ಹಾವೇರಿ ಜಿಲ್ಲೆ ಹಿರೇಕೇರೂರು ತಾಲ್ಲೂಕಿನ ಶ್ರೀ ಮಹಾರುದ್ರಪ್ಪ ವೀರಪ್ಪ ಇಟಗಿಯವರು ವಂಶಪಾರಂಪರ್ಯವಾಗಿ ಬಂದ ಪುರವಂತಿಕೆ ಮತ್ತು ಸಮಾಳದ ಕಲೆಯನ್ನು ಕಳೆದ ೩೫ ವರ್ಷಗಳಿಂದ ಪ್ರದರ್ಶಿಸಿಕೊಂಡು ಬರುತ್ತಿದ್ದಾರೆ. ತಮ್ಮ ಕಲೆಯನ್ನು ಭಾರತದಾದ್ಯಂತ ಪ್ರದರ್ಶಿಸಿರುವುದಲ್ಲದೇ ದೆಹಲಿಯ ಕೆಂಪುಕೋಟೆಯ ಮುಂದೆ ‘ಭಾರತ ಪರ್ವ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದರ್ಶಿಸಿದ್ದಾರೆ.
Category: ಜಾನಪದ

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಶೆರೆವಾಡಾ ಗ್ರಾಮದವರಾದ ಶ್ರೀ ವೆಂಕಪ್ಪ ಗೋವಿಂದಪ್ಪ ಭಜಂತ್ರಿ, ಕಳೆದ ೫೫ ವರ್ಷಗಳಿಂದ ಶಹನಾಯಿ ವಾದಕರಾಗಿ ಜಾನಪದ ಕಲೆಯನ್ನು ಶ್ರೀಮಂತಗೊಳಿಸಿದವರು. ಸಣ್ಣಾಟ, ದೊಡ್ಡಾಟ, ಕೋಲಾಟ ಹೆಜ್ಜೆಮೇಳಗಳಲ್ಲಿ ಶಹನಾಯಿ ನುಡಿಸಿ ಪ್ರಸಿದ್ಧರಾಗಿದ್ದಾರೆ. ಇದರ ಜೊತೆಗೆ ಕರಡಿ ಮೇಳಗಳನ್ನು ಕಟ್ಟಿಕೊಂಡು ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನೀಡಿ ಹೆಸರು ಗಳಿಸಿದ್ದಾರೆ. ಮೈಸೂರು ದಸರಾ ಉತ್ಸವ, ಮಂಗಳೂರು ದಸರಾ ಕುದ್ರೋಳಿ ಉತ್ಸವಗಳಲ್ಲಿ ಭಾಗಿಯಾಗಿ ಪ್ರದರ್ಶನ ನೀಡಿದ್ದಾರೆ.
ಗುರುಶಿಷ್ಯ ಪರಂಪರೆಯಲ್ಲಿ ತರಬೇತಿಯನ್ನೂ ಸಹ ನೀಡುತ್ತಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇವರ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ‘ನಮ್ಮ ಸಾಧಕರು’ ಪ್ರಶಸ್ತಿ ನೀಡಿದೆ.

ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಬನ್ನಂಜೆ ಬಾಬು ಅಮೀನ್ ಅವರು ಉಡುಪಿಯ ನಿಟ್ಟೂರು ಗ್ರಾಮದವರು. ತುಳುನಾಡಿನ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ದೈವಾರಾಧನೆಗೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿರುತ್ತಾರೆ. ಇವರು ಬರೆದಿರುವ ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥವು ಸಂಗ್ರಹಯೋಗ್ಯವಾಗಿದ್ದು ಕರ್ನಾಟಕ ಯಕ್ಷಗಾನ ಜಾನಪದ ಅಕಾಡೆಮಿಯಿಂದ ಪುರಸ್ಕಾರಗಳು ದೊರೆತಿವೆ.
ತುಳುನಾಡಿನ ಸಂಸ್ಕೃತಿ, ಜಾನಪದ ಆಚರಣೆಗಳು, ದೈವಗಳು ಹಾಗೂ ಸಮಗ್ರ ಕೋಟಿ ಚೆನ್ನಯ್ಯ ಮುಂತಾದ ವಿಷಯಗಳ ಕುರಿತು ೩೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಸಾಹಿತ್ಯ ಸಂಶೋಧನೆ ಪ್ರಶಸ್ತಿ ಲಭ್ಯವಾಗಿದೆ. ದೇಶ ವಿದೇಶಗಳಲ್ಲಿ ಸನ್ಮಾನ ಹಾಗೂ ಗೌರವ ದೊರೆತಿದೆ.
ವಿಜಯಪುರ ಜಿಲ್ಲೆಯ ಶ್ರೀ. ಆರ್. ಬಿ. ನಾಯಕ್ ಬಂಜಾರ ಜಾನಪದ ಗಾಯಕರು. ತಮ್ಮ ಬಂಜಾರ ಜಾನಪದ ಗೀತ ಗಾಯನ ಕಲೆಯಿಂದ ಭಾರತದಾದ್ಯಂತ ಹೆಸರುವಾಸಿಯಾಗಿದ್ದಾರೆ. ಬಂಜಾರ ಜಾನಪದ ಗೀತೆಗಳ ರಚನೆ ಹಾಗೂ ಗಾಯನ ಇವರ ನಿತ್ಯಕಾಯಕ.
ಶ್ರೀ. ಆರ್. ಬಿ. ನಾಯಕ್ ಅವರ ಪ್ರತಿಭೆಗೆ ಹಲವು ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಪುರಸ್ಕಾರಗಳು ದೊರೆತಿವೆ. ಕಳೆದ ನಾಲ್ಕು ದಶಕಗಳಿಂದ ಜಾನಪದ ಗೀತ ಗಾಯನ ನಿರಂತರವಾಗಿ ನಡೆದಿದೆ. ಆಲ್ ಇಂಡಿಯ ರೇಡಿಯೋ ಇವರನ್ನು ಗುರುತಿಸಿ ಲಂಬಾಣಿ ಜಾನಪದ ಗೀತೆಗಳನ್ನು ಹಾಡಲು ಅವಕಾಶ ಮಾಡಿಕೊಟ್ಟಿದೆ.
ಶ್ರೀ.ಆರ್. ಬಿ. ನಾಯಕ್ ಅವರು ಲಂಬಾಣಿ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ೧೯೯೯ ನೇ ಸಾಲಿನ ಜಾನಪದ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ಬಂಜಾರ ಕಲಾರತ್ನ ‘ಸಂತ ಶ್ರೀ ಸೇವಾಲಾಲ್ ಪ್ರಶಸ್ತಿ ೨೦೧೦ ಪ್ರಶಸ್ತಿಗಳು ಲಭ್ಯವಾಗಿವೆ.

ಜನಪದ ಸಾಹಿತ್ಯ, ವಿಮರ್ಶೆ ಹಾಗೂ ಸಂಶೋಧನೆಯಲ್ಲಿ ಸಾಧನೆಗೈದ ಜಾನಪದ ವಿದ್ವಾಂಸರು ಡಾ. ಹಂಪನಹಳ್ಳಿ ತಿಮ್ಮೇಗೌಡ, ವಿದ್ಯಾರ್ಥಿಗಳ ನೆಚ್ಚಿನ ಗುರು, ಅತ್ಯುತ್ತಮ ಸಂಘಟಕರು.
ಹಾಸನ ತಾಲ್ಲೂಕಿನ ಹಂಪನಹಳ್ಳಿಯ ತಿಮ್ಮೇಗೌಡ ೧೯೫೭ರಲ್ಲಿ ಜನನ, ಸ್ನಾತಕೋತ್ತರ ಪದವಿ, ಪಿಎಚ್.ಡಿ.ಯಿಂದ ಸಂಪನ್ನ ವ್ಯಾಸಂಗ. ಹಾಸನದ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ, ಕನ್ನಡ ವಿಭಾಗದ ಮುಖ್ಯಸ್ಥ- ಡೀನ್ ಆಗಿ ಸೇವಾನಿವೃತ್ತಿ. ಜನಪದ ಸಂಶೋಧನೆ-ಬರವಣಿಗೆ-ಸಂಘಟನೆ ಸಾಧನಾಕ್ಷೇತ್ರ ತೊಗಲುಬೊಂಬೆ,
ಕರಪಾಲ, ರಂಗದ ಕುಣಿತ, ಜನಪದಗೀತೆ, ತಮಟೆ ವಾದನ ಮುಂತಾದ ಕಲೆಗಳ ಕಾರ್ಯಾಗಾರ ನಡೆಸಿದ ಸಂಚಾಲಕ. ಗುಣಮುಖ, ಹಿರಿಮೆಯ ಹಾಸನ, ಮನನ, ಕದಿರು, ಹಾಸನ ಜಿಲ್ಲೆಯ ಒಕ್ಕಲಿಗರು ಸೇರಿದಂತೆ ೩೧ ಮೌಲಿಕ ಕೃತಿಗಳ ಕರ್ತೃ. ಹಾಸನ, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜನಪದ ಕಲಾಮೇಳಗಳ ಸಂಘಟಕ, ೧೫೦ಕ್ಕೂ ಲೇಖನಗಳ ಬರಹಗಾರ, ಹಾಸನ ಜಿಲ್ಲಾ ಜಾನಪದ ಘಟಕದ ಅಧ್ಯಕ್ಷರಾಗಿ ಸಾರ್ಥಕ ಸೇವೆ. ಜಾನಪದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಜಾನಪದ ಚೇತನ, ಕುವೆಂಪು ವಿಶ್ವಮಾನವ ಪ್ರಶಸ್ತಿ ಸೇರಿ ಹಲವಾರು ಗೌರವಗಳಿಗೆ ಸತ್ಪಾತ್ರರು.
ಗುರುರಾಜ ಹೊಸಕೋಟೆ

ಹಳ್ಳಿಗಾಡಿನ ಬದುಕನ್ನು ಹಾಡಾಗಿಸಿದ ವಿಶಿಷ್ಟ ಜನಪದ ಪ್ರತಿಭೆ ಗುರುರಾಜ ಹೊಸಕೋಟೆ, ಗಾಯಕ, ಸ್ವರಸಂಯೋಜಕ, ಗೀತರಚನೆಕಾರ, ನಟ, ಚಿತ್ರ ನಿರ್ಮಾಪಕ-ನಿರ್ದೇಶಕರಾಗಿ ಅವರದ್ದು ಬಹುಮುಖಿ ಸಾಧನೆ.
ಗುರುರಾಜ ಹೊಸಕೋಟೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಗಟ್ಟಿ ಪ್ರತಿಭೆ. ಹಾಡುಗಾರಿಕೆಯ ಕಲೆ ಅಪ್ಪ-ಅಮ್ಮನ ಬಳುವಳಿ. ಕಲಿತದ್ದು ಪಿಯುಸಿ, ವೃತ್ತಿ ನೇಕಾರಿಕೆ. ಗಾಯನ, ಗೀತರಚನೆ, ಸ್ವರಸಂಯೋಜನೆ, ನಟನೆಯೇ ಪ್ರವೃತ್ತಿ-ಬದುಕು. ೧೯೭೮ರಲ್ಲಿ ಪ್ರಾರಂಭಿಸಿದ ಹಾಡುಗಾರಿಕೆಗೀಗ ೪೨ ವಸಂತದ ಪಕ್ವತೆ, ತಾಯಿ ಸತ್ತ ಮೇಲೆ ತವರಿಗೆ ಹೋಗಬಾರದವ್ವ, ಕಲಿತ ಹುಡುಗಿ ಕುದುರಿ ನಡಿಗಿಯಂತಹ ಹಾಡುಗಳು ಸದಾಕಾಲಕ್ಕೂ ಜನಪ್ರಿಯ. ೬೦೦೦ ಹಾಡುಗಳ ರಚನೆ, ೧೫ ಸಾವಿರಕ್ಕೂ ಅಧಿಕ ಸಾರ್ವಜನಿಕ ಕಾರ್ಯಕ್ರಮಗಳು, ದೇಶಾದ್ಯಂತ ಕಲಾಸಂಚಾರ, ೧೫೦ ಚಿತ್ರಗಳಲ್ಲಿ ನಟನೆ, ೬೦೪ ಧ್ವನಿಸುರುಳಿಗಳಲ್ಲಿ ಗಾಯನ, ನಾಲ್ಕು ನಾಟಕಗಳ ರಚನೆ, ಸಿನಿಮಾ ನಿರ್ದೇಶನ-ನಿರ್ಮಾಣ. ಎಲ್ಲವೂ ಜನಮೆಚ್ಚಿದ ಕಲಾಸಾಧನೆ. ೫೦ಕ್ಕೂ ಹೆಚ್ಚು ಬಿರುದಾವಳಿಗಳಿಂದ ಭೂಷಿತ ಕಲಾವಂತಿಕೆಯ ಅಚ್ಚಳಿಯದ ಹೆಗ್ಗಳಿಕೆ.

ಜಾನಪದವನ್ನೇ ಬದುಕಿನ ಪಥವಾಗಿಸಿಕೊಂಡು ಅಮೂಲ್ಯ ಸೇವೆ ಸಲ್ಲಿಸಿದ ಸಾಧಕಿ ಸಾವಿತ್ರಿ ಶಿವಪ್ಪ ಪೂಜಾರ, ಮಹಿಳಾಪರ ಹೋರಾಟಗಾರ್ತಿ, ಗೀಗೀಪದ ಹಾಡುಗಾರ್ತಿ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ೧೯೬೧ರಲ್ಲಿ ಜನಿಸಿದ ಸಾವಿತ್ರಿ ಪೂಜಾರ್ ಬಡಕುಟುಂಬದ ಕುಡಿ, ಸಾಮಾಜಿಕವಾಗಿ ಹಿಂದುಳಿದ ಮನೆತನ. ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ. ಈ ಹಂತದಲ್ಲಿ ಸಾವಿತ್ರಿ ಅವರ ಕೈಹಿಡಿದು ನಡೆಸಿದ್ದು ಜಾನಪದ. ಬಾಲ್ಯದಲ್ಲಿ ಆಸಕ್ತಿ ಕೆರಳಿಸಿದ ಗೀಗೀಪದ ಹಾಡುಗಾರಿಕೆಯನ್ನೇ ಹೊಟ್ಟೆಪಾಡಿನ ವೃತ್ತಿಯಾಗಿಸಿಕೊಂಡ ಕಲಾವಿದೆ. ಜಾತ್ರೋತ್ಸವ, ಸಾಂಸ್ಕೃತಿಕ ಉತ್ಸವಗಳಲ್ಲಿ ತತ್ವಪದಗಳ ಗಾಯನದಿಂದ ಕಲಾರಸಿಕರ ಮನಗೆದ್ದ ಸಾವಿತ್ರಿ ಪೂಜಾ ಜಾನಪದ ಕೋಲಲೆಯೆಂದೆ ಜನಜನಿತರು. ಸರ್ಕಾರದ ಉತ್ಸವಗಳು ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ನಿರಂತರ ಕಲಾಪ್ರದರ್ಶನ, ನಾಲ್ಲೂವರೆ ದಶಕಗಳ ಅನನ್ಯ ಕಲಾಸೇವೆ, ದೇವದಾಸಿ ವಿಮೋಚನೆ ಸಂಘದ ಪದಾಧಿಕಾರಿಯಾಗಿ ಮಹಿಳೆಯರ ಮೇಲಿನ ಶೋಷಣೆ ವಿರುದ್ಧ ದನಿ ಎತ್ತಿದವರು. ದೇವದಾಸಿ ಪದ್ಧತಿ ವಿರುದ್ಧ ಸಮರ ಸಾರಿ ಜಾಗೃತಿ ಮೂಡಿಸಿದ ಹೆಗ್ಗಳಿಕೆ ಸಾವಿತ್ರಿ ಪೂಜಾರ ಅವರದ್ದು. ಫಕೀರವ್ವ ಗುಡಿಸಾಗರ ಪ್ರಶಸ್ತಿ, ಬಾಬು ಜಗಜೀವನರಾಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಪಾತ್ರವಾಗಿರುವ ಸಾವಿತ್ರಿ ಪೂಜಾರ ಜಾನಪದ ಲೋಕದ ಮಂದಾರ ಪುಷ್ಪ.

ಹಳ್ಳಿಗಾಡಿನ ಸೊಗಡಿನ ಜನಪದೀಯ ಪರಂಪರೆಯ ಹಾಡುಗಳು ಜನಪದರ ದೈನಂದಿನ ಬದುಕನ್ನು ಕಟ್ಟಿಕೊಡುವಲ್ಲಿ ತನ್ನ ಪ್ರಭಾವ ಬೀರಿದೆ. ಹೀಗೆ ಹಳ್ಳಿಗಾಡಿನ ಸಾಂಸ್ಕೃತಿಕ ಬದುಕಿನ ದನಿಯನ್ನು ಲೋಕಕ್ಕೆ ತಮ್ಮ ಹಾಡುಗಳ ಮೂಲಕ ಪರಿಚಯಿಸುವ ಅಸಂಖ್ಯ ಮೌಖಿಕ ಪರಂಪರೆಯ ಪ್ರತಿನಿಧಿಗಳನ್ನು ದುರ್ಗಮ್ಮ ಕರಡಿಗುಡ್ಡ ಅವರು ಪ್ರಮುಖರು.
ಮದುವೆ ಮುಂಜಿ ಮುಂತಾದ ಶುಭ ಕಾರ್ಯಗಳಲ್ಲಿ ಸೋಬಾನೆ ಪದಗಳನ್ನು ತಮ್ಮ ಮಧುರ ಕಂಠದಿಂದ ಹಾಡುವ ದುರ್ಗಮ್ಮ ಅವರು ಆಸಕ್ತರಿಗೆ ತರಬೇತಿ ನೀಡುತ್ತ ತಮ್ಮೊಡನೆ ಸೊಲ್ಲು ಹಾಡುವ ಪರಂಪರೆಯನ್ನು ಸೋಬಾನೆ ಗಾಯಕಿಯರಾಗಿ ಜನಪದ ಪರಂಪರೆಯನ್ನು ವಿಸ್ತರಿಸುತ್ತಿದ್ದಾರೆ.
ಆಕಾಶವಾಣಿಯಲ್ಲಿಯೂ ತಮ್ಮ ಗಾಯನಸುಧೆ ಹರಿಸಿರುವ ದುರ್ಗಮ್ಮ ಅವರ ಸೇವೆಯನ್ನು ಗುರುತಿಸಿ ರಾಯಚೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಇವರ ಮುಡಿಗೇರಿವೆ.

ಜಾನಪದ ಕ್ಷೇತ್ರದಲ್ಲಿ ಗಾಯಕರಾಗಿ ಹೆಜ್ಜೆಗುರುತು ಮೂಡಿಸಿದ ಗ್ರಾಮೀಣ ಪ್ರತಿಭೆ ಸಹದೇವಪ್ಪ ಈರಪ್ಪ ನಡಿಗೇರ್, ಹೊಸ ತಲೆಮಾರಿಗೆ ಕಲೆ ಕಲಿಸಿದ ಜಾನಪದ ಗುರು, ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ೧೯೫೭ರಲ್ಲಿ ಜನಿಸಿದ ಸಹದೇವಪ್ಪ ಬಡತನದಲ್ಲೆ ಬೆಳೆದವರು. ಎಸ್ಎಸ್ಎಲ್ಸಿವರೆಗಷ್ಟೇ ಓದಿದವರು. ಬಾಲ್ಯದಲ್ಲೇ ಸೆಳೆದ ಜನಪದ ಹಾಡುಗಾರಿಕೆಗೆ ಮನಸೋತವರು, ಹಿರಿಯ ಕಲಾವಿದರಿಂದ ಜಾನಪದದ ಹಲವು ಬಗೆಯ ಗಾಯನದ ಅಭ್ಯಾಸ, ಜಾನಪದ ಗೀತೆ, ಭಾವಗೀತೆ, ಗೀಗೀಪದ, ಲಾವಣಿಪದಗಳನ್ನು ಹಾಡುವುದರಲ್ಲಿ ನಿಷ್ಣಾತರು. ಸಂತ ಶಿಶುನಾಳ ಷರೀಫರ ತತ್ವಪದಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಲ್ಲಿ ವಿಶೇಷ ಪರಿಶ್ರಮ. ಹಳ್ಳಿಹಳ್ಳಿಗೆ ತೆರಳಿ ತತ್ವಪದಗಾಯನ ಉಣಬಡಿಸಿದ ಕಲಾವಿದರು, ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಸಾವಿರಾರು ಮಕ್ಕಳಿಗೆ ಜಾನಪದ ಗಾಯನದ ಕಲೆಗಾರಿಕೆಯನ್ನು ಧಾರೆ ಎರೆದ ಕಲಾಗುರು. ಹಲವು ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರು. ೪೬ ವರ್ಷಗಆಂದಲೂ ಕಲಾಸೇವೆಯಲ್ಲಿ ತೊಡಗಿರುವ ಸಹದೇವಪ್ಪ ಕಲೆಯೇ ಉಸಿರು. ಕಲೆ ಉಳಿಸುವುದೇ ಬದುಕಿನ ಹೆಗ್ಗುರಿ. ಹಲವು ಸಂಘಸಂಸ್ಥೆಗಳಿಂದ ಸನ್ಮಾನಿತರು. ಈಗಲೂ ಕಲಾಕೈಂಕರ್ಯದಲ್ಲಿ ತನ್ನಯವಾಗಿರುವ ಕಲಾನಿಷ್ಠ ದೇಸಿ ಪ್ರತಿಭೆ.

ಜನಪದ ಪರಂಪರೆಯಲ್ಲಿ ತಮ್ಮ ಕುಲದೈವವಾದ ಬೀರಪ್ಪ ದೇವರ ಧಾರ್ಮಿಕ ಕಾರ್ಯಗಳಲ್ಲಿ ಡೊಳ್ಳಿನ ಪದಗಳನ್ನು ಸಾದರ ಪಡಿಸುವ ಮೂಲಕ ತತ್ವಗಳನ್ನು ಪ್ರಸ್ತುತ ಪಡಿಸುವ ಕಲಾವಿದರಲ್ಲಿ ವಿಷ್ಣಪ್ಪ ಗೋವಿಂದಪ್ಪ ಪುರದವರ ಅವರು ಪ್ರಮುಖರು.
ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ತತ್ವಪದಗಳು ಮತ್ತು ಭಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ವಿಷ್ಣಪ್ಪ ಅವರು ತಮ್ಮ ಆಶುಕವಿತ್ವದಿಂದ ತತ್ವಗಳನ್ನು ಕಟ್ಟಿಕೊಡುವಲ್ಲಿ ಸಹ ಜನಪ್ರಿಯರು. ಆಸಕ್ತ ಮಕ್ಕಳಿಗೆ ತತ್ವಪದ ತರಬೇತಿ ಕಾರ್ಯವನ್ನು ನಡೆಸಿಕೊಡುತ್ತ ಬಂದಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ವಿಷ್ಣಪ್ಪ ಗೋವಿಂದಪ್ಪ ಪುರದವರ ಅವರ ಡೊಳ್ಳಿನ ಪದ ಗಾಯನವನ್ನು ವೃತ್ತಿಯಾಗಿಯೂ ಪ್ರವೃತ್ತಿಯಾಗಿಯೂ ರೂಢಿಸಿಕೊಂಡು ಬದುಕಿದವರು. ಇವರ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ.

