Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಮಹದೇವಪ್ಪ ಕಡೆಚೂರು

ಸ್ವಾತಂತ್ರ್ಯ ಚಳವಳಯಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಹೋರಾಟದ ಹಾದಿಯನ್ನು ಕಂಡ ಹಿರಿಯ ಸ್ವಾತಂತ್ರ ಹೋರಾಟಗಾರರಾದ ಶ್ರೀ ಮಹದೇವಪ್ಪ ಕಡೆಚೂರು ಅವರು ಯಾದಗಿರಿ ಜಿಲ್ಲೆಯ ಸುರಪುರದವರು. ಗಣಿತ ಹಾಗೂ ಹಿಂದಿ ಉಪನ್ಯಾಸಕರಾಗಿ ಕೆಲಸ ಮಾಡಿದ ಇವರು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡರು. ಸ್ವಾತಂತ್ರಾ ನಂತರವೂ ಹೈದರಾಬಾದ್ ನಿಜಾಮನ ವಶದಲ್ಲಿದ್ದ ಹೈದರಾಬಾದ್ ಅನ್ನು ಉಳಿಸಿಕೊಳ್ಳಲು ಹೈದರಾಬಾದ್ ಮುಕ್ತಿ ಹೋರಾಟ ಮಾಡಿ, ಹೈದರಾಬಾದ್ ಅನ್ನು ಸ್ವತಂತ್ರಭಾರತದಲ್ಲಿ ವಿಲೀನಗೊಳಿಸುವಲ್ಲಿಯಶಸ್ವಿಯಾದವರು. ೭೫ ವರ್ಷಗಳ ಕಾಲ ಸಮಾಜದ ಅಭ್ಯುದಯಕ್ಕಾಗಿ ದುಡಿದ ಅವರು ಈಗ ೯೦ ರ ಹರೆಯದಲ್ಲಿದ್ದಾರೆ.

Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಬಸವರಾಜ ಬಿಸರಳ್ಳಿ

ಕೊಪ್ಪಳ ಜಿಲ್ಲೆಯವರಾದ ಬಸವರಾಜ ಬಿಸರಳ್ಳಿ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರು. ಖಾದಿ ಪ್ರಚಾರ ನಿರತ
ಸಮಾಜಸೇವಕರು ಸಹ.
೧೯೨೭ರಲ್ಲಿ ಜನಿಸಿದ ಬಸವರಾಜ ಅವರು ಎಳವೆಯಲ್ಲೇ ಗಾಂಧಿ ಪ್ರಭಾವಕ್ಕೊಳಗಾದವರು. ಖಾದಿ ಬಟ್ಟೆ ಧರಿಸಿ ಗೆಳೆಯರೊಂದಿಗೆ ಪ್ರಭಾತಪೇರಿ ನಡೆಸಿ ಬಾಲ್ಯದಲ್ಲೇ ಬಂಧನಕ್ಕೊಳಗಾದವರು. ೧೯೪೭ರ ಆಗಸ್ಟ್ ೧೪ರ ಮಧ್ಯರಾತ್ರಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿ ೧೫ ದಿನ ಜೈಲುವಾಸ ಅನುಭವಿಸಿದ ದೇಶಪ್ರೇಮಿ. ೧೯೪೮ರಲ್ಲಿ ಬಿಸರಳ್ಳಿಯಲ್ಲಿ ಗಾಂಧೀಜಿಯವರ ಚಿತಾಭಸ್ಮವಿರಿಸಿ ಮೂರ್ತಿ ಸ್ಥಾಪಿಸಿದ ಹಿರಿಮೆ. ೧೦೦ ಚರಕ ತರಿಸಿ ಗಾಂಧೀಜಿ ಹೆಸರಲ್ಲಿ ಸಂಘ ಸ್ಥಾಪಿಸಿ ೧೦೦ ಮಂದಿ ಹೆಣ್ಣುಮಕ್ಕಳಿಗೆ ನೂಲು ತಯಾರಿಸುವ ತರಬೇತಿ ನೀಡಿದವರು. ಮೂವರು ದಲಿತ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಮುನ್ನೆಲೆಗೆ ತಂದವರು. ಗ್ರಾಮದಲ್ಲಿ ಮದ್ಯಪಾನ ಅಂಗಡಿ ಮುಚ್ಚಿಸಿ ಹರಿಜನರಿಗೆ ಹೊಟೇಲ್ ಪ್ರವೇಶ ಕಲ್ಪಿಸಿದವರು. ಸಾಹಿತ್ಯದಲ್ಲೂ ಕೃಷಿ ಮಾಡಿರುವ ಇವರು ೧೬ ಪುಸ್ತಕಗಳ ಲೇಖಕರು. ಇನ್ನು ೧೦ ಪುಸ್ತಕಗಳು ಪ್ರಕಟಣೆಯ ಹಂತದಲ್ಲಿದ್ದು ಇಳಿವಯಸ್ಸಿನಲ್ಲೂ ಬತ್ತದ ಕ್ರಿಯಾಶೀಲತೆಗೆ ಸಾಕ್ಷಿ.

