Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಹರಿಜನ ಪದ್ಮಮ್ಮ

ಬಳ್ಳಾರಿಯ ಕಪ್ಪಗಲ್ಲು ಗ್ರಾಮದ ಆದಿ ಕರ್ನಾಟಕ ಪಂಗಡಕ್ಕೆ ಸೇರಿದ ಹರಿಜನ ಪದ್ಮಮ್ಮ ಹುಟ್ಟಿನಿಂದಲೇ ಜಾನಪದ ಬಯಲಾಟ ಕಲಾವಿದೆ, ತಾಯಿ ದಿವಂಗತ ಗಂಗಮ್ಮ ಸಹ ಒಳ್ಳೆಯ ಅಭಿನೇತ್ರಿಯಾಗಿದ್ದವರು. ಹಾಗಾಗಿ ಪದ್ಮಮ್ಮನಿಗೆ ಅಭಿನಯ ರಕ್ತಗತವಾಗಿ ಬಂದುದು. ಹೆಣ್ಣುಮಕ್ಕಳು ಬಣ್ಣ ಬಳಿದುಕೊಂಡು ವೇದಿಕೆ ಏರುವುದನ್ನು ಮಹಾಪರಾಧ ಎಂದೇ ಪರಿಗಣಿಸುತ್ತಿದ್ದ ಕಾಲದಲ್ಲೇ ಬಯಲಾಟದ ಗೀಳು ಹಚ್ಚಿಕೊಂಡ ಪದ್ಮಮ್ಮ ಎದುರಿಸಿದ ಎಡರು ತೊಡರುಗಳು ಅನೇಕ. ಆದರೂ ಎದೆಗೆಡದೆ ಯಾವುದೇ ಪಾತ್ರವಿರಲಿ ಅದಕ್ಕೆ ಜೀವತುಂಬಿ ಅದರಲ್ಲಿ ತನ್ನನ್ನು ತೊಡಗಿಸಿಕೊಂಡು ಸನ್ನಿವೇಶವನ್ನು ಕಣ್ಣಿಗೆ ಕಾಣುವ ಚಿತ್ರದಂತೆ ಅಭಿನಯಿಸುವಲ್ಲಿ ಸಿದ್ಧ ಹಸ್ತರೆನಿಸಿದವರು. ಜನ ಸಮುದಾಯದ ಮನಗೆದ್ದವರು.
ಸಾವಿರಕ್ಕೂ ಹೆಚ್ಚು ಬಯಲಾಟದ ಪ್ರಸಂಗಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಜನಮನ ಸೂರೆಗೊಂಡಿದ್ದಾರೆ. ಅಭಿನಯದ ಜೊತೆಗೆ ಉಚ್ಛಕಂಠದಲ್ಲಿ ದಕ್ಷಿಣಾದಿ ಶೈಲಿಯಲ್ಲಿ ರಂಗಗೀತೆಗಳನ್ನು ಹಾಡುವಾಗ ತನ್ಮಯತೆಯಿಂದ ಮೈಮರೆಯುತ್ತಾರೆ.
ಬಳ್ಳಾರಿ ಹೊಸಪೇಟೆ, ಕೂಡ್ಲಿಗಿ ಸಂಡೂರುಗಳೇ ಅಲ್ಲದೆ ಗಡಿನಾಡು ಪ್ರದೇಶಗಳಲ್ಲೂ ಕನ್ನಡ ಬಯಲಾಟಗಳ ಜಯಭೇರಿ ಬಾರಿಸಿದ ಹೆಗ್ಗಳಿಕೆ ಇವರದು. ಬಳ್ಳಾರಿ ಜನತೆ ಇವರಿಗೆ ಗಾನಕಲಾ ಸರಸ್ವತಿ ಎಂದು ಹಾಡಿಹೊಗಳಿದ್ದಾರೆ. ಇಂಥ ಅಭಿಜಾತ ಕಲಾವಿದೆಗೆ ಸಂದ ಗೌರವ ಸನ್ಮಾನಗಳು ಆನೇಕ ಅಪಾರ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿರುವ ಹರಿಜನ ಪದ್ಮಮ್ಮ ಜಾನಪದ ಬಯಲಾಟ ಕ್ಷೇತ್ರದ ದೊಡ್ಡ ಆಸ್ತಿ ಎನ್ನಬಹುದು.

Categories
ರಂಗಭೂಮಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸಾವಿತ್ರಿ ಗೌಡ

ಮೂಲತ: ಗದಗ ಜಿಲ್ಲೆಯವರಾದ ರಂಗಭೂಮಿ ಕಲಾವಿದೆ ಶ್ರೀಮತಿ ಸಾವಿತ್ರಿಗೌಡರ್ ಅಸಾಧಾರಣ ಪ್ರತಿಭೆ. ವೃತ್ತಿ ರಂಗಭೂಮಿಯ ನಾಟಕಗಳಲ್ಲಿ ಪಾತ್ರವಹಿಸುತ್ತ ೫೦ ವರ್ಷಗಳ ನಿರಂತರ ಸೇವೆಯನ್ನು ಮಾಡಿದ್ದಾರೆ. ಶ್ರೀ ಸಿದ್ದಲಿಂಗೇಶ್ವರ ನಾಟ್ಯ ಸಂಘ, ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಓಬಳೇಶ್ವರ ನಾಟಕ ಕಂಪನಿ, ಕೆ.ಬಿ.ಆರ್ ನಾಟಕ ಕಂಪನಿ, ಮುಂತಾದ ವೃತ್ತಿ ರಂಗಭೂಮಿಯ ಹಲವು ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿ ಹೆಸರಾಗಿದ್ದಾರೆ. ಅವರ ಅಭಿನಯ ಪ್ರತಿಭೆಯನ್ನು ಗುರುತಿಸಿ, ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನಿತ್ತು ಗೌರವಿಸಿವೆ.

Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ತಿಪ್ಪಣ್ಣ ಹೆಳವ‍ರ್

ಕಲೆಗಾಗಿ ಆಸ್ತಿಯನ್ನು ಕಳೆದುಕೊಂಡು ತಾವೇ ಕಲೆಗೆ ಆಸ್ತಿಯಾದ ದೇಸೀ ಪ್ರತಿಭೆ ತಿಪ್ಪಣ್ಣ ಹೆಳವ‍ರ್, ಆರು ದಶಕಗಳಿಗೂ ಮೀರಿ ಸೇವೆಗೈದ ಬಯಲಾಟದ ಕಲಾವಿದ. ಜನಪದರಿಗೆ ಕಲೆಯೇ ಬದುಕು, ಬದುಕೇ ಕಲೆ. ತಿಪ್ಪಣ್ಣ ಅಂತಹ ಜನಪದೀಯ ಗಾಯಕ. ಅವಿಭಜಿತ ಬಿಜಾಪುರ ಜಿಲ್ಲೆ ಲಕ್ಕುಂಡಿಯವರು. ೧೯೪೪ರಲ್ಲಿ ಜನಿಸಿದ ತಿಪ್ಪಣ್ಣರದ್ದು ಅಪ್ಪಟ ಅನಕ್ಷರಸ್ಥ ಮನೆತನ, ಬಾಲ್ಯದಿಂದಲೂ ಕಲಾಸಕ್ತಿ, ನಟನೆಯ ಗೀಳು. ಬಯಲಾಟದ ಕಲಾವಿದನಾಗಿ ಊರೂರು ತಿರುಗುವುದೇ ಜೀವನ. ಈ ಕಲಾತಿರುಗಾಟ, ಬಯಲಾಟದ ಮೋಹಕ್ಕೆ ೮೭ ಎಕರೆ ಜಮೀನು ಕಳೆದುಕೊಂಡು ಬರಿಗೈ ದಾಸನಾಗಿದ್ದು ದಿಟ. ಆದರೂ ಕೊಂಚವೂ ಮುಕ್ಕಾಗದ ಕಲಾಪ್ರೇಮ, ಬಯಲಾಟದ ಹಾಡುಗಳನ್ನು ನೆನಪಿಟ್ಟುಕೊಳ್ಳಲೆಂದೇ ಮನೆಯಲ್ಲೇ ಅಕ್ಷರಕಲಿತ ಜಾಣ, ಅಲೆಮಾರಿ ಹೆಳವ—ಪಿಚ್ಚ-ಗುಂಟಲು ಜನಾಂಗದವರಾಗಿ ಗುಂಟಲು ಸಮುದಾಯದ ಮೂಲಪುರುಷ ೬ನೇ ಶತಮಾನದ ಮುತ್ತಿನಾಥಯ್ಯ ಬಗ್ಗೆ ಕೆಲವು ವಚನಗಳನ್ನು ಸಂಸ್ಕರಿಸಿ ಇತಿಹಾಸಕಾರರಿಗೆ ಅಚ್ಚರಿ ಉಂಟುಮಾಡಿದಾತ. ಮನೆಮನೆಗಳಿಗೆ ತೆರಳಿ ಜನನ-ಮರಣ ದಾಖಲಿಸುವ ಒಕ್ಕಲುತನದಲ್ಲೂ ನಿರತರಾಗಿರುವ ತಿಪ್ಪಣ್ಣಗೆ ಭಿಕ್ಷಾಟನೆ ಮತ್ತು ಕಲಾರಾಧನೆ ಎರಡೇ ಆಧಾರ. ೭೮ರ ಇಳಿವಯಸ್ಸಿನಲ್ಲೂ ಕಲಾಕೈಂಕರ್ಯದಲ್ಲಿ ತೊಡಗಿರುವ ತಿಪ್ಪಣ್ಣ ಹಳ್ಳಿಗಾಡಿನ ನಿಜ ಜಾನಪದ ಸಂಪತ್ತು.

Categories
ರಂಗಭೂಮಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎನ್. ಮಲ್ಲೇಶಯ್ಯ

ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಜುಟ್ಟನಹಳ್ಳಿಯ ರಂಗಪ್ರತಿಭೆ ಶ್ರೀ ಎನ್. ಮಲ್ಲೇಶಯ್ಯ, ಕಳೆದ ಐದು ದಶಕಗಳಿಂದ ರಂಗಭೂಮಿಯ ಸೇವೆಯನ್ನು ಮಾಡುತ್ತ ಬಂದಿದ್ದಾರೆ. ಮಲ್ಲೇಶಯ್ಯನವರು ಪೌರಾಣಿಕ ನಾಟಕಗಳಲ್ಲಿ ಎತ್ತಿದ ಕೈ. ವಿಶೇಷವಾಗಿ ಇವರ ಶ್ರೀ ಕೃಷ್ಣಸಂಧಾನ ನಾಟಕದ ‘ಕೃಷ್ಣನ’ಪಾತ್ರ ಜನಪ್ರಿಯಗೊಂಡಿದ್ದು ನೂರಾರು ಬಾರಿ ಕೃಷ್ಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿಗೆ ಇವರ ಸೇವೆಯನ್ನು ಪರಿಗಣಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ದೊರೆತಿವೆ.
ಮೂಲತ: ರೈತ ಕುಟುಂಬದವರಾದ ಇವರು, ನಾಟಕದ ಜೊತೆ ಜೊತೆಯಲ್ಲಿ ದನಗಳ ಜಾತ್ರೆಯಲ್ಲಿ ಕೂಡ ಪಾಲ್ಗೊಂಡು ಬಹುಮಾನ ಪಡೆದಿದ್ದಾರೆ.

Categories
ರಂಗಭೂಮಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಮೇಶ್ ಗೌಡ ಪಾಟೀಲ

ಕಳೆದ ೫೫ ವರ್ಷಗಳಿಂದ ರಂಗಭೂಮಿಯ ಸೇವೆ ಸಲ್ಲಿಸುತ್ತ ಬಂದಿರುವ ಶ್ರೀ ರಮೇಶ್ ಗೌಡ ಪಾಟೀಲ್ ಅವರು ಸಾಮಾಜಿಕ, ಪೌರಾಣಿಕ ನಾಟಕಗಳ ವೈವಿಧ್ಯಮಯ ಪಾತ್ರಗಳ ಮೂಲಕ ೩೦೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಉತ್ತರ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ತಾರಾನಗರದವರಾದ ಇವರು, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದು ೨೦೦೫ ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. ರಂಗಭೂಮಿಯ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿರಿಸಿರುವ ಶ್ರೀಯುತರು ವೃತ್ತಿರಂಗಭೂಮಿ ಸಮಾವೇಶ, ವಿಚಾರ ಸಂಕಿರಣ, ವೃತ್ತಿ ನಾಟಕೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಮೂಲಕ ನಾಟಕರಂಗದಲ್ಲಿ ಸಕ್ರಿಯರಾಗಿದ್ದಾರೆ.

Categories
ರಂಗಭೂಮಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪ್ರಕಾಶ್ ಬೆಳವಾಡಿ

ಶ್ರೀ ಪ್ರಕಾಶ್ ಬೆಳವಾಡಿ ಅವರು ಭಾರತೀಯ ರಂಗಭೂಮಿಯಲ್ಲಿ ಬಹು ದೊಡ್ಡ ಹೆಸರು. ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಸುಮಾರು ೭೨ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬೆಂಗಳೂರಿನ ಸೆಂಟರ್ ಫಾರ್ ಫಿಲ್ಕ್ ಅಂಡ್ ಡ್ರಾಮಾದ ಸಹ ಸಂಸ್ಥಾಪಕರು, ಯುವಪೀಳಿಗೆಗೆ ಚಿತ್ರ ನಿರ್ಮಾಣದಲ್ಲಿ ತರಬೇತಿ ನೀಡಲು ಸುಚಿತ್ರ ಫಿಲಂ ಸ್ಕೂಲ್ ಆಫ್ ಆರ್ಟ್ಸ್ ಸ್ಥಾಪಿಸಿದ್ದಾರೆ.
೨೦೦೨ ರಲ್ಲಿ ಇವರು ನಿರ್ದೇಶಿಸಿದ ಮೊದಲ ಚಿತ್ರ ‘ಸ್ಟಂಬಲ್’ ರಾಷ್ಟ್ರಪ್ರಶಸ್ತಿ ಪಡೆಯಿತು. ಇವರು ಹಲವು ಭಾಷೆಗಳಲ್ಲಿ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪನವರ ಮಹೋನ್ನತ ಕೃತಿ ‘ಪರ್ವ’ ಕಾದಂಬರಿಯನ್ನು ರಂಗರೂಪಕ್ಕೆ ಅಳವಡಿಸಿ, ‘ಪರ್ವ’ನಾಟಕ ನಿರ್ದೇಶಿಸಿ ಯಶಸ್ಸು ಕಂಡಿದ್ದಾರೆ.

Categories
ರಂಗಭೂಮಿ ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಫಕೀರಪ್ಪ ರಾಮಪ್ಪ ಕೊಂಡಾ

ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಫಕೀರಪ್ಪ ರಾಮಪ್ಪ ಕೊಂಡಾಯಿ ಗ್ರಾಮೀಣ ರಂಗಭೂಮಿ ಪ್ರತಿಭೆ, ಸಾಮಾಜಿಕ ಪೌರಾಣಿಕ ನಾಟಕ ಕಅಸುತ್ತ ಹಾರ್ಮೋನಿಯಮ್ ಮಾಸ್ತರ್ ಆಗಿ ಕಲಾಸೇವೆ ಮಾಡುತ್ತಿದ್ದಾರೆ. ಹೆಸರಾಂತ ನಾಟಕಗಳನ್ನು ನಿರ್ದೇಶನ ಮಾಡಿರುವ ಇವರು, ಶಿಗ್ಗಾಂವ ನಗರದಲ್ಲಿ ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಕಲಾಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಉಚಿತ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅವರ ಪ್ರತಿಭೆಗೆ ಸಾಕ್ಷಿಯಾಗಿ ಹಲವಾರು ಪ್ರಶಸ್ತಿ ಫಲಕಗಳು ಲಭಿಸಿವೆ.

Categories
ರಂಗಭೂಮಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ತಿಪ್ಪೇಸ್ವಾಮಿ ಆರ್.

ಸಂಗೀತ ಮತ್ತು ನಟನಾ ಕ್ಷೇತ್ರದ ದೈತ್ಯ ದೇಸಿ ಪ್ರತಿಭೆ ವಿದ್ವಾನ್ ತಿಪ್ಪೇಸ್ವಾಮಿ ಆರ್. ಪಾತ್ರಗಳಿಗೆ ಜೀವತುಂಬಿದ ಕಲಾವಿದರು, ಸಾವಿರಾರು ಶಿಷ್ಯರನ್ನು ರೂಪಿಸಿದ ಸಂಗೀತದ ಗುರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಉಪ್ಪಳಗೆರೆ ಗ್ರಾಮದ ತಿಪ್ಪೇಸ್ವಾಮಿ ಅವರದ್ದು ಕಲಾಕುಟುಂಬ. ಅಪ್ಪತಾತ ರಂಗಕಲಾವಿದರು, ಅಮ್ಮ ಜನಪದ ಗಾಯಕಿ, ಕಲೆ ರಕ್ತಗತ. ೬ನೇ ವಯಸ್ಸಿಗೇ ರಂಗಪ್ರವೇಶ. ಭಕ್ತಮಾರ್ಕಂಡೇಯ, ಅಣ್ಣತಂಗಿ, ಶ್ರೀಕೃಷ್ಣಗಾರುಡಿ, ಕುರುಕ್ಷೇತ್ರ ಮುಂತಾದ ಪೌರಾಣಿಕ-ಐತಿಹಾಸಿಕ ನಾಟಕಗಳಲ್ಲಿ ನಟನೆ. ದುರ್ಗದ ಸಿಂಹಿಣಿ ಒನಕೆ ಓಬವ್ವ ನಾಟಕದ ಅಸಂಖ್ಯ ಪ್ರದರ್ಶನಗಳಲ್ಲಿ ಮಿಂಚಿದ ಕಲಾವಿದ. ರಂಗ ಸಂಗೀತ- ನಿರ್ದೇಶನದಲ್ಲೂ ಎತ್ತಿದ ಕೈ. ಗಡಿಯಾರ ರಿಪೇರಿಯ ವೃತ್ತಿಯ ನಡುವೆ ಶಾಸ್ತ್ರೀಯ ಸಂಗೀತದ ಕಲಿಕೆ, ವಿದ್ವತ್ ಸಂಪಾದನೆ. ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಸ್ಥಾಪಿಸಿ ೧೨೦೦ಕ್ಕೂ ಅಧಿಕ ಶಿಷ್ಯರ ರೂಪಿಸಿದ ಗುರು. ೩೨ ವರ್ಷಗಳ ಸಾರ್ಥಕ ಕಲಾಸೇವೆ. ಹತ್ತಾರು ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಬೆಳಗಿದ ಕಲಾಚೇತನ.

Categories
ರಂಗಭೂಮಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಷಡಾಕ್ಷರಪ್ಪ ಹೊಸಮನಿ

ವೃತ್ತಿ ರಂಗಭೂಮಿ ಕಲಾವಿದರ ಪರಂಪರೆಯ ಹಿರಿಯ ಕೊಂಡಿ ಹೆಚ್. ಷಡಾಕ್ಷರಪ್ಪ, ಆರೂವರೆ ದಶಕಗಳ ಕಾಲ ಕಲೆಯನ್ನೇ ಉಸಿರಾಡಿದ ಅಪರೂಪದ ಕಲಾಚೇತನ,
ಬಳ್ಳಾರಿ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಬಾಗಳಿ ಗ್ರಾಮದ ಷಡಾಕ್ಷರಪ್ಪ ಬಹುಶ್ರುತ ಸಾಧಕರು. ಬಹುಮುಖ ಆಸಕ್ತಿಯಿಂದ ರಂಗದ ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡವರು. ನಟನೆ, ರಂಗಗಾಯನ, ಜನಪದ, ಯಕ್ಷಗಾನ, ಭಜನೆ, ಧಾರ್ಮಿಕ ಕಾರ್ಯಕ್ರಮ, ಸಂಗೀತ ಕಲಿಸುವಿಕೆಯಲ್ಲಿ ಅವಿರತ ನಿರತರು. ನಟನೆಯೇ ಪ್ರಧಾನ, ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ಹಲವು ಬಗೆಯ ಪಾತ್ರಗಳ ಪೋಷಣೆ, ಗೋಣಿಬಸವೇಶ್ವರ ನಾಟಕದಲ್ಲಿ ಗೋಣಿಬಸವೇಶ್ವರ ಪಾತ್ರಕ್ಕೆ ೧೦೮೯ ಬಾರಿ ಬಣ್ಣ ಹಚ್ಚಿದ ದಾಖಲೆ. ಮಕ್ಕಳಿಗೆ ಸಂಗೀತ ಪಾಠ ಹೇಳಿದ ಗುರು, ನಾಟಕಗಳ ಮೂಲಕ ಸಾಮಾಜಿಕ ಜಾಗೃತಿಯ ಸಂದೇಶ ಸಾರಿದ ಹಿರಿಮೆ, ಅರವತ್ತೈದು ವರ್ಷಗಳಿಂದಲೂ ಅವಿರತವಾಗಿ ಕಲಾಸೇವೆಗೈದ ಕಲಾವಿದರು. ಬಸವರತ್ನ ಪ್ರಶಸ್ತಿ, ಮೈಸೂರಿನ ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ಗೆ ಭಾಜನರಾದ ಕಲಾವಂತರು.

Categories
ರಂಗಭೂಮಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಅನಸೂಯಮ್ಮ

ರಂಗಭೂಮಿಯನ್ನೇ ಬದುಕಿನ ವೃತ್ತಿ-ಭಾವದ ಬುತ್ತಿಯಾಗಿಸಿಕೊಂಡ ಕಲಾವಿದೆ ಅನಸೂಯಮ್ಮ, ಐದು ದಶಕಗಳ ಕಲಾನುಭವದ ನಟ, ಹಾಡುಗಾರ್ತಿ, ಪಕ್ಕವಾದ್ಯಪ್ರವೀಣೆ.
ಸಿಳ್ಳೇಕ್ಯಾತ ಕುಟುಂಬದ ಅಪ್ಪಟ ವೃತ್ತಿ ರಂಗಕಲಾವಿದೆ ಅನಸೂಯಮ್ಮ ತುಮಕೂರು ಜಿಲ್ಲೆಯ ಪ್ರತಿಭೆ, ಶಿರಾ ತಾಲ್ಲೂಕಿನ ನಾದೂರು ಹೋಬಳಿಯ ಉದ್ದರಾಮನಹಳ್ಳಿ ಕ್ರಾಸ್ ಹುಟ್ಟೂರು. ನಟನೆ-ಹಾಡುಗಾರಿಕೆ ಪರಂಪರಾನುಗತ ಬಂದ ಕಲಾಬಳುವಳಿ, ಅಕ್ಷರ ಕಲಿಕೆ ಅಸಾಧ್ಯದ ಮಾತು. ಅನಕ್ಷರಸ್ಥ ಬದುಕಿಗೆ ಕಲೆಯೇ ಆಸರೆ, ಕಲೆಯ ಹಲವು ಪ್ರಕಾರಗಳಲ್ಲಿ ಹಿಡಿತ ಸಾಧಿಸಿದ ಮೇಲೆ ಬಹುಮುಖಿ ಆಸಕ್ತಿಯ ಬಹುಮುಖಿ ಪ್ರತಿಭೆ. ೧೬ರ ಹರೆಯದಲ್ಲೇ ಕಲಾರಂಗ ಪ್ರವೇಶ. ನಟಿ, ಸಂಗೀತಗಾರ್ತಿ, ಹಾರ್ಮೋನಿಯಂ ಮತ್ತು ಕೀಬೋರ್ಡ್ ವಾದ್ಯಗಾರ್ತಿಯಾಗಿ ಅವ್ಯಾಹತ ಸೇವೆ. ಬರೋಬ್ಬರಿ ೫೦ ವರ್ಷಗಳ ಸುದೀರ್ಘ ರಂಗಾನುಭವ. ೭೬೦೦ಕ್ಕೂ ಹೆಚ್ಚು ಪ್ರದರ್ಶನದಲ್ಲಿ ಬಣ್ಣ ಹಚ್ಚಿದ ಹಿರಿಮೆ, ಹಾಡಿ ರಂಗಪ್ರೇಮಿಗಳ ತಣಿಸಿದ ಗರಿಮೆ. ವೃತ್ತಿ ರಂಗಭೂಮಿಯ ಅಗ್ಗಳಿಕೆ ಹೆಚ್ಚಿಸಿದ ಕಲಾವಿದೆ.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಭಾರ್ಗವಿ ನಾರಾಯಣ

ಕನ್ನಡ ರಂಗಭೂಮಿ ಕಂಡ ಪ್ರತಿಭಾವಂತ ಕಲಾವಿದೆಯರಲ್ಲಿ ಭಾರ್ಗವಿ ನಾರಾಯಣ್ ಅವರದ್ದು ಅಚ್ಚಳಿಯದ ಹೆಸರು.ರಂಗಭೂಮಿ, ಕಿರುತೆರೆ, ಸಿನಿಮಾ ಕ್ಷೇತ್ರದಲ್ಲಿ ಬೆಳಗಿದ ಪ್ರತಿಭೆ.
ಜನನ.
ಬೆಂಗಳೂರು ಭಾರ್ಗವಿ ನಾರಾಯಣರ ಹುಟ್ಟೂರು. ೧೯೩೮ರ ಫೆಬ್ರವರಿ ೪ರಂದು ಡಾ.ಎಂ.ರಾಮಸ್ವಾಮಿ-ನಾಮಗಿರಿಯಮ್ಮ ದಂಪತಿಯ ಪುತ್ರಿ ಬಿಎಸ್ಸಿ ಪದವೀಧರೆ, ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ. ಇಎಸ್‌ಐ ಕಾರ್ಪೋರೇಷನ್‌ನಲ್ಲಿ ವ್ಯವಸ್ಥಾಪಕರಾಗಿ ಸೇವೆ. ಪ್ರೌಢಶಾಲೆಯಲ್ಲಿದ್ದಾಗಲೇ ರಂಗಭೂಮಿಯ ಬಗ್ಗೆ ಮೊಳಕೆಯೊಡೆದ ಆಸಕ್ತಿ, ಶಾಲಾಕಾಲೇಜುಗಳ ನಾಟಕಗಳಲ್ಲಿ ಅಭಿನಯ, ಎರಡು ಬಾರಿ ರಾಜ್ಯ ನಾಟಕ ಸ್ಪರ್ಧೆಯಲ್ಲಿ ಉತ್ತಮ ನಟಿ ಪ್ರಶಸ್ತಿ, ನಟನೆ ಜೊತೆಗೆ ನಿರ್ದೇಶನ, ಮಕ್ಕಳಿಗಾಗಿ ನಾಟಕ ರಚನೆ, ರಂಗಾನುಭವ ಸಿನಿಮಾ-ಕಿರುತೆರೆಗೂ ವಿಸ್ತಾರ. ನಟನೆ ಜೊತೆಗೆ ಚಿತ್ರಕಥೆ, ಸಂಭಾಷಣೆ ಬರೆದ ಹಿರಿಮೆ.ಪಲ್ಲವಿ, ಮುಯ್ಯ, ಅಂತಿಮಘಟ್ಟ, ಜಂಬೂಸವಾರಿ, ಇತ್ತೀಚಿನ ರಾಜಕುಮಾರ ಸೇರಿ ೨೨ ಚಿತ್ರಗಳಲ್ಲಿ ನಟನೆ, ಕಿರುತೆರೆಯ ಧಾರಾವಾಹಿಗಳಲ್ಲೂ ಜನಪ್ರಿಯ. ಭಾರ್ಗವಿ ನಾರಾಯಣ ಲೇಖಕಿಯೂ ಸಹ. ಅವರ ‘ನಾನು ಭಾರ್ಗವಿ’ ಅನೇಕ ಮುದ್ರಣಗಳನ್ನು ಕಂಡ ಕೃತಿ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯತ್ವ ಗೌರವ ಪ್ರಶಸ್ತಿ, ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳಿಂದ ಭೂಷಿತರು.