ಜನಪದ ಪರಂಪರೆಯಲ್ಲಿ ವೀರಗತಿಯ ಪ್ರದರ್ಶನ ನೀಡುವ ಜಾನಪದ ಪ್ರದರ್ಶನ ಕಲೆ ವೀರಗಾಸೆ, ರುದ್ರ ಭಯಂಕರವಾಗಿ ತಮ್ಮ ವೇಷಭೂಷಣ ಮತ್ತು ನೃತ್ಯದ ಮೂಲಕ ಜನರ ಗಮನ ಸೆಳೆದವರು ಮಾನಪ್ಪ ಈರಪ್ಪ ಲೋಹಾರ.
ಕಳೆದ ನಾಲ್ಕೂವರೆ ದಶಕಗಳಿಂದ ವೀರಗಾಸೆಯಲ್ಲಿ ತಮ್ಮ ಪ್ರದರ್ಶನ ನೀಡುತ್ತ ಬಂದಿರುವ ಮಾನಪ್ಪ ಈರಪ್ಪ ಲೋಹಾರ ಅವರು ಬಾಗಲಕೋಟೆ ಜಿಲ್ಲೆಯ ಅನೇಕ ಊರುಗಳಲ್ಲಿ ಮೂರ್ತಿಗಳನ್ನು ಸಿದ್ಧಪಡಿಸಿ ಬಣ್ಣ ಹಚ್ಚುವುದರಲ್ಲಿ ನಿಪುಣರು.
ಮುಧೋಳ, ಜಮಖಂಡಿ ತಾಲೂಕುಗಳಲ್ಲಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮ ವಿಶಿಷ್ಟ ಬಗೆಯ ವೀರಗಾಸೆ ನೃತ್ಯವನ್ನು ಪ್ರದರ್ಶಿಸುತ್ತ ಬಂದಿರುವ ಇವರು ಈ ಜಾನಪದ ನೃತ್ಯ ಪರಂಪರೆಯಲ್ಲಿ ಆಸಕ್ತ ಯುವಕರಿಗೆ ತರಬೇತಿಯನ್ನು ಸಹ ನೀಡುತ್ತ ಬಂದಿದ್ದಾರೆ.
ಹಂಪಿ ಉತ್ಸವ, ನವರಸಪುರ ಮೊದಲಾದ ಸಾಂಸ್ಕೃತಿಕ ಉತ್ಸವಗಳಲ್ಲಿ ಪ್ರದರ್ಶನ ನೀಡುತ್ತ ಬಂದಿರುವ ಮಾನಪ್ಪ ಈರಪ್ಪ ಲೋಹಾರ ಅವರಿಗೆ ಜಿಲ್ಲಾಡಳಿತ ಪ್ರಶಸ್ತಿ ಸೇರಿದಂತೆ ಹಲವು ಸಂಘ- ಸಂಸ್ಥೆಗಳು ಗೌರವಿಸಿವೆ
ತಾಯಮ್ಮ

ಸೋಬಾನೆ ಪದಗಳನ್ನು ತಾಯಿಯ ಮಡಿಲಿನಲ್ಲೇ ಕಲಿತ ತಾಯಮ್ಮ ಅವರು ಬಾಲ್ಯದಿಂದಲೇ ಜನಪದ ಪರಂಪರೆಗೆ ತೆರೆದುಕೊಂಡವರು.
ಸೋಬಾನೆಪದ, ಸಿದ್ಧರಾಮನ ಪದ, ಅಂತರಘಟ್ಟ ಅಮ್ಮನ ಪದ, ಬೀಸೋಕಲ್ಲು ಪದಗಳನ್ನು ಹಾಡುತ್ತ ಬಂದಿರುವ ತಾಯಮ್ಮ ಅವರು ತಮ್ಮ ವಿವಾಹಾನಂತರವೂ ಕಲೆಯನ್ನು ಮುಂದುವರೆಸಿದ್ದಾರೆ.
ಆಕಾಶವಾಣಿಯಲ್ಲಿ ಸಹ ತಮ್ಮ ಕಲಾ ಪ್ರದರ್ಶನ ಮಾಡಿರುವ ತಾಯಮ್ಮ ಅವರ ಬದುಕಿನ ಬಡತನ ಕಲೆಗೆ ಎರವಾಗಿಲ್ಲದಿರುವುದು ಗಮನೀಯ.
ತಾಯಮ್ಮ ಅವರಿಗೆ ಚಿಕ್ಕಮಗಳೂರು ಜಿಲ್ಲಾ ರಾಜೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳು ಸಂದಿವೆ.
ಗೊರವರ ಮೈಲಾರಪ್ಪ

ಜಾನಪದ ಪರಂಪರೆಯಲ್ಲಿ ಸಹಸ್ರಾರು ಭಕ್ತರನ್ನು ಒಂದೆಡೆ ಸೇರಿಸಿ ಗೊರವರ ಪವಾಡದ ನುಡಿಗಳನ್ನಾಡುವ ಮೂಲಕ ಏಳುಕೋಟಿ ಏಳುಕೋಟಿ ಚಾಂಗಲೋ ಘೋಷದಲ್ಲೇ ಲಕ್ಷಾಂತರ ಆಸ್ತಿಕರನ್ನು ಒಂದೆಡೆ ಸೇರಿಸುವ ಪವಾಡ ಪರಂಪರೆಯಲ್ಲಿ ಗೊರವರ ಮೈಲಾರಪ್ಪನವರು ಜನಪ್ರಿಯ.
ಕರಿಯ ಕಂಬಳಿ ಅಂಗಿ, ಕೈಯ್ಯಲ್ಲಿ ಕೊಳಲು, ಢಮರುಗ, ತ್ರಿಶೂಲ, ಭಂಡಾರದ ಬಟ್ಟಲು, ದೋಣಿ ಹಿಡಿದ ವಿಶಿಷ್ಟ ಗೊರವರ ವೇಷ ಧರಿಸುವ ಮೈಲಾರಪ್ಪ ತಮ್ಮ ಕಾರಣಿಕ ನುಡಿಗಳ ಮೂಲಕವೇ ಜನಮನ್ನಣೆಗಳಿಸಿದವರು.
ಮೈಲಾರಲಿಂಗೇಶ್ವರ ದೇವರ ಆರಾಧಕರಾದ ಗೊರವರ ಮೈಲಾರಪ್ಪ ದೋಣಿ ಸೇವೆಯಲ್ಲಿ ಕುಣಿದು ಕುಪ್ಪಳಿಸುವ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದಿರುವ ಮೈಲಾರಪ್ಪ ಅವರು ಜನಪದ ಪರಂಪರೆಯನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖರು.
ತಂಬೂರಿ ಜವರಯ್ಯ

ಸಕ್ಕರೆ ನಾಡಿನವರಾದ ತಂಬೂರಿ ಜವರಯ್ಯ ಅವರು ತಮ್ಮ ಜೀವನ ಸಂಗಾತಿ ಬೋರಮ್ಮ ಅವರೊಡಗೂಡಿ ಏಕತಾರಿಯಲ್ಲಿ ಲಯಬದ್ಧವಾಗಿ ತತ್ವಗಳನ್ನು ಸತ್ವಶಾಲಿಯಾಗಿ ಹಾಡುತ್ತಾ ಬಂದವರು.
ಭಿಕ್ಷಾಟನೆ ವೃತ್ತಿಯಲ್ಲಿ ತೊಡಗಿದರೂ ತಮ್ಮ ಸ್ಮರಣ ಶಕ್ತಿಯಿಂದ ಜೀವನ ಸಂದೇಶಗಳನ್ನು ಸಾರುವ ತತ್ವಪದಗಳ ಬಹುದೊಡ್ಡ ಭಂಡಾರವೇ ಆಗಿರುವ ತಂಬೂರಿ ಜವರಯ್ಯನವರು ಕಳೆದ ಐದು ದಶಕಗಳಿಂದಲೂ ತತ್ವಪದ ಗಾಯನಕ್ಕೆ ತಮ್ಮನ್ನು ತೊಡಗಿಸಿಕೊಂಡವರು.
ಶಿಶುನಾಳ ಷರೀಫ, ನಾಗಲಿಂಗಯೋಗಿ, ಕೈವಾರ ನಾರೇಯಣಪ್ಪ ಕಡಕೋಳ ಮಡಿವಾಳಪ್ಪ ಶಿವಯೋಗಿಗಳ ತತ್ವಪದಗಳನ್ನು ಹಾಡುವ ತಂಬೂರಿ ಜವರಯ್ಯ ಅವರು ಜನರ ನಡುವೆಯೇ ಬದುಕುತ್ತ ತಮ್ಮ ಗಾಯನದ ಮೂಲಕ ಜನರ ಬದುಕನ್ನು ಹಸನುಗೊಳಿಸುತ್ತಿದ್ದಾರೆ.
ಕೆ.ಆರ್. ಹೊಸಳಯ್ಯ

ಜನಪದ ಕಲೆಯ ವಿಶಿಷ್ಟ ಪ್ರಕಾರವಾದ ವೀರಭದ್ರ ಕುಣಿತದ ಅತ್ಯುತ್ತಮ ಕಲಾವಿದರು ಕೆ.ಆರ್. ಹೊಸಳಯ್ಯ. ಐದೂವರೆ ದಶಕಗಳಿಂದಲೂ ಕಲಾಸೇವೆಯಲ್ಲಿ ನಿರತ ಕಲಾಧ್ಯಾನಿ.
ತುಮಕೂರು ಜಿಲ್ಲೆಯ ಜಾನಪದೀಯ ಕೊಡುಗೆ ಹೊಸಳಯ್ಯ, ಕುಣಿಗಲ್ ತಾಲ್ಲೂಕಿನ ಎಡೆಯೂರು ಹುಟ್ಟೂರು. ವೀರಭದ್ರ ಕುಣಿತ ವಂಶಪಾರಂಪರವಾಗಿ ಬಂದ ಕಲೆ. ಹತ್ತು ವರ್ಷದ ಬಾಲಕನಾಗಿರುವಾಗಲೇ ಕಲಾರಂಗಕ್ಕೆ ಪಾದಾರ್ಪಣೆ. ವಯಸ್ಸು-ಅನುಭವ ಮಾಗಿದಂತೆ ವೀರಭದ್ರ ಕುಣಿತದಲ್ಲಿ ಕಲಾನೈಪುಣ್ಯತೆ, ಕನ್ನಡ ಮತ್ತು ಸಂಸ್ಕೃತಿಯ ಹಲವು ಕಾರ್ಯಕ್ರಮಗಳು, ರಾಜ್ಯದ ಇತರೆಡೆ ಮಾತ್ರವಲ್ಲದೆ, ಚೆನೈ, ಅಂಡಮಾನ್ ಮತ್ತು ನಿಕೋಬಾರ್, ಕಲ್ಕತ್ತಾ, ದೆಹಲಿ, ತಂಜಾವೂರು, ಒರಿಸ್ಸಾ, ಪಂಜಾಬ್, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಕಾಶಿವಿಶ್ವನಾಥನ ಸನ್ನಿಧಿಯಲ್ಲಿ ಕಲಾಪ್ರದರ್ಶನ, ಸಿಂಹದಮರಿ, ಸಿರಿಗಂಧ, ಕಲಾಸಿಪಾಳ್ಯ ಚಿತ್ರ, ಲಕ್ಷ್ಮೀಬಾರಮ್ಮ, ಹರಹರಮಹದೇವ ಮುಂತಾದ ಧಾರಾವಾಹಿಗಳಲ್ಲೂ ಕಲಾಪ್ರದರ್ಶನಗೈದ ಹಿರಿಮೆ, ಐವತ್ತೈದು ವರ್ಷಗಳಿಂದಲೂ ಬದುಕಿನ ನಿರ್ವಹಣೆ ಹಾಗೂ ಸಾಧನೆಗೆ ವೀರಭದ್ರ ಕುಣಿತವನ್ನೇ ನೆಚ್ಚಿ ತನ್ಮಯರಾಗಿ ಕಲಾಸೇವೆಗೈಯುತ್ತಿರುವ ಹೊಸಳಯ್ಯ ದೇಸೀ ಕಲೆಯ ವಿರಳ ಕಲಾಕುಸುಮ.

ನಟ, ವಾದ್ಯಗಾರ, ಸಂಘಟಕರಾಗಿ ಜನಪದ ಹಾಗೂ ವೃತ್ತಿರಂಗಭೂಮಿಯಲ್ಲಿ ವಿಶಿಷ್ಟ ಸಾಧನೆಗೈದವರು ಕೊಟ್ರಪ್ಪ ಚನ್ನಬಸಪ್ಪ ಕೊಟ್ರಪ್ಪನವರ ಬಹುದಶಕಗಳ ಬಹುಮುಖಿ ಸಾಧನೆಯ ಕಲಾವಿದರು.
ಹಾವೇರಿ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆ ಕೊಟ್ರಪ್ಪ, ಶಿಗ್ಗಾಂವ ತಾಲ್ಲೂಕಿನ ಹಿರೇಮಣಕಟ್ಟಿಯ ಬೆಳಗಲಿ ಹುಟ್ಟೂರು. ಬಾಲ್ಯದಿಂದಲೂ ಹಾಡು-ನಟನೆಯೆಂದರೆ ಪಂಚಪ್ರಾಣ. ಓದಿದ್ದು ೭ನೇ ತರಗತಿಯವರೆಗೆ ಮಾತ್ರ ಮುಂದಿನದ್ದೆಲ್ಲಾ ಕಲಾಶಿಕ್ಷಣ ಮತ್ತು ಕಲಾಸೇವೆಯೇ. ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ನಿರಂತರ ನಟನೆ ಜೊತೆಗೆ ಸಂಗೀತಗಾರನಾಗಿಯೂ ಸಾರ್ಥಕ ಸೇವೆ. ನಾಟಕದ ಹಾಡುಗಳಿಗೆ ಸಂಗೀತ ಸಂಯೋಜಿಸುವಲ್ಲಿಯೂ ಎತ್ತಿದಕೈ. ಕೆ.ಬಿ.ಆರ್. ಡ್ರಾಮಾ ಕಂಪನಿ, ಗುಡಿಗೇರಿಯ ಶ್ರೀ ಸಂಗಮೇಶ್ವರ ನಾಟ್ಯ ಸಂಘದಲ್ಲಿ ದಶಕಗಳ ಕಾಲ ತರಹೇವಾರಿ ಪಾತ್ರಗಳಲ್ಲಿ ನಟನೆ-ಸಂಗೀತವಾದ್ಯಗಾರನಾಗಿ ಸೇವೆ. ಕಲಾಶ್ರೀ ಡ್ರಾಮಾ ಸೀನರಿ ಸಂಸ್ಥೆ ಸ್ಥಾಪಿಸಿ ನಾಲ್ಕು ದಶಕಗಳಿಂದಲೂ ರಂಗಪರಿಕರಗಳನ್ನು ಉಚಿತವಾಗಿ ಒದಗಿಸಿದ ಹಿರಿಮೆ. ಕ್ಯಾಶಿಯೋ ವಾದನ ನುಡಿಸುವಿಕೆಗೆ ಅಪಾರ ಮೆಚ್ಚುಗೆ. ರಾಜ್ಯ ಮಾತ್ರವಲ್ಲದೆ, ಹೊರರಾಜ್ಯಗಳಲ್ಲೂ ಕಲಾಪ್ರೌಢಿಮೆ ಮೆರೆದ ಖುಷಿ, ಧರ್ಮ ಎಲ್ಲಿದೆ, ಸೂಳೆ ಸವಾಲು ಮುಂತಾದ ನಾಟಕಗಳು, ರಂಗಗೀತೆಗಳು, ಭಾವ-ಭಕ್ತಿಗೀತೆಗಳ ರಚಿಸಿ ಸಂಗೀತ ಸಂಯೋಜಿಸಿದ ಕೊಟ್ರಪ್ಪ ಅವರ ಕಲಾಸೇವೆಗೆ ಹಲವು ಪ್ರಶಸ್ತಿಗಳು ಸಂದಿದ್ದು ನಿತ್ಯ ನೂತನವಾಗಿ ಮುಂದುವರೆದಿದೆ.

ವೃತ್ತಿ ರಂಗಭೂಮಿಯಲ್ಲಿ ಹಾಸ್ಯನಟನಾಗಿ ವಿಶೇಷ ಛಾಪೊತ್ತಿದ ರಂಗಪ್ರತಿಭೆ ರಾಚಯ್ಯ ರುದ್ರಯ್ಯ ಸಾಲಿಮಠ, ನಟ, ನಿರ್ದೇಶಕ, ಗಾಯಕ, ನಾಟ್ಯಗಾರನಾಗಿ ಸೇವೆಗೈದ ಸಾಧಕರು.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ೧೯೩೮ರಲ್ಲಿ ಜನಿಸಿದ ರಾಚಯ್ಯ ಸಾಲಿಮಠ ಬಾಲ್ಯದಲ್ಲೇ ರಂಗಭೂಮಿಗೆ ಆಕರ್ಷಿತರಾದವರು. ಶಾಲಾದಿನಗಳಲ್ಲೆ ಮನಸ್ಸಿಲ್ಲದ ಮದುವೆ, ಬ್ಲಾಕ್ ಮಾರ್ಕೆಟ್, ವಶಿಷ್ಟ ವಿಶ್ವಾಮಿತ್ರರ ಸಂವಾದ ನಾಟಕದಲ್ಲಿ ಪಾತ್ರ ವಹಿಸಿ, ದೇಶಭಕ್ತಿಗೀತೆ, ಜನಪದ ಗೀತೆ ಮತ್ತು ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ ಗಮನಸೆಳೆದ ಪ್ರತಿಭೆ. ಬಣ್ಣದ ಈ ನಂಟು ಅಪ್ಪನಿಂದ ಬಂದ ಬಳುವಳಿ. ೭ನೇ ತರಗತಿವರೆಗಷ್ಟೇ ಓದಿ ಆನಂತರ ಕಲೆಗೆ ಸಂಪೂರ್ಣ ಸಮರ್ಪಿತಗೊಂಡ ಬದುಕು. ಮಾತಂಗತಕನ್ಯೆ, ಪ್ರೇಮಬಂಧನ, ಸೌಭಾಗ್ಯಲಕ್ಷ್ಮಿ ಅತ್ತಿಅಳಿಯ, ರತ್ನಮಾಂಗಲ್ಯ, ವಿಷಮ ಸಂಸಾರ, ಹಳ್ಳಿಯಿಂದ ದಿಲ್ಲಿಯವರೆಗೆ ಮು೦ತಾದ ನಾಟಕಗಳಲ್ಲಿ ಬಹುಬಗೆಯ ಪಾತ್ರ, ಹಾಸ್ಯಗಾರನಾಗಿ ಜನಮಾನಸದಲ್ಲಿ ಜನಜನಿತ. ನಾಟ್ಯ ಕಲೆಯನ್ನೂ ರೂಢಿಸಿಕೊಂಡು ಶ್ರೀಮಹಾಲಿಂಗೇಶ್ವರ ನಾಟ್ಯ ಸಂಘ ಸ್ಥಾಪಿಸಿ ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರದಲ್ಲೂ ಕಲಾಪ್ರದರ್ಶನ ನೀಡಿದ ಕಲಾವಿದರು. ಹಲವು ನಾಟಕಗಳ ನಿರ್ದೇಶಕರು, ನಾಟಕಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದ ರಾಚಯ್ಯ ಸಾಲಿಮಠ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ರಂಗಸೇವಾನಿರತರು.

ಕನ್ನಡ ಜನಪದ ಕ್ಷೇತ್ರವನ್ನು ಬೆಳಗಿದ ದೇಸೀ ಪ್ರತಿಭೆ ಭೀಮಸಿಂಗ್ ರಾಥೋಡ್, ಜಾನಪದ ಕ್ಷೇತ್ರಕ್ಕೆ ಜೀವ ಮುಡುಪಿಟ್ಟಿರುವ ಗ್ರಾಮೀಣ ಕಲಾವಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾಮುನಗರ ಭೀಮಸಿಂಗ್ ಅವರ ಹುಟ್ಟೂರು. ೧೯೫೬ರ ಏಪ್ರಿಲ್ ೭ರಂದು ಜನಿಸಿದ ಅವರಿಗೆ ಬಾಲ್ಯದಿಂದಲೂ ಜನಪದದತ್ತ ವಿಶೇಷ ಒಲವು. ಹಾಡು-ಭಜನೆಗಳೆಂದರೆ ಪಂಚಪ್ರಾಣ. ಜನಪದ ಗೀತೆ, ಭಜನಾ ಗೀತ ಗಾಯನ ಹಾಗೂ ನಾಟಕಗಳ ಅಭಿನಯ-ನಿರ್ದೇಶನ ನೆಚ್ಚಿನ ಹವ್ಯಾಸ. ಕಲೆಯ ಸೆಳತದಿಂದಾಗಿ ಯುವಕರಾಗಿದ್ದಾಗಲೇ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಕಲಾರಂಗದಲ್ಲಿ ತೊಡಗಿಕೊಂಡವರು. ಸಾಕ್ಷರತಾ ಮತ್ತು ಜನಜಾಗೃತಿ ಗೀತೆಗಳ ಗಾಯನದಲ್ಲಿ ನಿಸ್ಸಿಮರು, ಹತ್ತಾರು ನಾಟಕಗಳಲ್ಲಿ ನಟನೆ, ನಿರ್ದೇಶನದಿಂದ ಹೆಸರುವಾಸಿಯಾಗಿರುವ ಭೀಮಸಿಂಗ್ ರಾಥೋಡ್ ಬಂಜಾರು ಭಜನೆ ಹಾಡುವುದರಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸುಪ್ರಸಿದ್ಧರು. ಕನ್ನಡ ಸಾಹಿತ್ಯ ಪರಿಷತ್ತು, ಬಂಜಾರ ಸಮಾಜ, ಕರ್ನಾಟಕ ಬರಹಗಾರರ ಸಂಘ ಮತ್ತಿತರ ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಭಾಜನರಾಗಿರುವ ಭೀಮಸಿಂಗ್ ಕಲಾಧ್ಯಾನದಲ್ಲೇ ಧನ್ಯತೆ ಕಾಣುವ ವಿರಳ ಕಲಾವಿದರು.

