ಶ್ರೀ ಕೃಷ್ಣ ಪಾರಿಜಾತ ಕಲಾವಿದರಾದ ಇವರು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ದಾದನಟ್ಟಿ ಗ್ರಾಮದವರು. ಇವರು ಭಾಗವತ, ಕೊರವಂಜಿ, ಕೃಷ್ಣ, ಸತ್ಯಭಾಮ, ರುಕ್ಕಿಣಿ ಪ್ರಹಸನಗಳ ನಿರ್ದೇಶನ ಮಾಡಿದ್ದು, ಅನೇಕ ಸಂಘ ಸಂಸ್ಥೆಗಳಿಂದ ಹಾಗೂ ಸರ್ಕಾರದಿಂದ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಾರೆ.
Category: ಬಯಲಾಟ
ದೊಡ್ಡಾಟ ಕಲೆಯ ಅಪರೂಪದ ಮದ್ದಳೆ ಕಲಾವಿದ ಚನ್ನಬಸಪ್ಪ ಬೆಂಡಿಗೇರಿ, ಆರು ದಶಕಗಳ ಸಾರ್ಥಕ ಕಲಾಸೇವೆಗೈದ ಕಲಾಚೇತನ.
ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಮಾನಸನಕಟ್ಟಿಯ ಪ್ರತಿಭೆ ಚನ್ನಬಸಪ್ಪ ಬೆಂಡಿಗೇರಿ, ೧೯೩೭ರ ಜುಲೈ ೪ರಂದು ಜನಿಸಿದ ಚನ್ನಬಸಪ್ಪ ಅವರಿಗೆ ಬಾಲ್ಯದಿಂದಲೂ ಕಲಾ ಆಕರ್ಷಣೆ, ದೊಡ್ಡಾಟದ ಕಲಾಪ್ರಕಾರದ ಮೇಲೆ ಅಪರಿಮಿತ ಪ್ರೀತಿ. ಇಷ್ಟಪಟ್ಟು ರೂಢಿಸಿಕೊಂಡ ಕಲೆಯೇ ಬದುಕು-ಭಾವಕ್ಕೆ ಆಸರೆಯಾಗಿದ್ದು ವಿಶೇಷ, ದೊಡ್ಡಾಟದ ಬಹುಮುಖ್ಯ ಕಲೆಯಾದ ಮದ್ದಳೆ ವಾದನದಲ್ಲಿ ಅಸೀಮ ಹಿಡಿತ. ಬಯಲಾಟಕ್ಕಾಗಿ ಜೀವನ ಮುಡಿಪಿಟ್ಟ ಚನ್ನಬಸಪ್ಪ ಕರ್ನಾಟಕದ ನಾನಾ ಕಡೆ, ಗಡಿಭಾಗದಲ್ಲಿ ಅರವತ್ತು ವರ್ಷಗಳಿಂದಲೂ ದೊಡ್ಡಾಟದಲ್ಲಿ ಮದ್ದಳೆ ಬಾರಿಸುವ ಮೂಲಕ ನಿರಂತರ ಕಲಾಸೇವೆ. ನಶಿಸಿಹೋಗುತ್ತಿರುವ ದೊಡ್ಡಾಟ ಕಲೆಯ ಉಳಿವಿಗಾಗಿ ಹೊಸ ತಲೆಮಾರಿನ ಯುವಕ- ಯುವತಿಯರಿಗೆ ದೊಡ್ಡಾಟದ ಸಂಗೀತ ಮತ್ತು ಮದ್ದಳೆ ವಾದನದ ತರಬೇತಿ ನೀಡಿದ ಕಲಾಗುರು. ಅನೇಕ ರಾಜ್ಯ- ಜಿಲ್ಲಾಮಟ್ಟದ ಪ್ರಶಸ್ತಿಗಳಿಗೆ ಸತ್ತಾತರು.

