Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ನಿತಿನ್ ಷಾ

ಪುಸ್ತಕ ಪ್ರಕಾಶಕರಾಗಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಹಾಗೂ ಪುಸ್ತಕ ಸಂಸ್ಕೃತಿಯ ಉಳಿವಿಗೆ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ ನಿತಿನ್ ಷಾ ಅವರು.
೧೯೬೧ರಲ್ಲಿ ಶ್ರೀಯುತರ ಜನನ. ಭಾರತದಲ್ಲೇ ಅತಿ ದೊಡ್ಡದಾದ ಪುಸ್ತಕ ಭಂಡಾರ ಸಪ್ನಬುಕ್ ಹೌಸ್ ಸ್ಥಾಪಕರು. ಅಮ್ಮಾ ಬುಕ್‌ನಲ್ಲಿ ದಾಖಲೆ ನಿರ್ಮಿಸಿದ ಖ್ಯಾತಿಗೆ ಪಾತ್ರರು ಶ್ರೀ ನಿತಿನ್ ಷಾ.
ದಕ್ಷ ಷಾ ಚಾರಿಟಬಲ್ ಟ್ರಸ್ಟ್ ಮೂಲಕ ಜಾತಿ ಭೇದವಿಲ್ಲದೆ ಬಡಬಗ್ಗರು, ದೀನದಲಿತರ ಸೇವೆ. ಹಲವು ಶಾಲೆಗಳಿಗೆ ದಾನ-ದತ್ತಿ ನೀಡಿಕೆ, ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿವರೆಗೆ ಉಚಿತ ಶಿಕ್ಷಣ ಕೊಡಿಸುತ್ತಿರುವ ಕೊಡುಗೈ ದಾನಿ ಅವರು. ಗುಜರಾತ್‌ನ ಭೂಕಂಪ ನಿರಾಶ್ರಿತರಿಗೆ ಲಕ್ಷಾಂತರ ರೂಪಾಯಿ ನೆರವು ನೀಡಿ ಮಾನವೀಯತೆ ಮೆರೆದವರು ಶ್ರೀಯುತರು.
೧೯೯೦ರಿಂದ ಕನ್ನಡ ಪುಸ್ತಕಗಳ ಪ್ರಕಾಶನ ಆರಂಭಿಸಿ ಸಾಹಿತ್ಯ, ವಿಮರ್ಶೆ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿರುವುದು ಶ್ರೀಯುತರ ಹಿರಿಮೆ. ಎರಡು ವರ್ಷಗಳಿಂದೀಚೆಗೆ ದಿನಕ್ಕೊಂದು ಪುಸ್ತಕದಂತೆ ಅನೇಕ ಕೃತಿಗಳ ಪ್ರಕಟಣೆಗೆ ಬದ್ಧರಾಗಿರುವರು.
ಶ್ರೀಯುತರು ಅಖಿಲ ಭಾರತ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಸಂಘದ ಕಾರ್ಯನಿರ್ವಾಹಕ ಸಮಿತಿ ಸದಸ್ಯರು, ಜೈನ ಸಮಾಜ ವಿಭಾಗದ ಸದಸ್ಯರು, ಪ್ರೆಸ್‌ಕ್ಲಬ್‌ನ ಕಾರ್ಪೋರೇಟ್ ಸದಸ್ಯರೂ ಆಗಿರುವರು.
ಶ್ರೀಯುತರ ಸೇವೆಯನ್ನು ಪರಿಗಣಿಸಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿಯ ಗೌರವ, ಸುಪ್ರಸಿದ್ಧ ಲೇಖಕರು ಮತ್ತು ಸಂಘ ಸಂಸ್ಥೆಗಳಿಂದ ಸನ್ಮಾನ ಸಂದಿದೆ.
