Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಚಿಂದಿ ವಾಸುದೇವಪ್ಪ

ಮೀನು ಕೃಷಿ ವಿಜ್ಞಾನದಲ್ಲಿ ರಾಷ್ಟ್ರದಲ್ಲೇ ಅಚ್ಚಳಿಯದ ಹೆಸರು ಡಾ. ಚಿಂದಿ ವಾಸುದೇವಪ್ಪ, ಪ್ರಖರ ಪಾಂಡಿತ್ಯ, ದಕ್ಷ ಆಡಳಿತ, ಜ್ಞಾನದ ಶಿಖರವೆನಿಸಿದ ಕೃಷಿ ತಜ್ಞರು.
ಕೃಷಿ ವಿಜ್ಞಾನ ಕ್ಷೇತ್ರಕ್ಕೆ ಮಲೆನಾಡಿನ ಕೊಡುಗೆ ಡಾ. ಚಿಂದಿ ವಾಸುದೇವಪ್ಪ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಈಸೂರು ಹುಟ್ಟೂರು. ತವರೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮಂಗಳೂರು ವಿವಿಯಲ್ಲಿ ಮೀನುಗಾರಿಕೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ. ಕೇರಳದ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿಎಚ್ಡಿ ಪಡೆದ ಬಳಿಕ ಅನೇಕ ಕೃಷಿ ವಿವಿಗಳಲ್ಲಿ ಪ್ರಾಧ್ಯಾಪಕರಾಗಿ ನಿರಂತರ ಸೇವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳ ನಿರ್ದೇಶಕ- ಸಲಹೆಗಾರರಾಗಿಯೂ ದುಡಿದ ಕೀರ್ತಿ, ಬೆಂಗಳೂರು ಕೃಷಿ ವಿವಿಯ ಡೀನ್ ಆಗಿದ್ದ ಡಾ. ಚಿಂದಿ ವಾಸುದೇವಪ್ಪ ಹರಿಯಾಣದ ರಾಷ್ಟ್ರೀಯ ಆಹಾರ ಸಂಸ್ಕರಣಾ ಸಂಸ್ಥೆ ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿವಿಯ ಅಭಿವೃದ್ಧಿಗೆ ಜ್ಞಾನಧಾರೆಯೆರೆದ ವಿಶ್ರಾಂತ ಕುಲಪತಿಗಳು,

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ. ಉಡುಪಿ ಶ್ರೀನಿವಾಸ

ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಕೀರ್ತಿ ಬೆಳಗಿದ ಸಾಧಕಚೇತನ ಪ್ರೊ. ಉಡುಪಿ ಶ್ರೀನಿವಾಸ, ನಾಡಿನ ಅತ್ಯುತ್ತಮ ಅಭಿಯಂತರರು, ವೈಜ್ಞಾನಿಕ ಸಂಶೋಧಕರು ಮತ್ತು ದಕ್ಷ ಉದ್ಯಮಿ.
ಉಡುಪಿಯಲ್ಲಿ ೧೯೪೭ರ ಫೆಬ್ರವರಿ ೧೪ರಂದು ಜನಿಸಿದ ಶ್ರೀನಿವಾಸ ಬಡಕುಟುಂಬದ ಕೂಸು. ಅಕ್ಷರದಿಂದಲೇ ಅರಳಿದ ಮೇರು ಪ್ರತಿಭೆ, ಶಾಲಾ ದಿನಗಳಿಂದಲೂ ಅತ್ಯುತ್ತಮ ವಿದ್ಯಾರ್ಥಿಯಾದ ಉಡುಪಿ ಶ್ರೀನಿವಾಸ ಮದ್ರಾಸ್ನ ಪ್ರತಿಷ್ಠಿತ ಐಐಟಿ ಸಂಸ್ಥೆಯಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್., ಎಂ.ಟೆಕ್. ಮಾಡಿದರು. ಬೆಂಗಳೂರು ಐಐಎಸ್ಸಿಯಲ್ಲಿ ಸಿವಿಲ್ ಇಂಜಿನಿಯರಿಂಗ್ನಲ್ಲಿ ಪಿಎಚ್.ಡಿ. ಪಡೆದ ಪ್ರತಿಭಾಶಾಲಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಯೋಜನಾ ಸಿಬ್ಬಂದಿಯಾಗಿ ವೃತ್ತಿ ಬದುಕು ಆರಂಭಿಸಿ ಸಹಾಯಕ ಪ್ರಾಧ್ಯಾಪಕ, ಸಹಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ಮೂರು ದಶಕಗಳ ಕಾಲ ಅನನ್ಯ ಸೇವೆ. ಭಾರತಕ್ಕೆ ಕ್ಯಾಪಿಡ್ ಪ್ರೋಟೋಟೈಪಿಂಗ್ ಪರಿಚಯಿಸಿದ ಮಹನೀಯರು, ತಂತ್ರಜ್ಞಾನದ ಹಲವು ಉಪಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರು.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಬಿ.ಎ.ರಡ್ಡಿ