Categories
ರಂಗಭೂಮಿ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವೈ.ಎಂ. ಪುಟ್ಟಣ್ಣಯ್ಯ

ಕಲಾವಿದ ದಂಪತಿಗಳ ಪುತ್ರ ವೈ.ಎಂ.ಪುಟ್ಟಣ್ಣಯ್ಯ ಎಳೆಯ ವಯಸ್ಸಿನಿಂದಲೇ ರಂಗಭೂಮಿಯ ಜೊತೆ ಜೊತೆಯಲ್ಲಿಯೇ ಬೆಳೆದವರು. ಆರಂಭದಲ್ಲಿ ಬಾಲನಟರಾಗಿ ಬಣ್ಣ ಹಚ್ಚಿದ ಇವರು ನಂತರ ಸಂಗೀತದತ್ತ ವಾಲಿದರು.

ರಂಗಗೀತೆಗಳನ್ನು ಕಂಚಿನ ಕಂಠದಿಂದ ಹಾಡುತ್ತಿದ್ದ ಪುಟ್ಟಣ್ಣಯ್ಯ ಅವರು ಹಾರ್ಮೋನಿಯಂ ವಾದ್ಯ ವಾದನವನ್ನು ಕಲಿತರು. ಮುಂದಿನ ದಿನಗಳಲ್ಲಿ ರಂಗಸಂಗೀತ ಶಿಕ್ಷಕರೆಂದೇ ಹೆಸರಾಗಿ ಗುಬ್ಬಿ ಕಂಪನಿ, ಹೊನ್ನಪ್ಪ ಭಾಗವತರ್್ರ ಕಂಪನಿ, ಹಿರಣ್ಣಯ್ಯ ಮಿತ್ರಮಂಡಳಿ ಮೊದಲಾದ ವೃತ್ತಿ ನಾಟಕ ಕಂಪನಿಗಳಲ್ಲಿ ಹಾರ್ಮೋನಿಯಂ ನುಡಿಸುತ್ತ ಖ್ಯಾತಿ ಪಡೆದರು.

ವೃತ್ತಿ ನಾಟಕ ಕಂಪನಿಗಳೇ ಅಲ್ಲದೆ ಅನೇಕ ಹವ್ಯಾಸಿ ನಾಟಕ ತಂಡಗಳಿಗೆ ಕೆಲಸ ಮಾಡಿರುವ ಪುಟ್ಟಣ್ಣಯ್ಯ ಅವರು ರಂಗಾಯಣ ಹಾಗೂ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿಯೂ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪದ್ದಣ್ಣ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಚ್.ಕೆ. ರಾಮನಾಥ್

ನಟ, ನಿರ್ದೇಶಕ, ನಾಟಕಕಾರ, ಅಧ್ಯಾಪಕ, ಲೇಖಕರಾದ ಡಾ.ಎಚ್.ಕೆ. ರಾಮನಾಥ್ ಅವರದು ಬಹುಮುಖ ಪ್ರತಿಭೆ. ರಂಗದ ಬಹುರೂಪಿ. ಆರು ದಶಕಕ್ಕೂ ಮೀರಿದ ರಂಗಸೇವೆಯ ಹಿರಿಮೆಯ ರಂಗಕರ್ಮಿ.
ಮೈಸೂರು ವಿ.ವಿ ಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಪ್ರದರ್ಶಕ ಕಲೆಯಲ್ಲಿ ಪಿ.ಎಚ್.ಡಿ ಪದವಿ ಪಡೆದ ರಾಮನಾಥ್ ಕನ್ನಡ ಅಧ್ಯಾಪಕರು, ದೆಹಲಿಯ ಎನ್.ಸಿ.ಇ.ಆರ್.ಟಿ ಯ ನಿವೃತ್ತ ಶ್ರವಣ ಕಾರ್ಯಕ್ರಮ ನಿರ್ಮಾಪಕರು. ಬಾಲ್ಯದಲ್ಲೇ ಬಣ್ಣದ ಬೆಡಗಿಗೆ ಮನಸೋತವರು, ಮೈಸೂರಿನ ಸಮತಂತೋ, ಕಲಾಪ್ರಿಯ, ಅಮರ ಕಲಾಸಂಘ, ಶಿವಮೊಗ್ಗದ ಕಲಾಸೇವಾಸಂಘ ಮತ್ತಿತರ ಹವ್ಯಾಸಿ ತಂಡಗಳಲ್ಲಿ ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯ.ಆಕಾಶವಾಣಿಯಲ್ಲೂ ನಟನಾಪರ್ವ, ಹಲವು ಮಕ್ಕಳ ನಾಟಕಗಳ ನಿರ್ದೇಶಕರು. ರಂಗಭೂಮಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಲೇಖನಗಳು-ವಿಮರ್ಶೆಗಳ ರಚನೆ, ನಾಟಕ ಸ್ಪರ್ಧೆಗಳು-ಕಾರ್ಯಾಗಾರಗಳ ಆಯೋಜನೆ, ಉಪನ್ಯಾಸದಲ್ಲಿ ಸದಾ ನಿರತರು. ನಾಲ್ಕು ಮಕ್ಕಳ ನಾಟಕಗಳು ಸೇರಿ ೧೮ ಕೃತಿಗಳ ಕರ್ತೃ.ರಾಜ್ಯ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿ ಹತ್ತಾರು ಪ್ರಶಸ್ತಿ-ಗೌರವಗಳಿಂದ ಭೂಷಿತರು.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಎನ್. ಶಿವಲಿಂಗಯ್ಯ

ಕರ್ನಾಟಕ ರಂಗಭೂಮಿಯಲ್ಲಿ ಬಹುಮುಖಿ ಕಾರ್ಯಗಳ ಮೂಲಕ ಸೇವೆಗೈದವರು ಎನ್.ಶಿವಲಿಂಗಯ್ಯ. ಸಾಹಿತ್ಯ, ಸಂಸ್ಕೃತಿ, ರಂಗಭೂಮಿ, ಛಾಯಾಚಿತ್ರ ಮತ್ತು ದೃಶ್ಯಮಾಧ್ಯಮದಲ್ಲಿ ದುಡಿದ ಬಹುರೂಪಿ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯವರಾದ ಶಿವಲಿಂಗಯ್ಯ ಬಿಎಸ್ಸಿ ಪದವೀಧರರು.ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ, ಪ್ರವೃತ್ತಿಯಲ್ಲಿ ರಂಗಕಲಾವಿದ. ಬಾಲ್ಯದಿಂದಲೂ ಆಸಕ್ತಿ ಹುಟ್ಟಿಸಿದ್ದ ರಂಗಭೂಮಿಗೆ ೧೯೭೩ರಲ್ಲಿ ಪ್ರವೇಶ. ಆನಂತರ ಕತ್ತಲೆಬೆಳಕು, ದೊರೆ ಈಡಿಪಸ್, ತೆರೆಗಳು, ಗೋಕರ್ಣದ ಗೌಡಶನಿ, ಸಂಕ್ರಾಂತಿ, ಬೆಳೆದವರು, ಪಂಚಮ ಮುಂತಾದ ನಾಟಕಗಳಲ್ಲಿ ನಟನೆ, ಕ್ರಮೇಣ ನಿರ್ದೇಶನಕ್ಕೂ ಅಡಿ. ಬಾಬಾಸಾಹೇಬ್ ಅಂಬೇಡ್ಕರ್, ಬುದ್ಧ ಮತ್ತಿತರ ದಾರ್ಶನಿಕರ ಬದುಕಿನ ಸಂಗತಿಗಳನ್ನು ಅಳವಡಿಸಿ ನಾಟಕಗಳ ಪ್ರದರ್ಶನ. ೪೦ಕ್ಕೂ ಹೆಚ್ಚು ನಾಟಕಗಳು, ನೂರಾರು ರಂಗಪ್ರದರ್ಶನಗಳಿಗೆ ಸಾರಥಿ. ೨೫ಕ್ಕೂ ಹೆಚ್ಚು ಕಾರ್ಯಕ್ರಮಗಳ ನಿರೂಪಣೆ, ಮೂರು ನಾಟಕಗಳ ರಚನೆ, ಮೂರು ಕಿರುನಾಟಕಗಳಿಗೆ ರಂಗರೂಪ ನೀಡಿಕೆ, ಹಲವೆಡೆ ದಾರ್ಶನಿಕರ ಜೀವನಚರಿತ್ರೆಯ ಛಾಯಾಚಿತ್ರಗಳ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಿದ ಹಿರಿಮೆ. ಸಾಕ್ಷ್ಯಚಿತ್ರಗಳ ನಿರ್ಮಾಣ, ಸಾಂಸ್ಕೃತಿಕ ಶಿಬಿರಗಳ ಆಯೋಜನೆ, ಕನ್ನಡೇತರರಿಗೆ ಕನ್ನಡ ಕಲಿಕಾ ತರಬೇತಿ, ರಂಗಶಿಬಿರಗಳ ನಿರ್ದೇಶಕ ಮುಂತಾದ ಸ್ತುತ್ಯಾರ್ಹ ಕಾರ್ಯದಲ್ಲಿ ನಾಲ್ಕು ದಶಕಗಳಿಂದಲೂ ನಿರತರಾಗಿರುವ ವಿಶಿಷ್ಟ ಸಾಂಸ್ಕೃತಿಕ ಜೀವಿ.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಹೂಲಿ ಶೇಖ‌ರ್‌

ಬರವಣಿಗೆಯಿಂದಲೇ ರಂಗಭೂಮಿ, ಕಿರುತೆರೆ, ಸಾಹಿತ್ಯ ಕ್ಷೇತ್ರದಲ್ಲಿ ಮೈಲಿಗಲ್ಲಿನ ಸಾಧನೆ ಮಾಡಿದವರು ಹೂಲಿಶೇಖರ್, ಮೂಡಲಮನೆಯ ಸಂಭಾಷಣಕಾರರಾಗಿ ಜನಜನಿತರು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮದವರಾದ ಶೇಖರ್ ಹುಟ್ಟಿದ್ದು ೧೯೫೧ರ ಜೂನ್ ಒಂದರಂದು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಬರವಣಿಗೆ ಬಾಲ್ಯದಲ್ಲೇ ಅಂಟಿಕೊಂಡ ಹವ್ಯಾಸ. ೭೦ರ ದಶಕದಲ್ಲಿ ಕಥಾರಚನೆ ಮೂಲಕ ಸಾರಸ್ವತ ಲೋಕಕ್ಕೆ ೨೫೦ಕ್ಕೂ ಹೆಚ್ಚು ಕಥೆಗಳು, ೧೫ಕ್ಕೂ ಅಧಿಕ ಕಾದಂಬರಿಗಳನ್ನು ಬರೆದ ಹಿರಿಮೆ, ರಂಗಭೂಮಿಯಲ್ಲೇ ಹೆಚ್ಚು ಕ್ರಿಯಾಶೀಲರು. ೩೫ಕ್ಕೂ ಹೆಚ್ಚು ನಾಟಕಗಳ ಪೈಕಿ ವೃತ್ತಿ ನಾಟಕ ಕಂಪನಿಗಾಗಿ ಬರೆದ ನಾಟಕಗಳೂ ಉಂಟು. ಆಕಾಶವಾಣಿಗೆ ೧೫ ನಾಟಕಗಳು, ಹದಿನೈದಕ್ಕೂ ಹೆಚ್ಚು ಬೀದಿನಾಟಕಗಳು ಹೂಲಿಶೇಖರ್‌ರ ಸೃಜನಶೀಲತೆಗೆ ಸಾಕ್ಷಿಯಾಗಿವೆ. ೯೦ರ ದಶಕದ ಅಂತ್ಯದಲ್ಲಿ ಕಿರುತೆರೆ ಪ್ರವೇಶಿಸಿದ ಹೂಲಿಶೇಖರ್ ಗೆಳತಿ, ಸೌಭಾಗ್ಯವತಿ, ಕಿನ್ನರಿ, ಕಾವ್ಯಕಸ್ತೂರಿ, ಕಿಚ್ಚು, ಗಂಗಾ ಸೇರಿ ೨೫ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಸಾಹಿತ್ಯ ಒದಗಿಸಿದ್ದು ‘ಮೂಡಲಮನೆ’ಯ ಸಂಭಾಷಣೆಗೆ ನಾಡಿಗರೆಲ್ಲರೂ ತಲೆದೂಗಿದ್ದು ವಿಶೇಷ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳಿಗೆ ಪುರಸ್ಕೃತರಾಗಿರುವ ಹೂಲಿಶೇಖರ್‌ಗೆ ಸದಾಕಾಲಕ್ಕೂ ಬರಹವೇ ಬದುಕು.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಪಾಲ್ ಸುದರ್ಶನ್

ನಟ, ನಾಟಕಕಾರ, ರಂಗಕರ್ಮಿ, ನಿರ್ದೇಶಕ, ಬರಹಗಾರರಾಗಿ ಕನ್ನಡ ರಂಗಭೂಮಿಯಲ್ಲಿ ಹೆಜ್ಜೆಗುರುತು ಮೂಡಿಸಿರುವ ವಿಶಿಷ್ಟ ಪ್ರತಿಭೆ ಪಾಲ್ ಸುದರ್ಶನ್, ಚಲನಚಿತ್ರ-ಕಿರುತೆರೆಯಲ್ಲೂ ಮಿಂಚಿದ ಪ್ರತಿಭಾಶಾಲಿ.
ಬೆಂಗಳೂರಿನ ಮೂಲದವರಾದ ಪಾಲ್ ಸುದರ್ಶನ್ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವೀಧರರು. ಕೆ.ಎಂ.ಎಫ್ ಉದ್ಯೋಗಿಯಾಗಿ ನೆಲೆ ಕಂಡುಕೊಂಡವರು. ಕ್ರಿಯಾಶೀಲತೆ-ಸೃಜನಶೀಲತೆ ಪಾಲ್‌ ಹುಟ್ಟುಗುಣ. ಕಾಲೇಜು ದಿನಗಳಿಂದಲೂ ಬರವಣಿಗೆಯ ಗೀಳು. ರಂಗದಿಗ್ಗಜ ದಿ|| ಆರ್.ನಾಗೇಶ್-ಸಿ.ಜಿ.ಕೆ ಅವರ ಸಖ್ಯದಿಂದ ರಂಗಭೂಮಿಗೆ ಪಾದಾರ್ಪಣೆ. ನಟ, ನಾಟಕಕಾರ, ರಂಗಕರ್ಮಿಯಲ್ಲದೆ ರಂಗಪತ್ರಿಕೆ ಸೂತ್ರಧಾರದ ಸಂಪಾದಕನಾಗಿಯೂ ಸೇವೆ. ಹವ್ಯಾಸಿ ರಂಗತಂಡಗಳಲ್ಲಿ ಸದಾ ಸಕ್ರಿಯ. ಕಿರುತೆರೆ-ಚಲನಚಿತ್ರಕ್ಕೂ ಅಡಿ, ವರನಟ ಡಾ.ರಾಜ್‌ಕುಮಾರ್ ಅವರ ಆಕಸ್ಮಿಕ, ಶಬ್ದವೇದಿ ಚಿತ್ರಕ್ಕೆ ಸಂಭಾಷಣಕಾರರಾಗಿ ದುಡಿದವರು. ೧೨ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯ ಸೇವೆ. ಕಿರುತೆರೆಯ ಅನೇಕ ಧಾರಾವಾಹಿ, ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳಿಗೆ ಅಕ್ಷರಸೇವೆ-ನಿರ್ದೇಶನ. ೭೦ಕ್ಕೂ ಹೆಚ್ಚು ಸಣ್ಣಕಥೆಗಳು, ಮೂರು ಕಾದಂಬರಿಗಳನ್ನು ಬರೆದಿರುವ ಪಾಲ್ ಸುದರ್ಶನ್ ಅವರದು ಎಂದಿಗೂ ಬತ್ತದ ಉತ್ಸಾಹ, ಕ್ರಿಯಾಶೀಲ ನಡೆಯಿಂದಲೇ ಸದಾ ಸದ್ದು ಮಾಡುವ ಪ್ರತಿಭೆ. ರಾಜ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿಗಳಿಂದ ಭೂಷಿತರು.

Categories
ರಂಗಭೂಮಿ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಪರಶುರಾಮ ಸಿದ್ಧಿ

ವನವಾಸಿಗಳಾದ ಸಿದ್ಧಿ ಜನಾಂಗದ ಶ್ರೇಯೋಭಿವೃದ್ಧಿಗೆ ಪರಿಶ್ರಮಿಸಿದ ಸಾರ್ಥಕ ಜೀವಿ ಪರಶುರಾಮ ಗಿರಿಗೋಲಿ ಸಿದ್ಧಿ, ಗಾಯನ, ಸಂಘಟನೆ, ನಟನಾ ರಂಗದಲ್ಲಿ ಅನುಪಮ ಸೇವೆಗೈದಿರುವ ಸಾಧಕರು.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಹತ್ತಿರದ ಅಣಲೇಸರ ಪರಶುರಾಂ ಸಿದ್ಧಿ ಅವರ ಜನ್ಮಸ್ಥಳ.ಗಿರಿಗೋಲಿ ಸಿದ್ಧಿ-ಲಕ್ಷ್ಮಿ ದಂಪತಿಯ ಸುಪುತ್ರರು. ವನವಾಸಿಗಳಾದ ಪರಶುರಾಮ ಸಿದ್ಧಿ, ಓದಿದ್ದು ಏಳನೇ ತರಗತಿವರೆಗೆ ಮಾತ್ರ ಆದರೆ, ಬಾಲ್ಯದಿಂದ ಕಾಡಿದ ಕಲಾಸಕ್ತಿಯಿಂದ ಸಿದ್ಧಿಜನಾಂಗದ ಪ್ರಮುಖ ಜನಪದ ಕಲಾಪ್ರಕಾರವಾದ ಡಮಾಮಿ ನೃತ್ಯ ಕಲಿಕೆ. ಎಲ್ಲೆಡೆ ಪ್ರದರ್ಶನ, ನಟನೆಯಲ್ಲೂ ಆಸಕ್ತ ಪರಶುರಾಮ ಸಿದ್ಧಿ ಹೆಗ್ಗೋಡಿನ ನೀನಾಸಂನ ಹಲವಾರು ಶಿಬಿರಗಳ ನಾಟಕಗಳಲ್ಲಿ ನಟಿಸಿದ ಕಲಾವಿದರು. ಡಮಾಮಿ ಪುಗಡಿ ತಂಡ ಸ್ಥಾಪಿಸಿ ಮೂರು ದಶಕಗಳಿಂದಲೂ ಜನಾಂಗದ ಜನಪದ ಕಲೆಯ ಪ್ರಚುರಪಡಿಸುವಿಕೆ. ಚಲನಚಿತ್ರಗಳಲ್ಲೂ ಅಭಿನಯಿಸಿರುವ ನಟ. ಕರ್ನಾಟಕ ವನವಾಸಿ ಕಲ್ಯಾಣದ ಉಪಾಧ್ಯಕ್ಷರಾಗಿ, ಸಿದ್ಧಿ ಟ್ರಸ್ಟ್‌ನ ಅಧ್ಯಕ್ಷರಾಗಿ ಮಕ್ಕಳ ಶಿಬಿರ, ನಾಟಕಗಳ ಆಯೋಜನೆಯ ಮೂಲಕ ಜನಾಂಗದ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಹೆಗ್ಗಳಿಕೆಯ ವಿಚಾರ. ಕೊಂಕಣಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೂ ಭಾಜನರಾಗಿರುವ ಪರಶುರಾಮ ಸಿದ್ಧಿ ಅಪ್ಪಟ ದೇಸೀ ಪ್ರತಿಭೆ, ಸದ್ದಿಲ್ಲದೆ ಸಾಧನೆಗೈದ ಮೌನಸಾಧಕರು.

Categories
ರಂಗಭೂಮಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಂಪಣ್ಣ ಕೋಗುಳಿ

ಕನ್ನಡ ರಂಗಭೂಮಿ ಕಂಡ ವಿಶಿಷ್ಟ ಕಲಾವಿದರು ಪಂಪಣ್ಣ ಕೋಗುಳಿ, ಸ್ತ್ರೀ ಹಾಗೂ ಪುರುಷ ಎರಡೂ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಪ್ರತಿಭಾವಂತರು. ನಾಟಕ ರಚನೆ, ನಿರ್ದೇಶನದಲ್ಲೂ ಛಾಪೊತ್ತಿದವರು.
ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗುಳಿ ಗ್ರಾಮದವರಾದ ಪಂಪಣ್ಣ ಅವರು ಓದಿದ್ದು ನಾಲ್ಕನೇ ತರಗತಿವರೆಗೆ ಮಾತ್ರ ಬೇಸಾಯವೇ ಬದುಕು, ಬಣ್ಣ ಹಚ್ಚಲು ಅಣ್ಣ ಉಮಾಪತಿಯೇ ಪ್ರೇರಣೆ. ಹದಿನಾಲ್ಕನೇ ವಯಸ್ಸಿನಲ್ಲಿ ಹುಟ್ಟೂರಿನಲ್ಲಿ ಸ್ತ್ರೀ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಅಡಿ, ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳ ನಿರ್ವಹಣೆ. ಆನಂತರ ಪುರುಷ ಪಾತ್ರಗಳಲ್ಲೂ ಜನಪ್ರಿಯ. ಅಂಗುಲಿಮಾಲಾ ನಾಟಕದ ಅಂಗುಲಿಮಾಲಾ ಪಾತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯ ಹಿರಿಮೆ. ರಕ್ತರಾತ್ರಿ ನಾಟಕದ ಎಲ್ಲಾ ಪಾತ್ರಗಳಲ್ಲಿ ನಟಿಸಿದ ಖುಷಿ. ನಿರ್ದೇಶನದಲ್ಲೂ ಗುರುತು. ಮೂರು ನಾಟಕ, ಒಂದು ಕವನಸಂಕಲನ ಹೊರತಂದಿರುವ ಸೃಜನಶೀಲರು. ಆಕಾಶವಾಣಿಯಲ್ಲೂ ಧ್ವನಿಮುದ್ರಿತ ನಾಟಕಗಳ ಪ್ರಸಾರ, ನಾಟಕ ಅಕಾಡೆಮಿಯ ಗೌರವಪ್ರಶಸ್ತಿ ಸೇರಿ ಹಲವು ಗೌರವಗಳಿಂದ ಸಂಪನ್ನರು.