ಸ್ಪರ್ಧೆಗೆ ಎದೆಯೊಡ್ಡಿ ಪುಸ್ತಕ ಸಂಸ್ಕೃತಿಯನ್ನು ಕಾಪಾಡುತ್ತಿರುವ ಹಾಗೂ ಸಾಮಾಜಿಕ ಸೇವೆಗೂ ತಮ್ಮನ್ನು ತೆರೆದುಕೊಂಡ ಅಪರೂಪದ ವ್ಯಕ್ತಿತ್ವ ಶ್ರೀ ನಿತಿನ್ ಷಾ ಅವರದು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಸಿದ್ಧನಗೌಡ ಚೆನಬಸಗೌಡ ಪಾಟೀಲ

ಕರ್ನಾಟಕದ ಗಡಿ ಭಾಗವಾದ ಬೆಳಗಾವಿಯಲ್ಲಿ ಕನ್ನಡಪರ ಹೋರಾಟದ ಮುಂಚೂಣಿ ನಾಯಕರಲ್ಲಿ ಶ್ರೀ ಸಿದ್ಧನಗೌಡ ಪಾಟೀಲ ಅವರು, ಸಹಕಾರ ಗ್ರಾಹಕ ಕ್ಷೇತ್ರದಲ್ಲೂ ಇವರದು ಅನನ್ಯ ಸಾಧನೆ.
ಬೆಳಗಾವಿ ನಗರದ ಒಂದು ನೂರು ವರ್ಷದ ಇತಿಹಾಸದಲ್ಲಿ ಪ್ರಪ್ರಥಮ ಕನ್ನಡ ಮೇಯರ್‌ರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು.ಅನೇಕರ ವಿರೋಧದ ನಡುವೆಯೂ ಜನ ಹಿತವಾದ ಅಭಿವೃದ್ಧಿ ಯೋಜನೆಗಳ ‘ಮಾಸ್ಟರ್‌ಪ್ಲಾನ್’ ತಯಾರಿಸಿ ನಾಗರಿಕ ಸಮಸ್ಯೆಗಳನ್ನು ಪರಿಹರಿಸಿದ ಕೀರ್ತಿ ಇವರದು. ಬೆಳಗಾವಿಯಲ್ಲಿ ಅನೇಕ ಕನ್ನಡ ಶಾಲೆಗಳನ್ನು ಸ್ಥಾಪಿಸಿ ಅವುಗಳ ಬೆಳವಣಿಗೆಗೆ ಯೋಜನೆ ರೂಪಿಸಿ ಜಾರಿಗೆ ತಂದರು. ನಗರದ ಅನೇಕ ಬೀದಿಗಳಿಗೆ ಹಾಗೂ ವರ್ತುಲಗಳಿಗೆ ಕನ್ನಡದ ಹೆಸರುಗಳನ್ನು ನಾಮಕರಣ ಮಾಡಿದರು. ೧೯೫೯-೬೦ರ ಜನಗಣತಿ ಸಮಯದಲ್ಲಿ ಅರ್ಜಿಯಲ್ಲಿ ‘ಕನ್ನಡಿಗ’ ರೆಂದು ನಮೂದಿಸುವಂತೆ ಜನರನ್ನು ಜಾಗೃತಗೊಳಿಸಿದರು. ೧೯೫೨-೫೩ರಲ್ಲಿ ಪಂಡಿತ ಜವಾಹರಲಾಲ ನೆಹರೂ ಅವರಿಗೆ ಕಪ್ಪು ಬಾವುಟ ತೋರಿಸಿ ಆಂಧ್ರಪ್ರದೇಶಕ್ಕೆ ಸೇರಿಸಿದ್ದ ಬಳ್ಳಾರಿಯನ್ನು ಕರ್ನಾಟಕಕ್ಕೆ ಹಿಂಪಡೆಯಲು ಶ್ರಮಿಸಿದವರಲ್ಲಿ ಒಬ್ಬರು.
ಪ್ರತಿಕೂಲ ಸನ್ನಿವೇಶದಲ್ಲಿಯೂ ೧೯೫೪ ರಿಂದ ಬೆಳಗಾವಿಯಲ್ಲಿ ನಾಡಹಬ್ಬ ಆಚರಣೆಯನ್ನು ಪ್ರಾರಂಭಿಸಿದ್ದು ಶ್ರೀಯುತ ಪಾಟೀಲ ಅವರು.