ಕರ್ನಾಟಕ ಸರ್ಕಾರದ ಇಂಜಿನಿಯರಿಂಗ್ ಇನ್ ಚೀಫ್ ಆಗಿ ನಿವೃತ್ತರಾಗಿರುವ ಬಿ.ಎ.ರಡ್ಡಿ ಅವರು ಕರ್ನಾಟಕದ ಹಲವಾರು ನೀರಾವರಿ ಯೋಜನೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಣ್ಣ ನೀರಾವರಿ ವಿಭಾಗದಲ್ಲಿ ಸರ್ಕಾರಿ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಡ್ಡಿ ಅವರು ನಾರಾಯಣಪುರ ಜಲಾಶಯದ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ.

ನೀರಾವರಿ ವಿಭಾಗದಲ್ಲಿ ಬಿ.ಎ.ರೆಡ್ಡಿ ಅವರ ಅನುಪಮ ಸೇವೆಯನ್ನು ಗುರುತಿಸಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆಯಿಂದ ಅತ್ಯುತ್ತಮ ಇಂಜಿನಿಯರ್, ನವದೆಹಲಿಯ ಫ್ರೆಂಡ್‌ಶಿಪ್ ಫೋರಂನ ಗೌರವ, ಔರಂಗಾಬಾದಿನ ಝಾನ್ಸಿ ಸಂಸ್ಥೆಯ ಪ್ರಶಸ್ತಿ ನೀಡಲಾಗಿದೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ.ಸಿ.ಇ.ಜಿ.ಜಸ್ಟೋ

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸ್ಮರಣೀಯ ಸಾಧನೆಗೈದ ಸಾಧಕರು ಪ್ರೊ. ಸಿ.ಇ.ಜಿ.ಜಸ್ಟೋ. ಹೆದ್ದಾರಿ ಇಂಜಿನಿಯರಿಂಗ್ ಕೋರ್ಸ್ ಅನ್ನು ಪ್ರಚಲಿತಗೊಳಿಸಿದ ಶಿಕ್ಷಣ ತಜ್ಞರು.
ಜಸ್ಟ್ ಮೂಲತಃ ತಮಿಳುನಾಡಿನವರು. ಕೊಯಮತ್ತೂರು ಜಿಲ್ಲೆಯ ನಾಗರಕೊಯಿಲ್ನಲ್ಲಿ ೧೯೩೫ರಲ್ಲಿ ಜನಿಸಿದವರು. ತಮಿಳುನಾಡಿನ ರೋರ್ಕಿ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ, ಪಿಎಚ್ ಡಿ ಪಡೆದವರು. ಆನಂತರ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಿರಂತರ ಸೇವೆ. ೧೯೭೩ರಲ್ಲಿ ವಿಶೇಷ ಆಹ್ವಾನದ ಮೇರೆಗೆ ಬೆಂಗಳೂರಿನ ಪ್ರತಿಷ್ಠಿತ ಯುವಿಸಿಇ ಕಾಲೇಜಿನ ಪ್ರಾಧ್ಯಾಪಕರಾಗಿ ಪದಗ್ರಹಣ. ಹೆದ್ದಾರೆ ಇಂಜಿನಿಯರಿಂಗ್ ಕೋರ್ಸ್ ಆರಂಭಿಸಿ ಪ್ರಚುರಪಡಿಸುವಿಕೆ. ಸ್ನಾತಕೋತ್ತರ ಕೋರ್ಸ್, ಪಿಎಚ್ಡಿ ಅನ್ನು ಆರಂಭಿಸಿದ ಹೆಗ್ಗಳಿಕೆ. ೧೯೯೫ರಲ್ಲಿ ನಿವೃತ್ತಿಯ ಬಳಿಕ ಯುಜಿಸಿಯ ಯೋಜನೆ ಮೇರೆಗೆ ಎಮಿರೇಟ್ಸ್ನಲ್ಲಿ ಐದು ವರ್ಷಗಳ ಕಾಲ ವಿಶೇಷ ಅಧ್ಯಯನ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸದ್ಯ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತಿ ಜೀವನ ನಡೆಸುತ್ತಿರುವ ಸಾಧಕರು.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಪ್ರೊ. ಕೆ. ಮುನಿಯಪ್ಪ