ಗ್ರಾಮೀಣ ಭಾಗದ ದಿಟ್ಟ ಪ್ರತಿಭೆ ಕೆಂಪವ್ವ ಯಲ್ಲಪ್ಪ ಹರಿಜನ, ನಾಡಿನುದ್ದಕ್ಕೂ ಸಣ್ಣಾಟ ಕಲೆಯ ಕಂಪು ಸೂಸಿ ಕಲಾರಸಿಕರ ಮನಗೆದ್ದ ಅಪೂರ್ವ ಕಲಾವಿದೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಅರಭಾವಿಯ ಕೆಂಪವ್ವ ಹರಿಜನ ಕಲೆಯನ್ನೇ ಅಕ್ಷರವಾಗಿ ಕಲಿತು ಬೆಳಗಿದಾಕೆ. ಸಣ್ಣಾಟ ಕಲೆ ಕರಗತ ಮಾಡಿಕೊಂಡ ಕೆಂಪವ್ವ ‘ಸಂಗ್ಯಾ-ಬಾಳ್ಯಾ’ ಹಾಗೂ ರಾಧಾನಾಟ ಸಣ್ಣಾಟಗಳಲ್ಲಿ ಚಿಮನಾ ಪಾತ್ರಧಾರಿ, ಹಾಡುಗಾರಿಕೆ-ಕುಣಿತದಲ್ಲೂ ಸೈ ಎನಿಸಿಕೊಂಡ ಪ್ರತಿಭೆ. ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿ ಸಣ್ಣಾಟ ಕಲೆಯ ಮೂಲಕ ಭಾಷಾ ಬಾಂಧವ್ಯವೃದ್ಧಿಗೆ ಕೊಟ್ಟ ಕೊಡುಗೆ ಅಪಾರ. ಚೆನ್ನೈ, ದೆಹಲಿ, ಮುಂಬಯಿ, ಕಾಸರಗೋಡು, ಸೊಲ್ಲಾಪುರದಲ್ಲೂ ಕಲಾಪ್ರದರ್ಶನ. ನೂರಕ್ಕೂ ಅಧಿಕ ಜನರಿಗೆ ಕಲಾನಿರ್ದೇಶನ ಮಾಡಿದ ಗುರುಮಾತೆ. ನಾಲ್ಕು ದಶಕದಿಂದ ಸಣ್ಣಾಟ ಕಲಾಸೇವಾನಿರತೆ. ಕರ್ನಾಟಕ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹತ್ತಕ್ಕೂ ಅಧಿಕ ರಾಜ್ಯ ಪ್ರಶಸ್ತಿಗಳು, ೨೩ಕ್ಕೂ ಹೆಚ್ಚು ಜಿಲ್ಲಾ ಪ್ರಶಸ್ತಿ-ನೂರಾರು ಗೌರವ ಸನ್ಮಾನಗಳಿಂದ ಭೂಷಿತ ಕಲಾವಂತೆ.

ಬದುಕಿನ ಮಾಟದಲ್ಲಿ ಬಯಲಾಟವನ್ನೇ ಜೀವಭಾವವಾಗಿಸಿಕೊಂಡವರು ಶಂಕ್ರಪ್ಪ ಮಲ್ಲಪ್ಪ ಹೊರಪೇಟೆ, ಕಲಾರಂಗದ ನಾದಸೇವಕರು, ಹಳ್ಳಿಗರ ಮನಗೆದ್ದ ದೊಡ್ಡಾಟದ ಹಾಮ್ಮೋನಿಯಂ ವಾದಕ, ಪಾತ್ರಧಾರಿ, ಸ್ವರಸಂಯೋಜಕ, ಶಂಕರಪ್ಪ ಕೊಪ್ಪಳ ಜಿಲ್ಲೆಯ ಪ್ರತಿಭೆ, ಕೊಪ್ಪಳ ತಾಲ್ಲೂಕಿನ ಸಾ.ಮೋರನಾಳದ ಉಪ್ಪಿನ ಬೆಟಗೇರಿ ಹುಟ್ಟೂರು. ನಾದದೊಲುಮೆ ಅಪ್ಪನಿಂದ ಬಂದ ಬಳುವಳಿ, ಕಲಾಪ್ರೇಮ ಊರುಕೇರಿ ಬೆಸೆದ ಭಾವ. ಹರೆಯದಲ್ಲಿ ಮನವೇರಿದ ನಾದದ ಗುಂಗು. ೨೭ನೇ ವಯಸ್ಸಿಗೆ ಹಾರ್ಮೋನಿಯಂ ಹಿಡಿದು ಕಲಾರಂಗಪ್ರವೇಶ. ಪಕ್ಕವಾದ್ಯಪಟುವಾಗಿ ಕಲಾಸೇವೆಗೈಯುತ್ತಲೇ ಬಣ್ಣ ಹಚ್ಚಿ ಕಲಾವಿದನಾದ ಹಿರಿಮೆ, ಬಯಲಾಟಗಳ ನಿರ್ದೇಶಕನಾಗಿಯೂ ಮೇಲೆ ಬರೋಬ್ಬರಿ ೧೮೦ ಬಯಲಾಟಗಳಿಗೆ ಸ್ವರಸಂಯೋಜನೆ ಮಾಡಿದ ಹೆಗ್ಗಳಿಕೆ, ಕೊಪ್ಪಳ ಜಿಲ್ಲೆಯಿಂದ ಹಿಡಿದು ನಾಡಿನ ಹಲವೆಡೆ ಬಯಲಾಟಗಳಿಗೆ ನಾದದ ರಂಗುತುಂಗ ಸೈ ಎನಿಸಿಕೊಂಡು ಕಲಾನಿಪುಣ, ೪೨ ವರ್ಷಗಳಿಂದ ಅವಿರತವಾಗಿ ಕಲಾಸೇವಾನಿರತರಾಗಿರುವ ಶಂಕರಪ್ಪಗೆ ಬದುಕೇ ಬಯಲಾಟ, ಬಯಲಾಟವೇ ಬದುಕು. ಕರ್ನಾಟಕ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೂ ಭಾಜನವಾಗಿರುವ ಶಂಕರಪ್ಪ ಹಳ್ಳಿಗಾಡಿನ ಕಲಾವಂತಿಕೆ, ಸಮರ್ಪಣಾಭಾವ ಮತ್ತು ನಿಸ್ಪೃಹ ಕಲಾಸೇವೆಯ ನಿಜಪ್ರತೀಕ.
