Categories
ಯಕ್ಷಗಾನ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೋಡಿ ಶಂಕರ ಗಾಣಿಗ

ಹಾರಾಡಿ ಮನೆತನದ ಯಕ್ಷಗಾನ ಕಲಾಪರಂಪರೆಯನ್ನು ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು ಬಂದ ಪ್ರತಿಭಾವಂತ ಕುಡಿ ಕೋಡಿ ಶಂಕರ ಗಾಣಿಗ ಅವರು.
ಅಪ್ಪ, ತಾತಂದಿರ ಕಾಲದಿಂದಲೂ ಮನೆಯಲ್ಲಿ ರಿಂಗಣಿಸುತ್ತಿದ್ದ ಯಕ್ಷಗಾನ ಮದ್ದಳೆಯ ನಾದಕ್ಕೆ ಶ್ರುತಿ ಕೊಟ್ಟು ಬೆಳೆದ ಶ್ರೀಯುತರು ಯಾವ ಮೇಳದಲ್ಲೇ ಇರಲಿ, ಜನ ನಮ್ಮ ಶಂಕರ ಎಂದೇ ಗುರುತಿಸುತ್ತಾರೆ. ನಾಡಿನ ಬಹುಮುಖ್ಯ ಯಕ್ಷಗಾನ ಮೇಳಗಳಲೆಲ್ಲ ದುಡಿದ ೫೦
ವರ್ಷಗಳ ಅವಿರತ ಕಲಾ ಸೇವೆ ಅವರದು.
ಮಂದರ್ತಿ, ಮಾರನಕಟ್ಟೆ, ಕಮಲ ಶಿಲೆ, ಸೌಕೂರು, ಪೆರಡೂರು, ಇಡಗುಂಜಿ, ಮುಂತಾದ ಎಲ್ಲ ಮೇಳಗಳಲ್ಲೂ ತಮ್ಮ ಛಾಪು ಮೂಡಿಸಿ ಶಿವರಾಮ ಕಾರಂತರ ನೃತ್ಯ ನಾಟಕಗಳಲ್ಲೂ ಪಾತ್ರ ಮಾಡಿದ ಪ್ರತಿಭಾವಂತ ಕಲಾವಿದ ಶಂಕರ ಗಾಣಿಗ.
ರಾಜ್ಯ, ರಾಷ್ಟ್ರದಿಂದಾಚೆಗೂ ತಮ್ಮ ಯಕ್ಷಗಾನ ಕಲೆಯಿಂದ ಪ್ರಸಿದ್ಧರಾದ ಶಂಕರ ಗಾಣಿಗರ ಪ್ರತಿಭೆಯನ್ನು ಅರಸಿಬಂದ ಬಿರುದು ಸನ್ಮಾನಗಳು ಹಲವಾರು. ೭೩ರ ಇಳಿವಯಸ್ಸಿನಲ್ಲೂ ಗೆಜ್ಜೆ ಕಟ್ಟಬಲ್ಲ ಯುವಕನ ಉತ್ಸಾಹ ಹೊಂದಿರುವ ಅದ್ಭುತ ಯಕ್ಷಗಾನ ಕಲಾವಿದ ಶ್ರೀ ಕೋಡಿಶಂಕರ ಗಾಣಿಗರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಚ್. ಶಂಕರ ಶೆಟ್ಟಿ

ತಮ್ಮ ನಿಸ್ಪೃಹ ಸೇವೆಯಿಂದ ನೂರಾರು ಬಡಜನರ ಆರಾಧ್ಯದೈವವೆನಿಸಿರುವ ವೈದ್ಯಕೀಯ ಕ್ಷೇತ್ರದ ಹಿರಿಯ ಚೇತನ ಡಾ. ಎಚ್. ಶಂಕರ ಶೆಟ್ಟಿ ಅವರು.
೧೯೩೫ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕುಗ್ರಾಮ ಹರ್ಕೂರಿನಲ್ಲಿ ಜನಿಸಿದ ಇವರು ಮದರಾಸಿನಲ್ಲಿ ತಮ್ಮ ವೈದ್ಯಕೀಯ ಶಿಕ್ಷಣ ಮುಗಿಸಿ ಮುಂದೆ ವೈದ್ಯಕೀಯ ಶಿಕ್ಷಣದ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು. ಹಿರಿಯ ಶಸ್ತ್ರಚಿಕಿತ್ಸಕರಾಗಿ, ಬೆಂಗಳೂರು ವೈದ್ಯಕೀಯ ವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಹೀಗೆ ರಾಜ್ಯದ ಬಹುಪಾಲು ವೈದ್ಯಕೀಯ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಇವರದು.
ಶ್ರೀಯುತ ಶಂಕರ ಶೆಟ್ಟಿ ಅವರ ವೈದ್ಯಕೀಯ ಸೇವೆಗೆ ಅಪಾರ ಜನಮನ್ನಣೆಯ ಜೊತೆಗೆ ಡಾ. ಬಿ.ಸಿ. ರಾಯ್ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನ ಪುರಸ್ಕಾರಗಳು ಸಂದಿವೆ.
ನಿವೃತ್ತಿಯ ನಂತರವೂ ವೈದ್ಯಕೀಯ ಕ್ಷೇತ್ರದಲ್ಲಿ ಬಡಜನರ ಸೇವೆ ಮುಂದುವರಿಸಿರುವ ಹಿರಿಯ ವೈದ್ಯರು ಶ್ರೀಯುತ ಡಾ. ಎಚ್. ಶಂಕರ ಶೆಟ್ಟಿ ಅವರು.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಹರಿಜನ ಪದ್ಮಮ್ಮ

ಬಳ್ಳಾರಿಯ ಕಪ್ಪಗಲ್ಲು ಗ್ರಾಮದ ಆದಿ ಕರ್ನಾಟಕ ಪಂಗಡಕ್ಕೆ ಸೇರಿದ ಹರಿಜನ ಪದ್ಮಮ್ಮ ಹುಟ್ಟಿನಿಂದಲೇ ಜಾನಪದ ಬಯಲಾಟ ಕಲಾವಿದೆ, ತಾಯಿ ದಿವಂಗತ ಗಂಗಮ್ಮ ಸಹ ಒಳ್ಳೆಯ ಅಭಿನೇತ್ರಿಯಾಗಿದ್ದವರು. ಹಾಗಾಗಿ ಪದ್ಮಮ್ಮನಿಗೆ ಅಭಿನಯ ರಕ್ತಗತವಾಗಿ ಬಂದುದು. ಹೆಣ್ಣುಮಕ್ಕಳು ಬಣ್ಣ ಬಳಿದುಕೊಂಡು ವೇದಿಕೆ ಏರುವುದನ್ನು ಮಹಾಪರಾಧ ಎಂದೇ ಪರಿಗಣಿಸುತ್ತಿದ್ದ ಕಾಲದಲ್ಲೇ ಬಯಲಾಟದ ಗೀಳು ಹಚ್ಚಿಕೊಂಡ ಪದ್ಮಮ್ಮ ಎದುರಿಸಿದ ಎಡರು ತೊಡರುಗಳು ಅನೇಕ. ಆದರೂ ಎದೆಗೆಡದೆ ಯಾವುದೇ ಪಾತ್ರವಿರಲಿ ಅದಕ್ಕೆ ಜೀವತುಂಬಿ ಅದರಲ್ಲಿ ತನ್ನನ್ನು ತೊಡಗಿಸಿಕೊಂಡು ಸನ್ನಿವೇಶವನ್ನು ಕಣ್ಣಿಗೆ ಕಾಣುವ ಚಿತ್ರದಂತೆ ಅಭಿನಯಿಸುವಲ್ಲಿ ಸಿದ್ಧ ಹಸ್ತರೆನಿಸಿದವರು. ಜನ ಸಮುದಾಯದ ಮನಗೆದ್ದವರು.
ಸಾವಿರಕ್ಕೂ ಹೆಚ್ಚು ಬಯಲಾಟದ ಪ್ರಸಂಗಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಜನಮನ ಸೂರೆಗೊಂಡಿದ್ದಾರೆ. ಅಭಿನಯದ ಜೊತೆಗೆ ಉಚ್ಛಕಂಠದಲ್ಲಿ ದಕ್ಷಿಣಾದಿ ಶೈಲಿಯಲ್ಲಿ ರಂಗಗೀತೆಗಳನ್ನು ಹಾಡುವಾಗ ತನ್ಮಯತೆಯಿಂದ ಮೈಮರೆಯುತ್ತಾರೆ.
ಬಳ್ಳಾರಿ ಹೊಸಪೇಟೆ, ಕೂಡ್ಲಿಗಿ ಸಂಡೂರುಗಳೇ ಅಲ್ಲದೆ ಗಡಿನಾಡು ಪ್ರದೇಶಗಳಲ್ಲೂ ಕನ್ನಡ ಬಯಲಾಟಗಳ ಜಯಭೇರಿ ಬಾರಿಸಿದ ಹೆಗ್ಗಳಿಕೆ ಇವರದು. ಬಳ್ಳಾರಿ ಜನತೆ ಇವರಿಗೆ ಗಾನಕಲಾ ಸರಸ್ವತಿ ಎಂದು ಹಾಡಿಹೊಗಳಿದ್ದಾರೆ. ಇಂಥ ಅಭಿಜಾತ ಕಲಾವಿದೆಗೆ ಸಂದ ಗೌರವ ಸನ್ಮಾನಗಳು ಆನೇಕ ಅಪಾರ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯ ಪ್ರಶಸ್ತಿಯ ಗೌರವಕ್ಕೂ ಪಾತ್ರರಾಗಿರುವ ಹರಿಜನ ಪದ್ಮಮ್ಮ ಜಾನಪದ ಬಯಲಾಟ ಕ್ಷೇತ್ರದ ದೊಡ್ಡ ಆಸ್ತಿ ಎನ್ನಬಹುದು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿ

ಕರ್ನಾಟಕದ ಹಲವಾರು ಪ್ರಸಿದ್ಧ ಸಾಹಿತಿಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿರುವ ಶಿಕ್ಷಕರು ಹಾಗೂ ಸಾಹಿತಿ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿ ಅವರು, ಬೆಳಗೆರೆ ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಜನಿಸಿದರು. ಮೂಲತಃ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಶಾಲೆಗಳನ್ನು ಕಟ್ಟಿದವರು. ಶ್ರೀಯುತರ ತಂದೆ ಪ್ರಸಿದ್ಧ ಸಂಸ್ಕೃತ ವಿದ್ವಾಂಸರು. ‘ಮರೆಯಲಾದೀತೆ, ‘ಸಾಹಿತಿಗಳ ಸ್ಮೃತಿ’, ‘ಹಳ್ಳಿ ಮೇಷ್ಟ್ರು’ ಮುಂತಾದ ಸಾಹಿತ್ಯಕೃತಿಗಳನ್ನು ರಚಿಸಿದ್ದಾರೆ. ಗಾಂಧಿ, ರಮಣ ಮುಂತಾದವರೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಬೆಳಗೆರೆ ಗ್ರಾಮವನ್ನು ಸಾಂಸ್ಕೃತಿಕ ಗ್ರಾಮವನ್ನಾಗಿ ರೂಪಿಸಿದರು.
ಆದರ್ಶ ಶಿಕ್ಷಕರಾಗಿ ಹಲವು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿದ ಕೀರ್ತಿಗೆ ಪಾತ್ರರು ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ಶಿರಡಿ ಸಾಯಿ ಮಂಡಳಿ

ಜಾತಿ ಮತ ಭೇದವೆಣಿಸದೆ ಸಮಾಜ ಸೇವಾ ಧರ್ಮವನ್ನು ಕಳೆದ ೬೨ ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಬೆಂಗಳೂರಿನ ಶ್ರೀ ಸಾಯಿ ಮಂಡಳಿ.
ಒಂದು ಭಜನೆ ಮಂಡಳಿಯ ರೂಪದಲ್ಲಿ ಪ್ರಾರಂಭವಾದ ಈ ಸಂಸ್ಥೆ ಒಂದು ಸ್ವಂತ ಕಟ್ಟಡ ಹೊಂದಲು ಸುಮಾರು ೫೦ ವರ್ಷಗಳು ಬೇಕಾಯಿತು. ಶ್ರೀ ಶಿರಡಿ ಸಾಯಿಬಾಬಾ ಅವರ ಸರಳ ಜೀವನ, ಉನ್ನತ ಚಿಂತನೆ, ಸಾಮಾಜಿಕ ಕಳಕಳಿಗಳಿಂದಾಗಿ ಹಲವಾರು ಯೋಜನೆಗಳು ಈ ಸಂಸ್ಥೆಯಲ್ಲಿ ರೂಪು ಪಡೆದು ಕಾರ್ಯನಿರ್ವಹಿಸುತ್ತಿವೆ. ಅನ್ನಬ್ರಹ್ಮ ಯೋಜನೆಯಡಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ, ಆರೋಗ್ಯಲಕ್ಷ್ಮಿ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ, ಉಚಿತ ಕಣ್ಣಿನ ಪರೀಕ್ಷಾ ಶಿಬಿರಗಳು, ಕಣ್ಣಿನ ಶಸ್ತ್ರ ಚಿಕಿತ್ಸೆ, ಮುಂತಾದ 2. ಪ್ರಯೋಜನಗಳನ್ನು ಸಾವಿರಾರು ಜನರು ಪಡೆದುಕೊಂಡಿರುತ್ತಾರೆ. ವಿದ್ಯಾಶಾರದೆ ಯೋಜನೆಯಡಿ ಎಂಟು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ, ಲೇಖನ ಸಾಮಗ್ರಿಗಳ ವಿತರಣೆ, ಪ್ರತಿಭಾ ವಿದ್ಯಾರ್ಥಿ ವೇತನ, ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇವಲ್ಲದೆ ಅಂಧ ಮಕ್ಕಳ ಶಾಲೆಗೆ ನಗದು ನೆರವು, ವೃದ್ಧಾಶ್ರಮಗಳಿಗೆ ಉಚಿತ ವಸ್ತ್ರ, ಹಾಗೂ ಅಗತ್ಯ ಸಾಮಗ್ರಿಗಳ ಪೂರೈಕೆ, ಅಂಗವಿಕಲರಿಗೆ ಟ್ರೈಸಿಕಲ್ಗಳ ವಿತರಣೆ, ಮುಂತಾದ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಇದು.
ಆರು ದಶಕಗಳಿಂದ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಅಪೂರ್ವ ಸಂಸ್ಥೆ ಬೆಂಗಳೂರಿನ ಶ್ರೀ ಸಾಯಿ ಮಂಡಳಿ.

Categories
ಕೃಷಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಡಾ. ಎಸ್. ತಿಮ್ಮೇಗೌಡ

೧. ಕೃಷಿಶಾಸ್ತ್ರಜ್ಞರಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವವರು ಡಾ. ಎಸ್. ತಿಮ್ಮೇಗೌಡ ಅವರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಮಟ್ಟದಲ್ಲಿ ೩೫ ವರ್ಷಗಳಿಗೂ ಮಿಗಿಲಾಗಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ೩೨ ಜನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಸುಸ್ಥಿರ ಕೃಷಿ, ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅಧ್ಯಯನ ನಡೆಸಿರುವ ಅನುಭವಿ ಕೃಷಿತಜ್ಞ ಡಾ. ಎಸ್. ತಿಮ್ಮೇಗೌಡ ಅವರು.

Categories
ಕೃಷಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹೆಚ್.ಆರ್. ಚಂದ್ರೇಗೌಡ

ಪದವೀಧರರಾದರೂ ಪಗಾರ ತರುವ ನೌಕರಿ ಸಿಗಲಿಲ್ಲವೆಂದು ನಿರಾಶರಾಗದೆ ಪ್ರಗತಿಶೀಲ ರೈತರಾಗಿ ಪ್ರಕೃತಿಯನ್ನು ಅಪ್ಪಿಕೊಂಡ ಅಪರೂಪದ ಕೃಷಿಕ ಶ್ರೀಯುತ ಹೆಚ್.ಆರ್. ಚಂದ್ರೇಗೌಡ ಅವರು.
ಚಿಕ್ಕಮಗಳೂರು ಜಿಲ್ಲೆಯ ಪುಟ್ಟ ಗ್ರಾಮ ಹಳಿಯೂರಿನ ಶ್ರೀಮಂತ ಕೃಷಿ ಕುಟುಂಬದಲ್ಲಿ ೧೯೫೨ರಲ್ಲಿ ಹುಟ್ಟಿದ ಶ್ರೀಯುತರು ಬಾಲ್ಯದಿಂದಲೂ ಹಿಡಿದ ಕಾರ್ಯ-ಸಾಧಿಸುವ ಛಲಗಾರರು. ಅವರ ಈ ಛಲ ಮತ್ತು ಅವಿರತ ದುಡಿಮೆ ಅವರನ್ನಿಂದು ಕೃಷಿತಜ್ಞರನ್ನಾಗಿಸಿದೆ. ೨೪ ಎಕರೆ ಜಮೀನಿನ ಯಶಸ್ವೀ ರೈತ ಒಡೆಯನೆನಿಸಿದೆ.
ಸಾವಯವ ಕೃಷಿಯನ್ನು ಸಾಕ್ಷಾತ್ಕರಿಸಿಕೊಂಡು ಮಳೆಯ ಹನಿಹನಿಯನ್ನೂ ಮಿತವಾಗಿ ಬಳಸಿಕೊಂಡು ಕೃಷಿಗೆ ಪೂರಕವಾಗಿ ಗೊಬ್ಬರ, ನೀರಾವರಿ, ಅರಣ್ಯ, ಹೈನುಗಾರಿಕೆ, ಎಲ್ಲದರಲ್ಲೂ ಯಶಸ್ವಿಯಾದ ಶ್ರೀಯುತರ ಸಾಧನೆಗೆ ಸಂದ ಗೌರವ ಪುರಸ್ಕಾರಗಳು ಹತ್ತಾರು.
‘ನೆಲ ನಂಬಿ ಕೆಟ್ಟವರಿಲ್ಲ’ ಎಂಬ ನಾಣ್ಣುಡಿಗೆ ತಕ್ಕಂತೆ ಬದುಕಿ ತೋರಿಸುತ್ತಿರುವ ನಾಡಿನ ರೈತ ಬಾಂಧವರಿಗೆ ಮಾದರಿಯಾಗಿರುವ ಆದರ್ಶ ಕೃಷಿಕ ಶ್ರೀ ಹೆಚ್.ಆರ್.ಚಂದ್ರೇಗೌಡರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಕೇಶವ ಜೋಗಿತಾಯ

ತಂತ್ರವಿದ್ಯೆ ಮತ್ತು ಆಧ್ಯಾತ್ಮಿಕ ವಿದ್ಯೆಯಲ್ಲಿ ಪರಿಣತರಾಗಿ ಜನಸೇವೆ ಮಾಡುತ್ತಿರುವವರು ಶ್ರೀ ಕೇಶವ ಜೋಗಿತ್ಯಾಯ ಅವರು.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಗ್ರಾಮದಲ್ಲಿ ಜನನ. ತಂದೆ ಶ್ರೀ ಶ್ರೀ ರಾಮ ಜೋಗಿತ್ಯಾಯ ಪ್ರೌಢ ಶಿಕ್ಷಣದ ನಂತರ ಆಧ್ಯಾತ್ಮಿಕ ವೃತ್ತಿಯ ಅವಲಂಬನ, ತಂತ್ರವಿದ್ಯೆ ಮತ್ತು ಆಧ್ಯಾತ್ಮಿಕ ವಿದ್ಯೆಗಳಲ್ಲಿ ಪರಿಣಿತರಾಗಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಾಲೆ ನಡೆಸಿಕೊಂಡು ಬರುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮುಖ್ಯತಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಧಾರ್ಮಿಕ ಪ್ರವೃತ್ತಿಯ ಹಾಗೂ ಉನ್ನತವಾದ ಆಧ್ಯಾತ್ಮಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಹಂಚುತ್ತಿರುವವರು ಶ್ರೀ ಕೇಶವ ಜೋಗಿತ್ಯಾಯ
ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಂ.ಕೆ.ಎಚ್. ನಾಗಲಿಂಗಾಚಾರ್

ಹಿರಿಯ ಸ್ವಾತಂತ್ರ್ಯ ಹೋರಾಟಗಾರು, ಸಮಾಜಸೇವಾ ಕಾರ್ಯಕರ್ತರು ಮತ್ತು ಹಿರಿಯ ಕಾಂಗ್ರೆಸ್ ಧುರೀಣರು ಶೀ ಎಂ.ಕೆ.ಎಚ್. ನಾಗಲಿಂಗಾಚಾರ್ ಅವರು.
೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ಮಾಡು ಇಲ್ಲವೆ ಮಡಿ ಎಂಬ ಗಾಂಧೀಜಿಯವರು ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ೮ ತಿಂಗಳ ಕಾರಾಗೃಹ ವಾಸವನ್ನು ಅನುಭವಿಸಿದವರು. ಸ್ವಾತಂತ್ರ್ಯ ಹೋರಾಟವಲ್ಲದೆ ಸಮಾಜಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಪ್ರೌಢಶಾಲೆ, ಹೆಣ್ಣು ಮಕ್ಕಳ ಶಾಲೆಯ ನಿರ್ಮಾಣ ಶ್ರೀಯುತರ ಸಾಧನೆಗಳು, ದಾವಣಗೆರೆಯಲ್ಲಿ ವಿಶ್ವಕರ್ಮ ಸಮಾಜ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ೨೪ ಎಕರೆ ಜಮೀನು ದಾನ, ಭೂದಾನ ಸಂದರ್ಭದಲ್ಲಿ ೩ ಎಕರೆ ಭೂಮಿ ದಾನ ಹಾಗೂ ಹಲವು ಸಂಘ ಸಂಸ್ಥೆಗಳಿಗೆ ಕೊಡುಗೆಗಳನ್ನು ನೀಡಿರುವ ಶ್ರೀಯುತರು ಮಾಯಾಕೊಂಡ ಪುರಸಭೆಯ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಜನರ ಪ್ರೀತಿ, ಗೌರವಗಳನ್ನು ಸಂಪಾದಿಸಿದ್ದಾರೆ. ಮಾಯಾಗೊಂಡದಲ್ಲಿ ಬಾಲಿಕಾ ಪ್ರಾಥಮಿಕ ಪಾಠಶಾಲೆ ಕಟ್ಟಿಸಿ ಮಾನ್ಯತೆ ಪಡೆದಿದ್ದಾರೆ. ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರಿಂದ ತಾಮ್ರ ಪತ್ರ ಪಡೆದಿರುವ ಶ್ರೀಯುತರು ಸಮಾಜಕ್ಕೆ ಸಲ್ಲಿಸಿದ ನಿಷ್ಕಾಮ ಸೇವೆ ಅನುಪಮ ಹಾಗೂ ಅನುಕರಣೀಯ.
ಶತಾಯುಷಿಗಳಾಗಿದ್ದು ಈ ಇಳಿವಯಸ್ಸಿನಲ್ಲೂ ಲವಲವಿಕೆಯಿಂದ ಓಡಾಡಿ ಸಮಾಜ ಸೇವೆ ಮಾಡುತ್ತಿರುವ ಹಿರಿಯ ಗಾಂಧೀವಾದಿ ಶ್ರೀ ಎಂ.ಕೆ.ಹೆಚ್. ನಾಗಲಿಂಗಾಚಾರ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಆರ್.ಎನ್. ಶೆಟ್ಟಿ

ಕೈಯಿಟ್ಟ ಕ್ಷೇತ್ರದಲ್ಲೆಲ್ಲ ಅದ್ಭುತ ಪ್ರಗತಿ ಸಾಧಿಸಿದ ಅಸಾಧಾರಣ ಸಾಧಕ, ಉದ್ಯಮಿ ಶ್ರೀ ಆರ್.ಎನ್. ಶೆಟ್ಟಿ ಅವರು.
೧೯೨೮ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ಜನಿಸಿದ ಶ್ರೀಯುತರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಸಿರಸಿಯಲ್ಲಿ. ೧೯೬೧ರಲ್ಲಿ ಪ್ರಥಮವಾಗಿ ಆರ್.ಎನ್. ಶೆಟ್ಟಿ ಕಂಪನಿ ಸ್ಥಾಪಿಸಿದ ಇವರು ಕೆಲವೇ ವರ್ಷಗಳಲ್ಲಿ ನವೀನ್ ಮೆಕ್ಯಾನ್ಸೆಸ್ ಕಂಪನಿಯ ಸ್ವಾಮ್ಯವನ್ನು ಪಡೆದರು.
ಇವರು ಕಟ್ಟಿಸಿದ ಸೇತುವೆಗಳು, ಬೃಹತ್ ಕಟ್ಟಡಗಳು ಜಲವಿದ್ಯುತ್ ಯೋಜನೆಗಳು, ನಿರಾವರಿ ಅಣೆಕಟ್ಟು ಕಾಮಗಾರಿಗಳು ರಾಜ್ಯದ ಬಹುಮುಖ್ಯ ಕಾಮಗಾರಿಗಳೆನಿಸಿದವು. ೧೯೭೫ ರಿಂದ ಹೋಟೆಲ್ ಉದ್ಯಮಕ್ಕೂ ಪ್ರವೇಶಿಸಿ ಪಂಚತಾರ ಹೋಟೆಲ್ಗಳನ್ನು ನಿರ್ಮಿಸಿ ಯಶಸ್ವಿಯಾದರು. ಕೊಂಕಣ ರೈಲ್ವೆಯಲ್ಲಿ ಅಸಾದ್ಯವೆನಿಸಿದ ಹದಿನೆಂಟು ಭೂ ಸುರಂಗಳನ್ನು ನಿರ್ಮಿಸಿ ದಕ್ಷಿಣ ಭಾರತ ರೈಲ್ವೆಗೆ ಅರ್ಪಿಸಿದ ಸಾಧನೆ ಅವರದು. ರಾಜ್ಯದಲ್ಲೆ ಪ್ರಥಮ ಬಾರಿಗೆ ಡೈನಮೈಟ್ ಟೈಲ್ಸ್ ತಯಾರಿಸಿದ ಕೀರ್ತಿ ಇವರ ಮುರುಡೇಶ್ವರ ಟೈಲ್ಸ್ ಕಂಪನಿಗೆ ಸಲ್ಲುತ್ತದೆ. ಇಷ್ಟಲ್ಲದೇ ಆರ್.ಎನ್.ಶೆಟ್ಟಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಆಧುನಿಕ ತಂತ್ರಜ್ಞಾನದ ಶಿಕ್ಷಣ ವಿಸ್ತಣೆಗೆ ಕಾರಣರಾಗಿದ್ದಾರೆ. ಮುರುಡೇಶ್ವರದಲ್ಲಿ ಇವರು ಸ್ಥಾಪಿಸಿರುವ ೧೨೩ ಅಡಿ ಎತ್ತರದ ಶಿವನ ಪ್ರತಿಮೆ ವಿಶ್ವದ ಅತಿ ಎತ್ತರದ ಶಿವ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿದೆ. ಹೀಗೆ ತಾವು ಕೈಯಿಟ್ಟ ಕ್ಷೇತ್ರಗಳಲ್ಲೆಲ್ಲ ಅಸಾಧ್ಯ ಎತ್ತರಕ್ಕೆ ಏರಿದ ವ್ಯಕ್ತಿ ಆರ್.ಎನ್. ಶೆಟ್ಟಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀಮತಿ ಮಧುರಾ ಛತ್ರಪತಿ

ಪ್ರಸಿದ್ಧ ವಾಣಿಜ್ಯೋದ್ಯಮಿ, ಅನೇಕ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಅಧ್ಯಕ್ಷೆ ಶ್ರೀಮತಿ ಮಧುರಾ ಎಂ. ಛತ್ರಪತಿ ಅವರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ, ಪದವಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಸಿಎಫ್ಟಿಆರ್ಐನಿಂದ ಆಹಾರ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ತರಬೇತಿ ಪಡೆದಿರುವವರು ಶ್ರೀಮತಿ ಮಧುರಾ ಎಂ. ಛತ್ರಪತಿ ಅವರು.
ಫುಡ್ ಅಸೋಸಿಯೇಷನ್ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಶ್ರೀಮತಿ ಮಧುರಾ ಎಂ. ಛತ್ರಪತಿ ಅವರು ಆಹಾರ ತಂತ್ರಜ್ಞೆ ಮಹಿಳಾ ಹೋರಾಟಗಾರ್ತಿ, ಪತ್ರಿಕೋದ್ಯಮಿ, ವಿವಿಧ ಬ್ಯಾಂಕುಗಳ ಆಡಳಿತ ಮಂಡಳಿಯ ಸದಸ್ಯೆ, ಹಾಗೂ ಜಿಲ್ಲಾ ರೋಟರಿಯ ಮಹಿಳಾ ಗವರ್ನರ್. ರಾಜ್ಯಾದ್ಯಂತ ಹಲವಾರು ಮಹಿಳಾ ಉದ್ದಿಮೆದಾರರನ್ನು ರೂಪಿಸಿದ ರೂವಾರಿ. ಫುಡ್ ಅಸೋಸಿಯೇಟ್ಸ್ ಆಹಾರ ಉತ್ಪಾದನೆಯ ಪ್ರಮುಖ ಸಂಸ್ಥೆಯಾಗಿದ್ದು, ವಿವಿಧ ದೇಶಗಳಿಗೆ ಹುಣಸೇಹಣ್ಣಿನ ಪುಡಿಯನ್ನು ರಫ್ತು ಮಾಡುತ್ತಿದೆ. ಕೊಲ್ಲಾಪುರದ ಚಪ್ಪಲಿಗಳಲ್ಲಿ ಜಾಗತಿಕ ಟೆಲಿಹೋಲ್ಡ್ ಚಪ್ಪಲಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದವರು ಶ್ರೀಮತಿ ಮಧುರಾ ಛತ್ರಪತಿಯವರೇ.
ಶ್ರೀಮತಿ ಮಧುರಾ ಎಂ.ಛತ್ರಪತಿ ಅವರ ಪರಿಶ್ರಮವನ್ನು ಗುರುತಿಸಿ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಇನ್ನಿತರ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ. ತಂತ್ರಜ್ಞಾನ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಭಾರಿ ಉದ್ದಿಮೆದಾರರನ್ನು ರೂಪಿಸುತ್ತಿರುವವರು ಶ್ರೀಮತಿ ಮಧುರಾ ಛತ್ರಪತಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಎಸ್.ಕೆ. ಜೈನ್

ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಜ್ಯೋತಿಷಿ ಡಾ. ಎಸ್.ಕೆ. ಜೈನ್ ಅವರು.
ಬೆಂಗಳೂರಿನಲ್ಲಿ ಹುಟ್ಟಿದ ಡಾ. ಎಸ್.ಕೆ. ಜೈನ್ ಅವರು ಭ್ರಗು ಸಂಹಿತೆಯ ಆಧಾರದ ಮೇಲೆ ಜಾತಕ ಹಾಗೂ ಪ್ರಶ್ನೆ ಶಾಸ್ತ್ರದ ತಂತ್ರವನ್ನು ಬಳಸಿ ಜ್ಯೋತಿಷ್ಯ ಹೇಳುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಾಥಮಿಕ ಜ್ಞಾನವನ್ನು ತಂದೆ ಡಾ. ಶಶಿಕಾಂತ್ ಜೈನ್ ಅವರಿಂದ ಪಡೆದ ಶ್ರೀ ಎಸ್.ಕೆ. ಜೈನ್ ಅವರು ಇಂಜಿನಿಯರ್ ಆಗಬೇಕೆಂದು ಬಯಸಿ, ಭವಿಷ್ಯಕಾರರಾದರು. ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯಿಂದ ಆಯುರ್ವೇದ ವೈದ್ಯಕೀಯ ಶಾಸ್ತ್ರದಲ್ಲಿ ಪದವಿಯನ್ನು ಪಡೆದಿದ್ದಾರೆ. ತಂದೆಯ ಹಾದಿಯಲ್ಲಿ ನಡೆದ ಎಸ್.ಕೆ. ಜೈನ್ ಅವರು ಏಳು ಭಾಷೆಗಳನ್ನು ಹಾಗೂ ಆಯುರ್ವೇದ ವೈದ್ಯಶಾಸ್ತ್ರವನ್ನು ಕಲಿತಿದ್ದಾರೆ.
ಹಲವಾರು ಪತ್ರಿಕೆಗಳಿಗೆ ವಾರಭವಿಷ್ಯವನ್ನು ಬರೆದಿರುವ ಶ್ರೀಯುತರ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಲೇಖನಗಳು ಬಂದಿವೆ. ಡಾ. ಎಸ್.ಕೆ. ಜೈನ್ ಅವರು ಹಲವಾರು ರಾಜಕೀಯ ಧುರೀಣರು, ಚಿತ್ರಕಲಾವಿದರು, ಉದ್ಯಮಿಗಳು, ಗಾಯಕರು, ಕಲಾವಿದರು ಹಾಗೂ ಸಾರ್ವಜನಿಕರಿಗೆ ಭವಿಷ್ಯವನ್ನು ಹೇಳಿದ್ದಾರೆ.
ಜ್ಯೋತಿಷ್ಯ ಶಾಸ್ತ್ರವನ್ನು ಕುರಿತು ಪ್ರಶ್ನೆ ಸಂಜೀವಿನಿ, ಚಾಣಕ್ಯ ನೀತಿಶಾಸ್ತ್ರ, ಕಾಲಚಕ್ರ ಪಂಚಾಂಗ ಪುಸ್ತಕಗಳನ್ನು ರಚಿಸಿರುವ ಶ್ರೀಯುತರು ಕಾಲಚಕ್ರ ಎಫೆಮೆರಿಸ್ ಎಂಬ ಗ್ರಂಥವನ್ನು ಇಂಗ್ಲಿಷ್ನಲ್ಲಿ ಬರೆದಿದ್ದಾರೆ.
ಪ್ರಸಿದ್ಧ ವೈಜ್ಞಾನಿಕ ಜ್ಯೋತಿಷ್ಯ ಶಾಸ್ತ್ರಜ್ಞ ನಿಖರ ಭವಿಷ್ಯವಾಣಿಗೆ ಹೆಸರಾದವರು ಶ್ರೀ ಎಸ್.ಕೆ. ಜೈನ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ವಿದ್ವಾನ್ ಟಿ. ನರಸಿಂಹಮೂರ್ತಿ ಶಾಸ್ತ್ರಿ

ವೇದ ಪಾರಂಗತ ಸಂಸ್ಕೃತ ವಿದ್ವಾನ್ ಟಿ. ನರಸಿಂಹಮೂರ್ತಿ ಶಾಸ್ತ್ರಿ ಅವರು.
೧೯೩೨ರಲ್ಲಿ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ತಿಮ್ಮಸಂದ್ರ ಗ್ರಾಮದಲ್ಲಿ ಜನನ, ತಂದೆ ಟಿ. ಚಿದಂಬರಪ್ಪ ತಾಯಿ ಟಿ. ನರಸಮ್ಮ, ಅರ್ಚಕರ ಮಗನಾಗಿ ಜನಿಸಿ ಕೃಷ್ಣ ಯರ್ಜುವೇದ ಅಧ್ಯಯನ ಮಾಡಿ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸ್ಮಾರ್ತ ಪ್ರಯೋಗದಲ್ಲಿ ವಿದ್ವತೆ ಮತ್ತು ಶ್ವೇತ ವಿದ್ವತ್ ಪ್ರಯೋಗಗಳನ್ನು ಅಭ್ಯಾಸ ಮಾಡಿರುತ್ತಾರೆ.
ಪ್ರಸ್ತುತ ಮಾಗಡಿಕರಣಿಕರ ವೈದಿಕ ಧರ್ಮ ಪಾಠಶಾಲೆಯಲ್ಲಿ ವೇದ ಮತ್ತು ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರು ವಿದ್ವಾನ್ ಟಿ. ನರಸಿಂಹಮೂರ್ತಿ ಶಾಸ್ತ್ರಿ
ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ದೈವಜ್ಞ ಕೆ.ಎನ್. ಸೋಮಯಾಜ

ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರ, ತಂತ್ರಶಾಸ್ತ್ರದಲ್ಲಿ ಹಿರಿಯ ವೈದಿಕ ವಿದ್ವಾಂಸರು ದೈವಜ್ಞ ಕೆ.ಎನ್. ಸೋಮಯಾಜಿ ಅವರು.
೧೯೫೯ರಲ್ಲಿ ವೈದಿಕ ವಿದ್ವಾಂಸ ಮನೆತನದಲ್ಲಿ ಜನನ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಕಟಿಸಿರುವ ರಾಷ್ಟ್ರೀಯ ಪಂಚಾಂಗಕ್ಕೆ ಮುಖ್ಯ ಸಂಪಾದಕರು. ತಿರುಮಲ ತಿರುಪತಿ ದೇವಸ್ಥಾನ ಪ್ರಕಟಿಸುವ ಶಾಸ್ತ್ರ ಸಿದ್ಧ ಪಂಚಾಂಗಕ್ಕೆ ಸಂಪಾದಕರಾಗಿದ್ದರು. ಕಲ್ಪತರು ರಿಸರ್ಚ್ ಅಕಾಡೆಮಿ ಎಂಬ ಪ್ರಾಚ್ಯ ಸಂಶೋಧನ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದು, ಇದರಲ್ಲಿ ವೇದ, ಆಗಮಶಾಸ್ತ್ರ ಮತ್ತು ಇತರ ವಿಭಾಗಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಸಂಸ್ಥೆಯ ಪ್ರಧಾನ ಸಂಪಾದಕರಾಗಿ ದೈವಜ್ಞಕೆ.ಎನ್. ಸೋಮಯಾಜಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶವಿದೇಶಗಳಲ್ಲಿ ಸಂಚರಿಸಿ ಅನೇಕ ಗಣ್ಯರಿಗೆ ಜ್ಯೋತಿಷ್ಯ ಸಲಹೆ ನೀಡಿರುತ್ತಾರೆ.
ಶೃಂಗೇರಿ ಶಾರದಾ ಪೀಠದ ಧರ್ಮಾಧಿಕಾರಿಗಳೂ ಆಗಿರುವ ಶ್ರೀಯುತ ದೈವಜ್ಞ ಕೆ.ಎನ್. ಸೋಮಯಾಜಿ ಅವರು ವೇದಾಧ್ಯಯನ ಮತ್ತು ಸಂಸ್ಕೃತ ಭಾಷೆಯ ಏಳಿಗೆಗಾಗಿ ಅವಿರತ ದುಡಿಯುತ್ತಿರುವ ಹಿರಿಯ ಚೇತನ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಚನ್ನಬಸಪ್ಪ ಕುಳಗೇರಿ

ಹೈದರಾಬಾದ್ ವಿಮೋಚನಾ ಚಳುವಳಿಯ ಸಕ್ರಿಯ ಕಾರ್ಯಕರ್ತ ಶ್ರೀ ಕೆ. ಚೆನ್ನಬಸಪ್ಪ ಕುಳಗೇರಿ,
ಇಂಟರ್ಮೀಡಿಯೆಟ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಕಾಲೇಜು ಬಹಿಷ್ಕರಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡು ವಿದ್ಯಾಭ್ಯಾಸವನ್ನೇ ತ್ಯಜಿಸಿದವರು. ಮುಂದೆ ಹೈದರಾಬಾದ್ ಸಂಸ್ಥಾನದ ವಿಮೋಚನೆಗಾಗಿ ಭೂಗತ ಹೋರಾಟದಲ್ಲಿ ತೊಡಗಿದವರು. ಸ್ವಾತಂತ್ರ್ಯದ ನಂತರ ಸೇವಾ ಸಹಕಾರ ಸಂಘಗಳನ್ನು ಸ್ಥಾಪಿಸಿ ಜನರ ಸಮಸ್ಯೆಗಳಿಗೆ, ಶಿಕ್ಷಣಕ್ಕೆ ಸ್ಪಂದಿಸಿದ ಧೀಮಂತ ನಾಯಕ ಶ್ರೀ ಕುಳಗೇರಿ ಅವರು. ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಜೇವರ್ಗಿ ತಾಲ್ಲೂಕು ಕಾಂಗ್ರೆಸ್ನ ಮೊದಲ ಅಧ್ಯಕ್ಷರಾಗಿ ಜಿಲ್ಲಾ ಜನತಾಪಕ್ಷ, ಜನತಾದಳಗಳ ಅಧ್ಯಕ್ಷರಾಗಿ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ರೈತರ ಪರವಾಗಿ ಹೋರಾಡಿದವರು.
೭೮ರ ಇಳಿವಯಸ್ಸಿನಲ್ಲೂ ಸಮಾಜಸೇವೆಯಲ್ಲಿ ತೊಡಗಿರುವ ಜನಪರ ಕಾಳಜಿಯ ಧುರೀಣ ಶ್ರೀ ಕೆ. ಚೆನ್ನಬಸಪ್ಪ ಕುಳಗೇರಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ

ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳಿಗೇ ಮಠ ಮಾನ್ಯಗಳು ಸೀಮಿತವೆಂಬ ನುಡಿಗೆ ಅಪವಾದವೆಂಬಂತೆ ನಿಡುಮಾಮಿಡಿ ಮಠವನ್ನು ಮಾನವ ಧರ್ಮಪೀಠವಾಗಿಸಿ ವೈಚಾರಿಕವಾಗಿ, ಸಾಮಾಜಿಕ ಬದಲಾವಣೆಗೆ ತೊಡಗಿಸಿದ ಸಿಡಿಲ ಸನ್ಯಾಸಿ, ಕವಿ, ಚಿಂತಕ, ಸಮಾಜವಾದಿ, ಸಮಾಜಸೇವಕ ಶ್ರೀಯುತ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು.
ಉನ್ನತ ಶಿಕ್ಷಣ ಪಡೆದೂ ಒಂದು ಮಠದ ಸ್ವಾಮೀಜಿಯಾದ ಶ್ರೀಯುತರು ಮಠದ ಕಾರ್ಯಚಟುವಟಿಕೆಗಳಿಗೆ ಇದ್ದ ಎಲ್ಲೆಯನ್ನು ವಿಸ್ತರಿಸಿ ಮಠಗಳು ಸಾಮಾಜಿಕ ಚಿಂತನೆಗೆ, ಶೈಕ್ಷಣಿಕ ಪ್ರಗತಿಗೆ, ವೈಚಾರಿಕ ಪ್ರಖರತೆಗೆ ಮಾರ್ಗದರ್ಶಕ ಕೇಂದ್ರಗಳಾಗಬಲ್ಲವು ಎಂಬುದನ್ನು ತೋರಿಸಿಕೊಟ್ಟ ಬಸವ ಪಥದ ವಿಚಾರವಾದಿ ಸಾಹಿತಿಗಳಿವರು. ವ್ಯವಸ್ಥೆಯ ಅಸಮಾನತೆಯ ವಿರುದ್ಧ ಸದಾ ದನಿಯೆತ್ತುವ ಜನಪರ ಚಿಂತಕರಿವರು. ಸರಳ ನಡೆ, ನೇರ ನುಡಿ, ದೀನ ದುರ್ಬಲಪರವಾದ ಸಮಾಜೋದ್ಧಾರ ಕಾಯಕ, ಇವರ ಬದುಕಿನ ಪರಿ ಶ್ರೀಯುತರ ಸುಳ್ಳು ಸೃಷ್ಟಿಗಳು ಎಂಬ ಕವನ ಸಂಕಲನ ಬಹು ಚರ್ಚಿತ.
ದೀನ ದಲಿತರ ಸಮಾನತೆಗೆ, ಶೈಕ್ಷಣಿಕ ಪ್ರಗತಿಗೆ, ಮಹಿಳಾ ಸಮಾಜದ ಉದ್ಧಾರಕ್ಕೆ ಸದಾ ದುಡಿಯುವ ಶ್ರೀಯುತರ ಸೇವೆಗೆ ಸಂದ ಗೌರವ ಸನ್ಮಾನಗಳು ಹಲವು. ಯೋಗಿ, ಚಿಂತಕ, ಸಾಮಾಜಿಕ ಪರಿವರ್ತನೆಗೆ ಸದಾ ದುಡಿವ ಚೇತನ ಶ್ರೀ ನಿಡುಮಾಮಿಡಿ ಸ್ವಾಮೀಜಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಮಹಮದ್ ಷರೀಫ್ ಗುಲ್ಬನ್

– ತನ್ನ ನಿತ್ಯ ಕಾಯಕದಲ್ಲೇ ನೂರೆಂಟು ಕುಸುರಿ ಕಲೆ ಅರಳಿಸಿ ಎಲ್ಲರ ಗಮನ ಸೆಳೆಯಬಲ್ಲ ಅಪರೂಪದ ಬಿದರಿ ಕಲಾವಿದ ಶ್ರೀ ಮಹಮದ್ ಶರೀಫ್ ಗುಲ್ಬನ್ ಬಿದರಿ ಅವರು.
ಬೀದರ್ ನಗರದ ಕುಸುವಾಗಲ್ಲಿಯಲ್ಲಿ ೧೯೩೯ರಲ್ಲಿ ಜನಿಸಿದ ಶರೀಫರು ಚಿಕ್ಕಂದಿನಿಂದಲೇ ಬಿದರಿ ಕಲೆಯಲ್ಲಿ ನೈಪುಣ್ಯವನ್ನು ಮೆರೆದವರು, ಗ್ಲೋಬಲೈಸ್, ಮಾಸ್ಟರ್ಲೈಸ್, ಉಮರ್ ಖಯಾಂ ಮಾದರಿಯ ಬಿದರಿ ಕೆಲಸಗಳನ್ನು ಮಾಡಿ ದೇಶದ ಮೂಲೆ ಮೂಲೆಯಲ್ಲಿ ಮಾರಾಟ ಮಾಡುವುದಲ್ಲದೆ ಹೊರದೇಶಗಳಿಗೂ ರಫ್ತು ಮಾಡುವ ಅಪಾರ ಬೇಡಿಕೆಯ ಕಲೆ ಇವರದು. ಇವರ ಬಿದರಿ ಕಲೆಯ ನೈಪುಣ್ಯತೆಗೆ ೧೯೭೮ರಲ್ಲಿ ಕರ್ನಾಟಕ ನಿಪುಣ ಶಿಲ್ಪಾಚಾರ ಪ್ರಶಸ್ತಿ, ಭಾರತದ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ಇಲಾಖಾ ಪ್ರಶಸ್ತಿಗಳಲ್ಲದೆ ಅನೇಕ ಸಂಘ ಸಂಸ್ಥೆಗಳಿಂದಲೂ ಪುರಸ್ಕಾರ, ಬಹುಮಾನಗಳು ಲಭಿಸಿವೆ.
೬೫ರ ಇಳಿವಯಸ್ಸಿನಲ್ಲೂ ಆರ್ಥಿಕ ಅಡಚಣೆಗಳ ನಡುವೆಯೂ ತಮ್ಮ ಬಿದರಿ ಕಲೆ ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಅಪರೂಪದ ಕುಶಲಕರ್ಮಿ ಶ್ರೀ ಮಹಮದ್ ಶರೀಫ್ ಗುಲ್ಡನ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಸಿ.ವಿ. ಗೋಪಿನಾಥ್

ದೂರಸಂಪರ್ಕ ಇಂಜಿನಿಯರಾಗಿ, ತಾಯುಡಿಯ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿರುವವರು ಶ್ರೀ ಸಿ.ವಿ.ಗೋಪಿನಾಥ್ ಅವರು.
೧೯೪೫ರಲ್ಲಿ ಹುಟ್ಟಿದ ಶ್ರೀ ಸಿ.ವಿ. ಗೋಪಿನಾಥ್ ಬಿಸಿನೆಸ್ ಮ್ಯಾನೇಜ್ಮೆಂಟಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಿ.ಎಸ್.ಎನ್.ಎಲ್.ನಲ್ಲಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿ, ಭಾರತಾದ್ಯಂತ ಕೆಲಸ ಮಾಡಿರುವ ಶ್ರೀಯುತರು ತಾವು ಸೇವೆ ಸಲ್ಲಿಸಿದ ಸ್ಥಳಗಳಲೆಲ್ಲ ಕನ್ನಡ ಸಂಘಗಳನ್ನು ಸ್ಥಾಪಿಸಲು ಕಾರಣಕರ್ತರಾಗಿದ್ದಾರೆ. ಜಬ್ಬಲ್ಪುರ, ಅಹಮದಾಬಾದ್ ಮತ್ತು ದೆಹಲಿಯ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ, ದೆಹಲಿ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಳಿದಾಸ ಮಾನಸ ಸರೋವರ ಯಾತ್ರಾ ತಂಡಗಳಿಗೆ ಸಂಪರ್ಕಾಧಿಕಾರಿಯಾಗಿ ಹೋಗಿದ್ದು, ಅಲ್ಲಿನ ವಿವರಗಳನ್ನು ವಿಡಿಯೋಕರಣ ಮಾಡಿಕೊಂಡು ಸಿ.ಡಿ. ಡಿಸ್ಕ್ಗಳನ್ನು ಮಾಡಿದ್ದಾರೆ ಹಾಗೂ ಅದನ್ನು ರಾಷ್ಟ್ರಾದ್ಯಂತ ಪ್ರಚುರಪಡಿಸಿದ್ದಾರೆ.
ಗುಜರಾತಿ, ಮರಾಠಿ, ಬೆಂಗಾಲಿ, ಹಿಂದಿ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಗಳನ್ನು ಮಾತನಾಡಬಲ್ಲ, ವೇದಗಳನ್ನು, ಸಂಸ್ಕೃತ ಶ್ಲೋಕಗಳನ್ನು ಕಲಿಸುವ ಗೋಪಿನಾಥ್ ಅವರು ಸಾಂಪ್ರದಾಯಿಕ ಶಾಲೆಯನ್ನು ನಡೆಸುತ್ತಿದ್ದಾರೆ. ಮೂರು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದ್ದಾರೆ. ಹಾಗೂ ಶ್ರೀಯುತರ ಸಂದರ್ಶನಗಳು ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಸಾರಗೊಂಡಿವೆ.
ಹೊರನಾಡ ಕನ್ನಡಿಗರಾಗಿ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವಕರಲ್ಲಿ ಪಸರಿಸುತ್ತಿರುವವರು ಶ್ರೀ ಸಿ.ವಿ. ಗೋಪಿನಾಥ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಶ್ರೀ ವೀರೇಶ್ವರ ಪುಣ್ಯಾಶ್ರಮ

ಶ್ರೀ ವೀರೇಶ್ವರ ಪುಣ್ಯಾಶ್ರಮ ೧೯೪೨ರಲ್ಲಿ ಪಂ. ಪಂಚಾಕ್ಷರಿ ಗವಾಯಿಗಳಿಂದ ಸ್ಥಾಪಿಸಲ್ಪಟ್ಟಿತು. ಆರಂಭದಲ್ಲಿ ಇದು ದಾನಿ ಬಸರಿಗಿಡದ ವೀರಪ್ಪನವರು ದಾನವಾಗಿ ನೀಡಿದ ಗದಗಿನ ಮಸಾರಿಯಲ್ಲಿ ಆರಂಭಗೊಂಡಿತು. ಅಂಧ ಕಲಾವಿದರಿಗೆ ವಿಶೇಷವಾಗಿ ಶಿಕ್ಷಣ ನೀಡಲು ಸ್ಥಾಪಿಸಿದ ಈ ಸಂಸ್ಥೆ ಇತರರಿಗೂ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿತು.ಹೀಗಾಗಿ ಈ ಸಂಸ್ಥೆಯಿಂದ ಆನೇಕ ಗಾಯಕರು ಪ್ರಸಿದ್ಧಿಗೆ ಬಂದಿದ್ದಾರೆ ಸರ್ವಶ್ರೀ ಅರ್ಜುನ ಸಾ ನಾಕೋಡ, ಸಿದ್ದರಾಮ ಜಂಬಲದಿನ್ನಿ, ಅರ್.ವಿ ಶೇಷಾದ್ರಿ ಗವಾಯಿ, ಸೋಮನಾಥ ಮರಡೂರ ಚಂದ್ರಶೇಖರ್ ಸ್ವಾಮಿ ಪುರಾಣೀಕ ಮಠ ಮುಂತಾದವರು ಪ್ರಮುಖರು.
ಅಂಧಗಾಯಕ ವಾಧಕ ಡಾ|| ಪುಟ್ಟರಾಜಕವಿ ಗವಾಯಿಗಳು ಪುಣ್ಯಾಶ್ರಮ ಸೇರಿದಾಗ ತಮಗೆ ಸರಿಯಾದ ಉತ್ತರಾಧಿಕಾರಿಯಾಗುನೆಂಬ ನಂಬಿಕೆ ಬಂದು ಆತನಿಗೆ ಆಶ್ರಮದ ಸಕಲ ಉಸ್ತುವಾರಿಯನ್ನು ವಹಿಸಿದರು ೧೯೪೫ರಲ್ಲಿ ಪಂಚಾಕ್ಷರಿ ಗವಾಯಿಗಳು ಶಿವೈಕ್ಯರಾದ ನಂತರ ಪುಟ್ಟರಾಜ ಗವಾಯಿಗಳೇ ಅದರ ಅಧಿಕಾರ ವಹಿಸಿಕೊಂಡರು. ಆಶ್ರಮ ಇದ್ದ ಸ್ಥಳದಲ್ಲಿ ಪಂಚಾಕ್ಷರಿ ಗವಾಯಿಗಳ ಸಮಾಧಿ ಮಾಡಿ ಪ್ರಸ್ತುತ ಇರುವ ಕಟ್ಟಡದಲ್ಲಿ ಆಶ್ರಮ ಸ್ಥಾಪಿತವಾಯಿತು. ಪುಟ್ಟರಾಜ ಗವಾಯಿಗಳ ಸತತ ಪರಿಶ್ರಮದ ಫಲವಾಗಿ ಇಂದು ಇದು ಒಂದು ಬೃಹತ್ ಸಂಸ್ಥೆಯಾಗಿ ಬೆಳೆದು ಅಲ್ಲಿನ ಶಿಷ್ಯ ಪರಂಪರೆಯಿಂದ ಭಾರತಾದ್ಯಂತ ಅನೇಕ ಶಾಖೆಗಳನ್ನು ಹೊಂದಿದ, ಆನೇಕ ಶೈಕ್ಷಣಿಕ ಅಂಗ ಸಂಸ್ಥೆಗಳನ್ನು ಹೊಂದಿದೆ.
ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಅಂಧ ವಸತಿಗೃಹ ಪಿ.ಪಿ.ಜಿ. ವಸತಿ ಬೈಲ್ ಶಾಲೆ, ಸಂಸ್ಕೃತ ಪಾಠಶಾಲೆ, ಕುಮಾರೇಶ್ವರ ಕೃಪಾಪೋಷಿತ ಸಂಗೀತ ಪಾಠಶಾಲೆ, ಪಿ.ಪಿ.ಜಿ. ಕಲಾ ಮಹಾವಿದ್ಯಾಲಯ, ಸಂಗೀತ ಮಹಾವಿದ್ಯಾಲಯ ಮುಂತಾದ ಸಂಸ್ಥೆಗಳು ಗದಗಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಶ್ರೀವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಅಮೇರಿಕದ ರೋಟರಿ ಸಂಸ್ಥೆಯ ನೆರವಿನಿಂದ ೨೫ ಲಕ್ಷರೂ. ವೆಚ್ಚದಲ್ಲಿ ಸುಸಜ್ಜಿತ ವಸತಿ ಗೃಹವೊಂದನ್ನು ಅಂಧ ಮಕ್ಕಳಿಗಾಗಿಯೇ ನಿರ್ಮಿಸಲಾಗಿದೆ. ಪಂಡಿತ ಪುಟ್ಟರಾಜ ಕವಿ ಗವಾಯಿಗಳು ತಮ್ಮ ೮೭ರ ಹರೆಯದಲ್ಲಿಯೂ ಸನ್ಯಾಸ ಧರ್ಮವನ್ನು ಪರಿಗ್ರಹಿಸಿ ಆಹರ್ನಿಶಿ ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಈ ಸಂಗೀತ ಮಹಾವಿದ್ಯಾಲಯ ಇಡೀ ರಾಷ್ಟ್ರಕ್ಕೆ ಮಾದರಿಯಾಗಿರುವ ಸಂಸ್ಥೆಯಾಗಿದೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ಕರುಣಾಶ್ರಯ

ಕ್ಯಾನ್ಸರ್ ರೋಗಿಗಳಿಗೆ ರೋಗ ಉಲ್ಬಣ ಹಂತವನ್ನು ಮುಟ್ಟಿದಾಗ ಅವರನ್ನು ನೋಡಿಕೊಳ್ಳಲೆಂದೇ ೧೯೯೯ರಲ್ಲಿ ರೂಪಿತವಾದ ಸಂಸ್ಥೆ ‘ಕರುಣಾಶ್ರಯ’.
ಕ್ಯಾನ್ಸರ್ ರೋಗಿಗಳ ಅಂತಿಮ ಕ್ಷಣಗಳಲ್ಲಿ ಪ್ರೀತಿಯ ಆರೈಕೆ, ಸಂತೈಕೆಗಳು ಅಗತ್ಯ. ಇದನ್ನು ಕರುಣಾಶ್ರಯ ಸಂಸ್ಥೆಯು ಜಾತಿ, ಮತ, ಲಿಂಗ ಮತ್ತು ಆರ್ಥಿಕ ಸ್ಥಾನಮಾನವನ್ನು ಲಕ್ಷಿಸದೆ, ಪೂರ್ಣವಾಗಿ ಉಚಿತವಾಗಿ ನೋಡಿಕೊಳ್ಳುತ್ತದೆ. ಮಧ್ಯಮವರ್ಗದವರ ಪಾಲಿಗೆ ವರದಾನವಾಗಿರುವ ಆಶ್ರಯ ತಾಣ. ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಿಂದಲ್ಲದೆ ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಮುಂತಾದ ದೂರದ ಪ್ರದೇಶಗಳಿಂದಲೂ ರೋಗಿಗಳು ‘ಕರುಣಾಶ್ರಯ ಕ್ಕೆ ಬರುತ್ತಾರೆ.
ಕರುಣಾಶ್ರಯ ಸಂಸ್ಥೆ ರೋಗಿಗಳಲ್ಲದೆ, ರೋಗಿಯ ಅಂತಿಮ ಕ್ಷಣಗಳಲ್ಲಿ ಕುಟುಂಬ ವರ್ಗದವರಿಗೂ ಸಾಂತ್ವನ ನೀಡುತ್ತದೆ. ಶಾಂತಿ ಮತ್ತು ಮನೆಯ ವಾತಾವರಣವನ್ನು ಕಲ್ಪಿಸಿಕೊಡುವ ಕರುಣಾಶ್ರಯ ಸಂಸ್ಥೆಯಲ್ಲಿ ೫೦ ಒಳರೋಗಿಗಳನ್ನು ಹೊಂದುವ ಸೌಕರ್ಯವಿದೆ.
ಸಂಸ್ಥೆಯು ೩೮೦೦ಕ್ಕೂ ಹೆಚ್ಚು ಸಂಖ್ಯೆಯ ರೋಗಿಗಳನ್ನು ನೋಡಿಕೊಂಡಿದೆ. ಅದರಲ್ಲಿ ೨೭೦೦ ತಮ್ಮ ಬದುಕಿನ ಅಂತ್ಯದಲ್ಲಿ ಶಾಂತಿ, ನೆಮ್ಮದಿಯ ದಿನಗಳನ್ನು ಕಳೆದಿದ್ದಾರೆ.
ಕರುಣಾಶ್ರಯವು ಭಾರತೀಯ ಕ್ಯಾನ್ಸರ್ ಸೊಸೈಟಿ, ಕರ್ನಾಟಕ ಶಾಖೆ ಮತ್ತು ಇಂದಿರಾನಗರದ ರೋಟರಿ ಕ್ಲಬ್ಗಳ ಜಂಟಿ ಯೋಜನೆಯಿಂದ

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಹೆಚ್.ಎಸ್. ನಿಂಗಪ್ಪ

ಮಹಾವಿದ್ಯಾಲಯದ ಡಾ. ಹೆಚ್. ಎಸ್. ನಿಂಗಪ್ಪ. ಜನಾನುರಾಗಿ ಪ್ರಾಂಶುಪಾಲರು ೧೯೩೭ರಲ್ಲಿ ಹಾಸನ ಜಿಲ್ಲೆಯ ಹೊನ್ನೇನಹಳ್ಳಿ ಜನನ. ೧೯೫೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ, ೧೯೬೪ರಲ್ಲಿ ಬಿ.ಇ, ೧೯೬೯ರಲ್ಲಿ ಐ.ಐ.ಟಿ. ಮುಂಬಯಿನಿಂದ ಎಂ.ಟೆಕ್ ಮತ್ತು ೧೯೮೩ರಲ್ಲಿ ಐ.ಐ.ಟಿ. ಕಾನ್ಸುರದಿಂದ ಪಿಎಚ್.ಡಿ. ಪದವಿ. ೧೯೬೪ರಲ್ಲಿ ಹಾಸನದ ಎಂ.ಸಿ.ಇ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿಜೀವನದ ಆರಂಬ ಪ್ರಸ್ತುತ ಚಿಕ್ಕಬಳ್ಳಾಪುರದ ಎಸ್. ಜೆ. ಸಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ, ಪ್ರಾಂಶುಪಾಲರಾಗಿದ್ದಾರೆ.
ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿ ಪ್ರಬಂಧಗಳ ಮಂಡನೆ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ, ಜಿಲ್ಲಾಧ್ಯಕ್ಷರಾಗಿ ಕನ್ನಡಪರ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಸರಳ ಸಜ್ಜನಿಕೆಗೆ, ಅಪ್ಪಟ ದೇಶೀಯತೆ, ಉತ್ತಮ ಸಂಘಟನೆಗೆ ಹೆಸರಾದ ಜನಪ್ರಿಯ ಪ್ರಾಧ್ಯಾಪಕರು ಡಾ. ಹೆಚ್. ಎಸ್. ನಿಂಗಪ್ಪ ಅವರು

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ದೇವರಾಜ ಸರ್ಕಾ

ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ತಾವೇ ಒಂದು ಪ್ರಯೋಗಾಲಯವಾಗಿ ದುಡಿದ ಅದ್ಭುತ ಶಿಕ್ಷಣ ತಜ್ಞ ಎಚ್.ಬಿ. ದೇವರಾಜ ಸರ್ಕಾ.
೧೯೨೯ರಲ್ಲಿ ಹಾಸನದಲ್ಲಿ ಜನಿಸಿದ ಶ್ರೀಯುತರು ಹಂತ ಹಂತವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮೇಲೇರಿ ಪೋಸ್ಟ್ ಡಾಕ್ಟೋರಲ್ವರೆಗೆ ತಮ್ಮ ಶಿಕ್ಷಣವನ್ನು ವಿಸ್ತರಿಸಿದರು. ೧೯೫೦ರಲ್ಲಿ ಜೀವಶಾಸ್ತ್ರ ಅಧ್ಯಾಪಕನಾಗಿ ವೃತ್ತಿ ಬದುಕನ್ನು ಆರಂಭಿಸಿ ೧೯೯೩ರವರೆಗೆ ಪ್ರಾಣಿಶಾಸ್ತ್ರ ಅಧ್ಯಾಪಕ, ಪ್ರವಾಚಕ, ಮುಖ್ಯಸ್ಥರಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ, ಡೀನ್ ಆಗಿ ಯು.ಜಿ.ಸಿ. ಎಮರೇಟಸ್ ಫೆಲೋ ಆಗಿ ಮೈಸೂರು, ಕೊಮೇನಿಯನ್, ಜಪಾನ್, ಸಿಂಗಪೂರ್, ಅಹಮದಾಬಾದ್, ವಿಶ್ವವಿದ್ಯಾಲಯಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸರ್ಕಾರ್ ಅವರು ವಿಜ್ಞಾನ ಸಂಸ್ಥೆಗಳ ಸದಸ್ಯರಾಗಿ, ವಿಜ್ಞಾನ ಪತ್ರಿಕೆಗಳ ಸಂಪಾದಕರಾಗಿ, ವಿಜ್ಞಾನ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ ವಿಜ್ಞಾನ ಶಿಬಿರಗಳ ಸಂಘಟಕರಾಗಿ, ಸಂಶೋಧಕರಾಗಿಯೂ ದುಡಿದ ಮೇಧಾವಿ, ಜೀವಶಾಸ್ತ್ರ, ಪ್ರಾಣಿಶಾಸ್ತ್ರದ ಕುರಿತು ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಶ್ರೀ ಎಚ್.ಬಿ. ದೇವರಾಜ ಸರ್ಕಾರ್ ಅವರು ಕನ್ನಡ ನಾಡಿನ ಹೆಮ್ಮೆಯ ಶಿಕ್ಷಣ ತಜ್ಞರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಎಚ್.ಜೆ. ಲಕ್ಕಪ್ಪಗೌಡ

ಸಾಹಿತ್ಯ, ಸಂಸ್ಕೃತಿ, ಜಾನಪದ, ಆಡಳಿತ, ಕಾನೂನು, ಸಂಘಟನೆಗಳಲ್ಲಿ ವಿಶೇಷ ಸಾಮರ್ಥ್ಯವನ್ನು ಪ್ರಕಟಿಸಿದ ಕ್ರಿಯಾಶೀಲ ಚೇತನ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು.
ಕರ್ನಾಟಕ ಜಾನಪದ ಅಧ್ಯಯನದಲ್ಲಿ ಅದಕ್ಕೆ ಹೊಸ ಚಿಂತನೆಯನ್ನು ಮೂಡಿಸಿದವರು. ಸಮಕಾಲೀನ ಜಾನಪದ ಅಸ್ತಿತ್ವಕ್ಕೆ ಭದ್ರ ಬುನಾದಿ ಹಾಕಿದವರು. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಶಾರದಾ ವಿಲಾಸ ಕಾಲೇಜು ಹಾಗೂ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮುಂದೆ ಬಿ.ಆರ್.ಪ್ರಾಜೆಕ್ಟ್ನ ಸ್ನಾತಕೋತ್ತರ ಕೇಂದ್ರ ಸೇರಿ, ವಿಭಾಗದ ಮುಖ್ಯಸ್ಥರಾಗಿ, ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ದಕ್ಷ ಆಡಳಿತಗಾರರೆಂದು ಹೆಸರು ಪಡೆದವರು. ಅಧ್ಯಾಪಕ ವೃತ್ತಿಯಲ್ಲಿರುವಾಗಲೇ ಹಲವಾರು ಸಂಘ ಸಂಸ್ಥೆಗಳ ಆಡಳಿತಗಾರರಾಗಿ, ಸಲಹೆಗಾರರಾಗಿ ಕೆಲಸ ಮಾಡಿದರು. ಮಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಸಲಹೆಗಾರರಾಗಿ, ಕಲಾ ವಿಭಾಗದ ಕ್ಷೇಮಪಾಲಕರಾಗಿ, ಸೆನೆಟ್ ಸಿಂಡಿಕೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲಕ್ಕಪ್ಪಗೌಡರು ಮಾಡಿದ ಸಾಧನೆ ಅಪಾರವಾದದ್ದಷ್ಟೇ ಅಲ್ಲ, ವೈವಿಧ್ಯಮಯ ಮತ್ತು ಆದರ್ಶಪ್ರಾಯವಾದದ್ದು. ಇವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಕನ್ನಡ ನಾಡು ನುಡಿ ಸಂಸ್ಕೃತಿ ಕುರಿತ ಕಾಳಜಿಯನ್ನು ಒಂದು ವಿಶ್ವವಿದ್ಯಾಲಯದ ಮೂಲಕ ತೋರಿಸಿ, ಅದನ್ನು ನೆರವೇರಿಸುವ ಹೊಣೆಗಾರಿಕೆಯನ್ನು ನಿಭಾಯಿಸಿದ್ದು ಅತ್ಯಂತ ಮಹತ್ವಪೂರ್ಣವಾದದ್ದು.
ಸ್ವಾತಂತ್ರ್ಯಾನಂತರದಲ್ಲಿ ಜಾನಪದವನ್ನು ಉಳಿಸಲು ಮತ್ತು ಬೆಳೆಸಲು ಶ್ರಮಿಸಿದ ಅಗ್ರಪಂಕ್ತಿಯ ಜಾನಪದ ವಿದ್ವಾಂಸರಲ್ಲಿ ಡಾ. ಎಚ್.ಜೆ. ಲಕ್ಕಪ್ಪಗೌಡರು ಒಬ್ಬರಾಗಿದ್ದಾರೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಶ್ರೀ ಷಡಕ್ಷರಪ್ಪ ಲಿಂಗಸುಗೂರು

ಗುರುವಿನ ಮಾರ್ಗದರ್ಶನದಂತೆ ಅರಿವಿನ ದಾರಿಗೆ ಬೆಳಕಾಗಿ ಬಾಳಿದ ಶಿಕ್ಷಣ ತಜ್ಞ ಹಿರಿಯ ಚೇತನ ಲಿಂಗಸುಗೂರು ಷಡಕ್ಷರಪ್ಪನವರು.
ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿದ್ದ ಲಿಂಗಸುಗೂರಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕನ್ನಡ ಉಸಿರಾಡುವಂತೆ ಮಾಡಿದ ಧೀಮಂತ ವ್ಯಕ್ತಿ ಷಡಕ್ಷರಪ್ಪನವರು. ಕಡುಬಡತನ ಬೆನ್ನಿಗೆ ಕಟ್ಟಿಕೊಂಡು ಮುಂದೆ ಓದಲಾಗದೆ ಅನಿವಾರ್ಯವಾಗಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಶ್ರೀಯುತರು ಹಿರಿಯರ ಮಾರ್ಗದರ್ಶನದಲ್ಲಿ ಬಹುಬೇಗನೇ ಉತ್ತಮ ಶಿಕ್ಷಕರೆನಿಸಿದರು. ನೇರ ನುಡಿಯ ಶಿಸ್ತಿನ ಸಿಪಾಯಿ ಷಡಕ್ಷರಪ್ಪನವರು ತಾವು ವರ್ಗವಾದ ಶಾಲೆಗಳಲ್ಲೆಲ್ಲಾ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.
ಇಸ್ಲಾಂ ಆಳ್ವಿಕೆಯಲ್ಲಿದ್ದ ಬೀದರ್ನಲ್ಲಿ ಕನ್ನಡ ಭಾಷೆ ಪ್ರಚಾರ ಮಾಡಿ ಜನಮನವನ್ನು ಕನ್ನಡದೆಡೆಗೆ ಸೆಳೆದ ಶ್ರೀಯುತರು ೧೯೭೦ರಲ್ಲೇ ಅವರ ಶೈಕ್ಷಣಿಕ ಸಾಧನೆಗೆ ರಾಜ್ಯ ಪ್ರಶಸ್ತಿ ಪಡೆದರು. ೧೯೭೪ರಲ್ಲಿ ಸೇವೆಯಿಂದ ನಿವೃತ್ತರಾದರೂ ಶೈಕ್ಷಣಿಕ ಸಂಸ್ಥೆಯೊಂದಿಗಿನ ಸಂಬಂಧ ಅವರನ್ನು ಬಿಡಲಿಲ್ಲ. ಅವರ ಶಿಕ್ಷಣ ಪ್ರೇಮ, ಶಿಕ್ಷಣ ಪ್ರಸಾರಕ್ಕೆ ಮೆಚ್ಚಿ ಅನೇಕ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ತಮ್ಮ ಇಳಿವಯಸ್ಸಿನಲ್ಲೂ ಶಿಕ್ಷಣ ಪ್ರಸಾರವನ್ನೇ ಕಾಯಕವೆಂದು ನಂಬಿ ಬದುಕುತ್ತಿರುವ ಹಿರಿಯ ಜೀವ ಶ್ರೀ ಷಡಕ್ಷರಪ್ಪನವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಡಬ್ಲ್ಯೂ, ಪಿ. ಕೃಷ್ಣ

ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡವರು ಸಮಾಜಸೇವಕ ಶ್ರೀ ಡಬ್ಲ್ಯೂ, ಪಿ. ಕೃಷ್ಣರವರು.
೧೯೬೩ ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀಯುತರು ಮೈಸೂರಿನ ಹೆಸರಾಂತ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಇ. ಹಾಗೂ ಎಲ್ಎಲ್.ಬಿ. ಪದವಿಗಳಿಸಿದ್ದಾರೆ. ಇವರ ತಂದೆ ಶ್ರೀ ಡಬ್ಲ್ಯೂ, ಹೆಚ್. ಪುಟ್ಟಯ್ಯನವರು ಹಿರಿಯ ಸ್ವಾತಂತ್ರ್ಯ ಯೋಧರು ಹಾಗೇ ತಾತನವರರಾದ ದಿ|| ಡಬ್ಲ್ಯೂ, ಹೆಚ್, ಹನುಮಂತಪ್ಪನವರು ಸಹ ಸ್ವಾತಂತ್ರ್ಯಯೋಧರಾಗಿದ್ದು ಬೆಂಗಳೂರಿನ ಪುರಸಭಾಧ್ಯಕ್ಷರು, ಮೈಸೂರು ಪ್ರಜಾಪ್ರತಿನಿಧಿಸಭಾ ಸದಸ್ಯರು ಹಾಗೂ ವಿಧಾನಸಭಾ ಸದಸ್ಯರು ಆಗಿದ್ದವರು.
ವೃತ್ತಿಯಲ್ಲಿ ಚಾರ್ಟಡ್್ರ ಇಂಜಿನಿಯರ್ ಹಾಗೂ ಅಧಿಕೃತ ಮೌಲ್ಯಮಾಪಕರೂ ಆಗಿರುವ ಕೃಷ್ಣ ಅವರು ಪ್ರತಿಷ್ಠಿತ ಶೇಷಾದ್ರಿಪುರಂ ಸಮೂಹ ಶಿಕ್ಷಣ ಸಂಸ್ಥೆಗಳ ಗೌII ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಖಾಸಗಿ ಸ್ನಾತಕೋತ್ತರ ಮಹಾವಿದ್ಯಾಲಯಗಳ ಸಂಘದ ಸ್ಥಾಪಕ ಕಾರ್ಯದರ್ಶಿಗಳು, ಭಾರತೀಯ ರೆಡ್ಕ್ರಾಸ್ ಸೊಸೈಟಿ, ಭಾರತ ಸೇವಾದಳ ಮುಂತಾದ ಸಂಸ್ಥೆಗಳ ಪ್ರಮುಖ ಸದಸ್ಯರೂ ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನದ ಬೆಂಗಳೂರು ಕೇಂದ್ರದ ಖಜಾಂಚಿಗಳಾಗಿದ್ದಾರೆ. ಶಿಕ್ಷಣ ಕ್ಷೇತ್ರದ ಸೇವೆಗಾಗಿ ೨೦೦೨ರಲ್ಲಿ ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ಸಮುದಾಯ ಸೇವೆಗಾಗಿ ೧೯೯೨ರಲ್ಲಿ ರಾಜ್ಯಯುವ ಪ್ರಶಸ್ತಿ ಇವರಿಗೆ ದೊರೆತಿದೆ.
ಇದಲ್ಲದೆ ರಾಜ್ಯದ ಹಲವಾರು ಸೇವಾಪರ ಸಂಸ್ಥೆಗಳಲ್ಲಿ ಪ್ರಮುಖ ಸದಸ್ಯರಾಗಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದು ನಾಡಿನ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ್ದಾರೆ.
ಇವರ ಈ ಬಹುಮುಖ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ೨೦೦೪ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಇವರ ಪ್ರತಿಭೆಯ ಕಿರೀಟಕ್ಕೆ ತೊಡಿಸಿದ ಮತ್ತೊಂದು ಗರಿ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ತಿರ್ತಾಡಿ ವಿಲಿಯಂ ಪಿಂಟೊ

ದೀನ ದಲಿತರ, ಕೃಷಿ ಕಾರ್ಮಿಕರ, ಬಡಜನರ ಏಳಿಗೆಗಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ನ್ಯಾಯವಾದಿ ಮತ್ತು ಸಮಾಜಸೇವಾ ಕಾರ್ಯಕರ್ತರು ಶ್ರೀ ಶಿರ್ತಾಡಿ ವಿಲಿಯಂ ಪಿಂಟೊ ಅವರು.
ಕಾರ್ಕಳ ತಾಲೂಕಿನ ಶಿರ್ತಾಡಿ ಎಂಬ ಹಳ್ಳಿಯ ಬಡ ರೈತ ಕುಟುಂಬದಲ್ಲಿ ೧೯೩೯ರಲ್ಲಿ ಜನನ, ಪ್ರಾಥಮಿಕ ವಿದ್ಯಾಭ್ಯಾಸ ಶಿರ್ತಾಡಿಯಲ್ಲಿ. ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಎಲ್ಎಲ್.ಬಿ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ೨೨ ವರ್ಷ ಉಡುಪಿ ಲಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಶ್ರೀ ಶಿರ್ತಾಡಿ ವಿಲಿಯಂ ಪಿಂಟೊ ಅವರು ಉಡುಪಿಯ ಜನಪ್ರಿಯ ನ್ಯಾಯವಾದಿ.
ಭೂಸುಧಾರಣೆ ಕುರಿತು ಕರ್ನಾಟಕ ಭೂ ಸುಧಾರಣೆ ಸಂಕ್ಷಿಪ್ರ ಪರಿಚಯ ‘ಜಿಲ್ಲಾ ಪಂಚಾಯತ್’ ಮಂಡಲ ಪಂಚಾಯತ್ ಕಾನೂನು ಹಾಗೂ ರಾಜಕೀಯ ಜಾಗೃತಿ, ಕರ್ನಾಟಕ ಪಂಚಾಯತ್ ರಾಜ್ ವಿಧೇಯಕ ರಾಜ್ಯ ಅಧಿನಿಯಮ ೯೩, ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ಥಾಪಕ ಸದಸ್ಯರಾಗಿ ಸುಮಾರು ೨೦ ವರ್ಷ ಉಡುಪಿ ತಾಲೂಕು ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಉಡುಪಿ ಎಲ್.ಐ.ಸಿ. ಯೂನಿಯನ್ನಿನ ಗೌರವ ಸದಸ್ಯರಾಗಿ ಹೀಗೆ ಹಲವು ಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿದ್ದಾರೆ.
ನೂರಾರು ಭಾಷಣಗಳ ಮೂಲಕ ಬಡಗೆಲ್ದಾರರಲ್ಲಿ ಜಾಗೃತಿ ಮೂಡಿಸಿದ ಶ್ರೀ ಶಿರ್ತಾಡಿ ವಿಲಿಯಂ ಪಿಂಟೋ ಅವರಿಗೆ ಸಂದೇಶ ವಿಶೇಷ ಪ್ರಶಸ್ತಿ, ಸಿಂಹ ಪ್ರಶಸ್ತಿ, ಕ್ಯಾಥೊಲಿಕ್ ಸಭಾ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಭೂ ಸುಧಾರಣಾ ಕಾನೂನು ಜಾರಿಯಾದಾಗ ನೂರಾರು ಭೂಹೀನ ರೈತರಿಗೆ ಭೂಮಿಯ ಹಕ್ಕನ್ನು ದೊರಕಿಸಿದೆ., ಗ್ರಾಮೀಣ ಜನರಿಗೆ ಕಾನೂನಿನ ನೆರವು ಹಾಗೂ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಮರ್ಪಣಾಭಾವದಿಂದ ಶ್ರಮಿಸುತ್ತಿರುವ ನ್ಯಾಯ ಪರವಾಗಿ ಸಮಾಜ ಸೇನಾ ಧುರೀಣ ಶ್ರೀ ಶಿರ್ತಾಡಿ ವಿಲಿಯಂ ಪಿಂಟೋ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಹರಿಕೃಷ್ಣ ಪುನರೂರು

