Categories
ಯಕ್ಷಗಾನ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೋಡಿ ಶಂಕರ ಗಾಣಿಗ

ಹಾರಾಡಿ ಮನೆತನದ ಯಕ್ಷಗಾನ ಕಲಾಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು ಬಂದ ಪ್ರತಿಭಾವಂತ ಕುಡಿ ಕೋಡಿ ಶಂಕರ ಗಾಣಿಗ ಅವರು.
ಅಪ್ಪ, ತಾತಂದಿರ ಕಾಲದಿಂದಲೂ ಮನೆಯಲ್ಲಿ ರಿಂಗಣಿಸುತ್ತಿದ್ದ ಯಕ್ಷಗಾನ ಮದ್ದಳೆಯ ನಾದಕ್ಕೆ ಶ್ರುತಿ ಕೊಟ್ಟು ಬೆಳೆದ ಶ್ರೀಯುತರು ಯಾವ ಮೇಳದಲ್ಲೇ ಇರಲಿ, ಜನ ನಮ್ಮ ಶಂಕರ ಎಂದೇ ಗುರುತಿಸುತ್ತಾರೆ. ನಾಡಿನ ಬಹುಮುಖ್ಯ ಯಕ್ಷಗಾನ ಮೇಳಗಳಲೆಲ್ಲ ದುಡಿದ ೫೦
ವರ್ಷಗಳ ಅವಿರತ ಕಲಾ ಸೇವೆ ಅವರದು.
ಮಂದರ್ತಿ, ಮಾರನಕಟ್ಟೆ, ಕಮಲ ಶಿಲೆ, ಸೌಕೂರು, ಪೆರಡೂರು, ಇಡಗುಂಜಿ, ಮುಂತಾದ ಎಲ್ಲ ಮೇಳಗಳಲ್ಲೂ ತಮ್ಮ ಛಾಪು ಮೂಡಿಸಿ ಶಿವರಾಮ ಕಾರಂತರ ನೃತ್ಯ ನಾಟಕಗಳಲ್ಲೂ ಪಾತ್ರ ಮಾಡಿದ ಪ್ರತಿಭಾವಂತ ಕಲಾವಿದ ಶಂಕರ ಗಾಣಿಗ.
ರಾಜ್ಯ, ರಾಷ್ಟ್ರದಿಂದಾಚೆಗೂ ತಮ್ಮ ಯಕ್ಷಗಾನ ಕಲೆಯಿಂದ ಪ್ರಸಿದ್ಧರಾದ ಶಂಕರ ಗಾಣಿಗರ ಪ್ರತಿಭೆಯನ್ನು ಅರಸಿಬಂದ ಬಿರುದು ಸನ್ಮಾನಗಳು ಹಲವಾರು. ೭೩ರ ಇಳಿವಯಸ್ಸಿನಲ್ಲೂ ಗೆಜ್ಜೆ ಕಟ್ಟಬಲ್ಲ ಯುವಕನ ಉತ್ಸಾಹ ಹೊಂದಿರುವ ಅದ್ಭುತ ಯಕ್ಷಗಾನ ಕಲಾವಿದ ಶ್ರೀ ಕೋಡಿಶಂಕರ ಗಾಣಿಗರು.

Categories
ಯಕ್ಷಗಾನ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗೋಪಾಲ ಆಚಾರ್ಯ ತೀರ್ಥಹಳ್ಳಿ

ಶ್ರೀ ಗೋಪಾಲ ಆಚಾರ್ಯ ಹಿರಿಯ ಯಕ್ಷಗಾನ ಪ್ರತಿಭೆ, ಇವರ ಹುಟ್ಟೂರು ತೀರ್ಥಹಳ್ಳಿ. ಸುಮಾರು ೫೫ ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿದ್ದು, ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿಗಳಲ್ಲಿ ಒಬ್ಬರು. ಇವರ ಬಬ್ರುವಾಹನ, ಲವ-ಕುಶ, ಲಕ್ಷಣ, ಅಭಿಮನ್ಯು ಪಾತ್ರಗಳು ಹೆಸರುವಾಸಿಯಾಗಿವೆ.
ಯಕ್ಷಗಾನದಲ್ಲಿ ಹಲವಾರು ಅನುವಾದ, ನಿಘಂಟು ರಚನೆ, ವೇಷಗಳನ್ನು ಮಾಡಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ಯಕ್ಷಗಾನದ ಬಗ್ಗೆ ಅರಿವನ್ನು ಮೂಡಿಸಿದ್ದಾರೆ. ತಮ್ಮ ಯಕ್ಷಗಾನ ರಸದೌತಣವನ್ನು ಮಸ್ಕತ್ನಲ್ಲಿಯೂ ಕೂಡ ಉಣಬಡಿಸಿ, ಬಡಗುತಿಟ್ಟಿನ ನಿಜವೈಭವ ವಿಜೃಂಭಿಸುವಂತೆ ಮಾಡಿದ್ದಾರೆ.
ಐದು ದಶಕಗಳ ಕಾಲ ಯಕ್ಷಕಲೆಯನ್ನು ಉಳಿಸಿಕೊಂಡು, ಇಳಿವಯಸ್ಸಿನಲ್ಲೂ ಕಲಾಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಪ್ರಶಸ್ತಿಗಳು ಸನ್ಮಾನಗಳು ಅವರನ್ನು ಹುಡುಕಿ ಬಂದಿವೆ.

Categories
ಯಕ್ಷಗಾನ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಗೌರಮ್ಮ ಹುಚ್ಚಪ್ಪ ಮಾಸ್ತರ

ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಕಾನಲೆ ಗ್ರಾಮದ ಗೌರಮ್ಮನವರು ಹಸೆ ಚಿತ್ತಾರವನ್ನು ಮೈಗೂಡಿಸಿಕೊಂಡವರು. ಪಾರಂಪರಿಕ ಕಲೆಗಳಲ್ಲಿ ರೂಢಿಯಾದ ಇವರು ಮಲೆನಾಡಿನ ದೀವರು ಸಮುದಾಯದ ‘ಹಸೆ ಗೋಡೆ ಚಿತ್ತಾರ, ಭತ್ತದ ತೆನೆಯ ಬಾಗಿಲು ತೋರಣ, ಬುಟ್ಟಿ ಚಿತ್ತಾರಗಳಲ್ಲಿ ಖ್ಯಾತಿ ಪಡೆದವರು. ಚಿತ್ತಾರ ಕಲೆಯನ್ನು ಮಾಧ್ಯಮ ಲೋಕಕ್ಕೆ ಪರಿಚಯಿಸಿದ ಮೊದಲ ಕಲಾವಿದೆ ಇವರು. ಸುತ್ತಮುತ್ತಲ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಚಿತ್ತಾರ ತರಬೇತಿ ಕಾರ್ಯಾಗಾರ ನಡೆಸಿ, ಗ್ರಾಮೀಣ ಮಹಿಳೆಯರಲ್ಲಿ ಹಸಿ ಚಿತ್ತಾರದ ಬಗ್ಗೆ ಅರಿವು ಮೂಡಿಸಿದ್ದಾರೆ. ಕೋಲ್ಕತ್ತ, ದೆಹಲಿ, ಶಿರಸಿ, ಹಂಪಿ, ಮೈಸೂರು ಮತ್ತಿತರೆಡೆಗಳಲ್ಲಿ ಹಸೆ ಕಲೆಯ ಪ್ರದರ್ಶನ ನಡೆಸಿ ಹಸೆ ಚಿತ್ರ ಕಲಾವಿದೆಯರ ಬೃಹತ್ ಸಮಾವೇಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ೨೦೦೬ ಏಪ್ರಿಲ್ ೩ ರಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಹಸೆ ಚಿತ್ತಾರದಲ್ಲಿ ಮಾಡಿದ ಶ್ರೇಷ್ಠ ಸಾಧನೆಯನ್ನು ಗುರುತಿಸಿ ‘ಅಕಾಡೆಮಿ ಪ್ರಶಸ್ತಿ’ಯನ್ನು ನೀಡಿದ್ದಾರೆ. ಸಾಗರ ತಾಲ್ಲೂಕಿನ ಹಲವು ಸಂಘ ಸಂಸ್ಥೆಗಳು ಶ್ರೀಮತಿ ಗೌರಮ್ಮನವರ ಸಾಧನೆಯನ್ನು ಗುರುತಿಸಿ ಗೌರವಿಸಿವೆ.

Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸುಬ್ರಹ್ಮಣ್ಯ ಧಾರೇಶ್ವರ

ಯಕ್ಷಗಾನದ ಭಾಗವತಿಕೆಗೆ ವಿಶಿಷ್ಟ ಮೆರುಗು ತಂದ ದೈತ್ಯ ಪ್ರತಿಭೆ ಸುಬ್ರಹ್ಮಣ್ಯ ಧಾರೇಶ್ವರ, ಭಾಗವತ, ನಿರ್ದೇಶಕ, ಕಥಾಸಂಯೋಜಕ, ಸಂಘಟಕ, ರಾಗಸಂಯೋಜಕರಾಗಿ ೪೯ ವರ್ಷಗಳ ಸೇವಾಹಿರಿತನದ ಕಲಾಕಾರರು. ೧೯೫೭ರಲ್ಲಿ ಜನಿಸಿದ ಸುಬ್ರಹ್ಮಣ್ಯ ಧಾರೇಶ್ವರ ಬಾಲ್ಯದಲ್ಲೇ ಸ್ವರಮೋಹಿತರು. ಹತ್ತನೇ ವಯಸ್ಸಿಗೆ ಹಿಂದೂಸ್ತಾನಿ ಸಂಗೀತಾಭ್ಯಾಸ, ನಾಟಕ ಕಂಪನಿಗಳಲ್ಲಿ ತರಬೇತಿ, ೧೬ನೇ ವಯಸ್ಸಿಗೆ ಯಕ್ಷಗಾನರಂಗಕ್ಕೆ ಪಾದಾರ್ಪಣೆ, ಅಮೃತೇಶ್ವರಿ ಯಕ್ಷಗಾನ ಮಂಡಳಿಯ ಸಹಭಾಗವತನಾಗಿ ಕಲಾಸೇವಾರಂಭ, ೧೨ ವರ್ಷಗಳಲ್ಲಿ ನಿತ್ಯವೂ ಕಲಿಕೆ, ಆನಂತರ ಪ್ರಧಾನಭಾಗವತ, ನಿರ್ದೇಶಕ, ಕಥಾಸಂಯೋಜಕರಾಗಿ ೨೮ ವರ್ಷಗಳ ಕಾಲ ಶ್ರೀಪೆರ್ಡೂರು ಮೇಳ ಮುನ್ನಡೆಸಿದ ಹಿರಿಮೆ, ಹೊಸರಾಗಗಳ ಅಳವಡಿಕೆ ಮತ್ತು ಹೊಸ ತಾಂತ್ರಿಕತೆಯನ್ನು ಬಳಸಿದ ಹೆಗ್ಗಳಿಕೆ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಯಕ್ಷಗಾನ ಪ್ರಸಂಗಗಳ ರಚನೆ, ನಿರ್ದೇಶನ, ಸಂಯೋಜನೆ ಮತ್ತು ಪ್ರದರ್ಶನ. ೪೩೦ಕ್ಕೂ ಹೆಚ್ಚು ಕಥಾನಕದ ಆಡಿಯೋ ಕ್ಯಾಸೆಟ್‌ಗಳ ಮುದ್ರಣ, ೨೫೦ಕ್ಕೂ ಅಧಿಕ ವಿಡಿಯೋ-ಸಿಡಿ-ಡಿವಿಡಿಗಳ ಚಿತ್ರೀಕರಣದ ದಾಖಲೆ, ಧಾರೇಶ್ವರ ಯಕ್ಷಬಳಗ ಚಾರಿಟಬಲ್ ಟ್ರಸ್ಟ್ ಮೂಲಕ ನಿರಂತರ ಕಲಾಸೇವೆ. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ರತ್ನಪ್ರಶಸ್ತಿ, ಶ್ರೀರಾಮವಿಠಲ ಪ್ರಶಸ್ತಿ ಸೇರಿ ಸಾವಿರಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಗೆ ಸನ್ಮಾನಿತಗೊಂಡ ಮಾದರಿ ಸಾಧನೆ.

Categories
ಯಕ್ಷಗಾನ ರಾಜ್ಯೋತ್ಸವ 2020

ಎಂ.ಕೆ. ರಮೇಶ್ ಆಚಾರ್ಯ

ಮಲೆನಾಡು ಕಂಡ ಪ್ರತಿಭಾಶಾಲಿ ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಎಂ.ಕೆ. ರಮೇಶ್ ಆಚಾರ್ಯ. ಬಡಗು ಮತ್ತು ತೆಂಕುತಿಟ್ಟು ಎರಡೂ ಪ್ರಕಾರದ ಸಮರ್ಥ ಪಾತ್ರಧಾರಿ.
ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಕಲು ಅಂಚೆಯ ಆಲ್ಮನೆ ಗ್ರಾಮದವರಾದ ಎಂ.ಕೆ. ರಮೇಶ್ ಆಚಾರ್ಯ ಐದನೇ ತರಗತಿಯಲ್ಲಿರುವಾಗಲೇ ಯಕ್ಷರಂಗ ಪ್ರವೇಶಿಸಿದ ಪಟು. ಬಡಗು ಮತ್ತು ತೆಂಕುತಿಟ್ಟು ಪ್ರಕಾರಗಳೆರಡರಲ್ಲೂ ಅನನ್ಯ ಸ್ತ್ರೀವೇಷ ಪಾತ್ರಧಾರಿ. ವೃತ್ತಿ ಕಲಾವಿದರಾಗಿ ಐದು ದಶಕಗಳ ಸಾರ್ಥಕ ಕಲಾಸೇವೆ. ಹತ್ತಾರು ಯಕ್ಷಗಾನ ಪ್ರಸಂಗಗಳಿಗೆ ಕಲಾ ನಿರ್ದೇಶನ ಮಾಡಿದ ಹೆಗ್ಗಳಿಕೆ. ಮಹಾಮಾತೆ ಕುಂತಿ, ಸಮಗ್ರ ವಿಶ್ವಾಮಿತ್ರ, ಅನಸೂಯಾ ಉಪಾಖ್ಯಾನ, ಶ್ರೀಕೃಷ್ಣ ತುಲಾಭಾರದಂತಹ ಪುರಾಣ ಪ್ರಸಂಗಗಳು, ಕಿಗ್ಗ ಕ್ಷೇತ್ರ ಮಹಾತ್ಮ, ಕಳಸ ಕ್ಷೇತ್ರ ಮಹಾತ್ಮ ಮುಂತಾದ ಕ್ಷೇತ್ರ ಮಹಾತ್ಮ ಪ್ರಸಂಗಗಳಲ್ಲಿ ಪಾತ್ರಧಾರಿ, ಮೂವತ್ತೈದು ಕಾಲ್ಪನಿಕ ಯಕ್ಷಗಾನ ಪ್ರಸಂಗಗಳ ಪದ್ಯ ರಚನಾಕಾರರು. ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರು.