ಜೀವ ವಿಜ್ಞಾನದಲ್ಲಿ ವಿಶಿಷ್ಟ ಸಂಶೋಧನೆಗಳನ್ನು ಮಾಡಿರುವ ಪ್ರೊ| ಕೆ.ಮುನಿಯಪ್ಪ ವಂಶವಾಹಿಗಳ ಮೂಲಕ ಹರಿದು ಬರುವ ಕ್ಯಾನ್ಸರ್ ಮತ್ತು ಟಿ.ಬಿ. ಖಾಯಿಲೆಗಳಿಗೆ ಪರಿಹಾರೋಪಾಯಗಳನ್ನು ಕಂಡು ಹಿಡಿದಿದ್ದಾರೆ. ಯುವ ವಿಜ್ಞಾನಿಗಳಿಗೆ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿರುವ ಪ್ರೊ|| ಕೆ.ಮುನಿಯಪ್ಪ ಅವರ ಸಾಧನೆಯು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ಪಡೆದಿದೆ.
ಕರ್ನಾಟಕ ಸರ್ಕಾರವು ರಚಿಸಿದ್ದ ವಿಷನ್ ಗ್ರೂಪ್ ಸದಸ್ಯರಾಗಿ ಸಹ ಸೇವೆ ಸಲ್ಲಿಸಿರುವ ಪ್ರೊ|| ಮುನಿಯಪ್ಪ ಅವರು ಬಯೋ ಟೆಕ್ನಾಲಜಿ ಕ್ಷೇತ್ರದಲ್ಲಿ ತಮ್ಮ ನೈಪುಣ್ಯತೆಯನ್ನು ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಿದ್ದಾರೆ.
ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಗೆ ಭಾಜನರಾಗಿರುವ ಪ್ರೊ|| ಕೆ.ಮುನಿಯಪ್ಪರವರು ಹಲವಾರು ಸಂಶೋಧನಾ ಸಂಸ್ಥೆಗಳ ಸಲಹೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಎಸ್.ಎಸ್.ಭಟ್ನಾಗರ್ ಪ್ರಶಸ್ತಿ ಪ್ರೊ|| ಮುನಿಯಪ್ಪ ಅವರಿಗೆ ಸಂದಿದೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಜೆ.ಆರ್. ಲಕ್ಷ್ಮಣರಾವ್

ಕನ್ನಡ ಭಾಷೆಯಲ್ಲಿ ವಿಜ್ಞಾನ ಸಾಹಿತ್ಯ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಹಿರಿಯರಲ್ಲಿ ಒಬ್ಬರಾದ ಜೆ.ಆರ್. ಲಕ್ಷ್ಮಣರಾವ್, ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು.
ಕರ್ನಾಟಕ ವಿಜ್ಞಾನ ಪರಿಷತ್ತಿನ ಸ್ಥಾಪಕರಲ್ಲೊಬ್ಬರಾದ ಲಕ್ಷ್ಮಣರಾಯರು, ಕನ್ನಡದಲ್ಲಿ ಬರೆದಿರುವ ವಿಜ್ಞಾನ ಕೃತಿಗಳು ಹದಿನೈದಕ್ಕೂ ಹೆಚ್ಚು. ಅವರು ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ಮೈಸೂರು ವಿವಿ ಹೊರತಂದ ಕನ್ನಡ ಇಂಗ್ಲಿಷ್ ನಿಘಂಟಿನ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದವರು. ಬಾಲ ವಿಜ್ಞಾನವೂ ಸೇರಿ ಅನೇಕ ವಿಜ್ಞಾನ ನಿಯತಕಾಲಿಕೆಗಳನ್ನು ಜೆ.ಆರ್.ಎಲ್. ಮುನ್ನಡೆಸಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಜಿ.ಎನ್. ಸುರೇಶ್