ಜನಪದ ಕಲೆಯನ್ನೇ ಸಾಧನೆಯ ಪಥವಾಗಿಸಿಕೊಂಡ ಅಪ್ಪಟ ದೇಸೀ ಪ್ರತಿಭೆ ಹೊಸಬಸವಯ್ಯ ದುಂಡಯ್ಯ ಸಂಬಳದ ಹೆಸರಾಂತ ಕರಡಿವಾದನದ ಕಲಾವಿದ. ಜನಪ್ರಿಯ ಶ್ರೀಕೃಷ್ಣ ಪಾತ್ರಧಾರಿ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಹೊಸಬಸವಯ್ಯ ಅವರ ಜನ್ಮಸ್ಥಳ. ಕಡುಬಡತನದ ಕುಟುಂಬ. ಅಕ್ಷರದ ಭಾಗ್ಯವಿಲ್ಲದ ದಿಕ್ಕೆಟ್ಟ ಬಾಳಿಗೆ ಆಸರೆಯಾಗಿದ್ದು ಕಲೆಯೇ, ಮನೆತನದ ಕುಲಕಲೆಯಾದ ಕರಡಿವಾದನದಲ್ಲಿ ನಿಷ್ಣಾತತೆ.ಬೇಸಾಯ, ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದ ಅರ್ಚಕ ವೃತ್ತಿಯೇ ಬುತ್ತಿಗೆ ದಾರಿ. ೧೦ನೇ ವಯಸ್ಸಿಗಾಗಲೇ ಭಜನೆ, ಕೈವಲ್ಯ ಪದಗಳ ಸರಾಗ ಹಾಡುಗಾರಿಕೆಗೆ ಮನಸೋಲದವರೇ ಇಲ್ಲ. ಹಾಡಿನ ಕಲೆ ನಟನೆಯತ್ತಲೂ ಸೆಳೆದದ್ದು ವಿಶೇಷ. ೧೯ನೇ ವಯಸ್ಸಿಗೆ ಕೃಷ್ಣಾಜಿ ದೇಶಪಾಂಡೆ ಅವರ ಶ್ರೀಕೃಷ್ಣ ಪಾರಿಜಾತ ತಂಡಕ್ಕೆ ಸೇರ್ಪಡೆ. ಶ್ರೀಕೃಷ್ಣನ ಪಾತ್ರದಲ್ಲಿ ಮನೋಜ್ಞ ಅಭಿನಯ, ಸತತ ೨೫ ವರ್ಷಗಳ ಕಾಲ ಮನರಂಜಿಸಿದ ಕೃಷ್ಣ. ಹತ್ತು ವರ್ಷಗಳ ಕಾಲ ಮಾತ್ರ ಅನ್ಯ ಪಾತ್ರಗಳಲ್ಲಿ ಪರಕಾಯ ಪ್ರವೇಶ, ಆರು ದಶಕಗಳ ಕಲಾಯಾನದಲ್ಲಿ ಉಂಡ ಕಷ್ಟಗಳಿಗಿಂತಲೂ ಪಡೆದ ಚಪ್ಪಾಳೆಗಳದ್ದೇ ಖುಷಿ. ಸದ್ಯ ಶ್ರೀ ಕೃಷ್ಣ ಪಾರಿಜಾತ ತಂಡದ ವ್ಯವಸ್ಥಾಪಕನಾಗಿ ಬದುಕಿನ ಸಂಧ್ಯಾಕಾಲದಲ್ಲೂ ಕಲಾಸೇವೆಯಲ್ಲಿ ನಿರತ ಈ ದೇಸೀ ಕಲಾಕುಸುಮಕ್ಕೆ ಸಂದ ಪ್ರತಿ ಗೌರವ-ಸನ್ಮಾನಗಳೆಲ್ಲದರಿಂದ ಮನದುಂಬಿದ ಧನ್ಯತಾಭಾವ.

ಮಂಟೇಸ್ವಾಮಿ ಪದವನ್ನೇ ಸಾಧನೆಗೆ ಹದ ಮಾಡಿಕೊಂಡ ದೇಸೀ ಪ್ರತಿಭೆ ದೊಡ್ಡ ಗವಿಬಸಪ್ಪ.ಮೋಡಿ ಮಾಡುವ ತಂಬೂರಿ ಶೈಲಿಯ ನೀಲಗಾರರು.
ಚಾಮರಾಜನಗರ ತಾಲ್ಲೂಕಿನ ದೊಡ್ಡಮೋಳೆ ಗ್ರಾಮ ದೊಡ್ಡ ಗವಿಬಸಪ್ಪ ಅವರ ಹುಟ್ಟೂರು. ಅನಕ್ಷರಸ್ಥತೆ ಮತ್ತು ಬಡತನ ಬದುಕಿಗೇ ಅಂಟಿದ ಶಾಪ. ೧೭ನೇ ವಯಸ್ಸಿಗೆ ಅಪ್ಪ ಅಮ್ಮನ ಹರಕೆಯಂತೆ ದೇವರಗುಡ್ಡಕ್ಕೆ ಬಿಟ್ಟ ಪರಿಣಾಮ ಗವಿಬಸಪ್ಪ ನೀಲಗಾರರಾಗಿ ರೂಪಾಂತರ, ಯಳಂದೂರು ತಾಲ್ಲೂಕಿನ ಕೃಷ್ಣಪುರದ ಹಿರಿಯ ನೀಲಗಾರ ಕಲಾವಿದ ಕಾಳವಾರ ಸಿದ್ದಶೆಟ್ಟಿ ಅವರಿಂದ ಎರಡು ವರ್ಷಗಳ ಕಾಲ ಮಂಟೇಸ್ವಾಮಿ ಕಥೆ, ಸಿದ್ದಪ್ಪಾಜಿ ಕಥೆ, ಮಲೆಮಹಾದೇಶ್ವರನ ಕಾವ್ಯ, ಶರಣೆ ಶಂಕರಮ್ಮನ ಸಾಲು, ಜುಂಜೇಗೌಡನ ಸಾಲು, ಬಿಳಿಗಿರಿರಂಗಸ್ವಾಮಿ ಕಥೆ, ಮುಡುಕುತೊರೆ ಮಲ್ಲಿಕಾರ್ಜುನನ ಕಥೆಗಳ ಗಾಯನದ ತರಬೇತಿ, ಮುಂದಿನದ್ದು ಸಿದ್ದಪ್ಪಾಜಿ ತೋರಿದ ಸಾಧನೆಯ ಹಾದಿ. ಹಳ್ಳಿಗಾಡಿನ ಶುಭಕಾರ್ಯಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಲ್ಲಿ ನಿರಂತರ ಗಾನಸೇವೆ. ಕಾಲೇಜು ವಿದ್ಯಾರ್ಥಿಗಳಿಗೆ ನೀಲಗಾರ ಪದ ಹಾಡುವ ತರಬೇತಿ, ಬೀಸು ಕಂಸಾಳೆ ಪ್ರದರ್ಶನವೂ ಸೇರಿದಂತೆ ೪೩ ವರ್ಷಗಳಿಂದಲೂ ನಿಸ್ವಾರ್ಥ ಕಲಾಸೇವೆ. ಜಾನಪದ ಅಕಾಡೆಮಿಯ ಪ್ರಶಸ್ತಿ, ಹೆಚ್.ಎಲ್.ನಾಗೇಗೌಡ, ಮಂಟೇಸ್ವಾಮಿ ಪ್ರಶಸ್ತಿಗಳಿಂದ ಭೂಷಿತವಾದ ದೇಸೀ ಕಲಾಕುಸುಮ.
ಶಿವಮೊಗ್ಗ ಜಿಲ್ಲೆಯ ಸಾಗರದ ವಿಶಿಷ್ಟ ಜಾನಪದ ಪ್ರತಿಭೆ ಶ್ರೀಮತಿ ಚೂಡಾಮಣಿ ರಾಮಚಂದ್ರ ಗಂಡುಕಲೆ ಡೊಳ್ಳುಕುಣಿತದಲ್ಲಿ ವಿಶೇಷ ಸಾಧನೆಗೈದವರು, ವೀರಗಾಸೆ, ಲಂಬಾಣಿ ನೃತ್ಯ, ಜಾನಪದ ಹಾಡು, ಭಜನೆ ಮತ್ತು ಕೋಲಾಟಗಳಲ್ಲೂ ಪರಿಣಿತರು. ರಾಜ್ಯದ ಪ್ರಪ್ರಥಮ ಮಹಿಳಾ ಡೊಳ್ಳುಕುಣಿತ ತಂಡ ರಚಿಸಿದ ಹೆಮ್ಮೆಯ ಹೆಜ್ಜೆಗುರುತು ಇವರದ್ದು. ರಾಜ್ಯ, ದೇಶದೆಲ್ಲೆಡೆ ಮಾತ್ರವಲ್ಲದೆ, ಲಂಡನ್, ಜರ್ಮನಿ, ಇಟಲಿ, ಫ್ರಾನ್ಸ್ ಸೇರಿದಂತೆ ೨೦ಕ್ಕೂ ಹೆಚ್ಚು ವಿದೇಶಗಳಲ್ಲಿ, ಚಲನಚಿತ್ರ-ದೂರದರ್ಶನಗಳಲ್ಲಿ ಡೊಳ್ಳುಕುಣಿತದ ಸದ್ದು ಮೊಳಗಿಸಿ ಕರುನಾಡಿನ ಜನಪದ ಸಿರಿಯ ವೈಭವವನ್ನು ದರ್ಶಿಸಿದವರು.
ಸಮಾಜಸೇವೆ, ಮಹಿಳಾ ಸಂಘಟನೆ, ತಳಸಮುದಾಯದ ಅಶಕ್ತ ಹೆಣ್ಣುಮಕ್ಕಳು ಹಾಗೂ ಹೊಸ ಪೀಳಿಗೆಗೆ ಜಾನಪದ ಕಲೆಗಳ ತರಬೇತಿ, ಬಡಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರ ನಡೆಸುವಿಕೆ, ಮುಂತಾದ ಸಮಾಜಮುಖಿ ಚಟುವಟಿಕೆಗಳಲ್ಲಿ ನಾಲ್ಕೂವರೆ ದಶಕಗಳಿಂದ ತೊಡಗಿಕೊಂಡಿರುವ ಕ್ರಿಯಾಶೀಲರು. ೧ ಕಥಾಸಂಕಲನ, ೪ ಕವನಸಂಕಲನ, ೨ ಮಕ್ಕಳ ಕಥೆ- ಪ್ರವಾಸಕಥನವನ್ನೂ ಹೊರತಂದಿರುವ ಚೂಡಾಮಣಿ ಅವರು ಸಾಹಿತಿಯೂ ಸಹ. ಅಪರೂಪದ ಸಾಧನೆ-ಸೇವೆಗಾಗಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನೊಳಗೊಂಡಂತೆ ಹತ್ತಾರು ಪ್ರಶಸ್ತಿ-ಗೌರವಗಳಿಗೆ ಭಾಜನರು.
ಶ್ರೀ ಬಸವರಾಜ ಅಲಗೂಡ
ಹೈದರಾಬಾದ್ ಕರ್ನಾಟಕ ಭಾಗದ ವಿಶಿಷ್ಟ ಪ್ರತಿಭೆ ಬಸವರಾಜ ಅಲಗೂಡ, ಶೋತೃಗಳ ಮನಗೆದ್ದ ಗೀಗೀ ಪದದ ಹಾಡುಗಾರರು. ದಶಕಗಳ ಕಾಲ ಕಲಾಸೇವೆಗೈದ ಕಲಾವಿದರು.
ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಅಲಗೂಡದಲ್ಲಿ ೧೯೪೭ರ ಮೇ. ೪ರಂದು ಜನಿಸಿದ ಬಸವರಾಜ ಅಲಗೂಡ ಅವರು ಅನಕ್ಷರಸ್ಥರಾದರೂ ಕಲೆಯನ್ನೇ ಪಠ್ಯವಾಗಿಸಿಕೊಂಡವರು. ೨೦ನೇ ವಯಸ್ಸಿನಲ್ಲೇ ಕಲೆಗೆ ಮಾರು ಹೋಗಿ ಪ್ರಖ್ಯಾತ ಗೀಗೀ ಕಲಾವಿದರಾದ ಗುಂಡಪ್ಪ ಭದ್ರಪ್ಪ, ಶಿವಶರಣಪ್ಪ ಮತ್ತು ಹಜರತಸಾಬ ಅವರ ಮಾರ್ಗದರ್ಶನದಲ್ಲಿ ಗೀಗೀ ಪದ, ಲಾವಣಿಪದ, ಭಕ್ತಿಗೀತೆಗಳು, ದೇಶಭಕ್ತಿ ಗೀತೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದವರು. ಮೂರೂವರೆ ದಶಕಗಳ ಕಾಲ ಜನಪದ ಗಾಯನದ ಮೂಲಕ ಜನರಲ್ಲಿ ಮೂಢನಂಬಿಕೆ, ಜಾತೀಯತೆ, ಅಸಮಾನತೆಯ ಕುರಿತು ಜಾಗೃತಿ ಮೂಡಿಸಿದವರು. ಸರ್ಕಾರದ ವಿವಿಧ ಜನಪರ ಯೋಜನೆಗಳ ಪ್ರಚಾರದಲ್ಲಿ ತೊಡಗಿದವರು. ಕಲಬುರಗಿ ಜಿಲ್ಲೆ ಮಾತ್ರವಲ್ಲದೆ, ದೂರದ ಸೊಲ್ಲಾಪುರ, ಅಕ್ಕಲಕೋಟ, ನಾಗಪೂರಗಳಲ್ಲೂ ಕಲಾಪ್ರದರ್ಶನ ಮಾಡಿರುವ ಬಸವರಾಜ ಅಲಗೂಡ ಅವರ ಕಲಾಸೇವೆ ಸ್ಮರಿಸುವಂತಹುದು.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ರಾಮತೀರ್ಥದ ಜಾನಪದ ಪ್ರತಿಭೆ ಶಂಕ್ರಮ್ಮ ಮಹಾದೇವಪ್ಪಾ ಕನ್ನಡ ಮತ್ತು ತೆಲುಗು ಬುರಕಥೆ ಕಲಾವಿದರು. ದಶಕಗಳಿಂದಲೂ ಕಲಾಸೇವೆಯಲ್ಲೇ ಹೊಟ್ಟೆಹೊರೆಯುತ್ತಿರುವವರು.
ಬುಡ್ಗಜಂಗಮ ಸಮುದಾಯದ ಪಾರಂಪರಿಕ ಕಲೆಯಾದ ಬುರಕಥೆ ಶುದ್ಧ ಮೌಖಿಕ ಕಲೆ. ಈ ಕಲೆಯನ್ನು ಬಾಲ್ಯದಲ್ಲೇ ಕರಗತ ಮಾಡಿಕೊಂಡು ಹಳ್ಳಿಗಾಡಿನಲ್ಲಿ ಪ್ರದರ್ಶಿಸಿ ಬದುಕು ಕಟ್ಟಿಕೊಂಡವರು, ಹಳ್ಳಿಯ ಮನೆಯಂಗಳ, ಮದುವೆ ಮತ್ತಿತರ ಮಂಗಳ ಕಾರ್ಯಗಳು ಮತ್ತು ವೈಕುಂಠಯಾತ್ರೆಗಳೇ ಇವರ ಕಲಾಪ್ರದರ್ಶನದ ವೇದಿಕೆಗಳು. ರಾತ್ರಿಯಿಡೀ ರಂಜಕವಾಗಿ ಕಥೆ ಕೇಳುವ ಪರಿ ಕೇಳುಗರಿಗೆ ಅತ್ಯಾಕರ್ಷಕ. ಒಳ್ಳೆಯ ಕಥೆಗಾರ್ತಿಯೆಂದೇ ಜನಪ್ರಿಯ. ಇವರ ಕಥೆಗಳು ಧ್ವನಿಸುರಳಿಗಳಾಗಿದ್ದು ಅವುಗಳ ಅಧ್ಯಯನಕಾರರಿಗೆ ಪಿ.ಎಚ್.ಡಿ. ಸಹ ದೊರೆತಿರುವ ಹೆಗ್ಗಳಿಕೆ. ಜನಮನ್ನಣೆಯ ಜೊತೆಗೆ ಅವಿಶ್ರಾಂತ ಕಲಾಸೇವೆಗೆ ಹಲವು ಪ್ರಶಸ್ತಿ-ಗೌರವಗಳಿಗೂ ಪಾತ್ರರು.
ತಾಯಿ ಎಲ್ಲವ್ವನ ಭಕ್ತರಾಗಿ ಭೂತೇರ ಕುಣಿತವನ್ನು ಮೈಗೂಡಿಸಿಕೊಂಡಿರುವ ಶರಣಪ್ಪ ಭೂತೇರ ಅವರು ಅಪ್ರತಿಮ ಕಲಾವಿದರು. ಎಲ್ಲಮ್ಮನ ಆಟ, ನಗರಗಾಣಿಗನ ಆಟ, ಮಾಳವಾರ ನಾಗಶೆಟ್ಟಿ ಆಟ, ಬಡವನ ಆಟ ಮುಂತಾದ ಆಟಗಳನ್ನು ತನ್ನ ಕುಣಿತದಲ್ಲಿ ಶರಣಪ್ಪ ಅವರು ಪ್ರದರ್ಶಿಸುತ್ತಾರೆ.
ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಪ್ರಭುತ್ವ ಇರುವ ಶರಣಪ್ಪ, ಸಾಹಿತ್ಯ ಕಲಾಮೇಳಗಳಲ್ಲಿ ಭಾಗವಹಿಸಿರುವ ಶರಣಪ್ಪ ಅವರು ಅನೇಕ ಶಿಷ್ಯರಿಗೆ ಭೂತೇರ ಕುಣಿತ ಆಟಗಳಲ್ಲಿ ತರಬೇತಿ ಸಹ ನೀಡಿದ್ದಾರೆ.
ಚನ್ನಮಲ್ಲೇಗೌಡ

ಜಾನಪದ ಕ್ಷೇತ್ರಕ್ಕೆ ಗಡಿಜಿಲ್ಲೆ ಚಾಮರಾಮನಗರದ ಕೊಡುಗೆ ಚನ್ನಮಲ್ಲೇಗೌಡರು. ಅಳಿವಿನಂಚಿನಲ್ಲಿರುವ ಗೊರವರ ಕುಣಿತದ ಪುನರುತ್ಥಾನಕ್ಕಾಗಿ ಶ್ರಮಿಸಿದ ಕಲಾವಿದರು.
ಚನ್ನಮಲ್ಲೇಗೌಡರಿಗೆ ಗೊರವರ ಕುಣಿತ ಅಪ್ಪನಿಂದ ಬಂದ ಬಳುವಳಿ. ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಪುಟ್ಟಮಲ್ಲೇಗೌಡರ ಗರಡಿಯಲ್ಲಿ ಅರಳಿದ ಕಲಾವಿದ. ಬಾಲ್ಯದಲ್ಲೇ ಒಲಿದ ಗೊರವರ ಕುಣಿತವನ್ನು ಹಳ್ಳಿಗಾಡಿನ ರಥೋತ್ಸವ, ಜಾತ್ರೆ, ಹಬ್ಬಗಳಲ್ಲಿ ಪ್ರದರ್ಶಿಸುತ್ತಲೇ ಮುಂಚೂಣಿಗೆ ಬಂದವರು. ರಾಜ್ಯದ ಹಲವೆಡೆ ಮಾತ್ರವಲ್ಲದೇ ಹೈದರಾಬಾದ್, ಅಂಡಮಾನ್, ನವದೆಹಲಿ, ನಾಗಪುರ, ಭೂಪಾಲ್ನಲ್ಲೂ ಗೊರವರ ಕುಣಿತದ ದರ್ಶನ ಮಾಡಿಸಿರುವ ಹೆಗ್ಗಳಿಕೆ. ಚನ್ನಮಲ್ಲೇಗೌಡರಿಗೆ ಈ ಕಲೆ ಕೇವಲ ಪ್ರತಿಭಾಪ್ರದರ್ಶನ ಮಾತ್ರವಲ್ಲ ಅದೇ ಬದುಕು-ಭಾವ-ಜೀವ ಎಲ್ಲಾ. ಆರು ದಶಕಗಳ ನಿರಂತರ ಕಲಾಪ್ರದರ್ಶನದ ಸಾರ್ಥಕತೆಯ ಚನ್ನಮಲ್ಲೇಗೌಡರು ಇದೀಗ ಯುವಪೀಳಿಗೆಗೆ ಕಲೆಯ ಧಾರೆಯೆರೆಯುವ ಕಾರ್ಯದಲ್ಲಿ ಮಗ್ನರು.
ಜಾನಪದ ಲೋಕಕ್ಕೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜಲಧಿಗೆರೆಯ ವಿಶಿಷ್ಟ ಕೊಡುಗೆ ಗಂಗಹುಚ್ಚಮ್ಮ. ಇವರ ದನಿ, ಭಾವದ ಸೊಗಸನ್ನು ಸವಿದವರಷ್ಟೇ ಬಲ್ಲರು. ಮಾತಿಗಿಂತ ಹಾಡೇ ಅನುಗಾಲದ ಅಭಿವ್ಯಕ್ತಿ.
ಸೋಬಾನೆ ಪದ, ರಾಗಿಕಲ್ಲು ಪದ, ಭತ್ತಕುಟ್ಟವ ಪದ, ನಾಟಿ ಹಾಕುವ ಪದ, ಸುಗ್ಗಿಕುಣಿತದ ಪದ, ಕೋಲಾಟದ ಪದ ಮುಂತಾದ ಜನಪದೀಯ ಕಲೆಯ ಬೆಳಕಿನಲ್ಲಿ ಬೆಳಗಿದವರು. ಬಾಲ್ಯದಲ್ಲಿ ಹಿರಿಯರಿಂದ ಕರಗತವಾದ ಈ ಗಾಯನದಲ್ಲಿ ಮೂವತ್ತಾರು ವರ್ಷಗಳ ಅವಿರತ ಯಾನ ಇವರದ್ದು. ನೂರಾರು ಪದಗಳನ್ನು ಸ್ವತಃ ರಚಿಸಿ ಹಾಡಾಗಿಸಿದ ಹಿರಿಮೆ. ೧೯೮೨ರಲ್ಲಿ ಗೆಳತಿಯರೊಡಗೂಡಿ ತಂಡ ಕಟ್ಟಿಕೊಂಡು ನಾಡಿನಾದ್ಯಂತ ಸೋಬಾನೆ ಪದದ ಕಾರ್ಯಕ್ರಮಗಳನ್ನು ನೀಡಿ ಹೆಸರಾದವರು. ಸೋಬಾನೆ ಪದದೊಟ್ಟಿಗೆ ತತ್ವಪದ, ಜನಪದ, ಭಕ್ತಿಗೀತೆ, ಭಜನೆಗಳನ್ನೂ ಹಾಡುವ ಹೆಗ್ಗಳಿಕೆ. ತವರೂರಿನ ಜಲಧಿಗೆರೆಯಮ್ಮನ ಕುರಿತು ೯೦ಕ್ಕೂ ಹೆಚ್ಚು ಹಾಡು ರಚಿಸಿ ಹಾಡಿದ ವೈಶಿಷ್ಟ. ಹಳ್ಳಿಗಾಡಿನ ಹಾಡುಹಕ್ಕಿ ಗಂಗಹುಚ್ಚಮ್ಮರ ಕಲಾಸೇವೆಯನ್ನು ಅನೇಕ ಪ್ರಶಸ್ತಿಗಳು ಸಾರ್ಥಕಗೊಳಿಸಿದರೆ, ಸನ್ಮಾನ-ಗೌರವಗಳೂ ಉತ್ಸಾಹವನ್ನು ಇಮ್ಮಡಿಗೊಳಿಸಿವೆ.
ಶ್ರೀ ಗುರುವ ಕೊರಗ
ಕರಾವಳಿ ಕರ್ನಾಟಕದ ಕೊರಗ ಪರಂಪರೆಯ ಕಲೆಯನ್ನು ಉಳಿಸಿ ಬೆಳೆಸಿದ ಪ್ರಮುಖರು ಗುರುವ ಕೊರಗ, ಕಡ್ಡಾಯಿ ನುಡಿಸುವುದರ ಮೂಲಕ ಆದಿಮ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸಿದ ಕಲಾವಿದರು.
ಕರಾವಳಿಯ ಗುಡ್ಡೆಯಂಗಡಿಯವರಾದ ಗುರುವ ಅವರು ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಸಹಳ, ಸಜ್ಜನ ವ್ಯಕ್ತಿತ್ವದ ಅವರು ಕಲಾರಂಗಕ್ಕೆ ಪಾದಾರ್ಪಣೆ ಮಾಡಿದ್ದು ೧೨ನೇ ವಯಸ್ಸಿನಲ್ಲಿ. ಎಳವೆಯಲ್ಲೇ ಡೋಲು ಬಾರಿಸುವುದು ಮತ್ತು ಬುಟ್ಟಿ ಹಣೆಯುವ ಕಾಯಕದಲ್ಲಿ ತೊಡಗಿಸಿಕೊಂಡವರು. ಸಾಂಪ್ರದಾಯಿಕ ಡೋಲು ಬಾರಿಸುವಿಕೆಯಲ್ಲಿ ಅಪ್ರತಿಮ ಪ್ರತಿಭೆ ಅವರದ್ದು. ಡೋಲು ಸಂಸ್ಕೃತಿಯ ಉಳಿವಿಗೆ ಅಹರ್ನಿಶಿ ಶ್ರಮಿಸಿದವರು. ೧೦೨ರ ವಯಸ್ಸಿನಲ್ಲೂ ಕಲಾಸೇವೆ ನಿರಂತರವಾಗಿದ್ದು ಗುರುವ ಕೊರಗ ಅವರ ಕಲಾನೈಪುಣ್ಯತೆಗೆ ಹಲವು ಗೌರವ-ಸನ್ಮಾನಗಳು ಸಂದಿವೆ.
ಕಲೆಯನ್ನೇ ಬದುಕಿಗೆ ನೆಲೆ, ಭಾವದ ಸೆಲೆಯಾಗಿಸಿಕೊಂಡು ಸೇವೆ ಸಲ್ಲಿಸಿದ ಜಾನಪದ ಸಾಧಕರು ಮಹೇಶ್ವರಗೌಡ ಹನುಮಂತಗೌಡ ಲಿಂಗದಹಳ್ಳಿ, ಸುವರ್ಣ ಕಲಾಬದುಕಿನ ಹಿರಿಮೆಯುಳ್ಳ ವಿಶಿಷ್ಟ ಪುರವಂತಿಕೆ ಕಲಾವಿದರು. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಬತ್ತಿಕೊಪ್ಪದಲ್ಲಿ ೧೯೫೭ರಲ್ಲಿ ಜನಿಸಿದ ಮಹೇಶ್ವರಗೌಡ ಕಲಾಕುಟುಂಬದ ಕೂಸು, ಜನಪದೀಯ ಕಲೆಯಾದ ಪುರವಂತಿಕೆ ಅಪ್ಪನಿಂದ ಬಂದ ಬಳುವಳಿ ಹತ್ತನೇ ವಯಸ್ಸಿನಿಂದಲೇ ಈ ಕಲೆಗೆ ಬದುಕು ಸಮರ್ಪಿತ, ಗ್ರಾಮೋತ್ಸವಗಳಲ್ಲಿ ಆರಂಭವಾದ ಕಲಾಪ್ರದರ್ಶನ ರಾಜ್ಯ, ರಾಷ್ಟ್ರಮಟ್ಟಕ್ಕೂ ವಿಸ್ತಾರಗೊಂಡಿದ್ದು ವಿಶೇಷ, ಧಾರವಾಡ ಆಕಾಶವಾಣಿ, ಬೆಂಗಳೂರು ದೂರದರ್ಶನ, ಹಂಪಿ ಉತ್ಸವ, ಗಣರಾಜ್ಯೋತ್ಸವಮ, ಕಂದಬೋತ್ಸವ, ಆನೆಗುಂದಿ ಉತ್ಸವ, ದಸರಾ, ಲಕ್ಕುಂಡಿ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಆಳ್ವಾಸ್ ನುಡಿಸಿರಿ, ವಿಶ್ವಕನ್ನಡ ಸಮ್ಮೇಳನ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ರಾಜಸ್ಥಾನದ ಲೋಕರಂಗ ಉತ್ಸವ ಮುಂತಾದೆಡೆ ಬೆಳಗಿದ ಜನಪದ ಪ್ರತಿಭೆ, ೫೫ ವರ್ಷಗಳಿಂದಲೂ ಕಲಾಸೇವಾ ನಿರತ ಮಹೇಶ್ವರಗೌಡ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಂದ ಭೂಷಿತರಾದ ದೇಸೀ ಕಲಾಚೇತನ.