ವೈ. ಮಲ್ಲಪ್ಪ ಗವಾಯಿ

ಜಾನಪದ ದೊಡ್ಡಾಟದ ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆಗುರುತು ಮೂಡಿಸಿ ಹಿರಿಮೆ ಮೆರೆದವರು ವೈ. ಮಲ್ಲಪ್ಪ ಗವಾಯಿ, ಗಾಯಕರು, ಪಕ್ಕವಾದ್ಯಗಾರರಾಗಿ ಅವರದ್ದು ಮಾದರಿ ಕಲಾಸೇವೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ತಿಪ್ಪೆಗುಂಡಿಯವರ ಓಣಿಯಲ್ಲಿ ೧೯೫೫ರ ಜನವರಿ ಒಂದರಂದು ಜನಿಸಿದ ವೈ.ಮಲ್ಲಪ್ಪ ಗವಾಯಿ ಅವರಿಗೆ ಕಲೆ ಪರಂಪಾರಗತ. ತಂದೆ ರುದ್ರಪ್ಪ ಬಾಲ್ಯದಲ್ಲೇ ಬಯಲಾಟ ಕಲೆಯ ಮೋಹಿತರಾದ ಮಲ್ಲಪ್ಪ ಅದನ್ನೇ ಬದುಕಿನ ಬುತ್ತಿ, ಸಾಧನೆಯ ಪ್ರವೃತ್ತಿಯಾಗಿಸಿಕೊಂಡವರು. ಬಯಲಾಟದ ಕಲಾವಿದರಾಗಿ, ದೊಡ್ಡಾಟದ ಗಾಯಕರಾಗಿ ಅವರದ್ದು ಅನುಪಮ ಸೇವೆ. ಎರಡೂವರೆ ದಶಕಕ್ಕೂ ಮೀರಿದ ಅವಧಿಯಿಂದಲೂ ಬಯಲಾಟದ ಪ್ರದರ್ಶನವನ್ನು ನೀಡುತ್ತಾ ಆ ಕಲಾಪ್ರಕಾರದ ಏಳೆಗೆ ಶ್ರಮಿಸುತ್ತಿರುವ ಕಲಾವಿದರು. ಹಂಪಿ ಉತ್ಸವ, ಮೈಸೂರು ದಸರಾ, ಹೊಸಪೇಟೆಯ ಆಕಾಶವಾಣಿಯಲ್ಲಿ ಜಾನಪದ ಸಿರಿ, ದೊಡ್ಡಾಟದ ಹಾಡುಗಳು, ರಂಗಗೀತೆಗಳನ್ನು ಪ್ರಸ್ತುತಪಡಿಸುತ್ತಾ ಬಂದಿರುವುದು ಕಲಾಪಯಣದ ಹೆಗ್ಗುರುತು. ಹಾರೋನಿಯಂ, ತಬಲ ಮತ್ತು ಮೃದುಂಗ ನುಡಿಸುವಲ್ಲಿಯೂ ನಿಷ್ಣಾತರು. ಸೋಗಿಯ ಶ್ರೀ ವೀರೇಶ್ವರ ಜಾನಪದ ದೊಡ್ಡಾಟ ಸಂಘದ ಸದಸ್ಯ ಕಾರ್ಯದರ್ಶಿ, ಇದೀಗ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಪ್ಪ ಗವಾಯಿ ಬಯಲಾಟ ಕ್ಷೇತ್ರವನ್ನು ಸಂಪನ್ನಗೊಳಿಸಿದ ಕಲಾಚೇತನ.
ಬಯಲಾಟ ಕ್ಷೇತ್ರಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿರುವ ಈಶ್ವರವ್ವ ಹುಚ್ಚಪ್ಪ ಮಾದರ ಶ್ರೀ ಕೃಷ್ಣ ಪಾರಿಜಾತ, ಬಯಲಾಟಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತ ಬಂದವರು.
ನಾಲ್ಕೂವರೆ ದಶಕಗಳಿಂದ ಶ್ರೀಕೃಷ್ಣ ಪಾರಿಜಾತ ಬಯಲಾಟದಲ್ಲಿ ರುಕ್ಕಿಣಿ, ನಾರದ, ದೊರೆಸಾನಿ ಪಾತ್ರಗಳಿಗೆ ಜೀವ ತುಂಬುತ್ತಿರುವ ಈಶ್ವರವ್ವ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ಪ್ರದರ್ಶಿಸಿರುವ ಶ್ರೀಕೃಷ್ಣ ಪಾರಿಜಾತ ಪ್ರದರ್ಶನಗಳು ನಾಲ್ಕು ಸಾವಿರಕ್ಕೂ ಹೆಚ್ಚು.
ಹರಿಯಾಣ ಉತ್ಸವ, ಮೈಸೂರು ವಿಶ್ವಕನ್ನಡ ಸಮ್ಮೇಳನ, ಪಟ್ಟದಕಲ್ಲು ಉತ್ಸವ ಮೊದಲಾದ ಕಡೆಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿರುವ ಈಶ್ವರವ್ವ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಅಖಿಲ ಭಾರತ ಜಾನಪದ ಸಮಾವೇಶ ಗೌರವ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ.