Categories
ರಂಗಭೂಮಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪುಟ್ಟಸ್ವಾಮಿ

ದೇಸೀ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ ಕಲಾವಿದ ಪುಟ್ಟಸ್ವಾಮಿ, ನಟನೆಯ ಜೊತೆಜೊತೆಗೆ ಗಾಯನದಲ್ಲೂ ಸೇವೆ ಸಲ್ಲಿಸಿರುವ ಸಾಧಕರು.
ರಾಮನಗರ ಜಿಲ್ಲೆಯ ಹಳ್ಳಿಗಾಡಿನ ಪ್ರತಿಭೆ ಪುಟ್ಟಸ್ವಾಮಿ, ಚನ್ನಪಟ್ಟಣ ತಾಲ್ಲೂಕಿನ ಮಳೂರು ಹುಟ್ಟೂರು. ಎಳವೆಯಿಂದಲೂ ರಂಗಭೂಮಿಯ ಸೆಳೆತಕ್ಕೆ ಒಳಗಾದವರು. ದೇಸೀ ರಂಗಭೂಮಿಯಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚುತ್ತಲೇ ಅರಳಿದವರು. ದಶಕಗಳ ಕಾಲ ರಂಗಸೇವೆಗೈದವರು. ಶಾಲಾ ಕಾಲೇಜುಗಳು, ಸಂಘಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದವರು. ಶಾಲಾ ಮಕ್ಕಳಿಗೆ ನಗೆಹನಿಗಳು, ಶಿಶುಗೀತೆಗಳು, ದೇವರನಾಮಗಳನ್ನು ಹೇಳಕೊಟ್ಟು ತಮ್ಮಲ್ಲಿನ ಕಲೆಯನ್ನು ಹೊಸ ಪೀಳಿಗೆಗೆ ಹಂಚಿದವರು. ಇಳಿವಯಸ್ಸಿನಲ್ಲೂ ಅವರದ್ದು ಬತ್ತದ ಉತ್ಸಾಹ. ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನಗಳನ್ನು ಪಡೆದವರು. ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವುದು ಪುಟ್ಟಸ್ವಾಮಿ ಅವರ ಪ್ರತಿಭೆಯ ಮತ್ತೊಂದು ಮಜಲು, ೮೫ರ ಇಳಿವಯಸ್ಸಿನಲ್ಲೂ ಸಕ್ರಿಯವಾಗಿರುವ ಅವರು ಅನೇಕ ಗೌರವಗಳಿಗೆ ಭಾಜನರು.

Categories
ರಂಗಭೂಮಿ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್.ಎನ್.ರಂಗಸ್ವಾಮಿ

ಕನ್ನಡ ವೃತ್ತಿರಂಗಭೂಮಿಯಲ್ಲಿ ನಟ, ನಿರ್ದೇಶಕ ಮತ್ತು ನಾಟಕಕಾರರಾಗಿ ವಿಶಿಷ್ಟ ಛಾಹೊತ್ತಿದವರು ಎಸ್.ಎನ್.ರಂಗಸ್ವಾಮಿ, ಐವತ್ತು ವರ್ಷಗಳ ಸುದೀರ್ಘ ರಂಗಸೇವೆಗೈದ ಸಾಧಕರು. ವೃತ್ತಿಯಲ್ಲಿ ಕ್ಷೌರಿಕ, ಪ್ರವೃತ್ತಿಯಲ್ಲಿ ರಂಗಕರ್ಮಿ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದಲ್ಲಿ ನೆಲೆಸಿರುವ ಎಸ್.ಎನ್.ರಂಗಸ್ವಾಮಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದು ನಟನಾಗಿ. ಆನಂತರ ನಾಟಕ ನಿರ್ದೇಶನ-ರಚನೆಗೆ ವಿಸ್ತಾರ. ದುಡುಕಿ ಹೋದ ಮಗ, ಹುಡುಕಿ ಬಂದ ಸೊಸೆ, ಶೀಲಕೊಟ್ಟರೂ ಸೊಳೆಯಲ್ಲ, ಕೊರಳೊಂದು ತಾಳಿ ಎರಡು, ಹುಡುಗಿ ಮೆಚ್ಚಿದ ಹುಂಬ, ಶಿಕ್ಷಣ ನಮ್ಮ ರಕ್ಷಣೆ ಮುಂತಾದವು ರಂಗಸ್ವಾಮಿ ರಚಿತ ನಾಟಕಗಳು. ವೃತ್ತಿರಂಗಭೂಮಿಯಲ್ಲಿ ಹೆಸರಾದ ಕೆ.ಬಿ.ಆರ್.ಡ್ರಾಮಾ ಕಂಪನಿ, ಗಜಾನನ ಡ್ರಾಮಾ ಕಂಪನಿ ಇನ್ನಿತರ ಕಂಪನಿಗಳು ಇವರ ನಾಟಕಗಳನ್ನು ನೂರಾರು ಹಳ್ಳಿಗಳಲ್ಲಿ ಪ್ರದರ್ಶಿಸಿವೆ. ಪ್ರೇಕ್ಷಕರ ಚಪ್ಪಾಳೆಯೇ ಪ್ರಶಸ್ತಿಯೆಂದು ಭಾವಿಸಿ ರಂಗಬದ್ಧತೆಯಿಂದ ಬಾಳ್ವೆ ಮಾಡಿರುವ ರಂಗಸ್ವಾಮಿ ಅವರ ರಂಗಸಾಧನೆ ಕುರಿತು ಪತ್ರಿಕೆಗಳಲ್ಲಿ ಹತ್ತಾರು ಲೇಖನಗಳು ಪ್ರಕಟಗೊಂಡು ಸಾರ್ಥಕತೆಯ ಭಾವ ತಂದಿದೆ.

Categories
ರಂಗಭೂಮಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಚಂದ್ರಕುಮಾರ್ ಸಿಂಗ್

ಕರ್ನಾಟಕ ಹಿರಿಯ ರಂಗಕರ್ಮಿಗಳಲ್ಲಿ ಒಬ್ಬರಾದ ಚಂದ್ರಕುಮಾರ್ ಸಿಂಗ್ ರಂಗಭೂಮಿಯಲ್ಲಿಯೇ ತಮ್ಮ ಬದುಕನ್ನ ಕಂಡುಕೊಂಡವರು. ಅಭಿನಯ, ಸಂಘಟನೆ, ಬೆಳಕು ವಿನ್ಯಾಸ, ರಂಗಸಜ್ಜಿಕೆ ಹೀಗೆ ನಾಟಕ ರಂಗದ ಎಲ್ಲ ವಿಭಾಗಗಳಲ್ಲಿಯೂ ದುಡಿದವರು. ಹಯವದನ, ಸಂಕ್ರಾಂತಿ, ಹ್ಯಾಬ್ಲೆಟ್, ತಬರನ ಕತೆ, ಮೊದಲಾದ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ರಂಗಕ್ಕೆ ತಂದಾಗ ಅದಕ್ಕೆ ರಂಗವಿನ್ಯಾಸ ಮತ್ತು ಬೆಳಕಿನ ವಿನ್ಯಾಸಗಳ ಮೂಲಕ ಜೀವ ತುಂಬಿದವರು ಚಂದ್ರಕುಮಾರ್ ಸಿಂಗ್,
ಬೀದಿ ನಾಟಕ, ಮೂಕಾಭಿನಯ, ಕ್ಷೇತ್ರಗಳಲ್ಲಿ ಚಂದ್ರಕುಮಾರ್ ಸಿಂಗ್ ತಮ್ಮ ಪ್ರತಿಭೆಯನ್ನು ತೋರಿದವರು. ನಾಡಿನ ಹಿರಿಯ ರಂಗಕರ್ಮಿಗಳೊಡನೆ ಸಕ್ರಿಯ ಸಂವಹನವನ್ನಿಟ್ಟುಕೊಂಡಿರುವ ಚಂದ್ರಕುಮಾರ್ ಸಿಂಗ್ ಬೆಳಕು ಮತ್ತು ರಂಗವಿನ್ಯಾಸ ತಜ್ಞರಾಗಿ ಅನೇಕ ಶಿಬಿರಗಳನ್ನು ಸಹ ನಡೆಸಿಕೊಟ್ಟಿದ್ದಾರೆ.
ಸರ್ಕಾರದ ಪಠ್ಯಪುಸ್ತಕ ಸಮಿತಿಯಲ್ಲಿ ಕೆಲಸ ಮಾಡಿರುವ ಚಂದ್ರಕುಮಾರ್ ಸಿಂಗ್ ಚಲನಚಿತ್ರ ಹಾಗೂ ಕಿರುತೆರೆಯಲ್ಲಿಯೂ ಅಭಿನಯಿಸಿದ್ದಾರೆ. ಅವರ ಸೇವೆ ಸಾಧನೆಗೆ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಸಂದಿವೆ.

Categories
ರಂಗಭೂಮಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಉಮಾರಾಣಿ ಬಾಲಗಿಡದ

ಕರ್ನಾಟಕದ ವೃತ್ತಿ ಹಾಗೂ ಗ್ರಾಮೀಣ ನಾಟಕಗಳ ಹೆಸರಾಂತ ನಟಿ ಉಮಾರಾಣಿ ಇಳಕಲ್ ಅವರು ಹಾಸ್ಯದ ಪಾತ್ರಗಳಿಗೆ ಬಹಳ ಹೆಸರುವಾಸಿ.
ಅನೇಕ ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ನಕ್ಕು ನಲಿಸಿದ ಅಸಾಧಾರಣ ನಟಿ ಇವರು. ಹವ್ಯಾಸಿ ರಂಗಭೂಮಿಯಲ್ಲಿಯೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಉಮಾರಾಣಿ ಅವರು ತುಘಲಕ್, ಜೋಕುಮಾರಸ್ವಾಮಿ, ತಲೆದಂಡದಂತಹ ಪ್ರಯೋಗಶೀಲ ನಾಟಕಗಳಲ್ಲಿಯೂ ಪಾತ್ರ ವಹಿಸಿದ ಅಪರೂಪದ ಕಲಾವಿದೆ.
ತಮ್ಮದೇ ಆದ ನಾಟಕ ಸಂಘ ಆರಂಭಿಸಿ, ಮಹಿಳೆಯರಿಗಾಗಿಯೇ ನಾಟಕವನ್ನು ನಿರ್ದೇಶಿಸಿರುವುದು ಇವರ ಇನ್ನೊಂದು ಸಾಹಸ, ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಇವರ ಪಾಲಿಗೆ ಬಂದಿವೆ.

Categories
ರಂಗಭೂಮಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ರಾಮೇಶ್ವಲ ವರ್ಮ ರಂಗಭೂಮಿ (ಹವ್ಯಾಸಿ)

ಸಮತೆಂತೋ, ಸಮುದಾಯ, ಕಲಾಪ್ರಿಯ ತಂಡಗಳೊಂದಿಗೆ ಹಲವಾರು ನಾಟಕಗಳಲ್ಲಿ ನಟನೆ ಮತ್ತು ನಿರ್ದೇಶನ ಮಾಡಿರುವ ರಾಮೇಶ್ವರಿ ವರ್ಮಾ ಅವರು ಬಿ.ವಿ.ಕಾರಂತ, ನ.ರತ್ನ, ಪ್ರಸನ್ನ, ಸತ್ಯು ಅವರಂತಹ ನುರಿತ ನಿರ್ದೇಶಕರ ಗರಡಿಯಲ್ಲಿ ಪಳಗಿದವರು. ಕಿನಾರ ಎಂಬ ಕಿರಿಯರ ರಂಗನಾಟಕವನ್ನು ಹುಟ್ಟುಹಾಕಿದ ಹಿರಿಮೆ ಇವರದು. ಹಲವು ನಾಟಕಗಳಿಗೆ ನೇಪಥ್ಯ, ವಸ್ತ್ರವಿನ್ಯಾಸ, ರಂಗಸಜ್ಜಿಕೆಗಳನ್ನು ನಿರ್ವಹಿಸಿರುವ ರಾಮೇಶ್ವರಿ ವರ್ಮಾ ಮೈಸೂರು ವಿವಿಯಲ್ಲಿ ಅಧ್ಯಾಪಕರಾಗಿದ್ದರು. ತುಘಲಕ್, ಸಾಯೋ ಆಟ, ಹುಚ್ಚುಕುದುರೆ, ತಾಯಿ ಮುಂತಾದ ನಾಟಕಗಳಲ್ಲಿ ಇವರ ಅಭಿನಯ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಇವರ ಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

Categories
ರಂಗಭೂಮಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಹೆಚ್. ಹೇಮಲತಾ

ಸುಮಾರು ಆರು ದಶಕಗಳಿಂದ ರಂಗಭೂಮಿ ಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿರುವ ಟಿ.ಹೆಚ್. ಹೇಮಲತಾ ಬಾಲ್ಯದಿಂದಲೇ ರಂಗಾಸಕ್ತಿ ಹೊಂದಿ, ಭರತನಾಟ್ಯ, ಸಂಗೀತಾಭ್ಯಾಸ ಮಾಡಿ, ವೃತ್ತಿ ರಂಗಭೂಮಿ ಕಂಪನಿಗಳಲ್ಲಿ ದುಡಿದರು. ನಟರಾಜ ನಾಟ್ಯಸಂಘ, ಹೊಳೆಹಡಗಲಿ ಎಂಬ ಸ್ವಂತ ನಾಟಕ ಕಂಪನಿ ಕಟ್ಟಿದ ಇವರು ಹಲವಾರು ನಾಟಕಗಳನ್ನು ಪ್ರದರ್ಶಿಸಿದ್ದಾರೆ.
ಟಿ.ಎಚ್.ಹೇಮಲತಾ ಅವರು ಹಲವು ನಾಟಕಗಳನ್ನು ಪ್ರದರ್ಶಿಸುವ ಮೂಲಕ ನಾಟಕ ಚಟುವಟಿಕೆಗಳನ್ನು ಸಂಘಟಿಸುತ್ತಿರುವ ಹೇಮಲತಾ ಅವರು ಹೇಮಲತಾ ಕಲಾವೃಂದ, ತಿಪಟೂರು ಎಂಬ ಸಂಘವನ್ನು ಸಹ ಸ್ಥಾಪಿಸಿರುತ್ತಾರೆ.

Categories
ರಂಗಭೂಮಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಮೌಲಾಸಾಬ್ ಇಮಾಂಸಾಬ್ ನದಾಫ್ (ಅಣ್ಣಿಗೇರಿ)

ನಾಟಕಗಳ ತಾಲೀಮು ನೋಡುತ್ತ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡ ಮೌಲಾಸಾಬ್ ಇಮಾಂಸಾಬ್ ನದಾಫ್ ಆಕಸ್ಮಿಕವಾಗಿ ಬಣ್ಣದ ಬದುಕಿಗೆ ಕಾಲಿಟ್ಟವರು. ಮುಂದಿನ ನಾಲ್ಕು ದಶಕಗಳ ಕಾಲ ರಂಗಭೂಮಿಯಲ್ಲಿಯೇ ಬದುಕನ್ನು
ಕಂಡುಕೊಂಡವರು.
ಹಲವಾರು ನಾಟಕ ಕಂಪೆನಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ನದಾಫ್ ಅವರು ಪ್ರಸಿದ್ಧಿ ಪಡೆದದ್ದು ಸಾಮಾಜಿಕ ನಾಟಕಗಳಲ್ಲಿ, ಪೋಲೀಸನ ಮಗಳು ನಾಟಕದಲ್ಲಿನ ಅಭಿನಯಕ್ಕಾಗಿ ವಿಶೇಷ ಪ್ರಶಂಸೆ ಪಡೆದ ಮೌಲಾಸಾಬ್ ನದಾಫ್ ಅವರಿಗೆ ಈ ನಾಟಕ ಅಭಿನಯ ಪ್ರಶಸ್ತಿಗಳನ್ನು ದೊರಕಿಸಿಕೊಟ್ಟಿತು.
ವೃತ್ತಿ ರಂಗಭೂಮಿಯಲ್ಲಿ ಅನೇಕ ಪಾತ್ರಗಳಿಗೆ ಜೀವ ತುಂಬಿದ ಅಪರೂಪದ ಕಲಾವಿದರು ಮೌಲಾಸಾಬ್. ಇವರಿಗೆ ನಾಟಕ ಅಕಾಡೆಮಿ ಗೌರವ ಪುರಸ್ಕಾರ ಸಹ ದೊರೆತಿದೆ.

Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಲಲಿತಾಬಾಯಿ ಲಾಲಪ್ಪ ದಶವಂತ

ಕನ್ನಡ ರಂಗಭೂಮಿಯನ್ನು ಬೆಳಗಿದ ರಂಗಚೇತನಗಳಲ್ಲಿ ಲಲಿತಾಬಾಯಿ ಲಾಲಪ್ಪ ದಶವಂತ ಅವರೂ ಪ್ರಮುಖರು, ಬಯಲಾಟದ ಪಾರಿಜಾತ ಕಲಾವಿದೆ. ನಾಲ್ಕೂವರೆ ದಶಕಗಳಿಂದ ಕಲಾಸೇವಾ ನಿರತ ರಂಗಕರ್ಮಿ, ವಿಜಯಪುರದ ರಂಗಕೊಡುಗೆ ಲಲಿತಾಬಾಯಿ ಲಾಲಪ್ಪ ದಶವಂತ, ಬಾಲ್ಯದಲ್ಲೇ ಬಯಲಾಟದ ಬೆರಗಿಗೆ ಮನಸೋತ ಮನ. ೯ನೇ ವಯಸ್ಸಿಗೆ ‘ಪಾರಿಜಾತ ಬಯಲಾಟದಲ್ಲಿ ರುಕ್ಮಿಣ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಪ್ರವೇಶ. ಬಣ್ಣದ ಸಖ್ಯ ದೊರೆತ ಮೇಲೆ ಬದುಕೇ ಕಲಾಯಾನ, ಆರಂಭದ ಮೂರು ವರ್ಷ ಪಾರಿಜಾತ ಬಯಲಾಟ ಮತ್ತು ಲವ-ಕುಶ ದೊಡ್ಡಾಟದಲ್ಲಿ ನಟನೆ. ೧೨ನೇ ವಯಸ್ಸಿಗೆ ಸಾಮಾಜಿಕ ನಾಟಕಗಳಲ್ಲಿ ನಟಿಸಲು ಮುಂದಡಿ. ಅಣ್ಣತಂಗಿ, ದೀಪಾಮ ಸಂಗಮ, ಹುಡುಗಿ ಮೆಚ್ಚಿದ ಹುಂಬ, ಸಮಾಜಕ್ಕೆ ಶಿಕ್ಷೆ, ಚಿನ್ನದಗೊಂಬೆ, ಅತ್ತಿಗೆಗೆ ತಕ್ಕ ಮೈದುನ, ಹೆಣ್ಣು ಜಗದ ಕಣ್ಣು, ಗೌರಿಗೆದ್ದಳು, ಗರುಡ ರಾಜ್ಯದಲ್ಲಿ ಘಟಸರ್ಪ ಮುಂತಾದ ಸಾಮಾಜಿಕ ನಾಟಕ, ಕುರುಕ್ಷೇತ್ರ, ವೀರ ಅಭಿಮನ್ಯು ಪೌರಾಣಿಕ ನಾಟಕಗಳಲ್ಲೂ ನಟಿಸಿ ಸೈ ಎನಿಸಿಕೊಂಡ ಕಲಾವಿದೆ. ಮಹಾರಾಷ್ಟ್ರದಲ್ಲೇ ಬಹುತೇಕ ನಾಟಕ ಪ್ರದರ್ಶನಗಳಾಗಿರುವುದು ವಿಶೇಷ. ಹಳ್ಳಿಗಾಡಿನ ಜಾತ್ರಾಮಹೋತ್ಸವಗಳಲ್ಲಿ ಬೆಳಗಿದ ಕಲಾಚೇತನ. ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೂ ಭಾಜನವಾಗಿರುವ ರಂಗಪುಷ್ಪ.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಅಶೋಕ ಬಾದರದಿನ್ನಿ

ಹವ್ಯಾಸಿ ರಂಗಕರ್ಮಿಯಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ರಂಗಭೂಮಿಯನ್ನು ಕಟ್ಟಿ ಬೆಳೆಸುತ್ತಿರುವ ವಿರಳರಲ್ಲಿ ಒಬ್ಬರು ಶ್ರೀ ಅಶೋಕ ಬಾದರದಿನ್ನಿ ಅವರು.
೧೯೫೧ರಲ್ಲಿ ವಿಜಾಪುರ ಜಿಲ್ಲೆ ಅಚನೂರು ಗ್ರಾಮದಲ್ಲಿ ಜನನ. ಬಿ.ಎ. ಪದವೀಧರರು. ಬಾಲ್ಯದಿಂದಲೂ ರಂಗಭೂಮಿ ಕಡೆಗೆ ಒಲವು. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಡ್ವಾನ್ಸ್ ಡ್ರಾಮಾದಲ್ಲಿ ಡಿಪ್ಲೊಮಾ ಪದವಿ.
ಶ್ರೀಯುತರು ನಿರ್ದೇಶಿಸಿದ ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿ ಬಿ.ವಿ.ಕಾರಂತರ ಬೆನಕ ತಂಡಕ್ಕಾಗಿ ಹ್ಯಾಮ್ಮೆಟ್ ನಾಟಕ ನಿರ್ದೇಶನ, ಅಶೋಕ್ ಅವರು ನಿರ್ದೇಶಿಸಿದ ಸಂದರ್ಭ, ಸಂಕ್ರಾಂತಿ, ಸಿಂಗಾರೆವ್ವ ಮತ್ತು ಅರಮನೆ, ಶಾಕುಂತಲ ಅತ್ಯಂತ ಜನಪ್ರಿಯ ನಾಟಕಗಳು.
ಗೆಳೆಯರ ಜತೆಗೂಡಿ ಬೆಂಗಳೂರಿನಲ್ಲಿ ‘ಅಭಿನಯ ತರಂಗ’ ಭಾನುವಾರದ ರಂಗ ಶಾಲೆ ಸ್ಥಾಪಕರು. ಅಲ್ಲಿ ಅವರು ಪ್ರಾಂಶುಪಾಲರಾಗಿ ನಿರ್ದೇಶಿಸಿದ ‘ಕೋತಿಕತೆ’, ‘ಮಾ ನಿಷಾದ ನಾಟಕಗಳು ವಿಶೇಷ ತಂತ್ರದಿಂದ ಗಮನ ಸೆಳೆದವು. ಸಿರಿಗೆರೆ ತರಳಬಾಳು ಬೃಹನ್ಮಠದಲ್ಲಿ, ಬಾಗಲಕೋಟೆ, ವಿಜಾಪುರ ಜಿಲ್ಲೆಗಳಲ್ಲಿ ರಂಗ ತರಬೇತಿ ಶಿಬಿರ ನಡೆಸಿಕೊಟ್ಟಿರುವರು. ದ.ರಾ. ಬೇಂದ್ರೆ, ಗಿರೀಶ್ ಕಾರ್ನಾಡ್, ಲಂಕೇಶ್, ಬಿ.ವಿ.ವೈಕುಂಠ ರಾಜು ಅವರ ನಾಟಕಗಳನ್ನು ರಂಗದ ಮೇಲೆ ಅಳವಡಿಸಿದ ಕೀರ್ತಿ ಅಶೋಕ್ ಅವರದು.
ಶ್ರೀಯುತರು ರಂಗಭೂಮಿಯಲ್ಲಿ ಮಾಡಿರುವ ಸಾಧನೆಗಾಗಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಥಮ ವಿಶ್ವಕನ್ನಡ ಸಮ್ಮೇಳನದಲ್ಲಿ ಗೌರವ, ಕೆ.ವಿ.ಶಂಕರಗೌಡ ರಂಗಭೂಮಿ ಪ್ರಶಸ್ತಿ, ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಸೇವೆಗಾಗಿ ಸಾಣೇಹಳ್ಳಿ ಶ್ರೀಮಠದಿಂದ ಶ್ರೀ ಶಿವಕುಮಾರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳಿಗೆ ಭಾಜನರು ಶ್ರೀ ಅಶೋಕ ಬಾದರದಿನ್ನಿ.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬೈರೇಗೌಡ

ರಂಗಭೂಮಿ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಿರುವವರು ರಂಗನಟ, ಸಂಘಟಕ ಶ್ರೀ ಬೈರೇಗೌಡ ಅವರು.
೧೯೫೮ನೆ ಇಸ್ವಿಯಲ್ಲಿ ರಾಮನಗರ ಜಿಲ್ಲೆ ಕುರುಬರ ಹಳ್ಳಿಯಲ್ಲಿ ಜನನ. ಪದವಿ ಶಿಕ್ಷಣ ಪೂರೈಸಿ ಸಾಮಾಜಿಕ ಸೇವೆಗೆ ಪಾದಾರ್ಪಣೆ. ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಹಾಗೂ ಪದಾಧಿಕಾರಿಯಾಗಿ ಸೇವೆ.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ ಉಪನ್ಯಾಸಮಾಲೆ, ವಿಚಾರ ಸಂಕಿರಣ, ಚರ್ಚಾ ಸ್ಪರ್ಧೆ ಏರ್ಪಾಟು. ವಿವಿಧ ಬಗೆಯ ಸಾಹಿತ್ಯಕ ಕಾಠ್ಯ ಕ್ರಮಗಳ ಸಂಯೋಜನೆ. ಸುಮಾರು ೨೦ ವರ್ಷಗಳಿಂದ ನಾಡಿನ ವಿವಿಧೆಡೆ ಪೌರಾಣಿಕ ನಾಟಕೋತ್ಸವಗಳನ್ನು ಸಂಘಟಿಸುತ್ತ ಬಂದಿರುವುದು ಇವರ ಹೆಗ್ಗಳಿಕೆ. ಪೌರಾಣಿಕ ನಾಟಕಗಳಲ್ಲಿ ಪ್ರಧಾನಪಾತ್ರ ನಿರ್ವಹಿಸುತ್ತ ತಮ್ಮ ಅಭಿನಯದಿಂದ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಲಾಶ್ರೀ ಪ್ರಶಸ್ತಿ, ಕರ್ನಾಟಕ ಕಲಾರತ್ನ ಪ್ರಶಸ್ತಿ, ಉತ್ತಮ ನಾಗರೀಕ ಸೇವಾ ಪ್ರಶಸ್ತಿ, ರೋಟರಿ ಸೇವಾ ಪ್ರಶಸ್ತಿ, ಪರಿಸರ ಸೇವಾ ಪುರಸ್ಕಾರ, ಜಾನಪದ ಲೋಕೋತ್ಸವ ಪ್ರಶಸ್ತಿ ಮೊದಲಾದ ಗೌರವ ಪ್ರಶಸ್ತಿಗಳು ಶ್ರೀಯುತರಿಗೆ ಸಂದಾಯವಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಶ್ರೀ ಬೈರೇಗೌಡ ಅವರು.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಾಲತಿ ಸುಧೀರ್

ಮೋಡಿ ಮಾಡುವ ಕಂಠ, ಭಾವನಾತ್ಮಕ ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಳ್ಳುವ ಕಲಾವಿದೆ ಶ್ರೀಮತಿ ಮಾಲತಿ ಸುಧೀರ್ ಅವರು.
ಮಾಲತಿ ಅವರದು ಕಲಾವಿದರ ಕುಟುಂಬ. ಪತಿ ಸುಧೀರ್ ಅವರೂ ಕನ್ನಡ ಚಿತ್ರರಂಗದ ಹೆಸರಾಂತ ನಟರಾಗಿದ್ದವರು. ಈಗ ಅವರ ಪುತ್ರರೂ ಚಿತ್ರರಂಗದಲ್ಲಿರುವರು.
೧೯೭೭ರಲ್ಲಿ ವೃತ್ತಿ ರಂಗಭೂಮಿಗೆ ಪ್ರವೇಶ ಮಾಡಿದ ಕಳೆದ ೩೦ ವರ್ಷಗಳಿಂದ ವೃತ್ತಿ ರಂಗಭೂಮಿ ಸಂಘಟಕಿಯಾಗಿ ಮತ್ತು ನಟಿಯಾಗಿ ಅವರು ಕ್ರಿಯಾಶೀಲರು. ಅವರು ಸುಳ್ಯದ ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಗುಡಿಗೇರಿಯ ಶ್ರೀಸಂಗಮೇಶ್ವರ ನಾಟ್ಯ ಸಂಘ, ಕಮತಗಿಯ ಶ್ರೀಹುಚ್ಚೇಶ್ವರ ನಾಟ್ಯ ಸಂಘ ಹಾಗೂ ಮಿನುಗುತಾರೆ ಮಿತ್ರ ಮಂಡಳಿಗಳ
ಮೂಲಕ ನಟಿಯಾಗಿ ಬೆಳೆದವರು.
೧೯೯೮ರಲ್ಲಿ ಸುಧೀರ್ ಅವರು ಆರಂಭಿಸಿದ ‘ಕರ್ನಾಟಕ ಕಲಾವೈಭವ ಸಂಘ’ದ ಜವಾಬ್ದಾರಿ ಈಗ ಅವರ ಹೆಗಲ ಮೇಲಿದೆ. ವೃತ್ತಿ ರಂಗಭೂಮಿಯ ಉಳಿವಿನ ಜತೆಜತೆಗೆ ತಮ್ಮ ಕಲಾ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಹೋರಾಟ ನಡೆಸುತ್ತಿರುವ ಒಬ್ಬ ಸಮರ್ಥ ರಂಗ ಸಂಘಟಕಿ.
ಕುರುಕ್ಷೇತ್ರ, ರಕ್ತರಾತ್ರಿ, ಸಿಂಧೂರ ಲಕ್ಷ್ಮಣ, ಗೌಡರ ಗದ್ದಲ, ಭೂಮಿ ತೂಕದ ಹೆಣ್ಣು, ವರ ನೋಡಿ ಹೆಣ್ಣು ಕೊಡು- ಅವರು ಅಭಿನಯಿಸಿರುವ ಕೆಲ ನಾಟಕಗಳು, ಅವುಗಳಲ್ಲಿ ಅವರು ನಿರ್ವಹಿಸಿರುವ ಪಾತ್ರಗಳಲ್ಲಿ ಪ್ರಮುಖವಾದವು- ದೌಪತಿ, ಮದಹಂಸ, ಗಂಗಾ ಮತ್ತು ಶೈಲಜಾ.
ತಮ್ಮ ಅದ್ಭುತ ಪ್ರತಿಭೆಯಿಂದ ರಂಗಭೂಮಿ ಕಲಾವಿದೆಯಾಗಿ ಜನರ ಮೆಚ್ಚುಗೆಗೆ ಪಾತ್ರರಾದವರು ಶ್ರೀಮತಿ ಮಾಲತಿ ಸುಧೀರ್.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ.ಎಂ. ಕೃಷ್ಣೇಗೌಡ

ಬಾಲ್ಯದಲ್ಲೇ ನಾಟಕದಲ್ಲಿ ನಟಿಸಬೇಕೆಂಬ ಗೀಳು ಹತ್ತಿಸಿಕೊಂಡು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ ಕಲಾವಿದರು ಬಿ.ಎಂ.ಕೃಷ್ಣೇಗೌಡ ಅವರು.
ತಂದೆ ಮುನೇಗೌಡ ಅವರದು ನಟನೆಯಲ್ಲಿ ಎತ್ತಿದ ಕೈ. ಯಾವ ಪಾತ್ರವನ್ನಾದರೂ ಲೀಲಾಜಾಲವಾಗಿ ಅಭಿನಯಿಸುವ ಚತುರರು. ತಂದೆ ಅಭಿನಯಿಸಿದ ನಾಟಕಗಳನ್ನು ನೋಡಿಕೊಂಡು ಬೆಳೆದ ಕೃಷ್ಣೇಗೌಡರಿಗೆ ಸಹಜವಾಗಿಯೇ ರಂಗಭೂಮಿಯಲ್ಲಿ ಆಸಕ್ತಿ.
ನೌಕರಿಗೆ ಸೇರಿದ ಮೇಲೂ ವೃತ್ತಿ ಜತೆಗೆ ನಟಿಸುವ ಹವ್ಯಾಸ ಉಳಿಸಿಕೊಂಡವರು ಶ್ರೀಯುತರು. ಕನ್ನಡಪರ ಹೋರಾಟಗಳಲ್ಲಿ ಸಕ್ರಿಯರು. ‘ಮಾರೀಚನ ಬಂಧುಗಳು’, ‘ಮಳೆ ನಿಲ್ಲುವವರೆಗೆ’, ‘ಮಹಾಸ್ವಾಮಿ’, ಭೂಕಂಪದ ನಂತರ’ ಮೊದಲಾದ ನಾಟಕಗಳಲ್ಲಿ ನಿರ್ವಹಿಸಿರುವ ಪಾತ್ರಗಳು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿರುವುದು ಅವರ ಅಭಿನಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.
ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಪ್ರದರ್ಶಿಸಿದ ‘ಸಿಕ್ಕು’ ನಾಟಕ ಪ್ರಶಂಸೆ ಗಳಿಸಿದೆ.
೧೯೮೨ರಲ್ಲಿ ‘ಸಿಂಹಾಸನ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ. ಲೋಕೇಶ್ ಅವರ ನಿರ್ದೇಶನದ ‘ಭುಜಂಗಯ್ಯನ ದಶಾವತಾರ’ ಚಿತ್ರದ ಪಾತ್ರಕ್ಕೆ ಮದ್ರಾಸ್‌ನ ಸಂಸ್ಥೆಯೊಂದರಿಂದ ಉತ್ತಮ ಪೋಷಕ ನಟ ಪ್ರಶಸ್ತಿ ಸಂದಿದೆ. ‘ಕರಿಮಲೆಯ ಕಗ್ಗತ್ತಲು’ ಚಿತ್ರದ ಅಭಿನಯಕ್ಕೂ ಉತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರು. ಜೀವಮಾನದ ಸಾಧನೆಗಾಗಿ ‘ಮಾನು ಪ್ರತಿಷ್ಠಾನ’ ಪ್ರಶಸ್ತಿಯ ಗೌರವ
ಮುನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿರುವ ಕೃಷ್ಣೇಗೌಡರು ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಕ್ರಿಯಾಶೀಲರು.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ವಾಣಿ ಸರಸ್ವತಿ ನಾಯ್ಡು

ಭರತನಾಟ್ಯ, ಕಥಕ್ ಮತ್ತು ಕಥಕ್ಕಳಿ ನೃತ್ಯ ಪಟು, ರಂಗಭೂಮಿ ನಟಿ, ನೃತ್ಯಗುರು, ಕನ್ನಡ, ತೆಲುಗು, ತಮಿಳು, ಹಿಂದಿ, ಮರಾಠಿ ಭಾಷೆಬಲ್ಲ ಹಿರಿಯ ಕಲಾವಿದೆ ಶ್ರೀಮತಿ ವಾಣಿ ಸರಸ್ವತಿ ಅವರು.
೧೯೩೫ರಲ್ಲಿ ಜನನ. ಅಲಗೇರಿ ಜಟ್ಟೆಪ್ಪಾ ಕಂಪನಿಯ ಮೂಲಕ ತಮ್ಮ ೮ನೇ ವಯಸ್ಸಿನಲ್ಲಿ ರಂಗ ಪ್ರವೇಶ. ಚಿಕ್ಕಂದಿನಿಂದಲೇ ನೃತ್ಯಾಭ್ಯಾಸ ಪ್ರಾರಂಭಿಸಿ, ಶ್ರೀ ಗೋವಿಂದರಾಜ ಪಿಳ್ಳೆ ಮುಂಬೈ ಅವರಲ್ಲಿ ಭರತನಾಟ್ಯವನ್ನು ಹಾಗೂ ಮುಂಬೈನ ಶ್ರೀ ಗಣೇಶ ಪಾಂಡೆ ಮತ್ತು ಗುರು ಪಾಣಿಕರದ್ ಅವರಲ್ಲಿ ಕಥಕ್, ಕಥಕ್ಕಳಿಯಲ್ಲಿ ವಿಶೇಷ ತರಬೇತಿ ಪಡೆದರು. ನಾಟಕಗಳಲ್ಲಿ ನೃತ್ಯ ಕಲಾವಿದೆಯಾಗಿ ಪ್ರಸಿದ್ಧಿಗೆ ಬಂದರು. ಉತ್ತರ ಕರ್ನಾಟಕದ ಬಹುತೇಕ ಪ್ರಮುಖ ನಾಟಕ ಕಂಪನಿಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯ. ಮುಂಬೈಯ ಪೃಥ್ವಿರಾಜ ಕಪೂರ್ ಅವರ ಹಿಂದಿನಾಟಕ ಕಂಪನಿಯಲ್ಲಿ ಒಂದು ವರ್ಷ ಅಮೋಘ ನೃತ್ಯ ಪ್ರದರ್ಶನ ನೀಡಿ ‘ನಾಟ್ಯರಾಣಿ’ ಪ್ರಶಸ್ತಿ ಗಳಿಕೆ.
ನೃತ್ಯ ಶಾಲೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡಿಕೆ. ಇವರ ಶಿಷ್ಯರಲ್ಲಿ ಅನೇಕರು ವಿದೇಶಗಳಲ್ಲಿ ನೆಲೆಸಿದ್ದು ಅಲ್ಲಿ ನೃತ್ಯಶಾಲೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಮಹಿಳೆಯರಿಂದಲೇ ಅಭಿನಯಿಸಲ್ಪಡುವ ‘ಶ್ರೀ ಗುರುರಾಜ ಸ್ತ್ರೀ ನಾಟ್ಯ ಸಂಘ’ ಸ್ಥಾಪನೆ.
ಇವರ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ಅಲ್ಲದೇ ಅನೇಕ ಸಂಘ ಸಂಸ್ಥೆಗಳಿಂದ ಪುರಸ್ಕೃತರು.
ಅರವತ್ತನಾಲ್ಕು ವರ್ಷಗಳಿಂದ ನೃತ್ಯಸೇವೆ, ರಂಗಸೇವೆಯನ್ನು ವ್ರತದಂತೆ ಕೈಗೊಂಡು ಬಂದಿರುವ ಎಲೆಮರೆಯ ಹಿರಿಯ ಚೇತನ ಶ್ರೀಮತಿ ವಾಣಿ ಸರಸ್ವತಿ ಅವರು.

Categories
ರಂಗಭೂಮಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿ. ರಾಮಮೂರ್ತಿ

ರಂಗಭೂಮಿಯ ಎಲ್ಲ ವಿಭಾಗಗಳಲ್ಲಿ ಅಪಾರ ಪರಿಣತಿ ಸಾಧಿಸಿರುವ ವಿಶೇಷವಾಗಿ, ಬೆಳಕಿನ ಸಂಯೋಜನೆಯಲ್ಲಿ ನಿಷ್ಣಾತರಾಗಿರುವ ಪ್ರತಿಭಾವಂತ ರಂಗಕರ್ಮಿ ಶ್ರೀ ವಿ. ರಾಮಮೂರ್ತಿ,
೧೯೩೫ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀ ರಾಮಮೂರ್ತಿ ಬಾಲ್ಯದಿಂದಲೂ ನಾಟಕದ ಕಡೆಗೆ ಒಲವು ಹೊಂದಿದವರು. ರಾಷ್ಟ್ರೀಯ ನಾಟಕ ಶಾಲೆಯಿಂದ ಸ್ನಾತಕೋತ್ತರ ಪದವಿ, ರಂಗನಿರ್ವಹಣೆ ಹಾಗೂ ನಿರ್ದೇಶನದಲ್ಲಿ ವಿಶೇಷ ಅಧ್ಯಯನ, ಎನ್.ಎಸ್.ಡಿ. ರೆಪರ್ಟರೀ, ಯಾತ್ರಿಕ್ ಥಿಯೇಟರ್ ಮತ್ತು ನಾಯಿಕಾ ರಂಗ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ೧೯೬೭ರಲ್ಲಿ ಹವಾಯಿ ವಿಶ್ವವಿದ್ಯಾಲಯದ ರಂಗವಿಭಾಗದಲ್ಲಿ ತರಬೇತಿ ಪಡೆದ ಅನಂತರ ೩ ವರ್ಷಗಳ ಕಾಲ ಬೆಳಕಿನ ಸಂಯೋಜನೆ ಹಾಗೂ ರಂಗ ತಂತ್ರಗಳ ಬಗೆಗೆ ವಿಶೇಷ ತರಬೇತಿ ಪಡೆದರು. ನ್ಯೂಯಾರ್ಕಿನ “ಕ್ಲಿಯೆಗಲ್ ಬ್ರದರ್ಸ್’ ಲೈಟಿಂಗ್ ಕಂಪನಿಯಲ್ಲಿ ಕೆಲಸಮಾಡಿ ಅನುಭವಗಳಿಸಿದರು.
ನಾಟಕ ನಿರ್ದೇಶಕ, ನಟ, ಮೈಮ್‌ಕಲಾವಿದ, ಸೆಟ್ಟಿಂಗ್ಸ್, ಪ್ರಸಾಧನ, ಬೆಳಕು ಸಂಯೋಜಕ ಹೀಗೆ ವಿವಿಧ ಆಯಾಮಗಳಲ್ಲಿ ಸುಮಾರು ೨೦೦ ಕ್ಕೂ ರಂಗ ನಿಲ್ದಾಣಗಳಲ್ಲಿ ದುಡಿಮೆ. ಭಾರತದ ಬೇರೆ ಬೇರೆ ಪ್ರದೇಶದ ಸುಮಾರು ೫೦ಕ್ಕೂ ಮಿಕ್ಕ ರಂಗ ಶಾಲೆಗಳಿಗೆ ಸಲಹೆಗಾರರಾಗಿ ಸೇವೆಸಲ್ಲಿಕೆ. ಅನೇಕ ವಿಶ್ವವಿದ್ಯಾಲಯಗಳ ರಂಗ ಮಂಟಪ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ನಡೆಸಿದ ಹೆಗ್ಗಳಿಕೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಚಿಮನ್‌ಲಾಲ್ ಮೆಮೊರಿಯಲ್, ಪ್ರಶಸ್ತಿ, ಭಾರತೇಂದು ಅಕಾಡೆಮಿ ಪ್ರಶಸ್ತಿ ಎನ್.ಎಸ್.ಡಿ ಯ ಜೀವಮಾನದ ಸಾಧನೆ ಪ್ರಶಸ್ತಿ ಮೊದಲಾದ ಪ್ರಶಸ್ತಿ ಗೌರವಗಳು ಇವನ್ನು ಅರಸಿ ಬಂದಿವೆ. ಇಂದಿಗೂ ಚಟುವಟಿಕೆಯಿಂದಿರುವ ಕ್ರಿಯಾಶೀಲ ರಂಗತಜ್ಞ ಕನ್ನಡನಾಡಿನ ಹಿರಿಯ ನಿರ್ದೇಶಕರು ವಿ. ರಾಮಮೂರ್ತಿ.

Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ವೀಣಾ ಅದವಾನಿ

ಪೌರಾಣಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದ ತಮ್ಮ ತಾಯಿ ಉಳೇಬೀಡು ರಂಗಮ್ಮನವರ ಪ್ರೇರಣೆಯಿಂದ ರಂಗಭೂಮಿ ಪ್ರವೇಶ ಮಾಡಿದ ವೀಣಾ ಆದವಾನಿ ಕರ್ನಾಟಕ ಹಾಗೂ ಆಂಧ್ರ ಗಡಿನಾಡಿನಲ್ಲಿ ಹೆಸರಾಂತ ನಟಿ.
ಬಾಲ್ಯದಿಂದಲೇ ನಾಟಕಗಳಲ್ಲಿ ಪಾತ್ರವಹಿಸಲು ಆರಂಭಿಸಿದ ವೀಣಾ ಅವರು ಭರತನಾಟ್ಯದಲ್ಲಿಯೂ ಶಿಕ್ಷಣ ಪಡೆದುಕೊಂಡಿದ್ದರಿಂದ ನಾಟ್ಯ ಹಾಗೂ ನಟನೆಯ ಹೊಸ ಅಭಿನಯ ಶೈಲಿಯನ್ನು ರೂಢಿಸಿಕೊಂಡು ಜನಪ್ರಿಯತೆ ಪಡೆದರು.
ವೀರ ಅಭಿಮನ್ಯು, ರಕ್ತರಾತ್ರಿ, ಉಳವಿ ಚನ್ನಬಸವೇಶ್ವರ, ಮೌನೇಶ್ವರ ಮಹಾತ್ಮ, ನಾಟ್ಯ ರಾಣಿ ಹೀಗೆ ನೂರಾರು ನಾಟಕಗಳಲ್ಲಿ ಮುಖ್ಯ ಪಾತ್ರಧಾರಿಯಾಗಿ ಅಸಂಖ್ಯ ಪ್ರದರ್ಶನಗಳನ್ನು ನೀಡಿದ ಇವರು ನೃತ್ಯ ಶಿಕ್ಷಣದ ಜೊತೆಗೆ ಗ್ರಾಮೀಣ ನಾಟಕಗಳಲ್ಲಿ ಬಿಡುವಿಲ್ಲದ ನಟಿ ಎನ್ನಿಸಿಕೊಂಡರು. ವೀಣಾ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಮುಕ್ತಾಜ್ ಬೇಗಂ

ಗುಡಿಗೇರಿ ನಾಟಕ ಕಂಪೆನಿ, ಸೂಡಿ ನಾಟಕ ಕಂಪೆನಿ ಸೇರಿದಂತೆ ಹಲವಾರು ವೃತ್ತಿ ನಾಟಕ ಕಂಪೆನಿಗಳಲ್ಲಿ ನಲವತ್ತು ವರ್ಷಗಳ ಕಾಲ ಕಲಾವಿದೆಯಾಗಿ ಸೇವೆ ಸಲ್ಲಿಸಿರುವ ಮುಮ್ರಾಜ್ ಬೇಗಂ ಅವರ ಮೊದಲ ಹೆಸರು ಲಲಿತಾ. ಆರಂಭದಿಂದಲೂ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಮಮ್ರಾಜ್ ಬೇಗಂ ಅವರ ಹಿರಿಮೆ.

Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಕೆ. ಕರಿಯಪ್ಪ ಮಾಸ್ತರ್

ಹಿಂದೂಸ್ಥಾನಿ, ಸುಗಮ ಸಂಗೀತಗಳಲ್ಲಿ ನಿಪುಣರಾದ ಕೆ.ಕರಿಯಪ್ಪ ಮಾಸ್ತರ್ ಉತ್ತಮವಾದ ಹಾರ್ಮೋನಿಯಂ ವಾದಕರೂ ಕೂಡ. ತಮ್ಮ ಕಲಾನಿಕೇತನ ಸಂಗೀತ ವಿದ್ಯಾಲಯದ ಮೂಲಕ ಸಂಗೀತ ಶಿಕ್ಷಣ ನೀಡುತ್ತಿರುವ ಕರಿಯಪ್ಪ ‘ಸಂಗೀತ ಸಿಂಚನ ಎಂಬ ತಂಡದ ಮುಖೇನ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಸಂಗೀತ ಶಿಕ್ಷಣದ ಜೊತೆಗೆ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಇವರು ಅನೇಕ ಧ್ವನಿಸುರುಳಿಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ತತ್ವಪದ, ದಾಸರಪದ, ಹಾಗೂ ವಚನ ಗಾಯನಗಳಲ್ಲಿಯೂ ನೈಪುಣ್ಯತೆ ಪಡೆದಿರುವ ಕರಿಯಪ್ಪ ಮಾಸ್ತ ಆಕಾಶವಾಣಿ, ದೂರದರ್ಶನ ಕೇಂದ್ರಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಮೈಸೂರಿನ ರಂಗಾಯಣದ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿರುವ ಕರಿಯಪ್ಪ ಮಾಸ್ಟರ್ ಅವರಿಗೆ ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿ ಸಂದಿದೆ.