Categories
ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಮಹಾದೇವ ಶಿವಬಸಪ್ಪ ಪಟ್ಟಣ

ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಸ್ವಾತಂತ್ರ್ಯ ಹೋರಾಟಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾದೇವ ಶಿವಬಸಪ್ಪ ಪಟ್ಟಣ ಅವರು ಬೆಳಗಾವಿ ರಾಮದುರ್ಗದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ಮೂಲಕ ಬ್ರಿಟಿಷ್ ಸರ್ಕಾರಕ್ಕೆ ಸಿಂಹಸ್ವಪ್ನರಾಗಿದ್ದರು. ರಾಮದುರ್ಗದಲ್ಲಿ ಅರಮನೆಯನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ದೊಡ್ಡ ದುರಂತವೇ ನಡೆದುಹೋದಾಗ ಮಹಾದೇವಪ್ಪನವರಿಗೆ ಗಲ್ಲುಶಿಕ್ಷೆ ವಿಧಿಸಲಾಯಿತಾದರೂ ಅವರನ್ನು ಪೋಲಿಸರು ಬಂಧಿಸಲಾಗಲಿಲ್ಲ. ಭೂಗತರಾಗಿದ್ದುಕೊಂಡೇ ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡ ಮಹಾದೇವಪ್ಪ ಎಸ್.ಪಟ್ಟಣ ಅವರು ಸಾರ್ವಜನಿಕ ಕ್ಷೇತ್ರದಲ್ಲಿಯೂ ದೊಡ್ಡ ಹೆಸರು ಮಾಡಿದವರು. ಶಾಸಕರಾಗಿಯೂ ಆಯ್ಕೆಯಾದ ಡಾ|| ಪಟ್ಟಣ ಅವರು ಜನಸಾಮಾನ್ಯರ ನಾಯಕರಾಗಿ ನೂರ ಆರು ವಸಂತಗಳನ್ನು ಬಾಳಿದ್ದಾರೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವ ಪುರಸ್ಕಾರಗಳು ಮಹಾದೇವಪ್ಪನವರಿಗೆ

Categories
ರಾಜ್ಯೋತ್ಸವ 2015 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಫಕೀರಡ್ಡೆಪ್ಪ ಭೀ. ಗದ್ದಿಕೇರಿ

ಸ್ವಾತಂತ್ರ್ಯ ಚಳುವಳಿ ಹಾಗೂ ಹೈದರಾಬಾದ್ ವಿಮೋಚನಾ ಚಳುವಳಿಯಲ್ಲಿ ಪಾಲುಗೊಂಡು ಗಾಂಧೀ ಪ್ರಣೀತ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ತಮ್ಮ ಗ್ರಾಮದಲ್ಲೇ ಖಾದಿ ಉದ್ಯೋಗ ಕೇಂದ್ರ ಸ್ಥಾಪಿಸಿ ಯುವಕರಿಗೆ ದುಡಿಯಲು ಅವಕಾಶ ಒದಗಿಸಿದವರು ಕೃಷಿಕ ಗದ್ದಿಕೇರಿ ಅವರು
ಅಕ್ಷರ ವಂಚಿತ ಬಡಮಕ್ಕಳ ವಿದ್ಯಾರ್ಜನೆಗಾಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದೆ ಅಲ್ಲದೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ಬಡವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಪ್ರವೇಶ ದೊರಕಿಸಿಕೊಟ್ಟು ಅವರ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟವರು ಫಕೀರಡ್ಡೆಪ್ಪ ಭೀಮರಡ್ಡೆಪ್ಪ ಗದ್ದಿಕೇರಿ.
ತಮ್ಮ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ಹಣವನ್ನು ಗದ್ದಿಕೇರಿ ಅವರು ಬಡಮಕ್ಕಳ ವಿದ್ಯಾಭ್ಯಾಸ ಹಾಗೂ ದಾಸೋಹಕ್ಕಾಗಿ ನೀಡಿದೇ ಅಲ್ಲದೆ ಸ್ವಾವಲಂಬನೆಯ ಉದ್ಯೋಗ ನಡೆಸಿಕೊಳ್ಳಲು ಆರ್ಥಿಕ ನೆರವು ನೀಡುವಲ್ಲಿ ಸಹಾಯ ಮಾಡಿರುವುದು ಅನುಕರಣೀಯ.

Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಹಮ್ಮಣ್ಣ ಮಾಣಿ ನಾಯಕ

ಕರ್ನಾಟಕದ ಬಾರ್ಡೋಲಿ ಎಂದು ಖ್ಯಾತಿ ಪಡೆದ ಉತ್ತರ ಕನ್ನಡಜಿಲ್ಲೆ ಅಂಕೋಲಾ ತಾಲ್ಲೂಕಿನ ಶೆಟಗೇರಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ೯೨ ವರ್ಷ ಹರೆಯದ ಹಿರಿಯ ಗಾಂಧೀವಾದಿ ಶ್ರೀ ಹಮ್ಮಣ್ಣ ಮಾಣಿ ನಾಯಕ ಅವರು. ತಮ್ಮ ೧೪ನೆ ವಯಸ್ಸಿನಲ್ಲಿಯೆ, ಭಾರತದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಶ್ರೀ ಹಮ್ಮಣ್ಣ ನಾಯಕ ಅವರು ಉಪ್ಪಿನ ಸತ್ಯಾಗ್ರಹ, ಕಾಯಿದೆ ಭಂಗ ಚಳುವಳಿ, ಕರನಿರಾಕರಣೆ ಸಂಗ್ರಾಮ, ಚಲೇಜಾವ್‌ ಚಳುವಳಿ ಮೊದಲಾದ ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನೇಕ ಸಾರಿ ಜೈಲುವಾಸ ಅನುಭವಿಸಿದವರು.
೧೯೩೨ ರಲ್ಲಿ ಮಹಾತ್ಮಾ ಗಾಂಧೀಜಿಯವರು ಅಂಕೋಲೆಗೆ ಬಂದಾಗ ಸ್ವಯಂ ಸೇವಕರಾಗಿ ಅವರ ಮೆಚ್ಚುಗೆ ಪಡೆದವರು. ಕೇಂದ್ರ ಸರ್ಕಾರದಿಂದ ತಾಮ್ರಪಟ ಪ್ರಶಸ್ತಿ ಪಡೆದ ಕೆಲವೇ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶ್ರೀ ಹಮ್ಮಣ್ಣ ನಾಯಕರೂ ಒಬ್ಬರು.
ಸರ್ಕಾರ ಕೊಡುತ್ತಿರುವ ಸ್ವಾತಂತ್ರ್ಯಯೋಧರ ಗೌರವಧನದಲ್ಲಿ ಬಹುಭಾಗವನ್ನು ಬಡ ಮಕ್ಕಳ ಶಿಕ್ಷಣಕ್ಕೆ, ಬಡರೋಗಿಗಳ ಚಿಕಿತ್ಸೆಗೆ, ಹರಿಜನರ ಶವಸಂಸ್ಕಾರಕ್ಕೆ ನೀಡುತ್ತಿರುವ ಕರುಣಾಳು ಇವರು.
ಈ ತಮ್ಮ ಇಳಿವಯಸ್ಸಿನಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದ ಮೆರವಣಿಗೆಗಳಲ್ಲಿ ಪ್ರತಿವರ್ಷ ತಪ್ಪದೆ ಭಾಗವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ.
ಭಾರತದ ಮಾಜಿ ಪ್ರಧಾನಿ ಲಾಲಬಹಾದ್ದೂರ್ ಶಾಸ್ತ್ರಿ ಅವರು ಪ್ರತಿ ಸೋಮವಾರ ರಾತ್ರಿ ಒಂದು ಊಟ ಬಿಡಿ ಎಂದು. ಅಂದು ನೀಡಿದ್ದ ಕರೆಗೆ ಓಗೊಟ್ಟು ಸೋಮವಾರ ಮಾತ್ರ ಏಕೆ ಪ್ರತಿ ದಿನವೂ ಒಂದೇ ಹೊತ್ತು ಶಾಖಾಹಾರದ ಊಟಮಾಡುವುದಾಗಿ ಸಂಕಲ್ಪ ಕೈಗೊಂಡು ಇಂದಿಗೂ ಅದನ್ನು ಪರಿಪಾಲಿಸುತ್ತಿದ್ದಾರೆ.
ಅಪ್ಪಟ ಗಾಂಧಿವಾದಿ, ಅಖಂಡ ರಾಷ್ಟ್ರಪ್ರೇಮಿ, ಸಂಪೂರ್ಣ ಖಾದಿಧಾರಿ, ಗಾಂಧಿ ಯುಗದ ಹಿರಿಯ ಕೊಂಡಿ ಶ್ರೀ ಹಮ್ಮಣ್ಣ ಮಾಣಿ ನಾಯಕ, ಶೆಟಗೇರಿ ಅವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಎಸ್ ದಿವಾಕರ

