Categories
ಯೋಗ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಡಾ. ರಾಘವೇಂದ್ರ ಶೆಣೈ

ಬೆಂಗಳೂರಿನ ಯೋಗಗುರು ಡಾ. ರಾಘವೇಂದ್ರ ಶೆಣೈ ಪ್ರತಿಯೊಬ್ಬರಿಗೂ ಯೋಗಶಿಕ್ಷಣ ನೀಡಬೇಕೆಂಬ ಮಹದಾಸೆಯಿಂದ ೨೦೦೭ ರಲ್ಲಿ ‘ನಿರ್ಮಯ ಯೋಗ ಕುಟೀರಂ’ ಸ್ಥಾಪಿಸಿ ಸಾವಿರಾರು ಯೋಗಾಸಕ್ತರಿಗೆ ಯೋಗ ಕಲಿಸುತ್ತ ಬಂದಿದ್ದಾರೆ. ಜೀವನವೇ ಒಂದು ಯೋಗವಾಗಬೇಕು, ಸ್ವಸ್ಥ ಜೀವನಕ್ಕೆ ಯೋಗವೇ ಸಹಕಾರಿ ಎಂಬ ತತ್ವದಡಿಯಲ್ಲಿ ಯೋಗಶಿಕ್ಷಣ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಪ್ರಖ್ಯಾತ ಯೋಗಗುರುಗಳಾದ ಬಿ.ಕೆ.ಎಸ್ ಅಯ್ಯಂಗಾರ್ ಅವರ ಶಿಷ್ಯರಾದ ಇವರ ಬಳಿ ಯೋಗ ಕಲಿತವರು ಸ್ವಸ್ಥ ಹಾಗೂ ಸಮಭಾವದ ಜೀವನ ನಡೆಸುತ್ತಿದ್ದಾರೆ.

Categories
ಯೋಗ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಭ. ಮ. ಶ್ರೀಕಂಠ

ಶಿವಮೊಗ್ಗದ ಶ್ರೀ. ಭ. ಮ. ಶ್ರೀಕಂಠರವರು ಯೋಗಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅನೇಕ ವಿದ್ಯಾರ್ಥಿಗಳನ್ನು ಯೋಗಶಿಕ್ಷಕರನ್ನಾಗಿ ರೂಪಿಸಿದ ಕೀರ್ತಿ ಇವರದು. ಶಿವಮೊಗ್ಗದಲ್ಲಿ ಯೋಗಶಿಕ್ಷಣ ಸಮಿತಿಯ ಪ್ರಾರಂಭಕ್ಕೆ ಪ್ರೇರಣೆ ನೀಡಿ ನಗರದ ವಿವಿಧ ಬಡಾವಣೆಗಳಲ್ಲಿ ೫೫ ಕ್ಕೂ ಹೆಚ್ಚು ಉಚಿತ ಯೋಗ ತರಗತಿಗಳ ಪ್ರಾರಂಭಕ್ಕೆ ಉತ್ತೇಜನ ನೀಡಿದ್ದಾರೆ.
ಯೋಗಶಿಕ್ಷಣದಲ್ಲಿ ಶ್ರೀಯುತರು ಸಲ್ಲಿಸಿರುವ ಸೇವೆಗೆ, ಬೆಂಗಳೂರು ಯೋಗ ಸೆಂಟರ್ ನವರು ‘ಯೋಗಶ್ರೀ ಪ್ರಶಸ್ತಿ-೧೯೯೦ ನೀಡಿ ಗೌರವಿಸಿದ್ದಾರೆ. ೨೦೧೬ ರಲ್ಲಿ ‘ಆರ್ಟ್ ಆಫ್ ಅವಿಂಗ್’ ರವರಿಂದ ‘ಯೋಗೋಪಾಸಕ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಸನ್ಮಾನ ಮತ್ತು ಶ್ರೀ ರಾಘವೇಂದ್ರ ಯೋಗಕೇಂದ್ರದಿಂದ ಪುರಸ್ಕಾರ ಲಭ್ಯವಾಗಿವೆ. ಅಜಿತಶ್ರೀ ಪ್ರಶಸ್ತಿ ಯೋಗಾಚಾರ್ಯ ಪ್ರಶಸ್ತಿಗಳು ಇವರನ್ನ ಹುಡುಕಿ ಬಂದಿವೆ.