ಮಲೆ ಮಹದೇಶ್ವರನ ಭಕ್ತರಾದ ನೀಲಗಾರರ ಪಾರಂಪರಿಕ ಕುಟುಂಬದಿಂದ ಬಂದ ನಿಂಗಣ್ಣ ನಿಂಗಶೆಟ್ಟಿ ಅವರು ನೀಲಗಾರರ ಪದವನ್ನು ಎಳೆಯ ವಯಸ್ಸಿನಲ್ಲಿಯೇ ಅಭ್ಯಾಸ ಮಾಡಿಕೊಂಡಿದ್ದಾರೆ.
ಮಂಟೇಸ್ವಾಮಿ ಗಾಯನವನ್ನು ಹಾಗೂ ಸಿದ್ದಿಪ್ಪಾಜಿ ಮಹಾಕಾವ್ಯವನ್ನು ಕಂಠಪಾಠ ಮಾಡಿಕೊಂಡು ನಾಡಿನುದ್ದಕ್ಕೂ ಹಾಡುತ್ತ ಕಲಾಸೇವೆ ಮಾಡುತ್ತಿರುವ ನಿಂಗಣ್ಣ ನಿಂಗಶೆಟ್ಟಿ ಅವರು ಅನೇಕ ಹೆಸರಾಂತ ಜಾನಪದ ಉತ್ಸವಗಳಲ್ಲಿ ಪಾಲುಗೊಂಡಿದ್ದಾರೆ.
ಚಿಕ್ಕ ಮಲಗೌಡ

ಎಳೆಯ ವಯಸ್ಸಿನಿಂದಲೇ ಜಾನಪದ ಗೀತೆಗಳನ್ನು ಹಾಡಲಾರಂಭಿಸಿದ ಚಿಕ್ಕಮರೀಗೌಡರಿಗೆ ಈಗ ೭೫ ವರ್ಷ. ಆಕಾಶವಾಣಿಯಲ್ಲಿ ಹಾಗೂ ದೂರದರ್ಶನದಲ್ಲಿ ಜಾನಪದ ಕಲಾವಿದರಾಗಿ ಸೇವೆ ಸಲ್ಲಿಸಿರುವ ಇವರು ಮಕ್ಕಳಿಗೆ ಉಚಿತವಾಗಿ ಮೂಲ ಜಾನಪದ ಶಿಕ್ಷಣವನ್ನು ನೀಡುತ್ತ ಬಂದಿದ್ದಾರೆ.
ಚಿಕ್ಕಮರೀಗೌಡ ಅವರು ಮೂಲ ಜಾನಪದ ಗಾಯನವನ್ನು ಮುಂದುವರೆಸುತ್ತ ಬಂದಿರುವ ಇವರ ಅನೇಕ ಧ್ವನಿಸುರುಳಿಗಳು ಹೊರಬಂದಿವೆ. ಇವರನ್ನು ಸಾತನೂರು ಹೋಬಳಿ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಗೌರವಿಸಲಾಗಿದೆ.

ಸಿದ್ದಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಸೋಬಿನಾ ಮೋತೆಸ್ ಕಾಂಬ್ರೇಕರ್ ಪ್ರತಿಭಾವಂತ ಡಮಾಮಿ ನೃತ್ಯ ಕಲಾವಿದೆ. ಕರ್ನಾಟಕದ ಸಂಸ್ಕೃತಿಯಲ್ಲಿ ಬೆರೆತು ಹೋಗಿರುವ ಸಿದ್ದಿ ಜನಾಂಗದ ಪ್ರಮುಖ ನೃತ್ಯವಾದ ಡಮಾಮಿ ನೃತ್ಯ ಹಾಗೂ ವಾದ್ಯವಾದನದಲ್ಲಿ ನಿಪುಣರಾಗಿದ್ದಾರೆ.
ಸೋಬೀನಾ ಮೋತೇಸ್ ಕಾಂಬ್ರೇಕರ್ ಅವರು ಡಮಾಮಿ ನೃತ್ಯದ ಬಗ್ಗೆ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದು, ಈ ಸಮುದಾಯ ಕಲೆಯನ್ನು ಮರುರೂಪಿಸುವಲ್ಲಿ ಅವರ ಶ್ರಮ ಅಪಾರ.
ಪ್ರಸಿದ್ಧ ಏಕತಾರಿ ತತ್ವಪದಗಳ ಕಲಾವಿದರಾದ ಅಡಿವೆಪ್ಪ ಸಣ್ಣಬೀರಪ್ಪ ಕುರಿಯವರ ಐವತ್ತು ವರ್ಷಗಳಿಗಿಂತ ಹೆಚ್ಚು ಕಾಲದಿಂದ ತತ್ವಪದ ಗಾಯನದಲ್ಲಿ ಹೆಸರು ಸಂಪಾದಿಸಿದ್ದಾರೆ. ಆಕಾಶವಾಣಿ “ಬಿ” ಗ್ರೇಡ್ ಕಲಾವಿದರಾಗಿ ಇನ್ನೂರಕ್ಕೂ ಹೆಚ್ಚು ಪದಗಳನ್ನು ಹಾಡಿರುವ ಕುರಿಯವರ ಅವರು. ಜಾನಪದ ಗೀತೆಗಳನ್ನು ರಚಿಸಿರುವಲ್ಲಿಯೂ ನೈಪುಣ್ಯತೆ ಸಾಧಿಸಿದ್ದಾರೆ.
ಹವ್ಯಾಸಿ ರಂಗಕಲಾವಿದರಾಗಿಯೂ ಜನರ ಮೆಚ್ಚುಗೆ ಪಡೆದಿರುವ ಕುರಿಯವರ ಜಾನಪದ ಯಕ್ಷಗಾನ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಲ್ಲಯ್ಯ ಹಿಡಕಲ್
ಜಮಖಂಡಿ ತಾಲೂಕಿನ ಮಧುರಕಂಡಿ ಕಲಾವಿದರ ಊರು. ಈ ಊರಿನಲ್ಲಿ ಹುಟ್ಟಿದ ಮಲ್ಲಯ್ಯನವರು ದಿ. ಸಿದ್ದಗಿರಿಸ್ವಾಮಿ ಮಠಪತಿ ಇವರ ಸಾರಥ್ಯದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂಬ ಬಯಲಾಟವನ್ನು ಅರ್ಥಪೂರ್ಣವಾಗಿ ಪ್ರಯೋಗಿಸಿ, ಕರ್ನಾಟಕ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಹೆಸರುಗಳಿಸಿದ್ದಾರೆ.
ಈ ಬಯಲಾಟದಲ್ಲಿ ಬರುವ ಎಲ್ಲಾ ಸ್ತ್ರೀಪಾತ್ರಗಳನ್ನು ಸಮರ್ಥವಾಗಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಸುಮಾರು ಆರು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿ ಅದರ ಜೊತೆಗೆ ಭಜನೆ ಹಾಡುಗಾರಿಕೆ ಹಾಗೂ ಪುರಾಣ ಹೇಳುವುದನ್ನು ರೂಢಿಸಿಕೊಂಡಿದ್ದಾರೆ ಇವರಿಗೆ ೭೦ ವರ್ಷಗಳು ತುಂಬಿವೆ ಆದರೂ ಕಲಾ ಜೀವನದಲ್ಲಿ ನಿರತರಾಗಿದ್ದಾರೆ.
ಶಾರದಮ್ಮ

ತರೀಕೆರೆ ತಾಲೂಕಿನ ಶಾರದಮ್ಮ ಅವರು ಬೇಸಾಯದ ಕೆಲಸ ಮಾಡುತ್ತಲೇ ಜನಪದ ಹಾಡುಗಳನ್ನು ತಮ್ಮ ಸೋದರಿಯೊಂದಿಗೆ ಸೇರಿ ಕಲಿತವರು.ಬೀಸುವ ಕಲ್ಲಿನ ಪದಗಳು, ಭಜನೆ, ಜನಪದ ಗೀತೆಗಳು, ಸೋಬಾನೆ ಪದಗಳನ್ನು ತಮ್ಮ ಸುತ್ತಲ ಪರಿಸರದಲ್ಲಿ ಕೇಳುತ್ತಲೇ ಬೆಳೆದವರು.
ವಿವಿಧ ಕಮ್ಮಟಗಳಲ್ಲಿ ಕಿರಿಯರಿಗೆ ಜನಪದ ಗೀತೆಗಳನ್ನು ಕಲಿಸಿರುವ ಶಾರದಮ್ಮ ಅವರು ಜನಪದ ಸಿರಿಯನ್ನು ಮುಂದಿನ ತಲೆಮಾರಿಗೆ ಮುನ್ನಡೆಸುವ ಕಾಯಕದಲ್ಲಿ ಈಗಲೂ ನಿರತರು.
‘ಜನಪದ ಸಂಭ್ರಮ’ ಧ್ವನಿಸುರುಳಿಯನ್ನು ಸಹ ಶಾರದಮ್ಮನವರು ಹೊರ ತಂದಿದ್ದು ಇವರ ಸಾಧನೆಯನ್ನು ಮೆಚ್ಚಿ ಹಲವು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬಂದಿವೆ. ಶಾರದಮ್ಮನವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಗೌರವಕ್ಕೂ ಭಾಜನರಾಗಿದ್ದಾರೆ.
ತಿಮ್ಮಮ್ಮ
ಕಳೆದ ಎಂಟು ದಶಕಗಳಿಂದ ಸೋಬಾನೆ ಪದಗಳನ್ನು ಹಾಡುತ್ತಿರುವ ತಿಮ್ಮಮ್ಮ ನಂಜನಗೂಡಿನ ನಂಜುಂಡೇಶ್ವರ, ಚಾಮುಂಡೇಶ್ವರಿ, ಮಂಟೇಸ್ವಾಮಿ, ಬಸವಣ್ಣನವರ ಮೇಲೆ ಜನಪದ ಗೀತೆಗಳನ್ನು ಹಾಡುತ್ತಾರೆ.
ಬೆಂಗಳೂರು ಆಕಾಶವಾಣಿಯಲ್ಲಿ ಜನಪದ ಗೀತೆಗಳಿಗೆ ದನಿಯಾಗಿರುವ ತಮ್ಮ ಮಕ್ಕಳಿಗೂ ಸೋಬಾನೆ ಪದಗಳನ್ನು ಕಲಿಸಿದ್ದಾರೆ. ಹಿರಿಯ ಜನಪದ ತಜ್ಞರಾದ ಎಚ್.ಎಸ್.ನಾಗೇಗೌಡ ಮತ್ತು ಕಾಳೇಗೌಡ ನಾಗವಾರ ಅವರ ಸಮ್ಮುಖದಲ್ಲಿ ಹಾಡಿ ಅವರ ಪ್ರಶಂಸೆ ಗಳಿಸಿದ್ದಾರೆ.
ತಿಮ್ಮಮ್ಮ ಅವರ ಜನಪದ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ.
ಪುರಾಣ ಪುಣ್ಯಕಥೆಗಳನ್ನು ಹಾಗೂ ಐತಿಹಾಸಿಕ ಮಹತ್ವದ ಪ್ರಜಾನಾಯಕರ ಬದುಕಿನ ಕಥೆಗಳನ್ನು ಶಕ್ತಿಶಾಲಿ ಜನಪದ ಮಾಧ್ಯಮವಾದ ಬುರಕಥಾ ಮೂಲಕ ಪ್ರಸ್ತುತ ಪಡಿಸುತ್ತ ಐದು ದಶಕಗಳನ್ನು ಸವೆಸಿರುವ ಮರೆಮ್ಮ ಬಸಣ್ಣ ಶಿರವಾಟಿ ಅವರು ಪ್ರಸಿದ್ಧ ಬುರಕಥಾ
ಕಲಾವಿದರು.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಜನದನಿಯಾದ ಬುರಕಥೆಯನ್ನು ಜನತೆಯ ನಡುವೆ ಹರಡಿಸುತ್ತ, ಜನಸ್ತೋಮವನ್ನು ಸೆಳೆದಿರುವ ಮಾರಿಯಮ್ಮನವರು, ಕರ್ನಾಟಕ ಹಾಗೂ ತೆಲಂಗಾಣ ಪ್ರಾಂತ್ಯಗಳಲ್ಲಿ ಬಹು ಜನಪ್ರಿಯ ಹಾಡುಗಾರ್ತಿ.
ನೆನಪಿನ ಶಕ್ತಿಯಿಂದಲೇ ೭೦ಕ್ಕೂ ಹೆಚ್ಚು ಪ್ರಸಂಗಗಳನ್ನು ಹಾಡುವ ಮರೆಮ್ಮ ಅವರ ಸಿರಿಕಂಠದಿಂದ ಕಥೆಗಳನ್ನು ಜನರಿಗೆ ಮುಟ್ಟಿಸುವ ಪ್ರತಿಭಾವಂತೆ. ಈಕೆ ಇಳಿವಯಸ್ಸಿನಲ್ಲಿಯೂ ಶಿಷ್ಯ ಪರಂಪರೆಯ ಮೂಲಕ ತನ್ನ ತಂಡದೊಡನೆ ಬುರಕಥಾ ಪ್ರಕಾರವನ್ನು ಜೀವಂತವಾಗಿಟ್ಟಿರುವ ಕಲಾವಿದೆಯಾಗಿದ್ದು, ಈಕೆಯ ಬಗ್ಗೆ ಪಿ.ಎಚ್.ಡಿ. ಸಂಶೋಧನೆ ಸಹ ನಡೆದಿರುವುದು ಉಲ್ಲೇಖನಾರ್ಹ.
೧೫ನೇ ವಯಸ್ಸಿಗೆ ಕರಡಿ ಮಜಲು ಕಲಾಕ್ಷೇತ್ರಕ್ಕೆ ಕಾಲಿಟ್ಟ ಗುರುಲಿಂಗಪ್ಪ ವೀರಸಂಗಪ್ಪ ಕರಡಿ ಅವರು ನಿರಂತರವಾಗಿ ಆರು ದಶಕಗಳಿಂದ ಕರಡಿ ಮಜಲು ಕಲೆಯನ್ನು ಪ್ರದರ್ಶಿಸುತ್ತ ಬದುಕು ಸಾಗಿಸುತ್ತಿದ್ದಾರೆ. ಮಲ್ಲಿಕಾರ್ಜುನ ಅಸುಂಡಿಯವರಿಂದ ಸಂಗೀತ ದೀಕ್ಷೆ ಪಡೆದ ವೀರಸಂಗಪ್ಪನವರು ಇದನ್ನು ಕಲೆ ಹಾಗೂ ದೈವಿಕ ಕಾರ್ಯವೆಂದು ಭಾವಿಸಿ ಅದರೊಂದು ಅವಿನಾಭಾವ ಅನುಸಂಧಾನ ಕೈಗೊಂಡಿದ್ದಾರೆ.
ಕರಡಿ ಮಜಲು ಕಲೆಯಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡ ವೀರಸಂಗಪ್ಪ ಕರಡಿ ಅವರು ಕರ್ನಾಟಕದ ಬಹುತೇಕ ಕಲಾ ಮಹೋತ್ಸವಗಳಲ್ಲಿ ಕರಡಿ ಮಜಲು ಕಲೆಯನ್ನು ಪ್ರದರ್ಶಿಸುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಕರಡಿ ಮಜಲು ಕಲೆಯನ್ನು ಮುಂದಿನ ಪೀಳಿಗೆಗೂ ಕರೆದೊಯ್ಯುವ ನಿಟ್ಟಿನಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವ ಗುರುಲಿಂಗಪ್ಪ ವೀರಸಂಗಪ್ಪನವರು ಕರ್ನಾಟಕ ಜಾನಪದ ಅಕಾಡೆಮಿ, ಜಾನಪದ ಲೋಕ ಪ್ರಶಸ್ತಿ, ಲೋಕೋತ್ಸವ ಪ್ರಶಸ್ತಿ ಹೀಗೆ ಹಲವಾರು ಗೌರವಗಳನ್ನು ಪಡೆದಿದ್ದು, ಸಾರ್ಕ್, ದಕ್ಷಿಣ ವಲಯ ಸಾಂಸ್ಕೃತಿಕ ಉತ್ಸವ, ಭಾರತ ಅಂತರರಾಷ್ಟ್ರೀಯ ಸಂಗೀತ ಮಹೋತ್ಸವ ಸೇರಿದಂತೆ ಅನೇಕ ಪ್ರತಿಷ್ಟಿತ ಕಲಾ ಮಹೋತ್ಸವಗಳಲ್ಲಿ ಕರಡಿ ಮಜಲು ಪ್ರದರ್ಶಿಸಿದ ಹೆಗ್ಗಳಿಕೆ ಇವರದು.
ಹನೀಫಾ ಎಂ.ಶೇಖ್

ಕಲಬುರ್ಗಿ ಜಿಲ್ಲೆಯವರಾದ ಹನೀಫಾ ಶೇಖ್ ಜಾನಪದ, ತತ್ವಪದ ಹಾಗೂ ವಚನಗಳ ಹಾಡುಗಾರಿಕೆಗೆ ಪ್ರಸಿದ್ದರು. ಬಾಲ್ಯದಲ್ಲಿ ಹತ್ತು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿ ನಂತರ ಹಿಂದೂಸ್ಥಾನಿ ಗುರುಗಳಲ್ಲಿಯೂ ಕಲಿತ ಹನೀಫಾ ಅವರು ಜಾನಪದ ಗೀತೆಗಳ ಗಾಯನ ಕಾಯಕವನ್ನು ಆಯ್ಕೆ ಮಾಡಿಕೊಂಡರು.
ಮೂರು ದಶಕಗಳಿಂದ ಜನಪದ ಕಲೆಯನ್ನು ಬದುಕಾಗಿಸಿಕೊಂಡಿರುವ ಈ ಕಲಾವಿದೆ ಸಾಮಾಜಿಕ ಪಿಡುಗುಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಡುಗಳನ್ನು ಹಳ್ಳಿಗಾಡಿನಲ್ಲಿ ಹಾಡುವ ಪರಿಪಾಠವಿಟ್ಟುಕೊಂಡಿದ್ದಾರೆ.
ಜಾನಪದ ಕೋಗಿಲೆ ಎಂದೇ ಖ್ಯಾತರಾಗಿರುವ ಹನೀಫಾ ಶೇಖ್ ಅವರಿಗೆ ಅನೇಕ ಸಂಘ-ಸಂಸ್ಥೆಗಳು ಪ್ರಶಸ್ತಿ ಗೌರವಗಳನ್ನಿತ್ತು ಗೌರವಿಸಿದೆ.
ಕೆಂಚಮಾದೇಗೌಡ