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಹೋಟಲ್ ಉದ್ಯಮಿಯಾಗಿದ್ದು ಸಮಾಜಸೇವೆಯಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡು ಕನ್ನಡ ಪ್ರೀತಿಯೇ ಕಾರಣವಾಗಿ ಸಂಘಟನೆಯತ್ತಲೂ ಹೊರಳಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಾದಿಯೇರುವಲ್ಲಿನವರೆಗೆ ಹರಿಕೃಷ್ಣ ಪುನರೂರು ನಡೆದು ಬಂದ ಹಾದಿಯೇ ಒಂದು ರೋಚಕ ಹೋರಾಟದ ಕಥನ.
ಮುಲ್ಕಿ ಎಜುಕೇಷನ್ ಸೊಸೈಟಿ, ಶಾರದಾ ಎಜುಕೇಷನ್ ಸೊಸೈಟಿ, ಪಟೇಲ್ ವಾಸುದೇವರಾವ್ ಮೆಮೋರಿಯಲ್ ಟ್ರಸ್ಟ್ಗಳ ಮೂಲಕ ಬಡಮಕ್ಕಳಿಗೆ ಉಚಿತ ಶಿಕ್ಷಣ ಬಿಜಾಪುರದ ನಿರ್ಗತಿಕರ ಕುಟುಂಬದ ಮಕ್ಕಳಿಗೆ ರೂ. ಒಂದು ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ, ರೈತರಿಗೆ ಅನುಕೂಲವಾಗುವ ಕೃಷಿ ಮಾಹಿತಿ ನೀಡುವ ಪುಸ್ತಕಗಳ ಮುದ್ರಣ ಮತ್ತು ಉಚಿತ ಹಂಚಿಕೆ, ೧೨ ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು ೮೧ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ಮತ್ತು ೧೩ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂಘಟನೆ, ಅಖಿಲ ಭಾರತ ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನ ಸಂಘಟನೆ, ೧೦ ಸಾವಿರಕ್ಕಿಂತ ಅಧಿಕ ಮಂದಿಗೆ ಉಚಿತ ನೇತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಣೆ, ಕ್ಷಯ ಹಾಗೂ ಏಡ್ಸ್ ರೋಗಿಗಳಿಗಾಗಿ ಜಾಗೃತಿ ಶಿಬಿರ ಮತ್ತು ಶುಕ್ರೂಷೆಗೆ ವ್ಯವಸ್ಥೆ, ಪ್ರಕೃತಿ ವಿಕೋಪಕ್ಕೊಳಗಾಗಿ ನಿರ್ಗತಿಕರಾದ ೬೦೦ ಬಡಕುಟುಂಬಗಳಿಗೆ ಮನೆ ನಿರ್ಮಾಣ ಸಾಮಗ್ರಿಗಳ ವಿತರಣೆ ಮತ್ತು ಧನಸಹಾಯ, ಮುಲ್ಕಿಯಲ್ಲಿ ೧೦೧ ಸುಸಜ್ಜಿತ ಕಾಂಕ್ರೀಟ್ ಮನೆಗಳನ್ನು ಎರಡು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿ ಅವುಗಳನ್ನು ಬಡವರಿಗೆ ಉಚಿತವಾಗಿ ಹಂಚಿದ್ದು ಹೀಗೆ ಪುನರೂರರ ಸಮಾಜಸೇವಾ ಚಟುವಟಿಕೆಗಳ ಪಟ್ಟಿ ನಿಲುಗಡೆಯಿಲ್ಲದಂತೆ ಬೆಳೆಯುತ್ತಲೇ ಹೋಗುತ್ತದೆ.
ಧಾರ್ಮಿಕ ಸಾಂಹಿತ್ಯಕ ಸಾಂಸ್ಕೃತಿಕ ಹಾಗೂ ರಾಜಕಾರಣ ಕ್ಷೇತ್ರಗಳೊಂದಿಗೂ ಒಡನಾಡವಿರಿಸಿಕೊಂಡಿರುವ ಹರಿಕೃಷ್ಣ ಪುನರೂರರ ಇತ್ತೀಚಿನ ಸಾಧನೆಯೆಂದರೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಕಾಲದ ಅಗತ್ಯವಾಗಿದ್ದ ಆರ್ಥಿಕ ದೃಢತೆಯನ್ನು ತಂದು ಕೊಡುವಲ್ಲಿ ಬಹುಮಟ್ಟಿಗೆ ಯಶಸ್ವಿಯಾದದ್ದು ಮತ್ತು ಅದರ ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಮಹತ್ವ ಕೊಟ್ಟದ್ದು.
ಹಲವು ಸಾಧನೆಗಳನ್ನು ಬೆನ್ನಟ್ಟಿರುವ ಪುನರೂರರು ಸಮಾಜಸೇವಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ವ್ಯಕ್ತಿ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಡಿ.ಕೆ. ಆದಿಕೇಶವುಲು

ದೇಶ ಭಾಷೆಗಳ ಎಲ್ಲೆಮೀರಿ ಕೈಗಾರಿಕೋದ್ಯಮದಲ್ಲಿ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದವರು ಶ್ರೀ ಆದಿಕೇಶವುಲು ಅವರು.
ಶ್ರೀನಿವಾಸ ಟ್ರಸ್ಟ್ ಎಂಬ ಸಮಾಜೋಧಾರ್ಮಿಕ ಸಂಸ್ಥೆ-ಸ್ಥಾಪಿಸಿ ಶೈಕ್ಷಣಿಕ ಪ್ರಸಾರಕ್ಕೆ ಶ್ರಮಿಸುತ್ತಿದ್ದಾರೆ. ಕನ್ನಡ ತೆಲುಗು ಧಾರ್ಮಿಕ ಬಾಂಧವ್ಯದಲ್ಲೂ ಇವರ ಸಂಸ್ಥೆಯ ಪಾತ್ರ ಹಿರಿದು. ಕೊಲ್ಲೂರಿನಲ್ಲಿ ವೇದ ಪರಾಯಣ ಮಂಟಪ, ಶೃಂಗೇರಿಯಲ್ಲಿ ಭಾರತಿ ತೀರ್ಥ ಆನಂದ ಸಭಾಂಗಣ ಮತ್ತು ಹೊರರೋಗಿಗಳ ಚಿಕಿತ್ಸಾ ಘಟಕಗಳನ್ನು ಕಟ್ಟಿಸಿದ್ದಾರೆ. ಗುಂಡ್ಲು ಪೇಟೆಯ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ್ದಾರೆ. ಇಂಥ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕರ್ನಾಟಕ ಮತ್ತು ಆಂಧ್ರದಲ್ಲಿ ಉದಾರ ಕೊಡುಗೆ ನೀಡಿದ್ದಾರಲ್ಲದೆ ಆಂಧ್ರದಲ್ಲಿನ ಬರಪೀಡಿತ ಜನತೆಗೆ ಬೆಂಗಳೂರಿನಿಂದ ನಿಧಿ ಸಂಗ್ರಹಿಸಿ ಸಹಕರಿಸಿದ್ದಾರೆ.ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸ ತಾಲೂಕಿನ ೧೮೦ ಹಳ್ಳಿಗಳಿಗೆ ಕುಡಿಯುವ ನೀರುಪೂರೈಕೆ ಯೋಜನೆ ಕೈಗೊಂಡಿದ್ದು ಇವರ ಬಹುದೊಡ್ಡ ಸಾಧನೆಯೇ ಸರಿ. ತಮ್ಮ ವೈದೇಹಿ ಆರೋಗ್ಯ ಸಂಸ್ಥೆ ಮೂಲಕ ವರ್ಷಕ್ಕೆ ಸುಮಾರು ೫೦೦ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವ ಹೆಗ್ಗಳಿಕೆ ಇವರದ್ದು. ಬೇರೆ ಬೇರೆ ಸಂಘ ಸಂಸ್ಥೆಗಳ ಜತೆಗೂ ಸಕ್ರಿಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಕೊಂಡಿರುವ ಮಹಾಚೇತನ ಶ್ರೀ ಡಿ.ಕೆ. ಆದಿಕೇಶವುಲು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬಿ.ಎಸ್. ಪಾಟೀಲ

ಸರಳ ನಡೆನುಡಿಗೆ ಖಾದಿ ಪಾಟೀಲರೆಂದೇ ಹೆಸರಾದ ಅಪ್ಪಟ ಗಾಂಧೀವಾದಿ, ದೇಶಭಕ್ತ ಸಮಾಜ ಸೇವಕರು ಶ್ರೀ ಬಸವನಗೌಡ ಶಿವನಗೌಡ ಪಾಟೀಲ.
೧೯೩೧ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಜನನ. ೧೯೫೧ರಲ್ಲಿ ಎನ್.ಸಿ.ಸಿ. ಸೇರ್ಪಡೆ, ಕರ್ನಾಟಕ ಕಾಲೇಜಿನಲ್ಲಿ ಕಾಲೇಜು ವಿದ್ಯಾಭ್ಯಾಸ. ೧೯೫೨ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ವೃತ್ತಿಜೀವನದ ಆರಂಭ. ದಿವಂಗತ ವೀರನಗೌಡ ಪಾಟೀಲ ಮತ್ತು ವೆಂಕಟೇಶ ಮಾಗಡಿ ಅವರಿಂದ ಖಾದಿ ದೀಕ್ಷೆ ಪಡೆದು ನೌಕರಿಗೆ ರಾಜೀನಾಮೆ.
ಸರ್ಕಾರಿ ನೌಕರರಾಗಿ, ಖಾದಿ ಕಾರ್ಯಕರ್ತರಾಗಿ, ಕೈಗಾರಿಕೋದ್ಯಮಿಯಾಗಿ, ಸಮಾಜ ಸೇವಕರಾಗಿ, ಪರಿಸರವಾದಿಯಾಗಿ, ನಗರ ಪಿತೃವಾಗಿ, ಮಹಾಪೌರರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಪದಾಧಿಕಾರಿಗಳ ಹುದ್ದೆಗಳನ್ನು ಅಲಂಕರಿಸಿ ಕಾರ್ಯನಿರ್ವಹಿಸಿದ್ದಾರೆ.
ಪ್ರಸ್ತುತ ಖಾದಿ ಗ್ರಾಮೋದ್ಯೋಗ ಆಯೋಗ, ಮುಂಬಯಿಯ ರೋನಲ್ ಕಮಿಟಿಯ ಸದಸ್ಯರು ಹಾಗೂ ತಮ್ಮ ಸೇವಾಕ್ಷೇತ್ರದಲ್ಲಿ ಪ್ರಾಮಾಣಿಕತೆಯ ಛಾಪು ಮೂಡಿಸಿರುವ ನಿಸ್ಪೃಹ ಸಮಾಜಸೇವಕ ಶ್ರೀ ಬಿ.ಎಸ್. ಪಾಟೀಲ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ತೋಂಟೇಶ ಶೆಟ್ಟಿ

ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಸಮಾಜಸೇವಾ ಧುರೀಣರು ಶ್ರೀ ತೋಂಟೇಶ ಶೆಟ್ಟಿ ಅವರು.
ಗದಗಿನ ನೀರು ಸಮಸ್ಯೆ, ಜಿಲ್ಲಾ ಕೇಂದ್ರಕ್ಕಾಗಿ ಹೋರಾಟ, ಆಸ್ಪತ್ರೆಗಳ ಸುಧಾರಣೆ, ಹೀಗೆ ಜಿಲ್ಲೆಯ ಎಲ್ಲ ಸಾಮಾಜಿಕ ಕಾರ್ಯಗಳಲ್ಲಿ ಜಾಗೃತ ನಾಗರಿಕರಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅರ್ಥಪೂರ್ಣಗೊಳಿಸುವ ರೀತಿಯಲ್ಲಿ ಸಾಹಿತ್ಯ ಕ್ಷೇತ್ರ ಮತ್ತು ಆಡಳಿತ ಸುಧಾರಣೆ ಇವುಗಳ ಬಗ್ಗೆ ಶ್ರೀ ತೋಂಟೇಶ ಶೆಟ್ಟಿ ಸದಾ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಜನಹಿತ ಪಕ್ಷಪಾತಿ ನಾಯಕರಾಗಿ, ಪ್ರಜ್ಞಾವಂತ ನಾಗರಿಕರಾಗಿ, ಸಮಾಜ ಸೇವೆಗೆ ಅರ್ಪಣಾ ಮನೋಭಾವದಿಂದ ದುಡಿಯುತ್ತಿರುವವರು ಶ್ರೀ ತೋಂಟೇಶ ಶೆಟ್ಟಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಪ್ರೊ. ಬಿ. ಬಸವರಾಜು

ಶಿಕ್ಷಣ, ಕ್ರೀಡೆ, ಹಾಗೂ ಸಮಾಜ ಸೇವೆಗಳಲ್ಲಿ ತಮ್ಮ ಬದುಕಿನ ಸಾರ್ಥಕ್ಯ ಕಾಣುತ್ತಿರುವ ಹಿರಿಯ ಚೇತನ ಪ್ರೊ. ಬಿ. ಬಸವರಾಜು ಅವರು.
ಕರ್ನಾಟಕ ರಾಜ್ಯದ ಭಾರತೀಯ ತಾಂತ್ರಿಕ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಅದ್ಭುತ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ತಾಂತ್ರಿಕ ವಿದ್ಯಾಕ್ಷೇತ್ರದ ಸದಸ್ಯತ್ವವನ್ನು ನೀಡಿ ಗೌರವಿಸಲಾಗಿದೆ. ಭಾರತ ಟೆಕ್ಸ್ಟೈಲ್ ಅಸೋಸಿಯೇಷನ್ ರಾಜ್ಯ ಶಾಖೆಯ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಸಲ್ಲಿಸಿದ ಸೇವೆಗೆ ಸ್ವರ್ಣಪದಕ ಪಡೆದವರು ಶ್ರೀ ಬಸವರಾಜು ಅವರು.
ಕಳೆದ ನಲವತ್ತೈದು ವರ್ಷಗಳಿಂದ ಟೆನ್ನಿಸ್ ಪಟುವಾಗಿರುವ ಇವರು ಅಖಿಲ ಭಾರತ ನಾಗರಿಕ ಸೇವಾ ಟೆನ್ನಿಸ್ ಟೂರಮೆಂಟಿನಲ್ಲಿ ೧೦ ವರ್ಷಗಳ ಕಾಲ ರಾಜ್ಯವನ್ನು ಪ್ರತಿನಿಧಿಸಿದ ಹೆಮ್ಮೆಯ ಕ್ರೀಡಾಪಟುವೂ ಹೌದು, ಮೂರು ದಶಕಗಳಿಗೂ ಮಿಕ್ಕು ಶಿಕ್ಷಣಾನುಭವ ಪಡೆದಿರುವ ಶ್ರೀಯುತ ಬಿ. ಬಸವರಾಜು ಅವರು ಇಂದಿಗೂ ಶಿಕ್ಷಣ, ಕ್ರೀಡೆ ಹಾಗೂ ಸಮಾಜ ಸೇವೆಗಳಲ್ಲಿ ತೊಡಗಿಕೊಂಡಿರುವ ಹಿರಿಯ ಚೇತನ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತ್ ಸ್ವಾಮಿ ಜಪಾನಂದಜ

ನಿರಂತರವಾಗಿ ವಿವಿಧ ಸಂಘ-ಸಂಸ್ಥೆಗಳನ್ನು ಕಟ್ಟಿ ಸಮಾಜ ಸೇವೆಯಲ್ಲಿ ತೊಡಗಿರುವ ದಣಿವರಿಯದ ಕರ್ಮಯೋಗಿ ಶ್ರೀಮತ್ ಸ್ವಾಮಿ ಜಪಾನಂದಜಿ.
೧೯೫೮ರಲ್ಲಿ ಜನಿಸಿದ ಸ್ವಾಮೀಜಿಯವರು ಬಾಲ್ಯದಿಂದಲೇ ಅಧ್ಯಾತ್ಮದತ್ತ ಹೊರಳಿ ಮುಂದೆ ಶ್ರೀ ರಾಮಕೃಷ್ಣ ಆಶ್ರಮದ ಪ್ರಭಾವಕ್ಕೆ ಒಳಗಾಗಿ ಸ್ವಾಮಿ ವಿವೇಕಾನಂದರ ದಿವ್ಯಜೀವನ ಸಂದೇಶಗಳನ್ನು ಸಾರುವ ಬ್ರಹ್ಮಚಾರಿಯಾಗಿ ಉಳಿದರು. ೧೯೮೬ರಲ್ಲಿ ರಾಜ್ಯವು ಭೀಕರ ಬರಗಾಲಕ್ಕೆ ತುತ್ತಾದಾಗ ತುಮಕೂರು ಜಿಲ್ಲೆಯ ಪಾವಗಡ ಸುತ್ತಮುತ್ತ ನಲವತ್ತು ಸೇವಾ ಕೇಂದ್ರಗಳನ್ನು ತೆರೆದು ಜನಸೇವೆಯಲ್ಲಿ ತೊಡಗಿದರು. ಗ್ರಾಮೀಣ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಅಂಧತ್ವ ನಿವಾರಣಾ ಯೋಜನೆಗಳು ಇವರ ಸೇವೆಯ ಫಲಗಳು.
ಶಾಲಾ ಮಕ್ಕಳ ನೇತ್ರ ತಪಾಸಣಾ ಯೋಜನೆ, ಅನ್ನಪೂರ್ಣ ನಿಲಯ ಸ್ಥಾಪನೆ, ಆದರ್ಶ ದರ್ಶನ ಅನುಷ್ಠಾನ, ಹೀಗೆ ಅನೇಕ ಸಂಘ ಸಂಸ್ಥೆಗಳನ್ನು, ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಗ್ರಾಮೀಣ ಬಡಜನರಿಗೆ ಬೌದ್ಧಿಕ, ಆಧ್ಯಾತ್ಮಿಕ, ಶೈಕ್ಷಣಿಕ, ವೈದ್ಯಕೀಯ ಸೇವೆ ಒದಗಿಸುವ ನಿರಂತರ ಕಾಯಕದಲ್ಲಿ ತೊಡಗಿರುವ ಸರಳ ಚಿಂತಕ, ಸಮಾಜ ಸೇವಕ ಶ್ರೀಮತ್ ಸ್ವಾಮಿ ಜಪಾನಂದಜಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಗಂಗಾಧರ (ಗುರು ಟೀಕ್)

ರಾಜ್ಯದ ಸಾವಿರಾರು ಎಕರೆ ಬರಡು ಪ್ರದೇಶಗಳಲ್ಲಿ ಗಿಡಮರಗಳನ್ನು ನೆಟ್ಟು, ಹಸಿರ ಹರಿಕಾರರಾಗಿರುವವರು ಶ್ರೀ ಗಂಗಾಧರ ಅವರು.
ರೈತ ಕುಟುಂಬದ ಹಿನ್ನೆಲೆಯಲ್ಲಿ ಹಂತಹಂತವಾಗಿ ಪ್ರವರ್ಧಮಾನಕ್ಕೆ ಬಂದು ಗಿಡಮರ ಬೆಳೆಸುವ ಗುರು ಟೀಕ್ ಇನ್ವೆಸ್ಟ್ಮೆಂಟ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಹುಟ್ಟು ಹಾಕಿದವರು. ಪ್ರಾರಂಭದಲ್ಲಿ ಹಾಸನ ಜಿಲ್ಲೆಯ ಟಿ. ಕೊಪ್ಪಲು ಗ್ರಾಮದಲ್ಲಿ ಟೀಕ್ ಗಿಡಗಳನ್ನು ಬೆಳೆಸಲು ಪ್ರಾರಂಭಿಸಿದ ಶ್ರೀಯುತರು ಇಂದು ೨೭ ಜಿಲ್ಲೆಗಳಲ್ಲೂ ಕಚೇರಿಗಳನ್ನು ತೆರೆದು ಮೈಸೂರು, ಮಂಡ್ಯ, ಬೆಂಗಳೂರು, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಟೀಕ್ ಪ್ಲಾಂಟೇಶನ್ ಪ್ರಾರಂಭಿಸಿದ್ದಾರೆ. ತಮ್ಮ ಸಂಸ್ಥೆಗಳಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾವಂತ/ಅವಿದ್ಯಾವಂತ ಜನಕ್ಕೆ ಉದ್ಯೋಗ ನೀಡಿದ್ದಾರೆ.
ಶಾಲಾ ಕಾಲೇಜು ಮಕ್ಕಳಿಗೆ ಚಿತ್ರರಚನಾ ಸ್ಪರ್ಧೆ, ಬೃಹತ್ ರಕ್ತದಾನ ಶಿಬಿರ, ಸ್ವಚ್ಛ ಗ್ರಾಮ ಯೋಜನೆ, ಕೆರೆಹೂಳು ತೆಗೆಸುವಿಕೆ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕರುನಾಡ ಸಂಜೆ ಮತ್ತು ಸೂರ್ಯೋದಯ ದಿನ ಪತ್ರಿಕೆಗಳ ಸ್ಥಾಪನೆ ಇವರ ಪತ್ರಿಕೋಧ್ಯಮದ ಸಾಧನೆಗಳು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ವಾಸುದೇವಾಚಾರ್ಯ

‘ಜನಸೇವೆಯೇ ಜನಾರ್ದನ ಸೇವೆ’ ಎಂಬಂತೆ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿರುವವರು ಶ್ರೀ ಮಟ್ಟು ವಾಸುದೇವಾಚಾರ್ಯ ಅವರು.
ಜನನ ೧೯೨೭ರಲ್ಲಿ ಉಡುಪಿಗೆ ಸಮೀಪದ ಮಟ್ಟು ಎಂಬ ಪುಟ್ಟ ಗ್ರಾಮದಲ್ಲಿ, ಉಡುಪಿ ಸಂಸ್ಕೃತ ಶಾಲೆಯಲ್ಲಿ ಎಂಟು ವರ್ಷ ಸಂಸ್ಕೃತ ಅಭ್ಯಾಸ. ೩ ವರ್ಷ ವೇದಾಧ್ಯಯನ. ಕಾರ್ಕಳದ ವಿದ್ವಾನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಶ್ರೀಯುತರು ಬಳ್ಳಾರಿಗೆ ಬಂದು ಅಲ್ಲಿನ ಪುರಸಭಾ ಪ್ರೌಢಶಾಲೆಯಲ್ಲಿ ಪಂಡಿತ ವೃತ್ತಿ ಆರಂಭಿಸಿದರು. ಅಧ್ಯಾಪಕ ವೃತ್ತಿಯಲ್ಲಿ ಬಿಡುವು ದೊರೆತಾಗಲೆಲ್ಲಾ ಖಾದಿ ಪ್ರಸಾರವನ್ನು ಕೈಗೊಂಡ ಗಾಂಧೀವಾದಿ. ಇವರು ಶಿಕ್ಷಕರಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಿದರು. ಸರ್ವೋದಯ ಗ್ರಾಮದ ಹರಿಕಾರ, ಕ್ರಾಂತಿಯೋಗಿಯಾಗಿರುವ ಶ್ರೀ ಎಂ. ವಾಸುದೇವಾಚಾರ್ಯರು ದಾನವಾಗಿ ದೊರೆತ ೧೦೦ ಎಕರೆ ಜಾಗದಲ್ಲಿ ಗೋಶಾಲೆ, ವಸತಿ ಶಾಲೆ, ಭೋಜನ ಶಾಲೆ, ಅತಿಥಿಗೃಹ ಹೀಗೆ ಹಲವಾರು ಜನೋಪಯೋಗಿ ಕಟ್ಟಡಗಳನ್ನು ಕಟ್ಟಿಸಿ ಬಳ್ಳಾರಿ ಭಾಗದ ಸುತ್ತಮುತ್ತಲಿನ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಐದು ದಶಕಗಳಿಗೂ ಮೀರಿದ ನಿಸ್ವಾರ್ಥ ತ್ಯಾಗಗಳಿಂದ ಕೂಡ್ಲಿಗಿ ತಾಲ್ಲೂಕಿನ ಗುಡೆಕೋಟೆಯಲ್ಲಿ ನಿಸರ್ಗದ ಮಧ್ಯದಲ್ಲಿ ಸ್ಥಾಪಿಸಿರುವ ಸರ್ವೋದಯ ಗ್ರಾಮ
ಗುರುಕುಲವಾಗಿ ಪರಿವರ್ತನೆಯಾಗಿದೆ.
ಆದರ್ಶ ಶಿಕ್ಷಕ, ಸಮಾಜ ಸೇವಾ ಕಾರ್ಯಕರ್ತ, ನಿಸ್ವಾರ್ಥ ಹಾಗೂ ನಿರಾಡಂಬರ ವ್ಯಕ್ತಿ ಶ್ರೀ ಎಂ. ವಾಸುದೇವಾಚಾರ್ಯ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಗೌರಮ್ಮ ಬಸವೇಗೌಡ

ಮಲೆನಾಡ ವಲಯದ ಸಾಂಸ್ಕೃತಿಕ, ಸಾಹಿತ್ಯಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ವಲಯದಲ್ಲಿ ಚಿರಪರಿಚಿತರು ಶ್ರೀಮತಿ ಗೌರಮ್ಮ ಬಸವೇಗೌಡ ಅವರು.
ಸಕಲೇಶಪುರದ ಬೆಚ್ಚುವಳ್ಳಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ೧೯೩೩ ರಲ್ಲಿ ಜನನ, ಶಾಸಕ ಶ್ರೀ ಬಸವೇಗೌಡರ ಪತ್ನಿಯಾಗಿ ಮಹಾಮನೆಯ ಗೃಹಿಣಿಯಾಗಿ ಆತಿಥ್ಯಕ್ಕೆ ಹೆಸರಾದವರು. ಮಹಿಳಾ ಜಾಗೃತಿ ಸಂಘದ ಸ್ಥಾಪಕರು ಹಾಗೂ ಚಿಕ್ಕಮಗಳೂರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಜಿಲ್ಲಾಸ್ಪತ್ರೆ ವಿಸ್ತರಣೆ, ದೂರದರ್ಶನ ಮರುಪ್ರಸಾರ ಕೇಂದ್ರಕ್ಕೆ ಒತ್ತಡ ಹೇರಿ ಯಶಸ್ವಿಯಾದವರು. ಸಾಮೂಹಿಕ ವಿವಾಹ, ನಿರ್ಮಲ ಚಿಕ್ಕಮಗಳೂರು, ಸಂತ್ರಸ್ತರಿಗೆ ನೆರವು ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.
ಶ್ರೀಮತಿ ಗೌರಮ್ಮ ಬಸವೇಗೌಡ ಅವರ ವೈವಿಧ್ಯಮಯ ಸೇವೆಯನ್ನು ಗುರುತಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಹಾಸನದ ಕನ್ನಡ ಸಂಘ ಮುಂತಾದ ಹಲವು ಸಂಸ್ಥೆಗಳು ‘ಮಲೆನಾಡ ರತ್ನ’ ಮುಂತಾದ ಪ್ರಶಸ್ತಿ ನೀಡಿ ಸನ್ಮಾನಿಸಿವೆ.
ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಪದಗಳಲ್ಲಿ ರಚನಾತ್ಮಕ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಮಾಜಿಕ ಕಾರ್ಯಕರ್ತರು ಶ್ರೀಮತಿ ಗೌರಮ್ಮ ಬಸವೇಗೌಡ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಡಾ. ಎಂ.ಎಂ. ಭಟ್ ಮರಕಿಣಿ

ಸ್ವಯಂ ಸ್ಪೂರ್ತಿಯಿಂದ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡ ಹಿರಿಯ ಸಮಾಜ ಸೇವಾಕರ್ತ ಡಾ. ಎಂ.ಎಂ. ಭಟ್ (ಮರಕಿಣಿ).
೧೯೩೧ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಡ್ಯನಡ್ಕದಲ್ಲಿ ಜನಿಸಿದ ಶ್ರೀಯುತರು ಆಯುರ್ವೇದ ವೈದ್ಯ ಪದವಿ ಪಡೆದು ಲಂಡನ್ ಮತ್ತು ಹ್ಯಾಂಬರ್ಗ್ ವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ತಮ್ಮ ವೈದ್ಯಕೀಯ ಸೇವೆಗೆ ಆರಿಸಿಕೊಂಡದ್ದು ತಮ್ಮ ಹಳ್ಳಿಯನ್ನೇ. ಮುಂದೆ ತಮ್ಮ ವೈದ್ಯಸೇವೆಯನ್ನು ಸಮಾಜಸೇವೆಯಾಗಿ ಪರಿವರ್ತಿಸಿಕೊಂಡು ಚಿತ್ತಾಪುರದಲ್ಲಿ ಚಿಕಿತ್ಸಾಲಯ ಸ್ಥಾಪಿಸಿ ‘ಬಡವರ ಮನೆ ಬಾಗಿಲಿಗೆ ಧನ್ವಂತರಿ’ ಎಂಬ ಸಂಚಾರಿ ವೈದ್ಯ ಘಟಕ ಸ್ಥಾಪಿಸಿ ಬಡಜನರ ಸೇವೆಗೆ ನಿಂತವರು. ೧೯೭೨ರ ಬರಗಾಲದಲ್ಲಿ ೨೫ ಹಳ್ಳಿಗಳಲ್ಲಿ ಗಂಜಿ ಕೇಂದ್ರ ತೆರೆದು ವೃದ್ಧರು ಮತ್ತು ಮಕ್ಕಳನ್ನು ಕಾಪಾಡಿದ್ದು, ೧೯೭೭ರಲ್ಲಿ ಚಂಡಮಾರುತಕ್ಕೆ ಸಿಲುಕಿದ ಆಂಧ್ರಪ್ರದೇಶದ ಕೋನ ಸೀಮೆಯ ಮೀನುಗಾರರ ೧೩ ಹಳ್ಳಿಗಳಿಗೆ ಪುನರ್ವಸತಿ ಕಲ್ಪಿಸಲು ದುಡಿದದ್ದು, ಕಲಬುರ್ಗಿ ಜಿಲ್ಲೆಯ ಕಮಲಾಪುರ ಜಲಾನಯನ ಪ್ರದೇಶಾಭಿವೃದ್ಧಿಗೆ ದುಡಿದದ್ದು, ಹೆಗ್ಗಡದೇವನ ಕೋಟೆಯ ಗಿರಿಜನರ ಸಮಗ್ರ ವಿಕಾಸ ಹಾಗೂ ಆರೋಗ್ಯ ರಕ್ಷಣೆಗೆ ದುಡಿದದ್ದು, ಕಪ್ಪು ಹಲಗೆ ಯೋಜನೆಯಲ್ಲಿ ಕಲಬುರ್ಗಿ, ರಾಯಚೂರು, ಬೀದರ್ ಜಿಲ್ಲೆಯಲ್ಲಿ 2012 ರ ದುಡಿದದ್ದು, ಬಿಹಾರ ರಾಜ್ಯದ ಸಿವಾನ್ನಲ್ಲಿ ಕುಷ್ಠರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು, ಮುಂತಾದುವು ಇವರ ಸಮಾಜ ಸೇವೆಯ ಬಹುಮುಖ್ಯ ಘಟ್ಟಗಳು.
೩೦ವರ್ಷಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯಲ್ಲಿ ತೊಡಗಿರುವ, ಸಾಮಾಜಿಕ ವಿಕಾಸಕ್ಕೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ಬರೆದಿರುವ ಅನುಭವಿ, ವೈದ್ಯ, ಸಮಾಜ ಸೇವಾಕರ್ತ ಡಾ. ಎಂ.ಎಂ. ಭಟ್ ಮರಕಿಣಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಇಂದಿರಾ ಮಾನ್ವಿಕ

ಗುಲಬರ್ಗಾ ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷರು ಮತ್ತು ಜನಪ್ರಿಯ ಸಮಾಜಸೇವಕಿ ಶ್ರೀಮತಿ ಇಂದಿರಾ ಮಾನ್ವಿಕ ಅವರು.
೧೯೪೪ರಲ್ಲಿ ಹೈದರಾಬಾದ್ ನಲ್ಲಿ ಜನನ, ವಿದ್ಯಾರ್ಥಿ ದೆಸೆಯಿಂದಲೇ ನೃತ್ಯ, ಕ್ರೀಡೆ, ಸಮಾಜ ಸೇವೆಯಲ್ಲಿ ತೊಡಗಿದವರು. ಮಹಿಳಾ ಯುವತಿ ಮಂಡಳಗಳೂ ಸೇರಿದಂತೆ ಹಲವು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ವಿವಿಧ ಪದಾಧಿಕಾರಿ ಹುದ್ದೆಗಳ ಮೂಲಕ ಮಹಿಳೆಯರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ.
ಮಕ್ಕಳ ಆರೋಗ್ಯ ರಕ್ಷಣೆ, ವರದಕ್ಷಿಣೆ ವಿರೋಧಿ ಪ್ರಜ್ಞೆ ಉಚಿತ ನೇತ್ರ ಚಿಕಿತ್ಸೆ, ವಯಸ್ಕರ ಶಿಕ್ಷಣ ಮತ್ತು ಕೊಳಚೆ ಪ್ರದೇಶದ ಮಹಿಳೆಯರಿಗೆ ಶಿಕ್ಷಣದ ಅರಿವು, ಯುವಜನ ಸೇವಾ ಇಲಾಖೆಯ ಸಹಕಾರದೊಂದಿಗೆ ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಯುವಮೇಳಗಳನ್ನು ಸಂಘಟಿಸಿದ್ದಾರೆ.
ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸತತವಾಗಿ ಶ್ರಮಿಸುತ್ತಿರುವ ಶ್ರೀಮತಿ ಇಂದಿರಾ ಮಾನ್ವಿಕರ್ ಅವರಿಗೆ ಹಲವು ಸನ್ಮಾನ ಮತ್ತು ಪುರಸ್ಕಾರಗಳು ಸಂದಿವೆ. ಮಹಿಳೆಯರ ಕಲ್ಯಾಣಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿಕೊಂಡು ಅದರ ಅನುಷ್ಠಾನಕ್ಕಾಗಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವವರು ಶ್ರೀಮತಿ ಇಂದಿರಾ ಮಾನ್ವಿಕ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀಮತಿ ಡೊನ್ನಾ ಫರ್ನಾಂಡಿಸ್

ಮಹಿಳಾ ಸಂಘಟನೆ ‘ವಿಮೋಚನಾ’ ದ ಸಂಸ್ಥಾಪಕರಲ್ಲಿ ಒಬ್ಬರಾಗಿ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುತ್ತಿರುವವರು ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು.
ಬೆಂಗಳೂರು ಜ್ಯೋತಿನಿವಾಸ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾದ ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ನಿಂದ ಸಮಾಜ ಸೇವೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಂಘಟನಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದವರು, ಮಹಿಳೆಯರ ಹಕ್ಕುಗಳಿಗಾಗಿ ಸ್ಥಾಪಿತವಾಗಿರುವ ವಿಮೋಚನಾ ಸಂಸ್ಥೆಯ ಸಂಚಾಲಕಿಯಾಗಿರುವ ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು ಮಾನವ ಹಕ್ಕುಗಳ ಪ್ರಚಾರಕರು.
ರಾಷ್ಟ್ರದ ಮೊದಲ ಮಹಿಳಾ ಪುಸ್ತಕದಂಗಡಿ ‘ಸ್ತ್ರೀಲೇಖ’ ಶ್ರೀಮತಿ ಡೊನ್ನ ಅವರ ಕನಸಿನ ಕೂಸೆ ಆಗಿದೆ. ವಿವಾಹಿತ ಮಹಿಳೆಯರ ಅಸ್ವಾಭಾವಿಕ ಸಾವುಗಳ ಬಗ್ಗೆ ವಸ್ತುನಿಷ್ಟ ಅಧ್ಯಯನ ನಡೆಸುವುದರೊಂದಿಗೆ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಮಾನವೀಯ ಹೋರಾಟಗಳಲ್ಲಿ ಸದಾ ಕೇಳಿಬರುವ ಹೆಸರು ಶ್ರೀಮತಿ ಡೊನ್ನಾ ಫರ್ನಾಂಡಿಸ್ ಅವರದು.
ಮಹಿಳಾಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಅವರ ಹಕ್ಕುಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿರುವ ಸಮಾಜ ಸೇವಾ ಕಾರ್ಯಕರ್ತೆ ಶ್ರೀಮತಿ ಡೊನ್ನಾ ಫರ್ನಾಂಡೀಸ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಘನಶ್ಯಾಂ ತುಳಜನಸಾ ಭಾಂಡಗೆ

ಅಂಗವಿಕಲತೆ ಸಾಧನೆಯ ಬದುಕಿಗೆ ಅಡ್ಡಿಯಾಗದೆಂದು ತೋರಿಸಿಕೊಟ್ಟಿರುವ ಹಾಗೂ ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವವರು ಶ್ರೀ ಘನಶ್ಯಾಂ ತುಳಜನಸಾ ಭಾಂಡಗೆ ಅವರು.
ಬಾಗಲಕೋಟೆಯ ಶ್ರೀ ಘನಶ್ಯಾಂ ಭಾಂಡಗೆ ಅವರ ಜನನ ೧೯೬೬ರಲ್ಲಿ. ಪೋಲಿಯೋದಿಂದ ತಮ್ಮೆರಡು ಕಾಲು ಕಳೆದುಕೊಂಡಾಗ ಶ್ರೀಯುತರಿಗೆ ಮೂರು ವರ್ಷ. ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪದವಿ ವ್ಯಾಸಂಗ ಮಾಡುವಾಗ ಓದಿನೊಂದಿಗೆ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಶ್ರೀ ಘನಶ್ಯಾಂ
ಭಾಂಡಗೆ ಅವರು.
ಅಂಗವಿಕಲತೆಯ ಸಮಸ್ಯೆ ಕಾಡಬಾರದೆಂದು ಹಲವಾರು ಊರುಗಳನ್ನು ತಮ್ಮ ದ್ವಿಚಕ್ರ ಸೈಕಲ್ ನೊಂದಿಗೆ ಸುತ್ತಿ ಅಂಗವಿಕಲರನ್ನು ಸಂಘಟಿಸಿದ ಕೀರ್ತಿಗೆ ಪಾತ್ರರು. ೨೨೧೮ ಅಂಗವಿಕಲರಿಗೆ ಮಾಸಾಶನ, ಕೊಡಿಸಿದ್ದಾರೆ. ಪ್ರತಿ ವರ್ಷ ಅಂಗವಿಕಲರ ದಿನಾಚರಣೆಯ ಅರ್ಥಪೂರ್ಣ ಆಚರಣೆ, ಗ್ರಾಮಾಂತರ ಜನರಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ೨೦ ಸಾವಿರ ಅಂಗವಿಕಲರಿಗೆ ಉಚಿತ ಬಸ್ ಪಾಸ್ ದೊರಕಿಸಿಕೊಟ್ಟಿದ್ದಾರೆ. ಅಲ್ಲದೆ ಅಂಗವಿಕಲರಿಗೆ ಕ್ರೀಡಾಕೂಟಗಳನ್ನು ಏರ್ಪಡಿಸುವುದು, ಅಂಗವಿಕಲರ ಸಾಮೂಹಿಕ ವಿವಾಹ ಮುಂತಾದ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡವರು ಘನಶ್ಯಾಂ ಭಾಂಡಗೆ ಅವರು.
ರಾಜ್ಯ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅಂಗವಿಕಲರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಜ್ಯಮಟ್ಟದಲ್ಲಿ ೧೮ ಚಿನ್ನ, ೯ ಬೆಳ್ಳಿ, ೬ ಕಂಚು ಪದಕಗಳನ್ನು ರಾಷ್ಟ್ರಮಟ್ಟದಲ್ಲಿ ಚಿನ್ನ, ೮ ಬೆಳ್ಳಿ, ೨ ಕಂಚನ್ನು ಪಡೆದಿದ್ದಾರೆ. ಅಂತರರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ೨ ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೆ ಸಿಡ್ನಿ ಕ್ರೀಡಾಕೂಟದಲ್ಲಿ ೧ ಚಿನ್ನದ ಪದಕ ಹಾಗೂ ೧ ಬೆಳ್ಳಿ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಶರತ್ ತಂಗಾ

ಆರೋಗ್ಯ ಅರಿವು, ಅವರಲ್ಲಿ ಏಡ್ಸ್ ಸೂಕ್ಷ್ಮತೆ, ಕ್ಯಾನ್ಸರ್ ಶಿಕ್ಷಣ ಮತ್ತು ಪೋಲಿಯೋ ನಿರ್ಮೂಲನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವವರು ಕ್ಯಾನ್ಸರ್ ಮತ್ತು ಲ್ಯಾಪ್ರೋಸ್ಕೋಪಿ ತಂತ್ರಜ್ಞ ಡಾ. ಶರದ್ ಎಂ. ತಂಗಾ ಅವರು.
ಡಾ. ಶರದ್ ಎಂ. ತಂಗಾ ಅವರು ಎಂಬಿಬಿಎಸ್, ಎಂಎಸ್ಎಫ್ಐಸಿಎಸ್ ಪದವಿ ಪಡೆದು ಗುಲ್ಬರ್ಗಾ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದಾರೆ. ಶೈಕ್ಷಣಿಕದಿಂದ ಸಾಮಾಜಿಕ ಚಟುವಟಿಕೆಗಳವರೆಗೆ ವಿಕೃತವಾಗಿದೆ ಶ್ರೀಯುತರ ಕಾರ್ಯಕ್ಷೇತ್ರ
ಆರೋಗ್ಯದ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ವೈದ್ಯಕೀಯ ಶಿಕ್ಷಣ ತರಬೇತಿ ಶಾಖೆಯಲ್ಲಿ ಫ್ಯಾಕಲ್ಟಿ ಸದಸ್ಯರಾಗಿ ನೇಮಕವಾಗಿರುವ ಶ್ರೀಯುತರು ಹೊಸದಾಗಿ ಬರುವ ವೈದ್ಯಕೀಯ ಅಧ್ಯಾಪಕರಿಗೆ ಕಲಿಸುವ ಸೂಕ್ಷ್ಮತೆಗಳನ್ನು ತಿಳಿಸಲಾಗುತ್ತದೆ.
ಕರ್ನಾಟಕ ರಾಜ್ಯ ಶಸ್ತ್ರಚಿಕಿತ್ಸೆ ರಾಜ್ಯದ ಸಂಘದ ಕಾರ್ಯದರ್ಶಿ, ನವದೆಹಲಿಯ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘ ಹಾಗೂ ಕರ್ನಾಟಕ ಏಡ್ಸ್ ನಿಯಂತ್ರಣ ಸಂಘದ ಕಾರ್ಯನಿರ್ವಾಹಕ ಮಂಡಳಿ ಸದಸ್ಯರಾಗಿ, ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷರಾಗಿ, ಫ್ರೀಲಾನ್ಸ್ ಬರಹಗಾರರಾಗಿ ಪ್ರಸಿದ್ಧರಾದವರು ಶ್ರೀ ಶರದ್ ಎಂ. ತಂಗಾ ಅವರು. ——- ವೃತ್ತಿಯಲ್ಲಿ ಶಸ್ತ್ರತಜ್ಞ ಚಟುವಟಿಕೆಗಳಲ್ಲಿ ಅನುರಕ್ತ ಮತ್ತು ಆಯ್ಕೆಯಿಂದ ಬರಹಗಾರ’ ಡಾ. ಶರದ್ ಎಂ. ತಂಗಾ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎನ್.ಎಂ. ಪ್ರಭು