ಪತ್ರಿಕೋದ್ಯಮ, ಕಥಾಸಾಹಿತ್ಯ ಅನುವಾದ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸುತ್ತಿರುವ ಪ್ರತಿಭಾವಂತ ಶ್ರೀ ಎಸ್ ದಿವಾಕರ ಅವರು.

ಪತ್ರಿಕೋದ್ಯಮದಲ್ಲಿ ೩೦ ವರ್ಷಗಳಿಂದ ಸೇವೆ ಸಲ್ಲಿಸುತ್ತ ಸದ್ಯ ಅಮೇರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ, ಮಲ್ಲಿಗೆ, ಸುಧಾ, ಮೊದಲಾದ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿ, ಸಂಪಾದಕರಾಗಿ ಅಪಾರ ಅನುಭವವನ್ನು ಸಂಪಾದಿಸಿದ್ದಾರೆ.

ಸಣ್ಣಕಥೆ, ಕವನ, ವಿಮರ್ಶೆ, ಪ್ರಬಂಧ, ಭಾಷಾಂತರ, ಸಂಪಾದನೆ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಹದಿನೆಂಟಕ್ಕೂ ಮಿಕ್ಕು ಅತ್ಯುತ್ತಮ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರ ಕಥೆ, ಕಾದಂಬರಿಗಳನ್ನು ಮೊಟ್ಟ ಮೊದಲಿಗೆ ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರದು.

ಉದಯವಾಣಿ ಪತ್ರಿಕೆಯಲ್ಲಿ ಇವರು ಬರೆಯುತ್ತಿರುವ ಅಚ್ಚು-ಮೆಚ್ಚು ಅಂಕಣಬರಹ ಬಹು ಜನಪ್ರಿಯ. ಇವರ ಸಣ್ಣಕತೆಗಳು ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ‘ಇಂಡಿಯನ್ ರಿವ್ಯೂ ಆಫ್ ಬುಕ್ಸ್’ ಪತ್ರಿಕೆಯಲ್ಲಿ ಇಂಗ್ಲಿಷ್ ಗ್ರಂಥಗಳ ವಿಮರ್ಶಕನೆಂಬ ಹೆಗ್ಗಳಿಕೆ ಇವರದು.

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಫೆಲೋಷಿಪ್, ದೆಹಲಿಯ ಕಥಾ ಸಂಸ್ಥೆಯ ಅಖಿಲಭಾರತ ಕಥಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮಕಾರಂತ ಪ್ರಶಸ್ತಿ, ಮುದ್ದಣ ಕಾವ್ಯಪ್ರಶಸ್ತಿ, ರಾಷ್ಟ್ರೀಯ ಹಿಂದಿ ಪುರಸ್ಕಾರ ಮೊದಲಾದ ಗಣ್ಯ ಗೌರವಗಳು ಶ್ರೀಯುತರಿಗೆ ಸಂದಿವೆ.

ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯ ಎರಡರಲ್ಲೂ ಅದ್ವಿತೀಯ ಸಾಧನೆ ಮಾಡುತ್ತಿರುವ ಹೊರನಾಡ ಕನ್ನಡಿಗ ಶ್ರೀ ಎಸ್. ದಿವಾಕರ್ ಅವರು. ಹೊರನಾಡ ಕನ್ನಡಿಗರು

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಬಿ ಎಸ್ ಶಿವಪ್ಪ ಶೆಟ್ಟರು

ಗಾನವಿಶಾರದ, ದಾನಚಿಂತಾಮಣಿ, ಸ್ವಾತಂತ್ರ್ಯ ಹೋರಾಟಗಾರ, ಕೃಷಿಕ, ಶ್ರೀ ಬಿ ಎಸ್ ಶಿವಪ್ಪ ಶೆಟ್ಟರು.

೧೯೨೩ರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಬಸವಾಪಟ್ಟಣದಲ್ಲಿ ಜನಿಸಿದ ಶ್ರೀ ಬಿ ಎಸ್ ಶಿವಪ್ಪ ಶೆಟ್ಟರ ಸರಳ ಸಜ್ಜನಿಕೆಯ ಜೀವನವೇ ಒಂದು ಆದರ್ಶ.

ಪ್ರೌಢಶಾಲಾ ಹಂತದಲ್ಲಿ ಮಹಾತ್ಮಾಗಾಂಧಿಯವರ ಕರೆಗೆ ಓಗೊಟ್ಟು ವ್ಯಾಸಂಗಕ್ಕೆ ತಿಲಾಂಜಲಿಯಿತ್ತು, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ ಬಾಲಕ ಶೆಟ್ಟರು ಅಂದಿನ ಸ್ವಾತಂತ್ರ್ಯ ಹೋರಾಟದ ನಾಯಕರುಗಳಾದ ಶ್ರೀ ಕೆ.ಸಿ. ರೆಡ್ಡಿ, ಶ್ರೀ ಬಿ ಡಿ ಜತ್ತಿ ಹುಲ್ಲೂರು ಶ್ರೀನಿವಾಸಜೋಯಿಸರು ಮುಂತಾದ ದೇಶಭಕ್ತರೊಡನೆ ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡರಲ್ಲದೆ ಅರಣ್ಯ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ, ಶಿವಪುರ ಸತ್ಯಾಗ್ರಹ ಮುಂತಾದವುಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು.

ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಯವರ ಒಡನಾಡಿಯಾಗಿದ್ದು, ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಪ್ರೇರಣೆ ಪಡೆದ ಇವರು ಲಾಲ್ ಬಹದ್ದೂರ್ ಶಾಸ್ತ್ರಿ, ಜವಹರಲಾಲ್ ನೆಹರು, ರಾಜಗೋಪಾಲಾಚಾರಿ, ನಿಜಲಿಂಗಪ್ಪ, ಬಿ.ಡಿ. ಜತ್ತಿ ಇಂದಿರಾಗಾಂಧಿ ಮುಂತಾದ ಹಲವಾರು ರಾಷ್ಟ್ರನಾಯಕರ ನಿಕಟ ಸಂಪರ್ಕವಿರಿಸಿಕೊಂಡು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡವರು. ಹಲವಾರು ಸಂಸ್ಥೆಗಳ ಅಧ್ಯಕ್ಷರಾಗಿ, ಸೇವೆಸಲ್ಲಿಸಿರುವ ಶ್ರೀಯುತರ ಕಾರ್ಯಕ್ಷಮತೆಗೆ, ಸಜ್ಜನಿಕೆಗೆ ಮತ್ತು ಕಾರ್ಯದಕ್ಷತೆಗೆ ಅರಸಿ ಬಂದ ಪ್ರಶಸ್ತಿ ಪುರಸ್ಕಾರಗಳು ಹಲವಾರು. ೧೯೫೬ರಲ್ಲಿ ರಾಜ್ಯ ಸರ್ಕಾರದಿಂದ ಮೈಸೂರು ಜಿಲ್ಲಾ ಪ್ರಗತಿಪರ ರೈತ’ ಎಂಬ ಪ್ರಶಸ್ತಿ, ರಂಭಾಪುರಿ ಮಠದ ಜಗದ್ಗುರುಗಳಿಂದ ಆಚಾರ್ಯ ಸೇವಾಸಾಗರ’ ಎಂಬ ಬಿರುದು ಪ್ರದಾನ, ಶ್ರೀ ಶೈಲ ಜಗದ್ಗುರುಗಳಿಂದ ‘ಗುರು ಸೇವಾ ಧುರೀಣ’, ಶ್ರೀ ಕಾಶಿ ಜಗದ್ಗುರುಗಳಿಂದ ‘ದಾನ ಚಿಂತಾಮಣಿ’ ಎಂಬ ಬಿರುದು.