Categories
ಯೋಗ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಡಾ. ಎ.ಎಸ್. ಚಂದ್ರಶೇಖರ

ಆಯುರ್ವೇದ ಚಿಕಿತ್ಸೆ ಹಾಗೂ ಯೋಗ ಕ್ಷೇತ್ರದ ಅನನ್ಯ ಸಾಧಕರು ಡಾ. ಎ.ಎಸ್. ಚಂದ್ರಶೇಖರ. ಯೋಗ ಕೇಂದ್ರಗಳ ಸ್ಥಾಪಕರು, ಸಮಾಜಮುಖಿ ಸಹ.
ಮೈಸೂರಿನವರಾದ ಎ.ಎಸ್. ಚಂದ್ರಶೇಖರ ವೃತ್ತಿಯಲ್ಲಿ ಆಯುರ್ವೇದ ವೈದ್ಯರು, ಪ್ರವೃತ್ತಿಯಲ್ಲಿ ಯೋಗ ಶಿಕ್ಷಕರು, ಸಮಾಜಸೇವೆ, ನೈಸರ್ಗಿಕ ಚಿಕಿತ್ಸೆಯಲ್ಲಿ ಹೆಸರುವಾಸಿ. ಹತ್ತು ಯೋಗ ಕೇಂದ್ರಗಳ ಸ್ಥಾಪಕರು. ೩೬ ವರ್ಷಗಳಿಂದಲೂ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ನಿರತರು. ಸಾವಿರಾರು ಜನರಿಗೆ ಯೋಗ ತರಬೇತಿ ನೀಡಿದ ಹೆಗ್ಗಳಿಕೆ. ಬಡವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ಪುಸ್ತಕ ವಿತರಣೆ, ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ, ಹಳ್ಳಿಗಳಲ್ಲಿ ೩೦ ವರ್ಷಗಳಿಂದಲೂ ಪ್ರತಿ ಹದಿನೈದು ದಿನಕ್ಕೊಮ್ಮೆ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ತಲಕಾಡು ಪಂಚಲಿಂಗ ದರ್ಶನದ ವೇಳೆ ಒಂದು ಲಕ್ಷ ಜನರಿಗೆ ಉಚಿತ ಊಟದ ವ್ಯವಸ್ಥೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲೂ ನಿರತರಾಗಿರುವ ಸೇವಾಸಿಂಧು. ೨೭ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಗುರುತರ ಸೇವೆ. ಯೋಗಾರ್ಥ ಸಂಗ್ರಹ, ಎ ಹ್ಯಾಂಡ್ ಬುಕ್ ಆಫ್ ಯೋಗ, ನೇಚರ್ ಕೇರ್ ಮತ್ತಿತರ ಕೃತಿಗಳ ರಚನಾಕಾರರು. ಹಲವು ಪ್ರಶಸ್ತಿ-ಗೌರವ-ಸನ್ಮಾನಗಳಿಗೆ ಸತ್ಪಾತ್ರರು.

Categories
ಯೋಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಕುಮಾರಿ ಖುಷಿ

ಯೋಗದಿಂದ ಸುಯೋಗ ಎಂಬ ಲೋಕನುಡಿಯನ್ನು ನಿಜವಾಗಿಸಿರುವ ಕುಮಾರಿ ಖುಷಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿರುವ ಅತ್ಯುತ್ತಮ ಯೋಗಪಟು.
ಮೈಸೂರಿನ ವಿಜಯವಿಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಖುಷಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತಹ ಪ್ರತಿಭೆ. ಉಸಿರಾಟದ ತೊಂದರೆ ನಿವಾರಣೆಗೆಂದು ಆರಂಭಿಸಿದ ಯೋಗವೇ ಸಾಧನೆಯ ಮಾರ್ಗವಾಗಿದ್ದು ವಿಶೇಷ, ಮೈಸೂರು ವಿವೇಕಾನಂದ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಡಾ.ಪಿ.ಎನ್. ಗಣೇಶ್‌ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದ ಖುಷಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯದ ಕೀರ್ತಿ ಬೆಳಗಿದವರು. ನಿರಾಳಂಬ ಪೂರ್ಣಚಕ್ರಾಸನವನ್ನು ನಿಮಿಷಕ್ಕೆ ಹದಿನಾಲ್ಕು ಬಾರಿ ಮಾಡಿ ವಿಶ್ವದಾಖಲೆ ಸ್ಥಾಪಿಸಿದ ಸಾಧಕಿ. ಆರು ಬಾರಿ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಪದಕ ಗೆದ್ದ ಯೋಗಪಟು. ಕರ್ನಾಟಕ ಕಲಾಶ್ರೀ, ಅಸಾಧಾರಣ ಪ್ರತಿಭೆ ಮುಂತಾದ ಪ್ರಶಸ್ತಿ-ಬಿರುದುಗಳಿಂದ ಭೂಷಿತೆ, ಯೋಗಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಂಡು ದೇಶದ ಉತ್ತಮ ಯೋಗಶಿಕ್ಷಕಿಯಾಗುವ ಕನಸೊತ್ತಿರುವ ಈಕೆ ಆ ಗುರಿ ಮುಟ್ಟುವುದು ನಿಶ್ಚಿತವೆಂಬ ಭರವಸೆ ಮೂಡಿಸಿರುವ ಪ್ರತಿಭಾಶೀಲೆ.