ಶಸ್ತ್ರಚಿಕಿತ್ಸಾ ತಜ್ಞ ಮತ್ತು ವೈದ್ಯಕೀಯದಲ್ಲಿ ಸಮಾಜ ಸೇವಾ ಧುರೀಣರು ಡಾ. ಎನ್.ಎಂ. ಪ್ರಭು ಅವರು.
೧೯೩೨ ರಲ್ಲಿ ಜನಿಸಿದ ಡಾ. ಎನ್.ಎಂ. ಪ್ರಭು ಅವರು ಎಂ.ಬಿ.ಬಿ.ಎಸ್. ಹಾಗೂ ಎಡಿನ್ಬರ್ಗ್ ಮತ್ತು ಇಂಗ್ಲೆಂಡ್ನಲ್ಲಿ ಎಫ್.ಆರ್.ಸಿ.ಎಸ್. ಪದವಿ ಪಡೆದಿದ್ದಾರೆ. ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಸರ್ಜರಿಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಸಂಬಂಧಪಟ್ಟ ರಾಜ್ಯ ಮಟ್ಟದ ರಾಷ್ಟ್ರಮಟ್ಟದ ಮತ್ತು ಅಂತರ ರಾಷ್ಟ್ರೀಯ ಮಟ್ಟದ ವಿವಿಧ ವೈದ್ಯಕೀಯ ಸಮ್ಮೇಳನಗಳಲ್ಲಿ ವಿವಿಧ ಶಸ್ತ್ರಚಿಕಿತ್ಸಾ ವಿಷಯಗಳ ಬಗ್ಗೆ ಲೇಖನಗಳನ್ನು ಮಂಡಿಸಿದ್ದಾರೆ. ಎಫ್.ಐ.ಎ.ಎಮ್.ಎಸ್, ಎಫ್.ಎ.ಐ.ಎಸ್.ನ ಸ್ಥಾಪಕ ಫೆಲೋ ಆಗಿದ್ದಾರೆ.
“ಕರ್ನಾಟಕ ನರ್ಸಿಂಗ್ ಹೋಂ’ ಎಂಬ ತಮ್ಮದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿರುವ ಶ್ರೀ ಎನ್.ಎಂ. ಪ್ರಭು ಅವರು ಉತ್ತರ ಕರ್ನಾಟಕದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗ್ಯಾಸ್ಟೋಸ್ಕೋಪನ್ನು ಪ್ರಾರಂಭಿಸಿದ ಮೊದಲ ವೈದ್ಯರು ಮತ್ತು ಸಮಗ್ರ ಭಾರತದ ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ಟೋಸ್ಕೋಪಿ ನಡೆಸಿದ ಮೊದಲ ವೈದ್ಯರು.
ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೊಳಚೆ ಪ್ರದೇಶಗಳಲ್ಲಿ ಆರೋಗ್ಯ ಚಟುವಟಿಕೆಗಳನ್ನು ನಡೆಸಲು ರುಕ್ಷ್ಮಿಣಿ ಮುಕುಂದ ಪ್ರಭು ಚಾರಿಟಿಸ್, ಕೆನರಾ ಚಾರಿಟಬಲ್ ಸೊಸೈಟಿ, ಲಯನ್ಸ್ ಯೋಗ ಸೊಸೈಟಿ. ಮುಂತಾದ ದತ್ತಿ ಸಂಸ್ಥೆಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಶ್ರೀಯುತರದು.
ಸಾಯಿ ಸಂದೇಶ ಪ್ರದೇಶ ಪ್ರಸಾರ ಸಂಘ, ಮಹರ್ಷಿ ಮಹೇಶ ಯೋಗ ವೇದ ವಿಜ್ಞಾನ ಭವನದ ಹುಬ್ಬಳ್ಳಿ ಶಾಖೆ ಮುಂತಾದ ಧಾರ್ಮಿಕ ಸಂಸ್ಥೆಯನ್ನು ಪ್ರಾರಂಭಿಸಿದವರು.
ಸಹಸ್ರಮೇವ ವೈದ್ಯ ಪ್ರಶಸ್ತಿ, ಉತ್ತಮ ಗ್ಯಾಸ್ಟೋಎಂಟ್ರೋಲಜಿ ಪ್ರಶಸ್ತಿ, ಕರುಣಾಸಾಗರ ಸನ್ಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.
ವೈದ್ಯರಾಗಿ ಉತ್ತರ ಕರ್ನಾಟಕದ ಜನರ ಆರೋಗ್ಯವನ್ನು ಕಾಪಾಡುತ್ತಿರುವವರು ಡಾ. ಎನ್.ಎಂ. ಪ್ರಭು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ರಮಾಕಾಂತ್ ವೆನ್ನನ್

ಹಲ್ಲಿನ ರಕ್ಷಣೆಯನ್ನು ಕುರಿತು ಜನಸಾಮಾನ್ಯರಿಗೆ ತಿಳಿವು ಮೂಡಿಸುತ್ತಿರುವ ಪ್ರಸಿದ್ಧ ದಂತವೈದ್ಯರು ಡಾ. ರಮಾಕಾಂತ ವೆನ್ಸನ್ ಅವರು.
ಬೆಂಗಳೂರು ವಿಶ್ವವಿದ್ಯಾಲಯದಿಂದ ದಂತ ವೈದ್ಯಶಾಸ್ತ್ರದ ಬಗ್ಗೆ ಪದವಿಯನ್ನು ಪಡೆದು, ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಲಂಡನ್ನಿನ ರಾಯಲ್ ಸೊಸೈಟಿ ಆಫ್ ಹೆಲ್ತ್, ಅಮೆರಿಕಾ ಸಂಯುಕ್ತ ಸಂಸ್ಥಾನದ ಇಂಟರ್ ನ್ಯಾಷನಲ್ ಕಾಲೇಜ್ ಆಫ್ ಡೆಂಟಿಸ್ಟ್ ಹಾಗೂ ಅಕಾಡೆಮಿ ಡೆಂಟಿಸ್ಟಿ ಇಂಟರ್ ನ್ಯಾಷನಲ್ ಮುಂತಾದವುಗಳಿಂದ ಫೆಲೊ ಪಡೆದಿದ್ದಾರೆ. ಭಾರತೀಯ ದಂತ ವೈದ್ಯ ಸಂಸ್ಥೆಯ ಉಪಾಧ್ಯಕ್ಷರಾಗಿ, ಭಾರತೀಯ ದಂತ ವೈದ್ಯ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷರಾಗಿ, ಭಾರತೀಯ ದಂತ ವೈದ್ಯ ಸೇವಾ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷರಾಗಿ ಹಾಗೂ ದಂತವೈದ್ಯಕ್ಕೆ ಸಂಬಂಧಪಟ್ಟ ಹಲವಾರು ಸಂಘ ಸಂಸ್ಥೆಗಳಲ್ಲಿ ವಿವಿಧ ಪದವಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜಪಾನ್ನ ಒಸಾಕದಲ್ಲಿ ನಡೆದ ಎಕ್ಸ್ಪೋ-೭೦ರಲ್ಲಿ ಕರ್ನಾಟಕ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಕೌಲಾಲಾಂಪುರದ ಕಾಮನ್ವೆಲ್ತ್ ಡೆಂಟಲ್ ಅಸೋಸಿಯೇಷನ್ನ ಉದ್ಘಾಟನೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ಹಲವಾರು ದಂತ ವೈದ್ಯ ಕುರಿತ ಸಮ್ಮೇಳನಗಳಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.
ಭಾರತೀಯ ದಂತವೈದ್ಯ ಸಂಘವು ಏರ್ಪಡಿಸಿದ್ದ ದಂತ ವೈದ್ಯ ಸಮಾವೇಶದಲ್ಲಿ ದಂತ ವೈದ್ಯಶಾಸ್ತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಜೀವಮಾನ ಸಾಧನೆಯ ಪ್ರಶಸ್ತಿ ಪಡೆದಿದ್ದಾರೆ. ವಿದೇಶಗಳಲ್ಲಿ ಪ್ರವಾಸ ಮಾಡಿರುವ ಶ್ರೀಯುತರು ಬೆಂಗಳೂರಿನಲ್ಲಿ ನಡೆದ ಶೂಟಿಂಗ್ ಚಾಂಪಿಯನ್ ನಲ್ಲಿ ಬೆಳ್ಳಿಪದಕ ಪಡೆದಿದ್ದಾರೆ.
ಕ್ರೀಡೆಯಲ್ಲಿಯೂ ಸಾಧನೆ ಮಾಡಿರುವ ಪ್ರತಿಭಾವಂತ ದಂತ ಚಿಕಿತ್ಸಾ ತಜ್ಞರು ಡಾ. ರಮಾಕಾಂತ ವೆನ್ಸನ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಮಹದೇವ್ ಡಿ. ದೀಕ್ಷಿತ್

ಹಿಂದುಳಿದವರು, ಅಲ್ಪಸಂಖ್ಯಾತರು, ರೈತರ ಕುರಿತು ವಿಶೇಷ ಕಾಳಜಿ ಹೊಂದಿರುವ ಪ್ರಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.
ಹಾಸನ ಜಿಲ್ಲೆಯಲ್ಲಿ ವಿಚಾರ ವೇದಿಕೆ, ನವ ನಿರ್ಮಾಣ ಸಮಿತಿ, ರೈತ ಸಂಘ, ದಲಿತ ಸಂಘಟನೆಗಳ ಬೆಳವಣಿಗೆಗೆ ಪೂರಕವಾಗಿದ್ದವರು. ಸಮಾಜದ ಪರವಾಗಿ ಸದಾ ಚಿಂತನೆ ಮೂಡುವ ಅವರು, ನಗರದಲ್ಲಿ ಅನೇಕ ಕ್ರೀಡಾ ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಸಹಕಾರ ನೀಡಿದ್ದಾರೆ.
ಪ್ರಗತಿ ಪರ ಚಿಂತಕರು, ಸಾಮಾಜಿಕ ಕಳಕಳಿ ಉಳ್ಳವರು, ವಿಚಾರವಾದಿಗಳು, ಪ್ರಾಮಾಣಿಕರೂ ಆದ ಹಾಸನದ ಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಮುನಿವೆಂಕಟೇಗೌಡ

ಹಿಂದುಳಿದವರು, ಅಲ್ಪಸಂಖ್ಯಾತರು, ರೈತರ ಕುರಿತು ವಿಶೇಷ ಕಾಳಜಿ ಹೊಂದಿರುವ ಪ್ರಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.
ಹಾಸನ ಜಿಲ್ಲೆಯಲ್ಲಿ ವಿಚಾರ ವೇದಿಕೆ, ನವ ನಿರ್ಮಾಣ ಸಮಿತಿ, ರೈತ ಸಂಘ, ದಲಿತ ಸಂಘಟನೆಗಳ ಬೆಳವಣಿಗೆಗೆ ಪೂರಕವಾಗಿದ್ದವರು. ಸಮಾಜದ ಪರವಾಗಿ ಸದಾ ಚಿಂತನೆ ಮೂಡುವ ಅವರು, ನಗರದಲ್ಲಿ ಅನೇಕ ಕ್ರೀಡಾ ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಸಹಕಾರ ನೀಡಿದ್ದಾರೆ.
ಪ್ರಗತಿ ಪರ ಚಿಂತಕರು, ಸಾಮಾಜಿಕ ಕಳಕಳಿ ಉಳ್ಳವರು, ವಿಚಾರವಾದಿಗಳು, ಪ್ರಾಮಾಣಿಕರೂ ಆದ ಹಾಸನದ ಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎಸ್.ಜಿ. ರಾಮನಾರಾಯಣ್ರಾವ್

ನೇತ್ರ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮೋದಿಯವರ ನಂತರ ಚಿರಪರಿಚಿತವಾದ ಮತ್ತೊಂದು ಹೆಸರೇ ಡಾ. ಎಸ್.ಜಿ. ರಾಮನಾರಾಯಣ್ ರಾವ್ ಅವರು.
ನೇತ್ರ ವೈದ್ಯಕೀಯದಲ್ಲಿ ಇಂಗ್ಲೆಂಡ್ನ ರಾಯಲ್ ಕಾಲೇಜ್ ಆಫ್ ಸರ್ಜನ್ನಿಂದ ಫೆಲೋಶಿಪ್ ಪಡೆದ ನಾಡಿನ ಮೊದಲಿಗರಿವರು. ಮಾಡರ್ನ್ ಕಣ್ಣಿನ ಆಸ್ಪತ್ರೆ ನಿರ್ದೇಶಕರಾಗಿ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಸೇಂಟ್ ಮಾರ್ಥಾಸ್ ಆಸ್ಪತ್ರೆಗಳಲ್ಲಿ ಮುಖ್ಯ ನೇತ್ರತಜ್ಞರಾಗಿ, ಲಯನ್ಸ್ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾಗಿ ನೂರಾರು ಜನ ಅಂಧರನ್ನು ಬೆಳಕಿನ ಲೋಕಕ್ಕೆ ಕರೆತಂದ ವೈದ್ಯ ಬ್ರಹ್ಮರಿವರು. ವೈದ್ಯವಿಜ್ಞಾನದ ಅಭ್ಯಾಸದ ಜೊತೆಗೆ ಅಂಧ ಜನರಲ್ಲಿ ವೈದ್ಯ ಲೋಕದ ತಿಳುವಳಿಕೆ ಮೂಡಿಸುವ ಇವರ ಸೇವೆ ಅಪ್ರತಿಮವಾದುದು. ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ಬಡಜನರಿಗೆ ಶಸ್ತ್ರಚಿಕಿತ್ಸೆ ಮಾಡಿರುವ ಇವರು ವೃತ್ತಿಯನ್ನು ಒಂದು ಸೇವೆಯಾಗಿ ಬಡಜನರ ಸೇವೆಯನ್ನೇ ಒಂದು ಸವಾಲಾಗಿ ಸ್ವೀಕರಿಸಿದ ಅಪರೂಪದ ವೈದ್ಯರು.
ನೇತ್ರ ವೈದ್ಯಕೀಯ ಕ್ಷೇತ್ರದಲ್ಲಿ ನಾಡು ಹೆಮ್ಮೆಪಡುವಂಥ ಸಾಧನೆ ಮಾಡಿದ ಅಪರೂಪದ ನೇತ್ರತಜ್ಞ ಡಾ. ಎಸ್.ಜಿ. ರಾಮನಾರಾಯಣ್ ರಾವ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಮುರಳೀಧರರಾವ್

ಮುಂದುವರಿದ ಹೃದಯ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರು ಮತ್ತು ಪ್ರಾಧ್ಯಾಪಕರು ಡಾ. ಮುರಳೀಧರ್ ಎಸ್. ರಾವ್.
ಈ ಮುನ್ನ ಗುಲ್ಬರ್ಗದ ಎಚ್. ಕೆ. ಇ.ಎಸ್. ಬಸವೇಶ್ವರ ಕಾಲೇಜು ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ಸಲಹೆಗಾರರಾಗಿಯೂ ಎಂ. ಆರ್. ವೈದ್ಯಕೀಯ ಕಾಲೇಜಿನಲ್ಲಿ ಔಷಧ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ಪುಸ್ತುತ ಅಲ್ಲೇ ಎಮಿರಿಟಸ್ ಪ್ರಾಧ್ಯಾಪಕ ಹಾಗೂ ಸಲಹೆಗಾರರಾಗಿ ಕಾರನಿರ್ವಹಿಸುತ್ತಿರುವ ಮುರಳೀಧರ್ ರಾವ್ ಅವರದು ೩೫ ವರ್ಷಗಳಷ್ಟು ಸುದೀರ್ಘ ಬೋಧನಾನುಭವ. ಅಮೆರಿಕಾದ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯ ಹಾಗೂ ಲಂಡನ್ನ ಬ್ರಾಂಪ್ಟನ್ ಆಸ್ಪತ್ರೆಗಳಲ್ಲಿ ‘ಎಕೋಕಾರ್ಡಿಯೋಗ್ರಫಿ’ ಕುರಿತು ಪಡೆದ ತರಬೇತಿಯಿಂದ ಆ ಕ್ಷೇತ್ರದಲ್ಲಿ ಪರಿಪಕ್ವತೆಯನ್ನು ರೂಢಿಸಿಕೊಂಡಿದ್ದಾರೆ.
ಶೈಕ್ಷಣಿಕ ಶಿಸ್ತು ಮತ್ತು ಕ್ರಿಯಾಶೀಲತೆಗಳು ಎದ್ದು ಕಾಣುವ ಮುರಳೀಧರರಾವ್ ಅವರ ವೈಜ್ಞಾನಿಕ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಖ್ಯಾತಿಯ ಪತ್ರಿಕೆಗಳಲ್ಲಿ ಪ್ರಕಟವಾಗಿ ವಿದ್ವಾಂಸರ ಸಂಶೋಧಕರ ಪ್ರಶಂಸೆಗೆ ಪಾತ್ರವಾಗಿವೆ. ಕಳೆದ ೨೫ ವರ್ಷಗಳಿಂದ ಸಿ.ಎಂ.ಇ. ಕಾಠ್ಯಕ್ರಮಗಳಲ್ಲೂ ರಾಜ್ಯದ ಎ.ಪಿ.ಐ. ಮತ್ತು ಸಿ.ಎಸ್.ಐ. ಸಮ್ಮೇಳನಗಳಲ್ಲೂ ಪಾಲ್ಗೊಳ್ಳುತ್ತ ಬಂದಿರುವುದಲ್ಲದೆ ವೈದ್ಯಕೀಯ ಕ್ಷೇತ್ರಕ್ಕೆ ಅತಿ ಮಹತ್ವದ ಕೊಡುಗೆ ನೀಡುವಂಥ ಸಮ್ಮೇಳನಗಳನ್ನು ಗುಲ್ಬರ್ಗದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸುತ್ತ ಬಂದಿದ್ದಾರೆ.
ಸಿ.ಎಸ್.ಐ. ಮತ್ತು ಎ.ಪಿ.ಐ. ಗಳ ಅಭಿನಂದನೆ ಹಾಗೂ ಸನ್ಮಾನಕ್ಕೂ ಪಾತ್ರರಾಗಿರುವ ಡಾ. ಮುರಳೀಧರ್ ಎಸ್. ರಾವ್ ಪರಿಣತ ಹಿರಿಯ ವೈದ್ಯರಾಗಿ ಹೆಸರು ಮಾಡಿದವರಾಗಿದ್ದಾರೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಎ.ಜಿ. ರವಿ ಕಿಶೋರ್

ಸುಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ. ಎ.ಜಿ. ರವಿಕಿಶೋರ್ ಅವರು ಜನಿಸಿದ್ದು ೧೯೫೯ರಲ್ಲಿ. ಬೆಂಗಳೂರಿನಲ್ಲಿ ವೈದ್ಯಕೀಯ ಪದವಿ ಮುಗಿಸಿದ ಶ್ರೀಯುತರು, ಚಂಡೀಫ, ದೆಹಲಿ ಹಾಗೂ ಲಂಡನ್ ನಲ್ಲಿ ಉನ್ನತ ವ್ಯಾಸಂಗವನ್ನು ಪೂರೈಸಿದರು.
ಪ್ರಸ್ತುತ ನಾರಾಯಣ ಹೃದಯಾಲಯ ಹಾಗೂ ರಾಜೀವ್ ಗಾಂಧಿ ವೈದ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿರುವ ಶ್ರೀಯುತರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯವಾಗಿ ತಮ್ಮ ಹದಿನಾರು ಲೇಖನಗಳನ್ನು ಪ್ರತಿಷ್ಠಿತ ನಿಯತ ಕಾಲಿಕೆಗಳಲ್ಲಿ ಪ್ರಕಟಿಸಿರುವುದರೊಂದಿಗೆ ಅಂತರರಾಷ್ಟ್ರೀಯ ಸಮಾವೇಶಗಳಲ್ಲಿ ಅತಿಥಿ ಉಪನ್ಯಾಸಗಳು ಹಾಗೂ ಪ್ರಬಂಧಗಳನ್ನು ಮಂಡಿಸಿದ್ದಾರೆ.
ವೈದ್ಯಕೀಯ ಪಠ್ಯಗಳಲ್ಲಿ ಕೂಡ ಡಾ. ಎ.ಜಿ. ರವಿಕಿಶೋರ್ ಅವರ ಬರಹಗಳು ಸೇರಿಸಲ್ಪಟ್ಟಿವೆಯೆಂಬುದು ಶ್ರೀಯುತರಿಗೆ ಸಂದಿರುವ ಶ್ರೇಷ್ಟ ಅಂತರರಾಷ್ಟ್ರೀಯ ಮನ್ನಣೆಯಾಗಿದೆ.
ಹೃದ್ರೋಗ ಸಂಬಂಧಿತ ವೈದ್ಯಕೀಯ ಕ್ಷೇತ್ರದ ಅನೇಕ ಪ್ರಥಮಗಳ ಸಾಧನೆ ಡಾ. ರವಿಕಿಶೋರ್ ಅವರ ಬೆನ್ನಿಗಿದ್ದು, ದೇಶದಲ್ಲೇ ಅತ್ಯಂತ ನುರಿತ ಹಾಗೂ ಅವಿರತ ಚಟುವಟಿಕೆಗಳ ಎಲೆಕ್ಟೋಫಿಸಿಯಾಲಜಿಸ್ಟ್ ಎಂಬ ಹೆಮ್ಮೆ ಇವರದು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಿಜಯಲಕ್ಷ್ಮಿ ದೇಶಮಾನೆ

ಸುಮಾರು ಎರಡು ದಶಕಗಳಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಅವರ ನೋವಿನ ಉಪಶಮನಕ್ಕಾಗಿ ಹಾಗೂ ರೋಗನಿವಾರಣೆಗಾಗಿ ಶ್ರಮಿಸುತ್ತಿರುವವರು ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು.
ಗುಲ್ಬರ್ಗಾ ಜಿಲ್ಲೆಯಲ್ಲಿ ಜನಿಸಿದ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಎಂ.ಬಿ.ಬಿ.ಎಸ್, ಎಂ.ಎಸ್. (ಜನರಲ್ ಸರ್ಜರಿ). ಎಫ್.ಎ.ಐ.ಎಸ್. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದಾರೆ. ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ವಿವಿಧ ಪತ್ರಿಕೆಗಳಲ್ಲಿ ಕ್ಯಾನ್ಸರ್ ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.
ಶ್ರೀಮತಿ ವಿಜಯಲಕ್ಷ್ಮಿ ದೇಶಮಾನೆ ಅವರ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಹಲವು ಸಂಸ್ಥೆಗಳು ಕಲಶ ಪ್ರಶಸ್ತಿ, ರಾಷ್ಟ್ರೀಯ ರತ್ನ, ಮೆಡಿಕಲ್ ಎಕ್ಸಲೆನ್ಸ್ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, ೧೯೯೯ರ ವರ್ಷದ ಮಹಿಳಾ ಪ್ರಶಸ್ತಿಯನ್ನು ಇತ್ತು ಗೌರವಿಸಿವೆ. ಇಂಟರ್ನ್ಯಾಷನಲ್ ಸ್ಟಡಿ ಸರ್ಕಲ್ ೨೦೦೩ ಹಾಗೂ ೨೦೦೪ರಲ್ಲಿ ಚಿನ್ನದ ಪದಕ ನೀಡಿ ಗೌರವಿಸಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದು, ಕ್ಯಾನ್ಸರ್ ರೋಗಕ್ಕೆ ತುತ್ತಾದ ದುರ್ದೈವಿಗಳ ಸೇವೆಗಾಗಿ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ವೈದ್ಯೆ ಶ್ರೀಮತಿ ವಿಜಯಲಕ್ಷ್ಮಿ ಮಾನೆ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ವಿವೇಕ್ ಜವಳಿ

ಅಂತರರಾಷ್ಟ್ರೀಯ ಖ್ಯಾತಿಯ ಹೃದಯರೋಗ ತಜ್ಞ ಡಾ. ವಿವೇಕ್ ಜವಳಿ ಅವರು. ಗುಲ್ಬರ್ಗಾ ಜಿಲ್ಲೆಯವರಾದ ಡಾ. ವಿವೇಕ್ ಜವಳಿ ಅವರು ಎಂ.ಬಿ.ಬಿ.ಎಸ್. ಪದವಿಯಲ್ಲಿ ಸುವರ್ಣಪದಕ ಪಡೆದು ತೇರ್ಗಡೆಯಾದರು. ರೋಗಿಗಳಿಗೆ ಪ್ರಜ್ಞೆ ಇರುವಂತೆಯೆ ಬೈಪಾಸ್ ಶಸ್ತ್ರ ಚಿಕಿತ್ಸೆ ಮತ್ತು ತೆರೆದ ಹೃದಯ ಶಸ್ತ್ರಚಿಕಿತ್ಸೆ ನೀಡಬಲ್ಲ ತಜ್ಞರು ಈವರೆಗೆ ೧೫,೦೦೦ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಮತ್ತು ಅನೇಕ ವೈಜ್ಞಾನಿಕ ಲೇಖನಗಳನ್ನು ಪ್ರಬಂಧಗಳನ್ನು ಮಂಡಿಸಿದ್ದಾರೆ. ಬೇರೆ ಬೇರೆ ದೇಶಗಳಲ್ಲಿಯೂ ಶಸ್ತ್ರಚಿಕಿತ್ಸೆ ನಡೆಸಿದ ಕೀರ್ತಿ ಡಾ. ವಿವೇಕ ಜವಳಿ ಅವರದು.
ಬೆಂಗಳೂರು ನಗರದ ಎರಡು ಪ್ರಮುಖ ಆಸ್ಪತ್ರೆಗಳೆನಿಸಿದ ಜಯದೇವ ಹೃದ್ರೋಗ ಸಂಸ್ಥೆ ಮತ್ತು ವೋಕ್ಲಾರ್ಟ್ ಆಸ್ಪತ್ರೆ ಮತ್ತು ಹೃದ್ರೋಗ ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ರೂವಾರಿಗಳು
ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಹಾಗೂ ಅತ್ಯಂತ ಸಮರ್ಪಣಾ ಭಾವದಿಂದ ದುಡಿಯುತ್ತಿರುವ ತಜ್ಞವೈದ್ಯರು ಡಾ. ವಿವೇಕ್ ಜವಳಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ವಿಜ್ಞಾನ

ಶ್ರೀ ಗೋವರ್ಧನ್ ಮೆಸ್ತಾ

ವಿವಿಧ ವಿಶ್ವವಿದ್ಯಾಲಯಗಳಲ್ಲಿ ಜೈವಿಕ ರಸಾಯನಶಾಸ್ತ್ರದ ಪ್ರೊಫೆಸರ್ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ನಿರ್ದೇಶಕರಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವವರು ಶ್ರೀ ಗೋವರ್ಧನ್ ಮೆಹ್ರಾಅವರು.
ಜೂನ್ ೨೬, ೧೯೪೩ರಲ್ಲಿ ಜೋದ್ಪುರದಲ್ಲಿ ಜನನ. ೧೯೬೩ರಲ್ಲಿ ರಾಜಾಸ್ತಾನ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ., ೧೯೬೬ರಲ್ಲಿ ಪೂನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ, ೧೯೬೭ – ೬೯ರಲ್ಲಿ ಮಿಚಿಗನ್ ಸ್ಟೇಟ್ ಮತ್ತು ದಿ ಓಹಿಯಾ ಸ್ಟೇಟ್ ವಿಶ್ವವಿದ್ಯಾಲಯದಿಂದ ಡಿ.ಎಸ್ (ಪೋಸ್ಟ್ ಡಾಕ್ಟರಲ್ ರೀಸರ್ಚ್ ಪದವಿ). ೧೯೬೯ರಿಂದ ಇಲ್ಲಿಯವರೆಗೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವುದರ ಜೊತೆಗೆ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿಯೂ, ಯುಎಸ್ಎ, ಫ್ರಾನ್ಸ್, ತೈವಾನ್, ಯುಕೆ, ಪ್ಯಾರಿಸ್, ಫ್ಲೋರಿಡಾ, ಜಪಾನ್, ಜರ್ಮನಿ ಮುಂತಾದ ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಅಂತರ ರಾಷ್ಟ್ರೀಯ ಪತ್ರಿಕೆಗಳಲ್ಲಿ ೩೮೦ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ವಿಶ್ವಾದ್ಯಂತ ವಿವಿಧ ಕಡೆಗಳಲ್ಲಿ ೨೦೦ ಉಪನ್ಯಾಸಗಳನ್ನು ನೀಡಿದ್ದಾರೆ.
೧೯೭೮ ರಿಂದ ೨೦೦೪ರವರೆಗೆ ಇವರನ್ನು ಅರಸಿ ಬಂದಿರುವ ಪದಕ, ಪ್ರಶಸ್ತಿ ಮತ್ತು ಬಹುಮಾನಗಳು ಅಸಂಖ್ಯಾತ, ಎಫ್.ಎನ್.ಎ., ಎಫ್.ಎ.ಎಸ್ಸಿ, ಎಫ್.ಎನ್.ಎ.ಎಸ್ಸಿ, ಎಫ್.ಆರ್.ಎಸ್.ಸಿ, ಟಿ.ಡಬ್ಲ್ಯು.ಎ.ಎಸ್, ಫೆಲೋಶಿಫ್ ಗಳು ಡಾ. ಗೋವರ್ಧನ್ ಮೆಹ್ವಾ ಅವರನ್ನರಸಿ ಬಂದಿದೆ.
ಶ್ರೀಯುತರು ಹಲವು ಪತ್ರಿಕೆಗಳ ಸಂಪಾದಕ ಮಂಡಳಿಯಲ್ಲಿದ್ದು ಜೈವಿಕ ರಸಾಯನ ವಿಜ್ಞಾನದ ಅಧ್ಯಾಪಕರಾಗಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾದವರು ಶ್ರೀ ಗೋವರ್ಧನ್ ಮೆಹ್ರಾ ಅವರು

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಂ. ನಾಗರಾಜ್ರಾವ್

ಕಳೆದ ಆರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಶ್ರೀ ಮತ್ತಿಹಳ್ಳಿ ನಾಗರಾಜರಾವ್ ಅವರು.
ಪತ್ರಿಕೋದ್ಯಮದ ಕುಟುಂಬದಲ್ಲಿ ಜನಿಸಿದ ಶ್ರೀ ಎಂ. ನಾಗರಾಜರಾವ್ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದು ಅದು ಇಂದಿನ ಪತ್ರಿಕೋದ್ಯಮಕ್ಕೂ ಅನ್ವಯವಾಗುತ್ತದೆ. ರಾಜ್ಯದ ಭಾಷಾವಾರು ಪುನರ್ವಿಂಗಡಣೆ ಸಮಯದಿಂದ ಕರ್ನಾಟಕದ ಘಟನೆಗಳನ್ನು ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿ ಮಾಡಿದವರು.
ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಆಡಳಿತಗಾರರು ಮತ್ತು ಸಂಶೋಧಕರಿಗೆ ಉಪಯುಕ್ತವಾಗುವಂಥ `ನ್ಯೂ ಡೆಲಿಡಾ ಆಫ್ ಕರ್ನಾಟಕ’ (೧೯೮೪-೧೯೮೭) ಕರ್ನಾಟಕಕ್ಕೆ ಸಂಬಂಧಪಟ್ಟ ಘಟನೆಗಳನ್ನು ದಾಖಲಿಸುವ ದಾಖಲೆಯ ಪತ್ರಿಕೆಯ ಹೊಸ ಸಾಹಸವನ್ನು ಪ್ರಾರಂಭಿಸಿದ್ದಾರೆ.
೩೦ ವರ್ಷಗಳ ಹಿಂದೆ ಜಗತ್ತಿನಾದ್ಯಂತ ಸಂಚರಿಸಿದ್ದು ಆ ಪ್ರವಾಸ ಸಾಹಿತ್ಯವನ್ನು ಬರೆಯುವುದರಲ್ಲಿ ತೊಡಗಿದ್ದಾರೆ. ಇಸ್ರೇಲ್ ಬಗ್ಗೆ ಒಂದು ಕನ್ನಡ ಪುಸ್ತಕವನ್ನು ಬರೆದಿದ್ದಾರೆ. ಸಂಯುಕ್ತ ಕರ್ನಾಟಕದೊಂದಿಗೆ ಕುಟುಂಬವು ಐದು ದಶಕಗಳಿಂದಲೂ ಹಾಗೂ ದಿ ಹಿಂದೂ ಪತ್ರಿಕೆಯಲ್ಲಿ ಏಳು ದಶಕಗಳಿಂದಲೂ ಸಂಪರ್ಕ ಹೊಂದಿದೆ. ಮದರಾಸು ವಿಶ್ವವಿದ್ಯಾಲಯದಿಂದ ಪದವಿ ಪಡೆದ ನಂತರ ಸಂಯುಕ್ತ ಕರ್ನಾಟಕ, ಹುಬ್ಬಳ್ಳಿಯಲ್ಲಿ ವೃತ್ತಿಯನ್ನು ಆರಂಭಿಸಿದರು. ಸಹಾಯಕ ಸಂಪಾದಕರು,ರೆಸಿಡೆಂಟ್ ಸಂಪಾದಕರು ೧೯೮೧ರಲ್ಲಿ ನಿವೃತ್ತರಾಗಿದ್ದಾರೆ.
ಕೃಷಿಗಾಗಿ ವಿಶೇಷ ಪುಟ, ತೆರಿಗೆ ನಿರ್ಧರಣೆ, ಕೈಗಾರಿಕೆ, ಹಣಕಾಸು ಮತ್ತು ವಾಣಿಜ್ಯ, ಕಿಲಾಡಿ ಕಿಟ್ಟಿ’, ವ್ಯಂಗ್ಯಚಿತ್ರವನ್ನು ವಿಷಯಗಳ ಬಗೆಗಿನ ಚರ್ಚೆ, ೧೫ ಪುಟಗಳ ವಿಶೇಷ ಪುರವಣಿಯಲ್ಲಿ ತಂದ ಕೀರ್ತಿ ಶ್ರೀಯುತರದು. ಅಮೇರಿಕ ಸಂಯುಕ್ತ ಸಂಸ್ಥಾನ, ಇಸ್ರೇಲ್, ಸ್ವಿಟ್ಸರ್ಲೆಂಡ್, ತೈವಾನ್, ಇಟಲಿ ಮುಂತಾದ ರಾಷ್ಟ್ರಗಳಿಗೆ ಪ್ರವಾಸ ಮಾಡಿದ್ದಾರೆ.
ಇಂಗ್ಲಿಷ್ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ರಚಿಸಿರುವ ಶ್ರೀಯುತರಿಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಭಾರ್ಗವ ಪ್ರಶಸ್ತಿ, ಸಂದೇಶ ಫೌಂಡೇಷನ್ ಜರ್ನಲಿಸಂ ಪ್ರಶಸ್ತಿಗಳು ದೊರೆತಿದೆ. ಪತ್ರಿಕೋದ್ಯಮದಲ್ಲಿ ನಾವಿನ್ಯತೆಯನ್ನು ಹಾಗೂ ವಿಶೇಷ ಅಂಕಣಗಳನ್ನು ಪ್ರಾರಂಭಿಸಿದ ಹೆಗ್ಗಳಿಕೆಗೆ ಪಾತ್ರರು ಶ್ರೀ ಎಂ. ನಾಗರಾಜರಾವ್ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಿ. ಮಹಾದೇವಪ್ಪ

ಗುಲ್ಬರ್ಗಾ ಜಿಲ್ಲೆಯ ಸೇಡಂ ತಾಲ್ಲೂಕಿನ ಬೆನಕನಹಳ್ಳಿಯಲ್ಲಿ ೧೯೩೮ರಲ್ಲಿ ಜನಿಸಿದ ಶ್ರೀ ಬಿ.ಮಹಾದೇವಪ್ಪನವರು ಒಬ್ಬ ಅಧ್ಯಯನ ಶೀಲ, ಅಗಾಧ ಪಾಂಡಿತ್ಯ, ಪ್ರಖರ ವಿಚಾರಧಾರೆಯ ಬರಹಗಳಿಗೆ ಹೆಸರಾದವರು.
ಹೈದಾರಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ೧೯೫೯ರಲ್ಲಿ ಪದವಿಗಳಿಸಿ ಅನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವುದೇ ಅಲ್ಲದೆ ಪತ್ರಿಕೋದ್ಯಮದಲ್ಲೂ ಪದವಿಗಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಜಾಣ” ಪರೀಕ್ಷೆಯಲ್ಲೂ ತೇರ್ಗಡೆಯಾಗಿ ಕನ್ನಡ -ಅಂಗ್ಲ ಭಾಷೆಗಳೆರಡರಲ್ಲೂ ಪ್ರಭುತ್ವಗಳಿಸಿದ ಮೇಧಾವಿ.
ಆರಂಭದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ಮುಂದೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪ್ರತಿಕೆಗಳ ಬಾತ್ಮೀದಾರರಾಗಿ ಯಾದಗಿರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು, ಜೊತೆಜೊತೆಗೆ “ವಿಶ್ವಕಲ್ಯಾಣ” ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆಸಲ್ಲಿಸಿದ್ದಾರೆ. ಪತ್ರಿಕೋದ್ಯಮದ ಜೊತೆಗೇ ಶೈಕ್ಷಣಿಕ ಕ್ಷೇತ್ರದಲ್ಲೂ ದುಡಿದು ಕನ್ನಡದ ಅರೆಕಾಲಿಕ
2008 ನಾಯಕ ಉಪನ್ಯಾಸಕರಾಗಿ ಸಹ ದುಡಿದಿದ್ದಾರೆ.
ಬರಹಗಾರರಾಗಿ ವಿಚಾರಾತ್ಮಕ ವಿಷಯ ಲೇಖಕರಾಗಿ ಅನೇಕ ಸಮ್ಮೇಳಗಳಲ್ಲಿ ಪ್ರಭಂದ ಲೇಖನಗಳನ್ನು ಮಂಡಿಸಿ ಪ್ರಕಟಿಸಿದ್ದಾರೆ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಪತ್ರಿಕಾ ಅಕಾಡೆಮಿ ಸದಸ್ಯರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯಪರಿಷತ್ತಿನ ಜಿಲ್ಲಾ ಪ್ರತಿನಿಧಿಯಾಗಿ ಬಹುಮುಖ ಸೇವೆ ಸಲ್ಲಿಸಿರುವ ಶ್ರೀ ಬಿ. ಮಹಾದೇವಪ್ಪನವರಿಗೆ ಸಂದಿರುವ ಪ್ರಶಸ್ತಿಗಳು ಅಪಾರ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಜಿಯಾಮೀರ್

ತುಮಕೂರು ಜಿಲ್ಲೆಯ ಕುಣಿಗಲ್ನ ಸೂಫಿಗಳ ಹಾಗೂ ಉಲೇಮಾಗಳ ಕುಟುಂಬದಿಂದ ಬಂದ ಜಿಯಾ ಮೀರ್ ಉರ್ದು ಭಾಷೆ, ಸಾಹಿತ್ಯ ಸಂಸ್ಕೃತಿಗಳ ಸಂವರ್ಧನೆಗೆ ಸೂಕ್ತ ವೇದಿಕೆಯಾಗಿ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡವರು.
ಕೋಮು ಸುಹಾರ್ದತೆಗೆ ವಿಶೇಷವಾದ ಒತ್ತು ಕೊಟ್ಟು, ಸಾಂಸ್ಕೃತಿಕ ಒಳನೋಟವೊಂದನ್ನು ಬಿಂಬಿಸುವ ಮೀರ್ರ ಲೇಖನಗಳು ಓದುಗರ ಸಂವೇದನೆಗಳನ್ನು ಸೂಕ್ಷ್ಮವಾಗಿ ತಟ್ಟುವ ವಿಶಿಷ್ಟ ಗುಣವನ್ನು ಹೊಂದಿರುವಂಥವು. ಆರಂಭದಲ್ಲಿ ಉರ್ದು ಸಾಹಿತ್ಯ ಪತ್ರಿಕೆಗಳಿಗೆ, ವೃತ್ತ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಬರೆಯುತ್ತಿದ್ದ ಮೀರ್ ಮಹತ್ವದ ಉರ್ದು ತ್ರೈ ಮಾಸಿಕ ಸೌಗತ್ನ ಸಂಪಾದಕರಲ್ಲೊಬ್ಬರಾಗಿ ಕಾರ ನಿರ್ವಹಿಸಿದರು.
ಕಳೆದ ೫೦ ವರ್ಷಗಳಿಂದ ಪತ್ರಿಕೋದ್ಯಮದ ನಿರಂತರ ಸಂಪರ್ಕದಲ್ಲಿರುವ ಮೀರ್ ಹವ್ಯಾಸಿ ಪತ್ರಕರ್ತರಾಗಿ ಡೈಲಿ ಸಾಲಾರ್ನಲ್ಲಿ ವೃತ್ತಿನಿರತ ಪತ್ರಕರ್ತರಾಗಿ, ಹೊಸ ತಲೆಮಾರಿನ ಉರ್ದು ಕವಿಗಳನ್ನು ಬರಹಗಾರರನ್ನು ರೂಪಿಸುವ ಸಂಪನ್ನತೆಯನ್ನು ಡೈಲಿ ಸಾಲಾರ್ಗೆ ಒದಗಿಸಿಕೊಡುವವರಾಗಿ, ಅದರ ಪ್ರಧಾನ ಸಹಾಯಕ ಸಂಪಾದಕರಾಗಿ, ಡೈಲಿ ಪಾಸ್ಬಾನ್ ಪತ್ರಿಕೆಯ ಪ್ರಧಾನ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುವುದರ ಮೂಲಕ ಉರ್ದು ಪತ್ರಿಕೋದ್ಯಮದ ದಿಗಂತಗಳಲ್ಲಿ ವಿಹರಿಸಿದವರು.
ವಿಮರ್ಶಕ, ಕವಿ, ಸಣ್ಣ ಕಥೆಗಾರ ಹಾಗೂ ಸಾಲಾರ್ನ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ವಿವಿಧ ಹೊಣಿಗಾರಿಕೆಗಳನ್ನು ಅವರು ನಿರ್ವಹಿಸಿದ ರೀತಿ ಉರ್ದು ಸಾಹಿತ್ಯದ ಬಗೆಗೆ ವಿಶೇಷ ಆಸಕ್ತಿ ಬೆಳೆಸಿಕೊಂಡ ಅನೇಕ ಹೊಸ ಬರಹಗಾರರು ಸಾಹಿತ್ಯ ಕ್ಷೇತ್ರಕ್ಕೆ ಪ್ರೀತಿಯಿಂದ ಪ್ರವೇಶಿಸಲು ಪ್ರೇರಕ ಶಕ್ತಿಯಾಯಿತು.
ಮೀರ್ ಅವರು ಸಂಪಾದಿಸಿರುವ ‘ಮಜಮೀರ್’ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನ ನಿರತರಾಗಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಬಲ್ಲ ಅತ್ಯುತ್ತಮ ಪುಸ್ತಕಗಳಲ್ಲಿ ಒಂದಾಗಿದೆ. ಕನ್ನಡದ ಖ್ಯಾತ ಕವಿಗಳ ಹಲವಾರು ಕವಿತೆಗಳನ್ನು ಉರ್ದುವಿಗೆ ಅನುವಾದಿಸಿರುವ ಮೀ ಕನ್ನಡ, ಉರ್ದು ಭಾಷಾ ಬಾಂಧವ್ಯವನ್ನು ಬೆಸೆಯಲು ಶ್ರಮಿಸುತ್ತಿದ್ದಾರೆ.
ಕರ್ನಾಟಕ ಪತ್ರಿಕಾ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿಗೂ ಪಾತ್ರರಾಗಿರುವ ಜಿಯಾ ಮೀರ್ ತಮ್ಮ ಸಮತೂಕದ ಸಮಯೋಚಿತ ಸಾಹಿತ್ಯ ಕೃಷಿ ಮತ್ತು ಬರವಣಿಗೆಗಳಿಂದ ಉರ್ದು ಪತ್ರಿಕಾ ಪ್ರಪಂಚದ ಸುಪ್ರಸಿದ್ಧ ಹಿರಿಯ ಪತ್ರಕರ್ತರಾಗಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಚ್.ಎನ್. ಷಡಕ್ಷರಪ್ಪ

ಮಧ್ಯಕರ್ನಾಟಕದ ಜಿಲ್ಲೆಗಳ ಆಪ್ತ ಒಡನಾಡಿಯೂ ಆ ಜಿಲ್ಲೆಗಳ ಜನರ ಸಮಸ್ಯೆಗೆ ಸದಾ ಸ್ಪಂದಿಸುತ್ತಿರುವ ಪ್ರಭಾವಶಾಲಿ ಮಾಧ್ಯಮವೂ ಆಗುವಂತೆ ‘ಜನತಾವಾಣಿ’ ದಿನಪತ್ರಿಕೆಯನ್ನು ರೂಪಿಸಿ ಎಲ್ಲ ವರ್ಗದ ಓದುಗರ ಮೆಚ್ಚುಗೆಗೂ ಪಾತ್ರರಾಗಿರುವ ಶ್ರೀ ಎಚ್.ಎನ್. ಷಡಕ್ಷರಪ್ಪ ಒಬ್ಬ ಧೀಮಂತ ಪತ್ರಿಕೋದ್ಯಮಿ.
ಗಾಂಧಿ, ಲೋಹಿಯಾ, ಜೆ.ಪಿ, ಅಂಬೇಡ್ಕರ್, ಬುದ್ಧ, ಬಸವರ ರಾಜಕೀಯ ದಾರ್ಶನಿಕ ವಿಚಾರಧಾರೆಗಳನ್ನುಂಡ ಎಚ್.ಎನ್.ಎಸ್. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಕೈಬರಹದ ಪತ್ರಿಕೆ ಹೊರತಂದು, ಮುಂದೆ ಮಾಸಪತ್ರಿಕೆ ಪ್ರಕಟಿಸುವ ಸಾಹಸಕ್ಕೂ ಕೈ ಹಚ್ಚಿದವರು. ಹುಬ್ಬಳ್ಳಿಯ ‘ಪ್ರಪಂಚ’ ಹಾಗೂ ‘ವಿಶ್ವವಾಣಿ’ ಸಂಪಾದಕ ಮಂಡಳಿಯಲ್ಲಿದ್ದು ಪತ್ರಿಕೋದ್ಯಮಕ್ಕೆ ಅಗತ್ಯವಾಗಿದ್ದ ಸತ್ವ ಹೀರಿಕೊಂಡವರು. ಕರ್ನಾಟಕ ರಾಜ್ಯದ ಸಣ್ಣ ಮತ್ತು ಜಿಲ್ಲಾಮಟ್ಟದ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾಗಿ, ದಾವಣಗೆರೆ ಪ್ರೆಸ್ ಕ್ಲಬ್ ನ ಮುಖ್ಯ ಪೋಷಕರಾಗಿ, ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, ದಾವಣಗೆರೆ ಜಿಲ್ಲಾ ಇತಿಹಾಸ ಸಂಶೋಧನಾ ಮಂಡಳಿಯ ಗೌರವಾಧ್ಯಕ್ಷರಾಗಿ, ‘ತುಂಗಭದ್ರಾ ಉಳಿಸಿ’ ಹೋರಾಟ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಷಡಕ್ಷರಪ್ಪನವರು ಪಡೆದುಕೊಂಡಿರುವ ವಿಸ್ತ್ರತ ಅನುಭವ ಪತ್ರಿಕೋದ್ಯಮಿಯಾಗಿ ಅವರನ್ನು ಮತ್ತಷ್ಟು ಗಟ್ಟಿಗೊಳಿಸಲು ಕಾರಣವಾಗಿವೆ. ಜನತಾವಾಣಿ’ ಒಂದು ಸಾಮಾಜಿಕ ಆಯಾಮ ಪಡೆದುಕೊಳ್ಳುವಲ್ಲಿ, ಸಾಂಸ್ಕೃತಿಕ ಚಳುವಳಿಗಳೊಂದಿಗೆ ಗುರುತಿಸಿಕೊಳ್ಳುವಲ್ಲಿ, ಪ್ರಗತಿ ಧೋರಣೆಗೆ ಬದ್ಧವಾಗುವಲ್ಲಿ ಮಧ್ಯತೆಯ ವಿರುದ್ಧ ಸಮರ ಸಾರುವಲ್ಲಿ ಎಚ್.ಎನ್.ಎಸ್.ಅವರ ಪ್ರಗತಿಪರ ಮನೋಧರ್ಮ ವಿಶೇಷವಾಗಿ ಕೆಲಸ ಮಾಡಿದೆ. ‘ಜನತಾವಾಣಿ’ಯನ್ನು ರಾಜ್ಯದ ಅತ್ಯುತ್ತಮ ಸಣ್ಣಪತ್ರಿಕೆಗಳಲ್ಲಿ ಒಂದನ್ನಾಗಿ ರೂಪಿಸುವಲ್ಲಿ ಶ್ರೀ ಎಚ್.ಎನ್. ಷಡಕ್ಷರಪ್ಪನವರ ಶ್ರಮ, ಪ್ರತಿಭೆ, ಛಲಗಳು ಮುಪ್ಪುರಿಗೊಂಡಿರುವುದು ಎದ್ದು ಕಾಣುತ್ತದೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅರಕೆರೆ ಜಯರಾಂ

ಕೈಗಾರಿಕೋದ್ಯಮಿಯೊಬ್ಬರ ಮಗ ಒಬ್ಬ ಯಶಸ್ವಿ ಪತ್ರಿಕೋದ್ಯಮಿಯಾಗಿ ರೂಪುಗೊಂಡ ರೋಚಕ ಕಥನಕ್ಕೆ ಸಾಕ್ಷಿ ಅರಕೆರೆ ಜಯರಾಮ್.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಅರಕೆರೆಯ ಜಯರಾಮ್ ಅವರ ಹೆಸರಿನೊಂದಿಗೆ ಲಗತ್ತಾಗಿದೆಯಾದರೂ ಜಯರಾಮ್ ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಬೆಂಗಳೂರಿನಲ್ಲೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನೂ ಭಾರತೀಯ ವಿದ್ಯಾಭವನದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾವನ್ನೂ ಪಡೆದುಕೊಂಡ ಜಯರಾಮ್ ಅವರನ್ನು ಆಕರ್ಷಿಸಿದ್ದು ಪತ್ರಿಕೋದ್ಯಮ ಕ್ಷೇತ್ರವೇ. ೧೯೭೨ರಲ್ಲಿ ಹಿಂದೂ ಪತ್ರಿಕೆಗೆ ಪತ್ರಕರ್ತರಾಗಿ ಪ್ರವೇಶಿಸಿದ್ದು ಅವರಿಗೆ ಪತ್ರಿಕೋದ್ಯಮದ ಬಹುಮಖ ಅನುಭವಕ್ಕೆ ನಾಂದಿಯಾಯಿತು.
ವಿಶೇಷ ಬಾತ್ಮೀದಾರರಾಗಿ ರಾಜಕಾರಣದ ವಿವಿಧ ಮುಖಗಳನ್ನು ವಿವಕ್ಷಣತೆಯಿಂದ ವಿಮರ್ಶೆಗೊಳಪಡಿಸುವ ಕಲೆಯನ್ನು ಕರಗತವಾಗಿಸಿಕೊಂಡ ಜಯರಾಮ್ ಅವರು ಸಿದ್ದಪಡಿಸಿದ ವಿಶೇಷ ವರದಿಗಳಲ್ಲಿ ಮುಖ್ಯವಾದವು ನ್ಯಾಯಮೂರ್ತಿ ಜೆ. ಸಿ. ಷಾ ತನಿಖಾ ಆಯೋಗ, ನ್ಯಾಯಮೂರ್ತಿ ಎ.ಎನ್. ಗ್ರೂವರ್ ಆಯೋಗ ಮತ್ತು ನ್ಯಾಯಮೂರ್ತಿ ಕುಲದೀಪ್ಸಿಂಗ್ ಆಯೋಗ, ರಾಜಕಾರಣ, ಇತಿಹಾಸ, ಕಾನೂನು, ಶಿಕ್ಷಣ, ಸಾರ್ವಜನಿಕ ವಿಚಾರಗಳ ಬಗೆಗೆ ತೀವ್ರ ಆಸಕ್ತಿಯಿರುವ ಜಯರಾಮ್ ಅವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಬರೆಯುತ್ತಿರುವ ‘ಹೆರಿಟೇಜ್ ವಾಚ್’ ಮತ್ತು ‘ಲಿವಿಂಗ್ ಲೆಜೆಂಡ್ಸ್’ ಕಾಲಂಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಮೈಸೂರು ಅರಸರ ಕಾಲದ ಇತಿಹಾಸ ಕುರಿತು ಅಧಿಕಾರಯುತವಾಗಿ ಮಾತನಾಡಬಲ್ಲ ಜಯರಾಮ್ ಆ ಬಗ್ಗೆ ಇಂಗ್ಲಿಷ್ನಲ್ಲಿ ಪ್ರಸ್ತಕವೊಂದನ್ನು ಹೊರತಂದಿದ್ದಾರೆ. ಅತ್ಯುತ್ತಮ ಸಾರ್ವಜನಿಕ ಭಾಷಣಕಾರರಾಗಿದ್ದು ಹಲವಾರು ವಿಚಾರಗೋಷ್ಠಿ ವಿಚಾರಸಂಕಿರಣಗಳಲ್ಲಿ ಭಾಗವಹಿಸಿರುವುದಲ್ಲದೆ ಆಕಾಶವಾಣಿ ದೂರದರ್ಶನದ ಕಾರಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಸರ್ಕಾರದ ನಾಮಕರಣ ಸದಸ್ಯರಾಗಿ ವಾರ್ತಾ ಇಲಾಖೆಯ ಪತ್ರಿಕೋದ್ಯಮ ಮಾನ್ಯತಾ ಸಮಿತಿಯಲ್ಲೂ ಕಾರ ನಿರ್ವಹಿಸಿರುವ ಅರಕೆರೆ ಜಯರಾಮ್ ಪ್ರತಿಷ್ಠೆ ಕುಶಲತೆಗಳು ಸಂಗಮಿಸಿದ ಅಪರೂಪದ ಪತ್ರಕರ್ತರಾಗಿದ್ದಾರೆ.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಗುಲಾಂ ಮಂಬಕ್

ಅತ್ಯುತ್ತಮ ಪತ್ರಿಕಾ ಛಾಯಾಗ್ರಾಹಕರು ಶ್ರೀ ಗುಲಾಂ ಮಂಟಕ್ ಅವರು.
೧೯೩೯ರಲ್ಲಿ ಬೀದರಿನಲ್ಲಿ ಜನನ. ಛಾಯಾಗ್ರಹಣವನ್ನು ಬಾಲ್ಯದಿಂದಲೇ ತಂದೆ ಗುಲಾಮ್ ಮುಸ್ತಫ ಅವರಲ್ಲಿ ಕಲಿತರು. ಶ್ರೀ ಗುಲಾಂ ಮಂಟಕ್ ಅವರು ವೃತ್ತಿಯನ್ನಾರಂಭಿಸಿದಾಗ ಛಾಯಾಚಿತ್ರವನ್ನು ಡೆವಲಪ್ ಮಾಡಲು ಬೀದರ್ ನಲ್ಲಿ ವಿದ್ಯುಚ್ಛಕ್ತಿಯೂ ಇರಲಿಲ್ಲ. ಡೆವಲಪ್ ಮಾಡುವ ಕೆಲಸವನ್ನು ಲ್ಯಾಟೀನು ಬೆಳಕಿನಲ್ಲಿಯೂ ಮತ್ತು ಫೋಟೋ ಎನ್ಲಾರ್ಜ್ ಮಾಡುವುದನ್ನು ಸೂರ್ಯನ ಬೆಳಕಿನಲ್ಲಿಯೂ ಮಾಡುವ ಪರಿಸ್ಥಿತಿ. 0 ಡಿಗ್ರಿಯಿಂದ ೧೮೦ ಡಿಗ್ರಿಯವರೆಗೆ ಛಾಯಾಚಿತ್ರ ತೆಗೆಯುವ ವಿವಿಧ ರೀತಿಯ ಹೊಸ ಮತ್ತು ಹಳೆಯ ಕ್ಯಾಮರಾಗಳನ್ನು ಸಂಗ್ರಹಿಸಿ ಸರ್ಕ್ಯೂಟ್ ಕ್ಯಾಮರಾಗಳಂತೆ ಕೆಲಸ ಮಾಡುವ ಹಾಗೆ ರೂಪಿಸುತ್ತಿದ್ದರು. ಹಾಗೂ ೦ ಡಿಗ್ರಿಯಿಂದ ೩೬೦ ಡಿಗ್ರಿವರೆಗೆ ಛಾಯಾಚಿತ್ರ ತೆಗೆಯಲು ಈ ಸರ್ಕ್ಯೂಟ್ ಕ್ಯಾಮರಾಗಳನ್ನು ಮಾರ್ಪಡಿಸಲು ಪ್ರಯತ್ನಿಸುತ್ತಿದ್ದರು. ಈ ತಂತ್ರ ಕೌಶಲದಿಂದ ಶ್ರೀ ಗುಲಾಂ ಮಂಟಕ್ ಅವರು ಕೆಲವು ವಿಶಿಷ್ಟ ಛಾಯಾಚಿತ್ರಗಳನ್ನು ತೆಗೆದ ಹಿರಿಮೆಗೆ ಪಾತ್ರರು.
ಛಾಯಾಚಿತ್ರ ಇತಿಹಾಸದಲ್ಲಿ ಮುಂಬಯಿಯ ರಸ್ತೆ, ಸಮುದ್ರದ ಭಾಗ, ಗೇಟ್ ವೇ ಆಫ್ ಇಂಡಿಯಾ, ತಾಜಮಹಲ್ ಹೋಟೆಲು ಒಳಗೊಂಡಂತೆ ಸ್ವಾಮಿ ವಿವೇಕಾನಂದರ ಪ್ರತಿಮೆಯಿಂದ ಹಿಡಿದು ಶಿವಾಜಿ ಪ್ರತಿಮೆಯವರೆಗೆ ಒಂದೇ ಸಲಕ್ಕೆ ತೆಗೆದ ಛಾಯಾಚಿತ್ರ ಅತ್ಯಂತ ದೀರ್ಘ ಛಾಯಾಚಿತ್ರವಾಗಿದೆ.
ಕ್ಯಾಮರಾಗಳ ದುರಸ್ತಿ ಕಾರ್ಯವನ್ನು ಆರಂಭಿಸಲು ವಾರ್ತಾ ಇಲಾಖೆಯ ಪತ್ರಿಕಾ ಛಾಯಾಗ್ರಾಹಕರಾಗಿ ನಾಮ ನಿರ್ದೇಶನಗೊಂಡಾಗ ಕ್ಯಾಮರಾ ತಂತ್ರಜ್ಞಾನದ ಬಗ್ಗೆ ಹೆಚ್ಚೆಚ್ಚು ಅರಿಯಲು ಸಾಧ್ಯವಾಯಿತು.
ಛಾಯಾಗ್ರಹಣ ತಂತ್ರಜ್ಞಾನದಲ್ಲಿ ಅಪಾರ ಕೌಶಲವುಳ್ಳ ಅನನ್ಯ ಛಾಯಾಗ್ರಾಹಕ ಗುಲಾಂ ಮಂಟಕ್ ಅವರು.

Categories
ಪತ್ರಿಕೋದ್ಯಮ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವೆಂಕಟನಾರಾಯಣ

ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತ ಕನ್ನಡದ ಓದುಗರಿಗೆ ಚಿರಪರಿಚಿತರಾಗಿರುವ ವೆಂಕಟನಾರಾಯಣ ಅವರು ಜನಪರ ಕಾಳಜಿಯ, ಸಾಮಾಜಿಕ ಜವಾಬ್ದಾರಿಯ ಪತ್ರಕರ್ತರು. ಕರಡು ತಿದ್ದುವವರಾಗಿ ವೃತ್ತಿ ಬದುಕಿಗೆ ಪ್ರವೇಶಿಸಿದ ವೆಂಕಟನಾರಾಯಣ ಸ್ವಸಾಮರ್ಥ್ಯದಿಂದ ಉಪಸಂಪಾದಕ, ಹಿರಿಯ ಸಂಪಾದಕ, ಮುಖ್ಯ ಸುದ್ದಿ ಸಂಪಾದಕ, ಸ್ಥಾನಿಕ ಸಂಪಾದಕ ಮುಂತಾದ ಹಲವು ಎತ್ತರಗಳಿಗೆ ಏರಿದವರು. ದೂರದರ್ಶನದಲ್ಲಿ ಸುದ್ದಿ ಸಂಯೋಜಕರಾಗಿಯೂ ಹೆಸರು ಮಾಡಿದವರು. ತಮ್ಮ ಸರಳ ಜೀವನಶೈಲಿಯಿಂದ ಬಡವರ, ದೀನದಲಿತರ ದಿನನಿತ್ಯದ ಬವಣೆಯ ಬದುಕಿಗೆ ಧ್ವನಿಯಾದವರು ಪತ್ರಿಕೋದ್ಯಮದ ಜೊತೆಗೆ ಹಲವು ಸಂಘ ಸಂಸ್ಥೆಗಳ ಒಡನಾಟವಿರಿಸಿಕೊಂಡು ಜವಾಬ್ದಾರಿಯುತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದವರು. ೫೦೦ಕ್ಕೂ ಹೆಚ್ಚು ಉಚಿತ ಸಾಮೂಹಿಕ ವಿವಾಹಗಳನ್ನೇರ್ಪಡಿಸಿ ಅಸಹಾಯಕ ಬದುಕುಗಳಿಗೆ ಊರುಗೋಲಾದವರು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರಕಿಸಿಕೊಟ್ಟು ಅವರ ಭವಿಷ್ಯದ ಆಶಾಕಿರಣವಾದವರು. ಜನಜಾಗೃತಿ ಮೂಡಿಸುವ ಆಂದೋಲನಗಳಲ್ಲಿ ಅತ್ಯಂತ ಪ್ರೀತಿಯಿಂದ ತೊಡಗಿಸಿಕೊಂಡವರು.
`ಪತ್ರಿಕೋದ್ಯಮವೆಂದರೆ ಪ್ರಜಾಪ್ರಭುತ್ವದ ಕಾವಲುನಾಯಿ’ ಎಂಬ ಮಾತನ್ನು ಅನ್ವರ್ಥವಾಗಿಸುವಂತೆ ಕಳೆದ ನಾಲ್ಕು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತರು ಶ್ರೀ ವೆಂಕಟನಾರಾಯಣ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಕೂದವಳ್ಳಿ ಶಿವಸ್ವಾಮಿ ಚಂದ್ರಶೇಖರ್

* ಚಲನಚಿತ್ರ ರಂಗದಲ್ಲಿ ನಾಯಕ ನಟನಾಗಿ, ಪೋಷಕ ನಟನಾಗಿ ಹಾಗೂ ಖಳನಾಯಕನಾಗಿ ಹೀಗೆ ವೈವಿಧ್ಯಮಯ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಕನ್ನಡ ಜನಮನದಲ್ಲಿ ನೆಲೆನಿಂತವರು ಶ್ರೀ ಕೂದುವಳ್ಳಿ ಚಂದ್ರಶೇಖರ್ ಅವರು.
ಶ್ರೀ ಚಂದ್ರಶೇಖರ್ ಅವರ ಮೊದಲ ಒಲವು ನಾಟಕಗಳು. ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ. ಕಾರಂತರ ಗರಡಿಯಲ್ಲಿ ಪಳಗಿದ ಶ್ರೀಯುತರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಹಯವದನ ಮೀಸೆ ಬಂದೋರು ಶ್ರೀಯುತರು ಅಭಿನಯಿಸಿದ ಯಶಸ್ವೀ ನಾಟಕಗಳು. ೧೯೭೦ರಲ್ಲಿ ಸಿನಿಮಾರಂಗಕ್ಕೆ ಪ್ರವೇಶಿಸಿದ ಶ್ರೀ ಚಂದ್ರಶೇಖರ್ ಅವರು ನಮ್ಮ ಮಕ್ಕಳು ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದರು. ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತರ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ಚಿತ್ರ ವಂಶವೃಕ್ಷದಲ್ಲಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದರು. ಪುಟ್ಟಣ್ಣ ಕಣಗಾಲ್ ಅವರ ಪ್ರಶಸ್ತಿ ಪುರಸ್ಕೃತ ಚಿತ್ರ ಎಡಕಲ್ಲು ಗುಡ್ಡದ ಮೇಲೆ, ನಾಯಕನ ಪಾತ್ರದಿಂದ ಎಡಕಲ್ಲು ಗುಡ್ಡದ ಚಂದ್ರಶೇಖರ್ ಎಂದೇ ಖ್ಯಾತರಾದರು. ಸುಮಾರು ೬೫ ಕನ್ನಡ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಹೃದಯಂಗಮವಾಗಿ ಅಭಿನಯಿಸಿ ಚಿತ್ರರಸಿಕರ ಮನದಲ್ಲಿ ನೆಲೆನಿಂತವರು ಶ್ರೀ ಚಂದ್ರಶೇಖರ್.
‘ತ್ರಿಭಂಗ’ ದೂರದರ್ಶನ ಧಾರಾವಾಹಿ ನಿರ್ಮಾಣ ಹಾಗೂ ‘ಸಂಸ್ಮರಣೆ’ ದೂರ ದರ್ಶನ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ವಹಿಸಿದ ಶ್ರೀ ಚಂದ್ರಶೇಖರ್ ಇತ್ತೀಚೆಗೆ ನಿರ್ಮಿಸಿದ ಶ್ರೀಮತಿ ಎಂ.ಕೆ. ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರ ಪೂರ್ವಾಪರ ಸದಭಿರುಚಿಯ ಚಿತ್ರವೆಂದು ಜನಮನ್ನಣೆ ಪಡೆದಿದೆ. ಈ ಚಿತ್ರದಲ್ಲಿ ಶ್ರೀಯುತರ ಅಭಿನಯ ಹಾಗೂ ನಿರ್ದೇಶನ ಎರಡನ್ನೂ ಮಾಡಿದ್ದಾರೆ.
ಕೆನಡಾಕ್ಕೆ ವಲಸೆ ಹೋದ ಶ್ರೀ ಚಂದ್ರಶೇಖರ್ ಕೆನಡಾ ಮತ್ತು ಅಮೆರಿಕಾ ದೇಶಗಳಲ್ಲಿ ಕನ್ನಡ ನಾಟಕಗಳು ಹಾಗೂ ಚಲನಚಿತ್ರಗಳನ್ನು ಜನಪ್ರಿಯಗೊಳಿಸಲು ಶ್ರಮಿಸಿದ್ದಾರೆ. ಶ್ರೀ ಚಂದ್ರಶೇಖರ್ ಬೆಂಗಳೂರಿನ ರಂಗ ತಂಡವೊಂದರೊಂದಿಗೆ ಗುರುತಿಸಿಕೊಂಡು ಉತ್ತರ ಅಮೆರಿಕದಲ್ಲಿ ಹಲವಾರು ಕನ್ನಡ ನಾಟಕಗಳನ್ನು ನಿರ್ದೆಶಿಸಿದ್ದಾರೆ.
ಹೊರದೇಶದಲ್ಲಿದ್ದರೂ ತಾಯ್ತಾಡನ್ನು ಮರೆಯದೆ ಕನ್ನಡ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಹಾಗೂ ಕನ್ನಡದ ಕಂಪನ್ನು ಹೊರನಾಡಿನಲ್ಲಿ ಬಿತ್ತರಿಸುತ್ತಿರುವ ಅಪರೂಪದ ಹೊರನಾಡ ಕನ್ನಡಿಗ ಶ್ರೀ ಚಂದ್ರಶೇಖರ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ದಯಾನಂದ ನಾಯಕ್

ನಿಷ್ಕಳಂಕ ಮತ್ತು ದಿಟ್ಟತನದ ಸೇವೆಯ ಮೂಲಕ ಪ್ರಖ್ಯಾತರಾಗಿರುವ ಹೊರನಾಡ ಕನ್ನಡಿಗ ಶ್ರೀ ದಯಾನಂದ ನಾಯಕ್ ಅವರು. ೧೯೬೭ರಲ್ಲಿ ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ಜನನ, ಬಿ.ಕಾಂ. ಪದವಿ ಪಡೆದ ಬಳಿಕ ೧೯೯೪ರ ಮಹಾರಾಷ್ಟ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ. ಪೊಲೀಸ್ ಇಲಾಖಾ ದೈಹಿಕ ಪರೀಕ್ಷೆಯಲ್ಲಿ ೨೦೦ಕ್ಕೆ ೧೯೮ ಅಂಕಗಳ ಸಾರ್ವಕಾಲಿಕ ದಾಖಲೆ.
೧೯೯೬ರಲ್ಲಿ ಮುಂಬಯಿನ ಜುಹು ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕಾರ. ೧೯೯೬ರಿಂದ ೨೦೦೪ರ ವರೆಗೆ ಕುಖ್ಯಾತ ರೌಡಿಗಳನ್ನು ಬಲಿಹಾಕುವುದರ ಜೊತೆಗೆ ಜುಹು ಬೀಚ್ನಲ್ಲಿ ಇಬ್ಬರು ದರೋಡೆಕೋರರನ್ನು ಎನ್ಕೌಂಟರ್ ಮೂಲಕ ಹತ್ಯೆಗೈದು ತನ್ಮೂಲಕ ನೂರಾರು ಸಾರ್ವಜನಿಕರನ್ನು ರಕ್ಷಿಸಿದ್ದಾರೆ. ವಿವಿಧ ಎನ್ಕೌಂಟರ್ಗಳಲ್ಲಿ ದುಷ್ಕರ್ಮಿಗಳ ಬಲಿತೆಗೆದುಕೊಳ್ಳುವ ಮೂಲಕ ಸಮಾಜದ ವಿವಿಧ ವ್ಯಕ್ತಿಗಳನ್ನು ಹಾಗೂ ಶಾಂತಿ ಭದ್ರತೆಗಳನ್ನು ಸಂರಕ್ಷಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ, ಕರ್ನಾಟಕ ಸರ್ಕಾರದಿಂದ ಮತ್ತು ಪೊಲೀಸ್ ಇಲಾಖೆಗಳಿಂದ ನಿರಂತರ ಪ್ರಶಂಸೆ ಮತ್ತು ಅಭಿನಂದನೆಯ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪದಕ ಪಡೆದವರು. ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ವಲಯದಲ್ಲೂ ತಮ್ಮ ಛಾಪನ್ನು ಒತ್ತಿರುವ ಹೊರನಾಡ ಕನ್ನಡಿಗ ಶ್ರೀ ದಯಾನಂದ ನಾಯಕ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀಮತಿ ಕಲ್ಪನಾ ಶರ್ಮ

ಮುಂಬೈ ಆವೃತ್ತಿಯ ‘ದಿ ಹಿಂದೂ’ ಆಂಗ್ಲ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಮೂಲದ ಪತ್ರಿಕೋದ್ಯಮಿ ಶ್ರೀಮತಿ ಕಲ್ಪನಾ ಶರ್ಮ ಅವರು.
೧೯೪೭ರಲ್ಲಿ ಜನಿಸಿದ ಶ್ರೀಮತಿ ಕಲ್ಪನಾ ಶರ್ಮ ೩೩ ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಸಂಪಾದಕೀಯ, ವಿಶೇಷ ವರದಿಗಳು ಹಾಗೂ ಮಹಿಳಾ ಕೇಂದ್ರೀಕೃತ ಭಾನುವಾರದ ‘ದಿ ಅದರ್ ಹಾಫ್’ ಅಂಕಣಕಾರರಾಗಿ ಸೇವೆ ಸಲ್ಲಿಸುತ್ತಿರುವವರು ಶ್ರೀಮತಿ ಕಲ್ಪನಾ ಶರ್ಮ.
ಮುಂಬೈ ಆವೃತ್ತಿಯ ದಿ ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಯಲ್ಲಿ ಹಿರಿಯ ಸಹಾಯಕ ಸಂಪಾದಕಿಯಾಗಿ, ದೆಹಲಿ ಹಾಗೂ ಮುಂಬೈ ಆವೃತ್ತಿಗಳಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್ ದಿನಪತ್ರಿಕೆಯ ಸಹಾಯಕ ಸಂಪಾದಕರಾಗಿ ಹಾಗೂ ಹಿಮ್ಮತ್ ವೀಕ್ಲಿ ಆಂಗ್ಲ ವಾರಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಮೂಲಕ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದಿಂದ ವೃತ್ತಿಪತ್ರಿಕೋದ್ಯಮದ ಫೆಲೋಶಿಪ್ ಪಡೆದಿರುವ ಶ್ರೀಮತಿ ಕಲ್ಪನಾ ಶರ್ಮ ಅವರು ಹಲವಾರು ಸಂಘ ಸಂಸ್ಥೆಗಳ ಸಲಹಾ ಸದಸ್ಯರಾಗಿ, ಪ್ರವರ್ತಕಿಯಾಗಿ, ಕೌನ್ಸಿಲರಾಗಿ, ಕಾರ್ಯನಿರ್ವಾಹಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಉತ್ತಮ ವರದಿಗಳನ್ನು ನೀಡಿ ಸಮಾಜದ ಅನ್ಯಾಯಗಳನ್ನು ಬಯಲಿಗೆಳೆಯುತ್ತಿರುವ ಪತ್ರಿಕೋದ್ಯಮಿ ಶ್ರೀಮತಿ ಕಲ್ಪನಾ ಶರ್ಮ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಶ್ರೀ ಬಿ.ಜೆ. ಅರುಣ್

ಅಮೆರಿಕದ ಪ್ರತಿಷ್ಠಿತ ಸಿಲಿಕಾನ್ ವ್ಯಾಲಿಯಲ್ಲಿ ಕಳೆದ ಒಂದೂವರೆ ದಶಕದಿಂದ ನೆಲೆಸಿ ಅಮೆರಿಕದ ಕಂಪ್ಯೂಟರ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಥಂಡರ್ ಅನ್ನುವ ಅತಿ ಹೆಚ್ಚು ವೇಗದ ಸೂಪರ್ ಕಂಪ್ಯೂಟರನ್ನು ಕಂಡುಹಿಡಿದ ಅನಿವಾಸಿ ಭಾರತೀಯ ಶ್ರೀ ಬಿ.ಜೆ. ಅರುಣ್ ಅವರು.
ಬೆಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿ ಪಡೆದಿರುವ ಶ್ರೀಯುತರು ತಾಂತ್ರಿಕ ಕಂಪ್ಯೂಟರ್ ಉದ್ದಿಮೆಯಲ್ಲಿ ೨೦ ವರ್ಷಗಳ ಅನುಭವ ಹೊಂದಿದ್ದಾರೆ. ಕ್ಯಾಲಿಫೋರ್ನಿಯಾ ಡಿಜಿಟಲ್ನಲ್ಲಿ ಸಹಸ್ಥಾಪಕರಾಗಿ ಕಂಪನಿಯನ್ನು ಲಾಭದಾಯಕವಾಗಿ ಮುನ್ನಡೆಸಿದವರು. ಬೈನ್ ಚಾರ್ಟರ್ ಸದಸ್ಯರಾಗಿರುವ ಶ್ರೀ ಬಿ.ಜೆ.ಅರುಣ್ ಪ್ರಸಕ್ತ ಇಚಿಡೆಲ್ ಕಾರ್ಪೊರೇಷನ್ಸ್ನ ಪ್ರೀಮಿಯರ್ ಪ್ರೊವೈಡರ್ ನ ಸಲಹಾ ಮಂಡಳಿಯ ಸದಸ್ಯರು.
ಶ್ರೀ ಬಿ.ಜೆ. ಅರುಣ್ ಅವರ ಸಾಧನೆಯನ್ನು ಅಮೆರಿಕದ ಪತ್ರಿಕೆಗಳು ಮುಕ್ತಕಂಠದಿಂದ ಪ್ರಶಂಸಿಸಿವೆ. ಅನಿವಾಸಿ ಭಾರತೀಯನೊಬ್ಬನು ಎರಡನೆಯ ಅತಿ ವೇಗದ ಕಂಪ್ಯೂಟರನ್ನು ಅಭಿವೃದ್ಧಿಪಡಿಸಿರುವುದು ವಿಶ್ವದ ತಾಂತ್ರಿಕ ಕ್ಷೇತ್ರದಲ್ಲಿ ಅದ್ಭುತ ಸಾಧನೆಯಾಗಿದ್ದು, ಇದು ಕರ್ನಾಟಕದ ಹೆಮ್ಮೆಯಾಗಿದೆ. ಕರ್ನಾಟಕಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟವರು ಶ್ರೀ ಬಿ.ಜೆ. ಅರುಣ್ ಅವರು.

