Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಹಕಾರ

ಡಾ. ಸಿ.ಎನ್. ಮಂಚೇಗೌಡ

ಸಹಕಾರ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದ ಮಹನೀಯರು ಡಾ. ಸಿ.ಎನ್. ಮಂಚೇಗೌಡ. ಅಪಾರ ತಜ್ಞತೆ, ದಕ್ಷತೆ, ವೃತ್ತಿಪರತೆಯಿಂದ ಸಾಧನೆಗೈದ ಕರ್ನಾಟಕದ ಕುರಿಯನ್.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಪುಟ್ಟಹಳ್ಳಿಯಲ್ಲಿ ಜನಿಸಿದ ಮಂಚೇಗೌಡರು ಬಿಎಸ್ಸಿ ಪದವೀಧರರು, ಡೈರಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ಸಂಶೋಧಕರು. ಯಲಹಂಕ ಹಾಗೂ ಬೆಂಗಳೂರು ಡೈರಿಯ ಕಾರ್ಯನಿರ್ವಾಹಕರಾಗಿ ಬರೋಬ್ಬರಿ ನಾಲ್ಕು ದಶಕಗಳ ಕಾಲ ನಿಸ್ಪೃಹ ಸೇವೆ. ನಂದಿನಿ ಬ್ರಾಂಡ್ನ ರೂವಾರಿ. ಮುದ್ರಾ ಎಮ್ಮೆ ತಳಿಯಿಂದ ಬೆಂಗಳೂರು ಡೈರಿ ಉತ್ಪಾದನೆ ಹೆಚ್ಚಿಸಿದ ಹೆಗ್ಗಳಿಕೆ. ವಿದೇಶಗಳಿಂದ ವಿಶೇಷ ಪಶುತಳಿಗಳನ್ನು ತಂದು ಕ್ಷೀರಕ್ರಾಂತಿಗೆ ಕಾರಣೀಕರ್ತರಾದ ಅಗ್ಗಳಿಕೆ. ಬೆಂಗಳೂರು ಡೈರಿಗೆ ಅತ್ಯುತ್ತಮ ಡೈರಿ ರಾಷ್ಟ್ರಪತಿ ಪ್ರಶಸ್ತಿ ತಂದುಕೊಟ್ಟ ಸಾರ್ಥಕತೆ, ರಾಷ್ಟ್ರಪತಿಗಳ ಮೆರಿಟ್ ಅವಾರ್ಡ್, ಗ್ಲೋಬಲ್ ಉದ್ಯೋಗ ಅವಾರ್ಡ್, ಕೆಂಪೇಗೌಡ ಪ್ರಶಸ್ತಿ, ತುಮಕೂರು ವಿವಿ ಗೌರವ ಡಾಕ್ಟರೇಟ್ಗೆ ಭಾಜನರಾದ ಮಂಚೇಗೌಡರು ಭಾರತ ಸರ್ಕಾರದ ಸಲಹಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ ಹೆಮ್ಮೆಯ ಕನ್ನಡಿಗರು.

Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಹಕಾರ

ರಮೇಶ್ ವೈದ್ಯ

ರಾಜ್ಯದ ಕೃಷಿ ಸಹಕಾರ ಕ್ಷೇತ್ರದಲ್ಲಿ ಅನನ್ಯ ಸೇವೆಗೈದ ರಮೇಶ್ ವೈದ್ಯ ಪ್ರಮುಖ ಸಾಧಕರು. ಹಳ್ಳಿಗಾಡಿನ ಕೃಷಿ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ಪರಿಶ್ರಮಿಸಿದ ಸಹಕಾರ ಧುರೀಣರು.
ಕೊಪ್ಪಳ ಜಿಲ್ಲೆಯ ಹಿಟ್ನಾಳದವರಾದ ರಮೇಶ್ ವೈದ್ಯ ಕೃಷಿ ಮನೆತನದ ಕುಡಿ. ೧೯೫೦ರ ಜುಲೈ ೮ರಂದು ಜನಿಸಿದ ರಮೇಶ್ ವಿಜ್ಞಾನ ಪದವೀಧರರು, ವಿದ್ಯಾರ್ಥಿ ದೆಸೆಯಿಂದಲೂ ಕೃಷಿ ಚಟುವಟಿಕೆಗಳಲ್ಲಿ ಆಸಕ್ತರು. ಬೇಸಾಯದ ಒಳಸುಳಿ-ನೋವು ನಲಿವುಗಳ ಅರಿತಾಕ್ಷಣ ಸಹಕಾರ ಕ್ಷೇತ್ರದಲ್ಲಿ ಹೆಚ್ಚು ತಲ್ಲೀನ, ರಾಜ್ಯದ ಉದ್ದಗಲಕ್ಕೂ ಹಾಗೂ ಹೊರದೇಶಗಳಿಗೂ ಗ್ರಾಮೀಣ ಸಹಕಾರ ಸಂಸ್ಥೆಗಳ ಶ್ರೇಯೋಭಿವೃದ್ಧಿಗೆ ಸಂಚಾರ-ಪರಿಶ್ರಮ. ಕೊಪ್ಪಳ ಜಿಲ್ಲಾ ಕೃಷಿ ಮಾರಾಟ ಸೊಸೈಟಿಯ ಕಾರ್ಯಾಕಾರಿ ಮಂಡಳಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ರಾಯಚೂರು ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ ಮತ್ತಿತರ ಸಂಸ್ಥೆಗಳಲ್ಲಿ ಸಾರ್ಥಕ ಸೇವೆ. ಸದ್ಯ ಕರ್ನಾಟಕ ರಾಜ್ಯ ಹೈನುಗಾರಿಕಾ ಒಕ್ಕೂಟದ ನಿರ್ದೇಶಕರು ಹಾಗೂ ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಮೇಶ್ ವೈದ್ಯ ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಮುಂತಾದ ಪ್ರಶಸ್ತಿಗಳಿಂದ ಭೂಷಿತರು.