ಆಕರ್ಷಕ ವೇಷ ಭೂಷಣಗಳಿಂದ ಸೆಳೆಯುವ ಗೊರವರ ಕಲೆಯನ್ನು ಚಿಕ್ಕಂದಿನಲ್ಲಿಯೇ ಕಲಿತು ಕುಣಿತ ಆರಂಭಿಸಿದ ಕೆಂಚಮಾದೇಗೌಡ ಈ ಜಾನಪದ ಕಲೆಯ ವೈವಿಧ್ಯತೆಯನ್ನು ನಾಡಿಗೆಲ್ಲ ಹಂಚುವ ಕಾಯಕದಲ್ಲಿ ನಿರತರಾಗಿದ್ದಾರೆ.
ಗೊರವರ ಕುಣಿತಕ್ಕೆ ಅಗತ್ಯವಾದ ಎಲ್ಲ ಗತ್ತು ಗಮ್ಮತ್ತುಗಳನ್ನು ತಿಳಿದುಕೊಂಡಿರುವ ಕೆಂಚಮಾದೇಗೌಡ ಕಣ್ಮನ ಸೆಳೆಯುವಂತೆ ಕುಣಿಯುವ ಅಪರೂಪದ ಕಲಾವಿದ. ಗೊರವ ಕುಣಿತದ ಪ್ರದರ್ಶನವನ್ನು ದೇಶ-ವಿದೇಶಗಳಲ್ಲಿ ಪ್ರದರ್ಶಿಸಿರುವ ಕೆಂಚಮಾದೇಗೌಡ, ಹೊಸ ಪೀಳಿಗೆಯ ಗೊರವರ ಕುಣಿತ ಕಲಾವಿದರನ್ನು ತಯಾರು ಮಾಡುವಲ್ಲಿ ನಿರತರಾಗಿದ್ದಾರೆ. ಈ ಜನಪದ ಕಲೆಗೆ ಜೀವ ತುಂಬುತ್ತಿರುವ ಕೆಂಚಮಾದೇಗೌಡರಿಗೆ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಸಂದಿದೆ.
ರಾಮನಗರ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಅಜ್ಜಿಯ ಜನಪದ ಹಾಡಿನ ಮೋಡಿಗೆ ಒಳಗಾಗಿ ಮುಂದೆ ಗಾಯಕರಾಗಿ ಬಹು ಎತ್ತರಕ್ಕೆ ಬೆಳೆದವರು. ಇವರು ತತ್ವಪದಗಳ ಬಗ್ಗೆ ಡಿ.ಲಿಟ್ ಸಂಶೋಧನೆಯನ್ನು ಕೈಗೊಂಡಿದ್ದಾರೆ.
ಮೂಲಧಾಟಿಯ ಜನಪದ ಗೀತೆಗಳಿಗೆ ಜೀವಂತಿಕೆ ತುಂಬಿದ ಅಪರೂಪದ ಗಾಯಕರಲ್ಲಿ ಒಬ್ಬರಾದ ಅಪ್ಪಗೆರೆ ತಿಮ್ಮರಾಜು ಗ್ರಾಮೀಣ ಭಾಗಗಳಲ್ಲಿ ಈಗಲೂ ಹಾಡುವ ಅನೇಕ ಗೀತೆಗಳನ್ನು ಸಂಗ್ರಹಿಸಿ ಅದಕ್ಕೊಂದು ಹೊಸ ರೂಪವನ್ನು ಕೊಟ್ಟಿದ್ದಾರೆ.
ದೇಶದ ತುಂಬ ತಮ್ಮ ಸಿರಿಕಂಠದಿಂದ ಮೋಡಿ ಮಾಡಿರುವ ಇವರು ವಿದೇಶಗಳಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ನೀಡಿ ಜನಮನ ಸೂರೆಗೊಂಡಿದ್ದಾರೆ.
ಹಳೇ ಮೈಸೂರು ಭಾಗದ ವಿಶಿಷ್ಟ ಜಾನಪದ ಕಲೆ ವೀರಗಾಸೆ ನೃತ್ಯ ಪದ್ಧತಿಯಲ್ಲಿ ಸಾಧನೆ ಮಾಡಿ ಹೆಸರಾದವರು ಲಿಂಗದೇವವೀರರು ಮಹಾದೇವಪ್ಪ ಅವರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ೧೯೬೦ರಲ್ಲಿ ಜನನ, ಚಿಕ್ಕಂದಿನಿಂದಲೇ ವೀರಭದ್ರನ ಕುಣಿತದಲ್ಲಿ ತರಬೇತಿ ಪಡೆದು ಆ ಕಲೆಗಾಗಿ ಬದುಕನ್ನೇ ಮೀಸಲಿಟ್ಟವರು ಶ್ರೀಯುತರು.
ಹಳ್ಳಿಗಾಡಿನಲ್ಲಿ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಜಾನಪದ ನೃತ್ಯ, ಕಂಸಾಳೆ, ಹಾಡು, ನಾಟಕಗಳ ಪ್ರದರ್ಶನ ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಮಹಾದೇವಪ್ಪ ಅವರು ಹಾಜರ್, ಬೇರೆಯವರು ನೃತ್ಯ ಮಾಡುವುದನ್ನು ನೋಡನೋಡುತ್ತ ಆ ನೃತ್ಯ ಮಾಡುವ ಕಲಾವಿದರ ಹಾವಭಾವ, ವೀರಭದ್ರನ ಕುರಿತು ಹೇಳುವ ಪದಗಳ ಧಾಟಿಯನ್ನು ಹಾಗೂ ಹೆಜ್ಜೆ ಹಾಕುವ ವಿಧಾನವನ್ನು ಕರಗತ ಮಾಡಿಕೊಂಡು ಮುಂದೆ ವೀರಭದ್ರ ಕುಣಿತದ ಅಪ್ರತಿಮ ಕಲಾವಿದರೆನಿಸಿದರು. ಶ್ರೀಯುತರು ನಮ್ಮ ರಾಜ್ಯದಲ್ಲಿ ಮಾತ್ರವೇ ಅಲ್ಲದೇ ಹೊರರಾಜ್ಯಗಳಲ್ಲೂ ವೀರಭದ್ರನ ಕುಣಿತ ಪ್ರದರ್ಶನ ನೀಡುವ ಮೂಲಕ ಕಲೆಯನ್ನು ಪ್ರಚುರಪಡಿಸಿರುವರು. ರಾಜಧಾನಿ ದೆಹಲಿಯಲ್ಲೂ ವೀರಭದ್ರ ನೃತ್ಯ ಪ್ರದರ್ಶನ ನೀಡಿ ಶ್ರೀಮತಿ ಸೋನಿಯಾ ಗಾಂಧಿ ಅವರಿಂದ ಪ್ರಶಂಸೆಗೆ ಪಾತ್ರರು.
ವೀರಗಾಸೆ ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ೨೦೦೬ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಭಾಜನರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರಶಸ್ತಿ, ಸುತ್ತೂರು ಶ್ರೀ ಕ್ಷೇತ್ರ ಪ್ರಶಸ್ತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳಿಂದ ಅವರಿಗೆ ಲಭಿಸಿರುವ ಗೌರವ ಅಸಂಖ್ಯ.
ವೀರಭದ್ರನ ಕುಣಿತವನ್ನು ಪರಿಶ್ರಮದಿಂದ ಅಭ್ಯಾಸ ಮಾಡಿ ಪ್ರದರ್ಶನಗಳನ್ನು ನೀಡುತ್ತ ಆ ಕಲೆಯನ್ನು ಜೀವಂತವಾಗಿಸಿರುವವರು ಶ್ರೀ ಲಿಂಗದೇವವೀರರು ಮಹಾದೇವಪ್ಪ.
ಕೋಲಾಟ, ಮದುವೆ, ವಸಗೆ, ಸೋಬಾನೆ ಪದ, ಹೊಗಳುವ, ಜರಿಯುವ ಪದಗಳನ್ನು ತಾಸುಗಟ್ಟಲೇ ಅನಾಯಾಸವಾಗಿ ಹಾಡುವುದರಲ್ಲಿ ಜನಪ್ರಿಯರಾದವರು ಬೋವಿ ಜಯಮ್ಮ ಅವರು.
ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯ ಕೆಳಕೋಟೆಯವರಾದ ಬೋವಿ ಜಯಮ್ಮ ೮೦ ರ ಇಳಿವಯಸ್ಸಿನಲ್ಲೂ ರಾತ್ರಿಯಿಡೀ ಹಾಡುವ ಜಾನಪದ ಕೋಗಿಲೆ. ಅಜ್ಜಿ ದೊಡ್ಡ ಹನುಮಕ್ಕ ಮಹಾನ್ ಹಾಡುಗಾರ್ತಿ, ಗುಣಸಾಗರಿ, ಮದುಗದ ಕೆಂಪಮ್ಮ, ಈರೋಜಿ, ಕಾಡುಸಿದ್ಧಮ್ಮ, ಬಾಲನಾಗಮ್ಮ ಈ ಕಥನಗೀತೆಗಳನ್ನು ಅವರು ಕಲಿತದ್ದು ತಮ್ಮ ಅಜ್ಜಿಯಿಂದ. ಸ್ಥಳದಲ್ಲೇ ಸಂದರ್ಭಕ್ಕೆ ತಕ್ಕಂತೆ ಪದಕಟ್ಟಿ, ಹಿಮ್ಮೇಳ, ಮುಮ್ಮೇಳಗಳ ಮೂಲಕ ಹಾಡುವುದು ಜಯಮ್ಮ ತಂಡದ ವಿಶೇಷ. ಸಾವಿನ ಸೂತಕದಲ್ಲಿ ಕಳೆಕಟ್ಟಬಲ್ಲ ಹಾಡುಗಾರಿಕೆಗೆ ಅವರು ಹೆಸರುವಾಸಿ. ಕೋಲುಪದ, ಕಥನಗೀತೆ ಹಾಗೂ ಸೋಬಾನೆ ಈ ಮೂರು ಬಗೆಯ ಹಾಡುಗಾರಿಕೆ ಅವರಿಗೆ ಸಿದ್ಧಿಸಿದೆ.
ಕಳೆದ ೩೦ವರ್ಷಗಳಿಂದ ಆಕಾಶವಾಣಿಯ ವಿವಿಧ ಕೇಂದ್ರಗಳಲ್ಲಿ ಹಾಡಿರುವ ಅವರಿಗೆ ಮೈಸೂರು ದಸರಾ ಉತ್ಸವದಲ್ಲಿ ಗೌರವ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮೈಸೂರಿನಲ್ಲಿ ನಡೆದ ಅಖಿಲ ಭಾರತ ಜಾನಪದ ಸಮಾವೇಶದಲ್ಲಿ ‘ಜನಪದ ಕಲಾಶ್ರೀ ಜಯಮ್ಮ’ ಗೌರವಗಳು ಸಂದಿವೆ. ಶ್ರೀಯುತರು ಜಾನಪದ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವರು.
ಚಿತ್ರದುರ್ಗದ ಸಮಗ್ರ ಇತಿಹಾಸವನ್ನು ಕಥನ ಗೀತೆಯ ಮೂಲಕ ಹಾಡಬಲ್ಲ ಏಕೈಕ ಅಪರೂಪದ ಹಾಡುಗಾರ್ತಿ ಎಂಬ ಗೌರವ, ಹಿರಿಮೆಗೆ ಪಾತ್ರರಾದವರು ಶ್ರೀ ಬೋವಿ ಜಯಮ್ಮ.
ಮೋಡಿ ಮಾಡುವ ಕಂಠಸಿರಿ, ಮಾಧುರ್ಯ ತುಂಬಿದ ಧ್ವನಿ, ವಿಶಿಷ್ಟ ರೀತಿಯ ಚೌಡಿಕೆ ಹಾಡುಗಾರಿಕೆಯನ್ನು ಕರಗತ ಮಾಡಿಕೊಂಡಿರುವ ಅಪರೂಪದ ಜಾನಪದ ಹಾಡುಗಾರ್ತಿ ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ.
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು ನಿಬಗೂರು ಗ್ರಾಮದ ಕಾಲಗೆರೆಯ ಶ್ರೀಮತಿ ಉಚ್ಚಂಗೆಮ್ಮ ಅವರಿಗೆ ಈಗ ೬೦ರ ಹರೆಯ. ಕೃಷದೇಹ, ಕಟ್ಟಿಕೊಂಡ ಜಡೆ, ಹಣೆಯಲ್ಲಿ ಕಾಸಗಲದ ಕುಂಕುಮ. ಹಾಡಲು ನಿಂತರೆ ಚೌಡಿಕೆ ರಾಣಿ ! ದೈವದತ್ತ ಇಂಪಾದಕಂಠ, ನಿರಂತರ ಸಾಧನೆಯ ಹಿನ್ನೆಲೆಯಲ್ಲಿ ಚೌಡಿಕೆ ಹಾಡುಗಳನ್ನು ಏರಿಸಿ, ಇಳಿಸಿ, ಹಿಗ್ಗಿಸಿ, ಕುಗ್ಗಿಸಿ, ವಿಸ್ತರಿಸಿ ಹಾಡುವ ಪರಿಯಂತೂ ಅನನ್ಯ. ಚೌಡಿಕೆ ಕಲೆಯೇ ಇವರಿಗೆ ಜೀವನೋಪಾಯ.
೧೯೮೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಏರ್ಪಡಿಸಿದ ಕರ್ನಾಟಕ ಜಾನಪದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯು ೨೦೦೦ನೆಯ ಸಾಲಿನ ಜಾನಪದ ಪ್ರಶಸ್ತಿ ನೀಡಿ ಗೌರವಿಸಿದೆ.
ಜಾನಪದ ಜಾತ್ರೆ ಸೇರಿದಂತೆ ನಾಡಿನ ಸಂಘ ಸಂಸ್ಥೆಗಳು ಏರ್ಪಡಿಸುವ ಸಾಂಸ್ಕೃತಿಕ ಕಾರಕ್ರಮಗಳಲ್ಲಿ ಪಾಲ್ಗೊಂಡು ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಕಲಾಭಿಮಾನಿಗಳಿಗೆ ಉಣಿಸುತ್ತಿರುವ ನಾಡಿನ ಹೆಮ್ಮೆಯ ಕಲಾವಿದೆ ಶ್ರೀಮತಿ ಚೌಡಿಕೆ ಉಚ್ಚಂಗೆಮ್ಮ ಅವರು.
ವಿಶಿಷ್ಟ ಜಾನಪದ ಕಲೆಯ ಹಗಲುವೇಷ ಪ್ರಕಾರದಲ್ಲಿ ಪ್ರಭುತ್ವ ಪಡೆದ ಹಿರಿಯ ಕಲಾವಿದರು ಶಿವಲಿಂಗಪ್ಪ ಅವರು. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಯಾಪಲಪರ್ವಿ ಗ್ರಾಮದ ಈ ಜಾನಪದ ಕಲಾಕುಸುಮಕ್ಕೀಗ ೬೦ರ ಹರೆಯ. ಅಲೆಮಾರಿ ಬದುಕು ಸಾಗಿಸುತ್ತ, ಗ್ರಾಮಗಳ ಹೊರಗೆ ಗುಡಾರಗಳಲ್ಲಿ ದಿನದೂಡುವ ವಿಶಿಷ್ಟ ಜೀವನಶೈಲಿ. ಬದುಕಲು ಆಸ್ತಿ, ಮನೆಗಳ ಹಂಗು ಬೇಕಿಲ್ಲ ಎನ್ನುವ ನಿಜ ಅನಿಕೇತನ. ಈ ಜಾನಪದ ಜಂಗಮರ ಬಳಿ ಇರುವ ಆಸ್ತಿಯೆಂದರೆ ಹಾರ್ಮೋನಿಯಂ, ತಬಲ ಹಾಗೂ ವೇಷಭೂಷಣದ ಉಡುಪುಗಳು ಮಾತ್ರ.
ಐದನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಶ್ರೀಯುತರ ಮಾತೃಭಾಷೆ ತೆಲುಗು ಮತ್ತು ಬುಡ್ಡ. ಅವರು ಕನ್ನಡ, ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲೂ ಮಾತನಾಡಬಲ್ಲ ಬಹುಮುಖ ಪ್ರತಿಭೆ, ಹನ್ನೆರಡು ಮಂದಿ ಹಗಲುವೇಷಗಾರ ಕಲಾವಿದರ ತಂಡ ರಚಿಸಿಕೊಂಡಿರುವ ಶ್ರೀಯುತರು ಭೀಮಾಂಜನೇಯ ಯುದ್ಧ, ಮೋಹಿನಿ ಭಸ್ಮಾಸುರ, ಜಟಾಸುರನ ವಧೆ, ಸುಂದ ಉಪಸುಂದ ಇವೇ ಮೊದಲಾದ ಪ್ರದರ್ಶನಗಳಿಗೆ ಹಗಲುವೇಷ ಹಾಕುವರು.
ಹಂಪಿ, ಮೈಸೂರು ದಸರಾ ಉತ್ಸವಗಳಲ್ಲಿ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲೂ ಹಗಲುವೇಷ ಪ್ರದರ್ಶನ ನೀಡಿದ ಹೆಗ್ಗಳಿಕೆ. ಶ್ರೀಯುತರ ಪ್ರತಿಭೆಯನ್ನು ಪರಿಗಣಿಸಿ ಸರ್ಕಾರ ಹಾಗೂ ಸಂಘ-ಸಂಸ್ಥೆಗಳಿಂದ ಹಲವಾರು ಪ್ರಮಾಣ ಪತ್ರ, ಪ್ರಶಸ್ತಿಗಳ ಗೌರವ ಲಭಿಸಿದೆ.
ಅಲೆಮಾರಿ ಜೀವನ ಸಾಗಿಸಿದರೂ ಅಳಿಯುತ್ತಿರುವ ಹಗಲುವೇಷ ಕಲೆಯನ್ನು ಬೆಳೆಸುತ್ತಿರುವವರು ಶ್ರೀ ಶಿವಲಿಂಗಪ್ಪ.
ಶ್ರೀ ಈರಬಡಪ್ಪ
ನೂರಾರು ಜಾನಪದ ಕಥೆಗಳನ್ನು ತಮ್ಮ ಮಸ್ತಿಷ್ಕದಲ್ಲಿ ತುಂಬಿಟ್ಟುಕೊಂಡಿರುವ ಜಾನಪದ ಭಂಡಾರ ಈರಬಡಪ್ಪ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯಲ್ಲಿ ಜನನ. ಓದು-ಬರಹ ಬಾರದಿದ್ದರೂ ಈರಬಡಪ್ಪ ಅವರು ಹೇಳುವ ಜಾನಪದ ಕಥೆಗಳು ತಮ್ಮ ವಿಶಿಷ್ಟತೆಯ ಮೂಲಕ ಶಿಷ್ಟ ಸಾಹಿತ್ಯದೊಂದಿಗೆ ಸರಿಸಮವಾಗಿ ನಿಲ್ಲಬಲ್ಲವು. ಹಳ್ಳಿಯ ಎಲ್ಲ ಜೀವಸತ್ವಗಳನ್ನು ಮೈಗೂಡಿಸಿಕೊಂಡಿರುವ ಅವರ ಕಥೆಗಳು ವಸ್ತು ವೈವಿಧ್ಯದಿಂದ ಕೂಡಿದ್ದು, ಅದ್ಭುತ ಲೋಕವನ್ನೇ ತೆರೆದಿಡುವ ಚಮತ್ಕಾರವುಳ್ಳವು.
ಚಮತ್ಕಾರ ಅವರ ಕಥೆಗಳ ಜೀವಾಳ, ಪ್ರತಿಯೊಂದು ಕಥೆಯಲ್ಲೂ ಸಮುಚಿತವಾದ ಸಂಭಾಷಣೆ, ವಿಭಿನ್ನ ನಿರೂಪಣೆ ಅವರ ವೈಶಿಷ್ಟ್ಯ. ಕಥೆಗಳನ್ನು ಗ್ರಾಮೀಣ ಪರಿಸರಕ್ಕೆ ಹೊಂದಿಸಿ ತತ್ಕಾಲೀನ ಜೀವನವನ್ನು ಚಿತ್ರಿಸುವಂತೆ ಮಾಡಿ ಥಟ್ಟನೆ ಪ್ರಾಚೀನ ಕಾಲದ ವಸ್ತುವನ್ನು ಎತ್ತಿಕೊಳ್ಳುವ ಮೂಲಕ ಕಥೆಗೆ ಹೊಸತೊಂದು ತಿರುವು ನೀಡುವ ಕಲೆಗಾರಿಕೆ ಅವರದು. ಶ್ರೀಯುತರ ಸಹಜ ಪ್ರತಿಭೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಗೌರವ, ಮೈಸೂರಿನ ದಸರಾ ನವರಾತ್ರಿ ರಂಗೋತ್ಸವ ಗೌರವಗಳು ಸಂದಿವೆ.
ಜಾನಪದ ಕಥೆಗಳ ಆಗರ ಎನಿಸಿರುವ ಈರಬಡಪ್ಪ ಅನನ್ಯ ಕಥೆಗಾರರು. ಅವರಲ್ಲಿರುವ ಜಾನಪದ ಕಥಾ ಸಾಹಿತ್ಯ ಖಾಲಿಯಾಗದ ಬತ್ತದ ತೊರೆಯಂತೆ, ಮೊಗೆದಷ್ಟೂ ಉಕ್ಕುಕ್ಕಿ ಬರುತ್ತದೆ.
ಸೈದ್ಧಾಂತಿಕ ಮತ್ತು ಅನ್ವಯಿಕ ಜಾನಪದ ಕ್ಷೇತ್ರದಲ್ಲಿ ಆಳವಾದ ಪರಿಜ್ಞಾನ ಪಡೆದವರು ಡಾ. ಅಂಬಳಿಕೆ ಹಿರಿಯಣ್ಣ
ಅವರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಅಂಬಳಿಕೆಯಲ್ಲಿ ಜನನ, ಜಾನಪದ ಗೀತೆ, ಕಥೆ, ಲಾವಣಿ ಇವೇ ಮೊದಲಾದ ಪ್ರಕಾರಗಳಲ್ಲಿ ಅವರು ನಡೆಸಿರುವ ಅಧ್ಯಯನ, ಸಂಶೋಧನೆ, ನೀಡಿದ ಕೊಡುಗೆ ಅಪಾರ.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮತ್ತು ಜಾನಪದ ಪ್ರಾಧ್ಯಾಪಕರಾಗಿ ಸೇವೆ. ಕರ್ನಾಟಕ, ಕುವೆಂಪು, ಗುಲ್ಬರ್ಗಾ, ಗುವಾಹತಿ, ಹೈದ್ರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಎಂ.ಫಿಲ್, ಪಿಎಚ್.ಡಿ. ಕಾರ್ಯಕ್ರಮಗಳ ಮೌಲ್ಯ ನಿಷ್ಕರ್ಷಕರಾಗಿ ಸೇವೆ ಸಲ್ಲಿಕೆ. ಸುಮಾರು ೧೭ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮಾರ್ಗದರ್ಶನ ನೀಡಿದ ಹಿರಿಮೆ ಅವರದು.
ಶಿವಮೊಗ್ಗ ಜಿಲ್ಲೆಯ ಜಾನಪದ ಕಥೆಗಳು, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಕಾಡುಗೊಲ್ಲರ ಜನಪದ ಗೀತೆಗಳು, ಜಾನಪದ ವಿವಕ್ಷೆ, ಹಚ್ಚೆ, ಕೌದಿ- ಇವು ಅವರು ರಚಿಸಿರುವ ಕೃತಿಗಳಲ್ಲಿ ಕೆಲವು.
ಮೂವತ್ತೂರು ವರ್ಷಗಳ ಕಾಲ ಕ್ಷೇತ್ರಕಾರ್ಯ ಸಂಶೋಧಕರಾಗಿ ಅಧ್ಯಯನ ನಡೆಸುವ ಮೂಲಕ ತಲೆತಲೆಮಾರುಗಳಿಂದ ಉಳಿದು ಬಂದಿದ್ದ ಕಂಠಸ್ಥ ಸಾಹಿತ್ಯಕ್ಕೆ ಗ್ರಂಥಸ್ಥ ರೂಪ ಕೊಟ್ಟವರು ಡಾ. ಅಂಬಳಿಕೆ ಹಿರಿಯಣ್ಣ ಅವರು.
ಚಿಕ್ಕಮರಿಯಪ್ಪ