Categories
ಯಕ್ಷಗಾನ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಬಂಗಾರಾಚಾರಿ

ಮೂಡಲಪಾಯ ಯಕ್ಷಗಾನ ಕಲಾಪ್ರಕಾರದ ಪ್ರಖರ ಕಲಾವಿದರು ಬಂಗಾರಾಚಾರಿ, ಹೊಸ ನಮೂನೆಯ ಕುಣಿತಗಳನ್ನು ಚಾಲ್ತಿಗೆ ತಂದ ಕಲಾಗುರು.
ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬಳ್ಳಿಯ ಮೇರುಪ್ರತಿಭೆ ಬಂಗಾರಾಚಾರಿ, ೭ನೇ ತರಗತಿವರೆಗಷ್ಟೇ ಕಲಿಕೆ. ಅನಂತರ ಕುಲಕಸುಬಾದ ಮರಕೆಲಸ-ಕಬ್ಬಿಣದ ಕೆಲಸದಲ್ಲಿ ತಲ್ಲೀನ. ಕಲಾಕರ್ಷಣೆಯಿಂದ ಮದ್ದಳೆ ವಾದನ-ಹಾಡುಗಾರಿಕೆಯ ಕಲಿಕೆ. ತಂದೆಯೇ ಗುರು. ಮರದ ಗೊಂಬೆಗಳಿಗೆ ಯಕ್ಷಗಾನದ ಉಡುಪು ಧರಿಸಿ ಕುಣಿಸುತ್ತಿದ್ದಂತೆ ಮದ್ದಳೆವಾದಕರಾಗಿ ರೂಪಾಂತರ. ಗೊಂಬೆಯಾಟದಲ್ಲಿ ಪರಿಣಿತಿ ಸಾಧಿಸಿದ ಮೇಲೆ ಭಾಗವತಿಕೆ ಶುರು. ಆರು ದಶಕದಿಂದಲೂ ಕಬ್ಬಳ್ಳಿಯಲ್ಲಿ ಪಂಚವಟಿ ರಾಮಾಯಣಕ್ಕೆ ಮೂಡಲಪಾಯ ಯಕ್ಷಗಾನದ ರೂಪ ನೀಡಿ ಪ್ರದರ್ಶನ, ಗೊಂಬೆಯಾಟದಲ್ಲಿನ ಸ್ತ್ರೀವೇಷದ ಕುಣಿತವನ್ನು ಮೂಡಲಪಾಯದಲ್ಲಿಯೂ ಅಳವಡಿಸಿದ ಕೀರ್ತಿ, ಹೊಸ ಕುಣಿತಗಳನ್ನು ಅಳವಡಿಸಿದ ಹಿರಿಮೆ. ಸತ್ಯಹರಿಶ್ಚಂದ್ರ, ವಾಲಿಸುಗ್ರೀವರ ಕಾಳಗ, ಸುಭದ್ರಾ ಕಲ್ಯಾಣ, ಐರಾವತ ಮುಂತಾದ ಪ್ರಸಂಗಗಳನ್ನು ರಚಿಸಿ ಪ್ರದರ್ಶಿಸಿದ ಪ್ರಯೋಗಶೀಲರು. ಮರದ ಕಿರೀಟಗಳನ್ನು ರಟ್ಟಿನಲ್ಲಿ ಮಾಡಿ ಮೂಡಲಪಾಯ ಯಕ್ಷಗಾನದ ಪರಂಪರೆಗೆ ಮಾನ್ಯತೆ ತಂದುಕೊಟ್ಟ ಕಲಾಚೇತನ.

Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸರಪಾಡಿ ಅಶೋಕ ಶೆಟ್ಟಿ

ಯಕ್ಷರಂಗಭೂಮಿಯಲ್ಲಿ ಕಲಾವಿದನಾಗಿ ರಸಿಕರ ಮನರಂಜಿಸಿದ ಕಲಾಚೇತನ ಸರಪಾಡಿ ಅಶೋಕ ಶೆಟ್ಟಿ, ನಾಟ್ಯಗುರು, ಸಮರ್ಥ ಪಾತ್ರಧಾರಿ, ಯಕ್ಷಪ್ರಸಂಗಗಳ ರಚನಾಕಾರರು, ನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಅಜಿಲಮೊಗರುನಲ್ಲಿ ೧೯೬೧ರಲ್ಲಿ ಜನಿಸಿದ ಅಶೋಕ ಶೆಟ್ಟಿ ಎಳವೆಯಿಂದಲೇ ಯಕ್ಷಪ್ರೇಮಿ, ಪ್ರೌಢಶಿಕ್ಷಣದವರೆಗಷ್ಟೇ ವ್ಯಾಸಂಗ, ಆನಂತರ ಕಲೆಯೇ ಜೀವನ, ಕಲೆಯೇ ಶಿಕ್ಷಣ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ, ಉತ್ತಮ ನೃತ್ಯಪಟು, ಅರ್ಜುನ, ದೇವೇಂದ್ರ, ರಕ್ತಬೀಜ, ಕೌಂಡ್ಲಕ, ಶತ್ರುಘ್ನ, ಇಂದ್ರಜಿತು ಮುಂತಾದವು ಅಶೋಕಶೆಟ್ಟಿ ಅವರ ಕಲಾಭಿವ್ಯಕ್ತಿಯ ಜನಪ್ರಿಯ ಪಾತ್ರಗಳು. ಕಟೀಲು ಮೇಳ, ಅಳದಂಗಡಿ ಮೇಳ, ಬಪ್ಪನಾಡು ಮೇಳ, ಕದ್ರಿ ಮೇಳ, ಮಂಗಳಾದೇವಿ ಮೇಳ ಮುಂತಾದ ಮೇಳಗಳಲ್ಲಿ ಕಲಾವಿದ, ಸಂಚಾಲಕನಾಗಿ ಸಾರ್ಥಕ ಕಲಾಸೇವೆ. ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಉಚಿತ ನಾಟ್ಯ ತರಬೇತಿ ನೀಡಿದ ಗುರು. ಸಾವಯವ ಕೃಷಿ ವಿಜಯ ಕುರಿತ ಆರು ಯಕ್ಷಗಾನ ಪ್ರಸಂಗಗಳ ರಚನೆ ಮತ್ತು ನಿರ್ದೇಶನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ. ಹತ್ತಾರು ಸಂಘಸಂಸ್ಥೆಗಳಲ್ಲಿ ನಿಸ್ವಾರ್ಥ ಕಾರ್ಯ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಸೇರಿದಂತೆ ಹಲವು ಸನ್ಮಾನಗಳಿಂದ ಭೂಷಿತ ಯಕ್ಷಪ್ರತಿಭೆ.

Categories
ಯಕ್ಷಗಾನ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶ್ರೀಧರ್ ಭಂಡಾರಿ ಪುತ್ತೂರು

ಯಕ್ಷಗಾನ ಕಲೆಯನ್ನೇ ಸಾಧನಾ ಪಥವಾಗಿಸಿಕೊಂಡ ಹಿರಿಯ ಕಲಾಚೇತನ ಡಾ. ಶ್ರೀಧರ್ ಭಂಡಾರಿ. ಯಕ್ಷಗಾನ ಕಲಾವಿದ, ಶಿಕ್ಷಕ, ಸಂಘಟಕ ಹಾಗೂ ಮೇಳದ ಮುಖ್ಯಸ್ಥರಾಗಿ ಮಹತ್ವಪೂರ್ಣ ಸೇವೆ.
ಯಕ್ಷಗಾನ ಕಲೆ ಶ್ರೀಧರ್ ಭಂಡಾರಿ ಅವರಿಗೆ ರಕ್ತಗತ. ತಂದೆ ಶೀನಪ್ಪ ಭಂಡಾರಿ ಯಕ್ಷಗಾನದ ದಂತಕಥೆ. ೧೯೪೫ರ ಅಕ್ಟೋಬರ್ ಒಂದರಂದು ಜನಿಸಿದ ಶ್ರೀಧರ್ ಭಂಡಾರಿ ೯ನೇ ವಯಸ್ಸಿಗೆ ತೆಂಕುತಿಟ್ಟಿನ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ. ಐದನೇ ತರಗತಿವರಗಷ್ಟೇ ವಿದ್ಯಾಭ್ಯಾಸ. ೧೧ರ ಹರೆಯದಿಂದಲೂ ಯಕ್ಷಗಾನವೇ ಬದುಕು-ಭಾವ. ಹೆಸರಾಂತ ಮೇಳಗಳಾದ ಶ್ರೀ ಬಳ್ಳಂಬೆಟ್ಟ ಮೇಲ, ಶ್ರೀ ಧರ್ಮಸ್ಥಳ ಮೇಳ, ಶ್ರೀ ಮಹಾಲಿಂಗೇಶ್ವರ ಮೇಳ, ಕಾಂತೇಶ್ವರ ಮೇಳಗಳಲ್ಲಿ ೬೫ ವರ್ಷಗಳ ಕಾಲ ನಿರಂತರ ಕಲಾಸೇವೆ. ವೃತ್ತಿ ಕಲಾವಿದರಾಗಿ, ಸಂಘಟಕರಾಗಿ ಅನನ್ಯ ದುಡಿಮೆ. ನೂರಾರು ಬಾರಿ ಭಾರತದ ಉದ್ದಗಲಕ್ಕೂ ಯಕ್ಷಗಾನ ಪ್ರದರ್ಶನ. ೬೨ರ ಇಳಿವಯಸ್ಸಿನಲ್ಲಿ ಮೂರು ನಿಮಿಷಗಳಲ್ಲಿ ೧೪೮ ಬಾರಿ ಗಿರಕಿಗಳನ್ನು ಹೊಡೆದು ದಾಖಲೆ ಸ್ಥಾಪಿಸಿರುವ ಅಪೂರ್ವ ಕಲಾವಿದ, ಯಕ್ಷಗಾನ ಮೇಳಗಳ ಯಶಸ್ವಿ ಆಯೋಜನೆ. ದೇಶ-ವಿದೇಶಗಳಲ್ಲಿ ಪ್ರದರ್ಶನ, ಯಕ್ಷಗಾನ ಬಯಲಾಟ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ಅಮೆರಿಕದ ಹೂಸ್ಟನ್ ವಿ.ವಿ ಯಿಂದ ಗೌರವ ಡಾಕ್ಟರೇಟ್ ಸೇರಿ ೬೦೦ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನರಾದ ಅಭಿಜಾತ.

Categories
ಯಕ್ಷಗಾನ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಬಳ್ಳೂರು ಕೃಷ್ಣ ಯಾಜಿ

ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಯಾಜಿ ಅವರು ನಾಡಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದು, ಹತ್ತು ವರ್ಷಗಳ ಹಿಂದೆ ತಮ್ಮದೇ ಆದ ಯಾಜಿ ಯಕ್ಷ ಮಿತ್ರ ಮಂಡಳಿಯನ್ನು ಸ್ಥಾಪಿಸಿದರು.

ಯಕ್ಷಗಾನ ಲೋಕದ ದಿಗ್ಗಜರೊಂದಿಗೆ ಒಡನಾಟವಿಟ್ಟುಕೊಂಡ ಯಾಜಿಯವರು ದೇಶ ವಿದೇಶಗಳಲ್ಲಿ ಮೇಳಗಳೊಂದಿಗೆ ಪ್ರವಾಸ ಮಾಡಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ತಮ್ಮ ಮೇಳ ಮೂಲಕ ಹೊಸ ಪೀಳಿಗೆಯ ಯಕ್ಷಗಾನ ಕಲಾವಿದರನ್ನು ಸಿದ್ಧ ಮಾಡುತ್ತಿರುವ ಯಾಜಿ ಅವರಿಗೆ ಅನೇಕ ಗೌರವ ಸನ್ಮಾನಗಳು ಲಭಿಸಿದೆ.

Categories
ಯಕ್ಷಗಾನ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಶಿವರಾಮ ಜೋಗಿ

ಚಿಕ್ಕಂದಿನಲ್ಲಿಯೇ ಕಲೆಗೆ ಒಲಿದು ಯಕ್ಷಗಾನ ಹಾಗೂ ನಾಟ್ಯಾಭ್ಯಾಸ ಮಾಡಿ ಯಕ್ಷಗಾನದಲ್ಲಿ ಶಿವರಾಮ ಜೋಗಿ ಹೆಚ್ಚಿನ ಪರಿಣತಿ ಪಡೆದದ್ದು ಶೇಣಿಗೋಪಾಲಕೃಷ್ಣ ಭಟ್ಟರಂತಹ ದಿಗ್ಗಜರ ಗರಡಿಯಲ್ಲಿ. ಅರ್ಥಗಾರಿಕೆಯಲ್ಲಿ ಅಚ್ಚುಕಟ್ಟಾಗಿ ಅಭಿನಯಿಸುವ ಕಲೆ ಕಲಿತ ಶಿವರಾಮ ಜೋಗಿಯವರು ಕೂಡ್ಲು ಮೇಳದಿಂದ ಯಕ್ಷರಂಗಕ್ಕೆ ಕಾಲಿಟ್ಟರು.

ಕೆಲಕಾಲ ಮೂಲ್ಕಿ ಮೇಳದಲ್ಲಿದ್ದ ಜೋಗಿಯವರು, ಮುಂದಿನ ತಮ್ಮ ಯಕ್ಷಗಾನ ಪಯಣವನ್ನು ಮೀಸಲಿಟ್ಟಿದ್ದು ಸುರತ್ಕಲ್ ಯಕ್ಷಗಾನ ಮೇಳದ ಜೊತೆಯಲ್ಲಿ, ಅಭಿಮನ್ಯು, ಕೃಷ್ಣ, ಬಬ್ರುವಾಹನ ಮೊದಲಾದ ಪಾತ್ರಗಳಲ್ಲಿ ಜೀವ ತುಂಬುತ್ತಿದ್ದ ಜೋಗಿಯವರು ಸುರತ್ಕಲ್ ಮೇಳವನ್ನು ಜನಪ್ರಿಯಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.

