Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀಮತಿ ಸೂಲಗಿತ್ತಿ ಯಮನವ್ವ

ಬಾಗಲಕೋಟೆ ಜಿಲ್ಲೆ, ಮುಧೋಳ ತಾಲ್ಲೂಕಿನ ಚಿಚಖಂಡಿ ಬಿ.ಕೆ ಗ್ರಾಮದ ಶಿಳ್ಳೆಕ್ಯಾತ ಸಮುದಾಯದ ಯಮನವ್ವ ಇಲ್ಲಯವರೆಗೂ ಸುಮಾರು ೩ ಸಾವಿರ ಹೆರಿಗೆ ಮಾಡಿಸಿದ್ದಾರೆ.
ವೈದ್ಯಕೀಯ ನೆರವು ಸಿಗದ ಈ ಕುಗ್ರಾಮದಲ್ಲಿ, ಅಲೆಮಾರಿ ಜನಾಂಗದ ಬಿಡಾರಗಳಲ್ಲಿ ಯಮನವ್ವ ಸೂಲಗಿತ್ತಿಯಾಗಿ ಫಲಾಪೇಕ್ಷೆಯಿಲ್ಲದೇ ಹೆರಿಗೆ ಮಾಡಿಸಿ ಕಡು ಬಡವರ ಪಾಲಿಗೆ ನೆರವಾಗಿದ್ದಾರೆ. ಈಗಲೂ ನಾಟಿ ಔಷಧವನ್ನು ಬಳಸಿ ಸೂಲಗಿತ್ತಿ ಕೆಲಸವನ್ನು ಯಮನವ್ವ ಮುಂದುವರೆಸುವ ಮೂಲಕ ಜನಪದ ವೈದ್ಯವೃತ್ತಿಯನ್ನು ಇಂದಿಗೂ ಜೀವಂತವಿಟ್ಟಿದ್ದಾರೆ. ಜೀವನೋಪಾಯಕ್ಕಾಗಿ ಕೌದಿ ಹೊಲೆಯುವ ಕಲೆಯನ್ನು ಕಲಿತು, ಸುಮಾರು ೫ ಸಾವಿರಕ್ಕು ಹೆಚ್ಚು ಕೌದಿ ಹೊಲೆಯುವ ಮೂಲಕ ಬದುಕು ಕಟ್ಟಿಕೊಂಡು ತಮ್ಮ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ.

Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಜಯಲಕ್ಷ್ಮಿ ಮಂಗಳಮೂರ್ತಿ

ರಾಯಚೂರಿನ ಎಸ್.ಎಸ್.ಆರ್.ಜೆ ಮಹಿಳಾ ಮಹಾವಿದ್ಯಾಲಯದ ನಿವೃತ್ತ ಅಸೋಸಿಯೇಟ್ ಪ್ರೊಫೆಸರ್ ಆದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರು ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಾದ್ಯಂತ ಮತ್ತು ಮಹಾರಾಷ್ಟ್ರ, ಆಂಧ್ರ, ಮದ್ರಾಸ್ ಮುಂತಾದ ಹೊರ ರಾಜ್ಯಗಳಲ್ಲಿಯೂ ಇವರು ಸೇವೆ ಸಲ್ಲಿಸಿದ್ದಾರೆ.
೧೯೯೬ ರಲ್ಲಿ ಗುಲಬರ್ಗಾ ವಿಶ್ವವಿದ್ಯಾಯಲಕ್ಕೆ ಸಲ್ಲಿಸಿದ ‘ಆಧುನಿಕ ಹರಿದಾಸರು’ಮಹಾಪ್ರಬಂಧಕ್ಕೆ ಇವರಿಗೆ ಡಾಕ್ಟರೇಟ್ ಪದವಿ ದೊರೆತಿದೆ. ‘ನರಸಿಂಹ ವಿಠಲ’ಅನ್ನುವ ಅಂಕಿತದಿಂದ ೮೦ ಉಗಾಭೋಗಗಳು ಮತ್ತು ೪೦ ಸಂಕೀರ್ತನೆಗಳನ್ನು ರಚಿಸಿದ ಕೀರ್ತಿ ಇವರದು. ಜೊತೆಗೆ ೧೪ ಸ್ವರಚಿತ ಗ್ರಂಥಗಳು, ೮ ಸಂಪಾದಿತ ಕೃತಿಗಳು, ಬಯಲಾಟ ಭಾಗ-೧,೨ ಮತ್ತು ರಾಯಚೂರು ಜಿಲ್ಲೆಯ ಹರಿದಾಸ ಸಾಹಿತ್ಯ, ಶ್ರೀ ಗೋಪಾಲದಾಸರು, ಶ್ರೀ ಪ್ರಸನ್ನವೆಂಕಟದಾಸರು, ಅಮೋತೋಪಾನ ಮುಂತಾದ ಕೃತಿಗಳನ್ನು ರಚಿಸಿದ ಖ್ಯಾತಿ ಇವರದ್ದು. .

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಸುಬ್ಬರಾಮ ಶೆಟ್ಟಿ

ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅನರ್ಘ್ಯ ಸೇವೆಸಲ್ಲಿಸಿದ ಸಮಾಜಬಂಧು ಸುಬ್ಬರಾಮ ಶೆಟ್ಟಿ. ಆರ್.ವಿ. ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾದ ಶಿಕ್ಷಣತಜ್ಞ. ಬಡಮಕ್ಕಳಿಗೆ ನೆರವಾದ ಸಮಾಜಮುಖಿ, ಉದ್ಯಮಿ. ಸುಶಿಕ್ಷಿತ ಕುಟುಂಬದ ಕುಡಿಯಾದ ಸುಬ್ಬರಾಮ ಶೆಟ್ಟಿ ಅವರು ಬಿಎಸ್ಸಿ, ಟೆಕ್ಸ್‌ಟೈಲ್ಸ್ ಪದವೀಧರರು. ಆರ್.ವಿ.ಶಿಕ್ಷಣ ಸಂಸ್ಥೆಯ ಕೋಶಾಧ್ಯಕ್ಷರಾಗಿ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ದುಡಿದು ಸಂಸ್ಥೆಯ ಪ್ರಗತಿಗೆ ಅಮೂಲ್ಯ ಕಾಣಿಕೆ ಕೊಟ್ಟವರು. ವಾಸವಿ ಟ್ರಸ್ಟ್ ಅಧ್ಯಕ್ಷರಾಗಿ ಆಸ್ಪತ್ರೆ, ಕನ್ವೆನ್ಷನ್ ಹಾಲ್ ನಿರ್ಮಾಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟದಲ್ಲಿ ಮಾರುತಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾಗಿ ಹಳ್ಳಿಮಕ್ಕಳ ಬಾಳಲ್ಲಿ ಅಕ್ಷರ ಜ್ಯೋತಿ ಬೆಳಗಿದವರು, ಜೀವನಸಂಧ್ಯಾ ಟ್ರಸ್ಟ್ ಅಧ್ಯಕ್ಷರಾಗಿ ವೃದ್ಧರ ಸೇವೆ, ಎಪಿಎಸ್ ಎಜುಕೇಷನ್‌ ಟ್ರಸ್ಟ್ ಅಧ್ಯಕ್ಷರಾಗಿ ಶ್ಲಾಘನೀಯ ಪಾತ್ರ, ಜನಸೇವಾ ವಿದ್ಯಾಕೇಂದ್ರದ ಅಧ್ಯಕ್ಷರಾಗಿ ಗ್ರಾಮೀಣ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ, ಹಿಂದೂ ಸೇವಾ ಪ್ರತಿಷ್ಠಾನ-ಭಾರತ್ ವಿಕಾಸ್‌ ಪರಿಷತ್ತುಗಳಲ್ಲಿ ಗಣನೀಯ ಸೇವೆ, ಕೋಮರ್ಲ ಉದ್ದಿಮೆಗಳ ಗುಂಪಿನ ಅಧ್ಯಕ್ಷರಾಗಿ ಉದ್ಯಮರಂಗದಲ್ಲೂ ಸಾಧನೆ, ಎಫ್‌ಕೆಸಿಸಿಐ ಅಧ್ಯಕ್ಷ, ಬೆಂಗಳೂರು ವಿವಿ ಸೆನೆಟ್ ಸದಸ್ಯ, ಪೀಪಲ್ಸ್ ಟ್ರಸ್ಟ್ ಅಧ್ಯಕ್ಷ ಸೇರಿ ಹತ್ತಾರು ಸಂಸ್ಥೆಗಳ ಪದಾಧಿಕಾರಿಯಾಗಿ ಸೇವೆಗೈದ ವಿರಳ ಸೇವಾಸಿಂಧು.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಸೋಲಿಗರ ಮಾದಮ್ಮ

ಬುಡಕಟ್ಟು ಸಮುದಾಯದ ಹಿತರಕ್ಷಣೆಗೆ ಹೋರಾಡಿದ ಮೊಟ್ಟಮೊದಲ ದಿಟ್ಟ ಮಹಿಳೆ ದೊಡ್ಡಮಾದಮ್ಮ. ಸೋಲಿಗರ ನಾಯಕಿ, ಜಾನಪದ ಹಾಡುಗಾರ್ತಿ, ಉಪಕಾರಿ ನಾಟಿವೈದ್ಯೆ, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಜೀರಿಗೆಗದ್ದೆಯವರಾದ ದೊಡ್ಡಮಾದಮ್ಮ ಸೋಲಿಗ ಸಮುದಾಯದ ಹೆಣ್ಣುಮಗಳು. ಬಿಳಿಗಿರಿರಂಗನಬೆಟ್ಟದ ಡಾ. ಸುದರ್ಶನ್‌ರ ಮಾರ್ಗದರ್ಶನದಲ್ಲಿ ಸೋಲಿಗ ಅಭಿವೃದ್ಧಿ ಸಂಘ ಸ್ಥಾಪಿಸಿ ಸಮುದಾಯದ ಏಳ್ಗೆಗೆ ಶ್ರಮಿಸಿದಾಕೆ. ಭೂಮಿ ಹಕ್ಕು, ಜಾತಿಪದ್ಧತಿ, ಅರಣ್ಯ ಅಧಿಕಾರಿಗಳ ಕಿರುಕುಳ ಮುಂತಾದ ಸಮಸ್ಯೆಗಳ ವಿರುದ್ಧ ಸಮುದಾಯವನ್ನು ಸಂಘಟಿಸಿ ಹೋರಾಡಿದ ಗಟ್ಟಿಗಿತ್ತಿ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸೋಲಿಗರನ್ನು ಒಗ್ಗೂಡಿಸಿದ ಮಹಾತಾಯಿ. ಬುಡಕಟ್ಟು ಹೆಣ್ಣುಮಕ್ಕಳಲ್ಲಿ ಮಹಿಳಾಪ್ರಜ್ಞೆ ಜಾಗೃತಿಗೊಳಿಸಿದ ಛಲಗಾತಿ. ಪಾರಂಪರಿಕ ಅರಣ್ಯ ಗಿಡಮೂಲಿಕೆಗಳ ಮೂಲಕ ಔಷಧಿ ನೀಡುವ ಮಾದಮ್ಮ ನಾಟಿ ವೈದ್ಯೆಯಾಗಿಯೂ ಸಮುದಾಯದ ಸೇವೆಯಲ್ಲಿ ಅನವರತ ನಿರತ. ಸೋಲಿಗರ ಹಾಡಿಗಳಲ್ಲಿ ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆಗಳನ್ನು ಮಾಡಿಸಿರುವ ಈ ಅಜ್ಜಿಗೆ ಆದಿವಾಸಿ ಕಲೆ, ಸಂಸ್ಕೃತಿ–ಪದ್ಧತಿಯ ಬಗ್ಗೆ ಆಳಜ್ಞಾನ, ಸೋಲಿಗರ ಜಾನಪದ ಹಾಡು, ಸೋಬಾನೆ ಹಾಡು ಮತ್ತು ಮಾದೇಶ್ವರ ಹಾಡುಗಳನ್ನು ಹಾಡುವುದೆಂದರೆ ಅಚ್ಚುಮೆಚ್ಚು. ೮೫ರ ಇಆವಯಸ್ಸಿನಲ್ಲಿ ಕಣ್ಣುದೃಷ್ಟಿಗೆ ತೊಂದರೆಯಾಗಿದ್ದರೂ ಸೋಲಿಗರ ಹಿತ ಚಿಂತಿಸುವ ಮಾದಮ್ಮ ನಾಗರಿಕ ಸಮಾಜಕ್ಕೇ ಮಾದರಿ.

Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವಿದ್ವಾನ್ ಶ್ರೀ ಗೋಪಾಲಕೃಷ್ಣ ಶರ್ಮ

ವೇದಾಧ್ಯಯನ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡಿರುವ ವಿಶಿಷ್ಟ ಸಾಧಕರು ವಿದ್ವಾನ್ ಗೋಪಾಲಕೃಷ್ಣ ಶರ್ಮ, ೩೦ ಸಾವಿರ ಶ್ಲೋಕಗಳ ಅರ್ಥ ವಿಶ್ಲೇಷಕರು, ಹೆಸರಾಂತ ಜ್ಯೋತಿಷ ಪಂಡಿತರು, ಶಾಸ್ತ್ರ ವಿದ್ವಾಂಸರು, ಬಡವರಿಗೆ ನೆರವಾಗುವ ಸಮಾಜಸೇವಕರು. ಉತ್ತರಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಬಾಲಿಕೊಪ್ಪ ಗ್ರಾಮದಲ್ಲಿ ೧೯೫೬ರಲ್ಲಿ ಜನಿಸಿದ ಗೋಪಾಲಕೃಷ್ಣ ಶರ್ಮ ಅವರು ಬಾಲ್ಯದಲ್ಲೇ ವೇದಾಧ್ಯಯನದತ್ತ ಚಿತ್ತ ಹರಿಸಿದವರು. ಹೊನ್ನಾವರದಲ್ಲಿ ಪ್ರಾಥಮಿಕ ಸಂಸ್ಕೃತಾಧ್ಯಯನ, ವೇದಾಧ್ಯಯನ, ಉಡುಪಿಯಲ್ಲಿ ಜ್ಯೋತಿಷ ವಿದ್ವಾನ್ ಪದವಿ, ಪೌರೋಹಿತ್ಯದಲ್ಲಿ ವಿಶೇಷ ಪಾಂಡಿತ್ಯ, ಕೇರಳದಲ್ಲಿ ಮಂತ್ರಶಾಸ್ತ್ರ, ಪ್ರಶ್ನಾಶಾಸ್ತ್ರ ಅಧ್ಯಯನ. ಟಿವಿ ವಾಹಿನಿಗಳಜ್ಯೋತಿಷ ಪಂಡಿತರಾಗಿ ಬಲು ಜನಪ್ರಿಯರು. ವಿದ್ವತ್ತಿನ ಪಯಣದಾಚೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡವರು ಗೋಪಾಲಕೃಷ್ಣ ಶರ್ಮ, ಸಾವಿರಾರು ಬಡಮಕ್ಕಳಿಗೆ ಉಚಿತ ಪುಸ್ತಕ, ಧನಸಹಾಯ, ಕೋವಿಡ್ ಸಂದರ್ಭದಲ್ಲಿ ಅಹಾರಕಿಟ್‌ಗಳ ವಿತರಣೆ, ಅನಾಥ ಮಕ್ಕಳು, ವೃದ್ಧರಿಗೆ ದಿನಸಿ, ಬಟ್ಟೆ ವಿತರಿಸಿದ ಸಮಾಜಮುಖಿ, ೩೦ ಸಾವಿರ ಶ್ಲೋಕಗಳನ್ನು ಅರ್ಥ ಸಮೇತ ವಿವರಿಸಬಲ್ಲ ಪಂಡಿತೋತ್ತಮರು. ಜ್ಯೋತಿಷ ಮಾರ್ತಾಂಡ, ಜ್ಯೋತಿಷ ಸಾರ್ವಭೌಮ, ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿ-ಗೌರವಗಳಿಂದ ಭೂಷಿತರಾದ, ಕನ್ನಡದ ವಿದ್ವತ್ ಪರಂಪರೆಯನ್ನು ಶ್ರೀಮಂತಗೊಳಿಸಿದ ವಿದ್ವತ್ಮಣಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವಿ. ಲಕ್ಷ್ಮಿನಾರಾಯಣ

ಸಕ್ಕರೆ ನಾಡಿನ ಅಕ್ಕರೆಯ ವ್ಯಕ್ತಿತ್ವದ ವಿ. ಲಕ್ಷ್ಮಿನಾರಾಯಣ ಮೌನಸಾಧಕರು. ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಅವರದ್ದು ಅಚ್ಚಳಿಯದ ಹೆಜ್ಜೆಗುರುತು.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹರದನಹಳ್ಳಿ ಹುಟ್ಟೂರು. ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮಾ, ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವದ ಗುಣ, ೧೯೬೮ರಲ್ಲೇ ವಸತಿ ನಿರ್ಮಾಣದಲ್ಲಿ ತೊಡಗಿಕೊಂಡ ಉದ್ಯಮಿ, ಗುಣಮಟ್ಟದ ಕಾಮಗಾರಿ-ರಚನಾತ್ಮಕ ಕಾರ್ಯಗಳಿಗೆ ಹೆಸರುವಾಸಿ. ೧೯೯೦ರಲ್ಲಿ ‘ನಿರ್ಮಾಣ್ ಶೆಲ್ಟರ್’ ಸಂಸ್ಥೆ ಸ್ಥಾಪಿಸಿ ಬಡ-ಮಧ್ಯಮ ವರ್ಗದ ಜನರಿಗೆ ಸುಲಭ ಬೆಲೆಯಲ್ಲಿ ನಿವೇಶನ-ಮನೆಗಳ ನಿರ್ಮಾಣ. ಆರು ಸುಸಜ್ಜಿತ ಬಡಾವಣೆಗಳ ನಿರ್ಮಾತೃ, ಸಾಹಿತ್ಯ, ಸಮಾಜಸೇವೆ ಲಕ್ಷ್ಮಿನಾರಾಯಣರ ವ್ಯಕ್ತಿತ್ವದ ಹೆಗ್ಗುರುತು. ಆಯುರ್ವೇದ ಆಸ್ಪತ್ರೆ, ಪುರಂದರ ಪ್ರತಿಷ್ಠಾನ, ಅ.ನ.ಕೃ ಪ್ರತಿಷ್ಠಾನ, ಹಿರಿಯ ನಾಗರಿಕರ ವಸತಿ ತಾಣ ಪ್ರಬುದ್ಧಾಲಯ, ‘ವಾತ್ಸಲ್ಯ’, ದೇವಸ್ಥಾನಗಳ ನಿರ್ಮಾಣ, ಧ್ಯಾನಮಂದಿರ ಬಡಮಕ್ಕಳಿಗೆ ಮಧ್ಯಾಹ್ನದೂಟದ ವ್ಯವಸ್ಥೆ, ಸುಸಜ್ಜಿತ ಅಡುಗೆಕೋಣೆ, ಭೋಜನಾ ಶಾಲೆ, ಕಲಾಭವನಗಳ ನಿರ್ಮಾಣದಂತಹ ಹತ್ತಾರು ಸೇವಾಕಾರ್ಯಗಳಲ್ಲಿ ತೊಡಗಿರುವ ದೀನಬಂಧು. ಆರ್ಯಭಟ ಪ್ರಶಸ್ತಿ, ಡಾ.ಅ.ನ.ಕೃ ಸಾರ್ವಭೌಮ, ರಾಜ್ಯ ಪ್ರಶಸ್ತಿಯಿಂದ ಭೂಷಿತವಾದ ಸಾರ್ಥಕ ಜೀವನ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಕೆ.ಎಸ್. ರಾಜಣ್ಣ (ವಿಶೇಷ ಚೇತನ)

ಅಂಗವೈಕಲ್ಯವನ್ನೇ ಮೆಟ್ಟಿನಿಂತು ಉತ್ತುಂಗ ಸಾಧನೆಗೈದ ವಿಶೇಷ ಚೇತನ ಡಾ. ಕೆ.ಎಸ್. ರಾಜಣ್ಣ, ದಿವ್ಯಾಂಗರ ಕಣ್ಮಣಿಯಾದ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಉದ್ಯಮಿ.
ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ೧೯೫೯ರಲ್ಲಿ ಜನಿಸಿದ ರಾಜಣ್ಣ ೧೧ ತಿಂಗಳ ಮಗುವಾಗಿದ್ದಾಗಲೇ ಪೋಲಿಯೋಗೆ ತುತ್ತಾಗಿ ಎರಡು ಕೈ, ಕಾಲಿನ ಸ್ವಾಧೀನ ಕಳೆದುಕೊಂಡರಾದರೂ ಧೃತಿಗೆಡಲಿಲ್ಲ. ಎಸ್.ಎಸ್.ಎಲ್.ಸಿ., ಮೈಕಾನಿಕಲ್ ಡಿಪ್ಲೋಮಾವರೆಗೆ ವ್ಯಾಸಂಗ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಕ್ರೀಡೆಯಲ್ಲೂ ಆಸಕ್ತರು. ೧೯೮೦ರಲ್ಲಿ ಸ್ವಂತದ್ದೇ ಉದ್ಯಮ ಸ್ಥಾಪಿಸಿ ೫೦೦ ಮಂದಿ ಅಂಗವಿಕಲರ ಉದ್ಯೋಗದಾತರು. ಬದುಕಿನುದ್ದಕ್ಕೂ ವಿಶೇಷಚೇತನರ ಸೇವೆಗೆ ಮಿಡಿದ ರಾಜಣ್ಣ ಸಾವಿರಾರು ಮಂದಿ ನಿರುದ್ಯೋಗಿ ಅಂಗವಿಕಲರಿಗೆ ಮಾರ್ಗದರ್ಶನ, ಸ್ವಯಂ ಉದ್ಯೋಗಕ್ಕೆ ನೆರವು ನೀಡಿದ ಹೆಗ್ಗಳಿಕೆ. ೨೦೧೭ರಲ್ಲಿ ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಅಧಿನಿಯಮಕ್ಕೆ ರಾಜ್ಯ ಆಯುಕ್ತರಾಗಿ ನೇಮಕಗೊಂಡ ಹಿರಿಮೆ, ರಾಜ್ಯದ ೩೦ ಲಕ್ಷ ದಿವ್ಯಾಂಗರಿಗೆ ನೆರವಿನ ಹಸ್ತ ಚಾಚಿದ ಸಾರ್ಥಕತೆ. ಅಂತಾರಾಷ್ಟ್ರೀಯ ಕ್ರೀಡಾಪಟುವೂ ಆಗಿರುವ ರಾಜಣ್ಣ ೨೦೦೨ರ ಪ್ಯಾರಾ ಒಲಂಪಿಕ್ಸ್ನಲ್ಲಿ ಹಾಗೂ ಮೈಸೂರಿನ ರೋಟರಿ ಕ್ಲಬ್ ಕ್ರೀಡಾಕೂಟದಲ್ಲಿ ಚಿನ್ನ-ಬೆಳ್ಳಿ ಪದಕ ವಿಜೇತರು. ಖಾಸಗಿ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಅಪೂರ್ವ ಸಾಧಕರು.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಪ್ರೊ. ಎನ್. ವೆಂಕೋಬರಾವ್

ಸಮಾಜಸೇವೆಯಲ್ಲೇ ಬದುಕಿನ ಸಾರ್ಥಕತೆ ಕಾಣುವ ಅಪ್ರತಿಮ ವ್ಯಕ್ತಿ ಪ್ರೊ, ನಂಜಪ್ಪ ವೆಂಕೋಬರಾವ್. ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ, ವಾಗಿ ಹಾಗೂ ಸೇವಾದುರಂಧರ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಾಂತರಾಜಪುರದಲ್ಲಿ ೧೯೩೬ರಲ್ಲಿ ಜನಿಸಿದ ವೆಂಕೋಬರಾವ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವೀಧರರು. ಮೈಸೂರಿನ ಬನುಮಯ್ಯ ಕಾಲೇಜಿನ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕರು. ಎಳವೆಯಲ್ಲೇ ಬ್ರಿಟಿಷರ ವಿರುದ್ಧ ಭಾಷಣ ಮಾಡಿ ಬಂಧನಕ್ಕೊಳಗಾದ ನಾಡಪ್ರೇಮಿ. ಅ.ನ.ಕೃ. ಪ್ರೇರಣೆಯಿಂದ ಖಾದಿ ಧರಿಸುವಿಕೆ-ಗ್ರಾಮೋತ್ಥಾನ ಕೈಂಕರ್ಯ. ಬರೆವಣಿಗೆ, ಸಮಾಜ ಸೇವೆಯೇ ಉಸಿರು, ಹೋರಾಟವೇ ಬದುಕು. ಅಂತಾರಾಷ್ಟ್ರೀಯ ಲಯನ್ಸ್ನ ಭೀಷ್ಮ ಬಿರುದಾಂಕಿತರು, ಜನಮಾನಸದ ನೆಚ್ಚಿನ ಮೇಷ್ಟ್ರು, ಭೂಮಿ ಕಂಪಿಸಲಿಲ್ಲ, ಪಾಪು ಮುಟ್ಟು, ಕೀಚಕರು ಮುಂತಾದ ಕೃತಿಗಳ ರಚನಕಾರರು. ಮೂರು ದಶಕಗಳ ಕಾಲ ಬುದ್ಧಿಮಾಂದ್ಯ ಮಕ್ಕಳ ಶಾಲೆ ನಡೆಸಿದ ಹೆಗ್ಗಳಿಕೆ. ರಾಷ್ಟ್ರೀಯ ಸ್ವಯಂಸೇವಾ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ, ಎಬಿವಿಪಿ ರಾಜ್ಯ ಕಾರ್ಯದರ್ಶಿ, ವಿಕ್ರಮ ಪತ್ರಿಕೆಯ ಉಪಾಸಂಪಾದಕ ಮತ್ತಿತರ ಗುರುತರ ಹೊಣೆಗಾರಿಕೆ ನಿರ್ವಹಿಸಿ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ವಿಶಿಷ್ಟ ಘನವ್ಯಕ್ತಿ.

Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಕೆ.ವಿ. ರಾಜು

ಹೆಸರಾಂತ ಆರ್ಥಿಕ ತಜ್ಞರು, ಅತ್ಯುತ್ತಮ ಆರ್ಥಿಕ ಸಲಹೆಗಾರರು ಡಾ. ಕೆ.ವಿ. ರಾಜು. ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಆರ್ಥಿಕ ವಿಷಯಗಳ ಅಪಾರ ಜ್ಞಾನವಂತರು.
ಮೂಲತಃ ಕೋಲಾರದವರಾದ ಕೆ.ವಿ. ರಾಜು ಬಿ.ಎ. ಪದವೀಧರರು, ಗ್ರಾಮೀಣಾಭಿವೃದ್ಧಿಯಲ್ಲಿ ಸ್ನಾತಕೋತ್ತರ ಪದವಿ, ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ. ಪಡೆದವರು, ಆರ್ಥಿಕ ವಿಷಯಗಳಲ್ಲಿ ಕರಾರುವಾಕ್ಕಾದ ಜ್ಞಾನವುಳ್ಳ ಕೆ.ವಿ. ರಾಜು ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕಾನಮಿಕ್ ಚೇಂಚ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಅಂತರ್ಜಲ ವೃದ್ಧಿ, ಬೇಸಾಯದ ನಿರ್ವಹಣೆ, ಗ್ರಾಮೀಣಾಭಿವೃದ್ಧಿ, ವಿಶ್ವಬ್ಯಾಂಕ್ನ ಸಾಮಾಜಿಕ-ಆರ್ಥಿಕ ಪರಿಣಾಮಗಳ ಮೌಲ್ಯಮಾಪನದಂತಹ ಹತ್ತಾರು ವಿಷಯಗಳ ಅಧ್ಯಯನಶೀಲರು, ಯೋಜನಾಕರ್ತೃ. ೨೨ ಮಹತ್ವದ ಕೃತಿ ಹಾಗೂ ೯೮ ಸಂಶೋಧನಾ ಪ್ರಬಂಧಗಳ ರಚನಕಾರರು. ಯಡಿಯೂರಪ್ಪ ಅವರು ಚೊಚ್ಚಲಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಐದು ವರ್ಷ ಹಾಗೂ ಈಗ ಉತ್ತರಪ್ರದೇಶ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿ ಹತ್ತಾರು ಯೋಜನೆಗಳ ಹಿಂದಿನ ರೂವಾರಿಯಾದ ಹೆಗ್ಗಳಿಕೆ. ಹಲವು ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲೂ ತಮ್ಮ ವಿದ್ವತ್ ಮೆರೆದಿರುವ ಡಾ. ಕೆ.ವಿ. ರಾಜು ಅವರ ಪಾಂಡಿತ್ಯ-ಆರ್ಥಿಕ ಜ್ಞಾನಕ್ಕೆ ಅವರಷ್ಟೇ ಸಾಟಿ, ಕರುನಾಡಿನ ಹೆಮ್ಮೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕೆ. ಪ್ರಕಾಶ್‌ ಶೆಟ್ಟಿ, ಅಧ್ಯಕ್ಷರು-ಎಂ.ಆರ್.ಜಿ ಗ್ರೂಪ್

ಹೋಟೆಲ್ ಉದ್ಯಮದಲ್ಲಿ ಅದ್ವಿತೀಯ ಸಾಧನೆ-ಯಶಸ್ಸು ಪಡೆದ ಉದ್ಯಮಿ ಕೆ. ಪ್ರಕಾಶ್‌ ಶೆಟ್ಟಿ, ಬಡವರಾಗಿ ಹುಟ್ಟಿದರೂ ಬಡವರಾಗಿಯೇ ಸಾಯಬೇಕಿಲ್ಲ ಎಂಬ ಮಾತನ್ನು ನಿಜವಾಗಿಸಿದ ಛಲವಂತರು.
ಪ್ರಕಾಶ್‌ ಶೆಟ್ಟಿ ಉಡುಪಿ ಜಿಲ್ಲೆಯವರು. ಸಾಮಾನ್ಯ ಕುಟುಂಬದ ಕುಡಿ.ಬಾಲ್ಯದ ಬಡತನ ಯಶಸ್ಸಿನ ಹಂಬಲ ಹುಟ್ಟುಹಾಕಿದ್ದು ಸಹಜವೇ. ಅತಿಥಿ ಸತ್ಕಾರದ ಕನಸು. ೧೯೯೩ರಲ್ಲಿ ಬಂಜಾರ ಹೋಟೆಲ್ ಆರಂಭಿಸುವ ಮೂಲಕ ಹೊಟೇಲ್ ಉದ್ಯಮಕ್ಕೆ ಪ್ರವೇಶ. ಆನಂತರ ತಿರುಗಿ ನೋಡಿದ್ದೇ ಇಲ್ಲ. ದಶಕಗಳ ಅಂತರದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದು ನಿಂತ ಪರಿ ನಿಜಕ್ಕೂ ಸೋಜಿಗ, ಶುದ್ದ ಸಾಹಸಯಾತ್ರೆ ಪ್ರತಿಷ್ಠಿತ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷರಾಗಿರುವ ಪ್ರಕಾಶ್‌ ಶೆಟ್ಟಿ ಹೊಟೇಲ್ ಉದ್ಯಮ, ರಿಯಲ್ ಎಸ್ಟೇಟ್, ಮೂಲಭೂತ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಬೆಂಗಳೂರು, ದೆಹಲಿ, ಮಂಗಳೂರು ಮತ್ತು ಮುಂಬಯಿನಲ್ಲಿರುವ ಗೋಲ್ಡನ್ ಫಿಂಚ್ ಹೋಟೆಲ್, ಎರಡು ಅಂತಾರಾಷ್ಟ್ರೀಯ ಗುಣಮಟ್ಟದ ಹೋಟೆಲ್‌ಗಳು ಪ್ರಕಾಶ್‌ ಶೆಟ್ಟಿ ಅವರ ಉದ್ಯಮಶೀಲತೆಗೆ ಸಾಕ್ಷಿಯಾಗಿವೆ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿರುವ, ನಾಲ್ಕು ಮತ್ತು ಐದನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಊಟ-ವಸತಿ ಒದಗಿಸಿದ ಹಿರಿಮೆ ಅವರದ್ದು ಬಡಮಕ್ಕಳ ಶಾಲಾ ಕಾಲೇಜು ವೆಚ್ಚ ಭರಿಸುವ, ಆನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ನೆರವಿನ ಹಸ್ತ ಚಾಚುತ್ತಲೇ ಬಂದಿರುವುದು ಅವರೊಳಗಿನ ಸಮಾಜಮುಖಿತ್ವದ ದ್ಯೋತಕವಾಗಿದೆ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ನಾ.ಸೋಮೇಶ್ವರ

‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೂಲಕವೇ ಜನಪ್ರಿಯರಾಗಿರುವ ಸಾಧಕರು ನಾ. ಸೋಮೇಶ್ವರ, ವೈದ್ಯರು, ಲೇಖಕರು, ರಸಪ್ರಶ್ನೆ ತಜ್ಞರಾಗಿ ಅವರದ್ದು ನಾಡಿಗೆ ನಾಡೇ ಮೆಚ್ಚುವಂತಹ ಬಹುಶ್ರುತ ಸಾಧನೆ.
ಬೆಂಗಳೂರು ಮೂಲದವರಾದ ನಾ.ಸೋಮೇಶ್ವರ ಹುಟ್ಟಿದ್ದು ೧೯೫೫ರ ಮೇ ೧೪ ರಂದು. ನಾರಪ್ಪ ಮತ್ತು ಅಂಜನಾ ದಂಪತಿ ಸುಪುತ್ರರು, ಅಧ್ಯಯನ, ಕ್ರಿಯಾಶೀಲತೆ ಮತ್ತು ಪ್ರತಿಭಾಸಂಪನ್ನತೆ ಹುಟ್ಟಿನಿಂದಲೇ ಬಂದ ಗುಣವಿಶೇಷ. ವಿದ್ಯಾರ್ಥಿಯಾಗಿದ್ದಾಗಲೇ ‘ಜೀವನದಿ’ ಮಾಸಿಕ ಪತ್ರಿಕೆ ಹೊರತಂದ ಪ್ರತಿಭಾವಂತರು. ಬಿಎಸ್ಸಿ ಪದವಿ ಬಳಿಕ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದವರು.ವೃತ್ತಿಯಿಂದ ವೈದ್ಯರಾದ ಸೋಮೇಶ್ವರ ಫಾರ್ಮಸಿಟಿಕಲ್ ಕಂಪನಿಯ ಸಲಹೆಗಾರರೂ ಕೂಡ.ಬರವಣಿಗೆ-ಸಾಮಾಜಿಕ ವಿಷಯಗಳಲ್ಲಿ ವಿಶೇಷ ಆಸಕ್ತಿ.ಅವರೊಳಗಿನ ಜ್ಞಾನಶೀಲತೆ ಬೆಳಕಿಗೆ ಬಂದಿದ್ದು ‘ಥಟ್ ಅಂತ ಹೇಳಿ’ ಕಾರ್ಯಕ್ರಮದಿಂದಲೇ. ೨೦೦೪ರಲ್ಲಿ ಚಂದನ ವಾಹಿನಿಯಲ್ಲಿ ಆರಂಭವಾದ ಈ ಜ್ಞಾನ ಪ್ರಸರಣದ ರಸಪ್ರಶ್ನೆ ಕಾರ್ಯಕ್ರಮ ೧೫ ವರ್ಷಗಳಿಂದಲೂ ವಾರಕ್ಕೆ ಐದು ದಿನ ಪ್ರಸಾರವಾಗುತ್ತಿದ್ದು ೩೨೦೦ಕ್ಕೂ ಹೆಚ್ಚು ಕಂತುಗಳನ್ನು ದಾಟಿ ಮುನ್ನಡೆದಿರುವುದು ವಿದ್ಯುನ್ಮಾನ ಮಾಧ್ಯಮದ ಇತಿಹಾಸದಲ್ಲೇ ಅದ್ವಿತೀಯ ದಾಖಲೆ. ಲೇಖಕರಾಗಿಯೂ ಹಲವು ಪುಸ್ತಕಗಳನ್ನು ಹೊರತಂದಿರುವ ನಾ. ಸೋಮೇಶ್ವರ ಅವರು ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಅವಾರ್ಡ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಭೂಷಿತರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಲೆಫ್ಟಿನೆಂಟ್ ಜನರಲ್ ಬಿ.ಎನ್.ಬಿ.ಎಂ ಪ್ರಸಾದ್

ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಬಿಳಿಗೆರಿ ನಾರಾಯಣ ಭಟ್ ಮಹವೀರ್ ಪ್ರಸಾದ್ ಅವರ ಅನುಪಮ ಸಾಧಕರು. ಸೇವಾ ಮತ್ತು ವಿಶಿಷ್ಟ ಸೇವಾ ಪದಕ ವಿಜೇತರು.
ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಬಿ.ಎನ್.ಬಿ.ಎಂ ಪ್ರಸಾದ್, ಮಡಿಕೇರಿ ತಾಲ್ಲೂಕಿನ ಬಿಳಿಗರಿ ಹುಟ್ಟೂರು.ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ, ಪುಣೆಯಲ್ಲಿ ಸ್ನಾತಕೋತ್ತರ ಪದವಿ, ಹಲವು ಡಿಪ್ಲೋಮಾಗಳನ್ನು ಪಡೆದವರು. ಆನಂತರ ಭಾರತೀಯ ಭೂಸೇನೆಗೆ ಸೇರ್ಪಡೆ. ಭೂಸೇನೆಯ ಆಸ್ಪತ್ರೆ ಸೇವೆಗಳ ಪ್ರಧಾನ ನಿರ್ದೇಶಕರು, ಕೊಚ್ಚಿಯ ಅಮೃತ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾಪಕರಾಗಿ ಅನನ್ಯ ಸೇವೆ, ಸೇನಾ ವೈದ್ಯರಿಗೆ ಸೂಚನಾ ಕೋರ್ಸ್‌ಗಳನ್ನು ಕೈಗೊಂಡವರು. ಮಾನವೀಯ ಸೇವೆಗೆ ರಾಷ್ಟ್ರಪತಿಗಳಿಂದ ಗೌರವಕ್ಕೆ ಪಾತ್ರರಾದ ಶಸ್ತ್ರಚಿಕಿತ್ಸಕರು. ರೆಸ್ಪಿರೇಟರಿ ಮೆಡಿಸಿನ್‌ನಲ್ಲಿ ವಿಶೇಷ ತರಬೇತಿಯನ್ನೂ ಪಡೆದವರಾದ ಬಿ.ಎನ್.ಬಿ.ಎಂ ಪ್ರಸಾದ್ ಅವರು ಲೆಫ್ಟಿನೆಂಟ್ ಜನರಲ್ ಆಗಿಯೂ ಸೇವೆಗೈದವರು.ರಾಷ್ಟ್ರಪತಿಗಳ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತರಾದ ಬಿ.ಎನ್.ಬಿ.ಎಂ ಪ್ರಸಾದ್ ವೈದ್ಯ ವೃತ್ತಿಯ ಘನತೆ ಹೆಚ್ಚಿಸಿದ ವೈದ್ಯಶಿರೋಮಣಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು

ಆನ್ನೋದ್ಧಾರದ ಜೊತೆಗೆ ಲೋಕೋದ್ಧಾರವನ್ನು ಕೈಗೊಂಡ ಸಂತಪರಂಪರೆಯನ್ನು ಬೆಳಗಿದ ಪುಣ್ಯಪುರುಷರು ಷ.ಬ್ರ.ಡಾ. ಚನ್ನವೀರ ಶಿವಾಚಾರ್ಯರು.ವಚನ ಸಾಹಿತ್ಯದ ಪ್ರಚಾರದಲ್ಲಿ ಮಹತ್ವದ ಕಾಣೆಯಿತ್ತವರು.
ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠಾಧೀಶರಾದ ಚನ್ನವೀರ ಶಿವಾಚಾರ್ಯರು ಲೋಕಕಲ್ಯಾಣಕ್ಕಾಗಿಯೇ ಬದುಕು ಮೀಸಲಿಟ್ಟಿರುವವರು. ೧೯೬೩ರ ಜುಲೈ ಒಂದರಂದು ಜನಿಸಿದ ಶ್ರೀಗಳು ಶಿಶುವಿದ್ದಾಗಲೇ ಶಿವಸಂಕಲ್ಪದಂತೆ ಹಾರಕೂಡ ಸಂಸ್ಥಾನಮಠದ ಭಾವೀ ಪೀಠಾಧಿಪತಿಯೆಂದು ಘೋಷಿಸಲ್ಪಟ್ಟವರು ಕಲ್ಬುರ್ಗಿ, ಹುಬ್ಬಳ್ಳಿ, ಬೆಳಗಾವಿಯಲ್ಲಿ ಶಿಕ್ಷಣ, ಕನ್ನಡದಲ್ಲಿ ಸ್ನಾತಕೋತ್ತದ ಪದವೀಧರರು ಶ್ರೀಮಠದ ಪೀಠಾಧಿಪತಿಯಾದ ಮೇಲೆ ಕೈಗೊಂಡ ಕಾರ್ಯಗಳೆಲ್ಲವೂ ಮಹತ್ತರವಾದುದೇ. ಶ್ರೀ ಚೆನ್ನರೇಣುಕ ಬಸವ ರಾಜ್ಯ ಮಟ್ಟದ ಪ್ರಶಸ್ತಿ, ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದ ಶ್ರೇಷ್ಠರ ಗುರುತಿಸಲೆಂದೇ ಚನ್ನಶ್ರೀ ಪ್ರಶಸ್ತಿಗಳ ಸ್ಥಾಪನೆಯ ಮೈಲುಗಲ್ಲು. ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹತ್ತು ಬೃಹತ್ ಹತ್ತು ಬೃಹತ್ ಸಂಪುಟಗಳ ಪ್ರಕಟಣಾ ಕಾರ್ಯ ಬಹುಕಾಲದವರೆಗೂ ನೆನಪಿನಲ್ಲುಳಿಯುವಂತಹುದು. ಶಿಕ್ಷಣ, ಧರ್ಮ, ಚಿಂತನೆ, ಪ್ರವಚನ, ಸಂಗೀತ, ಸಾಹಿತ್ಯ, ಕಲೆ ಹೀಗೆ ಹತ್ತಾರು ಸಾಂಸ್ಕೃತಿಕ ಕ್ಷೇತ್ರಗಳಿಗೆ ಶ್ರೀಗಳು ಸಲ್ಲಿಸಿದ ಸೇವೆ ಅಪಾರ. ಗುಲ್ಬರ್ಗಾ ವಿ.ವಿ ಯ ಗೌರವ ಡಾಕ್ಟರೇಟ್, ಶಿವಾಚಾರ್ಯರತ್ನ, ಧರ್ಮರತ್ನ ಮತ್ತಿತರ ಗೌರವಗಳು ಶ್ರೀಗಳ ನಿಜಸೇವೆಗೆ ಸಂದ ಮಹಾಗೌರವವೇ ಸರಿ.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಸ್.ಟಿ. ಶಾಂತಗಂಗಾಧರ

ಸಮಾಜಸೇವೆಯಲ್ಲೇ ದಿವ್ಯಾನುಭೂತಿ ಅನುಭವಿಸಿದ ವಿರಳ ಸೇವಾನಿರತರಲ್ಲಿ ಶಾಂತಗಂಗಾಧರ್ ಸಹ ಒಬ್ಬರು. ಸಾಹಿತ್ಯ-ಸಂಸ್ಕೃತಿ-ಸಮಾಜಸೇವೆ-ಕನ್ನಡ ಸೇವೆ. ಹೀಗೆ ಬಹುರಂಗದಲ್ಲಿ ಬಹುಶ್ರುತ ಸಾಧನೆ ಅವರದ್ದು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನವಿಲೇಹಾಳುವಿನಲ್ಲಿ ಜನಿಸಿದ ಶಾಂತ ಗಂಗಾಧರ ವಿದ್ಯಾರ್ಥಿ ದೆಸೆಯಲ್ಲೇ ಚರ್ಚಾ ಸ್ಪರ್ಧೆ-ಪ್ರಬಂಧ ಸ್ಪರ್ಧೆಗಳಲ್ಲಿ ಪಾರಿತೋಷಕಗಳನ್ನು ಗೆದ್ದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.ಸಿಂಡಿಕೇಟ್ ಬ್ಯಾಂಕ್ ಶಿರಾಳಕೊಪ್ಪ ಶಾಖೆಯಲ್ಲಿ ನೌಕರಿಗೆ ಸೇರ್ಪಡೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡದಲ್ಲೇ ವ್ಯವಹರಿಸಿದ ದಾಖಲೆ. ಬ್ಯಾಂಕಿಂಗ್ ಕನ್ನಡ ಶಬ್ದಕೋಶದಲ್ಲಿ ಕೊಡುಗೆಯಿತ್ತವರು. ಹವ್ಯಾಸಿ ರಂಗಕಲಾವಿದನಾಗಿ ಸೈ ಎನಿಸಿಕೊಂಡವರು. ಧಾರಾವಾಹಿಯಲ್ಲೂ ನಟಿಸಿ ಹಿರಿಮೆ ಮೆರೆದವರು.ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಲವು ಚಳವಳಿಗಳಲ್ಲೂ ಸಕ್ರಿಯರಾಗಿದ್ದ ಶಾಂತಗಂಗಾಧರ ಶಿಕಾರಿಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ ಸಾರ್ಥಕ ಸೇವೆ. ಕವನ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟ. ಸಾಹಿತ್ಯ-ಸಾಂಸ್ಕೃತಿಕ ಮತ್ತು ಸಮಾಜಸೇವಾ ಕಾರ್ಯಕ್ರಮಗಳಿಗೆ ಸದಾ ಬೆನ್ನೆಲುಬಾಗಿ ಕ್ರಿಯಾಶೀಲರಾಗಿರುವ ಶಾಂತಗಂಗಾಧರ್ ಚನ್ನಗಿರಿ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳಿಗೂ ಭಾಜನರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ವಿಜಯ ಸಂಕೇಶ್ವರ

ಉದ್ಯಮ ರಂಗದಲ್ಲಿ ಅದ್ವಿತೀಯ ಸಾಧನೆ ಮೂಲಕ ಅಚ್ಚಳಿಯದ ಛಾಪು ಮೂಡಿಸಿದವರು ವಿಜಯ ಸಂಕೇಶ್ವರ. ಪ್ರತಿಷ್ಠಿತ ವಿಆರ್‌ ಎಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರು, ಯಶಸ್ವಿ ಉದ್ಯಮಿ.
ಉತ್ತರಕರ್ನಾಟಕದ ಗದಗ ಜಿಲ್ಲೆಯ ಸಂಕೇಶ್ವರ ವಿಜಯ ಸಂಕೇಶ್ವರರ ಹುಟ್ಟೂರು. ೧೯೫೦ರ ಆಗಸ್ಟ್ ೨ರಂದು ಜನನ, ಗದಗಿನ ಆದರ್ಶ ಶಿಕ್ಷಣ ಸಮಿತಿಯಲ್ಲಿ ಅಕ್ಷರಾಭ್ಯಾಸ, ವಾಣಿಜ್ಯ ಪದವೀಧರರು. ಬಾಲ್ಯದಿಂದಲೂ ವಾಣಿಜ್ಯೋದಮದಲ್ಲಿ ವಿಶೇಷ ಆಸಕ್ತಿ. ೧೯೭೬ರಲ್ಲಿ ಗದಗಿನಲ್ಲಿ ಏಕೈಕ ಟ್ರಕ್‌ನೊಂದಿಗೆ ವಿಆರ್‌ಲ್‌ ಗ್ರೂಪ್ ಸ್ಥಾಪನೆ. ಕಠಿಣ ಪರಿಶ್ರಮದಿಂದ ಹಂತಹಂತವಾಗಿ ಕಾರ್ಯಕ್ಷೇತ್ರ ಬೆಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಗೆ ವಿಸ್ತರಣೆ.ಕೆಲವೇ ದಶಕಗಳಲ್ಲಿ ಪಾರಮ್ಯ ಮೆರೆಯುವಿಕೆ. ಸರಕು ಸಾಗಾಣಿಕೆ, ಪಾರ್ಸಲ್ ಸಾಗಾಣಿಕೆ ಮತ್ತು ಪ್ರಯಾಣಿಕರ ಸಾರಿಗೆ ವಾಹನಗಳೂ ಸೇರಿದಂತೆ ನಾಲ್ಕು ಸಾವಿರಕ್ಕೂ ಹೆಚ್ಚು ವಾಹನಗಳನ್ನು ಹೊಂದಿರುವ ದೇಶದ ಏಕೈಕ ಸಂಸ್ಥೆಯೆಂಬ ಹೆಗ್ಗಳಿಕೆಯ ಸಂಪಾದನೆ, ಗಿನ್ನಿಸ್ ಪುಸ್ತಕದಲ್ಲಿ ನವೀನ ದಾಖಲೆ ಸ್ಥಾಪನೆ. ದೇಶಾದ್ಯಂತ ೯೦೦ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವುದು ಮಹತ್ಸಾಧನೆ. ಶಾಸಕರಾಗಿಯೂ ಸೇವೆ ಸಲ್ಲಿಸಿರುವ ಅವರು ಪತ್ರಿಕೋದ್ಯಮಿಯೂ ಸಹ. ವಿಜಯಕರ್ನಾಟಕ, ವಿಜಯವಾಣಿ ಪತ್ರಿಕೆಯನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಿದ ಹೆಗ್ಗಳಿಕೆ. ಇದೀಗ ದಿಗ್ವಿಜಯ ಸುದ್ದಿವಾಹಿನಿಯೂ ಚಾಲ್ತಿಯಲ್ಲಿದ್ದು ಉದ್ಯಮದ ವ್ಯಾಪಕತೆ ವಿಸ್ತಾರಗೊಳ್ಳುತ್ತಲೇ ಇರುವುದು ನಾಡಿಗೆ ಹೆಮ್ಮೆ ತರುವ ಸಂಗತಿ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಪ್ರೊ|| ಬಿ. ಗಂಗಾಧರಮೂರ್ತಿ

ವೃತ್ತಿಯಿಂದ ಪ್ರಾಧ್ಯಾಪಕರಾದ ಗಂಗಾಧರಮೂರ್ತಿಯವರು ಹೆಸರಾಂತ ಬರಹಗಾರರು. ೭೦ರ ದಶಕದಿಂದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಗಂಗಾಧರಮೂರ್ತಿಯವರು ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಯೋಗಗಳನ್ನು ನಡೆಸಿದವರು.