Categories
ಯೋಗ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವನಿತಕ್ಕ

ಭಾರತೀಯ ಸನಾತನ ಯೋಗ ಪದ್ಧತಿಯನ್ನು ಹೊಸ ತಲೆಮಾರಿಗೆ ಪರಿಚಯಿಸಿ ಪ್ರಚುರಪಡಿಸಿದ ಹಿರಿಮೆಯ ಯೋಗಗುರು ವನಿತಕ್ಕ ನಾಲ್ಕೂವರೆ ದಶಕದಿಂದಲೂ ಯೋಗಶಿಕ್ಷಣದಲ್ಲಿ ನಿರತ ಸಾಧಕಿ.
ಶಿವಮೊಗ್ಗ ಜಿಲ್ಲೆ ಹೊಸನಗರ ವನಿತಾ ಅವರ ಹುಟ್ಟೂರು. ಓದು-ಸನಾತನ ಪರಂಪರೆಯ ಅಧ್ಯಯನ ಮತ್ತು ಯೋಗ ಬಾಲ್ಯದಲ್ಲೇ ಮನ ಆವರಿಸಿಕೊಂಡ ಆಸಕ್ತಿಯ ಕ್ಷೇತ್ರಗಳು. ವಾಣಿಜ್ಯ ಪದವೀಧರರು. ಚರಿತ್ರೆ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಶಿಶು ಶಿಕ್ಷಣ ತರಬೇತಿ ಮತ್ತು ಮಕ್ಕಳ ಮನಃಶಾಸ್ತ್ರವನ್ನು ಅಧ್ಯಯನಿಸಿರುವ ವನಿತಾ ಹರೆಯದಲ್ಲೇ ಸಮಾಜಸೇವೆಗೆ ಬದುಕು ಮುಡುಪಿಟ್ಟವರು. ಯೋಗದ ತುಡಿತದಿಂದ ವ್ಯಯಕ್ತಿಕ ಬದುಕಿನ ವ್ಯಾಮೋಹ ತೊರೆದ ವನಿತಕ್ಕ ರಾಘವೇಂದ್ರ ಸ್ವಾಮಿ ಮಲ್ಲಾಡಿಹಳ್ಳಿ, ಅಜಿತ್‌ಕುಮಾರ್, ಸ್ವಾಮಿ ಆತ್ಮಾನಂದಪುರಿ ಹಾಗೂ ಬಿ.ಕೆ.ಎಸ್. ಅಯ್ಯಂಗಾರ್ ಅವರಿಂದ ಯೋಗ ಶಿಕ್ಷಣ ಕಲಿತವರು. ಬೆಂಗಳೂರಿನ ಗಿರಿನಗರದಲ್ಲಿ ಯೋಗಶ್ರೀ ಸಂಸ್ಥೆ ಸ್ಥಾಪನೆ. ಹೊಸ ಪೀಳಿಗೆಗೆ ಯೋಗಶಿಕ್ಷಣ, ವೈಯಕ್ತಿಕ ಸಮಸ್ಯೆಗಳಿಗೆ ಆತ್ಮೀಯ ಸ್ಪಂದನೆಯನ್ನೇ ಸಾಧನಮಾರ್ಗವಾಗಿಸಿಕೊಂಡು ೪೫ ವರ್ಷಗಳಿಂದಲೂ ಸೇವಾನಿರತರು. ಶಿಷ್ಯರು, ಅಭಿಮಾನಿಗಳಿಗೆ ವನಿತಕ್ಕ ಎಂದೇ ಚಿರಪರಿಚಿತರಾಗಿರುವ ವನಿತಾ ಅವರು ಬದುಕು-ಭಾವವೆಲ್ಲವೂ ಯೋಗ ಶಿಕ್ಷಣಕ್ಕೆ ಅಂದಿಗೂ
ಇಂದಿಗೂ ಎಂದೆಂದಿಗೂ ಮೀಸಲು,

Categories
ಯೋಗ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ.ಎಸ್. ಗುರುಸಿದ್ದಯ್ಯ

