ್ಲಿ ಸಣ್ಣರಂಗಪ್ಪ ಎತ್ತಿದ ಕೈ. ಈ ಕಲಾಕಾರನ ಮೋಡಿಗೆ ತಲೆದೂಗದವರೇ ಇಲ್ಲ. ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ದಶಕಗಳಿಂದಲೂ ಕಿನ್ನಾಳ ಕಲೆಯಲ್ಲಿ ಅನವರತ ನಿರತದ ಮಹತ್ಸಾಧನೆ. ಈ ನಿಸ್ಪೃಹ ಕಲಾಸೇವೆಗೆ ಸಂದ ಗೌರವಗಳು-ಪ್ರಶಸ್ತಿಗಳು ಬಲು ಅಲ್ಪವೇ. ಸದ್ಯ ನೇತ್ರದೋಷದಿಂದ ಆಟಿಕೆ ತಯಾರಿಸಲಾಗದ ಸಂಕಟದಲ್ಲಿ ಕಾಲಕಳೆಯುತ್ತಿರುವ, ಕಣ್ಣಿಗಿಂತಲೂ ಕಿನ್ನಾಳಕಲೆ ದೀರ್ಘಕಾಲ ಬಾಳಲೆಂಬುದೇ ಹಾರೈಸುವ ಸಣ್ಣರಂಗಪ್ಪ ಕಲೆಗೆ ಸಮರ್ಪಿತಗೊಂಡ ಜೀವಿ.

Categories
ಚಿತ್ರಕಲೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಮೋಹನ್ ಸಿತನೂ‌ರ್‌

ಕರ್ನಾಟಕದ ಚಿತ್ರಕಲಾ ವಲಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದವರು ಮೋಹನ್ ಹೆಚ್.ಸಿತನೂ‌. ಗ್ರಾಫಿಕ್ ಕಲೆಯ ನಿಷ್ಣಾತ ಕಲಾವಿದರು. ಕುಂಚದ ಸಖ್ಯದಿಂದ ಅರಳಿ ನಳನಳಿಸಿದ ಪ್ರತಿಭಾಶಾಲಿಗಳು.
ಗುಲ್ಬರ್ಗ ಜಿಲ್ಲೆಯಲ್ಲಿ ೧೯೫೫ರ ನವೆಂಬರ್ ೧೯ರಂದು ಜನಿಸಿದ ಮೋಹನ್ ಹೆಚ್.ಸಿತನೂ‌ ಕಲಾಶಿಕ್ಷಕರು. ಗುಲ್ಬರ್ಗಾದ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ದಶಕಕ್ಕೂ ಹೆಚ್ಚು ಕಾಲ ಹೊಸ ತಲೆಮಾರಿಗೆ ಕುಂಚ ಕಲೆಯ ಕಲಿಸಿದವರು. ಗ್ರಾಫಿಕ್ ಕಲೆಯಲ್ಲಿ ವಿಶೇಷ ಅಧ್ಯಯನ ಮೋಹನ್ ಅವರ ಹೆಗ್ಗಳಿಕೆ. ರಾಜ್ಯ- ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕಲಾಶಿಬಿರಗಳಲ್ಲಿ ಕಲಾಕೃತಿಗಳ ಪ್ರದರ್ಶನ, ಅಪಾರ ಮೆಚ್ಚುಗೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿಯೂ ಅನುಪಮ ಸೇವೆ ಸಲ್ಲಿಸಿದವರು. ಬೆಂಗಳೂರು, ಮುಂಬಯಿ, ದೆಹಲಿ, ಚೆನ್ನೈ, ಭೂಪಾಲ್, ಜೈಪುರ ಹಾಗೂ ವಿದೇಶಿಯ ಕಲಾಗ್ಯಾಲರಿಯಲ್ಲಿ ಮೋಹನ್ ಅವರ ಕಲಾಕೃತಿಗಳು ಸಂಗ್ರಹವಾಗಿರುವುದು ವಿಶೇಷ ಸಾಧನೆ. ಕಲಾರಚನೆಯಲ್ಲಿ ಅನವರತ ನಿರತರು, ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಕಲಾಧ್ಯಾನಿ.