ಸುಮಾರು ೪೦ ವರ್ಷಗಳ ಕಾಲ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಶ್ರೀಯುತರು ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾ ಮಂಡಳದ ನಿರ್ದೇಶಕರಾಗಿ, ಅಧ್ಯಕ್ಷರಾಗಿ ದುಡಿದು ರಾಜ್ಯದಲ್ಲಿಯೇ ಮಾದರಿ ಸಂಸ್ಥೆ ಎಂಬ ಗೌರವ ಪಡೆಯಲು ಕಾರಣರಾದರು. ಅನೇಕ ಪ್ರಶಸ್ತಿ ಗೌರವಗಳನ್ನು ಪಡೆದಿರುವ ಸಿದ್ಧನಗೌಡ ಚನಬಸಗೌಡ ಪಾಟೀಲ ಅವರು ಕರ್ನಾಟಕದ ಹೆಮ್ಮೆಯ ಪುತ್ರರು.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಕೇವಲಚಂದ್ ಜೈನ್

ಆರೋಗ್ಯ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡವರು ಕೇವಲ್ ಚಂದ್ ಜೈನ್ ಅವರು.
ಕಳೆದ ೫೦ ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯಮಿಯಾಗಿ ನೆಲೆಸಿರುವ ಅವರು ಸ್ಥಾಪಿಸಿರುವ ಸಂಸ್ಥೆಗಳು ಹತ್ತು-ಹಲವು. ಶ್ರೀಯುತರು ಕಾಲಿಟ್ಟ ಕ್ಷೇತ್ರದಲ್ಲೆಲ್ಲ ಯಶ ಕಂಡವರು.
ಮಹಾವೀರ ಜೈನ್ ಟ್ರಸ್ಟ್ ಸಂಸ್ಥಾಪಕರಾಗಿ ಅದರ ಮೂಲಕ ಮಹಾವೀರ ಸ್ಮಾರಕ ಆಸ್ಪತ್ರೆ ನಿರ್ವಹಣೆ, ಭಗವಾನ್ ಮಹಾವೀರ್ ಜೈನ್ ನೇತ್ರಾಲಯದ ಮೂಲಕ ದೀನರಿಗೆ ಚಿಕಿತ್ಸೆ, ಜೈನ್ ವಿದ್ಯಾಲಯ ಮತ್ತು ಕಾಲೇಜು ಮೂಲಕ ಶಿಕ್ಷಣ ನೀಡುತ್ತಿರುವರು.
ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಕೇವಲ್ ಚಂದ್ ಅವರು ಹಲವು ಲೇಖನಗಳನ್ನು ಬರೆದಿರುವರು. ‘ಸರ್ವ ಧರ್ಮ’ ಕೃತಿಯ ಮೂಲಕ ದೇಶಕ್ಕೆ ‘ಜಗತ್ ಮೇ ಧರ್ಮ ಸರ್ವೋಪಾಹಾರಿ’, ‘ಜೀವನ ಮತ್ತು ಧರ್ಮ’ ಹಾಗೂ ‘ಜೀವನ ದರ್ಪಣ’ ತತ್ವಸಂದೇಶ ನೀಡಿದ ಹಿರಿಮೆ ಅವರದು.
ಶ್ರೀಯುತರು ಸಮಾಜಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ‘ಸಮಾಜ ಭೂಷಣ’ ಮತ್ತು ‘ಜ್ಞಾನ ರತ್ನ’ ಪ್ರಶಸ್ತಿಗಳನ್ನು
ಪಡೆದಿರುವರು.
ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ದೀನರ ಬಗ್ಗೆ ಅಪಾರ ಕಾಳಜಿ ಹೊಂದಿ ಅವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಶ್ರೀ ಕೇವಲ್ ಚಂದ್ ಜೈನ್.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಎಸ್.ಸಿ. ಬರ್ಮನ್

ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ರಾಷ್ಟ್ರಪತಿಗಳ ಪದಕ ಗೌರವಕ್ಕೆ ಪಾತ್ರರಾದ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದವರು ಶರತ್ ಚಂದ್ರ ಬರ್ಮನ್ ಅವರು.