ದಲಿತ ಬಂಡಾಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲುಗೊಂಡಿರುವ ಗಂಗಾಧರ ಮೂರ್ತಿ ಅವರು ಅನೇಕ ಕೃತಿಗಳನ್ನು ರಚಿಸಿದ್ದು, ಬೇರೆ ಭಾಷೆಗಳಿಂದ ಹಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ.

ಗೌರಿಬಿದನೂರು ಬಳಿಯ ವಿದುರಾಶ್ವತ ಕ್ಷೇತ್ರದಲ್ಲಿ ಸ್ವಾತಂತ್ರ ಸೌಧವನ್ನು ರೂಪಿಸುವಲ್ಲಿ ಗಂಗಾಧರ ಮೂರ್ತಿ ಅವರ ಪಾತ್ರ ಹಿರಿದು.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಹಾಗು ಸಾರ್ವಜನಿಕರನ್ನು ತೊಡಗಿಕೊಳ್ಳಲು ಪೇರೇಪಿಸುತ್ತಿರುವ ಗಂಗಾಧರ ಮೂರ್ತಿ ಅವರು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಜನಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಚ್.ಬಿ. ಮಂಜುನಾಥ್

ತಮ್ಮ ವಕ್ರರೇಖೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೊನಚು ವ್ಯಂಗ್ಯಚಿತ್ರಕಾರರಲ್ಲಿ ಪ್ರಮುಖರು ಎಚ್.ಬಿ.ಮಂಜುನಾಥ್,

ಪ್ರಜಾವಾಣಿ ಪತ್ರಿಕೆಯ ಚಿನಕುರಳಿ, ಕನ್ನಡ ಪ್ರಭದ ಸಿಡಿಮದ್ದು, ಸಂಯುಕ್ತ ಕರ್ನಾಟಕದ ಚುಚ್ಚುಮದ್ದು ಅಂಕಣಗಳ ಮೂಲಕ ಸುಮಾರು ೧೭,೦೦೦ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ಅರಳಿಸಿದ್ದಾರೆ. ರೇಖೆಗಳೇ ಅಲ್ಲದೆ ಛಾಯಾಚಿತ್ರಕಲೆಯಲ್ಲಿಯೂ ತಮ್ಮ ಛಾಪು ಮೂಡಿಸಿರುವ ಇವರು ತೆಗೆದ ೮೦೦೦ಕ್ಕೂ ಹೆಚ್ಚು ಛಾಯಾಚಿತ್ರಗಳು ಇವರ ಸೃಜನಶೀಲತೆಯ ಪ್ರತೀಕವಾಗಿದೆ.

ದೇಶ ವಿದೇಶಗಳಲ್ಲಿಯೂ ವ್ಯಂಗ್ಯಚಿತ್ರ ಪ್ರಾತ್ಯಕ್ಷಿಕೆ, ಮತ್ತು ಪ್ರದರ್ಶನಗಳನ್ನು ನೀಡಿರುವ ಇವರಿಗೆ ರಂಭಾಪುರಿ ಪೀಠದಿಂದ ಚಿತ್ರಕಲಾಕೋವಿದ ಪ್ರಶಸ್ತಿ, ದಾವಣಗೆರೆ ಜಿಲ್ಲಾಡಳಿತದ ಗೌರವ ಪುರಸ್ಕಾರಗಳೂ ಸೇರಿದಂತೆ ಹಲವು ಗೌರವ ಸಮ್ಮಾನಗಳು ಇವರಿಗೆ ಲಭಿಸಿವೆ.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಸ್. ಸಯ್ಯದ್ ಅಹಮದ್

ಶತಮಾನದ ಅಂಚಿನಲ್ಲಿರುವ ಎಸ್.ಸಯ್ಯದ್ ಅಹಮದ್ ಅವರು ಅಲ್ಲಮ, ಇಟ್ಬಾಲ್ ಮಹಾಕವಿಗಳ ಬಗೆಗೆ ಆಳವಾದ ಅಭ್ಯಾಸ ಮಾಡಿರುವ ಅನೇಕ ಕೃತಿಗಳನ್ನು ರಚಿಸಿರುವ ಹಿರಿಯರು.

ಆಧ್ಯಾತ್ಮ, ತತ್ವಜ್ಞಾನ ಮತ್ತು ಅನುಭಾವ ಸಾಹಿತ್ಯಕ್ಕೆ ಸೇರಿದ ಹದಿನೆಂಟಕ್ಕೂ ಹೆಚ್ಚು ಪರ್ಷಿಯನ್ ಗ್ರಂಥಗಳನ್ನು ಉರ್ದು ಭಾಷೆಗೆ ಅನುವಾದ ಮಾಡಿ ಓದುಗರಿಗೆ ಸುಲಭ ದರದಲ್ಲಿ ದೊರೆಯುವಂತೆ ಮಾಡಿದ ಹೆಗ್ಗಳಿಕೆ ಇವರದು.

ಕಾಶ್ಮೀರಿ ವಿಶ್ವವಿದ್ಯಾಲಯ ಹಾಗೂ ವಾರಣಾಸಿಯಲ್ಲಿರುವ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಭಾಷಾ ಪಾಂಡಿತ್ಯದ ಬಗ್ಗೆ ಪ್ರಶಂಸೆ ಪಡೆದಿರುವ ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿಗಳಾದ ಸಯ್ಯದ್ ಅಹಮದ್ ಅವರು ಅಲ್ಲಮನ ತತ್ವಜ್ಞಾನದ ಬಗ್ಗೆ ಅಗಾಧವಾದ ಪಾಂಡಿತ್ಯವುಳ್ಳವರು.

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ರಾಮಚಂದ್ರ ಗುಹಾ

ಅಂಕಣಕಾರರಾಗಿರುವ ರಾಮಚಂದ್ರ ಗುಹಾ ಅವರು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ತಮ್ಮ ಅಂಕಣಗಳ ಮೂಲಕ ಪರಿಸರ, ಕ್ರಿಕೆಟ್ ಮತ್ತು ರಾಜಕೀಯ ಚಿಂತನೆಗಳನ್ನು ಪರಿಣಾಮಕಾರಿಯಾಗಿ ಮಂಡಿಸುತ್ತಿದ್ದಾರೆ.

ತಮ್ಮ ಇಂಡಿಯಾ ಆಕ್ಟರ್ ಗಾಂಧಿ ಕೃತಿಯಲ್ಲಿ ಭಾರತೀಯ ಇತಿಹಾಸವನ್ನು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನದಲ್ಲಿ ರಚಿಸುವಲ್ಲಿ ಗುಹಾ ಅವರ ಕೊಡುಗೆ ಹಿರಿದು. ಕ್ರಿಕೆಟ್, ಇತಿಹಾಸ ಸೇರಿದಂತೆ ಹಲವು ಕೃತಿಗಳನ್ನು ಇವರು ರಚಿಸಿದ್ದಾರೆ.

ರಾಷ್ಟ್ರದ ಮತ್ತು ವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸ ನೀಡುತ್ತಿರುವ ರಾಮಚಂದ್ರ ಗುಹಾ ಅವರ ಹಲವು ಕೃತಿಗಳಿಗೆ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಸಂದಿವೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಂ.ಜೆ.ಬ್ರಹ್ಮಯ್ಯ

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಮುದುಗೆರೆ ಗ್ರಾಮದವರಾದ ಎಂ.ಜೆ.ಬ್ರಹ್ಮಯ್ಯ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ದೇಶಪ್ರೇಮದ ಪ್ರತೀಕ. ನಾಡಸೇವೆಗಾಗಿ ಅಹರ್ನಿಶಿ ದುಡಿದವರು.
೧೯೩೮ರ ವಿದುರಾಶ್ವತ್ಥ ಧ್ವಜ ಸತ್ಯಾಗ್ರಹದ ದಟ್ಟ ಪ್ರಭಾವಳಿಯಲ್ಲಿ ಬೆಳೆದ ಬ್ರಹ್ಮಯ್ಯ ಅವರು ೧೯೪೭ರಲ್ಲಿ ‘ಮೈಸೂರು ಚಲೋ’ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದವರು. ಸ್ವಾತಂತ್ರ್ಯಾನಂತರ ಕಾಲದಲ್ಲಿ ಸರ್ಕಾರಿ ಸೇವೆಯಲ್ಲಿದ್ದು ನಿವೃತ್ತರಾದವರು. ಗಾಂಧಿಮೌಲ್ಯಗಳ ನೆಲೆಯಲ್ಲೇ ಬದುಕು ಸಾಗಿಸಿದ ಬ್ರಹ್ಮಯ್ಯ ಅವರು ಆ ದೆಸೆಯಲ್ಲೇ ಈವರೆಗೂ ಅನೇಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು ಹೊಸ ಪೀಳಿಗೆಗೆ ಮಾದರಿಯಾಗಿರುವವರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಪಿ. ರಾಮದಾಸ್

ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿರುವ ಸಾಧಕರು ಪಿ.ರಾಮದಾಸ್, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೂ ವಿಸ್ತಾರಗೊಂಡ ಬಹುಮುಖ ಪ್ರತಿಭೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ಪುತ್ತಿಗೆ ಗ್ರಾಮದವರಾದ ಪಿ.ರಾಮದಾಸ್ ೧೯೪೬ರಲ್ಲಿ ಜನಿಸಿದರು. ಮೂಡಬಿದರೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ ಸುರತ್ಕಲ್ನ ಕೆಆರ್ಇಸಿ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದವರು. ಮೆಷಿನ್ ಟೂಲ್ಸ್ನಲ್ಲಿ ಎಂ.ಟೆಕ್ ಮಾಡಿದ ಅವರು ೧೯೭೦ರಲ್ಲಿ ಎಚ್ಎಂಟಿಯಲ್ಲಿ ವೃತ್ತಿಜೀವನ ಆರಂಭ. ೧೩ ವರ್ಷಗಳ ನಿರಂತರ ಸೇವೆ. ಬಳಿಕ ಕೊಲ್ಕತ್ತಾದ ಎಂಎಂಸಿಯಲ್ಲಿ ಮುಖ್ಯ ಡಿಸೈನ್ ಇಂಜಿನಿಯರ್ ಆಗಿ ಸೇವೆ. ೧೯೯೪ರಲ್ಲಿ ತಮ್ಮದೇ ಎಎಂಎಸ್ ಸ್ಥಾಪನೆ. ಶೇ. ೯೦ಕ್ಕೂ ಅಧಿಕ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವಿಕೆ. ೧೫೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗಿರುವ ಅವರು ಸಂಸ್ಥೆಯನ್ನು ೫೦೦ ಕೋಟಿ ರೂ. ವಹಿವಾಟಿನ ಮಟ್ಟಕ್ಕೆ ಬೆಳೆಸಿದ ಕೀರ್ತಿ ಪಡೆದಿದ್ದಾರೆ. ಧಾರ್ಮಿಕ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರದಲ್ಲೂ ಸೇವೆಗೈದಿರುವ ಅವರು ಭೀಷ್ಮ ಪಿತಾಮಹ, ಕೈಗಾರಿಕಾ ರತ್ನ ಪ್ರಶಸ್ತಿ ಪುರಸ್ಕೃತರು ಸಹ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ನಮ ಶಿವಾಯಂ ರೇಗುರಾಜ್

ಸಮಾಜಸೇವೆ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಗುರುತು ಮೂಡಿಸಿರುವವರು ನಮ ಶಿವಾಯಂ ರೇಗುರಾಜ್. ಪ್ರತಿಷ್ಠಿತ ನಿಟ್ಟೂರ್ ತಾಂತ್ರಿಕ ತರಬೇತಿ ಫೌಂಡೇಶನ್ನ ವೈವಸ್ಥಾಪಕ ನಿರ್ದೇಶಕರು.
೧೯೪೨ರ ಆಗಸ್ಟ್ ೬ರಂದು ತಮಿಳುನಾಡಿನ ಕೋಟ್ರಲಂನಲ್ಲಿ ಜನಿಸಿದ ರೇಗುರಾಜ್ ಅವರು ಭಾರತೀಯ ಸೇವೆಯ ನಿವೃತ್ತ ಮೇಜರ್ ಕೆ. ನಮಶಿವಾಯಂರ ಸುಪುತ್ರರು. ಚೆನ್ನೈನಲ್ಲಿ ೧೯೬೩ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ರೇಗುರಾಜ್ ಅವರು ತಾನ್ಸಿ ಟೂಲ್ ರೂಂನಲ್ಲಿ ಉದ್ಯೋಗಕ್ಕೆ ಸೇರಿದರು. ಆಟೋಮೊಬೈಲ್ ಇಂಜಿನಿಯರಿಂಗ್ನಲ್ಲಿ ಸ್ವಯಂ ಆಸಕ್ತಿ ಬೆಳೆಸಿಕೊಂಡ ಅವರು ೧೯೬೭ರಲ್ಲಿ ನಿಟ್ಟೂರ್ ಟೆಕ್ನಿಕಲ್ ಟ್ರೈನಿಂಗ್ ಫೌಂಡೇಷನ್ಗೆ ವಾಣಿಜ್ಯ ವ್ಯವಸ್ಥಾಪಕರಾಗಿ ಸೇರಿದರು. ಯುವಪೀಳಿಗೆಗೆ ಡೈ ಮೇಕಿಂಗ್ ಮತ್ತು ಟೂಲ್ ಮೇಕಿಂಗ್ನಲ್ಲಿ ತರಬೇತಿ ನೀಡುವ ಜವಾಬ್ದಾರಿ ವಹಿಸಿಕೊಂಡರು. ಆನಂತರದ್ದು ನಿರಂತರ ಸೇವೆ. ದೇಶದ ೧೫ ಕೇಂದ್ರಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಹೆಗ್ಗಳಿಕೆಯ ರೇಗುರಾಜ್ ಅವರು ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ-ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಪಿ.ಬಿ ಸಂತಪ್ಪನವರ್

ಶಿಕ್ಷಣ ಕ್ಷೇತ್ರದಲ್ಲಿ ಗುರುತಾರ್ಹ ಸೇವೆ ಸಲ್ಲಿಸಿದವರು ಡಾ. ಪಿ.ಬಿ.ಶಾಂತಪ್ಪನವರ್. ವಿದ್ಯಾರ್ಥಿಗಳ ಮನಗೆದ್ದ ಸಂಸ್ಕೃತ ವಿದ್ವಾಂಸರು.
ಕಲಬುರಗಿ ಜಿಲ್ಲೆಯವರಾದ ಶಾಂತಪ್ಪನವರ್ ಶಿಕ್ಷಣ ತಜ್ಞರು. ಕನ್ನಡ, ಸಂಸ್ಕೃತ, ಇಂಗ್ಲೀಷ್, ಹಿಂದಿ ಮತ್ತು ಮರಾಠಿ ಭಾಷೆಯ ಮೇಲೆ ಸಮಾನ ಹಿಡಿತ ಸಾಧಿಸಿರುವವರು. ೧೯೫೨ರಲ್ಲಿ ಜನಿಸಿದ ಶಾಂತಪ್ಪನವರ್ ಅವರು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ, ಡೀನ್ ಆಗಿ ಕಾರ್ಯನಿರ್ವಹಿಸಿದವರು. ವಿದ್ಯಾರ್ಥಿಗಳ ಏಳೆಗೆ ಶ್ರಮಿಸಿದ ಗುರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಡಿ. ಸುರೇಂದ್ರಕುಮಾರ್

ಶಿಕ್ಷಣ, ಸಮಾಜಸೇವೆ ಮತ್ತು ಗ್ರಾಮೀಣ ಸೇವೆಯಲ್ಲಿ ಸದಾ ನಿರತರಾಗಿರುವವರು ಶ್ರೀ ಧರ್ಮಸ್ಥಳ ಸುರೇಂದ್ರಕುಮಾರ್, ಶ್ರೀಕ್ಷೇತ್ರದ ಹಲವು ಧಾರ್ಮಿಕ-ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರದ ಸುರೇಂದ್ರಕುಮಾರ್ ೧೯೫೧ರ ಮೇ. ೩೧ರಂದು ಜನಿಸಿದರು. ವಿದ್ಯಾಭ್ಯಾಸದ ಬಳಿಕ ಶ್ರೀ ಧರ್ಮಸ್ಥಳ ಕ್ಷೇತ್ರದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾದವರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾಗಿ ಶ್ರಮಿಸಿದವರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶಸ್ವಿ ಅನುಷ್ಠಾನಗೊಳಿಸಿದ ಅವರು ಶ್ರೀಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಮೂಲಕ ಸಾಹಿತ್ಯ, ಕಲೆ, ಸಂಸ್ಕೃತಿಕ ಚಟುವಟಿಕೆಗಳನ್ನು ಕೈಗೊಂಡವರು. ಶ್ರೀ ಕ್ಷೇತ್ರದ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷರಾಗಿ ಐದು ದಶಕಗಳಿಂದಲೂ ಶ್ರಮಿಸಿದ್ದು ಚಿತ್ರಕಲಾ ಪರಿಷತ್ತಿನ ಸದಸ್ಯರು, ಕರ್ನಾಟಕ ಬ್ಯಾಂಕಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ನರಸಿಂಹಯ್ಯ

ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ನರಸಿಂಹಯ್ಯ ಅವರು ಪೊಲೀಸ್ ಕ್ರೀಡಾಪಟುವಾಗಿ ಸೇವೆಸಲ್ಲಿಸಿದವರು. ಕ್ರೀಡಾಂಗಣದಲ್ಲಿ ಇಲಾಖೆಯ ಗೌರವ ಹೆಚ್ಚಿಸಿದವರು.
ಬೆಂಗಳೂರಿನವರಾದ ನರಸಿಂಹಯ್ಯ ಅವರಿಗೆ ಬಾಲ್ಯದಿಂದಲೂ ಕ್ರೀಡಾಸಕ್ತಿ ಅಪಾರ. ೧೯೬೮ರಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಮೇಲೆ ನೂರ್ಮಡಿಗೊಂಡ ಕ್ರೀಡಾಪ್ರೇಮ. ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ಇಲಾಖಾ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಪೊಲೀಸ್ ಇಲಾಖೆಯ ರಾಜ್ಯ ಮತ್ತು ಅಂತಾರಾಜ್ಯ ಅಥ್ಲೆಟಿಕ್ಸ್ ವಿಭಾಗದಲ್ಲಿ ೩೪ ಬಾರಿ ಪ್ರಥಮ ಸ್ಥಾನ, ೧೧ ಬಾರಿ ದ್ವಿತೀಯ ಸ್ಥಾನ, ೮ ವರ್ಷಗಳ ಕಾಲ ವೈಯಕ್ತಿಕ ಚಾಂಪಿಯನ್, ಹತ್ತು ವರ್ಷಗಳ ಕಾಲ ಆಲ್ ಇಂಡಿಯಾ ಪೊಲೀಸ್ ಸ್ಪೋಟ್ಸ್ಗೆ ಆಯ್ಕೆ ಮುಂತಾದ ಮಹತ್ವದ ಸಾಧನೆಗೈದವರು, ಇಲಾಖಾ ಸೇವೆ ಮತ್ತು ಕ್ರೀಡಾಸಾಧನೆಗೆ ಮುಖ್ಯಮಂತ್ರಿಗಳ ಪದಕ, ರಾಷ್ಟ್ರಪತಿಗಳ ಶ್ಲಾಘನೀಯ ಸೇವಾಪದಕ ಪಡೆದವರು, ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೂ ಭಾಜನರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಸಿ.ಕೆ.ಜೋರಾಪೂರ

ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಸಿ.ಕೆ.ಜೋರಾಪೂರ ಅಪ್ಪಟ ಕನ್ನಡ ಹೋರಾಟಗಾರ. ಸಾಂಸ್ಕೃತಿಕ ಸಂಘಟನೆಗಳ ಮೂಲಕ ನಾಡಿನ ಹಿರಿಮೆ ಮೆರೆದವರು.
ಬೆಳಗಾವಿ ಜಿಲ್ಲೆಯ ಸಾಲಹಳ್ಳಿಯವರಾದ ಜೋರಾಪೂರ ಅವರು ಬಾಲ್ಯದಿಂದಲೂ ಕನ್ನಡಪ್ರೇಮಿ, ಸಾಹಿತ್ಯ ರಚನೆ, ಸಂಘಟನೆಗಳ ಮೂಲಕ ಹೆಸರಾದವರು. ಭವ್ಯಭಾರತಯಾತ್ರೆ, ಜಿಹಾದ ಮತ್ತು ಉಗ್ರಗಾಮಿ, ವಸುಧಾರಾ ಕಾದಂಬರಿ, ಬೆಳಗಾವಿ ಕನ್ನಡ ಚಳವಳಿಗಳು ಮತ್ತು ನಾಡಹಬ್ಬ ಸೇರಿದಂತೆ ೨೨ ಗ್ರಂಥಗಳ ಕರ್ತೃ, ೩ ಗ್ರಂಥಗಳ ಸಂಪಾದಕರು. ೧೯೭೬ರಲ್ಲಿ ನಾಡಹಬ್ಬ ಉತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿಯಾಗಿ ನಾಡಹಬ್ಬ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಸತತ ೪೩ ವರ್ಷಗಳಿಂದಲೂ ನುಡಿ ಪರಿಚಾರಿಕೆಗೈದವರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘದ ಉಪಾಧ್ಯಕ್ಷರು, ಯುವಜನಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯರು. ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ಜಗಜ್ಯೋತಿ ಸದ್ಭಾವನ ಪ್ರಶಸ್ತಿ ಮುಂತಾದ ಗೌರವಗಳಿಗೆ ಪಾತ್ರರು.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಮೇಜರ್ ಪ್ರದೀಪ್ ಆರ್ಯ

ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮೇಜರ್ ಪ್ರದೀಪ್ ಶೌರಿ ಆರ್ಯ ಅವರು ನಾಡಿನ ಹೆಮ್ಮೆ. ಉಗ್ರಗಾಮಿಗಳ ವಿರುದ್ಧ ಹೋರಾಟದಲ್ಲಿ ತೋರಿದ ಧೈರ್ಯ-ಸಾಹಸಕ್ಕೆ ಪ್ರತಿಷ್ಠಿತ ಶೌರ್ಯ ಚಕ್ರಗೌರವಕ್ಕೆ ಪಾತ್ರರಾದವರು.
೨೦೦೪ರ ಭಾರತೀಯ ಕಂದಾಯ ಸೇವಾ ಅಧಿಕಾರಿಯಾಗಿರುವ ಮೇಜರ್ ಪ್ರದೀಪ್ ಆರ್ಯ ಅವರು ಮೂಲತಃ ಬೆಂಗಳೂರಿನವರು, ಬೆಂಗಳೂರಿನ ಫ್ರಾಂಕ್ ಆಂಥೋನಿ ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ಶಿಕ್ಷಣ, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪಡೆದವರು. ಮಂಗಳೂರಿನಲ್ಲಿ ಸಹಾಯಕ ಆಯುಕ್ತ, ಬೆಂಗಳೂರಿನಲ್ಲಿ ಉಪ ಆಯುಕ್ತ ಹಾಗೂ ಬೆಳಗಾವಿಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸಿದವರು. ಸಮಾಜಶಾಸ್ತ್ರ, ವ್ಯಾಪಾರ ಆಡಳಿತ, ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿವರು ಅವರು ಪಿಎಚ್ಡಿ ಪದವೀಧರರು ಸಹ. ವೃತ್ತಿಯಲ್ಲಿ ವಾಣಿಜ್ಯ ಪೈಲೆಟ್ ಆಗಿರುವ ಅವರು ೧೦೬ಟಿಎ ಪ್ಯಾರಡೂಟ್ ರೆಜಿಮೆಂಟ್ಗೆ ನೇಮಕಗೊಂಡರು. ಕರ್ನಾಟಕ ಮತ್ತು ಉತ್ತರ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ನಲ್ಲಿ ಚುನಾವಣಾ ಅಕ್ರಮಗಳನ್ನು ಪತ್ತೆಹಚ್ಚಿದ್ದಕ್ಕಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಪ್ರಶಸ್ತಿ ಪಡೆದವರು. ಕಾಶ್ಮೀರ ಕಣಿವೆಯ ಬಾರಾಮುಲ್ಲಾದ ಎಲ್ಓಸಿ ಬಳಿ ಉಗ್ರರ ನಿಮೂರ್ಲನೆಗೈದಿದ್ದಕ್ಕಾಗಿ ೨೦೧೮ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೌರವಾನ್ವಿತ ಶೌರ್ಯ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಆರ್.ಎಸ್.ರಾಜಾರಾಮ್