Categories
ಚಿತ್ರಕಲೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಯು. ರಮೇಶ್‌ರಾವ್‌

ಕರ್ನಾಟಕದ ಚಿತ್ರಕಲಾ ಪರಂಪರೆಯನ್ನು ಬೆಳಗಿದವರಲ್ಲಿ ಯು.ರಮೇಶ್‌ರಾವ್ ಪ್ರಮುಖರು. ವಿಶಿಷ್ಟ ಒಳನೋಟವುಳ್ಳ ಕಲಾಕೃತಿಗಳ ರಚನೆಯಲ್ಲಿ ಸಿದ್ಧಹಸ್ತರು.
೧೯೪೯ರಲ್ಲಿ ಉಡುಪಿಯಲ್ಲಿ ಜನಿಸಿದ ರಮೇಶ್‌ ರಾವ್ ಬಿ.ಎ ಪದವೀಧರರು. ಚಿತ್ರಕಲೆಯ ಬಗ್ಗೆ ತೀರದ ಮೋಹದಿಂದಾಗಿ ಕಲಾವಿದರಾಗಿ ರೂಪಗೊಂಡವರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಕಲಾಪ್ರದರ್ಶನದಲ್ಲಿ ೮ ಬಾರಿ ಆಯ್ಕೆಯಾದ ಹಿರಿಮೆ.ಮೈಸೂರ್ ಆರ್ಟಕೌನ್ಸಿಲ್ ಸಂಸ್ಥಾಪಕ ಸದಸ್ಯರು. ರಾಜ್ಯ, ರಾಷ್ಟ್ರ ಮಟ್ಟದ ಕಲಾಶಿಬಿರಗಳಲ್ಲಿ ಕಲಾಕೃತಿಗಳ ನೋಡುಗರ ಮನಗೆದ್ದ ಹೆಗ್ಗಳಿಕೆ. ಉಡುಪಿಯಲ್ಲಿ ಎರಡು ಬಾರಿ ಏಕವ್ಯಕ್ತಿ ಕಲಾಪ್ರದರ್ಶನ ಕರ್ನಾಟಕ ಲಲಿತಕಲಾ ಅಕಾಡೆಮಿ, ಸರ್ಕಾರಿ ವಸ್ತುಸಂಗ್ರಹಾಲಯ, ಸಿಂಡಿಕೇಟ್ ಬ್ಯಾಂಕ್ ಹಾಗೂ ರಾಷ್ಟ್ರ-ಅಂತರಾಷ್ಟ್ರೀಯ ಕಲಾ ಗ್ಯಾಲರಿಗಳಲ್ಲಿ ಇವರ ಕಲಾಕೃತಿಗಳು ಸಂಗ್ರಹವಾಗಿರುವುದು ಸಾಧನೆಯ ಪ್ರತೀಕ. ಕಲಾವಿದ, ಕಲಾಶಿಕ್ಷಕ ಹಾಗೂ ಕಲಾಸಂಘಟಕರಾಗಿ ನಾಡಿಗೆ ಅಪೂರ್ವ ಸೇವೆ ಸಲ್ಲಿಸಿದ ರಮೇಶ್ ರಾವ್ ಕರ್ನಾಟಕ ಲಲಿತಕಲಾ ಅಕಾಡೆಮಿಯು ವಾರ್ಷಿಕ ಗೌರವ ಪ್ರಶಸ್ತಿಯೂ ಸೇರಿದಂತೆ ಹತ್ತಾರು ಗೌರವಗಳಿಗೆ ಭಾಜನರಾದ ಕಲಾಚೇತನ.