ಬೀಸು ಕಂಸಾಳೆ ಕಲೆಯನ್ನು ಸುಮಾರು ಐದು ದಶಕಗಳಿಂದಲೂ ಪ್ರದರ್ಶಿಸುತ್ತಾ ಬಂದಿರುವ ಹಿರಿಯ ಕಲಾವಿದ ಚಿಕ್ಕಮರಿಯಪ್ಪ, ನಾಡಿನುದ್ದಕ್ಕೂ ಬೀಸುಕಂಸಾಳೆ ಪ್ರದರ್ಶನದಲ್ಲಿ ಹೆಸರು ಪಡೆದಿದ್ದಾರೆ. ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಷ್ಠಿತ ಉತ್ಸವಗಳಲ್ಲಿ ಭಾಗವಹಿಸಿದ್ದಾರೆ.
ಜಾನಪದ ಕಲೆಯನ್ನು ಜೀವಂತವಾಗಿಟ್ಟು ಅದರಲ್ಲಿ ಹಲವಾರು ಉತ್ಕೃಷ್ಟ ಬದಲಾವಣೆಗಳನ್ನು ತರುವಲ್ಲಿ ಚಿಕ್ಕಮರಿಯಪ್ಪ ಅವರು ಶ್ರಮಿಸಿದ್ದು ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಜಾನಪದ ಲೋಕೋತ್ಸವ ಪುರಸ್ಕಾರಗಳು ಸೇರಿದಂತೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಸಂದಿವೆ.
ಲಕ್ಷ್ಮೀಬಾಯಿ ರೇವಲ್

ಲಕ್ಷ್ಮೀಬಾಯಿ ರೇವಲ್ ಅವರು ತಮ್ಮ ಮನೆತನದ ಕಸುಬಾದ ಬುರಕಥೆ ಹೇಳುವ ವೃತ್ತಿಯನ್ನು ಅನೂಚಾನವಾಗಿ ಮುಂದುವರೆಸುತ್ತಾ ಸುಮಾರು ಏಳೂವರೆ ದಶಕಗಳನ್ನು ಕಳೆದಿದ್ದಾರೆ. ಪಾರಂಪರಾನುಗತವಾಗಿ ಬಂದ ಮಹಾಕಾವ್ಯಗಳ ಜೊತೆಗೆ ಶ್ರೀ ರೇಣುಕಾದೇವಿ ಯಲ್ಲಮ್ಮನ ಮಹಾಕಾವ್ಯ, ಕುಮಾರರಾಮನ ಮಹಾಕಾವ್ಯ, ಕೃಷ್ಣಗೊಲ್ಲರಾಯನ ಮಹಾಕಾವ್ಯ ಮೊದಲಾದ ಇಪ್ಪತ್ತಮೂರಕ್ಕೂ ಹೆಚ್ಚು ಮಹಾಕಾವ್ಯಗಳನ್ನು ಪ್ರಸ್ತುತಿ ಪಡಿಸುವ ನೈಪುಣ್ಯತೆ ಹೊಂದಿರುವ ಲಕ್ಷ್ಮೀಬಾಯಿ ರೇವಲ್ ಜಾನಪದ ಹಾಡುಗಳನ್ನು ಹಾಗೂ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲವರು. ಪ್ರಾಚೀನ ಕಾವ್ಯದ ಜೊತೆಗೆ ಆಧುನಿಕವಾದ ವಚನಗಳು ತತ್ವಪದಗಳನ್ನು ಹಾಡುವ ಅಭ್ಯಾಸ ಮಾಡಿಕೊಂಡಿರುವ ಲಕ್ಷ್ಮೀಬಾಯಿ ರೇವಲ್ ಅವರು ನಾಡಿನ ಹಲವಾರು ಸಾಂಸ್ಕೃತಿಕ ಸಮ್ಮೇಳನಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಪಡೆದಿದ್ದಾರೆ.
ಪೂಜಾಲ ನಾಗರಾಜ್

ನಾಲ್ಕು ತಲೆಮಾರುಗಳಿಂದ ಕರಗ ಹೊರುವ ಕಾಯಕವನ್ನೂ ನಡೆಸಿಕೊಂಡು ಬರುತ್ತಿರುವ ಕುಟುಂಬ ಕುಡಿಯಾದ ನಾಗರಾಜ್ ಬಾಲ್ಯದಿಂದಲೇ ಕರಗ ಧಾರ್ಮಿಕ ಕಲೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದರೂ ಕರಗ ಹೊರುವುದನ್ನು ಆರಂಭಿಸಿದ್ದು ತಮ್ಮ ೧೮ನೇ ವಯಸ್ಸಿನಲ್ಲಿ.
ನಾಲ್ಕು ದಶಕಗಳಿಂದ ನೂರಾರು ಸ್ಥಳಗಳಲ್ಲಿ ಕರಗಹೊರುವ ಪರಿಪಾಠವನ್ನು ರೂಢಿಸಿಕೊಂಡು ಬಂದಿರುವ ನಾಗರಾಜ್ ಆರಾಧನಾ ಕಲೆಯಾದ ಕರಗ ಶಕ್ಯುತ್ಸವವನ್ನು ಅತ್ಯಂತ ನೇಮ ನಿಷ್ಠೆಗಳಿಂದ ಆಚರಿಸುತ್ತಾ ಬಂದಿದ್ದಾರೆ. ತಂದೆ ಪ್ರಸಿದ್ದ ಕರಗ ಪೂಜಾರಿ ಮುನಿಸ್ವಾಮಿ ಅವರೊಂದಿಗೆ ಕರಗಹೊರುವುದನ್ನು ಕಲಿತ ನಾಗರಾಜ್ ಕರಗಕ್ಕೆ ಬೇಕಾದ ಎಲ್ಲಾ ಪೂರಕ ತಯಾರಿಗಳನ್ನು ಮಾಡುವ ಕೌಶಲ್ಯವನ್ನು ರೂಢಿಸಿಕೊಂಡಿದ್ದಾರೆ. ಮಲ್ಲಿಗೆ ಹೂವಿನಿಂದ ಪ್ರಸಿದ್ಧವಾಗುವ ಕರಗಕ್ಕೆ ಅನೇಕ ರೀತಿಯ ಆಕರ್ಷಕ ಅಲಂಕಾರಗಳನ್ನು ಮಾಡುವ ನಾಗರಾಜ್ ಶಾಸ್ತ್ರೀಯ ಸಂಗೀತವನ್ನು ತಿಳಿದುಕೊಂಡಿದ್ದಾರೆ. ತಮಟೆ, ನಾದಸ್ವರ ಹಾಗೂ ಬ್ಯಾಂಡ್ ಸಂಗೀತಕ್ಕೆ ಆಕರ್ಷಕವಾಗಿ ಕರಗನೃತ್ಯ ಮಾಡುವ ನಾಗರಾಜ್ ಅವರು ಜೀವನೋಪಾಯಕ್ಕಾಗಿ ನಂಬಿರುವುದು ಬೇಸಾಯವನ್ನು.
ಮಾರುತಿ ಹಣಮಂತ ಭಜಂತ್ರಿ ಅವರು ಜಾನಪದ ವಾದ್ಯಗಳನ್ನು ಅತ್ಯಂತ ಸುಲಲಿತವಾಗಿ ನುಡಿಸುವುದರಲ್ಲಿ ಸಿದ್ಧಹಸ್ತರು. ಭಜಂತ್ರಿ ಅವರು ಸನಾದಿವಾದನ ಹಾಗೂ ಭಜಂತ್ರಿವಾದನ ಕಲೆಯ ಪರಿಣತರು. ಇವರ ವಾದನದ ವೈಶಿಷ್ಟ್ಯಕ್ಕೆ ತಲೆದೂಗುವಷ್ಟೂ ಚಿರಪರಿಚಿತ. ಮಾರುತಿ ಹಣಮಂತ ಭಜಂತ್ರಿ ಅವರಿಗೆ ಹಲವಾರು ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ದೊರಕಿದ್ದು ಜನಮೆಚ್ಚುಗೆ ಗಳಿಸಿದ್ದಾರೆ.
ಎಸ್. ಯೋಗಅಂಗಂ

ಎಳೆಯ ವಯಸ್ಸಿನಿಂದಲೇ ಕೀಲುಕುದುರೆ ಕಲೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿರುವ ಎಸ್. ಯೋಗಲಿಂಗಂ ಕೀಲು ಕುದುರೆ ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾರೆ. ತಂದೆಯವರಿಂದ ಬಳುವಳಿಯಾಗಿ ಪಡೆದ ಕೀಲುಕುದುರೆ ಕಲೆಯನ್ನು ನಿರಂತರವಾಗಿ ಪ್ರದರ್ಶಿಸಿದ ಕಾರಣದಿಂದಾಗಿ ಎರಡೂ ಕಾಲುಗಳಿಗೆ ಚಿಕಿತ್ಸೆ ಮಾಡಿಸಿಕೊಂಡಿರುವ ಯೋಗಲಿಂಗಂ ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಿದ್ದಾರೆ.
ಹತ್ತಾರು ಚಲನಚಿತ್ರಗಳಲ್ಲಿಯೂ ಕೀಲು ಕುದುರೆ ಕಲೆಯನ್ನು ಪ್ರದರ್ಶನ ಮಾಡಿರುವ ಎಸ್. ಯೋಗಲಿಂಗಂ ವಿದೇಶಿ ಕಲೆಗಾರರಿಂದಲೂ ಪ್ರಶಂಸೆ ಪಡೆದಿದ್ದು ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಸಂದಿವೆ.

ಪರೋಪಕಾರದಲ್ಲೇ ಬದುಕಿನ ಸಾರ್ಥಕತೆಯ ಕಂಡುಕೊಂಡ ನಿಸ್ವಾರ್ಥ ಕಾಯಕಜೀವಿ ಕಮಲಮ್ಮ, ಉಚಿತ ಹೆರಿಗೆ ಮಾಡಿಸುವ ಸೂಲಗಿತ್ತಿ, ಜನಪದ ಭಂಡಾರವುಳ್ಳ ದೇಸೀ ಪ್ರತಿಭೆ, ಅಲೆಮಾರಿ ಸಮುದಾಯಕ್ಕೆ ಸೇರಿದ ಕಮಲಮ್ಮ ಕೋಲಾರದವರು. ಹಟ್ಟಿಚಿನ್ನದಗಣಿ ಹುಟ್ಟೂರು. ಶಾಲೆಯ ಮೆಟ್ಟಲೇ ಹತ್ತದ ನತದೃಷ್ಟೆ, ಆದರೆ, ಲೋಕಜ್ಞಾನದಲ್ಲಿ ನಿಪುಣೆ, ಅಮ್ಮ ನಾಗಮ್ಮನಿಂದ ಸೂಲಗಿತ್ತಿತನ, ಅಪ್ಪನಿಂದ ಪಾರಂಪರಿಕ ನಾಟಿ ಔಷಧಿ ನೀಡುವಿಕೆ ಕಮಲಮ್ಮಳಿಗೆ ಬಂದ ಬಳುವಳಿ, ಗರ್ಭಿಣಿಯರ ಪಾಲಿನ ನೆಚ್ಚಿನ ಕಮಲಜ್ಜಿ, ಆಸ್ಪತ್ರೆಯ ಮುಖವನ್ನೇ ನೋಡದ ಕಮಲಮ್ಮ ಈವರೆಗೆ ೫೦೦ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಸೂಲಗಿತ್ತಿ. ಎಲ್ಲವೂ ಸುಸೂತ್ರ ಹೆರಿಗೆಯೇ. ಕಾಮಾಲೆ, ತಲೆಶೂಲೆ, ಪಿತ್ತ ಅಜೀರ್ಣ ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧಿ ಮೂಲಕ ಪರಿಹಾರ ನೀಡುವ ಈ ನಾಟಿವೈದ್ಯೆಗೆ ಪರೋಪಕಾರವೇ ಬದುಕಿನ ಗೊತ್ತು-ಗುರಿ. ಕಮಲಮ್ಮ ಜಾನಪದ ಜ್ಞಾನದ ಭಂಡಾರ, ಸೋಬಾನೆ, ಜೋಗುಳ ಮತ್ತು ಬುರ್ರಕಥಾ ಹಾಡುಗಳನ್ನು ಹಾಡುವಲ್ಲಿ ನಿಸ್ಸೀಮೆ. ಆಕೆಯ ಕಂಠದಲ್ಲಿ ಜನಪದ ಹಾಡುಗಳನ್ನು ಕೇಳುವುದೇ ಚೆಂದವೆಂಬುದು ಶ್ರೋತೃಗಳ ಸಾಮಾನ್ಯ ಅಭಿಪ್ರಾಯ. ಎಲೆಮರೆಯಕಾಯಿಯಂತೆ ಬದುಕಿದರೂ, ಬಡತನ ಕಿತ್ತು ತಿನ್ನುತ್ತಿದ್ದರೂ ಎಲ್ಲೆಮೀರಿದ ಲೋಕಸೇವೆಯಲ್ಲಿ ನಿರತವಾಗಿರುವ ಕಮಲಮ್ಮ ಸಮಾಜಸೇವೆಗೆ ಆದರ್ಶ.
ಶ್ರೀ ಗುಡ್ಡ ಪಾಣಾರ

ಕರಾವಳಿ ಭಾಗದ ಅತ್ಯಂತ ಹಿರಿಯ ಅನುಭವಿ ದೈವ ನರ್ತಕರು ಗುಡ್ಡ ಪಾಣಾರ, ದೈವ ಸೇವೆಯಲ್ಲಿ ಬದುಕಿನ ಧನ್ಯತೆಯನ್ನು ಕಂಡುಕೊಂಡ ಅಪರೂಪದ ಕಲಾವಂತರು. ಗುಡ್ಡ ಪಾಣಾರ ಅವರಿಗೆ ದೈವನರ್ತನ ಅಪ್ಪನಿಂದ ಬಂದ ಬಳುವಳಿ, ಕೋಲ ನರ್ತಕರಾಗಿದ್ದ ತಂದೆ ನಾಣು ಪಾಣಾರ ಅವರ ದೈವನರ್ತನವನ್ನು ಕಣ್ಣುಂಬಿಕೊಳ್ಳುತ್ತಲೇ ಬಾಲ್ಯದಲ್ಲೇ ಹೆಜ್ಜೆಹಾಕುತ್ತಾ ದೈವನರ್ತನ ಕಲೆಯನ್ನು ಮೈಗೂಡಿಸಿಕೊಂಡವರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ದೈವನರ್ತನ ಆರಂಭಿಸಿದ ಗುಡ್ಡ ಪಾಣಾರ ಅವರು ವಿವಿಧ ದೈವ ಸಾನಿಧ್ಯಗಳಲ್ಲಿ ಪಂಜುರ್ಲಿ, ಬೊಬ್ಬರ, ಧಮಾವತಿ ಹಾಗೂ ಸ್ತ್ರೀ ದೈವಗಳಾದ ವರ್ತೆ, ತನಿಮಾನಿಗ ಮುಂತಾದ ದೈವಗಳ ನರ್ತನವನ್ನು ಮಾಡುವುದು ವಿಶೇಷ. ಕರಾವಳಿ ದೈವಭಕ್ತರ ಮನದಲ್ಲಿ ಗುಡ್ಡ ಪಾಣಾರ ಅವರು ಮೂಡಿಸಿರುವ ನರ್ತನದ ಛಾಪು ಮತ್ತು ದೈವಭಾವ ವರ್ಣಿಸಲಸದಳ. ಒಂದಲ್ಲ ಎರಡಲ್ಲ ಬರೋಬ್ಬರಿ ೪೬ ವರ್ಷಗಳಿಂದ ಈ ದೈವನರ್ತನದಲ್ಲಿ ಅನವರತ ನಿರತರು. ಕಾಪುವಿನ ಸುತ್ತಮುತ್ತಲೂ ಜರುಗುವ ಪಿಲಿಕೋಲದಲ್ಲಿ ಗುಡ್ಡ ಪಾಣಾರ ದೈವನರ್ತನ ಅತ್ಯಂತ ಜನಪ್ರಿಯ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಪಾತ್ರರಾಗಿರುವ ಗುಡ್ಡ ಪಾಣಾರ ಅವರ ದೈವನರ್ತನಕ್ಕೆ ಅವರಷ್ಟೇ ಸಾಟಿ ಎನ್ನುವಷ್ಟು ಅಪೂರ್ವ ಕಲೆಗಾರಿಕೆ.

ತುಳುನಾಡಿನ ಪ್ರಮುಖ ಜನಪದ ಆರಾಧನಾ ಪರಂಪರೆಗಳಲ್ಲೊಂದಾಗಿರುವ ‘ಸಿ’ ಆರಾಧನೆಯಲ್ಲಿನ ‘ಕುಮಾರ’ ಶ್ರೀ ವರಾಚಾರ್ ಗೋಪಾಲ ನಾಯ್ಕ ಅವರು.
ಸಿಲ ಆರಾಧನೆಯಲ್ಲಿ ನಲವತ್ತು ವರ್ಷಗಳಿಂದ ‘ಕುಮಾರ’ನಾಗಿ ಭಾಗವಹಿಸುವಿಕೆ, ಸಿಲ ಸಂಧಿ, ಭೂತಗಳ ಪಾಡ್ಡನ, ಕತಗಳು, ಕತೆಗಳು, ಒಗಟುಗಳು, ಗಾದೆಗಳ ನಿಧಿ.
ಗೋಪಾಲನಾಯ್ಕರ ಪ್ರತಿಭೆಯನ್ನೇ ಆಧಾರವಾಗಿಟ್ಟುಕೊಂಡು ಅನೇಕ ದೇಶೀಯ ಹಾಗೂ ವಿದೇಶೀಯ ವಿದ್ವಾಂಸರು ಸಂಶೋಧನೆ ನಡೆಸುತ್ತಿರುವುದು ಇವರೊಂದು ಜನಪದ ನಿಕ್ಷೇಪ ಎಂಬುದಕ್ಕೆ ನಿದರ್ಶನ.
‘ಗೋಪಾಲ ನಾಯ್ಕ ಜನಪದ ಮಹಾಕಾವ್ಯಗಳ ಹಾಡುಗಾರ ಮತ್ತು ಸಿಲ ಆಚರಣೆಯ ನಾಯಕ’ ಎಂಬ ವಿಷಯದ ಬಗೆಗೆ ವಿಶೇಷ ಸಂಶೋಧನೆ ನಡೆಸುತ್ತಿರುವ ಫಿಲ್ಲೆಂಡಿನ ತೌಲಹಾಂಕೋ, ಅನೇಂ ಹಾಂಕೋ, ತುಳುನಾಡಿನ ಡಾ. ವಿವೇಕ ರೈ, ಡಾ. ಚಿನ್ನಪ್ಪಗೌಡ ಇಂಥ ಸಂಶೋಧಕರು ಹಏನಾರು ಸಾವಿರ ಸಾಲುಗಳೀಗಿಂತಲೂ ಏಸ್ತಾರವಾಗಿರುವ ಸಿಲಿಸುಧೆಯನ್ನು ನಾಯಕರಿಂದ ಸಂಗ್ರಹಿಸಿರುವುದು ಮಹತ್ವದ ಸಂಗತಿ. ಇದು ಇಂಗ್ಲಿಷಿಗೂ ಭಾಷಾಂತರಗೊಂಡಿರುವುದು ಹೆಮ್ಮೆಯ ವಿಷಯ. ಶ್ರೀ ಗೋಪಾಲ ನಾಯ್ಕ ಅವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಸಿಲ ಆಚರಣೆ ತಲೆ ತಲಾಂತರದಿಂದ ಆಚರಣೆಯಲ್ಲಿರುವ ಜನಪದ ಆಚರಣಾ ಕಲೆ. ಇವನ್ನು ಪಲಿಸುವ ಜನಪದ ಕಲೆಗಾಲಕೆಯ ಜೀವಂತ ಸಾಕ್ಷಿ ಶ್ರೀ ಗೋಪಾಲನಾಯ್ಕ ಅವರು ಸಿಲ ಮಹಾಕಾವ್ಯವನ್ನು ಮುಖತಃ ಪಠಣ ಪ್ರಾವೀಣ್ಯತೆ ಹಾಗೂ ಹೆಸರಾಂತ ಜನಪದ ಆಶುಕವಿ ಶ್ರೀ ಗೋಪಾಲನಾಯ್ಕ ಅವರು.