ಹೀಗೆ ಅನೇಕ ಸಂಘ ಸಂಸ್ಥೆಗಳು ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿ ಎಸ್ ಶಿವಪ್ಪ ಶೆಟ್ಟರ ಸರಳ ಸಜ್ಜನಿಕೆಯನ್ನು ಮೆಚ್ಚಿ ಗೌರವಿಸಿವೆ.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಕೆ ಎಂ ರುದ್ರಪ್ಪ

ಮಹಾತ್ಮಾ ಗಾಂಧಿಯವರ ತತ್ವಾನುಯಾಯಿ, ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಜೀವ ಮುಡುಪಾಗಿಟ್ಟ ಹಿರಿಯ ಚೇತನ ಶ್ರೀ ಕೆ ಎಂ ರುದ್ರಪ್ಪ ಅವರು.

ಕಾಲೇಜು ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾಗುರು ಕುವೆಂಪು ಅವರ ಪ್ರಭಾವಕ್ಕೆ ಒಳಗಾಗಿ ಕನ್ನಡ ನಾಡು-ನುಡಿ, ಕನ್ನಡಭಾಷೆಯ ಅಭಿವೃದ್ಧಿಯ ಬಗ್ಗೆ ಸತತ ಚಿಂತನೆ ನಡೆಸಿದರು. ಕಾಲೇಜಿನ ವ್ಯಾಸಂಗದಲ್ಲಿರುವಾಗಲೇ ಮದ್ದೂರು ಬಳಿಯ ಶಿವಪುರದಲ್ಲಿ ನಡೆದ ಕಾಂಗ್ರೆಸ್ ಧ್ವಜ ಸತ್ಯಾಗ್ರಹದಲ್ಲಿ ವಿದ್ಯಾರ್ಥಿ ಮುಖಂಡನಾಗಿ ಪಾಲ್ಗೊಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ, ದಸ್ತಗಿರಿಯಾಗಿ ಹಿಂಡಲಗ ಜೈಲು ಸೇರಿದರು. ೧೯೪೭ರ ಮೈಸೂರು ಚಲೋ ಚಳುವಳಿಯಲ್ಲಿ ಪಾಲ್ಗೊಂಡು ಮತ್ತೆ ಬಂಧಿತರಾದರು.

ಭಾರತಕ್ಕೆ ಸ್ವಾತಂತ್ರ ಬಂದ ನಂತರ ತಮ್ಮ ವಕೀಲಿ ವೃತ್ತಿಯನ್ನು ಹಾಸನದಲ್ಲಿ ಆರಂಭಿಸಿದರು.

ಮುದವೀಡು ಕೃಷ್ಣರಾವ್, ಕುವೆಂಪು, ಎಸ್. ನಿಜಲಿಂಗಪ್ಪ ಮೊದಲಾದವರ ಪ್ರಭಾವದಿಂದ ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಗಮನೀಯ ಪಾತ್ರ ನಿರ್ವಹಿಸಿದರು. ೧೯೪೯ರಲ್ಲಿ ಕರ್ನಾಟಕ ಏಕೀಕರಣದ ಒತ್ತಾಯಕ್ಕಾಗಿ ದೆಹಲಿಗೆ ಹೋಗಿದ್ದ ನಿಯೋಗದಲ್ಲಿ ಶ್ರೀ ಕೆ.ಎಂ. ರುದ್ರಪ್ಪ ಅವರು ಪ್ರಮುಖರಾಗಿದ್ದರು. ರಾಜ್ಯ ಪುನರ್‌ ವಿಂಗಡಣಾ ಸಮಿತಿಯ ಆಯೋಗದ ಮುಂದೆ ಕರ್ನಾಟಕ ಏಕೀಕರಣ ಸಂಬಂಧ ಸಮರ್ಥವಾಗಿ ಪ್ರತಿಪಾದನೆ ಮಾಡಿ ಸೈ ಎನಿಸಿಕೊಂಡರು.