Categories
ಚಿತ್ರಕಲೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸವರಾಜ ರೇವಣಸಿದ್ದಪ್ಪ ಉಪ್ಪಿನ

ಚಿತ್ರಕಲೆಯನ್ನು ಬದುಕಿನ ಧ್ಯಾನವಾಗಿಸಿಕೊಂಡವರು ಬಸವರಾಜ ರೇವಣಸಿದ್ದಪ್ಪ ಉಪ್ಪಿನ, ಚಿತ್ರಕಲಾ ಶಿಕ್ಷಕ, ಕಲಾವಿದರಾಗಿ ಹೆಜ್ಜೆಗುರುತಿನ ಸಾಧಕರು.
ಕಲಬುರಗಿ ಜಿಲ್ಲೆಯ ನದಿಶಿಣ್ಣೂರಿನಲ್ಲಿ ೧೯೪೫ರ ಜೂನ್ ೧೮ರಂದು ಜನಿಸಿದ ಬಸವರಾಜ ರೇವಣಸಿದ್ದಪ್ಪ ಉಪ್ಪಿನ ಅವರಿಗೆ ಬಾಲ್ಯದಿಂದಲೂ ಕುಂಚ ಮತ್ತು ಬಣ್ಣಗಳೆಡೆಗಿನ ಮೋಹ, ಕಲಬುರಗಿಯ ದಿ ಐಡಿಯಲ್ ಆರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಚಿತ್ರಕಲೆಯಲ್ಲಿ ಡಿಪ್ಲೋಮಾ ಕೋರ್ಸ್ ಕಲಿಕೆ. ಅದೇ ಸಂಸ್ಥೆಯಲ್ಲಿ ಕಲಾಶಿಕ್ಷಕರಾಗಿ ವೃತ್ತಿಬದುಕಿನಾರಂಭ. ಕಲಿಕೆಯ ದಾಹಕ್ಕೆ ನವದೆಹಲಿಯ ಸಿಸಿಆರ್ಟಿಯಲ್ಲಿ ವಿಶೇಷ ಕೋರ್ಸ್ ಹಾಗೂ ಕಲಬುರಗಿ ವಿವಿಯಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ. ೧೯೭೧ರಿಂದ ೨೦೦೩ರವರೆಗೆ ಸರ್ಕಾರಿ ಪ್ರೌಢಶಾಲಾ ಕಲಾಶಿಕ್ಷಕನಾಗಿ ಸೇವೆ. ರೋಹಿತ್ ಕಲಾವೃಂದ ಹಾಗೂ ಕರ್ನಾಟಕ ರೋಹಿತ್ ಕಲಾವೃಂದ ಸಂಸ್ಥೆಯ ಸಂಸ್ಥಾಪಕರು. ಬೋಧನೆಯ ಜೊತೆಜೊತೆಗೆ ಕಲಾಕೃತಿಗಳ ರಚನೆಯಲ್ಲೂ ತೊಡಗಿದ ಅವರು ಕರ್ನಾಟಕ ಮಾತ್ರವಲ್ಲದೆ, ಹೈದರಾಬಾದ್ ಮತ್ತಿತರೆಡೆ ಏಕವ್ಯಕ್ತಿ ಪ್ರದರ್ಶನ, ದಕ್ಷಿಣ ಕೋರಿಯಾ ಸೇರಿ ಹಲವೆಡೆ ಸಮೂಹ ಚಿತ್ರಕಲಾ ಪ್ರದರ್ಶನ ಮಾಡಿದ್ದು ಚಿತ್ರಕಲೆಯ ಕುರಿತು ಹಲವು ಲೇಖನಗಳನ್ನು ಪ್ರಕಟಿಸಿದ್ದಾರಲ್ಲದೆ, ಹತ್ತಾರು ಗೌರವಗಳಿಗೂ ಭಾಜನರು.