ಬಿ.ಎನ್.ಸುರೇಶ ಅವರು ಪ್ರತಿಷ್ಠಿತ ವಿಕ್ರಮ ಸಾರಾಭಾಯ್ ಅಂತರಿಕ್ಷ ಕೇಂದ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಭಾರತೀಯ ಪ್ರಸಿದ್ದ ಅಂತರಿಕ್ಷ ವಿಜ್ಞಾನಿ. ಸ್ಯಾಟಲೈಟ್ ಉಡ್ಡಯನ ಯಂತ್ರದ ವಿನ್ಯಾಸಗೊಳಿಸುವಲ್ಲಿ ನೈಪುಣ್ಯತೆ ಸಾಧಿಸಿರುವ ಬಿ.ಎನ್.ಸುರೇಶ ಅವರು ಭಾರತೀಯ ಅಂತರಿಕ್ಷ ವಿಜ್ಞಾನ ಸಂಸ್ಥೆಯ ಸ್ಥಾಪಕ ನಿರ್ದೇಶಕರು.

ದೇಶದ ಪ್ರಸಿದ್ಧ ಐಐಟಿ ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳಲ್ಲಲಿ ಪ್ರಾಧ್ಯಾಪಕರಾಗಿದ್ದ ಬಿ.ಎನ್. ಸುರೇಶ ಅವರು ಸ್ಪೇನ್ ಕ್ಯಾಪ್ಸಲ್ ರಿಕವರಿ ಎಕ್ವಿಪ್‌ಮೆಂಟ್ ತಯಾರಿಕೆಯಲ್ಲಿ ನೀಡಿರುವ ಕೊಡುಗೆ ಅಪಾರವಾದುದು. ಪ್ರತಿಷ್ಟಿತ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿರುವ ಸುರೇಶ ಅವರು ದೇಶ-ವಿದೇಶಗಳ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಕಸ್ತೂರಿ ರಂಗನ್

ವಿಶ್ವದ ಪ್ರಸಿದ್ದ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ|| ಕೆ. ಕಸ್ತೂರಿ ರಂಗನ್ ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಬೆಳವಣಿಗೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಮುಖ್ಯಸ್ಥರಾಗಿ ಜಾಗತಿಕ ಮಟ್ಟದಲ್ಲಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಔನ್ನತ್ಯ ಸಾಧಿಸಲು ದುಡಿದ ಡಾ|| ಕಸ್ತೂರಿ ರಂಗನ್ ಅವರು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ರತಿಷ್ಠಿತ ಪದ್ಮ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಕೆ. ಶಿವನ್