ಕೆ. ಪಂಪಾಪತಿ

ಬಯಲಾಟಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬಾರಿ ಸಾರಥಿ ಪಾತ್ರ ಮಾಡಿರುವ ಕೆ.ಪಂಪಾಪತಿ ಅವರು ಬಳ್ಳಾರಿಯ ಹತ್ತಿಗಿರಣಿಯ ಕಾರ್ಮಿಕರಾಗಿ ದುಡಿದಿದ್ದಾರೆ.
ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಪಂಪಾಪತಿ ಅನೇಕ ಬಯಲಾಟಗಳಲ್ಲಿ ಸಾರಥಿ ಪಾತ್ರದ ಜೊತೆಗೆ ಪ್ರಮುಖ ಪಾತ್ರಗಳನ್ನು ಸಹ ನಿರ್ವಹಿಸಿದ್ದಾರೆ.
ಪಾಂಡುವಿಜಯ, ಅಭಿಮನ್ಯು ಕಾಳಗ, ಸುಂದೋಪಸುಂದರ ರತಿ ಕಲ್ಯಾಣ, ಗಿರಿಜಾ ಕಲ್ಯಾಣ ಮೊದಲಾದ ಬಯಲಾಟಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿದ ಕಲಾವಿದ ಪಂಪಾಪತಿ ಅವರು. ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.
ಶ್ರೀ ಭೀಮರಾಯ ಬೋರಗಿ

ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಯಲಗೋಡದ ಬಯಲಾಟ ಕಲಾವಿದ ಭೀಮರಾಯ ಬೋರಗಿ, ಸಂಗೀತವನ್ನೇ ನೆಚ್ಚಿ ಬಯಲಾಟವನ್ನೇ ಬದುಕಿನ ಬುತ್ತಿಯಾಗಿಸಿಕೊಂಡವರು.
ಕಡುಬಡತನದ ಹಿನ್ನೆಲೆಯ ಭೀಮರಾಯ ಬೋರಗಿ ಅವರು ಓದಿದ್ದು ಕೇವಲ ನಾಲ್ಕನೇ ತರಗತಿ ಮಾತ್ರ ಆ ವೇಳೆಗೆ ಮನಸೆಳೆದ ಬಯಲಾಟವನ್ನು ಉಸಿರಾಗಿಸಿಕೊಂಡರು. ರಾಜ್ಯಾದ್ಯಂತ ಬಯಲಾಟದ ಸಂಗೀತ ಕಲಾವಿದರಾಗಿ ಮೂಡಿಸಿದ ಛಾಪು ಅಪಾರ. ಶ್ರೀದೇವಿ ಮಹಾತ್ಮ, ಮಹಿಷಾಸುರ ಮರ್ಧಿನಿ, ಭೀಮಾರ್ಜುನರ ಕಾಳಗ, ಚಿತ್ರಸೇನೆ ಗಂಧರ್ವ ಮುಂತಾದ ಸುಮಾರು ೪೦೦ ಬಯಲಾಟಗಳನ್ನು ನಿರ್ದೇಶಿಸಿ ಪ್ರಸ್ತುತಪಡಿಸಿದ ಹಿರಿಮೆ ಇವರದ್ದು. ಬಯಲಾಟದ ಹಿರಿಯ ಕಲಾವಿದರಾಗಿ ಆ ಕಲೆಯ ಉಳಿವಿಗೆ ಹಲವು ದಶಕಗಳ ಕಾಲ ಶ್ರಮಿಸಿದ ಭೀಮರಾಯ ಬೋರಗಿ ಅವರ ಕಲಾಸೇವೆಗೆ ಜನಮನ್ನಣೆ- ಚಪ್ಪಾಳೆಗಳೇ ಪ್ರಶಸ್ತಿ, ಮೆಚ್ಚುಗೆಯ ಮಾತುಗಳೇ ಸನ್ಮಾನ. ದೇಸೀ ಪ್ರತಿಭಾಶಕ್ತಿಗೊಂದು ರೂಪಕ.
ಕನ್ನಡ ರಂಗಭೂಮಿ ಕಂಡ ಅಭಿಜಾತ ಕಲಾವಿದೆ ನಾಡೋಜ ಯಲ್ಲವ್ವ ರೊಡ್ಡಪ್ಪನವರ, ಬಯಲಾಟದ ಅಪ್ರತಿಮ ಪಾತ್ರಧಾರಿ.