Categories
ಚಿತ್ರಕಲೆ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಬಸವರಾಜ್.ಎಲ್.ಜಾನೆ

ಕಲಬುರ್ಗಿಯ ಐಡಿಯಲ್ ಫೈನ್ ಇನ್ಸ್ಟಿಟ್ಯೂಟ್ ಸಂಸ್ಥೆಯಲ್ಲಿ ಸಾಂಪ್ರದಾಯಿಕ ಲಲಿತಕಲಾ ಶಿಕ್ಷಣ ಪಡೆದಿರುವ ಬಸವರಾಜ. ಎಲ್. ಜಾನೆ ಅವರು ಹಲವು ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನವನ್ನು ನೀಡಿದ್ದಾರೆ.
ಹಲವು ಚಿತ್ರಕಲಾ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಬಸವರಾಜ ಎಲ್.ಜಾನೆ ಅವರು ಕಲಾನಿಕೇತನ ಐಡಿಯಲ್ ಫೈನ್ ಆರ್ಟ್ಸ್ ಇನ್ಸ್ಟಿಟ್ಯೂಟ್ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಜಿ.ಮಹಮದ್

ಕಳೆದ ಮೂವತ್ತೈದು ವರ್ಷಗಳಿಂದ ಕಲಾಕಾರರಾಗಿ, ಕಲಾಶಿಕ್ಷಕರಾಗಿ ಅವಿರತವಾಗಿ ದುಡಿಯುತ್ತಿರುವವರು ಬಿ.ಜಿ.ಮಹಮದ್ ಅವರು.
ಉಡುಪಿಯಲ್ಲಿ ೧೯೨೪ರಲ್ಲಿ ಜನನ, ಉಡುಪಿಯ ಮಂಗೇಶರಾಲಿ, ನಾರಾಯಣ ಪದ್ಮಸಾಲಿ ಅವರ ಬಳಿ ಹಲವು ವರ್ಷಗಳ ಕಾಲ ಕಲಾಭ್ಯಾಸ. ಬಳಿಕ ಅವರೇ ಸ್ಥಾಪಿಸಿದ ಬಿಜಿಎಂ ಲಲಿತಕಲಾ ಕಾಲೇಜಿನಲ್ಲಿ ೩೫ ವರ್ಷಗಳಿಂದ ಕಲಾಶಿಕ್ಷಕರಾಗಿ ಸೇವೆ.
ಶ್ರೀಯುತರು ರಚಿಸಿರುವ ಕಲಾಕೃತಿಗಳು ಅನೇಕ ಕಡೆ ಪ್ರದರ್ಶನ ಕಂಡಿವೆ. ಚಿತ್ರಕಲೆಯಲ್ಲಿ ಅವರು ಮಾಡಿರುವ ಕೆಲಸಕ್ಕಾಗಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ೧೯೮೦ರಲ್ಲಿ ಪ್ರಶಸ್ತಿ, ಬಹುಮಾನ ಪುರಸ್ಕೃತರು. ಜತೆಗೆ ಲಲಿತ ಕಲಾ ಅಕಾಡೆಮಿ ಸದಸ್ಯರಾಗಿ ಸೇವೆ.
ಮಂಗಳೂರಿನ ಸೆಂಟ್ರಲ್ ಮತ್ತು ಗ್ರೀನ್ ಸ್ಟುಡಿಯೋದಲ್ಲಿ ಕಲಾವಿದರಾಗಿರುವ ಶ್ರೀ ಬಿ.ಜಿ.ಮಹಮದ್ ಅವರು ಕೊಳಲುಗಾನ ಸಾಧಕರೂ ಹೌದು.

Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಯಶವಂತ ತಿಪ್ಪಾಜಿರಾವ್‌ ಹಿಬಾರೆ

ಬಡತನದ ಬೇಗೆಯಲ್ಲಿ ನೊಂದು ಬೆಂದರೂ ಛಾಯಾಚಿತ್ರ ಲೋಕದಲ್ಲಿ ಅರಳಿದ ಪ್ರತಿಭೆ ಯಶವಂತ ತಿಪ್ಪಾಜಿರಾವ್‌
ಹಿಬಾರೆ ಅವರು.
ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದಲ್ಲಿ ಜನನ. ಕುಂಚಕಲೆ ಮತ್ತು ಛಾಯಾಚಿತ್ರ ಕಲಾ ಪ್ರಕಾರದಲ್ಲಿ ಕೃಷಿ ಮಾಡುತ್ತಿರುವ ಹಿಬಾರೆ ಅಪ್ಪಟ ಗ್ರಾಮೀಣ ಪ್ರತಿಭೆ.
೬೭ ವರ್ಷದ ಹಿಬಾರೆಯವರಿಗೆ ಕುಂಚಕಲೆ ದೈವದತ್ತವಾಗಿ ಒಲಿದು ಬಂದ ಕಲೆ. ಎಳೆವೆಯಿಂದಲೇ ಅದರ ಕಡೆ ಒಲವು ಹೆಚ್ಚು. ಬಾಲ್ಯದಲ್ಲಿ ಅವರ ಆಸೆ-ಆಸಕ್ತಿಗಳನ್ನು ಗಮನಿಸಿ ಮಾರ್ಗದರ್ಶನ ನೀಡುವ ಮೂಲಕ ಪ್ರೋತ್ಸಾಹಿಸಿದವರು ಅವರ ತಂದೆ. ಕನಸುಗಳಿಗೆ ಕುಂಚದಿಂದ ಬಣ್ಣ ತುಂಬಿ ಉತ್ತಮ ಕಲಾಕೃತಿಗಳನ್ನು ರಚಿಸಿ ಹಿರಿಯರಿಂದ ಭೇಷ್ ಎನಿಸಿಕೊಂಡವರು. ತಮ್ಮ ಒಂಬತ್ತನೇ ವಯಸ್ಸಿಗೇ ಉತ್ತಮ ಕಲಾವಿದರಾಗಿ ರೂಪುಗೊಂಡರು.
ಕಳೆದ ೪೨ ವರ್ಷದಿಂದ ಛಾಯಾಗ್ರಾಹಕರಾಗಿಯೂ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಯಶವಂತ ತಿಪ್ಪಾಜಿರಾವ್‌ ಹಿಬಾರೆ ಎಲೆಮರೆಯ ಕಾಯಿಯಂತೆ ನೇಪಥ್ಯದಲ್ಲುಳಿದ ಅಪ್ರತಿಮ ಕಲಾ ಪ್ರತಿಭೆ.

Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ. ಚಂದ್ರನಾಥ ಆಚಾರ್ಯ

ಜಲವರ್ಣ, ತೈಲವರ್ಣ ಮತ್ತು ಇಲ್ಲಸ್ಟ್ರೇಟೆಡ್ ಮಾಧ್ಯಮಗಳಲ್ಲಿ ಸಮಾನ ಪ್ರಭುತ್ವ ಹೊಂದಿರುವ ಕಲಾವಿದ ಕೆ.ಚಂದ್ರನಾಥ
ಆಚಾರ್ಯ ಅವರು.
೧೯೪೯ರಲ್ಲಿ ಪುತ್ತೂರಿನ ಕಲಾವಿದರ ಕುಟುಂಬದಲ್ಲಿ ಜನನ. ಚಂದ್ರನಾಥರಿಗೆ ಅವರ ಅಜ್ಜ ಮಹಾಲಿಂಗಾಚಾರ್ಯರೇ ಕಲಾಜೀವನದ ಮೊದಲ ಗುರು, ಆದರ್ಶ, ಪ್ರೇರಕ ಶಕ್ತಿ, ಖ್ಯಾತ ಕಲಾವಿದ ದಿ.ಕೆ.ಕೆ.ಹೆಬ್ಬಾರ್‌ರವರ ಪ್ರೋತ್ಸಾಹದಿಂದ ಕಲಾಲೋಕ ಪ್ರವೇಶ, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಶಿಷ್ಯ ವೇತನದಿಂದ ಎರಡು ವರ್ಷ ಕಾಲ ‘ಶಾಂತಿ ನಿಕೇತನ’ದಲ್ಲಿ ಗ್ರಾಫಿಕ್ಸ್ ಡಿಪ್ಲೊಮಾ ಅಭ್ಯಾಸ.
ಹಸಿವು, ತೃಷೆ, ಸಂತೋಷಗಳಂತಹ ಸುಪ್ತ ಆಕಾಂಕ್ಷೆಗಳು ಮತ್ತು ಸಾವನ್ನು ಕುರಿತು ಇರುವ ಭಯವನ್ನು ಮನಸ್ಸಿನ ಒಳಹೊಕ್ಕು ನೋಡಿ ಪೇಂಟಿಂಗ್ಸ್ ಮೂಲಕ ಬಿಂಬಿಸುವಲ್ಲಿ ಶ್ರೀಯುತರು ಪರಿಣಿತರು.
ಪ್ರಿಂಟ್‌ಮೇಕಿಂಗ್, ಪುಸ್ತಕಗಳ ರಕ್ಷಾಪುಟ ವಿನ್ಯಾಸದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಆಚಾರ್ಯರು. ಕಲಾತ್ಮಕ ಚಲನಚಿತ್ರಗಳಿಗೆ ಕಲಾನಿರ್ದೇಶನ ನೀಡಿದ ಖ್ಯಾತಿಯೂ ಅವರದು.
ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ನಿಯತಕಾಲಿಕಗಳಲ್ಲಿ ಚಿತ್ರಕಲಾವಿದರಾಗಿ ಸೇವೆ. ಕುಂಚ ಕಲೆಯ ಶ್ರೀಮಂತಿಕೆಯನ್ನು ಪರಿಚಯಿಸಿಕೊಡುವ ಮೂಲಕ ನಿಯತಕಾಲಿಕಗಳಿಗೆ ವಿಭಿನ್ನ ಆಯಾಮ ನೀಡಿದ ಕೀರ್ತಿ ಅವರದು.
ಶ್ರೀಯುತರ ಸಾಧನೆಯನ್ನು ಪರಿಗಣಿಸಿ ಎರಡು ಬಾರಿ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ೨೦೦೪ರಲ್ಲಿ ನಾಡೋಜ ಹಡಪದ್‌ ಪ್ರಶಸ್ತಿ ಹಾಗೂ ಬೇಂದ್ರೆ ಸ್ಮಾರಕ ಸಂಘದಿಂದ ಗೌರವ ಸಂದಿದೆ. ದೇಶ ವಿದೇಶಗಳಲ್ಲಿ ಚಂದ್ರನಾಥ್ ಅವರ ಕಲಾಕೃತಿಗಳು ಪ್ರದರ್ಶನ ಕಂಡಿವೆ.
ಸ್ವಂತ ಕಲ್ಪನೆ, ಪರಿಶ್ರಮ ಮತ್ತು ಕುಶಲತೆಗಳ ಮೂಲಕ ವ್ಯಕ್ತಿತ್ವ ರೂಪಿಸಿಕೊಂಡಿರುವ ಚಂದ್ರನಾಥ ಆಚಾರ್ಯ ಕಿರಿಯ ತಲೆಮಾರಿನ ಕಲಾವಿದರಿಗೆ ಆದರ್ಶಪ್ರಾಯ.

Categories
ಚಿತ್ರಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಪ್ರೊ ವಿ.ಎಂ. ಶೋಲಾಪುರ್‌ಕ‌ರ್‌