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚೇತನ್ ರಾಮರಾವ್

ಕಳೆದ ನಲವತ್ತು ವರ್ಷಗಳಿಂದ ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ನಟರಾಗಿ ಕಿರುಚಿತ್ರ ನಿರ್ದೆಶಕರಾಗಿ ಸೇವೆ ಸಲ್ಲಿಸುತ್ತಿರುವವರು ಶ್ರೀ ಚೇತನ್ ರಾಮರಾವ್.
ಹಲವಾರು ಚಲನಚಿತ್ರಗಳಲ್ಲಿ ಪೋಷಕ ನಟರಾಗಿ ಚಿತ್ರರಸಿಕರ ಮೆಚ್ಚುಗೆಗೆ ಪಾತ್ರರಾದ ಶ್ರೀ ಚೇತನ್ ರಾಮರಾವ್ ಅವರು ಮೈಸೂರು ವಿಶ್ವವಿದ್ಯಾಲಯದ ಚಲನಚಿತ್ರ ಅಧ್ಯಯನ ವಿಭಾಗದಲ್ಲಿ ಗೌರವ ಉಪನ್ಯಾಸಕ ಸೇವೆ ಸಲ್ಲಿಸುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಚೇತನ್ ರಾಮರಾವ್ ಖ್ಯಾತ ನಿರ್ದೇಶಕರಾದ ಜಿ.ವಿ. ಐಯ್ಯರ್ರವರ ಸಂಸ್ಕೃತ ಭಗವದ್ಗೀತೆ ಚಿತ್ರದಲ್ಲಿ ಧರ್ಮರಾಯನ ಪಾತ್ರವನ್ನು ಅಭಿನಯಿಸಿದ್ದು ಈ ಚಿತ್ರ ಕೇಂದ್ರದ ಸ್ವರ್ಣಕಮಲ ಪ್ರಶಸ್ತಿ ಪಡೆದಿದೆ. ವಾರ್ತಾ ಇಲಾಖೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಎಂಬ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದಾರೆ. ೨೦೦೨ ೦೩ರ ರಾಜ್ಯ ಚಲನಚಿತ್ರ ಸಲಹಾ ಸಮಿತಿ ಸದಸ್ಯರು ಹಾಗೂ ಹಲವಾರು ವರ್ಷಗಳಿಂದ ದಸರಾ ಚಲನಚಿತ್ರ ಸಮಿತಿ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಚೇತನ್ ರಾಮರಾವ್ ಅವರ ಅಭಿನಯವನ್ನು ಮೆಚ್ಚಿ ಹಲವಾರು ಸಂಘಗಳು ನಟನಾಚತುರ, ಕಲಾದ್ರೋಣ, ಕಲಾಭೀಷ್ಮ, ಕಲಾರತ್ನ ಮುಂತಾದ ಬಿರುದುಗಳನ್ನು ನೀಡಿ ಪುರಸ್ಕರಿಸಿದೆ.
ರಂಗಭೂಮಿಯ ಚಟುವಟಿಕೆಯಿಂದ ಬೆಳ್ಳಿತೆರೆಗೆ ಬಂದು ಸಹಜ ಅಭಿನಯಕ್ಕೆ ಹೆಸರಾದ ಪಂಚಭಾಷಾ ನಟರು ಶ್ರೀ ಚೇತನ್ ರಾಮರಾವ್ ಅವರು.
ರಾಜ್ಯ ಪ್ರಶಸ್ತಿ – ೨೦೦೪ : ಚಲನ ಚಿತ್ರ

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ವಿ.ಕೆ. ಮೂರ್ತಿ

ರಾಷ್ಟ್ರಮಟ್ಟದ ಖ್ಯಾತಿಯ ಚಲನಚಿತ್ರ ಛಾಯಾಗ್ರಾಹಕ ಶ್ರೀ ವಿ.ಕೆ. ಮೂರ್ತಿ ಅವರು ಮೈಸೂರಿನಲ್ಲಿ ೧೯೨೨ರಲ್ಲಿ ಜನಿಸಿದರು. ಬೆಂಗಳೂರಿನ ಎಸ್.ಜೆ. ಪಾಲಿಟೆಕ್ನಿಕ್ ನಲ್ಲಿ ೧೯೪೬ರಲ್ಲಿ ಸಿನಿಮಾಟೋಗ್ರಫಿಯ ಡಿಪ್ಲೊಮೊ ಪಡೆದ ಮೂರ್ತಿಯವರು ಹಿಂದಿ ಚಿತ್ರರಂಗದಲ್ಲೇ ಖಾಯಂ ಆಗಿ ನೆಲೆವೂರಿ ಪ್ರತಿಷ್ಠಿತ ಸಂಸ್ಥೆ ಹಾಗೂ ನಿರ್ದೇಶಕರುಗಳ ಬಳಿ ತಮ್ಮ ಛಾಯಾಗ್ರಾಹಕ ಕೌಶಲ್ಯವನ್ನು ಮೆರೆದವರು.
ಪ್ರಾರಂಭದಲ್ಲಿ ದ್ರೋಣಾಚಾರ್ಯ ಹಾಗೂ ಫಾಲಿಮಿಸ್ತ್ರಿ ಅವರ ಬಳಿ ಸಹಾಯಕರಾಗಿ ದುಡಿದ ಮೂರ್ತಿಯವರು ನಂತರ ೧೯೫೧ರಲ್ಲಿ ಪ್ರಖ್ಯಾತ ನಿರ್ದೇಶಕ ಗುರುದತ್ತರ ಪ್ಯಾಸ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್ ನಂತಹ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಪ್ರಮೋದ್ ಚಕ್ರವರ್ತಿ, ಕಮಲ್ ಅದ್ರೋಹಿ, ರಾಜ್ ಕೋಟ್ಲಿ, ಶ್ಯಾಂ ಬೆನಗಲ್ ಹಾಗೂ ಗೋವಿಂದ ನಿಹಲಾನಿಯಂತಹ ಸಂವೇದನಾಶೀಲ ನಿರ್ದೇಶಕರಿಗೆ ತಮ್ಮ ಸೇವೆಯನ್ನು ಒದಗಿಸಿದರು. ಮೂರ್ತಿಯವರು ಚಿತ್ರೀಕರಿಸಿದ ಇತರ ಪ್ರಮುಖ ಚಿತ್ರಗಳು ಲವ್ ಇನ್ ಟೋಕಿಯೋ, ನಯಾ ಜಮಾನ, ಜುಗ್ಗು, ರಜಿಯಾ ಸುಲ್ತಾನ್, ಪಾಕೀಜಾದ ಕೆಲವು ಭಾಗಗಳು, ತಮಸ್ ಹಾಗೂ ಡಿಸ್ಕವರಿ ಆಫ್ ಇಂಡಿಯಾ ಧಾರಾವಾಹಿ ಮುಂತಾದುವು. ‘ಹೂವು ಹಣ್ಣು’ ಇವರು ಚಿತ್ರೀಕರಿಸಿದ ಏಕೈಕ ಕನ್ನಡ ಚಿತ್ರ.
ಪ್ರಪ್ರಥಮ ಸಿನಿಮಾ ಸ್ಕೋಪ್ ಚಿತ್ರದ ಛಾಯಾಗ್ರಾಹಕರಾದ ಮೂರ್ತಿಯವರಿಗೆ ಫಿಲಂಫೇರ್ ಪ್ರಶಸ್ತಿ, ಚಿತ್ರ ವಿಮರ್ಶಕರ ಪ್ರಶಸ್ತಿ ಹಾಗೂ ಜೀವಮಾನ ಸಾಧನೆಯ ಪುರಸ್ಕಾರಗಳು ಸಂದಿವೆ.ವಯೊಲಿನ್ ವಾದಕರಾದ ಮೂರ್ತಿಯವರು ಕನ್ನಡ ನಾಟಕಗಳನ್ನು ಕೂಡ ಬರೆದು ನಿರ್ದೇಶಿಸಿದ್ದಾರೆ. ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆದಿರುವ ಶ್ರೀಯುತ ವಿ.ಕೆ. ಮೂರ್ತಿ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಚರಿತ್ರೆಯಲ್ಲಿ ತಮ್ಮ ಹೆಜ್ಜೆ ಜಾಡು ಮೂಡಿಸಿರುವವರು. ಐದು ದಶಕಗಳ ಮೂರ್ತಿಯವರ ಸಾಧನೆ ಅನನ್ಯ ಹಾಗೂ ಅಪೂರ್ವವಾದುದು.

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಕೆ.ಎಸ್.ಎಲ್. ಸ್ವಾಮಿ (ರವಿ)

ಕನ್ನಡ ಚಿತ್ರರಂಗದ ಕಳೆದ ಅರ್ಧ ಶತಮಾನದ ಜೀವಂತ ಪ್ರತಿನಿಧಿ ನಿರ್ದೇಶಕ, ನಿರ್ಮಾಪಕ ಕೆ.ಎಸ್.ಎಲ್. ಸ್ವಾಮಿ (ರವಿ) ಅವರು.
೧೯೬೬ರಲ್ಲಿ ತೂಗುದೀಪ ಚಿತ್ರದ ಮೂಲಕ ಚಿತ್ರ ನಿರ್ದೇಶನಕ್ಕೆ ಕಾಲಿರಿಸಿದ ರವಿ ಅವರು ಬಹುದೊಡ್ಡ ನಿರ್ದೇಶಕರುಗಳೆನಿಸಿದ ಸಿದ್ಧಲಿಂಗಯ್ಯ, ತಿಪಟೂರು ರಘು, ದೊರೈ, ದಾಸರಿ ನಾರಾಯಣರಾವ್, ವಿ. ಸೋಮಶೇಖರ್, ಎಸ್.ವಿ. ರಾಜೇಂದ್ರಸಿಂಗ್ ಬಾಬು, ಕೋಟಾರೆಡ್ಡಿ, ಶ್ರೀದತ್ತರಾಜ್, ಮಣಿಮುರುಗನ್ ಮುಂತಾದ ಎಲ್ಲರೊಂದಿಗೆ ದುಡಿದವರು. ಅಲ್ಲದೆ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಕಡೆಯ ಚಿತ್ರ ‘ಮಸಣದ ಹೂವು’ ಪೂರ್ಣಗೊಳಿಸಿ ಬಿಡುಗಡೆ ಮಾಡಿದ ಕೀರ್ತಿಯೂ ಅವರದಾಗಿದೆ.
ಈವರೆಗೆ ಸುಮಾರು ೪೦ ಚಿತ್ರಗಳನ್ನು ನಿರ್ದೇಶಿಸಿರುವ ರವಿಯವರ ಚಿತ್ರಜೀವನದಲ್ಲಿ ಮಸಣದ ಹೂವು, ಮಲಯ ಮಾರುತ, ಮಿಥಿಲೆಯ ಸೀತೆಯರು, ಮಕ್ಕಳ ಭಾಗ್ಯ, ತುಳಸಿ, ಭಾಗ್ಯಜ್ಯೋತಿ ಮುಂತಾದುವು ಮರೆಯಲಾರದ ದಾಖಲೆಗಳನ್ನು ನಿರ್ಮಿಸಿದವು.
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ,(೧೯೯೪-೯೫) ಪುರಸ್ಕೃತರಾದ ರವಿ ಅವರ ಮಲಯ ಮಾರುತ ಸಂಗೀತಕ್ಕೆ ಸುರಸಿಂಗಾರ್ ಪ್ರಶಸ್ತಿಯೂ, ಜಂಬೂ ಸವಾರಿ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿಯೂ ಸಂದಿವೆ. ಚಲನಚಿತ್ರ ರಂಗದ ಅನೇಕ ಸಂಘಗಳಲ್ಲಿಯೂ ಸಕ್ರಿಯವಾಗಿ ಕೆಲಸ ಮಾಡಿರುವ ರವಿ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಎಸ್. ರಾಮಚಂದ್ರ

ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳಿಗೆ ಪಾತ್ರವಾದ ಬಹುತೇಕ ಕನ್ನಡ ಚಿತ್ರಗಳಿಗೆಲ್ಲ ಛಾಯಾಗ್ರಾಹಕರಾಗಿ ಎಸ್.ರಾಮಚಂದ್ರ ದುಡಿದಿದ್ದಾರೆ ಎಂಬ ಮಾತು ಅವರ ಕ್ರಿಯಾಶೀಲ ಛಾಯಾಗ್ರಹಣಕ್ಕೆ ಅರ್ಹವಾಗಿಯೆ ಸಂದ ಮೆಚ್ಚುನುಡಿ.
ಬಿ.ಎಸ್.ಸಿ. ಪದವೀಧರರಾಗಿ ಸಿನಿಮಾ ಡಿಪ್ಲೊಮಾ ಪಡೆದಿರುವ ಶ್ರೀಯುತ ರಾಮಚಂದ್ರ ಅವರು ಋಷ್ಯಶೃಂಗ, ಸಂಕಲ್ಪ, ಕಂಕಣ, ಮನೆ, ಮಾಲ್ಗುಡಿ ಡೇಸ್, ಈ ಎಲ್ಲ ಚಿತ್ರಗಳ ಛಾಯಾಗ್ರಹಣಕ್ಕಾಗಿ ಪ್ರಶಸ್ತಿ ಪಡೆದವರು. ಇವರ ಛಾಯಾಗ್ರಹಣದ ಚೋಮನದುಡಿ, ಘಟಶ್ರಾದ್ಧ, ಗ್ರಹಣ, ಪಲ್ಲವಿ, ದಂಗೆ ಎದ್ದ ಮಕ್ಕಳು, ಆಸ್ಫೋಟ, ಶಿಶುನಾಳ ಶರೀಫ, ಅಲೆಮಾರಿ, ಪ್ರವಾಹ, ಕಾನೂರು ಹೆಗ್ಗಡತಿ, ಒಂದು ಕೊಲೆಯ ಸುತ್ತ, ಋಷ್ಯಶೃಂಗ ಈ ಎಲ್ಲ ಚಿತ್ರಗಳು ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿವೆ ಎಂಬುದು ಹೆಮ್ಮೆಯ ವಿಷಯ.
ಈವರೆಗೂ ಎಂಬತ್ತಕ್ಕೂ ಹೆಚ್ಚು ಚಲನಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದಿರುವ ಶ್ರೀ ಎಸ್. ರಾಮಚಂದ್ರ ಅವರು ಕನ್ನಡದ ಕಲಾತ್ಮಕ ಚಿತ್ರಗಳಿಗೆ ತಮ್ಮ ಅತ್ಯುತ್ತಮ ಛಾಯಾಗ್ರಹಣದಿಂದಲೆ ವಿಶಿಷ್ಟವಾದ ಹೊಳಪು ನೀಡಿದ ಅಪರೂಪದ ತಂತ್ರಜ್ಞ

Categories
ಚಲನಚಿತ್ರ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಹರಿಣಿ

ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲೇ ತಾರೆಯಾಗಿ ದಾಖಲೆಗಳನ್ನು ನಿರ್ಮಿಸಿದ ಸ್ಪುರದ್ರೂಪಿ ಅಭಿನೇತ್ರಿ ಶ್ರೀಮತಿ ಹರಿಣಿ.
೧೯೪೫ರಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರೀಮತಿ ಹರಿಣಿಯವರು ಪ್ರಪ್ರಥಮವಾಗಿ ಜಗನ್ನೋಹಿನಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಕನ್ನಡದ ಜನಮನದಲ್ಲಿ ನೆಲೆನಿಂತವರು. ಕನ್ಯಾದಾನ, ಸೌಭಾಗ್ಯಲಕ್ಷ್ಮಿ, ನಂದಾದೀಪ, ನಾಂದಿ, ಸತಿ ಸುಕನ್ಯ, ಮಂಗಳ ಮುಹೂರ್ತ, ಮುಂತಾದವು ಕನ್ನಡ ಚಿತ್ರರಂಗದಲ್ಲಿ ದಾಖಲೆ ಸ್ಥಾಪಿಸಿದ ಚಿತ್ರಗಳು. ನಂದಾದೀಪ ಮತ್ತು ಮಂಗಳ ಮುಹೂರ್ತಕ್ಕೆ ರಾಷ್ಟ್ರಪ್ರಶಸ್ತಿಯೂ ಲಭಿಸಿತು. ಅವರ ಅಭಿನಯದ ನಾಂದಿ ಚಿತ್ರವು ವಿದೇಶದಲ್ಲಿ ತೆರೆಕಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಶ್ರೀಮತಿ ಹರಿಣಿ ಅವರ ಸಹೋದರ ವಾದಿರಾಜ್ ಕೂಡ ನಟ, ನಿರ್ಮಾಪಕ, ನಿರ್ದೇಶಕರಾಗಿದ್ದು ಅವರ ನಮ್ಮ ಮಕ್ಕಳು ಚಿತ್ರದಲ್ಲಿನ ಅಭಿನಯಕ್ಕೆ ಫಿಲಂಫೇರ್ ಪ್ರಶಸ್ತಿಯೂ ಶ್ರೀಮತಿ ಹರಿಣಿ ಅವರಿಗೆ ಸಿಕ್ಕಿತು.
ಡಾ. ವಿಜ್ಞಾನಿ ಬಿ.ಎಸ್. ರಾವ್ ಅವರನ್ನು ಮದುವೆಯಾಗಿ ಮಗನೊಂದಿಗೆ ಸುಖೀ ಕುಟುಂಬ ಹೊಂದಿರುವ ಹರಿಣಿ ಅವರ ಅಭಿನಯದ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಹಚ್ಚಹಸಿರಾಗಿವೆ.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಬಿ.ಸಿ. ರಮೇಶ್

ಕಿರಿಯ ವಯಸ್ಸಿನಲ್ಲೇ ಕಬಡಿ ಕ್ರೀಡೆಯಲ್ಲಿ ಹಿರಿಯ ಸಾಧನೆ ಮಾಡಿ ನಾಡಿನ ಕ್ರೀಡಾರಂಗದ ಹಿರಿಮೆಯನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಾಡಿನ ಹೆಮ್ಮೆಯ ಪಟು ಶ್ರೀ ಬಿ.ಸಿ. ರಮೇಶ್,
೧೯೭೧ರಲ್ಲಿ ಬೆಂಗಳೂರು ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದಲ್ಲಿ ಹುಟ್ಟಿದ – ಶ್ರೀ ರಮೇಶ್ ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಅತ್ಯಾಸಕ್ತಿಯನ್ನು ಬೆಳೆಸಿಕೊಂಡು ಒಂದೊಂದೇ ಮಟ್ಟಿಲು ಏರುತ್ತಾ ಅಂತರರಾಷ್ಟ್ರೀಯ ಕ್ರೀಡಾ ಪಟು ಎನಿಸಿದರು. ರಾಷ್ಟ್ರೀಯ ತಂಡಕ್ಕೆ ಮೂರು ಬಾರಿ ನಾಯಕರಾಗಿ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರಲ್ಲದೆ ಎರಡು ಬಾರಿ ಏಷ್ಯನ್ ಕ್ರೀಡೆಯಲ್ಲಿ ಚಿನ್ನದ ಪದಕ, ಹಾಗೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಬಾರಿ ಚಿನ್ನದ ಪದಕ, ಹಾಗೂ ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಪಡೆದ ಹೆಮ್ಮೆ ಇವರದು.
ಏಕಲವ್ಯ ಪ್ರಶಸ್ತಿ (೧೯೯೯), ಕೆಂಪೇಗೌಡ ಪ್ರಶಸ್ತಿ (೨೦೦೦), ಅರ್ಜುನ ಪ್ರಶಸ್ತಿ (೨೦೦೧), ಒಲಂಪಿಕ್ ಅಸೋಸಿಯೇಷನ್ ಪ್ರಶಸ್ತಿ (೨೦೦೧), ಹೀರೋ ಇಂಡಿಯನ್ ಪ್ರಶಸ್ತಿ (೨೦೦೨), ಮುಂತಾದ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳು ಇವರ ಪ್ರತಿಭೆಗೆ ಸಂದ ಸಮ್ಮಾನಗಳು.
ನಿರಂತರ ಪರಿಶ್ರಮ ಮತ್ತು ಸ್ವಯಂಸ್ಪೂರ್ತಿಯಿಂದ ಏನನ್ನಾದರೂ ಸಾಧಿಸಬಹುದೆನ್ನುವ ಯುವ ಜನತೆಗೊಂದು ಮಾದರಿ ಶ್ರೀ ಬಿ.ಸಿ. ರಮೇಶ್ ಅವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಕೆ.ವೈ. ವೆಂಕಟೇಶ್

ಅತ್ಯಂತ ಕಿರಿಯ ವಯಸ್ಸಿಗೇ ಶ್ರೇಷ್ಠಮಟ್ಟದ ಕ್ರೀಡಾಪಟುವಾಗಿ ದೇಶ ವಿದೇಶಗಳಲ್ಲಿ ಕರ್ನಾಟಕದ ಹೆಮ್ಮೆಯ ಪತಾಕೆ ಹಾರಿಸಿದ ಶ್ರೀ ಕೆ.ವೈ. ವೆಂಕಟೇಶ್ ಅವರು ಅಂಗವಿಕಲತೆಯನ್ನೇ ಯಶಸ್ಸಿನ ಸೂತ್ರವಾಗಿಸಿಕೊಂಡವರು.
೧೯೬೮ರಲ್ಲಿ ಜನಿಸಿದ ಶ್ರೀ ವೆಂಕಟೇಶ್ ಅವರು ಓದಿದ್ದು ಬಿ.ಎಸ್ಸಿ., ಆದರೆ ಅವರ ಆಸಕ್ತಿ ಕ್ರೀಡಾ ಬಯಲಿನತ್ತಲೇ. ಇದುವರೆವಿಗೂ ಅವರು ಮಲೇಷಿಯಾ, ಜರ್ಮನಿ, ಬೆಲ್ಡಿಯಂ, ಸ್ವೀಡನ್, ಇಸ್ರೇಲ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಶಾಟ್ ಪುಟ್, ಜಾವೆಲಿನ್ ಥೋ, ಡಿಸ್ಕಸ್ ಥ್ ಹಾಗೂ ಬ್ಯಾಡ್ಮಿಂಟನ್ಗಳಂತಹ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಐದು ಚಿನ್ನದ ಪದಕಗಳು, ನಾಲ್ಕು ಬೆಳ್ಳಿ ಪದಕಗಳು ಹಾಗೂ ಒಂದು ಕಂಚಿನ ಪದಕವನ್ನು ಗಳಿಸುವುದರ ಮೂಲಕ ರಾಜ್ಯ ಕ್ರೀಡಾ ನಕ್ಷೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಬೆಂಗಳೂರು, ಚೆನ್ನೈ, ನಾಗಪುರ, ಮುಂಬೈ ಹಾಗೂ ಮೈಸೂರು ನಗರಗಳ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಶ್ರೀ ವೆಂಕಟೇಶ್ ಅವರು ಹದಿನೆಂಟು ಚಿನ್ನದ ಪದಕ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈಜಿನ ಸ್ಪರ್ಧೆ, ಕ್ರಿಕೆಟ್ ಹಾಗೂ ವೈಟ್ ಲಿಫ್ಟಿಂಗ್ ನಲ್ಲೂ ಭಾಗವಹಿಸಿರುವುದು ಇವರ ಹೆಮ್ಮೆ. ಅಸಹಾಯಕ ಸಮುದಾಯಕ್ಕೊಂದು ಆತ್ಮವಿಶ್ವಾಸದ ಮಾದರಿ ಶ್ರೀಯುತ ಕೆ.ವೈ. ವೆಂಕಟೇಶ್ಅ ವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಆ ಮತದ ವರ ಶ್ರೀ ಪೈಲ್ವಾನ್ ಮಗ ಉರುಫ್ ರುದ್ರ

ಮೈಸೂರಿನಲ್ಲಿ ಕುಸ್ತಿ ಕಲೆಯನ್ನು ಜಾತ್ರೆಯಂತೆ ಬೆಳೆಸಿದವರು ಪೈಲ್ವಾನ್ ರುದ್ರ ಉರುಫ್ ಮೂಗ ಅವರು.
ಮೈಸೂರಿನ ಹೆಸರಾಂತ ಕುಸ್ತಿ ಪಟು ಶ್ರೀ ಪುಟ್ಟನಂಜಣ್ಣ ಮತ್ತು ಶ್ರೀಮತಿ ನಾಗಮ್ಮ ಅವರ ಮಗ ಶ್ರೀ ರುದ್ರಪ್ಪ, ಪೈಲ್ವಾನ್ ತಂದೆಯ ಮಾರ್ಗದರ್ಶನದಲ್ಲಿ ಕುಸ್ತಿ ಕಲೆಯ ಆರಂಭದ ಕಲಿಕೆ. ಮಾಯಣ್ಣನವರ ಗರಡಿಯಲ್ಲಿ ಕುಸ್ತಿ ಕಲೆಯ ಅಭ್ಯಾಸ.
ಸುಮಾರು ೪ ದಶಕಗಳ ಕಾಲ ತಮ್ಮ ಜೀವನವನ್ನೇ ಕುಸ್ತಿಗಾಗಿ ಮೀಸಲಾಗಿಟ್ಟು, ಮೈಸೂರಿಗೆ ಹೊರಜಿಲ್ಲೆಗಳಿಂದ ಬಂದಂತಹ ಪೈಲ್ವಾನರನ್ನು ಎದುರಿಸಿದವರು. ಪ್ರಸಿದ್ಧ ಕುಸ್ತಿ ಪಟುಗಳು ಮತ್ತು ಪೈಲ್ವಾನ್ ಅಗಡಿ ಅಬ್ದುಲ, ಸಾಂಬಾಜಿ ಪವಾರ್, ಅಸಂಗಿ ದಾವತ್, ಚುವ್ವಲತೀಫ್, ಕುಸಗಲ್ ಮುದಕಪ್ಪ, ಸಾಂಗ್ಲಿ ಸಹದೇವ್ ಮುಂತಾದವರೊಂದಿಗೆ ಸೆಣಸಿದ್ದಾರೆ. ೧೯೭೨ರಲ್ಲಿ ಕೊಲ್ಲಾಪುರದ ಪೈಲ್ವಾನ್ ರಸೂಲ್ ಹನೀಫ್ ಅವರ ಮೇಲೆ ೩ ಗಂಟೆ ೪೫ ನಿಮಿಷ ಸೆಣಸಿ ಕುಸ್ತಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ದಾಖಲೆ ಸ್ಥಾಪಿಸಿದ್ದಾರೆ. ಅನೇಕ ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.
ಮೈಸೂರಿನಲ್ಲಿ ಮನೆಮಾತಾಗಿ ಜನಪ್ರಿಯರಾಗಿರುವ ಇಂದಿಗೂ ಮೂಗಣ್ಣನ ಗರಡಿಯ ಉಸ್ತಾದರಾಗಿ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವವರು ಶ್ರೀ ಪೈಲ್ವಾನ್ ರುದ್ರಮೂಗ ಅವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರತನ್ ರಾಚಯ್ಯ ಮಠಪತಿ

ಕುಸ್ತಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ರತನ್ ರಾಚಯ್ಯ ಮಠಪತಿ ಕರ್ನಾಟಕ ಸರ್ಕಾರದ ‘ಏಕಲವ್ಯ ಪ್ರಶಸ್ತಿ’ ಪುರಸ್ಕೃತರು.
ಕರ್ನಾಟಕದ ಪುರಾತನ ಕ್ರೀಡಾಕಲೆಯಾಗಿರುವ ಕುಸ್ತಿಯಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಬೆಳೆಸಿಕೊಂಡ ರತನ್ ಸಿಕ್ಕ ಅವಕಾಶಗಳನ್ನೆಲ್ಲ ಸದುಪಯೋಗಪಡಿಸಿಕೊಂಡು ಛಲ ಬಿಡದ ತ್ರಿವಿಕ್ರಮನಂತೆ ಬೆಳೆಯುತ್ತ, ಪ್ರಶಸ್ತಿಗಳನ್ನು ಬಾಚುತ್ತ ಮುನ್ನಡೆದರು.
ಫಿಲಿಫೈನ್ಸ್ನಲ್ಲಿ ನಡೆದ ೭ನೇ ಏಷಿಯನ್ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿದ್ದ ರತನ್ ರಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಅಮೋಘವಾಗಿ ಸೆಣಸಾಡಿ ಬೆಳ್ಳಿಪದಕ ವಿಜೇತರಾದರು. ಈಜಿಪ್ಟ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ರಾಷ್ಟ್ರೀಯ ಕುಸ್ತಿ ಸ್ಪರ್ಧೆಗಳಲ್ಲಿ ಪದಕಗಳ ಕೊಳ್ಳೆ ಹೊಡೆದ ರತನ್ ಆರು ಬಂಗಾರದ ಪದಕಗಳನ್ನೂ, ಒಂದು ಬೆಳ್ಳಿ ಪದಕವನ್ನೂ ಗೆದ್ದು ರಾಜ್ಯದ ಗೌರವವನ್ನು ಎತ್ತಿ ಹಿಡಿದರು. ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗಳಲ್ಲಿ ಕರ್ನಾಟಕ ರತ್ನ, ಕರ್ನಾಟಕ ಕೇಸರಿ, ಕರ್ನಾಟಕ ಕಂಠೀರವ, ಕರ್ನಾಟಕ ಕುಮಾರ್, ದಸರಾ ಕೇಸರಿ, ಅಖಿಲ ಭಾರತೀಯ ಮಹಾಪೌರ ಕೇಸರಿ, ಕೆಂಪೇಗೌಡ ಪ್ರಶಸ್ತಿಗಳಿಂದ ಭೂಷಿತರಾದವರು.
ಜಮಖಂಡಿಯಲ್ಲಿ ಹುಟ್ಟಿ ರಾಜ್ಯಮಟ್ಟಕ್ಕೇರಿ ಅಂತರರಾಷ್ಟ್ರೀಯ ಮಟ್ಟಕ್ಕೂ ಹಾರಿದ ಅಪರೂಪದ ಕ್ರೀಡಾಪಟು ಶ್ರೀ ರತನ್ ರಾಚಯ್ಯ ಮಠಪತಿ ಅವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅರ್ಜುನ ಹಾಲಪ್ಪ

ಕ್ರೀಡಾ ಪದಕಗಳ ಖಜಾನೆಯನ್ನು ಸದಾ ಸೂರೆ ಮಾಡುವ ನಾಡಿನ ಹೆಮ್ಮೆಯ ಹಾಕಿ ಪಟು ಶ್ರೀ ಅರ್ಜುನ ಹಾಲಪ್ಪ, ಕನ್ನಡ ನಾಡಿನಲ್ಲಿ ಕ್ರೀಡೆ, ಸಾಹಸಗಳಿಗೆ ತವರೆನಿಸಿದ ಕೊಡಗು ಜಿಲ್ಲೆಯಲ್ಲಿ ೧೯೭೭ರಲ್ಲಿ ಜನಿಸಿದ ಶ್ರೀ ಅರ್ಜುನ ಹಾಲಪ್ಪ ಅವರು ಬಹುಬೇಗನೆ ರಾಷ್ಟ್ರಮಟ್ಟದಲ್ಲಿ ಮಿಂಚಿದ ಉತ್ಸಾಹಿ ಕ್ರೀಡಾಪಟು.
೧೯೯೯ರಲ್ಲಿ ಪೋಲೆಂಡ್ನಲ್ಲಿ ನಡೆದ ನ್ಯಾಷನಲ್ ಟೂರ್ನಮೆಂಟ್ನಲ್ಲಿ ಏಳು ಗೋಲು ಹೊಡೆದು ಭಾರತವನ್ನು ಫೈನಲ್ಗೆ ಒಯ್ದ ಹಾಲಪ್ಪ ೨೦೦೦ನೇ ಸಾಲಿನ ಜೂನಿಯರ್ ಏಷ್ಯಾ ಕಪ್ನಲ್ಲೂ ಗೋಲುಗಳ ಸುರಿಮಳೆಯೊಂದಿಗೆ ಭಾರತವನ್ನು ಫೈನಲ್ಗೆ ಕೊಂಡೊಯ್ದ ಅದ್ಭುತ ಕ್ರೀಡಾಪಟು.
ರಾಷ್ಟ್ರೀಯ ತಂಡದಲ್ಲಿ ಅತ್ಯಂತ ಪ್ರಮುಖ ಆಟಗಾರರಾಗಿರುವ ಶ್ರೀ ಅರ್ಜುನ ಹಾಲಪ್ಪ ಅವರು ಪದಕಗಳ ಮಾಲೆಯೊಂದಿಗೆ ಅರ್ಜುನ ಪ್ರಶಸ್ತಿಯನ್ನೂ ಕೊರಳಿಗೇರಿಸಿಕೊಂಡ ಶ್ರೀ ಅರ್ಜುನ ಹಾಲಪ್ಪ ಅವರಿಗೆ ೨೦೦೪ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯೆನಿಸುತ್ತದೆ.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಕವಿತಾ ಸನಿಲ್

ದೇಶ ವಿದೇಶಗಳಲ್ಲಿ ಕರಾಟೆಯ ಕರಾಮತ್ತನ್ನು ಪ್ರದರ್ಶಿಸಿ ನಾಡಿಗೆ ಕೀರ್ತಿ ತಂದಿರುವ ಕರಾಟೆಪಟು ಕುಮಾರಿ ಕವಿತಾ ಸನಿಲ್, ಮಂಗಳೂರಿನ ಮರಕಡದ ನಾರಾಯಣ ಪೂಜಾರಿ ಮತ್ತು ವೇದಾವತಿ ಸನಿಲ್ ದಂಪತಿಗಳ ಕಿರಿಯ ಪುತ್ರಿ. ೧೯೯೨ರಿಂದ ೨೦೦೪ರ ವರೆಗೆ ಮುಂಬಯಿ, ಬೆಂಗಳೂರು, ಹೈದರಾಬಾದ್, ಗುಜರಾತ್, ಭೂಪಾಲ್, ನಾಗಪುರ ಮುಂತಾದ ಕಡೆಗಳಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.
೧೯೯೯ರಲ್ಲಿ ಜಪಾನಿನ ಪ್ರತಿಸ್ಪರ್ಧಿಯನ್ನು ಎದುರಿಸಿ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಡುವುದರ ಜೊತೆಗೆ ‘ಅಂತರರಾಷ್ಟ್ರೀಯ ಕರಾಟೆಪಟು’ ಎಂಬ ಬಿರುದು ಪಡೆದರು. ೨೦೦೩ರಲ್ಲಿ ಆಸ್ಟ್ರೇಲಿಯಾದ ಪ್ರತಿಸ್ಪರ್ಧಿಯನ್ನು ಎದುರಿಸಿ ಚಿನ್ನದ ಪದಕದೊಂದಿಗೆ ‘ಗ್ಯಾಂಡ್ ಚಾಂಪಿಯನ್’ ಪ್ರಶಸ್ತಿ ಪಡೆದರು. ಇಂಡಿಯನ್ ಮತ್ತು ಬುಡೋಕಾನ್ ಕರಾಟೆಯ ಎರಡೂ ಶೈಲಿಯಲ್ಲಿ ಬ್ಲಾಕ್ಬೆಲ್ಟ್ ಪಡೆದ ಭಾರತದ ಏಕೈಕ ಮಹಿಳೆ ಕುಮಾರಿ ಕವಿತಾ ಸನಿಲ್, ಮಂಗಳೂರು ಮಹಾನಗರ ಪಾಲಿಕೆಯ ಅತ್ಯಂತ ಕಿರಿಯ ವಯಸ್ಸಿನ ಸದಸ್ಯರಾಗಿದ್ದಾರೆ. ವೈಟ್ ಲಿಫ್ಟಿಂಗ್ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದಿದ್ದಾರೆ. ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ.
ದೇಶಕ್ಕೆ ಹೆಮ್ಮೆ ತರುವ ಹೋದಲ್ಲೆಲ್ಲಾ ಕರಾಟೆ ತಂತ್ರದೊಂದಿಗೆ ಯಶಸ್ವಿಯಾಗಿ ಪದಕಗಳ ಬಿರುದುಗಳ ಪುರಸ್ಕಾರ ಪಡೆದಿರುವ ಉದಯೋನ್ಮುಖ ಯುವ ಪ್ರತಿಭೆ ಕುಮಾರಿ ಕವಿತಾ
ಸನಿಲ್ ಅವರು.

Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಹರೀಶ್ ಕುಶಾಲಪ್ಪ

– ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಹರೀಶ್ ಕುಶಾಲಪ್ಪ ಅವರು ಶ್ರೇಷ್ಠ ಕ್ರೀಡಾಪಟು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಾಧನೆಯ ಶಿಖರ ತಲುಪಿದವರು. ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹರಡಿದವರು.
ಏಳು ಬಾರಿ ರಾಷ್ಟ್ರೀಯ ೧೧೦ ಮೀಟರ್ ಹರ್ಡಲ್ಸ್ನಲ್ಲಿ ಚಾಂಪಿಯನ್ ಶಿಪ್, So, ಇಪ್ಪತ್ತೊಂದು ಬಾರಿ ರಾಷ್ಟ್ರೀಯ ಪದಕ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ ಗಳಿಸಿರುವ ಶ್ರೀ ಹರೀಶ್ ಅವರು ೧೧೦ ಮೀಟರ್ ಹರ್ಡಲ್ಸ್ನಲ್ಲಿ ದಕ್ಷಿಣ ಭಾರತ ದಾಖಲೆಯನ್ನು ಸ್ಥಾಪಿಸಿದ್ದಾರೆ.
ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿರುವ ಹರೀಶ್ ಅವರು ಮುಂಬರಲಿರುವ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾ ಕೂಟಗಳಿಗೆ ಸಿದ್ಧತೆಯನ್ನು ನಡೆಸಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ದಾಖಲೆಗಳ ಭರವಸೆ ಮೂಡಿಸಿದ್ದಾರೆ.
ಸಿಡ್ನಿ ಹಾಗೂ ಅಥೆನ್ಸ್ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅವಕಾಶಕ್ಕೆ ಹತ್ತಿರವಾಗಿದ್ದ ಹರೀಶ್ ಅವರು ಉಜ್ವಲ ಭವಿಷ್ಯದ ವಾರಸುದಾರರಾಗಿದ್ದಾರೆ.

Categories
ಜಾನಪದ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಅಂಗಪ್ಪ ಮಣ್ಣೂರ

ತತ್ತ್ವಪದ, ಜನಪದ ಗೀತಗಾಯನ, ರಾಧಾನಾಟ, ಶ್ರೀಕೃಷ್ಣ ಪಾರಿಜಾತ ಕಲೆಗಳನ್ನು ಮೈಗೂಡಿಸಿಕೊಂಡು ಸಮರ್ಥವಾಗಿ ಪ್ರದರ್ಶಿಸುವ ಅಪರೂಪದ ಕಲಾವಿದ ಶ್ರೀ ಲಿಂಗಪ್ಪ ಮಣ್ಣೂರ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಸಾಪುರ ಗ್ರಾಮದ ಒಕ್ಕಲು ಕುಟುಂಬದಿಂದ ಬಂದವರು. ಸಂಗೀತದ ಗೀಳಿನಿಂದಾಗಿ ಚಿಕ್ಕಂದಿನಿಂದಲೇ ಪ್ರಾಥಮಿಕ ಓದಿಗೆ ತಿಲಾಂಜಲಿ ಬಿಟ್ಟರು. ಸರ್ಪಭೂಷಣ ಶಿವಯೋಗಿ ನಾಗಲಿಂಗ, ಶಿಶುನಾಳ ಶರೀಫ, ನಿಜಗುಣ ಶಿವಯೋಗಿ, ಕಡಕೋಳ ಮಡಿವಾಳಪ್ಪ ಮುಂತಾದ ಅನುಭಾವಿ ಕವಿಗಳ ತತ್ವಪದಗಳನ್ನು ಮೈಮರೆಯುವಂತೆ ಹಾಡುವ ಲಿಂಗಪ್ಪನವರು ಜನಪ್ರಿಯ ಗಾಯಕರಾಗಿದ್ದಾರೆ.
ರಾಜ್ಯಾದ್ಯಂತ ಸಂಚರಿಸಿ ಹಾಡಿರುವ ಈ ಕಲಾವಿದನನ್ನು ಹಲವಾರು ಸಂಘ ಸಂಸ್ಥೆಗಳು ಪ್ರೀತಿಯಿಂದ ಗೌರವಿಸಿದಂತೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ತನ್ನ ೧೯೯೯ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಸುಮಾರು ನಾಲ್ಕುನೂರು ರಾಧಾನಾಟಕದ ಪ್ರದರ್ಶನ ನೀಡಿರುವ ಹಾಗೂ ಸಣ್ಣಾಟವನ್ನು ಪುನರುತ್ಥಾನಗೊಳಿಸಲು ಮುಂದಾಗಿರುವ ಜನಪ್ರೀತಿಯ ಕಲಾವಿದ ಶ್ರೀ ಲಿಂಗಪ್ಪ ಮಣ್ಣೂರ ಅವರು.

Categories
ಜಾನಪದ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಮಾತಂಗೆವ್ವ ಯಮನಪ್ಪ ಮಾದರ

ಬಿಜಾಪುರ ಜಿಲ್ಲೆ ಯ ಬಸವನ ಬಾಗೇವಾಡಿಯ ನಿವಾಸಿ ಮಾತಂಗೆವ್ವ ಯಮನಪ್ಪ ಮಾದರ ಪರಿಶಿಷ್ಟ ಜಾತಿಗೆ ಸೇರಿದ ಅಭಿಜಾತ ಜಾನಪದ ಕಲಾವಿದೆ. ತಮ್ಮ ಹನ್ನೆರಡನೆಯ ವಯಸ್ಸಿನಲ್ಲೇ ಬಾಲ ಪ್ರತಿಭೆಯಾಗಿ ಗ್ರಾಮೀಣ ಭಾಗದ ಜಾನಪದ ಸೊಗಡನ್ನು ಬೆಳೆಸಿಕೊಂಡು ಜಾನಪದ ಕಲಾ ತಂಡಗಳಲ್ಲಿ ಪಾತ್ರಧಾರಿಗಳಾಗಿ ಹೆಸರು ಗಳಿಸಿದವರು.
ಮುಂದೆ ಜಾನಪದ ಪ್ರಕಾರಗಳಾದ ಶ್ರೀಕೃಷ್ಣ ಪಾರಿಜಾತದಲ್ಲಿ ಸತ್ಯಭಾಮ, ಕೊರವಂಜಿ, ನಾರದ ಮುಂತಾದ ಪಾತ್ರವಹಿಸಿ ಇವರ ಅಭಿನಯ ಎಲ್ಲರ ಮನೆ ಮಾತಾಗುವಂತೆ ಆಯಿತು. ಅನಂತರ ತಮ್ಮದೇ ಆದ ಶ್ರೀ ಬಸವೇಶ್ವರ ಜಾನಪದ ಮತ್ತು ಬಯಲಾಟಗಳ ಸಂಘವನ್ನು ಸ್ಥಾಪಿಸಿ ತನ್ಮೂಲಕ ” ಹೇಮರೆಡ್ಡಿ ಮಲ್ಲಮ್ಮ” “ಶ್ರೀ ರೇಣುಕಾ ಎಲ್ಲಮ್ಮ” ಮುಂತಾದ ಬಯಲಾಟಗಳನ್ನು ಪ್ರದರ್ಶಿಸಿ ನಾಡಿನ ಉದ್ದಗಲಕ್ಕೂ ಸಂಚರಿಸಿದ್ದಾರೆ. ಇವರ ಮಲ್ಲಮ್ಮನ ಹಾಗೂ ಎಲ್ಲಮ್ಮನ ಪಾತ್ರ ಜನಜನಿತ. ಕೃಷ್ಣ ಪಾರಿಜಾತದಲ್ಲಿನ ರುಕ್ಷ್ಮಿಣಿಯ ಪಾತ್ರದ ಅಭಿನಯಕ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ.
ಬಯಲಾಟ ದೊಡ್ಡಾಟಗಳ ಅಭಿಜಾತ ಕಲಾವಿದೆಯಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಅತ್ಯಂತ ಹೆಸರುವಾಸಿಯಾಗಿ ಜಾನಪದ ನಾಟ್ಯಕಲೆಯ ಮೇರುವಾಗಿ ಬೆಳೆದಿದ್ದಾರೆ ಮಾತಂಗೆವ್ವ ಯಮನಪ್ಪ ಮಾದರ ಅವರು.