ಬಾಲ್ಯದಿಂದಲೂ ಚೌಡಿಕೆ ಪದಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಯಲ್ಲವ್ವ ೧೩ನೇ ವಯಸ್ಸಿನಲ್ಲಿ ಕಂದಗಲ್ಲ ಹನುಮಂತರಾಯರ ‘ಕುರುಕ್ಷೇತ್ರ’ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದವರು. ಕೃಷ್ಣನ ಪಾತ್ರಧಾರಿಯಾಗಿ ಕಲಾಸೇವೆಗೆ ಮುನ್ನುಡಿ, ಲೋಕಯ್ಯ ಹೊಳಬಸಯ್ಯ ಗಣಾಚಾರಿ ಮಾಸ್ತರ ಮತ್ತು ದೇಶಪಾಂಡೆಯವರ ಮೂಲಕ ಜಾನಪದ ರಂಗಭಭೂಮಿಗೆ ಪ್ರವೇಶ ಪಡೆದ ಯಲ್ಲವ್ವ ಆನಂತರ ಶ್ರೀಕೃಷ್ಣ ಸಂಗೀತ ನಾಟಕ ಕಂಪನಿಗೆ ಸೇರಿ ಹಾಡುಗಬ್ಬ ಪಾರಿಜಾತವನ್ನೇ ಬದುಕಿನ ಭಾವವಾಗಿಸಿಕೊಂಡರು. ಬಯಲಾಟದ ಪಾರಿಜಾತದಲ್ಲಿ ಅಭಿನಯ. ಸಹಜ ನಟನೆ ಮತ್ತು ಗಾಯನ ಎಲ್ಲವನ ಪ್ರತಿಭಾಶಕ್ತಿ, ಪಾರಿಜಾತದಲ್ಲಿ ಕೃಷ್ಣ, ರುಕ್ಕಿಣಿ, ಗೊಲ್ಲತಿ, ನಾರದ, ದೊರಸಾನಿ, ಸತ್ಯಭಾಮೆ ಮತ್ತಿತರ ಪಾತ್ರ ನಿರ್ವಹಿಸಿದ ಎಲ್ಲವ್ವನ ಕೃಷ್ಣ-ಕೊರವಂಜಿ ಪಾತ್ರಾಭಿನಯ ಅವಿಸ್ಮರಣೀಯ. ಅಭಿನಯದ ಜೊತೆಗೆ ಹಿಮ್ಮೇಳ ಕಲಾವಿದೆ, ಕಂಪನಿ ಮಾಲೀಕರಾಗಿಯೂ ಸಮರ್ಥವಾಗಿ ಜವಬ್ದಾರಿ ನಿಭಾಯಿಸಿದ ಎಲ್ಲವ್ವ ದಮನಿತ ಹೆಣ್ಣುಮಕ್ಕಳಿಗೊಂದು ಮಾದರಿ.

ನಾಲ್ಕು ದಶಕಗಳಿಂದ ದೊಡ್ಡಾಟದ ಕತೆಗಾರರಾಗಿ, ಕಲಾವಿದರಾಗಿ ನಿರ್ದೇಶಕರಾಗಿ, ದುಡಿಯುತ್ತಿರುವ ದ್ಯಾಮ್ಲಪ್ಪ ಜಾಂಗ್ಲಪ್ಪ ಲಮಾಣಿ ಅವರು ಹಲವಾರು ಪೌರಾಣಿಕ ಪ್ರಸಂಗಗಳನ್ನು ಬಯಲಾಟದಲ್ಲಿ ಅಳವಡಿಸಿದ್ದಾರೆ.
ರಾಮಾಯಣ, ಕುರುಕ್ಷೇತ್ರ, ಮೂರೂವರೆ ವಜ್ರಗಳು, ಇಂದ್ರಜೀತು ಕಾಳಗ, ಮಹೀರಾವಣ ದೊಡ್ಡಾಟ ಪ್ರಸಂಗಗಳು ದ್ಯಾಮ್ಲಪ್ಪ ಅವರಿಗೆ ಹೆಸರು ತಂದುಕೊಟ್ಟ ಮಹತ್ವದ ಪ್ರದರ್ಶನಗಳು.
ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವ ಸನ್ಮಾನಗಳು ದ್ಯಾಮಪ್ಪ ಜಾಂಗ್ಲಪ್ಪ ಲಮಾಣಿ ಅವರಿಗೆ ಲಭಿಸಿವೆ.
ಸುಜಾತಮ್ಮ

ಬಯಲಾಟದ ಕಲಾವಿದೆಯಾಗಿ ಐವತ್ತೊಂಭತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಜಾತಮ್ಮ ಅವರು ಚಿಕ್ಕ ವಯಸ್ಸಿನಲ್ಲಿಯೇ ಗಿರಿಜಾ ಕಲ್ಯಾಣ ಬಯಲಾಟದಲ್ಲಿ ರತಿದೇವಿ ಪಾತ್ರ ಮಾಡಿ ಜನಮೆಚ್ಚುಗೆ ಪಡೆದವರು.
ಸೀತೆ, ಮಂಡೋದರಿ, ದೌಪದಿ, ಉತ್ತರೆ, ಇತ್ಯಾದಿ ವೈವಿಧ್ಯಮಯ ಬಯಲಾಟದ ಪಾತ್ರಗಳನ್ನು ಹಾಗೂ ಪೌರಾಣಿಕ ನಾಟಕಗಳಲ್ಲಿಯೂ ನಟಿಸಿರುವ ಸುಜಾತಮ್ಮ ಬಯಲಾಟ ಕಲಾಟ್ರಸ್ಟ್ ರಚಿಸಿ, ಅದರ ಮೂಲಕ ಬಯಲಾಟ ಕಲೆಯನ್ನು ವಿಸ್ತರಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ.

