ಯೋಗಾಭ್ಯಾಸದಲ್ಲಿ ಅತ್ಯುನ್ನತ ಸಾಧನೆಗೈದ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ನಾಡಿನ ಅಪ್ರತಿಮ ಪ್ರತಿಭೆಯ ಯೋಗಪಟು ಶ್ರೀ ಪಿ.ಎಸ್. ಗುರುಸಿದ್ದಯ್ಯ
ಅವರು.
ತುಮಕೂರಿನವರಾದ ಶ್ರೀ ಗುರುಸಿದ್ದಯ್ಯ ಅವರು ಬಿ.ಎ. ಪದವೀಧರರು. `ಅಲ್ಪನೇಟಿವ್ ಥೆರಪಿ’ಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಬಾಲ್ಯದ ದಿನಗಳಿಂದಲೇ ಯೋಗಾಭ್ಯಾಸದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಶ್ರೀಯುತರು ಪ್ರಸಿದ್ಧ ಯೋಗಾಚಾರ್ಯರಿಂದ ಸ್ಫೂರ್ತಿ ಪಡೆದು ನಿರಂತರ ಅಭ್ಯಾಸ ನಡೆಸತೊಡಗಿದರು. ಹಂತ ಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಏರಿ ರಾಷ್ಟ್ರೀಯ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ವಿಜೃಂಭಿಸತೊಡಗಿದರು.
ಇಂಗ್ಲೆಂಡ್ ಮತ್ತು ಹಾಲೆಂಡ್ ದೇಶಗಳ ಯೋಗ ಶಿಕ್ಷಕರ ಸಂಸ್ಥೆಗಳ ಆಹ್ವಾನದ ಮೇರೆಗೆ ಜಪಾನ್, ಹಾಂಕಾಂಗ್, ಬ್ಯಾಂಕಾಕ್, ಸಿಂಗಾಪುರ್ ಹಾಗೂ ಅಮೆರಿಕಾ ದೇಶಗಳಲ್ಲಿ ಸುಮಾರು ಇಪ್ಪತ್ತೊಂದು ಯೋಗಾಸನ ಪ್ರದರ್ಶನಗಳಲ್ಲಿ ಪಾಲ್ಗೊಂಡು ಪ್ರಶಂಸೆ ಗಳಿಸಿದ್ದಾರೆ. ಆಸ್ಟ್ರೇಲಿಯಾ ದೇಶದಲ್ಲಿ ನಡೆದ ಯೋಗ ಶಿಕ್ಷಕರ ಅಂಚೆ ತೆರಪಿನ ತರಬೇತಿಯಲ್ಲಿ ಐನೂರು ವಿದ್ಯಾರ್ಥಿಗಳ ಪೈಕಿ ಪ್ರಥಮ ಬ್ಯಾಂಕ್ ಪಡೆದ ಕೀರ್ತಿವಂತರು. ಕೇಂದ್ರೀಯ ಕಾರಾಗೃಹಗಳ ಕೈದಿಗಳಿಗೆ, ಅಂಧಶಾಲೆಯ ಮಕ್ಕಳಿಗೆ ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸಾ ತರಬೇತಿ ನೀಡುವ ಮೂಲಕ ಸಮಾಜ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಮೂರು ಬಾರಿ ಚಿನ್ನದ ಪದಕಗಳು, ಎರಡು ಬಾರಿ ಬೆಳ್ಳಿ ಪದಕಗಳು ಹಾಗೂ ಎರಡು ಬಾರಿ ಕಂಚಿನ ಪದಕಗಳನ್ನು ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ನಲವತ್ತೆರಡು ಬಾರಿ ಚಿನ್ನದ ಪದಕಗಳನ್ನು, ಮೂರು ಬಾರಿ ಬೆಳ್ಳಿ ಪದಕಗಳನ್ನು, ನಾಲ್ಕು ಬಾರಿ ಕಂಚಿನ ಪದಕಗಳನ್ನು ಗಳಿಸಿದ ಹಿರಿಮೆ ಇವರದು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ವತಿಯಿಂದ ಮುಖ್ಯಮಂತ್ರಿಗಳಿಂದ ದಸರಾ ಕ್ರೀಡಾ ಪ್ರಶಸ್ತಿಯನ್ನು ಹಾಗೂ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ರಾಷ್ಟ್ರಪತಿ ಗ್ಯಾನಿ ಜೈಲ್ಸಿಂಗ್ ಅವರಿಂದ ‘ಯೋಗರತ್ನ’ ಪ್ರಶಸ್ತಿ ಪಡೆದಿದ್ದಾರೆ.
ಯೋಗ, ಪ್ರಕೃತಿ ಚಿಕಿತ್ಸೆ ಮೂಲಕ ಸಾಮಾಜ ಸೇವೆಯನ್ನು ಮಾಡುತ್ತ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸುತ್ತ ನಾಡಿನ ಕೀರ್ತಿಯನ್ನು ದೇಶ ವಿದೇಶಗಳಲ್ಲಿ ಪಸರಿಸುತ್ತಿರುವ ಹೆಮ್ಮೆಯ ಯೋಗಾಚಾರ್ಯ ಶ್ರೀ ಪಿ. ಎಸ್. ಗುರುಸಿದ್ದಯ್ಯ ಅವರು.