೧೯೩೯ರ ಜೂನ್ ೫ ರಂದು ಜನನ, ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಮಾರ್ಡನ್ ಹಿಸ್ಟರಿ ಕೋರ್ಸ್‌ನಲ್ಲಿ ಪದವಿ.
೧೯೬೪ನೇ ತಂಡದ ಐಪಿಎಸ್ ಅಧಿಕಾರಿ. ಆರಂಭಿಕ ತರಬೇತಿ ನಂತರ ಹುಬ್ಬಳ್ಳಿ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಆರಂಭ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ದಕ್ಷ ಆಡಳಿತ ನೀಡಿದ ಹೆಗ್ಗಳಿಕೆ ಶ್ರೀಯುತರದು.
ಬೆಂಗಳೂರಿನಲ್ಲಿ ನಡೆದ ಭುವನ ಸುಂದರಿ ಸ್ಪರ್ಧೆಯ ಪರ ವಿರೋಧದ ಹೋರಾಟ ಉತ್ತುಂಗ ತಲುಪಿದ ಅವಧಿಯಲ್ಲಿ ಬರ್ಮನ್ ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದರು. ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದು ಅವರ ಕಾರ್ಯ ದಕ್ಷತೆಗೆ ನಿದರ್ಶನ.
ಸಿಐಡಿ ವಿಭಾಗದ ಡಿಜಿಪಿ, ಬೆಂಗಳೂರು ನಗರ ಕಮೀಷನರ್, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ, ಐಜಿ (ಕಾರಾಗೃಹ), ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು, ಹೀಗೆ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಕೆ. ಎಡಿಜಿಪಿಯಾಗಿ ನಕ್ಸಲೀಯ ಚಟುವಟಿಕೆ ನಿಯಂತ್ರಣ ಮತ್ತು ಹುಬ್ಬಳ್ಳಿ-ಧಾರವಾಡದ ಈದ್ಗಾ ಮೈದಾನದ ವಿವಾದ ಸಮಸ್ಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಹಿರಿಮೆಗೆ ಪಾತ್ರರಾದವರು ನಿವೃತ್ತ ಪೊಲೀಸ್‌ ಮಹಾನಿರ್ದೇಶಕರು

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಪಿ. ವಲಿ

ರಸ್ತೆ ಅಪಘಾತಗಳಲ್ಲಿ ಮಡಿದ, ಕಾಲುವೆ, ಬಾವಿಗಳಲ್ಲಿ ತೇಲುವ ಅನಾಥ ಶವಗಳಿಗೆ ಸಂಸ್ಕಾರ ಮಾಡುವ ಮೂಲಕ ನಿಸ್ವಾರ್ಥ ಸೇವೆಗೆ ಹೆಸರಾದವರು ಪಿ. ವಲಿ ಅವರು.
ಮೂಲತಃ ಬಳ್ಳಾರಿಯವರಾದ ವಲಿ ಹುಟ್ಟಿನಿಂದ ಬಡವರು. ಆದರೆ ಮನಸ್ಸು ಮತ್ತು ಸೇವಾ ಕೈಂಕರ್ಯ ಯಾವ ಸಿರಿವಂತಿಕೆಯನ್ನು ನಾಚಿಸುವಂಥದ್ದು. ಶ್ರೀಯುತರು ಬಳ್ಳಾರಿ, ಸಂಡೂರು ಮತ್ತು ಆಂಧ್ರ ಗಡಿಭಾಗದ ಅನಾಥ ಶವಗಳ ಆಪ್ತಬಂಧು ಎನಿಸಿದ್ದಾರೆ.