ಭಾರತೀಯ ಬಾಹ್ಯಾಕಾಶ ವಿಜ್ಞಾನದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ಡಾ. ಕೆ.ಶಿವನ್. ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ ನಿಕಟಪೂರ್ವ ಅಧ್ಯಕ್ಷರು, ಚಂದ್ರಯಾನ–೨ರ ರೂವಾರಿ, ಅಜ್ಞಾತ ನೆಲೆಯಿಂದ ಅರಳಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದಕ್ಷತೆ ಮೆರೆದ ವಿಶಿಷ್ಟ ಪ್ರತಿಭೆ ಡಾ. ಕೆ.ಶಿವನ್‌. ೧೯೫೭ರ ಏಪ್ರಿಲ್ ೧೪ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಬಳಿಯಿರುವ ಮೇಳ ಸರಕ್ಕಲ್ವಲೈ ಗ್ರಾಮದಲ್ಲಿ ಜನಿಸಿದ ಶಿವನ್ ತಂದೆ ಕೃಷಿಕರು, ಬಡಕುಟುಂಬದ ಕುಡಿ, ಅಕ್ಷರವೇ ಸಾಧನೆಗೆ ಮೆಟ್ಟಲು. ಸರ್ಕಾರಿ ಶಾಲೆಯಲ್ಲಿ ತಮಿಳು ಮಾಧ್ಯಮದಲ್ಲಿ ಕಲಿತ ಶಿವನ್ ಪರಿವಾರ ಮೊಟ್ಟಮೊದಲ ಪದವೀಧರರು. ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರ್ ಪದವಿ ಪಡೆದ ಶಿವನ್ ೮೨ರಲ್ಲಿ ಭಾರತೀಯ ವಿಜ್ಞಾನಸಂಸ್ಥೆಯಲ್ಲಿ ಬಾಹ್ಯಾಕಾಶ ಇಂಜಿನಿಯಲಿಂಗ್‌ನಲ್ಲಿ ಸ್ನಾತಕೋತ್ತರ ಪದವಿ, ಬಾಂಬೆಯ ಐಎಸ್ಸಿಯಿಂದ ಪಿಎಚ್‌ಡಿ ಪಡೆದ ಶಿವನ್ ಇಸ್ರೋದ ಪಿಎಸ್‌ಎಲ್‌ಐ ಯೋಜನೆಯ ಭಾಗವಾಗುವುದರೊಂದಿಗೆ ವೃತ್ತಿ ಬದುಕು ಆರಂಭಿಸಿದರು. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಹಾಗೂ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕ, ಪ್ರತಿಷ್ಠಿತ ಇಸ್ರೋದ ಅಧ್ಯಕ್ಷರಾಗಿ ನಾಲ್ಕು ವರ್ಷ ಗುರುತರ ಸೇವೆ. ಬಹುನಿರೀಕ್ಷಿತ ಚಂದ್ರಯಾನ-೨ರ ರೂವಾರಿಯಾಗಿ ಸಂಪೂರ್ಣ ಸಫಲತೆ ಕಾಣದೇ ನೊಂದರೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸೆಗೊಳಗಾದ ಸಾಧಕರು.

Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ

ಡಾ. ಎಂ. ಕೆ. ಸೂರಪ್ಪ

ವಿಜ್ಞಾನ, ತಂತ್ರಜ್ಞಾನದ ಫಲ ಜನತೆಯ ಬದುಕನ್ನು ಹಸನುಗೊಳಿಸಲು ಲಭ್ಯವಾಗಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿರುವ ಕ್ರಿಯಾಶೀಲ ವಿಜ್ಞಾನಿ ಡಾ. ಎಂ.ಕೆ. ಸೂರಪ್ಪ ಅವರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎಂ.ಕೆ. ಸೂರಪ್ಪನವರು ನಾಡಿನ ಹೆಸರಾಂತ ಲೋಹತಜ್ಞರು.
ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಲಿಯ ಕಾರ್ಯದರ್ಶಿಗಳಾಗಿರುವ ಸೂರಪ್ಪನವರು ಕರ್ನಾಟಕದ ಪ್ರಥಮ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಿದ್ಧಪಡಿಸುವ ಸಮಿತಿಯಲ್ಲಿ ಸಕ್ರಿಯರಾಗಿದ್ದು ರಾಜ್ಯದ ೨೦ ಸಾವಿರ ಸರ್ಕಾರಿ ಶಾಲೆಗಳಲ್ಲಿ ಮಳೆನೀರು ಸಂಗ್ರಹ ಯೋಜನೆಗೆ ಚಾಲನೆ ನೀಡುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
5.62. ಲೋಹ ಸಂಶೋಧನೆಯಲ್ಲಿ ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ಡಾ. ಎಂ.ಕೆ. ಸೂರಪ್ಪ ಕೇಂದ್ರ ಸರ್ಕಾರದ ಗಣಿ ಹಾಗೂ ಉಕ್ಕು ಇಲಾಖೆಯ ವಾರ್ಷಿಕ ಲೋಹ ತಜ್ಞ ಪ್ರಶಸ್ತಿ, ಜಪಾನಿನ C ಹಣ ರದ ದ ಜೆ.ಎಸ್.ಪಿ.ಎಸ್. ಫೆಲೋಷಿಪ್ ಸೇರಿದಂತೆ ಹಲವು ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.