Categories
ಜಾನಪದ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಡಾ. ಮಲ್ಲಿಕಾರ್ಜುನ ಶಿ. ಲಠ್ಠೆ

ಬೆಳಗಾವಿ ತಾಲ್ಲೂಕಿನ ಮುತನಾಳದಲ್ಲಿ ೧೯೩೨ರಲ್ಲಿ ಹುಟ್ಟಿದ ಡಾ. ಎಂ.ಎಸ್.ಲಠ್ಠೆ ಅವರು ಬೆಳಗಾವಿಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಅನಂತರ ೧೯೫೮ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದರು. ಪದವಿ ತರಗತಿಯಲ್ಲಿ ಇದ್ದಾಗಲೇ ಜಾನಪದದ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡ ಇವರಿಗೆ ಜಾನಪದದ ವಿವಿಧ ವಿಷಯಗಳನ್ನು ಸಂಗ್ರಹಿಸುವುದು ಒಂದು ಹವ್ಯಾಸವಾಯಿತು.
ಜಾನಪದ ಹಾಗೂ ಸಾಹಿತ್ಯ ಕ್ಷೇತ್ರಗಳೆರಡರಲ್ಲಿಯೂ ಕೆಲಸ ಮಾಡಿರುವ ಶ್ರೀಯುತರು ಇದುವರೆಗೆ ಸುಮಾರು ೩೪ ಕೃತಿಗಳನ್ನು ಹೊರತಂದಿದ್ದಾರೆ. ಸಭೆ ಸಮ್ಮೇಳನಗಳಲ್ಲಿ ವಿಚಾರ ಗೋಷ್ಠಿಗಳಲ್ಲಿ ನೂರಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯ ಹಾಗೂ ಯು.ಜಿ.ಸಿ. ನೆರವಿನೊಂದಿಗೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಜಾನಪದ ಕಥೆ ಮತ್ತು ಹಾಡುಗಳ ಸಂಗ್ರಹ, ಸಂಪಾದನೆ, ಪ್ರಕಟನೆ ಮಾಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಯಕ್ಷಗಾನ ಅಕಾಡೆಮಿ ಬಹುಮಾನಗಳನ್ನು ಪಡೆದಿರುವ ಶ್ರೀಯುತ ಮಲ್ಲಿಕಾರ್ಜುನ ಲರೆಯವರು ಕನ್ನಡದ ಅಪರೂಪದ ಲೇಖಕರು.

Categories
ಜಾನಪದ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಚಿಕ್ಕನರಸಪ್ಪ

ತಮಟೆ ಕರ್ನಾಟಕದ ಅಪೂರ್ವ ಜನಪದ ಕಲೆಗಳಲ್ಲೊಂದು. ಬಹುಪಾಲು ಅಸ್ಪೃಶ್ಯ ಜನಸಮುದಾಯದ ಅಭಿವ್ಯಕ್ತಿ ಕಲೆಯಾದ ತಮಟೆ, ವಿವಿಧ ಧಾರ್ಮಿಕ ಆಚರಣೆಗಳ ಅವಿಭಾಜ್ಯ ಅಂಗವಾಗಿ ಬೆಸೆದುಕೊಂಡಿದೆ. ತಮಟೆ ಕಲೆಯೊಂದಿಗೆ ತಮ್ಮ ಜೀವನವನ್ನೇ ಬೆಸೆದುಕೊಂಡ ಹಿರಿಯ ಕಲಾವಿದ ಬೆಂಗಳೂರಿನ ಚಿಕ್ಕನರಸಪ್ಪ ತಮಟೆ ನರಸಪ್ಪನೆಂದೇ ಪ್ರಸಿದ್ಧಿ.
ವಂಶಪಾರಂಪರ್ಯ ಬಳುವಳಿಯಾಗಿ ಬಂದ ಈ ಕಲೆ ನರಸಪ್ಪನವರ ಜೀವನದ ಕಾಯಕವೇ ಆಯಿತು. ತಮ್ಮ ಅದ್ಭುತ ತಮಟೆ ವಾದನದಿಂದಲೇ ಕ್ಷಣ ಮಾತ್ರದಲ್ಲಿ ನೆರೆದ ಸಾವಿರಾರು ಜನರನ್ನು ಮಂತ್ರಮುಗ್ಧಗೊಳಿಸುವ ನರಸಪ್ಪನವರು ನಾಡಿನಾಚೆಗೂ ಈ ಕಲೆಯ ಠೇಂಕಾರವನ್ನು ಪಸರಿಸಿದ್ದಾರೆ. ತಮಟೆ ಕಲೆಯೊಂದಿಗೇ ಬೆಳೆಯುತ್ತಾ ನೂರಾರು ಯುವ ಕಲಾವಿದರನ್ನು ಬೆಳೆಸುತ್ತಾ ನೂರಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಶ್ರೀಯುತ ನರಸಪ್ಪನವರಿಗೆ ೨೦೦೪ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲು ಅತ್ಯಂತ ಸಂತೋಷವೆನಿಸುತ್ತದೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಆರ್. ವೀರಭದ್ರಾಚಾರ್

ಸಹಜ ಕಲಾಕೌಶಲ್ಯ ಮತ್ತು ಇಚ್ಛಾಶಕ್ತಿಯಿಂದ ಪ್ರತಿಭಾನ್ವಿತ ಶಿಲ್ಪಿಯಾಗಿ ಅರಳಿದವರು ಶ್ರೀ ಆರ್. ವೀರಭದ್ರಾಚಾರ್. ಜನನ ೧೯೪೦. ಕುಶಲ ಕಲಾವಿದರ ಮಾರ್ಗದರ್ಶನದಿಂದ ಬೆಳ್ಳಿವಿಗ್ರಹ ರಚನೆಯಲ್ಲಿ ತರಬೇತಿ ಮತ್ತು ಲೋಹ ಶಿಲ್ಪಕಲೆಯಲ್ಲಿ ನಿಪುಣತೆ ಪಡೆದರು. ತಮ್ಮ ೧೮ನೆಯ ವಯಸ್ಸಿನಲ್ಲಿ ಪ್ರಾದೇಶಿಕ ವಿನ್ಯಾಸ ಮತ್ತು ತಾಂತ್ರಿಕ ತರಬೇತಿ ಕೇಂದ್ರದಲ್ಲಿ ಮಾಸ್ಟರ್ ಕ್ರಾಫ್ಟ್ಮನ್ ಆಗಿ ವೃತ್ತಿ ಜೀವನದ ಆರಂಭ. ೧೯೫೫ರಲ್ಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಹಿರಿಯ ಮಾಡೆಲ್ಗಾರರಾಗಿ ಸೇರಿದ್ದು, ೧೯೮೨ರಲ್ಲಿ ಪ್ರಧಾನ ಮಾಡಲ ಆಗಿ ನಿವೃತ್ತರಾದರು.
ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾರಾಡುವ ಗಂಧರ್ವರು ಶಿಲ್ಪದ ಪ್ರತಿರೂಪದ ರಚನೆ, ಕುರುಕ್ಷೇತ್ರದ ಶ್ರೀಕೃಷ್ಣ ಮ್ಯೂಸಿಯಂನಲ್ಲಿ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಶಿಲ್ಪಗಳು, ಹಂಪಿಯ ಮೂಲ ವಿಗ್ರಹಕ್ಕೆ ಮುಖವಾಡ ರಚನೆ ಶ್ರೀಯುತರ ಪ್ರಮುಖ ಸಾಧನೆಗಳಾಗಿವೆ. ೧೯೯೮ನೇ ಸಾಲಿನ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಆರ್. ವೀರಭದ್ರಾಚಾರ್ ಅವರ ಸಾಧನೆಗೆ ೮೪ ಅಡಿ ಬೃಹತ್ ಆದಿನಾಥ ಪ್ರತಿಮೆಯು ದ್ಯೋತಕವಾಗಿದೆ. ಕಲಾನೈಪುಣ್ಯದಿಂದ ರಚಿಸಿದ ಮಹಾತ್ಮಾ ಗಾಂಧೀಜಿ, ಬುದ್ಧ, ಲುಂಬಿನಿ ಸ್ತಂಭಗಳಿಂದ ಎಲ್ಲರ ಶ್ಲಾಘನೆಗೆ ಪಾತ್ರರಾದವರು ಶ್ರೀ ಆರ್. ವೀರಭದ್ರಾಚಾರ್ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಭಾಸ್ಕರರಾವ್

ಚಿತ್ರಕಲಾ ಕ್ಷೇತ್ರದಲ್ಲಿ ಅಪಾರವಾದ ಪ್ರಸಿದ್ಧಿಯನ್ನು ಪಡೆದಿರುವ ಶ್ರೀ ಯು. ಭಾಸ್ಕರರಾವ್ ಅವರು ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ.
೧೯೭೧ ಹಾಗೂ ೧೯೯೦ರಲ್ಲಿ ಬೆಂಗಳೂರು, ೧೯೯೪ರಲ್ಲಿ ಚೆನ್ನೈ ಹಾಗೂ ಇನ್ನಿತರ ಹಲವಾರು ಸ್ಥಳಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿರುವ ಶ್ರೀ ಭಾಸ್ಕರರಾವ್ ಅವರು ಬೆಂಗಳೂರು ಮತ್ತು ಮುಂಬೈಗಳಲ್ಲಿ ಏಳಕ್ಕೂ ಹೆಚ್ಚು ಸಮೂಹ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಇದಲ್ಲದೆ ಹತ್ತು ಹಲವು ಪ್ರದರ್ಶನಗಳ ಮೂಲಕ ಚಿತ್ರಕಲಾಸಕ್ತರ ಗಮನ ಸೆಳೆದಿರುವ ಶ್ರೀ ಯು. ಭಾಸ್ಕರರಾವ್ ಅವರು ಬೆಂಗಳೂರಿನ ದೊಡ್ಡ ಗಣೇಶ ದೇವಾಲಯ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್, ಮಂಜುನಾಥಸ್ವಾಮಿ ಚೌಲ್ಟಿ, ಸೇಂಟ್ ಮಾರ್ಕ್ಸ್ ಹೋಟೆಲ್ಗಳಲ್ಲಿನ ಭಿತ್ತಿಚಿತ್ರಗಳ ಮೂಲಕ ತಮ್ಮ ಚಿತ್ರಕಲಾ ಪ್ರತಿಭೆಯನ್ನು ಜನರ ಬಳಿಗೂ ಕೊಂಡೊಯ್ದವರು.
ಶ್ರೀಯುತರು ಕರ್ನಾಟಕ ಕಲಾ ಮೇಳದಲ್ಲಿ ೧೯೮೦ರಿಂದ ೯೩ರ ವರೆಗೂ ಆರು ಬಾರಿ ಭಾಗವಹಿಸಿರುವರಲ್ಲದೆ, ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಶಿಲ್ಪಕಲಾವಿದರ ಶಿಬಿರ, ಸಾರ್ಕ್ ಸಮ್ಮೇಳನ ಸಂದರ್ಭದ ಚಿತ್ರಕಲಾ ಪರಿಷತ್ತು ಸಂಘಟಿಸಿದ ರಾಷ್ಟ್ರೀಯ ಕಲಾವಿದರ ಶಿಬಿರದಂತಹ ಅತ್ಯಂತ ಮಹತ್ವದ ಶಿಬಿರಗಳಲ್ಲಿ ಭಾಗವಹಿಸಿದ ಹೆಮ್ಮೆ ಇವರದು.
ಕರ್ನಾಟಕ ಲಲಿತಕಲಾ ಅಕಾಡೆಮಿ ಪುರಸ್ಕಾರ ಪಡೆದಿರುವ ಶ್ರೀ ಯು. ಭಾಸ್ಕರರಾವ್ ಅವರು ನಾಡು ಹೆಮ್ಮೆಪಡುವ ಚಿತ್ರಕಲಾವಿದರಾಗಿದ್ದಾರೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ಹೀರಾಲಾಲ್ ಮಾರಿ

ವೃತ್ತಿಯಿಂದ ಟೈಲರ್, ಪ್ರವೃತ್ತಿಯಿಂದ ಚಿತ್ರಕಲಾವಿದರಾದವರು ಶ್ರೀ ಹಿರಾಲಾಲ್ ಮಲ್ಲಾರಿ ಅವರು.
೧೯೩೪ರಲ್ಲಿ ರಾಯಚೂರಿನಲ್ಲಿ ಜನನ. ಅತ್ಯಂತ ಬಡಕುಟುಂಬದಲ್ಲಿ ಮನೆಯ ಹಿರಿಯ ಮಗನಾಗಿ ಪ್ರಾಥಮಿಕ ಶಾಲೆಯವರೆಗೆ ಮಾತ್ರ ಕಲಿಕೆ. ನಂತರ ಟೈಲರ್ ವೃತ್ತಿಯ ಆರಂಭ. ಬಿಡುವಿನ ವೇಳೆಯಲ್ಲಿ ಚಿತ್ರರಚನೆ ಅಭ್ಯಾಸ. ಕಲ್ಲು, ಬಂಡೆ, ಗೋಡೆ, ಕಾಗದ, ಸಿಕ್ಕ ಸಿಕ್ಕಲ್ಲಿ ಕಲಾವಿದನ ಮನದಲ್ಲಿ ಮೂಡುವ ಭಾವನೆಗಳಿಗೆ ಚಿತ್ರರೂಪ. ಹವ್ಯಾಸಿ ಕಲಾವಿದರಾಗಿ ಕಲಾಕ್ಷೇತ್ರ ಪ್ರವೇಶಿಸಿದ ಶ್ರೀ ಹಿರಾಲಾಲ್ ಕಲಾವಿದ ಎಂ. ಶಂಕರರಾವ್ ಅವರ ಶಿಷ್ಯರಾಗಿ ಕಲಾವಿದರಾಗಿ ಬೆಳೆದಿರುವುದು ಅವರ ಕಲಾಜೀವನಕ್ಕೆ ಸಾಕ್ಷಿಯಾಗಿದೆ.
೧೯೬೮ರಿಂದ ೨೦೦೨ರ ವರೆಗೆ ಅನೇಕ ಶಿಬಿರ, ಪ್ರದರ್ಶನಗಳಲ್ಲಿ ಭಾಗವಹಿಸಿ ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ ಬಹುಮಾನಗಳನ್ನು ಪಡೆದು ಪ್ರವರ್ಧಮಾನಕ್ಕೆ ಬೆಳಗುತ್ತಿರುವ ಕಲಾವಿದರು ಶ್ರೀ ಹೀರಾಲಾಲ್ ಮಲ್ಕಾರಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಲಲಿತಕಲೆ

ಶ್ರೀ ವಿ.ಟಿ. ಕಾಳೆ

ಕಲಾವಿದ, ಶಿಕ್ಷಕ, ಬರಹಗಾರ ನಾಟಕಕಾರ, ನಿರ್ದೇಶನ ಹಾಗೂ ಸಿನಿಮಾ ನಟನಾಗಿಯೂ ವಿ.ಟಿ. ಕಾಳೆಯವರದು ಬಹುಮುಖ ಪ್ರತಿಭೆ,
೧೯೩೪ರಲ್ಲಿ ಬಿಜಾಪುರ ಜಿಲ್ಲೆಯ ಹುನಗುಂದದ ಬಡರೈತ ಕುಟುಂಬದಲ್ಲಿ ಕಾಳೆಯವರ ಜನನ, ಬಾಲ್ಯದ ಕಲಾಸಕ್ತಿಯನ್ನು ಪ್ರೀತಿಯಿಂದ ಪ್ರೋತ್ಸಾಹಿಸಿ ಬೆಳಸಿದವರು ಹಿರಿಯ ಕಲಾವಿದ ಶ್ರೀ ಟಿ.ಪಿ. ಅಕ್ಕಿಯವರು, ಅವರ ವಿಜಯ ಕಲಾಮಂದಿರವೇ ಕಾಳೆಯವರಿಗೆ ಕಲೋಪಾಸನೆಗೆ ಸ್ಫೂರ್ತಿಯ ಸೆಲೆ. ೧೯೫೩ರಲ್ಲಿ ಮುಂಬಯಿಯ ಜೆ.ಜೆ. ಕಲಾಶಾಲೆಯ ಡಿಪ್ಲೊಮಾ ಪದವಿ. ನಂತರ ಸಾಧನಾ ರಂಗವೇ ಬೋಧನಾರಂಗ ಆಗಲು ವಿಜಯ ಕಲಾಮಂದಿರದಲ್ಲೇ ಶಿಕ್ಷಕನಾಗಿ ಕಲಾಸೇವೆಯ ಮುಂದುವರಿಕೆ. ನಂತರ ೧೯೬೪ರಿಂದ ಸಂಡೂರಿನ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಸೇವಾನಿರತರು.
ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ರಾಜ್ಯದ ದೇವಾಲಯಗಳ ಭಿತ್ತಿ ಚಿತ್ರಗಳ ನಕಲು ಮಾಡವ ಯೋಚನೆಯಲ್ಲಿ ಕಾಳೆಯವರ ಪಾತ್ರ ದೊಡ್ಡದು. ಶ್ರವಣಬೆಳಗೊಳದ ಜೈನ ಹಾಗೂ ಶಿರಾದಲ್ಲಿರುವ ರೇವಣಸಿದ್ಧೇಶ್ವರ ದೇವಾಲಯಗಳ ಭಿತ್ತಿ ಚಿತ್ರಗಳ ನಕಲು ಕಾರ್ಯದಲ್ಲಿ ಕಾಳೆಯವರು ತೋರಿರುವ ಕಲಾನೈಪುಣ್ಯ ಶ್ಲಾಘನೀಯ.
ಮಕ್ಕಳಿಗೆ ಚಿತ್ರಕಲೆ ಕಲಿಸುವುದರ ಬಗ್ಗೆ ಇವರ ಕಲಾಪರಿಚಯ ಪುಸ್ತಕ ಬರಹಗಾರನಾಗಿ ಕಾಳೆಯವರ ಸಂವೇದನಾಶೀಲತೆಗೆ ನಿದರ್ಶನ. ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ. ಪ್ರಶಂಸೆ, ಭಾರತದಾದ್ಯಂತ ನಡೆಯುವ ಕಲಾಪ್ರದರ್ಶಗಳಲ್ಲಿ ಇವರ ಕೃತಿಗಳ ಪ್ರದರ್ಶನ ಹಾಗೂ ಆನೇಕ ಏಕವ್ಯಕ್ತಿ ಪ್ರದರ್ಶನಗಳು ಪ್ರಶಂಸೆಗಳಿಸಿವೆ ಕಾಳೆಯವರು ವಿಭಿನ್ನ ಪ್ರತಿಭೆಯ ಕಲಾವಿದ, ನಾಟಕಕಾರ, ನಿರ್ದೇಶಕ-ನಟನಾಗಿ ರಂಗ ಹಾಗೂ ಚಲನ ಚಿತ್ರಗಳಲ್ಲಿ ಇವರದು ಶ್ರೀಮಂತ ಅನುಭವ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ”ಮಾನಸವೀಣೆ” ಚಿತ್ರಗಳ ಅಭಿನಯ ಇವರ ಪ್ರತಿಭೆಯ ಮತ್ತೊಂದು ಹೆಗ್ಗಳಿಕೆ.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪ್ರತಿಭಾ ನಾರಾಯಣ್

• ಅಭಿನಯದೊಂದಿಗೆ ರಂಗಗೀತೆಗಳನ್ನು ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡುವ ರಂಗಪ್ರತಿಭೆ ಶ್ರೀಮತಿ ಪ್ರತಿಭಾ ನಾರಾಯಣ್ ಅವರು.
ಬೆಂಗಳೂರಿನಲ್ಲಿ ೧೯೬೦ರಲ್ಲಿ ಶ್ರೀಮತಿ ಪ್ರತಿಭಾ ನಾರಾಯಣ್ ಅವರು ಜನಿಸಿದರು. ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಹೈಸ್ಕೂಲಿನಲ್ಲಿರುವಾಗಲೆ ತಂದೆ ನಾಟಕ ಮಾಸ್ತರಾದ ಕೃಷ್ಣರಾವ್ ಅವರ ಆಸಕ್ತಿಯಿಂದಾಗಿ ಸದಾರಮೆ ನಾಟಕದ ಮೂಲಕ ರಂಗಭೂಮಿ ಪ್ರವೇಶ, ಧರ್ಮ ವಿಜಯ, ಕೃಷ್ಣಸಂಧಾನ ನಾಟಕಗಳ ದೌಪದಿ, ಕುಂತಿ, ಗಾಂಧಾರಿ, ಪ್ರಚಂಡ ರಾವಣ, ಸೀತೆ, ಮಂಡೋದರಿ, ಭಕ್ತ ಪ್ರಹ್ಲಾದದ ಕಯಾದು ಹೀಗೆ ವೈವಿಧ್ಯಮಯ ಪಾತ್ರಗಳ ಸಮರ್ಥ ನಿರ್ವಹಣೆ. ಚಲನಚಿತ್ರಗಳಲ್ಲೂ ಅಭಿನಯಿಸಿರುವ ಶ್ರೀಮತಿ ಪ್ರತಿಭಾ ನಾರಾಯಣ್ ಅವರು ೧೯೯೭ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಶೇಷಾದ್ರಿ ನಾಟಕ ಮಂಡಳಿಯಲ್ಲಿ ರಂಗಭೂಮಿ ನಟಿಯಾಗಿ ಸಾವಿರಾರು ಪ್ರದರ್ಶನ ನೀಡಿ ಜನರ ಮೆಚ್ಚುಗೆ ಪಡೆದಿರುವ ಅಪೂರ್ವ ಕಲಾವಿದೆ ಮತ್ತು ಅದ್ಭುತ ಕಂಠಸಿರಿಯ ಗಾಯಕಿ ಪ್ರತಿಭಾ ನಾರಾಯಣ್ ಅವರು.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪ್ರಭಾಕರ ಸಾತಖೇಡ್

ಹವ್ಯಾಸಿ ರಂಗಭೂಮಿ, ರೇಡಿಯೋ, ಚಲನಚಿತ್ರ ಮೊದಲಾದ ಸಾಂಸ್ಕೃತಿಕ ರಂಗದಲ್ಲಿ ಒಲವುಳ್ಳವರು ಶ್ರೀ ಪ್ರಭಾಕರ ಸಾತಖೇಡ ಅವರು.
ಜನನ ೧೯೪೬ರಲ್ಲಿ . ಗಿರಡ್ಡಿ ಗೋವಿಂದರಾಜ, ಕುಸನೂರು, ಪ್ರೇಮಾ ಕಾರಂತ ಮೊದಲಾದವರ ಕನ್ನಡ ಸಂಸ್ಕೃತ ನಾಟಕಗಳಲ್ಲಿ ಅಭಿನಯಿಸಿದ್ದಾರೆ.ಕಂಬಾರ, ಕುರ್ತಕೋಟಿ, ಶ್ರೀರಂಗ, ಕುಸನೂರ ಮೊದಲಾದವರ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ. ಕಲಬುರ್ಗಿಯ ರಂಗೋದ್ಯಮ ಸಂಸ್ಥೆಯ ಸಂಚಾಲಕರಾಗಿ ಕನ್ನಡ ಸಾಹಿತ್ಯ ಸಂಘದ ನಾಟಕ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ. ಆಕಾಶವಾಣಿ, ದೂರದರ್ಶನ ನಾಟಕಗಳಲ್ಲಿ ಅಭಿನಯಿಸಿರುವ ಶ್ರೀಯುತರು ‘ಆಧುನಿಕ ದ್ರೋಣ’ ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಶ್ರೀಯುತರು ಅದ್ಭುತ ಅಭಿನಯದಿಂದಾಗಿ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಸಿದ್ಧ ನಟ, ನಿರ್ದೇಶಕರಾಗಿ ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಲಾವಿದ ಶ್ರೀ ಪ್ರಭಾಕರ ಸಾತಖೇಡ ಅವರು.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪ್ರಸನ್ನ

ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ರಂಗಭೂಮಿಯ ಪ್ರಯೋಗಶೀಲ ಹಾಗೂ ಪ್ರತಿಭಾವಂತ ನಿರ್ದೇಶಕರು ಶ್ರೀ ಪ್ರಸನ್ನ ಅವರು.
ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ ೧೯೫೧ರಲ್ಲಿ ಜನನ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್ಸಿ ., ಪದವಿ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಡಿಪ್ಲೊಮಾ ಪಡೆದಿದ್ದಾರೆ.
೧೯೭೫ರಲ್ಲಿ ಸಮುದಾಯ ಆರಂಭಿಸಿ, ನಾಟಕವನ್ನು ಜನತೆಯ ಬಳಿಗೆ ಕೊಂಡೊಯ್ದವರು. ತಾಯಿ, ಕದಡಿದ ನೀರು, ಗೆಲಿಲಿಯೋ, ದಂಗೆಯ ಮುಂಚಿನ ದಿನಗಳು, ಮ್ಯಾಕ್ ಬೆತ್ ನಾಟಕಗಳ ನಿರ್ದೇಶನದ ಮೂಲಕ ಗಂಭೀರ ರಂಗಾಸಕ್ತರ ಗಮನ ಸೆಳೆದವರು. ತಮಿಳುನಾಡು, ಕೇರಳ, ಬಿಹಾರ, ಮಧ್ಯಪ್ರದೇಶಗಳಲ್ಲಿ ನಾಟಕ ಶಿಬಿರಗಳನ್ನು ಆಯೋಜಿಸಿದ್ದಾರೆ.
ತದ್ರೂಪಿ, ಒಂದು ಲೋಕದ ಕಥೆ, ಹದ್ದು ಮೀರಿದ ಹಾದಿ, ಜಂಗಮದ ಬದುಕು, ಮಹಿಮಾಪುರ ನಾಟಕಗಳನ್ನು, ನೌಟಂಕಿ, ಸ್ವಯಂವರ ಮುಂತಾದ ಕಾದಂಬರಿಗಳನ್ನು ಹಾಗೂ ‘ನಾಟಕ:ರಂಗಕೃತಿ’ ಎಂಬ ಬಹುಚರ್ಚಿತ ಕೃತಿಗಳನ್ನು ರಚಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಪ್ರಸನ್ನ ವಿದೇಶಗಳನ್ನೂ ಸುತ್ತಿ ಬಂದಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿರುವ ಶ್ರೀ ಪ್ರಸನ್ನ ಅವರು ನಮ್ಮ ಸಂದರ್ಭದ ರಂಗಭೂಮಿಯ ಅನನ್ಯ ಪ್ರತಿಭೆ.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ರಾಜಶೇಖರ ಕದಂಬ

ಮೈಸೂರಿನಲ್ಲಿ ಕದಂಬ ರಂಗವೇದಿಕೆ ಕಟ್ಟಿಕೊಂಡು ಕಳೆದ ಮೂರು ದಶಕಗಳಿಂದ ದುಡಿಯುತ್ತಿರುವ ರಾಜಶೇಖರ ಕದಂಬ ‘ರಂಗಮಿತ್ರ ಕದಂಬ’ ಎಂದೇ ಪ್ರಸಿದ್ಧರು. ನಟ, ಸಂಘಟಕ, ನಿರ್ದೇಶಕ ಹಾಗೂ ಲೇಖಕರಾಗಿಯೂ ಹೆಸರು ಮಾಡಿರುವವರು. ನೂರಾರು ನಾಟಕಗಳಲ್ಲಿ ಅಭಿನಯಿಸಿ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ, ಒಂದು ಗುಂಪು ಮಾಡಬಲ್ಲ ಕೆಲಸವನ್ನು ಒಬ್ಬರೇ ಮಾಡುವ ಸಾಮರ್ಥ್ಯವನ್ನು ಪ್ರಕಟಿಸಿರುವ ಕದಂಬರ ರಂಗಭೂಮಿಯ ಬದ್ಧತೆ ಅಚ್ಚರಿ ಹುಟ್ಟಿಸುವಂಥದ್ದು. ದುರ್ಗಾಸ್ತಮಾನ, ಹೆಜ್ಜಾಲ, ಧರ್ಮಕೊಂಡದ ಕಥೆ ಇವು ಕದಂಬರ ನಾಟಕ ತಂಡದ ಅತ್ಯಂತ ಯಶಸ್ವೀ ನಾಟಕಗಳು. ಸುಮಾರು ೪೫ ಕನ್ನಡ ಚಿತ್ರಗಳಲ್ಲೂ ದೂರದರ್ಶನದ ಧಾರಾವಾಹಿಗಳಲ್ಲೂ ನಟಿಸಿರುವ ಕದಂಬ ಮೈಸೂರು ಆಕಾಶವಾಣಿಯ ನಾಟಕ ಕಲಾವಿದರಾಗಿರುವುದಲ್ಲದೆ ಆಕಾಶವಾಣಿಗಾಗಿ ಅನೇಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಕುವೆಂಪು ಹಾಗೂ ಡಾ. ರಾಜ್ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಬಂದಾಗ ಅವರಿಬ್ಬರನ್ನೂ ಒಂದೇ ವೇದಿಕೆಯಲ್ಲಿ ಸನ್ಮಾನಿಸಿದ್ದು ಕದಂಬರ ಹೆಗ್ಗಳಿಕೆ.
ನಾಟಕ ಅಕಾಡೆಮಿಯ ಸದಸ್ಯರಾಗಿ ಗ್ರಾಮೀಣ ಹವ್ಯಾಸಿ ತಂಡಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಲ್ಲದೆ ಕಾಲೇಜು ರಂಗಭೂಮಿಯ ಚಟುವಟಿಕೆಗಳನ್ನು ಜೀವಂತಗೊಳಿಸಲು ಪ್ರಯತ್ನಿಸಿದರು.
ಕದಂಬರನ್ನು ಅರಸಿಕೊಂಡು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಚಿತ್ರದುರ್ಗ ಮುರುಘರಾಜೇಂದ್ರ ಮಠದ ‘ಕಲಾರತ್ನ’ ಪ್ರಶಸ್ತಿಗಳು ಬಂದಿವೆ. ಏನಾದರೂ ಸಾಧಿಸಬೇಕೆಂಬ ಆವೇಶದಲ್ಲಿ ರಂಗಭೂಮಿಯಲ್ಲಿ ಗಣನೀಯ ಸಾಧನೆ ಮಾಡಿರುವ ದಣಿವರಿಯದ ರಂಗಕರ್ಮಿ ಶ್ರೀ ರಾಜಶೇಖರ ಕದಂಬ ಅವರು.

Categories
ರಂಗಭೂಮಿ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ

ಅತ್ಯಂತ ಕಡಿಮೆ ಅವಧಿಯಲ್ಲಿ ಅದ್ಭುತ ರಂಗಸಂಘಟನೆಯಾಗಿ ಬೆಳೆದ ಸಾಣೇಹಳ್ಳಿಯ ‘ಶಿವಸಂಚಾರ’ದ ಹಿಂದಿರುವ ಕ್ರಿಯಾಶೀಲ ಪ್ರತಿಭೆಯೇ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು.
ತರಳಬಾಳು ಜಗದ್ಗುರು ಶಾಖಾಮಠದ (ಸಾಣೇಹಳ್ಳಿ) ಸ್ವಾಮಿಗಳಾದ ಶ್ರೀಯುತರು ಮಠ, ಸ್ವಾಮೀಜಿಗಳ ಧಾರ್ಮಿಕ ವಲಯದಿಂದಾಚೆಗೂ ಬಯಲು ರಂಗಮಂದಿರ ನಿರ್ಮಾಣ, ಶಿವಕುಮಾರ ಪ್ರಶಸ್ತಿ ಸ್ಥಾಪನೆ, ಸಮಾಜಸೇವೆ, ನಾಟಕೋತ್ಸವ, ಸಾಹಿತ್ಯ ರಚನೆ, ಹೀಗೆ ತಮ್ಮ ಪ್ರತಿಭಾ ಕ್ಷೇತ್ರವನ್ನು ಸಮಾಜದ ಸೇವಾ ಕ್ಷೇತ್ರಗಳಿಗೆ ವಿಸ್ತರಿಸಿದ ಅಪೂರ್ವ ಶಕ್ತಿ ಇವರು. ಈ ದಿಸೆಯಲ್ಲಿ ೧೯೯೭ರಲ್ಲಿ ಸಿ.ಜಿ.ಕೆ. ಅವರ ಪ್ರೇರಣೆಯಿಂದ ಅವರು ಸ್ಥಾಪಿಸಿದ ಶಿವಸಂಚಾರ ಈವರೆಗೆ ೨೧ ನಾಟಕಗಳನ್ನು ಪ್ರಯೋಗಕ್ಕೆ ಅಳವಡಿಸಿ ನಾಡಿನಾದ್ಯಂತ ಸಂಚರಿಸಿ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ ದಾಖಲೆ ಸೃಷ್ಟಿಸಿದೆ. ಕನ್ನಡ ರಂಗಭೂಮಿಯಲ್ಲಿಂದು ಅಪಾರ ಬೇಡಿಕೆ ಇರುವ ಶಿವಸಂಚಾರ ತಂಡ ಕರ್ನಾಟಕದ ಮನೆ ಮಾತಾಗಿದೆ. ಪ್ರತಿ ವರ್ಷ ಇಪ್ಪತ್ತೈದು ಕಲಾವಿದರಿಗೆ ತರಬೇತಿ ನೀಡಿ ಅವರಿಗೆ ಎಲ್ಲ ಸೌಲಭ್ಯಗಳನ್ನು ಗೌರವಧನದೊಂದಿಗೆ ನೀಡಿ ಸಾಮಾಜಿಕ ಪರಿವರ್ತನೆಗೆ, ಸಮಾನತೆಗೆ ಒತ್ತುಕೊಡುವ ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸುವ ಶಿವಸಂಚಾರ ತಂಡ ಕನ್ನಡ ರಂಗಭೂಮಿಗೆ ಭವಿಷ್ಯದ ಭರವಸೆಯೂ ಹೌದು.
ಕನ್ನಡ ರಂಗಭೂಮಿಯಲ್ಲಿ ಮೌನ ಕ್ರಾಂತಿಯೊಂದಕ್ಕೆ ನಾಂದಿ ಹಾಡಿ ಅದರ ಭವಿತವ್ಯಕ್ಕೆ ಬೆಳ್ಳಿ ರೇಖೆಗಳನ್ನು ಮೂಡಿಸಿದ ಅಪೂರ್ವ ಶಕ್ತಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು.

Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ.ಸಿ. ಸುಬ್ರಹ್ಮಣ್ಯ

– ನೃತ್ಯ ಪ್ರಕಾರವನ್ನು ಪೋಷಿಸಿಕೊಂಡು ಬರುತ್ತಿರುವ ಸ್ವತಃ ಉತ್ತಮ ನೃತ್ಯಪಟು ಶ್ರೀ ಪಿ.ಸಿ. ಸುಬ್ರಹ್ಮಣ್ಯಮ್ ಅವರು.
ಸುಮಾರು ೬೦ ವರ್ಷದ ಹಿಂದೆ ಪಣಂಬೂರಿನಲ್ಲಿ ಜನನ, ವಿದ್ವಾನ್ ಸಿ. ರಾಧಾಕೃಷ್ಣ ಮತ್ತು ದಿವಂಗತ ವಿ.ಸಿ. ಲೋಕಯ್ಯ ಅವರ ಬಳಿ ಭರತನಾಟ್ಯದ ಕಲಿಕೆ. ವಿದ್ವಾನ್ ಜೆ.ವಿ. ರಮಣಮೂರ್ತಿ ಹಾಗೂ ಡಾ. ಪದ್ಮಾಸುಬ್ರಹ್ಮಣ್ಯಮ್ರವರ ಬಳಿ ಕೂಚಿಪುಡಿ ಮತ್ತು ಭರತನಾಟ್ಯದ ತರಬೇತಿ, ಶ್ರೀ ಬಳ್ಳಾರಿ ಸಹೋದರರು ಮತ್ತು ಶ್ರೀ ನಾರಾಯಣ ಮೂರ್ತಿಗಳ ಬಳಿ ಸಂಗೀತಾಭ್ಯಾಸ
೧೯೮೭ರಲ್ಲಿ ಭಾರತ – ರಷ್ಯಾ ಸಾಂಸ್ಕೃತಿಕ ಉತ್ಸವದಲ್ಲಿ ಕಲಾವಿದರ ತಂಡದ ಹೊಣೆಗಾರಿಕೆಯನ್ನು ಹೊತ್ತು ಶಾಸ್ತ್ರೀಯ ಮತ್ತು ಜನಪದ ನೃತ್ಯ ಪ್ರದರ್ಶನ ನೀಡಿದ್ದಾರೆ. ರಷ್ಯಾ ಕಲಾವಿದರುಗಳಿಗೆ ನೃತ್ಯಭ್ಯಾಸದ ಮಾರ್ಗದರ್ಶನ ಮಾಡಿದ್ದಾರೆ.
ನೃತ್ಯಗಾರರಾದರೂ ಕೇವಲ ನೃತ್ಯ ಪ್ರದರ್ಶನಕ್ಕೆ ಸೀಮಿತವಾಗದೆ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ನೃತ್ಯ ನಾಟಕಗಳಿಗೆ ನಿರ್ದೆಶನ ಮಾಡುವ ನೃತ್ಯ ಸಂಯೋಜಿಸುವುದರ ಜೊತೆಗೆ ಪ್ರತಿಭಾನ್ವಿತ ಯುವ ಕಲಾವಿದರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ವೇದಿಕೆಯನ್ನು ಒದಗಿಸುತ್ತಿರುವ ನೃತ್ಯ ಪಟು ಮತ್ತು ಕಲಾ ವಿಮರ್ಶಕ ಶ್ರೀ ಪಿ. ಸಿ. ಸುಬ್ರಹ್ಮಣ್ಯಮ್
ಅವರು.

Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮಂಜು ಭಾರ್ಗವಿ

ಒಂಬತ್ತನೇ ವರ್ಷದಲ್ಲೇ ನಾಟ್ಯರಂಗ ಪ್ರವೇಶಿಸಿದ ಮಿಂಚಿನ ಬಳ್ಳಿ ಮಂಜು ಭಾರ್ಗವಿ ತಮ್ಮ ಅವಿರತ ಸಾಧನೆಯಿಂದ ನಾಟ್ಯರಾಣಿ, ನಾಟ್ಯ ಮಯೂರಿ ಎನಿಸಿದ ವಿಶಿಷ್ಟ ಕಲಾವಿದೆ.
ಗುರು ವೆಂಪಟ್ಟಿ ಚಿನ್ನಸತ್ಯಂ ಅವರಿಂದ ಕೂಚಿಪುಡಿ ಕಲೆಯಲ್ಲಿ ಶಿಕ್ಷಣ ಪಡೆದ ಇವರು ಈ ವರೆಗೆ ಎರಡು ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ದೇಶ ವಿದೇಶಗಳಲ್ಲಿ ನಡೆಸಿಕೊಟ್ಟಿದ್ದಾರೆ. ಅಮೆರಿಕಾ, ಕೆನಡಾ, ಯೂರೋಪ್, ಆಫ್ರಿಕಾ, ಶ್ರೀಲಂಕಾ, ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಇವರು ನೃತ್ಯದ ಕಂಪನ್ನು ಪ್ರಸರಿಸಿದ್ದಾರೆ.ದಕ್ಷಿಣ ಭಾರತದ ಚಲನಚಿತ್ರ ಕ್ಷೇತ್ರದಲ್ಲಿ ನೃತ್ಯನಟಿಯಾಗಿಯೂ ಹೆಸರು ಗಳಿಸಿರುವ ಮಂಜು ಭಾರ್ಗವಿಯವರು ತೆಲುಗು “ಶಂಕರಾಭರಣಮ್” ಚಿತ್ರದ ಅಭಿನಯದಿಂದ ಜನಮನ ಗೆದ್ದವರು. ಇವರ ಕಲಾಪ್ರತಿಭೆಗೆ ಸಂದ ಗೌರವ ಸಮ್ಮಾನಗಳು ಅರಸಿ ಬಂದ ಬಿರುದು, ಪ್ರಶಸ್ತಿಗಳು ನೂರಾರು.
ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಯುವ ಪ್ರತಿಭೆಗಳ ಮೂಲಕ ವಿಸ್ತರಿಸುವ ಹಂಬಲದೊಂದಿಗೆ ಕೂಚಿಪುಡಿ ಸಂಶೋಧನಾ ಕೇಂದ್ರವೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಸದಾಶಯ ಹೊಂದಿರುವ ಅಪೂರ್ವ ಕಲಾವಿದೆ ಶ್ರೀಮತಿ ಮಂಜು ಭಾರ್ಗವಿ ಅವರು.

Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಪದ್ಮನಿ ರಾಮಚಂದ್ರನ್

ಈ ಭರತನಾಟ್ಯ ಕಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅದ್ಭುತ ನೃತ್ಯಕಲಾವಿದೆ ಶ್ರೀಮತಿ ಪದ್ಮನಿ ರಾಮಚಂದ್ರನ್ ಅವರು.
ಕೇವಲ ಒಂಬತ್ತನೇ ವಯಸ್ಸಿಗೆ ರಂಗಪ್ರವೇಶ ಮಾಡಿದ ಪದ್ಮನಿ ಅವರು ನೃತ್ಯ ಕಲೆಯನ್ನು ಒಂದು ತಪಸ್ಸಿನಂತೆ ಸ್ವೀಕರಿಸಿ ಬೆಳೆದುಬಂದ ಬಗೆ ಅದ್ಭುತ. ಅತಿ ಚಿಕ್ಕವಯಸ್ಸಿನಲ್ಲೇ ಬಾಲ ನಟಿಯಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ಪದ್ಮನಿ ಪ್ರಿಯ ದರ್ಶಿನಿ ತಮಿಳು, ಮಲೆಯಾಳ, ಕನ್ನಡ ಚಿತ್ರಗಳಲ್ಲಿ ನೃತ್ಯ-ನಟಿಯಾಗಿ ತಮ್ಮ ಬಾಲ ಪ್ರತಿಭೆ ಬೆಳಗಿಸಿದವರು, ಮುಂದೆ ಶ್ರೀ ರಾಮಚಂದ್ರನ್ ಅವರ ಕೈಹಿಡಿದು ಪದ್ಮನಿ ರಾಮಚಂದ್ರನ್ ಆಗಿ ಬೆಂಗಳೂರಿನ ದಂಡು ಪ್ರದೇಶದಲ್ಲಿ ನೆಲೆಸಿ ಚಿತ್ರರಂಗಕ್ಕೆ ವಿದಾಯ ಹೇಳಿ ನಾಟ್ಯಕ್ಷೇತ್ರವನ್ನೇ ತಮ್ಮ
ಜೀವನಾಡಿಯಾಗಿಸಿಕೊಂಡರು.
ಕನ್ನಡ ನಾಡಿನಿಂದಾಚೆಗೂ ಭಾರತದ ಎಲ್ಲ ಪ್ರಮುಖ ನಗರಗಳಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ನೃತ್ಯ ಕಾರ್ಯಕ್ರಮಗಳನ್ನು ನೀಡಿ ಹೆಸರು ಗಳಿಸಿದ್ದಾರೆ. (೧೯೭೫ರಿಂದ ಬೆಂಗಳೂರಿನಲ್ಲಿ ನಾಟ್ಯಪ್ರಿಯ ನೃತ್ಯಶಾಲೆಯನ್ನು ಸ್ಥಾಪಿಸಿ, ಅನೇಕ ನೃತ್ಯ ಕಲಾವಿದರನ್ನು ಆ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇವರ ನೃತ್ಯ ಕಲೆಯ ನೈಪುಣ್ಯಕ್ಕೆ ಒಲಿದು ಬಂದ ಬಹುಮಾನಗಳು ಅಗಣಿತ ತಮ್ಮ ನಾಟ್ಯಪ್ರಿಯ ಶಾಲೆಯ ಮೂಲಕ ನೃತ್ಯಪ್ರಿಯರನ್ನು ಗಳಿಸಿಕೊಂಡ ಹಿರಿಯ ನೃತ್ಯ ಗುರು ಶ್ರೀಮತಿ ಪದ್ಮನಿ ರಾಮಚಂದ್ರನ್ ಅವರು.)

Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಡಾ. ತುಳಸಿ ರಾಮಚಂದ್ರ

ಕಲೆ ಇವರಿಗೆ ಹುಟ್ಟಿನಿಂದಲೇ ಬಂದದ್ದು ತಂದೆ ಹೆಸರಾಂತ ರಂಗ ಕಲಾವಿದರಾಗಿದ್ದ ತಮಾಷ್ ಮಾಧವರಾಯರೆಂದೇ ಪ್ರಸಿದ್ದರಾಗಿದ್ದ ಎಮ್.ಎಸ್.ಮಾಧವರಾಯರು. ಮಾವ ಗಮಕ ಭಗೀರಥರಲ್ಲಿ ಒಬ್ಬರೆನೆಸಿದ್ದ ಗಮಕ ರಸಋಷಿ ಮೈಸೂರಿನ ಕೃಷ್ಣಗಿರಿ ಕೃಷ್ಣರಾಯರು, ನೃತ್ಯಾಭಿನಯ ಕಲೆ ಇವರನ್ನ ತಾನೇ ತಾನಾಗಿ ಬಂದು ಬಾಚಿಕೊಂಡಿತು. ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ಇವರ ಗುರುಗಳೂ ಸಹ. ಕೇವಲ ಭರತ ನಾಟ್ಯವೇ ಅಲ್ಲದೆ ದೆಹಲಿಯ ಗಂಧರ್ವ ಮಹಾವಿದ್ಯಾಲಯದಲ್ಲಿ ಪಂ. ತಿರ್ಥರಾಮ್ ಅಜಾದ್ ಅವರಲ್ಲಿ ಕಥಕ್, ಅಹಮದಾಬಾದಿನ ದರ್ಪಣ ನಾಟ್ಯಶಾಲೆಯಲ್ಲಿ ಆಚಾರ್ಯ ಸಿ.ಆರ್. ಆಚಾರ್ಯುಲು ಅವರಲ್ಲಿ ಕೂಚಿಪುಡಿ ಶೈಲಿಯ ನೃತ್ಯವನ್ನೂ ಅಭ್ಯಾಸ ಮಾಡಿದ್ದಾರೆ.
ಮುಂದೆ ಮೈಸೂರಿಗೆ ಬಂದು ನೆಲಸಿದ ಮೇಲೆ ನೃತ್ಯಕಲೆಯ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ಹಾಗೂ ಇನ್ನಿತರ ಹಿರಿಯರ ಮಾರ್ಗದರ್ಶನ ಪಡೆದು ನೃತ್ಯಕಲೆ ಪರಂಪರೆ ಕುರಿತು ಮಹಾ ಪ್ರಭಂಧವನ್ನು ಬರೆದು ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಗಳಿಸಿದ್ದಾರೆ.
ರಾಜ್ಯ, ಹೊರರಾಜ್ಯ ಹಾಗೂ ಹೊರ ರಾಷ್ಟ್ರಗಳಲ್ಲೆಲ್ಲಾ ಸಂಚರಿಸಿ ಆನೇಕ ಕಾರ್ಯಕ್ರಮಗಳನ್ನು ನೀಡಿ ಯಶಸ್ಸು ಪಡೆದಿರುವ ಡಾ.ತುಳಸಿ ರಾಮಚಂದ್ರ ಅವರು ಪ್ರಸ್ತುತ ಮೈಸೂರಿನಲ್ಲಿ ನೃತ್ಯಾಲಯ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಕಿಕ್ಕೇರಿ ಕೃಷ್ಣಮೂರ್ತಿ

– ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ೧೯೬೪ರಲ್ಲಿ ಜನಸಿದ ಕೃಷ್ಣಮೂರ್ತಿಯವರು ಕಲಾವಿದರ-ಸಾಹಿತ್ಯ ಪ್ರಿಯರ ಮನೆತನದಿಂದ ಬಂದವರು. ತಂದೆ ಬಿ.ಎಸ್. ನಾರಯಣಭಟ್ ಸಾಹಿತ್ಯ ಪ್ರಿಯರು.
ಬಿ.ಕಾಂ. ಪಧವೀಧರರಾಗಿ ಅನಂತರ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪಧವಿಗಳಿಸಿ ಸಂಗೀತದಲ್ಲೂ ಆಸಕ್ತಿ ಬೆಳಸಿಕೊಂಡು ಡಾ. ಕೆ. ವರದರಂಗನ್ ಅವರಲ್ಲಿ ಕರ್ನಾಟಕ ಸಂಗೀತವನ್ನು ಅಭ್ಯಸಿಸಿದ್ದಾರೆ. ಹಿಂದುಸ್ತಾನಿ ಸಂಗೀತದಲ್ಲೂ ಸಾಕಷ್ಟು ಕೃಷಿಮಾಡಿ ಮುಂದೆ ಸುಗಮ ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಮೂಡಿ ಡಾ. ಎಸ್. ಕರೀಂಖಾನ್ ಅವರ ಬಳಿ ಸಾಕಷ್ಟು ವರ್ಷ ಶಿಷ್ಯವೃತ್ತಿ ಮಾಡಿದ್ದಾರೆ. ಜೊತೆಗೆ ಸುಗಮ ಸಂಗೀತದ ಕುರಿತು ಹೆಚ್ಚಿನ ಅಧ್ಯಯನವನ್ನೂ ಮಾಡಿದ್ದಾರೆ.
ರಂಗಭೂಮಿಯಲ್ಲೂ ಸಾಕಷ್ಟು ಕೃಷಿಮಾಡಿ ನಟರಾಗಿ, ನಿರ್ದೇಕರಾಗಿ, ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಸೇವೆಸಲ್ಲಿಸಿದ್ದಾರೆ.ಚಲನಚಿತ್ರಗಳಲ್ಲೂ ತಮ್ಮ ಪ್ರತಿಭೆ ಬೆಳಗಿಸಿ ಕೆಲವೊಂದು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ತಮ್ಮದೇ ಆದ ಆದರ್ಶ ಸುಗಮ ಸಂಗೀತ ಆಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಕೃಷ್ಣಮೂರ್ತಿಯವರಿಗೆ ಕಾಳಿಂಗ ರಾವ್ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಮುಂತಾಗಿ ಹಲವಾರು ಪ್ರಶಸ್ತಿ ಗೌರವಗಳು ಅವರನ್ನು ಅರಿಸಿ ಬಂದಿವೆ ಆನೇಕ ಧ್ವನಿಸುರುಳಿಗಳನ್ನು ಹೊರತಂದಿರುವ ಕೃಷ್ಣಮೂರ್ತಿಯವರು ಸುಗಮ ಸಂಗೀತ ಕ್ಷೇತ್ರದ ಒಂದು ದೊಡ್ಡ ಆಸ್ತಿ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ವೈ.ಕೆ. ಮುದ್ದುಕೃಷ್ಣ

ಅಧಿಕಾರದ ಅವಿರತ ದುಡಿಮೆಯ ನಡುವೆಯೂ ತಮ್ಮ ಕಲಾಪ್ರೇಮವನ್ನು ಕಾಯ್ದುಕೊಂಡೇ ಬಂದ ಕಂಚಿನ ಕಂಠದ ಕೋಗಿಲೆ ಶ್ರೀಯುತ ವೈ.ಕೆ. ಮುದ್ದುಕೃಷ್ಣ.
೧೯೪೭ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಟ್ಟ ಮಲೆನಾಡಿನ ಎಡೆಕೆರೆ ಗ್ರಾಮದಲ್ಲಿ ಜನಿಸಿದ ಶ್ರೀಯುತರು ಬಾಲ್ಯದಿಂದಲೆ ಜನಪದ ಹಾಗೂ ಭಾವಗೀತೆಗಳ ಗಾಯನವನ್ನೂ ರೂಢಿಸಿಕೊಂಡುಬಂದರು. ೧೯೮೫ರಲ್ಲಿ ಮೊದಲಿಗೆ ಅಮೆರಿಕಾ ಪ್ರವಾಸ ಮಾಡಿ ತಮ್ಮ ಗಾನಸುಧೆಯನ್ನು ನಾಡಿನಾಚೆಗೂ ವಿಸ್ತರಿಸಿದ ಹೆಗ್ಗಳಿಕೆಗೆ ಪಾತ್ರರು.
ಜಾನಪದ ಗಾರುಡಿಗ ಡಾ. ಎಸ್.ಕೆ. ಕರೀಂಖಾನ್ ಅವರಿಂದ ಜನಪದ ಗಾಯನದಲ್ಲಿ ಪ್ರಭಾವಿತರಾದದ್ದರ ಜೊತೆಗೆ ಸುಗಮ ಸಂಗೀತ ಕ್ಷೇತ್ರದ ದಿಗ್ಗಜಗಳಾದ ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಹುಕ್ಕೇರಿ ಬಾಳಪ್ಪ ಮುಂತಾದವರ ಪ್ರಭಾವಕ್ಕೂ ಒಳಗಾದವರು.
ಗಾನಸುಧೆಯಿಂದ ದೇಶ ವಿದೇಶಗಳ ಸಂಗೀತ ಪ್ರೇಮಿಗಳ ಮನಸೆಳೆದ ಶ್ರೀಯುತರ ಸಾಧನೆಗೆ ರಾಜ್ಯ ನಾಟಕ ಅಕಾಡೆಮಿ ಪುರಸ್ಕಾರ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕರೀಂಖಾನ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಸನ್ಮಾನಗಳು ಸಂದಿವೆ. ಇಂದಿಗೂ ಸುಗಮ ಸಂಗೀತ ಪರಿಷತ್ ನಂಥ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಅಪರೂಪದ ಕ್ರಿಯಾಶೀಲ ಕಲಾವಿದರು. ಉತ್ತಮ ಸಂಘಟಕರಾದ ಶ್ರೀಯುತರು ತಮ್ಮ ಸೇವಾವಧಿಯಲ್ಲಿ ಕನ್ನಡ ಭವನ ನಿರ್ಮಿಸಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.
ದಕ್ಷ ಆಡಳಿತಗಾರರು ಹಾಗೂ ಸುಗಮ ಸಂಗೀತ ಕ್ಷೇತ್ರವನ್ನು ಪೋಷಿಸಿಕೊಂಡು ಬರುತ್ತಿರುವ ಹೃದಯವಂತ ಕಲಾವಿದರು ವೈ.ಕೆ. ಮುದ್ದುಕೃಷ್ಣ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಶೋಭಾನಾಯ್ಡು

ಹರಿಕಥಾ ಲೋಕದಲ್ಲಿ ಮಹಿಳೆಯರೇ ವಿರಳವಾಗಿರುವಾಗ ಬೆಳೆವ ಪೈರು ಮೊಳಕೆಯಲ್ಲಿ ಎಂಬಂತೆ ಬಾಲ್ಯದಿಂದಲೆ ಹರಿಕಥೆಗೆ ಒಲಿದ ಭರವಸೆಯ ಕಲಾವಿದೆ ಶ್ರೀಮತಿ ಜಿ.ಶೋಭಾ ನಾಯ್ಡು.
ಕನ್ನಡ ನಾಡಿನ ಹರಿಕಥಾ ಲೋಕದಲ್ಲಿ ಬಹುದೊಡ್ಡ ಹೆಸರಾದ ಗುರುರಾಜುಲು ನಾಯ್ಡು ಅವರ ಮಗಳಾಗಿ ೧೯೬೩ರಲ್ಲಿ ಹುಟ್ಟಿದ ಶೋಭಾ ಅವರು ಚಿಕ್ಕಂದಿನಿಂದಲೆ ತಂದೆಯ ಕಲಾನೈಪುಣ್ಯಕ್ಕೆ ಮಾರುಹೋಗಿ ಹರಿಕಥಾ ಕಲೆಗೆ ಒಲಿದವರು. ಬಿ.ಎಸ್ಸಿ., ಪದವೀಧರೆಯಾದರೂ ಕಲೆಗೆ ತಮ್ಮನ್ನು ಸಂಪೂರ್ಣ ಅರ್ಪಿಸಿಕೊಂಡು ಆಕಾಶವಾಣಿಯ ಎ ಗ್ರೇಡ್ ಮಟ್ಟಕ್ಕೆ ಏರಿದ ಕಿರಿಯ ಪ್ರತಿಭೆ ಶೋಭಾ ಅವರದು. ಈಗಾಗಲೇ ಅವರು ಈ ನಾಡಿನ ಎಲ್ಲ ಜಿಲ್ಲೆಗಳ ಎಲ್ಲ ತಾಲ್ಲೂಕುಗಳಲ್ಲಿ ತಮ್ಮ ಹರಿಕಥೆಯನ್ನು ನಡೆಸಿಕೊಟ್ಟು ನಾಡಿನಾಚೆಗೂ ತಮ್ಮ ಕಲೆಯ ಪ್ರಭೆಯನ್ನು ಹರಡಿದ ಅದ್ವಿತೀಯ ಮಹಿಳಾ ಹರಿಕಥೆಗಾರರು. ಇಪ್ಪತ್ತಕ್ಕೂ ಹೆಚ್ಚು ಹರಿಕಥಾ ಧ್ವನಿಸುರುಳಿಗಳನ್ನು ಹೊರತಂದಿರುವ ಇವರು ಹೈದರಾಬಾದಿನಲ್ಲಿ ನಡೆದ ಫೋಕ್ ಟ್ರೆಡಿಷನಲ್ ಆಫ್ ಇಂಡಿಯನ್ ಕಲ್ಟರ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.
ಯಾವುದೇ ಕ್ಷೇತ್ರದಲ್ಲಿ ಮಹಿಳೆ ಪುರುಷ ಸಮಾನವಾದ ಪ್ರತಿಭೆಯನ್ನು ತೋರಬಲ್ಲಳು ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನ ಕಲಾವಿದೆ ಶ್ರೀಮತಿ ಜಿ. ಶೋಭಾ ನಾಯ್ಡು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಮಾರೆಪ್ಪ ಮಾರೆಪ್ಪ ದಾಸರ

ಜನಪದ ಸಂಗೀತವನ್ನೇ ತಮ್ಮ ಬದುಕನ್ನಾಗಿಸಿಕೊಂಡು ಹಸಿವು ಬಡತನಗಳಿಂದ ನಲುಗಿದ್ದರೂ, ಹಾಡುತ್ತಲೇ ಹಾಡನ್ನಷ್ಟೇ ನೀಡುತ್ತಿರುವ ಜನಪದ ಗಾಯಕರು ಶ್ರೀ ಮಾರೆಪ್ಪ ಮಾರೆಪ್ಪ ದಾಸರ ಅವರು.
ಶ್ರೀ ಮಾರೆಪ್ಪ ದಾಸರು ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ತುಮ್ಮರಗುಬ್ಬಿಯೆಂಬ ಪುಟ್ಟ ಗ್ರಾಮದಲ್ಲಿ ಜೀವನದುದ್ದಕ್ಕೂ ಅಲೆಮಾರಿ ಜೀವನ. ಬೀದಿಬೀದಿಗಳಲ್ಲಿ ಹಾಡುತ್ತಾ, ಬೇಡುತ್ತಾ, ತತ್ವಪದ, ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ, ಬಳ್ಳಾರಿ ಶಿಶುಹತ್ಯಾ ಲಾವಣಿ, ಬಂಜೆ ಪದ ಹೀಗೆ ನೂರಾರು ಪದಗಳನ್ನು ರಾತ್ರಿಯಲ್ಲಿ ಹಾಡುತ್ತಾ, ಮೂರು ತಂತಿಯ ಏಕತಾರಿ, ಚೌಟಕಿತಾಳ, ಪಿಟೀಲು ಬಾರಿಸುತ್ತಾ ಉತ್ತರ ಕರ್ನಾಟಕದ ಮನೆ ಮಾತಾಗಿರುವ ಶ್ರೀ ಮಾರೆಪ್ಪ ದಾಸರ ಪದ ಎಂದರೆ ಜನ ಜಮಾಯಿಸುತ್ತಾರೆ. ತಂತಿವಾದ್ಯಗಳ ಮಧುರ ಧ್ವನಿಯೊಡನೆ ರಾಗ ಕೂಡಿಸುತ್ತಾ ಹಾಡುವ ಶ್ರೀಯುತರ ಗಾಯನ ಎಂಥವರನ್ನೂ ಮರುಳು ಮಾಡುತ್ತದೆ.
ಶ್ರೀ ಮಾರೆಪ್ಪ ದಾಸರ ಜನಪದ ಗಾಯನಕ್ಕೆ ಅನೇಕ ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳು ದೊರೆತಿವೆ. ೧೯೮೫ರ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಧಾರವಾಡದಲ್ಲಿ ಏರ್ಪಡಿಸಿದ್ದ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಪ್ರಶಸ್ತಿ ಇವು ಅವರಿಗೆ ಸಂದ ಕೆಲವು ಗೌರವಗಳು.
ಜನಪದ ಸಂಗೀತಕ್ಕೆ ತಮ್ಮ ಜೀವನವನ್ನೇ ಮುಡುಪಿಟ್ಟ ಅಲೆಮಾರಿ ಜನಪಢ ಗಾಯಕರು ಶ್ರೀ ಮಾರೆಪ್ಪ ಮಾರೆಪ್ಪ ದಾಸರ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಕೆ. ಚಂದ್ರಶೇಖರ ಮಾಲೂರು

– ನಾಗಸ್ವರ ಒಂದು ಮಂಗಳವಾದ್ಯ, ಇದು ಸುಶಿರವಾದ್ಯವೂ ಹೌದು. ಒಂದು ಕಾಲದಲ್ಲಿ ಇದು ಮದುವೆ ಮುಂಜಿ ಮುಂತಾದ ಶುಭ ಸಮಾರಂಭಗಳಲ್ಲಿ ಮೆರವಣಿಗೆ, ಉತ್ಸವಾದಿಗಳಲ್ಲಿ ಮಾತ್ರ ನುಡಿಸುವ ವಾದ್ಯವಾಗಿದ್ದು. ಸಾರ್ವಜನಿಕವಾಗಿ ಇದಕ್ಕೊಂದು ಸೂಕ್ತ ವೇದಿಕೆ ಇದ್ದಿರಲಿಲ್ಲ. ಕ್ರಮೇಣ ದೊಡ್ಡ ದೊಡ್ಡ ನಗರಗಳಲ್ಲಿ ಇದಕ್ಕೆ ವೇದಿಕೆ ದೊರೆತು, ಸಂಗೀತ ಕಛೇರಿಗಳನ್ನು ನಡೆಸುವ ಅವಕಾಶವೂ ದೊರೆಯಿತು ಆದರೆ ತಾಲ್ಲೂಕು ಮಟ್ಟದಲ್ಲಿ ಈ ಸುಧಾರಣೆ ಬರಲಿಲ್ಲ, ಇದನ್ನು ಮನಗಂಡು ಇಂಥ ಸ್ಥಳಗಳಲ್ಲಿ ಇದಕ್ಕೆ ವೇದಿಕೆ ಸಿಗಬೇಕೆಂದು ಶ್ರಮಿಸಿ ಯಶಕಂಡವರು ಶ್ರೀ ಕೆ. ಚಂದ್ರಶೇಖರ ಮಾಲೂರು ಅವರು.
ತಮ್ಮ ನಿರಂತರ ಪರಿಶ್ರಮದಿಂದ ಈ ನಾಗಸ್ವರ ವಾದನ ಕಲೆಗೆ ಜೀವತುಂಬಿ ಅದಕ್ಕೆ ಒಂದು ರೂಪವನ್ನು ಕೊಟ್ಟವರು.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿಗೆ ಸೇರಿದ ಕುಡಿಯನೂರು ಗ್ರಾಮದಲ್ಲಿ ಜನಿಸಿದ ಇವರಿಗೆ ಈ ಕಲೆ ಪಾರಂಪರಿಕವಾಗಿ ಬಂದದ್ದು. ತಮ್ಮ ತಂದೆ ವಿದ್ವಾನ್ ಕೃಷ್ಣಪ್ಪನವರಲ್ಲೇ ಶಿಕ್ಷಣ ಪಡೆದು ಮುಂದೆ ತಮ್ಮ ಸ್ವಯಂ ಪ್ರತಿಭೆಯಿಂದ ಅದನ್ನೇ ರೂಡಿಸಿಕೊಂಡು ರಾಜ್ಯ ಹೊರರಾಜ್ಯಗಳಲ್ಲಿ ಪ್ರಮುಖವಾಗಿ ಆಂಧ್ರ, ತಮಿಳುನಾಡು, ಕೇರಳ, ಪಾಂಡಿಚೇರಿಗಳಲ್ಲಿ ತಮ್ಮ ಪ್ರತಿಭೆ ಬೆಳಗಿದ್ದಾರೆ. ಆಕಾಶವಾಣಿ-ದೂರದರ್ಶನಗಳಿಂದಲೂ ಇವರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಗುರು-ಶಿಷ್ಯ ಪರಂಪರೆಯಲ್ಲಿ ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡಿದ್ದಾರೆ. ರಸಿಕ ವೃಂದವನ್ನು ತಮ್ಮ ವಾದನದ ಸಂಮೋಹಕತೆಗೆ ಒಳಗಾಗಿಸುವ ಇವರಿಗೆ ಸಂದ ಬಿರುದು ಗೌರವ ಪ್ರಶಸ್ತಿಗಳು ಆಪಾರ. ಈ ಕಲೆಯನ್ನೇ ತಮ್ಮ ಜೀವನಾಡಿಯಾಗಿ ಮಾಡಿಕೊಂಡು ಜನಪ್ರಿಯ ಕಲಾವಿದರೆನಿಸಿದ್ದಾರೆ ಶ್ರೀ ಕೆ. ಚಂದ್ರಶೇಖರ ಮಾಲೂರು ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಆರ್.ಕೆ. ಪದ್ಮನಾಭ

ಸಂಗೀತ ಕಾಶಿ ಎಂದೇ ಹೆಸರಾದ ರುದ್ರಪಟ್ಟಣದ ಸಂಗೀತ ಪರಂಪರೆಗೊಂದು ಮುಕುಟಮಣಿ ಗಾನಕಲಾ ಭೂಷಣ ಶ್ರೀಯುತ ಆರ್.ಕೆ. ಪದ್ಮನಾಭ ಅವರು.
ಬಾಲಕ ಪದ್ಮನಾಭರ ಸಂಗೀತಾಸಕ್ತಿಯನ್ನು ಊರಿನ ಸಂಗೀತ ಪರಂಪರೆಯೇ ಗಟ್ಟಿಗೊಳಿಸಿತು. ಭೌತಶಾಸ್ತ್ರದಲ್ಲಿ ಪದವಿ ಪಡೆದು ಬ್ಯಾಂಕ್ ಉದ್ಯೋಗಿಯಾಗಿದ್ದರೂ ಅವರ ಪ್ರವೃತ್ತಿ ಶಾಸ್ತ್ರೀಯ ಸಂಗೀತವಾಗಿತ್ತು. ಮೈಸೂರು ನಂಜುಂಡಸ್ವಾಮಿ, ವಿದ್ವಾನ್ ಸೀತಾರಾಮಶಾಸ್ತ್ರಿ, ಹೆಚ್.ವಿ. ಕೃಷ್ಣಮೂರ್ತಿ ಅವರಲ್ಲಿ ಶಾಸ್ತ್ರೀಯ ಶಿಕ್ಷಣ ಪಡೆದ ಬಹುಮುಖ ಪ್ರತಿಭಾ ಸಂಪನ್ನ ಸಂಗೀತಗಾರರಿವರು.
ಶುದ್ಧ ಶಾರೀರ, ಆಳವಾದ ಸಂಗೀತ ಜ್ಞಾನದಿಂದ ಕರ್ನಾಟಕ ಶೈವ ಹಾಗೂ ಹಿಂದೂಸ್ತಾನಿ ಶೈಲಿ ಎರಡರಲ್ಲಿಯೂ ಪ್ರಾವೀಣ್ಯತೆ ಪಡೆದ ಇವರ ಸಂಗೀತ ಕಚೇರಿಗಳು ದೇಶದೆಲ್ಲೆಡೆಯಷ್ಟೇ ಅಲ್ಲದೆ ದೇಶದಾಚೆಗೂ ಅಪಾರ ಶೋತೃವೃಂದವನ್ನು ಸೃಷ್ಟಿಸಿವೆ. ಶಾರದಾ ಕಲಾಕೇಂದ್ರ ಎಂಬ ಸಂಗೀತ ಸಂಸ್ಥೆಯನ್ನು ಹುಟ್ಟು ಹಾಕಿ ಹಲವಾರು ಪ್ರತಿಭೆಗಳನ್ನು ಬೆಳೆಸಿದ ಶ್ರೀಯುತರ ಸಂಗೀತ ಸಾಧನೆಯನ್ನು ಅರಸಿಬಂದ ಪ್ರಶಸ್ತಿ ಬಿರುದುಗಳು ಹಲವಾರು. ಗಾನಕಲಾ ಭೂಷಣ, ಸಂಗೀತ ಭೂಷಣ, ಸಂಗೀತ ಸೇವಾ ಮಣಿ, ಶ್ರೇಷ್ಠ ಗಾಯಕ, ಭಕ್ತಿಗಾನ ಸುಧಾಕರ, ನಾದತಪಸ್ವಿ, ಮುಂತಾದ ಬಿರುದು, ಸನ್ಮಾನಗಳು ಅನೇಕ ಸಂಘ ಸಂಸ್ಥೆಗಳಿಂದ ಸಂದಿವೆ.
ಅದ್ವಿತೀಯ ಸಂಗೀತಗಾರರಾಗಿ ಅಪಾರ ಶೋತೃಗಳನ್ನು ಪಡೆದಿರುವಂತೆ ಅನುಭವಿ ಗುರುವಾಗಿ ಅಸಂಖ್ಯ ಶಿಷ್ಯರನ್ನೂ ಪಡೆದಿರುವ ಸಂಗೀತ ನಿಧಿ ಶ್ರೀ ಆರ್.ಕೆ. ಪದ್ಮನಾಭ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಪರಮೇಶ್ವರ ಹೆಗಡೆ

ಪಂ.ಡಾ.ಬಸವರಾಜ ರಾಜಗುರು ಅವರ ಕೆಲವೇ ಆಪ್ತ ಶಿಷ್ಯರಲ್ಲಿ ಒಬ್ಬರಾಗಿದ್ದವರೆಂದರೆ ಗಾಯಕ ಪರಮೇಶ್ವರ ಹೆಗಡೆಯವರು. “ಅವನ ಗಾಯನದಾಗೆ ಉಳಿದವರಕ್ಕಿಂತ ಭಿನ್ನವಾದುದೇನೋ ಐತಿ” ಎಂದು ಗುರುಗಳಿಂದಲೇ ಪ್ರಶಂಸೆಗಿಟ್ಟಿಸಿದ ಪ್ರತಿಭಾವಂತ ಗಾಯಕ. ಮರೆಯಲ್ಲಿ ಕೇಳಿದರೆ ಪಂ. ರಾಜಗುರುಗಳೇ ಹಾಡುತ್ತಿದ್ದಾರೇನೋ ಎಂಬ ಭಾವನೆ ಬರುವಷ್ಟು ಧ್ವನಿ ಅನುಕರಣೆ ಇರುವ ವಿಶಿಷ್ಠ ಶೈಲಿಯ ಗಾಯಕರು ಶ್ರೀಯುತ ಪರಮೇಶ್ವರ ಹೆಗಡೆಯವರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಿಸಿ ಬಸವರಾಜ ರಾಜಗುರುಗಳಲ್ಲಿ ಗಾಯನಾಭ್ಯಾಸ ಮಾಡಿದ ಶ್ರೀಯುತರು ಹಿಂದೂಸ್ತಾನಿ ಗಾಯನದಲ್ಲಿ ಮಾಡಿದ ಸಾಧನೆ, ಏರಿದ ಎತ್ತರ ನಾಡಿನ ಸಂಗೀತ ಲೋಕ ಅಚ್ಚರಿಪಡುವಂಥದ್ದು. ರಾಷ್ಟ್ರಾದ್ಯಂತ ತಮ್ಮ ಸಂಗೀತ ಕಚೇರಿಗಳಿಂದ ರಸಿಕ ಜನವನ್ನು ಸೂಜಿಗಲ್ಲಿನಂತೆ ಸೆಳೆದ ಶ್ರೀಯುತರು ಅಮೆರಿಕಾ, ಲಂಡನ್, ಕೆನಡಾ, ಗಲ್ಫ್ ದೇಶಗಳ ಜನರ ಹೃದಯದೊಳಗೂ ತಮ್ಮ ಗಾಯನದ ಅಲೆಗಳು ಅನುರಣಿಸುವಂತೆ
ಮಾಡಿದವರು.
ಸಂಗೀತದ ಗುರುವಾಗಿ, ಸಂಘಟಕರಾಗಿ, ಅನೇಕ ಯುವಪ್ರತಿಭೆಗಳನ್ನು ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಲ್ಲದೆ ತಮ್ಮ ಗುರುಗಳ ನೆನಪಿನಲ್ಲಿ ರಾಜಗುರು ಸ್ಮೃತಿ ಟ್ರಸ್ಟನ್ನು ಸ್ಥಾಪಿಸಿ ತಮ್ಮ ಮೆಚ್ಚಿನ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವ ಮಹಾನ್ ಕಲಾವಿದ ಶ್ರೀ ಪರಮೇಶ್ವರ ಹೆಗಡೆ.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಪಂಡಿತ ಸೋಮನಾಥ ಮರಡೂರ

ವೃತ್ತಿ ಪ್ರವೃತ್ತಿಗಳಿಂದ ಪ್ರಸಿದ್ಧರಾಗಿರುವ ಹಿಂದೂಸ್ತಾನಿ ಗಾಯಕ ಪಂಡಿತ ಸೋಮನಾಥ ಮರಡೂರ ಅವರು.
೧೯೪೪ರಲ್ಲಿ ಹಾವೇರಿ ಜಿಲ್ಲೆಯ ಮರಡೂರಿನಲ್ಲಿ ಜನನ. ಬಾಲ್ಯದಿಂದಲೆ ಸಂಗೀತಾಭ್ಯಾಸ ಆರಂಭವಾಗಿ ಗದಗಿನ ಶ್ರೀ ಪುಟ್ಟರಾಜ ಗವಾಯಿಗಳವರ ಬಳಿ ಶಿಕ್ಷಣದ ಮುಂದುವರಿಕೆ. ಪಂಡಿತ ಬಸವರಾಜ ರಾಜಗುರುಗಳಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ಉನ್ನತಾಭ್ಯಾಸ.
ನಾಡಿನ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ಮುಂಬೈ, ದಿಲ್ಲಿ, ಭೂಪಾಲ, ಗೋವಾ ಮುಂತಾದ ಕಡೆಗಳಲ್ಲಿ ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರತಿಭಾವಂತ ಗಾಯಕರಾದ ಶ್ರೀ ಮರಡೂರ ತಮ್ಮ ಹದಿನೇಳನೇ ವಯಸ್ಸಿನಲ್ಲಿ ಅಖಿಲ ಭಾರತ ಆಕಾಶವಾಣಿ, ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದಿದ್ದಾರೆ. ಮುಂಬಯಿ ಸೂರಸಿಂಗಾರ ಸಂಸದ್ನ ಸುರ್ಮಣಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಕಿರಾಣ ಪರಂಪರೆಯ ಗಾಯಕರು ಪಂಡಿತ ಸೋಮನಾಥ ಮರಡೂರ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಫಕೀರೇಶ ಕಣವಿ

ಸಂಗೀತ ಮನೆತನದ ಪರಂಪರೆಯಲ್ಲಿ ಬೆಳೆದುಬಂದ ಸಂಗೀತಗಾರ ಶ್ರೀ ಫಕೀರೇಶ ಕಣವಿ ಅವರು.
೧೯೫೫ರಲ್ಲಿ ಗದಗ ಜಿಲ್ಲೆಯ ಕಣವಿ ಗ್ರಾಮದಲ್ಲಿ ಜನನ. ತಂದೆ ಹಾಗೂ ಸೋದರ ಮಾವಂದಿರಲ್ಲಿ ಸಂಗೀತದ ಮೊದಲ ಪಾಠಗಳು. ಅನಂತರ ಡಾ. ಪುಟ್ಟರಾಜ ಗವಾಯಿಗಳವರ ಹತ್ತಿರ ಸಂಗೀತದ ಅಧ್ಯಯನ.
ಸಂಗೀತ ಸಾಧನೆಗೆ ಕಾಶಿ ಎನಿಸಿದ ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ, ಕೂಡ್ಲಿಗಿಯ ರೇಣುಕಾ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಗುಲಬರ್ಗಾ ಆಕಾಶವಾಣಿಯಲ್ಲಿ ಹಿಂದೂಸ್ತಾನಿ ಮತ್ತು ಸುಗಮ ಸಂಗೀತದ ‘ಬಿ’ ಹೈ ಶ್ರೇಣಿಯ ನಿಲಯ ಕಲಾವಿದರಾಗಿರುವ ಶ್ರೀ ಫಕೀರೇಶ ಕಣವಿ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ, ಕೇಂದ್ರ ಸಂಸ್ಕೃತಿ ಇಲಾಖೆಯ ಸುಗಮ ಸಂಗೀತ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಸರ್ಕಾರದ ವಿದ್ವತ್ ಪರೀಕ್ಷೆಯಲ್ಲಿ ಮೊದಲ ಸ್ಥಾನ, ಗಂಧರ್ವ ಮಹಾವಿದ್ಯಾಲಯದ ವಿಶಾರದ ಪರೀಕ್ಷೆಯಲ್ಲಿ ಮೊದಲ ಬಹುಮಾನ ಪಡೆದ ಸಂಗೀತಗಾರ ಶ್ರೀ ಫಕೀರೇಶ ಕಣವಿ ಅವರು.

Categories
ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಸಿ.ಹೆಚ್. ಮರಿದೇವರು

ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯದಲ್ಲಿ ಸಾಧನೆ ಮಾಡುತ್ತಿರುವವರು ಪ್ರೊ. ಸಿ.ಹೆಚ್. ಮರಿದೇವರು ಅವರು.
೧೯೩೫ರಲ್ಲಿ ಜನಿಸಿದ ಪ್ರೊ. ಸಿ.ಹೆಚ್. ಮರಿದೇವರು ಅವರು. ಎಂ.ಎ., ಎಂ.ಎಡ್. ಪದವಿ ಪಡೆದು ಖಾದಿ ಮಂಡಳಿಯಲ್ಲಿ ಗುಮಾಸ್ತರಾಗಿ ವೃತ್ತಿ ಜೀವನ ಆರಂಭಿಸಿದರು.ನಂತರ ಪ್ರೌಡಶಾಲೆಯೊಂದರಲ್ಲಿ ಸಹಶಿಕ್ಷಕರಾಗಿ ಬಿ.ಎಡ್. ಕಾಲೇಜಿನ ಪ್ರಾಧ್ಯಾಪಕರಾಗಿ ಪ್ರಸ್ತುತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕವಿತೆಗಳು ಹುಟ್ಟಬೇಕು, ಶಬ್ದಪಾಕ (ಕವನ ಸಂಕಲನ) ಮಹಾಚೈತ್ರವನ್ನು ಕುರಿತು ವಿಮರ್ಶೆ, ಅಂಡಮಾನ್ ದ್ವೀಪದರ್ಶಿನಿ, ನೇಪಾಳ ಒಂದು ಭೂಸ್ವರ್ಗ, ಲಕ್ಷದ್ವೀಪಗಳಲ್ಲಿ ಮರಿದೇವರು (ಪ್ರವಾಸ ಸಾಹಿತ್ಯ), ಥಾಮಸ್ ಆಲ್ವ ಎಡಿಸನ್, ಡಾ. ಆಲ್ಬರ್ಟ್ ಐನ್ಸ್ಟಿನ್, ಡಾ. ಹೋಮಿ ಜಹಾಂಗೀರ್ ಬಾಬಾ (ಭಾಷಾಂತರಿಸಿದ ಕೃತಿಗಳು),ಶ್ರೀಯತರು ರಚಿಸಿದ ಪ್ರಮುಖ ಕೃತಿಗಳು. ಅಲ್ಲದೆ ಪ್ರೊ. ಸಿ.ಹೆಚ್. ಮರಿದೇವರು ಅವರಿಗೆ ಶಿಕ್ಷಣ ತತ್ವಶಾಸ್ತ್ರಕ್ಕೆ ಶ್ರೀ ದೇವರಾಜ ಬಹದ್ದೂರ್ ಪ್ರಶಸ್ತಿ, ಮುನ್ನಡೆದ ಶಿಕ್ಷಣ ಮನಶಾಸ್ತ್ರಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಶಬ್ದಪಾಕ ಕವನ ಸಂಕಲನಕ್ಕೆ ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಲಭಿಸಿವೆ.
ಪ್ರೊ. ಸಿ.ಹೆಚ್. ಮರಿದೇವರು ತೆಂಗು ಬೆಳೆಗಾರರ ಸಂಘ ಸ್ಥಾಪಿಸಿ, ಅದರ ಸಂಸ್ಥಾಪಕ ಕಾರ್ಯದರ್ಶಿಯಾಗಿ, ತುಮಕೂರು ತಾಲ್ಲೂಕು ತೆಂಗು ಅಡಿಕೆ ಬೆಳೆಗಾರರ ಸಂಘ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ. ತುಮಕೂರು ಜಿಲ್ಲಾ ಸಾಹಿತ್ಯ ಪರಿಷತ್ತು ಅಲ್ಲದೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಸಿದ್ದಾರೆ.
ಅಧ್ಯಯನ, ಅಧ್ಯಾಪನ ಎರಡರಲ್ಲೂ ತೊಡಗಿಸಿಕೊಂಡಿರುವ ಚಿಂತನಶೀಲ ಬರಹಗಾರ ಶ್ರೀ ಸಿ.ಹೆಚ್. ಮರಿದೇವರು ಅವರು.