Categories
ರಂಗಭೂಮಿ ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ

ಹೆಚ್.ಜಿ. ಸೋಮಶೇಖರ ರಾವ್

ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದಲ್ಲಿ ಕಲಾವಿದರಾಗಿ ಅನುಭವವಿರುವ ಎಚ್.ಜಿ.ಸೋಮಶೇಖರರಾವ್ ಬಾಲನಟನಾಗಿ ರಂಗಭೂಮಿಗೆ ಕಾಲಿಟ್ಟರು. ವಿದ್ಯಾರ್ಥಿ ಜೀವನದಲ್ಲಿಯೇ ಅಭಿನಯ ಹಾಗೂ ನಿರ್ದೇಶನದಿಂದ ನಾಟಕ ಕ್ಷೇತ್ರದೊಂದಿಗೆ ಸಂಬಂಧವಿರಿಸಿಕೊಂಡ ಅವರು ನಂತರದ ದಿನಗಳಲ್ಲಿ ಚಲನಚಿತ್ರ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಇವರು ಆರೂವರೆ ದಶಕಗಳಿಂದ ಬಣ್ಣದ ಬದುಕಿನೊಡನೆ ಸಂಬಂಧ ಇಟ್ಟುಕೊಂಡಿದ್ದಾರೆ. ರಂಗಭೂಮಿಯ ಪ್ರಸಿದ್ಧ ನಿರ್ದೇಶಕರ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸೋಮಣ್ಣ ೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಗಮನಾರ್ಹವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ನಟನೆಯೇ ಅಲ್ಲದೆ, ಚಿತ್ರ ಕಥಾರಚನೆಯಲ್ಲಿಯೂ ಕೈಯಾಡಿಸಿರುವ ಸೋಮಶೇಖರರಾವ್ ಕಿರುತೆರೆಯಲ್ಲಿಯೂ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸೋಮಣ್ಣನ ಸ್ಟಾಕ್ ಎಂಬ ಆತ್ಮ ಕಥನವನ್ನು ಬರೆದಿರುವ ಇವರು ಅನೇಕ ಅಭಿನಂದನಾ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸರ್ಕಾರದ ಶ್ರೇಷ್ಠ ಪೋಷಕ ನಟ ಪ್ರಶಸ್ತಿಯೂ ಸೇರಿದೆ.

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಶಿವಕುಮಾಲ ಅ.

ಶಿವಕುಮಾರಿ ಅವರು ಕಳೆದ ಮೂರು ದಶಕಗಳಿಂದ ನಿರಂತರವಾಗಿ ವೃತ್ತಿ ರಂಗಭೂಮಿಯಲ್ಲಿ ವಿವಿಧ ಬಗೆಯ ಪಾತ್ರ ನಿರ್ವಹಿಸುತ್ತಾ ಬಂದಿರುವ ಹಿರಿಯ ಕಲಾವಿದೆ. ಪೌರಾಣಿಕ, ಸಾಮಾಜಿಕ ಹಾಗೂ ಸಾಂಸಾರಿಕ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ಶಿವಕುಮಾರಿ ಅವರು ಆಕಾಶವಾಣಿಯ ಬಿ ಗ್ರೇಡ್ ನಾಟಕ ಕಲಾವಿದೆ.

ವೃತ್ತಿ ರಂಗಭೂಮಿ ಅಲ್ಲದೆ, ಹವ್ಯಾಸಿ ನಾಟಕ ತಂಡಗಳ ಜೊತೆಯಲ್ಲೂ ಕೆಲಸ ಮಾಡಿರುವ ಶಿವಕುಮಾರಿ ಅವರು ಅನೇಕ ಸರ್ಕಾರಿ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ದೂರದರ್ಶನ ಹಾಗೂ ಆಕಾಶವಾಣಿಗಳಲ್ಲಿ ರಂಗಗೀತೆಗಳ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದು ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವವೂ ಸೇರಿದಂತೆ ಅನೇಕ ಬಹುಮಾನಗಳು ದೊರೆತಿವೆ.

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಜೆ. ಲೋಕೇಶ್

ಹವ್ಯಾಸಿ ನಾಟಕಗಳಲ್ಲಿ ನಟರಾಗಿ ಹೆಸರಾಗಿರುವ ಜೆ. ಲೋಕೇಶ್ ಅವರು ನಂತರ ರಂಗವಿನ್ಯಾಸ, ಬೆಳಕಿನ ವಿನ್ಯಾಸಗಳಲ್ಲಿ ಖ್ಯಾತರಾದವರು. ಕರ್ನಾಟಕ ಹವ್ಯಾಸಿ ಲೋಕದಲ್ಲಿ ರಂಗಸಂಪದ ತಂಡ ಬಹುಪ್ರಸಿದ್ಧವಾದುದು. ಇದರ ಸ್ಥಾಪಕರಾದ ಜೆ. ಲೋಕೇಶ್ ಅವರು ನಾಟಕ ಚಳುವಳಿಯನ್ನು ಗ್ರಾಮೀಣ ಭಾಗಗಳಿಗೆ ಹಬ್ಬಿಸುವಲ್ಲಿ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದರು.

ರಂಗಭೂಮಿಗಾಗಿ ಹಲವಾರು ನಾಟಕಗಳನ್ನು ಪ್ರಕಟಿಸಿದ ಜೆ. ಲೋಕೇಶ್ ರಾಜ್ಯದಾದ್ಯಂತ ಹಲವು ನಾಟಕೋತ್ಸವಗಳನ್ನು ಏರ್ಪಡಿಸುವ ಮೂಲಕ ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದರು. ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಜೆ. ಲೋಕೇಶ್ ಅವರು ರಂಗಭೂಮಿಯನ್ನು ಕುರಿತಂತಹ ರಂಗವಿಹಂಗಮ ಸಾಕ್ಷ್ಯಚಿತ್ರ ಧಾರವಾಹಿಯನ್ನು ನಿರ್ಮಿಸಿದ್ದಾರೆ.

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ತೊಟ್ಟವಾಡಿ ನಂಜುಂಡಸ್ವಾಮಿ

ಎಳೆಯ ವಯಸ್ಸಿನಲ್ಲಿಯೇ ರಂಗಭೂಮಿಯ ಕಡೆ ಒಲವನ್ನಿಟ್ಟುಕೊಂಡ ತೊಟ್ಟವಾಡಿ ನಂಜುಂಡಸ್ವಾಮಿ ಹಲವಾರು ನಾಟಕಗಳನ್ನು ಹಾಗೂ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಅನೇಕ ಕೃತಿಗಳನ್ನು ರಂಗ ರೂಪಾಂತರ ಮಾಡಿರುವ ಇವರು ರಂಗಭೂಮಿಯಲ್ಲಿ ಅಭಿನಯಿಸಿದ್ದಾರೆ. ಸಮಾನ ಮನಸ್ಕರೊಂದಿಗೆ ನಾಟಕ ಸಂಸ್ಥೆಯನ್ನು ಸ್ಥಾಪಿಸಿ ಇವರು ನಿರಂತರವಾಗಿ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ಅನೇಕ ರಂಗ ಕೃತಿಗಳನ್ನು, ಅಭಿನಂದನಾ ಗ್ರಂಥಗಳನ್ನು ಹಾಗೂ ವಿಮರ್ಶಾ ಸಂಗ್ರಹಗಳನ್ನು ಸಂಪಾದನೆ ಮಾಡಿರುವ ನಂಜುಂಡಸ್ವಾಮಿ ಅವರು ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೊದಲಾದ ಸಂಸ್ಥೆಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸುಮಾರು ಎರಡೂವರೆ ದಶಕಗಳಿಂದ ನಿರಂತರವಾಗಿ ನಾಟಕೋತ್ಸವಗಳನ್ನು ವ್ಯವಸ್ಥೆ ಮಾಡುತ್ತಿರುವ ಇವರು ಆಕಾಶವಾಣಿ, ದೂರದರ್ಶನಗಳಲಿಯೂ ನಾಟಕಗಳನ್ನು ನಡೆಸಿಕೊಟ್ಟಿದ್ದಾರೆ. ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ನಡೆಸುತ್ತಿರುವ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ ಪ್ರಶಸ್ತಿಗಳೂ ಸೇರಿ ಅನೇಕ ಗೌರವಗಳು ಸಂದಿವೆ.

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಅಬ್ದುಲ್ ಸಾಬ್ ಅಣ್ಣಿಗೇರಿ

ಅಬ್ದುಲ್ ಸಾಬ್ ಅಣ್ಣಿಗೇರಿ ಅವರು ಕರ್ನಾಟಕ ವೃತ್ತಿ ರಂಗಭೂಮಿಯ ಹೆಸರಾಂತ ಕಲಾವಿದರಲ್ಲಿ ಒಬ್ಬರು. ತಮ್ಮ ಹದಿನೈದನೆಯ ವಯಸ್ಸಿನಿಂದಲೇ ಬಣ್ಣದ ಬದುಕಿಗೆ ಕಾಲಿಟ್ಟ ಅಬ್ದುಲ್ ಸಾಬ್ ಅವರು ನಿರಂತರವಾಗಿ ಆರು ದಶಕಗಳಿಂದ ವೈವಿಧ್ಯಮಯವಾದ ಪಾತ್ರಗಳನ್ನು ನಿರ್ವಹಿಸುತ್ತಾ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದಾರೆ. ಕರ್ನಾಟಕದ ಹಲವು ವೃತ್ತಿ ನಾಟಕ ಕಂಪೆನಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿರುವ ಅಬ್ದುಲ್ ಸಾಬ್ ಇಳಿ ವಯಸ್ಸಿನಲ್ಲಿಯೂ ಕೂಡಾ ಬಣ್ಣ ಹಚ್ಚುವುದನ್ನು ಬಿಟ್ಟಿಲ್ಲ. ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಅಬ್ದುಲ್ ಸಾಬ್ ಗಂಡು ಪಾತ್ರಗಳಲ್ಲದೆ ಮಹಿಳಾ ಪಾತ್ರಗಳಲ್ಲೂ ಕಾಣಿಸಿಕೊಂಡು ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

Categories
ರಂಗಭೂಮಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಕಂಠಿ ಹನುಮಂತರಾಯರು

ಕಂಠಿ ಹನುಮಂತರಾಯರು ಕಳೆದ ಆರು ದಶಕಗಳಿಂದ ರಂಗಭೂಮಿಯ ಒಡನಾಟವಿಟ್ಟುಕೊಂಡವರು. ಇವರು ಹದಿನೆಂಟು ಜನಪ್ರಿಯ ನಾಟಕಗಳನ್ನು ರಚಿಸಿದ್ದು ರಂಗಭೂಮಿಯಲ್ಲಿ ಅವು ಹಲವಾರು ಪ್ರದರ್ಶನಗಳನ್ನು ಕಂಡಿವೆ.

ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪುರಸ್ಕಾರಗಳು ಸಂದಿವೆ.

Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುರುನಾಥ್ ಬಿ.ಹೂಗಾರ

ವೃತ್ತಿ ರಂಗಭೂಮಿಯಲ್ಲಿ ಅನೂಹ್ಯ ಸೇವೆಗೈದು ಅದ್ವಿತೀಯ ಛಾಪು ಮೂಡಿಸಿರುವ ದೇಸೀ ಪ್ರತಿಭೆ ಗುರುನಾಥ್ ಬಿ.ಹೂಗಾರ, ನಟ, ನಿರ್ದೇಶಕ, ಪ್ರಸಾದನ ಕಲಾವಿದ, ವಸ್ತ್ರವಿನ್ಯಾಸಕ, ಸಂಘಟಕರಾಗಿ ಅವರದ್ದು ಬಹುರೂಪಿ ರಂಗಕೈಂಕರ್ಯ. ಕಲಬುರಗಿ ಜಿಲ್ಲೆಯ ಖಣದಾಳ ಗ್ರಾಮದವರಾದ ಗುರುನಾಥ್ ಬಿ.ಹೂಗಾರ ಅವರಿಗೆ ವೃತ್ತಿ-ಪ್ರವೃತ್ತಿ, ಬದುಕು-ಭಾವ ಎಲ್ಲವೂ ರಂಗಭೂಮಿಯೇ. ಓದಿದ್ದು ಕೇವಲ ಏಳನೇ ತರಗತಿವರೆಗೆ ಮಾತ್ರ. ಎಳೆವೆಯಲ್ಲೇ ಬಣ್ಣದ ಮೋಹಕ್ಕೆ ಸಿಲುಕಿ ರಂಗಪ್ರವೇಶ. ಹುಟ್ಟೂರನ್ನೇ ಕಲಾಕೈಂಕರ್ಯದ ಕೇಂದ್ರಸ್ಥಾನವಾಗಿ ಮಾಡಿಕೊಂಡು ಆರು ದಶಕಗಳಿಂದಲೂ ನಿರಂತರ ರಂಗಸೇವೆ. ನಟನೆ, ನಿರ್ದೇಶನ ಜತೆಗೆ ಪ್ರಸಾದನ ಕಲಾವಿದರಾಗಿ ಹೆಜ್ಜೆಗುರುತು. ಸಂಪತ್ತಿಗೆ ಸವಾಲ್‌, ಚೀನಾದುರಾಕ್ರಮಣ, ನನ್ನಭೂಮಿ, ಗರೀಬಿ ಹಠಾವೋ, ನೀತಿಗೆಲ್ಲಿದೆ ಜಾತಿ?, ಹಾರಕೂಡ ಚೆನ್ನಬಸವೇಶ್ವರ ಮಹಾತ್ಮ, ವಿಶ್ವಜ್ಯೋತಿ ಶರಣಬಸವ, ಕಾರ್ಗಿಲ್ ಕೂಗು ಮುಂತಾದ ೧೧೦ಕ್ಕೂ ಹೆಚ್ಚು ನಾಟಕಗಳಲ್ಲಿ ಹಾಸ್ಯನಟ, ಖಳನಟನಾಗಿ ರಂಜಿಸಿದ ಕಲಾವಿದರು. ತವರುಮನೆ ತಣ್ಣಗಿರಲಿ, ಆಶಾಲತಾ, ಗೌಡ್ರಗದ್ಲ, ಜೋಕುಮಾರಸ್ವಾಮಿ ಮತ್ತಿತರ ೨೫ಕ್ಕೂ ಹೆಚ್ಚು ನಾಟಕಗಳ ನಿರ್ದೇಶಕರು. ನೂರಾರು ನಟ–ನಟಿಯರಿಗೆ ವಸ್ತ್ರವಿನ್ಯಾಸಕರು. ಕಿರುಚಿತ್ರ-ಸಾಕ್ಷ್ಯಚಿತ್ರಗಳಲ್ಲೂ ಪ್ರತಿಭೆ ಮೆರೆದ ರಂಗಕರ್ಮಿ, ಹತ್ತಾರು ಗೌರವಗಳಿಗೆ ಪಾತ್ರರಾದ ಗುರುನಾಥ್‌ ಹೂಗಾರ ಅವರು ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯಿಂದಲೂ ಪುರಸ್ಕೃತರು.

Categories
ರಂಗಭೂಮಿ ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ

ಡಾ. ಶ್ರೀಶೈಲ ಹುದ್ದಾರ

ಜನಪದ ರಂಗಭೂಮಿಯಲ್ಲಿ ಬಹುರೂಪಿಯಾಗಿ ವಿಶೇಷ ಛಾಪು ಮೂಡಿಸಿದ ಸಂಪನ್ಮೂಲ ವ್ಯಕ್ತಿ ಡಾ. ಶ್ರೀಶೈಲ ಹುದ್ದಾರ, ನಟ, ನಿರ್ದೇಶಕ, ನಾಟಕಕಾರ, ಕನ್ನಡ ಪ್ರಾಧ್ಯಾಪಕರಾಗಿ ಬಹುಶ್ರುತ ಸಾಧನೆಗೈದ ರಂಗಜೀವಿ, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಶಲವಡಿಯಲ್ಲಿ ಜನಿಸಿದ ಶ್ರೀಶೈಲ ಹುದ್ದಾರ ಅಕ್ಷರದ ಚುಂಗು ಹಿಡಿದು ಅರಳಿ ನಳನಳಿಸಿದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು, ‘ದೊಡ್ಡಾಟ ಪರಂಪರೆ ಮತ್ತು ಪ್ರಯೋಗಗಳು’ ಕುರಿತು ಪಿಎಚ್‌ಡಿ ಪದವಿ. ವೃತ್ತಿಯಲ್ಲಿ ಕನ್ನಡ ಅಧ್ಯಾಪಕ, ಪ್ರವೃತ್ತಿಯಲ್ಲಿ ರಂಗಕರ್ಮಿ. ಬಾಲ್ಯದಲ್ಲೇ ಅಂಟಿದ ರಂಗನಂಟನ್ನು ಬದುಕಿನುದ್ದಕ್ಕೂ ಭಾವದ ಗಂಟಾಗಿಸಿಕೊಂಡು ಸಾಧನೆಯ ಪಥ ಸ್ಪರ್ಶಿಸಿದವರು. ಕನಕವಿಜಯ, ಬುದ್ಧಪ್ರಬುದ್ಧ, ಅಕ್ಕಮಹಾದೇವಿ, ಬಾಹುಬಲಿ, ಅನುಭಾವಿ ಅಲ್ಲಮ, ನಿಜಗುಣ ಶಿವಯೋಗಿ, ಭಾಗೀರಥಿ, ಲಿಂಗರಾಜ ದೇಸಾಯಿ ಮುಂತಾದ ದೊಡ್ಡಾಟ-ಸಣ್ಣಾಟಗಳಲ್ಲಿ ನಟಿಸಿ ರಸಿಕರ ಮನಗೆದ್ದ ಕಲಾವಿದ, ಜೈಸಿದನಾಯಕ, ಅಮಟೂರ ಬಾಳಪ್ಪ, ರಕ್ತರಾತ್ರಿ, ಅಪ್ಪ ಮತ್ತು ಟಿಂಗರಬುಡ್ಡಣ್ಣ ನಿರ್ದೇಶಿತ ನಾಟಕಗಳು. ದೊಡ್ಡಾಟ – ಒಂದು ಪರಿಕಲ್ಪನೆ, ನೆಲದ ಹಾಡುಗಳು, ಕರ್ನಾಟಕ ಜಾನಪದ ರಂಗಭೂಮಿ, ಸಾಹಿತ್ಯಸೌರಭ ಕೃತಿಗಳ ಕತೃ, ಹಲವು ನಾಟಕ ಮತ್ತು ಬೀದಿನಾಟಕಗಳ ರಚನಕಾರರು. ಸಿನಿಮಾ ದೂರದರ್ಶನದಲ್ಲೂ ಬೆಳಗಿದ ಪ್ರತಿಭಾಶಾಲಿ, ಸಮಾಜಮುಖಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಈ ಅನುಭವಿ ರಂಗಭೂಮಿಯನ್ನೇ ಕರ್ಮಭೂಮಿಯಾಗಿಸಿಕೊಂಡಿರುವ ಕಲಾಜೀವಿ.

Categories
ರಂಗಭೂಮಿ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸರೋಜಮ್ಮ ಪಿ. ಧುತ್ತರಗಿ

ಕನ್ನಡ ರಂಗಭೂಮಿಯಲ್ಲಿ ನಟಿಯಾಗಿ, ನಾಟಕ ನಿರ್ದೇಶಕಿಯಾಗಿ ಜನಮನ್ನಣೆ ಗಳಿಸಿರುವ ಪ್ರತಿಭಾವಂತ ರಂಗಪ್ರತಿಭೆ ಶ್ರೀಮತಿ ಸರೋಜಮ್ಮ ಪಿ. ಧುತ್ತರಗಿ ಅವರು.
ಚಿಕ್ಕಂದಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ. ಗುಬ್ಬಿ ಕಂಪನಿ, ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿ ಬಾಲ ನಟಿಯಾಗಿ ಅಭಿನಯ. ನಂತರ ಶಾರದಾ ನಾಟಕ ಮಂಡಳಿ, ಹಿರಣ್ಣಯ್ಯ ಮಿತ್ರ ಮಂಡಳಿ, ಹಲಗೇಲಿ ಜಟ್ಟೆಪ್ಪ ಕಂಪನಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯ, ಸಂಪತ್ತಿಗೆ ಸವಾಲ್, ಮಲಮಗಳು, ಕಿತ್ತೂರ ಚೆನ್ನಮ್ಮ, ಸಿಂಧೂರ ಲಕ್ಷ್ಮಣ ಮುಂತಾದ ಹಲವಾರು ಐತಿಹಾಸಿಕ, ಸಾಮಾಜಿಕ, ಧಾರ್ಮಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿರುವ ಶ್ರೀಮತಿ ಸರೋಜಮ್ಮ ಧುತ್ತರಗಿ ಅವರು ಆಕಾಶವಾಣಿ ಬಿ.ಹೈ, ಗ್ರೇಡ್ ಕಲಾವಿದೆ. ಸಂಗೀತ ಹಾಗೂ ನೃತ್ಯಕಲೆಗಳನ್ನು ಅಭ್ಯಾಸ ಮಾಡಿರುವ ಶ್ರೀಮತಿ ಸರೋಜಮ್ಮ ಧುತ್ತರಣ ಅವರು ರಂಗಗೀತೆಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲ ರಂಗ ಕಲಾವಿದೆ.
ಉತ್ತರ ಕರ್ನಾಟಕದ ಹೆಸರಾಂತ ನಾಟಕ ರಚನಕಾರರಾದ ಶ್ರೀ ಪಿ.ಬಿ. ಧುತ್ತರಗಿಯವರ ಪತ್ನಿಯಾಗಿ ಹದಿನಾಲ್ಕು ವರ್ಷಗಳಿಂದ ಶ್ರೀ ಅಭಿನವ ಕಲಾರಂಗ ನಾಟಕ ಕಂಪನಿಯನ್ನು ನಡೆಸಿಕೊಂಡು ಬರುತ್ತಿರುವ ಹಿಲಮೆಗೆ ಪಾತ್ರರು. ಶ್ರೀ ಪಿ.ಬಿ. ಧುತ್ತರಣಯವರ ಹಲವಾರು ನಾಟಕಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆ, ನಾಟಕರಂಗದಲ್ಲಿ ಹೊಸಹೊಸ ರಂಗಪ್ರಯೋಗಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಮೂರ್ತಿಗೆ ಭಾಜನರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ನವರಸಗಳನ್ನು ಅದ್ಭುತವಾಗಿ ಅಭಿನಯಿಸಿ ಭಾವಪರವಶಗೊಆಸಬಲ್ಲ ಹಾಗೂ ಕನ್ನಡ ವೃತ್ತಿ ರಂಗಭೂಮಿಯ ಅಭಿಜಾತ ಕಲಾವಿದೆ ನಾಟ್ಯಕಲಾ ಸಂಗೀತರತ್ನ ಶ್ರೀಮತಿ ಸರೋಜಮ್ಮ ಧುತ್ತರಗಿ ಅವರು.

Categories
ರಂಗಭೂಮಿ ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಲಾಡ ಸಾಹೇಬ

ಕರ್ನಾಟಕ ವೃತ್ತಿ ರಂಗಭೂಮಿಯಲ್ಲಿನ ಹಿಲಯ ತಲೆಮಾಲನ ಪ್ರತಿಭಾವಂತ ಕಲಾವಿದರು ಶ್ರೀ ಲಾಡ ಸಾಹೇಬ ಅವರು.
೧೯೧೬ರಲ್ಲಿ ಬಿಜಾಪುರ ಜಿಲ್ಲೆ ಬಾಗಲಕೋಟೆ ತಾಲೂಕಿನ ಅಮೀನಗಡದಲ್ಲಿ ಜನನ. ಎಸ್.ಆರ್. ಕಂಠಿ ನಾಟಕ ಕಂಪನಿಯಿಂದ ನಾಟಕ ರಂಗಕ್ಕೆ ಪದಾರ್ಪಣ. ನಂತರ ಶಿರಹಟ್ಟಿ ವೆಂಕೋಬರಾಯರ ಕಂಪನಿ, ಭಾಗ್ಯದಯ ನಾಟ್ಯ ಸಂಘ, ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ, ಶ್ರೀ ಶೈಲ ನಾಟಕ ಸಂಘ ಮೊದಲಾದ ಹಲವಾರು ವೃತ್ತಿ ನಾಟಕ ಕಂಪನಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯ. ಅಲ್ಲದೆ ಸ್ಥಳೀಯ ಹವ್ಯಾಸಿ ಕಂಪನಿಗಳಲ್ಲಿಯೂ ಅಭಿನಯಿಸಿರುವ ಶ್ರೀ ಲಾಡ ಸಾಹೇಬ ಅವರು ನಟರಾಜ ನಾಟ್ಯ ಸಂಘ ವೃತ್ತಿ ನಾಟಕ ಕಂಪನಿ ಸ್ಥಾಪಕರು. ಶ್ರೀ ಲಾಡ ಸಾಹೇಬ ಅವರು ಅಭಿನಯಿಸಿದ ಕೃಷ್ಣ, ಶಿವಾಜಿ, ನಾರದ ಮೊದಲಾದ ಪೌರಾಣಿಕ ಪಾತ್ರಗಳಲ್ಲದೆ ಪಠಾಣ ಪಾಶ ನಾಟಕದ ಒಕ್ಕಲಗಿತ್ತಿ, ಮಲ್ಲಮ್ಮ ನಾಟಕದ ನಾಗಮ್ಮ, ಪ್ರಪಂಚ ಪರೀಕ್ಷೆ ನಾಟಕದ ದೇವರಾಣಿ ವೈದಲಾದ ಸ್ತ್ರೀಪಾತ್ರಗಳು ಜನಪ್ರಿಯವಾದವು. ಸಾಮಾಜಿಕ ಮತ್ತು ಐತಿಹಾಸಿಕ ನಾಟಕಗಳ ಪ್ರಮುಖ ಪಾತ್ರಗಳಲ್ಲಿಯೂ ಅದ್ಭುತವಾಗಿ ಅಭಿನಯಿಸಿದ ಹೆಗ್ಗಳಿಕೆ ಶ್ರೀಯುತರದು.
ಸುಮಾರು ಎಪ್ಪತ್ತು ವರ್ಷಗಳಗೂ ಹೆಚ್ಚು ಕಾಲ ಕಲಾಸೇವೆಯಲ್ಲಿ ನಿರತರಾದ ಶ್ರೀ ಲಾಡ ಸಾಹೇಬ ಅವರು ತನ್ಮಯತೆಯಿಂದ ಅಭಿಯಿಸಿದ ಪಾತ್ರಗಳು ಪ್ರೇಕ್ಷಕರ ಮನಸೂರೆಗೊಂಡು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟವು.
ರಂಗಭೂಮಿಯನ್ನೇ ಬದುಕಾಗಿಸಿಕೊಂಡ ಪುರುಷ ಪಾತ್ರ ಹಾಗೂ ಸ್ತ್ರೀಪಾತ್ರ ಎರಡರಲ್ಲಿಯೂ ಅಭಿನಯಿಸಿ ತಮ್ಮ ಅಭಿನಯ ಕೌಶಲದಿಂದ ಪ್ರೇಕ್ಷಕರ ಮನಸೂರೆಗೊಂಡ ವೃತ್ತಿ ರಂಗಭೂಮಿಯ ಥೀಮಂತ ಕಲಾವಿದರ ಶ್ರೀ ಲಾಡ ಸಾಹೇಬ ಅವರು.

Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಶ್ರೀಪತಿ ಮಂಜನಬೈಲು

ಯಕ್ಷಗಾನದ ಸೆಳೆತದಿಂದ ಬಣ್ಣ ಹಚ್ಚಿ ನಾಟಕತಂಡ ಕಟ್ಟಿ ನಿರಂತರ ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಶ್ರೀಪತಿ ಮಂಜನಬೈಲು ಅವರು.
ಕರಾವಳಿಯಿಂದ (ದಕ್ಷಿಣ ಕನ್ನಡ) ನೌಕರಿಗಾಗಿ ಬೆಳಗಾವಿ ಸೇರಿದ ಶ್ರೀಪತಿ ಕನ್ನಡ ನಾಟಕಗಳಿಗೆ GINGS ಸೇರ: ಕದಂ ‘ರಂಗಸಂಪದ’ದ ಮೂಲಕ ಬೆಳಗಾವಿಯಲ್ಲಿ ಭದ್ರ ನೆಲೆ ಒದಗಿಸಿಕೊಟ್ಟವರು.
ಅನ್ಯಭಾಷಾ ನಾಟಕಗಳ ಮಧ್ಯೆ ಕನ್ನಡದ ಹೊಸ ಅಲೆಯ ನಾಟಕ ಆಡುವ ಛಾತಿ ತೋರಿ ಬೆಳಗಾವಿಯಲ್ಲಿ ರಂಗಸಂಪದ ನಾಟಕ ಸಂಸ್ಥೆ ಕಟ್ಟಿದ ಶ್ರೀಪತಿ ಅಭಿನಯಿಸಿದ ನಾಟಕಗಳು ೫೦ಕ್ಕೂ ಹೆಚ್ಚು. ೬೦ಕ್ಕೂ ಅಧಿಕ ನಾಟಕಗಳನ್ನು ನಿರ್ದೇಶಿಸಿರುವ ಅವರು ಹೊರ ಊರುಗಳ ತಂಡಗಳಿಗೆ ಬೆಳಗಾವಿಯಲ್ಲಿ ನಾಟಕ ಪ್ರದರ್ಶನಕ್ಕೆ ಕೊಟ್ಟ ಅವಕಾಶಗಳೇ ಅಸಂಖ್ಯ.
ನೋವು ನಲಿವುಗಳ ನಡುವೆ ರಂಗಬದುಕಿನಲ್ಲಿ ನಿರಂತರ ಪಯಣದಲ್ಲಿರುವ ಶ್ರೀಪತಿ ಮಂಜನಬೈಲು ಅಪರೂಪದ ರಂಗಕರ್ಮಿ.

Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಅರುಂಧತಿನಾಗ್

ದೆಹಲಿಯಲ್ಲಿ ಹುಟ್ಟಿ ಮುಂಬೈನಲ್ಲಿ ವ್ಯಾಸಂಗ ಮಾಡಿ ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅರುಂಧತಿ ನಾಗ್ ರಂಗಭೂಮಿಯಲ್ಲಿ ಕ್ರಿಯಾಶೀಲರು.
ಕೈಫಿ ಆಜ್ಞೆ, ಬಾಲ್‌ರಾಜ್ ಸಹಾನಿ, ಎಂ. ಎಸ್. ಸತ್ಯು, ಎ.ಕೆ. ಹಾನಗಲ್ ಅವರ ಹಿರಿತನವಿದ್ದ ‘ಇಪ್ಪಾ’ ರಂಗಶಾಲೆಯನ್ನು ಹದಿನಾರರ ಹರೆಯದಲ್ಲೇ ಸೇರಿಕೊಂಡ ಅರುಂಧತಿ ಮರಾಠಿ ಹಾಗೂ ಗುಜರಾತಿ ಹವ್ಯಾಸಿ ರಂಗಭೂಮಿಯಲ್ಲಿ ಪ್ರಸಿದ್ಧ ನಟಿ.
ನಟ ಶಂಕರ್‌ನಾಗ್‌ ಜೀವನ ಸಂಗಾತಿಯಾದ ಬಳಿಕ ಕರ್ನಾಟಕಕ್ಕೆ ಬಂದು ನೆಲೆಸಿದ ಅರುಂಧತಿ ಕನ್ನಡ ನಾಟಕಗಳಲ್ಲಿ ಅಭಿನಯಿಸಲಾರಂಭಿಸಿದರು.
ನಾಟಕ, ಚಲನಚಿತ್ರಗಳಲ್ಲಿ ಅಭಿನಯಿಸಿರುವ ಆರುಂಧತಿ ಕಿರುತೆರೆಯ ‘ಮಾಲ್ಗುಡಿ ಡೇಸ್’ ಧಾರಾವಾಹಿಗೆ ಶಂಕರ್‌ನಾಗ್ ಜೊತೆ ಹಿಂದಿ ಸಂಭಾಷಣೆ ರಚಿಸಿದರು.
ಶಂಕರ್‌ನಾಗ್ ನಿರ್ಮಿಸಿದ ಹಲವು ಕನ್ನಡ ಚಿತ್ರಗಳ ವಸ್ತ್ರಾಲಂಕಾರ ವ್ಯವಸ್ಥೆ ನೋಡಿಕೊಂಡ ಅರುಂಧತಿನಾಗ್ ‘ರಂಗಶಂಕರ’ದ ಹಿಂದಿನ ಶಕ್ತಿ.

Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಬಿ. ಎಸ್. ಲೋಹಿತಾಶ್ವ

ರಂಗಭೂಮಿ, ಚಲನಚಿತ್ರ ಹಾಗೂ ಕಿರುತೆರೆಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿರುವ ಪ್ರೊ. ಟಿ. ಎಸ್. ಲೋಹಿತಾಶ್ವ ಅವರು ವೃತ್ತಿಯಿಂದ ಆಂಗ್ಲ ಪ್ರಾಧ್ಯಾಪಕರು.
ತುಮಕೂರು ಜಿಲ್ಲೆ ತೊಂಡಗೆರೆಯವರಾದ ಲೋಹಿತಾಶ್ವ ಸಮುದಾಯ ನಾಟಕ ಚಳವಳಿಯ ಮೂಲಕ ಮನೆಮಾತಾದವರು. ನಾಡಿನುದ್ದಕ್ಕೂ ಪ್ರಗತಿಪರ ಚಿಂತನೆಯ ನಾಟಕ ಪ್ರದರ್ಶನಗಳಲ್ಲಿ ಪಾಲ್ಗೊಂಡ ಲೋಹಿತಾಶ್ವ ‘ಕತ್ತಲೆ ದಾರಿ ದೂರ’, ‘ಮಾರೀಚನ ಬಂಧುಗಳು’ ಮೊದಲಾದ ಸತ್ವಯುತ ನಾಟಕಗಳ ನಿರ್ದೆಶಕರು.
ಹುತ್ತವ ಬಡಿದರೆ, ಪಂಚಮ, ಗೆಲಿಲಿಯೊ, ಕುಬಿ ಮತ್ತು ಇಯಾಲ, ದಂಗೆಯ ಮುಂಚಿನ ದಿನಗಳು ಮೊದಲಾದ ನಾಟಕಗಳ ಅಭಿನಯದಿಂದ ಜನಮನ ಸೇರಿರುವ ಪ್ರೊ. ಲೋಹಿತಾಶ್ವ ೪೫೦ಕ್ಕೂ ಚಲನಚಿತ್ರಗಳಲ್ಲಿ ನಟಿಸಿದವರು.
ಕರ್ನಾಟಕ ಸಾಂಸ್ಕೃತಿಕ ಜಗತ್ತಿನಲ್ಲಿ ಮಿಂದೆದ್ದಿರುವ ಲೋಹಿತಾಶ್ವ ನಾಟಕಗಳ ರಚನಕಾರರು, ಅಂಕಣ ಬರವಣಿಗೆಯಲ್ಲೂ ನಿಪುಣರಾದ ಇವರು ಕೆಲವು ಚಲನಚಿತ್ರಗಳಿಗೆ ಸಂಭಾಷಣೆ, ಹಾಡುಗಳನ್ನು ಬರೆದಿದ್ದಾರೆ.
ಅನೇಕ ವೃತ್ತಿಪರ ಹಾಗೂ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಪ್ರೊ. ಲೋಹಿತಾಶ್ವ ಅವರು ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Categories
ರಂಗಭೂಮಿ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಸುಮಿತ್ರಮ್ಮ ಕುಂದಾಪುರ

ಗುಬ್ಬಿ ಕಂಪನಿಯಿಂದ ಅರಳಿದ ಕಲಾ ಕುಸುಮಗಳಲ್ಲಿ ಒಬ್ಬರಾಗಿ ಐದಾರು ದಶಕಗಳಿಂದ ಅಭಿನಯ ಕಾಯಕದಲ್ಲಿರುವ ಹಿರಿಯ ಜೀವ ಶ್ರೀಮತಿ ಸುಮಿತ್ರಮ್ಮ ಕುಂದಾಪುರ ಅವರು.
ಗುಬ್ಬಿ ಕಂಪನಿಯ ಕುರುಕ್ಷೇತ್ರ ನಾಟಕದಲ್ಲಿ ರುಕ್ಕಿಣಿ ಪಾತ್ರ ವಹಿಸಿದಾಗ ಸುಮಿತ್ರಮ್ಮ ಅವರ ವಯಸ್ಸು ೧೪, ಶೇಷಾಚಾರ್ಯರ ಕಂಪನಿ, ಗುಡಿಗೇರಿ ಕಂಪನಿ, ಗೋಕಾಕ್ ನಾಟಕ ಕಂಪನಿ, ಕೆ.ಬಿ.ಆರ್.
ಡ್ರಾಮ ಕಂಪನಿಗಳಲ್ಲಿ ಅಭಿನಯಿಸಿದ ಸುಮಿತ್ರಮ್ಮನವರು ಶ್ರೀ ವಿಜಯಮಾಲಾ ನಾಟ್ಯ ಸಂಘ ಕುಂದಾಪುರ ಎಂಬ ಸ್ವಂತ ಕಂಪನಿಯನ್ನು ೮ ವರ್ಷ ನಡೆಸಿದವರು.
ಡಾ. ರಾಜ್‌ಕುಮಾರ್ ಅವರೊಂದಿಗೆ ನಾಟಕಗಳಲ್ಲಿ ಪಾತ್ರವಹಿಸಿರುವ ಸುಮಿತ್ರಮ್ಮ ಅವರಿಗೆ ಹೆಸರು ತಂದುಕೊಟ್ಟ ನಾಟಕಗಳಲ್ಲಿ ರಕ್ತ ರಾತ್ರಿ, ಸಂಸಾರ ನೌಕೆ, ಪ್ರೇಮಲೀಲಾ ಕುರುಕ್ಷೇತ್ರ ಪ್ರಮುಖವಾದವು. ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವ ಶ್ರೀಮತಿ ಸುಮಿತ್ರಮ್ಮ ಕುಂದಾಪುರ ಅವರು ೭೫ರ ಇಳಿವಯಸ್ಸಿನಲ್ಲೂ ರಂಗದ ಮೇಲೆ ಕ್ರಿಯಾಶೀಲೆ.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರತಿಭಾ ನಾರಾಯಣ್

• ಅಭಿನಯದೊಂದಿಗೆ ರಂಗಗೀತೆಗಳನ್ನು ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡುವ ರಂಗಪ್ರತಿಭೆ ಶ್ರೀಮತಿ ಪ್ರತಿಭಾ ನಾರಾಯಣ್ ಅವರು.
ಬೆಂಗಳೂರಿನಲ್ಲಿ ೧೯೬೦ರಲ್ಲಿ ಶ್ರೀಮತಿ ಪ್ರತಿಭಾ ನಾರಾಯಣ್ ಅವರು ಜನಿಸಿದರು. ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಹೈಸ್ಕೂಲಿನಲ್ಲಿರುವಾಗಲೆ ತಂದೆ ನಾಟಕ ಮಾಸ್ತರಾದ ಕೃಷ್ಣರಾವ್ ಅವರ ಆಸಕ್ತಿಯಿಂದಾಗಿ ಸದಾರಮೆ ನಾಟಕದ ಮೂಲಕ ರಂಗಭೂಮಿ ಪ್ರವೇಶ, ಧರ್ಮ ವಿಜಯ, ಕೃಷ್ಣಸಂಧಾನ ನಾಟಕಗಳ ದೌಪದಿ, ಕುಂತಿ, ಗಾಂಧಾರಿ, ಪ್ರಚಂಡ ರಾವಣ, ಸೀತೆ, ಮಂಡೋದರಿ, ಭಕ್ತ ಪ್ರಹ್ಲಾದದ ಕಯಾದು ಹೀಗೆ ವೈವಿಧ್ಯಮಯ ಪಾತ್ರಗಳ ಸಮರ್ಥ ನಿರ್ವಹಣೆ. ಚಲನಚಿತ್ರಗಳಲ್ಲೂ ಅಭಿನಯಿಸಿರುವ ಶ್ರೀಮತಿ ಪ್ರತಿಭಾ ನಾರಾಯಣ್ ಅವರು ೧೯೯೭ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಶೇಷಾದ್ರಿ ನಾಟಕ ಮಂಡಳಿಯಲ್ಲಿ ರಂಗಭೂಮಿ ನಟಿಯಾಗಿ ಸಾವಿರಾರು ಪ್ರದರ್ಶನ ನೀಡಿ ಜನರ ಮೆಚ್ಚುಗೆ ಪಡೆದಿರುವ ಅಪೂರ್ವ ಕಲಾವಿದೆ ಮತ್ತು ಅದ್ಭುತ ಕಂಠಸಿರಿಯ ಗಾಯಕಿ ಪ್ರತಿಭಾ ನಾರಾಯಣ್ ಅವರು.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪ್ರಭಾಕರ ಸಾತಖೇಡ್

ಹವ್ಯಾಸಿ ರಂಗಭೂಮಿ, ರೇಡಿಯೋ, ಚಲನಚಿತ್ರ ಮೊದಲಾದ ಸಾಂಸ್ಕೃತಿಕ ರಂಗದಲ್ಲಿ ಒಲವುಳ್ಳವರು ಶ್ರೀ ಪ್ರಭಾಕರ ಸಾತಖೇಡ ಅವರು.
ಜನನ ೧೯೪೬ರಲ್ಲಿ . ಗಿರಡ್ಡಿ ಗೋವಿಂದರಾಜ, ಕುಸನೂರು, ಪ್ರೇಮಾ ಕಾರಂತ ಮೊದಲಾದವರ ಕನ್ನಡ ಸಂಸ್ಕೃತ ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಕಂಬಾರ, ಕುರ್ತಕೋಟಿ, ಶ್ರೀರಂಗ, ಕುಸನೂರ ಮೊದಲಾದವರ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಕಲಬುರ್ಗಿಯ ರಂಗೋದ್ಯಮ ಸಂಸ್ಥೆಯ ಸಂಚಾಲಕರಾಗಿ ಕನ್ನಡ ಸಾಹಿತ್ಯ ಸಂಘದ ನಾಟಕ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನ ನಾಟಕಗಳಲ್ಲಿ ಅಭಿನಯಿಸಿರುವ ಶ್ರೀಯುತರು ‘ಆಧುನಿಕ ದ್ರೋಣ’ ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಅದ್ಭುತ ಅಭಿನಯದಿಂದಾಗಿ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಸಿದ್ಧ ನಟ, ನಿರ್ದೇಶಕರಾಗಿ ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಲಾವಿದ ಶ್ರೀ ಪ್ರಭಾಕರ ಸಾತಖೇಡ ಅವರು.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪ್ರಸನ್ನ

ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ರಂಗಭೂಮಿಯ ಪ್ರಯೋಗಶೀಲ ಹಾಗೂ ಪ್ರತಿಭಾವಂತ ನಿರ್ದೇಶಕರು ಶ್ರೀ ಪ್ರಸನ್ನ ಅವರು.
ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ೧೯೫೧ರಲ್ಲಿ ಜನನ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್ಸಿ ., ಪದವಿ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಡಿಪ್ಲೊಮಾ ಪಡೆದಿದ್ದಾರೆ.
೧೯೭೫ರಲ್ಲಿ ಸಮುದಾಯ ಆರಂಭಿಸಿ, ನಾಟಕವನ್ನು ಜನತೆಯ ಬಳಿಗೆ ಕೊಂಡೊಯ್ದವರು. ತಾಯಿ, ಕದಡಿದ ನೀರು, ಗೆಲಿಲಿಯೋ, ದಂಗೆಯ ಮುಂಚಿನ ದಿನಗಳು, ಮ್ಯಾಕ್ ಬೆತ್ ನಾಟಕಗಳ ನಿರ್ದೇಶನದ ಮೂಲಕ ಗಂಭೀರ ರಂಗಾಸಕ್ತರ ಗಮನ ಸೆಳೆದವರು. ತಮಿಳುನಾಡು, ಕೇರಳ, ಬಿಹಾರ, ಮಧ್ಯಪ್ರದೇಶಗಳಲ್ಲಿ ನಾಟಕ ಶಿಬಿರಗಳನ್ನು ಆಯೋಜಿಸಿದ್ದಾರೆ.
ತದ್ರೂಪಿ, ಒಂದು ಲೋಕದ ಕಥೆ, ಹದ್ದು ಮೀರಿದ ಹಾದಿ, ಜಂಗಮದ ಬದುಕು, ಮಹಿಮಾಪುರ ನಾಟಕಗಳನ್ನು, ನೌಟಂಕಿ, ಸ್ವಯಂವರ ಮುಂತಾದ ಕಾದಂಬರಿಗಳನ್ನು ಹಾಗೂ ‘ನಾಟಕ:ರಂಗಕೃತಿ’ ಎಂಬ ಬಹುಚರ್ಚಿತ ಕೃತಿಗಳನ್ನು ರಚಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಪ್ರಸನ್ನ ವಿದೇಶಗಳನ್ನೂ ಸುತ್ತಿ ಬಂದಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿರುವ ಶ್ರೀ ಪ್ರಸನ್ನ ಅವರು ನಮ್ಮ ಸಂದರ್ಭದ ರಂಗಭೂಮಿಯ ಅನನ್ಯ ಪ್ರತಿಭೆ.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಜಶೇಖರ ಕದಂಬ

ಮೈಸೂರಿನಲ್ಲಿ ಕದಂಬ ರಂಗವೇದಿಕೆ ಕಟ್ಟಿಕೊಂಡು ಕಳೆದ ಮೂರು ದಶಕಗಳಿಂದ ದುಡಿಯುತ್ತಿರುವ ರಾಜಶೇಖರ ಕದಂಬ ‘ರಂಗಮಿತ್ರ ಕದಂಬ’ ಎಂದೇ ಪ್ರಸಿದ್ಧರು. ನಟ, ಸಂಘಟಕ, ನಿರ್ದೇಶಕ ಹಾಗೂ ಲೇಖಕರಾಗಿಯೂ ಹೆಸರು ಮಾಡಿರುವವರು. ನೂರಾರು ನಾಟಕಗಳಲ್ಲಿ ಅಭಿನಯಿಸಿ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ, ಒಂದು ಗುಂಪು ಮಾಡಬಲ್ಲ ಕೆಲಸವನ್ನು ಒಬ್ಬರೇ ಮಾಡುವ ಸಾಮರ್ಥ್ಯವನ್ನು ಪ್ರಕಟಿಸಿರುವ ಕದಂಬರ ರಂಗಭೂಮಿಯ ಬದ್ಧತೆ ಅಚ್ಚರಿ ಹುಟ್ಟಿಸುವಂಥದ್ದು. ದುರ್ಗಾಸ್ತಮಾನ, ಹೆಜ್ಜಾಲ, ಧರ್ಮಕೊಂಡದ ಕಥೆ ಇವು ಕದಂಬರ ನಾಟಕ ತಂಡದ ಅತ್ಯಂತ ಯಶಸ್ವೀ ನಾಟಕಗಳು. ಸುಮಾರು ೪೫ ಕನ್ನಡ ಚಿತ್ರಗಳಲ್ಲೂ ದೂರದರ್ಶನದ ಧಾರಾವಾಹಿಗಳಲ್ಲೂ ನಟಿಸಿರುವ ಕದಂಬ ಮೈಸೂರು ಆಕಾಶವಾಣಿಯ ನಾಟಕ ಕಲಾವಿದರಾಗಿರುವುದಲ್ಲದೆ ಆಕಾಶವಾಣಿಗಾಗಿ ಅನೇಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಕುವೆಂಪು ಹಾಗೂ ಡಾ. ರಾಜ್ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಬಂದಾಗ ಅವರಿಬ್ಬರನ್ನೂ ಒಂದೇ ವೇದಿಕೆಯಲ್ಲಿ ಸನ್ಮಾನಿಸಿದ್ದು ಕದಂಬರ ಹೆಗ್ಗಳಿಕೆ.
ನಾಟಕ ಅಕಾಡೆಮಿಯ ಸದಸ್ಯರಾಗಿ ಗ್ರಾಮೀಣ ಹವ್ಯಾಸಿ ತಂಡಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಲ್ಲದೆ ಕಾಲೇಜು ರಂಗಭೂಮಿಯ ಚಟುವಟಿಕೆಗಳನ್ನು ಜೀವಂತಗೊಳಿಸಲು ಪ್ರಯತ್ನಿಸಿದರು.
ಕದಂಬರನ್ನು ಅರಸಿಕೊಂಡು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಚಿತ್ರದುರ್ಗ ಮುರುಘರಾಜೇಂದ್ರ ಮಠದ ‘ಕಲಾರತ್ನ’ ಪ್ರಶಸ್ತಿಗಳು ಬಂದಿವೆ. ಏನಾದರೂ ಸಾಧಿಸಬೇಕೆಂಬ ಆವೇಶದಲ್ಲಿ ರಂಗಭೂಮಿಯಲ್ಲಿ ಗಣನೀಯ ಸಾಧನೆ ಮಾಡಿರುವ ದಣಿವರಿಯದ ರಂಗಕರ್ಮಿ ಶ್ರೀ ರಾಜಶೇಖರ ಕದಂಬ ಅವರು.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ

ಅತ್ಯಂತ ಕಡಿಮೆ ಅವಧಿಯಲ್ಲಿ ಅದ್ಭುತ ರಂಗಸಂಘಟನೆಯಾಗಿ ಬೆಳೆದ ಸಾಣೇಹಳ್ಳಿಯ ‘ಶಿವಸಂಚಾರ’ದ ಹಿಂದಿರುವ ಕ್ರಿಯಾಶೀಲ ಪ್ರತಿಭೆಯೇ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು.
ತರಳಬಾಳು ಜಗದ್ಗುರು ಶಾಖಾಮಠದ (ಸಾಣೇಹಳ್ಳಿ) ಸ್ವಾಮಿಗಳಾದ ಶ್ರೀಯುತರು ಮಠ, ಸ್ವಾಮೀಜಿಗಳ ಧಾರ್ಮಿಕ ವಲಯದಿಂದಾಚೆಗೂ ಬಯಲು ರಂಗಮಂದಿರ ನಿರ್ಮಾಣ, ಶಿವಕುಮಾರ ಪ್ರಶಸ್ತಿ ಸ್ಥಾಪನೆ, ಸಮಾಜಸೇವೆ, ನಾಟಕೋತ್ಸವ, ಸಾಹಿತ್ಯ ರಚನೆ, ಹೀಗೆ ತಮ್ಮ ಪ್ರತಿಭಾ ಕ್ಷೇತ್ರವನ್ನು ಸಮಾಜದ ಸೇವಾ ಕ್ಷೇತ್ರಗಳಿಗೆ ವಿಸ್ತರಿಸಿದ ಅಪೂರ್ವ ಶಕ್ತಿ ಇವರು. ಈ ದಿಸೆಯಲ್ಲಿ ೧೯೯೭ರಲ್ಲಿ ಸಿ.ಜಿ.ಕೆ. ಅವರ ಪ್ರೇರಣೆಯಿಂದ ಅವರು ಸ್ಥಾಪಿಸಿದ ಶಿವಸಂಚಾರ ಈವರೆಗೆ ೨೧ ನಾಟಕಗಳನ್ನು ಪ್ರಯೋಗಕ್ಕೆ ಅಳವಡಿಸಿ ನಾಡಿನಾದ್ಯಂತ ಸಂಚರಿಸಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ದಾಖಲೆ ಸೃಷ್ಟಿಸಿದೆ. ಕನ್ನಡ ರಂಗಭೂಮಿಯಲ್ಲಿಂದು ಅಪಾರ ಬೇಡಿಕೆ ಇರುವ ಶಿವಸಂಚಾರ ತಂಡ ಕರ್ನಾಟಕದ ಮನೆ ಮಾತಾಗಿದೆ. ಪ್ರತಿ ವರ್ಷ ಇಪ್ಪತ್ತೈದು ಕಲಾವಿದರಿಗೆ ತರಬೇತಿ ನೀಡಿ ಅವರಿಗೆ ಎಲ್ಲ ಸೌಲಭ್ಯಗಳನ್ನು ಗೌರವಧನದೊಂದಿಗೆ ನೀಡಿ ಸಾಮಾಜಿಕ ಪರಿವರ್ತನೆಗೆ, ಸಮಾನತೆಗೆ ಒತ್ತುಕೊಡುವ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸುವ ಶಿವಸಂಚಾರ ತಂಡ ಕನ್ನಡ ರಂಗಭೂಮಿಗೆ ಭವಿಷ್ಯದ ಭರವಸೆಯೂ ಹೌದು.
ಕನ್ನಡ ರಂಗಭೂಮಿಯಲ್ಲಿ ಮೌನ ಕ್ರಾಂತಿಯೊಂದಕ್ಕೆ ನಾಂದಿ ಹಾಡಿ ಅದರ ಭವಿತವ್ಯಕ್ಕೆ ಬೆಳ್ಳಿ ರೇಖೆಗಳನ್ನು ಮೂಡಿಸಿದ ಅಪೂರ್ವ ಶಕ್ತಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು.