ಕಾಷ್ಠಶಿಲ್ಪ ಮತ್ತು ಬಣ್ಣಗಳ ಮೂಲಕ ವಿಶಿಷ್ಟ ಕಲಾಕೃತಿಗಳನ್ನು ರೂಪಿಸುವ ಕಾಷ್ಠ ಚಿತ್ರಕಲಾ ಪ್ರಕಾರದ ಪ್ರಖ್ಯಾತ ಕಲಾವಿದರು ಪ್ರೊ. ವಿ.ಎಂ. ಶೋಲಾಪುರ್‌ಕ‌.
೧೯೩೧ರ ಸೆಪ್ಟೆಂಬರ್‌ನಲ್ಲಿ ಜನನ, ಸದ್ಯ ಮೈಸೂರು ನಿವಾಸಿ, ಮುಂಬಯಿಯ ನೂತನ ಕಲಾ ಮಂದಿರ, ಸರ್ ಜೆ.ಜೆ.ಸ್ಕೂಲ್ ಆಫ್ ಆರ್ಟ್, ಜಿ.ಡಿ. ಆರ್ಟ್ ಸಂಸ್ಥೆಗಳಲ್ಲಿ ಕಲಾ ಶಿಕ್ಷಣ ಅಭ್ಯಾಸ.
ಕಾಷ್ಠಶಿಲ್ಪ ಅವರ ಅಭಿವೃ ಮಾಧ್ಯಮ. ಫ್ರೀ ಪ್ರೆಸ್ ಜನರಲ್, ಟೈಮ್ಸ್ ಆಫ್ ಇಂಡಿಯಾ, ಮುಂಬಯಿಯ ಡೈಲಿ ಪತ್ರಿಕೆಗಳಿಗೆ ಕಲಾ ವಿಮರ್ಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರದು.
ಇಂದು ಅನೇಕ ಕಲಾವಿದರಿಗೆ ಕಲೆಯ ಶಿಕ್ಷಣ ನೀಡುತ್ತಿರುವ ಮೈಸೂರಿನ ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿ ಸ್ಥಾಪಕ ಡೀನ್ ಎಂಬ ಹಿರಿಮೆಯ ಶ್ರೀಯುತರಿಂದ ಕಾಷ್ಠ ಶಿಲ್ಪ ಕಲಾ ಪ್ರಕಾರದಲ್ಲಿ ನಿರಂತರ ಸಾಧನೆ ಸಾಗಿದೆ.
ಬೆಂಗಳೂರು, ಮುಂಬಯಿ, ಕೊಚ್ಚಿನ್, ಗೋವಾ ಮತ್ತಿತರ ಕಡೆ ಆಯಿಲ್ ಮತ್ತು ಟೆರಾ ಕೋಟಾ; ಮರ ಆಧಾರಿತ ಸಂಯೋಜನೆ, ಕೊಚ್ಚಿನ್‌ನಲ್ಲಿ ಮಾರ್‌ಕ್ವೆಂಟ್ರಿ ಪ್ರಕಾರದಲ್ಲಿ ಶೋಲಾಪುರ್‌ಕರ್‌ ಅವರು ತಯಾರಿಸಿದ ಕಲಾಕೃತಿಗಳು ಪ್ರದರ್ಶನ ಕಂಡಿವೆ.
ಪ್ರಕೃತಿ ದತ್ತವಾದ ವಸ್ತುಗಳೇ ಅವರ ಅಭಿವ್ಯಕ್ತಿ ಮಾಧ್ಯಮ. ಸಂಬಂಧಗಳ ರೂಪಾಂತರವನ್ನು ವಿಶಿಷ್ಟ ಸಂಯೋಜನೆಯ ಮೂಲಕ ತಮ್ಮ ಕಲಾಕೃತಿಗಳಲ್ಲಿ ಬಿಂಬಿಸುವ ಕಲಾವಿದ ಶ್ರೀ ಶೋಲಾಪುರ್‌ಕ‌ ಅವರು.

Categories
ಚಿತ್ರಕಲೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಪಿ.ಎಸ್. ಕಡೇಮನಿ