ಕನ್ನಡಿಗರಲ್ಲಿ ಸದಭಿರುಚಿಯ ಓದಿನ ಆಸಕ್ತಿಯನ್ನು ಹೆಚ್ಚಿಸುವ ಮೂಲಕ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿದವರು ಆರ್.ಎಸ್.ರಾಜಾರಾಮ್. ಕರ್ನಾಟಕದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ನವಕರ್ನಾಟಕ ಪಬ್ಲಿಕೇಷನ್ಸ್ನ ರೂವಾರಿ.
೧೯೪೧ರಲ್ಲಿ ಮಂಗಳೂರಿನಲ್ಲಿ ಜನಿಸಿದ ರಾಜಾರಾಮ್ ಅವರು ಇಂಟರ್ಮಿಡಿಯೇಟ್ಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಸಾಮಾಜಿಕ ಚಟುವಟಿಕೆಗಳಿಗೆ ಧುಮುಕಿದವರು. ಕಾರ್ಮಿಕ ನಾಯಕ ಬಿ.ವಿ.ಕಕ್ಕಿಲ್ಲಾಯರ ಮಾರ್ಗದರ್ಶನದಲ್ಲಿ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯರಾದವರು. ೧೯೬೦ರಲ್ಲಿ ಸ್ಥಾಪನೆಗೊಂಡ ನವಕರ್ನಾಟಕ ಪಬ್ಲಿಕೇಷನ್ಸ್ನ ಆರಂಭಿಕ ದಿನಗಳಲ್ಲೇ ಸಹಾಯಕರಾಗಿದ್ದವರು ರಾಜಾರಾಮ್. ೬೫ರಲ್ಲಿ ನವಕರ್ನಾಟಕ ಸಂಸ್ಥೆಯ ‘ಜನಶಕ್ತಿ ಪ್ರಿಂಟರ್ಸ್’ ಸಂಸ್ಥೆಯ ‘ಜನಶಕ್ತಿ ಪ್ರಿಂಟರ್ಸ್’ ಮುದ್ರಣಾಲಯದ ವ್ಯವಸ್ಥಾಪಕರಾಗಿ, ಭಾರತ-ಸೋವಿಯತ್ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ದಶಕದ ಸೇವೆ. ವಿದ್ಯಾರ್ಥಿ ಯುವಜನ ಸಭಾದ ಸ್ಥಾಪನೆ. ೭೨ರಿಂದ ನವಕರ್ನಾಟಕ ಪಬ್ಲಿಕೇಷನ್ಸ್ನ ಪೂರ್ಣ ಹೊಣೆಗಾರಿಕೆ, ವಿಶ್ವಕಥಾಕೋಶ, ಕನ್ನಡ ಸಾಹಿತ್ಯ ಚರಿತ್ರೆ ಬೆಳವಣಿಗೆ, ನವಕರ್ನಾಟಕ ಜ್ಞಾನವಿಜ್ಞಾನ ಕೋಶ, ನವಕರ್ನಾಟಕ ಸಾಹಿತ್ಯ ಸಂಪದ ಮಾಲಿಕೆಯಡಿ ಹಲವು ಮಹತ್ವದ ಕೃತಿಗಳ ಪ್ರಕಟಣೆ. ಅತ್ಯುತ್ತಮ ಪ್ರಾದೇಶಿಕ ಪ್ರಕಾಶಕ ಸಂಸ್ಥೆ, ಅತ್ಯುತ್ತಮ ಪ್ರಕಾಶಕ ಪುರಸ್ಕಾರ ಮತ್ತಿತರ ಗೌರವಗಳಿಗೆ ಭಾಜನರು.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ದೇವರಾಜ ರೆಡ್ಡಿ

ಕೃಷಿ ತಂತ್ರಜ್ಞಾನದಲ್ಲಿ ನಿಪುಣರಾದ ಭೂ-ವಿಜ್ಞಾನಿ ದೇವರಾಜ ರೆಡ್ಡಿ ಕೊಳವೆ ಬಾವಿ ಮರುಪೂರಣ ಪ್ರಯೋಗದಲ್ಲಿ ಯಶಸ್ವಿಯಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳಿಗೆ ಮರುಜೀವ ಕೊಟ್ಟವರು.
ರಾಜ್ಯದಾದ್ಯಂತ ಸಾವಿರಾರು ಕೊಳವೆ ಬಾವಿಗಳು ವಿಫಲವಾಗುವ ಸಂದರ್ಭದಲ್ಲಿ ಅವುಗಳಿಗೆ ಲಭ್ಯವಿರುವ ಅಂತರ್ಜಲ ತುಂಬುವಂತೆ ಮಾಡಿ ಕೊಳವೆ ಬಾವಿಗಳ ಮೂಲಕ ನೀರು ಉಪಯೋಗಿಸಿಕೊಳ್ಳಲು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದರು. ದೇವರಾಜ ರೆಡ್ಡಿ ಅವರ ಪ್ರಯೋಗಗಳನ್ನು ಹಲವರಿಗೆ ತರಬೇತು ನೀಡಿ ಅವರು ಕೂಡ ರಾಜ್ಯದುದ್ದಕ್ಕೂ ಜಲಮರುಪೂರಣ ಯೋಜನೆಯಲ್ಲಿ ಪಾಲುಗೊಳ್ಳುವಂತೆ ಮಾಡಿದ್ದಾರೆ. ಇವರು ಕೊಳವೆ ಬಾವಿ ಜಲಮರುಪೂರಣ ಕುರಿತ ಅನೇಕ ಪರಿಚಯಾತ್ಮಕ ಹೊತ್ತಗೆಗಳನ್ನು ರೈತಾಪಿ ಜನರಿಗೆ ಸಿಗುವಂತೆ ಮಾಡಿದ್ದಾರೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಶಕುಂತಲಾ ನರಸಿಂಹನ್

ಕರ್ನಾಟಕ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಗಳೆರಡರಲ್ಲೂ ಸಾಧನೆ ಮಾಡಿ ಎರಡು ಗಾಯನ ಪದ್ಧತಿಗಳಲ್ಲಿಯೂ ಆಕಾಶವಾಣಿ ‘ಎ’ ಶ್ರೇಣಿಯ ಕಲಾವಿದರೆಂದು ಗುರುತಿಸಲ್ಪಟ್ಟ ಮೊದಲ ಹಾಗೂ ಏಕೈಕ ಸಂಗೀತಜ್ಞೆ ಡಾ|| ಶಕುಂತಲಾ ನರಸಿಂಹನ್.
ಸಂಗೀತ ವಿದ್ವಾಂಸರಾಗಿ, ಕಲಾವಿದರಾಗಿ ಪ್ರಸಿದ್ಧರಾದ ಶಕುಂತಲಾ ನರಸಿಂಹನ್ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದು, ಎರಡೂ ಶೈಲಿಗಳ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳ ಮೂಲಕ ಪ್ರಖ್ಯಾತರಾದವರು. ಸಂಗೀತದಲ್ಲಿ ಹಲವಾರು ಚಿನ್ನದ ಪದಕಗಳನ್ನು ಪಡೆದು ಸಂಗೀತ ಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಸಂಪಾದಿಸಿರುವ ಹೆಗ್ಗಳಿಕೆ ಇವರದು.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಆರ್. ಜೈಪ್ರಸಾದ್

ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಹುದ್ದೆಯಿಂದ ಪದೋನ್ನತಿ ಪಡೆದು ರಾಷ್ಟ್ರೀಯ ಹೆದ್ದಾರಿ ಪ್ರಧಾನ ಎಂಜಿನಿಯರ್ ಆಗಿ ಹುದ್ದೆ ನಿರ್ವಹಿಸಿದ ಹೆಗ್ಗಳಿಕೆ ಇರುವ ಆರ್. ಜೈಪ್ರಸಾದ್ ಅವರು ನಾಡಿನ ಹಲವಾರು ಪ್ರಮುಖ ರಸ್ತೆಗಳ ವಿನ್ಯಾಸ ಮಾಡುವಲ್ಲಿ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ.
ಏಷಿಯನ್ ಅಭಿವೃದ್ಧಿ ಬ್ಯಾಂಕ್ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಾರಿಗೆ ಸಚಿವಾಲಯದೊಂದಿಗೆ ಯೋಜನಾ ವರದಿಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಇವರು ರಸ್ತೆ, ಬಂದರು ಹಾಗೂ ಹಲವಾರು ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ದುಡಿದಿದ್ದಾರೆ.
ಸರ್ಕಾರದ ಹಲವು ಸಂಸ್ಥೆಗಳಲ್ಲಿ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಆರ್.ಜೈಪ್ರಸಾದ್ ಅವರು ಬೆಂಗಳೂರು ಮಹಾನಗರಪಾಲಿಕೆಯ ತಾಂತ್ರಿಕ ಯೋಜನೆಗಳನ್ನು ಕೈಗೊಳ್ಳಲು ಶ್ರಮ ವಹಿಸಿದ್ದ ಇವರು ಹಲವಾರು ಮುದ್ರಿತ ತಾಂತ್ರಿಕ ಬರೆಹಗಳನ್ನು ಬರೆದಿದ್ದಾರೆ. ಇವರಿಗೆ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಲಭಿಸಿವೆ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಂ.ಎನ್. ವಾಲ

ಉತ್ತರ ಕರ್ನಾಟಕ ಭಾಗದ ಜಾನಪದ ಸಾಹಿತ್ಯ ಸಂಗ್ರಹ ಮತ್ತು ಅಧ್ಯಯನಕ್ಕಾಗಿ ಮೂರು ದಶಕಗಳಿಗೂ ಅಧಿಕ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಮಲ್ಲಿಕಾರ್ಜುನ ನಿಂಗಪ್ಪ ವಾಲಿ ಅವರು ತಮ್ಮ ಪ್ರಕಾಶನದ ಮೂಲಕ ಹಲವಾರು ಪ್ರತಿಭಾವಂತ ಲೇಖಕರ ಕೃತಿಗಳನ್ನು ಪ್ರಕಟಿಸುತ್ತ ಬಂದಿದ್ದಾರೆ.
ಎಲ್ಲ ಕನ್ನಡ ಹೋರಾಟಗಳು ಮತ್ತು ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಎಂ.ಎನ್.ವಾಲಿ ಅವರು ಹಲವಾರು ಮೌಲ್ಯಯುತ ಕೃತಿಗಳನ್ನು ಹೊರತಂದಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಎಸ್. ತಿಪ್ಪೇಸ್ವಾಮಿ

ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರಲ್ಲಿ ಒಬ್ಬರಾದ ಎಸ್.ತಿಪ್ಪೇಸ್ವಾಮಿ ದೇಶ ವಿದೇಶಗಳ ಅನೇಕ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ನಡ ಚಿತ್ರಗಳ ಕ್ಯಾಮೆರಾಮನ್ ಆಗಿಯೂ ಸೇವೆ ಸಲ್ಲಿಸಿರುವ ತಿಪ್ಪೇಸ್ವಾಮಿ ಅವರು ಅನೇಕ ಸಾಕ್ಷ್ಯಚಿತ್ರಗಳನ್ನು ತಯಾರಿಸಿದ್ದಾರೆ. ಪತ್ರಿಕೋದ್ಯಮ ಹಾಗೂ ಸಂವಹನ ಮಾಧ್ಯಮದ ವಿದ್ಯಾರ್ಥಿಗಳಿಗೆ ಗೌರವ ಉಪನ್ಯಾಸಕರಾಗಿ ಕೆಲಸ ಮಾಡಿರುವ ಇವರು ಸಿನಿಮಾ ಪತ್ರಿಕೋದ್ಯಮದಲ್ಲಿಯೂ ಛಾಯಾಗ್ರಾಹಕ ಹಾಗೂ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪತ್ರಕರ್ತರಾಗಿ ೨೫ ವರ್ಷಗಳಿಂದ ನಾಡಿನ ಹಲವಾರು ಪತ್ರಿಕೆಗಳಿಗೆ ಹಾಗೂ ಚೆನೈನಿಂದ ಪ್ರಕಟವಾಗುತ್ತಿದ್ದ ಸಿನಿಮಾ ಹಾಗೂ ಮಹಿಳಾ ಮಾಸಪತ್ರಿಕೆಗಳಿಗೂ ಇವರು ಛಾಯಾಚಿತ್ರಗಳನ್ನು ಒದಗಿಸಿದ್ದಾರೆ.

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಹೆಚ್.ಎಸ್. ಪಾಟೀಲ

ಹಿಂದುಳಿದ ಕೊಪ್ಪಳ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಹೆಚ್.ಎಸ್.ಪಾಟೀಲ್ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ಕಾರ್ಯಕರ್ತರಾಗಿದ್ದು, ಸಾಹಿತ್ಯ ಸಮ್ಮೇಳನ ಸ್ವಾಗತ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ತಳಮಳ ಪತ್ರಿಕೆಗೆ ಅನೇಕ ಲೇಖನಗಳನ್ನು ಬರೆದಿರುವ ಇವರು ಹನ್ನೊಂದು ಕೃತಿಗಳನ್ನು ರಚಿಸಿದ್ದು, ಏಳು ಕೃತಿಗಳನ್ನು ಸಂಪಾದಿಸಿದ್ದಾರೆ.
ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕಾಂಚ್ಯಾಣಿ ಶರಣಪ್ಪ

ನಾಡಿನ ಹೆಸರಾಂತ ಶಿಶು ಸಾಹಿತಿಗಳಲ್ಲಿ ಒಬ್ಬರಾಗಿರುವ ಕಂಚ್ಯಾಣಿ ಶರಣಪ್ಪ ಶಿವಸಂಗಪ್ಪನವರ ಕಾವ್ಯ ಕಾವ್ಯನಾಮ ಕಂಚ್ಯಾಣಿ ಶರಣಪ್ಪ, ಶಿಕ್ಷಕರಾಗಿ ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಮಾಡಿರುವ ಶರಣಪ್ಪನವರು ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ.

ಮೊದಮೊದಲಿಗೆ ಪ್ರೌಢ ಸಾಹಿತ್ಯವನ್ನು ಕಾವ್ಯವನ್ನು, ರಚಿಸಿದ ಶರಣಪ್ಪನವರು ಮುಂದೆ ಬರೆದಿದ್ದೆಲ್ಲವೂ ಮಕ್ಕಳಿಗಾಗಿಯೇ. ಮಕ್ಕಳ ಗೀತೆಗಳನ್ನು ಪುಟಾಣಿಗಳಿಗೆ ಸರಳವಾಗಿ ಅರ್ಥವಾಗುವಂತೆ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡ ಶರಣಪ್ಪನವರು ಇಪ್ಪತ್ತಕ್ಕೂ ಹೆಚ್ಚು ಶಿಶುಗೀತೆಗಳ ಸಂಕಲನಗಳನ್ನು ಹೊರತಂದಿದ್ದಾರೆ.

ಮಕ್ಕಳಿಗಾಗಿಯೇ ಕಥೆಗಳನ್ನು ಆಧ್ಯಾತ್ಮ ಸಾಧಕರ ಜೀವನಚರಿತ್ರೆಗಳನ್ನು ರಚಿಸಿರುವ ಶರಣಪ್ಪನವರಿಗೆ ರಾಷ್ಟ್ರೀಯ ಬಾಲ ಸಾಹಿತ್ಯ ಪುರಸ್ಕಾರವೂ ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವ ಸನ್ಮಾನಗಳು ಸಂದಿವೆ. ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸಿದ್ದ ಶರಣಪ್ಪನವರು ಈಗಲೂ ಶಿಶುಸಾಹಿತ್ಯ ರಚನೆಯಲ್ಲಿ ಸಕ್ರಿಯರು.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ದಾದ ಫೀರ್ ಪಂಜರ್ಲೆ

ದಾದಾಪೀರ್ ಮಂಜರ್ಲಾ ಅವರು ತತ್ವಪದಗಳ ಮೂಲಕ ಭಾವೈಕ್ಯತೆ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದು, ಅದನ್ನು ವ್ಯಾಪಕವಾಗಿ ಪಸರಿಸುವ ಕೆಲಸದಲ್ಲಿ ಮಂಜರ್ಲಾ ಅವರು ನಿರತರಾಗಿದ್ದಾರೆ.

 

ಗಾಯನವನ್ನು ವಿಜಯಶಾಂತಿ ಫಿಲ್ಡ್ ಇನ್ಸಿಟ್ಯೂಟ್‌ನಿಂದ ಕಲಿತ ದಾದಾಪೀರ್ ಹಿಂದೂಸ್ಥಾನಿ ಗಾಯನವನ್ನು ಅಭ್ಯಾಸ ಮಾಡಿದ್ದು, ಹೆಸರಾಂತ ಹಿಂದೂಸ್ಥಾನಿ ಗಾಯಕ ಕಲ್ಕತ್ತೆಯ ಉಸ್ತಾದ್ ರಶೀದ್ ಖಾನ್ ಅವರಿಂದ ತತ್ವಪದ ಹಾಗೂ ಧಾರ್ಮಿಕ ಸಾಮರಸ್ಯ ಹರಡುವ ಸಂಗೀತವನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ದಾದಾಪೀರ್ ಅವರು ಈವರೆಗೆ ನೂರಿಪ್ಪತ್ತೆಂಟು ತತ್ವಪದ ಹಾಗೂ ಧಾರ್ಮಿಕ ಪದಗಳ ಆಲ್ಬಂ ಹಾಗೂ ಕ್ಯಾಸೆಟ್ ಹೊರತಂದಿದ್ದಾರೆ. ಕನ್ನಡದ ಜೊತೆಗೆ ತೆಲುಗು, ಉರ್ದು, ಮತ್ತು ಹಿಂದಿ ಗೀತೆಗಳನ್ನೂ ಸುಶ್ರಾವ್ಯವಾಗಿ ಹಾಡುವ ದಾದಾಪೀರ್ ಮಂಜರ್ಲಾ ಪುರಂದರ ದಾಸರ, ಸಂತ ಶಿಶುನಾಳ ಷರೀಫರ ಕೃತಿಗಳನ್ನು ಮನದುಂಬಿ ಹಾಡುತ್ತಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಅಂಕೇಗೌಡ

ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಲೇ ಪುಸ್ತಕ ಸಂಗ್ರಹಿಸುವ ಹವ್ಯಾಸವನ್ನು ಆರಂಭಿಸಿದ ಎಂ.ಅಂಕೇಗೌಡರು ಕಳೆದ ಐದು ದಶಕಗಳಿಂದ ಪುಸ್ತಕ ಸಂಗ್ರಹಿಸುವ ಕಾಯಕದಲ್ಲಿದ್ದಾರೆ. ಎಲ್ಲಾ ಭಾಷೆಯ ಪುಸ್ತಕಗಳನ್ನು ಮನೆಯಲ್ಲಿಟ್ಟುಕೊಳ್ಳುವ ಅಭ್ಯಾಸ ಶುರು ಮಾಡಿದ ಅಂಕೇಗೌಡರಲ್ಲಿ ಎಲ್ಲಾ ಭಾರತೀಯ ಭಾಷೆಗಳ ಅಸಂಖ್ಯ ಕೃತಿಗಳು ಲಭ್ಯವಿದೆ.

ಬಾಪೂಜಿ ಅವರನ್ನು ಕುರಿತಂತಹ ಒಂದು ಸಾವಿರಕ್ಕೂ ಹೆಚ್ಚು ಬಗೆಯ ವಿವಿಧ ಭಾಷೆಗಳ ಪುಸ್ತಕಗಳ ಸಂಗ್ರಹವನ್ನು ಹೊಂದಿರುವ ಅಂಕೇಗೌಡರು ರಾಮಾಯಣ, ಮಹಾಭಾರತ, ಹಾಗೂ ಭಗವದ್ಗೀತೆಯ ಸಾವಿರಾರು ಆವೃತ್ತಿಗಳನ್ನು ಜೋಡಿಸಿಟ್ಟಿದ್ದಾರೆ. ಮನೆ ತುಂಬಾ ಲಕ್ಷ ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಅಂಕೇಗೌಡರು ನಾಡಿನ ಹಲವು ಸ್ಥಳಗಳಲ್ಲಿ ವಿಶೇಷ ಪುಸ್ತಕಗಳ ಪ್ರದರ್ಶನಗಳನ್ನು ಮಾಡುವ ಮೂಲಕವೂ ಪುಸ್ತಕ ಹವ್ಯಾಸವನ್ನು ಹಬ್ಬಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲಿಯೇ ಪುಸ್ತಕ ಸಂಗ್ರಹ ಹವ್ಯಾಸಕ್ಕೆ ತಮ್ಮನ್ನು ತೊಡಗಿಸಿಕೊಂಡ ಅಂಕೇಗೌಡರು ಗ್ರಂಥಾಲಯದಂತೆ ತಮ್ಮ ಮನೆಯಲ್ಲಿ ಪುಸ್ತಕಗಳನ್ನು ಶೀರ್ಷಿಕೆಗೆ ಅನುಗುಣವಾಗಿ ಜೋಡಿಸುತ್ತಾ ಹೋಗಿದ್ದಾರೆ.

Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ನ್ಯಾ. ಎಂ.ಎನ್. ವೆಂಕಟಾಚಲಯ್ಯ

ಭಾರತೀಯ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿರುವ ಎಂ.ಎನ್. ವೆಂಕಟಾಚಲಯ್ಯನವರು ನ್ಯಾಯಾಂಗ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟುಗಳಲ್ಲಿ ಹಲವಾರು ಮಹತ್ವದ ತೀರ್ಮಾನಗಳನ್ನು ನೀಡುವ ಮೂಲಕ ಖ್ಯಾತಿ ಪಡೆದವರು.