ನಾಲ್ಕು ದಶಕಗಳ ಕಾಲ ಸುರತ್ಕಲ್ ಮೇಳದ ತಿರುಗಾಟದ ಜವಾಬ್ದಾರಿ ಹೊತ್ತಿದ್ದ ಶಿವರಾಮ ಜೋಗಿ, ಯಕ್ಷಗಾನ ಮೇಳಗಳ ಸಂಘಟನೆಯಲ್ಲಿಯೂ ಸಕ್ರಿಯರಾಗಿದ್ದರು. ಯಕ್ಷಗಾನ ಅಕಾಡೆಮಿ ಗೌರವ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಜೋಗಿಯವರಿಗೆ ಸಂದಿವೆ.

Categories
ಯಕ್ಷಗಾನ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸೀತಾರಾಮ್ ಕುಮಾರ್ ಕಟೀಲ್

ಯಕ್ಷರಂಗದ ಚಾರ್ಲಿ ಚಾಪ್ಲಿನ್ರೆಂದೇ ಹೆಸರುವಾಸಿಯಾದ ಸೀತಾರಾಮ್ ಕುಮಾರ್ ಕಟೀಲ್ ಹಿರಿಯ ಯಕ್ಷಗಾನ ಕಲಾವಿದರು. ನೋವು ನುಂಗಿ ನಗೆಚೆಲ್ಲಿದ ಯಕ್ಷಪಟು.
ದಕ್ಷಿಣಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಕಟೀಲ್ನಲ್ಲಿ ಜನಿಸಿದ ಸೀತಾರಾಮ್ ಓದಿದ್ದು ಕೇವಲ ಐದನೇ ತರಗತಿ ಮಾತ್ರ, ಕಡುಬಡತನ ದುಡಿಮೆಗಾಗಿ ಮುಂಬಯಿಗೆ ದೂಡಿತ್ತು. ಅಪರಿಚಿತ ನಗರಿಯಲ್ಲಿ ಆಕಸ್ಮಿಕವಾಗಿ ಯಕ್ಷಗಾನದ ಸೆಳೆತಕ್ಕೆ ಸಿಲುಕಿದ್ದು ನಿಜಕ್ಕೂ ಸೋಜಿಗ. ಮುಂಬಯಿನ ಶ್ರೀ ಗುರುನಾರಯಣ ಯಕ್ಷಗಾನ ಮಂಡಳಿಯಲ್ಲಿ ಆರಂಭಿಕ ತರಬೇತಿ. ಕದ್ರಿ ಮೇಳದ ‘ಗೆಜ್ಜೆಹೆಜ್ಜೆ’ ಪ್ರಸಂಗದ ‘ಕುಡುಕಕುಳ’ ನಾಗಿ ನೀಡಿದ ಮನೋಜ್ಞ ಅಭಿನಯ ಕಲಾಬದುಕಿಗೆ ಮಹತ್ವದ ತಿರುವು. ಆನಂತರ ಪೆರ್ಡೂರು ಮೇಳ, ಸಾಲಿಗ್ರಾಮ ಮೇಳ, ಮಂಗಳಾದೇವಿ ಮೇಳ, ಮಧೂರು ಮೇಳಗಳಲ್ಲಿ ನಿರಂತರ ಸೇವೆ. ಯಕ್ಷಗಾನದ ಹಾಸ್ಯಗಾರನಾಗಿ ಜನಜನಿತ. ವಿದೇಶಗಳಲ್ಲೂ ಯಕ್ಷಗಾನದ ಕಂಪು ಬೀರಿದ ಸಾಧನೆ. ಕಲಾಸೇವೆಯ ಸುವರ್ಣ ಮಹೋತ್ಸವದಂಚಿನಲ್ಲಿರುವ ಸೀತಾರಾಮ್ ಕುಮಾರ್ ಕಲಾಪ್ರೌಢಿಮೆಗೆ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಪೇಜಾವರಸ್ವಾಮಿಗಳ ವೀರವಿಠಲ ಪ್ರಶಸ್ತಿ, ವಿಶ್ವಕನ್ನಡ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು-ನೂರಾರು ಸನ್ಮಾನಗಳಿಗೆ ಭಾಜನರು.

Categories
ಯಕ್ಷಗಾನ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹಿರಿಯಡ್ಕ ಗೋಪಾಲರಾವ್

ನಾಡೋಜ ಹಿರಿಯಡ್ಕ ಗೋಪಾಲರಾವ್ ನಾಡು ಕಂಡ ಅನನ್ಯ ಮದ್ದಳೆಗಾರ, ಯಕ್ಷಗಾನವನ್ನು ಪ್ರಪ್ರಥಮಬಾರಿಗೆ ವಿದೇಶಕ್ಕೆ ಕೊಂಡೊಯ್ದ ಮದ್ದಳೆಯ ಮಾಂತ್ರಿಕ.
೧೯೧೯ರಲ್ಲಿ ಹಿರಿಯಡ್ಕದಲ್ಲಿ ಜನಿಸಿದ ಗೋಪಾಲರಾವ್ ಅವರ ಕಲಾಪ್ರೇಮಕ್ಕೆ ತಂದೆಯೇ ಸ್ಫೂರ್ತಿ. ೧೬ನೇ ವಯಸ್ಸಿನಲ್ಲೇ ತಂದೆಯಿಂದ ಮದ್ದಳೆ ಅಭ್ಯಾಸ. ೧೯೩೪ರಲ್ಲಿ ಹಿರಿಯಡ್ಕ ಮೇಳದಲ್ಲಿ ಪ್ರಾತಧಾರಿಯಾಗಿ ಕಲಾಲೋಕಕ್ಕೆ ಪಾದಾರ್ಪಣೆ. ಆನಂತರ ಉಪಮದ್ದಳೆಗಾರ, ಮದ್ದಳೆಗಾರರಾಗಿ ರೂಪಾಂತರು. ಕಡಲತೀರಭಾರ್ಗವ ಡಾ. ಶಿವರಾಮಕಾರಂತರ ಯಕ್ಷಗಾನ ಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ. ಆನಂತರ ನಿರಂತರ ಕಲಾಪ್ರದರ್ಶನ, ಮಂದಾರ್ತಿ ಕಲಾಮೇಳ, ಬ್ರಹ್ಮಾವರದ ಯಕ್ಷಗಾನ ಕೇಂದ್ರ, ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರದಲ್ಲಿ ಕಲಾಸೇವೆ. ರಾಜ್ಯಾದ್ಯಂತ ಮಾತ್ರವಲ್ಲದೆ, ಈಶಾನ್ಯ ಭಾರತ, ಜರ್ಮನಿ ಸೇರಿ ಹಲವು ವಿದೇಶಗಳಲ್ಲಿ ಮದ್ದಳೆಯ ನಾದವೈಭವದ ದರ್ಶನ. ವಿದೇಶಿಗರಿಗೆ ಯಕ್ಷಗಾನ ಕಲಿಸಿದ ಈ ಗುರುವಿಗೆ ಈಗ ೯೯ರ ಇಳಿವಯಸ್ಸು. ಆದರೂ ಬತ್ತದ ಉತ್ಸಾಹ, ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ ಹಾಗೂ ನಾಡೋಜ ಗೌರವಕ್ಕೆ ಪಾತ್ರರು.

Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಂ.ಎ. ನಾಯ್ಕ

ಯಕ್ಷಗಾನ ಕ್ಷೇತ್ರ ಕಂಡ ಶ್ರೇಷ್ಠ ಕಲಾಕುಸುಮಗಳಲ್ಲಿ ಪ್ರಮುಖರು ಎಂ.ಎ. ನಾಯ್ಕ, ಬಡಗುತಿಟ್ಟಿನ ಅಗ್ರಪಂಕ್ತಿಯ ಸ್ತ್ರೀ ವೇಷಧಾರಿ. ಮೇಳಗಳ ಕೀರ್ತಿ ಬೆಳಗಿದ ಕಲಾವಿದರು. ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಮಂದಾರ್ತಿ ಗ್ರಾಮದಲ್ಲಿ ೧೯೫೨ ರಲ್ಲಿ ಜನಿಸಿದ ಎಂ.ಎ.ನಾಯ್ಕ ಅವರ ಮೂಲ ಹೆಸರು ಮಂದಾತಿ ಅಣ್ಣಪ್ಪ ಮರಕಾಲ, ಬಡತನದ ಬೇಗೆಗೆ ಆರನೇ ತರಗತಿಗೆ ಓದು ಸ್ಥಗಿತ. ಮಂದಾರ್ತಿ ಮೇಳದ ಚಂಡೆಯ ಶಬ್ದಕ್ಕೆ ಮನಸೋತು ಕಲಾರಂಗಪ್ರವೇಶ. ಹಿರಿಯ ಯಕ್ಷಗಾನ ಕಲಾವಿದ ಭಾಗವತ ನಾರಾಯಣ ಉದ್ದೂರರ ಶಿಷ್ಯರಾಗಿ ಪ್ರವರ್ಧಮಾನಕ್ಕೆ, ಸ್ತ್ರೀವೇಷಧಾರಿಯಾಗಿ ಜನಜನಿತ. ಸ್ತ್ರೀವೇಷಕ್ಕೆ ಬೇಕಾದ ಒನಪು, ವೈಯ್ಯಾರ, ಶರೀರ, ಶಾರೀರ, ಸ್ವರಭಾರಗಳ ಸರ್ವ ಅಂಗಗಳಲ್ಲಿ ಉತ್ಕರ್ಷ ಹೊಂದಿರುವ ವಿಶಿಷ್ಟ ಕಲಾವಿದರು. ಮೋಹಿನಿ, ಸೈರೇಂದ್ರಿ, ದಮಯಂತಿ, ದ್ರೌಪದಿ, ಚಂದ್ರಮತಿ, ಸೀತೆ, ದೇವಿ ಮುಂತಾದವು ನಾಯ್ಕರ ಜನಪ್ರಿಯ ಸ್ತ್ರೀಪಾತ್ರಗಳು, ಅಮೃತೇಶ್ವರಿ ಮೇಳ, ಶಿರಸಿ ಮಾರಿಕಾಂಬ ಮೇಳ, ಇಡಗುಂಜಿ ಮೇಳ, ಮಂದಾತಿ ಮೇಳ ಸೇರಿದಂತೆ ಹಲವು ಮೇಳಗಳಲ್ಲಿ ಒಟ್ಟು ೪೨ ವರ್ಷಗಳ ಸುದೀರ್ಘ ಕಾಲ ಕಲಾಸೇವೆಗೈದ ಹಿರಿಮೆ, ಜರ್ಮನಿ, ಪೋಲೆಂಡ್, ಸ್ವಿಜರ್‌ಲ್ಯಾಂಡ್, ಹಾಂಗಕಾಂಗ್‌ ಮುಂತಾದೆಡೆಯೂ ಕಲಾಪ್ರದರ್ಶನ ನೀಡಿದ ಹೆಗ್ಗಳಿಕೆಯ ಎಂ.ಎ.ನಾಯ್ಕ ಅವರು ಕಾಳಿಂಗನಾವಡ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಭೂಷಿತರಾದ ಕಲಾಚೇತನ.

Categories
ಯಕ್ಷಗಾನ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಕಿನ್ನಿಗೋಟಿ ಮುಖ್ಯ ಪ್ರಾಣ ಶೆಟ್ಟಿಗಾರ

ತೆಂಕು ಹಾಗೂ ಬಡಗು ಎರಡೂ ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ಐವತ್ತೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಿನ್ನಿಗೋಳಿ ಮುಖ್ಯಪ್ರಾಣ ಶೆಟ್ಟಿಗಾರ್ ಅವರು ಓದಿದ್ದು ಐದನೆಯ ತರಗತಿಯವರೆಗೆ ಮಾತ್ರ. ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪನವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಮೊದಲಿಗೆ ಕಲಾವಿದರಾಗಿ ಕಟೀಲು ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಸೇವೆ ಆರಂಭಿಸಿದರು. ನಂತರ ಇರಾ ಸೋಮನಾಥೇಶ್ವರ, ಸಾಲಿಗ್ರಾಮ, ಕದ್ರಿ ಮೇಳಗಳಲ್ಲಿ ಪಾತ್ರ ನಿರ್ವಹಣೆ ಮಾಡಿದ ಕಿನ್ನಿಗೋಳಿ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

Categories
ಯಕ್ಷಗಾನ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಪೇತ್ರಿ ಮಾಧವನಾಯ್ಕ

ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ ಪೇತ್ರಿ ಮಾಧವ ನಾಯ್ಕ ಅವರು ಯಕ್ಷಗಾನದಲ್ಲಿ ಎಲ್ಲ ಬಗೆಯ ಪಾತ್ರಗಳನ್ನು ಸಮರ್ಥವಾಗಿ
ನಿರ್ವಹಿಸಿರುವ ಕಲಾವಿದರು.
ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಗೆ ಸೇರ್ಪಡೆಯಾದ ಮಾಧವ ನಾಯ್ಕರು ಮುಖ್ಯ ವೇಷಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದವರು. ವೃತ್ತಿ ಯಕ್ಷ ರಂಗಭೂಮಿಯಲ್ಲಿ ರಾಕ್ಷಸ ಪಾತ್ರಗಳಲ್ಲಿ ಜನಮೆಚ್ಚುಗೆ ಪಡೆದ ಮಾಧವ ನಾಯ್ಕ ಅವರು ಘಟೋತ್ಕಚ ಪಾತ್ರ ಮಾತ್ರವಲ್ಲದೆ ಹಿಡಿಂಬಿ, ಶೂರ್ಪನಖಿ ಪಾತ್ರಗಳನ್ನು ಸಹ ಸೊಗಸಾಗಿ ಮೂಡಿಸಿದ್ದಾರೆ.
ಕರ್ನಾಟಕದ ಬಹತೇಕ ಎಲ್ಲ ಯಕ್ಷಗಾನ ಮೇಳಗಳಲ್ಲಿ ಕೆಲಸ ಮಾಡಿರುವ ಪೇತ್ರಿ ಮಾಧವ ನಾಯ್ಕ ಅವರಿಗೆ ಪ್ರತಿಷ್ಠಿತ ಕು.ಶಿ. ಹರಿದಾಸ ಭಟ್ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಸಂದಿವೆ. ಉಡುಪಿಯ ಎಂ.ಜಿ.ಎಂ ಯಕ್ಷಗಾನ ಕೇಂದ್ರದಲ್ಲಿ ಮೂರು ದಶಕಗಳ ಕಾಲ ಕಲಾವಿದರಾಗಿ ಹಾಗೂ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.

Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅರಳುಕುಪ್ಪೆ ಎಸ್.ನಂಜಪ್ಪ

ಬಾಲ್ಯದಿಂದಲೇ ಯಕ್ಷಗಾನ ಕಲೆಯಲ್ಲಿ ಸಿದ್ಧಿ ಪಡೆದು ಗುರುಪರಂಪರೆಯನ್ನು ಬೆಳೆಸಿಕೊಂಡು ಬಂದ ಭಾಗವತರು ಎ.ಎಸ್. ನಂಜಪ್ಪ ಅವರು.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ೧೯೩೭ರಲ್ಲಿ ಶ್ರೀಯುತರ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಯಕ್ಷಗಾನ ಬಯಲಾಟಕ್ಕೆ ಪ್ರಸಿದ್ಧಿ ಪಡೆದಿದ್ದ ಅರಳಗುಪ್ಪೆ ಗ್ರಾಮದ ಉತ್ಸಾಹಿ ಯುವಕರು ಸೇರಿಕೊಂಡು ಮೂರು-ನಾಲ್ಕು ತಂಡಗಳ ರಚನೆ, ವರ್ಷದಲ್ಲಿ ಹತ್ತರಿಂದ ಇಪ್ಪತ್ತು ಬಾರಿ ಯಕ್ಷಗಾನ ಬಯಲಾಟ ಆಡುತ್ತ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಶ್ರೀಯುತರು.
ಮೊದಲಿಗೆ ಭಾಗವತ ಸಿದ್ದಲಿಂಗಪ್ಪ ಅವರ ಬಳಿ ಶಿಷ್ಯವೃತ್ತಿ. ಬಳಿಕ ಭಾಗವತರಾದ ದಿವಾಕರಾಚಾರ್ಯ, ಶಾಂತವೀರಪ್ಪ ಅವರ ಬಳಿ ದಕ್ಷಿಣಾದಿ ಧಾಟಿಯ ಯಕ್ಷಗಾನ ಕಲಿಕೆ.
ಯಕ್ಷಗಾನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುವುದರ ಜತೆಗೆ ಭಾಗವತರ ಜತೆಯಲ್ಲಿ ಹಿಮ್ಮೇಳದಲ್ಲಿ ಹಾಡುತ್ತ, ತಾಳ ಹಾಕುತ್ತ, ಶನಿಮಹಾತ್ಮ ಕಥೆ, ನಳದಮಯಂತಿ ಕಥೆ, ಸತ್ಯವ್ರತ, ಚೆನ್ನಬಸವ ಪುರಾಣ ಓದುತ್ತ ಬೆಳೆದವರು ನಂಜಪ್ಪ ಅವರು.
ಶ್ರೀಯುತರು ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದ ದಕ್ಷಯಜ್ಞದ ಬ್ರಹ್ಮನ ಪಾತ್ರ ಕಂಡು ಜಾನಪದ ತಜ್ಞರಾದ ಎಚ್.ಎಲ್‌ನಾಗೇಗೌಡರು, ಜೀ.ಶಂ.ಪರಮಶಿವಯ್ಯ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿರುವರು.
ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾಗಿಯೂ ಶ್ರೀಯುತರು ಹತ್ತಾರು ಕಾರ್ಯಕ್ರಮಗಳನ್ನು ನೀಡಿರುವರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಜಾನಪದ ಜ್ಞಾನ-ವಿಜ್ಞಾನ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್‌ನಿಂದ ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರು.
ಯಕ್ಷಗಾನ ಬಯಲಾಟದಲ್ಲಿ ಸಾಧನೆ ಮಾಡುತ್ತ, ಶಿಷ್ಯವೃಂದವನ್ನು ಬೆಳೆಸುತ್ತ ಗುರುಪರಂಪರೆಯ ಉಳಿವಿಗೆ ಶ್ರಮಿಸುತ್ತಿರುವವರು ಶ್ರೀ ಎ.ಎಸ್.ನಂಜಪ್ಪ.

Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಾತಾಳ ವೆಂಕಟರಮಣ ಭಟ್

ಸ್ತ್ರೀಯರು ರಂಗಭೂಮಿ, ಯಕ್ಷಗಾನ ಪ್ರಕಾರಕ್ಕೆ ಹೆಚ್ಚಾಗಿ ಪ್ರವೇಶಿಸದ ದಿನಗಳಲ್ಲಿ ಸ್ತ್ರೀ ಪಾತ್ರಗಳನ್ನು ನಿಭಾಯಿಸಿ ಸೈ ಎನಿಸಿಕೊಂಡವರು ಪಾತಾಳ ವೆಂಕಟರಮಣ ಭಟ್ಟ ಅವರು.
ದಕ್ಷಿಣ ಕನ್ನಡ ಜಿಲ್ಲೆಯವರಾದ ಪಾತಾಳ ವೆಂಕಟರಮಣ ಭಟ್ಟರು ಪುತ್ತೂರು ಕೃಷ್ಣಭಟ್ಟರಿಂದ ತೆಂಕುತಿಟ್ಟಿನ ಅಭ್ಯಾಸ. ಮುಲ್ಕಿಮೇಳ, ಸುರತ್ಕಲ್ ಮಹಾಮಾಯಿ ಮೇಳ, ಧರ್ಮಸ್ಥಳದ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಗಳಲ್ಲಿ
ದುಡಿದಿರುವರು.
ರಂಭೆ, ಊರ್ವಶಿ, ಮೇನಕೆ, ಸತ್ಯಭಾಮೆ, ಸುಭದ್ರೆ, ದೌಪದಿ, ಮೀನಾಕ್ಷಿ, ಸ್ವಯಂಪ್ರಭೆಯಂತಹ ಸೌಂದರ್ಯದ ಪ್ರತೀಕವಾದ ಈ ಪಾತ್ರಗಳನ್ನು ರಂಗದ ಮೇಲೆ ಅಷ್ಟೇ ಪರಿಣಾಮಕಾರಿಯಾಗಿ ಅಭಿನಯಿಸಿದ ಹಿರಿಮೆಗೆ ಪಾತ್ರರು. ಬೇಲೂರಿನ ಶಿಲಾ ಬಾಲಿಕೆಯರ ಅಂಗಭಂಗಿಗಳನ್ನು ಬೇಲೂರಿಗೆ ಹೋಗಿ ಸ್ವತಃ ಅಭ್ಯಸಿಸಿ ಯಕ್ಷಗಾನದಲ್ಲಿ ಅಳವಡಿಸಿದವರು. ಸ್ತ್ರೀ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ೭೮ರ ಹರೆಯದ ಭಟ್ಟರಿಗೆ ಈಗಲೂ ಯಕ್ಷಗಾನವೇ ಬದುಕು. ಚೆನ್ನೈನ ಹಿಂದೂಧರ್ಮ ಸಂಘವು ಮಣಿವಿಳಾ ಬಿರುದು ನೀಡಿ ಗೌರವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಡನೀರು ಮಠ, ಸ್ವರ್ಣ ಯಕ್ಷಗಾನ ಮಂಡಳಿ, ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಪುರಸ್ಕಾರ, ಕರಾವಳಿ ಯಕ್ಷಗಾನ ಮಂಡಳಿ, ಬಿ.ಬಿ.ಶೆಟ್ಟಿ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಕಲ್ಕೂರ ಪ್ರಶಸ್ತಿಗಳು, ಗೌರವಗಳು ಸಂದಿವೆ.
ತೆಂಕು ಬಡಗು ಎರಡೂ ತಿಟ್ಟುಗಳಲ್ಲಿ ವೇಷಗಳನ್ನು ಮಾಡಿ ಭಾವಾಭಿನಯ ಮತ್ತು ಮೋಹಕ ನೃತ್ಯ ಲಾಲಿತ್ಯಗಳಿಂದ ವೈವಿಧ್ಯಮಯ ವೇಷಗಳಲ್ಲಿ ಮೆರೆದ ನಾಡಿನ ಪ್ರತಿಭಾನ್ವಿತ ಯಕ್ಷಗಾನ ಕಲಾವಿದರು ಶ್ರೀ ಪಾತಾಳ ವೆಂಕಟರಮಣ ಭಟ್ಟರು.

Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸಣ್ಣಕ್ಕ ಬಂಗ್ಲೆಗುಡ್ಡೆ

ಅದ್ಭುತ ನೆನಪಿನ ಶಕ್ತಿಯ ಕಂಚಿನ ಕಂಠಸಿರಿಯ ಹಿರಿಯ ಜಾನಪದ ಪ್ರತಿಭೆ ಸಣ್ಣಕ್ಕ ಬಂಗ್ಲೆಗುಡ್ಡೆ.
ಪ್ರಕೃತಿ ಸಿರಿಯನ್ನು ನೋಡಿ, ಜಾನಪದ ಸಂಪತ್ತನ್ನು ಉಳಿಸಿ, ಬೆಳೆಸುತ್ತಲೇ ಬೆಳೆದ ಸಣ್ಣಕ್ಕ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಸಣ್ಣ ಗ್ರಾಮ ಕಸಬಾದವರು. ೮೫ ವರ್ಷ ವಯಸ್ಸಿನ ಸಣ್ಣಕ್ಕ ಜಾನಪದದ ಅಪ್ರತಿಮ ಪ್ರತಿಭೆ.
ಚಿಕ್ಕ ವಯಸ್ಸಿನಲ್ಲಿಯೇ ಮೌಖಿಕ ಸಾಹಿತ್ಯವನ್ನು ಆಸಕ್ತಿಯಿಂದ ಆಲಿಸುತ್ತಾ, ಅದನ್ನೇ ಅರಗಿಸಿಕೊಂಡು, ಸಂದರ್ಭ ಒದಗಿದಾಗಲೆಲ್ಲಾ ಹಾಡುತ್ತಾ ತಮ್ಮ ಒಂಟಿತನವನ್ನು ಮರೆತವರು ಅವರು. ಈಗವರು ಜಾನಪದ ಗೀತೆ, ಸಾಹಿತ್ಯ, ಕಥೆಗಳ ಬಹುದೊಡ್ಡ ಸಂಪತ್ತು.
ಈ ಜಾನಪದ ಸಿರಿಯಜ್ಜಿಯ ಪ್ರತಿಭೆಗಾಗಿ ಸುಳ್ಯ ತಾಲ್ಲೂಕಿನ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡ ಸಿರಿ’, ತುಳು ಸಾಹಿತ್ಯ ಅಕಾಡೆಮಿಯಿಂದ ೨೦೦೭ರಲ್ಲಿ ಗೌರವ ಪ್ರಶಸ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ‘ಗಡಿನಾಡ ಸಿರಿ’ ಗೌರವ ಸಂದಿವೆ.
ಸಣ್ಣಕ್ಕ ಈಗ ನಮ್ಮ ನಡುವೆ ಇರುವ ದೊಡ್ಡ ಜಾನಪದ ಆಸ್ತಿ. ಅವರಿಂದ ಮೊಗೆದಷ್ಟೂ ಹೊರಬರುವ ಜಾನಪದ ಸಾಹಿತ್ಯಕ್ಕೆ ಬರ ಇಲ್ಲ.

Categories
ಯಕ್ಷಗಾನ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ. ಗೋವಿಂದ ಭಟ್

ಯಕ್ಷಗಾನದ ತಾಳಮದ್ದಲೆಯ ಶ್ರೇಷ್ಠ ಅರ್ಥಧಾರಿಯಾಗಿ ಕಥಕ್ಕಳಿ, ಹರಿಕಥಾ ಪ್ರಕಾರದಲ್ಲಿ ಪರಿಣತಿ ಪಡೆದಿರುವ ಕಲಾವಿದರು ಕೆ.ಗೋವಿಂದ ಭಟ್ಟ ಅವರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಫಲಪುರ ಮನೆಯಲ್ಲಿ ೧೯೪೦ರಲ್ಲಿ ಜನನ, ಗೋವಿಂದ ಭಟ್ಟರಿಗೆ ಯಕ್ಷಗಾನ ಪ್ರಕಾರದ ಎಲ್ಲ ಮಟ್ಟುಗಳು ಕರಗತ.
ಕೇರಳದ ಶ್ರೀ ರಾಜನ್ ಅಯ್ಯರ್ ಅವರ ಬಳಿ ಕಥಕ್ಕಳಿ, ಶೇಣಿ ಗೋಪಾಲಕೃಷ್ಣ ಭಟ್ಟರಿಂದ ಹರಿಕಥೆ, ಮಲ್ಪೆ ರಾಮದಾಸ ಸಾಮಗ ಅವರಿಂದ ಯಕ್ಷಗಾನ ಅರ್ಥಗಾರಿಕೆಯ ಪಾಠ, ಸುಮಾರು ೫೮ ವರ್ಷಗಳಿಂದ ಧರ್ಮಸ್ಥಳ ಮೇಳ, ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ, ಮೊದಲಾದ ಕಡೆ ಯಕ್ಷಗಾನ ವೃತ್ತಿ ತಿರುಗಾಟದಲ್ಲಿ ಭಟ್ಟರ ಹೆಸರು ಚಿರಪರಿಚಿತ. ದುಬೈ, ಅಬುದಾಬಿ, ಬೆಹರೇನ್, ಇಂಗ್ಲೆಂಡ್, ಜಪಾನ್ ದೇಶಗಳಲ್ಲಿಯೂ ಶ್ರೀಯುತರಿಂದ ಯಕ್ಷಗಾನದ ಸಿರಿವಂತಿಕೆಯ ಯಶಸ್ವಿ ಪ್ರದರ್ಶನ.
ರಂಗದ ಮೇಲೆ ಅವರು ಅಭಿನಯಿಸಿರುವ ಯಕ್ಷ ವೇಷಧಾರಿ ಪಾತ್ರಗಳು ಅಸಂಖ್ಯ. ಅರ್ಧ ನಾರೀಶ್ವರ, ರಂಗಾ-ರಂಗ, ಅರ್ಜುನ, ದೇವೇಂದ್ರ, ಶತ್ರುಘ್ನ, ಅಂಬೆ, ಚಂದ್ರಮತಿ, ದಮಯಂತಿ, ಶೂರ್ಪನಖಿ, ಹಿಡಿಂಬೆ ಇವೆ ಮೊದಲಾದ ಪಾತ್ರಗಳು ಭಟ್ಟರ ಅಭಿನಯದ ಮೂಲಕ ರಂಗದ ಮೇಲೆ ಜೀವ ಪಡೆದಿವೆ.
ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಕಲಾವಿದರಾಗಿ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ಅತ್ಯುತ್ತಮ ಹರಿದಾಸರಾಗಿ ಅವರು ಸಲ್ಲಿಸಿರುವ ಸೇವೆ ಅನುಪಮ.
ಮಣಿ ಮೇಖಲ, ರತ್ನ ಕಂಕಣ, ರಾಣಿ ಚಿತ್ರಾಂಗದಾ, ಕನಕರೇಖೆ, ಭಗವಾನ್ ಮಹಾವೀರ, ಸುರತ್ಕಲ್ ಕ್ಷೇತ್ರ ಮಹಾತ್ಮ ವೀರಘಟೋತ್ಕಜ, ರಾಜಶೇಖರ ವಿಳಾಸ ಇವರು ರಚಿಸಿರುವ ಯಕ್ಷಗಾನ ಪ್ರಸಂಗಗಳಲ್ಲಿ ಕೆಲವು.