ಅಜ್ಜಿ ಗಂಗವ್ವ ಹಾಗೂ ತಾಯಿ ಯಲ್ಲಪ್ಪಾ ಪಾತ್ರೋಟ ಇವರಿಂದ ಬಯಲಾಟ, ಸಣ್ಣಾಟ ಕಲೆಯನ್ನು ಕಲಿತು ನೈಪುಣ್ಯತೆಯನ್ನು ಸಾಧಿಸಿದ ಕಲಾವಿದೆ ಸಕ್ರವ್ವ ಯಲ್ಲವ್ವ ಪಾತ್ರೋಟ ಅವರು.
ಬೆಳಗಾವಿಯಲ್ಲಿ ತಮ್ಮದೇ ಆದ ಸ್ವಂತ ತಂಡ ಕಟ್ಟಿಕೊಂಡು ನಾಡಿನುದ್ದಕ್ಕೂ ಈ ಕಲೆಯನ್ನು ಮುಂದುವರಿಸುತ್ತಿರುವ ಇವರು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ, ಜಾನಪದ ಸಂಶೋಧನಾ ಕೇಂದ್ರದಿಂದ ದೊಡ್ಡಾಟ ಉತ್ಸವದಲ್ಲಿ ಗೌರವ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನಿಂದ ಜಾನಪದ ಲೋಕ ಪ್ರಶಸ್ತಿಗಳು ಇವರಿಗೆ ಸಂದಿವೆ. ಇವರು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಬಸಪ್ಪ ದುಡಲಪ್ಪ ಸಲಲ ಅವರು ಹೆಸರಾಂತ ದೊಡ್ಡಾಟದ ಕಲಾವಿದರು. ನೇಕಾರಿಕೆ ವೃತ್ತಿಯ ಕುಟುಂಬದ ಹಿನ್ನೆಲೆಯಿಂದ ಬಂದ ಬಸಪ್ಪ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡಾಟದ ತಂಡಗಳಲ್ಲಿ ಸೇರಿಕೊಂಡು ತಿರುಗಾಟ ನಡೆಸುತ್ತಿದ್ದರು. ಪುರುಷ ಹಾಗೂ ಸ್ತ್ರೀ ಪಾತ್ರಗಳೆರಡರಲ್ಲೂ ನಿಪುಣರಾದ ಇವರು ದೊಡ್ಡಾಟದ ಹಿನ್ನೆಲೆ ಗಾಯಕರೂ ಹೌದು. ಅಂಗವಿಕಲತೆಯ ನಡುವೆಯೂ ಗೋಪಾಲಕೃಷ್ಣ, ರುಕ್ಕಿಣಿ, ರಾಮ, ಭೈಕುಂಡ ಮುನಿ ಮೊದಲಾದ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುವ ಬಸಪ್ಪ ಎಂಭತ್ತರ ಹರೆಯದಲ್ಲೂ ದೊಡ್ಡಾಟದ ಸಂಗವನ್ನು ಬಿಟ್ಟಿಲ್ಲ.

ಭೀಮವ್ವ ಶಿಳ್ಳೇಕ್ಯಾತ ಅವರು ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದವರಾಗಿದ್ದು ತೊಗಲುಗೊಂಬೆ ಕಲಾವಿದರಾಗಿ ನಿರಂತರವಾಗಿ ೭೫ ವರ್ಷಗಳಿಂದ ಸೇವೆ
ಸಲ್ಲಿಸುತ್ತಿದ್ದಾರೆ. ಪರದೆಯ ಹಿಂದೆ ಮಹಿಳಾ ಪಾತ್ರಗಳಿಗೆ ಧ್ವನಿ ತುಂಬುವ ಅಪರೂಪದ ಕಲಾವಿದೆಯಾದ ಶ್ರೀಮತಿ ಭೀಮವ್ವ ದೊಡ್ಡಬಾಳಪ್ಪ ಅವರು ದೇಶ ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಇಳಿ ವಯಸ್ಸಿನಲ್ಲಿಯೂ ತೊಗಲುಗೊಂಬೆಯಾಟವನ್ನು ಮನಮುಟ್ಟುವಂತೆ ಪ್ರದರ್ಶಿಸುವ ಭೀಮವ್ವ ಅಮೇರಿಕ, ಇರಾನ್, ಸ್ವಿಡರ್ಲ್ಯಾಂಡ್ ಮೊದಲಾದ ಭಾರತದ ಪುರಾತನ ಕಲೆಯಾದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುವ ತಂಡಗಳಲ್ಲಿ ಪ್ರಮುಖ ಸದಸ್ಯೆಯಾಗಿದ್ದ ಭೀಮವ್ವ ತನ್ನ ಮಾತಿನ ಚಾಕಚಕ್ಯತೆಯಿಂದ ಹಾಗೂ ಸಮಯೋಚಿತ ಸಂಭಾಷಣೆಯಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

ಸಂಪಾಜೆ ಸೀನಪ್ಪ ರೈ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿ ತೆಂಕು ತಿಟ್ಟಿನ ಪ್ರಮುಖ ಯಕ್ಷಗಾನ ಕಲಾವಿದರಾಗಿ ಕಳೆದ ಐದು ದಶಕಗಳಿಂದ ಜನಪ್ರಿಯರಾಗಿದ್ದಾರೆ.