Categories
ರಂಗಭೂಮಿ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ

ಜಾನಪದ ರಂಗಭೂಮಿಯ ಸಣ್ಣಾಟದ ವೃತ್ತಿ ಕಲಾವಿದೆಯಾಗಿ ಸುಮಾರು ಒಂದು ಸಾವಿರದ ಏಳುನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಎಲೆಮರೆಯ ಕಾಯಿಯಂತೆ ಬದುಕುತ್ತಿರುವ ಅಪ್ಪಟ ಕಲಾವಿದೆ ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ನಾವಲಗಟ್ಟಿಯಲ್ಲಿ ಅತ್ಯಂತ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟ ಅವರು ತಮ್ಮ ೧೭ನೆಯ ವಯಸ್ಸಿನಲ್ಲಿಯೇ ರಂಗಭೂಮಿ ಪ್ರವೇಶಿಸಿದರು. ಸಂಗ್ಯಾಬಾಳ್ಯಾ, ರಾಧಾಕೃಷ್ಣ ಶ್ರೀ ಕೃಷ್ಣಪಾರಿಜಾತ ಮುಂತಾದ ಸಣ್ಣಾಟಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದಿವಂಗತ ಪರಪ್ಪಾ ಬಳಿಗಾರ, ಕಾಸಪ್ಪಗೆಜ್ಜಿ ದಿವಂಗತ ಭಾಗೀರತವ್ವ ತಾಯಿ ಬಸವಣ್ಣೆಪ್ಪ ಮುಂತಾದವರಿಂದ ಸಣ್ಣಾಟ ಕಲಿತು ಕರಗತ ಮಾಡಿಕೊಂಡವರು. ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲದೆ ಮಹಾರಾಷ್ಟ್ರ ರಾಜ್ಯದ ಗಡಿಭಾಗಗಳಲ್ಲೂ ಬಹು ಪ್ರಸಿದ್ದಿ.

ಕರ್ನಾಟಕದ ಜಾನಪದ ಯಕ್ಷಗಾನ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು. ಕಲೆಯನ್ನೇ ಉಸಿರಾಗಿಸಿಕೊಂಡ ಇವರಿಗೆ ಭಾರತ ಸರ್ಕಾರದ ಸೀನಿಯರ್ ಫೆಲೋಶಿಪ್ -೨೦೦೦, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-೯೩, ಜಾನಪದ ಸಂಶೋಧನಾ ಕೇಂದ್ರ, ಕಿತ್ತೂರು ಪ್ರಶಸ್ತಿ-೯೭, ಕರ್ನಾಟಕ ಜಾನಪದ ಪರಿಷತ್ತಿನ ಪ್ರಶಸ್ತಿ-೯೯ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

ತಾಯಿ, ಅಜ್ಜಿಯವರ ಮೂಲಕ ಮನೆತನದಲ್ಲಿ ಪರಂಪರಾನುಗತವಾಗಿ ಹರಿದುಬಂದ ಸಣ್ಣಾಟ ಕಲೆಯಲ್ಲಿ ಅಸಾಧಾರಣ ಸಾಧನೆಗೈದ ಶ್ರೀಮತಿ ಲಲಿತಾ ರಾಚಪ್ಪ ಪಾತ್ರೋಟರು ಮಂಡಲ ಪಂಚಾಯತ್ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ ವಿಶಿಷ್ಟ ಕಲಾವಿದೆ.

Categories
ರಂಗಭೂಮಿ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಸಿ ಬಸವಲಿಂಗಯ್ಯ

ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ, ಸಂಘಟಕರಾಗಿ, ಕನ್ನಡ ರಂಗಭೂಮಿಗೆ ವಿಶೇಷತೆ ತಂದುಕೊಟ್ಟವರು ಶ್ರೀ ಸಿ ಬಸವಲಿಂಗಯ್ಯ ಅವರು.

ಜನನ ೧೯೫೮ರಲ್ಲಿ, ಕನ್ನಡ ಸ್ನಾತಕೋತ್ತರ ಪದವಿಯ ಜೊತೆಗೆ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರಾದ ಶ್ರೀಯುತರು ಕನ್ನಡ ರಂಗಭೂಮಿಗೆ ರಾಷ್ಟ್ರೀಯ ಮಾನ್ಯತೆ ತಂದುಕೊಟ್ಟಿರುವ ಪ್ರಮುಖ ಕಲಾವಿದರು.

ರಾಷ್ಟ್ರೀಯ ನಾಟಕ ಶಾಲೆಯ ಫೆಲೋಶಿಪ್‌ನಲ್ಲಿ ಉತ್ತರ ಕರ್ನಾಟಕದ ಜಾನಪದ ರಂಗಕಲೆಗಳ ಅಧ್ಯಯನ ಮಾಡಿದ ಬಸವಲಿಂಗಯ್ಯನವರು ರಂಗಭೂಮಿಯ ಸಮಗ್ರ ಅಭಿವೃದ್ಧಿಯ ಸಂಚಾಲಕರಾಗಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ನಾಟಕ ಕರ್ನಾಟಕ ರಂಗಾಯಣದ ರೆಪರ್ಟರಿಯಲ್ಲಿ ರಂಗಪ್ರಮುಖರಾಗಿ ಹಾಗೂ ರಂಗ ತರಬೇತಿ ಶಿಬಿರಗಳ ಸಂಘಟಕರಾಗಿ ಹಾಗೂ ರಂಗಾಯಣದ ನಿರ್ದೆಶಕರಾಗಿ ರಂಗಭೂಮಿಗಾಗಿ ಇವರು ನೀಡಿದ ಕೊಡುಗೆ ಅಮೂಲ್ಯವಾದುದು.

ಶ್ರೀಯುತರು ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ೩೦ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ನೀಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಮಾದಾರಿ ಮಾದಯ್ಯ, ಸಂಕ್ರಾಂತಿ, ಹುಲಿಯ ನೆರಳು, ಮ್ಯಾಕ್ ಬೆತ್, ಸಂತ್ಯಾಗ ನಿಂತಾನ, ಕಬೀರ, ಅಂಧಯುಗ, ಉಚಲ್ಯ, ಕುಸುಮಬಾಲೆ ಇವರ ನಿರ್ದೆಶನದ ಪ್ರಮುಖ ನಾಟಕಗಳಾಗಿದ್ದು, ಜನಮನದಲ್ಲಿ

ನೆಲೆಯೂರಿವೆ.

ಸುಮಾರು ೮೦ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ರಾಷ್ಟ್ರವ್ಯಾಪಿ ಸಂಘಟಿಸಿ ರಂಗಚಳುವಳಿಯನ್ನು ನಿರಂತರವಾಗಿ ಕಾಯ್ದಿಟ್ಟುಕೊಂಡ ಕ್ರಿಯಾಶೀಲ ಕಲಾವಿದರಿಗೆ ೧೯೯೬ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಫೆಲೋಷಿಪ್ ನೀಡಿ ಗೌರವಿಸಿದೆ.

Categories
ರಂಗಭೂಮಿ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಷೀರ್

ನಾಟಕಕಾರರಾಗಿ, ನಿರ್ದೇಶಕರಾಗಿ, ಸಂಘಟಕರಾಗಿ, ನಟರಾಗಿ ೪೦ ವರ್ಷಗಳಿಂದ ಕಲಾಸೇವೆ ಮಾಡುತ್ತಿರುವ ಕನ್ನಡ ರಂಗಭೂಮಿಯ ಕ್ರಿಯಾಶೀಲ ಚೇತನ, ರಂಗಕರ್ಮಿ ಶ್ರೀ ಬಷೀರ್ ಅವರು.

ತಮ್ಮ ಎಳೆಯ ವಯಸ್ಸಿನಲ್ಲಿಯೇ ರಂಗಭೂಮಿಯ ಕಡೆಗೆ ಒಲವನ್ನು ಬೆಳೆಸಿಕೊಂಡ ಶ್ರೀ ಬಷೀರ್ ಅವರು ೧೯೫೯ರಿಂದ ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ನಾಟಕ ರಚನೆ, ನಿರ್ದೆಶನ ಮತ್ತು ಅಭಿನಯ ಮೂರರಲ್ಲೂ ಸಾಧನೆ ಮಾಡಿ ಮಾಗಿದ ವ್ಯಕ್ತಿತ್ವ ಇವರದು. ಸಾಮಾಜಿಕ ವಸ್ತುಗಳಿಗಿಂತಲೂ ಇತಿಹಾಸದ ಗಟ್ಟಿ ವಸ್ತುಗಳ ಕಡೆಗೆ ಶ್ರೀಯುತರ ಆಸಕ್ತಿ, ಚಾರಿತ್ರಿಕ, ಪೌರಾಣಿಕ ವಸ್ತುಗಳ ೩೦ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. ಸನ್ನಿವೇಶದ ಚಿತ್ರಣವನ್ನು ದೇಶ, ಕಾಲ, ಭಾಷೆ ಹಾಗೂ ಇತಿಹಾಸಕ್ಕೆ ಹೊಂದುವಂತೆ, ಪರಿಣಾಮಕಾರಿ ಸಂಭಾಷಣೆಯೊಂದಿಗೆ ಬರೆಯುವ ಕಲೆ ಶ್ರೀ ಬಷೀರ್ ಅವರಿಗೆ ಸಿದ್ಧಿಸಿದೆ. ಪ್ರೇಕ್ಷಕನ ಹೃದಯತಟ್ಟುವ ಶೈಲಿಯಲ್ಲಿ ಮತ್ತು ಆಕರ್ಷಕ ಪಾತ್ರ ಸೃಷ್ಟಿಯಲ್ಲಿ ಶ್ರೀಯುತರ ಸೃಜನಶೀಲತೆ ಮೇಲುಗೈ ಸಾಧಿಸುತ್ತದೆ. ಸ್ವತಃ ಕಲಾವಿದರಾಗಿರುವ ಶ್ರೀ ಬಷೀರ್ ಅವರು ಪ್ರತಿ ಪಾತ್ರವನ್ನೂ ಅನುಭವಿಸಿ, ದೃಶ್ಯವನ್ನು ಆದ್ರ್ರವಾಗಿಸಿ, ಪಾತ್ರಗಳಿಗೆ ಜೀವ ತುಂಬುತ್ತಾರೆ. ನಾಟಕ ನಿರ್ದೇಶನದಲ್ಲೂ ‘ಸೈ’ ಎನ್ನಿಸಿಕೊಂಡಿದ್ದಾರೆ. ಕಿತ್ತೂರ ರಾಣಿ ಚೆನ್ನಮ್ಮ, ಟಿಪ್ಪುಸುಲ್ತಾನ್, ಸಂಗೊಳ್ಳಿ ರಾಯಣ್ಣ ಶಿವಶಕ್ತಿ, ರಕ್ತಾಂಜಲಿ, ಅಮೋಘವರ್ಷ ನೃಪತುಂಗ, ರಣಕಹಳೆ, ಭೂಕೈಲಾಸ, ಕಚದೇವಯಾನಿ, ಚಂದ್ರೋದಯ, ದತ್ತುಮಗು, ರತ್ನಹಾರ, ಕ್ರಾಂತಿಪಂಜು, ಈದ್‌ಮಿಲಾದ್, ಧರ್ಮಜ್ಯೋತಿ ಮುಂತಾದವು ಇವರ ಜನಪ್ರಿಯ ಕೃತಿಗಳು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಚೇತನ ಪ್ರಶಸ್ತಿ ಮೊದಲಾದ ಪುರಸ್ಕಾರಗಳು ಇವರಿಗೆ ಸಂದಿವೆ.

ಕನ್ನಡದ ಕ್ರಿಯಾಶೀಲ, ನಿಷ್ಠಾವಂತ, ಪ್ರತಿಭಾಪೂರ್ಣ ಪ್ರಮುಖ ನಾಟಕಕಾರರಲ್ಲಿ ಶ್ರೀ ಬಷೀರ್ ಅವರೂ ಒಬ್ಬರು ಎಂಬುದು ಹೆಮ್ಮೆಯ ವಿಷಯ.

Categories
ರಂಗಭೂಮಿ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಮರಿಯಮ್ಮನಹಳ್ಳಿ ಕೆ. ನಾಗರತ್ನಮ್ಮ

ಶ್ರೀಮತಿ ನಾಗರತ್ನಮ್ಮ ಗ್ರಾಮೀಣ ರಂಗಭೂಮಿಯ ಅಪ್ಪಟ ಪ್ರತಿಭಾವಂತ ವೃತ್ತಿನಟ.

ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಕಳೆದ ೩೫ ವರ್ಷಗಳಿಂದ ೮೦೦೦ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವ ಕೆ. ನಾಗರತ್ನಮ್ಮ ಕಲಾವಿದರ ತವರೆನಿಸಿರುವ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಮರಿಯಮ್ಮನ ಹಳ್ಳಿಯವರು.

ಗ್ರಾಮೀಣ ಭಾಗದ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹೀಗೆ ಎಲ್ಲ ಪ್ರಕಾರದ ನಾಟಕಗಳಲ್ಲದೆ, ಪಟ್ಟಣಗಳಲ್ಲಿ ಹವ್ಯಾಸಿಗಳು ಅಭಿನಯಿಸುವ ವಿಭಿನ್ನ ರೀತಿಯ ಪ್ರಾಯೋಗಿಕ ನಾಟಕಗಳು ಹಾಗೂ ಜಾನಪದ ನಾಟಕಗಳಿಂದ ಪ್ರಸಿದ್ದಿ ಪಡೆದಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಭಾರ್ಗವ ಪ್ರಶಸ್ತಿ ಸೇರಿದಂತೆ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ೩೫ ಬಾರಿ ಬಹುಮಾನ ಪಡೆದಿದ್ದಾರೆ. ನಾಟಕ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಲಲಿತಕಲಾ ರಂಗ ಹಾಗೂ ಮಹಿಳಾ ವೃತ್ತಿರಂಗ ಕಲಾವಿದರ ಸಂಘದ ಸ್ಥಾಪಕ ಸದಸ್ಯರು.

ತಮ್ಮ ಸುದೀರ್ಘ ಗ್ರಾಮೀಣ ರಂಗ ಅನುಭವಗಳ ‘ಮರಿಯಮ್ಮನಹಳ್ಳಿ ರಂಗಸಿರಿ’ ಸುಧಾ ವಾರಪತ್ರಿಕೆಯಲ್ಲಿ ೧೯ ವಾರ ಕಾಲ ಧಾರಾವಾಹಿಯಾಗಿ ಪ್ರಕಟವಾಗಿದೆ. ಹೊಸಪೇಟೆ ತಾಲೂಕು ಪಂಚಾಯಿತಿ ಸದಸ್ಯೆ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಹಾಗೂ ಪಟ್ಟಣದ ಹವ್ಯಾಸಿ ತಂಡಗಳೆರಡರ ಪ್ರಾತಿನಿಧಿಕ ಸ್ವರೂಪ ಶ್ರೀಮತಿ ಕೆ. ನಾಗರತ್ನ ಅವರು.

Categories
ರಂಗಭೂಮಿ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿ ವಿ ಚೆನ್ನಬಸಪ್ಪ

ನಟರಾಗಿ, ಕಂಪನಿಯ ಮಾಲೀಕರಾಗಿ, ಕಲಾವಿದರಿಗೆ ಆತ್ಮೀಯ ಬಸಣ್ಣನಾಗಿ ಕನ್ನಡ ರಂಗಭೂಮಿಗೆ ಸುಪರಿಚಿತರು ಶ್ರೀ ಚೆನ್ನಬಸಪ್ಪ ಅವರು.

ನಾಟಕರತ್ನ ಗುಬ್ಬಿ ವೀರಣ್ಣ ಹಾಗೂ ಭದ್ರಮ್ಮನವರ ಹಿರಿಯ ಮಗನಾದ ಶ್ರೀಯುತರು ೧೯೨೬ರಲ್ಲಿ ಜನಿಸಿದರು. ಸಣ್ಣಪುಟ್ಟ ಪಾತ್ರಗಳ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದ ಶ್ರೀ ಚೆನ್ನಬಸಪ್ಪ ಅವರು ಗುಬ್ಬಿ ಕಂಪನಿಯ ಮುನ್ನಡೆಗೆ, ವೃತ್ತಿರಂಗಭೂಮಿಯ ಚೈತನ್ಯಕ್ಕೆ ಹೆಗಲು ಕೊಟ್ಟ ಹಿರಿಯರು. ಹೊಸ ಹೊಸ ರಂಗತಂತ್ರಗಳನ್ನು ಅಳವಡಿಸುತ್ತ ತಂದೆಯವರ ಗುಬ್ಬಿ ಕಂಪನಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ರಂಗಕಲೆಯನ್ನು ರಕ್ತಗತವಾಗಿ ಪಡೆದಿರುವ ಶ್ರೀ ಚೆನ್ನಬಸಪ್ಪ ಅವರು ‘ಸಾಹುಕಾರ’ ನಾಟಕದ ವಿಜಯಾನಂದನಾಗಿ, ‘ಕಾಲಚಕ್ರ’ ನಾಟಕದ ಶಂಕರನಾಗಿ, ‘ಅಣ್ಣತಮ್ಮ’ ನಾಟಕದ ಶೈಲೇಂದ್ರನಾಗಿ ಪಾತ್ರಗಳಿಗೆ ಜೀವ ತುಂಬಿದರು; ಜನರನ್ನು ರಂಜಿಸಿದರು. ಭಕ್ತಿ ಪ್ರಧಾನ ನಾಟಕಗಳ ಗುರುಸ್ಥಾನದ ಪಾತ್ರಗಳಲ್ಲಿ ಈ ಕಲಾವಿದರದು ಎತ್ತಿದ ಕೈ. ‘ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ’, ‘ಬಸವೇಶ್ವರ’, ‘ಶಿರ್ಡಿ ಸಾಯಿಬಾಬ’ಗಳಂಥ ಪಾತ್ರಗಳು ಅವರ ಕಲಾಪ್ರೌಢಿಮೆಗೆ ಸಾಕ್ಷಿಯಾಗಿವೆ, ಜನಮನದಲ್ಲಿ ಸ್ಥಿರವಾಗಿ ನಿಂತಿವೆ. ಗುಬ್ಬಿ ಕುಟುಂಬವೇ ಕಲೆಗೆ ಮೀಸಲಾದ ಕುಟುಂಬ. ಆಕಸ್ಮಿಕವಾಗಿ ರಂಗಭೂಮಿಗೆ ಪ್ರವೇಶ ಮಾಡಿದ ಶ್ರೀಯುತರು ಇಂದು ರಂಗಭೂಮಿಗೆ ಅತ್ಯಗತ್ಯ ಹಾಗೂ ಅನಿವಾರ್ಯ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಮೊದಲು ವ್ಯವಸ್ಥಾಪಕರಾಗಿದ್ದು ಗುಬ್ಬಿ ಕಂಪನಿಯನ್ನು ಬೆಳೆಸಿ, ಈಗ ಮಾಲೀಕತ್ವದ ಹೊಣೆ ಹೊತ್ತಿದ್ದಾರೆ.

ರಂಗಕಲೆಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡಿರುವ ಶ್ರೀ ಜಿ.ವಿ. ಚೆನ್ನಬಸಪ್ಪ ಪ್ರಬುದ್ಧ ಅಭಿನಯದ ಶ್ರೇಷ್ಠ ಕಲಾವಿದರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದೇವಪುತ್ರ

ಜಾನಪದ ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ತಬಲಾ ಕಲಾವಿದ ಶ್ರೀ ದೇವಪುತ್ರ ಅವರು.
ರಾಯಚೂರಿನಲ್ಲಿ ೧೯೨೭ ರಲ್ಲಿ ಜನಿಸಿದ ಶ್ರೀ ದೇವಪುತ್ರ ಅವರು ಕಲೆಯ ಗೀಳನ್ನು ಹಚ್ಚಿಕೊಂಡು, ಹದಿನಾರು ವರ್ಷದವರಿರುವಾಗಲೇ ಕಲಾಸೇವೆಯನ್ನು ಆರಂಭಿಸಿದರು. ರಾಯಚೂರು, ಕೊಪ್ಪಳಗಳಲ್ಲಿ ಮನೆಮಾತಾಗಿರುವ ಶ್ರೀ ದೇವಪುತ್ರ ಅವರು ಐದು ದಶಕಗಳಿಂದ ತಬಲಾ ವಾದಕರಾಗಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ.
ತಬಲಾ, ಡೋಲಕ್, ಹಲಗೆ, ಮದ್ದಲಿ, ದಮಡಿ ಬಾರಿಸುವುದರಲ್ಲಿಯೂ ಪರಿಣತಿ ಪಡೆದಿರುವ ಶ್ರೀ ದೇವಪುತ್ರರು ತತ್ವಪದಗಳನ್ನು ಹಾಡುವುದರಲ್ಲಿಯೂ ಸಿದ್ಧಹಸ್ತರು, ರಾಯಚೂರು, ಕೊಪ್ಪಳಗಳಲ್ಲಿ ದೊಡ್ಡಾಟ ಎಲ್ಲಿ ನಡೆದರೂ ಮದ್ದಲಿ ವಾದಕರಾಗಿ ಜನಪ್ರಿಯತೆ ಪಡೆದಿರುವ ಶ್ರೀಯುತರು ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು.
ಅನೇಕ ರಂಗಭೂಮಿ ಕಲಾವಿದರಿಗೆ ತಬಲಾ ಸಾಥಿಯಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಅಖಿಲ ಭಾರತ ೬೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮೈಸೂರು ದಸರಾ ಮಹೋತ್ಸವ, ಮುಂಬಯಿಯ ಭಾರತೀಯ ವಿಕಾಸ ಪರಿಷತ್ ಮೊದಲಾದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ೧೯೯೮ರ ಸಾಲಿನ ಪ್ರಶಸ್ತಿ ಪುರಸ್ಕೃತರು.
ಸ್ವಯಂ ಪರಿಶ್ರಮ, ಸತತ ಸಾಧನೆಯಿಂದ ಜಾನಪದ ಕಲಾವಿದರಾಗಿ ಸಿದ್ಧಿಯನ್ನು ಪಡೆದವರು ಶ್ರೀ ದೇವಪುತ್ರ ಅವರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪಿ. ಪದ್ಮ

ನಾಟಕಗಳ ವಿಭಿನ್ನ ಪಾತ್ರಗಳಲ್ಲಿ ತನ್ಮಯತೆಯಿಂದ ನಟಿಸಿ ಪ್ರೇಕ್ಷಕರ ಅಭಿಮಾನಕ್ಕೆ ಪಾತ್ರರಾದ ಪರಿಶಿಷ್ಟ ಪಂಗಡದ ಅಭಿಜಾತ ರಂಗ ಪ್ರತಿಭೆ ಶ್ರೀಮತಿ ಪಿ. ಪದ್ಮ ಅವರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯವರಾದ ಶ್ರೀಮತಿ ಪದ್ಮ ಅವರು ಬಾಲ್ಯದಿಂದಲೇ ನಾಟಕದ ಕಡೆಗೆ ಆಕರ್ಷಿತರಾದರು. ಕಡು ಬಡತನದಿಂದಾಗಿ ವಿದ್ಯಾಭ್ಯಾಸದಲ್ಲಿ ಹೆಚ್ಚು ಮುಂದೆ ಹೋಗಲಾಗಲಿಲ್ಲ. ಊರಿನಲ್ಲಿ ನಡೆಯುತ್ತಿದ್ದ ನಾಟಕ ಪ್ರದರ್ಶನಕ್ಕೆ ಹೋಗುತ್ತಿದ್ದು ಅದರಲ್ಲಿ ಹೆಚ್ಚು ಆಸಕ್ತಿಯುಂಟಾಗಿ ತಾವೂ ನಾಟಕಗಳಲ್ಲಿ ಪಾತ್ರವಹಿಸಲು ಪ್ರಾರಂಭಿಸಿದರು. ಉತ್ತಮ ಪ್ರೋತ್ಸಾಹ ದೊರೆಯಿತು. ಪ್ರತಿಭೆ ಬಹುಮುಖವಾಗಿ ಹೊರಹೊಮ್ಮತೊಡಗಿತು. ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಪತಿಯ ಮನೆಯಲ್ಲಿಯೂ ಉತ್ತೇಜನ ಸಿಕ್ಕಿತು.
ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳ ವಿಭಿನ್ನ, ವೈವಿಧ್ಯಮಯ ಪಾತ್ರಗಳು ಅವರನ್ನು ಅರಸಿ ಬಂದವು. ಪಾತ್ರಗಳ ಅಂತರಂಗವನ್ನು ಅರಿತು ತನ್ಮಯತೆಯಿಂದ ಅಭಿನಯಿಸುವುದು ಸಿದ್ಧಿಸಿ ಜನಪ್ರಿಯತೆ ಪಡೆದರು.
ಐವತ್ತು ವಸಂತಗಳನ್ನು ಪೂರೈಸಿರುವ ಶ್ರೀಮತಿ ಪದ್ಮ ಅವರು ಈವರೆಗೆ ಅಭಿನಯಿಸಿರುವ ನಾಟಕಗಳು ಸಾವಿರ ಸಂಖ್ಯೆಯನ್ನು ದಾಟಿವೆ. ಇವರಿಗೆ ಹತ್ತಾರು ಸಾವಿರ ಅಭಿಮಾನಿ ಬಳಗವಿದೆ. ಊರಿನ ಅಭಿವೃದ್ಧಿ ಕಾರ್ಯಗಳಿಗೆ ಧನ ಸಂಗ್ರಹಿಸಲು ಸಹಾಯಾರ್ಥ ನಾಟಕ ಪ್ರದರ್ಶನದಲ್ಲಿ ಪಾತ್ರವಹಿಸಿ ಸಮಾಜ ಸೇವೆಯಲ್ಲಿ ತಮ್ಮ ಅಳಿಲು ಸೇವೆ ಸಲ್ಲಿಸಿದ್ದಾರೆ. ಕೂಡ್ಲಿಗಿ ತಾಲ್ಲೂಕು ಕನ್ನಡ ಜಾಗೃತ ಸಮಿತಿ ಸದಸ್ಯರಾಗಿಯೂ ದುಡಿದಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನಾಟಕೋತ್ಸವ ಪ್ರಶಸ್ತಿ, ಕೂಡ್ಲಿಗಿ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಮತ್ತು ಇತರ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿ
ಗೌರವಗಳು ಇವರಿಗೆ ಸಂದಾಯವಾಗಿದೆ.
ಹಿಂದುಳಿದ ಜನಾಂಗದಲ್ಲಿ ಜನಿಸಿ ತಮ್ಮ ವೈಯಕ್ತಿಕ ಪರಿಶ್ರಮ ಮತ್ತು ಸಾಧನೆಯಿಂದ ನಾಟಕ ಕಲಾ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿರುವ ಪ್ರತಿಭಾಪೂರ್ಣ ರಂಗತಾರೆ ಶ್ರೀಮತಿ ಪಿ. ಪದ್ಮ ಅವರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ದೀವಟಿಗೆ ಎಲ್. ಕೃಷ್ಣಪ್ಪ

ನಟರಾಗಿ, ರಂಗ ನಿರ್ವಾಹಕರಾಗಿ, ನಿರ್ದೇಶಕರಾಗಿ, ಬೆಳಕು ವಿನ್ಯಾಸಕಾರರಾಗಿ, ರಂಗ ವಿನ್ಯಾಸಕಾರರಾಗಿ, ರಂಗ ಶಿಬಿರಗಳ ಸಂಘಟನಾಕಾರರಾಗಿ, ನಾಟಕೋತ್ಸವ, ವಿಚಾರ ಸಂಕಿರಣಗಳ ಸಂಘಟಕರಾಗಿ, ರಂಗಪುಸ್ತಕಗಳ ಪ್ರಕಾಶಕರಾಗಿ, ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಗಂಧದ ಕೊರಡಿನ ಹಾಗೆ ತಮ್ಮನ್ನು ತೇಯ್ದುಕೊಳ್ಳುತ್ತ ಕನ್ನಡ ರಂಗಭೂಮಿಯಲ್ಲಿ ಪರಿಮಳ ಪಸರಿಸಿ ಎಲೆಮರೆಯ ಹೂವಾಗಿ ನಿಂತವರು ದೀವಟಿಗೆ ಕೃಷ್ಣಪ್ಪ,
ಆನೇಕಲ್ ತಾಲ್ಲೂಕಿನ ಹೆನ್ನಾಗರದಲ್ಲಿ ೧೯೪೮ರಲ್ಲಿ ಹುಟ್ಟಿದ ಎಲ್. ಕೃಷ್ಣಪ್ಪ ಓದಿದ್ದು ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ. ಚಿಕ್ಕಂದಿನಿಂದಲೇ ರಂಗಭೂಮಿಯ ಸೆಳೆತಕ್ಕೆ ಸಿಲುಕಿಕೊಂಡು ಮನೆ ತೊರೆದು ರಂಗಸ್ಥಳವನ್ನೇ ಆಸರೆಯಾಗಿಸಿಕೊಂಡವರು. ಪ್ರಜ್ವಲಿಸುವ ರಂಗ ಬೆಳಕಿನ ಮುಂದೆ ನಿಂತು ಮಿಂಚಲು ತುಡಿಯುತ್ತಿದ್ದವರೇ ಅಧಿಕವಾಗಿದ್ದ ದಿನಗಳಲ್ಲಿ ಬೆಳಕಿನ ಹಿಂದೆ ನಿಂತು ಅದನ್ನು ನಿರ್ದೇಶಿಸುವುದರಲ್ಲಿ ಕೃಷ್ಣಪ್ಪ ಪಡೆದ ಪ್ರಾವೀಣ್ಯದಿಂದಾಗಿ ರಂಗಾಸಕ್ತರು ಅವರನ್ನು ದೀವಟಿಗೆ ಕೃಷ್ಣಪ್ಪ ಎಂದೇ ಗುರುತಿಸುವಂತಾಯಿತು.
ಹೊಟ್ಟೆಪಾಡಿಗಾಗಿ ಸಿವಿಲ್ ಕಂಟ್ರಾಕ್ಟರ್ ಕೂಡ ಆಗಿರುವ ಕೃಷ್ಣಪ್ಪ ಕಟ್ಟುವುದೇ ಕಾಯಕ’ ಎನ್ನುವ ತತ್ವದಲ್ಲಿ ನಂಬಿಕೆಯಿರಿಸಿಕೊಂಡಿರುವವರು. ಸದ್ದುಗದ್ದಲವಿಲ್ಲದೆ ಕೆಲಸ ಮಾಡಿಕೊಂಡು ಹೋಗುವ ಸರಳ ವ್ಯಕ್ತಿ. ಜರ್ಮನಿಯ ಫಿಟ್ಸ್ ಬೆನವಿಡ್ಸ್ ಅವರ ನಿರ್ದೆಶನದ ರಂಗಶಿಬಿರದಲ್ಲಿ, ಲಂಡನ್‌ನ ಪೀಟರ್ ಬೂಕ್ ಅವರ ನಿರ್ದೇಶನದ ರಂಗ ಶಿಬಿರದಲ್ಲಿ, ನೀನಾಸಂ ಸಂಸ್ಥೆಯು ಯು.ಆರ್. ಅನಂತಮೂರ್ತಿಯವರ ನಿರ್ದೇಶನದಲ್ಲಿ ನಡೆಸಿದ ಸಂಸ್ಕೃತಿ ಶಿಬಿರದಲ್ಲಿ, ರಾಜ್ಯ ಸಂಗೀತ ನಾಟಕ ಅಕಾಡೆಮಿ ಶ್ರೀರಂಗರ ನಿರ್ದೇಶನದಲ್ಲಿ ನಡೆಸಿದ ಟ್ರೈನಿಂಗ್ ಆಫ್ ಡ್ರಮಾಟಿಕ್ಸ್‌ನಲ್ಲಿ ಭಾಗವಹಿಸಿ ಪಡೆದುಕೊಂಡ ಸಮೃದ್ದವೂ ವೈವಿಧ್ಯಮಯವೂ ಆದ ಅನುಭವಗಳನ್ನು ತಮ್ಮ ರಂಗ ಪ್ರಯೋಗಗಳಲ್ಲಿ ಅತ್ಯದ್ಭುತವಾಗಿ ಧಾರೆಯೆರೆದು ಜನರ ಮೆಚ್ಚುಗೆಗೆ ಪಾತ್ರರಾದರು. ಕೃಷ್ಣಪ್ಪನವರ ರಂಗಸೃಷ್ಟಿಯ ವಿರಾಟ್ ಸ್ವರೂಪದ ದರ್ಶನವಾದದ್ದು ಶ್ರೀರಂಗರ `ಸ್ವರ್ಗಕ್ಕೆ ಮೂರೇ ಬಾಗಿಲು’ ನಾಟಕದಲ್ಲಿ.
ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ಒಂದು ಅವಧಿಗೆ ಸದಸ್ಯರಾಗಿದ್ದ ಕೃಷ್ಣಪ್ಪ ಅವರನ್ನು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿಗಳು ಅರಸಿ ಬಂದಿವೆ.
ನಾಟಕದ ಮಾತುಗಳಿಗೆ, ವಿದ್ಯಮಾನಗಳಿಗೆ ನೆರಳು-ಬೆಳಕಿನಾಟದಲ್ಲಿ ಹೊಸ ಅರ್ಥ- ಆಯಾಮಗಳನ್ನು ಕಲ್ಪಿಸಿಕೊಟ್ಟು ತಮ್ಮ ಪ್ರತಿಭಾ ಚಾತುರ ಮತ್ತು ಕಲ್ಪನಾ ಸಾಮರ್ಥ್ಯಗಳಿಂದ ಎಂಥವರನ್ನೂ ಬೆರಗುಗೊಳಿಸುವರು ಶ್ರೀ ದೀವಟಿಗೆ ಎಲ್. ಕೃಷ್ಣಪ್ಪನವರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರೇಮಾ ಕಾರಂತ

ನಾಟಕ ನಿರ್ದೇಶನ, ಚಲನಚಿತ್ರ ನಿರ್ದೇಶನ, ರಂಗಭೂಮಿ ವಸ್ತ್ರ ವಿನ್ಯಾಸ — ಮಕ್ಕಳ ರಂಗಭೂಮಿ ಈ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿರುವವರು ಶ್ರೀಮತಿ ಪ್ರೇಮಾ ಕಾರಂತ್.
ಬಿ. ವಿ. ಕಾರಂತರಂಥ ದೈತ್ಯ ಪ್ರತಿಭೆಯ ಸಂಗಾತಿಯಾಗಿದ್ದೂ ಆ ಪ್ರಭಾವಳಿಯಿಂದ ಬಿಡಿಸಿಕೊಂಡು ಸ್ವಂತ ಪ್ರತಿಭೆಯ ಛಾಪನ್ನು ತಾವು ಪ್ರವೇಶಿಸಿದ ಎಲ್ಲ ಕ್ಷೇತ್ರಗಳಲ್ಲೂ ಮೂಡಿಸುವಲ್ಲಿ ಯಶ ಕಂಡ ಪ್ರೇಮಾ ಕಾರಂತ್ ಜನಿಸಿದ್ದು ೧೫ ಆಗಸ್ಟ್ ೧೯೩೬ರಲ್ಲಿ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಎಫ್.ಎ. ಪದವೀಧರರಾದ ಪ್ರೇಮಾ ಕಾರಂತ್ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಡಿಪ್ಲೊಮಾ ಪಡೆದವರು. ರಾಷ್ಟ್ರೀಯ ಪುಸ್ತಕ ಟ್ರಸ್ಟ್‌ನಿಂದ ಭಾಷಾಂತರಕಾರರಾಗಿ ಅಂಗೀಕೃತರಾದ ಪ್ರೇಮಾ ‘ಕುರುಡು ಕಾಂಚಾಣ’, ‘ಹಕ್ಕಿ ಹಾರುತಿದೆ ನೋಡಿದಿರಾ’, ‘ಕುಣಿಯೋ ಕತ್ತೆ’, ‘ನಾವೂ ನಾಟಕ ಆಡೋಣ ಬನ್ನಿ’ ಮುಂತಾದ ಕೃತಿಗಳನ್ನು ಭಾಷಾಂತರಿಸಿ ಕನ್ನಡದ ಸತ್ವವನ್ನು ಅನ್ಯ ಭಾಷೆಗಳಿಗೂ, ಅನ್ಯ ಭಾಷೆಗಳ ಸತ್ವವನ್ನು ಕನ್ನಡಕ್ಕೂ ತುಂಬಿ ಕೊಟ್ಟವರು.
ನಾಟಕ ನಿರ್ಮಾಣ ಮತ್ತು ನಿರ್ದೇಶನದಲ್ಲಿ ತಮ್ಮದೇ ಆದ ಮಾರ್ಗವನ್ನು ಕಂಡುಕೊಂಡು ಲಂಕೇಶರ `ಪೊಲೀಸರಿದ್ದಾರೆ ಎಚ್ಚರಿಕೆ’, ‘ತೆರೆಗಳು’; ಶ್ರೀರಂಗರ ‘ಸ್ವಗತ ಸಂಭಾಷಣೆ’, ‘ಕತ್ತಲೆ ಬೆಳಕು’; ಬೇಂದ್ರೆಯವರ ‘ಸಾಯೋ ಆಟ’; ಗಿರೀಶ್ ಕಾರ್ನಾಡರ ‘ಹಿಟ್ಟಿನ ಹುಂಜ’ ಮುಂತಾದವುಗಳ ಪ್ರಯೋಗಗಳು ಪ್ರೇಕ್ಷಕರ ಮನದಲ್ಲಿ ಬಹುಕಾಲ ಅಚೊತ್ತಿ ನಿಲ್ಲುವಂತೆ ಮಾಡಿವೆ. ಮಕ್ಕಳ ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ತೋರಿದ ಪ್ರೇಮಾ ಕಾರಂತ್ ‘ಹೆಡ್ಡಾಯಣ’, ‘ಅಲಿಬಾಬ’, ‘ನಕ್ಕಳಾ ರಾಜಕುಮಾರಿ’, ‘ಅಜ್ಜಿಕಥೆ, ‘ಇಸ್ಪೀಟ್ ರಾಜ್ಯ’, ‘ಪಂಟರ ಶಾಲೆ’, ‘ಸಿಂದ್‌ಬಾದ್’ ಮುಂತಾದ ನಾಟಕಗಳಲ್ಲಿ ತಮ್ಮ ವಿಶಿಷ್ಟ ಪ್ರತಿಭೆಯನ್ನು ಎರಕ ಹೊಯ್ದಿದ್ದಾರೆ. ‘ಜೋಕುಮಾರಸ್ವಾಮಿ’, ‘ಈಡಿಪಸ್’, ‘ಸಂಕ್ರಾಂತಿ’, ‘ಒಥೆಲೋ’, ‘ಕಿಂಗ್ ಲಿಯರ್’, ‘ಮ್ಯಾಕ್‌ಬೆತ್’ ಮುಂತಾದ ಕನ್ನಡ ನಾಟಕಗಳು ಮಾತ್ರವಲ್ಲದೇ ಕೆಲವು ಹಿಂದಿ, ಪಂಜಾಬಿ ನಾಟಕಗಳಲ್ಲೂ ದುಡಿದಿದ್ದಾರೆ. ಹಂಸಗೀತೆ, ಫಣಿಯಮ್ಮ, ಕುದುರೆ ಮೊಟ್ಟೆ, ಲಕ್ಷ್ಮೀಕಟಾಕ್ಷ ಮುಂತಾದ ಸಿನೆಮಾಗಳಿಗೂ ವಸ್ತ್ರವಿನ್ಯಾಸ ರೂಪಿಸಿ ಅಲ್ಲೂ ಸೊಬಗು, ಅರ್ಥವಂತಿಕೆಗಳನ್ನು ಸಾಕಾರಗೊಳಿಸಿದ್ದಾರೆ.
‘ಫಣಿಯಮ್ಮ’, ‘ನಕ್ಕಳಾ ರಾಜಕುಮಾರಿ’, ‘ಬಂದ್ ಝರೋಂಖೆ’ ಚಿತ್ರಗಳನ್ನು ನಿರ್ದೇಶಿಸಿರುವ ಪ್ರೇಮಾ ಅವರನ್ನು ಮ್ಯಾನ್ ಹ್ಯಾಂ ಪ್ರಶಸ್ತಿ, ಪ್ಯಾರಿಸ್ ಚಲನಚಿತ್ರೋತ್ಸವದ ಪ್ರೇಕ್ಷಕರ ಪ್ರಶಸ್ತಿ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ, ಉತ್ತಮ ಚಲನಚಿತ್ರ, ಅತ್ಯುತ್ತಮ ಕಥೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಗಳು ಇವರನ್ನರಸಿ ಬಂದಿವೆ.
ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದ ಕ್ರಿಯಾಶೀಲ ಪ್ರತಿಭೆ ಶ್ರೀಮತಿ ಪ್ರೇಮಾ ಕಾರಂತ್ ಅವರು.

Categories
ರಂಗಭೂಮಿ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಟಿ.ಎಸ್. ನಾಗಾಭರಣ

ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದ ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಕ್ಕೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿರುವ ಖ್ಯಾತನಾಮರು ಶ್ರೀ ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು.
ಹಿಂದೂಸ್ತಾನಿ ಸಂಗೀತ ಗಾಯನದ ಮೂಲಕ ಕಲಾ ಪ್ರಪಂಚವನ್ನು ಪ್ರವೇಶಿಸಿದ ನಾಗಾಭರಣ ಅವರು ಜಾನಪದ ಗೀತೆ, ಮತ್ತು ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತದಲ್ಲೂ ಪರಿಶ್ರಮ ಪಡೆದವರು. ಶ್ರೀರಂಗರ ನಾಟಕಗಳಿಂದ ಪ್ರಭಾವಿತರಾದ ಶ್ರೀಯುತರು ಕಾಲೇಜು ಮಟ್ಟದಲ್ಲಿರುವಾಗಲೇ ನಾಟಕಗಳನ್ನು ನಿರ್ದೇಶಿಸತೊಡಗಿದರು. ಬಿ.ವಿ. ಕಾರಂತ, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್ ಅವರಂತಹ ಗಣ್ಯರೊಡನೆ ಚಿತ್ರರಂಗದಲ್ಲಿ ಕೆಲಸಮಾಡುವ ಸುಯೋಗ ಇವರಿಗೆ ಒದಗಿಬಂದಿತು. ಗ್ರಾಮೀಣ ಹಿನ್ನೆಲೆಯಿಂದ ಬಂದ ಇವರು ಸಹಜವಾಗಿ ತಮ್ಮ ನಿರ್ದೇಶನದಲ್ಲಿ ಹಳ್ಳಿಯ ಸೊಗಡನ್ನು ಬಳಸಿಕೊಂಡರು. ಬೆನಕ ಹಾಗೂ ರಂಗಸಂಪದ ಕಲಾ ತಂಡಗಳ ನಿರ್ದೆಶಕರಾಗಿ ಪ್ರಶಂಸೆ ಗಳಿಸಿದರು..
ತಮ್ಮ ೨೫ ನೆಯ ವಯಸ್ಸಿನಲ್ಲಿಯೇ ‘ಗ್ರಹಣ’ ಚಿತ್ರಕಥೆ ಬರೆದು, ನಿರ್ದೇಶಿಸಿ ತೆರೆಗೆ ತಂದರು. ಆ ಚಿತ್ರಕ್ಕೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳು ಲಭಿಸಿವೆ. ಕಳೆದ ೨೫ ವರ್ಷಗಳಲ್ಲಿ ಅವರು ೨೮ ಚಿತ್ರಗಳನ್ನು ನಿರ್ಮಿಸಿದ್ದು ಹದಿನಾಲ್ಕು ಚಿತ್ರಗಳಿಗೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು ದೊರಕಿವೆ. ಅಲ್ಲದೆ ಆರು ಚಿತ್ರಗಳು ಭಾರತೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಅವುಗಳಲ್ಲಿ ನಾಗಮಂಡಲ ಮತ್ತು ಜನುಮದ ಜೋಡಿ ಹೆಚ್ಚು ಮೆಚ್ಚುಗೆಗೆ ಪಾತ್ರವಾದವು. ಶ್ರೀಯುತರು ಅನೇಕ ಕಿರುಚಿತ್ರಗಳನ್ನು, ಸಾಕ್ಷ್ಯಚಿತ್ರಗಳನ್ನು, ಕಿರುತೆರೆ ಚಿತ್ರಗಳು ಹಾಗೂ ಚಲನಚಿತ್ರ, ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ, ಅಭಿನಯಿಸಿದ್ದಾರೆ ಕೂಡಾ.
ಬೆನಕ ಮಕ್ಕಳ ರಂಗ ಕೇಂದ್ರದ ಸ್ಥಾಪಕಾಧ್ಯಕ್ಷರಾಗಿ, ಚಲನಚಿತ್ರ ಅನುದಾನ ಸಮಿತಿಯ ಅಧ್ಯಕ್ಷರಾಗಿ ಹಾಗೂ ಅನೇಕ ರಂಗ ಮತ್ತು ಚಿತ್ರ ಸಂಸ್ಥೆಗಳ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಅತ್ಯುನ್ನತ ಚಿತ್ರ ನಿರ್ದೇಶಕ ಪ್ರಶಸ್ತಿಯಾದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಲವಾರು ರಾಷ್ಟ್ರೀಯ ಪುರಸ್ಕಾರಗಳು ಇವರಿಗೆ ಸಂದಿವೆ.
ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದಲ್ಲಿ ತಮ್ಮ ಸೃಜನಶೀಲತೆ ಹಾಗೂ ಕ್ರಿಯಾಶೀಲತೆಯಿಂದ ಪ್ರೇಕ್ಷಕರ ಅಭಿಮಾನ ಗಳಿಸಿರುವ ನಟ, ನಿರ್ದೇಶಕ, ನಿರ್ಮಾಪಕ, ಬರಹಗಾರ, ಗಾಯಕ ಹೀಗೆ ಬಹುಮುಖ ಪ್ರತಿಭೆಯುಳ್ಳ ಕನ್ನಡದ ಹೆಮ್ಮೆಯ ಕುವರ ಶ್ರೀ ಟಿ.ಎಸ್. ನಾಗಾಭರಣ ಅವರು.