ನಿವೃತ್ತಿಯ ನಂತರ ಕೆಲವು ಸರ್ಕಾರದ ಹಲವು ಆಯೋಗಗಳ ಮುಖ್ಯಸ್ಥರಾಗಿಯೂ, ಭಾರತೀಯ ವಿದ್ಯಾಭವನದಂತಹ ಸಾರ್ವಜನಿಕ ಸಂಸ್ಥೆಗಳ ನಿಕಟವರ್ತಿಯಾಗಿಯೂ ಕೆಲಸ ಮಾಡಿರುವ ವೆಂಕಟಾಚಲಯ್ಯನವರು ನ್ಯಾಯಾಂಗ ಕುರಿತ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಕಾನೂನು ಶಾಸ್ತ್ರ ಕುರಿತಂತೆ ಹಲವಾರು ಪ್ರೌಢ ಲೇಖನಗಳನ್ನು ಪ್ರಕಟಿಸಿರುವ ವೆಂಕಟಾಚಲಯ್ಯನವರು ದೇಶ-ವಿದೇಶಗಳಲ್ಲಿ ಕಾನೂನು ಕುರಿತಂತೆ ಅನೇಕ ಸಮ್ಮೇಳನಗಳಲ್ಲಿ ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಉನ್ನತ ಗೌರವ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿ

ಕರ್ನಾಟಕದ ಹಲವಾರು ಪ್ರಸಿದ್ಧ ಸಾಹಿತಿಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿರುವ ಶಿಕ್ಷಕರು ಹಾಗೂ ಸಾಹಿತಿ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿ ಅವರು, ಬೆಳಗೆರೆ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಜನಿಸಿದರು. ಮೂಲತಃ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಶಾಲೆಗಳನ್ನು ಕಟ್ಟಿದವರು. ಶ್ರೀಯುತರ ತಂದೆ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ‘ಮರೆಯಲಾದೀತೆ, ‘ಸಾಹಿತಿಗಳ ಸ್ಮೃತಿ’, ‘ಹಳ್ಳಿ ಮೇಷ್ಟ್ರು’ ಮುಂತಾದ ಸಾಹಿತ್ಯಕೃತಿಗಳನ್ನು ರಚಿಸಿದ್ದಾರೆ. ಗಾಂಧಿ, ರಮಣ ಮುಂತಾದವರೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಬೆಳಗೆರೆ ಗ್ರಾಮವನ್ನು ಸಾಂಸ್ಕೃತಿಕ ಗ್ರಾಮವನ್ನಾಗಿ ರೂಪಿಸಿದರು.
ಆದರ್ಶ ಶಿಕ್ಷಕರಾಗಿ ಹಲವು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿದ ಕೀರ್ತಿಗೆ ಪಾತ್ರರು ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಕೇಶವ ಜೋಗಿತಾಯ

ತಂತ್ರವಿದ್ಯೆ ಮತ್ತು ಆಧ್ಯಾತ್ಮಿಕ ವಿದ್ಯೆಯಲ್ಲಿ ಪರಿಣತರಾಗಿ ಜನಸೇವೆ ಮಾಡುತ್ತಿರುವವರು ಶ್ರೀ ಕೇಶವ ಜೋಗಿತ್ಯಾಯ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಗ್ರಾಮದಲ್ಲಿ ಜನನ. ತಂದೆ ಶ್ರೀ ಶ್ರೀ ರಾಮ ಜೋಗಿತ್ಯಾಯ ಪ್ರೌಢ ಶಿಕ್ಷಣದ ನಂತರ ಆಧ್ಯಾತ್ಮಿಕ ವೃತ್ತಿಯ ಅವಲಂಬನ, ತಂತ್ರವಿದ್ಯೆ ಮತ್ತು ಆಧ್ಯಾತ್ಮಿಕ ವಿದ್ಯೆಗಳಲ್ಲಿ ಪರಿಣಿತರಾಗಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಾಲೆ ನಡೆಸಿಕೊಂಡು ಬರುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮುಖ್ಯತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಧಾರ್ಮಿಕ ಪ್ರವೃತ್ತಿಯ ಹಾಗೂ ಉನ್ನತವಾದ ಆಧ್ಯಾತ್ಮಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಹಂಚುತ್ತಿರುವವರು ಶ್ರೀ ಕೇಶವ ಜೋಗಿತ್ಯಾಯ
ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಂ.ಕೆ.ಎಚ್. ನಾಗಲಿಂಗಾಚಾರ್

ಹಿರಿಯ ಸ್ವಾತಂತ್ರ್ಯ ಹೋರಾಟಗಾರು, ಸಮಾಜಸೇವಾ ಕಾರ್ಯಕರ್ತರು ಮತ್ತು ಹಿರಿಯ ಕಾಂಗ್ರೆಸ್ ಧುರೀಣರು ಶೀ ಎಂ.ಕೆ.ಎಚ್. ನಾಗಲಿಂಗಾಚಾರ್ ಅವರು.
೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ಮಾಡು ಇಲ್ಲವೆ ಮಡಿ ಎಂಬ ಗಾಂಧೀಜಿಯವರು ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ೮ ತಿಂಗಳ ಕಾರಾಗೃಹ ವಾಸವನ್ನು ಅನುಭವಿಸಿದವರು. ಸ್ವಾತಂತ್ರ್ಯ ಹೋರಾಟವಲ್ಲದೆ ಸಮಾಜಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಪ್ರೌಢಶಾಲೆ, ಹೆಣ್ಣು ಮಕ್ಕಳ ಶಾಲೆಯ ನಿರ್ಮಾಣ ಶ್ರೀಯುತರ ಸಾಧನೆಗಳು, ದಾವಣಗೆರೆಯಲ್ಲಿ ವಿಶ್ವಕರ್ಮ ಸಮಾಜ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ೨೪ ಎಕರೆ ಜಮೀನು ದಾನ, ಭೂದಾನ ಸಂದರ್ಭದಲ್ಲಿ ೩ ಎಕರೆ ಭೂಮಿ ದಾನ ಹಾಗೂ ಹಲವು ಸಂಘ ಸಂಸ್ಥೆಗಳಿಗೆ ಕೊಡುಗೆಗಳನ್ನು ನೀಡಿರುವ ಶ್ರೀಯುತರು ಮಾಯಾಕೊಂಡ ಪುರಸಭೆಯ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಜನರ ಪ್ರೀತಿ, ಗೌರವಗಳನ್ನು ಸಂಪಾದಿಸಿದ್ದಾರೆ. ಮಾಯಾಗೊಂಡದಲ್ಲಿ ಬಾಲಿಕಾ ಪ್ರಾಥಮಿಕ ಪಾಠಶಾಲೆ ಕಟ್ಟಿಸಿ ಮಾನ್ಯತೆ ಪಡೆದಿದ್ದಾರೆ. ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರಿಂದ ತಾಮ್ರ ಪತ್ರ ಪಡೆದಿರುವ ಶ್ರೀಯುತರು ಸಮಾಜಕ್ಕೆ ಸಲ್ಲಿಸಿದ ನಿಷ್ಕಾಮ ಸೇವೆ ಅನುಪಮ ಹಾಗೂ ಅನುಕರಣೀಯ.
ಶತಾಯುಷಿಗಳಾಗಿದ್ದು ಈ ಇಳಿವಯಸ್ಸಿನಲ್ಲೂ ಲವಲವಿಕೆಯಿಂದ ಓಡಾಡಿ ಸಮಾಜ ಸೇವೆ ಮಾಡುತ್ತಿರುವ ಹಿರಿಯ ಗಾಂಧೀವಾದಿ ಶ್ರೀ ಎಂ.ಕೆ.ಹೆಚ್. ನಾಗಲಿಂಗಾಚಾರ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಆರ್.ಎನ್. ಶೆಟ್ಟಿ

ಕೈಯಿಟ್ಟ ಕ್ಷೇತ್ರದಲ್ಲೆಲ್ಲ ಅದ್ಭುತ ಪ್ರಗತಿ ಸಾಧಿಸಿದ ಅಸಾಧಾರಣ ಸಾಧಕ, ಉದ್ಯಮಿ ಶ್ರೀ ಆರ್.ಎನ್. ಶೆಟ್ಟಿ ಅವರು.
೧೯೨೮ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಜನಿಸಿದ ಶ್ರೀಯುತರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಸಿರಸಿಯಲ್ಲಿ. ೧೯೬೧ರಲ್ಲಿ ಪ್ರಥಮವಾಗಿ ಆರ್.ಎನ್. ಶೆಟ್ಟಿ ಕಂಪನಿ ಸ್ಥಾಪಿಸಿದ ಇವರು ಕೆಲವೇ ವರ್ಷಗಳಲ್ಲಿ ನವೀನ್ ಮೆಕ್ಯಾನ್ಸೆಸ್ ಕಂಪನಿಯ ಸ್ವಾಮ್ಯವನ್ನು ಪಡೆದರು.
ಇವರು ಕಟ್ಟಿಸಿದ ಸೇತುವೆಗಳು, ಬೃಹತ್ ಕಟ್ಟಡಗಳು ಜಲವಿದ್ಯುತ್ ಯೋಜನೆಗಳು, ನಿರಾವರಿ ಅಣೆಕಟ್ಟು ಕಾಮಗಾರಿಗಳು ರಾಜ್ಯದ ಬಹುಮುಖ್ಯ ಕಾಮಗಾರಿಗಳೆನಿಸಿದವು. ೧೯೭೫ ರಿಂದ ಹೋಟೆಲ್ ಉದ್ಯಮಕ್ಕೂ ಪ್ರವೇಶಿಸಿ ಪಂಚತಾರ ಹೋಟೆಲ್ಗಳನ್ನು ನಿರ್ಮಿಸಿ ಯಶಸ್ವಿಯಾದರು. ಕೊಂಕಣ ರೈಲ್ವೆಯಲ್ಲಿ ಅಸಾದ್ಯವೆನಿಸಿದ ಹದಿನೆಂಟು ಭೂ ಸುರಂಗಳನ್ನು ನಿರ್ಮಿಸಿ ದಕ್ಷಿಣ ಭಾರತ ರೈಲ್ವೆಗೆ ಅರ್ಪಿಸಿದ ಸಾಧನೆ ಅವರದು. ರಾಜ್ಯದಲ್ಲೆ ಪ್ರಥಮ ಬಾರಿಗೆ ಡೈನಮೈಟ್ ಟೈಲ್ಸ್ ತಯಾರಿಸಿದ ಕೀರ್ತಿ ಇವರ ಮುರುಡೇಶ್ವರ ಟೈಲ್ಸ್ ಕಂಪನಿಗೆ ಸಲ್ಲುತ್ತದೆ. ಇಷ್ಟಲ್ಲದೇ ಆರ್.ಎನ್.ಶೆಟ್ಟಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಆಧುನಿಕ ತಂತ್ರಜ್ಞಾನದ ಶಿಕ್ಷಣ ವಿಸ್ತಣೆಗೆ ಕಾರಣರಾಗಿದ್ದಾರೆ. ಮುರುಡೇಶ್ವರದಲ್ಲಿ ಇವರು ಸ್ಥಾಪಿಸಿರುವ ೧೨೩ ಅಡಿ ಎತ್ತರದ ಶಿವನ ಪ್ರತಿಮೆ ವಿಶ್ವದ ಅತಿ ಎತ್ತರದ ಶಿವ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿದೆ. ಹೀಗೆ ತಾವು ಕೈಯಿಟ್ಟ ಕ್ಷೇತ್ರಗಳಲ್ಲೆಲ್ಲ ಅಸಾಧ್ಯ ಎತ್ತರಕ್ಕೆ ಏರಿದ ವ್ಯಕ್ತಿ ಆರ್.ಎನ್. ಶೆಟ್ಟಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀಮತಿ ಮಧುರಾ ಛತ್ರಪತಿ

ಪ್ರಸಿದ್ಧ ವಾಣಿಜ್ಯೋದ್ಯಮಿ, ಅನೇಕ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಅಧ್ಯಕ್ಷೆ ಶ್ರೀಮತಿ ಮಧುರಾ ಎಂ. ಛತ್ರಪತಿ ಅವರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ಪದವಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಸಿಎಫ್ಟಿಆರ್ಐನಿಂದ ಆಹಾರ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ತರಬೇತಿ ಪಡೆದಿರುವವರು ಶ್ರೀಮತಿ ಮಧುರಾ ಎಂ. ಛತ್ರಪತಿ ಅವರು.
ಫುಡ್ ಅಸೋಸಿಯೇಷನ್ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಶ್ರೀಮತಿ ಮಧುರಾ ಎಂ. ಛತ್ರಪತಿ ಅವರು ಆಹಾರ ತಂತ್ರಜ್ಞೆ ಮಹಿಳಾ ಹೋರಾಟಗಾರ್ತಿ, ಪತ್ರಿಕೋದ್ಯಮಿ, ವಿವಿಧ ಬ್ಯಾಂಕುಗಳ ಆಡಳಿತ ಮಂಡಳಿಯ ಸದಸ್ಯೆ, ಹಾಗೂ ಜಿಲ್ಲಾ ರೋಟರಿಯ ಮಹಿಳಾ ಗವರ್ನರ್. ರಾಜ್ಯಾದ್ಯಂತ ಹಲವಾರು ಮಹಿಳಾ ಉದ್ದಿಮೆದಾರರನ್ನು ರೂಪಿಸಿದ ರೂವಾರಿ. ಫುಡ್ ಅಸೋಸಿಯೇಟ್ಸ್ ಆಹಾರ ಉತ್ಪಾದನೆಯ ಪ್ರಮುಖ ಸಂಸ್ಥೆಯಾಗಿದ್ದು, ವಿವಿಧ ದೇಶಗಳಿಗೆ ಹುಣಸೇಹಣ್ಣಿನ ಪುಡಿಯನ್ನು ರಫ್ತು ಮಾಡುತ್ತಿದೆ. ಕೊಲ್ಲಾಪುರದ ಚಪ್ಪಲಿಗಳಲ್ಲಿ ಜಾಗತಿಕ ಟೆಲಿಹೋಲ್ಡ್ ಚಪ್ಪಲಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದವರು ಶ್ರೀಮತಿ ಮಧುರಾ ಛತ್ರಪತಿಯವರೇ.
ಶ್ರೀಮತಿ ಮಧುರಾ ಎಂ.ಛತ್ರಪತಿ ಅವರ ಪರಿಶ್ರಮವನ್ನು ಗುರುತಿಸಿ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಇನ್ನಿತರ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ. ತಂತ್ರಜ್ಞಾನ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಭಾರಿ ಉದ್ದಿಮೆದಾರರನ್ನು ರೂಪಿಸುತ್ತಿರುವವರು ಶ್ರೀಮತಿ ಮಧುರಾ ಛತ್ರಪತಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಸ್.ಕೆ. ಜೈನ್

ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಜ್ಯೋತಿಷಿ ಡಾ. ಎಸ್.ಕೆ. ಜೈನ್ ಅವರು.
ಬೆಂಗಳೂರಿನಲ್ಲಿ ಹುಟ್ಟಿದ ಡಾ. ಎಸ್.ಕೆ. ಜೈನ್ ಅವರು ಭ್ರಗು ಸಂಹಿತೆಯ ಆಧಾರದ ಮೇಲೆ ಜಾತಕ ಹಾಗೂ ಪ್ರಶ್ನೆ ಶಾಸ್ತ್ರದ ತಂತ್ರವನ್ನು ಬಳಸಿ ಜ್ಯೋತಿಷ್ಯ ಹೇಳುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಾಥಮಿಕ ಜ್ಞಾನವನ್ನು ತಂದೆ ಡಾ. ಶಶಿಕಾಂತ್ ಜೈನ್ ಅವರಿಂದ ಪಡೆದ ಶ್ರೀ ಎಸ್.ಕೆ. ಜೈನ್ ಅವರು ಇಂಜಿನಿಯರ್ ಆಗಬೇಕೆಂದು ಬಯಸಿ, ಭವಿಷ್ಯಕಾರರಾದರು. ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯಿಂದ ಆಯುರ್ವೇದ ವೈದ್ಯಕೀಯ ಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದಾರೆ. ತಂದೆಯ ಹಾದಿಯಲ್ಲಿ ನಡೆದ ಎಸ್.ಕೆ. ಜೈನ್ ಅವರು ಏಳು ಭಾಷೆಗಳನ್ನು ಹಾಗೂ ಆಯುರ್ವೇದ ವೈದ್ಯಶಾಸ್ತ್ರವನ್ನು ಕಲಿತಿದ್ದಾರೆ.
ಹಲವಾರು ಪತ್ರಿಕೆಗಳಿಗೆ ವಾರಭವಿಷ್ಯವನ್ನು ಬರೆದಿರುವ ಶ್ರೀಯುತರ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಲೇಖನಗಳು ಬಂದಿವೆ. ಡಾ. ಎಸ್.ಕೆ. ಜೈನ್ ಅವರು ಹಲವಾರು ರಾಜಕೀಯ ಧುರೀಣರು, ಚಿತ್ರಕಲಾವಿದರು, ಉದ್ಯಮಿಗಳು, ಗಾಯಕರು, ಕಲಾವಿದರು ಹಾಗೂ ಸಾರ್ವಜನಿಕರಿಗೆ ಭವಿಷ್ಯವನ್ನು ಹೇಳಿದ್ದಾರೆ.
ಜ್ಯೋತಿಷ್ಯ ಶಾಸ್ತ್ರವನ್ನು ಕುರಿತು ಪ್ರಶ್ನೆ ಸಂಜೀವಿನಿ, ಚಾಣಕ್ಯ ನೀತಿಶಾಸ್ತ್ರ, ಕಾಲಚಕ್ರ ಪಂಚಾಂಗ ಪುಸ್ತಕಗಳನ್ನು ರಚಿಸಿರುವ ಶ್ರೀಯುತರು ಕಾಲಚಕ್ರ ಎಫೆಮೆರಿಸ್ ಎಂಬ ಗ್ರಂಥವನ್ನು ಇಂಗ್ಲಿಷ್ನಲ್ಲಿ ಬರೆದಿದ್ದಾರೆ.
ಪ್ರಸಿದ್ಧ ವೈಜ್ಞಾನಿಕ ಜ್ಯೋತಿಷ್ಯ ಶಾಸ್ತ್ರಜ್ಞ ನಿಖರ ಭವಿಷ್ಯವಾಣಿಗೆ ಹೆಸರಾದವರು ಶ್ರೀ ಎಸ್.ಕೆ. ಜೈನ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವಿದ್ವಾನ್ ಟಿ. ನರಸಿಂಹಮೂರ್ತಿ ಶಾಸ್ತ್ರಿ

ವೇದ ಪಾರಂಗತ ಸಂಸ್ಕೃತ ವಿದ್ವಾನ್ ಟಿ. ನರಸಿಂಹಮೂರ್ತಿ ಶಾಸ್ತ್ರಿ ಅವರು.
೧೯೩೨ರಲ್ಲಿ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ತಿಮ್ಮಸಂದ್ರ ಗ್ರಾಮದಲ್ಲಿ ಜನನ, ತಂದೆ ಟಿ. ಚಿದಂಬರಪ್ಪ ತಾಯಿ ಟಿ. ನರಸಮ್ಮ, ಅರ್ಚಕರ ಮಗನಾಗಿ ಜನಿಸಿ ಕೃಷ್ಣ ಯರ್ಜುವೇದ ಅಧ್ಯಯನ ಮಾಡಿ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸ್ಮಾರ್ತ ಪ್ರಯೋಗದಲ್ಲಿ ವಿದ್ವತೆ ಮತ್ತು ಶ್ವೇತ ವಿದ್ವತ್ ಪ್ರಯೋಗಗಳನ್ನು ಅಭ್ಯಾಸ ಮಾಡಿರುತ್ತಾರೆ.
ಪ್ರಸ್ತುತ ಮಾಗಡಿಕರಣಿಕರ ವೈದಿಕ ಧರ್ಮ ಪಾಠಶಾಲೆಯಲ್ಲಿ ವೇದ ಮತ್ತು ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರು ವಿದ್ವಾನ್ ಟಿ. ನರಸಿಂಹಮೂರ್ತಿ ಶಾಸ್ತ್ರಿ
ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ದೈವಜ್ಞ ಕೆ.ಎನ್. ಸೋಮಯಾಜ

ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರ, ತಂತ್ರಶಾಸ್ತ್ರದಲ್ಲಿ ಹಿರಿಯ ವೈದಿಕ ವಿದ್ವಾಂಸರು ದೈವಜ್ಞ ಕೆ.ಎನ್. ಸೋಮಯಾಜಿ ಅವರು.
೧೯೫೯ರಲ್ಲಿ ವೈದಿಕ ವಿದ್ವಾಂಸ ಮನೆತನದಲ್ಲಿ ಜನನ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಕಟಿಸಿರುವ ರಾಷ್ಟ್ರೀಯ ಪಂಚಾಂಗಕ್ಕೆ ಮುಖ್ಯ ಸಂಪಾದಕರು. ತಿರುಮಲ ತಿರುಪತಿ ದೇವಸ್ಥಾನ ಪ್ರಕಟಿಸುವ ಶಾಸ್ತ್ರ ಸಿದ್ಧ ಪಂಚಾಂಗಕ್ಕೆ ಸಂಪಾದಕರಾಗಿದ್ದರು. ಕಲ್ಪತರು ರಿಸರ್ಚ್ ಅಕಾಡೆಮಿ ಎಂಬ ಪ್ರಾಚ್ಯ ಸಂಶೋಧನ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದು, ಇದರಲ್ಲಿ ವೇದ, ಆಗಮಶಾಸ್ತ್ರ ಮತ್ತು ಇತರ ವಿಭಾಗಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಸಂಸ್ಥೆಯ ಪ್ರಧಾನ ಸಂಪಾದಕರಾಗಿ ದೈವಜ್ಞಕೆ.ಎನ್. ಸೋಮಯಾಜಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶವಿದೇಶಗಳಲ್ಲಿ ಸಂಚರಿಸಿ ಅನೇಕ ಗಣ್ಯರಿಗೆ ಜ್ಯೋತಿಷ್ಯ ಸಲಹೆ ನೀಡಿರುತ್ತಾರೆ.
ಶೃಂಗೇರಿ ಶಾರದಾ ಪೀಠದ ಧರ್ಮಾಧಿಕಾರಿಗಳೂ ಆಗಿರುವ ಶ್ರೀಯುತ ದೈವಜ್ಞ ಕೆ.ಎನ್. ಸೋಮಯಾಜಿ ಅವರು ವೇದಾಧ್ಯಯನ ಮತ್ತು ಸಂಸ್ಕೃತ ಭಾಷೆಯ ಏಳಿಗೆಗಾಗಿ ಅವಿರತ ದುಡಿಯುತ್ತಿರುವ ಹಿರಿಯ ಚೇತನ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಚನ್ನಬಸಪ್ಪ ಕುಳಗೇರಿ

ಹೈದರಾಬಾದ್ ವಿಮೋಚನಾ ಚಳುವಳಿಯ ಸಕ್ರಿಯ ಕಾರ್ಯಕರ್ತ ಶ್ರೀ ಕೆ. ಚೆನ್ನಬಸಪ್ಪ ಕುಳಗೇರಿ,
ಇಂಟರ್ಮೀಡಿಯೆಟ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಕಾಲೇಜು ಬಹಿಷ್ಕರಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡು ವಿದ್ಯಾಭ್ಯಾಸವನ್ನೇ ತ್ಯಜಿಸಿದವರು. ಮುಂದೆ ಹೈದರಾಬಾದ್ ಸಂಸ್ಥಾನದ ವಿಮೋಚನೆಗಾಗಿ ಭೂಗತ ಹೋರಾಟದಲ್ಲಿ ತೊಡಗಿದವರು. ಸ್ವಾತಂತ್ರ್ಯದ ನಂತರ ಸೇವಾ ಸಹಕಾರ ಸಂಘಗಳನ್ನು ಸ್ಥಾಪಿಸಿ ಜನರ ಸಮಸ್ಯೆಗಳಿಗೆ, ಶಿಕ್ಷಣಕ್ಕೆ ಸ್ಪಂದಿಸಿದ ಧೀಮಂತ ನಾಯಕ ಶ್ರೀ ಕುಳಗೇರಿ ಅವರು. ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಜೇವರ್ಗಿ ತಾಲ್ಲೂಕು ಕಾಂಗ್ರೆಸ್ನ ಮೊದಲ ಅಧ್ಯಕ್ಷರಾಗಿ ಜಿಲ್ಲಾ ಜನತಾಪಕ್ಷ, ಜನತಾದಳಗಳ ಅಧ್ಯಕ್ಷರಾಗಿ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ರೈತರ ಪರವಾಗಿ ಹೋರಾಡಿದವರು.
೭೮ರ ಇಳಿವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ತೊಡಗಿರುವ ಜನಪರ ಕಾಳಜಿಯ ಧುರೀಣ ಶ್ರೀ ಕೆ. ಚೆನ್ನಬಸಪ್ಪ ಕುಳಗೇರಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ

ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳಿಗೇ ಮಠ ಮಾನ್ಯಗಳು ಸೀಮಿತವೆಂಬ ನುಡಿಗೆ ಅಪವಾದವೆಂಬಂತೆ ನಿಡುಮಾಮಿಡಿ ಮಠವನ್ನು ಮಾನವ ಧರ್ಮಪೀಠವಾಗಿಸಿ ವೈಚಾರಿಕವಾಗಿ, ಸಾಮಾಜಿಕ ಬದಲಾವಣೆಗೆ ತೊಡಗಿಸಿದ ಸಿಡಿಲ ಸನ್ಯಾಸಿ, ಕವಿ, ಚಿಂತಕ, ಸಮಾಜವಾದಿ, ಸಮಾಜಸೇವಕ ಶ್ರೀಯುತ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು.
ಉನ್ನತ ಶಿಕ್ಷಣ ಪಡೆದೂ ಒಂದು ಮಠದ ಸ್ವಾಮೀಜಿಯಾದ ಶ್ರೀಯುತರು ಮಠದ ಕಾರ್ಯಚಟುವಟಿಕೆಗಳಿಗೆ ಇದ್ದ ಎಲ್ಲೆಯನ್ನು ವಿಸ್ತರಿಸಿ ಮಠಗಳು ಸಾಮಾಜಿಕ ಚಿಂತನೆಗೆ, ಶೈಕ್ಷಣಿಕ ಪ್ರಗತಿಗೆ, ವೈಚಾರಿಕ ಪ್ರಖರತೆಗೆ ಮಾರ್ಗದರ್ಶಕ ಕೇಂದ್ರಗಳಾಗಬಲ್ಲವು ಎಂಬುದನ್ನು ತೋರಿಸಿಕೊಟ್ಟ ಬಸವ ಪಥದ ವಿಚಾರವಾದಿ ಸಾಹಿತಿಗಳಿವರು. ವ್ಯವಸ್ಥೆಯ ಅಸಮಾನತೆಯ ವಿರುದ್ಧ ಸದಾ ದನಿಯೆತ್ತುವ ಜನಪರ ಚಿಂತಕರಿವರು. ಸರಳ ನಡೆ, ನೇರ ನುಡಿ, ದೀನ ದುರ್ಬಲಪರವಾದ ಸಮಾಜೋದ್ಧಾರ ಕಾಯಕ, ಇವರ ಬದುಕಿನ ಪರಿ ಶ್ರೀಯುತರ ಸುಳ್ಳು ಸೃಷ್ಟಿಗಳು ಎಂಬ ಕವನ ಸಂಕಲನ ಬಹು ಚರ್ಚಿತ.
ದೀನ ದಲಿತರ ಸಮಾನತೆಗೆ, ಶೈಕ್ಷಣಿಕ ಪ್ರಗತಿಗೆ, ಮಹಿಳಾ ಸಮಾಜದ ಉದ್ಧಾರಕ್ಕೆ ಸದಾ ದುಡಿಯುವ ಶ್ರೀಯುತರ ಸೇವೆಗೆ ಸಂದ ಗೌರವ ಸನ್ಮಾನಗಳು ಹಲವು. ಯೋಗಿ, ಚಿಂತಕ, ಸಾಮಾಜಿಕ ಪರಿವರ್ತನೆಗೆ ಸದಾ ದುಡಿವ ಚೇತನ ಶ್ರೀ ನಿಡುಮಾಮಿಡಿ ಸ್ವಾಮೀಜಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಮಹಮದ್ ಷರೀಫ್ ಗುಲ್ಬನ್