ಮೊದಲಿಗೆ ತಂದೆಯವರಿಂದ ಮೊದಲ ಪಾಠಗಳನ್ನು ಕಲಿತು ಅರ್ಥಗಾರಿಕೆ, ನಾಟ್ಯಾಭ್ಯಾಸ, ಭರತನಾಟ್ಯ ಹಾಗೂ ಬಣ್ಣಗಾರಿಕೆಯನ್ನು ಅಭ್ಯಾಸ ಮಾಡಿ ಯಕ್ಷಗಾನದ ಹಲವು ಮೇಳಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಪಡೆದ ಕಲಾವಿದರೆನಿಸಿಕೊಂಡಿದ್ದಾರೆ. ಕ್ರಿಯಾಶೀಲ ಅಭಿನಯದ ಪ್ರಮುಖ ಕಲಾವಿದರಾಗಿ ಮೂಲಕ ವಿಶೇಷವಾಗಿ ರಾಕ್ಷಸ ಪಾತ್ರಗಳಲ್ಲಿ ಗಂಡುಗತ್ತಿನ ಪಾತ್ರಗಳಲ್ಲಿ ಜೋಡಾಟ- ಕೂಡಾಟಗಳಲ್ಲಿ ಜೀವ ತುಂಬಿ ಅಭಿನಯಿಸಿ ಜನಮನ್ನಣೆಗಳಿಸಿದ್ದಾರೆ.
ತೆಂಕು ಹಾಗು ಬಡಗಿನ ಯಕ್ಷಗಾನದ ಮುಮ್ಮೇಳ ಕಲಾವಿದರಾಗಿ ಹೆಸರಾಗಿರುವ ನಾರಾಯಣ ಗಾಣಿಗರು ಸಮರ್ಥ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾದವರು. ಸುಮಾರು ಮೂವತ್ತು ವರ್ಷಗಳ ಕಾಲ ಹತ್ತಕ್ಕೂ ಹೆಚ್ಚು ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿದ್ದ ಗಾಣಿಗ ಅವರು ಹಲವಾರು ಪೌರಾಣಿಕ ಪಾತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಶಿವರಾಮ ಕಾರಂತರ ಯಕ್ಷರಂಗದ ಕಲಾವಿದರಾಗಿ ಸೇವೆ ಸಲ್ಲಿಸಿರುವ ವಣಸೆ ನಾರಾಯಣ ಗಾಣಿಗರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ.

ವೃತ್ತಿರಂಗಭೂಮಿಯ ಬಯಲಾಟದಲ್ಲಿ ಪಕ್ಕವಾದ್ಯಪಟುವಾಗಿ ಸೇವೆಸಲ್ಲಿಸಿದ ದೇಸಿ ಕಲಾಚೇತನ ಎಚ್.ಪಾಂಡುರಂಗಪ್ಪ, ಕಲಾರಸಿಕರ ಮನಗೆದ್ದ ತಬಲವಾದಕ, ಸ್ವರಸಂಯೋಜಕ, ಗಣಿನಾಡು ಬಳ್ಳಾರಿಯ ಕಲಾಕೊಡುಗೆ ಪಾಂಡುರಂಗಪ್ಪ. ಅಕ್ಷರಕ್ಕಿಂತಲೂ ಕಲಾಮೋಹಕ್ಕೊಳಗಾದವರು. ಬಾಲ್ಯದಲ್ಲಿ ಅ೦ಟಿದ ಸಂಗೀತದ ಗೀಳಿನ ಬೆನ್ನುಹತ್ತಿ ತಬಲವಾದಕರಾಗಿ ರೂಪುಗೊಂಡವರು. ಶ್ರೀಕನಕದುರ್ಗಮ್ಮ ಬಯಲಾಟ ಕಲಾ ಟ್ರಸ್ಟ್ ಸ್ಥಾಪಿಸಿ ಕಲಾಕೈಂಕರ್ಯದಲ್ಲಿ ನಿರತರಾದವರು. ಪುರಾಣ ಪ್ರವಚನ, ಹರಿಕಥೆ, ಬಯಲಾಟ, ಅಭಿಮನ್ಯುಬಳಗ, ಪ್ರಮೀಳ ದರ್ಬಾರ್, ಪಾರ್ಥವಿಜಯ, ಗಿರಿಜಾಕಲ್ಯಾಣ, ರತಿಕಲ್ಯಾಣ, ಪಾಂಡುವಿಜಯ ಮುಂತಾದ ನಾಟಕಗಳಿಗೆ ತಬಲ ಸಾಥ್ ಜತೆಗೆ ಸ್ವರಸಂಯೋಜನೆ, ಜಾನಪದ ಜಾತ್ರೆ, ಸಂಸ್ಕೃತಿ ದಿಬ್ಬಣ, ಜಾತ್ರಾಮಹೋತ್ಸವ, ಅನೇಕ ಸಾಂಸ್ಕೃತಿಕ ಉತ್ಸವ, ಶರಣಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು ಸೇರಿದಂತೆ ನೂರಾರು ವೇದಿಕೆಗಳಲ್ಲಿ ಬೆಳಗಿದ ಪ್ರತಿಭೆ, ತೆಲುಗು ನಾಟಕಗಳಲ್ಲೂ ಸೇವೆ. ಕರ್ನಾಟಕ ನಾಟಕ ಅಕಾಡೆಮಿಯ ರಂಗ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಭಾಜನವಾಗಿರುವ ಪಾಂಡುರಂಗಪ್ಪ ಅವರಿಗೆ ಕಲೆಯೇ ಬದುಕು, ಕಲೆಯಿಂದಲೇ ಬದುಕು. ೫೫ ವರ್ಷಗಳಿಂದಲೂ ಕಲಾಸೇವೆಯಲ್ಲಿ ತನ್ಮಯರಾಗಿರುವ ಪಾಂಡುರಂಗಪ್ಪ ಹಳ್ಳಿಗಾಡಿನ ಗಟ್ಟಿ ಪ್ರತಿಭೆ, ಮಾದರಿ ಕಲಾಸೇವಕ.