Categories
ಯಕ್ಷಗಾನ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

ಯಕ್ಷಗಾನ ಅರ್ಥಧಾರಿಕೆಯಲ್ಲಿ ಅಪಾರ ನೈಪುಣ್ಯತೆ ಪಡೆದಿರುವ ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿಗಳು ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಸಾಹಿತಿ, ಪುರಾಣ ಪ್ರವಚನಕಾರ ಹಾಗೂ ಕೃಷಿಕರಾಗಿಯೂ ಸಾಧನೆಗೈದಿದ್ದಾರೆ.
ಯಕ್ಷಗಾನ ಅರ್ಥ ವಿವರಿಸುವಲ್ಲಿ ಕಳೆದ ಮೂರೂವರೆ ದಶಕಗಳಿಂದ ನಿರತರಾಗಿರುವ ಇವರು ಹಲವಾರು ಅರ್ಥಪೂರ್ಣ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಏಕಾಂಕ ನಾಟಕಗಳು, ಮಹಾಭಾರತ ಕೋಶ, ವಾಲ್ಮೀಕಿ ರಾಮಾಯಣ ಉದ್ದಂಥ, ಮೊದಲಾದ ಕೃತಿಗಳನ್ನು ಕೊಟ್ಟಿರುವ ಶಾಸ್ತ್ರಿಗಳು ಯಕ್ಷಗಾನ ಭಾಗವತಿಕೆಯಲ್ಲಿಯೂ ಕೆಲವು ಕಾಲ ಸೇವೆ ಸಲ್ಲಿಸಿದವರು.
ಅರ್ಥಗಾರಿಕೆಯಲ್ಲಿ ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

Categories
ಯಕ್ಷಗಾನ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮಾರ್ಗೋಳಿ ಗೋವಿಂದ ಶೇರೇಗಾರ

ಯಕ್ಷಗಾನದಲ್ಲಿ ಮಹಿಳಾ ಪಾತ್ರಗಳಿಗೆ ಮಹತ್ವ ದೊರಕಿಸಿಕೊಟ್ಟ ಮೊದಲ ದೇವಿ ಪಾತ್ರಧಾರಿಗಳಾದ ಮಾರ್ಗೋಳಿ ಗೋವಿಂದ ಸೇರೆಗಾರ್ ಅವರು ನಿರಂತರವಾಗಿ ಐದು ದಶಕಗಳ ಕಾಲ ತೆಂಕುತಿಟ್ಟು ಯಕ್ಷಗಾನದಲ್ಲಿ ಜನಪ್ರಿಯ ಕಲಾವಿದರಾಗಿದ್ದವರು.
ಬಡಗು ತಿಟ್ಟಿನಲ್ಲಿಯೂ ಹೆಸರು ಮಾಡಿದ ಅವರು ನಿರಂತರವಾಗಿ ಪ್ರಸಿದ್ಧ ಯಕ್ಷಗಾನ ಮೇಳಗಳು ಹಾಗೂ ನುರಿತ ಕಲಾವಿದರೊಂದಿಗೆ ವೇಷ ಕಟ್ಟಿದ ಗೋವಿಂದ ಶೇರೆಗಾರ್ ಪ್ರತಿಭಾವಂತ ಯಕ್ಷಗಾನ ಕಲಾವಿದರಲ್ಲೊಬ್ಬರು.

Categories
ಬಯಲಾಟ ಯಕ್ಷಗಾನ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಬಸಪ್ಪ ದುಡಲಪ್ಪ ಸಲಲ

ಬಸಪ್ಪ ದುಡಲಪ್ಪ ಸಲಲ ಅವರು ಹೆಸರಾಂತ ದೊಡ್ಡಾಟದ ಕಲಾವಿದರು. ನೇಕಾರಿಕೆ ವೃತ್ತಿಯ ಕುಟುಂಬದ ಹಿನ್ನೆಲೆಯಿಂದ ಬಂದ ಬಸಪ್ಪ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡಾಟದ ತಂಡಗಳಲ್ಲಿ ಸೇರಿಕೊಂಡು ತಿರುಗಾಟ ನಡೆಸುತ್ತಿದ್ದರು. ಪುರುಷ ಹಾಗೂ ಸ್ತ್ರೀ ಪಾತ್ರಗಳೆರಡರಲ್ಲೂ ನಿಪುಣರಾದ ಇವರು ದೊಡ್ಡಾಟದ ಹಿನ್ನೆಲೆ ಗಾಯಕರೂ ಹೌದು. ಅಂಗವಿಕಲತೆಯ ನಡುವೆಯೂ ಗೋಪಾಲಕೃಷ್ಣ, ರುಕ್ಕಿಣಿ, ರಾಮ, ಭೈಕುಂಡ ಮುನಿ ಮೊದಲಾದ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುವ ಬಸಪ್ಪ ಎಂಭತ್ತರ ಹರೆಯದಲ್ಲೂ ದೊಡ್ಡಾಟದ ಸಂಗವನ್ನು ಬಿಟ್ಟಿಲ್ಲ.

Categories
ಬಯಲಾಟ ಯಕ್ಷಗಾನ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಭೀಮವ್ವ ಶಿಳ್ಳೇಕ್ಯಾತ

ಭೀಮವ್ವ ಶಿಳ್ಳೇಕ್ಯಾತ ಅವರು ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದವರಾಗಿದ್ದು ತೊಗಲುಗೊಂಬೆ ಕಲಾವಿದರಾಗಿ ನಿರಂತರವಾಗಿ ೭೫ ವರ್ಷಗಳಿಂದ ಸೇವೆ

ಸಲ್ಲಿಸುತ್ತಿದ್ದಾರೆ. ಪರದೆಯ ಹಿಂದೆ ಮಹಿಳಾ ಪಾತ್ರಗಳಿಗೆ ಧ್ವನಿ ತುಂಬುವ ಅಪರೂಪದ ಕಲಾವಿದೆಯಾದ ಶ್ರೀಮತಿ ಭೀಮವ್ವ ದೊಡ್ಡಬಾಳಪ್ಪ ಅವರು ದೇಶ ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಇಳಿ ವಯಸ್ಸಿನಲ್ಲಿಯೂ ತೊಗಲುಗೊಂಬೆಯಾಟವನ್ನು ಮನಮುಟ್ಟುವಂತೆ ಪ್ರದರ್ಶಿಸುವ ಭೀಮವ್ವ ಅಮೇರಿಕ, ಇರಾನ್, ಸ್ವಿಡರ್‌ಲ್ಯಾಂಡ್ ಮೊದಲಾದ ಭಾರತದ ಪುರಾತನ ಕಲೆಯಾದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುವ ತಂಡಗಳಲ್ಲಿ ಪ್ರಮುಖ ಸದಸ್ಯೆಯಾಗಿದ್ದ ಭೀಮವ್ವ ತನ್ನ ಮಾತಿನ ಚಾಕಚಕ್ಯತೆಯಿಂದ ಹಾಗೂ ಸಮಯೋಚಿತ ಸಂಭಾಷಣೆಯಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.

Categories
ಬಯಲಾಟ ಯಕ್ಷಗಾನ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಸಂಪಾಜೆ ಸೀನಪ್ಪ ರೈ

ಸಂಪಾಜೆ ಸೀನಪ್ಪ ರೈ ಅವರು ತಮ್ಮ ಹದಿಮೂರನೇ ವಯಸ್ಸಿನಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿ ತೆಂಕು ತಿಟ್ಟಿನ ಪ್ರಮುಖ ಯಕ್ಷಗಾನ ಕಲಾವಿದರಾಗಿ ಕಳೆದ ಐದು ದಶಕಗಳಿಂದ ಜನಪ್ರಿಯರಾಗಿದ್ದಾರೆ.

ಮೊದಲಿಗೆ ತಂದೆಯವರಿಂದ ಮೊದಲ ಪಾಠಗಳನ್ನು ಕಲಿತು ಅರ್ಥಗಾರಿಕೆ, ನಾಟ್ಯಾಭ್ಯಾಸ, ಭರತನಾಟ್ಯ ಹಾಗೂ ಬಣ್ಣಗಾರಿಕೆಯನ್ನು ಅಭ್ಯಾಸ ಮಾಡಿ ಯಕ್ಷಗಾನದ ಹಲವು ಮೇಳಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಪಡೆದ ಕಲಾವಿದರೆನಿಸಿಕೊಂಡಿದ್ದಾರೆ. ಕ್ರಿಯಾಶೀಲ ಅಭಿನಯದ ಪ್ರಮುಖ ಕಲಾವಿದರಾಗಿ ಮೂಲಕ ವಿಶೇಷವಾಗಿ ರಾಕ್ಷಸ ಪಾತ್ರಗಳಲ್ಲಿ ಗಂಡುಗತ್ತಿನ ಪಾತ್ರಗಳಲ್ಲಿ ಜೋಡಾಟ- ಕೂಡಾಟಗಳಲ್ಲಿ ಜೀವ ತುಂಬಿ ಅಭಿನಯಿಸಿ ಜನಮನ್ನಣೆಗಳಿಸಿದ್ದಾರೆ.

Categories
ಬಯಲಾಟ ಯಕ್ಷಗಾನ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ವಣಸೆ ನಾರಾಯಣ ಗಾಣಿಗ

ತೆಂಕು ಹಾಗು ಬಡಗಿನ ಯಕ್ಷಗಾನದ ಮುಮ್ಮೇಳ ಕಲಾವಿದರಾಗಿ ಹೆಸರಾಗಿರುವ ನಾರಾಯಣ ಗಾಣಿಗರು ಸಮರ್ಥ ಸ್ತ್ರೀ ವೇಷಧಾರಿಯಾಗಿ ಪ್ರಸಿದ್ಧರಾದವರು. ಸುಮಾರು ಮೂವತ್ತು ವರ್ಷಗಳ ಕಾಲ ಹತ್ತಕ್ಕೂ ಹೆಚ್ಚು ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿದ್ದ ಗಾಣಿಗ ಅವರು ಹಲವಾರು ಪೌರಾಣಿಕ ಪಾತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಶಿವರಾಮ ಕಾರಂತರ ಯಕ್ಷರಂಗದ ಕಲಾವಿದರಾಗಿ ಸೇವೆ ಸಲ್ಲಿಸಿರುವ ವಣಸೆ ನಾರಾಯಣ ಗಾಣಿಗರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಯ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ.

Categories
ಯಕ್ಷಗಾನ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ. ಶೀನಪ್ಪ ಭಂಡಾರಿ

ಸ್ತ್ರೀ ಪಾತ್ರಗಳು, ರೌದ್ರಪಾತ್ರಗಳಿಂದ ಯಕ್ಷಗಾನ ರಂಗದಲ್ಲಿ ಮಹತ್ತರ ಸಾಧನೆ ಮಾಡಿದ ಯಕ್ಷಗಾನ ಕಲಾವಿದರು ಶ್ರೀ ಚಿ. ಶೀನಪ್ಪ ಭಂಡಾಲ ಅವರು.
೧೯೨೬ರಲ್ಲಿ ಕಾಸರಗೋಡಿನ ಪೆರಡಾದ ನೆಲ್ಲಕುಂಜದಲ್ಲಿ ಜನನ. ಆರನೆಯ ತರಗತಿ ತನಕ ವಿದ್ಯಾಭ್ಯಾಸ. ಹಿಲಯ ಭಾಗವತ ಶ್ರೀ ಜತ್ತಪ್ಪ ರೈಗಳು ಸೋದರಮಾವ. ಅವಲಂದ ಪ್ರೇರಣೆ ಪಡೆದ ಶ್ರೀ 9. ಶೀನಪ್ಪ ಭಂಡಾಲ ತೆಂಕು ತಿಟ್ಟಿನ ನರ್ತಕರಾದ ದಿವಂಗತ ಕಾವು ಕಣ್ಣನವರು ಕುಣಿತದ ಗುರು. ಕದ್ರಿ ಮೇಳದಿಂದ ಯಕ್ಷಗಾನ ರಂಗಕ್ಕೆ ಪದಾರ್ಪಣ, ನಂತರ ಮುಟ್ಟಿ ಮೇಳದಲ್ಲಿ, ನಂತರ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಹತ್ತೊಂಬತ್ತು ವರ್ಷಗಳು ಸೇವೆ ಸಲ್ಲಿಕೆ. ಸ್ವಂತವಾಗಿ ಬಳ್ಳಂಬೆಟ್ಟು ಮತ್ತು ಆವಿಸುಬ್ರಹ್ಮಣ್ಯ ಮೇಳಗಳ ರಚನೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ ಮುಂತಾದ ಸ್ಥಳಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿಕೆ, ಬನ್ನೂರು ಎಂಬಲ್ಲ ‘ಯಕ್ಷಗಾನ ಕುಟೀರ’ ಸ್ಥಾಪನೆ. ಹಲವಾರು ಶಿಷ್ಯಂಱಲಗೆ ಯಕ್ಷಗಾನ ಶಿಕ್ಷಣ ನೀಡಿಕೆ.
ಭಸ್ಮಾಸುರ, ರಕ್ತಬೀಜ, ಶಿವ, ಅರ್ಜುನ, ಜಲಂಧರ, ತಾಮ್ರಧ್ವಜ, ಕೌರವ, ದೇವೇಂದ್ರ, ಇಂದ್ರಜಿತು ಮೊದಲಾದ ವೇಷಗಳನ್ನು ಅತ್ಯಂತ ಸುಲಭವಾಗಿ ನಿರ್ವಹಿಸುವ ಕೀರ್ತಿಗೆ ಪಾತ್ರರು. ತಾಳಮದ್ದಳೆ ಅರ್ಥಧಾಲಯಾಗಿಯೂ ಅನುಭವ, ತುಳು ಪ್ರಸಂಗಗಳಲ್ಲಿಯೂ ಪಾತ್ರ ವಹಿಸಿ ಪ್ರಸಿದ್ಧಿ ಪಡೆದವರು. ಸೀತಾಕಲ್ಯಾಣ, ಕೌಸಲ್ಯಾ ಪರಿಣಯ ಮುಂತಾದ ರಂಗದಿಂದ ಮರೆಯಾದ ಪ್ರಸಂಗಗಳನ್ನು ಪುನಃ ರಂಗಕ್ಕೆ ತಂದ ಯಶಸ್ವಿಗೆ ಪಾತ್ರರು.
ತೆಂಕುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಅರ್ಧಶತಮಾನ ಮೇಳಗಳ ಸಂಘಟಕರಾಗಿ, ಅಸಾಧಾರಣ ಪ್ರತಿಭೆಯ ಪ್ರಯೋಗಶೀಲ ಕಲಾವಿದರಾಗಿ ಯಕ್ಷಗಾನ ಕಲಾರಂಗವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯ ಕಲಾವಿದರು ಶ್ರೀ ಶೀನಪ್ಪ ಭಂಡಾಲ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಡಾ. ಪ್ರಭಾಕರ ಜೋಷಿ