ಜನಪ್ರಿಯ ಬಯಲಾಟಗಳಲ್ಲಿ ಒಂದಾದ ಶ್ರೀ ಕೃಷ್ಣ ಪಾರಿಜಾತದಲ್ಲಿ ಶ್ರೀಕೃಷ್ಣನ ಪಾತ್ರದಿಂದ ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡವರು ಮುಗಳಖೇಡದ
ಸೈದು ಸಾಬ ಲಾಡ ಖಾನ ಅವರು.
ಚಿಕ್ಕಂದಿನಿಂದಲೇ ಶ್ರೀಕೃಷ್ಣ ಪಾಲಜಾತದ ಒಲವು ಬೆಳೆಸಿಕೊಂಡ ಶ್ರೀ ಲಾಡಖಾನ ಸೇಲಕೊಂಡದ್ದು ಅಂಗಪ್ಪ ಮಾಸ್ತರ ಹುಡೇದ ಅವರಲ್ಲ, ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಭಕ್ತಿಪ್ರಧಾನ ನಾಟಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದ ಲಾಡ ಖಾನ ಅವರು ಅಂಗಪ್ಪ ಮಾಸ್ತರ ಅಭಿನಯಕ್ಕೆ ಮಾರುಹೋಗಿ ಅವರ ಶಿಷ್ಯರಾದರು. ಮನರಂಜನೆ, ಸಂಗೀತ, ಲಯಗಾಲಕೆ ಹಾಗೂ ಆಧ್ಯಾತ್ಮ ವಿಚಾರಧಾರೆಗಳಿರುವ ಶ್ರೀ ಕೃಷ್ಣ ಪಾಲಜಾತ ಬಯಲಾಟದಲ್ಲಿ ಮುಖ್ಯವಾದ ಶ್ರೀ ಕೃಷ್ಣ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ನಾಡಿನ ಗಮನ ಸೆಳೆದ ಸೈದು ಸಾಬ ಲಾಡ ಖಾನ ನಾಲೈದು ಪಾರಿಜಾತ ಕಂಪನಿಗಳಲ್ಲಿ ಶ್ರೀ ಕೃಷ್ಣ ಪಾತ್ರಧಾಲಿಯಾಗಿ ಮಿಂಚಿದರು. ಶ್ರೀ ಕೃಷ್ಣ ಪಾಲಜಾತದಲ್ಲಿ ಮುಖ್ಯಪಾತ್ರವಾದ ಶ್ರೀಕೃಷ್ಣನ ಅಭಿನಯಕ್ಕೆ ಹೊಸ ಆಯಾಮ ಕೊಟ್ಟ ಲಾಡಖಾನರವರು ಅನೇಕಲಗೆ ಶ್ರೀಕೃಷ್ಣನ ಪಾತ್ರದ ಅಭಿನಯವನ್ನು ಹೇಳಿಕೊಟ್ಟರು.
ಎತ್ತರ ನಿಲುವು, ಸುಂದರ ರೂಪದ ಸೈದು ಸಾಬರು ಶ್ರೀ ಕೃಷ್ಣನ ಪಾತ್ರಧಾರಿಯಾಗಿ ತಮ್ಮ ಛಾಪು ಮೂಡಿಸಿದರಲ್ಲದೆ, ನಾಲ್ಕು ದಶಕಗಳ ಕಾಲ ಶ್ರೀ ಕೃಷ್ಣ ಪಾಲಜಾತ ಬಯಲಾಟವನ್ನು ಮತ್ತಷ್ಟು ಜನಪ್ರಿಯಗೊಳಿಸಿದರು.
ಕರ್ನಾಟಕವಲ್ಲದೆ, ಮಹಾರಾಷ್ಟ್ರ ರಾಜ್ಯದಲ್ಲೂ ಅಪಾರ ಅಭಿಮಾನಿಗಳನ್ನು ಪಡೆದಿರುವ ಸೈದು ಸಾಬ ಲಾಡ ಖಾನ ಆಕಾಶವಾಣಿ, ದೂರದರ್ಶನಗಳ ಮೂಲಕವೂ ಜನಮಾನಸ ತಲುಪಿದ್ದಾರೆ.
ಅಸಂಖ್ಯ ಅಭಿಮಾನಿಗಳನ್ನು, ನೂರಾರು ಶಿಷ್ಯರನ್ನು ಪಡೆದಿರುವ ಲಾಡ ಖಾನ ಇಂದು ಕೃಷ್ಣ ಪಾಲಜಾತ ಕ್ಷೇತ್ರದಿಂದ ನಿವೃತ್ತರಾದರೂ ಜನಮನದಿಂದ ಈಗಲೂ ದೂರವಾಲಿಲ್ಲ.
ಅದ್ಭುತವಾದ ಅಭಿನಯ ಕೌಶಲ್ಯದಿಂದ ಶ್ರೀಕೃಷ್ಣನ ಪಾತ್ರಕ್ಕೆ ಜೀವ ತುಂಬಿದ ಕೃಷ್ಣ ಪಾರಿಜಾತದ ಅಪ್ರತಿಮ ಕಲಾವಿದ ಶ್ರೀ ಸೈದು ಸಾಬ ಲಾಡ ಖಾನ ಅವರು.
ಶ್ರೀಮತಿ ಹೊನ್ನಮ್ಮ
ಜನಪದ ಗೀತೆ-ಕಥೆಗಳ ಸಮೃದ್ಧ ಭಂಡಾರ, ಜಾನಪದ ವಿಶ್ವಕೋಶ ಶ್ರೀಮತಿ ಹೊನ್ನಮ್ಮ ಅವರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ಚಿನ್ನಾದೇವಿ ಅಗ್ರಹಾರದವರಾದ ಶ್ರೀಮತಿ ಹೊನ್ನಮ್ಮ ಜನಪದ ಕಥೆಗಳ ಲೋಕವನ್ನೇ ಬಿಚ್ಚಿಡಬಲ್ಲರು. ವಿವಿಧ ಆಚರಣೆಗಳು, ಸಂಪ್ರದಾಯ ನಂಬಿಕೆಗಳ ಬಗ್ಗೆ ಅಪಲಮಿತ ಜ್ಞಾನವುಳ್ಳ ಶ್ರೀಮತಿ ಹೊನ್ನಮ್ಮನವರು ಗಾದೆ-ಒಗಟುಗಳ ನಿಕ್ಷೇಪ; ಹೊಲದ ಸೊಪ್ಪು, ಕಾಳುಗಳನ್ನೇ ಬಳಸಿ ವೈವಿಧ್ಯಮಯ ಸಾರುಗಳನ್ನು ತಯಾಲಿಸುವ ಪಾಕತಜ್ಞೆ, ಜನಪದ ಹಾಡುಗಾಲಕೆ, ಮನೆಮದ್ದು, ಸೂಲುತ್ತಿ ಕಾರ್ಯ, ರಂಗೋಲಿ,-ಹೀಗೆ ಬಹುಮುಖ ಪ್ರತಿಭೆಗಳ ಆಗರ.
ಅಗೆದಷ್ಟೂ ಆಳ ಮೊಗೆದಷ್ಟೂ ಶ್ರೀಮಂತ ಜಾನಪದ ವಿವಿಧ ಪ್ರಕಾರಗಳನ್ನು ತೆರೆದಿಡಬಲ್ಲ ವಿಪುಲ ಜೀವನಾನುಭವವುಳ್ಳ ಇಆ ಹರೆಯದ ಶ್ರೀಮತಿ ಹೊನ್ನಮ್ಮನವರ ಜೀವನಗಾಥೆ ಗ್ರಾಮೀಣ ಸಾಂಸ್ಕೃತಿಕ ವರ್ಗದ ಅತ್ಯಪೂರ್ವ ಮಾದಲ. ಶ್ರೀಮತಿ ಹೊನ್ನಮ್ಮನವರ ಜನಪದಜ್ಞಾನಕ್ಕೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಸಾಹಿತ್ಯ ಪಲಷತ್ತಿನ ಪ್ರಶಸ್ತಿ, ಗೌರವ ಸಂದಿವೆ.
ಸನ್ಮಾನ-ಪ್ರಶಸ್ತಿ-ಪುರಸ್ಕಾರಗಳನ್ನು ಬಯಸದ “ಜಾನಪದ ಕಣಜ” ಶ್ರೀಮತಿ ಹೊನ್ನಮ್ಮ ಅವರು.

ಸಂಪ್ರದಾಯದ ಹಾಡುಗಳ ಗಾಯಕಿಯಾಗಿ ಮೂಲ ಜನಪದ ಮಟ್ಟುಗಳನ್ನು ಹಲವಾರು ಶಿಷ್ಯರಿಗೆ ಧಾರೆ ಎರೆಯುತ್ತಿರುವ ಜನಪದ ಕಲಾವಿದೆ ಶ್ರೀಮತಿ ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ ಅವರು.
ಬಾಲ್ಯದಿಂದಲೂ ಜನಪದ ಹಾಡುಗಾಲಕೆಗೆ ಮೀಸಲಿಟ್ಟು ಉತ್ತಮ ಜನಪದ ಗಾಯಕಿ ಎಂಬ ಹೆಸರು ಪಡೆದವರು. ಎಂಬತ್ತೆರಡು ವರ್ಷಗಳ ಇಳಿ ವಯಸ್ಸಿನಲ್ಲೂ ಅದ್ಭುತವಾಗಿ ಹಾಡಬಲ್ಲ ಕರ್ನಾಟಕದ ಹಿಲಿಯ ಜಾನಪದ ಕಲಾವಿದೆ. ಪತಿ ಹಾಡುಗಾಲಕೆ ಹಾಗೂ ಬಯಲಾಟ ಕಲಾವಿದರಾಗಿದ್ದರು. ತಂದೆ ತಾಯಿ ಲಾವಣಿ ಹೇಳುವುದರಲ್ಲಿ ನಿಷ್ಣಾತರು. ಹೀಗೆ ಜನಪದ ಕಲಾವಿದರ ಪರಂಪರೆಯಿಂದ ಬಂದ ಶ್ರೀಮತಿ ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ ಅವರು ವೈವಿಧ್ಯಮಯ ಹಾಡುಗಳ ಗಣಿ. ಅಪೂರ್ವ ಕಂಠಶ್ರೀಯಿಂದ ಉತ್ತುಂಗ ಮಟ್ಟವನ್ನು ಮುಟ್ಟದ ಶ್ರೀಮತಿ ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ ಅವರು ಲಾವಣಿ ಹೇಳುವುದರಲ್ಲೂ, ಬಯಲಾಟದಲ್ಲೂ ನಿಪುಣೆ. ಪಾರಂಪಲಕ ಕಲೆಗೆ ಮಾಧುರ್ಯವನ್ನು ತುಂಬಿದ ಹೆಗ್ಗಳಿಕೆಗೆ ಪಾತ್ರರು. ೧೯೯೪ರ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಅನಕ್ಷರಸ್ಥೆಯಾದರೂ ಸಂಸ್ಕೃತಿ ಸಂಪನ್ನೆ, ನೆನಪಿನ ಕಣಜ. ಅದ್ಭುತ ಕಂಠಶ್ರೀಯಿಂದ ಜನಪದ ಹಾಡುಗಾಲಕೆಯಿಂದ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿರುವ ಜನಪದ ಗಾಯಕಿ ಶ್ರೀಮತಿ ಸಾವಂತ್ರಮ್ಮ ಸಾಬಣ್ಣ ಸುಣ್ಣಗಾರ ಅವರು.

ಬಣ್ಣ ಬಣ್ಣದ ಮುಖವಾಡಗಳೊಂದಿಗೆ ಆಕರ್ಷಿಸುವ ಸೋಮನ ಕುಣಿತವನ್ನು ಜನಪ್ರಿಯಗೊಳಿಸಿದ ಹೆಗ್ಗಳಿಕೆ ತುಮಕೂರಿನ ಡಿ. ಎಸ್. ಗಂಗಾಧರಗೌಡ ಅವರದು.
ಚಿಕ್ಕಂದಿನಿಂದಲೇ ಜನಪದ ಕಲಾವಿದರಾಗಿ ಯಕ್ಷಗಾನ ಪಟುವಾಗಿ ಸೋಮನ ಕುಣಿತವನ್ನು ಗಂಭೀರವಾಗಿ ಅಭ್ಯಾಸ ಮಾಡಿರುವ ದಂಡಿನ ಶಿವರದ ಶ್ರೀ ಗಂಗಾಧರಗೌಡರು ಜನಪದ ಕಲೆಗಳಿಗಾಗಿಯೇ ಸ್ವರ್ಣಶ್ರೀ ಯಕ್ಷಗಾನ ಕಲಾಶಾಲೆ ತೆರೆದವರು.
ಸೋಮನ ಕುಣಿತದಲ್ಲಿ ವೈವಿಧ್ಯತೆಯನ್ನು ತುಂಬುವ ಉದ್ದೇಶದಿಂದ ಅನೇಕ ಪ್ರಯೋಗಗಳನ್ನು ಕೈಗೊಂಡ ಗಂಗಾಧರಗೌಡರು ಒಂದೇ ಬಾರಿಗೆ ೨೫ ಸೋಮಗಳನ್ನು ಕುಣಿಸಿದ್ದರು.
ಒಂದೇ ವೇದಿಕೆಯಲ್ಲಿ ೨೫ ಮಂದಿ ಮೂಡಲಪಾಯ ಯಕ್ಷಗಾನ ಭಾಗವತರನ್ನು ಸೇರಿಸಿ ಕಾರ್ಯಕ್ರಮ ನೀಡಿದ್ದ ಗಂಗಾಧರ ಗೌಡರು ಒಂದೇ ಬಾರಿಗೆ ೧೦ ಯಕ್ಷಗಾನ ಪ್ರದರ್ಶನ ಏರ್ಪಡಿಸಿ ‘ಯಕ್ಷರಾತ್ರಿ’ ಎಂಬ ಪ್ರಶಂಸೆ ಪಡೆದ ಸಂಘಟಕರು.
ದೇಶದ ಅನೇಕ ನಗರಗಳಲ್ಲಿ ತಮ್ಮ ಸೋಮನ ತಂಡದ ಪ್ರದರ್ಶನ ನೀಡಿರುವ ಶ್ರೀ ಗಂಗಾಧರಗೌಡರು ತಮ್ಮ ಊರಿನ ಕೋಲಾಟ, ನಗಾರಿ, ತಮಟೆ, ಕಹಳೆ ವಾದ್ಯಗಳ ಪುನರುಜ್ಜಿವನಕ್ಕೂ ಕೈಹಾಕಿದ್ದಾರೆ.

ಯಕ್ಷಗಾನ ಪ್ರಪಂಚದ ಚಂಡೆ-ಮದ್ದಳೆ ಭಾಗವತಿಕೆಯಲ್ಲಿ ಸಾವಿರ ಸಾವಿರ ಶಿಷ್ಯರನ್ನು ತಯಾರು ಮಾಡಿರುವ ಅಪೂರ್ವ ಗುರು ಶ್ರೀ ಗೋಪಾಲಕೃಷ್ಣ ಕುರುಪ್ ಅವರು.
ಆರು ದಶಕಗಳಿಂದ ಯಕ್ಷಗಾನ ಜಗತ್ತಿನಲ್ಲಿ ಶಿಷ್ಯನಾಗಿ, ಭಾಗವತನಾಗಿ, ಚಂಡೆ ಮದ್ದಳೆ ವಾದಕನಾಗಿ ಮುಮ್ಮೇಳದ ನಾಟ್ಯವನ್ನೂ ಬಲ್ಲವರಾಗಿ ಹೆಸರು ಮಾಡಿರುವುದು ಗೋಪಾಲಕೃಷ್ಣ ಕುರುಪ್ ಅವರ ಹೆಗ್ಗಳಿಕೆ.
ದಕ್ಷಿಣ ಕನ್ನಡದ ಬರ್ಗುಳದವರಾದ ಗೋಪಾಲಕೃಷ್ಣ ಕುರುಪ್ ಐದನೇ ತರಗತಿಯವರೆಗೆ ಮಾತ್ರ ಓದಿ ಯಕ್ಷಗಾನದಲ್ಲಿ ಆಸಕ್ತರಾದರು. ಬಲಿಪ ನಾರಾಯಣ ಭಾಗವತ, ಕುದ್ರೆಕೋಡು ರಾಮಭಟ್, ನಾರಂಪಾಡಿ ಸುಬ್ಬಯ್ಯ ಶೆಟ್ಟಿ ಮುಂತಾದವರ ಬಳಿ ಶಿಷ್ಯರಾಗಿದ್ದು ಯಕ್ಷಗಾನವನ್ನು ಅರಿತುಕೊಂಡ ಶ್ರೀ ಕುರುಪ್ ಮೊದಲು ಸ್ತ್ರೀ ವೇಷ ಕಟ್ಟುತ್ತಿದ್ದರು.
ಬುಡಕಟ್ಟು ದಲಿತರಿಗೆ, ಗಿರಿಜನರಿಗೆ, ಮಲೆಕುಡಿಯರಿಗೆ, ಮಹಿಳೆಯರಿಗೆ ಯಕ್ಷಗಾನದ ಹಿಮ್ಮೇಳ- ಮುಮ್ಮೇಳಗಳನ್ನು ಕಲಿಸಿದ ಶ್ರೀ ಕುರುಪ್ ಧರ್ಮಸ್ಥಳದ ಯಕ್ಷಗಾನ ಲಲಿತ ಕಲಾ ಕೇಂದ್ರದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದವರು. ಯಕ್ಷಗಾನ ಕುರಿತಂತೆ ಹಲವು ಕೃತಿಗಳನ್ನು ಬರೆದ ಕೀರ್ತಿ ಶ್ರೀ ಗೋಪಾಲಕೃಷ್ಣ ಕುರುಪ್ ಅವರದು.
ಶ್ರೀಮತಿ ಮಾಸ್ತಮ್ಮ

ಆಧುನಿಕ ಶಿಕ್ಷಣ ಪಡೆದ ವೈದ್ಯರೂ ಅಚ್ಚರಿಪಡುವಂತೆ ಹಳ್ಳಿಗಾಡಿನಲ್ಲಿ ತಮ್ಮ ಅನುಭವದಿಂದಲೇ ಎರಡೂವರೆ ಸಾವಿರ ಹೆರಿಗೆಗಳನ್ನು ಸುಸೂತ್ರವಾಗಿ ಮಾಡಿಸಿರುವ ಹಿರಿಮೆ ಹುಣಸೂರು ತಾಲ್ಲೂಕು ಹೆಬ್ಬಾಳ ಗಿರಿಜನ ಹಾಡಿಯ ಶ್ರೀಮತಿ ಮಾಸ್ತಮ್ಮ ಅವರದು.
ಪರಂಪರಾನುಗತವಾಗಿ ಬಂದಿರುವ ಗಿಡ ಮೂಲಿಕಾ ಉಪಚಾರದಿಂದ ಸುಲಭವಾಗಿ ಹೆರಿಗೆ ಮಾಡಿಸುವ ಶ್ರೀಮತಿ ಮಾಸ್ತಮ್ಮ ಇಸುಬು, ಉಳುಕು, ಮೂಳೆ ಸಂಬಂಧಿ ಕಾಯಿಲೆಗಳನ್ನೂ ಗುಣಪಡಿಸಬಲ್ಲ ದೇಸಿ ವೈದ್ಯೆ.
ತಾಯಿ ಸಿದ್ಧಮ್ಮನಿಂದ ಕಲಿತ ಈ ಜನಪದ ಔಷಧೋಪಚಾರವನ್ನು ಮನಸಾರೆ ಮಾಡಿಕೊಂಡು ಗ್ರಾಮೀಣ ಜನಮನ ಗೆದ್ದಿರುವ ಶ್ರೀ ಮಾಸ್ತಮ್ಮ ಅವರನ್ನು ಸ್ವಯಂಸೇವಾ ಸಂಸ್ಥೆಯೊಂದು ತನ್ನ – ಆರೋಗ್ಯ ಯೋಜನೆಯ ಸಂಪನ್ಮೂಲ ವ್ಯಕ್ತಿಯನ್ನಾಗಿ ಬಳಸಿಕೊಳ್ಳುತ್ತಿದೆ.
ತಮ್ಮ ಅದ್ಭುತ ಕೈಚಳಕದಿಂದ ಸುಲಭವಾಗಿ ಹೆರಿಗೆ ಮಾಡಿಸುವ ಶ್ರೀ ಮಾಸ್ತಮ್ಮ ಅವರನ್ನು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡಮಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

ಜಾನಪದ ವಿದ್ವಾಂಸರಾದ ಪ್ರೊ. ಹಿ. ಶಿ. ರಾಮಚಂದ್ರೇಗೌಡರು ಸ್ವತಹ ಜನಪದ ಕಲಾವಿದರೂ ಹೌದು.
ಹಾಸನದ ರಂಗನಾಥಪುರದವರಾದ ರಾಮಚಂದ್ರೇಗೌಡರು ಕೇರಳದ ತಿರುವನಂತಪುರ ಹಾಗೂ ಕಲ್ಲಿಕೋಟೆಗಳಲ್ಲಿ ಮಲಯಾಳಂ ಸಾಹಿತ್ಯ ಸಂಸ್ಕೃತಿ ಸಂಶೋಧನೆ ನಡೆಸಿ ಬಳಿಕ ಮೈಸೂರು * ವಿಶ್ವವಿದ್ಯಾನಿಲಯದಲ್ಲಿ ಜಾನಪದ ಅಧ್ಯಾಪನ ಕೈಗೊಂಡವರು.
ಕರ್ನಾಟಕ ವಿಚಾರವಾದಿ ಒಕ್ಕೂಟ, ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿಗಳಲ್ಲಿ ದಿ ಸಕ್ರಿಯವಾಗಿದ್ದ ಹಿ. ಶಿ. ರಾಮಚಂದ್ರೇಗೌಡರು ಕರ್ನಾಟಕ ಜಾನಪದ ಅಧ್ಯಯನದಲ್ಲಿ ವೈಜ್ಞಾನಿಕ ವೈಚಾರಿಕ ಪಂಥದ ರೂವಾರಿ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿದ್ದ ರಾಮಚಂದ್ರೇಗೌಡರು ಈಗ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು.
ಪ್ರಮುಖವಾಗಿ ಜಾನಪದಕ್ಕೆ ಸಂಬಂಧಿಸಿದ ೧೮ ಕೃತಿಗಳೂ ಸೇರಿದಂತೆ ೨೪ ಕೃತಿಗಳನ್ನು ರಚಿಸಿರುವ ರಾಮಚಂದ್ರೇಗೌಡರು ಬರೆದ ರೈತ ಹೋರಾಟದ ಹಾಡುಗಳು ಬಹುಜನಪ್ರಿಯ.
ತತ್ತ್ವಪದ, ಜನಪದ ಗೀತಗಾಯನ, ರಾಧಾನಾಟ, ಶ್ರೀಕೃಷ್ಣ ಪಾರಿಜಾತ ಕಲೆಗಳನ್ನು ಮೈಗೂಡಿಸಿಕೊಂಡು ಸಮರ್ಥವಾಗಿ ಪ್ರದರ್ಶಿಸುವ ಅಪರೂಪದ ಕಲಾವಿದ ಶ್ರೀ ಲಿಂಗಪ್ಪ ಮಣ್ಣೂರ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಸಾಪುರ ಗ್ರಾಮದ ಒಕ್ಕಲು ಕುಟುಂಬದಿಂದ ಬಂದವರು. ಸಂಗೀತದ ಗೀಳಿನಿಂದಾಗಿ ಚಿಕ್ಕಂದಿನಿಂದಲೇ ಪ್ರಾಥಮಿಕ ಓದಿಗೆ ತಿಲಾಂಜಲಿ ಬಿಟ್ಟರು. ಸರ್ಪಭೂಷಣ ಶಿವಯೋಗಿ ನಾಗಲಿಂಗ, ಶಿಶುನಾಳ ಶರೀಫ, ನಿಜಗುಣ ಶಿವಯೋಗಿ, ಕಡಕೋಳ ಮಡಿವಾಳಪ್ಪ ಮುಂತಾದ ಅನುಭಾವಿ ಕವಿಗಳ ತತ್ವಪದಗಳನ್ನು ಮೈಮರೆಯುವಂತೆ ಹಾಡುವ ಲಿಂಗಪ್ಪನವರು ಜನಪ್ರಿಯ ಗಾಯಕರಾಗಿದ್ದಾರೆ.
ರಾಜ್ಯಾದ್ಯಂತ ಸಂಚರಿಸಿ ಹಾಡಿರುವ ಈ ಕಲಾವಿದನನ್ನು ಹಲವಾರು ಸಂಘ ಸಂಸ್ಥೆಗಳು ಪ್ರೀತಿಯಿಂದ ಗೌರವಿಸಿದಂತೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ೧೯೯೯ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಸುಮಾರು ನಾಲ್ಕುನೂರು ರಾಧಾನಾಟಕದ ಪ್ರದರ್ಶನ ನೀಡಿರುವ ಹಾಗೂ ಸಣ್ಣಾಟವನ್ನು ಪುನರುತ್ಥಾನಗೊಳಿಸಲು ಮುಂದಾಗಿರುವ ಜನಪ್ರೀತಿಯ ಕಲಾವಿದ ಶ್ರೀ ಲಿಂಗಪ್ಪ ಮಣ್ಣೂರ ಅವರು.