ವಾರಸುದಾರರಿಲ್ಲದ ಶವಗಳ ಸಂಸ್ಕಾರಕ್ಕೆ ವಲಿಯೇ ವಾರಸುದಾರರು. ಜಾತಿ, ಕುಲ, ಮತ, ವರ್ಗ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಅತ್ಯಂತ ಶ್ರದ್ಧೆಯಿಂದ, ನಿಷ್ಠೆಯಿಂದ ಸಂಸ್ಕಾರ ಮಾಡುವ ಶ್ರೀಯುತರ ಸಾಮಾಜಿಕ ಸೇವೆ ಸ್ತುತ್ಯಾರ್ಹ.
ಆಟೋ ಚಾಲಕ ವೃತ್ತಿಯ ವಲಿ ಅವರಿಗೆ ಅದರಿಂದ ಸಿಗುವ ಸಂಪಾದನೆಯಿಂದಲೇ ಜೀವನ ದೂಗಿಸಬೇಕಾದ ಅನಿವಾರ್ಯತೆ. ಪ್ರತಿಫಲಾಪೇಕ್ಷೆ ಇಲ್ಲದ ಶವಸಂಸ್ಕಾರದ ಸೇವೆಗೆ ಪತ್ರ ಪತ್ನಿ ಸಹಕಾರ ಉಂಟು.
‘ಮಾನವ ಜನ್ಮ ದೊಡ್ಡದು. ನಾವು ಇನ್ನೊಬ್ಬರಿಗೆ ಒಳ್ಳೆಯದು ಮಾಡಿದರೆ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ’ ಎಂದು ನಂಬಿದ ಅವರ ಈ ಸೇವಾ ಕೈಂಕರ್ಯಕ್ಕೆ ಸಂಘ-ಸಂಸ್ಥೆಗಳಿಂದ ಸಂದಿರುವ ಗೌರವ ಹತ್ತಾರು. ಇಂಥ ನಿಸ್ವಾರ್ಥ ಸಮಾಜ ಸೇವಕನನ್ನು ದಸರಾ ನವರಾತ್ರಿ ರಂಗೋತ್ಸವ ೨೦೦೮ರ ಸಂದರ್ಭದಲ್ಲಿ ರಂಗಾಯಣ ಸಂಸ್ಥೆ ಸನ್ಮಾನಿಸಿ ಗೌರವಿಸಿದೆ. ದೀನರ ವಾರಸುದಾರ, ಆಪ್ತಬಂಧು ಮತ್ತು ಸಮಾಜ ಸೇವಕ ಶ್ರೀ ಪಿ.ವಲಿ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಎಸ್.ಎಸ್. ಪಾಟೀಲ

ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ನೆರವಾಗುವ ಅನೇಕ ಉದ್ದಿಮೆಗಳನ್ನು ಸ್ಥಾಪಿಸಿ ಸುಮಾರು ಹತ್ತು ಸಾವಿರ ಮಂದಿಗೆ ಉದ್ಯೋಗ ನೀಡಿರುವ ನಮ್ಮ ನಾಡಿನ ಹೆಮ್ಮೆಯ ಉದ್ಯಮಿ ಶ್ರೀ ಎಸ್.ಎಸ್. ಪಾಟೀಲ ಅವರು. ಇವರ ನೇತೃತ್ವದ ‘ಪಾಟೀಲ ಗ್ರೂಪ್ ಆಫ್ ಇಂಡಸ್ಟ್ರೀಸ್’ ಕಂಪನಿ ಗುಲ್ಬರ್ಗದಲ್ಲಿ ‘ದಾಲ್’ (ಬೇಳೆ) ಕಾರ್ಖಾನೆ, ಘಟಪ್ರಭಾ, ಬೆಳಗಾವಿಯಲ್ಲಿ ಆರ್.ಸಿ.ಸಿ. ಹಾಗೂ ಪಿ.ಎಸ್.