ಯಕ್ಷಗಾನ ಕ್ಷೇತ್ರದಲ್ಲಿ ಬಹುಮುಖ್ಯ ಸಾಧನೆಗೈದಿರುವ ಡಾ. ಪ್ರಭಾಕರ ಜೋಷಿ ಅವರು ಕರ್ನಾಟಕದ ಬಹುಶ್ರುತ ಏದ್ವಾಂಸರು. ಕಲಾವಿದ, ಸಂಶೋಧಕ, ಯಕ್ಷಗಾನ ಕೋಶದ ನಿರ್ಮಾಪಕ, ವಿಮರ್ಶಕ, ಸಂಪನ್ಮೂಲ ವ್ಯಕ್ತಿಯಾಗಿ ಅವರದ್ದು ಅಚ್ಚಳಿಯದ ಛಾಪು. ೧೯೪೬ರಲ್ಲಿ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ ಜನಿಸಿದ ಪ್ರಭಾಕರಜೋಷಿ ಅವರದ್ದು ಸಾಹಿತ್ಯಿಕ-ಕಲಾಕುಟುಂಬ. ವಿದ್ಯಾರ್ಥಿ ದೆಸೆಯಿಂದಲೂ ಸಾಹಿತ್ಯ-ಸಂಸ್ಕೃತಿ ಪ್ರೀತಿ. ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ, ಹಿಂದಿಸಾಹಿತ್ಯ ರತ್ನ ಮತ್ತು ಯಕ್ಷಗಾನದಲ್ಲಿ ಪಿ.ಎಚ್.ಡಿ., ಮೂರು ದಶಕಗಳ ಕಾಲ ವಾಣಿಜ್ಯ ಪ್ರಾಧ್ಯಾಪಕರಾಗಿ ಸೇವೆ. ಪ್ರಾಂಶುಪಾಲರಾಗಿಯೂ ಅನುಭವ. ಕನ್ನಡ, ಸಂಸ್ಕೃತ, ಮರಾಠಿ, ತುಳು, ಕೊಂಕಣಿ ಸೇರಿದಂತೆ ಬಹುಭಾಷಾ ಜ್ಞಾನಿ. ಬಹುಮುಖ್ಯವಾಗಿ ಯಕ್ಷಗಾನ ತಾಳಮದ್ದಳೆ ರಂಗದ ಸಮರ್ಥ ಅರ್ಥಧಾರಿ, ಭಾಷೆ-ಭಾವ–ವಿಚಾರಯುಕ್ತ ಅರ್ಥಗಾರಿಕೆಗೆ ಹೆಸರುವಾಸಿ. ಕಲಾವಿದನಾಗಿ ಹೆಗ್ಗುರುತು. ಹತ್ತಕ್ಕೂ ಹೆಚ್ಚು ಕೃತಿಗಳ ಲೇಖಕ, ಯಕ್ಷಗಾನ ಪ್ರಸಂಗಗಳ ವಿಮರ್ಶೆಯಲ್ಲಿ ಪ್ರಖರ ಹಿಡಿತ. ಸಂಶೋಧಕ, ಸಂಘಟಕ, ಸಂಪನ್ಮೂಲ ವ್ಯಕ್ತಿಯಾಗಿಯೂ ನಿರಂತರ ಸೇವೆ. ಯಕ್ಷಗಾನ ಪಾರಿಭಾಷಿಕ ಕೋಶದ ನಿರ್ಮಾತೃ, ಉತ್ತಮ ಉಪನ್ಯಾಸಕಾರ, ಸಮನ್ವಯಕಾರರೂ ಕೂಡ. ನಾಲ್ಕು ದಶಕಗಳಿಂದಲೂ ಯಕ್ಷರಂಗದಲ್ಲಿ ತನ್ಮಯರಾಗಿರುವ ಡಾ. ಪ್ರಭಾಕರ ಜೋಷಿ ತಮಗೆ ದಕ್ಕಿದ ಹತ್ತಾರು ಪ್ರಶಸ್ತಿಗಳಿಗೂ ಮೀರಿದ ಮೇರು ಪ್ರತಿಭೆ.

Categories
ಯಕ್ಷಗಾನ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬೆಳ್ಳಿ ಕಿರೀಟದ ವೆಂಕಟಪ್ಪದಾಸ್

ಶ್ರೀ ವೆಂಕಟಪ್ಪದಾಸ್ ಆಂಜನೇಯ ಪಾತ್ರಕ್ಕೊಂದು ಪರ್ಯಾಯ ಹೆಸರು.

೧೯೧೦ರಲ್ಲಿ ಜನಿಸಿದ ಶ್ರೀಯುತರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಸಣೇನಹಳ್ಳಿಯ ಕಲಾವಿದರ

ಕುಟುಂಬದಿಂದ ಬಂದವರು.

ಸಾವಿರಾರು ಸಲ ಆಂಜನೇಯನ ಪಾತ್ರವನ್ನು ಅಭಿನಯಿಸಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಂದ ಬೆಳ್ಳಿ ಕಿರೀಟವನ್ನು ತೊಡಿಸಿಕೊಂಡು ಬೆಳ್ಳಿ ಕಿರೀಟದ ವೆಂಕಟಪ್ಪ ಎಂದೇ ಖ್ಯಾತಿವೆತ್ತವರು.

ನಾಟಕದ ಗೀಳಿನೊಂದಿಗೆ ಹರಿಕಥೆ, ಮರಗೆಲಸ, ಆಯುರ್ವೇದ, ಜ್ಯೋತಿಷ್ಯ, ಶಿಲ್ಪಶಾಸ್ತ್ರಹಾಗೂ ಸಮಾಜ ಸೇವೆಯಲ್ಲಿಯೂ ಶ್ರೀಯುತರಿಗೆ ಆಸಕ್ತಿ ೯೨ರ ಇಳಿವಯಸ್ಸಿನಲ್ಲಿಯೂ ಕಿಂಚಿತ್ತೂ ಕುಂದದ ಕಲಾಸಕ್ತಿ, ಇವರು ಯಕ್ಷಗಾನ ಬಯಲಾಟ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಖಾಸಗಿ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ನಾಟಕ ಚತುರ’, ‘ಯಕ್ಷಗಾನ ಪಿತಾಮಹ’, ‘ಯಕ್ಷಗಾನ ವಿಶಾರದ ಮುಂತಾದ ಬಿರುದುಗಳು ಅವರ ಕಿರೀಟಕ್ಕೆ ಸೇರಿದ ಗರಿಗಳು,

ಆಂಜನೇಯನ ಪಾತ್ರಕ್ಕೆ ಜೀವ ತುಂಬಿದ ಯಕ್ಷಗಾನ ಬಯಲಾಟದ ೯೨ರ ಹರೆಯದ ಕಲಾವಿದ ಬೆಳ್ಳಿ ಕಿರೀಟದ ಶ್ರೀ ವೆಂಕಟಪ್ಪದಾಸ್ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಭಾಗವತ ನೀಲಾವರ ಲಕ್ಷ್ಮೀನಾರಾಯಣರಾವ್

ಯಕ್ಷಗಾನ ಕಲೆಯ ಸಿರಿ ನೆಲದಲ್ಲಿ ಅರಳಿ ಬಂದ ಹಿರಿಯ ಚೇತನ ಶ್ರೀ ಭಾಗವತ ನೀಲಾವರ ಲಕ್ಷ್ಮೀನಾರಾಯಣರಾವ್

ಅವರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಏಳು ದಶಕಗಳಿಗೂ ಹೆಚ್ಚು ಹಾದು ಬಂದ ದೀರ್ಘ ಬಾಳಪಯಣದಲ್ಲಿ ಯಕ್ಷಗಾನ ಕಲೆಯ ಜೊತೆಗೆ ಹಚ್ಚಿಕೊಂಡ ಗಮಕ, ಕರ್ನಾಟಕ ಸಂಗೀತ, ದಾಸರಪದಗಳ ಗಾಯನ ಶ್ರೀಯುತರಿಗೆ ಅಪಾರ ಯಶಸ್ಸು ತಂದು ಕೊಟ್ಟವು. ವೃತ್ತಿಯಲ್ಲಿ ಶಿಕ್ಷಕರಾದರೂ ಪ್ರವೃತ್ತಿಯಲ್ಲಿ ಒಬ್ಬ ಪರಿಶುದ್ಧ ಕಲಾವಿದ.

ಚಿಕ್ಕಂದಿನಿಂದಲೆ ಗಮಕ, ಸಂಗೀತ, ಭಜನೆ ಹಾಗೂ ಯಕ್ಷಗಾನಗಳಲ್ಲಿ ಅಭಿರುಚಿ ಬೆಳೆಸಿಕೊಂಡ ಇವರು ಆ ದಿಕ್ಕಿನಲ್ಲಿ ಅವಿರತ ಅಧ್ಯಯನ ನಡೆಸಿದರು. ಹೆಸರಾಂತ ಗಮಕಿ ಬಚಂದ್ರಯ್ಯನವರ ಮಾರ್ಗದರ್ಶನದಲ್ಲಿ ಗಮಕ ಪ್ರವೇಶ. ಪ್ರೌಢ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಗಮಕ ತರಬೇತಿ ಶಿಕ್ಷಣ ನೀಡಿದರು. ಕಳೆದ ಮೂರು ವರ್ಷಗಳಿಂದ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ದೀಕ್ಷೆ ತೊಟ್ಟಿದ್ದಾರೆ. ಅವುಗಳಲ್ಲದೆ ಕರ್ನಾಟಕ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಕೊಕ್ಕರ್ಣಿ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಸಂಗೀತ ಅಧ್ಯಾಪಕರಾಗಿ ದುಡಿದ ಅನುಭವ ಇವರದು. ಮಂಗಳೂರು ಆಕಾಶವಾಣಿ ಹವ್ಯಾಸಿ ಕಲಾವಿದರಾಗಿ, ದೂರದರ್ಶನ ಕೇಂದ್ರದಲ್ಲಿ ಯಕ್ಷಗಾನ ಕಲಾವಿದರಾಗಿ, ಸೇವೆ ಸಲ್ಲಿಸಿದ್ದಾರೆ.

೧೯೯೭ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ಗಮಕ ಸಮ್ಮೇಳನದಲ್ಲಿ ೧೯೯೯ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗಮಕ ಸಮ್ಮೇಳನದಲ್ಲಿ – ಹಾಗೂ ಸುರತ್ಕಲ್‌ನಲ್ಲಿ ನಡೆದ ಗಮಕ ಸಮ್ಮೇಳನದಲ್ಲಿ – ಸನ್ಮಾನಗಳು ಶ್ರೀಯುತರ ಕಲಾಸೇವೆಯನ್ನು ಅರಸಿ ಬಂದ ಪುರಸ್ಕಾರಗಳು.

Categories
ಯಕ್ಷಗಾನ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅರುವ ಕೊರಗಪ್ಪ ಶೆಟ್ಟಿ

ಕಳೆದ ನಾಲೈದು ದಶಕಗಳಿಂದ ಯಕ್ಷಗಾನ ರಂಗದಲ್ಲಿ ತನ್ನದೇ ಆದ ನಟನಾ ಚಾತುರ್ಯದಿಂದ, ಅದ್ಭುತ ಪ್ರತಿಭೆಯಿಂದ ಯಕ್ಷಗಾನ ರಂಗಸ್ಥಳದ ರಾಜ ಅಂತ ಕರೆಸಿಕೊಂಡು ಅರಳಿದ ಅದ್ವಿತೀಯ ಕಲಾವಿದ ಶ್ರೀ ಅರುವ ಕೊರಗಪ್ಪ ಶೆಟ್ಟಿ, ಕರಾವಳಿಯ ಕಲೆ ಯಕ್ಷಗಾನವು ಇಂದು ಸಾಗರದಾಚೆಗೂ ವಿಸ್ತರಿಸಿರುವಂತೆ ಆ ಕಲೆಯಲ್ಲಿ ದೇಶದ ಉದ್ದಗಲಕ್ಕೂ ಹೆಸರು ಮಾಡಿದ ಅಪೂರ್ವ ವ್ಯಕ್ತಿಗಳಲ್ಲಿ ಕೊರಗಪ್ಪ ಶೆಟ್ಟಿ ಒಬ್ಬರು.

ಅಳದಂಗಡಿಯ ಸುಬ್ಬಯ್ಯ ಶೆಟ್ಟಿ ಕಾಂತಕ್ಕ ದಂಪತಿಗಳ ಹಿರಿಯ ಮಗನಾಗಿ ೧೯೪೦ರಲ್ಲಿ ಜನಿಸಿದ ಇವರು ಚಿಕ್ಕಂದಿನಿಂದಲೇ ನಾಟಕ ಮತ್ತು ಯಕ್ಷಗಾನದಲ್ಲಿ ಪಳಗಿದವರು. ಪ್ರೌಢಶಾಲಾ ಹಂತಕ್ಕೆ ವಿದ್ಯಾಭ್ಯಾಸವೂ ನಿಂತು ಜೀವನೋಪಾಯದ ಪ್ರಶ್ನೆ ಎದುರಾದಾಗ ತಮ್ಮ ಆಸಕ್ತಿಯ ಕ್ಷೇತ್ರ ಯಕ್ಷಗಾನದಲ್ಲಿ ತೊಡಗಿಕೊಂಡವರು.

ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಕಟೀಲು ಯಕ್ಷಗಾನ ಮೇಳದ ಮೂಲಕ ಈ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟ ಶ್ರೀಯುತರು ಮುಂದೆ ಕರ್ನಾಟಕ ಮೇಳದಲ್ಲಿ ಮುಖ್ಯ ವೇಷಧಾರಿಯಾಗಿ ಪ್ರಖ್ಯಾತ ಕಲಾವಿದರಾದ ಬೋಳಾರ ನಾರಾಯಣ ಶೆಟ್ಟಿ, ಅಳಿಕೆ ರಾಮಯ್ಯ ರೈ, ಕೊಟ್ಟೂರು ರಾಮಚಂದ್ರರಾವ್, ರಾಮದಾಸ್ ಸಾಮಗ, ಮಿಜಾರು ಅಣ್ಣಪ್ಪ ಮುಂತಾದವರ ಒಡನಾಟದಲ್ಲಿ ತಮ್ಮ ಪ್ರತಿಭೆಯನ್ನು ನಿಕಷಕ್ಕೊಡ್ಡಿಕೊಂಡವರು

ಇವರ ಕಲಾನೈಪುಣ್ಯವನ್ನು ಮೆಚ್ಚಿ ಅಖಿಲಭಾರತ ತುಳು ಒಕ್ಕೂಟ ಮುಂಬೈ ಕರ್ನಾಟಕ ಸಂಘ, ಯು ಎ ಇ ತುಳುಕೂಟ ಮುಂತಾದ ಸಂಘಸಂಸ್ಥೆಗಳು ಸನ್ಮಾನಿಸಿವೆ.

ಅರವತ್ತರ ಇಳಿವಯಸ್ಸಿನಲ್ಲೂ ಗೆಜ್ಜೆ ಕಟ್ಟಿದರೆ ಸಾಕು ಆಲಿಸುವ ಮನಸ್ಸುಗಳಿಗೆ ಆನಂದವುಂಟುಮಾಡಿ ಕಲಾಲೋಕಕ್ಕೆ ಕರೆದೊಯ್ಯುವ ಅಪೂರ್ವ ಸಾಧಕರು ಅರುವ ಕೊರಗಪ್ಪ ಶೆಟ್ಟರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಾಬುರಾವ್ ಕೋಬಾಳ

ಜಾನಪದ ಸಂಗೀತವನ್ನು ಮನೆಮನೆಗೆ ಬಿತ್ತರಿಸುವ ಸಾರ್ಥಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗ್ರಾಮೀಣ ಪ್ರತಿಭೆ ಶ್ರೀ ಬಾಬುರಾವ್ ಕೊಬಾಳ ಅವರು.
ಅತ್ಯಂತ ಹಿಂದುಳಿದ ಜನಾಂಗದಲ್ಲಿ ೨೬.೮.೧೯೬೮ರಂದು ಜನಿಸಿದ ಶ್ರೀ ಬಾಬುರಾವ್ ಅವರು ಗುಲ್ಬರ್ಗಾ ಜಿಲ್ಲೆಯವರು. ಎಸ್.ಎಸ್.ಎಲ್.ಸಿ.ಯವರೆಗೆ ವಿದ್ಯಾಭ್ಯಾಸ ಮಾಡಿರುವ ಶ್ರೀಯುತರು ಕನ್ನಡದ ಜೊತೆಗೆ ಹಿಂದಿ ಭಾಷೆಯ ಜ್ಞಾನವನ್ನೂ ಸಂಪಾದಿಸಿದ್ದಾರೆ.
ಶ್ರೀ ಕೋಬಾಳ ಅವರು ಬಾಲ್ಯದಿಂದಲೇ ಜಾನಪದ ಹಾಡುಗಳನ್ನು ಹಾಡುವ ಅಭ್ಯಾಸ ಮಾಡಿಕೊಂಡಿರುವುದೇ ಅಲ್ಲದೇ ಹಾರ್ಮೋನಿಯಂ ವಾದನದಲ್ಲೂ ಪರಿಣತಿ ಪಡೆದು ಸಾಥಿ ನೀಡಿದ್ದಾರೆ. ಗುಲ್ಬರ್ಗಾ ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಬಹುತೇಕ ಎಲ್ಲ ರೀತಿಯ ಜಾನಪದ ಹಾಡುಗಳನ್ನು ಅದರ ಮೂಲ ಶೈಲಿಯಲ್ಲಿಯೇ ಹಾಡುವ ಶ್ರೀ ಬಾಬುರಾವ್ ಅವರು ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ, ಗ್ರಾಮದಲ್ಲಿ ತಮ್ಮ ಹಾಡುಗಾರಿಕೆಯ ಕಾಠ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.
ಪತಿಭಕ್ತಿ, ಬಂಜೆತೊಟ್ಟಿಲು, ವಂಶದೀಪ, ಮನ ಒಂದು ಮನೆ ಎರಡು ಹಾಗೂ ಕುಟುಂಬ ಕಲ್ಯಾಣ ಪ್ರಚಾರಾರ್ಥ ನಾಟಕ ಯಾರು ಹೊಣೆ, ಗೌಡರ ಗದ್ದಲ ನಾಟಕಗಳಿಗೆ ವಾದ್ಯ ಸಂಗೀತ ನೀಡಿದ್ದಾರೆ.
ಜಿಲ್ಲೆಯ ಜಾನಪದ ಸಂಸ್ಕೃತಿಯ ವಾಹಕ ಎಂದೇ ಜನ ಇವರನ್ನು ಗುರುತಿಸುತ್ತಾರೆ. ಯಾವ ಫಲಾಪೇಕ್ಷೆ ಇಲ್ಲದೇ ಊರೂರು ತಿರುಗುವ ಇವರನ್ನು ಜನ ಪ್ರೀತಿಯಿಂದ ಬರಮಾಡಿಕೊಂಡು ಕೈಲಾದ ಪ್ರೋತ್ಸಾಹ ನೀಡುತ್ತಿದ್ದಾರೆ.
ಗುಲ್ಬರ್ಗಾದ ಸರ್ವಜ್ಞ ಸಂಗೀತ ಕಲಾವೃಂದದ ಸಂಸ್ಥಾಪಕ ಪ್ರಧಾನ ಕಾವ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು ಜಾನಪದ ಕಲಾವಿದರ ಜಿಲ್ಲಾ ಮಟ್ಟದ ಸಮಾವೇಶವನ್ನು ನಡೆಸಿದ್ದಾರೆ. ಹೀಗೆ ಗ್ರಾಮೀಣ ಪ್ರತಿಭೆಯ ಹಳ್ಳಿಯ ಹಣತೆಯಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಶ್ರೀ ಬಾಬುರಾವ್ ಕೋಬಾಳ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಐರೋಡಿ ಗೋವಿಂದಪ್ಪ

ಬಡಗುತಿಟ್ಟಿನ ಯಕ್ಷಗಾನ ಕಲೆಯ ಭವ್ಯ ಪರಂಪರೆಯನ್ನು ಕಳೆದ ನವಲತ್ತು ವರ್ಷಗಳಿಂದ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಅನೇಕ ಮಂದಿಯಲ್ಲಿ ಶ್ರೀ ಐರೋಡಿ ಗೋವಿಂದಪ್ಪ ಅವರು ಪ್ರಮುಖರು.
ಉಡುಪಿ ತಾಲ್ಲೂಕಿನ ಐರೋಡಿಯಲ್ಲಿ ಜನಿಸಿದ ಶ್ರೀ ಗೋವಿಂದಪ್ಪನವರು ಹಿಂದುಳಿದ ವರ್ಗದವರು. ತಮ್ಮ ೧೫ನೆಯ ವಯಸ್ಸಿಗೆ ಯಕ್ಷಗಾನ ರಂಗ ಪ್ರವೇಶಿಸಿದ ಇವರು ಹಂತ ಹಂತವಾಗಿ ಮೇಲಕ್ಕೇರಿದರು.
ತೆಂಕುತಿಟ್ಟು ಹಾಗೂ ಬಡಗುತಿಟ್ಟು ಈ ಎರಡೂ ಕ್ಷೇತ್ರಗಳಲ್ಲಿ ದುಡಿದ ಅನುಭವ ಇವರದು. ಸ್ತ್ರೀ ವೇಷವನ್ನೂ ಅಭಿನಯಿಸಿ ಸೈ ಎನ್ನಿಸಿಕೊಂಡವರು. ಭಾಗವತಿಕೆಯನ್ನು ಮಾಡಬಲ್ಲರು. ಚಂಡೆ ಹಾಗೂ ಮದ್ದಲೆಗಳನ್ನು ನುಡಿಸಬಲ್ಲರು. ಹೀಗೆ ಯಕ್ಷಗಾನದ ಎಲ್ಲ ಆಯಾಮಗಳನ್ನು ಕರಗತಮಾಡಿಕೊಂಡವರು. ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಪಟು ಹಾರಾಡಿ ರಾಮ ಅವರ ಅಭಿನಯದ ಛಾಯೆ ಗೋವಿಂದಪ್ಪನವರಲ್ಲಿ ಮೇಲೈಸಿರುವುದನ್ನು ಕಾಣಬಹುದಾಗಿದೆ.
ಇವರು ಅಭಿನಯಿಸಿದ ಭೀಷ್ಮ, ಕರ್ಣ, ಅರ್ಜುನ, ಮಾರ್ತಾಂಡತೇಜ, ಜಾಂಬವ, ಹಿರಣ್ಯಕಶ್ಯಪು, ಸುಂದರ ರಾವಣ, ವೀರಮಣಿ, ಭೀಮ, ವಿಭೀಷಣ, ಯಯಾತಿ, ಋತುಪರ್ಣ ಮೊದಲಾದ ವೀಲರೋಚಿತ ಪುರುಷ ಪಾತ್ರಗಳು ಕಲಾ ಪ್ರೇಮಿಗಳ ಮನ ಸೂರೆಗೊಂಡಿವೆ.
ಗೋಳಿಗರಡಿ, ಸಾಲಿಗ್ರಾಮ, ಪೆರ್ಡೂರು, ಕಣಿಪುರ, ಮೂಲ್ಕಿ, ಅಮೃತೇಶ್ವರಿ ಮುಂತಾದ ಅನೇಕ ಮೇಳಗಳಲ್ಲಿ ದುಡಿದಿದ್ದಾರೆ.
ಪೌರಾಣಿಕ ಪ್ರಸಂಗಗಳ ಯಾವುದೇ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಇವರ ಕಲಾಸಾಧನೆ ಅದ್ಭುತವಾದುದು. ಶ್ರೀಯುತರ ಕಲಾತಪಸ್ಸಿಗೆ ಮನ್ನಣೆ ನೀಡಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಬ್ರಹ್ಮಾವರದ ಅಭಿಮಾನಿಗಳು ಇವರಿಗೆ ಸನ್ಮಾನ ಮಾಡಿ ಹಮ್ಮಿಣಿ ಅರ್ಪಿಸಿದ್ದಾರೆ.
ತಾವು ವಹಿಸುವ ಪಾತ್ರಗಳಿಗೆ ಜೀವ ತುಂಬಿ ಕಲಾ ರಸಿಕರ ಮನ ಸೂರೆಗೊಳ್ಳುವ ಯಕ್ಷಗಾನ ಕಲೆಯ ಪರಿಪೂರ್ಣ ಕಲಾವಿದರು ಶ್ರೀ ಐರೋಡಿ ಗೋವಿಂದಪ್ಪ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಲ್ಲಯ್ಯ ಸ್ವಾಮಿ ಅಥಣಿ

ಜಾನಪದ ರಂಗಭೂಮಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಶ್ರೀ ಕೃಷ್ಣ ಪಾರಿಜಾತ’ದ ಹಿರಿಯ ಕಲಾವಿದರು ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಅವರು.
ಜಮಖಂಡಿ ತಾಲ್ಲೂಕಿನ ಮೈಗೂರ ಗ್ರಾಮದಲ್ಲಿ ೧೯೧೮ ರಲ್ಲಿ ಜನಿಸಿದ ಶ್ರೀ ಮಲ್ಲಯ್ಯಾಸ್ವಾಮಿ ಅವರಿಗೆ ಬಾಲ್ಯದಿಂದಲೂ ಪಾರಿಜಾತ ಕಲೆಯ ಬಗ್ಗೆ ಆಕರ್ಷಣೆ. ತಿಕೋಟಾ ಗ್ರಾಮದ ಪ್ರಸಿದ್ಧ ಪಾರಿಜಾತ ಕಲಾವಿದರೂ, ಗುರುಗಳೂ ಆಗಿದ್ದ ಶ್ರೀ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರಿಂದ ಪಾರಿಜಾತ ಕಲೆಯ ಶಿಕ್ಷಣ ಪಡೆದು, ತಿಕೋಟಾದಲ್ಲೇ ಪ್ರಪ್ರಥಮವಾಗಿ ಸತ್ಯಭಾಮ ಹಾಗೂ ಕೊರವಂಜಿ, ದಶಾವತಾರ ಪಾತ್ರಗಳ ಅಭಿನಯವನ್ನಾರಂಭಿಸಿದ್ದೆ ಅಲ್ಲದೆ ಭಾಗವತಿಕೆಯಲ್ಲೂ ಪ್ರಸಿದ್ದಿ ಪಡೆದಿದ್ದಾರೆ.
ಅಥಣಿಯಲ್ಲಿ ಸ್ವಂತ ಕಂಪನಿ ಕಟ್ಟಿ, ಅಲ್ಲಿಂದ ಕಂಪನಿಯೊಂದಿಗೆ ಜಮಖಂಡಿಗೆ ಬಂದ ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಶ್ರೀ ವೆಂಕಟೇಶ್ವರ ಕೃಷ್ಣ ಪಾರಿಜಾತ ನಾಟಕ ಕಂಪನಿ, ಜಮಖಂಡಿ ಎಂಬ ಹೆಸರಿನಲ್ಲಿ ಕಂಪನಿ ಸ್ಥಾಪಿಸಿ ೪೬ ವರ್ಷಗಳಿಂದಲೂ ನಡೆಸುತ್ತ ಬಂದಿದ್ದಾರೆ.
ಧಾರವಾಡ, ಗುಲ್ಬರ್ಗ, ಹೈದರಾಬಾದ್, ಮುಂಬಯಿ ಹೀಗೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿರುವುದಲ್ಲದೆ, ಆಕಾಶವಾಣಿ ದೂರದರ್ಶನದಲ್ಲಿಯೂ ಶ್ರೀಯುತರ ಅಭಿನಯದ ‘ಕೃಷ್ಣಪಾರಿಜಾತ’ ಪ್ರಸಾರಗೊಂಡು ಮೆಚ್ಚುಗೆ ಗಳಿಸಿದೆ. ಅನೇಕ ಕಲಾವಿದರಿಗೆ ‘ಕೃಷ್ಣ ಪಾರಿಜಾತ’ ಕಲೆಯನ್ನು ಕಲಿಸಿ ಸಿದ್ಧಗೊಳಿಸಿರುವ ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಅವರು ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ.
ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಪಟ್ಟದ ಕಲ್ಲು ಉತ್ಸವ, ದಸರಾ ಉತ್ಸವಗಳು ಮೊದಲಾದವುಗಳಲ್ಲಿ ಕಾರ್ಯಕ್ರಮ ನೀಡಿರುವ ಶ್ರೀಯುತರು ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರು ಹಾಗೂ ದೂರದರ್ಶನ ಕಲಾವಿದರು. ಮುಂಬೈಯಲ್ಲಿ ನಡೆದ ಕಾನಡಾವಿರಲು ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯಕ್ರಮ, ಬೆಂಗಳೂರು ನಾಟಕೋತ್ಸವದಲ್ಲಿ ಕಾರ್ಯಕ್ರಮ ನೀಡಿ ಸನ್ಮಾನಿತರಾಗಿದ್ದಾರೆ.
ನಶಿಸಿಹೋಗುತ್ತಿರುವ ಜಾನಪದ ಕಲೆಯಾದ ಕೃಷ್ಣಪಾರಿಜಾತ ಕಲೆಯಲ್ಲಿ ತರಬೇತಿ ನೀಡಿ ಮುಂದಿನ ತಲೆಮಾರನ್ನು ಸಿದ್ಧಪಡಿಸುತ್ತಿರುವ ಪ್ರತಿಭಾವಂತ ಕೃಷ್ಣ ಪಾರಿಜಾತ ಕಲಾವಿದರು ಶ್ರೀ ಮಲ್ಲಯ್ಯಾಸ್ವಾಮಿ ಅಥಣಿ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಾದೇಗೌಡ

ಜಾನಪದ ನೃತ್ಯಗಳಲ್ಲಿ ಒಂದಾದ ಗೊರವರ ಕುಣಿತದ ಹಿರಿಯ ಕಲಾವಿದರು ಶ್ರೀ ಮಾದೇಗೌಡ ಅವರು.
ಎಳವೆಯಲ್ಲೇ ಗೊರವರ ಕುಣಿತದಲ್ಲಿ ಆಸಕ್ತಿ ತಳೆದು ಶ್ರೀ ಪುಟ್ಟಮಲ್ಲೇಗೌಡ ಇವರ ಬಳಿ ಗೊರವರ ಕುಣಿತ ಕಲಿತರು. ಸುಮಾರು ಆರು ದಶಕಗಳ ಕಾಲ ಗೊರವರ ಕುಣಿತದಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ದೆಹಲಿಯ ಅಪ್ಪಾ ಉತ್ಸವ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಶ್ರೀ ಮಾದೇಗೌಡರು ತಮ್ಮ ಅದ್ಭುತ ಕುಣಿತದಿಂದ ಜಾನಪದದ ಈ ವಿಶಿಷ್ಟ ಕಲೆಗೆ ಜೀವ ತುಂಬಿದ್ದಾರೆ.
ಶ್ರೀಯುತರು ಜಾನಪದ ಕಲೆಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ೨೦೦೨ ರ ಸಾಲಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಜಾನಪದದ ವಿಶಿಷ್ಟ ಕಲೆಯಾದ ಗೊರವರ ಕುಣಿತವನ್ನು ಕಿರಿಯರಿಗೆ ಕಲಿಸುತ್ತ ಮುಂದಿನ ತಲೆಮಾರಿಗೂ ತಲುಪಿಸುತ್ತಿರುವ ಎಂಬತ್ತು ವರ್ಷದ ಶ್ರೀ ಮಾದೇಗೌಡರು ಗೊರವರ ಕುಣಿತದ ವಿಶಿಷ್ಟ ಕಲಾವಿದರು.
ಸಹಜ ಪ್ರತಿಭೆ, ಹಾಗೂ ಸತತ ಪರಿಶ್ರಮಗಳಿಂದ ಗೊರವರ ಕುಣಿತಕ್ಕೆ ವಿಶಿಷ್ಟತೆ ತಂದುಕೊಟ್ಟ ಆಧುನಿಕತೆಯ ಅಬ್ಬರದಲ್ಲೂ ನಾಡಿನ ಜಾನಪದ ಸಂಸ್ಕೃತಿಯ ಜೀವನದಿ ಬತ್ತದಂತೆ ನೋಡಿಕೊಳ್ಳುತ್ತಿರುವ ಹಿರಿಯ ಕಲಾವಿದರು ಶ್ರೀ ಮಾದೇಗೌಡ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎನ್.ಆರ್. ನಾಯಕ್

ಜಾನಪದ ತಜ್ಞ ಶಿಕ್ಷಣ ತಜ್ಞ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ಪರಿಶ್ರಮ, ಜಾನಪದ ಸಮ್ಮೇಳನಾಧ್ಯಕ್ಷ, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಜಾನಪದ ಪ್ರಕಾಶಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಡಾ. ಎನ್. ಆರ್. ನಾಯಕ ಅವರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಭಾವಿಕೇರಿಯಲ್ಲಿ ೧೯೩೫ರಲ್ಲಿ ಜನಿಸಿದ ನಾಯಕ ಅವರು ಶಿಕ್ಷಣದಲ್ಲಿ ಆಸಕ್ತರಾಗಿ ಉತ್ತಮ ಫಲಿತಾಂಶ ಪಡೆದು ಹೊನ್ನಾವರದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದರು. ನಂತರ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಹೊನ್ನಾವರ ಕರ್ನಾಟಕ ಸಂಘದ ಅಧ್ಯಕ್ಷ, ಅರವಿಂದ ಯಕ್ಷಗಾನ ಸಂಘದ ಅಧ್ಯಕ್ಷ ಹೀಗೆ ಹಲವಾರು ಸ್ಥಾನಗಳನ್ನು ಅಲಂಕರಿಸಿದವರು. ವಿಶ್ವವಿದ್ಯಾಲಯ, ಅಕಾಡೆಮಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಮಿತಿಗಳಲ್ಲಿ ಸದಸ್ಯರಾಗಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳ ಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಅನೇಕ ರೂಪಕ, ಭಾಷಣಗಳ ಪ್ರಸಾರ, ನಾಟಕೋತ್ಸವ, ನಾಟಕ ತರಬೇತಿ ಶಿಬಿರ, ಜಾನಪದ ಕಮ್ಮಟ, ಸೌಹಾರ್ದತಾ ಸಮ್ಮೇಳನಗಳನ್ನು ಏರ್ಪಡಿಸಿದ್ದಾರೆ.
ಜಾನಪದ ಪ್ರಕಾರದಲ್ಲಿ ೩೫ ಗ್ರಂಥಗಳನ್ನು ರಚಿಸಿ ಪ್ರಕಟಿಸಿರುವುದೇ ಅಲ್ಲದೆ ಹಿಂದುಳಿದ ಬುಡಕಟ್ಟು ಜನಾಂಗಗಳ ಸಾಹಿತ್ಯಕಲೆ ಸಂಸ್ಕೃತಿಗೆ ಸಂಬಂಧಿಸಿದ ಸಂಶೋಧನಾತ್ಮಕ ಗ್ರಂಥಗಳನ್ನು ಸಹ ರಚಿಸಿದ್ದಾರೆ. ಪತ್ರಿಕೆಗಳಲ್ಲಿ ಸಂಸ್ಕೃತಿ ಕುರಿತು ನೂರಾರು ಲೇಖನಗಳು ಪ್ರಕಟವಾಗಿವೆ. ಸುಗ್ಗಿ ಹಬ್ಬ, ಗ್ರಾಮೋಕ್ಕಲ, ಮಹಾಭಾರತ ಮತ್ತು ಕೂಸಾಯ್ತು ನಮ್ಮಾ ಕೊಮರಾಗೆ ಕೃತಿಗಳಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗಳು ದೊರಕಿವೆ. ಕರ್ನಾಟಕ ಜಾನಪದ ಅಕಾಡೆಮಿಯಿಂದ ‘ಜಾನಪದ ತಜ್ಞ’ ಪ್ರಶಸ್ತಿ, ಲಲಿತಾಂಬಾ ವೃಷಭೇಂದ್ರಸ್ವಾಮಿ ದತ್ತಿನಿಧಿ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಪರಿಷತ್ತಿನ ಸನ್ಮಾನ ಇತ್ಯಾದಿ ಪುರಸ್ಕಾರಗಳು ಲಭ್ಯವಾಗಿವೆ.
ಡಾ. ಎನ್. ಆರ್. ನಾಯಕರನ್ನು ಕುರಿತು ಎರಡು ಅಭಿನಂದನಾ ಗ್ರಂಥಗಳು (ದೀಪಾರಾಧನೆ, ಕಲಶ) ಅವರ ಬದುಕು ಬರಹ ಕುರಿತ ಎಂ.ಫಿಲ್. ಪ್ರಬಂಧ ಪ್ರಕಟವಾಗಿವೆ. ನಾಯಕ ಅವರು ಸಂಪಾದಿಸಿ ಪ್ರಕಟಿಸಿರುವ ಹಲವಾರು ಜಾನಪದ ಕತೆ, ಕಾವ್ಯ, ಸಂಸ್ಕೃತಿ ಚಿತ್ರಗಳು ಮಹತ್ತರ ಕೊಡುಗೆಯಾಗಿದೆ. ಜಾನಪದ ಶಿಬಿರ, ವಿಚಾರ ಸಂಕಿರಣ, ಕಲಾ ಮೇಳಗಳ ಸಂಘಟಕರಾಗಿ, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಪ್ರವರ್ತಕರಾಗಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಸಲ್ಲಿಸುತ್ತಿರುವ, ಜಾನಪದ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಪ್ರತಿಭಾವಂತ ಡಾ. ಎನ್. ಆರ್. ನಾಯಕ ಅವರು.

Categories
ಯಕ್ಷಗಾನ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕಾಸಿಮಸಾಬ ಹುಸೇನಸಾಬ

ರಂಗಭೂಮಿಯೊಂದಿಗೆ ಕಳೆದ ಐವತ್ತು ವರ್ಷಗಳಿಂದ ನಿಕಟ ಸಂಪರ್ಕವಿರಿಸಿಕೊಂಡು ಕೃಷಿ, ಜಾನಪದ, ಪತ್ರಿಕೆ, ಶಿಕ್ಷಣ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾಗಿರುವ ಸ್ನೇಹಜೀವಿ – ಕಾಸೀಮಸಾಬ ಹುಸೇನಸಾಬ ಬಿಜಾಪುರ.
ಬಸವನ ಬಾಗೇವಾಡಿ ತಾಲ್ಲೂಕಿನ ಗೊಳಸಂಗಿಯವರಾದ ಕಾಸೀಮಸಾಬ ಅವರು ಶಿಕ್ಷಣ ಪಡೆದದ್ದು ಎಂಟನೆಯ ತರಗತಿಯವರೆಗಾದರೂ ಕನ್ನಡ, ಹಿಂದಿ, ಉರ್ದು ಭಾಷೆಗಳಲ್ಲಿ ಪಡೆದಿರುವ ಪರಿಣತಿ ಮತ್ತು ನಾಟಕ ರಚನೆಯಲ್ಲಿ ಅವರಿಗಿರುವ ಆಸಕ್ತಿ ಅಚ್ಚರಿ ಹುಟ್ಟಿಸುತ್ತದೆ.
“ಮನೆಗೆ ಬೆಳಕು ಮಡದಿ’, ‘ಹೆಂಡತಿಯ ಕೈಗೊಂಬೆ’, ‘ಗಡಿತಂಟೆ’, ‘ಸಾಮ್ರಾಟ ಅಶೋಕ’, ‘ಯುದ್ಧ ಸಾಕು ಶಾಂತಿ ಬೇಕು’, ‘ಮಕ್ಕಳೆರಡೇ ಇರಲಿ’ ಮುಂತಾದ ನಾಟಕಗಳು ಜನಮನವನ್ನು ಸೂರೆಗೊಂಡು ಹಲವಾರು ಪ್ರದರ್ಶನಗಳನ್ನು ಕಂಡಿವೆ, ಬಹುಮಾನಗಳನ್ನು ಪಡೆದುಕೊಂಡಿವೆ.
ಜ್ಯೋತಿಯೇ ಆಗು ಜಗಕೆಲ್ಲ, ಗಾದೆಗಳ ಗಾರುಡಿ, ಚಿಮ್ಮಲಗಿಯ ಚಿನ್ಮಯಿ ಹಾಗೂ ಹೂವಿನ ಹಂದರ ಇವರ ಸಂಪಾದಿತ ಕೃತಿಗಳು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಜಾನಪದ ಪ್ರವರ್ಧಕ ಪ್ರಶಸ್ತಿ ಪಡೆದುಕೊಂಡಿರುವ ಕಾಸೀಮಸಾಬ ಅವರನ್ನು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗ್ರಾಮ ಭೂಷಣ, ಆದರ್ಶ ರೈತ, ಉತ್ತಮ ನಾಟಕಕಾರ, ಜಾನಪದ ತಜ್ಞ ಮುಂತಾದ ಪ್ರಶಸ್ತಿಗಳೂ
ಅರಸಿಕೊಂಡು ಬಂದಿವೆ.
ಸಂಪಾದಕರಾಗಿ, ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಸದಸ್ಯರಾಗಿ, ನಿರ್ದೆಶಕರಾಗಿ, ಗೌರವಾಧ್ಯಕ್ಷರಾಗಿ ವಿವಿಧ ರಂಗಗಳಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಕಾಸೀಮಸಾಬ ಅವರು ಕನ್ನಡದ ಪ್ರತಿಭಾವಂತ ನಾಟಕಕಾರರಲ್ಲಿ ಒಬ್ಬರಾಗಿ ಕ್ರಿಯಾಶೀಲರಾಗಿರುವ ಹೆಮ್ಮೆಯ ಬಹುಮುಖ ಪ್ರತಿಭಾವಂತ ಶ್ರೀ ಕಾಸೀಮಸಾಬ ಹುಸೇನಸಾಬ ಬಿಜಾಪುರ ಅವರು.