– ತನ್ನ ನಿತ್ಯ ಕಾಯಕದಲ್ಲೇ ನೂರೆಂಟು ಕುಸುರಿ ಕಲೆ ಅರಳಿಸಿ ಎಲ್ಲರ ಗಮನ ಸೆಳೆಯಬಲ್ಲ ಅಪರೂಪದ ಬಿದರಿ ಕಲಾವಿದ ಶ್ರೀ ಮಹಮದ್ ಶರೀಫ್ ಗುಲ್ಬನ್ ಬಿದರಿ ಅವರು.
ಬೀದರ್ ನಗರದ ಕುಸುವಾಗಲ್ಲಿಯಲ್ಲಿ ೧೯೩೯ರಲ್ಲಿ ಜನಿಸಿದ ಶರೀಫರು ಚಿಕ್ಕಂದಿನಿಂದಲೇ ಬಿದರಿ ಕಲೆಯಲ್ಲಿ ನೈಪುಣ್ಯವನ್ನು ಮೆರೆದವರು, ಗ್ಲೋಬಲೈಸ್, ಮಾಸ್ಟರ್ಲೈಸ್, ಉಮರ್ ಖಯಾಂ ಮಾದರಿಯ ಬಿದರಿ ಕೆಲಸಗಳನ್ನು ಮಾಡಿ ದೇಶದ ಮೂಲೆ ಮೂಲೆಯಲ್ಲಿ ಮಾರಾಟ ಮಾಡುವುದಲ್ಲದೆ ಹೊರದೇಶಗಳಿಗೂ ರಫ್ತು ಮಾಡುವ ಅಪಾರ ಬೇಡಿಕೆಯ ಕಲೆ ಇವರದು. ಇವರ ಬಿದರಿ ಕಲೆಯ ನೈಪುಣ್ಯತೆಗೆ ೧೯೭೮ರಲ್ಲಿ ಕರ್ನಾಟಕ ನಿಪುಣ ಶಿಲ್ಪಾಚಾರ ಪ್ರಶಸ್ತಿ, ಭಾರತದ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ಇಲಾಖಾ ಪ್ರಶಸ್ತಿಗಳಲ್ಲದೆ ಅನೇಕ ಸಂಘ ಸಂಸ್ಥೆಗಳಿಂದಲೂ ಪುರಸ್ಕಾರ, ಬಹುಮಾನಗಳು ಲಭಿಸಿವೆ.
೬೫ರ ಇಳಿವಯಸ್ಸಿನಲ್ಲೂ ಆರ್ಥಿಕ ಅಡಚಣೆಗಳ ನಡುವೆಯೂ ತಮ್ಮ ಬಿದರಿ ಕಲೆ ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಅಪರೂಪದ ಕುಶಲಕರ್ಮಿ ಶ್ರೀ ಮಹಮದ್ ಶರೀಫ್ ಗುಲ್ಡನ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಸಿ.ವಿ. ಗೋಪಿನಾಥ್

ದೂರಸಂಪರ್ಕ ಇಂಜಿನಿಯರಾಗಿ, ತಾಯುಡಿಯ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿರುವವರು ಶ್ರೀ ಸಿ.ವಿ.ಗೋಪಿನಾಥ್ ಅವರು.
೧೯೪೫ರಲ್ಲಿ ಹುಟ್ಟಿದ ಶ್ರೀ ಸಿ.ವಿ. ಗೋಪಿನಾಥ್ ಬಿಸಿನೆಸ್ ಮ್ಯಾನೇಜ್ಮೆಂಟಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಿ.ಎಸ್.ಎನ್.ಎಲ್.ನಲ್ಲಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿ, ಭಾರತಾದ್ಯಂತ ಕೆಲಸ ಮಾಡಿರುವ ಶ್ರೀಯುತರು ತಾವು ಸೇವೆ ಸಲ್ಲಿಸಿದ ಸ್ಥಳಗಳಲೆಲ್ಲ ಕನ್ನಡ ಸಂಘಗಳನ್ನು ಸ್ಥಾಪಿಸಲು ಕಾರಣಕರ್ತರಾಗಿದ್ದಾರೆ. ಜಬ್ಬಲ್ಪುರ, ಅಹಮದಾಬಾದ್ ಮತ್ತು ದೆಹಲಿಯ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ, ದೆಹಲಿ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಳಿದಾಸ ಮಾನಸ ಸರೋವರ ಯಾತ್ರಾ ತಂಡಗಳಿಗೆ ಸಂಪರ್ಕಾಧಿಕಾರಿಯಾಗಿ ಹೋಗಿದ್ದು, ಅಲ್ಲಿನ ವಿವರಗಳನ್ನು ವಿಡಿಯೋಕರಣ ಮಾಡಿಕೊಂಡು ಸಿ.ಡಿ. ಡಿಸ್ಕ್ಗಳನ್ನು ಮಾಡಿದ್ದಾರೆ ಹಾಗೂ ಅದನ್ನು ರಾಷ್ಟ್ರಾದ್ಯಂತ ಪ್ರಚುರಪಡಿಸಿದ್ದಾರೆ.
ಗುಜರಾತಿ, ಮರಾಠಿ, ಬೆಂಗಾಲಿ, ಹಿಂದಿ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಗಳನ್ನು ಮಾತನಾಡಬಲ್ಲ, ವೇದಗಳನ್ನು, ಸಂಸ್ಕೃತ ಶ್ಲೋಕಗಳನ್ನು ಕಲಿಸುವ ಗೋಪಿನಾಥ್ ಅವರು ಸಾಂಪ್ರದಾಯಿಕ ಶಾಲೆಯನ್ನು ನಡೆಸುತ್ತಿದ್ದಾರೆ. ಮೂರು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಗೂ ಶ್ರೀಯುತರ ಸಂದರ್ಶನಗಳು ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಸಾರಗೊಂಡಿವೆ.
ಹೊರನಾಡ ಕನ್ನಡಿಗರಾಗಿ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವಕರಲ್ಲಿ ಪಸರಿಸುತ್ತಿರುವವರು ಶ್ರೀ ಸಿ.ವಿ. ಗೋಪಿನಾಥ್ ಅವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕುಮಾರಿ ವಿಜಯಲಕ್ಷ್ಮಿ ಬಿದರಿ

ಭಾರತೀಯ ಆಡಳಿತ ಸೇವಾ ಪರೀಕ್ಷೆಯಲ್ಲಿ ಇಡೀ ಭಾರತ ದೇಶಕ್ಕೆ ಪ್ರಥಮ ಬ್ಯಾಂಕ್ ಪಡೆದು ಅಪ್ರತಿಮ ಸಾಧನೆ ಮಾಡಿರುವ ಕರ್ನಾಟಕದ ಹೆಮ್ಮೆಯ ಪುತ್ರಿ ಕುಮಾರಿ ವಿಜಯಲಕ್ಷ್ಮಿ ಬಿದರಿ ಅವರು.

ವಿಜಯಲಕ್ಷ್ಮಿ ಬಿದರಿ ಅವರು ಗುಲ್ಬರ್ಗಾದಲ್ಲಿ ೧೯೭೭ರಲ್ಲಿ ಜನಿಸಿದ್ದಾರೆ. ಮಂಡ್ಯ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ಧಾರವಾಡ ಹಾಗೂ ಬೆಂಗಳೂರಿನ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣವನ್ನು ಪಡೆದಿರುವ ವಿಜಯಲಕ್ಷ್ಮಿ ಅವರು ಪ್ರಾಥಮಿಕ ಹಂತದಿಂದಲೂ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ. ಪದವೀಧರೆಯಾಗಿರುವ ಕುಮಾರಿ ಬಿದರಿಯವರು ೧೯೯೯ರ ನಾಗರೀಕ ಸೇವಾ ಪರೀಕ್ಷೆಯಲ್ಲಿ ೧೦೭ನೆಯ ಸ್ಥಾನ ಪಡೆದು ಭಾರತೀಯ ಉತ್ಪಾದನಾ ಶುಲ್ಕ ಮತ್ತು ಸೀಮಾ ಶುಲ್ಕ ಸೇವೆಗೆ ಆಯ್ಕೆಯಾದರು. ಫರೀದಾಬಾದ್‌ ನಲ್ಲಿ ವಿಶೇಷ ತರಬೇತಿ ಪಡೆದರು.

ಕನ್ನಡ ಸಾಹಿತ್ಯ, ಅಂತರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ಶಾಸ್ತ್ರಗಳನ್ನು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು ೨೦೦೦ನೇ ಇಸವಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಡೀ ಹಿಂದೂಸ್ಥಾನಕ್ಕೆ ಪ್ರಪ್ರಥಮ ಸ್ಥಾನ ಪಡೆದು ಕನ್ನಡಿಗರೆಲ್ಲರಿಗೂ ರೋಮಾಂಚನ ಉಂಟು ಮಾಡಿದರು. ಕಳೆದ ೫ ವರ್ಷಗಳಲ್ಲಿ ಕರ್ನಾಟಕಕ್ಕೆ ಈ ಕೀರ್ತಿಯನ್ನು ಗಳಿಸಿ ಕೊಟ್ಟಿರುವ ಮೊಟ್ಟ ಮೊದಲ ಕನ್ನಡ ಕುವರಿ ಕುಮಾರಿ ವಿಜಯಲಕ್ಷ್ಮಿ ಬಿದರಿ.

ವೀಣಾವಾದನ, ಈಜು, ಸಾಹಿತ್ಯವಾಚನ ವಿಜಯಲಕ್ಷ್ಮಿಯವರ ಹವ್ಯಾಸಗಳು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಲ್ ಬಿ ಕೆ ಆಲ್ದಾಳ್

ನಾಟಕ ರಚನೆ ಹಾಗೂ ರಂಗನಿರ್ದೆಶನವನ್ನೇ ಬಾಳಿನ ಧೈಯವಾಗಿ ಸ್ವೀಕರಿಸಿ, ದೀರ್ಘಕಾಲದಿಂದ ಕಲಾರಾಧಕರಾಗಿ ಸೇವೆ ಸಲ್ಲಿಸುತ್ತಿರುವವರು ರಂಗಕರ್ಮಿ ಶ್ರೀ ಲಾಲ್ ಮಹ್ಮದ್ ಬಂದೇ ನವಾಜ್ ಕೆ ಆಲ್ದಾಳ್ ಅವರು.

ಏಳನೆಯ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿರುವ ಲಾಲ್ ಮಹಮದ್‌ ಬಂದೇನವಾಜ್ ಆಲ್ದಾಳ್ ಅವರು ಬಿಜಾಪುರ ಜಿಲ್ಲೆಯ ಬನಹಟ್ಟಿಯಲ್ಲಿ ೧೯೩೮ರಲ್ಲಿ ಜನಿಸಿದರು.

ಊರ ಸುತ್ತಮುತ್ತ ಪ್ರದರ್ಶಿತವಾಗುತ್ತಿದ್ದ ನಾಟಕಗಳಿಂದ ಪ್ರಭಾವಿತರಾಗಿ ೧೯೬೨ರಿಂದ ಬರವಣಿಗೆಯನ್ನು ಪ್ರಾರಂಭಿಸಿದ ಶ್ರೀಯುತರು ಸುಮಾರು ೫೦ ಕೃತಿಗಳನ್ನು ರಚಿಸಿದ್ದಾರೆ. ಪತಿಭಕ್ತಿ, ಕಲಿಯುಗದ ಕನ್ಯಾ, ನಮಸ್ಕಾರ, ನನ್ನ ದೇವರು, ವಂಚಕ, ಗರತಿ, ವಿಶ್ವದ ಜ್ಯೋತಿ ಮುಂತಾದ ೧೨ ಕೃತಿಗಳು ಪ್ರಕಟವಾಗಿವೆ. ೨೫ಕ್ಕೂ ಹೆಚ್ಚು ಕೃತಿಗಳು ಅಪ್ರಕಟಿತ. ದೇಶಭಕ್ತಿಗೀತೆಗಳ ಹತ್ತಾರು ಧ್ವನಿಸುರುಳಿಗಳು ಹೊರಬಂದಿವೆ. ರಾಘವೇಂದ್ರ ನಾಟ್ಯ ಸಂಘ, ಬಸವೇಶ್ವರ ನಾಟ್ಯ ಸಂಘ, ಶ್ರೀ ಮಲ್ಲಿಕಾರ್ಜುನ ನಾಟ್ಯ ಸಂಘ, ಕರ್ನಾಟಕ ಕಲಾ ಸಂಘ ಮುಂತಾದ ವೃತ್ತಿನಾಟಕ ಕಂಪನಿಗಳಲ್ಲಿ ನೂರಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯಿಂದ ಸನ್ಮಾನಿತರಾದ ಶ್ರೀ ಎಲ್ ಬಿ ಕೆ ಆಲ್ದಾಳ್ ಅವರಿಗೆ ಸಂಘ ಸಂಸ್ಥೆಗಳಿಂದ, ಮಠಗಳಿಂದ ಅನೇಕ ಸನ್ಮಾನಗಳು ಸಂದಿವೆ. ಶ್ರೀಯುತರಿಗೆ ನಾಟ್ಯ ಕವಿರತ್ನ, ಸರಸ್ವತಿ ವರಪುತ್ರ, ಶರಣಸಾಹಿತ್ಯ ಸಿಂಧು, ಶರಣ ಸಾಹಿತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಕನ್ನಡ ರಂಗಭೂಮಿ ಸಾಹಿತ್ಯಕ್ಕೆ ಸತ್ವಪೂರ್ಣ ಕೊಡುಗೆಯನ್ನು ನೀಡುತ್ತಿರುವ, ರಂಗಕಲಾಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇಂದಿಗೂ ಚಟುವಟಿಕೆಯ ಚಿಲುಮೆಯಾಗಿರುವವರು ಶ್ರೀ ಎಲ್ ಬಿ ಕೆ ಆಲ್ದಾಳ್ ಅವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀಮತಿ ಪುಷ್ಪಾ ಗಿರಿಮಾಜಿ

ಪತ್ರಿಕೋದ್ಯಮವನ್ನು ವೃತ್ತಿಯಾಗಿಸಿಕೊಂಡು, ಅದರ ಮೂಲಕವೇ ಸಮಾಜಸೇವೆಯನ್ನು ಅತ್ಯಂತ ಪರಿಣಾಮಕಾರಿಯಾಗಿ

ನಿರ್ವಹಿಸುತ್ತಿರುವ ಸಾಹಸಿ ಶ್ರೀಮತಿ ಪುಷ್ಪಾ ಗಿರಿಮಾಜಿ ಅವರು.

೧೯೫೩ನೇ ಇಸವಿಯಲ್ಲಿ ಜನಿಸಿದ ಗಿರಿಮಾಜಿ ಅವರು, ೧೯೭೬ರಲ್ಲಿ ವರದಿಗಾರ್ತಿಯಾಗಿ ಪತ್ರಿಕಾರಂಗವನ್ನು ಪ್ರವೇಶಿಸಿದರು. ವಿವಿಧ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅಂಕಣ ಬರಹಗಾರರಾಗಿ ಜನಪ್ರಿಯರಾದರು. ಬಳಕೆದಾರರ ಬವಣೆಗಳನ್ನು ತಳಮಟ್ಟದಿಂದ ಅಭ್ಯಸಿಸಿ, ಅದಕ್ಕೆ ಕಾರಣವಾದ ಮಾಹಿತಿಗಳನ್ನು ಸಮಗ್ರವಾಗಿ ಕಲೆ ಹಾಕಿದರು. ಇವರ ಬರಹಗಳು ಆಡಳಿತಗಾರರಲ್ಲಿ ಪಟ್ಟಭದ್ರರಲ್ಲಿ ಮಿಂಚಿನ ಸಂಚಾರವುಂಟು ಮಾಡಿದವು.

ಭಾರತದ ಅನೇಕ ಜನಪ್ರಿಯ ಪತ್ರಿಕೆಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇವರು ಮಂಡಿಸಿದ ವಿದ್ವತ್‌ ಪೂರ್ಣ ಬರಹಗಳು ರಾಷ್ಟ್ರದಾದ್ಯಂತ ಪ್ರಶಂಸೆಗೆ ಪಾತ್ರವಾಗಿವೆ. ‘ಚೆಕ್‌ಔಟ್’, ‘ಗುಡ್ ಮಾರ್ನಿಂಗ್ ಇಂಡಿಯಾ ಶೋ’ ಮೊದಲಾದವು ಇವರ ಜನಪ್ರಿಯ ಕಾಣಿಕೆಗಳು, ಬಳಕೆದಾರರಿಗೆ ಸಂಬಂಧಪಟ್ಟ ರಾಷ್ಟ್ರಮಟ್ಟದ ಅನೇಕ ಗಣ್ಯ ಸಮಿತಿಗಳಲ್ಲಿ ಇವರು ಸದಸ್ಯರಾಗಿ ನೀಡಿರುವ ಅಮೂಲ್ಯ ಸಲಹೆಗಳು ಈ ಕ್ಷೇತ್ರಕ್ಕೆ ತುಂಬಾ ಪ್ರಯೋಜನಕಾರಿಯಾಗಿ ಪರಿಣಮಿಸಿವೆ.

‘ವಾಟ್, ಎಚ್, ಹೌಮಚ್’ ಎಂಬ ಇವರ ಅಂಕಣ ಬರಹ ಬಳಕೆದಾರರಲ್ಲಿ ನವೀನ ಜಾಗೃತಿಯನ್ನೇ ಉಂಟುಮಾಡಿದೆ. ಇವರ ಈ ಅಪೂರ್ವ ಸಮಾಜಸೇವೆಯ ಪತ್ರಿಕೋದ್ಯಮಕ್ಕೆ ನಾಡಿನ ಹಲವಾರು ಸಂಘಟನೆಗಳು ಸರ್ಕಾರಿ ಸಂಸ್ಥೆಗಳು ವಿಧವಿಧ ಮನ್ನಣೆಯಿತ್ತು ಗೌರವಿಸಿವೆ.

ಪತ್ರಿಕೋದ್ಯಮದಂತಹ ಪರಿಣಾಮಕಾರಿ ಕ್ಷೇತ್ರದಲ್ಲಿ ಜನಸೇವೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿರುವ ಧೀರ ಕನ್ನಡ ಮಹಿಳೆ ಶ್ರೀಮತಿ ಪುಷ್ಪಾ ಗಿರಿಮಾಜಿ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಅಜೀಮ್ ಪ್ರೇಮ್ಜಿ

ವಿಪ್ರೊ ಕಂಪೆನಿಯ ಛೇರ್‌ಮನ್, ಗ್ರಾಮೀಣ ಭಾರತದ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿ ಯೋಜನೆಯ ರೂವಾರಿ , ಶ್ರೀ  ಅಜೀಮ್ ಪ್ರೇಮ್‌ಜಿ ಅವರು.

ಅಮೆರಿಕಾದ ಸ್ಟಾನ್‌ಫೋರ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ೧೯೬೬ನೆಯ ಇಸವಿಯಲ್ಲಿ ತಮ್ಮ ೨೧ನೆಯ ವಯಸ್ಸಿನಲ್ಲಿ ವಿಪ್ರೊ ಕಂಪೆನಿ ಸೇರಿದರು. ಅನತಿ ಕಾಲದಲ್ಲಿಯೇ ಕಂಪೆನಿಯ ಬಂಡವಾಳವನ್ನು ಅನೇಕ ಪಟ್ಟು ಹೆಚ್ಚಿಸುವಲ್ಲಿ ಇವರ ಸಮರ್ಥ ಮುಂದಾಳತ್ವ ಪರಿಣಾಮಕಾರಿಯಾದ ಕಾರ್ಯ ಮಾಡಿತು. ಐ.ಟಿ. ಸೇವೆಯಲ್ಲಿ ಪ್ರಪಂಚದಲ್ಲಿಯೇ ಅತ್ಯುತ್ತಮವಾದ ೧೦೦ ತಾಂತ್ರಿಕ ಕಂಪೆನಿಗಳ ಪೈಕಿ ವಿಪ್ರೊ ಕೂಡ ಒಂದು.

ಭಾರತದ ಸಮೃದ್ಧ ಸಂಪ್ರದಾಯ ಉನ್ನತ ಮೌಲ್ಯ ಇವುಗಳನ್ನು ಹೊಂದಿದ ಯುವಕರನ್ನು ಉದ್ಯಮಶೀಲತೆಗೆ ತೊಡಗಿಸಿ ಅವರಿಂದ ಅತ್ಯುತ್ತಮ ಸಾಧನೆಗಳನ್ನು ಮಾಡಿಸುವಲ್ಲಿ ಶ್ರೀ ಪ್ರೇಮ್‌ಜಿ ಅವರ ಕಾರತತ್ಪರತೆ ಪ್ರಶಂಸನೀಯ. ಇವರ ಮಾರ್ಗದರ್ಶನದಲ್ಲಿ ಸಾವಿರಾರು ಯುವಕರು ಜಾಗತಿಕ ಮಟ್ಟದ ಪ್ರತಿಭಾಪೂರ್ಣ ನೇತಾರರಾಗಿ ರೂಪುಗೊಂಡುದು ಪ್ರೇಮ್‌ಜಿ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿ. ಇದೀಗ ವಿಪ್ರೊ ಕಂಪೆನಿಯು ಜಗತ್ತಿನ ಪ್ರಮುಖ ಐ.ಟಿ. ಕಂಪೆನಿಗಳಲ್ಲಿ ಒಂದೆಂಬ ಪ್ರಖ್ಯಾತಿಯನ್ನು ಗಳಿಸಿದೆ. ಮುಂದಿನ ಶತಮಾನದ ಅಗತ್ಯತೆಗಳನ್ನು ಗ್ರಹಿಸಿ ನಿರ್ದೇಶಿಸಬಲ್ಲ ಅತ್ಯಂತ ಸೂಕ್ಷ್ಮಮತಿಯುಳ್ಳ ಶ್ರೀ ಪ್ರೇಮ್‌ಜಿ ಅವರ ಕಾಣಿಕೆ ಭಾರತ ದೇಶಕ್ಕೆ ಅತ್ಯುಪಯುಕ್ತವಾಗಿ ಪರಿಣಮಿಸಿದೆ. ೨೦೦೫ನೆಯ ಇಸವಿಯೊಳಗೆ ಭಾರತದ ೧೦ ಲಕ್ಷ ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಶ್ರೀ ಪ್ರೇಮ್‌ಜಿಯವರ ಮಹತ್ವಾಕಾಂಕ್ಷೆ,

ತಮ್ಮ ಅದ್ಭುತ ವ್ಯಕ್ತಿತ್ವ ಕರ್ತೃತ್ವಶಕ್ತಿ, ಭವಿಷ್ಯದ ಮುಂಗಾಕ್ಕೆ ಅಪ್ರತಿಮ ದೇಶಪ್ರೇಮ, ಭವಿಷ್ಯದ ಪ್ರಜೆಗಳ ಕ್ಷೇಮಾಭಿವೃದ್ಧಿ ಮುಂತಾದ ಉದಾತ್ತ ಕನಸುಗಳನ್ನು ಹೊತ್ತು ಸದಾ ಚಟುವಟಿಕೆಯಲ್ಲಿ ನಿರತರಾಗಿರುವ ಕ್ರಿಯಾಶೀಲ ವ್ಯಕ್ತಿ ಶ್ರೀ ಅಜೀಮ್ ಪ್ರೇಮ್‌ಜಿ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ವಿ.ಆರ್. ಗೌರಿಶಂಕ‌