ಸಿ. ಕಂಬ ಉತ್ಪಾದನಾ ಕಾರ್ಖಾನೆ, ಮಹಾರಾಷ್ಟ್ರದ ನಾಗಪುರದಲ್ಲಿ ಕಾಂಕ್ರೀಟ್ ಸ್ಲಿಪರ್‌ಗಳ ಉತ್ಪಾದನಾ ಕಾರ್ಖಾನೆ, ಮಧ್ಯಪ್ರದೇಶದ ಬಿಲಾಸಾಪುರದಲ್ಲಿ, ಗೋವಾದ ಮಡಗಾಂವ್‌ನಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ಪಶ್ಚಿಮ ಬಂಗಾಲದ ಅನಾರದಲ್ಲಿ, ಪಂಜಾಬ್‌ನ ಚಂಡೀಗಡ್‌ನಲ್ಲಿ ಭಾರತೀಯ ರೈಲ್ವೆಗಾಗಿ ಸ್ತ್ರೀಪರ್ಸ್ ಮತ್ತು ಸಿಮೆಂಟ್ ಕಂಬ ಉತ್ಪಾದನಾ ಕಾರ್ಖಾನೆಗಳನ್ನು ನಡೆಸುತ್ತಿದೆ ಬೆಳಗಾವಿ ಹಾಗೂ ಜೀವರ್ಗಿಯಲ್ಲಿ ಕರ್ನಾಟಕ ಸರ್ಕಾರವು ನಡೆಸುತ್ತಿರುವ ಫುಡ್ ಪಾರ್ಕ್‌ಗಳಲ್ಲಿ ಸಹಭಾಗಿತ್ವ ಪಡೆದಿದೆ. ಜರ್ಮನಿ ದೇಶದ ವೋಸ್ತೋ ಕಂಪನಿಯ ಸಹಯೋಗದೊಂದಿಗೆ ಹೈದ್ರಾಬಾದನಲ್ಲಿ ರೈಲ್ವೆ ಉಪಕರಣಗಳನ್ನು ತಯಾರಿಸುವ ಕಾರ್ಖಾನೆ ಸ್ಥಾಪನೆ ಮಾಡಿದ್ದಾರೆ.
ಹೈದ್ರಾಬಾದ್‌ನ ಮೆಡಚಲ್‌ನಲ್ಲಿ, ದಕ್ಷಿಣ ಕೊರಿಯಾದ ಬೊಯಿಲ್ ಮೆಡಿಕಾ ಕಂಪನಿಯ ಸಹಭಾಗಿತ್ವದಲ್ಲಿ ಸಂಗಮ್ ಹೆಲ್ತ್‌ಕೇರ್ ಸಂಸ್ಥೆಯನ್ನು ಸ್ಥಾಪಿಸಿ ವೈದ್ಯಕೀಯ ಉಪಕರಣಗಳನ್ನು ತಯಾರಿಸಲಾಗುತ್ತಿದೆ. ಮೂರು ಸಾವಿರ ಮಂದಿಗೆ ಉದ್ಯೋಗ ನೀಡಿರುವ ಈ ಸಂಸ್ಥೆ ಹೊರದೇಶಗಳಿಗೆ ಉಪಕರಣಗಳನ್ನು ರಫ್ತು ಮಾಡುತ್ತಿದೆ.
ಅನೇಕ ಪ್ರಮುಖ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಶ್ರೀ ಪಾಟೀಲರು ಜಗತ್ತಿನ ಪ್ರಮುಖ ದೇಶಗಳ ಪ್ರವಾಸವನ್ನು ಮಾಡಿ ಅಪಾರ ಅನುಭವ ಗಳಿಸಿದ್ದಾರೆ.
ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಧಾರ್ಮಿಕ ಸಂಸ್ಥೆಗಳಿಗೆ, ಮಠಮಾನ್ಯಗಳಿಗೆ ಗಣನೀಯ ಪ್ರಮಾಣದ ವಂತಿಗೆಯನ್ನು ನೀಡಿ ಸಮಾಜಕ್ಕೆ ನೆರವಾಗುತ್ತಿದ್ದಾರೆ ಶ್ರೀ ಎಸ್.ಎಸ್. ಪಾಟೀಲ್‌.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ/ಸಂಕೀರ್ಣ

ಶ್ರೀ ಎನ್.ಆರ್.ನಾರಾಯಣ ರಾವ್

ಹೋಟೆಲ್ ಉದ್ಯಮದಲ್ಲಿ ಯಶಸ್ಸಿನ ಮೈಲಿಗಲ್ಲು ಸ್ಥಾಪಿಸಿದ ನೇರಂಬಳ್ಳಿ ರಾಘವೇಂದ್ರ ನಾರಾಯಣ ರಾವ್ ಅವರ ಗೆಲುವಿನ ಗುಟ್ಟು ಇರುವುದು ಅವರ ಸರಳ ವ್ಯಕ್ತಿತ್ವ ಮತ್ತು ಉತ್ತಮ ಸಂಘಟನಾ ಕೌಶಲದಲ್ಲಿ.