ಗ್ರಾಮೀಣ ಪರಿಸರದ ದೃಶ್ಯಗಳನ್ನು ಚಿತ್ರಿಸುವಲ್ಲಿ ನೈಪುಣ್ಯತೆ ಸಾಧಿಸಿರುವ ಪೊನ್ನಪ್ಪ ಎಸ್.ಕಡೇಮನಿಯವರು ಚಿತ್ರಕಲಾ ಉಪನ್ಯಾಸಕರಾಗಿ ಕೆಲಸ ಮಾಡಿದವರು. ಕಲಾಶಿಕ್ಷಣವನ್ನು ಧಾರವಾಡ, ವಿಜಯಪುರ ಹಾಗೂ ಹಂಪಿಗಳಲ್ಲಿ ಪಡೆದುಕೊಂಡ ಇವರು ಕಲಾಉಪನ್ಯಾಸಕರಾಗಿ ವಿಜಯಪುರದ ಶ್ರೀಸಿದ್ದೇಶ್ವರ ಚಿತ್ರ ಕಲಾ ಮಹಾವಿದ್ಯಾಲಯದಲ್ಲಿ ಕೆಲಸ ಆರಂಭಿಸಿ ಅಲ್ಲಿಯೇ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು.
ಹಳ್ಳಿಗಾಡಿನ ವಾಸ್ತವ ಚಿತ್ರಣವನ್ನು ಜಲವರ್ಣ ಹಾಗೂ ತೈಲವರ್ಣಗಳಲ್ಲಿ ಚಿತ್ರಿಸುವುದನ್ನು ಕರಗತ ಮಾಡಿಕೊಂಡಿರುವ ಇವರು ಅನೇಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಮೈಸೂರು ದಸರಾ ಕಲಾಪ್ರದರ್ಶನದಲ್ಲಿ ಪುರಸ್ಕೃತರಾಗಿರುವ ಪೊನ್ನಪ್ಪ ಅವರು ಭಾವಚಿತ್ರಗಳನ್ನು ರಚಿಸುವಲ್ಲಿ ಬಹುಖ್ಯಾತಿ ಪಡೆದಿದ್ದಾರೆ.

Categories
ಚಿತ್ರಕಲೆ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಕಮಲಾಕ್ಷಿ ಎಂ.ಜೆ.

ಚಿಕ್ಕ ವಯಸ್ಸಿನಿಂದಲೇ ಆಸಕ್ತಿ ಬೆಳೆಸಿಕೊಂಡು ಕಲಾಭ್ಯಾಸ ಮಾಡಿ ಚಿತ್ರಕಲೆಯಲ್ಲಿ ಡಿಪ್ಲೋಮಾ ಪದವಿ, ಬರೋಡಾದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಎಂ.ಜೆ.ಕಮಲಾಕ್ಷಿ ಅವರು ಚಿತ್ರಕಲಾ ಪರಿಷತ್ತಿನ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ.
ಮೈಸೂರು ಸಾಂಪ್ರದಾಯಿಕ ಕಲೆ ತೊಗಲು ಗೊಂಬೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ಹಿರಿಯ ಚಿತ್ರ ಕಲಾವಿದೆ ಕಮಲಾಕ್ಷಿ ಅವರು ಕಲಾಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ, ನಾಡಿನ ಪ್ರಸಿದ್ಧ ಕಲಾ ಕೇಂದ್ರವಾದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ನಾಲ್ಕು ದಶಕಗಳ ಕಾಲ ಕೆಲಸ ಮಾಡಿರುವ ಇವರು ಗೃಹ ವಿಜ್ಞಾನದಲ್ಲಿ ಪದವೀಧರರು.
ಸಾಂಪ್ರದಾಯಿಕ ಕಲೆಯನ್ನು ಸಮಕಾಲೀನ ಕಲೆಯೊಂದಿಗೆ ಮೇಲೈಸುವ ಕೃತಿಗಳನ್ನು ಅನೇಕ ಮಾಧ್ಯಮಗಳಲ್ಲಿ ರಚಿಸಿರುವ ಕಮಲಾಕ್ಷಿ ಅವರು ಶ್ರವಣಬೆಳಗೊಳದ ಜೈನ ಮಠದ ಭಿತ್ತಿ ಚಿತ್ರಗಳ ಪ್ರತಿಕೃತಿಗಳನ್ನು ಮಾಡಿಸುವಲ್ಲಿ ಮೌಲ್ಯಯುತ ಕೆಲಸ ಮಾಡಿದ್ದಾರೆ.