ಯೋಗಾಭ್ಯಾಸದಲ್ಲಿ ಅತ್ಯುನ್ನತ ಸಾಧನೆಗೈದ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ನಾಡಿನ ಅಪ್ರತಿಮ ಪ್ರತಿಭೆಯ ಯೋಗಪಟು ಶ್ರೀ ಪಿ.ಎಸ್. ಗುರುಸಿದ್ದಯ್ಯ
ಅವರು.
ತುಮಕೂರಿನವರಾದ ಶ್ರೀ ಗುರುಸಿದ್ದಯ್ಯ ಅವರು ಬಿ.ಎ. ಪದವೀಧರರು. `ಅಲ್ಪನೇಟಿವ್ ಥೆರಪಿ’ಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಬಾಲ್ಯದ ದಿನಗಳಿಂದಲೇ ಯೋಗಾಭ್ಯಾಸದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಶ್ರೀಯುತರು ಪ್ರಸಿದ್ಧ ಯೋಗಾಚಾರ್ಯರಿಂದ ಸ್ಫೂರ್ತಿ ಪಡೆದು ನಿರಂತರ ಅಭ್ಯಾಸ ನಡೆಸತೊಡಗಿದರು. ಹಂತ ಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರಿ ರಾಷ್ಟ್ರೀಯ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ವಿಜೃಂಭಿಸತೊಡಗಿದರು.
ಇಂಗ್ಲೆಂಡ್ ಮತ್ತು ಹಾಲೆಂಡ್ ದೇಶಗಳ ಯೋಗ ಶಿಕ್ಷಕರ ಸಂಸ್ಥೆಗಳ ಆಹ್ವಾನದ ಮೇರೆಗೆ ಜಪಾನ್, ಹಾಂಕಾಂಗ್, ಬ್ಯಾಂಕಾಕ್, ಸಿಂಗಾಪುರ್ ಹಾಗೂ ಅಮೆರಿಕಾ ದೇಶಗಳಲ್ಲಿ ಸುಮಾರು ಇಪ್ಪತ್ತೊಂದು ಯೋಗಾಸನ ಪ್ರದರ್ಶನಗಳಲ್ಲಿ ಪಾಲ್ಗೊಂಡು ಪ್ರಶಂಸೆ ಗಳಿಸಿದ್ದಾರೆ. ಆಸ್ಟ್ರೇಲಿಯಾ ದೇಶದಲ್ಲಿ ನಡೆದ ಯೋಗ ಶಿಕ್ಷಕರ ಅಂಚೆ ತೆರಪಿನ ತರಬೇತಿಯಲ್ಲಿ ಐನೂರು ವಿದ್ಯಾರ್ಥಿಗಳ ಪೈಕಿ ಪ್ರಥಮ ಬ್ಯಾಂಕ್ ಪಡೆದ ಕೀರ್ತಿವಂತರು. ಕೇಂದ್ರೀಯ ಕಾರಾಗೃಹಗಳ ಕೈದಿಗಳಿಗೆ, ಅಂಧಶಾಲೆಯ ಮಕ್ಕಳಿಗೆ ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸಾ ತರಬೇತಿ ನೀಡುವ ಮೂಲಕ ಸಮಾಜ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಮೂರು ಬಾರಿ ಚಿನ್ನದ ಪದಕಗಳು, ಎರಡು ಬಾರಿ ಬೆಳ್ಳಿ ಪದಕಗಳು ಹಾಗೂ ಎರಡು ಬಾರಿ ಕಂಚಿನ ಪದಕಗಳನ್ನು ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ನಲವತ್ತೆರಡು ಬಾರಿ ಚಿನ್ನದ ಪದಕಗಳನ್ನು, ಮೂರು ಬಾರಿ ಬೆಳ್ಳಿ ಪದಕಗಳನ್ನು, ನಾಲ್ಕು ಬಾರಿ ಕಂಚಿನ ಪದಕಗಳನ್ನು ಗಳಿಸಿದ ಹಿರಿಮೆ ಇವರದು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ವತಿಯಿಂದ ಮುಖ್ಯಮಂತ್ರಿಗಳಿಂದ ದಸರಾ ಕ್ರೀಡಾ ಪ್ರಶಸ್ತಿಯನ್ನು ಹಾಗೂ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅವರಿಂದ ‘ಯೋಗರತ್ನ’ ಪ್ರಶಸ್ತಿ ಪಡೆದಿದ್ದಾರೆ.
ಯೋಗ, ಪ್ರಕೃತಿ ಚಿಕಿತ್ಸೆ ಮೂಲಕ ಸಾಮಾಜ ಸೇವೆಯನ್ನು ಮಾಡುತ್ತ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸುತ್ತ ನಾಡಿನ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಪಸರಿಸುತ್ತಿರುವ ಹೆಮ್ಮೆಯ ಯೋಗಾಚಾರ್ಯ ಶ್ರೀ ಪಿ. ಎಸ್. ಗುರುಸಿದ್ದಯ್ಯ ಅವರು.