ಶೃಂಗೇರಿ ಸಂಸ್ಥಾನವನ್ನು ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಕೊಂಡೊಯ್ದ ಅಪರೂಪದ ಸಾಧಕ ಶ್ರೀ ಗೌರಿಶಂಕರ ಅವರು.
೧೯೫೪ರಲ್ಲಿ ಜನಿಸಿದ ಶ್ರೀ ವಿ. ಆರ್. ಗೌರಿಶಂಕರ ಮೂಲತಃ ಇಂಜಿನಿಯರಿಂಗ್ ಪದವೀಧರರು. ತಮ್ಮ ಜ್ಞಾನ ಹಾಗೂ ಸಾಮರ್ಥ್ಯವನ್ನೆಲ್ಲ ಧಾರೆಯೆರೆದು ಶೃಂಗೇರಿ ಮಠದ ಕಟ್ಟಡ ನಿರ್ಮಾಣಮಾಡಿ ಶೃಂಗೇರಿ ಮಠದ ಭವ್ಯತೆಗೆ ಕಾರಣಪುರುಷರಾದರು. ಒಮ್ಮೆಲೆ ೩,೦೦೦ ಜನರು ಕುಳಿತು ಊಟ ಮಾಡುವ ಭೋಜನಗೃಹ, ವೈಶಿಷ್ಟ್ಯಪೂರ್ಣ ವೇದ ಪಾಠಶಾಲೆ, ಅತ್ಯಾಧುನಿಕ ತಂತ್ರಜ್ಞಾನದ ಸಂಶೋಧನಾ ಕೇಂದ್ರ, ಆಕರ್ಷಕ ಗುರುಭವನ, ವಿದ್ಯಾತೀರ್ಥ ಸೇತುವೆಗಳಂಥ ವೈಶಿಷ್ಟ್ಯತೆಗಳನ್ನುಳ್ಳ ಶೃಂಗೇರಿ ಸಂಸ್ಥಾನ ನಿರ್ಮಾಣವಾದದ್ದು ಶ್ರೀ ಗೌರಿಶಂಕರರ ಸಾರ್ಥಕ ಸಾಧನೆಯ ಹೆಗ್ಗುರುತು.
ಶೃಂಗೇರಿ ಸಂಸ್ಥಾನವನ್ನು ಕೇವಲ ಧಾರ್ಮಿಕ ಕಟ್ಟುಪಾಡುಗಳಿಗೆ ಸೀಮಿತಗೊಳಿಸದೆ ಅದಕ್ಕೆ ಸಮಾಜ ಸೇವೆಯ ವಿಶಾಲ ರೂಪ ನೀಡಿದ ಹಿರಿಮೆ ಶ್ರೀಯುತರದು. ವಿದ್ಯಾರ್ಥಿಗಳಿಗೆ ಅನ್ನದಾಸೋಹ, ದತ್ತಿಗ್ರಾಮ ಯೋಜನೆ, ಸ್ವಸ್ಥ ಆರೋಗ್ಯ ಯೋಜನೆ, ವಿಕಲಾಂಗರಿಗೆ ನೆರವು ಯೋಜನೆ, ಮಾನಸಿಕ ಅಸ್ವಸ್ಥ ಮಕ್ಕಳ ಸಂರಕ್ಷಣಾ ಯೋಜನೆಗಳ ಮೂಲಕ ಅಪಾರ ಜನಪ್ರಿಯತೆಯನ್ನು ಪಡೆದಿದ್ದಾರೆ.
ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿಯೂ ಅತ್ಯುತ್ತಮ ಸಂಘಟಕರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರಿಗೆ ಬಂದಿರುವ ಸನ್ಮಾನ, ಪ್ರಶಸ್ತಿ, ಬಿರುದುಗಳು ಅಪಾರ. ಅಮೆರಿಕದ ವಿಶ್ವಶಾಂತಿ ಧಾರ್ಮಿಕ ಸಮ್ಮೇಳನ ೨೦೦೦ದಲ್ಲಿ ಭಾಗವಹಿಸಿ ಭಾಷಣ ಮಾಡಿದ ಹಿರಿಮೆ ಶ್ರೀಯುತರದು.
ಸಮಾಜ ಸೇವೆಯನ್ನು ಸದ್ದಿಲ್ಲದೆ ಮಾಡುತ್ತಿರುವ ಮಾನವೀಯ ದೃಷ್ಟಿಯ ಮಹಾನ್ ವ್ಯಕ್ತಿ ಶ್ರೀ ವಿ.ಆರ್. ಗೌರಿಶಂಕರ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀಮತಿ ವಸುಂಧರಾ ಫಿಲಿಯೋಜಾ

ದೇಶ, ವಿದೇಶಗಳಲ್ಲಿ ವಿಜಯನಗರ ಸಾಮ್ರಾಜ್ಯದ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುತ್ತಿರುವ ಹೆಸರಾಂತ ಇತಿಹಾಸ ತಜ್ಞ ಶ್ರೀಮತಿ ವಸುಂಧರಾ ಫಿಲಿಯೋಜಾ ಅವರು.
ಹಾವೇರಿಯಲ್ಲಿ ಜನಿಸಿ, ಧಾರವಾಡದಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಶ್ರೀಮತಿ ವಸುಂಧರಾ ಅವರು ಇತಿಹಾಸ ಎಂ.ಎ., ಶಾಸನಶಾಸ್ತ್ರ ಡಿಪ್ಲೊಮಾ ಪದವೀಧರರು. ಫ್ರಾನ್ಸ್ ದೇಶದ ವಿದ್ವಾಂಸ ಶ್ರೀ ಪೈರೆ ಸೈಲ್ವೇನ್ ಫಿಲಿಯೋಜಾ ಅವರನ್ನು ವಿವಾಹವಾಗಿ ಅವರೊಡನೆ ಇತಿಹಾಸ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಕೊಂಡರು. ಫ್ರಾನ್ಸ್‌ನ ನ್ಯಾನ್ಸಿ ವಿಶ್ವವಿದ್ಯಾಲಯದಿಂದ ಯುರೋಪಿಯನ್ ಥಿಯೇಟರ್‌ ಬಗೆಗೆ ಡಿಪ್ಲೊಮಾ ಪದವಿ ಗಳಿಸಿದರು.
ಯುನೆಸ್ಕೋದಿಂದ ಆರ್ಥಿಕ ನೆರವು ಪಡೆದು ವಿಜಯನಗರ ಇತಿಹಾಸದ ಬಗೆಗೆ ಸಂಶೋಧನೆಯಲ್ಲಿ ನಿರತರಾಗಿರುವ ಶ್ರೀಮತಿ ವಸುಂಧರಾ ಫಿಲಿಯೋಜಾ ಅವರು ಹತ್ತರಿಂದ ಹದಿನಾಲ್ಕನೇ ಶತಮಾನದಲ್ಲಿ ನಿರ್ಮಿಸಲಾದ ಉತ್ತರ ಕರ್ನಾಟಕದ ಅನೇಕ ದೇವಸ್ಥಾನಗಳ ವ್ಯಾಸಂಗ ನಡೆಸಿ ಅಪಾರ ಮಾಹಿತಿ ಸಂಗ್ರಹಿಸಿದ್ದಾರೆ.
೧೯೮೫ನೆಯ ಇಸವಿಯಲ್ಲಿ, ಫ್ರಾನ್ಸ್‌ನಲ್ಲಿ ನಡೆದ ಭಾರತ ಮಹೋತ್ಸವ ಪ್ರದರ್ಶನದಲ್ಲಿ ಶ್ರೀಮತಿ ವಸುಂಧರ ಅವರು ಪ್ರದರ್ಶಿಸಿದ ರುಯಿನ್ಸ್ ಆಫ್ ವಿಜಯನಗರಕ್ಕೆ ಕೇಂದ್ರ ಸರ್ಕಾರದ ಅನುದಾನ ದೊರೆತಿದೆ. ಇದಲ್ಲದೆ ರಾಷ್ಟ್ರದ ಹಲವಾರು ವಿಚಾರ ಸಂಕಿರಣ ಹಾಗೂ ವಸ್ತು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸಹಯೋಗದೊಡನೆ ಡೇಟಾಬೇಸ್ ಆನ್ ಟೆಂಪಲ್ಸ್ ಆಫ್ ಕರ್ನಾಟಕ ಎಂಬ ಗ್ರಂಥ ರಚನೆ ಹಾಗೂ ಸಿ.ಡಿ. ತಯಾರಿಕೆಗಾಗಿ ಹತ್ತು ವರ್ಷಗಳ ಕಾರ್ಯಯೋಜನೆಯಲ್ಲಿ ಪ್ರಸಕ್ತ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕನ್ನಡ, ಇಂಗ್ಲಿಷ್, ಫ್ರೆಂಚ್ ಮೂರು ಭಾಷೆಗಳಲ್ಲಿ ಕರ್ನಾಟಕದ ಇತಿಹಾಸದ ಬಗೆಗೆ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಹಲವಾರು ಸಿ.ಡಿ.ಗಳನ್ನು ಹೊರತಂದಿದ್ದಾರೆ. ಸುಮಾರು ಎಪ್ಪತ್ತಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿರುವ ಶ್ರೀಮತಿ ವಸುಂಧರಾ ಅವರು ಕಾದಂಬರಿ, ಸಣ್ಣಕಥೆ, ನಾಟಕ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲೂ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿದ್ವತ್ ಪ್ರಬಂಧಗಳನ್ನು ಮಂಡಿಸಿರುವ ಶ್ರೀಮತಿ ವಸುಂಧರಾ ಫ್ರೆಂಚ್‌ಭಾಷೆಯಲ್ಲಿಯೂ ಲೇಖನಗಳನ್ನು ಬರೆದಿದ್ದಾರೆ.
ಕರ್ನಾಟಕದ ಐತಿಹಾಸಿಕ ದೇವಾಲಯಗಳನ್ನು ಕುರಿತು ವಿಶೇಷವಾಗಿ ಹಂಪಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ವಿದ್ವನ್ಮಣಿ ಶ್ರೀಮತಿ ವಸುಂಧರಾ ಫಿಲಿಯೋಜಾ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ಕೆ. ಮರುಳಸಿದ್ದಪ್ಪ

ಕನ್ನಡ ರಂಗಭೂಮಿ, ಸಾಹಿತ್ಯ, ಶಿಕ್ಷಣ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ವಿದ್ವಾಂಸ ಡಾ|| ಕೆ. ಮರುಳಸಿದ್ದಪ್ಪ ಅವರು.
ಚಿಕ್ಕಮಗಳೂರು ಜಿಲ್ಲೆಯ ಶಿವನೆ ಹೋಬಳಿಯ ಕಾರೆಹಳ್ಳಿಯಲ್ಲಿ ಜನನ, ಮೈಸೂರಿನಲ್ಲಿ ವಿದ್ಯಾಭ್ಯಾಸ, ಕನ್ನಡ ಎಂ.ಎ.ಯಲ್ಲಿ ಪ್ರಥಮ ಬ್ಯಾಂಕ್, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿ ಗಳಿಕೆ. ೧೯೬೫ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ವೃತ್ತಿ ಪ್ರಾರಂಭಿಸಿದ ಶ್ರೀಯುತರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ರೀಡರ್, ಪ್ರೊಫೆಸರ್, ನಿರ್ದೆಶಕರ ಹುದ್ದೆ ನಿರ್ವಹಿಸಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಕನ್ನಡ ರಂಗಭೂಮಿ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀಯುತರು ‘ಆಧುನಿಕ ಕನ್ನಡ ನಾಟಕ’ ಎಂಬ ವಿದ್ವತ್‌ಪೂರ್ಣ ಕೃತಿಯನ್ನು ರಚಿಸಿದ್ದಾರೆ. ರಂಗ ತಂಡಗಳಾದ ಪ್ರತಿಮಾ ನಾಟಕ ರಂಗ, ಸಮುದಾಯ, ನಾಟ್ಯ ಸಂಘ ಥಿಯೇಟರ್ ಸೆಂಟರ್‌ನೊಡನೆ ನಿಕಟ ಸಂಪರ್ಕ ಹೊಂದಿರುವ ಇವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಅರ್ಥಪೂರ್ಣ ಸೇವೆ ಸಲ್ಲಿಸಿದ್ದಾರೆ.
ಕನ್ನಡ ನಾಟಕ ಸಮೀಕ್ಷೆ, ಷಟ್ನದಿ ಸಾಹಿತ್ಯ, ಒಡನಾಟ, ನೋಟ ನಿಲುವು, ಎಲೆಕ್ಟ್ರ, ಮೀಡಿಯ, ರಕ್ತಕಣಗಿಲೆ ಮೊದಲಾದ ಗ್ರಂಥಗಳನ್ನು ರಚಿಸಿದ್ದಾರೆ. ಶ್ರೀಯುತರು ಸಂಪಾದಿಸಿದ ಕನ್ನಡ ನಾಟಕ ವಿಮರ್ಶೆ, ಲಾವಣಿಗಳು, ವಚನ ಕಮ್ಮಟ, ಶತಮಾನದ ನಾಟಕ ಕೃತಿಗಳು ವಿದ್ವಜ್ಜನರ ಗೌರವಕ್ಕೆ ಪಾತ್ರವಾಗಿವೆ. ಸಾಹಿತ್ಯ ಸಮ್ಮೇಳನಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿರುವ ಶ್ರೀಯುತರ ಐವತ್ತಕ್ಕೂ ಹೆಚ್ಚು ಬಿಡಿ ಲೇಖನಗಳು ಪ್ರಕಟವಾಗಿವೆ. ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಷಿಪ್ ಹಾಗೂ ಭೂಪಾಲ್‌ನಲ್ಲಿ ನಡೆದ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ. ಸಾಹಿತ್ಯ, ಶಿಕ್ಷಣ, ಜಾನಪದ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಪ್ರತಿಭಾವಂತ ಸಾಧಕ ಡಾ|| ಕೆ. ಮರುಳಸಿದ್ದಪ್ಪ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಸ್.ಎಂ. ಸೈಯದ್ ಖಲೀಲ್

ಹೊರನಾಡ ಕನ್ನಡಿಗರೆನ್ನಿಸಿಕೊಂಡು, ಕರ್ನಾಟಕದ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ ಶ್ರೀ ಎಸ್. ಎಂ. ಸೈಯದ್ ಖಲೀಲ್
ಅವರು.
ಭಟ್ಕಳದಲ್ಲಿ ಜನಿಸಿದ ಶ್ರೀಯುತರು ತಮಿಳುನಾಡಿನ ಚೆನ್ನೈ ಲಾಯಲಾ ಕಾಲೇಜಿನಲ್ಲಿ ಚಾರ್ಟಡ್್ರ ಅಕೌಂಟೆನ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ೧೯೬೫ರಲ್ಲಿ ಚಾರ್ಟಡ್್ರ ಅಕೌಂಟೆಂಟ್ ಅರ್ಹತೆ ಪಡೆದು ಭಾರತದ ಪ್ರತಿಷ್ಠಿತ ಇನ್ಸ್‌ಟಿಟ್ಯೂಟ್ ಆಫ್ ಚಾರ್ಟಡ್್ರ ಅಕೌಂಟೆಂಟ್ಸ್‌ನ ಫೆಲೋ ಸದಸ್ಯರಾದರು.
ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆರ್ಥಿಕ ನಿರ್ವಾಹಕರಾಗಿ ವೃತ್ತಿಯನ್ನಾರಂಭಿಸಿ ನಿರ್ದೇಶಕರ ತನಕ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಪ್ರಸ್ತುತ ಐ ಮತ್ತು ಎಂ ಗಲಾದ್ರಿ ಗ್ರೂಪ್‌ನ ಕಾರ್ಯಕಾರಿ ನಿರ್ದೇಶಕರಾಗಿದ್ದಾರೆ. ಅಲ್ಲದೆ ಮಾಧ್ಯಮ ಕಮ್ಯೂನಿಕೇಷನ್ಸ್ ನಿಯಮಿತದ ಅಧ್ಯಕ್ಷರಾಗಿ ಮಲಬಾ‌ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಮತ್ತು ಪ್ರವರ್ತಕರಾಗಿ ಇಂಡಿಯಾ ಪಬ್ಲಿಕೇಷನ್ನಿನ ನಿರ್ದೇಶಕರಾಗಿ ಉರ್ದು ವಾರ್ತಾ ಛಾನಲ್ ಫಲಾಕ್ ಟಿ.ವಿ.ಯ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದಾರೆ. ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೈಯದ್‌ ಖಲೀಲ್ ಅವರು ಕರ್ನಾಟಕದ ಸುಪ್ರಸಿದ್ಧ ಕಲಾವಿದರು, ಸಾಹಿತಿಗಳು, ರಾಜಕಾರಣಿಗಳನ್ನು ದುಬೈಗೆ ಕರೆಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿಚಾರ ಸಂಕಿರಣ ಏರ್ಪಡಿಸಿ ಅನಿವಾಸಿ ಭಾರತೀಯರು ಕರ್ನಾಟಕದಲ್ಲಿ ಬಂಡವಾಳ ಹೂಡಲು ಪ್ರಚೋದನೆ ನೀಡಿದ್ದಾರೆ.
ಭಟ್ಕಳದಲ್ಲಿ ಅಂಜುಮುನ್ ಶೈಕ್ಷಣಿಕ ಸಂಘದ ಗೌರವ ಪೋಷಕರಾಗಿರುವ ಶ್ರೀಯುತರು ಅನೇಕ ಸಮಾಜ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಉದ್ಯೋಗಾರ್ಥಿಗಳಿಗೆ ನೆರವು, ಕುಡಿಯುವ ನೀರಿನ ಪೂರೈಕೆ, ವೈದ್ಯಕೀಯ ಶಿಬಿರ, ನೇತ್ರ ಚಿಕಿತ್ಸಾ ಶಿಬಿರ ಇತ್ಯಾದಿಗಳನ್ನು ಏರ್ಪಡಿಸುತ್ತಿದ್ದಾರೆ. ದಂಗೆ, ಭೂಕಂಪ, ಪ್ರವಾಹಗಳಲ್ಲಿ ಸಂತ್ರಸ್ತರಿಗೆ ಧನಸಹಾಯ ನೀಡುವ ಮೂಲಕ ನೆರವಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಿಕೊಡುವಲ್ಲಿ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ನಿಸ್ವಾರ್ಥವಾಗಿ ದುಡಿಯುವಲ್ಲಿ ತನ್ಮಯರಾಗಿರುವವರು ಎಸ್. ಎಂ. ಸೈಯದ್‌ ಖಲೀಲ್.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಕೆ. ಗುರುರಾವ್

ರಂಗಭೂಮಿ ಕ್ಷೇತ್ರದಲ್ಲಿ ಐದು ದಶಕಗಳಿಂದಲೂ ನಿಗ್ರಹ ಸೇವೆ ಸಲ್ಲಿಸುತ್ತಿರುವ ಹಿರಿಯ ಚೇತನ ಶ್ರೀ ಕೆ. ಗುರುರಾವ್ ಅವರು.
ತುಮಕೂರು ಜಿಲ್ಲೆಯ ಇರಕಸಂದ್ರದಲ್ಲಿ ಜನಿಸಿದ ಶ್ರೀ ಕೆ. ಗುರುರಾವ್ ಎಳವೆಯಲ್ಲೇ ನಾಟಕದ ಗೀಳು ಅಂಟಿಸಿಕೊಂಡವರು. ಪ್ರಖ್ಯಾತ ರಂಗಭೂಮಿ ಕಲಾವಿದರಾದ ಸುಬ್ಬಯ್ಯನಾಯ್ಡು ಅವರ ನಾಟಕ ಮಂಡಳಿಯಲ್ಲಿ ತಮ್ಮ ಅಪ್ರತಿಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಸೂರೆಗೊಂಡ ಶ್ರೀ ಗುರುರಾವ್ ಹಲವಾರು ವರ್ಷ ಸುಪ್ರಸಿದ್ದ ಪ್ರಭಾತ್‌ ಕಲಾವಿದರ ಸಂಸ್ಥೆಯಲ್ಲಿ ಅಭಿನಯಿಸಿ, ಜನ ಮೆಚ್ಚುಗೆ ಪಡೆದಿದ್ದಾರೆ. ಬೆಂಗಳೂರಿನ ವೈ.ಎಂ.ಸಿ.ಎ. ಕ್ರೀಡಾಂಗಣದಲ್ಲಿ ನಡೆದ ರಾಜ್ಯದಲ್ಲೇ ಪ್ರಪ್ರಥಮವಾದ ಧ್ವನಿಬೆಳಕಿನ ಶ್ರೀಕೃಷ್ಣದೇವರಾಯ ಕಾರ್ಯಕ್ರಮದಲ್ಲಿ ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಇವರ ಅಭಿನಯ ಮನೋಜ್ಞವಾದುದು. ಬೆಂಗಳೂರಿನಲ್ಲಿ ೨೨ ವರ್ಷಗಳು ಹಾಗೂ ಮೈಸೂರಿನಲ್ಲಿ ೨೦ ವರ್ಷಗಳು ರಂಗಭೂಮಿ ಕಲಾವಿದರಾಗಿ, ಚಲನಚಿತ್ರಗಳಲ್ಲಿ ಪೋಷಕ ನಟರಾಗಿ, ಗಮಕಿಯಾಗಿ, ಹುಟ್ಟು ಹೋರಾಟಗಾರರಾಗಿ, ಸಮಾಜಸೇವಕರಾಗಿ ಸಾರ್ಥಕ ಬದುಕನ್ನು ಕಂಡವರು.
ಅನೇಕ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವುದಲ್ಲದೆ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು. ‘ಭಕ್ತ ಅಂಬರೀಷ’, ‘ಕೃಷ್ಣಲೀಲೆ’, ‘ಚಂದ್ರಚಕೋರಿ’, ‘ಕುರುಕ್ಷೇತ್ರ’, ‘ಧರ್ಮಭೂಮಿ’ ಮುಂತಾದ ನಾಟಕಗಳಲ್ಲಿ ಇವರ ಅಭಿನಯ ಜನಪ್ರಿಯತೆ ಗಳಿಸಿದೆ. ಇಂಗ್ಲಿಷ್, ಕನ್ನಡ ಹಾಗೂ ತಮಿಳು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿರುವ ಹಿರಿಮೆ ಶ್ರೀಯುತರದು. ಕಲಾ ಸೇವೆಯ ಜೊತೆಗೆ ಸಮಾಜ ಸೇವೆ ಇವರ ಇನ್ನೊಂದು ಸೇವಾಕ್ಷೇತ್ರ. ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರೀಯುತರ ಹೋರಾಟ ಗಮನಾರ್ಹ.
ಅಭಿನಯ ಚಾತುರ್ಯ, ಕಲಾನೈಪುಣ್ಯತೆ, ಹೋರಾಟದ ಹುಟ್ಟುಗುಣ, ಸ್ನೇಹಪರತೆ ಹಾಗೂ ಮಾನವೀಯತೆಗಳು ಸಂಗಮಿಸಿದ ಅಪರೂಪದ ವ್ಯಕ್ತಿ ಶ್ರೀ ಕೆ. ಗುರುರಾವ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವೈ.ಎಂ.ಸಿ.ಎ.