ಬಿಜಾಪುರ ಜಿಲ್ಲೆ ಯ ಬಸವನ ಬಾಗೇವಾಡಿಯ ನಿವಾಸಿ ಮಾತಂಗೆವ್ವ ಯಮನಪ್ಪ ಮಾದರ ಪರಿಶಿಷ್ಟ ಜಾತಿಗೆ ಸೇರಿದ ಅಭಿಜಾತ ಜಾನಪದ ಕಲಾವಿದೆ. ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ಬಾಲ ಪ್ರತಿಭೆಯಾಗಿ ಗ್ರಾಮೀಣ ಭಾಗದ ಜಾನಪದ ಸೊಗಡನ್ನು ಬೆಳೆಸಿಕೊಂಡು ಜಾನಪದ ಕಲಾ ತಂಡಗಳಲ್ಲಿ ಪಾತ್ರಧಾರಿಗಳಾಗಿ ಹೆಸರು ಗಳಿಸಿದವರು.
ಮುಂದೆ ಜಾನಪದ ಪ್ರಕಾರಗಳಾದ ಶ್ರೀಕೃಷ್ಣ ಪಾರಿಜಾತದಲ್ಲಿ ಸತ್ಯಭಾಮ, ಕೊರವಂಜಿ, ನಾರದ ಮುಂತಾದ ಪಾತ್ರವಹಿಸಿ ಇವರ ಅಭಿನಯ ಎಲ್ಲರ ಮನೆ ಮಾತಾಗುವಂತೆ ಆಯಿತು. ಅನಂತರ ತಮ್ಮದೇ ಆದ ಶ್ರೀ ಬಸವೇಶ್ವರ ಜಾನಪದ ಮತ್ತು ಬಯಲಾಟಗಳ ಸಂಘವನ್ನು ಸ್ಥಾಪಿಸಿ ತನ್ಮೂಲಕ ” ಹೇಮರೆಡ್ಡಿ ಮಲ್ಲಮ್ಮ” “ಶ್ರೀ ರೇಣುಕಾ ಎಲ್ಲಮ್ಮ” ಮುಂತಾದ ಬಯಲಾಟಗಳನ್ನು ಪ್ರದರ್ಶಿಸಿ ನಾಡಿನ ಉದ್ದಗಲಕ್ಕೂ ಸಂಚರಿಸಿದ್ದಾರೆ. ಇವರ ಮಲ್ಲಮ್ಮನ ಹಾಗೂ ಎಲ್ಲಮ್ಮನ ಪಾತ್ರ ಜನಜನಿತ. ಕೃಷ್ಣ ಪಾರಿಜಾತದಲ್ಲಿನ ರುಕ್ಷ್ಮಿಣಿಯ ಪಾತ್ರದ ಅಭಿನಯಕ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ.
ಬಯಲಾಟ ದೊಡ್ಡಾಟಗಳ ಅಭಿಜಾತ ಕಲಾವಿದೆಯಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಅತ್ಯಂತ ಹೆಸರುವಾಸಿಯಾಗಿ ಜಾನಪದ ನಾಟ್ಯಕಲೆಯ ಮೇರುವಾಗಿ ಬೆಳೆದಿದ್ದಾರೆ ಮಾತಂಗೆವ್ವ ಯಮನಪ್ಪ ಮಾದರ ಅವರು.
ಬೆಳಗಾವಿ ತಾಲ್ಲೂಕಿನ ಮುತನಾಳದಲ್ಲಿ ೧೯೩೨ರಲ್ಲಿ ಹುಟ್ಟಿದ ಡಾ. ಎಂ.ಎಸ್.ಲಠ್ಠೆ ಅವರು ಬೆಳಗಾವಿಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಅನಂತರ ೧೯೫೮ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಪದವಿ ತರಗತಿಯಲ್ಲಿ ಇದ್ದಾಗಲೇ ಜಾನಪದದ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡ ಇವರಿಗೆ ಜಾನಪದದ ವಿವಿಧ ವಿಷಯಗಳನ್ನು ಸಂಗ್ರಹಿಸುವುದು ಒಂದು ಹವ್ಯಾಸವಾಯಿತು.
ಜಾನಪದ ಹಾಗೂ ಸಾಹಿತ್ಯ ಕ್ಷೇತ್ರಗಳೆರಡರಲ್ಲಿಯೂ ಕೆಲಸ ಮಾಡಿರುವ ಶ್ರೀಯುತರು ಇದುವರೆಗೆ ಸುಮಾರು ೩೪ ಕೃತಿಗಳನ್ನು ಹೊರತಂದಿದ್ದಾರೆ. ಸಭೆ ಸಮ್ಮೇಳನಗಳಲ್ಲಿ ವಿಚಾರ ಗೋಷ್ಠಿಗಳಲ್ಲಿ ನೂರಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯ ಹಾಗೂ ಯು.ಜಿ.ಸಿ. ನೆರವಿನೊಂದಿಗೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಜಾನಪದ ಕಥೆ ಮತ್ತು ಹಾಡುಗಳ ಸಂಗ್ರಹ, ಸಂಪಾದನೆ, ಪ್ರಕಟನೆ ಮಾಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಯಕ್ಷಗಾನ ಅಕಾಡೆಮಿ ಬಹುಮಾನಗಳನ್ನು ಪಡೆದಿರುವ ಶ್ರೀಯುತ ಮಲ್ಲಿಕಾರ್ಜುನ ಲರೆಯವರು ಕನ್ನಡದ ಅಪರೂಪದ ಲೇಖಕರು.
ಶ್ರೀ ಚಿಕ್ಕನರಸಪ್ಪ
ತಮಟೆ ಕರ್ನಾಟಕದ ಅಪೂರ್ವ ಜನಪದ ಕಲೆಗಳಲ್ಲೊಂದು. ಬಹುಪಾಲು ಅಸ್ಪೃಶ್ಯ ಜನಸಮುದಾಯದ ಅಭಿವ್ಯಕ್ತಿ ಕಲೆಯಾದ ತಮಟೆ, ವಿವಿಧ ಧಾರ್ಮಿಕ ಆಚರಣೆಗಳ ಅವಿಭಾಜ್ಯ ಅಂಗವಾಗಿ ಬೆಸೆದುಕೊಂಡಿದೆ. ತಮಟೆ ಕಲೆಯೊಂದಿಗೆ ತಮ್ಮ ಜೀವನವನ್ನೇ ಬೆಸೆದುಕೊಂಡ ಹಿರಿಯ ಕಲಾವಿದ ಬೆಂಗಳೂರಿನ ಚಿಕ್ಕನರಸಪ್ಪ ತಮಟೆ ನರಸಪ್ಪನೆಂದೇ ಪ್ರಸಿದ್ಧಿ.
ವಂಶಪಾರಂಪರ್ಯ ಬಳುವಳಿಯಾಗಿ ಬಂದ ಈ ಕಲೆ ನರಸಪ್ಪನವರ ಜೀವನದ ಕಾಯಕವೇ ಆಯಿತು. ತಮ್ಮ ಅದ್ಭುತ ತಮಟೆ ವಾದನದಿಂದಲೇ ಕ್ಷಣ ಮಾತ್ರದಲ್ಲಿ ನೆರೆದ ಸಾವಿರಾರು ಜನರನ್ನು ಮಂತ್ರಮುಗ್ಧಗೊಳಿಸುವ ನರಸಪ್ಪನವರು ನಾಡಿನಾಚೆಗೂ ಈ ಕಲೆಯ ಠೇಂಕಾರವನ್ನು ಪಸರಿಸಿದ್ದಾರೆ. ತಮಟೆ ಕಲೆಯೊಂದಿಗೇ ಬೆಳೆಯುತ್ತಾ ನೂರಾರು ಯುವ ಕಲಾವಿದರನ್ನು ಬೆಳೆಸುತ್ತಾ ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಶ್ರೀಯುತ ನರಸಪ್ಪನವರಿಗೆ ೨೦೦೪ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲು ಅತ್ಯಂತ ಸಂತೋಷವೆನಿಸುತ್ತದೆ.
ಡಾ. ಎಲ್ ಆರ್ ಹೆಗಡೆ

ಸುಮಾರು ಎಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಎಪ್ಪತ್ತೊಂಬತ್ತು ವರ್ಷದ ಡಾ. ಎಲ್ ಆರ್ ಹೆಗಡೆಯವರು ಕನ್ನಡ ಜಾನಪದ ಸಾಹಿತ್ಯ ಕ್ಷೇತ್ರ ಕಂಡ ಹಿರಿಯ ವಿದ್ವಾಂಸರು.
ಉತ್ತರ ಕನ್ನಡ ಜಿಲ್ಲೆಯ ಜಾನಪದದ ಅಧಿಕೃತ ವಕ್ತಾರರೆಂಬ ಖ್ಯಾತಿವೆತ್ತ ಶ್ರೀ ಹೆಗಡೆ ಅವರು ಸಂಗ್ರಹಿಸಿ ಪ್ರಕಟಿಸಿದ ಇನ್ನೂರಕ್ಕೂ ಹೆಚ್ಚು ಜಾನಪದ ಲೇಖನಗಳು ಮತ್ತು ಜಾನಪದ ಕಥೆಗಳು ವಿದ್ವಾಂಸರಿಂದ ಪ್ರಶಂಸಿಸಲ್ಪಟ್ಟಿವೆ. ‘ನಾಟಿ ವೈದ್ಯ’ ಎಂಬ ಕೃತಿ ಹಲವು ಮುದ್ರಣ ಕಂಡು ಶ್ರೀಯುತರಿಗೆ ಖ್ಯಾತಿ ತಂದು ಕೊಟ್ಟ ಗ್ರಂಥ.
ಮುಕರಿ ಮತ್ತು ಹೊಲೆಯರ ಪದಗಳು, ಗೊಂಡರ ಪದಗಳು, ಹಾಲಕ್ಕಿ ಹೆಂಗಸರ ಹಾಡುಗಳು, ಗುಮ್ಮಟೆ ಪದಗಳು, ಉತ್ತರ ಕನ್ನಡ ಜಿಲ್ಲೆಯ ನಾಮಧಾರಿ ಹೆಂಗಸರ ಹಾಡುಗಳು ಮುಂತಾದವು ಜಾನಪದ ಕಾವ್ಯಗಳಾದರೆ ಸಿದ್ಧಿಯರ ಕಥೆಗಳು, ಹೊನ್ನಮ್ಮನ ಕಥೆಗಳು, ಮಲೆನಾಡಿನ ಕಥೆಗಳು, ಸಣಕೂಸನ ಕಥೆಗಳು ಮುಂತಾದವು ದಲಿತರ ಬದುಕಿನ ಚಿತ್ರಣ ಒಳಗೊಂಡ ಕಥನ ಕಾವ್ಯಗಳಾಗಿವೆ.
ಜಾನಪದದಿಂದಾಚೆಗೂ ಶ್ರೀಯುತರ ಪ್ರತಿಭೆ ವಿಸ್ತರಿಸಿದಕ್ಕೆ ಉದಾಹರಣೆಯಾಗಿ ಅವರ ಕುಮಾರವ್ಯಾಸನ ಪಾತ್ರಗಳು, ಕಾವ್ಯ ವ್ಯಾಸಂಗ, ಬತ್ತಲೇಶ್ವರ ರಾಮಾಯಣ ಮೊದಲಾದ ಕೃತಿಗಳನ್ನು ಹೆಸರಿಸಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳ ಅಧ್ಯಕ್ಷತೆ ಇವರಿಗೆ ಸಂದ ಗೌರವ ಎಂಬತ್ತರ ಇಳಿವಯಸ್ಸಿನಲ್ಲೂ ಜಾನಪದ ವಿಷಯವನ್ನೇ ತುಂಬಿಕೊಂಡು ಚಿಂತಿಸುವ ಹಿರಿಯ ವಿದ್ವಾಂಸರು, ಲೇಖಕರು ಡಾ. ಎಲ್ ಆರ್ ಹೆಗಡೆ ಅವರು.

ಬಯಲು ಸೀಮೆಯ ಅಪೂರ್ವ ಜಾನಪದ ಕಲೆ ಭಾಗವಂತಿಕೆ ಕಲೆಯಲ್ಲಿ ಎಲೆಕೊಪ್ಪದ ಶ್ರೀ ಬಸವೇಗೌಡರದು ಬಹು ದೊಡ್ಡ
ಹೆಸರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಎಲೆಕೊಪ್ಪದಲ್ಲಿ ಜನಿಸಿದ ಇವರು ಸುಮಾರು ನಾಲ್ಕು ದಶಕಗಳಿಂದಲೂ
ಭಾಗವಂತಿಕೆ ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಡುಗಾರಿಕೆಯಿಂದ ಸಾವಿರಾರು ಕಾರ್ಯಕ್ರಮಗಳನ್ನು ನೀಡಿ, ಹಾಡುಗಾರಿಕೆಗೆ ಪ್ರತಿ ಸಲವೂ ಹೊಸ ಹೊಸ ಅನುಭವವನ್ನುಂಟುಮಾಡುವ ಕಲಾನೈಪುಣ್ಯತೆ ಇವರದು. ದೇಶಾದ್ಯಂತ ಭಾಗವಂತಿಕೆ ಕಲೆಯನ್ನು ವಿಸ್ತರಿಸಿ ಜನಮೆಚ್ಚುಗೆ ಪಡೆದಿರುವ ಇವರಿಗೆ ಮೂವತ್ತೈದಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಪ್ರಥಮ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕೆ ೧೯೮೫ರಲ್ಲಿ ಪ್ರಶಸ್ತಿ ಪತ್ರ ಸಮರ್ಪಣೆ, ಡಾ. ಜೀಶಂಪ ಸನ್ಮಾನ ಸಮಿತಿಯಿಂದ ೧೯೯೮ರಲ್ಲಿ ಸನ್ಮಾನ, ಮೈಸೂರು ದಸರಾ ಪ್ರಶಸ್ತಿ-೧೯೯೯, ಮಂಡ್ಯ ಜಿಲ್ಲಾ ಜಾನಪದ
ಪರಿಷತ್ತಿನಿಂದ ಸನ್ಮಾನ, ಕರ್ನಾಟಕ ಜಾನಪದ ಮತ್ತು ಯಕಗಾನ ಅಕಾಡೆಮಿಯಿಂದ ೧೯೯೯ರಲ್ಲಿ ಸನ್ಮಾನ, ಅದೇ
ಅಕಾಡೆಮಿಯಿಂದ ಜಾನಪದ ಪ್ರಶಸ್ತಿ-೨೦೦೦, ಕರ್ನಾಟಕ ಜಾನಪದ ಪರಿಷತ್ತಿನಿಂದ ೨೦೦೦ದ ಸಾಲಿನಲ್ಲಿ ಜಾನಪದ ಲೋಕ ಪ್ರಶಸ್ತಿ ಪುರಸ್ಕಾರ. ಹೀಗೆ ಅನೇಕ ಪ್ರಶಸ್ತಿ ಬಹುಮಾನಗಳು ಅವರ ಕಲೆಯ ವೈಭವವನ್ನು ನಾಡಿನುದ್ದಕ್ಕೂ ಸಾರುತ್ತಿವೆ.
ಕರ್ನಾಟಕ ಜಾನಪದ ಪರಂಪರೆಯನ್ನು ದೇಶದುದ್ದಗಲಕ್ಕೂ ಪ್ರದರ್ಶಿಸುವುದರ ಮೂಲಕ ಶ್ರೀ ಎಲೆಕೊಪ್ಪ ಬಸವೇಗೌಡರು ಕನ್ನಡ ನಾಡಿನ ಅಪರೂಪದ ಸಾಂಸ್ಕೃತಿಕ ವಕ್ತಾರರೆನಿಸಿದ್ದಾರೆ.
ಶ್ರೀ ಎಂ ಆರ್ ಬಸಪ್ಪ

ಎಳೆವಯಸ್ಸಿನಲ್ಲಿಯೇ ಕಲಾಸೇವೆಗೆ ತೊಡಗಿ ೫೦ ವರ್ಷಗಳ ಕಾಲ ನಿರಂತರವಾಗಿ ಸಾಧನೆ ಮಾಡಿ ಮುಂದಿನ ಪೀಳಿಗೆಗೂ ಕಲೆಯನ್ನು ಧಾರೆ ಎರೆಯುತ್ತಿರುವ ವೀರಗಾಸೆ ಕಲಾವಿದರು ಶ್ರೀ ಎಂ ಆರ್ ಬಸಪ್ಪ ಅವರು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಮಾಳೇನಹಳ್ಳಿ ಗ್ರಾಮದ ನಿವಾಸಿ ಶ್ರೀ ಎಂ ಆರ್ ಬಸಪ್ಪ ಸುಪ್ರಸಿದ್ಧ ವೀರಗಾಸೆ
ಕಲಾವಿದರು.
ಬಡತನದ ಬೇಗೆಯಲ್ಲಿ ಬೆಂದ ಶ್ರೀ ಬಸಪ್ಪ ಅವರನ್ನು ೧೫ನೆಯ ವಯಸ್ಸಿನಲ್ಲೇ ವೀರಗಾಸೆ ಕಲೆ ಕೈಬೀಸಿ ಕರೆಯಿತು. ಯಾವ ತರಬೇತಿಯೂ ಇಲ್ಲದೆ ಸ್ವಂತ ಆಸಕ್ತಿಯಿಂದ ವೀರಗಾಸೆಯನ್ನು ಕಲಿತು ೪೦ ಕಲಾ ತಂಡಗಳನ್ನು ತಯಾರು ಮಾಡಿರುವ ಹಿರಿಮೆ ಇವರದು. ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಶ್ರೀ ಬಸಪ್ಪನವರು ಕಾರ್ಯಕ್ರಮ ನೀಡದ ಸ್ಥಳಗಳಿಲ್ಲ. ಉತ್ತರದ ಕಾಶಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ, ಆಕಾಶವಾಣಿ ಹಾಗೂ ದೂರದರ್ಶನಗಳಲ್ಲಿ ಅಸಂಖ್ಯಾತ ಪ್ರದರ್ಶನಗಳನ್ನು ನೀಡಿದ್ದಾರೆ. ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ೪ನೆಯ ರಾಷ್ಟ್ರೀಯ ಕ್ರೀಡಾ ಮೇಳ, ಕನ್ನಡ ಸಾಹಿತ್ಯ ಸಮ್ಮೇಳನ, ಸಾರ್ಕ್ ಸಮ್ಮೇಳನ, ರಾಜ್ಯ ಮಟ್ಟದ ಹಾಗೂ ಅಖಿಲಭಾರತ ಮಟ್ಟದ ಜಾನಪದ ಮೇಳ ಹೀಗೆ ಪ್ರಮುಖ ಸಮಾರಂಭಗಳಲ್ಲಿ ಭಾಗವಹಿಸಿ, ವೀರಗಾಸೆ ಪ್ರದರ್ಶನ ನೀಡಿ ಜನರ ಮೆಚ್ಚುಗೆ ಪಡೆದಿದ್ದಾರೆ. ವಿಶೇಷವಾಗಿ ಹಿಂದುಳಿದ ಜನಾಂಗದ ಹಾಗೂ ಗ್ರಾಮಾಂತರ ಪ್ರದೇಶದ ಕಲಾವಿದರನ್ನು ಗುರುತಿಸಿ, ತಂಡ ಕಟ್ಟಿ ತರಬೇತಿ ನೀಡಿ, ವೀರಗಾಸೆ ಕಲೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಪರಿಪೂರ್ಣರಾದ ಈ ಕಲಾವಿದರಿಗೆ ೧೯೯೬ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
ತಮ್ಮ ೬೫ನೆಯ ವಯಸ್ಸಿನಲ್ಲೂ ಯುವಕರನ್ನೂ ನಾಚಿಸುವಂಥ ಕಲಾಸಕ್ತಿಯಿಂದ ವೀರಗಾಸೆ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಹಿರಿಯ ಕಲಾವಿದ ಶ್ರೀ ಎಂ ಆರ್ ಬಸಪ್ಪ ಅವರು.

ತನ್ನ ಸಿರಿಕಂಠದಿಂದ ಜನಪದ ಹಾಡುಗಳ ಮೂಲಕ ರಸಿಕರ ಮನಸೂರೆಗೊಂಡ ಕಲಾವಿದೆ ಶ್ರೀಮತಿ ಯಾಚೇನಹಳ್ಳಿ ನಿಂಗಮ್ಮ. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ ತಾಲೂಕಿನ ಮೆಣಸಿಕ್ಯಾತನ ಹಳ್ಳಿಯಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಜನಪದ ಹಾಡುಗಳಿಗೆ ಮಾರು ಹೋದವರು. ಗುರುಬಲ, ಸಂಸ್ಥೆ ಬಲ, ಆರ್ಥಿಕ ಬಲ – ಈ ಯಾವ ಒತ್ತಾಸೆ, ಆಕರ್ಷಣೆಯೂ ಇಲ್ಲದೆ, ಕೇವಲ ಮೈಗೂಡಿ ಬಂದ ವೈಯಕ್ತಿಕ ಸ್ಫೂರ್ತಿಯಿಂದ ಹಾಡಿ ಹಾಡಿ ಇಂದು ನಾಡಿನ ಜನಪದ ಗಾಯಕರಲ್ಲಿ ಹಿರಿಯರಾದ ಶ್ರೀಮತಿ ನಿಂಗಮ್ಮ ಅಪ್ಪಟ ಗ್ರಾಮೀಣ ಪ್ರತಿಭೆ.
ತನ್ನ ಊರಿನಲ್ಲಿ ಮತ್ತು ನೆರೆಯ ಊರುಗಳಲ್ಲಿ ಯಾವುದೇ ಮದುವೆ, ಹಬ್ಬ ಜಾತ್ರೆಯಾಗಲಿ ಅಲ್ಲಿನಿಂಗಮ್ಮನ ಪದಗಳು ಅಲೆ ಅಲೆಯಾಗಿ ಜನರ ಕಿವಿ ತುಂಬುತ್ತವೆ. ಕೇವಲ ವಾಗ್ರೂಪದಲ್ಲಿ ಸಾವಿರಾರು ವರ್ಷಗಳ ತನ್ನ ಆಯಸ್ಸನ್ನು ಕಳೆದೂ ಉಳಿದು ಬಂದಿರುವ ಜನಪದ ಹಾಡುಗಳು ನಿಂಗಮ್ಮನಿಗೆ ಹಿರಿಯರಿಂದ ಬಳುವಳಿಯಾಗಿ ಬಂದಂತೆಯೇ ನಿಂಗಮ್ಮನಿಂದ ನೂರಾರು ಹೆಣ್ಣು ಮಕ್ಕಳಿಗೆ ಧಾರೆ ಎರೆಯಲ್ಪಟ್ಟಿವೆ.
ನಾಡಿನಾದ್ಯಂತ ತನ್ನ ಹಾಡುಗಾರಿಕೆಯಿಂದ ಜನಮನ ಸೂರೆಗೊಂಡ ನಿಂಗಮ್ಮನವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಕಾಲನ ಅಂಕೆಗೆ ಶರೀರ ಬಾಗುತ್ತಿದ್ದರೂ ನಿಂಗಮ್ಮನವರ ಶಾರೀರ ಮಾತ್ರ ಇಂದಿಗೂ ಕುಗ್ಗಿಲ್ಲ. ಅಂಥ ಸಿರಿ ಕಂಠದ ಜಾನಪದ ಹಾಡುಗಾರ್ತಿ ಶ್ರೀಮತಿ ಯಾಚೇನಹಳ್ಳಿ ನಿಂಗಮ್ಮ.