ಉತ್ತರಕರ್ನಾಟಕದ ಗಂಡುಕಲೆ ದೊಡ್ಡಾಟದಲ್ಲಿ ಅನನ್ಯ ಸಾಧನೆಗೈದ ಮೌನಸಾಧಕರು ಅಡವಯ್ಯ ಚನ್ನಬಸವಯ್ಯ ಹಿರೇಮಠ, ಭಾಗವತಿಕೆ ಕಲಾವಿದರು, ದೊಡ್ಡಾಟದ ನಿರ್ದೇಶಕರು.ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಬೆಲವಂತರ ಗ್ರಾಮದಲ್ಲಿ ೧೯೩೮ರಲ್ಲಿ ಜನಿಸಿದ ಅಡವಯ್ಯ ಹಿರೇಮಠ ಅಪ್ಪಟ ದೇಸೀ ಕಲಾಚೇತನ, ಅಕ್ಷರ ಅರಿಯದ ಜಾನಪದ ಪುಷ್ಪ, ಹದಿನೈದನೇ ವಯಸ್ಸಿನಲ್ಲಿ ಗ್ರಾಮದಲ್ಲಿ ನೋಡಿದ ದೊಡ್ಡಾಟದಿಂದ ಪ್ರಭಾವಿತರಾಗಿ ಕಲಾರಂಗ ಪ್ರವೇಶ. ಸತತ ಪರಿಶ್ರಮದಿಂದ ಕಲೆ ಕರಗತ ಮಾಡಿಕೊಂಡು ತಪಸ್ವಿ, ಉತ್ತಮ ಕಂಠ ಹೊಂದಿದ್ದರಿಂದ ಮಾಸ್ತರ ಆಸೆಯಂತೆ ಕತೆಗಾರಿಕೆಯಲ್ಲಿ ತಲ್ಲೀನ, ೨೫ನೇ ವಯಸ್ಲಿನಿಂದ ದೊಡ್ಡಾಟದ ಕತೆಗಾರಿಕೆ, ನಿರ್ದೇಶನ, ಹಳ್ಳಿಯಿಂದ ಹಳ್ಳಿಗೆ ಕಾಲ್ನಡಿಗೆಯಲ್ಲಿ ಅಲೆದಾಡುತ್ತಾ ಆಸಕ್ತರಿಗೆ ದೊಡ್ಡಾಟ ಕಲಿಸಿದ ಗುರು. ಮೂಡಲಪಾಯ ದೊಡ್ಡಾಟ ಹಾಡುಗಾರಿಕೆಯಲ್ಲಿನ ಮೂವತ್ತು ರಾಗಗಳನ್ನು ಈವರೆಗೂ ಉಳಿಸಿಕೊಂಡು ಬಂದಿರುವ ಏಕೈಕ ಕಲಾವಿದ, ೨೦೦ಕ್ಕೂ ಹೆಚ್ಚು ದೊಡ್ಡಾಟಗಳಿಗೆ ನಿರ್ದೇಶನ ಮಾಡಿರುವ ಹೆಗ್ಗಳಿಕೆ, ಧಾರವಾಡದ ಆಕಾಶವಾಣಿಯಿಂದ ಅಡವಯ್ಯರ ಕತೆಗಾರಿಕೆ ದಾಖಲೀಕರಣಗೊಂಡಿದ್ದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರವಾಗಿರುವ ಅಡವಯ್ಯ ೮೪ರ ಇಳಿವಯಸ್ಸಿನಲ್ಲೂ ಕಲಾಧ್ಯಾನದಲ್ಲಿ ತೊಡಗಿರುವ ಅನನ್ಯ ಜಾನಪದ ಸಂಪತ್ತು.