ವಿಧಾನಸಭಾ ಸದಸ್ಯರಾಗಿ ಅನೇಕ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾಗಿ ಕರ್ನಾಟಕದ ಸಂಭಾವಿತ ರಾಜಕಾರಣಿಯಾಗಿ ಹೆಸರು ಮಾಡಿರುವ ೮೨ ವರ್ಷಗಳ ಹಿರಿಯ ಸ್ವಾತಂತ್ರ ಹೋರಾಟಗಾರರು ಶ್ರೀ ಕೆ ಎಂ ರುದ್ರಪ್ಪ

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ಎಂ ರಾಮಸ್ವಾಮಿ ರೆಡ್ಡಿ

ಹಿಂದುಳಿದ ಕೃಷಿಕ ಕುಟುಂಬದಲ್ಲಿ ಜನಿಸಿದರೂ ಸ್ವಂತ ಪರಿಶ್ರಮ ಹಾಗೂ ಆಸಕ್ತಿಯಿಂದ ಸಮಾಜಸೇವೆಯಲ್ಲಿ ತೊಡಗಿರುವವರು ಶ್ರೀ ರಾಮಸ್ವಾಮಿ ರೆಡ್ಡಿ ಅವರು.

೧೯೪೨ರಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿ, ೧೧ ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರು. ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ೭೬ರ ಇಳಿವಯಸ್ಸಿನಲ್ಲೂ ಫಲಾಪೇಕ್ಷೆ ಇಲ್ಲದೆ ಸಮಾಜಸೇವಾ ಕಾರ್ಯದಲ್ಲಿ ನಿರತರು. ಕರ್ನಾಟಕ ಕ್ಷಯರೋಗ ಸಂಸ್ಥೆಯಲ್ಲಿ ಕೇಂದ್ರ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ೧೯೭೨ರಿಂದಲೂ ಕ್ಷಯರೋಗಿಗಳ ಆರೋಗ್ಯ ಹಾಗೂ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸಮಾಜದ ಶೋಷಿತ ಜನಾಂಗಕ್ಕೆ ಶಿಕ್ಷಣ, ವೈದ್ಯಕೀಯ ಹಾಗೂ ಸಾಮಾಜಿಕ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರೀಯುತರು ಕಾರ್ಯತತ್ಪರರು. ಕೇಂದ್ರ ಕ್ಷಯರೋಗ ಸಮಿತಿಯ ಸದಸ್ಯರಾಗಿ ಬೆಲ್ಸಿಯಂನಲ್ಲಿ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ಹಿರಿಮೆ ಇವರದಾಗಿದೆ. ಜನತೆಯಲ್ಲಿ ಆರೋಗ್ಯಾಭಿವೃದ್ಧಿ ಮತ್ತು ಶಿಕ್ಷಣದ ಅಗತ್ಯತೆ ಕುರಿತು ತಿಳಿವಳಿಕೆ ನೀಡಿ ಕ್ಷಯರೋಗದ ವಿರುದ್ಧ ಸಮರ ಸಾರುವುದೇ ಇವರ ಜೀವನದ ಧೈಯವಾಗಿದೆ. ಹಲವಾರು ಶೈಕ್ಷಣಿಕ ಸಂಸ್ಥೆಗಳ ಮೂಲಕವೂ ಇವರ ಸೇವೆ ರಾಜ್ಯಕ್ಕೆ ಸಂದಿದೆ.

ಹಿಂದುಳಿದ ಮತ್ತು ಸಾಮಾನ್ಯ ವರ್ಗದ ಹಾಗೂ ಬಡವಿದ್ಯಾರ್ಥಿಗಳ ಸೇವೆಯನ್ನು ಶ್ರದ್ಧೆ ಹಾಗೂ ಸೇವಾ ಮನೋಭಾವದಿಂದ ಮಾಡುತ್ತಿರುವ ಹಿರಿಯರು ಶ್ರೀ ರಾಮಸ್ವಾಮಿ ರೆಡ್ಡಿಯವರು.

Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸ್ವಾತಂತ್ರ‍್ಯ ಹೋರಾಟಗಾರರು

ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕ

ಬಾಲ್ಯದಲ್ಲೇ ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆ ನಡೆಸಿದ ಸಾಹಸಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ದೇಶಪ್ರೇಮಿ ಹಾಗೂ ಯಕ್ಷಗಾನ ಕಲಾವಿದ ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕ,

೧೯೧೮ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸೂರ್ವೆಯಲ್ಲಿ ಹಮಣ್ಣ ನಾಯಕರು ಜನಿಸಿದರು. ೧೯೩೦-೩೨ರ ಅವಧಿಯಲ್ಲಿ ಅಂಕೋಲ ತಾಲೂಕು ಸಮರ ಭೂಮಿಯಾಗಿತ್ತು. ಅಂಥ ನೆಲದಿಂದ ಬಂದ ನಾಯಕರು ಸಹಜವಾಗೇ ಚಳವಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಗರುಡಾ ಮೂಲೆಯಲ್ಲಿದ್ದ ಭೂಗತ ಶಿಬಿರಕ್ಕೆ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದ್ದ ಹನ್ನೆರಡು ವರ್ಷದ ಒಬ್ಬ ಬಾಲಕ ಬ್ರಿಟಿಷರ ಕಣ್ಣಿಗೆ ಮಣ್ಣೆರಚಿ ಕರಪತ್ರಗಳನ್ನು ಊರಿಗೆ ಹಂಚುವುದು, ಊರಿನ ಮಾಹಿತಿಯನ್ನು ಶಿಬಿರಗಳಿಗೆ ತಲುಪಿಸುವುದು, ಪೊಲೀಸರ ಕಣ್ಣು ತಪ್ಪಿಸಿ, ಸ್ವಾತಂತ್ರ ಹೋರಾಟಗಾರರಿಗೆ ನೆರವಾಗುವುದು ಮುಂತಾದ ದೇಶರಕ್ಷಣೆ ಕಾರ್ಯದಲ್ಲಿ ತೊಡಗಿದ್ದ. ಆ ಬಾಲಕನೇ ಇಂದು ೮೪ರ ವೃದ್ಧಾಪ್ಯದಲ್ಲೂ ದೇಶದ ಬಗ್ಗೆ ಚಿಂತಿಸುತ್ತಿರುವ ಶ್ರೀ ರಾಮಚಂದ್ರ ಹಮ್ಮಣ್ಣನಾಯಕ.

ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕರು ಸ್ವಾತಂತ್ರ ಹೋರಾಟದಲ್ಲಿದ್ದರೂ, ತಮ್ಮ ಆಸಕ್ತಿಯ ಕ್ಷೇತ್ರವಾದ ಯಕ್ಷಗಾನವನ್ನು ಉಳಿಸಿ ಬೆಳೆಸಿದುದು ಗಮನಾರ್ಹ. ತಮ್ಮ ೮೦ನೆಯ ವಯಸ್ಸಿನವರೆಗೂ ಗೆಜ್ಜೆಕಟ್ಟಿ ರಂಗದ ಮೇಲೆ ಅಭಿನಯಿಸಿ, ಕಲಾಭಿಮಾನಿಗಳ ಮನಗೆದ್ದ ದಣಿವರಿಯದ ನಾಯಕರು.

ಸ್ವಾತಂತ್ರ್ಯ ಹೋರಾಟ ನಡೆಸಿ, ಜೈಲು ಶಿಕ್ಷೆ ಅನುಭವಿಸಿ, ತಮ್ಮ ಸರ್ವಸ್ವವನ್ನು ಕಳೆದುಕೊಂಡರೂ ತಮ್ಮ ಅಭಿಮಾನ, ಆತ್ಮವಿಶ್ವಾಸ, ಕಲಾಸಂಪತ್ತು ಉಳಿಸಿಕೊಂಡ ಹಿರಿಯ ಚೇತನ ಶ್ರೀ ರಾಮಚಂದ್ರ ಹಮ್ಮಣ್ಣ ನಾಯಕರು.