ಕೋಟೇಶ್ವರದ ನೇರಂಬಳ್ಳಿಯಲ್ಲಿ ೧೯೨೭ರಲ್ಲಿ ಜನನ, ಮೆಟ್ರಿಕ್‌ವರೆಗೆ ವಿದ್ಯಾಭ್ಯಾಸ. ತಮ್ಮ ತಂದೆ ಎನ್.ರಾಘವೇಂದ್ರ ಆಚಾರ್ಯರು ಕೆ.ಆರ್.ನಗರದಲ್ಲಿ ನಡೆಸುತ್ತಿದ್ದ ಹೋಟೆಲು ಉದ್ಯಮಕ್ಕೆ ೧೯ನೇ ವಯಸ್ಸಿನಲ್ಲಿಯೇ ಪಾದಾರ್ಪಣೆ.
೧೯೫೯ರಿಂದ ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮದ ವಿಸ್ತರಣೆ. ಕಾಲಿಟ್ಟ ಕಡೆಯಲ್ಲೆಲ್ಲ ಯಶಸ್ಸು, ಕೀರ್ತಿ, ಐಶ್ವರ್ಯ ಪ್ರಾಪ್ತಿ.
ಸಮಾಜಮುಖಿ ವ್ಯಕ್ತಿತ್ವದ ನಾರಾಯಣ ರಾವ್ ಅವರು ತಮ್ಮ ೮೨ನೇ ವಯಸ್ಸಿನಲ್ಲೂ ಸಮಾಜಸೇವೆಯಲ್ಲಿ
ಲವಲವಿಕೆಯಿಂದಿರುವರು.
ಕೋಟೇಶ್ವರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಯಲ್ಲಿ ಅವರದು ಪ್ರಮುಖ ಪಾತ್ರ. ಗುರು ಮಠ ಸೋದೆಯಲ್ಲಿ ಗುರುಕುಲ ಪದ್ಧತಿಗೆ ನಾಂದಿ. ಮಠದ ಜೀರ್ಣೋದ್ಧಾರಕ್ಕೆ ಸಹಕಾರ. ಬದರಿ, ತಿರುಪತಿ, ಉಡುಪಿ ಮೊದಲಾದ ಯಾತ್ರಾ ಸ್ಥಳಗಳಲ್ಲಿ ಯಾತ್ರಾರ್ಥಿಗಳ ಕೊಠಡಿ ನಿರ್ಮಾಣಕ್ಕೆ ಧನಸಹಾಯ, ಎಲ್ಲವರ್ಗದ ದುರ್ಬಲರಿಗೆ ಹಣಕಾಸು ನೆರವು. ಅನೇಕಾರು ಸಾಹಿತಿಗಳಿಗೆ ಅವರ ಕೃತಿಗಳನ್ನು ಹೊರತರುವಲ್ಲಿ ನಾರಾಯಣ ರಾವ್ ಅವರು ನೀಡಿರುವ ಪ್ರೋತ್ಸಾಹ ಸ್ತುತ್ಯಾರ್ಹ.
ಕನ್ನಡ ನಾಡು-ನುಡಿ, ನೆಲ-ಜಲ, ಕಲೆ-ಸಂಸ್ಕೃತಿ ಕ್ಷೇತ್ರಗಳ ಸೇವೆಯಲ್ಲೂ ಮುಂಚೂಣಿಯಲ್ಲಿರುವವರು ಶ್ರೀ ಎನ್.ಆರ್.ನಾರಾಯಣ ರಾವ್ ಅವರು.