ವೈ.ಎಂ.ಸಿ.ಎ. ಎಂದೇ ಖ್ಯಾತಿ ಪಡೆದಿರುವ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್‌ ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಸಮಾಜದ ದೀನದಲಿತರ, ಉಪೇಕ್ಷಿತರ, ಬೀದಿ ಮಕ್ಕಳ ಹಾಗೂ ಮಹಿಳೆಯರ ಕಲ್ಯಾಣಕ್ಕಾಗಿ ಅಬ್ಬರ ಆಡಂಬರಗಳಿಲ್ಲದೆ ದುಡಿಯುತ್ತಿರುವ ವಿಶಿಷ್ಟ ಸೇವಾ ಸಂಸ್ಥೆ.
೧೮೪೪ರಲ್ಲಿ ಲಂಡನ್‌ನಲ್ಲಿ ಸರ್ ಜಾರ್ಜ್ ವಿಲಿಯಮ್ಸ್ ಮತ್ತು ಸಂಗಡಿಗರಿಂದ ಈ ಸಂಸ್ಥೆ ಸ್ಥಾಪಿತವಾಯಿತು. ಇಂದು ವಿಶ್ವದಾದ್ಯಂತ ೧೨೦ ರಾಷ್ಟ್ರಗಳಲ್ಲಿ ತನ್ನ ಸೇವಾಕ್ಷೇತ್ರವನ್ನು ವಿಸ್ತರಿಸಿ, ಒಟ್ಟು ೩೨೦ ವೈ.ಎಂ.ಸಿ.ಎ. ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.
ಕೆಳಸ್ತರದ ಗ್ರಾಮೀಣ ಮಕ್ಕಳ, ಬೀದಿ ಮಕ್ಕಳ, ಕೊಳಚೆ ಪ್ರದೇಶದ ಮಕ್ಕಳ, ಉಪೇಕ್ಷಿತರ, ಮಹಿಳೆಯರ ಕಲ್ಯಾಣಕ್ಕಾಗಿ ತನ್ನನ್ನು ಸದಾ ತೊಡಗಿಸಿಕೊಂಡಿರುವುದರ ಜೊತೆಗೆ ಮಹಿಳೆಯರಲ್ಲಿ ಸ್ವಾವಲಂಬನೆ ಬೆಳೆಸುವುದು, ಪರಿಸರ ರಕ್ಷಣೆ, ಪ್ರಾಣಿ ಹಿಂಸೆ ತಡೆ, ಬೀದಿ ಮಕ್ಕಳ ಪುನರ್ವಸತಿ, ವಯಸ್ಕರ ಶಿಕ್ಷಣ, ಆರೋಗ್ಯ ಹಾಗೂ ಕಾನೂನು ಸಲಹೆ ಹೀಗೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡು ಸಮಾಜದ ಏಳಿಗೆಗಾಗಿ ಎಲೆಮರೆಯ ಕಾಯಿಯಂತೆ ದುಡಿಯುತ್ತಿರುವ ಸಂಸ್ಥೆಯಾಗಿದೆ.
ಅತ್ಯಂತ ಹಳೆಯ ಕ್ರೀಡಾ ಸಂಸ್ಥೆಯೆನ್ನಿಸಿಕೊಂಡಿರುವ ವೈ.ಎಂ.ಸಿ.ಎ. ಕಾರ್ಯನಿರ್ವಾಹಕ ತಂಡದ ಮೂಲಕ ಮಾದಕ ದ್ರವ್ಯಗಳ ಸೇವನೆ ಬಗ್ಗೆ ವಿಚಾರ ಸಂಕಿರಣ ಹಾಗೂ ಸಾಕ್ಷ್ಯ ಚಿತ್ರ ಪ್ರದರ್ಶನ, ಪೋಷಕರ ಮಕ್ಕಳ ನಡುವಿನ ಸಂಭಾಷಣಾ ಶಿಬಿರ, ರಾಷ್ಟ್ರೀಯ ಸೈಕಲ್ ರಾಲಿ, ಆರೋಗ್ಯ ಮತ್ತು ಸ್ವಚ್ಛತಾ ಕಾರ್ಯಕ್ರಮಗಳು, ವೃದ್ಧಾಶ್ರಮಗಳಿಗೆ ಭೇಟಿ ಮೊದಲಾದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಸರ್ವಧರ್ಮ ಸಮನ್ವಯವನ್ನು ಮುಖ್ಯ ಧೈಯವಾಗಿರಿಸಿಕೊಂಡಿರುವ ಸಂಸ್ಥೆ ವೈ.ಎಂ.ಸಿ.ಎ.
ಯುವ ಪ್ರತಿಭೆಗಳನ್ನು ಹೊರತರುವ ನಿಟ್ಟಿನಲ್ಲಿ ಭಾರತ – ಶ್ರೀಲಂಕಾ ನಡುವಿನ ಎಳೆಯರ ಕ್ರಿಕೆಟ್ ಪಂದ್ಯಗಳ ಮೂಲಕ ಖ್ಯಾತಿ ಪಡೆದಿರುವ ಈ ಸಂಸ್ಥೆ ಬೇಸಿಗೆಯಲ್ಲಿ ಮಾತ್ರವಲ್ಲದೆ ವರ್ಷವಿಡೀ ಅನೇಕ ಸಾಂಸ್ಕೃತಿಕ ಶಿಬಿರಗಳನ್ನು ಏರ್ಪಡಿಸುತ್ತದೆ.
ಜನಾಂಗಗಳ ನಡುವೆ ಶಾಂತಿ, ದಯೆ, ಪ್ರೀತಿ, ಸ್ನೇಹ, ವಿಶ್ವಾಸ, ಕರುಣೆಯ ಸೇತುವೆಯನ್ನು ನಿರ್ಮಿಸುವ ಮೂಲಕ ಮನುಕುಲದ ಸೇವೆಯಲ್ಲಿ ಒಂದು ಶತಮಾನವನ್ನೇ ಕಳೆದಿರುವ ವೈ.ಎಂ.ಸಿ.ಎ. ನಾಡಿನ ಹೆಮ್ಮೆಯ ಸಂಸ್ಥೆ.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ|| ಪ್ರಧಾನ್ ಗುರುದತ್ತ

ಅಧ್ಯಾಪಕರು, ಭಾಷಾಂತರಕಾರರು, ಕನ್ನಡಪರ ಚಿಂತಕರು ಡಾ. ಪ್ರಧಾನ್ ಗುರುದತ್ತ ಅವರು.
೧೯೩೮ ರಲ್ಲಿ ಜನಿಸಿದ ಡಾ. ಪ್ರಧಾನ್ ಗುರುದತ್ತ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. (ಕನ್ನಡ), ಎಂ.ಫಿಲ್., ಪಿಹೆಚ್.ಡಿ. ಪದವಿ, ಭಾರತೀಯ ವಿದ್ಯಾಭವನದ ಸಂಸ್ಕೃತ ಕೋವಿದ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಹಿಂದಿಯಲ್ಲಿ ಎಂ.ಎ.
ಪದವಿ ಗಳಿಸಿದರು.
ಮೂವತ್ತೊಂಬತ್ತು ವರ್ಷಗಳ ಕಾಲ ಸ್ನಾತಕ, ಸ್ನಾತಕೋತ್ತರ ಅಧ್ಯಾಪಕರಾಗಿ, ಯು.ಜಿ.ಸಿ. ಸಂಶೋಧಕ ಪ್ರಾಧ್ಯಾಪಕರಾಗಿ, ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ಅನೇಕ ವಿದ್ಯಾರ್ಥಿಗಳ, ಸಾಹಿತ್ಯಾಸಕ್ತರ ಮನ ಗೆದ್ದಿದ್ದಾರೆ. ಕನ್ನಡ, ಹಿಂದಿ, ಸಂಸ್ಕೃತ, ತೆಲುಗು, ಮರಾಠಿ, ಇಂಗ್ಲಿಷ್, ಫ್ರೆಂಚ್ ಭಾಷೆಗಳ ಪರಿಚಯವುಳ್ಳ ಶ್ರೀಯುತರು ಕನ್ನಡದ ಹಲವಾರು ಕೃತಿಗಳನ್ನು ಹಿಂದಿಗೂ, ಇಂಗ್ಲಿಷ್‌ ಭಾಷಾಂತರಿಸಿದ್ದಾರೆ. ಮರಾಠಿ, ತಮಿಳು, ಇಂಗ್ಲಿಷ್‌ನಿಂದ ಕನ್ನಡಕ್ಕೂ ಭಾಷಾಂತರಿಸಿದ್ದಾರೆ. ಅಲ್ಲದೆ ಹಾಮಾನಾ ಒಂದು ಅಧ್ಯಯನ, ರತ್ನಾಕರವರ್ಣಿ, ಆಡಳಿತ ಭಾಷೆಯ ಕೆಲವು ವಿಚಾರಗಳು ಮೊದಲಾದ ಸುಮಾರು ೨೨ ಸ್ವತಂತ್ರ ಕೃತಿಗಳನ್ನು, ತಾಂತ್ರಿಕ ಪದಕೋಶಗಳನ್ನು ರಚಿಸಿರುವುದಲ್ಲದೆ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ೧೫೦ಕ್ಕೂ ಹೆಚ್ಚು ಪುಸ್ತಕಗಳು, ೨೫೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ಪ್ರಕಟವಾಗಿವೆ. ೫೦ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ‘ಕಲ್ಪಶ್ರೀ’ ಪ್ರಶಸ್ತಿ, ತೀ.ನಂ. ಶ್ರೀಕಂಠಯ್ಯ ಪ್ರಶಸ್ತಿ ಶ್ರೀಯುತರ ಪ್ರತಿಭೆಗೆ ಸಂದ ಪ್ರಶಸ್ತಿ ಪುರಸ್ಕಾರಗಳಲ್ಲಿ ಪ್ರಮುಖವಾದವು.
ಸಂಶೋಧನೆ, ವಿವಿಧ ಭಾಷಾ ಪಾಂಡಿತ್ಯ, ಆಳವಾದ ಅಧ್ಯಯನದಿಂದ ವಿದ್ವಾಂಸರ ಮೆಚ್ಚುಗೆ ಪಡೆದ ಪ್ರತಿಭಾನ್ವಿತ ಬರಹಗಾರರು ಡಾ. ಪ್ರಧಾನ್ ಗುರುದತ್ತ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಅಕ್ಷಯ ಪಾತ್ರೆ ಫೌಂಡೇಷನ್

ನಗರದ ಬಡಮಕ್ಕಳಿಗೆ ಆಹಾರ ಒದಗಿಸುವ ಇಸ್ಕಾನ್ ದೇವಾಲಯದ ಮಹತ್ವಾಕಾಂಕ್ಷೆಯ ಯೋಜನೆ ಅಕ್ಷಯ ಪಾತ್ರೆ.
ಹಲವಾರು ಯುವಕರು ಈ ಯೋಜನೆಯಡಿ ಶ್ರದ್ಧೆಯಿಂದ ಕೆಲಸ ನಿರ್ವಹಿಸುತ್ತಿದ್ದು ಪ್ರತಿ ದಿನ ಮಧ್ಯಾಹ್ನ ಅವಕಾಶ ವಂಚಿತ ಸರ್ಕಾರಿ ಶಾಲೆಯ ಮತ್ತು ಕಾರ್ಪೊರೇಷನ್ ಶಾಲೆಯ ಬಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಅವರ ಆಶಾದಾಯಕ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಅಕ್ಷಯ ಪಾತ್ರೆ ಯೋಜನೆ ನೆರವಾಗಿದೆ. ಜಾತಿ, ಧರ್ಮ ಮೀರಿ ಮಕ್ಕಳಲ್ಲಿ ದೇವರನ್ನು ಕಾಣುವ ಹಾಗೂ ಆ ಮೂಲಕ ಬಡ ಮಕ್ಕಳಿಗೆ ನೆರವಾಗುವ ಈ ಯೋಜನೆ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ಮತ್ತು ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಮೊದಲು ೧೫೦೦ ಮಕ್ಕಳಿಗೆ ಪ್ರತಿದಿನ ಊಟ ನೀಡುವ ಕಾರ್ಯಕ್ರಮದಿಂದ ಪ್ರಾರಂಭವಾದ ಈ ಯೋಜನೆಯು ಪ್ರತಿ ದಿನ ಸುಮಾರು ೫೦, ೧೦೦ ವಿದ್ಯಾರ್ಥಿಗಳಿಗೆ ಅಕ್ಷಯಪಾತ್ರೆ ಸೇವಾ ಸೌಲಭ್ಯ ಒದಗಿಸುವ ಗುರಿ ಮುಟ್ಟಿದೆ.
ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯ, ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಶಾಲಾ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮುಂತಾದ ಚಟುವಟಿಕೆಗಳನ್ನು ಅಕ್ಷಯ ಫೌಂಡೇಷನ್ ನಡೆಸುತ್ತಿದೆ.
ಇಸ್ಕಾನ್ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಮಧು ಪಂಡಿತ ದಾಸರ ನೇತೃತ್ವದಲ್ಲಿ ಇಸ್ಕಾನ್ ದೇವಾಲಯದ ಭಕ್ತರು ಈ ಅಕ್ಷಯ ಪಾತ್ರೆ ಯೋಜನೆಯ ಕಾರ್ಯಚಟುವಟಿಕೆಗಳಿಗೆ ಕಾರಣರಾಗಿದ್ದಾರೆ. ಪ್ರತಿದಿನ ಮಧ್ಯಾಹ್ನ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ರಾಷ್ಟ್ರದ ಅಕ್ಷರಸ್ಥರ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಂಸ್ಥೆ ಅಕ್ಷಯ ಪಾತ್ರೆ ಫೌಂಡೇಷನ್.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಭಾರತ್ ಕ್ಯಾನ್ಸರ್ ಸಂಸ್ಥೆ

ಮೈಸೂರಿನ ಹೆಬ್ಬಾಳದಲ್ಲಿ ೧೯೯೦ರಲ್ಲಿ ಸ್ಥಾಪನೆಗೊಂಡ ಭಾರತ್ ಕ್ಯಾನ್ಸರ್ ಸಂಸ್ಥೆ ಮತ್ತು ಆಸ್ಪತ್ರೆ ಸದಾಶಾರದಾ ಗಂಥಿ ಮತ್ತು ಸಂಶೋಧನಾ ಸಂಸ್ಥೆಯ ಒಂದು ಅಂಗ. ಇದೊಂದು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು ಮೈಸೂರು ಮತ್ತು ಸುತ್ತಮುತ್ತಲ ಜನರಿಗೆ ಉನ್ನತ ಮಟ್ಟದ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಯ ಅವಕಾಶವನ್ನು ಕಲ್ಪಿಸಿದೆ. ಅನಿವಾಸಿ ಭಾರತೀಯರಾದ ಡಾ|| ಬಿ.ಎಸ್‌. ಅಜಯ್‌ಕುಮಾರ್‌ ಅವರಿಂದ ಸ್ಥಾಪನೆಗೊಂಡಿತು.
ಪ್ರಾರಂಭಿಕ ಹಂತದಲ್ಲೇ ಕ್ಯಾನ್ಸರ್ ರೋಗ ಪತ್ತೆ, ಕ್ಯಾನ್ಸರ್ ಬಗ್ಗೆ ಹಾಗೂ ಅದರ ಕಾರಣಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು, ಕ್ಯಾನ್ಸರ್ ಸಂಶೋಧನೆ ಸಂಸ್ಥೆಯ ಹೆಗ್ಗುರಿಯಾಗಿದೆ. ಅತ್ಯಾಧುನಿಕ ಉಪಕರಣಗಳು ಹಾಗೂ ಚಿಕಿತ್ಸಾ ವಿಧಾನಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಬಡ ರೋಗಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ರೋಗಿಗಳಿಗೆ ಉಚಿತ ಊಟ ಹಾಗೂ ಕೀಮೋಥೆರಪಿ ನೀಡಲಾಗುತ್ತಿದೆ. ಈ ಸಂಸ್ಥೆಯ ವತಿಯಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತಿದೆ.
ಕ್ಯಾನ್ಸರ್ ರೋಗದ ಉಪಶಮನ ಹಾಗೂ ರೋಗ ನಿವಾರಣೆಗಾಗಿ ಶ್ರಮಿಸುತ್ತಿರುವ ಅಸಂಖ್ಯಾತ ರೋಗಿಗಳ ಆಶಾಕಿರಣ ಭಾರತ್ ಕ್ಯಾನ್ಸರ್ ಸಂಸ್ಥೆ.
ದಿನಕ್ಕೆ ೫೦ ರೋಗಿಗಳಿಗೆ ಚಿಕಿತ್ಸೆ ನೀಡಬಲ್ಲ ಸಂಪೂರ್ಣ ಸುಸಜ್ಜಿತ ರೇಡಿಯೇಷನ್ ಥೆರಪಿ ವಿಭಾಗ, ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವಿಭಾಗ, ೧೦೦ ಒಳರೋಗಿಗಳಿಗೆ ಹಾಸಿಗೆ ಸೌಲಭ್ಯ, ರೋಗಿಗಳ ಪುನರ್ವಸತಿ ಸೇವಾ ವಿಭಾಗ, ಮಾನಸಿಕ ಮತ್ತು ಸಾಮಾಜಿಕ ಸಲಹಾ ವಿಭಾಗಗಳ ಮೂಲಕ ವೈದ್ಯಕೀಯ ರಂಗದಲ್ಲಿ ಜನಸೇವೆ ಕೈಗೊಂಡಿರುವ ಅದ್ವಿತೀಯ ಸಂಸ್ಥೆ ಭಾರತ್ ಕ್ಯಾನ್ಸರ್ ಸಂಸ್ಥೆ.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಜೆ. ಚಂದೂಲಾಲ್ ಜೈನ್

ಉತ್ತಮ ಗುಣಮಟ್ಟದ ಚಿತ್ರಗಳನ್ನು ಕನ್ನಡ ಚಿತ್ರರಸಿಕರಿಗೆ ನೀಡುತ್ತ ಬಂದಿರುವ ಕನ್ನಡ ಚಲನಚಿತ್ರ ನಿರ್ಮಾಪಕ ಶ್ರೀ ಚಂದ್ರಲಾಲ್ ಜೈನ್ ಅವರು.
ಶ್ರೀ ಚಂದ್ರಲಾಲ್ ಜೈನ್ ಅವರು ಕನ್ನಡ ಚಲನಚಿತ್ರ ತಯಾರಿಕೆಯಲ್ಲಿ ಆಸಕ್ತಿ ಹೊಂದಿ ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕದ ಸಾಂಸ್ಕೃತಿಕ ಪರಿಸರದಲ್ಲಿ ತೊಡಗಿಸಿಕೊಂಡವರು. ೧೯೭೦ರಲ್ಲಿ ‘ತಾಯಿದೇವರು’ ಚಿತ್ರದೊಂದಿಗೆ ಪ್ರಾರಂಭಿಸಿ ‘ಭೂತಯ್ಯನ ಮಗ ಅಯ್ಯು’, ‘ಹೇಮಾವತಿ’, ‘ತಬ್ಬಲಿಯು ನೀನಾದೆ ಮಗನೆ’ ಮೊದಲಾದ ಅನೇಕ ಶ್ರೇಷ್ಠ ಚಿತ್ರಗಳನ್ನು ನೀಡಿದ ಖ್ಯಾತಿ ಶ್ರೀಯುತರದು.
ಹಿಂದಿ ಚಿತ್ರ ‘ಗೋಧೂಳಿ’ಯೂ ಸೇರಿದಂತೆ ಮೂವತ್ತೈದಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿರುವ ಶ್ರೀ ಚಂದ್ರಲಾಲ್ ಜೈನ್ ಅವರ ಅನೇಕ ಚಲನಚಿತ್ರಗಳಿಗೆ ಕೇಂದ್ರ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿವೆ. ಪ್ರಸಿದ್ಧ ನಿರ್ಮಾಪಕರು ಹಾಗೂ ನಿರ್ದೇಶಕರಾದ ಬಿ.ವಿ. ಕಾರಂತ್, ಗಿರೀಶ್ ಕಾರ್ನಾಡ್, ನಾಗಾಭರಣ, ಕೆ. ಬಾಲಚಂದರ್‌ ಮೊದಲಾದವರೊಂದಿಗೆ ಚಿತ್ರಗಳನ್ನು ಮಾಡಿರುವ ಶ್ರೀಯುತರು ‘ಇದು ಸಾಧ್ಯ’ ಎಂಬ ಪ್ರಾಯೋಗಿಕ ಚಿತ್ರವನ್ನು ನಲವತ್ತೆಂಟು ಗಂಟೆಗಳಲ್ಲಿ ನಿರ್ಮಿಸಿ ದಾಖಲೆ ಮಾಡಿದ್ದಾರೆ. ‘ಗಂಗವ್ವ ಗಂಗಾಮಾಯಿ’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ‘ಉತ್ತಮ ಚಿತ್ರ ಪ್ರಶಸ್ತಿ
ದೊರಕಿದೆ.
ಮೂರು ದಶಕಗಳ ಕಾಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರಾಗಿ, ಕರ್ನಾಟಕ ಚಲನಚಿತ್ರ ಕೈಗಾರಿಕಾ ಸಹಕಾರಿ ಸಂಘ ನಿಯಮಿತದ ಸಂಸ್ಥಾಪಕ ಸದಸ್ಯರಾಗಿ, ಹಲವಾರು ಚಲನಚಿತ್ರ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಕರ್ನಾಟಕ ನಿರ್ದೆಶಕರ ಸಂಘದಿಂದ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ಚಲನಚಿತ್ರ ಅಭಿಮಾನಿಗಳ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕನ್ನಡ ಚಲನಚಿತ್ರ ರಂಗದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಯಶಸ್ವೀ ನಿರ್ಮಾಪಕರು ಶ್ರೀ ಜೆ. ಚಂದ್ರಲಾಲ್ ಜೈನ್ ಅವರು.

Categories
ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಡಾ. ಕೆ.ಆರ್. ತಿಮ್ಮರಾಜು

ತೋಟಗಾರಿಕೆಯ ಅಭಿವೃದ್ಧಿಗಾಗಿ ಮಹತ್ತರ ಸೇವೆ ಸಲ್ಲಿಸಿರುವ ತೋಟಗಾರಿಕಾ ತಜ್ಞ ಡಾ. ಕೆ. ಆರ್. ತಿಮ್ಮರಾಜು ಅವರು.
ತುಮಕೂರು ಜಿಲ್ಲೆಯ ಕಾಲೇನಹಳ್ಳಿ ಗ್ರಾಮದಲ್ಲಿ ೧೯೩೪ ರಲ್ಲಿ ಜನಿಸಿದ ಡಾ. ಕೆ. ಆರ್. ತಿಮ್ಮರಾಜು ಮೈಸೂರು ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ಬಿ.ಎಸ್‌. ಆನರ್ಸ್ ಮತ್ತು ಎಂ.ಎಸ್ಸಿ. ಪದವಿ, ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಸ್ನಾತಕೋತ್ತರ ಶಾಲೆಯಿಂದ ಪಿಹೆಚ್.ಡಿ. ಪದವಿ ಪಡೆದಿದ್ದಾರೆ.
ಬೆಂಗಳೂರಿನ ಸೆಯಿಂಟ್ ಜೋಸೆಫ್ ಕಾಲೇಜು ಮತ್ತು ಯುವರಾಜ ಕಾಲೇಜುಗಳಂಥ ಪ್ರತಿಷ್ಠಿತ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವುದಲ್ಲದೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತೋಟಗಾರಿಕಾ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆಯಿಂದ ನಿವೃತ್ತಿ.
ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿರುವ ಶ್ರೀಯುತರು ಅಮೆರಿಕ ಸಂಯುಕ್ತ ಸಂಸ್ಥಾನ, ಅಮೆರಿಕ, ಫ್ರಾನ್ಸ್, ಜಪಾನ್, ಕೆನ್ಯಾ ದೇಶಗಳಿಗೆ ಭೇಟಿ ನೀಡಿದ್ದಾರೆ. ಅನೇಕ ಅಂತರರಾಷ್ಟ್ರೀಯ ಕಾರ್ಯಾಗಾರ, ವಿಚಾರಸಂಕಿರಣ, ಗೋಷ್ಠಿಗಳಲ್ಲಿ ಭಾಗವಹಿಸಿ ತೋಟಗಾರಿಕೆಯ ಬಗ್ಗೆ ವಿದ್ವತ್‌ಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಶೈಕ್ಷಣಿಕ ಮತ್ತು ವೃತ್ತಿಪರ ಸಾಧನೆಗಾಗಿ ಅಮೆರಿಕನ್ ಬಯೊಗ್ರಾಫಿಕಲ್‌ ಸಂಸ್ಥೆಯಿಂದ ಪ್ರಶಸ್ತಿ ಪಡೆದಿರುವ ಶ್ರೀಯುತರು ತೋಟಗಾರಿಕಾ ವಿಸ್ತರಣ ಕಾರ್ಯಕ್ರಮದಲ್ಲೂ ಗಣನೀಯ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ‘ಮಲ್ಲಿಕಾ’ ಮಾವಿನ ಮಿಶ್ರತಳಿಯನ್ನು ಪರಿಚಯಿಸಿ ಮಾವು ಬೆಳೆಗಾರರಲ್ಲಿ ಜನಪ್ರಿಯಗೊಳಿಸಿದ ಕೀರ್ತಿಗೆ ಪಾತ್ರರು. ಮಾವು, ಹುಣಸೇ ಮತ್ತು ಹಲಸಿನ ಬೆಳೆಗಳನ್ನು ತಮ್ಮ ಸಂಶೋಧನಾ ಕ್ಷೇತ್ರವಾಗಿಸಿಕೊಂಡ ಶ್ರೀಯುತರು ಒಣಭೂಮಿ ತೋಟಗಾರಿಕಾ ಅಭಿವೃದ್ಧಿ ಬಗೆಗೆ ವಿಚಾರಸಂಕಿರಣಗಳನ್ನು ಏರ್ಪಡಿಸಿದ್ದಾರೆ. ರೇಡಿಯೊ, ದೂರದರ್ಶನ ಮೂಲಕ ತೋಟಗಾರಿಕಾ ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ಪ್ರಸಾರ ಮಾಡಿರುವ ಶ್ರೀಯುತರು ತೋಟಗಾರಿಕೆಗೆ ಸಂಬಂಧಿಸಿದ ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ತೋಟಗಾರಿಕೆಯ ಅಭಿವೃದ್ಧಿಗಾಗಿ ಶ್ರಮಿಸಿರುವ, ತೋಟಗಾರಿಕಾ ತಜ್ಞ ಜನಪ್ರಿಯ ಅಧ್ಯಾಪಕ ಮತ್ತು ಸಂಶೋಧಕ ಡಾ. ಕೆ.ಆರ್. ತಿಮ್ಮರಾಜು ಅವರು.